ಸಿರಾ-ದಿಮ ವಿನೋದ ಪ್ರಸಂಗಗಳು

ಒಂದಾನೊಂದು ಕಾಲದಲ್ಲಿ, ಕರಾಳನಾಡು ಎಂಬ ಊರಿನಲ್ಲಿ ಒಬ್ಬ ಸಿಂಹಪ್ರತಾಪಿರಾಮ ಎಂಬ ವ್ಯಕ್ತಿಯಿದ್ದ. ಹೆಸರಿಗಷ್ಟೇ ಪ್ರತಾಪಿ ಸಿಂಹ ಎಲ್ಲಾ, ಮೂರೂ ಹೊತ್ತು ಊರಮುಂದಿರುವ ಕಟ್ಟೆಯ ಮೇಲೆ ಮಲಗಿಯೇ ಕಾಲಕಳೆಯುತ್ತಿದ್ದ ಆತ. ಹೆಚ್ಚೇನೂ ಕೆಲಸಮಾಡಿದವನು ಅಲ್ಲ. ತನ್ನ ಅಸ್ತಿತ್ವಕ್ಕೆ ಅರ್ಥ ಕೊಡಲೋಸುಗ, ಸುಮ್ಮನೇ ‘ಇದ್ದ’ ಅಷ್ಟೇ.

ಒಂದು ದಿನ ರಾಜ್ಯದ ರಾಜ, ಸ್ನಾನಗೃಹದಲ್ಲಿ ತಾನೇ ಕೈತಪ್ಪಿ ಬೀಳಿಸಿದ ಸೋಪುಬಾರಿನ ಮೇಲೆ ಕಾಲಿಟ್ಟು ಜಾರಿ ಬಿದ್ದು ತಲೆಯೊಡೆದು ಸತ್ತೇ ಹೋದ. ಅವನಿಗೆ ಹೆಂಡತಿ ಮಕ್ಕಳು ಯಾರೂ ಇರದಿದ್ದ ಕಾರಣ ಅರಾಜಕತೆ ಉಂಟಾಯಿತು. ಈಗ ರಾಜ್ಯದ ರಾಜನನ್ನು ಹುಡುಕಲು ಮಂತ್ರಿಗಳೆಲ್ಲಾ ಆಗಿನ ಕಾಲದ ನಿಯಮದ ಪ್ರಕಾರ, ಆನೆಯೊಂದಕ್ಕೆ ಹಾರವನ್ನು ಕೊಟ್ಟು ಮುಂದೆ ಕಳಿಸಿ, ಹಿಂದೆ ತಾವೂ ಹೊರಟರು. ಆನೆ ಯಾರಿಗೆ ಹಾರ ಹಾಕುತ್ತದೆಯೋ ಅವನೇ ಮುಂದಿನ ರಾಜ ಎಂಬುದು ನಿಯಮವಾಗಿತ್ತು. ಆನೆ ಊರಲ್ಲೆಲ್ಲಾ ಓಡಾಡಿ ಯಾರಿಗೂ ಹಾರಹಾಕದೇ ಊರ ಹೊರಬಾಗಕ್ಕೆ ಬರುವಷ್ಟರರಲ್ಲಿ ಮಧ್ಯಾಹ್ನ ಒಂದುಘಂಟೆಯಾಗಿತ್ತು. ಆನೆಗೆ ಊಟದ ಸಮಯ. ಇದು ಹೀಗೆ ನಡೆದರೆ ಉಳಿಗಾಲವಿಲ್ಲವೆಂದರಿತ ಆನೆ ಇನ್ನೇನು ಮಾಡುವುದು ಎಂದು ಯೋಚಿಸುತ್ತಿರುವಾಗ ನಮ್ಮ ರಾಮ ಅಲ್ಲಿ ಮಲಗಿದ್ದನ್ನು ಕಂಡ ಆನೆ ‘ಸಧ್ಯ ಊಟ ಗಿಟ್ಟಿಸಿಕೊಂಡರೆ ಸಾಕು’ ಎಂಬ ಅವಸರದಲ್ಲಿ ರಾಮನಿಗೆ ಹಾರಹಾಕಿಯೇಬಿಟ್ಟಿತು. ಹೀಗೆ ನಮ್ಮ ಸಿಂಹಪ್ರತಾಪಿರಾಮ ರಾಜನಾಗಿಬಿಟ್ಟ.

ತನ್ನ ಇಡೀ ಕುಟುಂಬದಲ್ಲಿ, ಇವನೇ ತನ್ನ ಕುಟುಂಬದ ಮೊದಲ ರಾಜ. ಜೀವನದಲ್ಲಿ ಮೂರೂಹೊತ್ತೂ ಮಲಗಿಯೇ ಸಮಯ ಕಳೆದೆದ್ದರಿಂದ, ಆತ ಸ್ವಲ್ಪ ಓದಿನಲ್ಲಿ ಅಷ್ಟಕ್ಕಷ್ಟೇ. ರಾಜನಾದ ಕೂಡಲೇ ಅದ್ಯಾರೋ ಅವನಿಗೆ ಅಕ್ಬರ್-ಬೀರಬಲ್, ಕೃಷ್ಣದೇವರಾಯ-ತೆನಲಿರಾಮ, ಭೋಜರಾಜ-ಕಾಳಿದಾಸ ಮುಂತಾದ ಕಥೆಗಳನ್ನು ಹೇಳಿಬಿಟ್ಟರು. ಸಿಂಹಪ್ರತಾಪಿರಾಮನಿಗೆ ತನಗೂ ಅಂಥವನೊಬ್ಬ ಸಲಹೆಗಾರನಿದ್ದಿದ್ದರೆ ಒಳ್ಳೆಯದಿತ್ತು ಎಂದೆನಿಸಿತು. ತಕ್ಷಣವೇ ತನ್ನ ಸೈನಿಕರನ್ನು ರಾಜ್ಯದ ನಾಲ್ಕೂ ಕಡೆಗೆ ಅಟ್ಟಿ ಒಬ್ಬ ಅತ್ಯುತ್ತಮ ಸಲಹೆಗಾರನನ್ನು ಆರಿಸಿಕೊಂಡುಬರುವಂತೆ ಹೇಳಿದ. ಹುಡುಕಹೋದವರು ಆ ರಾಜನಿಗಿಂತಲೂ ನಿರಕ್ಷರಿಗಳಾಗಿದ್ದ ಸೈನಿಕರು. ಅದಕ್ಕೂ ಸರಿಯಾಗಿ ಪ್ರಜೆಗಳಿಗೆ ಅದಾಗಲೇ ಈ ರಾಜನ ಬಂಡವಾಳ ಗೊತ್ತಾಗಿತ್ತು. ಹಾಗಾಗಿ ಈ ಕೆಲಸಕ್ಕೆ ಯಾರೂ ಉತ್ಸಾಹ ತೋರಲಿಲ್ಲ. ಎಲ್ಲಾ ಕಡೆ ಹುಡುಕಿ ಹುಡುಕಿ ಸುಸ್ತಾಗಿ ಬಳಲಿ ಬೆಂಡಾಗಿ, ಅವರೊಂದು ಕಡೆ ಸುಧಾರಿಸಲು ಕೂತಿದ್ದಾಗ, ಅವಧೂತನೊಬ್ಬ ಏನೇನೋ ಬಡಬಡಾಯಿಸುತ್ತಿದ್ದದ್ದನ್ನು ಕಂಡರು. ಅವನು ಮಾತನಾಡಿದ್ದು ಯಾರಿಗೂ ಅಷ್ಟೇನೂ ಅರ್ಥವಾಗಲಿಲ್ಲ. ಮಾತಿಗೆ ಮಧ್ಯ ಮಧ್ಯ ‘ಎಲ್ಲರೂ ಷಂಡರು’ ‘ನಾನೊಬ್ಬ ಶಿಕ್ಷಕ’ ‘ಆಕೆ ನಿಶ್ಚೇತನ’ ಎಂದೆಲ್ಲಾ ಅರಚುತ್ತಿದ್ದ. ಸೈನಿಕರು ‘ಇವನ್ಯಾವುದೋ ಬೇರೆ ಗ್ರಹದವನೇ ಇರಬೇಕು, ಏನೇನೋ ಹೇಳುತ್ತಿದ್ದಾನೆ! ಬಹುಷಃ ಇವೆಲ್ಲಾ ನಮ್ಮಂತಹ ಹುಲುಮಾನವರಿಗೆ ಅರ್ಥವಾಗುವಂತದ್ದಲ್ಲಾ, ಇದು ಬಹುಷಃ ರಾಜಕಾರಣದ ರಹಸ್ಯಗಳೇ ಇರಬೇಕು’ ಎಂಬ ತೀರ್ಮಾನಕ್ಕೆ ಬಂದು ಸಲಹೆಕಾರನ ಹುದ್ದೆಗೆ ಅವನನ್ನೇ ಎತ್ತಿಕೊಂಡು ಹೋದರು.

ರಾಜ ಆಸ್ಥಾನದಲ್ಲಿ ಕುಳಿತಿದ್ದ. ಸೈನಿಕರು ಇವನನ್ನು ಆಸ್ಥಾನಕ್ಕೆ ಕರೆದೊಯ್ದು ‘ರಾಜನ್, ಇಡೀ ರಾಜ್ಯದಲ್ಲಿ ಅತ್ಯಂತ ಬುದ್ಧಿವಂತ ಇವನೇ ಸ್ವಾಮಿ. ಬೇಕಿದ್ದರೆ ಪರಾಂಬರಿಸಿ ನೋಡಿ’ ಎಂದರು. ನಮ್ಮ ರಾಮ ‘ಹೌದೇನು!? ನೋಡಿಯೇ ಬಿಡೋಣ’ ಎಂದು ಅವಧೂತನತ್ತ ನೋಡಿ ತನ್ನ ತೋರುಬೆರಳಿನಲ್ಲಿ ‘ಒಂದು’ ಎಂಬ ಸಂದೇಶ ಬರುವಂತೆ ತೋರಿಸಿದ. ಅವಧೂತ ಅದಕ್ಕೇ ಹುಬ್ಬುಗಂಟಿಕ್ಕಿ ಎರಡು ಬೆರಳು ತೋರಿಸಿದ. ರಾಜ ಅದಕ್ಕುತ್ತರವಾಗಿ ಒಂದು ಮುದ್ದೆ ಬೆಣ್ಣೆ ತೋರಿಸಿದ. ಅವಧೂತ ಸಿಟ್ಟಿನಲ್ಲಿ ಜೀಬಿನಿಂದ ಒಂದು ಮೊಟ್ಟೆ ತೋರಿಸಿದ. ರಾಜ ಮುಗುಳ್ನಗುತ್ತಾ ಒಂದು ಹಿಡಿ ಗೋಧಿಯನ್ನು ಚೆಲ್ಲಿದ. ಅವಧೂತ ತನ್ನ ಜೋಳಿಗೆಯಿಂದ ಕೋಳಿಯೊಂದನ್ನು ತೆಗೆದು ಕೆಳಗೆ ಬಿಟ್ಟ. ಕೋಳಿ ಆ ಗೋಧಿಯನ್ನೆಲ್ಲಾ ತಿಂದು ಮುಗಿಸಿತು.

