ರಸ ಝೆನು‬ – 17

ಚೈನಾದ ಒಂದೂರಲ್ಲಿ ಜಾತ್ರೆ ನಡೆಯುತ್ತಿತ್ತು. ಆ ದಿನದ ಸಂಜೆಯ ಕಾರ್ಯಕ್ರಮ ಒಬ್ಬ ಝೆನ್ ಗುರುವಿನ ಭಾಷಣ.

ಜೀವನದ ಸಾರ್ಥಕತೆಯ ಬಗ್ಗೆ ಸುಮಾರು ಇಪ್ಪತ್ತು ನಿಮಿಷ ಮಾತನಾಡಿದ ಗುರು, “ನನಗ್ಗೊತ್ತು. ನಿಮ್ಮಲ್ಲಿ ನಾನು ಮಾತನಾಡಿದ್ದರ ಬಗ್ಗೆ ಇನ್ನೂ ಸಂದೇಹ ಅಥವಾ ಗೊಂದಲಗಳಿರಬಹುದು. ಯಾವಾಗ ಬೇಕಾದರೂ ನನ್ನ ಆಶ್ರಮಕ್ಕೆ ಬನ್ನಿ. ಅವನ್ನು ಪರಿಹರಿಸುವ” ಎಂದ.

ಈ ಭಾಷಣವನ್ನು ಕೇಳಿಸ್ಕೊಳ್ಳುತ್ತಿದ್ದ ಮನಃಶಾಸ್ತ್ರಜ್ಞನೊಬ್ಬ, ಕಾರ್ಯಕ್ರಮ ಮುಗಿದ ನಂತರ ಗುರುವನ್ನು ಹಿಂಬಾಲಿಸಿ, ಮಾರ್ಗಮಧ್ಯದಲ್ಲಿ ಅವನನ್ನು ಸೇರಿದ. ಒಟ್ಟಿಗೆ ನಡೆಯುತ್ತಾ ಕೆಲ ವಿಷಯಗಳನ್ನು ಚರ್ಚಿಸಿ, ಕೊನೆಗೆ ಮನಃಶಾಸ್ತ್ರಜ್ಞ ಕೇಳಿದ “ನನ್ನದೊಂದು ಕೊನೆಯ ಪ್ರಶ್ನೆಯಿದೆ. ನಾನೊಬ್ಬ ಮನಃಶಾಸ್ತ್ರಜ್ಞ. ನಾನು ಓದಿರುವ ಶಾಸ್ತ್ರ ನನಗೆ ರೋಗಿಗಳ ತೊಂದರೆಗಳ ಬಗ್ಗೆ ತಿಳಿಸುತ್ತದೆ. ಉಳಿದ ಕೆಲ ವಿಷಯಗಳನ್ನು ನಾನು ಅವರನ್ನು ಪ್ರಶ್ನಿಸಿ ತಿಳಿದುಕೊಳ್ಳುತ್ತೇನೆ. ಇದರಿಂದ ನನಗೆ ಅವರ ಖಾಯಿಲೆಗಳನ್ನು ಗುಣಪಡಿಸಲು ಸಹಾಯಕವಾಗುತ್ತದೆ. ಆದರೆ ನಿಮ್ಮ ದಾರಿ ಬೇರೆಯೇ ಎಂದೆನಿಸುತ್ತದೆ ನನಗೆ. ನೀವು ಹೇಗೆ ಅವರ ತೊಂದರೆಗಳನ್ನು ಬಗೆಹರಿಸುತ್ತೀರಾ? ಹೇಗೆ ಉತ್ತರಿಸುತ್ತೀರಾ”

