ಬುದ್ಧಿಗೊಂದು ಗುದ್ದು – ೨೪

ಮೂವತ್ತೊಂಬತ್ತು ವರ್ಷಗಳ ನಂತರ ಅರಳಿದ ಅವಳಿಗಳ ಕಚಗುಳಿ:

ನಿಮ್ಮಲ್ಲಿ ಯಾರಾದರೂ ಜೋಡಿ ಬಾಳೆಹಣ್ಣು ತಿಂದಿದ್ದೀರಾ!? ನಾನು ಸಣ್ಣವನಿದ್ದಾಗ, ನನಗೆ ತಿನ್ನೋಕೇ ಬಿಡ್ತಾ ಇರಲಿಲ್ಲ. ‘ಅದು ತಿಂದ್ರೆ ನಿನಗೆ ಅವಳಿ-ಜವಳಿ ಮಕ್ಳಾಗುತ್ವೆ’ ಅನ್ನೋ ಕಾರಣ ಕೊಡ್ತಾ ಇದ್ರು. ನನಗೆ ಆಶ್ಚರ್ಯವಾಗ್ತಾ ಇತ್ತು. ‘ಅಯ್ಯೋ ಅವಳಿ ಜವಳಿ ಆದ್ರೆ ಇನ್ನೂ ಒಳ್ಳೇದಲ್ವಾ! ನನ್ ಹೆಂಡ್ತಿ ಎರಡೆರಡು ಸಲ ಕಷ್ಟ ಅನುಭವಿಸೋದು ತಪ್ಪುತ್ತೆ’ ಅಂತಾ ಹೇಳಿ, ತಲೆ ಮೇಲೆ ಮೊಟಕಿಸಿಕೊಳ್ತಾ ಇದ್ದೆ. ಅದೂ ಅಲ್ದೆ ‘ಬಾಳೆಹಣ್ಣು ತಿಂದ್ರೆ ಮಕ್ಕಳಾಗುತ್ವಾ? ಜೋಡಿ ತಿಂದ್ರೆ ಎರಡು ಮಕ್ಕಳಾಗೋದಾದ್ರೆ, ಒಂದು ತಿಂದ್ರೆ ಒಂದು ಮಗು ಹುಟ್ಬೇಕಲ್ವಾ? ಮತ್ತೆ ಒಂದೊಂದೇ ತಿನ್ನೋಕೆ ಬಿಡ್ತೀರಾ, ಜೋಡಿ ಯಾಕೆ ತಿನ್ನಬಾರ್ದು!?’ ಅಂತೆಲ್ಲಾ ಕೇಳಿ ಲೆಕ್ಕಿ ಬರಲಿನಲ್ಲಿ ಪೆಟ್ಟು ತಿಂತಾ ಇದ್ದೆ. ಈ ಅವಳಿಗಳು ಅನ್ನೋ ವಿಸ್ಮಯ ನನಗೆ ಮಾತ್ರವಲ್ಲದೇ, ಜೀವವಿಜ್ಞಾನಿಗಳಿಗೂ ಸಹ ಸದಾ ಒಂದು ಕುತೂಹಲದ ವಿಷಯ. ಕೆಲವು ಥಿಯರಿಗಳ ಪ್ರಕಾರ, ಅವಳಿಗಳು ಒಂದೇ ರೀತಿ ಯೋಚಿಸ್ತಾರೆ ಹಾಗೂ ವರ್ತಿಸುತ್ತಾರೆ. ಕೆಲವು ವಾದಗಳ ಪ್ರಕಾರ ಅವಳಿಗಳು ಬೆಳೆಯುವ ಪರಿಸರಕ್ಕೆ ಹೊಂದಿಕೊಂಡಂತೆ ಅವರ ವರ್ತನೆಗಳಲ್ಲಿ, ನಿರ್ಧಾರಶಕ್ತಿಗಳಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಇನ್ನೂ ಕೆಲವು ವಾದಗಳ ಪ್ರಕಾರ, ಅವಳಿಗಳು ಹುಟ್ಟುವಾಗಲಷ್ಟೇ ಅದು ಕೌತುಕದ ವಿಚಾರ. ಆನಂತರದ್ದೆಲ್ಲಾ ಸಾಮಾನ್ಯ ಆಗುಹೋಗುಗಳೇ. ಅವರು ಬರೇ ‘ಇಬ್ಬರು ಮನುಷ್ಯರು’ ಅಷ್ಟೇ. ಅವರಿಬ್ಬರ ಮಧ್ಯೆ ಸಾಮ್ಯಗಳು ಇರಲೇಬೇಕೆಂದೇನೂ ಇಲ್ಲ ಇತ್ಯಾದಿ ಇತ್ಯಾದಿ. ಇದಕ್ಕೆ ಸೂಕ್ತವಾದ ಉತ್ತರ ಇನ್ನೂ ಸಿಕ್ಕಿಲ್ಲ. ಇದನ್ನು ವಸ್ತುನಿಷ್ಟವಾಗಿ ಅಧ್ಯಯನ ಮಾಡಬೇಕೆಂದರೆ, ಇಬ್ಬರು ಅವಳಿಮಕ್ಕಳನ್ನು ಹುಟ್ಟುವಾಗಲೇ ಬೇರ್ಪಡಿಸಿ, ಅವರನ್ನು ಬೇರೆ ಬೇರೆ ವಲಯಗಳಲ್ಲಿ ಬೆಳೆಸಿ ಪಲಿತಾಂಶವನ್ನು ತಾಳೆ ನೋಡಬೇಕು. ಆದರೆ ಇಂತಹ ಒಂದು ಪ್ರಯೊಗವನ್ನು ಮನುಷ್ಯರ ಮೇಲೆ ನಡೆಸುವುದು ಸಾಧ್ಯವಿಲ್ಲ (ಹಾಗೂ ಸರಿಯಲ್ಲ ಕೂಡ).

ಅವಳಿಗಳಲ್ಲಿ, ಅನನ್ಯ/ತದ್ರೂಪಿ ಅವಳಿಗಳು (Identical twins – ಒಂದೇ ಅಂಡಾಣು ಹಾಗೂ ಒಂದೇ ವೀರ್ಯಾಣುವಿನಿಂದ ಹುಟ್ಟಿ, ಮುಂದೆ ಅಂಡಾಣು ವಿಭಜನೆಯಾಗಿ ಒಂದೇ ಪ್ರಸವದಲ್ಲಿ ಹುಟ್ಟುವ) ಹಾಗೂ ಸಹೋದರ ಅವಳಿಗಳು (Fraternal twins – ಪ್ರತ್ಯೇಕ ಅಂಡಾಣು ಹಾಗೂ ಪ್ರತ್ಯೇಕ ವೀಯಾಣುವಿನಿಂದ ಹುಟ್ಟಿ, ಒಂದೇ ಪ್ರಸವದಲ್ಲಿ ಹೊರಬಂದ) ಎಂಬ ಸ್ಥೂಲ ವಿಂಗಡೆಣೆಗಳಿವೆ. (ಇವಲ್ಲದೇ ಸಯಾಮೀ ಅವಳಿಗಳು, ಮಿಶ್ರ ಅವಳಿಗಳು, ಪರಾವಲಂಬಿ ಅವಳಿಗಳು, ಅಸಾಮಾನ್ಯ ಅವಳಿಗಳು ಮುಂತಾದ ಹಲವಾರು ವಿಂಗಡಣೆಗಳಿವೆ). ಇವುಗಳಲ್ಲಿ ಅನನ್ಯ/ತದ್ರೂಪಿ ಅವಳಿಗಳು ಬೇರೆಲ್ಲಕ್ಕಿಂತ ಹೆಚ್ಚು ಕುತೂಹಲ ಮೂಡಿಸುವಂತಹ ಸೋಜಿಗಗಳು.

ಮಿನ್ನಿಸೋಟಾ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುವ ಥಾಮಸ್ ಬೌಚಾರ್ಡ್ ಎಂಬ ಪುಣ್ಯಾತ್ಮ,’ಅವಳಿಗಳು ಒಂದೇ ರೀತಿ ಯೋಚಿಸಲು ಹಾಗು ವರ್ತಿಸಲು ಸಾಧ್ಯವೇ?’ ಎನ್ನುವುದರ ಬಗ್ಗೆ ವರ್ಷಾನುಗಟ್ಟಲೆ ಅವಳಿಮಕ್ಕಳ ಮೇಲೆ, ಮಕ್ಕಳಿಗೆ ತಿಳಿಯದ ರೀತಿಯಲ್ಲೇ ಸಾಧ್ಯವಾದಷ್ಟೂ ನೈಸರ್ಗಿಕ ಪರಿಸರದಲ್ಲೇ ಅಧ್ಯಯನ ನಡೆಸುತ್ತಿದ್ದ. ಹನ್ನೊಂದು ವರ್ಷಗಳ ಸುದೀರ್ಘ ಸಂಶೋಧನೆಯ ನಂತರವೂ ಏನೂ ಹೆಚ್ಚಿನ ಮಾಹಿತಿ ಸಿಗದೇ ಹತಾಶೆಯಿಂದ ಇನ್ನೇನು ಅಧ್ಯಯನ ಕೈಬಿಡಬೇಕೆಂದು ನಿರ್ಧರಿಸಿದ್ದವನಿಗೆ, ಅದೇನು ಅದೃಷ್ಟ ಖುಲಾಯಿಸಿತ್ತೋ ಏನೋ! ಮುಂದಿನ ಐದುವರ್ಷಕ್ಕೆ ಸಾಕಾಗುವಷ್ಟು ಸರಕು ಒಂದೇ ರಾತ್ರಿಯಲ್ಲಿ ಸಿಕ್ಕಿತು. ಅದೇನೆಂದರೆ, 1939ನೇ ಇಸವಿಯಲ್ಲಿ ಅನನ್ಯ ಅವಳಿಗಳಾಗಿ ಹುಟ್ಟಿ, ಹುಟ್ಟಿದ ಮೂರೇ ವಾರಕ್ಕೆ ಬೇರೆ ಬೇರೆ ಪೋಷಕರಿಂದ ದತ್ತುತೆಗೆದುಕೊಳ್ಳಲ್ಪಟ್ಟು, ಸಂಪೂರ್ಣ ಬೇರೆ ಬೇರೆ ಪರಿಸರದಲ್ಲಿ ಬೆಳೆದು, ಮೂವತ್ತೊಂಬತ್ತು ವರ್ಷಗಳ ನಂತರ ಒಂದಾದ ಇಬ್ಬರು ಅಣ್ಣತಮ್ಮಂದಿರ ಜೋಡಿಯೊಂದು ಸಿಕ್ಕಿಬಿಟ್ಟಿತ್ತು. ಅವಳಿಗಳು (ಬೇರೆಲ್ಲಾ ಅನನ್ಯ ಅವಳಿಗಳಂತೆಯೇ) ನೋಡಲು ಒಂದೇ ತೆರನಾಗಿದ್ದರು. ಆಶ್ಚರ್ಯವೆಂದರೆ ಇಬ್ಬರ ಹೆಸರೂ ಜಿಮ್ ಎಂದಾಗಿತ್ತು!! ಆದರೆ ಅವರ ಜೀವನವನ್ನು ಕೆದಕುತ್ತಾ ಹೋದ ಥಾಮಸ್’ಗೆ ಸಿಕ್ಕ ವಿಚಾರಗಳು ಒಂದಕ್ಕಿಂತ ಒಂದು ಬೆಚ್ಚಿಬೀಳಿಸುವಂತಿದ್ದವು. ಒಂದೇ ತಂದೆ ಮತ್ತು ತಾಯಿಗೆ ಹುಟ್ಟಿ, ಒಂದೇ ಪರಿಸರದಲ್ಲಿ ಬೆಳೆದ ಮಕ್ಕಳು ಸಾಮಾನ್ಯವಾಗಿ ಹಲವಾರು ರೀತಿಯಲ್ಲಿ ಒಂದೇ ರೀತಿಯಿದ್ದರೂ ಸಹ, ಈ ಪ್ರಕರಣದಲ್ಲಿ (ಸಂಪೂರ್ಣ ಬೇರೆ ಬೇರೆ ಪರಿಸರದಲ್ಲಿ ಬೆಳೆದಿದ್ದರೂ ಸಹ) ಕೆಲ ಹೋಲಿಕೆಗಳು ನಂಬಲಸಾಧ್ಯವಾದಷ್ಟು ಸಾಮ್ಯತೆಯಿಂದ ಕೂಡಿದ್ದವು.