ಇದನ್ನು ನೋಡಿದ ರಾಜ ದಂಗಾಗಿ ಹೋದ. ಕೆಳಗಿಳಿದು ಬಂದು ಅವಧೂತನ ಕೈ ಹಿಡಿದು, ‘ಸ್ವಾಮಿ, ತಮ್ಮ ಹೆಸರೇನು? ನನ್ನ ಸಲಹೆಗಾರನಾಗಿ ಕೆಲಸಮಾಡಲು ಒಪ್ಪಿಕೊಳ್ಳಿ’ ಎಂದು ಕೇಳಿಕೊಂಡ. ಯಾವಾಗಲೂ ತನ್ನ ವರ್ತನೆಯಿಂದ ರೋಸಿಹೋದ ಜನರಿಂದ ಕಲ್ಲೇಟು ತಿಂದೇ ಅಭ್ಯಾಸವಿದ್ದ ಅವಧೂತ, ಮೊದಲ ಬಾರಿಗೆ ಒಬ್ಬರು ತನ್ನ ಕೈ ಹಿಡಿದು ಮಾತನಾಡಿಸಿದ್ದನ್ನು ನೋಡಿ ಆಶ್ಚರ್ಯದಿಂದ, ಕಣ್ತುಂಬಿ ಬಂದರೂ ಅವಡುಗಚ್ಚಿ ಸುಧಾರಿಸಿಕೊಂಡು, ‘ನನ್ನ ಹೆಸರು ಧೀರೇಂದ್ರ ಮಲ್ಲ ಎಂದು. ನನ್ನನು ಮಾತನಾಡಿಸಿದ್ದಕ್ಕೆ ಧನ್ಯವಾದ. ನನಗೆ ನಿಮ್ಮ ಕೋರಿಕೆ ಒಪ್ಪಿಗೆಯಿದೆ’ ಎಂದು ನಡುಗುವ ಕೈಗಳಿಂದ ಪತ್ರವೊಂದನ್ನು ಬರೆಯತೊಡಗಿದ. ಇದೇನು ಮಾಡುತ್ತಿದ್ದೀರಿ ಎಂದು ರಾಜ ಕೇಳಿದ್ದಕ್ಕೆ ‘ರಾಜ, ನನ್ನದೊಂದು ಸಣ್ಣ ವ್ಯವಹಾರವಿದೆ. ಅಷ್ಟೇನೂ ಲಾಭದ್ದಲ್ಲ. ಆ ವ್ಯವಹಾರದ ನಷ್ಟದಿಂದಲೇ ನನಗೆ ಹೀಗೆ ಸ್ವಲ್ಪ ಮತಿಭ್ರಮಣೆ. ಹಾಗೆಯೇ ಸುಮ್ಮನೆ ಒಂದು ರಾಜೀನಾಮೆ ಬರೆದುಬಿಡ್ತೇನೆ ಆ ಕೆಲಸಕ್ಕೆ. ನಾಳೆ ನಾಲ್ಕು ಜನ ಸೇರೋ ಸಾಮಾಜಿಕ ತಾಣಗಳಲ್ಲಿ ಇದರ ಬಗ್ಗೆ ‘ನಡುಗುವ ಕೈಗಳಿಂದ ರಾಜಿನಾಮೆ ಬರೆದೆ’ ಅಂತಾ ಹೇಳಿಕೊಳ್ಳಬಹುದು ನೋಡಿ, ಅದಕ್ಕೆ’ ಎಂದು ಕಣ್ಣು ಮಿಟುಕಿಸಿದ. ರಾಜ ಈಗ ಮತ್ತೊಮ್ಮೆ ದಂಗಾಗಿ ಹೋದ.

ಮುಂದುವರೆದು ರಾಜ ಸಭೆಯನ್ನುದ್ದೇಶಿಸಿ ಹೇಳಿದ ‘ನೋಡಿ ಜನರೇ, ಎಂತಾ ಮಹಾನ್ ಬುದ್ಧಿವಂತ ನೋಡಿ ಈ ವ್ಯಕ್ತಿ! ನಾನು ಅವನಿಗೆ ‘ರಾಜ ಒಬ್ಬನೇ’ ಎಂದು ಒಂದು ಬೆರೆಳು ತೋರಿಸಿ ಹೇಳಿದೆ. ಅದಕ್ಕವನು ‘ಇಲ್ಲ, ಮೇಲಿರುವವನೊಬ್ಬ ಇಲ್ಲಿ ಭೂಮಿಯ ಮೇಲಿರುವ ರಾಜನೊಬ್ಬ, ಹೀಗೆ ಇಬ್ಬರು ರಾಜರು’ ಎಂದು ಎರಡು ಬೆರಳು ತೋರಿಸಿದ. ನಾನು ಒಂದು ಮುದ್ದೆ ಬೆಣ್ಣೆ ತೋರಿಸಿ ‘ಇದು ಕರಿಕುರಿಯ ಹಾಲಿನಿಂದ ಮಾಡಿದ್ದೋ, ಬಿಳಿಕುರಿಯ ಹಾಲಿನಿಂದ ಮಾಡಿದ್ದೋ? ಹೇಳು’ ಎಂದೆ. ಅದಕ್ಕವನು ಒಂದು ಮೊಟ್ಟೆಯನ್ನು ತೋರಿಸಿ, ‘ಅಯ್ಯೋ ಮೂರ್ಖ, ಈ ಮೊಟ್ಟೆ ಕಪ್ಪು ಕೋಳಿಯದೋ, ಬಿಳಿ ಕೋಳಿಯದ್ದೋ ಎಂದು ತಿಳಿದ ದಿನ, ನಿನ್ನ ಪ್ರಶ್ನೆಗೂ ಉತ್ತರ ತಿಳಿಯುತ್ತದೆ’ ಎಂದ. ಕೊನೆಯದಾಗಿ ನಾನು ‘ನನ್ನ ಹೊಸಾ ರಾಜ್ಯದಲ್ಲಿ ಎಲ್ಲವೂ ಚೆಲ್ಲಾಚೆದುರಾಗಿ ಹೋಗಿದೆ’ ಎಂದೆ. ಅದಕ್ಕವನು ಕೋಳಿಯನ್ನು ಸಾಧನವಾಗಿ ಉಪಯೋಗಿಸಿ ‘ನೋಡಪ್ಪಾ ರಾಜ, ‘ಕೋಳಿ ಭಾಗ್ಯ’ಗಳಂತಹ ಯೋಜನೆಯನ್ನುಪಯೋಗಿಸಿ ನೀನು ಎಲ್ಲರನ್ನೂ ನಿನ್ನ ಹಿಡಿತದೊಳಗೆ ಇಟ್ಟುಕೊಳ್ಳಬಹುದು’ ಎಂದ. “ವಾಹ್! ಎಂತಾ ಬುದ್ಧಿವಂತ ಮನುಷ್ಯ! ಇವನಉ ನನ್ನ ಸಲಹೆಗಾರನು ನಿಜವಾಗಿಯೂ ಯೋಗ್ಯನೇ ಹೌದು” ಎಂದು ಹೊಗಳಿದ.

ಇದನ್ನು ಕೇಳಿದ ಧೀರೇಂದ್ರಮಲ್ಲ ಅವಧೂತ ‘ಅಯ್ಯಯ್ಯೋ ಅದು ಹಾಗಾ!? ನಾನಂದುಕೊಂಡೆ ನೀನು ನನಗೆ ಒಂದು ಬೆರಳು ತೋರಿಸಿದ್ದನ್ನು ನೋಡಿ ಒಂದು ಪೆಟ್ಟು ಕೊಡ್ತಿಯಾ ಅಂದ್ಕೊಂಡೆ. ಅದಕ್ಕೆ ನಾನು ಎರಡು ಪೆಟ್ಟು ಕೊಡ್ತೀನಿ ಅಂದೆ. ನೀನು ನಿನ್ನ ಊಟ ತೋರಿಸಿ ‘ಬೇಕಾ?’ ಅಂದೆ. ಅದಕ್ಕೇ ನಾನು ಸಿಟ್ಟಿನಿಂದ ‘ನನಗೆ ಯಾರ ಬಿಕ್ಷೆಯೂ ಬೇಕಾಗಿಲ್ಲ’ ಅಂತಾ ನನ್ನ ಊಟ ತೋರಿಸಿದೆ. ನೀನು ಶ್ರೀಮಂತ ತೋರಿಸ್ಕೊಳ್ಳೋಕೆ ನಿನ್ನ ಆಹಾರ ನೆಲಕ್ಕೆ ಚೆಲ್ಲಿ ಪೋಲುಮಾಡಿ ತೋರಿಸಿದೆ. ನಾನಂತೂ ಅದನ್ನು ತಿನ್ನೋಕೆ ಸಾಧ್ಯವಿರಲಿಲ್ಲ. ಅದಕ್ಕೆ ಅದನ್ನು ನನ್ನ ಕೋಳಿಗೆ ತಿನ್ನಿಸಿದೆ ಅಷ್ಟೇ. ನೀನು ಇದನ್ನೆಲ್ಲಾ ‘ಇನ್ನೇನೇನೋ’ ಅಂದ್ಕೊಂಡು ಮೂರ್ಖನಾಗಿದ್ದೀಯ..ಹ..ಹ..ಹ’ ಎಂದು ನಕ್ಕ.

ರಾಜ ಇವನ ‘ತಲೆ’ ನೋಡಿ, ಪೂರ್ತಿ ಮರುಳಾದ. ರಾಜನಿಗೆ ತಾನು ಮೂರ್ಖನಾಗಿದ್ದಕ್ಕಿಂತಲೂ ತನ್ನನ್ನು ಮೂರ್ಖನಾಗಿಸುವವನೊಬ್ಬ ಸಿಕ್ಕಿದನಲ್ಲಾ ಎಂದು ಖುಷಿಯಾಗಿ, ಇವತ್ತಿನಿಂದ ನಾವಿಬ್ಬರೂ ಒಂದಾಗಿ ಕೆಲಸಮಾಡೋಣವೆಂದು ಒಪ್ಪಿ ಆತನನ್ನು ತನ್ನ ಸಲಹೆಗಾರನನ್ನಾಗಿ ನೇಮಿಸಿಕೊಂಡ. ಎಲ್ಲಾ ಮಂತ್ರಿಗಳಿಗೆ ದೊರಕುವ ಸೌಲಭ್ಯಗಳೇ ಇವನಿಗೂ ಸಿಗಬೇಕೆಂದು ಆಜ್ಞೆ ಮಾಡಿದ ಎಂಬಲ್ಲಿಗೆ ಈ ಕಥೆ ಮುಗಿಯಿತು.

