ಬುದ್ಧಿಗೊಂದು ಗುದ್ದು – ೨೬

ಯಾರಪ್ಪನ ಆಸ್ತಿ ಈ ಅಂತರ್ಜಾಲ!?

99991395150064

ದಿನಾ ಬೆಳಗ್ಗೆ ಎದ್ದು ಮಲಗೋ ಮುಂಚಿನ ನಿಮಿಷದವರೆಗೂ ಇಂಟರ್ನೆಟ್ಟು ಅನ್ನೋ ಜೇಡರಬಲೆಯಲ್ಲಿ ಸಿಕ್ಕಾಂಡಿರ್ತೀರಲ್ಲ, ಯಾವತ್ತಾದ್ರೂ ಇಂಟರ್ನೆಟ್ಟು ನಿಂತುಹೋದ್ರೆ ಏನ್ ಕಥೆ ಅಂತಾ ಯೋಚ್ನೆ ಮಾಡಿದ್ದೀರಾ? “ಏನು!! ಇಂಟರ್ನೆಟ್ಟು ನಿಂತುಹೋಗುತ್ತಾ!? ಅದು ಯಾರಪ್ಪನ ಮನೆಯದ್ದು ಹಾಗೆಲ್ಲಾ ನಿಲ್ಸೋಕೆ? ಅದು ಹೇಗೆ ನಿಂತೋಗತ್ತೆ?” ಅಂತಾ ಅವಾಜ್ ಹಾಕ್ತಿದ್ದೀರಾ!? ಸಮಾಧಾನ ಮಾಡ್ಕಳ್ಳಿ. ನಾನು ನೀವು ಅಂದ್ಕೊಂಡಷ್ಟು ಸರ್ವತಂತ್ರ ಸ್ವತಂತ್ರವಾಗೇನಿಲ್ಲ ಇಂಟರ್ನೆಟ್ಟು. ನಿಲ್ಸೋಕೆ ಯಾರಪ್ಪನ ಮನೆಯದ್ದಲ್ಲದಿದ್ದರೂ, ಇದನ್ನ ನಡೆಸೋಕೆ ಕೆಲವು ದೊಣ್ಣೆನಾಯಕರುಗಳಿದ್ದಾರೆ. ಅಷ್ಟೇ ಅಲ್ಲ, ಅಂತರ್ಜಾಲಕ್ಕೊಂದು ಕೀಲಿಕೈ ಕೂಡ ಇದೆ. ಕೀಲಿಕೈಯೆಂದರೆ ಸುಮ್ಮನೆ ಸಾಹಿತ್ಯಿಕವಾಗಿ (literal) ಹೇಳ್ತಾ ಇಲ್ಲ. ನಿಜವಾಗಿಯೂ ಅಂತರ್ಜಾಲಕ್ಕೊಂದು ಕೀಲಿಕೈ (Key) ಇದೆ. ಈ ಕೀಲಿಕೈ ಸಿಗಬೇಕಾದರೆ ಜಗತ್ತಿನಾದ್ಯಂತ ಹರಡಿರುವ 14ಜನ ಸೇರಬೇಕು. ಈ 14ಜನರ ಹತ್ತಿರವಿರುವ ಏಳು ಕೀಲಿಕೈಗಳು ಸೇರಿದರೆ ಮಾತ್ರ ಆ ‘ಮಾಸ್ಟರ್ ಕೀ’ ಸಿಗುವುದು. ಆ ಮಾಸ್ಟರ್ ಕೀ ಸಿಕ್ಕಿದರೆ ಅಂತರ್ಜಾಲಕ್ಕೆ ನೀವೇ ಒಡೆಯ! ಹೇಗೆ ಅಂತೀರಾ? ಮುಂದೆ ಓದಿ.

ಅಂತರ್ಜಾಲ ಅನ್ನುವುದೊಂದು ಒಂಟಿಮನೆಯೇನಲ್ಲ. ಹಾಗಂತ ಇದನ್ನ ಒಂದಷ್ಟು ಮನೆಗಳ ಜಾಲ ಅಂತಾ ತಿಳ್ಕೊಂಡಿದ್ರೆ ಅದು ತಪ್ಪು ತಿಳುವಳಿಕೆ. ಇಂಗ್ಳೀಷಿನ Internet ಹೆಸರು ಇದಕ್ಕೆ ಹೆಚ್ಚು ಸೂಕ್ತ ಅರ್ಥ ಕೊಡುತ್ತದೆ. ಯಾಕೆಂದರೆ, ಇದೊಂದು ಜಾಲಗಳನ್ನು ಸಂಪರ್ಕಿಸುವ ಮಹಾಜಾಲ. It’s a network of networks. ಬೇರೆ ಬೇರೆ ದೇಶದ, ಬೇರೆ ಬೇರೆ ಸಂಸ್ಥೆಗಳ, ಬೇರೆ ಬೇರೆ ಸಂಘಟನೆಗಳ ತಾಣಗಳನ್ನು ಸಂಪರ್ಕಿಸುವ ಒಂದು ಮಹಾಜಾಲ. ಹೀಗಿದ್ದಾಗ ಇದನ್ನು ಯಾರೋ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆ ನಿರ್ಬಂಧಿಸಲು ಸಾಧ್ಯವಿಲ್ಲ. ಆದರೆ ಕೆಲವೊಂದು ದೇಶಗಳಲ್ಲಿ ಅಂತರಜಾಲದ ಪ್ರವೇಶವನ್ನು ಒಂದೊಂದೇ ಸಂಸ್ಥೆ ಅಥವಾ ವ್ಯಕ್ತಿ ಅಥವಾ ಒಂದು ಗುಂಪು ನಿರ್ಬಂಧಿಸಬಹುದು. ಉದಾಹರಣೆಗೆ ನಾನಿರುವ ಸಂಯುಕ್ತ ಅರಬ್ ಎಮಿರೆಟ್ಸಿನಲ್ಲಿ 2006ಕ್ಕೆ ಮುಂಚೆ ದೇಶದ ಇಂಟರ್ನೆಟ್ ಟ್ರಾಫಿಕ್ಕನ್ನು ‘ಎತಿಸಲಾತ್’ ಎಂಬ ಕಂಪನಿಯೇ ನಿರ್ಧರಿಸುತ್ತಿತ್ತು. ಈಗ ‘ಎತಿಸಲಾತ್’ ಮತ್ತು ‘ಡು’ ಎಂಬ ಎರಡು ಕಂಪನಿಗಳಿವೆ. ನಾಳೆ ಏನಾದರೂ ಇವೆರಡೂ ಕಂಪನಿಗಳ ಸಿ.ಇ.ಒಗಳು ಸೇರಿ ಯು.ಎ.ಇ ಗೆ ಇಂಟರ್ನೆಟ್ ಬೇಡ ಎಂದಾಗಲೀ ಅಥವಾ ಅಂತರ್ಜಾಲದ ಇಂತಿಂತಾ ಪುಟಗಳು ಮಾತ್ರ ಇಲ್ಲಿನ ನಾಗರೀಕರಿಗೆ ಸಿಗುವಂತಾಗಲಿ ಎಂದು ನಿರ್ಧರಿಸಿದರೆ ನನಗೆ ಅವರು ಕೊಟ್ಟಷ್ಟು ಪ್ರಸಾದವೇ ಗತಿ. ಹಾಗೂ ಇದು ನಡೆಯುತ್ತಿದೆ ಕೂಡಾ. ಇಲ್ಲಿನ ಸರ್ಕಾರ ಅಥವಾ ಇಸ್ಲಾಂಗೆ ವಿರುದ್ಧವಾಗಿ ಮಾತನಾಡುವ ಜಾಲಪುಟಗಳನ್ನು ಹಾಗೂ ಅಶ್ಲೀಲತೆ/ನಗ್ನತೆಯನ್ನು ತೋರಿಸುವ ಪುಟಗಳನ್ನು ಈ ಕಂಪನಿಗಳು ನಿರ್ಬಂಧಿಸುತ್ತವೆ. ಇದೇ ರೀತಿ ಚೀನಾ, ಉ.ಕೊರಿಯಾ, ಇರಾನ್ ಮುಂತಾದ ದೇಶಗಳಲ್ಲಿಯೂ ಇದೇ ರೀತಿ ನಡೆಯುತ್ತದೆ. ಪ್ರತಿಯೊಂದು ಸರ್ಕಾರ ಹಾಗೂ ಆಯಾ ದೇಶದ ಟೆಲಿಕಾಂ ಕಂಪನಿಗಳು ಜಾಲವನ್ನು ಸ್ವಲ್ಪಮಟ್ಟಿಗೆ ನಿರ್ಬಂಧಿಸುತ್ತವೆ.

