ಸ್ನೇಹಿತರಲ್ಲೊಂದು ಅರಿಕೆ – 15ನೇ ಏಪ್ರಿಲ್ 2020

ಎಲ್ಲರಿಗೂ ನಮಸ್ಕಾರ,

ಕೆಲ ಕ್ಷುಲ್ಲಕ ಕಾರಣಗಳಿಂದಾಗಿ ಸ್ವಲ್ಪಕಾಲ ಫೇಸ್ಬುಕ್ಕಿನಿಂದ ಹೊರಬಂದಿದ್ದೇನೆ. ಕೆಲದಿನಗಳ ಹಿಂದೆ ನನ್ನ ವಿರುದ್ಧ ಕೆಲ ಏಕದೇವೋಪಾಸಕರ ಯಥಾಪ್ರಕಾರದ ಅನ್ಯಧರ್ಮದ್ವೇಷದ ಪೋಸ್ಟುಗಳನ್ನು ನೀವು ನೋಡಿರಬಹುದು. ಅವರ ಈ ಕೆಲಸಗಳು ಹೊಸದೇನೂ ಅಲ್ಲ. ಎಲ್ಲೂ ಯಾರಿಗೂ ಕಾಣದಿರುವ ಧರ್ಮದ್ವೇಷ, ಈ ಏಕದೇವೋಪಾಸಕರಿಗೆ ಕಂಡುಬರುತ್ತಪ್ಪ. ಅದ್ಯಾವನೋ ಕಾರ್ಟೂನಿಷ್ಟ್ ಕೃಷ್ಣಪ್ಪನಿಗೆ ಬೈದದ್ದೂ, ಇವರಿಗೆ ಕೃಷ್ಣನಿಗೇ ಬೈದಂತೆ ಅನಿಸಿದರೆ ಅದ್ಯಾರ ತಪ್ಪು ಮಾರಾಯ್ರೆ! ದೇವರ ಹೆಸರನ್ನೇ ಇಟ್ಟುಕೋ ಅಂತಾ ಹೇಳಿದವರ್ಯಾರು ಈ ಕೃಷ್ಣಪ್ಪನಿಗೆ? ಒಟ್ಟಿನಲ್ಲಿ ಈ ಮುಟ್ಟಿದರೆ ಮುನಿಗಳಿಗೆ ನನ್ನ ಫೇಸ್ಬುಕ್ ಪೋಸ್ಟುಗಳನ್ನು ಓದಲಿಕ್ಕೆ ಕಷ್ಟವಂತೆ. ಅದೂ ಇವರ ವರಸೆಯೆಂತದ್ದು! ಯಾರಿಗೂ ತಾರ್ಕಿಕವಾಗಿ ಮಾತಾಡುವ ಕ್ಷಮತೆಯೇ ಇಲ್ಲ. ಬಾಯಿತೆಗೆದರೆ ಸೀದಾ ಕತ್ತುಕುಯ್ಯುವ ಮಾತೇ ಮಾರಾಯ್ರೆ!!

ಇನ್ನೂ ಮಜವೆಂದರೆ ಕೆಲವರು ಬಂದು ಕ್ಷಮೆ ಕೇಳು ಎಂದರು. ಆದರೆ ಯಾರಲ್ಲಿ ಅಂತಾ ಕ್ಷಮೆ ಕೇಳುವುದು? ಇವರನ್ನೆಲ್ಲಾ ಗುತ್ತಿಗೆ ತೆಗೆದುಕೊಂಡಿರುವವರು ಯಾರು? ನಿಮ್ಮಲ್ಲಿ ಕ್ಷಮೆ ಕೇಳಲೇ ಎಂದರೆ, ನನ್ನನ್ನಲ್ಲ ಎಲ್ಲರನ್ನೂ ಕೇಳು ಅಂತಾರೆ. ಯಾರಿಗೂ ಸಹ ನಾನು ಯಾರಲ್ಲಿ ಕ್ಷಮೆ ಕೇಳಬೇಕು ಎಂಬ ಸ್ಪಷ್ಟತೆಯಿಲ್ಲ. ಯಾಕೆ ಕೇಳಬೇಕು ಎನ್ನುವ ಸ್ಪಷ್ಟತೆಯಂತೂ ಮೊದಲೇ ಇಲ್ಲ. ಹೇಗೆ ಕೇಳಬೇಕು ಎಂಬುದು ಗೊತ್ತಿಲ್ಲ. ಆದರೆ ಪೋಲೀಸರಿಗೆ ಹಿಡಿದುಕೊಡಬೇಕೆಂಬ ಉಮೇದಿದೆ. ಹೇಗೆ ಹಿಡುದುಕೊಡುತ್ತೀರಿ, ನನ್ನ ಮೇಲೆ ನಿಮ್ಮ ಬಳಿ ಏನು ಆರೋಪವಿದೆ, ಅದಕ್ಕೆ ಯಾವ ಸಾಕ್ಷಿಯಿದೆ ಅಂತಾ ಕೇಳಿದರೆ ಅದ್ಯಾವುದೋ ಹಳೆಯ ಒಂದೆರಡು ಸ್ಕ್ರೀನ್ಶಾಟುಗಳನ್ನು ಹಿಡಿದುಕೊಂಡು ಒಂದೇಸಮನೆ ಅಳುತ್ತಿದ್ದಾರೆ.

ಅದಕ್ಕೇ ಅವರ ಕಷ್ಟಗಳನ್ನು ಕಡಿಮೆಮಾಡಲಿಕ್ಕೆ ಸಧ್ಯಕ್ಕೆ ಫೇಸ್ಬುಕ್ಕನ್ನು ಸ್ಥಗಿತಗೊಳಿಸಿದ್ದೇನೆ. ಪಾಪ ಯಾಕೆ ಅವರಿಗೆ ಮತ್ತವರ ದೇವರಿಗೆ ಕಷ್ಟ!

ನಿಮ್ಮೆಲ್ಲರ ಹಾರೈಕೆಯಿಂದ ನಾನು ಕ್ಷೇಮವಾಗಿದ್ದೇವೆ. ಯಾವ ಗಾಬರಿಯೂ ಬೇಡ. ನಮ್ಮ ಮಾತುಕಥೆ ಇಲ್ಲೇ ಈ ಬ್ಲಾಗಿನಲ್ಲಿ ನಡೆಯಲಿ.

ಬಿಸಿ ಬಿಸಿ ಸರ್ವರುಗಳೂ, ಅವನ್ನು ತಂಪಾಗಿಸುವ ಕೂಲ್ ಕೂಲ್ ಐಡಿಯಾಗಳೂ

ಬೆಳಿಗ್ಗೆ ಇಂತಹದ್ದೊಂದು ಸುದ್ಧಿ ಓದಿದೆ. ಅದರಲ್ಲಿ ಹೇಗೆ ಇಮೇಲ್ ಹಾಗೂ ಅಟ್ಯಾಚ್ಮೆಂಟುಗಳು ಪರಿಸರಕ್ಕೆ ಹಾನಿ ಮಾಡುತ್ತಿವೆ ಅಂತಾ ಪತ್ರಿಕಾ ಲೇಖನವೊಂದಿತ್ತು. “ಪ್ರತಿಯೊಂದು ಈಮೇಲ್’ನಿಂದ 4ಗ್ರಾಂನಷ್ಟು ಕಾರ್ಬನ್ ಡೈ-ಆಕ್ಸೈಡ್ ವಾತಾವರಣಕ್ಕೆ ಸೇರುತ್ತದೆ. ಈಮೇಲ್ ಗಾತ್ರ ದೊಡ್ಡದಿದ್ದರೆ, ಅಥವಾ ದೊಡ್ಡ ಅಟ್ಯಾಚ್ಮೆಂಟುಗಳಿದ್ದರೆ ಇನ್ನೂ ಹೆಚ್ಚು ಇಂಗಾಲ ಪರಿಸರಕ್ಕೆ ಸೇರಿ ಮಾಲಿನ್ಯಕ್ಕೆ ಕಾರಣವಾಗುತ್ತದೆ” ಅಂತಾ ಅದರಲ್ಲಿ ಬರೆದಿದ್ದರು.

ಮೇಲ್ನೋಟಕ್ಕೆ ಕಾಮಿಡಿಯಾಗಿ ಕಾಣುವ ಈ ಲೇಖನ ನಿಜಕ್ಕೂ ಸತ್ಯದ ಅಂಶಗಳಿಂದ ಕೂಡಿದೆ. ಆದರೆ ಅವರು ಅದನ್ನು ಬರೆದ ರೀತಿ ಹಾಸ್ಯಾಸ್ಪದವಾಗಿ, ತಪ್ಪುಮಾಹಿತಿಗಳಿಂದ ಕೂಡಿ ಅರ್ಧಸತ್ಯವಾಗಿದೆ ಅಷ್ಟೇ. ಅವರು “ಸಣ್ಣ ಈಮೇಲ್’ಗಳನ್ನು ಕಳುಹಿಸಿ, ಮೊಬೈಲ್ ಚಾರ್ಜ್ ಆದಮೇಲೆ ಸ್ವಿಚ್ ಆಫ್ ಮಾಡಿ, ಬಳಸದೇ ಇರೋ ಆಪ್’ಗಳನ್ನು ಫೋನಿನಿಂದ ಅಳಿಸಿ, ಸಾಮಾಜಿಕ ತಾಣದಲ್ಲಿ ಅನಗತ್ಯ ಚರ್ಚೆ ಮಾಡಬೇಡಿ” ಅಂತೆಲ್ಲಾ ಬರೆದಿರೋದು ಮಾತ್ರ ಪೂರ್ತಿ ಕಾಮಿಡಿಯೇ ಆಗಿದೆ.

ವಿಷಯಕ್ಕೆ ಬರೋಣ. ನಾವು ಬಳಸುವ ಪ್ರತಿಯೊಂದು ವೆಬ್ಸೈಟು, ಅಂತರ್ಜಾಲ ಸೇವೆಗಳು (ಈಮೇಲ್, ಶಾಪಿಂಗ್, ಚಾಟ್) ಮತ್ತು ಸಾಮಾಜಿಕ ತಾಣಗಳು ದೊಡ್ಡಮಟ್ಟದ ಡೇಟಾಸೆಂಟರುಗಳನ್ನು ಬಳಸುತ್ತವೆ. ಸಾವಿರಾರು ಸರ್ವರುಗಳ ಈ ಬೃಹತ್ ಡೇಟಾಸೆಂಟರುಗಳಲ್ಲಿ ಸರ್ವರುಗಳು ಬಳಸುವ ವಿದ್ಯುತ್ ದೊಡ್ಡಮಟ್ಟದ್ದೇ. ಈ ಸರ್ವರುಗಳು ನಮ್ಮ ನಿಮ್ಮ ಕಂಪ್ಯೂಟರುಗಳಂತೆ ಸಾವಿರಾರು ಸಣ್ಣಸಣ್ಣಕೆಲಸಗಳನ್ನು ಮಾಡುವವಲ್ಲ. ಅವು ತಮಗೆ ಕೊಟ್ಟ ಕೆಲವೇ ಕೆಲವು ಕೆಲಸಗಳನ್ನು ಮತ್ತೆ ಮತ್ತೆ ಶರವೇಗದಲ್ಲಿ ಮುಗಿಸುವಂತವು. ಈ ಶರವೇಗದ ಸರದಾರರು ತಮ್ಮ ಕ್ಷಮತೆಯ 80-90% ಎಫಿಷೆಯೆನ್ಸಿ ಲೆವೆಲ್ಲಿನಲ್ಲಿ ಕೆಲಸ ಮಾಡುವಾಗ ವಿಪರೀತ ಬಿಸಿಯಾಗುತ್ತವೆ. ಹಾಗಾಗಿ ಈ ಸರ್ವರುಗಳು ಬಳಸುವ ಶಕ್ತಿಗಿಂತಲೂ ಮೂರುಪಟ್ಟು ಹೆಚ್ಚು ವಿದ್ಯುತ್ಚಕ್ತಿ, ಈ ಡೇಟಾಸೆಂಟರುಗಳನ್ನು ತಣ್ಣಗಿಡುವುದಕ್ಕೇ ಖರ್ಚಾಗುತ್ತದೆ. ಸಾವಿರಾರು ಟನ್ ಕ್ಷಮತೆಯ ದೈತ್ಯಾಕಾರದ ಏರ್ಕಂಡೀಷನರುಗಳು ಡೇಟಾಸೆಂಟರುಗಳನ್ನು ಹದಿಮೂರದಿನಾಲ್ಕು ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಸದಾ ತಣ್ಣಗಿಡುತ್ತವೆ. ಸರ್ವರುಗಳ ಮೇಲೆ ಹೆಚ್ಚೆಚ್ಚು ಕೆಲಸ ಬಿದ್ದಷ್ಟೂ ಉದಾಹರಣೆಗೆ ಭಾರತದಲ್ಲಿ ಸರ್ಕಾರ ಬಿದ್ದ ದಿನ, ಕಿಮ್ ಕರ್ದಾಷಿಯಾನಳ ತೊಡೆಸಂಧಿಯೊಂದು ಸಾರ್ವಜನಿಕವಾಗಿ ಕಂಡದಿನ, ಫ್ಲಿಪ್ಕಾರ್ಟ್-ಅಮೆಜಾನ್’ಗಳಲ್ಲಿ ಸೂಪರ್ ಸೇಲ್ ನಡೆವ ದಿನ, ಟ್ರಂಪ್ ಮೆಕ್ಸಿಕೋ ಬಗ್ಗೆ ಏನಾದರೂ ಹೇಳಿದ ದಿನ ಜನ ಸಾಮಾಜಿಕ ತಾಣಗಳಲ್ಲಿ ಮುಗಿಬಿದ್ದಾಗ, ಈ ಸರ್ವರುಗಳು ಅಕ್ಷರಷಃ ಅಂಡಿಗೆ ಬೆಂಕಿಬಿದ್ದಂಗೆ ಕೆಲಸ ಮಾಡುತ್ತಿರುತ್ತವೆ. ಇದನ್ನೇ ಸ್ವಲ್ಪ ದೊಡ್ಡಮಟ್ಟದಲ್ಲಿ ನೋಡಿದಾಗ, ಆ ಲೇಖನದಲ್ಲಿ ಹೇಳಿದಂಗೆ ದೊಡ್ಡ ಈಮೇಲುಗಳು, ದೊಡ್ಡ ಅಟ್ಯಾಚ್ಮೆಂಟುಗಳನ್ನು ಕಳಿಸಿದಾಗ, ಇನ್ಸ್ಟಾಗ್ರಾಂಗೆ ಫೋಟೋಗಳನ್ನು ಅಪ್ಲೋಡ್ ಮಾಡಿದಾಗ, ನಾನೀ ಆರ್ಟಿಕಲ್ ಬರೆದಾಗ, ಅದನ್ನು ನೀವು ಓದಿ ಕಮೆಂಟು ಮಾಡಿದಾಗ, ಶೇರ್ ಮಾಡಿದಾಗಲೆಲ್ಲಾ ಸ್ವಲ್ಪಸ್ವಲ್ಪವೇ ಕೆಲಸ ಹೆಚ್ಚಾಗಿ ಸರ್ವರುಗಳು ಒಂದಂಶ ಬಿಸಿಯಾಗುತ್ತವೆ. ಅವನ್ನು ತಣ್ಣಗಾಗಿಸುವ ಏರ್ಕಂಡೀಷನರ್ಗಳ ಮೇಲೂ ಒಂದಂಶ ಕೆಲಸ ಹೆಚ್ಚಾಗುತ್ತದೆ. ಅವನ್ನು ನಡೆಸುವ ಜನರೇಟರುಗಳು, ಅಥವಾ ವಿದ್ಯುತ್ ಒದಗಿಸುವ ಗ್ರಿಡ್ ಅವುಗಳೆಡೆಗೆ ಹೆಚ್ಚು ಶಕ್ತಿ ಹರಿಸುತ್ತಾ ಸಣ್ಣಗೆ ಒಂದುಸಲ ಹೂಂಕರಿಸುತ್ತದೆ. ಈ ಹೂಂಕಾರದಲ್ಲಿ ಇಂಗಾಲವೊಂದಷ್ಟು ವಾತಾವರಣ ಸೇರುತ್ತದೆ. ಇದು ಆ ಲೇಖನದ ಮೂಲೋದ್ದೇಶ.

ಆದರೆ ನಿಜಕ್ಕೂ ಕಥೆ ಹೀಗೆಲ್ಲಾ ಇದೆಯೇ? 2012ರ ಒಂದು ಅಂದಾಜಿನ ಪ್ರಕಾರ 2025ಕ್ಕೆ ಜಗತ್ತಿನಲ್ಲಿ ಉತ್ಪಾದನೆಯಾದ ಐದನೇ ಒಂದು ಭಾಗ ವಿದ್ಯುತ್ಶಕ್ತಿ ಈ ರೀತಿಯ ಡೇಟಾ ಸೆಂಟರುಗಳನ್ನು ತಣ್ಣಗಿಡುವುದಕ್ಕೇ ಬೇಕಾಗುತ್ತದೆ ಅಂತಾ ಹೇಳಲಾಗಿತ್ತು. ಆದರೆ ಕಳೆದ ಕೆಲ ವರ್ಷಗಳಲ್ಲಿ ಈ ರಂಗದಲ್ಲಿ ಅದ್ವಿತೀಯ ಬದಲಾವಣೆಗಳಾಗಿವೆ. 2017ರಿಂದೀಚೆಗೆ ಡೇಟಾಸೆಂಟರ್ ಮ್ಯಾನೇಜ್ಮೆಂಟ್ ಕಂಪನಿಗಳು ತಮ್ಮ ಒಟ್ಟು ವಿದ್ಯುತ್ ಬಳಕೆಯಲ್ಲಿ ಶೇಕಡಾ 17%ಕಡಿಮೆ ಮಾಡಿವೆ! ಹೇಗೆ ಅಂತೀರಾ? ಇಲ್ಲಿ ನಡೆದಿರುವ ಕೆಲ ತಾಂತ್ರಿಕಬೆಳವಣಿಗೆಗಳನ್ನು ನೋಡೋಣ ಬನ್ನಿ:

(೧) ತಂತ್ರಜ್ಞಾನ ಜಗತ್ತಿನ ದೈತ್ಯ ಗೂಗಲ್ ಇವತ್ತಿಗೂ ಜಗತ್ತಿನ ಕೆಲ ಅತೀದೊಡ್ಡ ಡೇಟಾಸೆಂಟರುಗಳನ್ನು ಹೊಂದಿದೆ. ತನ್ನ ಹತ್ತು ಹಲವು ಸೇವೆಗಳಿಗೆ ಮಾತ್ರವಲ್ಲದೇ, ಬೇರೆ ಕಂಪನಿಗಳ ದತ್ತಾಂಶವನ್ನೂ ತನ್ನ ಡೇಟಾಸೆಂಟರುಗಳಲ್ಲಿ ಕಾಪಿಡುತ್ತದೆ. ಮೊತ್ತಮೊದಲಿಗೆ ಗೂಗಲ್ ತಂದ ಬದಲಾವಣೆಯೇನೆಂದರೆ, ಕಡಿಮೆ ಬಾಡಿಗೆಗೆ ಜಾಗ ಸಿಗುತ್ತದೆ ಎಂಬ ಕಾರಣಕ್ಕೆ ಅರಿಝೋನಾ, ನೆವಾಡಾದಂತಹ ಮರುಭೂಮಿ ರಾಜ್ಯಗಳಲ್ಲಿ ಸ್ಥಾಪಿಸಿದ್ದ ತನ್ನ ಡೇಟಾಸೆಂಟರುಗಳನ್ನು ತಂಪಾದ ಹವಾಮಾನವಿರುವ ಜಾಗಗಳಿಗೆ ಬದಲಾಯಿಸಿದ್ದು. ಇಲ್ಲಿ ನೈಸರ್ಗಿಕವಾಗಿಯೇ ಹವಾಮಾನ ತಂಪಿರುವುದರಿಂದ ನೀವು ಆ ತಂಪುಗಾಳಿಯನ್ನೇ ಬಳಸಿ aircooled ಡೇಟಾಸೆಂಟರುಗಳ ಪರಿಕಲ್ಪನೆ ರೂಪಿಸಿದ್ದು. ಯಾವಾಗ ಬರೀ aircooling ಸಾಕಾಗುವುದಿಲ್ಲ ಎಂದೆನಿಸಿತೋ ಆಗ ನೀರನ್ನು ಉಪಯೋಗಿಸಿ watercooled ಡೇಟಾಸೆಂಟರುಗಳನ್ನಾಗಿ ಪರಿವರ್ತಿಸಿದ್ದು. ಇದಾದ ಆರೇತಿಂಗಳಿಗೆ ನೀರನ್ನು ಬಳಸಿ ತಂಪುಮಾಡುವಾಗ ಅದೇನೂ ತಾಜಾನೀರಾಗಬೇಕಿಲ್ಲ ಎಂಬುದನ್ನರಿತು, ಆ ಡೇಟಾಸೆಂಟರುಗಳಿರುವ ಊರುಗಳ ಅಕ್ಕಪಕ್ಕದ ಮುನಿಸಿಪಲ್ ಕೌನ್ಸಿಲುಗಳೊಂದಿಗೆ ಮಾತುಕಥೆಯಾಡಿ, ಆ ಊರು/ನಗರಗಳ ಕೊಳಚೆನೀರನ್ನೇ ಬಳಸಿ ಡೇಟಾಸೆಂಟರುಗಳನ್ನು ತಂಪಾಗಿಟ್ಟಿದ್ದು. ಇದಾದ ಮೇಲೆ, ತನ್ನೆಲ್ಲಾ ಕಚೇರಿಗಳಿಗೆ ಬರುವ ವಿದ್ಯುತ್ತನ್ನು ಸೌರ, ವಾಯು ಮತ್ತು ಜಲಸಂಪನ್ಮೂಲಗಳನ್ನೇ ಬಳಸಿ ವಿದ್ಯುತ್ ತಯಾರಿಸುವ ಕಂಪನಿಗಳಿಂದ ಮಾತ್ರವೇ ಕೊಳ್ಳಲಾರಂಭಿಸಿದ್ದು. ಈ ಮೇಲಿನ ಉಪಾಯಗಳಿಂದಾಗಿ ಉಳಿಸಿದಷ್ಟೇ ವಿದ್ಯುತ್ ಅನ್ನು ಬಳಸಿ, ಜೊತೆಗೆ ತನ್ನೆಲ್ಲಾ ಆಫೀಸುಗಳ ಮೇಲೆ ಸೋಲಾರ್ ಪ್ಯಾನೆಲ್ ಕೂರಿಸಿ ಅದರಿಂದ ಬಂದ ವಿದ್ಯುತ್ ಬಳಸಿ, ಉಪಯೋಗಿಸಿಕೊಂಡ ಆ ಕೊಳಚೆ ನೀರನ್ನೂ ಶುದ್ಧೀಕರಿಸಿ, ನೀರನ್ನೂ ಅದರಜೊತೆಗೆ ಸ್ವಲ್ಪಮಟ್ಟಿನ ವಿದ್ಯುತ್ತನ್ನೂ ಅದೇ ನಗರಗಳಿಗೆ ಮರಳಿ ಕೊಟ್ಟು, ಗೂಗಲ್ ಕೇವಲ ಕಾರ್ಬನ್ ನ್ಯೂಟ್ರಲ್ ಆಗಿದ್ದು ಮಾತ್ರವಲ್ಲದೆ, ಜಗತ್ತಿನ ಮೊದಲ ಕಾರ್ಬನ್ ನೆಗೆಟಿವ್ ಕಂಪನಿಯೂ ಆಯ್ತು. ಈಗ ಗೂಗಲ್ ತನ್ನ ಡೇಟಾಸೆಂಟರುಗಳನ್ನು ನೋಡಿಕೊಳ್ಳಲು ಡೀಪ್-ಮೈಂಡ್ ಎಂಬ ಕೃತಕಬುದ್ಧಿಮತ್ತೆಯನ್ನೂ ಅಭಿವೃದ್ಧಿಪಡಿಸಿದೆ. ಡೀಪ್-ಮೈಂಡ್ ಇಡೀ ಡೇಟಾಸೆಂಟರಿನಲ್ಲಿ ಎಲ್ಲಾ ಕಡೆಗೂ ಅನಗತ್ಯವಾಗಿ ತಂಪುಗಾಳಿ ತಳ್ಳದೇ, ಯಾವಾಗ ಯಾವ ಸರ್ವರಿನ ಮೇಲೆ ಲೋಡ್ ಹೆಚ್ಚಾಗಿ ಅದು ಬಿಸಿಯಾಗುತ್ತದೆ ಎಂದೆನಿಸುತ್ತದೆಯೋ ಆಗ ಮಾತ್ರ ಅಲ್ಲಿಗೆ ತಂಪುಗಾಳಿಹರಿಸುವ ಮೂಲಕ, ಮತ್ತಷ್ಟು ಅನಗತ್ಯ ವಿದ್ಯುತ್ ಬಳಕೆಯನ್ನು ಕಡಿತಗೊಳಿಸುತ್ತದೆ. ಎಂಟುವರ್ಷದಲ್ಲಿ ಗೂಗಲ್ಲಿನ ಡೇಟಾಸೆಂಟರುಗಳು 350% ಬೆಳೆದಿವೆ, ಆದರೆ ಒಟ್ಟು ಬಳಸುತ್ತಿದ್ದ ವಿದ್ಯುತ್ತಿನಲ್ಲಿ 50% ಕಡಿಮೆಯಾಗಿದೆ.