ಇವರಿಬ್ಬರ ಒಡೆತನ-ಗೆಳೆತನದಲ್ಲಿ ದೇಶದ ಪ್ರಜೆಗಳಿಗೆ ಎಂತೆಂತಹ ‘ಭಾಗ್ಯ’ಗಳು ಸಿಕ್ಕಿದವು, ಕರಾಳನಾಡಿನ ಜನ ಹೇಗೆ ಉದ್ಧಾರವಾದರೆಂಬುದೊಂದು ದೊಡ್ಡ ಕಥೆ. ಅವೆಲ್ಲವೂ ಕೇಳುವಷ್ಟು ಪುಣ್ಯ ನಿಮಗಿಲ್ಲವಾದರೂ, ನಾನು ಅಗಾಧ ಪರಿಶ್ರಮದಿಂದ ಇತಿಹಾಸದ ಮೂರನೇ ಮಹಡಿಗೆ ಹೋಗಿ ಸಂಶೋಧಿಸಿ ತಂದ ಕೆಲವು ಮಜವಾದ ಪ್ರಸಂಗಗಳ ತಾಳೆಗರಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ಈ ಕಥೆಗಳು ‘ಸಿರಾ-ದಿಮ ವಿನೋದಕಥೆಗಳು’ ಎಂಬ ಹೆಸರಿನಿಂದಲೇ ಇತಿಹಾಸದಲ್ಲಿ ಬಹು ಪ್ರಸಿದ್ಧಿ ಹೊಂದಿದ್ದು, ನಮ್ಮ ಭೂತ ಹಾಗೂ ಭವಿಷ್ಯತ್ತನ್ನೇ ಬದಲಾಯಿಸುವ ಶಕ್ತಿಯುಳ್ಳವು. ಇಂತಹ ಕೆಲ ವಿನೋದಾವಳಿಗಳನ್ನು (ದಿನಕ್ಕೊಮ್ಮೆಯಲ್ಲದಿದ್ದರೂ) ನಿಮಗೆ ಅಗಾಗ ಪರಿಚಯಿಸುವ ಪ್ರಯತ್ನವನ್ನು ಮಾಡಲಿದ್ದೇನೆ. ಹೆಚ್ಚಿನ ವಿವರಗಳಿಗೆ #ಸಿರಾ_ದಿಮ_ವಿನೋದ_ಪ್ರಸಂಗ ಎಂಬ ಹ್ಯಾಶ್ ಟ್ಯಾಗನ್ನು ಅನುಸರಿಸುತ್ತಿರಿ.

#ಸಿರಾ_ದಿಮ_ವಿನೋದ_ಪ್ರಸಂಗ, #Trollbite

ಬುದ್ಧಿಗೊಂದು ಗುದ್ದು – ೨೭

ಬುದ್ಧಿಗೊಂದು ಗುದ್ದು – ೨೭

ಪೆಟ್ರೋಲಿನ ಬೆಲೆಯ ಪಪ್ಪಾ…..ಯಾರಪ್ಪಾ!?

ಹಿಂದಿನ ಅಂಕಣದಲ್ಲಿ ಅಂತರ್ಜಾಲವನ್ನು ನಿಯಂತ್ರಿಸುವ ಕೆಲ ಸಂಸ್ಥೆಗಳ ಬಗ್ಗೆಬರೆದಿದ್ದೆ. ಈ ವಾರ ಇನ್ನೂ ಹೆಚ್ಚು ಪ್ರಸ್ತುತವಾದ ವಿಷಯವೊಂದನ್ನು ಕೈಗೆತ್ತಿಕೊಂಡಿದ್ದೇನೆ. ನಾನು, ನೀವು, ಅವರು, ಎಲ್ಲರೂ ಹೆಚ್ಚು ಕಡಿಮೆ ಇಡೀ ಜಗತ್ತೇ ಒಂದಲ್ಲಾ ಒಂದು ರೀತಿಯಲ್ಲಿ ಅವಲಂಬಿತವಾಗಿರುವ ಪೆಟ್ರೋಲಿನ ದರ ಹೇಗೆ ನಿರ್ಧರಿಸಲ್ಪಡುತ್ತಿದೆ ಎಂಬುದನ್ನು ತಿಳಿಯೋಣ! ಏನಂತೀರಿ?

ಮೋದಿ ವಿರೋಧಿಗಳಿಗೂ ಬೆಂಬಲಿಗರಿಗೂ ಸಧ್ಯಕ್ಕೆ ಕೆಲಸ ಕೊಟ್ಟಿರುವ ಎರಡನೇ ಅತೀಮುಖ್ಯ ವಿಷಯವೆಂದರೆ ಪೆಟ್ರೋಲ್ ಬೆಲೆ ಇಳಿಕೆ (ಹಾಗೂ ಸಧ್ಯದಲ್ಲೇ ಕಾದಿರುವ ಏರಿಕೆ 😉 ). ಮೊದಲನೇ ವಿಷಯ ನಮ್ಮ ದೇಶದಲ್ಲಿ ಯಾವತ್ತಿದ್ರೂ ಜಾತಿ ಹಾಗೂ ಮತ ತಾನೇ? ಹಾಗಾಗಿ ಮೊದಲನೇ ಮುಖ್ಯ ವಿಷಯ ಮತಾಂತರ ಹಾಗೂ ಅದರ ನಿಷೇದ ಕಾಯ್ದೆ. ಬ್ಯಾಕ್ ಟು ಟಾಪಿಕ್….ಜನರನ್ನು ದಿನವಿಡೀ ಎಲ್ಲಾ ಮಗ್ಗುಲಲ್ಲೂ ಮುಟ್ಟುವ ವಿಷಯಗಳಲ್ಲಿ ಸೂರ್ಯನನ್ನು ಬಿಟ್ಟರೆ ಮುಂದಿನ ಸ್ಥಾನ ಪೆಟ್ರೋಲಿಗೇ ಅಲ್ಲವೇ. ಬೆಳಗ್ಗೆದ್ದು ಸ್ನಾನದ ಬಿಸಿನೀರಿಗೆ ಹಾಕುವ ಸ್ವಿಚ್ಚಿನಿಂದ ಹಿಡಿದು ರಾತ್ರಿ ಮಲಗುವಾಗ ತಲೆಯಿಡುವ ದಿಂಬಿನ ಒಳಗಿರುವ ಪೈಬರ್ ಹತ್ತಿಯವರೆಗೆ ಎಲ್ಲವೂ ಪೆಟ್ರೋಲ್ ಅಥವಾ ಕಚ್ಚಾತೈಲದ ಮೇಲೆ ಅವಲಂಬಿತವಾಗಿವೆ. ಹೀಗಿದ್ದಾಗ ಅದರ ಬೆಲೆಯೇರಿಕೆ ಇಳಿಕೆ ನಮ್ಮ ಜೀವನದ ಮೇಲೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರಬಲ್ಲುದು. ಇದರ ಬಗ್ಗೆ ಇವತ್ತು ಸ್ವಲ್ಪ ತಿಳಿಯುವ ಪ್ರಯತ್ನ ಮಾಡೋಣ.

ಈ ಬೆಲೆಯೇರಿಕೆ ಇಳಿಕೆಯ ತಲೆಬಿಸಿ ಇವತ್ತು ನಿನ್ನೆಯದಲ್ಲ. ವಾಣಿಜ್ಯ ಉದ್ದೇಶಕ್ಕಾಗಿ ಮೊತ್ತಮೊದಲ ತೈಲಬಾವಿಯನ್ನು 1857ರಲ್ಲಿ ರೊಮೇನಿಯಾದಲ್ಲಿ ಕೊರೆದಾಗಲಿಂದಲೂ ಇದೆ. ಪೆಟ್ರೋಲ್ ಬೆಲೆ ನಿರ್ಧಾರವಾಗುವುದು ಹಲವಾರು ಅಂಶಗಳ ಮೇಲೆ. ಕಚ್ಚಾತೈಲದ ಬೇಡಿಕೆ ಹಾಗೂ ಲಭ್ಯತೆ, ಯಾವ ದೇಶದಿಂದ ಆಮದು ಮಾಡಲಾಗುತ್ತಿದೆ, ಅಂತರಾಷ್ಟ್ರೀಯ ಆಗುಹೋಗುಗಳು, ವಿದೇಶಿ ವಿನಿಮಯದ ಏರುಪೇರು, ಸರ್ಕಾರಿ ತೆರಿಗೆ ನಿಯಮಾವಳಿ ಹಾಗೂ ತಂತ್ರಜ್ಞಾನದ ಸುಧಾರಣೆ ಮುಂತಾದ ಹಲವಾರು ಅಂಶಗಳನ್ನೊಳಗೊಂಡ ಕ್ಲಿಷ್ಟ ಸಮೀಕರಣ. ನೈಜೀರಿಯಾದಲ್ಲಿ ಸರ್ಕಾರ ಬಿದ್ದು ಹೋದರೆ ಆಸ್ಟ್ರೇಲಿಯಾದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಾಗುತ್ತದೆ. ಕತಾರಿನಲ್ಲಿ ರಾಜ ಬದಲಾದರೆ ಪಾಕಿಸ್ಥಾನ ಗ್ಯಾಸ್ ಸಿಲಿಂಡರಿಗೆ ಹೆಚ್ಚಿನ ಬೆಲೆ ಕಟ್ಟಬೇಕಾಗುತ್ತದೆ. ಅಮೇರಿಕಾದಲ್ಲಿ ವಿತ್ತೀಯ ಕೊರತೆಯುಂಟಾದರೆ, ಸೌದಿ ಅರೇಬಿಯಾದಿಂದ ತೈಲ ಅಮದು ಮಾಡುವ ಎಲ್ಲಾ ದೇಶಗಳಲ್ಲಿ ಪೆಟ್ರೋಲ್ ಬೆಲೆ ಮೇಲೇರುತ್ತದೆ, ಇರಾನಿನ ಅಣುಶಕ್ತಿ ಯೋಜನೆಗಳ ಮೇಲೆ ವಿಶ್ವಸಂಸ್ಥೆಯ ನಿರ್ಬಂಧ ಹೆಚ್ಚಾದರೆ ಭಾರತದಲ್ಲಿ ನಮಗೆ ಬಿಸಿ ತಾಗುತ್ತದೆ, ಅಂಗೋಲಾದಲ್ಲಿ ಮಾರಣಹೋಮವೇನಾದರೂ ನಡೆದರೆ ಯೂರೋಪಿಯನ್ನರಿಗೆ ಪೆಟ್ರೋಲಿನ ಕಮಟು ಮೂಗಿಗೆಬಡಿಯುತ್ತದೆ. ಹೀಗೆ ಹಲವಾರು ಅಂಶಗಳ ಮಿಲನ ಈ ತೈಲಬೆಲೆ.