ಆದರೆ, ಜಗತ್ತಿನ ಕೆಲ ಕಂಪನಿಗಳಿಗೆ ಇಡೀ ಇಂಟರ್ನೆಟ್ಟನ್ನೇ ನಿರ್ಬಂಧಿಸುವ ಶಕ್ತಿಯಿದೆಯೆಂದರೆ ನಂಬುತ್ತೀರಾ? ಇಲ್ಲಿ ಕೇಳಿ. ನಮ್ಮ ನಮ್ಮ ದೇಶದ ಟೆಲಿಕಾಂ ಕಂಪನಿಗಳಿಗೆ ನಾವು ISP (Internet Service Providers) ಎಂದು ಕರೆಯುತ್ತೇವೆ. ಈ ISPಗಳು ನೇರವಾಗಿ ತಾವೇ ಅಂತರ್ಜಾಲವನ್ನು ನಿಮಗೆ ಒದಗಿಸುವುದಿಲ್ಲ. ಇವುಗಳಿಗೂ ಸೇವೆ ಒದಗಿಸುವ ಕೆಲ ಸಂಸ್ಥೆಗಳಿವೆ. ಇವನ್ನು upstream ISPಗಳೆನ್ನುತ್ತಾರೆ. ಅಂತರ್ಜಾಲ ಪ್ರಾರಂಭವಾದಾಗಲಿಂದಲೂ ಈ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದರಿಂದ, ಅಂತರ್ಜಾಲದ ಪರಿಕಲ್ಪನೆಯನ್ನು ನಿಜವಾಗಿಸಿದ್ದೇ ಈ ಕಂಪನಿಗಳಾದ್ದರಿಂದ, ಹಾಗೂ ಇವತ್ತಿನ ಅಂತರ್ಜಾಲದ ಎಲ್ಲಾ ತಂತ್ರಜ್ಞಾನಗಳೂ ಈ ಕಂಪನಿಗಳಿಂದಲೇ ಉಗಮವಾದ್ದರಿಂದ ಇಡೀ ಅಂತರ್ಜಾಲದ ಬೆನ್ನೆಲುಬಾಗಿ ಈ ಕಂಪನಿಗಳು ಕಾರ್ಯನಿರ್ವಹಿಸುತ್ತವೆ. ಇವುಗಳಲ್ಲಿ ಅತ್ಯಂತ ಮುಖ್ಯವಾದವುಗಳು:

(*) UUNET
(*) Verizon
(*) Level3
(*) AT&T
(*) Qwest
(*) Sprint
(*) IBM

ಅಂತರ್ಜಾಲದ ಪ್ರತಿಯೊಂದು ಬೈಟ್ ಮಾಹಿತಿ ಹರಿಯುವುದೇ ಇವುಗಳ ಮೂಲಕ. ಇವು ಯಾವಾಗ ಬೇಕಾದರೂ ನಿಮ್ಮ ಅಂತರ್ಜಾಲದ ಬಾಗಿಲನ್ನು ಮುಚ್ಚಬಲ್ಲವು. ಆದರೆ, ಹಾಗಾಗುವ ಸಾಧ್ಯತೆ ಕಡಿಮೆ. ಯಾಕೆಂದರೆ, ಇವೆಲ್ಲವೂ ಬಂಡವಾಳಶಾಹಿ ಕಂಪನಿಗಳಾದ್ದರಿಂದ, ಇವುಗಳ ಆದಾಯವೂ ಅಂತರ್ಜಾಲದಿಂದಲೇ ಬರುತ್ತಿರುತ್ತದೆ. ಇವುಗಳಲ್ಲಿ ಯಾವ ಕಂಪನಿಯೂ ಅಂತರ್ಜಾಲವನ್ನು ನಿಲ್ಲಿಸಹೋಗಿ ತನ್ನ ಕಾಲಿಗೆ ತಾನೇ ಗುಂಡು ಹೊಡೆದುಕೊಳ್ಳುವ ಕೆಲಸ ಮಾಡಲಾರದು. ಹಾಗೂ ಈ ಕಂಪನಿಗಳು ವ್ಯಾವಹಾರಿಕ ಕಾಯ್ದೆಯಡಿಯಲ್ಲಿ ಬರುವುದರಿಂದ ಸರ್ಕಾರಗಳು ಮತ್ತು ಗ್ರಾಹಕರು ಇವನ್ನು ನಿಯಂತ್ರಿಸಬಹುದು.