ಝೆನ್ ಗುರು ನಿಧಾನದನಿಯಲ್ಲಿ ಹೇಳಿದ “ತೊಂದರೆಗೆ ಪರಿಹಾರ ನನ್ನ ಉತ್ತರದಲ್ಲಿರುವುದಿಲ್ಲ. ಆದರೆ ನಾನು ನನ್ನ ಬಳಿ ಬಂದವರನ್ನು ಅವರು ಪ್ರಶ್ನೆಗಳನ್ನೇ ಕೇಳಲಾಗದ ಸ್ಥಿತಿಗೆ ಕೊಂಡೊಯ್ಯುತ್ತೇನೆ ಅಷ್ಟೇ. ಸಮಸ್ಯೆಗಳಿಗೆ ಸಮಾಧಾನ ಅವಕ್ಕೆ ಉತ್ತರವಲ್ಲ……ಆ ಪ್ರಶ್ನೆಗಳೇ ಇಲ್ಲದಿರುವುದು, ಅಷ್ಟೇ”
ಮನಃಶಾಸ್ತ್ರಜ್ಞನಿಗೆ ಹೊಸದೊಂದು ಹೊಳಹು ಹೊಳೆಯಿತು. ನಕ್ಕು ನಮಸ್ಕರಿಸಿ ಮುಂದುವರೆದ.

ರಸ_ಝೆನು – 16

ಇವತ್ತಿನ ಕಥೆ, ಬಹುಷಃ ಎಲ್ಲರೂ ಕೇಳಿರಬಹುದಾದ ಝೆನ್ ಕಥೆ. “ಝೆನ್ ಅಂದ್ರೆ ಈ ಕಥೆ” ಅನ್ನೋವಷ್ಟರ ಮಟ್ಟಿಗೆ ಈ ಕಥೆ ಪ್ರಸಿದ್ಧ. ಇವತ್ತು ಅದನ್ನೇ ಹೇಳ್ತೀನಿ.
—————————————–

ನಾನ್-ಇನ್ ಎಂಬ ಪ್ರಸಿದ್ಧ ಜಪಾನೀ ಝೆನ್ ಗುರುವೊಬ್ಬನಿದ್ದ. ಮೈಝೀ ಯುಗದ (1868-1912) ತತ್ವಜ್ಞಾನಿಗಳಲ್ಲಿ ಗುರುಗಳಲ್ಲಿ ಆತ ಬಹಳ ಹೆಸರುಪಡೆದವ. ಅವನಲ್ಲಿಗೆ ಬಂದವರೆಲ್ಲರೂ ಖಂಡಿತವಾಗಿಯೂ ತಮ್ಮದೇ ಆದ ಸಾಕ್ಷಾತ್ಕಾರದೊಂದಿಗೆ ಹಿಂದಿರುಗುತ್ತಿದರು ಎಂಬ ಪ್ರತೀತಿಯಿತ್ತು. ಇವನನ್ನು ಭೇಟಿಮಾಡಲು, ಒಮ್ಮೆ ಒಬ್ಬ ಧರ್ಮಶಾಸ್ತ್ರದ ವಿಶ್ವವಿದ್ಯಾನಿಲಯದ ಉಪನ್ಯಾಸಕನೊಬ್ಬ ಬಂದಿಳಿದ. ತನ್ನನ್ನು ಪರಿಚಯಿಸಿಕೊಂಡು ‘ನಾನೊಬ್ಬ ಉಪನ್ಯಾಸಕ. ಬೇರೆ ಬೇರೆ ಧರ್ಮಶಾಸ್ತ್ರಗಳನ್ನು ಕಲಿತಿದ್ದೇನೆ ಹಾಗೂ ಕಲಿಸುತ್ತಿದ್ದೇನೆ. ಈಗ ನಿಮ್ಮ ಝೆನ್ ಜ್ಞಾನವನ್ನು ಕಲಿಯಲು ಬಂದಿದ್ದೇನೆ’ ಎಂದ.