(೨) ಗೂಗಲ್ಲಿನ ಉಪಾಯಗಳ ಎಳೆಯನ್ನೇ ಮುಂದಿನ ಹಂತಕ್ಕೆ ಕೊಂಡೊಯ್ದ ಐಬಿಎಮ್, ಫೇಸ್ಬುಕ್, ಅಮೆಝಾನ್, ಟ್ವಿಟರುಗಳೂ ತಂತಮ್ಮ ಡೇಟಾಸೆಂಟರುಗಳನ್ನು ಸ್ವೀಡನ್, ನಾರ್ವೆ, ಫಿನ್ಲೆಂಡ್, ಐರ್ಲೆಂಡುಗಳಿಗೆ ಸ್ಥಳಾಂತರಿಸಿದವು. ಈ ದೇಶಗಳ ವಿದ್ಯುತ್ 90ರಿಂದ 100% ಸ್ವಚ್ಚ ರೀತಿಯಲ್ಲಿ ಅಂದರೆ ಪರಿಸರಕೆ ಅತ್ಯಂತ ಕಡಿಮೆ ಅಥವಾ ಯಾವುದೆ ಹಾನಿಯಿಲ್ಲದೇ ತಯಾರಾಗುತ್ತದೆ.

(೩) ಕೆಲ ಕಂಪನಿಗಳು ಸಮುದ್ರಮಧ್ಯದಲ್ಲಿ ಕೆಲಸಮಾಡದೇ ಡೀಫಂಕ್ಟ್ ಆಗಿರುವ ಆಯಿಲ್-ರಿಗ್’ಗಳನ್ನು ಬಾಡಿಗೆಗೆ ಪಡೆದು, ಅಲ್ಲಿ ವೈರ್ಲೆಸ್ ಡೇಟಾಸೆಂಟರುಗಳನ್ನು ಸ್ಥಾಪಿಸಿ, ಸಮುದ್ರದ ನೀರನ್ನೇ ಪಂಪ್ ಮಾಡಿ ಕೂಲಿಂಗಿಗೆ ಬಳಸಲಾರಂಭಿಸಿದರು. ಆದರೆ ಈ ರಿಗ್’ಗಳು ಅಂತರರಾಷ್ಟ್ರೀಯ ಸಮುದ್ರದಲ್ಲಿರುವುದರಿಂದ, ಅವುಗಳಲ್ಲಿರುವ ಡೇಟಾ ಯಾವ ದೇಶದ ಸುಪರ್ದಿಗೂ ಸೇರದೇ, ಯಾರು ಬೇಕಾದರೂ ಎಂತಹ ಡೇಟಾವನ್ನು ಕೂಡಾ ಸಂಗ್ರಹಿಸಿಡಬಹುದಾದ ಕಾನೂನು ತೊಡಕುಂಟಾಗುವುದನ್ನು ಅರಿತ ಕೆಲಸ CIA ಈ ಯೋಜನೆಗಳಿಗೆ ತಣ್ಣೀರೆರಚಿತು.

(೩) ಮೈಕ್ರೋಸಾಫ್ಟು ತನ್ನ ಪ್ರಾಜೆಕ್ಟ್ ನಾಟ್ವಿಕ್ ಎಂಬ ಯೋಜನೆಯಡಿಯಲ್ಲಿ ಹಡಗುಗಳಲ್ಲಿ ಸರಕುಸಾಗಿಸಲು ಉಪಯೋಗಿಸುವ ಶಿಪ್ಪಿಂಗ್ ಕಂಟೈನರುಗಳನ್ನು ಒಂದಕ್ಕೊಂದು ವೆಲ್ಡ್ ಮಾಡಿ, ದೊಡ್ಡದೊಂದು ಲೋಹದ ಬಾಕ್ಸ್ ಮಾಡಿ, ಅದರಲ್ಲಿ ಸರ್ವರುಗಳನ್ನು ಒಪ್ಪವಾಗಿ ಜೋಡಿಸಿ, ಇಡೀ ಬಾಕ್ಸನ್ನೇ ಸ್ಕಾಟ್ಲೆಂಡಿನ ಹತ್ತಿರದಲ್ಲಿ, ತಣ್ಣಗಿನ ಸಮುದ್ರದಡಿಯಲ್ಲಿ ಮುಳುಗಿಸಿಟ್ಟಿದೆ. ಯಾವುದೇ ಎಸಿಯ ಅಗತ್ಯವಿಲ್ಲದೇ, ಸರ್ವರುಗಳು ಸಮರ್ಥವಾಗಿಯೇ ಕಾರ್ಯನಿರ್ವಹಿಸುತ್ತಿವೆ. ಐದು ವರ್ಷ ಇದನ್ನು ಅಧ್ಯಯನ ಮಾಡಿ, ಮುಂದಿನ ವರ್ಷಗಳಲ್ಲಿ ದೊಡ್ಡ ರೂಪದಲ್ಲಿ ಪ್ರಾರಂಭಿಸುವ ಇರಾದೆ ಮೈಕ್ರೋಸಾಫ್ಟ್’ಗಿದೆ.

(೪) ನಾರ್ವೆಯ ಗ್ರೀನ್ ಮೌಂಟೆನ್ ಎಂಬ ಕಂಪನಿಯ ಹೊಸಾ DC1-Stavanger ಡೇಟಾಸೆಂಟರ್ NATOದ ಹಳೆಯದೊಂದು ಶಸ್ತ್ರಾಸ್ತ್ರ ಸಂಗ್ರಹಣಾ ಬಂಕರಿನಲ್ಲಿದೆ. ನೆಲದಡಿಯಲ್ಲಿ ಅಣುಬಾಂಬಿನ ಸ್ಪೋಟದಿಂದಲೂ ರಕ್ಷಣೆಸಿಗುವಷ್ಟು ಗಟ್ಟಿಯಾಗಿ NATO ಇದನ್ನು ಕಟ್ಟಿರುವುದರಿಂದ, ಇಲ್ಲಿರುವ ಸರ್ವರುಗಳು ಸದಾ ಕ್ಷೇಮ. ಬಂಕರಿನ ಪಕ್ಕದಲ್ಲಿಯೇ ಹರಿಯುತ್ತಿರುವ ಫ್ಯೋರ್ದ್ (Fjord – ಬೆಟ್ಟಗಳ ನಡುವಿನಲ್ಲಿ ಒಂದಾನೊಂದುಕಾಲದಲ್ಲಿ ಹಿಮನದಿಯಿದ್ದ ತಗ್ಗುಪ್ರದೇಶದಲ್ಲಿ ನುಗ್ಗಿರುವ ಸಮುದ್ರ. ನಾರ್ವೆ, ಫಿನ್ಯಾಂಡುಗಳಲ್ಲಿ ಹೆಚ್ಚಾಗಿ ಕಾಣಬರುತ್ತದೆ) ಒಂದರಿಂದ ಗುರುತ್ವಬಲವನ್ನುಪಯೋಗಿಸಿಕೊಂಡು 6-10 ಡಿಗೀ ಸೆಂಟಿಗ್ರೇಡಿನಷ್ಟು ತಣ್ಣಗಿನ ನೀರನ್ನು ಡೇಟಾಸೆಂಟರಿನ ಸುತ್ತಲೂ ಹರಿಸಿ, ಅದನ್ನು ತಂಪಾಗಿಸಿ, ಮತ್ತೆ ನೀರನ್ನು ಮರಳಿ ಫ್ಯೋರ್ದಿಗೇ ಕೊಟ್ಟು, ಪುಗಸಟ್ಟೆ ಕೆಲಸ ಮಾಡಿಸಿಕೊಂಡಿದ್ದಾರೆ. ಜೊತೆಗೇ ಇಡೀ ಡೇಟಾಸೆಂಟರನ್ನು ಗಾಳಿಯಾಡದಂತೆ ಏರ್-ಟೈಟ್ ಮಾಡಿ ಆಮ್ಲಜನಕದ ಕೊರತೆಯುಂಟಾಗುವಂತೆ ಮಾಡಿರುವುದರಿಂದ ಅಲ್ಲಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಯೇ ಇಲ್ಲ. ಇದರಿಂದ ಬೆಂಕಿ ನಂದಿಸುವ ಸಿಸ್ಟಮಿನ ಮೇಲಿನ ಲಕ್ಷಾಂತರ ಡಾಲರ್ ಹೂಡಿಕೆಯೂ ಉಳಿದಿದೆ.

(೫) ದೊಡ್ಡಕಂಪನಿಗಳಿಗೇನೋ ದೊಡ್ಡ ಸರ್ವರ್’ಗಳು ಬೇಕು. ಈ ಸರ್ವರುಗಳು ಒಂದೊಂದೂ ಸಹ 75-150 ವ್ಯಾಟ್’ನಷ್ಟು ವಿದ್ಯುತ್ ಕುಡಿಯುತ್ತವೆ. ಕಂಪನಿ ಸಣ್ಣದಿದ್ದರೆ, ಅದರ ಡೇಟಾಸೆಂಟರುಗಳ ಸರ್ವರುಗಳೂ ಸಣ್ಣದಾಗುವಂತಿದ್ದರೆ? ಹೆಚ್-ಪಿ/ಇಂಟೆಲ್ಲಿನ ದೊಡ್ಡ ಸರ್ವರ್ ಬದಲು ರಾಸ್ಪ್ಬೆರ್ರಿ-ಪೈ ಕೂರಿಸುವಂತಾದರೆ? ರಾಸ್ಪ್ಬೆರ್ರಿ-ಪೈ ಎಂಬುವು ಸಣ್ಣ ಸಿಂಗಲ್-ಬೋರ್ಡ್ ಕಂಪ್ಯೂಟರ್ಗಳು. ಇವು ಬರೇ 3 ವ್ಯಾಟ್ ವಿದ್ಯುತ್ತಿನಲ್ಲಿ, ನಿಮ್ಮದೊಂದು ಲ್ಯಾಪ್ಟಾಪ್ ಅಥವಾ ಪಿಸಿ ಮಾಡುವಷ್ಟೇ ಕೆಲಸ ಕೆಲಸಮಾಡಬಲ್ಲವು. ಸಣ್ಣಕಂಪನಿಗಳಿಗೆ ಸರ್ವರುಗಳನ್ನೂ ಇದೇ ರೀತಿ ಬಳಸಲು ಸಾಧ್ಯವಾದರೆ!? PC Extreme ಎಂಬ ಕಂಪನಿ ಈ ನಿಟ್ಟಿನಲ್ಲೂ ಹೆಜ್ಜೆಯಿಟ್ಟಿದೆ. ಸಣ್ಣಮಟ್ಟಿನ ಯಶಸ್ಸನ್ನೂ ಸಾಧಿಸಿದೆ.

(೬) ಉತ್ತರದ್ರುವದ ಬಳಿಯ ದೇಶವಾದ ಸ್ವೀಡನ್ನಿನ ಡಿಜಿಪ್ಲೆಕ್ಸ್ ಎಂಬ ಕಂಪನಿ ಈ ಡೇಟಾಸೆಂಟರಿನ ವ್ಯವಹಾರದ ಮಾದರಿ(business model)ಯನ್ನೇ ಉಲ್ಟಾ ಮಾಡಿ, ಸರ್ವರುಗಳು ಉತ್ಪಾದಿಸುವ ಶಾಖವನ್ನು ‘ಸಮಸ್ಯೆ’ ಎಂದು ಪರಿಗಣಿಸದೇ, ಆ ಶಾಖವನ್ನು ಅಕ್ಕಪಕ್ಕದ ಕಾಲೋನಿಯ ಮನೆಗಳನ್ನು ಬೆಚ್ಚಗಿಡಲು ಮಾರುತ್ತಿದೆ. ಗ್ರಿಡ್’ನಿಂದ ದುಬಾರಿ ವಿದ್ಯುತ್ ಬಳಸಿ ಮನೆಯನ್ನು ಬೆಚ್ಚಗಿಡುವ ಬದಲು, ಹತ್ತರಷ್ಟು ಕಮ್ಮಿಬೆಲೆಯಲ್ಲಿ ಸಿಗುತ್ತಿರುವ ಬಿಸಿಗಾಳಿಯನ್ನೇ ಬಳಸಿ, ಪರಿಸರಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ಡಿಜಿಪ್ಲೆಕ್ಸ್ 2020ಕ್ಕೆ ಸುಮಾರು 10,000 ಮನೆಗಳಿಗೆ ಶಾಖ ಒದಗಿಸುವ ಯೋಜನೆ ಹೊಂದಿದೆ.

ಹೀಗೆ ವಿಜ್ಞಾನ ಇವತ್ತು ನಾವಂದುಕೊಂಡದ್ದಕಿಂತಲೂ ವೇಗವಾಗಿ ನಮ್ಮ ಬದುಕನ್ನು ಸುಂದರವಾಗಿಸುತ್ತಿದೆ. ಹೌದು ನಮ್ಮಂತಹಾ ಸಾಮಾನ್ಯರು ಚಾರ್ಜಿಗೆ ಹಾಕಿದ ಫೋನು 100% ಚಾರ್ಜ್ ಆದರೂ ತೆಗೆಯುವುದಿಲ್ಲ. ಅದರಿಂದ ಸಣ್ಣದೊಂದು ಮೊತ್ತದ ವಿದ್ಯುತ್ ಪೋಲಾಗುವುದು ಹೌದು. ಅದರಿಂದ ಪರಿಸರಕ್ಕೆ ಎಲ್ಲೋ ಒಂದು ಕಡೆ ಹಾನಿಯಾಗುವುದೂ ಹೌದು. ಆದರೆ ಅದೇ ಸಮಯಕ್ಕೆ ವಿಶ್ವದಾದ್ಯಂತ ಈ ಟೆಕ್ ಕಂಪನಿಗಳು ನಮ್ಮ ಅರಿವಿಗೆ ಬಾರದಂತೆಯೇ ಎಷ್ಟೋ ಹೊಸಹೊಸ ವಿಧಾನಗಳಿಂದ ವಿದ್ಯುತ್ ಉಳಿಸುತ್ತಿದ್ದಾರೆ. ನಿಧಾನಕ್ಕೆ ಈ ವಿಧಾನಗಳೇ ನಮ್ಮ ನಿಮ್ಮ ಮನೆಗೂ ಬಂದಿಳಿಯುತ್ತೆ. ನಾನು ಮತ್ತು ನೀವೂ ಸಹ ಸಂಪೂರ್ಣ ಸ್ವಚ್ಚ ವಿದ್ಯುತ್ (ಅಂದರೆ ವಾಯು, ಸೌರ ಅಥವಾ ಜಲಮೂಲಗಳಿಂದಷ್ಟೇ ಉತ್ಪನ್ನವಾದ ಹಾಗೂ ಪರಿಸರಕ್ಕೆ ಯಾವ ಹಾನಿಯನ್ನೂ ಮಾಡದ) ಮಾತ್ರವೇ ಬಳಸುವ ನಿರ್ಧಾರ ಮಾಡಿದರೂ, ನಮ್ಮ ನಾಳೆಗಳು ಮತ್ತಷ್ಟು ಸುಂದರವಾಗಲು ಸಾಧ್ಯ.

ಆದರೆ ಇದಕ್ಕೆ ತಕ್ಕನಾಗಿ ನಮ್ಮ ಸರ್ಕಾರಗಳೂ ಈ ನಿಟ್ಟಿನಲ್ಲಿ ಯೋಚಿಸಬೇಕು. ಮೊನ್ನೆ ಒಂದು ಲೇಖನ ಓದಿದೆ. ಅಮೇರಿಕ ಒರೆಗಾನ್ ರಾಜ್ಯದ ಪೋರ್ಟ್ಲ್ಯಾಂಡ್ ನಗರ ‘ಲೂಸಿಡ್ ಎನರ್ಜಿ’ ಎಂಬ ಕಂಪನಿಯೊಂದಿಗೆ ಕೈಜೋಡಿಸಿ ತನ್ನ ನೀರುಸರಬರಾಜು ಮತ್ತು ಕೊಳಚೆ ಜಾಲದ ಪೈಪುಗಳನ್ನು ಲೂಸಿಡ್ ಎನರ್ಜಿ ಕಂಪನಿಯ ಪೈಪುಗಳೊಂದಿಗೆ ಬದಲಾಯಿಸಿತು. ಇಡೀ ನಗರದ್ದಲ್ಲ, ಪ್ರಯೋಗಾತ್ಮಕವಾಗಿ ನಗರದ ಒಂದು ಭಾಗದಲ್ಲಿ ಸಧ್ಯಕ್ಕೆ ಹೊಸಾ ಪೈಪುಗಳನ್ನು ಅಳವಡಿಸಲಾಗಿದೆ. ಈ ಪೈಪುಗಳಲ್ಲಿ ಏನು ವಿಶೇಷ ಅಂತೀರಾ? 44 ಇಂಚಿನ ಈ ಪೈಪುಗಳನ್ನು ಸ್ವಲ್ಪವೇ ಸ್ವಲ್ಪ ಅಂದರೆ ಕನಿಷ್ಟ 2 ಡಿಗ್ರೀ ಓಟದ ಇಳಿಜಾರಿನಲ್ಲಿ ಅಳವಡಿಸಿದರೂ ಸಾಕು. ಇದರೊಳಗೆ ಅಷ್ಟಷ್ಟು ಅಡಿ ದೂರದಲ್ಲಿ ಜೋಡಿಸಿರುವ ಟರ್ಬೈನುಗಳು ವಿದ್ಯುತ್ಚಕ್ತಿಯನ್ನು ಉತ್ಪಾದಿಸುತ್ತವೆ!! ಹೆಂಗೆ ಐಡಿಯಾ!? ನೀರನ್ನು ಎಲ್ಲೂ ಪಂಪ್ ಮಾಡುವ ಅಗತ್ಯವಿಲ್ಲ. ಸುಮ್ಮನೇ ಹರಿಫು ಹೋಗುವ ನೀರಿನ ಓಟವನ್ನೇ ಬಳಸಿಕೊಂಡು ಹತ್ತು ಮೀಟರ್ ಓಟದಲ್ಲಿ ಒಂದು ವ್ಯಾಟ್ ವಿದ್ಯುತ್ ಉತ್ಪಾದನೆಯಾದರೂ ಲಾಭವೇ! ಯೋಚನಾಲಹರಿಯಲ್ಲಿ ಬಂದ ಈ ಸಣ್ಣದೊಂದು ಬದಲಾವಣೆ, ಸಧ್ಯಕ್ಕೆ 150 ಮನೆಗಳಿಗೆ ವಿದ್ಯುತ್ ಒದಗಿಸುತ್ತಿದೆ. ಸಂಪೂರ್ಣ ಸ್ವಚ್ಚ ವಿದ್ಯುತ್. ಗಾಳಿಯಿಲ್ಲ ಅಂತಾ ಟರ್ಬೈನ್ ನಿಲ್ಲುವ ಹೆದರಿಕೆಯಿಲ್ಲ, ಬರಗಾಲ ಬಂತು ಅಂತಾ ಅಣೆಕಟ್ಟು ಖಾಲಿಯಾಗುವ ತಲೆಬಿಸಿಯಿಲ್ಲ. ಮನೆಗಳಿಗೆ ನೀರು ಹೋದಾಗಲೆಲ್ಲಾ, ಮನೆಗಳಿಂದ ಕೊಳಚೆನೀರು ಹೊರಬಂದಲ್ಲೆಲ್ಲಾ ವಿದ್ಯುತ್ ಉತ್ಪಾದನೆ!

ಹೀಗೆ ಸರ್ಕಾರ-ಖಾಸಗೀ ಸಂಸ್ಥೆಗಳು-ಸಾರ್ವಜನಿಕರು ಸೇರಿದರೆ ಪರಿಸರವನ್ನು ಸ್ವಚ್ಚವಾಗಿಸುವುದು ದೊಡ್ಡ ವಿಷಯವೇನಲ್ಲ. ಅದಕ್ಕೊಬ್ಬ ನಾಯಕನ ಸಂಕಲ್ಪ, ಸೃಜನಶೀಲ ಪ್ರತಿಭೆಯೊಂದರ ಪ್ರಚೋದನೆ, ಜೊತೆಗೆ ಜನರ ಕೊಡುಗೆಯಿದ್ದರೆ ಸಾಕು.