ಆದರೆ, ಅಂತರ್ಜಾಲವನ್ನು ನಿಯಂತ್ರಿಸುವಲ್ಲಿ ಇವುಗಳಷ್ಟೇ ಮುಖ್ಯವಾದ ಇನ್ನೂ ಕೆಲವು ಅಂಗಗಳಿವೆ. ಅಂತರ್ಜಾಲದ ಆವಿಷ್ಕಾರವಾದಾಗ (ಅದಿನ್ನೂ ARPANET ಎಂದು ಕರೆಯಲ್ಪಡುತ್ತಿದ್ದಾಗ) ಅದನ್ನು ಒಂದೇ ಸಂಸ್ಥೆ ನಿರ್ವಹಿಸುತ್ತಿತ್ತು. ಆದರೆ, ನಿಧಾನವಾಗಿ ಬೇರೆ ಬೇರೆ ಅಂಗಗಳು ARPANETನೊಂದಿಗೆ ಸೇರಲಾರಂಭಿಸಿದಾಗ, ಇದರ ಕ್ಲಿಷ್ಟತೆ ಹೆಚ್ಚುತ್ತಾ ಹೋಯಿತು. ಹಾಗೂ ಕೆಲವೊಮ್ಮೆ ಈ ಅಂಗಸಂಸ್ಥೆಗಳು ಬೇರೆ ದೇಶಗಳಿಗೆ ಸೇರಿದವುಗಳಾಗಿದ್ದವು. ಅಂತರ್ಜಾಲ ಬೆಳೆಯುತ್ತಿರುವ ವೇಗ ನೋಡಿದ ಕೆಲ ತಜ್ಞರು ಇದನ್ನು ತಹಬಂದಿಯಲ್ಲಿಡಲು ಒಂದಷ್ಟು ನಿಯಮಾವಳಿಗಳನ್ನು ರೂಪಿಸಬೇಕೆಂಬ ಅಭಿಪ್ರಾಯಕ್ಕೆ ಬಂದರು. ಅಷ್ಟೇ ಅಲ್ಲದೆ, ಅಂತರ್ಜಾಲ ಬೆಳೆಯಲಾರಂಭಿಸಿದಂತೆ ಒಂದೇ ಹೆಸರಿನ ಹಲವು ಅಂತರ್ಜಾಲ ಪುಟಗಳು ಬರಲಾರಂಭಿಸಿದವು. ನೆನಪಿರಲಿ, ಕಂಪ್ಯೂಟರುಗಳಿಗೆ ನಾನು ನೀವು ಮಾತನಾಡುವ ಭಾಷೆ ಅರ್ಥವಾಗುವುದಿಲ್ಲ. ಅವಕ್ಕೇನಿದ್ದರೂ ಅಂಕಿಸಂಖ್ಯೆಗಳಷ್ಟೇ ಅರ್ಥವಾಗುವುದು. ನೀವು http://www.businessinsider.com ಎಂದು ಬರೆದದ್ದು ಅವಕ್ಕೆ 64.27.101.155 ಎಂದೇ ಅರ್ಥವಾಗುವುದು. ಹೀಗಿದ್ದಾಗ ಪ್ರತಿಯೊಂದು ಅಂತರ್ಜಾಲ ಪುಟಕ್ಕೆ ಅದರದ್ದೇ ಆದ ಸಂಖ್ಯಾವಿಳಾಸ (numeric address) ಇರಬೇಕಲ್ಲವೇ? ಇದನ್ನು ನಿರ್ಧರಿಸುವುದ್ಯಾರು? ಅದಕ್ಕಾಗಿಯೇ, ಜಗತ್ತಿನಲ್ಲಿ ಕೆಲ ಸಂಸ್ಥೆಗಳಿವೆ. ಇವು ಅಂತರ್ಜಾಲದ ನಿಯಾಮಾವಳಿಗಳನ್ನು (protocols) ರೂಪಿಸುತ್ತವೆ, ಅಂತರ್ಜಾಲದಲ್ಲಿ ಮಾಹಿತಿಗಳು ಹೇಗೆ ಹರಿದಾಡಬೇಕೆಂದು ನಿರ್ಧರಿಸುತ್ತವೆ, ಹಾಗೂ ಪ್ರತಿಯೊಂದು ಅಂತರ್ಜಾಲ ಪುಟಕ್ಕೂ ಸಂಖ್ಯಾನಾಮಕರಣ ಮಾಡುತ್ತವೆ. Internet Engineering Task Force, ICANN, National Science Foundation, InterNIC, Internet Architecture Board ಈ ಸಂಸ್ಥೆಗಳು. ಇವೆಲ್ಲವೂ ಯಾವುದೇ ಲಾಭಕ್ಕಾಗಿ ನಡೆಯುವ ಸಂಸ್ಥೆಗಳಲ್ಲ. ಉತ್ತಮವಾದ ಅಂತರ್ಜಾಲ ಅನುಭವ ನೀಡುವ ನಿಟ್ಟಿನಲ್ಲಿ ಕೆಲಸಮಾಡುವ nonprofit organisationಗಳು. ಯಾರೋ ಪ್ರೋಗ್ರಾಮರ್ ಮೌಟನ್-ವ್ಯೂನಲ್ಲಿ ಕುಳಿತು ತನ್ನ ವಿಂಡೋಸ್ ಕಂಪ್ಯೂಟರಿನಲ್ಲಿ http ನಿಯಮದಡಿ ಬರೆದ ಅರಬ್ಬೀ ಭಾಷೆಯ ಅಂತರ್ಜಾಲ ಪುಟವೊಂದು, ಐಬಿಎಂನ ಡೇಟಾ ಸೆಂಟರುಗಳ ಮೂಲಕ ಹಾದು, AT&Tಯ ಕೇಬಲ್ಲುಗಳಲ್ಲಿ ಹರಿದು, ಕಝಕಿಸ್ಥಾನದ kaznetನ ಕೇಬಲ್ಲು ತಲುಪಿ, ಅಲ್ಲಿನ ಗ್ರಾಹಕನೊಬ್ಬನ ಆಡ್ರಾಯ್ಡ್ ಫೋನಿನಲ್ಲಿ ಒಪೇರಾ ಬೌಸರಿನಲ್ಲಿ ನೋಡಿದರೂ ಮೂಲರೂಪದಲ್ಲೇ ದೊರಕುವ ‘ಅಂತರ್ಜಾಲ ಪಯಣ’ದಲ್ಲಿ ಒಂದೇ ಒಂದು ಬೈಟ್ ದತ್ತಾಂಶ ಕಳೆದುಹೋಗದಂತೆ ಮಾಡುವಲ್ಲಿ ಈ ಸಂಸ್ಥೆಗಳ ಪಾತ್ರ ಬಹು ದೊಡ್ಡದು.

1998ರಲ್ಲಿ ಪ್ರಾರಂಭವಾದ ICANN (Internet Corporation for Assigned Names and Numbers)ದ ಮುಖ್ಯ ಕೆಲಸ ಅಂತರ್ಜಾಲ ಪುಟಗಳಿಗೆ ತನ್ನದೇ ಆದ ವಿಶಿಷ್ಟ ಸಂಖ್ಯಾವಿಳಾಸ ನಿಯೋಜಿಸುವುದು. ಅಂದರೆ http://www.hotmail.com ಹಾಗೂ http://www.hotmale.com ಎರಡಕ್ಕೂ ವ್ಯತ್ಯಾಸ ಇರುವಂತೆ ನೋಡಿಕೊಳ್ಳುವುದು 😉 ಅಂದರೆ, ಯಾವುದೋ ಒಂದು ಫೋನು ಡಯಲ್ ಮಾಡಿದಾಗ ‘ಆ’ ನಂಬರಿಗೇ ಕರೆಹೋಗುವಂತೆ ಹೇಗೆ ಟೆಲಿಫೊನು ಎಕ್ಸ್ಚೇಂಜುಗಳು ನೋಡಿಕೊಳ್ಳುತ್ತವೋ, ಹಾಗೆಯೇ ICANN ಒಂದು ಇಂಟರ್ನೆಟ್ ಡೈರೆಕ್ಟರಿ ಇದ್ದಹಾಗೆ. ಎಲ್ಲ ಅಂತರ್ಜಾಲ ಪುಟಗಳ ನಂಬರುಗಳನ್ನು ಇಟ್ಕೊಂಡಿರುತ್ತೆ, ಹಾಗೂ ಒಂದೇ ಪೋನ್ ನಂಬರ್ ಇಬ್ಬರಿಗೆ ಸಿಗದಿರುವ ಹಾಗೆ ನೋಡಿಕೊಳ್ಳುತ್ತೆ. ಇದೇ ಅಲ್ಲದೆ ಈ ಸಂಸ್ಥೆ ಅಂತರ್ಜಾಲವನ್ನು ಸ್ಥಿರವಾಗಿ ನಿಲ್ಲುವಂತೆ ಮಾಡುವಲ್ಲಿ, ನಮ್ಮ ನಿಮ್ಮ ಮಧ್ಯದ ಕನೆಕ್ಷನ್ ಮುರಿದುಹೋಗದಿರುವಂತೆ ನೋಡಿಕೊಳ್ಳುವಲ್ಲಿ ಕೂಡಾ ಮಹತ್ವದ ಪಾತ್ರವಹಿಸುತ್ತದೆ.

ಈಗ ವಿಷಯಕ್ಕೆ ಬರೋಣ. ಯಾರಾದರೂ ಕಂಪ್ಯೂಟರ್ ಕಿಲಾಡಿ ICANN ಸಂಸ್ಥೆಯ ಡೇಟಾಬೇಸಿಗೆ ಲಗ್ಗೆ ಹಾಕಿ ಇಡೀ ಅಂತರ್ಜಾಲವನ್ನು ನಿಯಂತ್ರಿಸಬಹುದು ಮತ್ತು ಅಂತರ್ಜಾಲ ಕುಸಿದುಬೀಳಲೂ ಕಾರಣನಾಗಬಹುದು. ಹೇಗೆ ಅಂತೀರಾ? ಇದರ ಡೇಟಾಬೇಸಿಗೆ ಹೋಗಿ ನಿಜವಾದ ಬ್ಯಾಂಕ್ ವೆಬ್ಸೈಟಿನ ಬದಲು ನಕಲಿ ವೈಬ್ಸೈಟಿಗೆ ಗ್ರಾಹಕರನ್ನು ಕಳಿಸಿ, ದುಡ್ಡು ಲಪಟಾಯಿಸಬಹುದು. ಗೂಗಲ್ ಅಂತಾ ಟೈಪಿಸಿದವರನ್ನು ಇನ್ಯಾವುದೋ ಅಶ್ಲೀಲ ವೆಬ್ಸೈಟಿಗೆ ಕಳುಹಿಸಿ ಮುಜುಗರವನ್ನುಂಟು ಮಾಡಬಹುದು ಇತ್ಯಾದಿ ಇತ್ಯಾದಿ. ಅಂದರೆ, ಈ ಕಂಪನಿಯ ಡೇಟಾಬೇಸೇ ಅಂತರ್ಜಾಲಕ್ಕೆ ಹೆಬ್ಬಾಗಿಲಿದ್ದಂತೆ!!