(*) ಇಬ್ಬರ ದತ್ತು ಪೋಷಕರೂ ಆ ಹುಡುಗರಿಗೆ ಜಿಮ್ ಎಂದೇ ಹೆಸರಿಟ್ಟರು (ಒಬ್ಬ ಜಿಮ್ ಸ್ಪ್ರಿಂಗರ್ (Jim Springer) ಹಾಗೂ ಇನ್ನೊಬ್ಬ ಜಿಮ್ ಲೆವಿಸ್ (Jim Lewis). ಪೋಷಕರಿಗೂ ಸಹ ಇನ್ನೊಂದು ಮಗುವಿನ ಹೆಸರು ಜಿಮ್ ಎಂದು ತಿಳಿದಿರಲಿಲ್ಲ)!
(*) ತನಗೊಬ್ಬ ಸಹೋದರನಿದ್ದಾನೆ ಎಂದು ತಿಳಿಯದೇ ಬೆಳೆದ ಇಬ್ಬರೂ ಜಿಮ್’ಗಳು ರಕ್ಷಣೆಗೆ ಸಂಬಂದಿಸಿದ ಉದ್ಯೋಗಗಳನ್ನೇ ಆಯ್ದುಕೊಂಡರು. ಜಿಮ್ ಲೆವಿಸ್ ಉಕ್ಕಿನ ಕಾರ್ಖಾನೆಯೊಂದರಲ್ಲಿ ರಕ್ಷಣಾ ಸಿಬ್ಬಂದಿಯಾಗಿದ್ದರೆ, ಜಿಮ್ ಸ್ಪ್ರಿಂಗರ್ ಸಹಾಯಕ ಪೋಲೀಸ್ ಅಧಿಕಾರಿಯ ಹುದ್ದೆ ಸೇರಿದ!
(*) ಇಬ್ಬರಿಗೂ ಸಮಾನ ರೂಪದ ಗಣಿತ ಹಾಗೂ ಮರಗೆಲಸದ ಕೌಶಲ್ಯಗಳಿದ್ದವು!
(*) ಇಬ್ಬರಿಗೂ ಕಾಗುಣಿತ(Spelling)ವೆಂದರೆ ಆಗುತ್ತಿರಲಿಲ್ಲ!
(*) ಇಬ್ಬರೂ ತೆಳುನೀಲಿ ಬಣ್ಣದ ಶೆವಿ (Chevy) ಕಾರುಗಳನ್ನೇ ಕೊಂಡರು!
(*) ಇಬ್ಬರೂ ಫ್ಲೋರಿಡಾದ ಪಾಸ್ ಗ್ರಿಲ್ ಬೀಚಿನಲ್ಲಿ ರಜಾದಿನಗಳನ್ನು ಕಳೆಯಲು ಇಷ್ಟಪಡುತ್ತಿದ್ದರು!
(*) ಇಬ್ಬರೂ Miller Lite ಹಾಗೂ Salem ಸಿಗರೇಟುಗಳನ್ನೇ ಸೇದುತ್ತಿದ್ದರು!
(*) ಇಬ್ಬರಿಗೂ ಉಗುರು ಕಚ್ಚುವ ಅಭ್ಯಾಸವಿತ್ತು!
(*) ಇಬ್ಬರಿಗೂ ತಮ್ಮ ಹೆಂಡತಿಯರಿಗಾಗಿ ಮನೆಯಲ್ಲೆಲ್ಲೆಲ್ಲೋ love notes ಇಡುವುದೆಂದರೆ ಇಷ್ಟವಿತ್ತು!
(*) ಇಬ್ಬರಿಗೂ ಮೈಗ್ರೇನ್ ಕಾಡುತ್ತಿತ್ತು!
(*) ಇಬ್ಬರಿಗೂ ಅಧಿಕ ರಕ್ತದೊತ್ತಡವಿತ್ತು!
(*) ಇಬ್ಬರ ಬ್ರೈನ್ ವೇವ್’ಗಳೂ ಒಂದೇ ರೀತಿಯ ಆಕಾರದಲ್ಲಿದ್ದವು!
(*) ಇಬ್ಬರ ಹೆಂಡತಿಯರ ಹೆಸರೂ ಲಿಂಡಾ ಎಂದಾಗಿತ್ತು!
(*) ಇಬ್ಬರೂ ತಂತಮ್ಮ ಮಕ್ಕಳಿಗೆ ಜೇಮ್ಸ್ ಅಲನ್ ಎಂದು ಹೆಸರಿಟ್ಟಿದ್ದರು. ಒಬ್ಬನ ಹೆಸರು James Alan ಎಂದಿದ್ದರೆ ಮತ್ತೊಬ್ಬನ ಹೆಸರು James Allan ಎಂದಾಗಿತ್ತು!
(*) ಇಬ್ಬರೂ ವಿವಾಹ ವಿಚ್ಚೇದನಕ್ಕೊಳಗಾದರು!
(*) ಇಬ್ಬರ ಎರಡನೆಯ ಹೆಂಡತಿಯರ ಹೆಸರೂ ಬೆಟ್ಟಿ (Betty) ಎಂದಾಗಿತ್ತು!
(*) ಇಬ್ಬರೂ ತಮ್ಮ ನಾಯಿಗಳಿಗೆ ಟಾಯ್ (Toy) ಎಂದು ಹೆಸರಿಟ್ಟಿದ್ದರು!

ಇವಿಷ್ಟೇ ಅಲ್ಲದೆ, ಆಗಾಗ ಇಬ್ಬರಿಗೂ ‘ಏಕೋ ನಾನು ಖಾಲಿ ಖಾಲಿ. ನಾನು ಪೂರ್ತಿಯಲ್ಲ’ ಎಂಬ ಭಾವನೆ ಕಾರಣವೇ ಇಲ್ಲದೆ ಆಗಾಗ ಕಾಡುತ್ತಿತ್ತಂತೆ. ಇಬ್ಬರು ಜಿಮ್’ಗಳ ಪೋಷಕರೂ ಈ ಅವಳಿಗಳ ಹೆತ್ತಮ್ಮನನ್ನು ನೋಡಿರಲಿಲ್ಲ. ಆ ಪುಣ್ಯಾತಿಗಿತ್ತಿ 15ನೇ ವಯಸ್ಸಿನಲ್ಲಿಯೇ, ಮದುವೆಯಾಗದೆ ಗರ್ಭವತಿಯಾಗಿದ್ದರಿಂದ, ಪ್ರಸೂತಿಯ ನಂತರ, ಮಕ್ಕಳನ್ನು, ಚರ್ಚೊಂದು ನಡೆಸುವ ಅನಾಥಾಲಯದಲ್ಲಿ ಬಿಟ್ಟು ಹೋಗಿದ್ದಳು. ಇಬ್ಬರು ಪೋಷಕರೂ ಈ ಮಕ್ಕಳನ್ನು 3 ವಾರಗಳ ವ್ಯತ್ಯಾಸದಲ್ಲಿ ಅಲ್ಲಿಂದ ದತ್ತುತೆಗೆದುಕೊಂಡರು. ದತ್ತುತೆಗೆದುಕೊಳ್ಳುವಾಗ ಎರಡೂ ಪೋಷಕರಿಗೆ ‘ಈ ಮಗುವಿಗೆ ಇನ್ನೊಂದು ಅವಳಿ ತಮ್ಮ ಹುಟ್ಟಿದ್ದ. ಆದರೆ ಹುಟ್ಟಿದ ಕೆಲಗಂಟೆಗಳಲ್ಲೇ ಆ ಮಗು ತೀರಿಕೊಂಡಿತು’ ಎಂದು ಹೇಳಲಾಗಿತ್ತು. ಜಿಮ್ ಲೆವಿಸ್ಸನ ಅಮ್ಮ ಆತ ಹದಿನಾರು ತಿಂಗಳ ಮಗುವಾಗಿದ್ದಾಗ, ಕೋರ್ಟಿನಲ್ಲಿ ದತ್ತಿನ ಕಾಗದ ಪತ್ರಗಳಿಗೆ ಸಂಬಂಧಿಸಿದಂತೆ ಏನೋ ಕೆಲಸಕ್ಕೆ ಹೋಗಿದ್ದಾಗ, ಅಲ್ಲಿದ್ದ ಕ್ಲರ್ಕ್ ಯಾರೊಂದಿಗೋ ಮಾತಾನಾಡುತ್ತ ‘ಹೇಯ್! ನಿನಗ್ಗೊತ್ತಾ. ಆ ಇನ್ನೊಂದು ಮಗುವಿಗೂ ಜಿಮ್ ಎಂದೇ ಹೆಸರಿಟ್ಟಿದ್ದಾರೆ’ ಎಂದು ಪಿಸುಗುಟ್ಟಿದ್ದ. ಜಿಮ್’ನ ಅಮ್ಮ, ಅದನ್ನು ಕೇಳಿಸಿಕೊಂಡರೂ ಅದರ ಬೆಗ್ಗೆ ಹೆಚ್ಚಿನ ಗಮನವನ್ನೇ ಕೊಡಲಿಲ್ಲ. ‘ಆ ಮಾತಿಗೆ ಗಮನ ಕೊಟ್ಟು, ಇನ್ನೂ ಕೆದಕಿ ಆ ಮಗುವನ್ನು ಹುಡುಕಿದ್ದರೂ ಸಹ ನಮ್ಮ ಕೈಲಿ ಎರಡು ಮಕ್ಕಳನ್ನು ಸಾಕಲು ಸಾಧ್ಯವಾಗುತ್ತಿರಲಿಲ್ಲ ಬಿಡಿ. ಆದರೆ ಜಿಮ್ ಖುಷಿಯಾಗಿ ತನ್ನ ತಮ್ಮನೊಂದಿಗೇ ಬೆಳೆಯುವ ಅವಕಾಶ ಮಿಸ್ ಮಾಡ್ಕೊಂಡ್ಬಿಟ್ಟ ಪಾಪ’ ಎಂದು ಸಂದರ್ಶನವೊಂದರಲ್ಲಿ ಆಕೆ ಹೇಳಿದಳು.