ನಾನ್-ಇನ್ ತನ್ನ ಅತಿಥಿಯನ್ನು ಸ್ವಾಗತಿಸಿ, ಜಪಾನೀ ವಾಡಿಕೆಯಂತೆ, ಕುಡಿಯಲು ಟೀ ಕೊಡಲೆಂದು ಕಪ್ ತೆಗೆದು ಅವನ ಮುಂದಿಟ್ಟು, ಟೀ ಪಾತ್ರೆಯಿಂದ ಟೀ ಸುರಿಯಲಾರಂಭಿಸಿದ. ಕಪ್ ತುಂಬಿತು. ಆದರೂ ನಾನ್-ಇನ್ ಟೀ ಸುರಿಯುವುದನ್ನು ನಿಲ್ಲಿಸಲಿಲ್ಲ. ಈಗ ಕಪ್ ತುಂಬಿ ಟೀ ಚೆಲ್ಲಲಾರಂಭಿಸಿತು. ಉಪನ್ಯಾಸಕನಿಗೆ ಆಶ್ಚರ್ಯವಾದರೂ ನೋಡಿ ಸುಮ್ಮನಿದ್ದ. ಕಪ್ಪಿನಿಂದ ಹೊರಚೆಲ್ಲಿದ ಟೀ ಸಾಸರಿನಲ್ಲಿ ತುಂಬಲಾರಂಭಿಸಿತು. ಕೆಲವೇ ಹೊತ್ತಿನಲ್ಲಿ ಅಲ್ಲಿಯೂ ತುಂಬಿ ಮೇಜಿನ ಮೇಲೆ ಚೆಲ್ಲಲಾರಂಭಿಸಿತು. ಅಲ್ಲಿಯವರೆಗೂ ಸುಮ್ಮನಿದ್ದ ಉಪನ್ಯಾಸಕ, ತಡೆಯಲಾರದೆ ‘ಗುರುಗಳೇ, ಕಪ್ ತುಂಬಿದೆ. ಅದರೊಳಗೆ ಇನ್ನು ಹಿಡಿಸಲಾರದು’ ಎಂದ.

ಆ ಮಾತನ್ನು ಕೇಳಿದಾಕ್ಷಣ ಟೀ ಸುರಿಯುವುದನ್ನು ನಿಲ್ಲಿಸಿ, ಪಾತ್ರೆ ಬದಿಗಿಟ್ಟು, ನಾನ್-ಇನ್ ತಲೆಯೆತ್ತಿ ಹೇಳಿದ “ಈ ಕಪ್ಪಿನಂತೆಯೇ, ನಿನ್ನ ಮನಸ್ಸು ಸಹಾ ಬೇರೆ ವಿಚಾರಗಳಿಂದ ತುಂಬಿ ತುಳುಕುತ್ತಿದೆ. ನಾನು ನಿನಗೆ ಏನೇ ಕಲಿಸಿದರೂ ಅದು ಹೊರಚೆಲ್ಲುತ್ತದೆಯೇ ಹೊರತು, ನಿನ್ನೊಳಗೆ ಹೋಗಲಾರದು. ಮೊದಲು ನಿನ್ನ ಆ ಟೀ ಕಪ್ಪನ್ನು ಖಾಲಿ ಮಾಡಿಕೊಂಡು ಬಾ. ಆಮೇಲೆ ಝೆನ್ ಕಲಿಯುವುದರ ಬಗ್ಗೆ ಯೋಚಿಸುವೆಯಂತೆ”.

ಆ ಉಪನ್ಯಾಸಕನಿಗೆ ಸತ್ಯದರ್ಶನವಾಯ್ತು. ನಾನ್-ಇನ್’ಗೆ ನಮಸ್ಕರಿಸಿ ಹೊರಟುಹೋದ. ಎರಡೇ ತಿಂಗಳೊಳಗೆ ಮರಳಿಬಂದು ಅಲ್ಲಿನ ಶಿಷ್ಯನಾದ ಎಂಬ ಕಥೆಗಳಿವೆ.

ರಸ ಝೆನು‬ – 15

ಕ್ಯೋಗನ್ ಎಂಬ ಬೌದ್ಧಬಿಕ್ಕು ಇಸನ್ ಎಂಬ ಗುರುವಿನಡಿಯಲ್ಲಿ ಶಿಕ್ಷಣ ಪಡೆಯುತ್ತಿದ್ದ. ಕ್ಯೋಗನ್’ನ ಬುದ್ಧಿಮತ್ತೆ, ತಾತ್ವಿಕ ಅಲೋಚನೆಗಳು ಶಾಲೆಯಲ್ಲಿ ಪ್ರಸಿದ್ಧಿಪಡೆದಿದ್ದವು.

ಒಂದುದಿನ ಇಸನ್ ಕೇಳಿದ “ಕ್ಯೋಗನ್, ನೀನು ಹುಟ್ಟುವ ಮೊದಲು ಏನಾಗಿದ್ದೆ!?”

