ಬುದ್ಧಿಗೊಂದು ಗುದ್ದು – ೩೦

ಬುದ್ಧಿಗೊಂದು ಗುದ್ದು – ೩೦

X ಯಾವಾಗಲೂ ಎಕ್ಸೇ ಯಾಕೆ? (Y ಈಸ್ X ಅಲ್ವೇಸ್ X!?)

 
ಸಣ್ಣವನಿದ್ದಾಗಲಿಂದಲೂ ನನಗೆ ಗಣಿತ ಅಷ್ಟಕ್ಕಷ್ಟೇ. ಅದಕ್ಕೆ ಸರಿಯಾಗಿ ಬೀಜಗಣಿತ ಬಂದಮೇಲಂತೂ, ಅದರ ಹೆಸರಿಂದಲೇ ಸಿಟ್ಟು ಹೆಚ್ಚಾಗಿ ನನಗೆ ನನ್ನಿಷ್ಟದ ತಿನಿಸು ಗೇರುಜೀಜದ ಮೇಲೂ ಮುನಿಸು ಬಂದುಹೋಗಿತ್ತು. ಕಾಲಕಳೆದಂತೆ ಆಲ್ಜೀಬ್ರಾ ಅಂದ್ರೆ ಜೋಕಾಗಿ ಕಾಣಿಸಲಾರಂಭಿಸಿತು. ಎಲ್ಲಾ ಬಾರಿಯೂ ಎಕ್ಸ್ ಹುಡುಕಿಕೊಡಿ, ನನ್ನ ಎಕ್ಸ್ ಹುಡುಕಿಕೊಡಿ ಅಂತಾ ತಲೇ ತಿನ್ನೋ ಈ ಬೀಜಗಣಿತವನ್ನು, ನಾವು ‘ಭಗ್ನಪ್ರೇಮಿ ಗಣಿತ’ ಅಂತಾ ಕರೀತಾ ಇದ್ವಿ. ಕೊನೆಗೆ ಟ್ರಿಗ್ನಾಮೆಟ್ರಿ ಬಂದಮೆಲಂತೂ ಗಣಿತದೊಂದಿಗೆ ನನ್ನ ಸಂಬಂಧ ಹದೆಗೆಡುತ್ತಲೇ ಹೋಯಿತು. ಅಷ್ಟು ಚೆಂದದ ಮೇಡಮ್ಮುಗಳು ಬಂದು ಪ್ರಯತ್ನಿಸಿದರೂ, ಗಣಿತವನ್ನು ದೂರವೇ ಇಡುವಂತಾಯಿತು. ಅಂದಿನಿಂದ ಇಂದಿನವರೆಗೂ ಈ ಎಕ್ಸ್ ಎಂದರೇನು? ಅದ್ಯಾಕೆ ಯಾರಿಗೂ ಗೊತ್ತಿಲ್ಲ? ಎಂಬ ಪ್ರಶ್ನೆಗೆ ಉತ್ತರಗೊತ್ತಿರಲಿಲ್ಲ. ಇತ್ತೀಚೆಗಷ್ಟೇ, ರಾಹುಲ್ಗಾಂಧಿ ಕಣ್ಮರೆಯಾದ ಮೇಲೆ, ಇದರ ಬಗ್ಗೆ ಸ್ವಲ್ಪ ತಲೆಕೆಡಿಸಿಕೊಂಡು ಎಕ್ಸ್ ಯಾಕೆ ಎಕ್ಸೇ ಅಂತಾ ಓದಲು ಪ್ರಯತ್ನಿಸಿದೆ. ನೀವೂ ಓದಿ.

ಬೀಜಗಣಿತ ಜಗತ್ತಿಗೆ ಯಾರ ಕೊಡುಗೆ ಎಂಬುದರ ಬಗ್ಗೆ ಹಲವಾರು ಸಿದ್ಧಾಂತಗಳಿವೆ. ಕೆಲವು ಸಂಶೋಧನೆಗಳ ಪ್ರಕಾರ ಬ್ಯಾಬಿಲೋನಿಯನ್ನರ ಕಾಲದಲ್ಲೇ ಬೀಜಗಣಿತದ ಕಲ್ಪನೆಯ ಬಗ್ಗೆ ಉಲ್ಲೇಖಗಳಿವೆ. ಭಾರತದಲ್ಲಿ ಸುಮಾರು ಆರನೆಯ ಶತಮಾನದಲ್ಲಿಯೇ ಬ್ರಹ್ಮಗುಪ್ತ ತನ್ನ ‘ಬ್ರಹ್ಮಸ್ಪುಟಸಿದ್ಧಾಂತ’ದಲ್ಲಿ ಬೀಜಗಣಿತದ ಮೂಲಸ್ತಂಭಗಳಲ್ಲೊಂದಾದ ರೇಖೀಯ ಸಮೀಕರಣದ ಬಗ್ಗೆ ವಿಸ್ತೃತವಾಗಿ ಬರೆದಿದ್ದಾನೆ.