ಹೀಗೇನಾದರೂ ಆಗಿ (ಅಥವಾ ಜಗತ್ತಿನಲ್ಲೇದರೂ ಅನಿರೀಕ್ಷಿತ ವಿಪತ್ತು ಘಟಿಸಿ) ಅಂತರ್ಜಾಲವೇ ಕುಸಿದುಬಿದ್ದರೆ, ಮತ್ತೆ ಅದನ್ನು ಕಟ್ಟಲು ಬಹಳಷ್ಟು ಸಮಯ ಬೇಕಾಗುತ್ತದೆ. ಹೀಗಿದ್ದಾಗ, ICANN ತನ್ನಲ್ಲಿರುವ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿ ಕಾಯ್ದಿಡಬೇಕು (ಅಂದರೆ ಹೆಚ್ಚು ಜನರಿಗೆ ತಿಳಿಯದಂತೆ) ಆದರೆ ಹಾಗಂತ ಒಬ್ಬರಿಗೇ ಇದರ ಕೀಲಿಕೈ ಕೊಟ್ಟರೆ ಅದೂ ಕಷ್ಟ. ಒಳ್ಳೇ ಪೀಕಲಾಟಕ್ಕೆ ಬಂತಲ್ಲಾಪ್ಪಾ! ಇದಕ್ಕಾಗಿಯೇ ICANN ತನ್ನ ಡೇಟಾಬೇಸ್ ಅನ್ನು ಅತ್ಯಂತ ಸುರಕ್ಷತೆಯಿಂದ ಕಾಯಲು ಹಾಗೂ ಅದರ ನಿಯಂತ್ರಣ ಒಬ್ಬನೇ ವ್ಯಕ್ತಿಯಲ್ಲಿ ಇರದಿರುವಂತೆ ನೋಡಿಕೊಳ್ಳಲು ಅನುಕೂಲವಾಗುವಂತೆ ಒಂದು ಕೆಲಸ ಮಾಡಿದೆ. ಅದೇನೆಂದರೆ ಜಗತ್ತಿನಾದ್ಯಂತ ಬೇರೆ ಬೇರೆ ದೇಶದಲ್ಲಿ ಹರಡಿ ಹೋಗಿರುವ ಏಳುಜನರನ್ನು ಆರಿಸಿ ಅವರಿಗೊಂದೊಂದು ‘ಅಂತರ್ಜಾಲದ ಕೀಲಿಕೈ’ಯನ್ನು ಕೊಟ್ಟಿದೆ. ಕೀಲಿಕೈಯೆಂದರೆ ಪಾಸ್ವರ್ಡ್ ಅಲ್ಲ. ನಿಜವಾದ ಕೀಲಿಕೈ!! ಈ ಏಳು ಜನರಿಗೆ ಒಬ್ಬೊಬ್ಬರು ಬ್ಯಾಕ್-ಅಪ್ ಇದ್ದಾರೆ. ಅಂದರೆ ಈ ಒಟ್ಟು ಹದಿನಾಲ್ಕು ಜನರ ಹತ್ತಿರ ಅಂತರ್ಜಾಲದ ಕೀಲಿಕೈ ಇರುತ್ತದೆ. ವರ್ಷದಲ್ಲಿ ನಾಲ್ಕು ಬಾರಿ ಈ ಹದಿನಾಲ್ಕು ಮಂದಿ ಅಮೇರಿಕಾದ ಪೂರ್ವತೀರ ಮತ್ತು ಪಶ್ಚಿಮ ತೀರದಲ್ಲಿ ಸೇರಿ, ಈ ಕೀಲಿಕೈಯನ್ನು ಬದಲಾಯಿಸುತ್ತಾರೆ. ಅಂತರ್ಜಾಲವನ್ನು ಸುರಕ್ಷಿತವಾಗಿಡಲು ಈ ನಿಯಮವನ್ನು 2010ರಿಂದ ICANN ಪಾಲಿಸಿಕೊಂಡು ಬಂದಿದೆ.

ಈ ಏಳು ಜನ ಯಾರ್ಯಾರೋ ದಾರಿಹೋಕರಲ್ಲ. ಬದಲಿಗೆ ಅಂತರರ್ಜಾಲ ಸುರಕ್ಷತೆಗಾಗಿ ಶ್ರಮಿಸಿ, ಅದರಲ್ಲಿ ಅಪಾರ ಜ್ಞಾನವುಳ್ಳವರೂ ಹಾಗೂ ಬೇರೆ ಬೇರೆ ಅಂತರ್ಜಾಲ ಸಂಬಂಧಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದವರಾಗಿರುತ್ತಾರೆ. ಇವರ ಆಯ್ಕೆ ಪ್ರಕ್ರಿಯೆ ಹಾಗೂ ಕೀಲಿಕೈ ಮಾರ್ಪಾಡುವಿಕೆಯ ಕೆಲಸ ಅತ್ಯಂತ್ಯ ಗೌಪ್ಯವಾಗಿ ನಡೆಯುತ್ತದೆ. ವರ್ಷಕ್ಕೆ ನಾಲ್ಕುಬಾರಿ ನಡೆಯುವ ಕೀ ಬದಲಾವಣೆಯ ಗೌಪ್ಯ ಕಾರ್ಯಕ್ರಮಕ್ಕೆ ‘key ceremony’ ಎಂದೇ ಹೆಸರು. ಈವರೆಗೆ ಎರಡು ಬಾರಿ ಈ ಕಾರ್ಯಕ್ರಮದ ವೀಕ್ಷಣೆಗೆ ಕೆಲ ಪತ್ರಕರ್ತರನ್ನೂ ಆಹ್ವಾನಿಸಲಾಗಿದೆ ಹಾಗೂ ಇದರ ಬಗ್ಗೆ ಬರೆದಿದ್ದಾರೋ ಅದಷ್ಟೇ ನಮಗೆ ತಿಳಿದಿರುವ ವಿಷಯ.