ಮೂವತ್ತೇಳು ವರ್ಷಗಳ ನಂತರ ಇದ್ದಕ್ಕಿದ್ದಂತೆ ಜಿಮ್ ಲೆವಿಸ್’ನ ಅಮ್ಮನಿಗೆ ಆ ಕ್ಲರ್ಕಿನ ಮಾತು ಯಾಕೋ ನೆನಪಾಯಿತು. ಅದೇನಾದರೂ ನಿಜವಿರಬಹುದೇ ಎಂದು ತಿಳಿಯುವ ಕುತೂಹಲ ಆಕೆಗೆ ಕೊರೆಯಲು ಪ್ರಾರಂಭವಾಯಿತು (ಯಾಕೆ ಆ ಯೋಚನೆ ಬಂತು, ಅದೇಕೆ ಕಾಡಲು ಪ್ರಾರಂಭಿಸಿತು ಎಂದು ನನಗೇ ಗೊತ್ತಿಲ್ಲ ಎಂದು ಆಕೆ ಹೇಳುತ್ತಾಳೆ!). ಮಗನಿಗೆ ಈ ಕಥೆಯನ್ನು ಹೇಳಿ, ತನ್ನ ಸಹೋದರನನ್ನು ಹುಡುಕುವಂತೆ ಪ್ರೇರೇಪಿಸಿದಳು. ಮೊದಲಿಗೆ ನಿರಾಕರಿಸಿದ, ಬಹಳಷ್ಟು ಬಾರಿ, ಮತ್ತೆ ಮತ್ತೆ ಹೇಳಿದ ನಂತರ, 1978ರ ಥ್ಯಾಂಕ್ಸ್-ಗಿವಿಂಗ್ ಹಬ್ಬದ ದಿನ ಅಮ್ಮನ ಮಾತು ಕೇಳಲು ನಿರ್ಧರಿಸಿದ ಜಿಮ್ ಲೆವಿಸ್ ತನ್ನ ಪ್ರಯತ್ನವನ್ನು ಪ್ರಾರಂಭಿಸಿದ. ಎಲ್ಲಿಂದ ಹುಡುಕುವುದು!? ತನ್ನನ್ನು ದತ್ತುಕೊಟ್ಟ ಅನಾಥಾಲಯಕ್ಕೆ ಹೋಗಿ ಹೇಳಿದರೆ, ಅವರು ‘ಕಾನೂನಿನ ಪ್ರಕಾರ ನಾವು ಆ ವಿವರಗಳನ್ನು ನೀಡುವಂತಿಲ್ಲ. ಕೋರ್ಟ್ ಆದೇಶ ಬೇಕು’ ಎಂದರು. ದೃತಿಗೆಡದ ಜಿಮ್ ತನ್ನ ದತ್ತು ಕಾಗದಗಳನ್ನು ನಿರ್ಧರಿಸಿದ ಪ್ರೊಬೇಟ್ ನ್ಯಾಯಾಲಯದ ಮೊರೆಹೋದ. ಆ ಕೋರ್ಟ್, ಅನಾಥಾಲಯವನ್ನು ಸಂಪರ್ಕಿಸಿ, ಆ ಇನ್ನೊಬ್ಬ ಜಿಮ್’ನ ವಿಳಾಸ ಹುಡುಕಿಕೊಡುವಂತೆ ಹೇಳಿತು. ಜಿಮ್ ಲೆವಿಸ್’ನ ಮಾತಿನಲ್ಲೇ ಹೇಳುವುದಾದರೆ ‘ಒಂದು ದಿನ ನಾನು ಕೆಲಸ ಮುಗಿಸಿ ಮನೆಗೆ ಬಂದೆ. ಊಟದ ಟೇಬಲ್ ಮೇಲೆ ಒಂದು ಕಾಗದದಲ್ಲಿ “ಜಿಮ್ ಸ್ಪ್ರಿಂಗರ್’ನನ್ನು ಸಂಪರ್ಕಿಸಿ” ಎಂಬ ಬರಹದಡಿ ಒಂದು ಫೋನ್ ನಂಬರ್ ಇತ್ತು. ತಕ್ಷಣ ಫೋನಾಯಿಸಿದೆ. ನನಗೆ ಹಲೋ ಹೇಳುವಷ್ಟೂ ಉಸಿರು ಹೊರಡಲಿಲ್ಲ. ಏನು ಹೇಳಬೇಕೆಂದೇ ತಿಳಿಯದೇ ‘ನೀನೇನಾ ನನ್ನ ತಮ್ಮ?’ಎಂದಷ್ಟೇ ಕೇಳಿದೆ. ಆ ಕಡೆಯಿಂದ ‘ಹೌದು’ ಎಂದಷ್ಟೇ ಉತ್ತರಬಂತು. ಇಬ್ಬರೂ ತುಂಬಾ ಹೊತ್ತು ಏನೂ ಮಾತನಾಡದೇ, ಫೋನ್-ಲೈನು ನಿಶಬ್ದವಾಗಿತ್ತು. ನಾನು ಹಲ್ಲು ಕಚ್ಚಿಹಿಡಿದು ಅಳುತ್ತಿದ್ದೆ. ಹೆಚ್ಚೇನೂ ಮಾತನಾಡದೇ ಉಕ್ಕಿಬರುತ್ತಿದ್ದ ಅಳು ತಡೆಹಿಡಿದು ಆತನ ಆಡ್ರೆಸ್ ಕೇಳಿ ಬರೆದುಕೊಂಡೆ. ನಾನಿದ್ದ ಜಾಗಕ್ಕೆ ಪಶ್ಚಿಮದಲ್ಲಿ ನಾಲ್ಕುನೂರಮೂವತ್ತೈದು ಕಿಲೋಮೀಟರ್ ದೂರದಲ್ಲಿದ್ದ ಊರಿಗೆ ಕಾರು ಓಡಿಸಿಕೊಂಡೇ ಹೋದೆ. ಫೆಬ್ರವರಿ 9, 1978ರಂದು ಅಲ್ಲಿ ತಲುಪಿದಾಗ ಸಿಕ್ಕ ಸ್ವಾಗತ ಮರೆಯಲಾರದ್ದು. ಅವತ್ತು ಫೋನ್ ಕೆಳಗಿಟ್ಟಾಗ ಅಳಲು ಶುರುಮಾಡಿದ ಜಿಮ್ ಸ್ಪ್ರಿಂಗರ್, ಅದನ್ನು ಇನ್ನೂ ಜಾರಿಯಲ್ಲಿಟ್ಟಿದ್ದ. ತುಂಬಾ ಭಾವನಾತ್ಮಕವಾದ ಭೇಟಿಯಾಗಿತ್ತು ಅದು. ಅವನೊಂದಿಗೆ ಮಾತನಾಡುತ್ತಾ ಹೊರಟಾಗ, ಇಷ್ಟು ದಿನ ನಾನೊಬ್ಬ ಸಾಮಾನ್ಯ ಮನುಷ್ಯನೆಂದುಕೊಂಡಿದ್ದ ನನಗೆ ಇಂತಾ ಅಸಾಮಾನ್ಯ ಗತಕಾಲವೊಂದಿರಬಹುದೆಂದು ನಂಬಲೂ ಸಾಧ್ಯವಾಗಲಿಲ್ಲ!’

1690468_741852275904720_1695811321250525747_n

ಈ ವಿಷಯ ತಿಳಿದ ಥಾಮಸ್ ಬೌಚಾರ್ಡ್, ಒಂದು ವಾರದ ಕಾಲಕ್ಕೆ ಮಿನಿಯಾಪೊಲೀಸ್’ಗೆ ಬರಲು ಹಾಗೂ ಅಲ್ಲಿ ತಂಗಲು ಬೇಕಾಗುವ ಎಲ್ಲಾ ಖರ್ಚನ್ನು ವಹಿಸಿಕೊಂಡು, ಇಬ್ಬರೂ ಸಹೋದರರನ್ನು ತನ್ನ ಪ್ರಯೋಗಾಲಕ್ಕೆ ಕರೆಸಿಕೊಂಡು, ವ್ಯಾಪಕವಾದ ದೈಹಿಕ ಹಾಗೂ ಮಾನಸಿಕ ಪರೀಕ್ಷೆಗಳನ್ನು ನಡೆಸಿದ. ವಿಷಯ ಮಾಧ್ಯಮಗಳಿಗೆ ತಿಳಿದು, ಇವರಿಬ್ಬರೂ ಮಾಧ್ಯಮಪ್ರಚಾರಗಳಿಂದ ಗಾಬರಿಗೊಂಡು ಅವರ ಹೇಳಿಕೆಗಳೆಲ್ಲಾ ‘ಕಲುಷಿತ’ಗೊಳ್ಳುವ ಮೊದಲೇ ಥಾಮಸ್ ಸಾಧ್ಯವಾದಷ್ಟು ವಸ್ತುನಿಷ್ಟ ಹಾಗೂ ವೈಜ್ಞಾನಿಕ ಅಧ್ಯಯನಗಳನ್ನು ನಡೆಸಬಯಸಿದ್ದ. ಇದೇನೂ ಜಗತ್ತಿನ ಮೊದಲ ಅವಳಿಗಳ ಪುನರ್ಮಿಲನದ ಪ್ರಕರಣವೇನೂ ಆಗಿರಲಿಲ್ಲ. ವಿಶ್ವಾದ್ಯಂತ ಸುಮಾರು 75 ಹಾಗೂ ಅಮೇರಿಕಾದಲ್ಲೇ 19 ಇಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಆದರೆ, ಆ ಎಲ್ಲಾ ಪ್ರಕರಣಗಳಿಗಿಂತ ಹೆಚ್ಚು ಕಾಲ ಈ ಅವಳಿಗಳು ಬೇರ್ಪಟ್ಟಿದ್ದರು ಹಾಗೂ ಇಬ್ಬರಲ್ಲೂ ಅಷ್ಟೂ ವರ್ಷದ ಪ್ರತ್ಯೇಕತೆ ಹಾಗೂ ಬೆಳೆದ ಪರಿಸರದ ವ್ಯತ್ಯಾಸದ ನಡುವೆಯೂ ಅಸಾಮನ್ಯ ಸಾಮ್ಯತೆಗಳಿದ್ದವು.

ಮೇಲೆ ಹೇಳಿದ ವಿವರಣೆಗಳಿಗೆ ವಿರುದ್ದವಾಗಿ ಘಟಿಸಿದ ಒಂದೇ ವ್ಯತ್ಯಾಸವೆಂದರೆ, ಫೆಬ್ರವರಿ 28, 1979ರಂದು ಜಿಮ್ ಲೆವಿಸ್, ತನ್ನ ಎರಡನೇ ಪತ್ನಿ, ಬೆಟ್ಟಿಯಿಂದ ವಿಚ್ಛೇದನ ಪಡೆದು, ಸ್ಯಾಂಡಿ ಜೇಕಬ್ಸ್ ಎಂಬ ಮಹಿಳೆಯನ್ನು ಮದುವೆಯಾದ. ಜಿಮ್ ಸ್ಪ್ರಿಂಗರ್ ಮಾತ್ರ ತನ್ನ ಎರಡನೇ ಹೆಂಡತಿ ಬೆಟ್ಟಿಯೊಂದಿಗೇ ಉಳಿದ ಜೀವನವನ್ನು (ಸುಖವಾಗಿ ಕಳೆದ ಎಂದು ಹೇಳಲು ಯಾವ ದಾಖಲೆಯೂ ಇಲ್ಲದಿದ್ದರೂ 😛 ) ಕಳೆದ. ಜಿಮ್ ಸ್ಪ್ರಿಂಗರ್ ಮತ್ತವನ ಬೆಟ್ಟಿ ಇಬ್ಬರೂ ತನ್ನ ಹೊಸದಾಗಿ ಸಿಕ್ಕ ಸಹೋದರನ ಮದುವೆಯಲ್ಲಿ ಉಪಸ್ಥಿತರಿದ್ದರು ಹಾಗೂ ಜಿಮ್ (ಸ್ಪ್ರಿಂಗರ್) ಜಿಮ್ (ಲೆವಿಸ್)ನ ‘ಬೆಸ್ಟ್ ಮ್ಯಾನ್’ ಆಗಿ ಸೇವೆ ಸಲ್ಲಿಸಿದ.

10624979_741852272571387_3297169756770331172_n

ಕೊಸರು:
“ಅವಳಿಗಳಲ್ಲಿ ಎಷ್ಟೇ ಸಾಮ್ಯತೆಯಿರಲಿ, ನಮ್ಮ ಮುಂದೆ ಅವೆಲ್ಲಾ ಗೌಣ. ನಮ್ಮನ್ನು ನೋಡಿ!! ಬೇರೆ ಬೇರೆ ಪೋಷಕರಿಗೆ ಹುಟ್ಟಿದರೂ, ಎಷ್ಟೇ ಬೇರೆ ಬೇರೆ ವಾತಾವರಣದಲ್ಲಿ ಬೆಳೆದರೂ, ಯಾವ ಪಕ್ಷಕ್ಕಾಗಿ ಕೆಲಸ ಮಾಡಿದರೂ, ಹೊಟ್ಟೆಗೇ ಏನೇ ತಿಂದರೂ, ಜಗತ್ತಿನಾದ್ಯಂತ ನಮ್ಮವರ ವರ್ತನೆ ಒಂದೇ ರೀತಿ ಇರುತ್ತದೆ” ಅಂತಾ ರಾಜಕಾರಣಿಗಳು ಶಾಸಕರ ಭವನದಲ್ಲಿ ಪ್ರಕಟಣೆ ಹೊರಡಿಸಿದ್ದಾರಂತೆ.

Advertisements

ಸೆಕ್ಯುಲರ್ ಸಾಂಬಾರ್ ಮಾಡುವ ಅನುಪಮ ವಿಧಾನ

ಇವತ್ತಿನ ರಾತ್ರಿ ಊಟಕ್ಕೆ “ಸೆಕ್ಯುಲರ್ ಸಾಂಬಾರ್”:
ಪಾಕ ಪ್ರವೀಣೆ, ಸೋನಿಯಾ ಅವರ ಅಡುಗೆಮನೆಯಿಂದ (ಪಾಕ = ಪಾಕಡಾ ಕಲೆಗಾರ್ತಿ)

ತಯಾರಿಸಲು ಬೇಕಾಗುವ ಪದಾರ್ಥಗಳು:
(*) ಎಲ್ಲಾ ಜಾತಿಯ ತರಕಾರಿಗಳು (ಅಹಿಂದ ತರಕಾರಿಗಳನ್ನು ಹೆಚ್ಚು ಉಪಯೋಗಿದಷ್ಟೂ ರುಚಿ ಹೆಚ್ಚು) – 1 ಕೆಜಿ
(*) ಕಾನ್ಶೀರಾಂ ಈರುಳ್ಳಿ – 4
(*) ಜಾರ್ಜ್ ಟೊಮೇಟೋ – 3
(*) ಓವೈಸಿ ಹಸಿಮೆಣಸು – 3
(*) ಪ್ರಗತಿಪರ ಲೇಖಕರ ಸಾಂಬಾರ್ ಪುಡಿ (ಇದರ ರೆಸಿಪಿ ಪ್ರತ್ಯೇಕವಾಗಿ ಕೆಳಗಡೆ ಇದೆ)
(*) ಆಂಜನೇಯ ಅವರ ‘ಬೋರ್ವೆಲ್ ಭಾಗ್ಯ’ದಿಂದ ಕೊರೆಸಿದ ಬೋರ್ವೆಲ್ ನೀರು – 2 ಚೆಂಬು
(*) ನೆಹರೂ ಖಾರದಪುಡಿ (ಯೋಗ್ಯತೆಗೆ ತಕ್ಕಷ್ಟು)
(*) ಅಂಬೇಡ್ಕರ್ ಉಪ್ಪು (ಇಷ್ಟಾನುಸಾರ)
(*) ಗಾಂಧೀ ಇಂಗು (ಹೆಚ್ಚೇನೂ ಅಗತ್ಯವಿಲ್ಲ. ಆದರೆ ಕೆಲವರು ‘ರಾಮರಾಜ್ಯ’ದ ರುಚಿಯನ್ನೇ ಹೆಚ್ಚಾಗಿ ಬಯಸೋದ್ರಿಂದ, ಇದು ಬೇಕಾಗುತ್ತೆ)
(*) ಇಂದಿರಾ ತುಪ್ಪ, ಪ್ರಿಯಾಂಕ ಕೆಂಪುಮೆಣಸಿನಕಾಯಿ ಮತ್ತು ರಾಹುಲ್ ಸಾಸಿವೆ (ಒಗ್ಗರೆಣ್ಣೆಗಾಗಿ)

ತಯಾರಿಸುವ ವಿಧಾನ:

ಎಲ್ಲಾ ಜಾತಿಯ ತರಕಾರಿಗಳನ್ನು ಹೆಚ್ಚಿಟ್ಟುಕೊಳ್ಳಿ. “ಎಲ್ಲಾ ತರಕಾರಿಗಳೂ ಒಂದೇ, ಎಲ್ಲವೂ ಜೊತೆಗೇ ಇರಬೇಕು” ಅಂತಾ ಹೇಳ್ತಾ ಅವುಗಳನ್ನು ಪುಸಲಾಯಿಸ್ತಾ ಇರಿ. ಯಾವ ಕಾರಣಕ್ಕೂ ತರಕಾರಿಗಳನ್ನು ತುಂಬಾ ಹೊತ್ತು ಜೊತೆಗಿರಲು ಬಿಡಬೇಡಿ. ಅವುಗಳು ತುಂಬಾ ಹೊತ್ತು ಜೊತೆಗಿದ್ದರೆ, ಅವುಗಳ ಮದ್ಯೆ ಸ್ನೇಹ ಬೆಳೆದು ನಿಮ್ಮ ಸಾಂಬಾರು ಹಾಳಾಗುತ್ತದೆ.