ಆದರೆ, ಬೀಜಗಣಿತಕ್ಕೆ ಇಂದಿನ ಸ್ವರೂಪ ಕೊಟ್ಟದ್ದು ಅರಬ್ಬೀ ಗಣಿತಜ್ಙರು. ಈ ಲೇಖನಗಳು/ಸಿದ್ಧಾಂತಗಳು ಪುಸ್ತಕರೂಪದಲ್ಲಿ ಯೂರೋಪಿಗೆ ಬಂದದ್ದು, 11/12ನೇ ಶತಮಾನದಲ್ಲಿ ಅರಬ್ಬೀ ವ್ಯಾಪಾರಿಗಳು ಉತ್ತರ ಆಫ್ರಿಕಾವನ್ನು ಕ್ರಮಿಸಿ, ಜಿಬ್ರಾಲ್ಟರ್ ಜಲಸಂಧಿಯ ಮೂಲಕ ಸ್ಪೇನಿನ ಮೂಲಕ ಯೂರೋಪಿನಲ್ಲಿ ಕಾಲಿಟ್ಟಾಗ. ಬೀಜಗಣಿತದ ಇಂಗ್ಳೀಷ್ ಪದವಾದ ಆಲ್ಜೀಬ್ರಾ ಸಹ ಅರಬ್ಬೀ ಪದವಾದ ‘ಅಲ್-ಜಬ್ರ್’ (ಅರ್ಥ: ಪುನಃಸ್ಥಾಪನೆ) ಎಂಬ ಪದದಿಂದಲೇ ಬಂದದ್ದು. [ಅದಕ್ಕಿಂತ ಸ್ವಲ್ಪ ಮುಂಚೆಯೇ, ಹತ್ತನೇ ಶತಮಾನದಲ್ಲೇ, ನಮ್ಮ ಬಿಜಾಪುರದಲ್ಲಿ ಕುಳಿತು ಭಾಸ್ಕರಾಚಾರ್ಯ ತನ್ನ ಲೀಲಾವತಿ ಎಂಬ ಕೃತಿಯಲ್ಲಿ ಗಣಿತವೆಂಬ ಕಬ್ಬಿಣದ ಕಡಲೆಯನ್ನು, ರೋಮಾಂಚಕ ರೀತಿಯಲ್ಲಿ ಕಾವ್ಯರೂಪಕ್ಕಿಳಿಸುತ್ತಿದ್ದ ಎನ್ನುವುದು ಬೇರೆ ವಿಚಾರ. ಏನು ಮಾಡುವುದು ಹೇಳಿ, ಭಾರತೀಯರಿಗೆ ಶ್ರೇಷ್ಟತೆಯ ವ್ಯಸನ. ಅದಕ್ಕೇ ಎಲ್ಲೂ ಹೇಳಿ(ಕೊಚ್ಚಿ)ಕೊಳ್ಳಲಿಲ್ಲ. ಸೂರ್ಯನಂತೆ ಬೆಳಗಬೇಕಿದ್ದ ಭಾಸ್ಕರ ಅಮವಾಸ್ಯೆಯ ಚಂದ್ರನಾಗಿಯೇ ಉಳಿದ 😦 ಇರಲಿ ಬಿಡಿ, ವಿಷಯಾಂತರವಾದೀತು 😦 🙂 ]

ಸ್ಪೇನಿಗೆ ಬಂದಿಳಿದ ಬೀಜಗಣಿತದ ಖಜಾನೆಯನ್ನು ಯೂರೋಪಿಯನ್ ಭಾಷೆಗಳಿಗೆ ಭಾಷಾಂತರಿಸಲು ವಿದ್ವಾಂಸರೇನೋ ಕೂತರು. ಮೊದಲ ದಿನವೇ ತೊಂದರೆ ಆರಂಭವಾಯ್ತು. ಅರಬ್ಬೀ ಲಿಪಿಯಲ್ಲಿದ್ದ ಹಲವಾರು ಅಕ್ಷರಗಳೂ, ಸಂಕೀರ್ಣ ಶಬ್ದ ಪ್ರಕಾರಗಳೂ ಯೂರೋಪಿಯನ್ ಭಾಷೆಗಳಲ್ಲಿ ಇರಲೇ ಇಲ್ಲ. ಹೀಗಿದ್ದಾಗ ತಮಗೆ ಗೊತ್ತಿದ್ದ/ಪ್ರಚಲಿತದಲ್ಲಿದ್ದ ಪದಗುಚ್ಚಗಳನ್ನೇ ಬಳಸಿ, ಯೂರೋಪಿಯನ್ ವಿದ್ವಾಂಸರು ಕೆಲಸ ಪ್ರಾರಂಭಿಸಿದರು. ಈ ವಿದ್ವಾಂಸರ ವಿದ್ವಂಸಕ ಕೃತ್ಯಗಳಲ್ಲೊಂದು ಎಕ್ಸ್ ಕೂಡಾ. ಹೇಗೆ ಅಂತೀರಾ? ಇಲ್ನೋಡಿ.