ತೈಲಮಾರಾಟಗಾರನ ಬದಿಯ ನೋಟ:

ಎಲ್ಲದಕ್ಕಿಂತಾ ಮೊದಲನೆಯದಾಗಿ ಪೆಟ್ರೋಲಿನ ಬೆಲೆ ನಿಗದಿಯಾಗುವುದು ಅರ್ಥಶಾಸ್ತ್ರದ ಮೂಲನಿಯಮಗಳಲ್ಲೊಂದಾದ ಬೇಡಿಕೆ-ಪೂರೈಕೆ ಅಂಕೆ ಸಂಖ್ಯೆಗಳ ಮೇಲೆ. ಕಚ್ಚಾತೈಲವೆಂಬುದು ಒಂದು ದಿನ ಮುಗಿದುಹೋಗಬಹುದಾದ ಸಂಪನ್ಮೂಲವಾದ್ದರಿಂದ, ಅದು ಇರುವಷ್ಟು ವರ್ಷಗಳಲ್ಲಿ ಸಾಧ್ಯವಾದಷ್ಟು ಹಣಗಳಿಸುವುದು ತೈಲಮಾರಾಟವೇ ಮೂಲಆದಾಯವಾದ ಕೆಲ ರಾಷ್ಟ್ರಗಳ ಉದ್ದೇಶ. ಚೀನಾ ಸಧ್ಯಕ್ಕೆ ಜಗತ್ತಿನಲ್ಲಿ ವೇಗವಾಗಿ ಆರ್ಥಿಕಬಲಗಳಿಸುತ್ತಿರುವ ದೇಶ. ಅಲ್ಲಿನ ಪ್ರಜೆಯ ಆದಾಯ ಕಳೆದ ಇಪ್ಪತ್ತು ವರ್ಷಗಳಲ್ಲಿ 4 ಪಟ್ಟು ಹೆಚ್ಚಿದೆ. ಈ ಮೊದಲು ಸೈಕಲ್ ಮತ್ತು ಸಾರ್ವಜನಿಕ ಸಾರಿಗೆ ಬಳಸುತ್ತಿದ್ದ ಚೀನಾದ 34.5% ನಾಗರೀಕರು ಕಳೆದ ಐದು ವರ್ಷಗಳಲ್ಲಿ ಕಾರುಗಳನ್ನು ಕೊಂಡಿದ್ದಾರೆ. ವೇಗವಾಗಿ ಬೆಳೆಯುತ್ತಿರುವ ಈ ಕಾರು ಮಾರಾಟವನ್ನು ಬೆಂಬಲಿಸಲು ಚೀನಾ ಸರ್ಕಾರ 2020ರೊಳಗೆ ತನ್ನೆಲ್ಲಾ ಪ್ರಾಂತಗಳನ್ನು ಸೇರಿಸುವ 42,000 ಮೈಲಿ ಉದ್ದದ ಹೊಸಾ ಎಕ್ಸ್ಪ್ರೆಸ್ ಹೆದ್ದಾರಿಗಳನ್ನು ನಿರ್ಮಿಸುತ್ತಿದೆ. ಭಾರತ 2022ರ ಒಳಗೆ ತನ್ನ ಹೆದ್ದಾರಿಜಾಲಕ್ಕೆ ಇನ್ನೂ 12,000 ಮೈಲಿಗಳನ್ನು ಸೇರಿಸಲಿದೆ ಹಾಗೂ ಒಳನಾಡು ಜಲಸಾರಿಗೆಯ ಬಲವನ್ನು ಹೆಚ್ಚಿಸುತ್ತಿದೆ. ರಸ್ತೆಗಳು ಹಾಗೂ ಸಂಪರ್ಕಜಾಲ ಚೆನ್ನಾಗಿದ್ದಾಗ ಸಹಜವಾಗಿಯೇ ವ್ಯವಹಾರವಲಯ ಬಲಗೊಳ್ಳುತ್ತದೆ. ಅಂದರೆ ಹೆಚ್ಚೆಚ್ಚು ಲಾರಿ ಕಾರು ಬಸ್ಸುಗಳು ರಸ್ತೆಗಿಳಿಯಲಿವೆ, ಮೋಟಾರುಬೋಟುಗಳು ನೀರಿಗಿಳಿಯಲಿವೆ. ಅಂದರೆ ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆ ಹೆಚ್ಚಾಗಲಿದೆ. ಅಂದಮೇಲೆ ಪೂರೈಕೆದಾರರೂ ತಮ್ಮ ವ್ಯವಹಾರ ಜಾಣ್ಮೆಯನ್ನು ಪ್ರದರ್ಶನಕ್ಕಿಟ್ಟು, ಪೆಟ್ರೋಲ್ ಬೆಲೆಯೊಂದಿಗೆ ಆಟವಾಡುತ್ತಾರೆ.

ಎರಡನೆಯದಾಗಿ, ಮಾರುಕಟ್ಟೆಯ ತಲ್ಲಣಗಳು. ಯಾವ ಕೊಳ್ಳುಗನೂ/ದೇಶವೂ ಮಾರಾಟಗಾರನ ಬಳಿ ಹೋಗಿ ‘ಇವತ್ತಿನ ರೇಟ್ ಎಷ್ಟು? ಎರಡು ಮಿಲಿಯನ್ ಲೀಟರ್ ಪೆಟ್ರೋಲ್ ಕೊಡಿ’ ಎಂದು ಕೇಳುವುದಿಲ್ಲ. ಈ ಬೆಲೆಗಳು ಪೂರ್ವನಿರ್ಧಾರಿತವಾಗಿರುತ್ತವೆ ಅಥವಾ ನಿರ್ಧರಿಸಲಾಗುವಂತೆ ಕೆಲ ಕುಳಗಳು ನಿರ್ದೇಶಿಸುತ್ತಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ನಿರ್ಧಾರವಾಗುವುದು ಫ್ಯೂಚರ್ಸ್ ಮಾರುಕಟ್ಟೆಯಲ್ಲಿ. ಅಂದರೆ ಮುಂದೊಂದು ದಿನ ಮಾರಾಟವಾಗುವ ತೈಲಕ್ಕೆ ಇಂದೇ ಬೆಲೆ ನಿಗದಿಮಾಡಿ ಭವಿಷ್ಯದಲ್ಲಿ ಕಾರ್ಯಗತಗೊಳಿಸಲಾಗುವಂತೆ ಒಂದು ಒಪ್ಪಂದವನ್ನೂ ಕೊಳ್ಳುಗ ಮತ್ತು ಮಾರಾಟಗಾರ ಮಾಡಿಕೊಳ್ಳುತ್ತಾರೆ. ವ್ಯವಹಾರ ಭಾಷೆಯಲ್ಲಿ ಇದನ್ನು ಫಾರ್ವರ್ಡ್ ಕಾಂಟ್ರಾಕ್ಟ್ ಎನ್ನಲಾಗುತ್ತದೆ.

ಈ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಎರಡು ರೀತಿಯ ಜನರು ಸಿಗುತ್ತಾರೆ. ಮೊದಲನೆಯವರು ‘ಹೆಡ್ಜಿಂಗ್ (hedging)’ ಮಾಡುವವರು. ಮಾರುಕಟ್ಟೆಯ ಏರಿಳಿತದಿಂದಾಗಿ ತಮ್ಮ ಸಂಸ್ಥೆಗಾಗುವ ನಷ್ಟಗಳಿಂದ ತಪ್ಪಿಸಿಕೊಳ್ಳಲು ಇವರು ಇವತ್ತೇ ಮುಂದ್ಯಾವುದೋ ದಿನಕ್ಕೆ ಬೇಕಾಗುವ ತೈಲವನ್ನು ಖರೀದಿಸುತ್ತಾರೆ. ಉದಾಹರಣೆಗೆ ವಿಮಾನಕಂಪನಿಗಳು. ಈ ಹೆಡ್ಜಿಂಗಿನಿಂದಾಗಿ ಇವರು ತಮ್ಮ ವ್ಯವಹಾರವನ್ನು ಸಂಭಾಳಿಸುವುದು ಸುಲಭವಾಗುತ್ತದೆ. ಯಾಕೆಂದರೆ, ಯಾವತ್ತು ಯಾರಿಗೆ ಎಷ್ಟು ದುಡ್ಡು ಕೊಡಬೇಕೆಂಬುದು ಇವರಿಗೆ ಮೊದಲೇ ತಿಳಿದಿರುವುದರಿಂದ ಉಳಿದ ಖರ್ಚುವೆಚ್ಚಗಳನ್ನು ನಿರ್ವಹಿಸುವುದು ಸುಲಭ. ಮಾರಾಟಗಾರನಿಗೂ ತನ್ನ ಉತ್ಪನ್ನಕ್ಕೆ ಒಬ್ಬ ಕೊಳ್ಳುಗ ಹಾಗೂ ವ್ಯಾಪಾರದ ಭರವಸೆ ದೊರೆತಿರುವುದರಿಂದ ಆತ ತನ್ನ ಉತ್ಪಾದನೆಯನ್ನು ಅದಕ್ಕನುಗುಣವಾಗಿ ಹೊಂದಿಸಿಕೊಳ್ಳಬಹುದು. ಒಪ್ಪಂದ ನಡೆದ ದಿನದಿಂದ, ನಿಜವಾಗಿಯೂ ಉತ್ಪನ್ನ ಕೈಗೆ ಬರುವ ದಿನದಂದು ತೈಲಬೆಲೆ ಹೆಚ್ಚಾಗಿದ್ದರೆ ಕೊಳ್ಳುಗನಿಗೆ ಲಾಭ. ಕಡಿಮೆಯಾಗಿದ್ದರೆ ಮಾರಾಟಗಾರನಿಗೆ ಲಾಭ. ಆದರೆ ಆ ಮಟ್ಟದ ರಿಸ್ಕ್ ಅನ್ನು ಅರಿತೇ ಬೆಲೆ ನಿಗದಿಯಾಗುತ್ತದೆ.

ಇನ್ನೊಂದು ತರಹದವರು ‘ಸ್ಪೆಕ್ಯುಲೇಟರ್’. ಇವರು ಕೊಳ್ಳುಗರೇ ಆಗಬೇಕೆಂದಿಲ್ಲ. ಸುಮ್ಮನೇ ಬೆಲೆಯನ್ನು ಊಹಿಸುವುದರ ಮೂಲಕ ಶೇರು ಮಾರುಕಟ್ಟೆಯನ್ನು ಚಾಲನೆಯಲ್ಲಿಡುವವರು. ಒಂದು ಅಂದಾಜಿನ ಪ್ರಕಾರ ಕೇವಲ 3%ದಷ್ಟು ಸ್ಪೆಕ್ಯುಲೇಟರುಗಳು ಮಾತ್ರ ಕೊನೆಗೆ ಉತ್ಪನ್ನವನ್ನು ಕೊಳ್ಳುತ್ತಾರೆ, ಉಳಿದವರದ್ದು ಬರೀ ತೆರೆಮರೆಯ ಆಟವಷ್ಟೇ. ಆದರೆ ಇವರೆಲ್ಲಾ ಆಳವಾದ ಜೇಬಿರುವ ಭಾರೀ ಪಾರ್ಟಿಗಳು. ಈ ಕುಳಗಳು ಮಾರುಕಟ್ಟೆ ಮತ್ತು ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಗಮನಿಸುತ್ತಾ, ಮಾರುಕಟ್ಟೆಯಲ್ಲಿ ತೈಲ ಬೆಲೆಯೊಂದಿಗೆ ಆಟವಾಡುತ್ತಾರೆ. ಬಹಳಷ್ಟು ಬಾರಿ ತೈಲಕಂಪನಿಗಳೇ ಈ ಸ್ಪೆಕ್ಯುಲೇಟರುಗಳಿಗೆ ಕುಮ್ಮಕ್ಕು ನೀಡಿ ಮಾರುಕಟ್ಟೆಯಲ್ಲಿ ತೈಲಬೆಲಯಬಗ್ಗೆ ಅಭದ್ರತಾ ಭಾವನೆ ಮೂಡಿಸುತ್ತಾರೆ. ಬೆಲೆಯನ್ನು ಹೆಚ್ಚಾಗುವಂತೆ ಮಾಡುತ್ತಾರೆ. ಯುಕ್ರೇನಿನಲ್ಲಿ ಸರ್ಕಾರ ಬೀಳುವುದಕ್ಕೂ ತೈಲಬೆಲೆಗೂ ಸಂಬಂಧವೇ ಇರದಿದ್ದರೂ ಈ ಸ್ಪೆಕ್ಯುಲೇಟರುಗಳು ಅದಕ್ಕೊಂದು ಕಥೆಹೆಣೆದು market sentiments ಜೊತೆ ಆಟವಾಡುತ್ತಾರೆ.