(ಈಗ ಇದಕ್ಕೆ ಕಮೆಂಟು ಮಾಡಿದರೆ, ಶೇರ್ ಮಾಡಿದರೆೆ ಅಲ್ಲೆಲ್ಲೋ ವರ್ಡ್ಪ್ರೆಸ್ಸಿನ ಸರ್ವರ್ ಮೇಲೆ ಹೊರೆಬೀಳುತ್ತೆ ಅಂತಾ ಅಂಜಬೇಡಿ. ನೀವು ಏನು ಮಾಡದೇ ಇದ್ದರೂ ಅಲ್ಲಿ ಅಷ್ಟೇ ವಿದ್ಯುತ್ ಬಳಕೆಯಾಗುತ್ತಿರುತ್ತದೆ. ಹಾಗಾಗಿ ಯಾವ ಅಂಜಿಕೆಯೂ ಇಲ್ಲದೇ ಕಮೆಂಟು ಮಾಡಿ, ಶೇರ್ ಮಾಡಿ 🙂 )

ನಿಂದಾಸ್ತುತಿ – 2

ನಿಂದಾಸ್ತುತಿಯಲ್ಲಿ ಇವತ್ತು ತೆಲುಗಿನ ಒಂದು ಕೃತಿ.

ಭದ್ರಾಚಲ ರಾಮದಾಸು, ಹದಿನೇಳನೇ ಶತಮಾನದಲ್ಲಿ ಇಂದಿನ ಆಂಧ್ರದ ಭದ್ರಾಚಲದ ಹತ್ತಿರವಿರುವ ನೆಲಕೊಂಡಪಲ್ಲಿಯಲ್ಲಿ ಜೀವಿಸಿದ್ದ ವಾಕ್ಗೇಯಕಾರರು. ಭಕ್ತಿಪಂಥದ ಹೆಚ್ಚಿನ ದಾಸರಂತೆ, ರಾಮದಾಸರೂ ಸಹ ವಿಷ್ಣುವಿನ ಅವತಾರಗಳ ಭಕ್ತರು. ರಾಮಾವತಾರ ಅವರ ನೆಚ್ಚಿನ ವಿಷ್ಣುರೂಪ. ಅವರ ಒಂದೆರಡು ಕೀರ್ತನೆಗಳನ್ನು ಬಿಟ್ಟರೆ ಉಳಿದೆಲ್ಲವೂ ರಾಮನನ್ನೇ ಸ್ತುತಿಸುವಂತವು.

ರಾಮದಾಸರ ಮೂಲ ಹೆಸರು ಕಂಚರ್ಲಾ ಗೋಪಣ್ಣ. 1620-1680ರ ನಡುವೆ ಜೀವಿಸಿದ ಗೋಪಣ್ಣರು, ವೃತಿಯಲ್ಲಿ ತಹಸೀಲ್ದಾರ್. ಕುತುಬ್ ಶಾಹಿ ಸುಲ್ತಾನರಿಗೆ ‘ಪಲ್ವಾಂಚನ ಪರಗಣ’ದ ಹಳ್ಳಿಗಳಿಂದ ರಾಜಸ್ವ ಸಂಗ್ರಹಣೆ ಮಾಡುತ್ತಲೇ ತಮ್ಮ ರಾಮಭಕ್ತಿ ಮುಂದುವರಿಸಿದವರು. ಶಿಥಿಲಾವಸ್ಥೆಯಲ್ಲಿದ್ದ ಭದ್ರಾಚಲದ ಸೀತಾರಾಮ ದೇವಸ್ಥಾನದ ಜೀರ್ಣೋದ್ಧಾರ ಮಾಡಿಸಿದ ಮಹಾನುಭಾವ.

ರಾಮನ ಮೇಲೆ ಸಾವಿರಾರು ಕೀರ್ತನೆಗಳನ್ನು ಬರೆದಿದ್ದಾರೆ ಎನ್ನಲಾಗುತ್ತದೆಯಾದರೂ, ಲಭ್ಯವಿರುವ ಕೀರ್ತನೆಗಳ ಸಂಖ್ಯೆ ತೀರಾ ಕಮ್ಮಿ. ಕರ್ನಾಟಕ ಸಂಗೀತಕ್ಕೆ ಮಹಾನ್ ಕೊಡುಗೆ ನೀಡಿದ ಶ್ಯಾಮಾಶಾಸ್ತ್ರಿಗಳು, ತ್ಯಾಗರಾಜರು, ಕ್ಷೇತ್ರಯ್ಯನವರ ಮಟ್ಟದಲ್ಲೇ ಗುರುತಿಸಬಹುದಾದ ಮಹಾನ್ ಚೇತನ, ಭದ್ರಾಚಲ ರಾಮದಾಸು.

ಐವತ್ತರ ದಶಕದಲ್ಲಿ, ರಾಮದಾಸರ ಕೀರ್ತನೆಗಳಿಗೆ ಮತ್ತೆ ಜೀವತುಂಬಿದವರು ‘ಸಂಗೀತ ಕಲಾನಿಧಿ’ ಡಾ. ಬಾಲಮುರಳಿಕೃಷ್ಣ. ಅವರ ಕಂಠಸಿರಿಯಲ್ಲಿ ಪ್ರಸಿದ್ಧವಾದ ರಾಮದಾಸರ ಕೃತಿಗಳಲ್ಲೊಂದು “ಫಲುಕೇ ಬಂಗಾರಮಾಯಿನಾ”. ಇದನ್ನು ನೂರಕ್ಕೆ ನೂರು ನಿಂದಾಸ್ತುತಿ ಎನ್ನಲಾಗದಿದ್ದರೂ, ಭಗವಂತನ್ನು ಪ್ರಶ್ನಿಸುವ, ದಯನೀಯವಾಗಿ ಬೇಡಿಕೊಳ್ಳುವ toneನಿಂದ, ನಿಂದಾಸ್ತುತಿಯೊಳಗೇ ವರ್ಗೀಕರಿಸಬಹುದೆಂಬ assumptionನೊಂದಿಗೆ………

*ವಾಕ್ಗೇಯಕಾರ = ಕೀರ್ತನೆ ರಚಿಸುವುದು ಮಾತ್ರವಲ್ಲದೇ, ಅದಕ್ಕೆ ಸಂಗೀತ ರೂಪವನ್ನೂ ಸೇರಿಸುವವ. (ವಾಕ್=ಪದ/ಮಾತು, ಗೇಯ=ಹಾಡು/ಹಾಡುವಿಕೆ, ಗೇಯಕಾರ=ಹಾಡುಗಾರ)

ಪಲುಕೇ ಬಂಗಾರಮಾಯೆನಾ,
ಕೋದಂಡಪಾಣಿ ಪಲುಕೇ ಬಂಗಾರಮಾಯೆನಾ

ಪಲುಕೇ ಬಂಗಾರಮಾಯೆ ಪಿಲಚಿನಾ ಪಲುಕವೇಮಿ
ಕಲಲೋ ನೀ ನಾಮಸ್ಮರಣ ಮರುವ ಚಕ್ಕನಿ ತಂಡ್ರೀ ||ಪಲುಕೇ||

ಎಂತ ವೇಡಿನಗಾನಿ ಸುಂತೈನ ದಯರಾದು
ಪಂತಮು ಸೇಯ ನೇನೆಂತಟಿವಾಡನು ತಂಡ್ರೀ ||ಪಲುಕೇ||

ಇರವುಗ ಇಸುಕಲೋನ ಪೊರಲಿನ ಉಡುತ ಭಕ್ತಿಕಿ
ಕರುಣಿಂಚಿ ಬ್ರೋಚಿತಿವನಿ ನೆರ ನಮ್ಮಿತಿನಿ ತಂಡ್ರೀ ||ಪಲುಕೇ||

ರಾತಿ ನಾತಿಗ ಚೇಸಿ ಭೂತಲಮುನ
ಪ್ರಖ್ಯಾತಿ ಚೆಂದಿತಿವನಿ ಪ್ರೀತಿತೋ ನಮ್ಮಿತಿ ತಂಡ್ರೀ ||ಪಲುಕೇ||

ಶರಣಾಗತತ್ರಾಣ ಬಿರುದಾಂಕಿತುಡವುಕಾದಾ
ಕರುಣಿಂಚು ಭದ್ರಾಚಲ ವರರಾಮದಾಸ ಪೋಷ ||ಪಲುಕೇ||

(ಚರಣಗಳನ್ನು ಇಲ್ಲಿರುವ ಪಾಳಿಯಲ್ಲಲ್ಲದೇ, ಬೇರೆ ಬೇರೆ ಪಾಳಿಯಲ್ಲೂ ಕಲಾವಿದರು ಹಾಡಿರುವುದುಂಟು)

ಇದರ ಪಲ್ಲವಿಯಲ್ಲಿ ರಾಮದಾಸರು “ಏನು ರಾಮ, ನಿನ್ನ ಮಾತುಗಳು ಬಂಗಾರಕ್ಕಿಂತಲೂ ಹೆಚ್ಚು ಬೆಲೆಯುಳ್ಳದಾಗಿಬಿಟ್ಟವಾ (ಬಂಗಾರದಷ್ಟೂ ಅಪರೂಪವಾಗಿಬಿಟ್ಟವಾ)? ನಾನೆಷ್ಟು
ಕರೆದರೂ, ಮಾತನಾಡಿಸಿದರೂ, ಕೇಳಿಕೊಂಡರೂ ಮಾತೇ ಆಡುತ್ತಿಲ್ಲ ನೀನು” ಅಂತಾ ಕೇಳ್ತಾರೆ. ಸಾಮಾನ್ಯರಾದ ನಾವು ಪರಸ್ಪರ “ಏನಪ್ಪಾ, ಸುಮ್ಮನಾಗಿಬಿಟ್ಟಿದ್ದೀಯಾ! ಮಾತೇ ಇಲ್ಲ!! ಮಾತನಾಡಿದರೆ ಮುತ್ತು ಉದುರುತ್ತಾ?” ಅಂತ ಕೇಳಿದಹಾಗೆ, ಭದ್ರಾಚಲರು ರಾಮನನ್ನು ಮೆಲ್ಲಗೆ ತಿವಿಯುತ್ತಾರೆ.

ಮುಂದುವರೆಯುತ್ತಾ ರಾಮನ ಲೀಲೆಗಳನ್ನು ಮೆಲುಕುಹಾಕುತ್ತಾ “ಅಳಿಲಿನ ಸೇವೆಗೇ ಮರುಳಾದವ ನೀನು (ಅಂತಾ ಲೋಕ ಹೇಳುತ್ತೆ). ಆದರೂ ನನ್ನ ಮಾತು ನಿನಗೆ ಕೇಳುತ್ತಿಲ್ಲ. ಕಲ್ಲಾಗಿದ್ದ ಅಹಲ್ಯೆಗೆ ಮುಕ್ತಿ ಕೊಡಿಸಿದೆ ನೀನು ಅಂತ ಜನ ಹೊಗಳುತ್ತಾರೆ. ನನ್ನ ಮಾತು ಕೇಳದಷ್ಟೂ ನೀನು ಕಲ್ಲಾಗಿದ್ದೀಯಲ್ಲಾ. ಅದೆಷ್ಟು ಬೇಡಿಕೊಂಡರೂ ನಿನಗೆ ದಯೆಯೇ ಇಲ್ಲವಲ್ಲಾ! ನಿನಗೆ ‘ಶರಣಾಗತ ತ್ರಾಣ’ ಅಂತಾ ಬಿರುದುಬೇರೆ ಕೊಟ್ಟಿದ್ದಾರೆ. ನಾನಿಷ್ಟು ನಿನ್ನ ವಶವಾದರೂ ನನ್ನೊಂದಿಗೆ ಮಾತನಾಡದ ನಿನ್ನ ಆ ಬಿರುದುಗಳು, ನಿನ್ನ ಆ ದಯೆಯ ಕಥೆಗಳನ್ನ ಹೇಗೆ ನಂಬಲಿ?” ಅಂತಾ ಪ್ರಶ್ನಿಸುತ್ತಾರೆ.

ಒಟ್ಟಿನಲ್ಲಿ ಅವನ ಶರಣಾಗತಿಯ ಮಂತ್ರಪಠಿಸುತ್ತಲೇ, ಮಾತು ಬಂಗಾರವಾಯಿತೇನು? ಅಂತಾ ಕೇಳುತ್ತಾ ರಾಮನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ.

ನಿಂದಾಸ್ತುತಿ – 1

ದೇವರನ್ನು ಎರಡು ರೀತಿಯಿಂದ ಒಲಿಸಿಕೊಳ್ಳಬಹುದು. ಹೊಗಳಿಕೆಯಿಂದ, ಭಕ್ತಿಯ ಭಜನೆ, ಪ್ರಾರ್ಥನೆ, ಧ್ಯಾನದಿಂದ ಒಲಿಸಿಕೊಳ್ಳಲು ಪ್ರಯತ್ನಿಸಬಹುದು. ಇನ್ನೊಂದು ನಿಂದಾ ಸ್ತುತಿಯಿಂದ ಭಗವಂತನನ್ನು ಒಲಿಸಲು ಪ್ರಯತ್ನಿಸಬಹುದು. ಭಕ್ತಿಪಂಥದಲ್ಲಿ ಭಕ್ತಿಸ್ತುತಿಯ ಸಂಖ್ಯೆಯೇ ಹೆಚ್ಚಾಗಿದರೂ ಸಹ, ನಿಂದಾಸ್ತುತಿಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಹಾಗಂತಾ ನಿಂದಾಸ್ತುತಿಯೇನು ವೈದಿಕರ ಇಡುಗಂಟಲ್ಲ. ಜಿನಸಾಹಿತ್ಯದಲ್ಲೂ, ವಚನಸಾಹಿತ್ಯದಲ್ಲೂ, ಜನಪದ ಸಾಹಿತ್ಯದಲ್ಲೂ ಸಹ ದೇವರನ್ನು ನಿಂದಿಸುತ್ತಲೇ ಬೇಡಿಕೊಳ್ಳುವ ಪರಿಪಾಠ ಬೇಕಾದಷ್ಟಿದೆ.

ದೇವರನ್ನು ಬರೀ ಸರ್ವಶಕ್ತ ಭಗವಂತನನ್ನಾಗಿ ನೋಡದೇ, ಕ್ರಿಶ್ಚಿಯಾನಿಟಿಯ #blasphemy ಎಂಬ ಪರಿಕಲ್ಪನೆಯ ಹಂಗಿಲ್ಲದೇ, ದೇವರು ನನ್ನ ಪಕ್ಕದಲ್ಲೇ ಕೂತ ಸ್ನೇಹಿತನನ್ನಾಗಿ ನೋಡುವ ಭಾಗ್ಯ ಹಿಂದೂಗಳಿಗೆ, ಹಳೆಯ ಗ್ರೀಕರಿಗೆ ಬಿಟ್ಟರೆ ಬೇರಾವ ರಿಲೀಜಿಯನ್ನಿಗೂ ಇಲ್ಲ. ಅಮ್ಮ ಮಾಡಿದ ದೋಸೆ ಚೆಂದವಿದ್ದಾಗ ಅಮ್ಮನಿಗೆ ಹೊಗಳಿ, ಚಟ್ನಿ ಖಾರವಿದ್ದಾಗ “ಎಂತದೇ ಅಮ್ಮಾ, ಇಷ್ಟ್ ಖಾರ ಮಾಡಿದ್ದೀ? ಹೆಂಗ್ ತಿನ್ನೂದು ಇದನ್ನ. ಎಷ್ಟು ಹೇಳಿದ್ರೂ ಕೇಳಲ್ಲ. ನನ್ನ ಸಾಯ್ಸೋಕೇ ಪ್ಲಾನ್ ಹಾಕಿದ್ದೀಯಾ ನೀನು” ಅಂತಾ ಬೈದು, ಆಮೇಲೆ ನೀರು ಕುಡಿದು ಅಮ್ಮನನ್ನ ತಬ್ಬಿಕೊಳ್ಳೋ ಮಗುವಿನಂತೆ, ನಮ್ಮ ಭಕ್ತ-ದೇವರ ನಡುವಿನ ಸಂಬಂಧ.

ನಿಂದಾಸ್ತುತಿಗಳಲ್ಲಿ ಹೆಸರೇ ಹೇಳುವಂತೆ ದೇವರ ನಿಂದನೆ ನಡೆಯುತ್ತದೆ. ಆದರೆ ನಮ್ಮ ದಾಸರು ಅದೆಷ್ಟು ಚಂದವಾಗಿ ಬೈಯುತಾರೆ ಅಂದರೆ ದೇವನನ್ನು ಬೈದರೂ ಮುದ್ದುಗರೆಯುವಂತಿರುತ್ತದೆ. “ನಿನ್ನ ಸೇವಕ ನಾನು” ಅಂತಾ ಹೇಳುತ್ತಲೇ, “ನನ್ನ ಸೇವಕ ನೀನು” ಅನ್ನುತ್ತಾ ಅವನ್ನನು ಕಳ್ಳಕೃಷ್ಣ, ಭೋಳೇಶಂಕರ, ಟೊಣಪಗಣಪ ಅಂತೆಲ್ಲಾ ಹೆಸರಿಡುತ್ತಾರೆ. Obviously, “ಕಳ್ಳ, ಪುಂಡ, ಪಟಿಂಗ” ಎಂದೆಲ್ಲಾ ಬೈಯುವುದು ಮುದ್ದಿನ ಮಕ್ಕಳನ್ನು ತಾನೆ. “ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ…” ಎಂದು ಸಮರ್ಪಿತರಾದ ದಾಸರು, “ಆರು ಬದುಕಿದರಯ್ಯಾ ಹರಿನಿನ್ನ ನಂಬಿ, ತೋರು ಈ ಧರೆಯೊಳಗೆ ಒಬ್ಬರನು ಕಾಣೆ” ಅಂತಾ ನಿಂದಿಸುತ್ತಾರೆ.

ಭಕ್ತಿಗೀತೆಗಳನ್ನು ಎಲ್ಲರೂ ಶೇರ್ ಮಾಡ್ತಾರೆ. ಆದರೆ ನಾನು ಈ ರೀತಿಯ ಕೆಲ ನಿಂದಾಸ್ತುತಿಗಳನ್ನ ಶೇರ್ ಮಾಡೋಣ ಅಂತಿದ್ದೀನಿ.

ಇವತ್ತಿನ ನಿಂದಾಸ್ತುತಿ:

ಆರು ಬದುಕಿದರಯ್ಯ ಹರಿ ನಿನ್ನ ನಂಬಿ ||ಪ||
ತೋರು ಈ ಧರೆಯೊಳಗೆ ಒಬ್ಬರನು ಕಾಣೆ ||ಅಪ||

ಕರಪತ್ರದಿಂದ ತಾಮ್ರಧ್ವಜನ ತಂದೆಯ
ಕೊರಳ ಕೊಯಿಸಿದೆ ನೀನು ಕುಂದಿಲ್ಲದೇ
ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆ
ಅರಿತು ತ್ರಿಪುರಾಸುರನ ಹೆಂಡಿರನು ಬೆರೆತೆ ||೧||

ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆ
ಸುಲಭದಲಿ ಕೌರವರ ಮನೆಯ ಮುರಿದೆ
ನೆಲವ ಬೇಡಲು ಹೋಗಿ ಬಲಿಯ ಭೂಮಿಗೆ ತುಳಿದೆ
ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ || ೨ ||

ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆ
ಗರುಡವಾಹನ ನಿನ್ನ ಚರಿಯನರಿಯೆ
ದೊರೆಪುರಂದರ ವಿಠಲ ನಿನ್ನನ್ನು ನಂಬಿದರೆ
ತಿರುಪೆಯೂ ಸಿಗಲೊಲ್ಲದು ಕೇಳೊ ಹರಿಯೇ! ||೩||

ಈ ಉಗಾಭೋಗವನ್ನು ತಪ್ಪಾಗಿ ಅರ್ಥೈಸಿಕೊಂಡು ಪುರಂದರದಾಸರಿಗೆ ವೈಚಾರಿಕ ಪಟ್ಟವನ್ನೂ ನಮ್ಮ ಲಿಬರಲ್ಲುಗಳು ಕೊಡಲು ಪ್ರಯತ್ನಿಸಿದ್ದಿದೆ. ಆದರೆ ಸೂಕ್ಷ್ಮವಾಗಿ ನೋಡಿದಾಗ ದಾಸರು ಅಧರ್ಮಿಗಳನ್ನು ಕೃಷ್ಣ ಹೇಗೆ ಬೇರೆ ಬೇರೆ ರೀತಿಯಲ್ಲಿ ಮಣಿಸಿದ ಅನ್ನೋದನ್ನೇ ನಿಂದನೆಯ ರೂಪದಲ್ಲಿ ಹೇಳಿದ್ದಾರೆ ಎನ್ನುವುದು ಕಂಡುಬರುತ್ತದೆ.

“ಕರ್ನಾಟಕ ವಾತಾಪಿ, ತಂಜಾವೂರಿನ ಮುತ್ತುಸ್ವಾಮಿ ದೀಕ್ಷಿತರ ಕೃತಿಯಲ್ಲಿ ಸೇರಿ ಅಜರಾಮರವಾಗಿದ್ದು ಹೇಗೆ?”

ಕ್ರಿ.ಶ 597 ರಲ್ಲಿ ಚಾಲುಕ್ಯರಾಜ ಕೀರ್ತಿವರ್ಮನು ನಿಧನನಾದಾಗ, ಅವನ ಮಗ ಎರೆಯ ಇನ್ನೂ ಚಿಕ್ಕ ಹುಡುಗ. ಯುವರಾಜ ಹರೆಯಕ್ಕೆ ಬರುವತನಕ ಪಟ್ಟಾಭಿಷೇಕ ಮಾಡುವಂತಿರಲಿಲ್ಲ. ಆದ್ದರಿಂದ ಎರೆಯನ ಚಿಕ್ಕಪ್ಪ (ಕೀರ್ತಿವರ್ಮನ ತಮ್ಮ) ಮಂಗಳೇಶ, ಎರೆಯ ಆಡಳಿತಯೋಗ್ಯ ವಯಸ್ಸಿಗೆ ಬರುವತನಕ ರಾಜಪ್ರತಿನಿಧಿಯಾಗಿ, ಚಾಲುಕ್ಯ ರಾಜ್ಯದ ಆಡಳಿತವನ್ನು ವಹಿಸಿಕೊಂಡ. ಮಂಗಲೇಶ ಒಳ್ಳೆಯ ರಾಜನೇ ಆಗಿದ್ದರೂ, ಅವನಿಗೆ ರಾಜ್ಯಭಾರವನ್ನು ಎರೆಯನಿಗೆ ವಾಪಾಸು ವಹಿಸಿಕೊಡುವ ಮನಸ್ಸಿರಲಿಲ್ಲ. ಕ್ರಿ.ಶ 603ರಲ್ಲಿ ಎರೆಯನ ಬದಲು, ತನ್ನ ಮಗನನ್ನೇ ಯುವರಾಜನೆಂದು ಘೋಷಿಸಿ ತನ್ನ ವಂಶಕ್ಕೇ ರಾಜ್ಯಭಾರ ಸಿಗುವಂತೆ ತಂತ್ರಮಾಡುತ್ತಾನೆ.