ಬೀಜಗಣಿತದ ಮೂಲವೇ ವ್ಯತ್ಯಯಕಾರೀ ಪರಿಮಾಣಗಳು ಅಂದರೆ ‘ವೇರಿಯಬಲ್’ಗಳು. ಅರೇಬಿಕ್ ಭಾಷೆಯಲ್ಲಿ ‘ಶೇಲಾನ್’ ಎಂದರೆ ‘ಅಜ್ಞಾತ/ಏನೋ ಒಂದು/ಅಪರಿಚಿತ’ ಎಂದರ್ಥ. ಇದಕ್ಕೆ ಅರೇಬಿಕ್ ಭಾಷೆಯ ‘ಅಲ್’ ಎಂಬ ನಿರ್ಧಿಷ್ಟತೆಯ ವಿಧಿಯನ್ನು ಸೇರಿಸಿ ‘ಅಲ್-ಶೇಲಾನ್’ (ಅರ್ಥ: ಒಂದು ಅಜ್ಞಾತವಾದ) ಎಂಬ ಪದವನ್ನೂ, ಹಾಗೂ ಈ ಪದದ ಮೊದಲಕ್ಷರವಾದ ‘ಶೇ’ ಎಂಬ ಅಕ್ಷರವನ್ನೂ ವೇರಿಯಬಲ್ ಅಥವಾ ವ್ಯತ್ಯಯವನ್ನು ಪ್ರತಿನಿಧಿಸಲು ವ್ಯಾಪಕವಾಗಿ ಬಳಸುತ್ತಿದ್ದರು. ಈ ಅಕ್ಷರ/ಪದಗಳನ್ನು ನೀವು ಚಿತ್ರ-1 ರಲ್ಲಿ ನೋಡಬಹುದು. ಭಾಷಾಂತರಕ್ಕೆ ಕುಳಿತ ಸ್ಪಾನಿಷ್ ವಿದ್ವಾಂಸರಿಗೆ ‘ಶ್’ ಅಥವಾ ‘ಶೇ’ ಎಂಬ ಪದ/ಶಬ್ದವೇ ಗೊತ್ತಿಲ್ಲದ ಕಾರಣ (ಯಾಕೆಂದರೆ ಮಧ್ಯಕಾಲೀನ ಸ್ಪಾನಿಷ್ ಭಾಷೆಯಲ್ಲಿ ಶ್ ಅಥವಾ ಶೇ ಎಂಬ ಶಬ್ದವೇ ಇರಲಿಲ್ಲ!!) ಅದಕ್ಕೆ ಅತ್ಯಂತ ಹತ್ತಿರವಾದ ಸ್ಪಾನಿಷ್ ಭಾಷೆಯ ‘ಕ್’ ಎಂಬ ಶಬ್ದವನ್ನು ಬಳಸಿದರು. ಹಾಗೂ ಈ ‘ಕ್’ ಅನ್ನು ಪ್ರತಿನಿಧಿಸಲು ಅವರು ಗ್ರೀಕ್ ಭಾಷೆಯ ‘ಕಾಯ್’ ಎಂಬ ಅಕ್ಷರವನ್ನು (ಚಿತ್ರ-2) ಬಳಸಿ ತಮ್ಮ ಕೆಲಸವನ್ನು ಮುಗಿಸಿದರು. ಮುಂದೆ ಈ ಕೃತಿಗಳು ಯೂರೋಪಿನಾದ್ಯಂತ ಪ್ರಚಲಿತ ಭಾಷೆಯಾಗಿದ್ದ ಲ್ಯಾಟಿನ್ ಭಾಷೆಗೆ ರೂಪಾಂತರಗೊಂಡಾಗ ಆ ಪುಣ್ಯಾತ್ಮರು ಈ ಗ್ರೀಕ್ ‘ಕಾಯ್’ ಅಕ್ಷರಕ್ಕೆ ಆಕಾರದಲ್ಲಿ ಸಮಾನರೂಪದಲ್ಲಿದ್ದ ‘X’ ಅಕ್ಷರವನ್ನು ಬಳಸಿದರು (ಚಿತ್ರ-3). ಈ ಪ್ರಮಾದ ಆಗಿದ್ದೇ ಆಗಿದ್ದು, ಈ X ಮುಂದಿನ ಆರುನೂರುವರ್ಷಗಳಲ್ಲಿ ಮೂಡಿಬಂದ ಎಲ್ಲಾ ಬೀಜಗಣಿತ ಮೀಮಾಂಸೆಗಳ ತಳಹದಿಯಾಗಿಬಿಟ್ಟಿತು. ಮುಂದೆ ಇದನ್ನೇ ಎರವಲು ಪಡೆದ ಇಂಗ್ಳೀಷ್ ಭಾಷೆ X ಎನ್ನುವ ಒಂದು ಪದವ್ಯುತ್ಪತ್ತಿಯನ್ನೇ ಹುಟ್ಟುಹಾಕಿತು. ಅನೂಹ್ಯವಾದ ವಿಷಯಗಳಿಗೆಲ್ಲಾ X ಸೇರಿಸುವುದು ಅಭ್ಯಾಸವಾಗಿಬಿಟ್ಟಿತು. X-ಫೈಲ್ಸ್, X-ಮೆನ್ ಮುಂತಾದ ಪದಗಳು ಹುಟ್ಟುಪಡೆದವು.

FotorCreated 120px-Greek_KaiKai to X

ಹೀಗೆ, ಯಾರೂ ಎಕ್ಸ್ ಯಾಕೆ ಹೀಗೆ ಎಕ್ಸಾಗಿದೆ ಅಂತಾ ತಲೆಕೆಡಿಸಿಕೊಳ್ಳಲೇ ಇಲ್ಲ. ಎಲ್ಲರೂ ಎಕ್ಸ್ ಅನ್ನು ಬಿಡಿಸುವುದರಲ್ಲೇ ಕಾಲಕಳೆದರೇ ಹೊರತು, ‘ಎಲೈ ಎಕ್ಸೇ! ನೀನ್ಯಾಕೆ ಎಕ್ಸು!?’ ಎಂದು ಪ್ರಶ್ನಿಸಲೇ ಇಲ್ಲ. ಯಾರಾದರೂ ಕೇಳಿದ್ದಿದ್ದರೆ ಬಹುಷಃ ಎಕ್ಸು ಅಳುತ್ತಾ, ಆ ಸ್ಪಾನಿಷ್ ವಿದ್ವಾಂಸರಿಗೆ ಹಿಡಿಶಾಪ ಹಾಕುತ್ತಾ ತನ್ನ ಕಥೆಯನ್ನಾದರೂ ಹೇಳುತ್ತಿತ್ತೇನೋ!

ಈಗ ತಿಳಿಯತಲ್ಲವೇ ಮಕ್ಕಳೇ, X ಯಾಕೆ ಎಕ್ಸು ಹೀಗೆ ಅಂತಾ? ನಾಳೆ ಕ್ಲಾಸಿನಲ್ಲಿ ‘ಎಕ್ಸ್ ಯಾಕೆ ಎಕ್ಸ್, ಹೇಳ್ರೋ’ ಅಂತಾ ಕೇಳಿದರೆ, ‘ಅಯ್ಯೋ, ಆ ಸ್ಪಾನಿಷರಿಗೆ ‘ಶ್’ ಎಂದು ಉಚ್ಚರಿಸಲು ಬರದೇ ಇದ್ದಿದ್ದಕ್ಕೇ ಎಕ್ಸು X ಮೇಡಂ’ ಅಂತಾ ಒಕ್ಕೊರಲಿನಲ್ಲಿ ಕೂಗಿ ಹೇಳಿರಿ, ಆಯ್ತಾ?