ಮೂರನೆಯದಾಗಿ ಮಾರಾಟಗಾರನ ನಿರ್ಧಾರಗಳು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನಿರ್ಧಾರ ಮಾಡುವಲ್ಲಿ OPEC ಎಂಬ ಸಂಸ್ಥೆಯ ಪಾತ್ರ ಬಹಳ ದೊಡ್ಡದು. ಜಗತ್ತಿನ ಅತೀ ಹೆಚ್ಚು ತೈಲವಿರುವ ಮೊದಲ ಇಪ್ಪತ್ತು ದೇಶಗಳಲ್ಲಿ ಹನ್ನೆರಡು ದೇಶಗಳು (ಅಲ್ಜೀರಿಯ, ಅಂಗೋಲಾ, ಈಕ್ವೆಡಾರ್, ಇರಾನ್, ಇರಾಕ್, ಕುವೈತ್, ಲಿಬಿಯಾ, ನೈಜೀರಿಯಾ, ಕತಾರ್, ಸೌದಿ ಅರೀಬಿಯಾ, ಸಂಯುಕ್ತ ಅರಬ್ ಎಮಿರೇಟ್ಸ್ ಹಾಗೂ ವೆನಿಜೂವೆಲಾ) ಒಟ್ಟಾಗಿ ಈ ಸಂಸ್ಥೆಯನ್ನು ರಚಿಸಿಕೊಂಡಿವೆ. ಪ್ರತೀವರ್ಷ OPEC ತನ್ನ ಸದಸ್ಯ ರಾಷ್ಟ್ರಗಳಿಗೆ ಉತ್ಪಾದನಾ ಗುರಿಯನ್ನು ನಿಗದಿಪಡಿಸುತ್ತದೆ. ಜಗತ್ತಿನ ತೈಲವೆಲ್ಲಾ ಹತ್ತೇ ವರ್ಷದಲ್ಲಿ ಮುಗಿದು ಹೋಗದಂತೆ ನೋಡಿಕೊಳ್ಳುವಲ್ಲಿ ಈ ಗುರಿನಿಗದಿಪ್ರಕ್ರಿಯೆ ಮಹತ್ವದ್ದು. ಈ ಗುರಿ ಹೆಚ್ಚುಕಡಿಮೆಯಾದಾಗ ಮಾರುಕಟ್ಟೆಯಲ್ಲಿ ತೈಲಬೆಲೆಯೂ ಏರಿಳಿಕೆಯಾಗುತ್ತದೆ. ಯಾವಯಾವ ದೇಶಗಳು ತೈಲಾವಲಂಬಿತ ಪ್ರಾಜೆಕ್ಟುಗಳನ್ನು ಕಮ್ಮಿಕೊಂಡಿವೆಯೋ ಅಲ್ಲಿ ಬೆಲೆ ಹೆಚ್ಚಾಗುತ್ತದೆ. OPEC ತರಹದ್ದೇ ಇನ್ನೂ ಎರಡು ಸಂಸ್ಥೆಗಳಿವೆ (OAPEC, GECF). ಆದರೆ OPECಗೆ ಹೋಲಿಸಿದರೆ ಇವುಗಳ ಪಾತ್ರ ತೀರಾ ಕಡಿಮೆ.

ಕೊನೆಯದಾಗಿ, ತೈಲಮಾರುಕಟ್ಟೆ ಬರೀ ಒಂದು ದೇಶಕ್ಕೆ ಸೀಮಿತವಾದದ್ದಲ್ಲ. ಇದೊಂದು ಜಾಗತಿಕ ಮಾರುಕಟ್ಟೆ. ಬೇರೆ ಬೇರೆ ದೇಶಗಳಿಂದ ಬೇರೆ ಬೇರೆ ದೇಶಗಳು ತೈಲವನ್ನು ಖರೀದಿಸುತ್ತವೆ. ಅಂದಮೇಲೆ ಯಾವುದೇ ಒಂದು ದೇಶಕ್ಕೆ ಹೆಚ್ಚು ಲಾಭವಾಗದಂತೆ ನೋಡಿಕೊಳ್ಳಲು, ಬಾಕಿ ಎಲ್ಲಾ ವ್ಯವಹಾರಗಳಂತೆಯೇ ತೈಲ ಮಾರುಕಟ್ಟೆ ಕೂಡಾ ಡಾಲರ್ ಅನ್ನು ತನ್ನ ವ್ಯವಹಾರಕ್ಕೆ ಮೊದಲಿನಿಂದಲೂ ಲಂಗರನ್ನಾಗಿ ಬಳಸಿಕೊಳ್ಳುತ್ತಾ ಬಂದಿದೆ. ಹಾಗಾಗಿ ಅಮೇರಿಕದ ಆರ್ಥಿಕತೆಗನುಗುಣವಾಗಿ ತೈಲಬೆಲೆ ನಿರ್ಧರಿಸಲ್ಪಡುತ್ತದೆ. ಅಮೇರಿಕಾದಲ್ಲಿ ವಿತ್ತೀಯ ಕೊರತೆಯುಂತಾಗಿ, ಹಣದುಬ್ಬರ ಹೆಚ್ಚಾಗಿ ಡಾಲರ್ ಬೆಲೆ ಕುಸಿದರೆ, ತೈಲಬೆಲೆಯೂ ಹೆಚ್ಚಾಗುತ್ತದೆ.

ಕೊಳ್ಳುಗನ ಬದಿಯ ನೋಟ:

ಬೇರೆ ಬೇರೆ ದೇಶಗಳು ಈ ಬೆಲೆ ನಿರ್ಧಾರದಲ್ಲಿ ಬೇರೆ ಬೇರೆ ನೀತಿಯನ್ನರಿಸುತ್ತವೆ ಹಾಗೂ ಬೆಲೆನಿರ್ಧಾರಕ್ಕೆ ಬೇರೆ ಬೇರೆ ನಿಯಮಾವಳಿಗಳು ಹಾಗೂ ವೈಪರೀತ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ ಜಗತ್ತಿನ ಎರಡನೇ ಅತಿಹೆಚ್ಚು ತೈಲ ಉತ್ಪಾದಿಸುವ ದೇಶವಾದ ಸೌದಿಯಲ್ಲಿ ಯಾವುದೇ ಹೆಚ್ಚಿನ ತೆರಿಗೆ ಇಲ್ಲದಿರುವುದರಿಂದ ಹಾಗೂ ತೈಲಬಾವಿಯಿಂದ ಕಾರಿನ ಟ್ಯಾಂಕಿನವರೆಗಿನ ದೂರ ಕಡಿಮೆಇರುವುದರಿಂದ ಅಲ್ಲಿ ಪೆಟ್ರೋಲ್ ಸಹಜವಾಗಿಯೇ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ. ಆದರೆ ಜಗತ್ತಿನ ಅತೀ ದೊಡ್ಡ ಉತ್ಪಾದಕ ದೇಶ ರಷ್ಯಾದಲ್ಲಿ ಅಲ್ಲಿಯ ಬೆಲೆನಿಯಂತ್ರಣಾ ಕಾಯ್ದೆ ಬೇರೆ ಸೇವಾಶುಲ್ಕ, ತೆರಿಗೆಗಳನ್ನು ಹೇರುವುದರಿಂದ ಇಡೀ ಚಿತ್ರವೇ ಬದಲಾಗುತ್ತದೆ. ಅದೂ ಅಲ್ಲದೆ ಯಾವ ದೇಶ ತೈಲ ಅಥವಾ ಪೆಟ್ರೋಲನ್ನು ಖರೀದಿಸುತ್ತಿದೆಯೋ ಅದರ ತೆರಿಗೆ ನಿಯಮಾವಳಿ ಹಾಗೂ ಯಾರಿಂದ ತೈಲವನ್ನು ಕೊಳ್ಳಲಾಗುತ್ತಿದೆ ಎಂಬ ಅಂಶಗಳು ಆಯಾ ದೇಶದಲ್ಲಿ ತೈಲ ಬೆಲೆಯ ಏರಿಳಿತಕ್ಕೆ ಕಾರಣವಾಗುತ್ತದೆ.

ಎಲ್ಲಾ ದೇಶಗಳ ಬಗ್ಗೆ ಓದುತ್ತಾ ಕೂತರೆ ಈ ಅಂಕಣ ಇವತ್ತಿಗೆ ಮುಗಿಯುವುದಿಲ್ಲ. ಆದ್ದರಿಂದ ಈ ಮಾತುಕತೆಯನ್ನು ಭಾರತಕ್ಕೆ ಸೀಮಿತಗೊಳಿಸೋಣ. ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚೆ ಪೆಟ್ರೋಲ್ ಅಮದು ಮಾಡುತ್ತಿದ್ದವರು ಬ್ರಿಟೀಷರಾದ್ದರಿಂದ ಅದರ ಬೆಲೆಯನ್ನೂ ಅವರೇ ನಿರ್ಧರಿಸುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ ನಮ್ಮ ಪಾಲಿಗೆ ಬಂದ ತೈಲಕಂಪನಿಗಳು ಮೌಲ್ಯಾಧಾರಿತ ಬೆಲೆ ನಿಗದಿಸುವಿಕೆ (VSP – Value Stock Pricing)ಯನ್ನು ಪಾಲಿಸತೊಡಗಿದವು. ಇದರಲ್ಲಿ ಹೆಚ್ಚಿನ ತಲೆಬಿಸಿಯೇನೂ ಇರಲಿಲ್ಲ. ಇದೊಂದು ಕಚ್ಚಾ ತೈಲಬೆಲೆ+ಇತರೆ ಖರ್ಚುಗಳು (ಸಾಗಣೆವೆಚ್ಚ+ವಿಮೆ+ಸಾರಿಗೆ ನಷ್ಟ+ಆಮದು ಸುಂಕ+ತೆರಿಗೆ+ಇನ್ಯಾವುದೇ ಶುಲ್ಕಗಳು). ಆದರೆ ನೆಹರೂ ತನ್ನ ಎರಡನೇ ಅವಧಿಯಲ್ಲಿ ಕಾಲದಲ್ಲಿ ‘ಆಡಳಿತ ದರ ಪದ್ಧತಿ (APM – Administered Price Mechanism)’ ಎನ್ನುವ ಹೊಸಾ ಪದ್ಧತಿಯನ್ನು ಪ್ರಾರಂಭಿಸಿದರು.