ರಾಹುಲ್ ಅವರ ಒತ್ತಾಯದ ಮೇರೆಗೆ, ನಮ್ಮ ಹಿಂದಿನ ಜನಸೇವಕರು ಕೊಟ್ಟ “ವರ್ಷಕ್ಕೆ 12 ಗ್ಯಾಸ್ ಸಿಲಿಂಡರ್”ಗಳಲ್ಲೊಂದನ್ನು ಉಪಯೋಗಿಸಿ, ಒಲೆಯನ್ನು ಹಚ್ಚಿ. ಭಾರತದ ಪಾತ್ರೆಯಲ್ಲಿ ಇಂದಿರಾ ತುಪ್ಪವನ್ನು ಕರಗಿಸಿ. ತುಪ್ಪ ಕರಗಿ, ಅರ್ಥವಾಗದ ಇಂಗ್ಳೀಷ್ ದಾಟಿಯ ಹಿಂದಿಭಾಷೆಯಂತಹ ವಿಚಿತ್ರ ಸದ್ದು ಮಾಡತೊಡಗಿದಾಗ ಎರಡು ಪ್ರಿಯಾಂಕ ಮೆಣಸಿನಕಾಯಿಯನ್ನು ಹಾಕಿ. ತಾಯಿಯಂತೆ ಮಗಳೂ, ನೂಲಿನಂತೆ ಸೀರು ಎನ್ನುವಂತೆ, ತುಪ್ಪದಂತೆಯೇ ಮೆಣಸು ಕೂಡಾ ಕೆಂಪಾಗುವಷ್ಟರಲ್ಲಿ, ಕಾನ್ಶೀರಾಂ ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಈ ಈರುಳ್ಳಿ ಕೆಲವೊಮ್ಮೆ ಕಪಾಳಕ್ಕೆ ಹೊಡೆದಷ್ಟು ಕಣ್ಣುರಿ ತರುತ್ತದೆ. ಆದ್ದರಿಂದ ಕೈಯಳತೆಯಷ್ತು ದೂರದಿಂದಲೇ ಹೆಚ್ಚಿ. ಒಲೆಯ ಮೇಲೆ ಅದಾಗಲೇ ಇಟ್ಟಿರುವ ಪಾತ್ರೆಗೆ ಈರುಳ್ಳಿಯನ್ನು ಹಾಕಿ, ಕೆಂಪಾಗುವವರೆಗೆ ಹುರಿಯಿರಿ.

ಇದಕ್ಕೆ ಸಣ್ಣದಾಗಿ ಹೆಚ್ಚಿದ ಜಾರ್ಜ್ ಟೊಮ್ಯಾಟೋ ಹಾಕಿರಿ. ಸಿಹಿ ತುಂಬಿದ ಜಾರ್ಜ್ ಟೋಮ್ಯಾಟೋ, ಎಲ್ಲಾ ಗಂಭೀರ ಅಪರಾಧಗಳನ್ನು….sorry….ಗಂಭೀರ ಖಾರವನ್ನು ಮುಚ್ಚಿಡುವಲ್ಲಿ ಸಹಾಯ ಮಾಡುತ್ತದೆ.

ಇವೆಲ್ಲವೂ ಒಂದು ಹದಕ್ಕೆ ಬಂದಾದ ನಂತರ, ಈ ಮಿಶ್ರಣಕ್ಕೆ ಪ್ರಗತಿಪರ ಲೇಖಕರ ಮಸಾಲೆ ಸೇರಿಸಿ. ಇದು ಸೇರಿದ ತಕ್ಷಣವೇ ನಿಮಗೆ ಜಾತ್ಯಾತೀತತೆಯ ಮನಮೋಹಕ ಪರಿಮಳ ಹೊರಬರುತ್ತದೆ. ಅಷ್ಟೇ ಅಲ್ಲದೆ, ಪ್ರಗತಿಪರ ಲೇಖಕರು ಇಲ್ಲದ ಸುದ್ದಿಗಳನ್ನು ಹರಡುವಲ್ಲಿ ಎಷ್ಟು ಪರಿಣಾಮಕಾರಿಯೋ, ಈ ಮಸಾಲೆ ಕೂಡಾ ಜಾತ್ಯಾತೀತ ಸಾಂಬಾರಿನ ಪರಿಮಳವನ್ನು ಹೆಚ್ಚಿಸುತ್ತದೆ ಹಾಗೂ ಜಾತ್ಯಾತೀತತೆಯ ಕಂಪು ಎಲ್ಲಾ ಕಡೆ ಪಸರಿಸಲು ಸಹಾಯ ಮಾಡುತ್ತದೆ.

ಮಸಾಲೆಯೆಲ್ಲಾ ಒಂದು ಹದಕ್ಕೆ ಬಂದಮೇಲೆ, ಎಲ್ಲಾ ಜಾತಿಯ ತರಕಾರಿಗಳನ್ನು ಸೇರಿಸಿ. ಚೆನ್ನಾಗಿ ಕಲಸಿ. ಮಸಾಲೆ ಎಲ್ಲಾ ತರಕಾರಿಗಳಿಗೂ ಚೆನ್ನಾಗಿ ಮೆತ್ತುವಂತೆ ಕಲಸಿ. ಅಹಿಂದ ತರಕಾರಿಗಳಿಗೆ ಸ್ವಲ್ಪ ಹೆಚ್ಚಾಗಿಯೇ ಮಸಾಲೆ ತಾಗಿದರೂ ತೊಂದರೆಯೇನಿಲ್ಲ. ಈಗ ನಿಮ್ಮ ಸಾಂಬಾರು ಹೆಚ್ಚೂ ಕಮ್ಮಿ ಜಾತ್ಯಾತೀತವಾಗಿದೆ.

ಇದಕ್ಕೀಗ ಬೋರ್ವೆಲ್ ಭಾಗ್ಯದಿಂದ ಬಂದ ನೀರನ್ನು ಬೆರಸಿ, ಸಾಂಬಾರು ಇಡೀ ಭಾರತಕ್ಕೇ ಹಂಚಲು ಸಾಕಾಗುವಷ್ಟರ ಮಟ್ಟಿಗೆ ತೆಳುವಾಗಿಸಿ. ಇದಕ್ಕೆ ಆಗಾಗ ಒಂದೊಂದೇ ಚೂರು ಒವೈಸಿ ಮೆಣಸು ಸೇರಿಸಿ ಕಲಕುತ್ತಿರಿ. ಹಾಗೂ ಸಾಂಬಾರನ್ನು ತನ್ನಷ್ಟ್ಟಕ್ಕೆ ತಾನೇ ಸುಮ್ಮನಿರಲು ಬಿಡಬೇಡಿ. ಈ ಮೆಣಸಿನಿಂದ ಹಾಗೂ ಕದಡುವಿಕೆಯಿಂದ ಖಾರ ಎಲ್ಲಾ ಕಡೆ ಸಮಾನವಾಗಿ ಹರಡಿ, ನಾವೆಲ್ಲರೂ ಒಂದೇ ಎಂಬ ಅನುಭೂತಿ ಎಲ್ಲಾ ಜಾತಿಯ ತರಕಾರಿಗಳಿಗೆ ಬರುತ್ತದೆ.

ಇದಾದ ಮೇಲೆ, ಆಗಾಗ ನೆಹರೂ ಮತ್ತು ಅಂಬೇಡ್ಕರ್ ಉಪ್ಪನ್ನು ಸಾರಿಗೆ ಸೇರಿಸುತ್ತಿರಿ. ಅಗತ್ಯಕ್ಕಿಂತಾ ಸ್ವಲ್ಪ ಜಾಸ್ತಿಯಾಗೇ ಸೇರಿಸಿದರೆ, ಸಾರಿನ ತೂಕ ಜಾಸ್ತಿಯಾಗುತ್ತದೆ.

ಸಾಂಬಾರು ಚೆನ್ನಾಗಿ ಬೆಂದಮೇಲೆ, ಸಿದ್ದಾರಾಮ ಸೌಟಿನಲ್ಲಿ, ಇಂದಿರಾ ತುಪ್ಪವನ್ನು ಕರಗಿಸಿ, ಅದಕ್ಕೆ ಒಂದೆರಡು ಪ್ರಿಯಾಂಕ ಮೆಣಸು ಹಾಗೂ ರಾಹುಲ್ ಸಾಸಿವೆಯನ್ನು ಹಾಕಿ. ಸದಾ ಸುಮ್ಮನಿರುವ ರಾಹುಲ್ ಸಾಸಿವೆ 2013ಮಿಲಿಸೆಕೆಂಡಿನ ನಂತರ ಚಟಪಟಗುಟ್ಟುತ್ತದೆ. ಇದು ಘಮ್ಮನಿಸುವ ಪರಿಮಳವನ್ನೇನೂ ತರದಿದ್ದರೂ, ಅದರ ಚಟಪಟ ವಟವಟ ಸದ್ದು, ಸಾಂಬಾರು ಮಾಡುವಾಗ ಸ್ವಲ್ಪ ನಕ್ಕು ಮನಸ್ಸು ಹಗುರಮಾಡಲು ಸಹಾಯಮಾಡುತ್ತದೆ. ಈಗ ಸಿದ್ದರಾಮ ಸೌಟನ್ನು ಸಾಂಬಾರಿನಲ್ಲಿ ಮಗುಚಿ, ತಕ್ಷಣವೇ ಚುನಾವಣಾ ತಟ್ಟೆಯಿಂದ ಸಾಂಬಾರನ್ನು ಮುಚ್ಚಿ. ಇದರಿಂದ ಜಾತ್ಯಾತೀತತೆಯ ಸೊಗಡೆಲ್ಲಾ ಒಳಗೇ ಉಳಿದು, ಸಾಂಬಾರು ಸಂಪೂರ್ಣವಾಗಿ ಜಾತ್ಯಾತೀತವಾಗುತ್ತದೆ.

ಈಗ ಈ ಸಾಂಬಾರನ್ನು, ಹಸಿರು ಬಣ್ಣದ ಅಕ್ಕಿಯ ಅನ್ನದೊಡನೆ, ‘ಪಂಕ್ತಿಬೇಧ’ವಿಲ್ಲದೆ ಬಡಿಸಿ, ಊಟಮಾಡಿಸಿ. ಊಟವಾದಮೇಲೆ, ಅಗತ್ಯವಿಲ್ಲದಿದ್ದರೂ, ಮಡೆಸ್ನಾನವನ್ನು ವಿರೋಧಿಸಲು ಮರೆಯಬೇಡಿ.