Key ceremoneyಯ ದಿನ ಒಂದೆಡೆ ಸೇರುವ ಈ ಏಳೂ ಜನರನ್ನು ಒಂದು ಅತೀವ ಸುರಕ್ಷತೆಯ ಕೋಣೆಯಲ್ಲಿ ಸೇರಿಸಲಾಗುತ್ತದೆ. ಆ ಕೋಣೆಗೆ ಹೋಗುವ ಮುನ್ನ ಬಹಳಷ್ಟು ಸುರಕ್ಷತಾ ಬಾಗಿಲುಗಳನ್ನು ದಾಟಿಯೇ ಹೊಗಬೇಕು. ಕೀಗಳು, ಫಿಂಗರ್ ಪ್ರಿಂಟ್, ಆಕ್ಸೆಸ್ ಕಾರ್ಡ್, ಐರಿಸ್ ಸ್ಕ್ಯಾನ್ ಮುಂತಾದ ಹಂತಗಳನ್ನು ದಾಟಿ ಆ ceremony ನಡೆಯುವ ಕೋಣೆಗೆ ತಲುಪುವ ಈ ‘ಅಂತರ್ಜಾಲ ವಾರಸುದಾರರು’ ತಂತಮ್ಮ ಕೀಗಳಿಂದ ಒಂದೊಂದ್ ಲಾಕರ್ ಡಬ್ಬವನ್ನು ತೆರೆಯುತ್ತಾರೆ. ಅದರೊಳಗೆ ಇಟ್ಟಿರುವ ತಂತಮ್ಮ ಸ್ಮಾರ್ಟ್-ಕಾರ್ಡುಗಳನ್ನು ತೆಗೆದುಕೊಳ್ಳುತ್ತಾರೆ. ಅವುಗಳನ್ನು ಉಪಯೋಗಿಸಲೂ ಒಂದೊಂದು ಪಾಸ್ವರ್ಡುಗಳನ್ನು ಆ ಕಾರ್ಡುಗಳ ಬಳಕೆದಾರರೇ ನಿರ್ಧರಿಸುತ್ತಾರೆ. ಈ ಏಳೂ ಸ್ಮಾರ್ಟ್ ಕಾರ್ಡುಗಳನ್ನು ಒಟ್ಟಿಗೆ ಉಪಯೋಗಿಸಿದಾಗ ಅಂತರ್ಜಾಲದ ಮಹಾದ್ವಾರವನ್ನು ತೆಗೆಯುವ ‘ಮಾಸ್ಟರ್ ಕೀ’ ದೊರೆಯುತ್ತದೆ. ಅದನ್ನು ಜನರೇಟ್ ಮಾಡಲೂ ಸುಮಾರು ನೂರಾಏಳು ಹಂತಗಳ ಕ್ರಮಸೂಚಿಯಿದೆ. ಇದೆಲ್ಲಾ ನಡೆಯುವುದು ಸುಮಾರು ಒಂಬತ್ತು ಜನ ನಿಲ್ಲಬಹುದಾದ ಸಣ್ಣ ಪಂಜರದಲ್ಲಿ ಹಾಗೂ ಒಂದಿಪ್ಪತು ಜನ ಕೂರಬಹುದಾದ ಸಣ್ಣ ಕೋಣೆಯಲ್ಲಿ. ಈ ಮಾಸ್ಟರ್ ಕೀ ಒಂದು ಪಾಸ್ವರ್ಡ್ ತರಹದ್ದೇನೋ ಆಗಿರುತ್ತದೆ. ಈ ಪಾಸ್ವರ್ಡ್ ಬಳಸಿದರೆ ಮಾತ್ರ ಮುಖ್ಯ ಡೇಟಾಬೇಸ್ ಅನ್ನು ಉಪಯೋಗಿಸಲು ಸಾಧ್ಯ.

ಓಹೋ ಸರಿ ಸರಿ. ಒಂದುವೇಳೆ ಈ ಮಾಸ್ಟರ್ ಕೀ ಜನರೇಟ್ ಮಾಡುವ ಯಂತ್ರವೇ ಏನಾದರೂ ಕೆಲಸಮಾಡುವುದನ್ನು ನಿಲ್ಲಿಸಿದರೆ ಏನು ಮಾಡುತ್ತಾರೆ ಅಂತಾ ಕೇಳ್ತೀರಾ? ICANN ಅದಕ್ಕೂ ಒಂದು ವ್ಯವಸ್ಥೆ ಮಾಡಿದೆ. ಅದೇನೆಂದರೆ, ಜಗತ್ತಿನಾದ್ಯಂತ ಹರಡಿಹೋಗಿರುವ ಇನ್ನೂ ಏಳು ಜನ ಈ ಇಡೀ ವ್ಯವಸ್ಥೆಗೆ ಸೂಪರ್ ಬ್ಯಾಕ್-ಅಪ್ ಆಗಿ ನಿಲ್ಲುವಂತಹ ವ್ಯವಸ್ಥೆ. ಒಂದು ವೇಳೆ ಈ ಮಾಸ್ಟರ್ ಕೀ ಜನರೇಟ್ ಮಾಡುವ ಯಂತ್ರ ಕೆಲಸಮಾಡುವುದನ್ನು ನಿಲ್ಲಿಸಿದರೆ, ಅಥವಾ ಏನಾದರೂ ಅವಘಡ ಸಂಭವಿಸಿದರೆ, ಅದನ್ನು ಪುನಃ ರಚಿಸಲು ಬೇಕಾಗುವ ಕಂಪೂಟರ್ ಪ್ರೋಗ್ರಾಮ್ ಅನ್ನು ಏಳು ಭಾಗಗಳಾಗಿ ವಿಂಗಡಿಸಿ ಈ ಏಳು ಜನರ ಮಧ್ಯೆ ಹಂಚಲಾಗಿದೆ. ಒಂದುವೇಳೆಯೇನಾದರೂ ICANNನ ಆಫೀಸೇನಾದರೂ ನಿರ್ನಾಮವಾದರೆ ಇನ್ನೊಂದು ಕಡೆ ಈ ಯಂತ್ರವನ್ನು ಪುನರ್ನಿಮಿಸಲು ಈ ಏಳು ಜನ ಒಂದಾಗುತ್ತಾರೆ. ವರ್ಷಕ್ಕೊಮ್ಮೆ ಈ ಏಳು ಜನ ತಾವು ಸುರಕ್ಷಿತವಾಗಿದ್ದೇವೆ ಹಾಗೂ ‘ಎಲ್ಲವೂ ಸರಿಯಿದೆ’ ಎಂದು ನಿರೂಪಿಸಲು, ತಮ್ಮ ಒಂದು ಭಾವಚಿತ್ರ, ಅಂದಿನ ದಿನಪತ್ರಿಕೆ ಮತ್ತು ತಮ್ಮ ಕೀ (ಕೋಡ್) ಅನ್ನು ICANN ಆಫೀಸಿಗೆ ಕಳಿಸುತ್ತಾರೆ. ಹೇಗಿದೆ ವ್ಯವಸ್ಥೆ!?

ಇದರ ಬಗ್ಗೆ ಹೆಚ್ಚಿನ ಆಸಕ್ತಿಯಿದ್ದರೆ, http://bit.ly/1pDUq3g ಇಲ್ಲಿ ಕ್ಲಿಕ್ಕಿಸಿ. ಅಲ್ಲೊಂದು ಸಣ್ಣ ವಿಡಿಯೋ ಕೂಡಾ ಇದೆ. ಇತ್ತೀಚೆಗೆ ನಡೆದ key ceremoneyಯೊಂದರ ದೃಶ್ಯ ತುಣುಕು ಕೂಡಾ ಇದೆ. ಓದಿ….ನೋಡಿ.