ಕೊಸರು:
ಈ ಎಕ್ಸಿಗೂ, XXXಗೂ ಏನು ಸಂಬಂಧ ಎನ್ನುವುದು ನನಗೂ X-factor ಆಗಿಯೇ ಉಳಿದಿದೆ 😉 😛

ಬುದ್ಧಿಗೊಂದು ಗುದ್ದು – ೨೮

ಬುದ್ಧಿಗೊಂದು ಗುದ್ದು – ೨೮

‘ಇತ್ತ ಕಂಪನಿ ಮುಳುಗುತ್ತಿತ್…..ಅತ್ತ ಜೂಜಾಡಿದ ಫ್ರೆಡ್ಡಿ ಸ್ಮಿತ್’

ಈ ಕಥೆ ಶುರುವಾಗೋದೇ ಒಂದೂರಲ್ಲಿ ಒಬ್ಬ ಮನುಷ್ಯ ಇದ್ದ ಎಂಬಲ್ಲಿಂದ. ಆ ಮನುಷ್ಯನ ಹೆಸರು ಫ್ರೆಡ್ ಸ್ಮಿತ್. ಹುಟ್ಟುವಾಗಲೇ ಮೂಳೆಸಂಬಂಧೀ ಖಾಯಿಲೆಯೊಂದರಿಂದ, ಕೈಕಾಲುಗಳು ಸೊಟ್ಟಗಾಗಿ ನಡೆಯಲೂ ಸಾಧ್ಯವಾಗದ ಪರಿಸ್ಥಿತಿ. ಆದರೆ, ಈತ ಸುಲಭಕ್ಕೆ ಮಣಿಯುವವನಾಗಿರಲಿಲ್ಲ. ವಯಸ್ಸು ಹತ್ತಾಗುವಷ್ಟರಲ್ಲಿ ಹೇಗೇಗೋ ಮಾಡಿ ನಡೆಯಲಾರಂಭಿಸಿದ. ಹದಿನೈದಾಗುವಷ್ಟರಲ್ಲಿ ಪ್ರತಿಭಾವಂತ ಫುಟ್ಬಾಲ್ ಆಟಗಾರನಾದ ಹಾಗೂ ವಿಮಾನ ಹಾರಿಸುವುದನ್ನು ಕಲಿತು ಹವ್ಯಾಸಿ ಪೈಲಟ್ ಲೈಸೆನ್ಸ್ ಕೂಡಾ ಪಡೆದ. ಅವನಿಗೆ ವಿಮಾನಗಳ ಬಗ್ಗೆ ಬಹಳ ಆಸಕ್ತಿ. ಸದಾ ಅವುಗಳ ಬಗ್ಗೆ ಯೋಚಿಸುತ್ತಿದ್ದ ಹಾಗೂ ವಿಮಾನಗಳನ್ನು ಉಪಯೋಗಿಸಿ ಮನುಷ್ಯನ ಜೀವನಮಟ್ಟವನ್ನು ಉತ್ತಮಗೊಳಿಸುವುದು ಹೇಗೆ? ಎಂದು ಯೋಚಿಸುತ್ತಿದ್ದ.

ಈ ಸ್ಮಿತ್ ತಾನು 1962ರಲ್ಲಿ ‘ಯೇಲ್ ವಿಶ್ವವಿದ್ಯಾಲಯ’ದಲ್ಲಿ ಓದುತ್ತಿರುವಾಗ, ಅರ್ಥಶಾಸ್ತ್ರದ ಪ್ರಾಜೆಕ್ಟ್ ಪೇಪರೊಂದರಲ್ಲಿ ‘ಕಂಪನಿಯೊಂದು ತನ್ನದೇ ವಿಮಾನಗಳನ್ನು, ಡಿಪೋಗಳನ್ನು, ಡೆಲಿವರಿ ವ್ಯಾನುಗಳನ್ನು ಬಳಸಿ ಹೇಗೆ ೨೪ ಘಂಟೆಗಳಲ್ಲಿ ಅಮೇರಿಕಾದ ಯಾವುದೇ ಸ್ಥಳದಿಂದ, ಯಾವುದೇ ಇನ್ನೊಂದು ಸ್ಥಳಕ್ಕೆ ಪಾರ್ಸೆಲ್ಗಳನ್ನು ಮುಟ್ಟಿಸಬಹುದು?’ ಎಂಬುದರ ಬಗ್ಗೆ ಲೇಖನ ಬರೆದ. ಆ ಪೇಪರನ್ನು ಓದಿದ ಆತನ ಪ್ರೊಫೆಸರ್ ‘ಆಲೋಚನೆಯೇನೋ ಚೆನ್ನಾಗಿದೆ. ಆದರೆ ಇದನ್ನು ಕಾರ್ಯರೂಪಕ್ಕೆ ತರುವುದು ಸಾಧ್ಯವಿಲ್ಲ’ ಎಂದು ಹೇಳಿ ‘C’ ಗ್ರೇಡ್ ಕೊಟ್ಟಿದ್ದ.