ಪ್ರಗತಿಪರ ಲೇಖಕ ಮಸಾಲೆ ತಯಾರಿಸುವ ವಿಧಾನ:
ಇದಕ್ಕೆ ಯಾವ ಮಸಾಲಾ ಸಂಭಾರಪದಾರ್ಥವಾದರೂ ಪರವಾಗಿಲ್ಲ, ಹಿಂದೂ ವಿರೋಧಿಯಾಗಿದ್ದರೆ ಸಾಕು. ಅಂತಹ ಎಲ್ಲಾ ಪದಾರ್ಥಗಳನ್ನು ತೆಗೆದುಕೊಂಡು, ವಾರ್ತಾಭಾರತಿಯ ಪುಟಗಳನ್ನು ಬೋಧಿವೃಕ್ಷದ ಕೆಳಗೆ ಹಾಸಿ ದಿನಕ್ಕೈದು ಬಾರಿ ಒಣಗಿಸಿ. ಕೊನೆಗೆ ಸನ್ಮಾರ್ಗದಂತಾ ಜಾತ್ಯಾತೀತ ಪತ್ರಿಕೆಗಳ ಹಾಗೂ ನೀಲಿಬಣ್ಣದ ಪುಸ್ತಕಗಳ ಒಂದು ಗುಡ್ಡೆಮಾಡಿ, ಅದಕ್ಕೆ ‘ಬೆಂಕಿಪೊಟ್ಣ’ದಿಂದ ಬೆಂಕಿಯಿಟ್ಟು, ಆ ಬೆಂಕಿಯಲ್ಲಿ ಹದವಾಗಿ ಮಸಾಲಾ ಪದಾರ್ಥಗಳನ್ನು ಹುರಿಯಿರಿ. ಎಲ್ಲವನ್ನೂ ಕೆಂಪಗೆ ಹುರಿದ ಮೇಲೆ, ಅನುಪಮವಾದ ಒಂದು ಗೌರಿಪದ ಹೇಳುತ್ತಾ ಕಲ್ಲಿನಲ್ಲಿ ಕುಟ್ಟಿ ಪುಡಿಮಾಡಿ.

ಈ ವಿಧಾನದಿಂದ, ತನ್ನನ್ನೇ ಕೊಂದು ಹೆಚ್ಚಿ ಕುದಿಸಿ ಅಡುಗೆ ಮಾಡಿ ತನ್ನನ್ನು ತಿಂದು ಮುಗಿಸುತ್ತಿದ್ದರೂ ಸಹ, ಜಾತ್ಯಾತೀತ ಮಸಾಲೆ ಹಾಗೂ ಪದಾರ್ಥಗಳ ಉಪಯೋಗದಿಂದ, ತರಕಾರಿಗಳಿಗೆ ತಾವು ಜಾತ್ಯಾತೀತರಾಗುತ್ತಿದ್ದೇವೆ ಹಾಗೂ ಪುನೀತರಾಗುತಿದ್ದೇವೆ ಎಂಬ ಭಾವನೆ ಬರುತ್ತದೆ ಹಾಗೂ ಸಾಂಬಾರ್ ಬಹಳ ರುಚಿಯಾಗಿರುತ್ತದೆ.

ಬುದ್ಧಿಗೊಂದು ಗುದ್ದು – ೨೩

ಚೆಂಡು, ಹಕ್ಕಿಪುಕ್ಕ, ಸಾಪೇಕ್ಷಸಿದ್ಧಾಂತ ಹಾಗೂ ಸಮಾನತೆ

ಒಂದು ಪ್ರಶ್ನೆ:

ಒಂದಷ್ಟು ಎತ್ತರದಿಂದ 5ಕೆಜಿ ತೂಕದ ಒಂದು ಚಂಡನ್ನು ಮತ್ತು ಏಳುಮಲ್ಲಿಗೆ ತೂಕದ ಒಂದು ಹಕ್ಕಿಪುಕ್ಕವನ್ನೂ ಒಟ್ಟಿಗೆ ಕೆಳಬಿಟ್ಟರೆ, ಯಾವುದು ಮೊದಲು ಭೂಮಿಗೆ ತಲುಪುತ್ತದೆ?

ಬಹಳಷ್ಟು ಜನರು ಹೇಳುವ ಉತ್ತರ “ಚೆಂಡು ಬೇಗ ಭೂಮಿಗೆ ತಲುಪುತ್ತದೆ, ಪುಕ್ಕ ನಿಧಾನವಾಗಿ ಕೆಳಗೆ ಬಂದು ತಲುಪುತ್ತದೆ.” ಇದು ನಿಜವೇ? ಉತ್ತರ ‘ಹೌದು’. ಆದರೆ ಯಾಕೆ!?

ವಿಜ್ಞಾನದ ಬಗ್ಗೆ ತಲೆಕೆಡೆಸಿಕೊಳ್ಳದ ಜನ ಇದಕ್ಕೆ ‘ಚೆಂಡು ಹೆಚ್ಚು ಭಾರವಾಗಿದೆ. ಅದಕ್ಕೇ ಬೇಗ ಭೂಮಿಯನ್ನು ತಲುಪಿತು’ ಎಂಬ ಕಾರಣ ಕೊಡಬಹುದು. ಆದರೆ ತಮಾಷೆಯ ವಿಷಯವೆಂದರೆ, ಈ ‘ಭೂಮಿಯನ್ನು ತಲುಪುವುದು’ ಎಂಬ ಕ್ರಿಯೆಯಿದೆ ನೋಡಿ, ಇದು ನಿಜವಾಗಿ ಭೂಮಿಯನ್ನು ತಲುಪುವುದಲ್ಲ. ಅದು ಭೂಮಿ ಆ ಚೆಂಡನ್ನು ಎಷ್ಟು ವೇಗವಾಗಿ ತನ್ನತ್ತ ಸೆಳೆಯುತ್ತಿದೆ ಎಂಬುದಾಗಿದೆ. ಇನ್ನೂ ವೈಜ್ಞಾನಿಕವಾಗಿ ಹೇಳಬೇಕಂದರೆ ವಸ್ತುಗಳು ಭೂಮಿಯನ್ನು ತಲುಪಲು ಎಷ್ಟು ವೇಗೋತ್ಕರ್ಷವನ್ನು (acceleration) ಪಡೆಯುತ್ತವೆ ಎಂಬುದಾಗಿದೆ. ಇದನ್ನು ಸುಲಭವಾದ ಪದಗಳಲ್ಲಿ ‘ಗುರುತ್ವ ಬಲ’ಎನ್ನುತ್ತಾರೆ. ಭೂಮಿ ತನ್ನ ಮೇಲಿರುವ ಎಲ್ಲಾ ವಸ್ತುಗಳನ್ನು ಒಂದೇಸಮನಾಗಿ (ಪ್ರತಿ ಸೆಕೆಂಡಿಗೆ 9.8ಮೀಟರಿನಷ್ಟು ಬಲದಲ್ಲಿ) ತನ್ನತ್ತ ಸೆಳೆಯುತ್ತದೆ. ಭೂಮಿ ನೀವು ಹೆಚ್ಚು ಭಾರವಾಗಿದ್ದಷ್ಟೂ ನಿಮ್ಮನ್ನು ಹೆಚ್ಚು ವೇಗವಾಗಿ ತನ್ನತ್ತ ಸೆಳೆಯುತ್ತದೆ. F=m.a ಅಂದರೆ ವಸ್ತುವಿನ ಭಾರ ಮತ್ತು ಅದರ ವೇಗೋತ್ಕರ್ಷ ಎರಡೂ ಸೇರಿ, ವಸ್ತುವಿನ ಮೇಲಿರುವ ಒಟ್ಟು ಶಕ್ತಿಯನ್ನು ನಿರ್ಧರಿಸುತ್ತವೆ (ಇದೇ ಕಾರಣಕ್ಕೆ ನಿಧಾನವಾಗಿ ಬಂದು ಗುದ್ದುವ ಲಾರಿ ಹಾಗೂ ವೇಗವಾಗಿ ಬಂದು ಗುದ್ದುವ ಲಾರಿಗಳ ಅಪಘಾತ ಪರಿಣಾಮ ಬೇರೆ ಬೇರೆ)

ಆದರೆ, ಈ ಚೆಂಡು ಮತ್ತು ಹಕ್ಕಿಪುಕ್ಕದ ಉದಾಹರಣೆಯಲ್ಲಿ, ಹಕ್ಕಿಪುಕ್ಕದ ವೇಗೋತ್ಕರ್ಷವನ್ನು ಕಡಿಮೆ ಮಾಡುವ ಇನ್ನೊಂದು ಮಹತ್ವದ ಅಂಶವನ್ನು ಮರೆಯಬಾರದು. ಅದೇ ಗಾಳಿಯ ಪ್ರತಿರೋಧ. ಚೆಂಡಿನ ಮೇಲ್ಮೈ ನುಣುಪಾಗಿಯೂ ಒಂದೇ ರೀತಿ ಇರುವುದರಿಂದಾಗಿಯೂ, ಆ ವಸ್ತುವಿಗೆ ಗಾಳಿ ಒಡ್ಡುವ ಪ್ರತಿರೋಧ ಕಡಿಮೆ. ಅದರ ಮೈ ಮೇಲೆ ಗಾಳಿ ಸುಲಭವಾಗಿ ಸವರಿಕೊಂಡು ಹೋಗುತ್ತದೆ. ಹಕ್ಕಿಪುಕ್ಕದ ಇಡೀ ಮೇಲ್ಮೈ ಒಂದೇ ರೀತಿಯಿಲ್ಲದ ಕಾರಣ ಅದಕ್ಕೆ ಗಾಳಿ ಒಡ್ಡುವ ಪ್ರತಿರೋಧ ಹೆಚ್ಚು. ವೇಗವಾಗಿ ಹೋಗುತ್ತಿರುವ ಕಾರಿನ ಅಥವ ರೈಲಿನಲ್ಲಿ ಕಿಟಕಿಯಿಂದ ಕೈ ಹೊರಹಾಕಿ ನೋಡಿ! (ಮೊದಲು ಕೈಯನ್ನು ಹೊರಹಾಕುವುದು ಸುರಕ್ಷಿತವೇ ಎಂಬುದನ್ನು ಖಚಿತಪಡಿಸಿಕೊಳ್ಳಿ) ಹಸ್ತವನ್ನು ತೆರೆದಾಗ ಗಾಳಿಯ ಪ್ರತಿರೋಧದ ಅನುಭವ ನಿಮಗಾಗುತ್ತದೆ. ಈಗ ಕೈಯನ್ನು ಮುಷ್ಟಿಕಟ್ಟಿ, ಗಾಳಿಯ ಪ್ರತಿರೋಧ ಕಡಿಮೆಯಾಗುವುದು ನಿಮ್ಮ ಅನುಭವಕ್ಕೆ ಬರುತ್ತದೆ. ಈ ಕಾರಣಕ್ಕಾಗಿಯೇ ವಾಹನ ತಯಾರಿಕಾ ಕಂಪನಿಗಳು ಗಾಳಿಯ ಹರಿವಿಗನುಗುಣವಾಗಿ ವಾಹನಗಳ ಮುಖಗಳನ್ನು ವಿನ್ಯಾಸಿಸುವುದು.

ಇಲ್ಲಿ ಕೆಳಗೊಂದು ಕುತೂಹಲಕಾರಿ ವಿಡಿಯೋ ಇದೆ ನೋಡಿ. ಈ ವಿಡಿಯೋದಲ್ಲಿ ಒಂದು ಪ್ರಯೋಗ, ಮತ್ತದರ ವಿವರಣೆ ಇದೆ. ಒಂದು ರೂಮಿನಲ್ಲಿ ಇರುವ ಗಾಳಿಯನ್ನೆಲ್ಲಾ ತೆಗೆದು, ಒಂದು ಭಾರದ ಚೆಂಡು ಮತ್ತು ಒಂದಷ್ಟು ಹಕ್ಕಿಪುಕ್ಕಗಳನ್ನು ಒಂದೇ ಎತ್ತರದಿಂದ, ಒಂದೇ ಸಮಯಕ್ಕೆ ಕೆಳಬಿಟ್ಟರೆ ಏನಾಗುತ್ತದೆ ಎಂಬುದನ್ನು ತೋರಿಸುವ ಪ್ರಯೋಗವಿದು. ನೋಡಿ ಆನಂದಿಸಿ.