APMನ್ನು ನೆಹರೂ ‘ಅಂತರರಾಷ್ಟ್ರೀಯ ಬೆಲೆಯೇರಿಕೆ ಹಾಗೂ ಇಳಿಕೆಯಿಂದ ಗ್ರಾಹಕರನ್ನು ರಕ್ಷಿಸುವ ನಿಯಮ’ ಎಂಬುದಾಗಿ ಬೆಣ್ಣೆಹಚ್ಚಿ ಜನರಿಗೆ ಹಂಚಿದರು. ಆದರೆ ಆಳದಲ್ಲಿ ಇದೊಂದು ರಾಜಕೀಯ ದಾಳವಾಗಿತ್ತು. ತೈಲಕಂಪನಿಗಳು ಸರ್ಕಾರದ ಅಧೀನದಲ್ಲೇ ಇದ್ದಿದ್ದರಿಂದ ಹಾಗೂ ಅವುಗಳ ಬ್ಯಾಲೆನ್ಸ್ ಶೀಟಿನ ಬಗ್ಗೆ ಸಾಮಾನ್ಯ ನಾಗರೀಕ ತಲೆಕೆಡಿಸಿಕೊಳ್ಳುವುದಿಲ್ಲವೆಂದ ನೆಹರೂ ಮನಗಂಡಿದ್ದರಿಂದ, ಸರ್ಕಾರದ ಖಜಾನೆಯಿಂದ ಹಣವನ್ನು ಈ ತೈಲಕಂಪನಿಗಳಿಗೆ ಸಹಾಯಧನ (ಸಬ್ಸಿಡಿ)ದ ಹೆಸರಲ್ಲಿ ವರ್ಗಾಯಿಸಿ, ಬಹುಪಯೋಗಿ ತೈಲಉತ್ಪನ್ನಗಳಾದ ಪೆಟ್ರೋಲ್, ಸೀಮೆಯೆಣ್ಣೆಯನ್ನು ಜನರಿಗೆ ಕಡಿಮೆದರದಲ್ಲಿ ದೊರಕುವಂತೆ ಮಾಡಿದರು. ಮೊದಲೆರಡು ಪಂಚವಾರ್ಷಿಕಯೋಜನೆಗಳಡಿಯಲ್ಲಿ ಇದರಿಂದ ದೇಶಕ್ಕೆ ಉಪಯೋಗವಾಯಿತಾಯಿದರೂ, ನೆಹರೂ ಸಬ್ಸಿಡಿಯ ಅಮಲೇರಿಸಿ ದೇಶವನ್ನು ಅಪಾಯದಂಚಿಗೆ ದೂಡಿಯಾಗಿತ್ತು. 62ರ ಯುದ್ಧದನಂತರ ಸರ್ಕಾರದ ಖಜಾನೆ ಬರಿದಾದಾಗ ನೆಹರೂ ಸಬ್ಸಿಡಿಯನ್ನು ಹಿಂತೆಗೆಯಲೇ ಬೇಕಾಯಿತು. ಪೆಟ್ರೋಲು ದುಬಾರಿಯಾಯಿತು. ಖಜಾನೆಯನ್ನು ತುಂಬಿಸಲು ಜನರಿಗೆ ‘ಒಂದುಹೊತ್ತು ಊಟ ಬಿಡಿ’ ಎಂಬ ಕರೆಕೊಟ್ಟ ಶಾಸ್ತ್ರೀಜಿಯೇ ಬರಬೇಕಾಯಿತು. ಆದರೆ ನಂತರ ಅಧಿಕಾರಕ್ಕೆ ಬಂದ ಇಂದಿರಾ, ಅದಾಗಲೇ ಜನರನ್ನು ಹಾಗೂ ಮತಗಳನ್ನು ಸಬ್ಸಿಡಿಯ ಮೂಲಕೆ ಹೇಗೆ ಆಟವಾಡಿಸಬಹುದೆಂದು ಕಲಿತಾಗಿತ್ತು. ಆಕೆ ಅದನ್ನು ತನ್ನ ರಾಜಕೀಯ ಲಾಭಕ್ಕೆ ಅದನ್ನು ಉಪಯೋಗಿಸಿಕೊಂಡರು ಕೂಡಾ. ಮುಂದೆ ಬಂದ ಸರ್ಕಾರಗಳೂ ಇದರ ಲಾಭವನ್ನರಿತು ತೈಲಬೆಲೆಗಳ ಸತ್ಯದ ಬಗ್ಗೆ ಜನರನ್ನು ಕತ್ತಲಲ್ಲೇ ಇಟ್ಟರು. ಸರ್ಕಾರಗಳು ಕಡಿಮೆ ಬೆಲೆಯಲ್ಲಿ ಡೀಸೆಲ್, ಸೀಮೆಯೆಣ್ಣೆ ಹಾಗೂ ಗ್ಯಾಸ್ ಸಿಲಿಂಡರುಗಳನ್ನು ಕೊಡುತ್ತಾ ದೇಶದ ಮತಬ್ಯಾಂಕುಗಳೊಂದಿಗೆ ಚೆಲ್ಲಾಡಿದರು. 2002ರಲ್ಲಿ ಭಾರತ ಸರ್ಕಾರ ಈ APMನಿಂದ ಹೊರಬಂದು ಅಂತರರಾಷ್ಟ್ರೀಯ ಬೆಲೆ ಏರುಪೇರಿನಿಂದ ಸ್ವಲ್ಪಮಟ್ಟಿಗೆ ಸಹಾಯಕವಾಗಬಲ್ಲ ಸೂತ್ರವನ್ನೇನೋ ಜಾರಿಗೆ ತಂದಿತು. ಆದರೆ ಡೀಸೆಲ್, ಸೀಮೆಯೆಣ್ಣೆ ಮತ್ತು ಗ್ಯಾಸ್ ಮೇಲಿನ ಸಬ್ಸಿಡಿಯನ್ನೇನೂ ನಿಲ್ಲಿಸಲಿಲ್ಲ. ಗ್ರಾಹಕ ತೆರೆಬೇಕಾದ ಬೆಲೆಯೇನೂ ಕಡಿಮೆಯಾಗಲಿಲ್ಲ. ಮತ್ತು ಈ ಸೂತ್ರ ಸರಳವಾಗೇನೂ ಇರಲಿಲ್ಲ.

ಭಾರತದಲ್ಲಿ ಪೆಟ್ರೋಲ್ ಬೆಲೆ ಹೇಗೆ ನಿರ್ಧಾರವಾಗುತ್ತದೆ?

ಭಾರತದ ಹೆಚ್ಚಿನ ಪೆಟ್ರೋಲ್ ಬೇಡಿಕೆ ಬೇರೆ ದೇಶಗಳಿಂದ ಅಮದುಮಾಡುವ ತೈಲದಿಂದಲೇ ಪೂರೈಸಲಾಗುತ್ತದೆ. ನಮ್ಮದೇ ಆದ ತೈಲಭಾವಿಗಳಿವೆಯಾದರೂ ಅವುಗಳಿಂದ ನಮ್ಮ ದೇಶಕ್ಕೆ ಪೂರೈಕೆಯಾಗುತ್ತಿರುವುದು ನಮ್ಮ ಬೇಡಿಕೆಯ 30%ರಷ್ಟು ಮಾತ್ರ. ಇಷ್ಟೇ ಅಲ್ಲದೆ ಭಾರತ ಜಗತ್ತಿನಲ್ಲೇ ಅತ್ಯಂತ ಮೊದಲ 10 ದೊಡ್ಡ ತೈಲ ಗ್ರಾಹಕರಲ್ಲೊಂದು. ಹಾಗಾಗಿ ತೈಲಬೆಲೆಯ ಬಗ್ಗೆ ಇಲ್ಲಿ ಏನೇ ಸಣ್ಣ ನಿರ್ಧಾರ ತೆಗೆದುಕೊಂಡರೂ ದೊಡ್ಡ ಪರಿಣಾಮಗಳಾಗುತ್ತವೆ. ಹಾಗಾಗಿ ಪೆಟ್ರೋಲ್ ಬೆಲೆ ಹೇಗೆ ನಿರ್ಧಾರವಾಗುತ್ತದೆಯೆಂಬುದೊಂದು ಹತ್ತಾರು ‘ವೇರಿಯಬಲ್’ಗಳ ಒಂದು ಸಂಕೀರ್ಣ ಸಮೀಕರಣ.

“ನಮ್ಮ ದೇಶ ಪೆಟ್ರೋಲ್ ಅನ್ನು ಆಮದು ಮಾಡಿಕೊಳ್ಳುವುದಿಲ್ಲ. ಕಚ್ಚಾತೈಲವನ್ನು ಆಮದುಮಾಡಿಕೊಳ್ಳುತ್ತದೆ” ಎಂಬಲ್ಲಿಂದ ಪ್ರಾರಂಭಿಸೋಣ:

ಇಡೀ ತೈಲಬೆಲೆ ಸಮೀಕರಣಕ್ಕೆ ನಾಲ್ಕು ಮಂದಿ ಪಾಲುದಾರರು. ತೈಲ ಉತ್ಪಾದಕ, ಆಮದು ಕಂಪನಿ, ಸಂಸ್ಕರಣಾ ಕಂಪನಿ ಹಾಗೂ ಮಾರಾಟಗಾರ.

(*) ಉತ್ಪಾದಕ ಕಚ್ಚಾತೈಲವನ್ನು ಭೂಮಿಯಡಿಯಿಂದ ಹೊರತೆಗೆದು ಬ್ಯಾರಲ್ಲುಗಳಲ್ಲಿ ತುಂಬಿ ಮಾರುತ್ತಾನೆ. ಈ ಕಚ್ಚಾತೈಲ ತನ್ನಲ್ಲಿರುವ ಅಶುದ್ಧಿ(impurity) ಗಳಿಗನುಸಾರವಾಗಿ ‘ಸಿಹಿ’ಯಿಂದ ‘ಹುಳಿ’ಯೆಂಬ (sweet -> sour) ಶ್ರೇಣಿಯೆಡೆಗೂ, ಸ್ನಿಗ್ದತೆ(viscosity) ಗನುಗುಣವಾಗಿ ‘ಹಗುರ’ದಿಂದ ‘ಭಾರ’ವೆಂಬ (light -> heavy) ಶ್ರೇಣಿಯೆಡೆಗೂ ವರ್ಗೀಕರಿಸಲ್ಪಡುತ್ತದೆ. ‘ಸಿಹಿ ಮತ್ತು ಹಗುರ’ವಾದ ತೈಲವನ್ನು, ಉತ್ಪಾದಕ ಹೆಚ್ಚಿನ ಬೆಲೆಯಲ್ಲಿ ಮಾರುತ್ತಾನೆ. ಯಾಕೆಂದರೆ ಇದರಿಂದ ಪೆಟ್ರೋಲ್ ಸಂಸ್ಕರಿಸುವುದು ಕಡಿಮೆ ಖರ್ಚಿನ ವ್ಯವಹಾರ. ಆದರೆ ಈ ಶ್ರೇಣಿಯ ತೈಲ ಜಗತ್ತಿನಲ್ಲಿ ಸಿಗುವುದು ಬಹಳ ಕಡಿಮೆ. ಹೆಚ್ಚಿನವೆಲ್ಲಾ ಹುಳಿ-ಹಗುರ ಅಥವಾ ಹುಳಿ-ಭಾರ ವರ್ಗದವೇ. ಇದನ್ನು ಉತ್ಪಾದಕ Free On Board (FOB) ಬೆಲೆಗೆ ಭಾರತದ ಆಮದು ಕಂಪನಿಗೆ (ಉದಾಹರಣೆಗೆ IOC – ಇಂಡಿಯನ್ ಆಯಿಲ್ ಕಂಪನಿ) ಮಾರುತ್ತಾನೆ. ಈ ತೈಲ ಭಾರತದ ಹತ್ತಿರದ ಅಂತರರಾಷ್ಟ್ರೀಯ ಬಂದರಿಗೆ ಬಂದು ಸೇರುತ್ತದೆ. ಉದಾಹರಣೆಗೆ ಒಮಾನ್ ದೇಶದ ಮಸ್ಕತ್ ಬಂದರು.