1966ರಲ್ಲಿ ಪದವಿ ಮುಗಿದನಂತರ ಸ್ಮಿತ್ ಮೂರುವರ್ಷ ಮಿಲಿಟರಿ ಸೇವೆಗೆ ನಿಯುಕ್ತಿಗೊಂಡ. ವಿಯೆಟ್ನಾಂ ಯುದ್ಧದಲ್ಲಿ ಪಾಲ್ಗೊಂಡು ತನ್ನ ಕೆಲಸಕ್ಕಾಗಿ ಪದಕಗಳನ್ನೂ ಪಡೆದ. ಈ ಸಮಯದಲ್ಲಿ ಆತನಿಗೆ ಸೇನೆಯ ಸಾಮಾನು ಸಂಗ್ರಹಣಾ ಹಾಗೂ ವಿತರಣಾ ಜಾಲ ಹೇಗೆ ಕೆಲಸ ಮಾಡುತ್ತದೆಯೆಂದು ತಿಳಿಯುವ ಅವಕಾಶ ಸಿಕ್ಕಿತು. 1969ರಲ್ಲಿ ಸೈನ್ಯದಿಂದ ಬಿಡುಗಡೆ ಹೊಂದಿದಮೇಲೆ, ಸ್ಮಿತ್ ಒಂದು ವಿಮಾನ ನಿರ್ವಹಣಾ ಕಂಪನಿಯೊಂದನ್ನು ಕೊಂಡುಕೊಂಡ. ಒಂದು ವರ್ಷದಲ್ಲಿ ಆ ಕಂಪನಿಯನ್ನು ವಿಮಾನಗಳನ್ನುಪಯೋಗಿಸಿ ವ್ಯಾಪಾರ ಮಾಡುವ ಕಂಪನಿಯಾಗಿ ಬದಲಾಯಿಸಿದ. ತನ್ನ ಹಳೆಯ ಯೋಚನೆಯಲ್ಲಿ ಸಂಪೂರ್ಣ ಭರವಸೆಯಿಟ್ಟು, ಆಗಷ್ಟೇ ತನ್ನ ಪಾಲಿಗೆ ಪಿತ್ರಾರ್ಜಿತವಾಗಿ ಬಂದಿದ್ದ 40 ಲಕ್ಷ ಡಾಲರ್ ಬಂಡವಾಳ ಹೂಡಿ 1973ರಲ್ಲಿ ಒಂದು ಪಾರ್ಸೆಲ್ ವಿತರಣಾ ಸೇವೆಯ ವ್ಯವಹಾರ ಪ್ರಾರಂಭಿಸಿಯೇಬಿಟ್ಟ. ‘ಅಮೇರಿಕಾದ ಯಾವ ಊರಿಂದ ಯಾವ ಊರಿಗಾದರೂ ರಾತ್ರಿಕಳೆದು ಬೆಳಗಾಗುವಷ್ಟರಲ್ಲಿ ಪಾರ್ಸೆಲ್ ತಲುಪಿಸುತ್ತೇವೆ’ ಎಂಬ ವಾಗ್ದಾದದೊಂದಿಗೆ ಕಂಪನೆ ತನ್ನ ಪುಟ್ಟ ಹೆಜ್ಜೆಯಿಟ್ಟಿತು. 1973ರಲ್ಲಿ 186 ಪಾರ್ಸೆಲ್ಲುಗಳೊಂದಿಗೆ ಮೊದಲ ವಿಮಾನ ಹಾರಿಯೂಬಿಟ್ಟಿತು. ಆದರೆ ಪ್ರಾರಂಭವಾದ ಕೆಲಸಮಯದಲ್ಲೇ ಹಣದ ಅಭಾವ ತೋರತೊಡಗಿತು. ವ್ಯಾನುಗಳು, ಡಿಪೋಗಳನ್ನೇನೋ ಸಂಭಾಳಿಸಬಹುದು. ವಿಮಾನ ಹಾರಿಸುವುದೆಂದರೆ ಅಷ್ಟು ಸುಲಭದ, ಕಡಿಮೆ ಖರ್ಚಿನ ಮಾತೇ? ಅದಕ್ಕೆ ಸರಿಯಾಗಿ ಆಗ ವಿಮಾನ ಇಂಧನದ ಬೆಲೆಯೂ ವಿಮಾನದಂತೆಯೇ ಮೇಲ್ಮುಖಮಾಡಿತ್ತು. ಸ್ಮಿತ್ ತನ್ನ ವಿಮಾನಗಳಿಗೆ ಇಂಧನ ಖರೀದಿಸಲು ಒದ್ದಾಡತೊಡಗಿದ. ಹಳೆಯ ಬಾಕಿ ಕಟ್ಟದೇ ಇಂಧನ ಕೊಡಲಾಗುವುದಿಲ್ಲವೆಂದು ಪೂರೈಕೆದಾರರು ಖಡಾಖಂಡಿತವಾಗಿ ಹೇಳಿದರು. ಕೊನೆಯ ಪ್ರಯತ್ನವೆಂಬಂತೆ ಫ್ರೆಡ್, ಆ ಗುರುವಾರ ‘ಜೆನರಲ್ ಡೈನಾಮಿಕ್ಸ್’ ಕಂಪನಿಯಲ್ಲಿ ಸಾಲಕ್ಕೆ ಅರ್ಜಿ ಹಾಕಿದ. ಇವನ ಬ್ಯಾಲೆನ್ಸ್ ಶೀಟ್ ನೋಡಿದ ‘ಜೆನರಲ್ ಡೈನಾಮಿಕ್ಸ್’, ಕುಡಿಯಲು ಟೀ ಕೂಡಾ ಕೊಡದೇ ಹೊರಕಳಿಸಿತು.