ಇದನ್ನು ನೋಡಿದಾಗ ನನಗನ್ನಿಸಿದ್ದು, ಜಗತ್ತಿನಲ್ಲಿ ಜನರೂ ಇಷ್ಟೇ ಸಮಾನರಾಗಿ ಹುಟ್ಟಿದ್ದರು. ಆದರೆ ನಿಧಾನವಾಗಿ (ಕು)ಯುಕ್ತಿ, ಹಣಬಲ, ಭಾಂಧವ್ಯಪ್ರೇಮ, ಮುಂತಾದವನ್ನೆಲ್ಲಾ ಬೆಳೆಸಿಕೊಂಡು ಅಸಮಾನರಾಗಿಬಿಟ್ಟರು. ಹಾಗಾಗಿಯೇ ಇವತ್ತು ಕೆಲವರ ಅಪರಾದ ಮುಚ್ಚಿಹೋಗುತ್ತೆ, ಕೆಲವರ ಮುಗ್ಧತೆ ಎಂದಿಗೂ ಹೊರಬರೊಲ್ಲ. ಈ ಪ್ರಯೋಗದಲ್ಲಿ ಮಾಡಿದಂತೆ ಈ ‘ವಿಶೇಷ’ ಬಲಗಳನ್ನೆಲ್ಲಾ ಹೊರಗೆಳೆದು ನಿರ್ವಾತದ ವಾತಾವರಣ ನಿರ್ಮಾಣ ಮಾಡಿದಾಗ, ಯಾವುದೇ ಪ್ರಭಾವ/ವರ್ಚಸ್ಸು ಇಲ್ಲವಾದಾಗ, ಎಲ್ಲರೂ ಒಂದೇ ಎಂದಾದಾಗ ಮಾತ್ರ ಎಲ್ಲ ಅಪರಾಧಗಳೂ ಸಮಾನವಾಗಿ ನಿರ್ಧರಿಸಲ್ಪಡುತ್ತವೆ. ಅಲ್ಲಿಯವರೆಗೆ, ಸಮಾಜದ ಅಂಕುಡೊಂಕುಗಳನ್ನು ಒಪ್ಪಿಕೊಂಡು ಬದುಕುವುದಷ್ಟೇ ನಮಗುಳಿದ ದಾರಿ. ಇಲ್ಲವೆಂದಾದಲ್ಲಿ ಆ ಅಂಕುಡೊಂಕುಗಳನ್ನು ಸರಿಪಡಿಸುವ ಪ್ರಯತ್ನ ನಡೆಯಬೇಕು. ಅದಕ್ಕಾಗಿ ಹೋರಾಡಬೇಕು. ನಮ್ಮ ಅಭಿಪ್ರಾಯಗಳು ವ್ಯಕ್ತವಾಗಬೇಕು. ಮಾತನಾಡಬೇಕು. ಎದೆಬಿಚ್ಚಿ ಕೂಗಬೇಕು. ಸಾಕುಬಿಡಿ ತುಂಬಾ ಎಮೋಶನಲ್ ಆದ್ರೆ ಕಷ್ಟ…. 😦

ಕೊಸರು:

ನಿಮ್ಮ ತೂಕ ಭೂಮಿಯ ಮೇಲೆ x ಎಂದಿಟ್ಟುಕೊಳ್ಳೋಣ. ಮೊದಲೇ ಹೇಳಿದಂತೆ ಈ ತೂಕ ಭೂಮಿಯ ಗುರುತ್ವಬಲದಿಂದ ನಿರ್ಧಾರಿತವಾದದ್ದು. ನಿಮ್ಮ ನಿಜವಾದ ತೂಕ ಅದಲ್ಲ. ಹಾಗೂ ಈ ತೂಕ ನೀವೆಲ್ಲಿದ್ದೀರಿ ಎನ್ನುವುದರ ಮೇಲೂ ನಿರ್ಧಾರಿತವಾಗುತ್ತದೆ. ಅಂದರೆ ಯಾವ ಗ್ರಹದ ಮೇಲಿದ್ದೀರಿ ಎನ್ನುವುದರ ಮೇಲೆ ಅವಲಂಬಿತವಾಗಿದೆ. (ಭೂಮಿಯಮೇಲೂ ಕೆಲವೊಮ್ಮೆ ಬೇರೆ ಬೇರೆ ಎತ್ತರದ ಪ್ರದೇಶಗಳಲ್ಲಿದ್ದಾಗ ನಿಮ್ಮ ತೂಕ ಬದಲಾಗುತ್ತದೆ! ನಿಮಗೇ ಗೊತ್ತಿಲ್ಲದಂತೆ!!) ಉದಾಹರಣೆಗೆ ಮಂಗಳಗ್ರಹವನ್ನು ತೆಗೆದುಕೊಳ್ಳೋಣ. ಮಂಗಳಗ್ರಹ ನೋಡಲು ಭೂಮಿಯಷ್ಟೇ ದೊಡ್ಡದಿದ್ದರೂ, ಅದರ ಸಾಂದ್ರತೆ ಭೂಮಿಗಿಂತಾ ಕಡಿಮೆ. ಹಾಗಾಗಿ ಅದರ ವಾತಾವರಣವೂ ಭೂಮಿಯ ವಾತಾವರಣಕ್ಕಿಂತ ತೆಳು. ಈ ಕಾರಣದಿಂದಾಗಿ ಮಂಗಳನ ಗುರುತ್ವ ಭೂಮಿಯ ಗುರುತ್ವಕ್ಕೆ ಹೋಲಿಸಿದರೆ 38% ಅಷ್ಟೇ. ಅಂದರೆ ಮಂಗಳ ತನ್ನ ಮೇಲಿರುವ ವಸ್ತುಗಳನ್ನು ಪ್ರತಿಸೆಕೆಂಡಿಗೆ 3.7ಮೀಟರ್ ಬಲದಲ್ಲಷ್ಟೇ ಕೆಳಗೆಳೆಯುತ್ತಾನೆ (ಭೂಮಿ 9.8ಮೀ, ಪ್ರತಿ ಸೆಕೆಂಡಿಗೆ). ಆದ್ದರಿಂದ ಭೂಮಿಯ ಮೇಲೆ 85 ಕಿಲೋ ಇರುವ ನಾನು ಮಂಗಳನಲ್ಲಿ ಬರೇ 32 ಕಿಲೋ ತೂಗುತ್ತೇನೆ! ಇದೇ ರೀತಿ ಚಂದ್ರನ ಮೇಲೆ ನನ್ನ ಭಾರ 14 ಕಿಲೋ ಅಷ್ಟೇ!! ತೂಕ ಇಳಿಸಬೇಕೆಂಬ ಇಚ್ಚೆಯಿರುವವರು ಸುಮ್ಮನೆ ಜಿಮ್ ಸದಸ್ಯತ್ವದ ಮೇಲೆ ದುಡ್ಡು ಖರ್ಚು ಮಾಡುವುದನ್ನು ಬಿಟ್ಟು ಮಂಗಳಗ್ರಹಕ್ಕೆ ಹೋದರೆ ಸಾಕು. ಹೇಗೂ ನಮ್ಮ ಇಸ್ರೋದವರು ಅತ್ಯಂತ ಕಡಿಮೆ ಖರ್ಚಿನಲ್ಲಿ ಅಲ್ಲಿಗೆ ಹೋಗೋಕೆ ಸ್ಕೈ-ಟ್ಯಾಕ್ಸಿ ಮಾಡ್ತಾ ಇದ್ದಾರಂತೆ 😉 😀

ಒಂದು ನಿಮಿಷ, ಈ ಚರ್ಚೆಯ ಇನ್ನೊಂದು ಬದಿಯನ್ನೂ ನೋಡಿ ಹೋಗಿ ಸ್ವಾಮಿ. ನೆಪ್ಚೂನ್ ಗ್ರಹಕ್ಕೆ ಭೇಟಿ ಕೊಟ್ಟರೆ ಅಲ್ಲಿ ನನ್ನ ತೂಕ 95.6 ಕಿಲೋ! ಗುರುಗ್ರಹ ಮೇಲೆ ನನ್ನ ತೂಕ 200 ಕಿಲೋ!! ಸೂರ್ಯನ ಮೇಲೆ ಏನಾದರೂ ನಿಲ್ಲಲು ಸಾಧ್ಯವಾದರೆ, ಅಲ್ಲಿ ನನ್ನ ತೂಕ 2,301 ಕಿಲೋ!! ಸೃಷ್ಟಿಯಲ್ಲಿ ಅತ್ಯಂತ ಹೆಚ್ಚಿನ ಸಾಂದ್ರತೆಯ ಆಕಾಶಕಾಯವಾದ ನ್ಯೂಟ್ರಾನ್ ನಕ್ಷತ್ರದ ಮೇಲೇನೇನಾದರೂ ನಿಲ್ಲಲು ಸಾಧ್ಯವಾದರೆ ಅಲ್ಲಿ ತೂಕ 1,190 ಶತಕೋಟಿ ಕಿಲೋ!!! (ಕೃಷ್ಣರಂಧ್ರಗಳ ಬಗ್ಗೆ ಮಾತೇ ಬೇಡ ಬಿಡಿ) ಯಾರಿಗಾದರೂ ತೂಕ ಹೆಚ್ಚಿಸಿಕೊಳ್ಲಬೇಕೆಂದಿದ್ದರೆ ಆ ನ್ಯೂಟ್ರಿಗೈನ್ ತಿನ್ನೋ ಬದಲು ನೆಪ್ಚೂನಿಗೋ ಗುರುಗ್ರಹಕ್ಕೋ ಟಿಕೇಟು ತಗೊಳ್ಳಿ 🙂

ನಿಮ್ಮ ತೂಕ ಬೇರೆ ಗ್ರಹದ ಮೇಲೆ ಎಷ್ಟು ಅಂತಾ ತಿಳಿಯೋ ಆಸೆ ಇದ್ರೆ, ಒಂದ್ರೂಪಾಯಿ ನನ್ನ ಸ್ವಿಸ್ ಬ್ಯಾಂಕ್ ಅಕೌಟಿಗೆ ಟ್ರಾಸ್ಪರ್ರ್ ಮಾಡಿ, ಇಲ್ಲಿ ಈ ಕೊಂಡಿಯ ಕಿವಿ ಹಿಂಡಿ http://bit.ly/1bngVTQ

ಇನ್ಮೇಲೆ ಯಾರಾದ್ರೂ “ನಿಮ್ ವೈಟು ಎಷ್ಟು?” ಅಂತಾ ಕೇಳಿದ್ರೆ ಯಾವ ಗ್ರಹದ ಮೇಲೆ ಅಂತಾ ಕೇಳಿ ಅವರನ್ನು ಒಂದೆರೆಡು ಕ್ಷಣ ತಬ್ಬಿಬ್ಬು ಮಾಡಿ. ಆಮೇಲೆ ಅವರು ‘ಯಾಕೆ ಹಾಗೆ ಕೇಳಿದ್ದು?’ ಅಂತಾ ಕೇಳಿದ್ರೆ, ನಾನು ಹೇಳಿದ ಈ ಹರಿಕಥೆ ಪುರಾಣವನ್ನೆಲ್ಲಾ ಅವರಿಗೆ ಕೊರೀರಿ 🙂 ಪುಗ್ಸಟ್ಟೆ ಕೇಳುಗರು ಸಿಕ್ಕಾಗ ಬಿಡಬಾರದು 🙂

ದಿನಕ್ಕೊಂದು ವಿಷಯ – ೨೦

ದಿನಕ್ಕೊಂದು ವಿಷಯ – ೨೦

ಹೆಸರಲ್ಲೇನಿದೆ ಬಿಡಿ ಸ್ವಾಮಿ

ನಿಜವಾಗಿಯೂ…..ಹೆಸರಲ್ಲೇನಿದೆ!? ಬರೀ ಅಕ್ಷರಗಳು ಅಂತಾ ಜೋಕ್ ಮಾಡ್ಬೇಡಿ. ಎಷ್ಟೋ ಸಲ ಮನುಷ್ಯನಿಗಿಂತಾ ಅವನ ಹೆಸರೇ ಮುಖ್ಯವಾಗುತ್ತೆ. ಅದಕ್ಕೇ ಅಲ್ವೇ, ಮನುಷ್ಯ ಸತ್ತಮೇಲೂ ಅವನ ಕೆಲಸಗಳಿಂದಾಗಿ ಹೆಸರು ಮಾತ್ರ ಉಳಿಯುವುದು? ಕೆಲವೊಮ್ಮೆ ಮಾಡಿದ ಕೆಲಸ ಕೂಡ ಅಳಿದು ಹೋದಮೇಲೂ ಹೆಸರು ಮಾತ್ರ ಹಾಗೇ ಉಳಿಯುತ್ತೆ (ಉದಾ: ಅಲೆಕ್ಸಾಂಡರ್). ಎಲ್ಲಾ ನಾಯಿಗಳೂ ಒಂದೇ ಆದ್ರೂ ಸಹ ಕೆಲವರು ಟೈಗರ್ ಅಂತಲೂ ಕೆಲವರು ಪಿಂಕಿ ಅಂತಲೂ ಹೆಸರಿಡ್ತಾರೆ. ಯಾಕೆಂದರೆ ಒಂದು ಜೀವಿಗೆ ಅಸ್ಮಿತೆ ಕೊಡುವುದರಲ್ಲಿ ಹೆಸರಿನ ಪಾತ್ರ ಬಹುಮುಖ್ಯ.