ಇದರಿಂದ ಅತೃಪ್ತನಾದ ಎರೆಯ, ಬಾದಾಮಿಯಿಂದ ಹೊರಬಂದು ಇಂದಿನ ಕೋಲಾರದ ಬಳಿಯಿರುವ ಪ್ರದೇಶದಲ್ಲಿ ಬಲಿಷ್ಟರಾಗಿದ್ದ ‘ಬನ’ರೊಂದಿಗೆ ಸ್ನೇಹಬೆಳೆಸಿ, ಸುತ್ತಮುತ್ತಲ ಪಂಗಡಗಳೊಂದಿಗೆ ಮೈತ್ರಿಮಾಡಿಕೊಂಡು, ಸೈನ್ಯವನ್ನು ಸಂಘಟಿಸುತ್ತಾನೆ. ಹೀಗೆ ಕಟ್ಟಿದ ಸೈನ್ಯದೊಂದಿಗೆ ಎರೆಯ, ಮಂಗಳೇಶನ ಮೇಲೆ ಯುದ್ಧ ಘೋಷಿಸುತ್ತಾನೆ. ಮಂಗಳೇಶನ ಸೈನ್ಯಕ್ಕೂ, ಎರೆಯನ ಸೈನ್ಯಕ್ಕೂ ‘ಎಲಪಟ್ಟು ಸಿಂಬಿಗೆ’ (ಇಂದಿನ ಅನಂತಪುರ) ಎಂಬಲ್ಲಿ ಘೋರಯುದ್ಧ ನಡೆಯುತ್ತದೆ. ಹೀಗೆ ನಡೆದು ಮಂಗಳೇಶನ ಸಾವಿನೊಂದಿಗೆ ಅಂತ್ಯವಾದ ಯುದ್ಧದಲ್ಲಿ, ಎರೆಯ ವಿಜಯಿಶಾಲಿಯಾಗುತ್ತಾನೆ ಎಂದು ಪೆದ್ದವಡಗೂರು ಶಾಸನ ಹೇಳುತ್ತದೆ.

ಯುದ್ದದಲ್ಲಿ ಗೆದ್ದ ಎರೆಯ, ತನ್ನ ಸೈನ್ಯದೊಂದಿಗೆ ಪಟ್ಟದಕಲ್ಲು ತಲುಪುತ್ತಾನೆ. ತನ್ನ ಹೆಸರನ್ನು ಎರಡನೇ ಪುಲಿಕೇಶಿ (ಅಥವಾ ಇಮ್ಮಡಿ ಪುಲಕೇಶಿ) ಎಂದು ಬದಲಾಯಿಸಿಕೊಂಡು, ಕ್ರಿಶ 610ರಲ್ಲಿ, ಚಾಲುಕ್ಯ ರಾಜ್ಯದ ಸಿಂಹಾಸನವನ್ನೇರುತ್ತಾನೆ. ಪಟ್ಟಕ್ಕೆ ಬಂದಕೂಡಲೇ ಇಮ್ಮಡಿ ಪುಲಿಕೇಶಿಗೆ ಕಷ್ಟಕೋಟಲೆಗಳ ಸರಮಾಲೆಯೇ ಕಾದಿರುತ್ತದೆ. ಮಂಗಳೇಶನಿಗೆ ನಿಷ್ಠಾವಂತರಾಗಿದ್ದ ಗೋವಿಂದ ಮತ್ತು ಅಪ್ಪಾಯಿಕ ಎಂಬಿಬ್ಬ ರಾಷ್ಟ್ರಕೂಟರ ಸಾಮಂತರಾಜರು, ಮಂಗಳೇಶನ ಸಾವಿನ ಸುದ್ಧಿ ತಿಳಿದಕೂಡಲೇ ಚಾಲುಕ್ಯರಾಜ್ಯದ ಮೇಲೆ ಯುದ್ಧ ಘೋಷಿಸುತ್ತಾರೆ. ಭೀಮಾನದಿಯ ತಟದಲ್ಲಿ ಎದುರಾಳಿಗಳ ಸೈನ್ಯವನ್ನು ತಡೆದ, ಪುಲಿಕೇಶಿಯ ಸೈನ್ಯದ ಆರ್ಭಟಕ್ಕೆ ಎರಡೇ ವಾರದ ನಂತರ ಯುದ್ಧ ಭೂಮಿಯಲ್ಲಿ ನಿಲ್ಲಲಾಗದೆ ಅಪ್ಪಾಯಿಕ ಪಲಾಯನಮಾಡಿದನು. ಗೋವಿಂದನನ್ನು ಸೆರೆಹಿಡಿಯಲಾಯಿತು. ಕ್ರಿ.ಶ. 634ರ ಐಹೊಳೆ ಶಾಸನದ ಹೇಳುವಂತೆ, ಈ ವಿಜಯವನ್ನು ಘೋಷಿಸಿ ಆಚರಿಸಲು ಇಮ್ಮಡಿ ಪುಲಿಕೇಶಿ ಐಹೊಳೆಯಲ್ಲಿ ಒಂದು ವಿಜಯಸ್ಥಂಭವನ್ನು ಕಟ್ಟಿಸಿದನು.

ಇಲ್ಲಿಂದ ಮುಂದಿನ ಒಂಬತ್ತುವರ್ಷ ಚಾಲುಕ್ಯ ಸಾಮ್ರಾಜ್ಯದ ಸುವರ್ಣಯುಗ. ಇಮ್ಮಡಿ ಪುಲಿಕೇಶಿ ದಖನ್ ಪ್ರಸ್ಥಭೂಮಿಯಲ್ಲಿದ್ದ ಎಲ್ಲಾ ರಾಜರನ್ನೂ ಸೋಲಿಸಿದ್ದಲ್ಲದೇ, ದಕ್ಷಿಣದಲ್ಲಿದಲ್ಲೂ ತನ್ನ ರಾಜ್ಯವನ್ನು ವಿಸ್ತರಿಸಿದ. ಪಶ್ಚಿಮ ಕರಾವಳಿಯಲ್ಲಿ ಆಳುಪರು, ಬನವಾಸಿಯ ಕದಂಬರು, ಕೊಂಕಣದಲ್ಲಿ ಮೌರ್ಯರು, ಇನ್ನೂ ಉತ್ತರಕ್ಕೆ ಮಾಳ್ವದಲ್ಲಿ ಗುರ್ಜರರು, ಪೂರ್ವಕ್ಕೆ ವಿಷ್ಣುಕುಂಡಿನಿಯರು, ಲಾಟರನ್ನೂ ಸಾಮಂತರನ್ನಾಗಿಸಿಕೊಂಡ. ಇಮ್ಮಡಿ ಪುಲಿಕೇಶಿಯ ಅತೀಮುಖ್ಯ ವಿಜಯಗಳಲ್ಲಿ ದಕ್ಷಿಣದ ಪಲ್ಲವರ ಮೇಲಿನ ವಿಜಯ ನೆನಪಿಡುವಂತದ್ದು. ಅಂದಿನ ಕಾಲಕ್ಕೆ, ಸೋಲಿಸಲೇ ಅಸಾಧ್ಯವಾದ ಸೈನ್ಯ ಎಂದು ಹೆಸರು ಪಡೆದಿದ್ದ ಪಲ್ಲವರ ಸೈನ್ಯವನ್ನು, ಅವರ ರಾಜ ‘ಒಂದನೆಯ ಮಹೇಂದ್ರವರ್ಮ’ನನ್ನು ಪಲ್ಲವರ ರಾಜಧಾನಿಗೆ 25 ಕಿ.ಮೀ ದೂರದಲ್ಲಿದ್ದ ‘ಪುಲ್ಲಲೂರ್’ನಲ್ಲಿ ನಡೆದ ಯುದ್ಧದಲ್ಲಿ ಸೋಲಿಸಿದನು. ಪುಲಿಕೇಶಿ ಗಂಗ ವಂಶದ’ದುರ್ವಿನಿತ’ ಹಾಗೂ ‘ಪಾಂಡ್ಯನ್ ಜಯಂತವರಾಮನ್ ರಾಜ’ನ ಸಹಾಯದೊಂದಿಗೆ ಪಲ್ಲವರ ರಾಜಧಾನಿ ‘ಕಂಚೀಪುರ’ಕ್ಕೆ ಮುತ್ತಿಗೆ ಹಾಕುತ್ತಾನೆ. ಮಹೇಂದ್ರವರ್ಮ ತನ್ನ ರಾಜಧಾನಿಯನ್ನು ಉಳಿಸಿಕೊಂಡರೂ ಉತ್ತರದ ಪ್ರಾಂತ್ಯವನ್ನು ಪುಲಿಕೇಶಿಗೆ ಸಮರ್ಪಿಸುತ್ತಾನೆ. ಹೀಗೆ ದಕ್ಷಿಣದ ಅತೀದೊಡ್ಡ ಏಕರಾಜ ಸಾಮ್ರಾಜ್ಯ ಸ್ಥಾಪಿಸಿದ ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ಚೀನಾದ ಯಾತ್ರಿಕ/ಇತಿಹಾಸಕಾರ ಹ್ಯುಯೆನ್-ತ್ಸಾಂಗ್, ಪರ್ಶಿಯಾದ ಇತಿಹಾಸಕಾರ ತಬರಿ ಮುಂತಾದವರು ಭೇಟಿಕೊಟ್ಟು ರಾಜ್ಯಭಾರದ ಬಗ್ಗೆ ಅಗಾಧ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇವನ ಸಮಕಾಲೀನನಾಗಿ ಇರಾನ್ ದೇಶದ ದೊರೆಯಾಗಿದ್ದ ಎರಡನೆಯ ಖುಸ್ರುವು ತನ್ನ ರಾಯಭಾರಿಯ ಕೈಯಲ್ಲಿ ಅನೇಕ ಬೆಲೆಬಾಳುವ ಬಹುಮಾನಗಳನ್ನು ಪುಲಕೇಶಿಗೆ ಕಳುಹಿಸಿಕೊಟ್ಟನೆಂದೂ, ಇವರಿಬ್ಬರಿಗೂ ಆಗಿಂದಾಗ್ಗೆ ಪತ್ರವ್ಯವಹಾರವು ನಡೆಯುತ್ತಿದ್ದಿತೆಂದೂ ತಿಳಿದುಬಂದಿದೆ.

ಇಮ್ಮಡಿ ಪುಲಿಕೇಶಿಯ ರಾಜ್ಯಭಾರದ ಅತೀಮುಖ್ಯ ಘಟನೆಯೆಂದರೆ ಗುರ್ಜರ, ಮಾಳ್ವರನ್ನು ಸೋಲಿಸಿ ಉತ್ತರಕ್ಕೂ ತನ್ನ ಸಾಮ್ರಾಜ್ಯ ವಿಸ್ತರಣೆಮಾಡುವಾಗ, ಆಗಿನ ಕನ್ನೌಜದ ಮಹಾರಾಜನಾಗಿದ್ದ ಹರ್ಷವರ್ಧನನೊಡನೆ ನಡೆದ ಯುದ್ಧ. ವಿಂಧ್ಯದ ಉತ್ತರದಿಂದ ಹಿಡಿದು ಹಿಮಾಚಲದವರೆಗೂ ರಾಜ್ಯಭಾರ ಮಾಡುತ್ತಿದ್ದ, ಇಡೀ ಜೀವನದಲ್ಲೇ ಒಂದೇ ಒಂದು ಯುದ್ಧ ಸೋಲದ, ‘ಉತ್ತರಪಥೇಶ್ವರ’ ಎಂದೇ ಬಿರುದು ಪಡೆದಿದ್ದ ಹರ್ಷವರ್ಧನ, ಇಮ್ಮಡಿ ಪುಲಿಕೇಶಿಯ ಉತ್ತರದ ಭಾಗದ ಸಾಮ್ರಾಜ್ಯ ವಿಸ್ತರಣೆಗೆ ಕಡಿವಾಣ ಹಾಕಲು ನಿರ್ಧರಿಸುತ್ತಾನೆ. ನರ್ಮದಾ ನದಿಯ ತಟದಲ್ಲಿ ಎರಡೂ ಸೇನೆಗಳು ಮುಖಾಮುಖಿಯಾಗುತ್ತವೆ. ಎಂಟುವಾರಗಳ ಕಾಲ ನಡೆದ ಜಿಗುಟುಯುದ್ಧದ ನಂತರ, ಪುಲಿಕೇಶಿಗಿಂತಾ ಮೂರುಪಟ್ಟು ದೊಡ್ಡ ಸೈನ್ಯವಿದ್ದರೂ, ತನ್ನ ಅತೀಶಕ್ತಿಶಾಲಿ ಗಜಪಡೆಯಲ್ಲೇ ಹೆಚ್ಚು ನಷ್ಟವನ್ನನುಭವಿಸಿದ ಹರ್ಷವರ್ಧನ, ಯುದ್ದದಲ್ಲಿ ಗೆಲ್ಲಲಾಗದೇ ಶಾಂತಿಸಂಧಾನಕ್ಕೆ ಮುಂದಾಗುತ್ತಾನೆ. ಇಮ್ಮಡಿ ಪುಲಿಕೇಶಿಗೆ ‘ಪರಮೇಶ್ವರ’, ‘ಸತ್ಯಾಶ್ರಯ’, ‘ಪೃಥ್ವೀವಲ್ಲಭ’ ಎಂಬ ಬಿರುದುಗಳನ್ನು ಸಮರ್ಪಿಸಿದುದ್ದಲ್ಲದೇ, ಇಮ್ಮಡಿ ಪುಲಿಕೇಶಿಯನ್ನು ತನ್ನ ದಕ್ಷಿಣದ ಸಮಬಲನೆಂದು ಸ್ಚೀಕರಿಸಿ ಆತನಿಗೆ ‘ದಕ್ಷಿಣಪಥೇಶ್ವರ’ ಎಂಬ ಬಿರುದನ್ನು ಕೊಡುತ್ತಾನೆ. ಹಾಗೂ ನರ್ಮದಾ ನದಿಯನ್ನು ಉತ್ತರದ ಹರ್ಷವರ್ಧನನ ಸಾಮ್ರಾಜ್ಯಕ್ಕೂ, ದಕ್ಷಿಣದ ಚಾಲುಕ್ಯ ಸಾಮ್ರಾಜ್ಯಕ್ಕೂ ಗಡಿಯೆಂದು ನಿರ್ಧರಿಸಿ ಹರ್ಷವರ್ಧನ ಕನ್ನೌಜಿಗೆ ಮರಳುತ್ತಾನೆ. ಈ ಯುದ್ಧ, ಇಂಗ್ಳೀಷಿನ “This is what happens when an unstoppable force meets an immovable object” ಎಂಬ ಜಾಣ್ನುಡಿಗೆ ಒಂದೊಳ್ಳೆಯ ಉದಾಹರಣೆ.

Chalukya

ಕಾಂಚೀಪುರವನ್ನು ಗೆಲ್ಲದ, ಚುಕ್ಕಿಯೊಂದು ಇಮ್ಮಡಿ ಪುಲಿಕೇಶಿಯ ಮನಸ್ಸಲ್ಲೇ ಉಳಿದಿತ್ತು. ಹಾಗಾಗಿ ವಯಸ್ಸಾಗಿ ನೇಪಥ್ಯಕ್ಕೆ ಸರಿಯುವ ಮುನ್ನ ಇನ್ನೊಮ್ಮೆ ಪಲ್ಲವರ ಮೇಲೆ ಯುದ್ಧ ಸಾರಲು ನಿರ್ಧರಿಸಿದ ಪುಲಿಕೇಶಿ, ರಥವನ್ನೇರಿಯೇ ಬಿಟ್ಟ. ಆದರೆ ಈ ಬಾರಿ ಪಲ್ಲವರ ರಾಜ ಒಂದನೇ ನರಸಿಂಹವರ್ಮ, ಪುಲಿಕೇಶಿಯ ವಿಜಯಗಳ ಸರಮಾಲೆಗೆ ಕಡಿವಾಣ ಹಾಕುತ್ತಾನೆ. ಇಮ್ಮಡಿ ಪುಲಿಕೇಶಿಯ ಮರಣದೊಂದಿಗೆ ಯುದ್ಧ ಕೊನೆಗೊಳ್ಳುತ್ತದೆ. ಯುದ್ದವನ್ನು ಗೆದ್ದ ಉತ್ಸಾಹದಲ್ಲಿ ನರಸಿಂಹವರ್ಮ ಚಾಲುಕ್ಯ್ರರ ರಾಜಧಾನಿ ಬಾದಾಮಿಯವರೆಗೂ ಸೈನ್ಯವನ್ನು ಕೊಂಡೊಯ್ದು, ಸಂಪತ್ತಲ್ಲವನ್ನೂ ಕಂಚಿಗೆ ಸಾಗಿಸುತ್ತಾನೆ. ಚಾಲುಕ್ಯರ ರಾಜಧಾನಿ “ಬಾದಾಮಿ” ಪಲ್ಲವರ ಮುಂದಿನ 13 ವರ್ಷಗಳ ರಾಜ್ಯಭಾರದಲ್ಲಿ “ವಾತಾಪಿಕೊಂಡ”ವಾಯ್ತು. (ಬಾದಾಮಿಯ ಮೂಲಹೆಸರು ವಾತಾಪಿ). ಹೀಗೆ, ಒಬ್ಬ ಮಹಾರಾಜನನ್ನು ಸೋಲಿಸಲು ಒಂದನೆಯ ನರಸಿಂಹವರ್ಮನಂತಹ ಇನ್ನೊಬ್ಬ ಮಹಾಯೋಧನೇ ಬರಬೇಕಾಯ್ತು. ದಕ್ಷಿಣದ ಮಹಾನ್ ಸಾಮ್ರಾಜ್ಯವೊಂದು ಹೀಗೆ ಕೊನೆಗೊಂಡಿತು.

ಇಮ್ಮಡಿ ಪುಲಿಕೇಶಿಗೆ ಚಂದ್ರಾದಿತ್ಯ, ಆದಿತ್ಯವರ್ಮ, ವಿಕ್ರಮಾದಿತ್ಯ, ಜಯಸಿಂಹ, ಅಂಬರ ಎಂಬ ಐದು ಜನ ಮಕ್ಕಳು. ತಮ್ಮ ತಮ್ಮಲ್ಲೇ ಕಚ್ಚಾಡಿ, ರಾಜ್ಯವನ್ನು ವಿಂಗಡಿಸಿಕೊಂಡು, ಪಲ್ಲವರಿಗೆ ಸಾಮಂತರಾಗಿ, ಸಣ್ಣ ಸಣ್ಣ ಭಾಗಗಳನ್ನು ಆಳುತ್ತಿದ್ದರು. ಇವರಲ್ಲಿ ಮೂರನೆಯವನಾದ ಮೊದಲನೇ ವಿಕ್ರಮಾದಿತ್ಯ, ಇವರ ಜಗಳಗಳಿಂದ ರೋಸಿಹೋಗಿ, ತನ್ನದೇ ಸೋದರರ ಮೇಲೆ ಯುದ್ಧಮಾಡಿ ಸೋಲಿಸಿ ಆಮೇಲೆ ಅವರನ್ನು ಮನ್ನಿಸಿ, ಸೋದರರನ್ನನ್ನೆಲ್ಲಾ ಒಂದುಗೂಡಿಸಿ ಕ್ರಿ.ಶ. 642ರಲ್ಲಿ ತನ್ನನ್ನು ರಾಜನೆಂದು ಘೋಷಿಸಿಕೊಂಡು, ಪಲ್ಲವರನ್ನು ಒದ್ದೋಡಿಸಿ ಚಾಲುಕ್ಯ ಸಾಮ್ರಾಜ್ಯವನ್ನು ಪುನರ್ಸ್ಥಾಪಿಸಿದನು. ಆತನ 13 ವರ್ಷದ ಆಡಳಿತದಲ್ಲಿ ಹಾಗೂ ಇವನ ಮಗನಾದ ಎರಡನೆಯ ವಿಕ್ರಮಾದಿತ್ಯ ಆಳ್ವಿಕೆಯಲ್ಲಿ ಚಾಲುಕ್ಯ ಸಾಮ್ರಾಜ್ಯ ಸಂಪೂರ್ಣವಾಗಿ ಪುನರ್ನಿರ್ಮಾಣವಾಗಿ, ಮತ್ತೆ ಇಮ್ಮಡಿ ಪುಲಿಕೇಶಿಯ ಕಾಲದ ಸಾಮ್ರಾಜ್ಯಕ್ಕೆ ಹೋಲುವ ಮೇರು ಸ್ಥಿತಿಗೆ ತಲುಪಿತು.