ಸೋಮವಾರಕ್ಕೆ ವಿಮಾನ ಹೊರಡಿಸಲು 24,000 ಡಾಲರ್ ಹಣಬೇಕಾಗಿತ್ತು. ಕಂಪನಿಯ ಅಕೌಂಟಿನಲ್ಲಿ ಬರೇ 5,000 ಡಾಲರ್ ಹಣವಿತ್ತು. ಈಗೇನು ಮಾಡುವುದೆಂದು ಎಲ್ಲರೂ ತಲೆಮೇಲೆ ಕೈಹೊತ್ತು ಕುಳಿತಿದ್ದಾಗ, ಫ್ರೆಡ್ ಸ್ಮಿತ್ ಬ್ಯಾಂಕಿಗೆ ಹೋಗಿ, ಅಕೌಂಟನ್ನೆಲ್ಲಾ ಬಾಚಿ ಬಳಿದು ಪೂರ್ತಿ ದುಡ್ಡನ್ನೂ ತೆಗೆದು, ಬ್ಯಾಗ್ ಹಿಡಿದು ‘ಲಾಸ್-ವೇಗಸ್’ಗೆ ಹೊರಟ!! ಲಾಸ್ ವೇಗಸ್ ಜೂಜಾಟಕ್ಕೆ ಹೆಸರುವಾಸಿಯಾದ ನಗರ. ಕೈಯಲ್ಲಿದ್ದ ಹಣವನ್ನು ಜೂಜಾಡಿಬರುತ್ತೇನೆಂದು ಫ್ರೆಡ್ ನಿರ್ಧರಿಸಿದ್ದ. ಪಾಲುದಾರರು ಹೌಹಾರಿದರು! ಫ್ರೆಡ್ ಸಮಾಧಾನದಿಂದ ‘ನೋಡ್ರಪ್ಪಾ! 5000 ಡಾಲರ್ ಹಣದಿಂದ ಏನೂ ಮಾಡಲು ಸಾಧ್ಯವಿಲ್ಲ. ನಮಗೆ ಬೇಕಾಗಿರುವುದರ ಕಾಲುಭಾಗವೂ ಇದಲ್ಲ. ಹಾಗಿದ್ದ ಮೇಲೆ ಈ ದುಡ್ಡನ್ನು ಹೇಗೆ ಉಪಯೋಗಿಸಿದರೇನು? ಕಷ್ಟಕಾಲದಲ್ಲಿ ಏನು ಮಾಡಿದರೂ ಸರಿತಾನೇ! ಕಡೇಪಕ್ಷ ಜೂಜಾದರೂ ಆಡಿ ನೋಡುತ್ತೇನೆ’ ಎಂದು ಲಾಸ್ ವೇಗಸ್ಸಿನತ್ತ ಕಾರು ಓಡಿಸಿದ.

ಲಾಸ್-ವೇಗಸ್ಸಿಗೆ ಹೊದವನೇ ಕ್ಯಾನಿಸೋ ಒಂದನ್ನು ಹೊಕ್ಕ ಫ್ರೆಡ್ 5000 ಡಾಲರ್ ಹೂಡಿ, ಇಪ್ಪತ್ತೆರಡು ಸುತ್ತು ಬ್ಲಾಕ್-ಜಾಕ್ ಆಟವಾಡಿ (Black Jack – ಕೈಯಲ್ಲಿರುವ ಎಲೆಗಳ ಮೌಲ್ಯ 21ದಾಟದಂತೆ ಆಡುವ ಇಸ್ಪೀಟಿನ ಒಂದು ಆಟ) ಬರೋಬ್ಬರಿ 27000 ಡಾಲರ್ ಗೆದ್ದ!!! ಸ್ವತಃ ಪ್ರೆಡ್ಡಿಗೇ ಆಶ್ಚರ್ಯವಾಗುವಂತೆ, ಸಧ್ಯದ ಸಾಲತೀರಿಸಿ, ಮತ್ತೊಮ್ಮೆ ಇಂಧನ ಪಡೆದು ಕಂಪನಿಯನ್ನು ಇನ್ನೂ ಒಂದು ವಾರ ನಡೆಸಬಹುದಾದಷ್ಟು ಹಣ ಕೈಗೆ ಬಂದಿತ್ತು! ದೊಡ್ಡ ಸಹಾಯವೇನೂ ಅಲ್ಲದಿದ್ದರೂ, ಕಂಪನಿ ಸಾಯದಂತೆ ನೋಡಿಕೊಳ್ಳಬಹುದಾಗಿತ್ತು. ಏನೂ ಮಾಡದಿದ್ದಲ್ಲಿ ಕಂಪನಿ ಮುಚ್ಚುವುದೇ ದಾರಿಯಾಗಿದ್ದಾಗ, ಈ ಹಣ ಖಂಡಿತವಾಗಿಯೂ ಸಹಾಯಕಾರಿಯಾಗಿತ್ತು. ‘If you try you may win or loose. But if you don’t try at all, you will surely loose’ ಎಂಬ ಮಾತಿನಂತೆ ಫ್ರೆಡ್ ತನ್ನ ಕಂಪನಿಯನ್ನು ಸಣ್ಣದೊಂದು ಹುಲ್ಲುಕಡ್ಡಿಯ ಆಸರೆಯಲ್ಲಿ ಇನ್ನೊಂದು ವಾರ ನಡೆಸಿದ. ಆ ವಾರದಲ್ಲಿ ಮತ್ತೊಮ್ಮೆ ಬ್ಯಾಂಕುಗಳನ್ನು ಭೇಟಿಮಾಡಿ, ಹಣಕಾಸು ಸಹಾಯವನ್ನು ಪಡೆದ. ಕಂಪನಿ ಮುಳುಗಲಿಲ್ಲ. ಮುನ್ನಡೆಯಿತು.

Fred_Smith-2

ಹೀಗೆ ಇನ್ನೇನು ಮುಳುಗಿಯೇಬಿಟ್ಟಿತು ಎಂಬಂತಿದ್ದ ಕಂಪನಿಯೊಂದು, ಜೂಜಾಟದಿಂದ ಬಂದ ಹಣದಿಂದ ತನ್ನನ್ನು ಉಳಿಸಿಕೊಂಡಿತು. ಆಶ್ಚರ್ಯದ ವಿಷಯವೆಂದರೆ, ಇಂದು ಈ ಕಂಪನಿ ವರ್ಷಕ್ಕೆ 45 ಶತಕೋಟಿ ಡಾಲರ್ ಆದಾಯಗಳಿಸುತ್ತದೆ. ಅದು ಸುಮಾರು ಮೂರುಲಕ್ಷ ಉದ್ಯೋಗಿಗಳ ಮಹಾಸಮೂಹ. ಅವತ್ತು ಒಂದು ವಿಮಾನ ಹಾರಿಸಲೂ ಕಷ್ಟಪಡುತ್ತಿದ್ದ ಕಂಪನಿ ಇವತ್ತು ಒಟ್ಟು 666 ವಿಮಾನಗಳ ಹಾಗೂ 47,500 ವಾಹನಗಳ ದೈತ್ಯಸಂಸ್ಥೆ. ಫ್ರೆಡ್ ಸ್ಮಿತ್ ಒಬ್ಬನ ನಿವ್ವಳ ಬೆಲೆಯೇ(net worth) ಮೂರುವರೆ ಶತಕೋಟಿ ಡಾಲರ್! ಈತನ ಪೂರ್ತಿ ಹೆಸರು ಫ್ರೆಡರಿಕ್ ವಾಲೆಸ್ ‘ಫ್ರೆಡ್’ ಸ್ಮಿತ್.