ಹೆಸರು ಎನ್ನುವ ಕಲ್ಪನೆ ಯಾವಾಗಲಿಂದ ಪ್ರಾರಂಭವಾಯ್ತು ಎನ್ನುವುದು ಇಂದಿಗೂ ಒಂದು ಕುತೂಹಲಭರಿತ ವಿಷಯ. ನಮ್ಮೆಲ್ಲಾ ದಾಖಲೀಕೃತ ಚರಿತ್ರೆ ಹಾಗೂ ದಾಖಾಲಾಗದ ಪುರಾಣಗಳು ಬರುವ ಕಾಲಕ್ಕಾಗಲೇ ಹೆಸರಿಡುವ ಸಂಪ್ರದಾಯ ಪ್ರಾರಂಭವಾಗಿತ್ತು. ಮಾನವಶಾಸ್ತ್ರಜ್ಞರ ಪ್ರಕಾರ ಭೂಮಿಯ ಮೇಲೆ ಜನಿಸಿದ ಮೊದಲ ಮನುಷ್ಯರು ಒಬ್ಬರನ್ನೊಬ್ಬರು ಬೇಟಿಯಾದಾಗ, ಒಬ್ಬರನ್ನೊಬ್ಬರು ಗುರುತಿಸಲು ಹೆಸರು, ಹಚ್ಚೆ, ಸಂಖ್ಯೆ ಇವೆಲ್ಲವನ್ನೂ ಕಂಡುಹಿಡಿದರು ಎಂದು ಹೇಳುತ್ತಾರೆ.

ಸಾವಿರಾರು ವರ್ಷದ ನಂತರ ನಾವೀಗ ಎಲ್ಲಿಗೆ ಬಂದು ನಿಂತಿದ್ದೇವೆ ಎಂದರೆ, ಹೆಸರೇ ಎಲ್ಲವೂ ಆಗಿದೆ. ಮಾಡುವ ಕೆಲಸ ಏನು ಬೇಕಾದರೂ ಆಗಲಿ ಇನ್ಫೋಸಿಸ್, ವಿಪ್ರೋ, ಟಾಟಾ, ಕಿಂಗ್ಫಿಷರ್ ಎಂಬ ಹೆಸರಿನ ಕಂಪನಿಗಳಲ್ಲಿ ಕೆಲಸ ಬೇಕಾಗಿದೆ. ಕುಡಿಯುವುದು ವಿಸ್ಕಿಯೇ ಆಗಿದ್ದರೂ ಜಾಕ್ ಡೇನಿಯಲ್ಲೇ ಬೇಕು, ಜಾನಿ ವಾಕರ್ರೇ ಬೇಕು. ಸೇದುವುದು ಅದೇ ಅನಿಷ್ಟ ಹೊಗೆಯಾದರೂ ಗೋಲ್ಡ್ ಫ್ಲೇಕ್, ವಿಲ್ಸ್ ಎನ್ನುವ ಹೆಸರಿನದ್ದೇ ಆಗಬೇಕು. ನಮ್ಮ ಅಜ್ಜಿಯಂತೂ ತಿನ್ನೋದು ಅದೇ ಕಾಂಪೋಸಿಶನ್ ಮಾತ್ರೆಯಾದರೂ ಅವರಿಗೆ ಬಿ.ಪಿ ಇಳಿಸಲು Diamox ಮಾತ್ರೇನೇ ಆಗ್ಬೇಕು. ಅವರಿಗೆ ಎಷ್ಟು ಅರ್ಥ ಮಾಡಿಸಿದ್ರೂ ಬೇರೆ ಮಾತ್ರೆ ತಿನ್ನೊಲ್ಲ. ಹಾಗಾಗಿ ಹೆಸರಲ್ಲೇನಿದೆ ಸ್ವಾಮಿ ಅನ್ಬೇಡಿ. ತುಂಬಾನೇ ಇದೆ

ಆದರೆ ಮನುಷ್ಯರ ವಿಷಯಕ್ಕೆ ಬಂದ್ರೆ ಇಲ್ಲಿ ತಮಾಷೆಯ ದೊಡ್ಡ ಪಟ್ಟಿಯೇ ಇದೆ. ನಮ್ಮಜ್ಜಿ ಹೆಸರು ಶಾರದ ಅಂತಾ, ಆದ್ರೆ ಓದೋಕೆ ಒಂದಕ್ಷರಾನೂ ಬರಲ್ಲ! ನುಡ್ಸೋದು ಹೋಗ್ಲಿ, ವೀಣೇನ ಕೈಯಲ್ಲಿ ಹಿಡಿಯೋಕೂ ಬರಲ್ಲ! ಅಜೇಯ ಅಂತಾ ಹೆಸರಿಟ್ಟುಕೊಂಡು ಓಡೋ ರೇಸಿನಲ್ಲೆಲ್ಲಾ ಸೋಲುವ ನನ್ನ ದೋಸ್ತ್ ಒಬ್ಬ ಇದ್ದಾನೆ. ಹೆಸರು ಸಿದ್ರಾಮ, ಕೆಲಸಕ್ಕೆ ಕರೆದ್ರೆ….ಏಯ್ ಹೋಗಪ್ಪಾ ಅನ್ನೋ ಜನರನ್ನ ನಾವು ನೋಡಿಲ್ವಾ? ಶಕ್ತಿ ಅಂತಾ ಹೆಸರಿಟ್ಟುಕೊಂಡು, ಐದು ಕೇಜಿ ಅಕ್ಕಿ ಮೂಟೆ ಎತ್ತುವಷ್ಟರಲ್ಲಿ ಸುಸ್ತು ಆಗೋರನ್ನ ನಾವು ನೊಡಿಲ್ವಾ!?

ಆದರೆ ಇವತ್ತಿನ ವಿಷಯ, ಊರಿನ ಹೆಸರುಗಳು. ಆದರೆ ಅಂತಿಂತಾ ಹೆಸರುಗಳಲ್ಲ. ತಮಾಷೆಯ ಹೆಸರುಗಳು. ನಮ್ಮಲ್ಲೇನೋ ‘ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್’ ಎಂದು ನಮ್ಮ ಆದಿಕವಿ ಪಂಪ ಹೆಮ್ಮೆಯಿಂದ ಹೇಳಿಕೊಂಡ. ಆದರೆ ಎಲ್ಲರೂ ಹಾಗಿರೋಲ್ಲ. ಅವರ ದೇಶವೂ ಬಹುಷಃ ಹಾಗಿರೊಲ್ಲ ಅನ್ಸುತ್ತೆ. ಅದಕ್ಕೇ ನೋಡಿ ಯು.ಎಸ್.ಎ.ನಲ್ಲಿ ಓರೆಗಾಂವ್ ಎಂಬ ರಾಜ್ಯದಲ್ಲಿ ಒಂದು ಊರಿನ ಹೆಸರು ‘ಡಲ್ (Dull)’ (ಚಿತ್ರ 1) ಅಂತಾ ಇಟ್ಟುಬಿಟ್ಟಿದ್ದಾರೆ. ಇದಕ್ಕೆ ಸರಿಯಾಗಿ, ಇವರ ಪಕ್ಕದ ಊರಿನವರೂ ಸಹ ನಾವೀನೂ ಕಮ್ಮಿ ಇಲ್ಲ, ಅಂತಾ ತೋರಿಸೋಕೆ ಅವರ ಊರಿಗೆ ‘ಬೋರಿಂಗ್ (Boring)’ (ಚಿತ್ರ 2) ಅಂತಾ ಹೆಸರಿಟ್ಟಿದ್ದಾರೆ. ಜೀವನದಲ್ಲಿ ಅದೇನೋ ಜಿಗುಪ್ಸೆಯೋ ಈ ಜನರಿಗೆ, ಇವರಿಬ್ರೂ ಸೇರ್ಕೋಂಡು ಪ್ರತೀವರ್ಷದ ಆಗಸ್ಟ್ 9ರಂದು ‘ಡಲ್ ಹಾಗೂ ಬೋರಿಂಗ್ ದಿನ (Dull & Boring Day)’ ಅಂತಾ ಆಚರಿಸುತ್ತಾರಂತೆ!! ಅವತ್ತು ನಡೆಯುವ ಕಾರ್ಯಕ್ರಮಗಳು ಅಷ್ಟೇನೂ ಆಸಕ್ತಿದಾಯಕವಾಗಿರಲಿಕ್ಕಿಲ್ಲ UKಯಲ್ಲಿ ಸಹಾ ಡಲ್ ಎನ್ನುವ ಇನ್ನೊಂದು ಸಣ್ಣ ಊರಿದೆ! ಈ ಡಲ್ ಮತ್ತು ಬೋರಿಂಗಿಗೆ ಸ್ಪರ್ಧೆಯೊಡ್ದಲು ನಿರ್ಧರಿಸಿದ ಆಸ್ಟ್ರೇಲಿಯನ್ನರು ತಮ್ಮದೊಂದು ಊರಿಗೆ ‘ಬ್ಲಾಂಡ್(Bland = ಸಪ್ಪೆ)’ (ಚಿತ್ರ 3) ಎಂದು ಹೆಸರಿಟ್ಟಿದ್ದಾರೆ!!

ಅಮೇರಿಕಾದಲ್ಲಿ ಮತ್ತು ಯೂರೋಪಿನ ಬಹಳಷ್ಟು ದೇಶಗಳಲ್ಲಿ ಇಂತಹುದೇ ತಮಾಷೆಯ ಹೆಸರಿಗೇನೋ ಕಮ್ಮಿಯಿಲ್ಲ. ಯಾರೋ ಪುಣ್ಯಾತ್ಮ ‘ಸ್ವರ್ಗ ಮತ್ತು ನರಕ ಮೇಲೆಲ್ಲೋ ಇಲ್ಲ….ಇಲ್ಲೇ ಇವೆ..ಈ ಭೂಮಿಯಲ್ಲಿಯೇ ಇವೆ’ ಅಂತಾ ಹೇಳಿದ್ದನ್ನ ಸೀರಿಯಸ್ಸಾಗಿ ತಗೊಂಡ್ರೋ ಏನೋ, ಒಂದೂರಿಗೆ ‘ಹೆಲ್ (Hell)’ (ಚಿತ್ರ 4a ಮತ್ತು 4b) ಅಂತಾನೇ ಹೆಸರಿಟ್ಟಿದ್ದಾರೆ. ‘ಹೆವನ್ (Heaven)’ ಎನ್ನುವ ನಗರ ಇದೆ ಎಂದು ಕೇಳಲ್ಪಟ್ಟಿದ್ದೇನಾದರೂ, ಇದುವರೆಗೂ ಅದನ್ನು ನಿರೂಪಿಸುವ ಚಿತ್ರಗಳ್ಯಾವುದೂ ಇನ್ನೂ ಕಂಡುಬಂದಿಲ್ಲ. ಅಲ್ಲಿಯವರೆಗೆ ಸ್ವರ್ಗವನ್ನು ಹುಡುಕುತ್ತಲೇ ಇರಬೇಕು.

ಇಲ್ಲೊಂದು ತಮಾಷೆ ನೋಡಿ. ಇಲ್ಲದೇ ಇರುವುದು ಇರಲು ಸಾಧ್ಯವಿದೆಯೇ!? ಹೌದು ಸ್ವಾಮಿ, ಊರಿನ ಹೆಸರಿನಲ್ಲಿ ಸಾಧ್ಯವಿದೆ ಬ್ರಿಟೀಷರು ಈ ವಿಚಿತ್ರದ ಹಿಂದೆ ತಮ್ಮ ಕೈವಾಡ ತೋರಿಸಿದ್ದಾರೆ. ಡರ್ಹಮ್ (Durham) ಇಂಗ್ಲೆಂಡಿನ ಒಂದು ಕಂಟಿ. ಅಲ್ಲೊಂದು ಊರಿನ ಹೆಸರು ‘ನೋ ಪ್ಲ್ಲೇಸ್ (No Place)’!!!! (ಚಿತ್ರ 5). ಒಮ್ಮೆ ಬೀಚಿಯವರ ಒಂದು ಲಲಿತಪ್ರಬಂಧದಲ್ಲಿ, ಅವರು ಮಲ್ಲೇಶ್ವರಂನಲ್ಲಿ ನಡೆಯುತ್ತಿರುವಾಗ ‘ಸೌಂದರ್ಯ ವಿಲ್ಲಾ (Soundarya Villa)’ ಎಂಬ ಮನೆಯ ಹೆಸರಿನಲ್ಲಿ, ಮಧ್ಯದ ಖಾಲಿಜಾಗ ತುಂಬಾ ಸಣ್ಣಗಿದ್ದರಿಂದ ಅದು ‘ಸೌಂದರ್ಯವಿಲ್ಲಾ’ ಎಂದು ಕಂಡಿದಕ್ಕೂ, ಅಷ್ಟೇನೂ ಸುಂದರವಿಲ್ಲದ ಆ ಮನೆಯೊಡತಿ, ಅಲ್ಲೇ ಮನೆಯ ಮುಂದೆ ನಿಂತಿದ್ದಕ್ಕೂ ಸಂಬಂದಕಲ್ಪಿಸಿದ ಬೀಚಿಯವರು ‘ಸೌಂದರ್ಯವಿಲ್ಲದಿದ್ದರೆ ಪರವಾಗಿಲ್ಲ. ಆದರೆ ಅದನ್ನು ಬೋರ್ಡು ಹಾಕಿ ಇಷ್ಟು ರಾಜಾರೋಷವಾಗಿ ಹೇಳಿಕೊಳ್ಳುವುದ್ಯಾಕೆ?’ ಎಂದು ಹೇಳಿದ್ದು ನೆನಪಾಯ್ತು. ಬಹುಷಃ ಈ ಊರಿನಲ್ಲೂ ಹೊಸಬರಿಗೆ ಮನೆ ಕಟ್ಟಲು ಜಾಗವಿಲ್ಲವೆಂದು ತಿಳಿಸಲು ‘No Place=ಜಾಗವಿಲ್ಲಾ’ ಅಂತೇನಾದ್ರೂ ಹೆಸರಿಟ್ಟಬಹುದೇ!?