(*) ಇಂಡಿಯನ್ ಆಯಿಲ್ ಕಂಪನಿ ಈಗ ಈ ತೈಲವನ್ನು ತನ್ನ ರಿಫೈನರಿಗಳಿಗೆ ಹತ್ತಿರವಾಗಿರುವ ಬಂದರುಗಳಿಗೆ ಸಾಗಿಸುತ್ತದೆ. ಉದಾಹರಣೆ ಮುಂಬೈ, ಮಂಗಳೂರು, ಕೋಲ್ಕತ್ತಾ. ಇದಕ್ಕಾಗಿ IOC ಸಾಗಾಣಿಕಾದಾರನನ್ನು ನಿಯಮಿಸುತ್ತದೆ. ಸಾಗಾಣಿಕೆದಾರನ ಶುಲ್ಕವೂ (Ocean Freight) ಸೇರಿ ಈಗ ತೈಲದಬೆಲೆ Cost&Freight ಬೆಲೆಯಾಗುತ್ತದೆ. C&F Price = FOB Price + Ocean Freight

(*) ಈಗ ಹೀಗೆ ಭಾರತದ ಬಂದರು ಸೇರಿದ ಈ ತೈಲಕ್ಕೆ ಈಗ ಆಮದು ಶುಲ್ಕವನ್ನು ವಿಧಿಸಲಾಗುತ್ತದೆ. ಈ ಶುಲ್ಕದಲ್ಲಿ ಮೂರು ಭಾಗಗಳು: ವಿಮಾ ವೆಚ್ಚ+ಬಂದರು ಶುಲ್ಕ+ಸಾಗಾಣಿಕಾ ನಷ್ಟದ ವೆಚ್ಚ. ಇದಿಷ್ಟೇ ಅಲ್ಲದೆ ಭಾರತ ಸರ್ಕಾರ ಈ ತೈಲದಮೇಲೆ C&F ಬೆಲೆಯ 2.5%ರಷ್ಟು ಕಸ್ಟಮ್ಸ್ ಸುಂಕವನ್ನು ವಿಧಿಸುತ್ತದೆ. ಇಲ್ಲಿಗೆ ತೈಲದ ಬೆಲೆ “ಆಮದು ಸಮಾನತೆ ಬೆಲೆ” – Import Parity Price (IPP) ಎಂಬಲ್ಲಿಗೆ ಬಂದು ನಿಲ್ಲುತ್ತದೆ. ದೇಶದಲ್ಲಿ ಪೆಟ್ರೋಲ್ ಬೆಲೆ ನಿಗದಿಯಾಗಲು IPPಮೂಲ. ಈಗ ಸಮೀಕರಣ “IPP = C&F ಬೆಲೆ + ಆಮದು ಶುಲ್ಕ + ಕಸ್ಟಮ್ಸ್ ಸುಂಕ” ಎನ್ನುವಲ್ಲಿಗೆ ಬಂದು ನಿಂತಂತಾಯಿತು.

(*) ಇಲ್ಲೊಂದು ಸಣ್ಣ ಮ್ಯಾಜಿಕ್ ನಡೆಯುತ್ತದೆ. ಅದೇನೆಂದರೆ, ಭಾರತ ತೈಲದ ಒಂದು ಹನಿಯನ್ನೂ ರಫ್ತು ಮಾಡುವುದಿಲ್ಲವಾದರೂ “ರಫ್ತು ಸಮಾನತೆ ಬೆಲೆ” – Export Parity Price (EPP) ಎಂಬುದೊಂದು ಪರಿಕಲ್ಪನೆಯನ್ನು ಇಲ್ಲಿಗೆ ಎಳೆತರಲಾಗುತ್ತದೆ. ‘ಮುಂದೆಂದಾದರೂ’ IOC ತೈಲವನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರುವಂ’ತಾದರೆ’ ಎಂಬ ಊಹೆಯ ಮೇಲೆ ಈ ಬೆಲೆ ನಿಂತಿದೆ. ಇದನ್ಯಾಕೆ ಹೇಳಿದೆ ಎಂದರೆ, ನಮ್ಮ ದೇಶದಲ್ಲಿ ಈ EPP ಮತ್ತು IPPಯ ಸರಾಸರಿಯ ಮೇಲೆ ತೈಲದ ಬೆಲೆ ನಿಗದಿಯಾಗಿತ್ತದೆ. ಇಲ್ಲೀಗ ನಮಗೆ “ಮಾರಾಟ ಸಮಾನ ಬೆಲೆ” – Trade Parity Price (TPP) ಎಂಬುದೊಂದು ಹೊಸಾ ಪದ ಸಿಗುತ್ತದೆ. TPP = 0.8*IPP + 0.2*EPP. ಈ TPP ದೇಶದ ಯಾವುದೇ ಕಂಪನಿ ತೈಲವನ್ನು ಆಮದು ಮಾಡಿದರೂ, ಬೆಲೆ ಹೆಚ್ಚುಕಮ್ಮಿ ಒಂದೇ ಇರುವಂತೆ ನೋಡಿಕೊಳ್ಳುತ್ತದೆ.

(*) ಈಗ ಈ ತೈಲ ಸಂಸ್ಕರಣಾಘಟಕದೆಡೆಗೆ ಪ್ರಯಾಣ ಬೆಳೆಸುತ್ತದೆ. ಇಲ್ಲಿ ಇನ್ನೊಂದು ಪದಪ್ರಯೋಗ. Refinery Transfer Price (RTP), ಅಂದರೆ ರಿಫೈನರಿ ವರ್ಗಾವಣಾ ಬೆಲೆ. ಭಾರತದಲ್ಲಿ ಅತೀದೊಡ್ಡ ಮೂರು ಅಮದು ಮತ್ತು ಮಾರಾಟ ಕಂಪನಿಗಳಾದ IOCL, HPCL, BPCL ತಮ್ಮದೇ ರಿಫೈನರಿಗಳನ್ನು ಹೊಂದಿರುವುದರಿಂದ TPP ಹಾಗೂ RTP ಯಲ್ಲಿ ಏನೂ ಬದಲಾವಣೆಯಾಗುವುದಿಲ್ಲ. ಆದ್ದರಿಂದ RTP=TPP

(*) ರಿಫೈನರಿಗೆ ಹೋದ ಕಚ್ಚಾತೈಲ ಪೆಟ್ರೋಲ್, ಡೀಸೆಲ್, ಸೀಮೆಯೆಣ್ಣೆ, ವಿಮಾನಇಂಧನ, ಅನಿಲ, ತುಟಿಗೆ ಹಚ್ಚುವ ಪೆಟ್ರೋಲಿಯಂ ಜೆಲ್ಲಿ ಹಾಗೂ ಇನ್ನಿತರ ಉತ್ಪಾದನೆಗಳಾಗಿ ಹೊರಬರುತ್ತದೆ. ನಮ್ಮ ಮಾತುಕತೆಯನ್ನು ನಾವು ಪೆಟ್ರೋಲಿಗೆ ಸೀಮಿತಗೊಳಿಸೋಣ. ಈ ರಿಫೈನರಿಯಿಂದ ಹೊರಬಂದ ಪೆಟ್ರೋಲ್ ರಸ್ತೆಯ ಮೂಲಕ ಚಿಲ್ಲರೆ ಮಾರಾಟಮಳಿಗೆಗಳನ್ನು ತಲುಪುತ್ತದೆ. ಅದಲ್ಲದೆ ಮಾರಾಟಕಂಪನಿಗಳು ತಮ್ಮ ಬ್ರಾಂಡುಗಳನ್ನು ಮಾರ್ಕೆಟಿಂಗ್ ಮಾಡಲು ಖರ್ಚನ್ನೂ ಮಾಡುತ್ತವೆ. ಈ ಖರ್ಚುಗಳೆಲ್ಲಾ ಸೇರಿ ‘ಒಟ್ಟು ಬಯಸಿದ ಬೆಲೆ’ Total Desired Price – TDP ಎಂಬುದೊಂದು ಸಿಗುತ್ತದೆ. TDP = RTP+ರಸ್ತೆ ಸಾಗಣೆ ವೆಚ್ಚ್ಚ+ಮಾರ್ಕೆಟಿಂಗ್ ವೆಚ್ಚ

(*) ಈ ಪೆಟ್ರೋಲ್ ನಮ್ಮ ನಿಮ್ಮ ಹತ್ತಿರದ ಬಂಕ್ ಒಂದಕ್ಕೆ ಬಂದಿಳಿಯುತ್ತದೆ. ಈಗ ರಿಫೈನರಿ ಎಲ್ಲೇ ಇರಲಿ, ಬಂಕ್ ಎಲ್ಲಿದೆ ಎಂಬುದರ ಮೇಲೆ ಪೆಟ್ರೋಲಿನ ಚಿಲ್ಲರೆ ಬೆಲೆ Retail Price ನಿರ್ಧಾರಿತವಾಗುತ್ತದೆ. ಯಾಕೆಂದರೆ ಬೇರೆ ಬೇರೆ ರಾಜ್ಯಗಳು ಬೇರೆ ರೀತಿಯ ಮೌಲ್ಯಾಧಾರಿತ ತೆರಿಗೆ ನಿಯಾಮಾವಳಿಗಳನ್ನು ಪಾಲಿಸುತ್ತವೆ. ಇದಲ್ಲದೆ ಕೇಂಡ್ರ ಸರ್ಕಾರ ಈ ಸರಪಳಿಯ ಕೊನೆಯ

ಉತ್ಪನ್ನದ ಮೇಲೆ ಅಬಕಾರಿ ಸುಂಕ ವಿಧಿಸುತ್ತದೆ. ಕಟ್ಟಕೊನೆಯದಾಗಿ ಚಿಲ್ಲರೆ ಮಾರಾಟಗಾರ ತನ್ನ ಲಾಭಾಂಶವನ್ನು ಸೇರಿಸಿ ಮಾರಾಟದರ ನಿರ್ಧಾರವಾಗುತ್ತದೆ. ಅಂದರೆ Retail Price (RP) = TDP + ಅಬಕಾರಿ ಸುಂಕ + ಮೌಲ್ಯಾಧಾರಿತ ತೆರಿಗೆ (VAT) + ಸೆಸ್+ ಮಾರಾಟಗಾರನ ಲಾಭಾಂಶ (ಸುಮಾರು 0.9% – 1.5%)

ಆದರೆ ರಾಜ್ಯಗಳು ತಮ್ಮದೇ ತೆರಿಗೆ ನಿಯಮಾವಳಿಗಳನ್ನು ಪಾಲಿಸುವುದರಿಂದ (ಉದಾ: ಗೋವಾದಲ್ಲಿ VAT ಬರೀ 0.1%, ದೆಹಲಿಯಲ್ಲಿ 20%, ಕರ್ನಾಟಕದಲ್ಲಿ 25% VAT) ಪೆಟ್ರೋಲಿನ ಬೆಲೆ ಏರುಪೇರಾಗುತ್ತದೆ. ಇದರ ಮೇಲೆ ಕರ್ನಾಟಕ 5% ಪ್ರವೇಶ ತೆರಿಗೆಯನ್ನೂ ಮತ್ತೊಂದಷ್ಟು ಸೆಸ್ ಅನ್ನೂ ವಿಧಿಸುತ್ತದೆ. ಹಾಗಾಗಿ ಕರ್ನಾಟಕದ ಗ್ರಾಹಕರು ದೇಶದ ಸರಾಸರಿಗಿಂತ ಹೆಚ್ಚು ಬೆಲೆ ತೆರುತ್ತಾರೆ. ಭಾರತ ಹಾಗೂ ಅಮೇರಿಕಾದ ಗ್ರಾಹಕ ಹೆಚ್ಚುಕಡಿಮೆ ಒಂದೇ ಬೆಲೆತೆತ್ತು ಪೆಟ್ರೋಲ್ ಕೊಳ್ಳುತ್ತಾರೆ. ಆದರೆ ನಮ್ಮದೇಶದ ಹಾಗೂ ಅಮೇರಿಕಾದ ಪೆಟ್ರೋಲ್ ಬೆಲೆಯ ಬನಾವಣೆ ಹೇಗಿದೆಯೆಂದು ಚಿತ್ರ ೧ ಹಾಗೂ ಚಿತ್ರ ೨ ರದಲ್ಲಿ ನೋಡಬಹುದು.