ಕ್ಯೋಗನ್ ಆ ಪ್ರಶ್ನೆ ಕೇಳಿ ಸ್ಥಂಭೀಭೂತನಾದ. ಆತನ ಬಳಿ ಉತ್ತರವಿರಲಿಲ್ಲ. ಇಸನ್ ಸುಮ್ಮನೇ ಇಂತಹ ಪ್ರಶ್ನೆ ಕೇಳುವುದಿಲ್ಲವೆಂದು ತಿಳಿದಿದ್ದ ಆತ, ತನ್ನ ಬುದ್ಧಿಗೆ ಕೆಲಸ ಕೊಟ್ಟ. ಎಷ್ಟೇ ಆಲೋಚಿಸಿದರೂ ಅರ್ಥವುಳ್ಳ ಉತ್ತರ ಹೊಳೆಯಲಿಲ್ಲ. ಹತಾಶೆಗೊಂಡು ಇಸನ್’ನನ್ನೇ ಸಂದೇಶ ನಿವಾರಿಸುವಂತೆ ಕೇಳಿಕೊಂಡ.

ಅದಕ್ಕೇ ಇಸನ್ ಹೇಳಿದ ‘ನೋಡು, ನಾನಿದಕ್ಕೆ ಉತ್ತರ ಹೇಳಿದರೆ, ಜೀವನವಿಡೀ ನನ್ನನ್ನು ದ್ವೇಷಿಸುತ್ತೀಯ. ಹಾಗಾಗಿ ನಾನಿದಕ್ಕೆ ಉತ್ತರಿಸಲಾರೆ’.

ಕ್ಯೋಗನ್ನನಿಗೆ ಇದ್ದಕ್ಕಿಂದಂತೆ ತಾನೊಬ್ಬ ನಿಷ್ಪ್ರಯೋಜಕ ಎಂಬ ಭಾವನೆ ಆವರಿಸಿತು. ಇಷ್ಟು ವರ್ಷ ಸಾಧನೆ ಮಾಡಿದರೂ, ಓದಿದರೂ ಇಷ್ಟು ಸಣ್ಣ ಪ್ರಶ್ನೆಗೆ ಅರ್ಥಪೂರ್ಣ ಉತ್ತರ ಕೊಡಲು ನನಗಾಗಲಿಲ್ಲವಲ್ಲಾ ಎಂಬ ಭಾವನೆ ದಿನೇದಿನೇ ಬೆಳೆಯಲಾಂಭಿಸಿತು. ಒಂದು ದಿನ ತಾನು ಬರೆದಿಟ್ಟಿದ್ದ ಸೂತ್ರಗಳಿಗೆಲ್ಲಾ ಬೆಂಕಿಯಿಟ್ಟು, ಆಶ್ರಮವನ್ನೆ ಬಿಟ್ಟು ಹೊರಟ.

ಕೆಲದಿನಗಳ ಕಾಲ ಎಲ್ಲೆಲ್ಲೋ ಅಲೆದಾಡಿ, ಕೊನೆಗೆ ಜೀರ್ಣಾವಸ್ಥೆಯಲ್ಲಿದ್ದ ದೇವಾಲಯವೊಂದರಲ್ಲಿ ನೆಲೆನಿಂತ. ಹಲವಾರುವರ್ಷಗಳ ಕಾಲ ಅದೇ ಅವನ ನೆಲೆಯಾಯಿತು. ಅಲ್ಲೇ ಇದ್ದು, ಗಂಟೆಗಟ್ಟಲೇ ಧ್ಯಾನಮಾಡುತ್ತಿದ್ದ. ಜೊತೆಗೇ ಅಲ್ಲಲ್ಲಿ ದೇವಸ್ಥಾನದ ದುರಸ್ತಿಯನ್ನೂ ಮಾಡುತ್ತಿದ್ದ.