ಬ್ರಿಟೀಷರು ಇಂತಾ ಕೆಲಸ ಮಾಡಿದ ಮೇಲೆ ಅಮೇರಿಕನ್ನರು ಏನಾದರೂ ಕಿತಾಪತಿ ಮಾಡಲೇಬೇಕಲ್ಲ!! ಮಾಡಿದ್ದಾರೆ ಇಲ್ಲಿ ನೋಡಿ. ಅಮೇರಿಕೆಯಲ್ಲೊಂದು ಜಾಗದ ಹೆಸರು ‘ನೋ ನೇಮ್ (No Name)’!! (ಚಿತ್ರ 6) ಅಂದರೆ ಊರಿನ ಹೆಸರೇ ‘ಹೆಸರಿಲ್ಲ’ ಅನ್ನುವಂತಾಗಿದೆ!!! ಈ ಊರಿನ ಸುತ್ತಮುತ್ತ ಓಡಾಡೋ ಬಸ್ಸಿನ ಕಂಡಕ್ಟರುಗಳಿಗೆ ಭಯಂಕರ ತಲೆಬಿಸಿ ಅಲ್ವಾ!? ಯಾರಾದ್ರೂ ಪ್ಯಾಸೆಂಜರ್ ‘ಹೆಸರಿಲ್ಲದ ಜಾಗಕ್ಕೆ ಒಂದು ಟಿಕೇಟ್ ಕೊಡಪ್ಪಾ’ ಎಂದರೆ, ಎಂತಾ ಕನ್ಫ್ಯೂಷನ್ ನೋಡಿ!

ಪೋಲೆಂಡಿನ ಒಂದು ಸಣ್ಣ ಊರಿಗೆ ‘ಪೋಲೀಸ್ (Police)’ (ಚಿತ್ರ 7) ಅಂತಾ ಹೆಸರಿಟ್ಟುಬಿಟ್ಟಿದ್ದಾರೆ! ಅದೇನು ಪೋಲೀಸರೇ ಇರೋ ಊರೋ, ಅಥವಾ ಕಳ್ಳರು ಬರಬಾರದೆಂಬ ಕಾರಣಕ್ಕೆ ಆ ಊರಿಗೆ ಪೋಲೀಸ್ ಅಂತಾ ಹೆಸರಿಟ್ಟಿದ್ದಾರೋ, ಇನ್ನೂ ಗೊತ್ತಾಗಿಲ್ಲ.

ನಮ್ಮ ಮಹಿಳಾವಾದಿಗಳಿಗೆಲ್ಲಾ ಸಿಟ್ಟುಬರುವಂತಹ ಕೆಲಸವನ್ನು ಅಮೇರಿಕಾದ ವರ್ಜೀನಿಯಾ ರಾಜ್ಯದ ಪುಣ್ಯಾತ್ಮರು ಮಾಡಿದ್ದಾರೆ. ಅಲ್ಲೊಂದು ಊರಿನ ಹೆಸರು ‘ಕ್ರೇಜಿ ವುಮನ್ ಕ್ರೀಕ್ (Crazy Woman Creek)’ (ಚಿತ್ರ 8). ವಿಕ್ರಮಾಧಿತ್ಯನ ಕತೆಗಳಲ್ಲಿ ಬರುವ ‘ಪ್ರಮೀಳಾ ಸಾಮ್ರಾಜ್ಯ’ ಇದೇ ಇರಬಹುದೆಂದು ನನ್ನ ಹಾಗೂ ಎಲ್ಲಾ ಪುರುಷವಾದಿಗಳ ಅನಿಸಿಕೆ.

ಇಷ್ಟೆಲ್ಲಾ Dull ಹಾಗೂ Boring ಹೆಸರುಗಳ ನಡುವೆ, ಅಲ್ಲೆಲ್ಲೋ ಒಂದು ಕಡೆ (ಅಮೇರಿಕೆಯಲ್ಲಿ) ‘ಬ್ರಿಲಿಯಂಟ್ (Brilliant)’ (ಚಿತ್ರ 9) ಎಂಬ ಸಣ್ಣ ಊರೂ ಇದೆ. ಊರಿನಲ್ಲಿರುವವರು ನಿಜವಾಗಿಯೂ ಬ್ರಿಲಿಯಂಟ್ ಹೌದೋ ಅಲ್ಲವೋ, ಆದರೆ ಊರಿಗೆ ಈ ಹೆಸರಿಟ್ಟವನಂತೂ ನಿಜವಾಗಿಯೂ ಬ್ರಿಲಿಯಂಟ್ ಅಲ್ಲವೇ!?

‘ಅಪಘಾತ ವಲಯ, ನಿಧಾನವಾಗಿ ಚಲಿಸಿ’ ಎಂಬ ಫಲಕವನ್ನು ನೀವು ನಮ್ಮ ರಸ್ತೆಗಳಲ್ಲಿ ನೋಡಿರುತ್ತೀರಿ. ಆದರೆ ಇಡೀ ಊರಿನ ಹೆಸರೇ ‘ಅಪಘಾತ’ ಅಂತಿದ್ದರೆ!! ಚಿತ್ರ 10ನ್ನು ನೋಡಿ. ಮೇರಿಲ್ಯಾಂಡಿನ ಈ ಊರಿನ ಅಕ್ಕಪಕ್ಕದಲ್ಲಿ ಕಾರು ಚಲಾಯಿಸುವಾಗ ಸ್ವಲ್ಪ ಜಾಗ್ರತೆ ಮಾರಾಯ್ರೆ

ಹಾರ್ವಡ್ ವಿದ್ಯಾಲಯದಲ್ಲಿ ಒಮ್ಮೆ ತತ್ವಶಾಸ್ತ್ರದ ಪರೀಕ್ಷೆಯಲ್ಲಿ, ನೂರು ಅಂಕಕ್ಕೆ ಒಂದೇ ಒಂದು ಪ್ರಶ್ನೆಯನ್ನು ಒಮ್ಮೆ ಕೇಳಿದ್ದರಂತೆ. ಪ್ರಶ್ನೆ ಇದ್ದದ್ದು ‘Why?’ ಎಂದಷ್ಟೇ! ಅದರಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿ ಒಬ್ಬನೇ ಒಬ್ಬ. ಅವನ ಉತ್ತರ ಇದ್ದದ್ದು ಇಷ್ಟೇ ‘Why not?’ ಆ ಕಥೆ ಎಷ್ಟು ನಿಜವೋ ಗೊತ್ತಿಲ್ಲ. ಆದರೆ ‘Why’ ಮತ್ತು ‘Why Not’ ಎಂಬ ಎರಡು ಊರುಗಳಿರುವುದಂತೂ ಸತ್ಯ (ಚಿತ್ರ 11 ಮತ್ತು 12).

ಇಷ್ಟೇ ಅಲ್ಲದೆ ‘Peculiar’, ‘Wair-a-bit’, ‘Truth of consequences’, ‘Happy’, ‘Climax’ ಮುಂತಾದ ವಿಚಿತ್ರ ಹೆಸರಿನ ಊರುಗಳಿಗೆ ಈ ವಿಚಿತ್ರ ಜಗತ್ತಿನಲ್ಲೇನೂ ಬರವಿಲ್ಲ. ಪಾಶ್ಚಿಮಾತ್ಯ ದೇಶದ ನಗರಗಳಿಗೆ ಪೂರ್ವದ ದೇಶಗಳಷ್ಟು ಚರಿತ್ರೆಯಾಗಲೀ, ಪೌರಣಿಕ ಮಹತ್ವವಾಗಲೀ ಇಲ್ಲವಾದ್ದರಿಂದ, ಬಹುಷಃ ಅವರಿಗೆ ಊರಿನ ಹೆಸರಿಗೂ ಅದರ ಇತಿಹಾಸಕ್ಕೂ ಸಂಬಂಧಕಲ್ಪಿಸುವ ಅಗತ್ಯ ಕಂಡುಬರುವುದಿಲ್ಲವೆಂದೆನಿಸುತ್ತದೆ.

ಈ ಲೇಖನ, ಕೆಲ ವಿಚಿತ್ರ ಹೆಸರುಗಳನ್ನು ಪರಿಚಯಿಸುವ ಪ್ರಯತ್ನವಷ್ಟೇ. ಇಲ್ಲಿ ಬರೆಯಲಾಗದಷ್ಟು ಚಿತ್ರವಿಚಿತ್ರವಾದ ಊರಿನ ಹೆಸರುಗಳೂ ಇವೆ. ಎಲ್ಲವನ್ನೂ ಬರೆದು ಹೇಳಲು ಸಾಧ್ಯವಿಲ್ಲವಾದ್ದರಿಂದ, ಅಂತಹ ವಿಚಿತ್ರ ಊರುಗಳ ಹೆಸರುಗಳ ದೊಡ್ಡ ಪಟ್ಟಿಯೇ ಸಿಗುವ ಈ ಕೊಂಡಿಯನ್ನು ಕ್ಲಿಕ್ಕಿಸಿ ನೋಡಿhttp://bit.ly/1rONdj1

ಕೊಸರು:

ವೇಲ್ಸ್ ನಲ್ಲಿ ‘Llanfairpwllgwyngyllgogerychwyrndrobwllllantysiliogogogoch’ ಎಂಬ ‘ಸಣ್ಣ ಹೆಸರಿನ’ ಒಂದು ಸಣ್ಣ ಊರಿದೆ. ನಮ್ಮಲ್ಲಿ ಪಂಚಾಯ್ತಿ ಮೆಂಬರುಗಳು ಜಗಳಮಾಡುವಂತೆ ಅಲ್ಲಿಯೂ 2007ರಲ್ಲಿ ಅಕ್ಕಪಕ್ಕದವರು ಕಚ್ಚಾಡಿಕೊಂಡು, ಈ ಊರಿನ ಪಕ್ಕದ ಊರಿನವರು ತಮ್ಮ ಊರನ್ನು ಪ್ರಚಾರಪಡಿಸಲು ಆದಾಗಲೇ ಇದ್ದ ತಮ್ಮ ಊರಿನ Golf Halt ಎಂಬ ಚೆಂದದ ಹೆಸರು ತೆಗೆದು ಹಾಕಿ, ‘Gorsafawddachaidraigodanheddogleddollônpenrhynareurdraethceredigion’ ಎಂದು ನಾಮಕಾರಣ ಮಾಡಿದ್ದಾರೆ!!! (ಚಿತ್ರ 13) ಎಂತಾ ಕರ್ಮ ಇದು. ಈ ಊರಿಗೆ ಟಿಕೇಟ್ ತೆಗೆದುಕೊಂಡವರಿಗೆ, ಊರಿನ ಹೆಸರನ್ನು ಉಚ್ಚರಿಸುವುದು ಹೇಗೆ ಎನ್ನುವ ಒಂದು ಪುಸ್ತಕವನ್ನೂ ಕೊಡ್ತಾರೇನೋ! ಅಂದಹಾಗೆ ಯಾರಿಗಾದ್ರೂ ಈ ಊರಿನ ಹೆಸರನ್ನು ಉಚ್ಚರಿಸುವುದು ಸಾಧ್ಯವಾದ್ರೆ ತಿಳಿಸಿಕೊಡುವಂತಾರಾಗಿ.

ಆದ್ರೂ ಸಹ, ಹೆಸರಲ್ಲೇನಿದೆ ಬಿಡಿ ಸ್ವಾಮಿ

‪#‎ದಿನಕ್ಕೊಂದು_ವಿಷಯ‬, ‪#‎ಹೆಸರು‬, ‪#‎Unusual_Place_Names‬

10471265_710582709031677_851944101654290417_n10649924_710582699031678_5966505637203616117_n10557321_710582702365011_4944565473791953570_n10444350_710582795698335_6730045903348083834_n483680_710582802365001_1875853452599239236_n10676128_710582885698326_2430854407715537465_n10517323_710582912364990_1449324387781562346_o1465855_710583039031644_5328631512609758623_o   10659326_710583189031629_9053358543616784896_n15777_710583262364955_4524378646959431282_n10672255_710583289031619_1242507730863437059_n1912019_710583345698280_1891832918996092659_o10704038_710583389031609_4483282498238544927_n247758_710583409031607_2644174204723658255_n