gas-prices-breakdown-Indiagas-prices-breakdown-US

ತಮಾಷೆಯ ವಿಷಯವೆಂದರೆ, ಈ ಪೆಟ್ರೋಲ್ ಮಾರಾಟಕಂಪನಿಗಳಿಂದ ಇಷ್ಟೆಲ್ಲಾ ತೆರಿಗೆ ಪೀಕುವ ರಾಜ್ಯಸರ್ಕಾರಗಳು ಅದಕ್ಕೆ ಪ್ರತಿಯಾಗಿ ತೈಲಕಂಪನಿಗಳಿಗೇನನ್ನೂ ಕೊಡುವುದಿಲ್ಲ. ಆ ಕಂಪನಿಗಳಿಗೆ ಬರುವ ಸಹಾಯಧನವೆಲ್ಲಾ ಕೇಂದ್ರ ಸರ್ಕಾರದಿಂದಲೇ ಬರುವುದು. ಇದರಿಂದಾಗಿ ತೈಲಮಾರಾಟದಲ್ಲಿ ಅಂತಿಮ ನಷ್ಟ ಕೇಂದ್ರಸರ್ಕಾರಕ್ಕೇನೇ. ಅದೂ ಅಲ್ಲದೆ ಈ ಸಹಾಯಧನ, ಕೇಂದ್ರ ಸರ್ಕಾರದ ಬೇರೆ ಬಹುಮುಖ್ಯ ಯೋಜನೆಗಳಿಗೆ (ಉದಾ: ದೇಶ ರಕ್ಷಣೆ, ವಿಜ್ಞಾನ ಅಭಿವೃದ್ಧಿ, ರಸ್ತೆ ಸಾರಿಗೆ ವ್ಯವಸ್ಥೆ) ಅಗತ್ಯವಾದ ಹಣವನ್ನು ನುಂಗಿಹಾಕುತ್ತದೆ. ಅಂದಹಾಗೆ ಕಳೆದ ವರ್ಷದ 2013-14ರ ಬಜೆಟ್ಟಿನಲ್ಲಿ ಈ ಸಬ್ಸಿಡಿಗಾಗಿ ಮೀಸಲಿಟ್ಟಿದ್ದ ಹಣವೆಷ್ಟು ಗೊತ್ತೇ? 65ಸಾವಿರ ಕೋಟಿ!! ಈ ಸಬ್ಸಿಡಿಯ ಅಗತ್ಯವೇನಿತ್ತು ಗೊತ್ತೇ? ಇದಿಲ್ಲದ್ದಿದ್ದಿದ್ದರೆ ಪೆಟ್ರೋಲ್ ಬೆಲೆ ಲೀಟರಿಗೆ ಕನಿಷ್ಟ 17ರೂ ಹೆಚ್ಚಾಗುತ್ತಿತ್ತು, ಡೀಸೆಲ್ ಬೆಲೆ 19ರೂ ಹೆಚ್ಚಾಗುತ್ತಿತ್ತು, ಸೀಮೆಯೆಣ್ಣೆ 7ರೂ ಹೆಚ್ಚಾಗುತ್ತಿತ್ತು. ಇಷ್ಟೆಲ್ಲಾ ಹೆಚ್ಚಾದ ಮೇಲೆ ಆ ಪಕ್ಷ ಅಧಿಕಾರಕ್ಕೆ ಬರುತ್ತಿತ್ತೇ!? ಇಲ್ಲ. ಆದ್ದರಿಂದ ಸರ್ಕಾರ ಮಾಡಿದ ಘನಕಾರ್ಯವೆಂದರೆ ‘ಪ್ರಜೆಗಳ ತೆರಿಗೆ ದುಡ್ಡನ್ನೇ ಸರ್ಕಾರಿಕಂಪನಿಗಳಿಗೆ ಸಬ್ಸಿಡಿಯಾಗಿ ಕೊಟ್ಟು ಪ್ರಜೆಗಳಿಗೆ ಕಡಿಮೆ ದರದಲ್ಲಿ ತೈಲ ಒದಗಿಸಿ ವೋಟು ಗಳಿಸಿಕೊಂಡಿದ್ದು’. ಅಂದರೆ ನಮ್ಮ ಜೇಬಿನಿಂದಲೇ ದುಡ್ಡು ತೆಗೆದುಕೊಂಡು ‘ಇಗೋ ಕಡಿಮೆಬೆಲೆಯ ಪೆಟ್ರೋಲ್’ ಎಂದು ಆಸೆತೋರಿಸಿ ತಾನು ವರ್ಷಾನುಗಟ್ಟಲೆ ಆಡಳಿತ ಮಾಡಿದ್ದು.

ಕೊನೆಯದಾಗಿ, ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಪೆಟ್ರೋಲೆ ಬೆಲೆ ಇಳಿದಿದ್ದಕ್ಕೆ ನೇರ ಕಾರಣ ಮೋದಿ ಸರ್ಕಾರವಲ್ಲ ಎಂದು ನಾನು ಈ ಮೊದಲೇ ಒಂದು ಬಾರಿ ಹೇಳಿದ್ದೆ. OPECನ ಉತ್ಪಾದನಾ ಗುರಿ ಹೆಚ್ಚಾಗಿರುವುದು, ಯೂರೋಪಿಯನ್ ದೇಶಗಳಲ್ಲಿ ತೈಲಾಧಾರಿತವಲ್ಲದ ಶಕ್ತಿಮೂಲಗಳ ಜನಪ್ರಿಯತೆ ಹೆಚ್ಚಿರುವುದು, ಕಚ್ಚಾತೈಲದ ಉತ್ಪಾದನೆಯಲ್ಲಿ ಸುಧಾರಿತ ಶೇಲ್ ತಂತ್ರಜ್ಞಾನದ (shale technology) ಬಳಕೆ, ಜಪಾನ್ ಸೇರಿದಂತೆ ಜಗತ್ತಿನ ಕೆಲ ಮುಖ್ಯ ಮಾರುಕಟ್ಟೆಗಳು ಮಂದವಾಗಿರುವುದೂ ಕಾರಣಗಳು ಸೇರಿ ಜಾಗತಿಕ ಮಾರುಕಟ್ಟೆಯಲ್ಲಿ ಅಗತ್ಯಕ್ಕಿಂತ ಹೆಚ್ಚಾದ ತೈಲ ಲಭ್ಯವಾಗುತ್ತಿದೆ. ಇದರಿಂದಾಗಿ ಕಚ್ಚಾತೈಲದ ಬೆಲೆ ಕಡಿಮೆಯಾಗಿದೆ.

ಆದರೆ ಸಧ್ಯದ ಸರ್ಕಾರ ಇರಾನಿನಿಂದ ಹೆಚ್ಚಿನ ಆಮದಿಗೆ ಇಂಬುಕೊಟ್ಟಿರುವುದೂ, ತೈಲ ಬೆಲೆಗಳನ್ನು ಅನಿಯಂತ್ರಿತ ವ್ಯವಸ್ಥೆಯೆಡೆಗೆ ತಿರುಗಿಸಿದ್ದು ನಿಜವಾಗಿಯೂ ಒಳ್ಳೆಯ ಯೋಜನೆ. ಈಗ ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಗನುಗುಣವಾಗಿ ತೈಲಕಂಪನಿಗಳು ಬೆಲೆ ನಿರ್ಧರಿಸುವುದರಿಂದ ಸರ್ಕಾರದ ಸಬ್ಸಿಡಿಯ ಅಗತ್ಯ ಇಳಿಮುಖವಾಗುತ್ತದೆ ಹಾಗೂ ಈ ಹಣವನ್ನು ಸರ್ಕಾರ ಸಮರ್ಪಕವಾದ ರೀತಿಯಲ್ಲಿ ಬೇರೆ ಯೋಜನೆಗಳಿಗಾಗಿ ಬಳಸಿಕೊಳ್ಳಬಹುದು. ಅದೂ ಅಲ್ಲದೆ ಎಲ್ಲಾಬಾರಿಯೂ ಪೆಟ್ರೋಲ್ ಬೆಲೆ ಬರೇ ಕಚ್ಚಾತೈಲದ ಬೆಲೆಯ ಮೇಲೆ ಅವಲಂಬಿತವಲ್ಲ. ಡಾಲರಿನೆದುರು ರೂಪಾಯಿಯ ಶಕ್ತಿಯನ್ನೂ ಗಮನಿಸಬೇಕು. ಕಳೆದ ನವೆಂಬರಿನಲ್ಲಿ ಕಚ್ಚಾತೈಲದ ಬೆಲೆ 18.3% ಇಳಿಕೆಯಾಯಿತು. ಆದರೆ ದುರ್ಬಲ ರೂಪಾಯಿಯಿಂದಾಗಿ ಭಾರತಕ್ಕೆ ಬರೇ 12.3%ರಷ್ಟು ಕಡಿಮೆ ಬೆಲೆಯಲ್ಲಿ ದೊರಕುವಂತಾಯಿತು. ತೈಲಬೆಲೆ ಇಳಿಕೆಯಿಂದಾಗಿ ಯಾವ ರೀತಿ ಆರ್ಥಿಕಸ್ಥಿತಿ ಸುಧಾರಿಸಬಹುದು ಎಂಬುದರ ಬಗ್ಗೆ ತಿಳಿಯಲು ಆಸಕ್ತಿ ಇರುವವರು, ಇನ್ನೊಂದು ಲೇಖನವನ್ನು http://on.fb.me/14E1Tt6 ಇಲ್ಲಿ ಓದಬಹುದು.

ಕೊಸರು:

ತೈಲಬೆಲೆ ಕಡಿಮೆಯಾದಷ್ಟೂ ರಸ್ತೆಗಳು ಹೆಚ್ಚೆಚ್ಚು ಅಸುರಕ್ಷಿತ ಹಾಗೂ ಅಪಾಯಕಾರಿಯಾಗಿರುತ್ತವೆ ಎಂಬ ಹೊಸ ಸಂಶೋಧನಾ ವರದಿಯೊಂದು ಹೊರಬಂದಿದೆ (http://bit.ly/1xNgq0n) 🙂 ವಿಚಿತ್ರ ಆದರೂ ಸತ್ಯ!!

#ಬುದ್ಧಿಗೊಂದು_ಗುದ್ದು, #ಪೆಟ್ರೋಲ್_ಬೆಲೆ, #PetrolPrice

ಉಳಿದ ‘ಬುದ್ಧಿಗೊಂದು ಗುದ್ದು’ ಲೇಖನಗಳಿಗೆ https://loadstotalk.wordpress.com/ ಗೆ ಭೇಟಿ ಕೊಡಿ