ಇಷ್ಟೆಲ್ಲಾ ಸರ್ಕಸ್ಸು ನಡೆಯುವುದು ನಾವು ನೀವು ನಿರಂತರವಾಗಿ ಅವಲಂಬಿತವಾಗಿರುವ ಅಂತರ್ಜಾಲವನ್ನು ಸುರಕ್ಷಿತವಾಗಿಸಲು ಹಾಗೂ ಅದರ ಮೇಲೆ ನಾವಿಟ್ಟಿರುವ ನಂಬಿಕೆಯನ್ನು ಹಾಗೆಯೇ ನಿಲ್ಲಿಸುವುದಕ್ಕಾಗಿ. ಜನರ ಜೀವನಗಳನ್ನು, ದೇಶಗಳ ಸರ್ಕಾರಗಳನ್ನು, ಜಗತ್ತಿನ ಇತಿಹಾಸವನ್ನೇ ಬದಲಾಯಿಸುವಷ್ಟರಮಟ್ಟಿಗೆ ಶಕ್ತಿಶಾಲಿಯಾಗಿರುವ ಅಂತರ್ಜಾಲವನ್ನು ನಂಬಿಕಾರ್ಹ ವೇದಿಕೆಯಾಗಿ ಉಳಿಸುವುದಕ್ಕಾಗಿ. ನಾವು ಇವೆಲ್ಲರ ತಲೆಬಿಸಿಯೇ ಇಲ್ಲದೆ, ಸುಮ್ಮನೆ ಗೂಗಲ್ಲಿಗೆ ಹೋಗಿ ನಮಗೆ ಬೇಕಾದ ವಿಷಯವನ್ನು ಟೈಪಿಸುತ್ತೇವೆ. ಅದು ಉತ್ತರಗಳನ್ನು ಕೊಡುತ್ತದೆ. ನಾವು ಅದನ್ನೇ ನಂಬಿ ಕ್ಲಿಕ್ಕಿಸುತ್ತೇವೆ. ಅಲ್ಲಿ ಏನಿದೆಯೋ ಇಲ್ಲವೋ ಒಂದೂ ಗೊತ್ತಿಲ್ಲದೆ ಗುರುತು ಪರಿಚಯವಿರದ ಹುತ್ತಕ್ಕೆ ಕೈ ಹಾಕುತ್ತೇವೆ. ಅದನ್ನೆಲ್ಲಾ ನಂಬಿಕಾರ್ಹವಾಗಿ ಉಳಿಸುವುದು ICANNನಂತಹ ಕೆಲ ಸಂಸ್ಥೆಗಳು. ಅವರಿಗೊಂದು ಸಣ್ಣ ಥಾಂಕ್ಸ್ ಕೊಡಲೇ ಬೇಕಲ್ಲವೇ?

 

ಚಿತ್ರಕೃಪೆ: ಆರೋನ್ ಟಿಲ್ಲಿ
Image courtesy: Aaron Tilley

Advertisements

ಬುದ್ಧಿಗೊಂದು ಗುದ್ದು – ೨೫

ಆಕಸ್ಮಿಕ ಹಾಗೂ ಸಾಮ್ಯತೆಗಳ ಲೋಕದಲ್ಲಿ ಇನ್ನೊಂದು ಸುತ್ತು, ಹಾಗೂ ಲಿಂಕನ್-ಕೆನಡಿ ಕನೆಕ್ಷನ್ನು!

ಹೋದಸಲ ಅವಳಿಜವಳಿಗಳ ಅದ್ಭುತವೊಂದರ ಬಗ್ಗೆ ಬರೆದಿದ್ದೆ. ಅದರ ಬಗ್ಗೆಯೇ ಹಾಗೆಯೇ ಯೋಚಿಸುತ್ತಿರಬೇಕಾದರೆ ಕೆಲವೊಮ್ಮೆ ಕಾಕತಾಳೀಯಗಳೂ ಎಷ್ಟೊಂದು ಅಶ್ಚರ್ಯಕರವಾಗಿ ಸಂಭವಿಸಬಲ್ಲವಲ್ಲವೇ ಎಂದೆನ್ನಿಸಿತು. ಹಾಗೆಯೇ ಯಾವಾಗಲೋ ಕಾಲೇಜಿನಲ್ಲಿ ಒಂದು ಹುಡುಗಿಯ (ಹಸಿರು ಲಂಗದವಳಲ್ಲ ) ಹಿಂದೆ ಬಿದ್ದಿದ್ದಾಗ ಬರೆದಿದ್ದ

‘ನಿನ್ನ ಭೇಟಿಯಾದ ಮೇಲೆ,
ನಮ್ಮ ಪ್ರೀತಿ ಹುಟ್ಟಿದ ಮೇಲೆ,
ಆಕಸ್ಮಿಕಗಳೂ ಇಷ್ಟು ಅರ್ಥಪೂರ್ಣವಾಗಿರಬಲ್ಲವೇ? ಎಂದೆನ್ನಿಸಿತು.
ನಮ್ಮ ಜೀವನವೇ ಅರ್ಥಪೂರ್ಣ ಆಕಸ್ಮಿಕಗಳ ಸರಮಾಲೆಯೇ?
ಎಂಬ ಪ್ರಶ್ನೆ ಕಾಡಿತು’

ಎಂಬ ಹುಚ್ಚು ಕವಿತೆಯ ಸಾಲೂ ಸಹ ನೆನಪಾಯಿತು. ಇಂತಹ ಆಕಸ್ಮಿಕಗಳ ಬಗ್ಗೆ ಯೋಚಿಸುತ್ತಿದ್ದಾಗ ನನಗೆ ನೆನಪಾಗಿದ್ದು, ಅಮೇರಿಕಾದ ಇಬ್ಬರು ಜನಪ್ರಿಯ ನಾಯಕರುಗಳಾದ ಅಬ್ರಹಾಂ ಲಿಂಕನ್ ಹಾಗು ಜಾನ್ ಕೆನಡಿಯ ಸಾವಿನ ಸುತ್ತಮುತ್ತವಿದ್ದ ಆಕಸ್ಮಿಕಗಳ ಸಾಲುಸಾಲು ಪಟ್ಟಿ! ಹೋದಬಾರಿ ಹುಟ್ಟು ಹಾಗೂ ಜೀವನದ ಸಾಮ್ಯತೆಯ ಬಗ್ಗೆ ಬರೆದಿದ್ದವನಿಗೆ ಇಲ್ಲಿ ಜೀವನದ ಮತ್ತು ಮರಣದ ಸುತ್ತಮುತ್ತಲಿದ್ದ ಸಾಮ್ಯತೆಯ ಬಗ್ಗೆ ಬರೆಯೋಣವೆಂದಿನೆಸಿದ್ದು ಸಹಜವೇ ಅಲ್ಲವೇ?

ಅಬ್ರಹಾಂ ಲಿಂಕನ್ ಮತ್ತು ಜಾನ್ ಕೆನಡಿ ಅಮೇರಿಕಾದ ವರ್ಚಸ್ವೀ ನಾಯಕರುಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಅಮೇರಿಕಾ ಸಂಯುಕ್ತ ಸಂಸ್ಥಾನದ ಆಂತರಿಕ ಕಲಹದ ಸಮಯದಲ್ಲಿ ದೇಶವನ್ನು ಮುನ್ನಡೆಸಿ ಒಂದುಗೂಡಿಸಿದ ಖ್ಯಾತಿ ಲಿಂಕನ್’ಗೆ ಸಲ್ಲಿದರೆ, ಕೆನಡಿ ತಮ್ಮ ಬೇ ಆಫ್ ಪಿಗ್ಸ್ ಆಕ್ರಮಣ, ಶೀತಲ ಹಾಗೂ ಅಂತರಿಕ್ಷ ಸಮರ ಹಾಗೂ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ಸಮಯದಲ್ಲಿ ದೇಶವನ್ನು ಮುನ್ನಡೆಸಿದರು. ಇಬ್ಬರೂ ಸಹ ಸಾಮಾಜಿಕ ಸುಧಾರಣೆಗಳಿಗಾಗಿ ಹಾಗೂ ನಾಗರೀಕ ಹಕ್ಕುಗಳಿಗಾಗಿ ಹೋರಾಡಿದರು. ಇವರಿಬ್ಬರ ಜೀವನ, ಸಾಧನೆಗಳು, ಸಾವು ಹಾಗೂ ಅದರ ಸುತ್ತಲಿನ ವಿಷಯಗಳು ಕೂಡ ನನ್ನ ಹಿಂದಿನ ಲೇಖನದಲ್ಲಿದ್ದಂತೆಯೇ ಬಹಳಷ್ಟು ಸಾಮ್ಯತೆಯಿಂದ ಕೂಡಿತ್ತು ಎನ್ನುವುದೇ ವಿಶೇಷ. ಆ ಸಾಮ್ಯತೆಗಳೇನೆಂದರೆ:

10690134_746295848793696_7925149320860373224_n

(*) ಇಬ್ಬರೂ ’46ರಲ್ಲಿ ‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ಗೆ ಚುನಾಯಿತರಾದರು (ಲಿಂಕನ್ 1846ರಲ್ಲಿ ಹಾಗೂ ಕೆನಡಿ 1946ರಲ್ಲಿ). ಸರಿಯಾಗಿ ನೂರು ವರ್ಷಗಳ ಅಂತರದಲ್ಲಿ!