ಇಷ್ಟೆಲ್ಲಾ ಕಥೆ ಯಾಕೆ ಹೇಳಿದೆ ಅಂದರೆ, ಒಂದನೆಯ ನರಸಿಂಹವರ್ಮ ವಾತಾಪಿಯಿಂದ ಸಂಪತ್ತನ್ನು ಕಂಚಿಗೆ ಸಾಗಿಸುವಾಗ, ಆ ಯುದ್ದದ ಗೆಲುವಿನಲ್ಲಿ ಮುಖ್ಯಪಾತ್ರವಹಿಸಿದ್ದ ತನ್ನ ಸೈನ್ಯಾಧಿಕಾರಿ ಪರಂಜ್ಯೋತಿಗೆ, ಖಜಾನೆಯ ಕಾಲುಭಾಗದಷ್ಟು ದೊಡ್ಡ ಉಡುಗೊರೆಯನ್ನೇ ಕೊಡುತ್ತಾನೆ. ಇದರಲ್ಲಿ ಚಾಲುಕ್ಯರ ಅರಮನೆಯಲ್ಲಿದ್ದ, ಚಾಲುಕ್ಯರಾಜರ ಅತ್ಯಂತ ಪ್ರೀತಿಯ ದೊಡ್ಡದೊಂದು ಗಣಪತಿಯ ಮೂರ್ತಿಯೂ ಇರುತ್ತದೆ. ತನ್ನ ರಾಜ್ಯಕ್ಕೆ ಮರಳಿದ ಪರಂಜ್ಯೋತಿ, ತನ್ನೂರಾದ, ತಿರುಚೆಂಕಾಟಂಕುಡಿಯಲ್ಲಿ ಈ ಗಣಪತಿಗೊಂದು ದೇವಸ್ಥಾನಕಟ್ಟಿ, ಅದನ್ನು ಆದರದಿಂದ ನೋಡಿಕೊಳ್ಳುತ್ತಾನೆ. ಹೀಗೆ ಬಾದಾಮಿಯಿಂದ ಅಂದರೆ ಅಂದಿನ ವಾತಾಪಿಯಿಂದ, ಕಂಚಿಗೆ ತಲುಪಿದ ಈ ಗಣಪತಿಯೇ, ಮುತ್ತುಸ್ವಾಮಿ ದೀಕ್ಷಿತರ ಕೃತಿ “ವಾತಾಪಿ ಗಣಪತಿಂ ಭಜೇ…”ಯಲ್ಲಿ ಮೂಡಿಬಂದಿರುವುದು! 🙂

ಇದನ್ನೇ ಹೇಳಬೇಕು ಅಂತಾ ಈ ಹರಿಕಥೆ. ಈಗ ಎಲ್ಲರೂ “ವಾತಾಪಿ ಗಣಪತಿಂ ಭಜೇ….” ಎಂದು ಹಾಡುತ್ತಾ ಮುಂದಿನ ಕೆಲಸ ನೋಡಿಕೊಳ್ಳಿ 🙂

ಕೆಲ ವಿಶೇಷ ಮಾಹಿತಿಗಳು:

(1) ಈ ವಾತಾಪಿ ಗಣಪತಿ ದೇವಸ್ಥಾನ ಇವತ್ತು ತಮಿಳ್ನಾಡಿನ ನಾಗಪಟ್ಟಿನಂ ಜಿಲ್ಲೆಯ ಉತ್ರಪತೀಸ್ವರಸ್ವಾಮಿ ದೇವಸ್ಥಾನದ ಆವರಣದಲ್ಲೇ ಇದೆ. ಆ ಉತ್ರಪತೀಸ್ವರಸ್ವಾಮಿ ದೇವಸ್ಥನವನ್ನೂ ಪರಂಜ್ಯೋತಿಯೇ ಕಟ್ಟಿಸಿದ್ದು. ಇದು ಈಶ್ವರನ ದೇವಸ್ಥಾನವೇ ಆದರೂ, ಪರಂಜ್ಯೋತಿಯ ಪ್ರೀತಿಯ ದೇವ, ಗಣೇಶನ ಬಿಂಬಗಳಿಗೆ ಪ್ರಸಿದ್ಧ.

ದೇವಸ್ಥಾನದ ಮುಖ್ಯ ಗರ್ಭಗುಡಿಯಲ್ಲಿರುವ ಗಣೇಶ, ತನ್ನ ಯಥಾಪ್ರಸಿದ್ಧ ಆನೆಯ ಮುಖದಲ್ಲಿರದೆ, ಮಾನವ ಮುಖದಲ್ಲೇ ಇರೋದು ಒಂದು ವಿಶೇಷ.

(2) ಈ ಮಹಾಸೈನ್ಯಾಧಿಪತಿ ಪರಂಜ್ಯೋತಿ, ಮುಂದೆ ತನ್ನ ಕ್ಷತ್ರಿಯಾಭ್ಯಾಸಗಳನ್ನೆಲ್ಲಾ ತ್ಯಜಿಸಿ, ಜೀವನವನ್ನೇ ಬದಲಾಯಿಸಿಕೊಂಡು ‘ಸಿರುತೊಂದಾರ್’ ಎಂಬ ಹೆಸರಿನ ನಾಯನಾರ್ ಸಂತನಾಗಿ, ತನ್ನ ಜೀವನವನ್ನು ಅಲ್ಲೇ ಕಳೆಯುತ್ತಾನೆ. ನಾಯನಾರ್’ಗಳು ಹಾಗೂ ಆಳ್ವಾರ್’ಗಳು, ಎಂಟನೇ ಶತಮಾನದಲ್ಲಿ ದಕ್ಷಿಣಭಾರತದಲ್ಲಿ ‘ಭಕ್ತಿ ಚಳುವಳಿಗೆ’ ನಾಂದಿ ಹಾಡಿದ ಮಹಾಪುರುಷರು. ಆ 63 ನಾಯನಾರ್’ಗಳಲ್ಲಿ ಈ ಪರಂಜ್ಯೋತಿಯೂ ಒಬ್ಬ! ಜೀವನ ಎಷ್ಟು ವಿಚಿತ್ರ ನೋಡಿ!! ಪರಂಜ್ಯೋತಿಯಿಂದ….ಸಿರುತೊಂದಾರ್!!!

(3) ಎರೆಯ ಎಂಬುವವ ಇಮ್ಮಡಿ ಪುಲಿಕೇಶಿಯಾದರೆ, ಮೊದಲನೆಯ ಪುಲಿಕೇಶಿ ಯಾರು ಎಂಬ ಅನುಮಾನ ನಿಮಗಿದ್ದರೆ:

ಮೊದಲನೇ ಪುಲಿಕೇಶಿ ಎರೆಯನ ಅಜ್ಜ. ಅಂದರೆ ಕೀರ್ತಿವರ್ಮನ ಅಪ್ಪ. ಮಂಗಳೇಶನ ಮಹಾಕೂಟ ಶಾಸನ ಹಾಗೂ ರವಿಕೀರ್ತಿಯ ಐಹೊಳೆ ಶಾಸನದ ಪ್ರಕಾರ ಚಾಲುಕ್ಯರ ಮೂಲ ಪುರುಷ ಕ್ರಿ.ಶ 500ರಲ್ಲಿ ರಾಜ್ಯಭಾರ ಆರಂಭಿಸಿದ ಜಯಸಿಂಹನೇ ಆದರೂ, ಕ್ರಿ.ಶ 540ರಲ್ಲಿ ರಾಜನಾದ ಜಯಸಿಂಹನ ಮೊಮ್ಮಗ ಪುಲಿಕೇಶಿಯೇ ಚಾಲುಕ್ಯ ಸಂತತಿಯ ಮೊದಲ ಸ್ವತಂತ್ರ ರಾಜ. ಬಾದಾಮಿಯಿಂದ ರಾಜ್ಯಭಾರ ಮಾಡಿದ ಈತನ ಕೂದಲು ಬಹುಷಃ ಕೆಂಚು ಬಣ್ಣಕ್ಕಿದ್ದಿರಿಂದ (blonde) ಪುಲಿಕೇಶಿ (ಅಂದರೆ ಹುಲಿಯಂತಾ ಕೂದಲಿರುವವನು) ಎಂಬ ಹೆಸರು ಬಂದಿರಬಹುದೇ ಎಂಬುದು ನನ್ನ ಅನುಮಾನ.

ಈ ಲೇಖನದಲ್ಲಿರುವ ಹೆಚ್ಚಿನ ಐತಿಹಾಸಿಕ ಸತ್ಯಗಳ ಬಗ್ಗೆ ನನ್ನ ಗಮನ ಸೆಳೆದದ್ದು, ಪಕ್ಕಾ ಬೆಂಗಳೂರು ಹುಡುಗ, ಟ್ವಿಟರ್ ಗೆಳೆಯ ಆದಿತ್ಯ ಕುಲಕರ್ಣಿ. ಅವರ ಟ್ವೀಟುಗಳ ಸರಮಾಲೆಯನ್ನೇ, ಅಲ್ಪಸ್ವಲ್ಪ ಸೇರ್ಪಡೆಗಳೊಂದಿಗೆ ಲೇಖನಸ್ವರೂಪದಲ್ಲಿ ಬರೆದಿದ್ದೇನೆ. ಈ ಇಡೀ ಲೇಖನ Aditya Kulkarni ಅವರಿಗೆ ಸೇರಬೇಕಾದದ್ದು.

#ರಾಘವಾಂಕಣ

‘ಸೀಬರ್ಡ್ ನೌಕಾನೆಲೆಗೂ, ಹವ್ಯಕ ಬ್ರಾಹ್ಮಣರಿಗೂ ಇರುವ ನಂಟೇನು?’

ಸರಿಸುಮಾರು ಮೂರನೇ ಶತಮಾನದ ನಲತ್ತರ ದಶಕದ ಕಾಲ. ತಾಳಗುಂದ(ಇವತ್ತಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ)ದ ಮಯೂರಶರ್ಮ ಎಂಬ ಬ್ರಾಹ್ಮಣ ಯುವಕನೊಬ್ಬ, ಹೆಚ್ಚಿನ ವೇದಾಧ್ಯಯನಕ್ಕೆ ಕಾಂಚೀಪುರಂಗೆ ತೆರಳುತ್ತಾನೆ. ಆಗ ಪಲ್ಲವರ ಆಳ್ವಿಕೆ ಉತ್ತುಂಗದಲ್ಲಿದ್ದ ಕಾಲ. ಸಹಜವಾಗಿಯೇ ರಾಜ್ಯದ ರಾಜಧಾನಿ, ಮುಖ್ಯ ಘಟಿಕಾಸ್ಥಾನವಾಗಿತ್ತು. ಆಸುಪಾಸಿನಲ್ಲಿ ಹೆಚ್ಚಿನ ವೇದಪಾರಂಗತರು ವಾಸವಾಗಿದ್ದದ್ದು ಮಾತ್ರವಲ್ಲದೇ, ಮಯೂರಶರ್ಮನ ಅಜ್ಜ ವೀರಶರ್ಮ ಹಾಗೂ ಅಪ್ಪ ಬಂಧುಸೇನರ ವಿದ್ಯಾಭ್ಯಾಸವಾದದ್ದೂ ಅಲ್ಲಿಯೇ ಎಂಬ ಕಾರಣಕ್ಕೆ ಮೊಮ್ಮಗನೂ ಕಂಚಿಗೆ ಪ್ರಯಾಣ ಬೆಳೆಸುತ್ತಾನೆ. ಕಂಚಿಯಲ್ಲಿ ವೇದ ಕಲಿಯುತ್ತಿದ್ದ ಈ ಬ್ರಾಹ್ಮಣ ಯುವಕನ ಜೀವನದಲ್ಲಿ ನಡೆದ ಒಂದು ಅತೀ ಸಣ್ಣ ಘಟನೆ, ಅವನ ಜೀವನವನ್ನೇ ಬದಲಿಸುತ್ತದೆ. ಮಾರುಕಟ್ಟೆಯಲ್ಲಿ ಯಾವುದೋ ಕ್ಷುಲ್ಲಕ ಕಾರಣಕ್ಕೆ ಪಲ್ಲವ ಸೈನ್ಯದ ಅಶ್ವಾರೋಹಿಯೊಬ್ಬನ ಜೊತೆ ತೆಗೆದ ಜಗಳ, ಕೈ ಕೈ ಮೀಲಾಯಿಸುವವರೆಗೆ ಹೋಗಿ, ಮಯೂರಶರ್ಮ ಅಪಮಾನಿತನಾಗುತ್ತಾನೆ. ಬ್ರಾಹ್ಮಣನಾದರೂ ಕುದಿರಕ್ತದ ತರುಣ ಮಯೂರಶರ್ಮ ಅವಮಾನ ತಾಳಲಾಗದೇ ಸಿಟ್ಟಾದ. ಅದೂ ಎಂತಾ ಸಿಟ್ಟಂತೀರಿ! ಸಾಮಾನ್ಯ ಮನುಷ್ಯನಾದರೆ ಬರೀ ಅಶ್ವಾರೋಹಿಯ ಮೇಲೆ ಸಿಟ್ಟುತೀರಿಸಿಕೊಳ್ಳುತ್ತಿದ್ದ. ಆದರೆ ಈ ಕಥೆಯ ಮುಖ್ಯಪಾತ್ರಧಾರಿ ಮಯೂರಶರ್ಮ ಅಸಾಮಾನ್ಯನಾಗಿದ್ದೇ ಈ ಕಾರಣಕ್ಕೆ, ಯಾಕೆಂದರೆ ಅವನ ಸಿಟ್ಟೂ ಸಹ ಅಸಾಮಾನ್ಯವಾದದ್ದು. ತನ್ನ ಅವಮಾನಕ್ಕೆ ಇಡೀ ಪಲ್ಲವ ರಾಜ್ಯವೇ ಕಾರಣ ಎಂಬ ನಿರ್ಧಾರಕ್ಕೆ ಬಂದ ಮಯೂರಶರ್ಮ, ಪಲ್ಲವರ ರಾಜ್ಯದ ಮೇಲೇ ಸೇಡು ತೀರಿಸಲು ನಿರ್ಧರಿಸುತ್ತಾನೆ.

ಆದರೆ ಬಡಬ್ರಾಹ್ಮಣನೊಬ್ಬ ಇಡೀ ರಾಜ್ಯವೊಂದರೆ ಮೇಲೆ ಸೇಡು ತೀರಿಸಿಕೊಳ್ಳುವುದು ಹೇಗೆ!? ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಕೊಟ್ಟು ಕಂಚಿಗೆ ಬೆನ್ನು ಹಾಕಿದ ವಟು, ಶಸ್ತ್ರಧಾರಣೆ ಮಾಡಿಯೇ ಬಿಟ್ಟ. ತಾಳಗುಂದಕ್ಕೆ ಮರಳಿ ತನ್ನದೇ ಆದ ಸೈನ್ಯಕಟ್ಟುತ್ತಿದ್ದಾಗ, ಅವನ ಅದೃಷ್ಟವೇನೋ ಎಂಬಂತೆ, ಅದೇ ಸಮಯಕ್ಕೆ ಸಮುದ್ರಗುಪ್ತ ದಕ್ಷಿಣಕ್ಕೆ ದಂಡೆತ್ತಿ ಬಂದಿದ್ದ. ಪಲ್ಲವರ ರಾಜ ‘ಪಲ್ಲವ ವಿಷ್ಣುಗೋಪ’ ಸಮುದ್ರಗುಪ್ತನೆಡೆಗೆ ತನ್ನ ಗಮನ ಹರಿಸಿದ್ದಾಗ, ನಮ್ಮ ಮಯೂರಶರ್ಮ ಶ್ರೀಪರ್ವತದಲ್ಲಿ (ಇಂದಿನ ಶ್ರೀಶೈಲಂ) ಪಲ್ಲವರ ಗಡಿಸೈನಿಕರಾದ ಅಂತ್ರಪಾಲರ ಮೇಲೆ ಹಾಗೂ ಕೋಲಾರದಲ್ಲಿದ್ದ ಪಲ್ಲವ ಸಾಮಂತ ರಾಜಮನೆತನವಾದ ಬಾಣರ ಮೇಲೂ ಆಕ್ರಮಣ ಮಾಡಿ ಇಬ್ಬರನ್ನೂ ಸೋಲಿಸಿದ. ಸಮುದ್ರಗುಪ್ತನ ಮೇಲಿನ ಯುದ್ಧದಿಂದ ಇನ್ನೂ ಚೇತರಿಸಿಕೊಂಡಿರದ ಪಲ್ಲವರು, ಅವರ ಅತೀ ನಂಬುಗೆಯ ಪಡೆಯಾದ, ‘ಯುದ್ಧದುರ್ಜಯರು’ ಎಂದೇ ಹೆಸರು ಪಡೆದಿದ್ದ ಅಂತ್ರಪಾಲರಿಗಾದ ಗತಿನೋಡಿ, ಮಯೂರವರ್ಮನ ತಂಟೆಗೆ ಹೋಗಬಯಸದೆ ಆತನನ್ನು ಪೂರ್ವದ ಶ್ರೀಪರ್ವತದಿಂದ, ಪಶ್ಚಿಮದ ಅಮರಸಮುದ್ರದವರೆಗೂ (ಇಂದಿನ ಅರಬ್ಬೀ ಸಮುದ್ರ), ದಕ್ಷಿಣದಲ್ಲಿ ಬಾಣದ ಅಧೀನದಲ್ಲಿದ್ದ ಕೋಲಾರದಿಂದ, ವಾಯುವ್ಯದಲ್ಲಿ ಪ್ರೇಹಾರದವರೆಗೂ (ಇಂದಿನ ಮಲಪ್ರಭಾ ನದಿ) ರಾಜನೆಂದು ಒಪ್ಪಿಕೊಂಡರು. ಸಮುದ್ರಗುಪ್ತನಿಂದ ಆಗಷ್ಟೇ ಸೋತುಕೂತಿದ್ದ ಪಲ್ಲವರ ಸಾಮಂತನಾಗಬಯಸದ ಮಯೂರಶರ್ಮ ತನ್ನನ್ನು ತಾನೇ ಸ್ವತಂತ್ರ್ಯರಾಜನೆಂದು ಘೋಷಿಸಿಕೊಂಡಾಗ, ಅದನ್ನು ಒಪ್ಪಿಕೊಳ್ಳದೇ ಪಲ್ಲವರಿಗೆ ಬೇರೆ ದಾರಿಯೂ ಇರಲಿಲ್ಲವೆನ್ನಿ.

ಕ್ರಿ.ಶ 345ರಲ್ಲಿ (ಗುಂಡಾಪುರ ಶಾಸನದ ಪ್ರಕಾರ) ಮಯೂರಶರ್ಮ ಧಾರ್ಮಿಕ ವಿಧಿವಿಧಾನದಲ್ಲಿ ಬ್ರಾಹ್ಮಣ್ಯ ತ್ಯಜಿಸಿ, ಕ್ಷತ್ರಿಯಧರ್ಮ ಸ್ವೀಕರಿಸಿ, ಕ್ಷಾತ್ರನಿಯಮಕ್ಕನುಗುಣವಾಗಿ ತನ್ನ ಹೆಸರನ್ನು ‘ಮಯೂರವರ್ಮ’ನೆಂದು ಬದಲಿಸಿಕೊಂಡು, ಇಂದಿನ ಉತ್ತರಕನ್ನಡ ಜಿಲ್ಲೆಯಲ್ಲಿರುವ, ಬನವಾಸಿಯನ್ನು ತನ್ನ ರಾಜಧಾನಿಯೆಂದು ಘೋಷಿಸಿ, ತನ್ನದೇ ಆದ ರಾಜ್ಯವೊಂದನ್ನು ಸ್ಥಾಪಿಸಿದ. ಹೀಗೆ ಪ್ರಾರಂಭವಾದ ಈ ರಾಜವಂಶವೇ ಕರ್ನಾಟಕದ ಮೊತ್ತಮೊದಲ ಸ್ವತಂತ್ರ ರಾಜವಂಶವಾದ ‘ಕದಂಬ ವಂಶ’! ಸಹ್ಯಾದ್ರಿಯಲ್ಲಿ ಹೇರಳವಾಗಿ ಬೆಳೆಯುತ್ತಿದ್ದ, ಹಾಗೂ ಮಯೂರಶರ್ಮನ ಮನೆಯ ಪಕ್ಕ ಬೆಳೆದಿದ್ದ, ಕದಂಬವೃಕ್ಷದ ಹಿನ್ನೆಲೆಯಲ್ಲಿ, ಕುಟುಂಬಕ್ಕೆ ‘ಕದಂಬ’ ಎಂದು ಹೆಸರಿಸಲಾಯಿತು.

ತನ್ನ ಇಪ್ಪತು ವರ್ಷದ ರಾಜ್ಯಭಾರದಲ್ಲಿ, ಮಯೂರವರ್ಮ ತನ್ನ ರಾಜ್ಯದ ಎಲ್ಲೆಯನ್ನು ಇನ್ನಷ್ಟು ಹಿಗ್ಗಿಸಿದ. ತ್ರಯಕೂಟರು, ಅಭಿಹಾರರು, ಸೇಂದ್ರಕರು, ಪಲ್ಲವರು, ಪರಿಯತ್ರಕರು, ಶಖಸ್ಥಾನರು, ಮೌಖರಿಗಳು ಹಾಗೂ ಪುನ್ನಾಟಕರನ್ನು ಸೋಲಿಸಿ ತನ್ನ ರಾಜ್ಯವನ್ನು ಪಶ್ಚಿಮದಲ್ಲಿ ಇಂದಿನ ಗೋವಾ ರಾಜ್ಯದವರೆಗೂ, ಉತ್ತರದಲ್ಲಿ ಗೋದಾವರಿಯವರೆಗೂ ವಿಸ್ತರಿಸಿದ. ಇವನ ವಂಶದ ಮುಂದಿನರಾಜರುಗಳಾದ ಕಾಕ್ಷುತವರ್ಮ, ರವಿವರ್ಮ, ವಿಷ್ಣುವರ್ಮರೂ ಕದಂಬ ರಾಜ್ಯವನ್ನು ಸಮರ್ಥವಾಗಿ ನಿರ್ವಹಿಸಿದರು. ದಕ್ಷಿಣಭಾರತದಲ್ಲಿ ಮೂರನೇ ಶತಮಾನದವರೆಗೂ ಕನ್ನಡ ಭಾಷಾವ್ಯವಹಾರ ಬಳಕೆಯಲ್ಲಿಟ್ಟಿದ್ದ ಚುಟುವಂಶದವರೂ, ಬಾಣರು ಆಳಿದ್ದರೂ ಸಹ, ಇವರೆಲ್ಲಾ ಬೇರೆ ಬೇರೆ ಚಕ್ರವರ್ತಿಗಳ ಸಾಮಂತರಾಗಿದ್ದವರು. ಅಂದರೆ ಇವರುಗಳು ಕರ್ನಾಟಕದೊಳಗಿರುವ ಪ್ರದೇಶಗಳನ್ನು ಆಳುತ್ತಿದ್ದರೂ, ಸಾಮ್ಯಾಜ್ಯದ ರಾಜಧಾನಿ ಕರ್ನಾಟಕದಿಂದ ಹೊರಗೆಲ್ಲೋ ಇರುತ್ತಿದ್ದದ್ದು. ಮೊತ್ತಮೊದಲ ಸ್ಥಾನೀಯ ಕನ್ನಡ ಸಾಮ್ಯಾಜ್ಯ ಸ್ಥಾಪನೆಯಾಗಿದ್ದು ಕದಂಬರ ಮಯೂರವರ್ಮನಿಂದಲೇ. ಕನ್ನಡ ಭಾಷೆಯ ದೃಷ್ಟಿಯಿಂದ ನೋಡಿದಾಗ ಇದೊಂದು ಮಹತ್ವದ ಬೆಳವಣಿಗೆ. ಕ್ರಿಶ 340-350ರ ನಡುವೆ ಮಧ್ಯಕರ್ನಾಟಕದಲ್ಲಿ ಕದಂಬರು ಹಾಗೂ ದಕ್ಷಿಣ ಹಾಗೂ ನೈರುತ್ಯದಲ್ಲಿ ನಿಧಾನವಾಗಿ ಶಕ್ತರಾದ ಗಂಗರ ಅಧಿಪತ್ಯದಿಂದ, ಭೌಗೋಳಿಕವಾಗಿ ಕರ್ನಾಟಕ ರೂಪುಗೊಳ್ಳಲು ಪ್ರಾರಂಭವಾಗಿದ್ದೂ ಅಲ್ಲದೇ, ಭಾಷೆಯಾಗಿ ಕನ್ನಡ ಹೆಚ್ಚಿನ ಮಹತ್ವ ಪಡೆಯಿತು. ಕನ್ನಡ ಲಿಪಿ ಅಭಿವೃದ್ಧಿ, ವ್ಯಾಕರಣ ಬೆಳವಣಿಗೆಯ ಪ್ರಯೋಗಗಳೂ ನಡೆದವು. ಪ್ರಜೆಗಳಲ್ಲಿ ಹಾಗೂ ರಾಜಾಧಿಪತ್ಯದಲ್ಲಿ ಕನ್ನಡ ಉನ್ನತಸ್ಥಾನ ಪಡೆಯಿತು. ಇದೇ ಕದಂಬರ ಕಾಲದಲ್ಲಿ ಮೊತ್ತಮೊದಲ ಕನ್ನಡ ಶಾಸನಗಳಾದ ‘ತಾಳಗುಂದ ಶಾಸನ’ ಮತ್ತು ‘ಹಲ್ಮಿಡಿ ಶಾಸನ’ಗಳೂ ಕೆತ್ತಲ್ಪಟ್ಟವು. ಇದೇ ಕಾಲದಲ್ಲಿ ರೂಪುಗೊಂಡ ಕದಂಬ ಲಿಪಿ ಕನ್ನಡ, ಮರಾಠಿ, ಕೊಂಕಣಿ ಹಾಗೂ ಸಂಸ್ಕೃತವನ್ನೂ ಬರೆಯಲು ಬಳೆಸಲಾಯಿತು. ಇಷ್ಟೇ ಅಲ್ಲದೇ ಕದಂಬ ಲಿಪಿಯಿಂದ ವಿಕಸಿತವಾದ ‘ಪ್ಯೂ (ಪಿಯೂ) ಲಿಪಿ’ ಮುಂದೆ ಬರ್ಮಾದಲ್ಲಿ ಬಳಕೆಯಲ್ಲಿದ್ದ (ಈಗ ಅಳಿದುಹೋಗಿರುವ) ‘ಪ್ಯೂ’ ಭಾಷೆಗೂ ಬಳಕೆಯಾಯ್ತು ಎಂಬುದು ಗಮನಾರ್ಹ. ಹೀಗೆ ಕದಂಬರ ಕಾಣಿಕೆ ಕನ್ನಡಕ್ಕೆ ಮಾತ್ರವಲ್ಲ, ಹೊರದೇಶಕ್ಕೂ ತಲುಪಿದೆ ಎಂಬ ಹೆಮ್ಮೆ ನಮ್ಮದಾಗಬೇಕು.