ಒಂದು ದಿನ ಹೀಗೇ ಬಾಗಿಲಬಳಿ ಗುಡಿಸುತ್ತಿರುವಾಗ, ಹೆಬ್ಬಾಗಿಲ ಕೆಳಬಾಗದಲ್ಲಿದ್ದ ಕಲ್ಲೊಂದು ಕಿತ್ತುಬಂತು. ಅದನ್ನು ಜೋರಾಗಿ ಗುಡಿಸಿ ದೂಡಿದಾಗ ಅದು ಹಾರಿಹೋಗಿ ಪಕ್ಕದಲ್ಲಿದ್ದ ಬಿದಿರಿನ ಕಾಂಡಕ್ಕೆ ಬಡಿಯಿತು……”ಟೋಕ್………” ಅಲ್ಲೆಲ್ಲಾ ಅದರದೇ ಪ್ರತಿಧ್ವನಿ ಅನುರಣಗೊಂಡಿತು.

ಆ ಶಬ್ದದೊಂದಿಗೇ ಕ್ಯೋಗನ್ನನ ಮುಖದಲ್ಲಿ ಮುಗುಳ್ನಗೆ ಮೂಡಿತು. ಆ ನಗುವಿನ ಹಿಂದೆಯೇ, ಮುಖದಲ್ಲಿ ಹಿಂದೆಂದೂ ಇರದ ಕಾಂತಿಯೊಂದು ಆವರಿಸಿತು. ಎರಡು ಕ್ಷಣ ಅವಕ್ಕಾಗಿ ನಿಂತ ಕ್ಯೋಗನ್ ತಕ್ಷಣವೇ ಸಾವರಿಸಿಕೊಂಡು, ಇಸಾನ್ ಇದ್ದಿರಬಹುದಾದ ದಿಕ್ಕಿನೆಡೆಗೆ ತಿರುಗಿ ತಲೆಬಾಗಿ “ಗುರುಗಳೇ ನೀವಂದದ್ದು ಸರಿ. ಇದನ್ನೆಲ್ಲಾ ನೀವೇ ನನಗೆ ಹೇಳಿದ್ದಿದ್ದರೆ, ನಾನೇನೆಂದು ನನ್ನ ಪ್ರಶ್ನೆಗೆ ಅಂದೇ ಉತ್ತರಿಸಿದ್ದಿದ್ದರೆ, ನಾನು ಆ ಉತ್ತರವೇ ಆಗಿ ಉಳಿದಿಬಿಡುತ್ತಿದ್ದೆ. ನನ್ನನ್ನು ನಾನು ಮೀರಿ ಬೆಳೆಯುತ್ತಿರಲಿಲ್ಲ. ಆ ಉತ್ತರದೊಳಗೇ, ಅದರಲ್ಲಿದ್ದಿರಬಹುದಾದ ಕಹಿಯೊಂದಿಗೇ, ಅದನ್ನು ದೂಷಿಸುತ್ತಾ, ಅದೊಂದು ಭ್ರಾಂತಿಯೊಳಗೇ ಬದುಕಿರುತ್ತಿದ್ದೆ. ಧನ್ಯವಾದ ನಾನು ಹುಟ್ಟುವ ಮೊದಲು ಏನಾಗಿದ್ದೆ ಎಂದು ತೋರಿಸ್ಕೊಟ್ಟಿದ್ದಕ್ಕೆ. ಧನ್ಯವಾದ ನನ್ನೊಳಗಿಂದ ನನ್ನನ್ನು ಹೊರಗೆಳೆದದ್ದಕ್ಕೆ” ಎಂದು ಕೈಮುಗಿದ.

ಕ್ಯೋಗನ್ ಅಲ್ಲಿಂದ ಮುಂದೆ ಸೃಜನಶೀಲ ಸಹಾನುಭೂತಿಯ ಹಾಗೂ ತೀವ್ರವಾದ ಒಳನೋಟವುಳ್ಳ ಗುರುವಾಗಿ ಬೌದ್ಧಧರ್ಮದ ಮಹಾನ್ ಸೂತ್ರಗಳನ್ನು ಬರೆದ. ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಧರ್ಮವನ್ನು ಪ್ರಸ್ತುತವಾಗಿಸಿ ಪ್ರಚುರಪಡಿಸಿದ. ಜನರಿಗೆ ತಮ್ಮನ್ನು ತಾವು ಬಿಡುಗಡೆಗೊಳಿಸುವುದರ ಬಗ್ಗೆ ತಿಳಿಸುತ್ತಾ ಹೋದ.