ಅಂದಹಾಗೆ, ಅಮೇರಿಕಾದ ಸರ್ಕಾರೀ ಅಂಚೆ ಸೇವೆಯನ್ನೂ ಮೀರಿಸಿ, ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಈ ಕಂಪನಿಯ ಹೆಸರು FedEx (Federal Express ಎಂಬ ಮೂಲಹೆಸರಿನ ಹೃಸ್ವರೂಪ). ಇಂತ ಬೃಹತ್ ಸಂಸ್ಥೆ ತನ್ನ ಇತಿಹಾಸದಲ್ಲಿ ಒಮ್ಮೆ ‘ಜೂಜಾಟ’ದಿಂದ ಬಚಾಯಿಸಲ್ಪಟ್ಟಿತು ಎಂದರೆ ನಂಬಲು ಸುಲಭವಲ್ಲ, ಅಲ್ಲವೇ? 🙂

ಬುದ್ಧಿಗೊಂದು ಗುದ್ದು – ೨೭

ಬುದ್ಧಿಗೊಂದು ಗುದ್ದು – ೨೭

ಪೆಟ್ರೋಲಿನ ಬೆಲೆಯ ಪಪ್ಪಾ…..ಯಾರಪ್ಪಾ!?

ಹಿಂದಿನ ಅಂಕಣದಲ್ಲಿ ಅಂತರ್ಜಾಲವನ್ನು ನಿಯಂತ್ರಿಸುವ ಕೆಲ ಸಂಸ್ಥೆಗಳ ಬಗ್ಗೆಬರೆದಿದ್ದೆ. ಈ ವಾರ ಇನ್ನೂ ಹೆಚ್ಚು ಪ್ರಸ್ತುತವಾದ ವಿಷಯವೊಂದನ್ನು ಕೈಗೆತ್ತಿಕೊಂಡಿದ್ದೇನೆ. ನಾನು, ನೀವು, ಅವರು, ಎಲ್ಲರೂ ಹೆಚ್ಚು ಕಡಿಮೆ ಇಡೀ ಜಗತ್ತೇ ಒಂದಲ್ಲಾ ಒಂದು ರೀತಿಯಲ್ಲಿ ಅವಲಂಬಿತವಾಗಿರುವ ಪೆಟ್ರೋಲಿನ ದರ ಹೇಗೆ ನಿರ್ಧರಿಸಲ್ಪಡುತ್ತಿದೆ ಎಂಬುದನ್ನು ತಿಳಿಯೋಣ! ಏನಂತೀರಿ?

ಮೋದಿ ವಿರೋಧಿಗಳಿಗೂ ಬೆಂಬಲಿಗರಿಗೂ ಸಧ್ಯಕ್ಕೆ ಕೆಲಸ ಕೊಟ್ಟಿರುವ ಎರಡನೇ ಅತೀಮುಖ್ಯ ವಿಷಯವೆಂದರೆ ಪೆಟ್ರೋಲ್ ಬೆಲೆ ಇಳಿಕೆ (ಹಾಗೂ ಸಧ್ಯದಲ್ಲೇ ಕಾದಿರುವ ಏರಿಕೆ 😉 ). ಮೊದಲನೇ ವಿಷಯ ನಮ್ಮ ದೇಶದಲ್ಲಿ ಯಾವತ್ತಿದ್ರೂ ಜಾತಿ ಹಾಗೂ ಮತ ತಾನೇ? ಹಾಗಾಗಿ ಮೊದಲನೇ ಮುಖ್ಯ ವಿಷಯ ಮತಾಂತರ ಹಾಗೂ ಅದರ ನಿಷೇದ ಕಾಯ್ದೆ. ಬ್ಯಾಕ್ ಟು ಟಾಪಿಕ್….ಜನರನ್ನು ದಿನವಿಡೀ ಎಲ್ಲಾ ಮಗ್ಗುಲಲ್ಲೂ ಮುಟ್ಟುವ ವಿಷಯಗಳಲ್ಲಿ ಸೂರ್ಯನನ್ನು ಬಿಟ್ಟರೆ ಮುಂದಿನ ಸ್ಥಾನ ಪೆಟ್ರೋಲಿಗೇ ಅಲ್ಲವೇ. ಬೆಳಗ್ಗೆದ್ದು ಸ್ನಾನದ ಬಿಸಿನೀರಿಗೆ ಹಾಕುವ ಸ್ವಿಚ್ಚಿನಿಂದ ಹಿಡಿದು ರಾತ್ರಿ ಮಲಗುವಾಗ ತಲೆಯಿಡುವ ದಿಂಬಿನ ಒಳಗಿರುವ ಪೈಬರ್ ಹತ್ತಿಯವರೆಗೆ ಎಲ್ಲವೂ ಪೆಟ್ರೋಲ್ ಅಥವಾ ಕಚ್ಚಾತೈಲದ ಮೇಲೆ ಅವಲಂಬಿತವಾಗಿವೆ. ಹೀಗಿದ್ದಾಗ ಅದರ ಬೆಲೆಯೇರಿಕೆ ಇಳಿಕೆ ನಮ್ಮ ಜೀವನದ ಮೇಲೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರಬಲ್ಲುದು. ಇದರ ಬಗ್ಗೆ ಇವತ್ತು ಸ್ವಲ್ಪ ತಿಳಿಯುವ ಪ್ರಯತ್ನ ಮಾಡೋಣ.