kadam

ಹೀಗೆ, ಯಾವ ದಂತಕೆಥೆಗೂ ಕಮ್ಮಿಯಿಲ್ಲದ, ಮೊತ್ತಮೊದಲ ಕನ್ನಡ ರಾಜವಂಶಕ್ಕೆ ಮೂಲಪುರುಷನಾದ ಇದೇ ಮಯೂರವರ್ಮನ ಕಥೆಯೇ ಶ್ರೀಯುತ ದೇವುಡು ನರಸಿಂಹಶಾಸ್ತ್ರಿಗಳ ಕಲ್ಪನೆಯ ಮೂಸೆಯಲ್ಲಿ ‘ಮಯೂರ’ ಎಂಬ ಕಾದಂಬರಿಯಾಯ್ತು. ಮುಂದೆ ಇದೇ ಕಾದಂಬರಿ ಇದೇ ಹೆಸರಿನ ಸಿನೆಮಾಗೂ ಸ್ಪೂರ್ತಿಯಾಯಿತು. ‘ಮಯೂರ’ ಚಿತ್ರ ಹಾಗೂ ‘ಮಯೂರಶರ್ಮ’ನ ಪಾತ್ರ ಮಾಡಿದ ಡಾ| ರಾಜ್’ಕುಮಾರ್ ಕನ್ನಡ ಚಿತ್ರರಂಗದ ಅತ್ಯುತೃಷ್ಟ ಅಂಶಗಳಲ್ಲೊಂದು ಎಂದರೆ ಯಾವ ಅತಿಶಯೋಕ್ತಿಯೂ ಇಲ್ಲ.

ಸುಮಾರು ಕ್ರಿ.ಶ 525ರಲ್ಲಿ ಕದಂಬರಾಜ್ಯ ನಿಧಾನವಾಗಿ ತನ್ನ ಪ್ರಾಮುಖ್ಯತೆ ಕಳೆದುಕೊಂಡಿತು. ಚಾಲುಕ್ಯರ ಮೊದಲನೇ ಪುಲಿಕೇಶಿ ಬಲಾಡ್ಯನಾಗಿ ಬೆಳೆದ ಕಾಲದಲ್ಲಿ ಕದಂಬರು ಚಾಲುಕ್ಯರ, ಹಾಗೇ ಸಮಯ ಕಳೆದಂತೆ ಮುಂದೆ ರಾಷ್ಟ್ರಕೂಟರ ಸಾಮಂತರಾದರು. ಕದಂಬ ರಾಜ್ಯ ಬೇರೆ ಬೇರೆ ರಾಜರ ಆಳ್ವಿಕೆಯಲ್ಲಿ ಬನವಾಸಿ ಮಂಡಲ, ಹಾನಗಲ್ ಮಂಡಲ, ಗೋವಾ ಮಂಡಲವೆಂದು ಹಂಚಿಹೋಯಿತು.

ಈಗ ಸ್ವಲ್ಪ ಮೊದಲಿನ ಕಥೆಗೆ ವಾಪಾಸು ಬರೋಣ. ನಮ್ಮ ಕಥೆಯ ನಾಯಕ ಮಯೂರ(ಶ)ವರ್ಮ, ಕ್ಷತ್ರಿಯನಾಗಿ ರಾಜ್ಯಭಾರ ಮುಂದುವರೆಸಿದರೂ, ತನ್ನ ಪೂರ್ವಾಶ್ರಮಕ್ಕೆ ಮಹತ್ವ ಕೊಟ್ಟೇ ಇದ್ದ. ಪ್ರತಿಯೊಂದು ಯುದ್ಧ ಗೆದ್ದಾಗಲೂ, ರಾಜ್ಯ ವಿಸ್ತಾರವಾದಾಗಲೂ ಪೂಜೆ, ಹೋಮ, ಹವನಗಳನ್ನು ನಡೆಸುತಿದ್ದ. ಹಲವುಬಾರಿ ಅಶ್ವಮೇಧಯಾಗವನ್ನೂ ನಡೆಸಿ ಬ್ರಾಹ್ಮಣರಿಗೆ 144 ಗ್ರಾಮಗಳನ್ನು ‘ಬ್ರಹ್ಮದೇಯ’ವಾಗಿ ದಾನಗೈದ ಎಂಬ ದಾಖಲೆಗಳಿವೆ. ಪೂಜೆ, ಹವ್ವಿಸುಗಳ ಅರ್ಪಣೆಯಿಂದಲೇ ತನಗೆ ದೇವತಾನುಗ್ರಹವಿದೆ ಎಂದು ಬಲವಾಗಿ ನಂಬಿದ್ದ ಮಯೂರವರ್ಮ ಈ ಆಚರಣೆಗಳನ್ನು ಕಾಪಿಡಲು, ಪ್ರಾಚೀನ ಬ್ರಾಹ್ಮಣ ನಂಬಿಕೆಗಳನ್ನು ಪುನರ್ಜೀವಿತಗೊಳಿಸುವ ಮತ್ತು ರಾಜ್ಯಾಚರಣೆಗಳನ್ನು ಮತ್ತು ಸರ್ಕಾರೀ ಸಂಬಂಧಿತ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ನಿರ್ವಹಿಸಲು, ಉತ್ತರ ಭಾರತದ ‘ಅಹಿಚ್ಚಾತ್ರ’ದಿಂದ ಕರೆಸಿಕೊಂಡ ಎನ್ನಲಾದ 32 ಬ್ರಾಹ್ಮಣ ಕುಟುಂಬಗಳೇ ಇಂದು ಉತ್ತರಕನ್ನಡ ಜಿಲ್ಲೆಯ ಹವ್ಯಕ ಬ್ರಾಹ್ಮಣ ಸಮುದಾಯವಾಗಿ ಬೆಳೆದಿದೆ ಎಂಬುದೊಂದು ಬಹಳವಾಗಿ ಚಾಲ್ತಿಯಲ್ಲಿರುವ ಹಾಗೂ ನಿರೂಪಿತವಾದ ಒಂದು ಸಿದ್ಧಾಂತ. ಹವ್ಯಕ ಎಂಬ ಪದದ ಮೂಲ ಹವೀಗ ಅಥವ ಹವೀಕ ಎಂಬ ಪದಗಳು. ಹವ್ಯ ಅಂದರೆ ಹೋಮ/ಹವನ. ಹವ್ಯವನ್ನು ಮಾಡುವವ ಹವ್ಯಕ.

ಕದಂಬರ ನೌಕಾಸಾಮರ್ಥ್ಯ ಅಂದಿನ ಕಾಲಕ್ಕೆ ಬಹಳ ಹೆಸರುವಾಸಿ. ಮುಂದೆ ಕದಂಬರು ಬೇರೆ ಬೇರೆ ರಾಜಮನೆತನಗಳ ಸಾಮಂತರಾದರೂ ಸಹ, ತಮಗಿದ್ದ ನೌಕಾಯುದ್ಧದ ವಿಶಿಷ್ಟ ಪರಿಣತಿಯಿಂದಾಗಿ ಆಯಾ ರಾಜರುಗಳಿಗೆ ಅತ್ಯಂತ ಆಪ್ತವಾಗಿದ್ದವರು. ವಿಜಯನಗರ ಸಾಮ್ರಾಜ್ಯದ ರಾಜರುಗಳು ಸಹ ಕದಂಬವಂಶದವರನ್ನು ಸದಾ ತಮ್ಮ ಆಪ್ತವಲಯದಲ್ಲೇ ಇರಿಸಿಕೊಂಡಿದ್ದರು. ಇದೇ ನೌಕಾಪರಿಣತಿಯ ಕಾರಣಕ್ಕೇ, ಇಂದು ಬನವಾಸಿಯಿಂದ ನೂರು ಕಿಲೋಮೀಟರ್ ದೂರದ ಕಾರವರದಲ್ಲಿ ಪ್ರಾರಂಭಿಸಲಾದ ‘ಪ್ರಾಜೆಕ್ಟ್ ಸೀ-ಬರ್ಡ್’ ಎಂಬ ಕೋಡ್’ನೇಮಿನ ಭಾರತೀಯ ನೌಕಾನೆಲೆಗೆ, ನೌಕಾಪಡೆ INS-ಕದಂಬ ಎಂಬ ಹೆಸರನ್ನೇ ಆಯ್ಕೆ ಮಾಡಿದೆ. ಕದಂಬರ ನೌಕಾಯುದ್ಧ ಸಾಮರ್ಥ್ಯವನ್ನು ನೆನೆಸಿಕೊಳ್ಳುವ ಹಾಗೂ ಕದಂಬರಿದ್ದ ನೆಲಕ್ಕೆ ಗೌರವ ಸೂಚಿಸುವ ಎರಡೂ ಉದ್ದೇಶಗಳನ್ನು ನೆರವೇರಿಸುವ ಈ ಹೆಸರಿಗಿಂತಾ ಹೆಚ್ಚು ಸೂಕ್ತವಾದ ಹೆಸರು ಈ ನೌಕಾನೆಲೆಗೆ ಸಿಗಲಿಕ್ಕಿಲ್ಲ.

ಹೀಗೆ, ಕದಂಬವಂಶದ ಇತಿಹಾಸ ಕರ್ನಾಟಕದ ಹಾಗೂ ಕನ್ನಡದ ಚರಿತ್ರೆಯ ಪುಸ್ತಕದಲ್ಲಿ ಅತೀ ಮುಖ್ಯ ಪುಟ. ಹವ್ಯಕರಿಂದ INS ಕದಂಬದವರೆಗೆ ಮುಖ್ಯಕೊಂಡಿ. ಇಂತಹ ನೆಲದಲ್ಲಿ ಹುಟ್ಟಿದ ನಾವು, ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳಬೇಕು. ಮಯೂರಶರ್ಮನಿಂದ ಮಯೂರವರ್ಮನಾಗಿ, ಕದಂಬವಂಶಕ್ಕೆ ಮೂಲನಾದ ಈ ರಾಜನನ್ನು ನೆನೆಸಿಕೊಳ್ಳಲೇಬೇಕು. ಕನ್ನಡದ ಇಂದಿನ ಬೆಳವಣಿಗೆಗೆ, ಆತನ ಜೀವನವೂ, ಪಲ್ಲವರ ಮೇಲೆ ಆತ ಕೋಪಗೊಂಡ ಕಿಡಿಕಾರಿದ ಆ ಕ್ಷಣವೂ ಮೂಲ. ‘ಕದಂಬ’, ‘ಬನವಾಸಿ’, ‘ಮಯೂರಶರ್ಮ’ ಇವು ಮೂರೂ, ಇತಿಹಾಸದ ಆಸಕ್ತಿಯುಳ್ಳ ಪ್ರತಿಯೊಬ್ಬನ, ಹಾಗೂ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಎಂದೂ ಮರೆಯದಂತೆ ಉಳಿಯಬೇಕಾದ ಹೆಸರುಗಳು.

ವಿಷಯಮೂಲ ಹಾಗೂ ಮುಖ್ಯಾಂಶ ಪೂರೈಕೆ: ನಮ್ ಹುಡುಗ ಆದಿತ್ಯ ಕುಲಕರ್ಣಿ. ಇತಿಹಾಸದ ಬಗ್ಗೆ ಆಸಕ್ತಿಯಿರುವವರು ಆದಿತ್ಯರ ಟ್ವಿಟರ್ ಹ್ಯಾಂಡಲ್ (@adikulk) ಅನ್ನು ಫಾಲೋ ಮಾಡಲೇಬೇಕು. ನನ್ನ ಕೀಬೋರ್ಡಿಗೆ ಆದಿತ್ಯ ಇನ್ನೂ ಹೆಚ್ಚಿನ ಕೆಲಸ ಕೊಡುತ್ತಾರೆ ಎಂಬ ನಂಬಿಕೆಯೊಂದಿಗೆ…..ಧನ್ಯವಾದಗಳು.

ಅಗಣಿತ ತಾರಾಗಣಗಳ ನಡುವೆ, ತೇಲುತ್ತಿದೆ ಒಂದು ನಿರ್ಜನ ಒಂಟಿಮನೆ

ನನಗೆ ಸಣ್ಣವನಿದ್ದಾಗಲಿಂದಲೂ ಆಕಾಶ ಅಂದ್ರೆ ಪಂಚಪ್ರಾಣ. ನಾನು ಬಾಲ್ಯಕಳೆದ ಸಿದ್ದರಮಠದಲ್ಲಿ ಕರೆಂಟೇ ಇಲ್ಲವಾದರಿಂದ, ಅಲ್ಲಿ ಬೆಳಕಿನ ಮಾಲಿನ್ಯ ಇರಲೇ ಇಲ್ಲ. ಹಂಗಾಗಿ ಆಕಾಶ ತನ್ನೆಲ್ಲಾ ಬೆರಗುಗಳನ್ನು ಅದೆಷ್ಟು ಚೆನ್ನಾಗಿ ತೆರೆದಿಡ್ತಾ ಇತ್ತು ಅಂತೀರಿ! ನಮ್ಮ ಮನೆ ಸುತ್ತಮುತ್ತ ಕಾಡಿದ್ದರಿಂದ ಬರೀ ಅಂಗೈಯಗಲದಷ್ಟೇ ಆಕಾಶ ಕಾಣ್ತಾ ಇದ್ದದ್ದು. ಆದರೆ, ದೇವಸ್ಥಾನದ ಮುಂದಿದ್ದ ಸ್ಕೂಲ್ ಗ್ರೌಂಡಿನಲ್ಲಿ ನಿಂತರೆ, ಭೂಮಿಯಮೇಲಿದ್ದ ನಾನೇ ಕಳೆದುಹೋಗುವಷ್ಟು ಆಕಾಶ!! ಅದೆಷ್ಟು ಸಾವಿರ ನಕ್ಷತ್ರಗಳೋ! ಒಂದಷ್ಟು ನನ್ನ ಫೇವರಿಟ್ ನಕ್ಷತ್ರಗಳೂ ಇದ್ವು. ಅವಕ್ಕೆಲ್ಲ “ನಮಸ್ಕಾರ ಹೆಂಗಿದ್ದಿರಾ” ಅಂತೆಲ್ಲಾ ಮಾತಾಡ್ಸಿ ಬರ್ತಾ ಇದ್ದೆ. ಅಪ್ಪ ಅದೇನದು ನಕ್ಷತ್ರದ ಹತ್ರ ಮಾತಾಡೋದು, ಅದಕ್ಕೇನು ಬಾಯಿಬರುತ್ತಾ ಉತ್ತರ ಹೇಳೋಕೆ ಅಂತಾ ಕೇಳಿದ್ರೆ, ‘ಮಿನುಗಿ ಮಿನುಗಿ ಉತ್ತರ ಹೇಳುತ್ತೆ. ನಿಮಗ್ಗೊತ್ತಿಲ್ಲ ಸುಮ್ನಿರಿ” ಅಂತಿದ್ದೆ. “ಈ ಹುಚ್ಚುಮುಂಡೇದು ನನ್ನ ಮಗನೇ ಹೌದಾ, ಅಥ್ವಾ ಲಸಿಕೆ ಹಾಕ್ಸೋಕೆ ಹೋದಾಗ ಆಸ್ಪತ್ರೆಯಲ್ಲೇನಾದ್ರೂ ಅದಲುಬದಲಾಯ್ತಾ” ಅಂತಾ ಡೌಟು ಬಂದು ಅಪ್ಪ ಸುಮ್ಮನಾಗ್ತಿದ್ರು ಅನ್ಸುತ್ತೆ.

ಹೈಸ್ಕೂಲಿಗೆ ಬರುವಷ್ಟೊತ್ತಿಗೆ ನಾನು ‘ಇಸ್ರೋಗೆ ಸೇರ್ತೀನಿ. ಬಾಹ್ಯಾಕಾಶಕ್ಕೆ ಹೋಗೋ ಮೊದಲ ಭಾರತೀಯ ನಾನೇ’ ಅಂತಾ ಇಡಿ ಭಾರತಕ್ಕೆ ಸೆಲ್ಫ್-ಡಿಕ್ಲೇರ್ ಮಾಡಿಯಾಗಿತ್ತು. ಆಮೇಲೆ ಇಸ್ರೋದ ಬಜೆಟ್ ಪ್ರಾಬ್ಲಮ್ ಗೊತ್ತಾಗಿದ್ದರಿಂದ, ಜೊತೆಗೇ ರಾಕೇಶ್ ಶರ್ಮಾನ ಹೆಸರು ಕೇಳಿದ್ದರಿಂದ ನನ್ನ ಕನಸನ್ನ ಹಂಗೇ ಸ್ವಲ್ಪ ಲೆಫ್ಟಿಗೆ ಸರಿಸಿ, ಇಸ್ರೋದಿಂದ ನಾಸಾಕ್ಕೆ ಶಿಫ್ಟ್ ಮಾಡಿದ್ದೆ. ಆದರೆ ಪಿಯುಸಿನಲ್ಲಿ ಗಣಿತ ಡುಮ್ಕಿ ಹೊಡೆದಮೇಲೇ ಗೊತ್ತಾಗಿದ್ದು, ಬಾಹ್ಯಾಕಾಶಕ್ಕೆ ಹೋಗಲು ಫಿಸಿಕ್ಸ್ ಮತ್ತು ಮ್ಯಾಥ್ಸ್ ಚೆನ್ನಾಗಿ ಗೊತ್ತಿರಬೇಕು. ಅದೂ ಸಹ ಗಣಿತ ಅಂದ್ರೆ 2+2=4 ಅನ್ನೋ ಗಣಿತವಲ್ಲ, ಅದಕ್ಕಿಂತಲೂ ಹೆಚ್ಚಿನ ಹಾಗೂ ಹೈಸ್ಕೂಲಿನಲ್ಲಿ ನಾನು ನಿರ್ಲಕ್ಷಿಸಿದ “ಆ ಗಣಿತ” ಅಂತಾ ಗೊತ್ತಾದಮೇಲೆ, “ನಂಗೆ ಗಣಿತ ಕಲಿಸಿದ ಟೀಚರ್ರೇ ಸರಿಯಿಲ್ಲ. ಭಾರತಕ್ಕೆ ಒಬ್ಬ ಗಗನಯಾನಿ ಇಲ್ಲದಂಗೆ ಮಾಡಿದ್ರು. ಅವರದ್ದೇ ತಪ್ಪು. ಬಿಗ್ ಲಾಸ್ ಟು ಇಂಡಿಯಾ” ಅಂತಾ ಆಡಳಿತಪಕ್ಷದ ನಾಯಕನಂತೆ ಅವರಮೇಲೆ ಗೂಬೆ ಕೂರಿಸಿ ಕನಸೆಲ್ಲಾ ಕಂಪ್ಯೂಟರ್ ಸೈನ್ ಕಡೆಗೆ ತಿರುಗಿಸಿದೆ. ಇಂಟೆಲ್ಲಿಗೆ ಸೇರಿ ಹೊಸಾದಿಂದ ತಲೆಮಾರಿನ ಪ್ರೊಸೆಸರ್ರನ್ನೇ ಕಂಡುಹಿಡಿದುಬಿಡ್ತೀನಿ ಅನ್ನೋ ಕನಸು ಗೂಡು ಕಟ್ತು. ಅದಕ್ಕೂ ಗಣಿತ ಚೆನ್ನಾಗಿರಬೇಕು ಅಂತಾ ಯಾರೋ ಜಾಪಾಳ ಮಾತ್ರೆ ಕೊಟ್ಟಮೇಲೆ ‘ಯಾಕೋ ನಾನು ಫೇಮಸ್ಸಾಗೋದು ಯಾರಿಗೂ ಇಷ್ಟ ಇಲ್ಲ ಅನ್ಸುತ್ತೆ’ ಅಂತಾ ಸಿಟ್ಟು ಮಾಡ್ಕಂಡು, ಗಣಿತದ ಅಗತ್ಯವೇ ಇಲ್ಲದ ಕೆಮಿಸ್ಟ್ರಿ ಕಡೆ ಗಮನವಿಟ್ಟೆ. ಕೆಮಿಸ್ಟ್ರಿಯಲ್ಲಿ ನೋಬೆಲ್ ಪಡೀಬೇಕು ಅಂತಾ ಹೊಸಾ ಕನಸಿನ ಹಿಂದೆ ಬಿದ್ದೆ. ಎಂಬಿಎಗೆ ಸ್ಕಾಲರ್ಶಿಪ್ ಸಿಗೋವರ್ಗೂ ಅದೇ ಕನಸಲ್ಲೇ ಇದ್ದೆ……