(*) ಇಬ್ಬರೂ ’60ರಲ್ಲಿ ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು! (ಲಿಂಕನ್ 1860ರಲ್ಲಿ ಹಾಗೂ ಕೆನಡಿ 1960ರಲ್ಲಿ ಎಂದು ಇನ್ನೊಮ್ಮೆ ಹೇಳಬೇಕಿಲ್ಲ ತಾನೆ )

(*) ಇಬ್ಬರೂ ಸಹ ತಮ್ಮ ಅಧ್ಯಕ್ಷೀಯ ಚುನಾವಣೆಗೆ ಎದುರಾಳಿಯಾಗಿ ಆಗ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದವರನ್ನೇ ಎದುರಿಸಿದರು. ಲಿಂಕನ್ ತನ್ನ ಪ್ರತಿಸ್ಪರ್ಧಿಯಾಗಿ ಜಾನ್ ಬ್ರೆಕೆನ್ರಿಡ್ಜ್ ಅವರನ್ನು ಎದುರಿಸಿದರೆ, ಕೆನಡಿ ಅಂದಿನ ಉಪಾಧ್ಯಕ್ಷರಾಗಿದ್ದ ರಿಚರ್ಡ್ ನಿಕ್ಸನ್ ಅವರನ್ನು ಎದುರಿಸಿದರು!

(*) ಇವರಿಬ್ಬರ ಪೂರ್ವಾಧಿಕಾರಿಗಳೂ ತಮ್ಮ ಎಪ್ಪತ್ತರ ವಯಸ್ಸಿನಲ್ಲಿ ನಿವೃತ್ತಿಹೊಂದಿ, ಮುಂದಿನ ವಾಸಕ್ಕಾಗಿ ಪೆನ್ಸಿಲ್ವೇನಿಯಾಗೆ ತೆರಳಿದರು. ಲಿಂಕನ್ನರ ಪೂರ್ವಾಧಿಕಾರಿ ಜೇಮ್ಸ್ ಬುಕಾನನ್ ನಿವೃತ್ತಿಯ ನಂತರ ಲಾಂಕಾಸ್ಟರಿನಲ್ಲಿ ವಾಸಮಾಡಲು ತೆರಳಿದರೆ, ಕೆನಡಿಯ ಪೂರ್ವಾಧಿಕಾರಿ ಡ್ವೈಟ್ ಐಸನ್ಹೂವರ್ ನಿವೃತ್ತಿಯ ನಂತರ ಗೆಟ್ಟಿಸ್ಬರ್ಗಿಗೆ ತೆರಳಿದರು.

(*) ಈ ಎರಡೂ ಅಧ್ಯಕ್ಷರುಗಳ ಜೊತೆ ಚುನಾಯಿತರಾದ ಉಪಾಧ್ಯಕ್ಷರುಗಳು, ಡೆಮೋಕ್ರಾಟರಾಗಿದ್ದರು ಹಾಗೂ ಅಮೇರಿಕಾ ಸಂಯುಕ್ತ ಸಂಸ್ಥಾನದ ದಕ್ಷಿಣದ ರಾಜ್ಯಗಳಿಂದ ಬಂದವರಾಗಿದ್ದರು. ಇಬ್ಬರ ಹೆಸರೂ ಜಾನ್ಸನ್ ಎಂದೇ ಆಗಿತ್ತು! ಲಿಂಕನ್ ಕಾಲದ ಉಪಾಧ್ಯಕ್ಷರಾಗಿದ್ದ ಆಂಡ್ರ್ಯೂ ಜಾನ್ಸನ್ ಉತ್ತರ ಕ್ಯಾರೋಲೀನಾದವರಾಗಿದ್ದರೆ, ಕೆನಡಿಯವರ ಉಪಾಧ್ಯಕ್ಷರಾಗಿದ್ದ ಲಿಂಡನ್ ಜಾನ್ಸನ್ ಟೆಕ್ಸಾಸಿನವರಾಗಿದ್ದರು!

(*) ಇಬ್ಬರೂ ಉಪಾಧ್ಯಕ್ಷ ಜಾನ್ಸನ್ನರು ’08ರಲ್ಲಿ ಜನಿಸಿದವರಾಗಿದ್ದರು! (ನೂರು ವರ್ಷಗಳ ಅಂತರದಲ್ಲಿ)

(*) ಎರಡೂ ಜಾನ್ಸನ್ನರ ಹೆಸರುಗಳಲ್ಲಿ 6 ಅಕ್ಷರಗಳಿದ್ದವು!

(*) ಇಬ್ಬರೂ ಉಪಾಧ್ಯಕ್ಷರುಗಳು ಅವರ ಕಾಲದ ಅಧ್ಯಕ್ಷರ ಹತ್ಯೆಯ ನಂತರ ’69ರಲ್ಲಿ ಅಮೇರಿಕಾದ ಅಧ್ಯಕ್ಷರಾದರು! ಹಾಗೂ ಈ ಇಬ್ಬರ ಉತ್ತರಾಧಿಕಾರಿಗಳೂ ರಿಪಬ್ಲಿಕನ್ನರಾಗಿದ್ದರು ಮತ್ತು ಅವರ ತಾಯಿಯ ಹೆಸರು ಹನ್ನಾ ಎಂದಾಗಿತ್ತು!

(*) ಇಬ್ಬರೂ ಅಧ್ಯಕ್ಷರ ಕಾಲದಲ್ಲಿ ಆಫ್ರಿಕನ್ ಅಮೇರಿಕನ್ನರ ಹಕ್ಕುಗಳ ಹೋರಾಟ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಹಾಗೂ ಇಬ್ಬರೂ ಅಧ್ಯಕ್ಷರು ಸಮಾನ ಹಕ್ಕುಗಳಿಗಾಗಿ ಶ್ರಮಿಸಿದರು. ಇಬ್ಬರೂ ಸಹ ಈ ವಿಷಯಗಳ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಾ ’63ರಲ್ಲಿ ಕಾನೂನುಗಳನ್ನ್ನು ಜಾರಿಗೊಳಿಸಿದರು. ಲಿಂಕನ್ 1862ರಲ್ಲಿ ತನ್ನ ‘ಗುಲಾಮಗಿರಿ ವಿಮೋಚನಾ ಘೋಷಣೆ’ಗೆ ಸಹಿ ಹಾಕಿ 1863ರಲ್ಲಿ ಅದನ್ನು ಶಾಸನವಾಗಿ ಜಾರಿಗೆ ತಂದರೆ, ಕೆನಡಿ 1963ರಲ್ಲಿ ‘ಸಮಾನ ನಾಗರೀಕ ಹಕ್ಕುಗಳ’ ಹಕ್ಕುಪತ್ರಕ್ಕೆ ಸಹಿಹಾಕಿ ಶಾಸನಬದ್ದಗೊಳಿಸಿದರು! ಅದೇವರ್ಷ ಪ್ರಖ್ಯಾತ ‘ಉದ್ಯೋಗ ಮತ್ತು ಸ್ವತಂತ್ರಕ್ಕಾಗಿ ವಾಷಿಂಗ್ಟನ್ ನಡಿಗೆ’ ನಡೆಯಿತು

(*) ಇಬ್ಬರೂ ಅಧ್ಯಕ್ಷರ ಕೊನೆಯ ಹೆಸರಿನಲ್ಲಿ 7 ಅಕ್ಷರಗಳಿದ್ದವು!

(*) ಇಬ್ಬರೂ ಅಧ್ಯಕ್ಷರ ಅಧಿಕಾರವಧಿಯಲ್ಲಿ ಅವರ ಗಂಡು ಮಗುವೊಂದು ತೀರಿಕೊಂಡಿತ್ತು!