ಅಯ್ಯೋ ಬಿಡಿ ಆ ವಿಷಯ ಯಾಕೆ. ಕಮಿಂಗ್ ಬ್ಯಾಕ್ ಟು ಆಕಾಶ. ಹ್ಮ್ಮ್….. ಆಸ್ಟ್ರೋನಾಟ್ ಆಗದಿದ್ದರೂ, ಈ ಅಕಾಶದ ಮೇಲಿನ ಹುಚ್ಚು ಎಂದಿಗೂ ಕಡಿಮೆಯಾಗಲೇ ಇಲ್ಲ. ಬಿಎಸ್ಸಿಯಲ್ಲಿರುವಾಗ ಬೇರೆ ಬೇರೆ ಪ್ರಾಥಮಿಕ ಶಾಲೆಗಳಿಗೆ ಹೋಗಿ ಸಂಜೆ ಹೊತ್ತು ‘ಬಾಹ್ಯಾಕಾಶ ವೀಕ್ಷಣೆ’ ಕಾರ್ಯಕ್ರಮ ನಡಿಸಿಕೊಡ್ತಾ ಇದ್ದೆ. ಒಂದುಘಂಟೆ ಬೋರ್ಡಿನ ಮೇಲೆ ಥಿಯರಿ, ಆಮೇಲೆ ಒಂದುಗಂಟೆ ಆಕಾಶ ವೀಕ್ಷಣೆ. ಸ್ಕೂಲಲ್ಲಿ ಮಕ್ಕಳ ತಲೆ ತಿಂದದ್ದು ಸಾಕಾಗದೆ, ಟೀಚರ್ರುಗಳ ತಲೆ ತಿನ್ನೋಕೆ ಐಡಿಯಾ ಹಾಕ್ದೆ. ಅಪ್ಪ ಅಮ್ಮ ಆಗ ಹೊಸದಾಗಿ ಕರ್ನಾಟಕಕ್ಕೆ ಕಾಲಿಟ್ಟಿದ್ದ ‘ನಲಿಕಲಿ’ ಶಿಕ್ಷಣ ಪದ್ಧತಿಯ ಸಂಪನ್ಮೂಲ ವ್ಯಕ್ತಿಗಳಾಗಿದ್ದರಿಂದ, ಅವರು ತರಬೇತಿಗೆ ಹೋದಲ್ಲೆಲ್ಲಾ ನನಗೊಂದು ‘ಕೊರೆಯೋ’ ಅವಕಾಶ ಒದಗಿಸಿಕೊಡ್ತಾ ಇದ್ರು. ಬೇರೆ ಬೇರೆ ಆಕಾಶಕಾಯಗಳನ್ನ ತೋರಿಸಿ, ಕೆಲ ನಕ್ಷತ್ರಪುಂಜಗಳನ್ನ ಗುರುತಿಸಿ, ನೆಬ್ಯುಲಾ ಅಂದ್ರೇನು, ಗೆಲಾಕ್ಸಿ ಅಂದ್ರೇನು, ನಕ್ಷತ್ರದ ಜೀವನಹಂತಗಳೇನು, ಅಂತೆಲ್ಲಾ ಡ್ರಿಲ್ಲಿಂಗ್ ಮಾಡಿ ಬರ್ತಿದ್ದೆ. ಇವತ್ತಿಗೂ ಆ ಹುಚ್ಚು ಕಡಿಮೆಯಾಗಿಲ್ಲ.

ಆ ನಕ್ಷತ್ರಗಳ ಹರವು, ವಿಶ್ವದ ಅಗಾದತೆ ತಿಳಿದುಕೊಂಡಷ್ಟೂ ಖಾಲಿಯಾಗದ ಜ್ಞಾನಭಂಡಾರವನ್ನ ನೋಡಿದಷ್ಟೂ ನಾನೆಷ್ಟು ಚಿಕ್ಕವ ಅನ್ನೋ ಭಾವನೆ ದಿನಗಳೆದಷ್ಟೂ ಹೆಚ್ಚುತ್ತೆ. ಇಂತದ್ದೊಂದು ಭಾವನೆ ಬಹುಷಃ ನಡುರಾತ್ರಿಯಲ್ಲಿ ಕೊಡಚಾದ್ರಿಯ ಮೇಲಿಂದಲೋ, ಹಂಪಿಯಲ್ಲಿ ಮಹಾನವಮಿಯ ದಿಬ್ಬದಮೇಲಿಂದಲೋ ಆಕಾಶ ನೋಡಿದವರೆಲ್ಲರಿಗೂ ಬಂದಿರುತ್ತೆ. ಬರಿಗಣ್ಣಿಗೆ ಕಾಣುವ ಆ ಚುಕ್ಕಿಗಳಿಂದಲೇ ಇಂತಾ ತಾತ್ವಿಕ ಅಲೆಹುಟ್ಟಬೇಕಾದರೆ, ಇನ್ನು ಸಣ್ಣದೊಂದು ಟೆಲೆಸ್ಕೋಪ್ ಇಟ್ಟುಕೊಂಡು ಆಕಾಶ ನೋಡಿದರೆ ಏನಾಗಬಹುದು ಗೊತ್ತಾ? ನಿಮ್ಮ ಬಾಯ್ಬಿಡಿಸುವಷ್ಟು ಸುಂದರವಾದ ಗುರುಗ್ರಹದ ಮಚ್ಚೆ, ಶನಿಯ ಸುತ್ತಲಿನ ಉಂಗುರ, ಆಂಡ್ರೋಮಿಡಾ ಗೆಲಾಕ್ಸಿಯ ವಿಹಂಗಮ ದೃಶ್ಯ, M33 ಗೆಲಾಕ್ಸಿ, ‘ಏಡಿ ನೆಬ್ಯುಲಾ’, ‘ಸೃಷ್ಟಿಯ ಕಂಬಗಳು’ (Pillars of creation) ಮುಂತಾದವನ್ನು ನೋಡಿ ಸೌಂದರ್ಯ ಆಸ್ವಾದಕರ ಕಣ್ಣಲ್ಲಿ ನೀರೇ ಬಂದಿಳಿಯುತ್ತದೆ.

ಇಷ್ಟೆಲ್ಲಾ ಯಾಕೆ ಬ(ಕೊ)ರೆದೆ ಅಂದರೆ, ಈ ವಾರದಲ್ಲಿ ಹೊಸದೊಂದು ವಿಷಯ ತಿಳಿಯಿತು. ಅದೇನಂದ್ರೆ, ಇಷ್ಟೊಂದು ಸಾವಿರ ನಕ್ಷತ್ರಗಳು ಆಕಾಶದಲ್ಲಿ ನಮಗೆ ಕಂಡರೂ, ನಿಜ ವಿಚಾರ ಏನಂದ್ರೆ ಈ ತಾರೆಗಳ, ಆಕಾಶಕಾಯಗಳ ನಡುವೆ ಅಗಾಧವಾದ ಖಾಲಿಜಾಗವಿದೆ. ಒಂದು ನಕ್ಷತ್ರಕ್ಕೂ ಇನ್ನೊಂದಕ್ಕೂ ಜ್ಯೋತಿರ್ವರ್ಷಗಳಷ್ಟು ದೂರವಿದೆಯೆಂಬುದು ನಮಗೆಲ್ಲರಿಗೂ ಗೊತ್ತು. ಆದರೆ ನಾವು ಆಕಾಶವನ್ನು 2Dಯಲ್ಲಿ ನೋಡುವುದರಿಂದ ಈ ಅಂತರ ನಮ್ಮ ಗಮನಕ್ಕೆ ಬರುವುದಿಲ್ಲ. ಆದರೆ ಈ ಎಲ್ಲಾ ‘ಅಗಣಿತ ತಾರಾಗಣಗಳ ನಡುವೆ’ ಅಲ್ಲೊಂದು ನಿಜವಾಗಿಯೂ ಒಂದು 60×40 ತರದ್ದು ಸೈಟು ಖಾಲಿ ಇದೆಯಂತೆ. ಅಂದರೆ ಆಕಾಶದ ಅನಂತದಲ್ಲೊಂದುಕಡೆ ದೂರದೂರದೂರದವರೆಗೆ ಏನೂ ಇಲ್ಲ. ಏನೂ ಅಂದ್ರೆ ಏನೂ ಇಲ್ಲ!! ಬೆಳಗಾವಿಯಿಂದ ದಾಂಡೇಲಿ ಕಾಡೊಳಗೆ ಡ್ರೈವ್ ಶುರುಮಾಡಿದರೆ, ಬಹಳ ದೂರದವರೆಗೆ ಗೋವಾ ಬಾರ್ಡರ್ ತನಕ ಹೇಗೆ ಏನೂಸಿಕ್ಕುವುದಿಲ್ಲವೋ, ಹಾಗೆಯೇ ಇಲ್ಲೂ ಸಹ ಏನೇನೂ ಇಲ್ಲ. ದಾಂಡೇಲಿಯ ಕಾಡೂ ಸಹ ಇಲ್ಲ. ಈ ಖಾಲಿ ಸೈಟು, ಬ್ರಹ್ಮಾಂಡದ ದಕ್ಷಿಣ ಖಗೋಳಾರ್ಧದಲ್ಲಿರುವ ‘ಇರಿಡಾನಿಸ್ ನಕ್ಷತ್ರಪುಂಜ”ದಕ್ಕಪಕ್ಕದಲ್ಲಿರುವುದರಿಂದ ಇದಕ್ಕೆ ‘ಇರಿಡಾನಿಸ್ ಸೂಪರ್ವಾಯ್ಡ್’ (Eridanus Supervoid) ಅಂತಾ ಹೆಸರಿಟ್ಟಿದ್ದಾರೆ. ಎರಡು ನಕ್ಷತ್ರಗಳ ನಡುವೆ ಇರುವ “ಏನೂ ಇಲ್ಲದಿರುವುದು” ಬಾಹ್ಯಾಕಾಶದಲ್ಲಿ ಸಾಮಾನ್ಯ. ಆದರೆ ನಕ್ಷತ್ರಗಳ ನಡುವೆ ಇರುವ “ಏನೂ ಇಲ್ಲದಿರುವುದು” ಮತ್ತು ಈ ಘಟೋತ್ಕಚನಂತಾ “ಏನೂ ಇಲ್ಲದಿರುವುದು” ಎರಡಕ್ಕೂ ಅಗಾದ ವ್ಯತ್ಯಾಸವಿದೆ. ನಕ್ಷತ್ರಗಳ ನಡುವೆ ಹೆಚ್ಚೆಂದರೆ 3, 4 ಅಥವಾ 15 ಜ್ಯೋತಿರ್ವರ್ಷಗಳಷ್ಟು ಅಂತರವಿರಬಹುದು. ಉದಾಹರಣೆಗೆ ನಮ್ಮ ಸೂರ್ಯನಿಗೂ ಹಾಗೂ ನಮ್ಮ ಅತ್ಯಂತ ಸಮೀಪದ ನಕ್ಷತ್ರ ಪ್ರಾಕ್ಸಿಮಾ ಸೆಂಟಾರಿಗೂ ಸುಮಾರು 4.2 ಜ್ಯೋತಿರ್ವರ್ಷಗಳಷ್ಟು ಅಂತರವಿದೆ. ಅದರ ನಂತರದ ಸಮೀಪದ ನಕ್ಷತ್ರಗಳಾದ ಆಲ್ಫಾ ಸೆಂಟಾರಿ-ಎ ಮತ್ತು ಬಿ ಸುಮಾರು 4.36 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ಅದರ ನಂತರದ ಸಮೀಪದ “ಬರ್ನಾರ್ಡನ ನಕ್ಷತ್ರ” ಸುಮಾರು 5.96 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ಹೀಗೇ ಜಗತ್ತು ಹರಡಿಕೊಂಡಿದೆ. ಆದರೆ ಈ ಇರಿಡಾನಿಸ್ ಸೂಪರ್-ವಾಯ್ಡ್ ಅದೆಷ್ಟು ದೊಡ್ಡದೆಂದರೆ ಒಂದು ಅಂಚಿನಿಂದ ಇನ್ನೊಂದು ಅಂಚು ತಲುಪಲು ಬೆಳಕಿಗೇ 1.8ಶತಕೋಟಿ ವರ್ಷಗಳು ಬೇಕಂತೆ! ಕಲಾವಿದನ ಕುಂಚದಲ್ಲಿ ಈ ಸೂಪರ್ ವಾಯ್ಡ್ ಕೆಳಗಿನಂತೆ ಕಂಡುಬರುತ್ತದೆ.

maxresdefault
Eridanus Srperviod

ನಮ್ಮ ಮಿಲ್ಕಿವೇ ಗೆಲಾಕ್ಸಿಯಿಂದ 3 ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಈ ಖಾಲಿ ಸೈಟಿನ ಇರುವಿಕೆಯ ಬಗ್ಗೆ ಹಲವಾರು ಊಹಾಪೋಹಗಳಿವೆ. ಯಾಕೆಂದರೆ ಇದನ್ನು ಯಾರೂ ಸಹ ‘ಕಣ್ಣಿಂದ ಕಂಡಿಲ್ಲ’. Cosmic Microwave Backgroundನ ಮೂಲಕ ವಿಶ್ವದ ಉಷ್ಣತೆಯನ್ನು ಅಳೆದಾಗ, ಅಲ್ಲೊಂದಷ್ಟು ಜಾಗದಲ್ಲಿ ವಿಶ್ವದ ಉಳಿದ ಭಾಗಗಳಿಗಿಂತಾ ಉಷ್ಣತೆ ಸ್ವಲ್ಪ “ಹೆಚ್ಚಾಗಿಯೇ” ಕಡಿಮೆಯಿದೆಯೆಂದು ತಿಳಿದುಬಂತು. ಆದ್ದರಿಂದ ಇದಕ್ಕೆ CMB ColdSpot ಅಂತಲೂ ಹೆಸರಿದೆ (ಚಿತ್ರ – 2 ಕೆಳಗಿದೆ). ಅಧ್ಯಯನಗಳು ಮುಂದುವರೆದಂತೆ ಈ ರೀತಿಯ ಕೋಲ್ಡ್-ಸ್ಪಾಟ್’ಗಳು ಅಥವಾ ‘ವಾಯ್ಡ್’ಗಳು ಬಹಳೆಡೆ ಇರುವುದು ಕಂಡು ಬಂತು. ಆದರೆ ಇಷ್ಟು ದೊಡ್ಡದಾದ ಹೊಂಡವೊಂದು ಇರುವುದು ಇದೊಂದೇ. ಗಾತ್ರದ ಪಟ್ಟಿಯಲ್ಲಿ ಇದರ ನಂತರದ ಸ್ಥಾನ ಪಡೆದಿರುವ ವಾಯ್ಡ್, ಇದರ ಕಾಲುಭಾಗದಷ್ಟೂ ಇಲ್ಲ. ಅಷ್ಟೂ ದೊಡ್ಡದು ಈ ಸೂಪರ್ವಾಯ್ಡ್!!

Pic 2
CMB Coldspot

ಇದಕ್ಕೆ ಕಾರಣಗಳು ಹಲವಾರು ಇರಬಹುದೆಂದು ಅಂದಾಜಿಸಲಾಗಿದೆ. ಡಾರ್ಕ್ ಮ್ಯಾಟರ್ ಎಂದು ಕರೆಯಲಾಗುವ ಬಾಹ್ಯಾಕಾಶದ ಇನ್ನೊಂದು ಸೋಜಿಗವೂ ಇದಕ್ಕೊಂದು ಕಾರಣವಿರಬಹುದು ಎಂಬ ಥಿಯರಿಗಳಿವೆ. ಇದು ಕಾಲ-ಸಮಯದ ಹಿಗ್ಗುಕುಗ್ಗುವಿಕೆಯಿಂದ ಬಾಹ್ಯಾಕಾಶದಲ್ಲಿ ಸೃಷ್ಟಿಯಾಗಿರುವ ತೂತು ಹಾಗೂ ಇನ್ನೊಂದು ‘ಸಮಾನಾಂತರ ಬ್ರಹ್ಮಾಂಡ’ಕ್ಕೆ (parallel universe) ಹೆಬ್ಬಾಗಿಲಿದ್ದರೂ ಇರಬಹುದು ಎಂಬ ಇನ್ನೊಂದು ಥಿಯರಿಯೂ ಇದೆ. ಇದರ ಕಾರಣಗಳ ಬಗ್ಗೆ ನಾನು ಬರೆಯುವಿದಕ್ಕಿಂತಾ ನಮ್ಮ ಸ್ನೇಹಿತ ‘ವಿಜ್ಞಾನ ವ್ಯಾಸ’ ರೋಹಿತ್ Chakrathirtha ಬರೆದರೆ ಬಹುಷಃ ಚೆನ್ನಾಗಿರುತ್ತದೆ. ಆತ ಈ ವಿಷಯಕ್ಕೆ ಹೆಚ್ಚು ನ್ಯಾಯ ಒದಗಿಸಬಹುದೇನೋ.

ಒಟ್ಟಿನಲ್ಲಿ ಖಾಲಿ ಖಾಲಿ ಬ್ರಹ್ಮಾಂಡದಲ್ಲಿ ಹೀಗೊಂದು ಅತೀಖಾಲಿ ಪ್ರದೇಶವೂ ಇದೆಯಂತೆ. “ಬೆಂಗಳೂರಿನ ರೆಡ್ಡಿಗಳಿಗೆ ಈ ವಿಷಯ ಹೇಳಬೇಡಿ. ಅಲ್ಲೂ ಒಂದಷ್ಟು ಸೈಟು ಮಾಡಿ ಮಾರಿಯಾರು” ಎಂಬ ಕೆಟ್ಟ ಜೋಕು ಹೊಡೆಯೋದಿಲ್ಲ ಬಿಡಿ 😛 😉

ಇನ್ನೊಂದು ಮಜಾ ಅಂದ್ರೆ, ನಮ್ಮ ಪೂರ್ವಜರು ಬ್ರಹ್ಮಾಂಡ ಅನ್ನೋ ಪದ ಹೆಂಗೆ ಸೃಷ್ಟಿ ಮಾಡಿದರೋ ಗೊತ್ತಿಲ್ಲ. ಆದರೆ ಇವತ್ತಿಗೆ ಸಧ್ಯ ಲಭ್ಯವಿರುವ ಎಲ್ಲಾ ತಂತ್ರಜ್ಞಾನಗಳನ್ನೂ ಬಳಸಿ ಇಡೀ ಗೋಚರ ವಿಶ್ವ (Observable Universe)ವನ್ನು ನಮ್ಮ ವಿಜ್ಞಾನಿಗಳು ಮ್ಯಾಪ್ ಮಾಡಿದ್ದಾರೆ. ಗೋಚರ ವಿಶ್ವದ ಶೇಪೂ ಸಹಾ ಒಂದು ಮೊಟ್ಟೆಯ ಆಕಾರದಲ್ಲೇ ಇದೆ ಮಾರಾಯ್ರೆ!! ಕೆಳಗೆ ನೋಡಿ! 🙂

BrahmaanDa
Observable Universe

ದಾಸರು, ಸರ್ವಜ್ಞ, ಶರೀಫಜ್ಜ ಮತ್ತು ಟೇಪ್ ರೆಕಾರ್ಡರು

ನಂಗಂತೂ ವಿದ್ಯಾಭೂಷಣರ ಮೇಲೆ ಹಾಗೂ ಪುತ್ತೂರು ನರಸಿಂಹ ನಾಯಕರ ಮೇಲೆ ಭಯಂಕರ ಕೋಪವುಂಟು. ಚಿಕ್ಕವನಿದ್ದಾಗಲಿಂದಲೂ ಮನೆಯಲ್ಲಿ ಬೆಳಿಗ್ಗೆ ಭಕ್ತಿಗೀತೆ ಕ್ಯಾಸೆಟ್ ಹಾಕಿದಾಗ, ವಾರಕ್ಕೆರಡು ಸಾರಿ ಇವರ ಹಾಡುಗಳು ಕೇಳುಬರ್ತಾ ಇದ್ವು. ಅವರ ಹಾಡುಗಳನ್ನ ಕೇಳಿ ಕೇಳಿ, ನನಗಂತಲ್ಲ, I am sure, ನಿಮಗೂ ಸಹ ‘ದಾಸನಾಗು ವಿಶೇಷನಾಗು’ ಅನ್ನೋ ಸಾಲುಗಳು ಎಲ್ಲಾದ್ರೂ ಬರೆದಿದ್ದು ಕಂಡ್ರೂ, ಅವರದೇ ಹಾಡಿನ ಟ್ಯೂನ್ ಮನಸಲ್ಲಿ ಓಡುತ್ತೇ ಹೊರತು ಆ ಸಾಲುಗಳು ಬರೀ ಸಾಲುಗಳಾಗಿ ಹೊಳೆಯುತ್ತವೆಯೇ? ಅಂದರೆ, ಕನಕದಾಸರ ಆ ಇಡೀ ರಚನೆಯನ್ನು ಬೇರೆ ಯಾವ ರೀತಿಯಲ್ಲೂ ನಿಮಗೆ ಗ್ರಹಿಸಲು ಸಾಧ್ಯವೇ ಇಲ್ಲ. ಎಲ್ಲೋ ಅಲ್ಪ ಸ್ವಲ್ಪ ಸಾದ್ಯವಾದರೂ, ಅಲ್ಲೆಲ್ಲೋ ಹಿಂದೆ ನಿಮ್ಮ ಮನಸ್ಸಿನಲ್ಲಿ ಆ ಆಲಾಪ ಕೇಳಿಬರುತ್ತಾ ಇರುತ್ತೆ.

ನನಗೆ ಇವರಿಬ್ಬರ ಮೇಲೆ ಸಿಟ್ಟು ಇದಕ್ಕೇ. ಕನಕ, ಪುರಂದರ, ಸರ್ವಜ್ಞ ಮಾತು ಶರೀಫರು, ಈ ನಾಲ್ಕು ಜನರ ರಚನೆಗಳನ್ನ ಅರ್ಥೈಸಿಕೊಳ್ಳಲಿಕ್ಕೆ ಒಂದು ಬಾರಿಯ ಕೇಳುವಿಕೆ ಯಾವ ಮೂಲೆಗೂ ಸಾಲಲ್ಲ. ಮತ್ತೆ ಮತ್ತೆ ಕೇಳ್ಬೇಕು. ಒಂದೈದು ಸಲ ಕೇಳಿದ್ಮೇಲೆ “ಓಹ್!!!! ಇದು ಹಿಂಗೆ” ಅನ್ಸುತ್ತೆ. ಇನ್ನೊಂದೆರಡು ಸಲ ಕೇಳಿ “ಓಹೋ!! ಇಹು ಹಿಂಗೂ ಇದೆ” ಅನ್ಸುತ್ತೆ. ಓದಿ ಅರ್ಥ ಮಾಡ್ಕೊಳ್ಳೋದೇ ಇಷ್ಟು ಕಷ್ಟ. ಇನ್ನು ಇವರ ರಚನೆಗಳಿಗೆ ತಮ್ಮ ಜೇನಿನಂತ ಧ್ವನಿ ಸೇರಿಸಿ ಅದನ್ನು ಪೂರ್ತಿ ಕರ್ಣಾನಂದಕರ ಗೀತೆಯನ್ನಾಗಿ ಮಾಡ್ತಾರಲ್ಲ…..ಸರಿಯಿಲ್ಲ ರೀ ಇವ್ರು. ನಾನು ನೀವು ಓಕೆ ಹೆಂಗೋ ಸ್ವಲ್ಪ ಓದ್ತೀವಿ. ಆದರೆ ಉಳಿದ 95% ಜನ ಇದನ್ನೊಂದು ಭಕ್ತಿಗೀತೆ ಅಂತಾ ‘ಕೇಳಿ’ ಮುಂದೆ ಹೋಗ್ತಾರೆ, ಅಷ್ಟೇ ಹೊರತು ಅದರ ನಿಜವಾದ ತಿರುಳನ್ನು ಯಾವತ್ತಿಗೂ ಅರ್ಥೈಸಿಕೊಳ್ಳಲ್ಲ.

ಅಡಿಗರದ್ದೋ, ಕೆ.ಎಸ್.ನ ಅವರದ್ದೋ ಹಾಡುಗಳಿಗೂ ಇದೇ ಗತಿಯಾಗುತ್ತೆ ಅಂತಿಲ್ಲ. ಸಿ.ಅಶ್ವತ್ಥ್ ಸರ್ ಸ್ವಲ್ಪ ಲೋ ಪಿಚ್ಚಿನಲ್ಲಿ ‘ನೀ ಹಿಂಗs ನೋಡಬ್ಯಾಡ ನನ್ನ’ ಅಂದ್ರೆ ಗೊತ್ತಾಗಿಬಿಡುತ್ತೆ ಅದೊಂದು ಶೋಕಗೀತೆ ಅಂತಾ. ಒಂದ್ಸಲ ಅದು ಗೊತ್ತಾದ ಮೇಲೆ, ಎರಡನೇ ಸಲಕ್ಕೆ ಜನ ಅದರ ಲಿರಿಕ್ಸಿಗೆ ಗಮನ ಕೊಡ್ತಾರೆ. ಎಂಡಿ ಪಲ್ಲವಿ ಮೃದುವಾಗಿ ‘ನನ್ನ ಇನಿಯನ ನೆಲೆಯ ಬಲ್ಲೆಯೇನೇ…’ ಅಂದಕೂಡ್ಲೇ ಗೊತ್ತಾಗುತ್ತೆ ಲಕ್ಷ್ಮೀನಾರಾಯಣ ಭಟ್ರು ಈ ಹಾಡಿನಲ್ಲಿ ಹೆಣ್ಣಿನ ಅಳಲನ್ನು ವಿಶದವಾಗಿ ಹೇಳಿದ್ದಾರೆ ಅಂತಾ.

ದಾಸರದ್ದು ಹಂಗಲ್ಲ. ಅದು ಕೃಷ್ಣನ ನೆನೆಯುವ ಪ್ರೇಮಗೀತೆಯೂ ಹೌದು, ಜೀವನಾನುಭವವೂ ಹೌದು, ತತ್ವವೂ ಹೌದು, ಪ್ರತಿಸಾಮಾನ್ಯನನ್ನು ತಲುಪಬಲ್ಲ ರಸಾಮೃತವೂ ಹೌದು. ಅದನ್ನು ಕೇಳಿ ಅರ್ಥಸಿಕೊಳ್ಳದಿದ್ದರೆ, ಅದೆಂತಾ ನಷ್ಟ ಅಲ್ವೇ!
“ದಾರದಿ ಕಟ್ಟಿಲ್ಲ ಮಾರು ಹಾಕುವುದಲ್ಲ
ಕೇರಿ ಕೇರಿಗಳಲ್ಲಿ ಮಾರುವುದಲ್ಲ
ಭೂರಿ ಭಕುತಿಯೆಂಬ ಭಾರಿಯ ಬೆಳಗಿದ
ಮಾರೆಂದು ಪೇಳಿದ ಶೌರಿಯ ಸೊಬಗಿನ…..ಹೂ ಬೇಕೇ ಪರಿಮಳದ
ಪರಮ ಪುರುಷ ನಮ್ಮ ಕೃಷ್ಣನ ತೋಟದ
ಹೂ ಬೇಕೇ” ಅನ್ನೋ ಈ ಹಾಡಿನ ಪದಗಳನ್ನ ಯಾರಾದ್ರೂ ಗಮನಿಸಿರ್ತಾರಾ!? ಅದನ್ನದೆಷ್ಟು ಜನ ಅರ್ಥೈಸಿಕೊಂಡಿರಬಹುದು? ಗಮನಿಸದೇ ಈ ಅನರ್ಘ್ಯಪದಗಳನ್ನ ಕಳಕೊಂಡವರೆಷ್ಟು ಜನ!

ಇಲ್ಲೊಂದು ಪುರಂದರದಾಸರ ರಚನೆ ನೋಡಿ. ಇದನ್ನೆಲ್ಲಾ ಟೇಪ್ ರೆಕಾರ್ಡರಿನಲ್ಲಿ ಇಂಪಾದ ಹಾಡಿನ ಮೂಲಕ ಕೇಳಿ ಅರ್ಥೈಸ್ಕೊಳ್ಳೋ ಭಾಗ್ಯ ಎಷ್ಟು ಜನಕ್ಕಿರುತ್ತೆ ಹೇಳಿ 🙂 ಇದಕ್ಕೇ ನಂಗೆ ವಿದ್ಯಾಭೂಷಣರ ಮೇಲೆ ನರಸಿಂಹನಾಯಕರ ಮೇಲೆ ಸಿಟ್ಟು 🙂 ನಿಮಗೆ!?

12743827_986740784749200_2581252490178379716_n

ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೧೪

ಅಬ್ರಾಹಂ ಲಿಂಕನ್ ಅಮೇರಿಕಾ ಕಂಡ ಪ್ರಭಾವಿ ಅಧ್ಯಕ್ಷರ ಪಟ್ಟಿಯಲ್ಲಿ ಬಹುಷಃ ಮೊದಲೈದು ಹೆಸರುಗಳಲ್ಲಿ ಖಂಡಿತಾ ನಿಲ್ಲುತ್ತಾರೆ. ಜಾರ್ಜ್ ವಾಷಿಂಗ್ಟನ್ ಬಳಿಕ ಇಡೀ ಅಮೇರಿಕಾವನ್ನು ಅಷ್ಟರಮಟ್ಟಿಗೆ ಒಗ್ಗೂಡಿಸಲು ಸಾಧ್ಯವಾದದ್ದು ಬಹುಷಃ ಲಿಂಕನ್ನರಿಗೆ ಮಾತ್ರ ಅನ್ನಿಸುತ್ತೆ. ದೇಶ ಹುಟ್ಟಿ ಅರವತ್ತು ವರ್ಷ ಕಳೆದರೂ, ಜನಾಂಗೀಯ ದ್ವೇಷದ ಮತ್ತು ಅಂತಃಕಲಹದಲ್ಲಿ ಬೇಯುತ್ತಿದ್ದ ಅಮೇರಿಕಾವನ್ನು ಶಾಂತಗೊಳಿಸಬೇಕಾದರೆ ಲಿಂಕನ್ ಪಟ್ಟ ಪಾಡು ಅಷ್ಟಿಷ್ಟಲ್ಲ. ಲಿಂಕನ್ ಅಧ್ಯಕ್ಷರಾಗಿದ್ದ 1861 ರಿಂದ 1865 ವರೆಗಿನ ಆ ನಾಲ್ಕು ವರ್ಷಗಳು, ಅಮೇರಿಕಕ್ಕೆ ಬರೇ ಒಬ್ಬ ಅಧ್ಯಕ್ಷ ಮಾತ್ರ ಸಿಗಲಿಲ್ಲ, ಆ ದೇಶಕ್ಕೆ ಒಬ್ಬ ನೈತಿಕ ಗುರು ಕೂಡಾ ದೊರಕಿದ. ಅಮಾನುಷ ವರ್ಣಭೇದ ನೀತಿ ಮತ್ತು ದೇಶದಲ್ಲಿ ನಡೆಯುತ್ತಿದ್ದ ಅಂತಃಯುದ್ಧದಿಂದ ಆ ಅಮೇರಿಕಾವನ್ನು ಪಾರುಮಾಡಬೇಕಾದರೆ, ಲಿಂಕನ್ ತನ್ನ ಜೀವವನ್ನೇ ತೇಯ್ದ. ಇನ್ನೊಂದು ಸಲ ಆಯ್ಕೆಯಾಗುವ ಎಲ್ಲಾ ಅರ್ಹತೆಯಿದ್ದ ಆತ, ತನ್ನ ಮೊದಲನೇ ಕಾಲಾವಧಿಯನ್ನೇ ಮುಗಿಸಲಾಗಲಿಲ್ಲವೆಂಬುದು ಖೇದದ ವಿಚಾರ. ಆತನಿಗೆ ಅಧ್ಯಕ್ಷ ಪಟ್ಟ ಸಿಗುವುದಕ್ಕಿಂತಲೂ ಹೆಚ್ಚಾಗಿ, ಅಮೇರಿಕಾಕ್ಕೆ ಅವನಂತಹ ಇನ್ನೊಬ್ಬ ಅಧ್ಯಕ್ಷ ಸಿಗುವ ಅಗತ್ಯವಿತ್ತು.

ಸ್ವಭಾವದಲ್ಲಿ ನಮ್ಮ ಗಾಂಧಿಗೆ ಹೋಲಿಸಬಹುದಾದ ಲಿಂಕನ್ ಮಿತ ಮತ್ತು ಮೃದುಭಾಷಿಯಾಗಿದ್ದರೂ, ಆಗಾಗ ಮಾತಿನ ಚಾಟಿಬೀಸಿದ ಉದಾಹರಣೆಗಳು ಬಹಳಷ್ಟಿವೆ. ಅಂತಹ ವ್ಯಕ್ತಿತ್ವದಿಂದ ಬಂದ ಮಾತುಗಳು ಬರೀ ಅವಮಾನವನ್ನು ಮಾತ್ರ ಕೊಡುತ್ತಿರಲಿಲ್ಲ. ಒಂದೊಳ್ಳೆ ನೈತಿಕತೆಯ ಪಾಠವನ್ನೂ ಕಲಿಸುವಂತಿದ್ದವು. ಒಂದು ಉದಾಹರಣೆ ಇಲ್ಲಿ ನೋಡಿ:

ಒಮ್ಮೆ ಈತನ ಆಫೀಸಿಗೆ ಬ್ರಿಟನ್ನಿನ ರಾಯಭಾರಿ ಬಂದ. ದಿನದ ಮೊದಲ ಮೀಟಿಂಗ್ ಅದು. ಲಿಂಕನ್ ಆಗಷ್ಟೇ ಬೆಳಗಿನ ಉಪಹಾರ ಮುಗಿಸಿ, ತನ್ನ ಶೂ ಅನ್ನು ಪಾಲಿಷ್ ಮಾಡಿಕೊಳ್ಳುತ್ತಿದ್ದ. ಅಮೇರಿಕಾದ ಅಧ್ಯಕ್ಷನಿಗೆ ಮನೆಯಲ್ಲಿ ಹತ್ತಾರು ಕೆಲಸದವರಿದ್ದೂ, ಶೂ ಪಾಲೀಷ್ ತಾನೇ ಮಾಡಿಕೊಳ್ಳುತ್ತಿದ್ದನ್ನು ಕಂಡ ರಾಯಭಾರಿ, ಆಶ್ಚರ್ಯಚಕಿತನಾಗಿ ‘ಓಹ್! ಮಿ.ಲಿಂಕನ್, ನೀವು ಶೂ ಬೇರೆ ಪಾಲಿಷ್ ಮಾಡ್ತಿರೋ!? ಅದೂ ನಿಮ್ಮದೇ ಶೂ ಸಹಾ!?’ ಎಂದ. ಮುಖದಲ್ಲಿ ಸಣ್ಣದೊಂದು ಕೊಂಕುನಗುವಿತ್ತು.

ಈ ರಾಯಭಾರಿ ಈ ರೀತಿಯ ಪ್ರಶ್ನೆ ಕೇಳಿ ರೇಗಿಸುತ್ತಿದ್ದದ್ದು ಇದೇನೂ ಮೊದಲಲ್ಲ. ಲಿಂಕನ್ ಬೆಳ್ಳಂಬೆಳಿಗ್ಗೆ ತನ್ನ ಚಿತ್ತ ಕೆಡಿಸಿಕೊಳ್ಳಲಿಚ್ಚಿಸದೆ ‘ಹೌದು. ನಾನು ನನ್ನದೇ ಶೂ ಪಾಲೀಷ್ ಮಾಡ್ತೀನಿ. ನೀವ್ಯಾರ ಶೂ ಪಾಲೀಶ್ ಮಾಡುತ್ತೀರಿ’ ಎಂದು ತನ್ನ ಕೆಲಸ ಮುಂದುವರಿಸಿದ.

ವ್ಯಾಕ್ಸ್ ಹಚ್ಚಿದ್ದ ಬ್ರಷ್, ಶೂ ಮೇಲೆ ಸರ್ಕ್ ಸರ್ಕ್ ಅಂತಾ ಓಡಾಡುತ್ತಿದ್ದಾ ಶಬ್ದ ಬಿಟ್ಟರೆ, ಅಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದ ಆವರಿಸಿತ್ತು.

ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೧೩

ಜೂಲಿಯಸ್ ಹೆನ್ರಿ ಮಾರ್ಕ್ಸ್ ಎಂದರೆ ಎಲ್ಲರಿಗೂ ಪಕ್ಕನೆ ಹೆಸರು ಹೊಳಯಲಿಕ್ಕಿಲ್ಲ. ಆದೇ ಗ್ರೌಚೋ ಮಾರ್ಕ್ಸ್ ಅನ್ನಿ. ಕೆಲವರ ಕಿವಿಗಳಂತೂ ನಿಮಿರಿ ನಿಲ್ಲುತ್ತವೆ. ಅಮೇರಿಕನ್ ಹಾಸ್ಯಪ್ರಪಂಚದಲ್ಲಿ ಅವನದ್ದೊಂದು ಪ್ರಸಿದ್ಧ ಹೆಸರು. ರೇಡಿಯೋ ಮತ್ತು ದೂರದರ್ಶನ ವಿಭಾಗದಲ್ಲಿ ವಿಡಂಬನಾತ್ಮಕ ಕಾರ್ಯಕ್ರಮಗಳಿಗೆ ಗ್ರೌಚೋನ ಹೆಸರು ಅಜರಾಮರ. ತನ್ನ ‘ಯಾರ ಮುಲಾಜೂ ಇಲ್ಲ’ದ ಅಭಿಪ್ರಾಯಗಳಿಗೆ, ಚಾಟಿಯಂತಾ ಮಾತುಗಳಿಗೆ ಹಾಗೂ ತನ್ನನ್ನು ಎದುರುಹಾಕಿಕೊಂಡವರಿಗೆ ಅವನು ಕೊಡುವ ಮೊನಚು ಎದುರೇಟುಗಳಿಗೆ ಹೆಸರುವಾಸಿ. ತನ್ನ You bet your life ಕಾರ್ಯಕ್ರಮದ ಮೂಲಕ ಅಮೇರಿಕಾದ ಮನೆಮಾತಾದವ. ‘ಅವನ ಬಾಯಿಂದ ಬರುವ ಆ ಮೊನಚು ಹಾಸ್ಯಕ್ಕಾಗಿ ನಾನು ಅವನಿಂದ ಅವಮಾನಕ್ಕೊಳಗಾಗಲೂ ತಯಾರು’ ಎಂದು ಕೆಲವರು ಹೇಳಿದ್ದುಂಟು. ಬೌದ್ಧಿಕವಾಗಿ ಅಷ್ಟೂ ಮೇಲ್ಮಟ್ಟದ ಹಾಸ್ಯ ಆತನದ್ದು.

1970ರ ದಶಕದಲ್ಲಿ ದೂರದರ್ಶನ ಅಮೇರಿಕಾದ ಒಂದು ಸಾಮಾಜಿಕ ಪಿಡುಗು ಎನ್ನುವಷ್ಟರಮಟ್ಟಿಗೆ ಬೆಳೆದಿತ್ತು. ಸಂಸಾರದ ಎಲ್ಲರೂ ಟೀವಿಗೇ ಅಂಟಿಕೂರುತ್ತಿದ್ದರಂತೆ. ಯಾರೋ ಒಮ್ಮೆ ಒಂದು ಟೀವಿ ಸಂದರ್ಶನದಲ್ಲಿ ನಮ್ಮ ಚಾನೆಲ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ “ನನ್ನ ಪ್ರಕಾರ ನಿಮ್ಮ ಚಾನೆಲ್ ತುಂಬಾ ಶೈಕ್ಷಣಿಕ ಮಹತ್ವವುಳ್ಳದ್ದು. ಪ್ರತಿಬಾರಿಯೂ ನಮ್ಮ ಮನೆಯಲ್ಲಿ ಯಾರಾದ್ರೂ ನಿಮ್ಮ ಚಾನೆಲ್ ಹಾಕಿದ ಕೂಡಲೇ, ನಾನು ಲೈಬ್ರರಿಗೆ ಹೋಗಿ ಒಂದು ಪುಸ್ತಕ ತೆಗೆದು ಓದುತ್ತಾ ಕೂರುತ್ತೀನಿ. ಹೀಗಾಗಿ ಶೈಕ್ಷಣಿಕವಾಗಿ ಟೀವಿ ನನಗೆ ತುಂಬಾ ಸಹಾಯಕ” ಎಂದು ಸಂದರ್ಶಕನ ಮುಖ ಕೆಂಪುಮಾಡಿದ್ದವ.

ಇಂತಹ ಗ್ರೌಚೋನ ಹಿಂದೆ ಒಬ್ಬ ಮರಿಲೇಖಕ ತನ್ನ ಪುಸ್ತಕದ ಎರಡನೇ ಮುದ್ರಣಕ್ಕೆ ಬೆನ್ನುಡಿ ಬರೆಸಲು ಹಿಂದೆಬಿದ್ದಿದ್ದ. ಗ್ರೌಚೋ ಇಂತಹ ಕೆಲಸಗಳಿಂದ ದೂರವೇ ಇದ್ದವ. ಮತ್ತೆ ಮತ್ತೆ ಒತ್ತಾಯ ಮಾಡಿದ ಮೇಲೆ, ‘ನಿನ್ನ ಪುಸ್ತಕ ಕೊಡು. ನೋಡುತ್ತೇನೆ’ ಎಂದು ತೆಗೆದುಕೊಂಡಿದ್ದ. ಹಾಗೂ ಅದರ ಬಗ್ಗೆ ಮರೆತೇಬಿಟ್ಟಿದ್ದ. ಎರಡು ವಾರ ಕಳೆದನಂತರ ಯಾವುದೋ ಪಾರ್ಟಿಯಲ್ಲಿ ಆ ಲೇಖಕ ಮತ್ತೆ ಎಡತಾಕಿದ. ನಾಲ್ಕು ಪೆಗ್ ಏರಿಸಿದ್ದ ಆ ಲೇಖಕನ ಅಂತರಾತ್ಮ ಸ್ವಲ್ಪಸ್ವಲ್ಪವೇ ಮಾತನಾಡಲು ಅದಾಗಲೇ ಪ್ರಾರಂಭಿಸಿಯಾಗಿತ್ತು. ಅದರ ಜೊತೆಗೆ ಮೊದಲ ಮುದ್ರಣ ಪೂರ್ತಿಯಾಗಿ ಮಾರಾಟವಾಗಿದ್ದ ನಶೆಯೂ ಏರಿತ್ತು. ಗ್ರೌಚೋನನ್ನು ಕಂಡವನೇ “ಸಾರ್! ನಿಮಗೆ ಸ್ವಲ್ಪವೂ ಟೈಮ್-ಸೆನ್ಸೆ ಇಲ್ಲವಲ್ಲ ಸಾರ್!! ಪುಸ್ತಕ ಕೊಟ್ಟು ಎರಡು ವಾರವಾಯ್ತು. ನನ್ನ ಹಿನ್ನುಡಿ ಸಾರ್! ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಈ ವರ್ಷದ ಬೆಸ್ಟ್ ಸೆಲ್ಲರ್ ಸಾರ್ ಆ ಪುಸ್ತಕ” ಅಂತಾ ಜೋರಾಗಿ ರಾಗವೆಳೆದ. ಅಕ್ಕಪಕ್ಕದವರು ಇವರತ್ತ ನೋಡಲಾರಂಭಿಸಿದರು.

ಇಂತಹ ಸಾವಿರ ಸನ್ನಿವೇಶಗಳನ್ನು ಎದುರಿಸಿದ್ದ ಗ್ರೌಚೋ ಏನೂ ತಲ್ಲಣಗೊಳ್ಳದೇ “ಮಾರಾಯಾ! ನಿನ್ನ ಪುಸ್ತಕ ಕೈಗೆತ್ತಿಕೊಂಡಾಗಲಿಂದಾ….ಕೆಳಗಿಡುವವರೆಗೆ ನನಗೆ (ಅದನ್ನು ನೋಡಿಯೇ) ನಕ್ಕೂ ನಕ್ಕೂ ಸುಸ್ತಾಯಿತು. ಖಂಡಿತಾ ಯಾವತ್ತಾದರೊಂದು ದಿನ ಅದನ್ನು ಓದುವ ಸಾಹಸ ಮಾಡುತ್ತೇನೆ.” ಎಂದು ಮುಂದೆ ಹೋದ.

ಅಲ್ಲೊಂದು ಮೂಲೆಯಲ್ಲಿ ಯಾರಿಗೋ ಆ ಜೋಕು ತಕ್ಷಣವೇ ಅರ್ಥವಾಗಿ, ಅವರು ಗೊಳ್ಳೆಂದು ನಕ್ಕಿದ್ದು ಬಿಟ್ಟರೆ, ಇಡೀ ಕೋಣೆಯಲ್ಲಿ ಸುಮಾರು ಮೂರ್ನಾಲ್ಕು ಸೆಕೆಂಡು ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದ ಆವರಿಸಿತ್ತು. ಆಮೇಲೆ ಎಲ್ಲರೂ ಬಿದ್ದು ಬಿದ್ದು ನಕ್ಕರು.