(*) ಇಬ್ಬರೂ ಅಧ್ಯಕ್ಷರೂ ತಮ್ಮ ಹೆಂಡತಿಯರ ಸಮ್ಮುಖದಲ್ಲಿ ಶುಕ್ರವಾರದಂದೇ ಹತ್ಯೆಗೀಡಾದರು. ಆ ಎರಡೂ ಶುಕ್ರವಾರಗಳಿಗಿಂತ ಮುಂಚೆ ಆ ವಾರದಲ್ಲಿ ಮುಖ್ಯವಾದ ಸಾರ್ವಜನಿಕ ರಜಾದಿನಗಳಿದ್ದವು!

(*) ಹತ್ಯೆಯ ದಿನ ಇಬ್ಬರೂ ಅಧ್ಯಕ್ಷರ ಜೊತೆ, ಇನ್ನೊಬ್ಬ ದಂಪತಿಗಳಿದ್ದರು!

(*) ಎರಡೂ ಹತ್ಯೆಗಳಲ್ಲಿ, ಆ ಇನ್ನೊಬ್ಬ ದಂಪತಿಗಳಲ್ಲಿ, ಪುರುಷನಿಗೆ ಗುಂಡೇಟಿನ ಗಾಯವಾಗಿತ್ತು!

(*) ಲಿಂಕನ್ ಅವರನ್ನು ಜಾನ್ ವಿಲ್ಕ್ಸ್ ಬೂತ್ ಎಂಬಾತ ‘ಫೋರ್ಡ್ ಥಿಯೇಟರ್’ನಲ್ಲಿ ಕೊಂದರೆ, ಕೆನಡಿಯನ್ನು ಲೀ ಹಾರ್ವಿ ಒಸ್ವಾಲ್ಡ್ ಎಂಬಾತ ಫೋರ್ಡ್ ಕಂಪನಿಯಿಂದ ತಯಾರಿಸಲ್ಪಟ್ಟ ‘ಲಿಂಕನ್’ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕೊಂದ!

(*) ಲಿಂಕನ್’ಗೆ ಒಬ್ಬ ಕೆನಡಿ ಎಂಬ ಹೆಸರಿನ ಸೆಕ್ರೆಟರಿಯಿದ್ದ, ಹಾಗೂ ಆತ ಲಿಂಕನ್ ಅವರನ್ನು ಹತ್ಯೆಯ ದಿನ ಫೋರ್ಡ್ ಥಿಯೇಟರ್’ಗೆ ಹೋಗದಂತೆ ತಡೆದಿದ್ದ. ಕೆನಡಿಗೆ ಎವಿಲಿನ್ ಲಿಂಕನ್ ಎಂಬ ಹೆಸರಿನ ಸೆಕ್ರೆಟರಿಯಿದ್ದಳು, ಹಾಗೂ ಆಕೆ ಹತ್ಯೆಯ ದಿನ ಡಲ್ಲಾಸ್ ನಗರದ ಬೇಟಿಯನ್ನು ರದ್ದುಮಾಡಲು ಸಲಹೆ ನೀಡಿದ್ದಳು!

(*) ಲಿಂಕನ್ ಅವರನ್ನ್ನು ಕೊಂದನಂತರ ಜಾನ್ ಬೂತ್, ಥಿಯೇಟರಿನಿಂದ ಒಂದು ಗೋದಾಮಿನೊಳಗೆ ಓಡಿದ. ಕೆನಡಿಯನ್ನು ಕೊಂದ ನಂತರ ಲೀ ಓಸ್ವಾಲ್ಡ್, ಗೋದಾಮಿನಿಂದ ಥಿಯೇಟರೊಂದರೊಳಗೆ ಓಡಿದ!

(*) ಇಬ್ಬರೂ ಕೊಲೆಗಾರರು ತಮ್ಮಿಂದ ಕೊಲ್ಲಲ್ಪಟ್ಟವರು ಸತ್ತ ತಿಂಗಳಿನಲ್ಲಿಯೇ ಸತ್ತರು. ಆಶ್ಚರ್ಯವೆಂದರೆ ಇಬ್ಬರೂ ತಾವು ಹುಟ್ಟಿದ ರಾಜ್ಯದ ಪಕ್ಕದ ರಾಜ್ಯದಲ್ಲೇ ಸತ್ತರು!

(*) ಇಬ್ಬರೂ ಕೊಲೆಗಾರರು ಅ.ಸಂ.ಸಂ.ದ ದಕ್ಷಿಣದ ರಾಜ್ಯಗಳಿಂದ ಬಂದವರಾಗಿದ್ದರು. ಇಬ್ಬರೂ ಬಿಳಿಯರೇ. ಇಬ್ಬರೂ ’30ರ ದಶಕದ ಕೊನೆಯಲ್ಲಿ ಹುಟ್ಟಿದವರಾಗಿದ್ದರು ಹಾಗೂ ಕೊಲೆನಡೆದಾಗ ಇಬ್ಬರೂ ತಮ್ಮ ಇಪ್ಪತ್ತರ ಹರೆಯದ ಮಧ್ಯದಲ್ಲಿದ್ದರು!

(*) ಜಾನ್ ಬೂತ್ 1838ರಲ್ಲಿ ಜನಿಸಿದ್ದರೆ, ಲೀ ಓಸ್ವಾಲ್ಡ್ 1939ರಲ್ಲಿ ಜನಿಸಿದ!

(*) ಇಬ್ಬರೂ ಕೊಲೆಗಾರರ ಹೆಸರಿನಲ್ಲಿ ಒಟ್ಟು 15 ಅಕ್ಷರಗಳಿದ್ದವು!

(*) ಇಬ್ಬರೂ ಕೊಲೆಗಾರರು ತಮ್ಮ ಕೇಸಿನ ವಿಚಾರಣೆ ಮುಗಿಯುವ ಮುನ್ನವೇ ಕೊಲೆಗೀಡಾದರು. ಇಬ್ಬರಿಗೂ ತಲೆಗೆ ಗುಂಡಿಕ್ಕಿ ಕೊಲ್ಲಲಾಯಿತು!

(*) ಈ ಕೊಲೆಗಾರರನ್ನು ಕೊಂದವರಿಬ್ಬರೂ ಅಮೇರಿಕದ ಉತ್ತರದಲ್ಲಿ ಬೆಳೆದವರಾಗಿದ್ದರು, ಇಬ್ಬರೂ ವಯಸ್ಕರಾದ ಮೇಲೆ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು ಹಾಗೂ ಇಬ್ಬರೂ ಅವಿವಾಹಿತರಾಗಿದ್ದರು!

10628269_746295642127050_8290037868584641968_n

ಬಹುಷಃ ಕೂದಲು ಸೀಳುತ್ತಲೇ ಹೋದರೆ ಇನ್ನಷ್ಟು ಸಾಮ್ಯತೆಗಳು ಕಂಡುಬರಬಹುದೇನೋ! ಇಷ್ಟಕ್ಕೇ ಇದನ್ನು ನಿಲ್ಲಿಸುತ್ತಿದ್ದೇನೆ

ಜಗತ್ತು ಅದೆಷ್ಟು ಕುತೂಹಲಭರಿತ ಹಾಗೂ ವಿಚಿತ್ರ ವಿಷಯಗಳಿಂದ ತುಂಬಿದೆಯಲ್ಲವೇ!?

ಕೊಸರು: ವೀರಪ್ಪನ್ ಹುಟ್ಟಿದ್ದೂ ಹಾಗೂ ಅವನನ್ನು ಕೊಂದ ಪೋಲೀಸ್ ದಳದ ಮುಖ್ಯಸ್ಥರಾಗಿದ್ದ ಕೆ. ವಿಜಯ್ ಕುಮಾರ್ ಹುಟ್ಟಿದ್ದೂ 1952ರಲ್ಲಿ!