ಈ ಬೆಲೆಯೇರಿಕೆ ಇಳಿಕೆಯ ತಲೆಬಿಸಿ ಇವತ್ತು ನಿನ್ನೆಯದಲ್ಲ. ವಾಣಿಜ್ಯ ಉದ್ದೇಶಕ್ಕಾಗಿ ಮೊತ್ತಮೊದಲ ತೈಲಬಾವಿಯನ್ನು 1857ರಲ್ಲಿ ರೊಮೇನಿಯಾದಲ್ಲಿ ಕೊರೆದಾಗಲಿಂದಲೂ ಇದೆ. ಪೆಟ್ರೋಲ್ ಬೆಲೆ ನಿರ್ಧಾರವಾಗುವುದು ಹಲವಾರು ಅಂಶಗಳ ಮೇಲೆ. ಕಚ್ಚಾತೈಲದ ಬೇಡಿಕೆ ಹಾಗೂ ಲಭ್ಯತೆ, ಯಾವ ದೇಶದಿಂದ ಆಮದು ಮಾಡಲಾಗುತ್ತಿದೆ, ಅಂತರಾಷ್ಟ್ರೀಯ ಆಗುಹೋಗುಗಳು, ವಿದೇಶಿ ವಿನಿಮಯದ ಏರುಪೇರು, ಸರ್ಕಾರಿ ತೆರಿಗೆ ನಿಯಮಾವಳಿ ಹಾಗೂ ತಂತ್ರಜ್ಞಾನದ ಸುಧಾರಣೆ ಮುಂತಾದ ಹಲವಾರು ಅಂಶಗಳನ್ನೊಳಗೊಂಡ ಕ್ಲಿಷ್ಟ ಸಮೀಕರಣ. ನೈಜೀರಿಯಾದಲ್ಲಿ ಸರ್ಕಾರ ಬಿದ್ದು ಹೋದರೆ ಆಸ್ಟ್ರೇಲಿಯಾದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಾಗುತ್ತದೆ. ಕತಾರಿನಲ್ಲಿ ರಾಜ ಬದಲಾದರೆ ಪಾಕಿಸ್ಥಾನ ಗ್ಯಾಸ್ ಸಿಲಿಂಡರಿಗೆ ಹೆಚ್ಚಿನ ಬೆಲೆ ಕಟ್ಟಬೇಕಾಗುತ್ತದೆ. ಅಮೇರಿಕಾದಲ್ಲಿ ವಿತ್ತೀಯ ಕೊರತೆಯುಂಟಾದರೆ, ಸೌದಿ ಅರೇಬಿಯಾದಿಂದ ತೈಲ ಅಮದು ಮಾಡುವ ಎಲ್ಲಾ ದೇಶಗಳಲ್ಲಿ ಪೆಟ್ರೋಲ್ ಬೆಲೆ ಮೇಲೇರುತ್ತದೆ, ಇರಾನಿನ ಅಣುಶಕ್ತಿ ಯೋಜನೆಗಳ ಮೇಲೆ ವಿಶ್ವಸಂಸ್ಥೆಯ ನಿರ್ಬಂಧ ಹೆಚ್ಚಾದರೆ ಭಾರತದಲ್ಲಿ ನಮಗೆ ಬಿಸಿ ತಾಗುತ್ತದೆ, ಅಂಗೋಲಾದಲ್ಲಿ ಮಾರಣಹೋಮವೇನಾದರೂ ನಡೆದರೆ ಯೂರೋಪಿಯನ್ನರಿಗೆ ಪೆಟ್ರೋಲಿನ ಕಮಟು ಮೂಗಿಗೆಬಡಿಯುತ್ತದೆ. ಹೀಗೆ ಹಲವಾರು ಅಂಶಗಳ ಮಿಲನ ಈ ತೈಲಬೆಲೆ.

ತೈಲಮಾರಾಟಗಾರನ ಬದಿಯ ನೋಟ:

ಎಲ್ಲದಕ್ಕಿಂತಾ ಮೊದಲನೆಯದಾಗಿ ಪೆಟ್ರೋಲಿನ ಬೆಲೆ ನಿಗದಿಯಾಗುವುದು ಅರ್ಥಶಾಸ್ತ್ರದ ಮೂಲನಿಯಮಗಳಲ್ಲೊಂದಾದ ಬೇಡಿಕೆ-ಪೂರೈಕೆ ಅಂಕೆ ಸಂಖ್ಯೆಗಳ ಮೇಲೆ. ಕಚ್ಚಾತೈಲವೆಂಬುದು ಒಂದು ದಿನ ಮುಗಿದುಹೋಗಬಹುದಾದ ಸಂಪನ್ಮೂಲವಾದ್ದರಿಂದ, ಅದು ಇರುವಷ್ಟು ವರ್ಷಗಳಲ್ಲಿ ಸಾಧ್ಯವಾದಷ್ಟು ಹಣಗಳಿಸುವುದು ತೈಲಮಾರಾಟವೇ ಮೂಲಆದಾಯವಾದ ಕೆಲ ರಾಷ್ಟ್ರಗಳ ಉದ್ದೇಶ. ಚೀನಾ ಸಧ್ಯಕ್ಕೆ ಜಗತ್ತಿನಲ್ಲಿ ವೇಗವಾಗಿ ಆರ್ಥಿಕಬಲಗಳಿಸುತ್ತಿರುವ ದೇಶ. ಅಲ್ಲಿನ ಪ್ರಜೆಯ ಆದಾಯ ಕಳೆದ ಇಪ್ಪತ್ತು ವರ್ಷಗಳಲ್ಲಿ 4 ಪಟ್ಟು ಹೆಚ್ಚಿದೆ. ಈ ಮೊದಲು ಸೈಕಲ್ ಮತ್ತು ಸಾರ್ವಜನಿಕ ಸಾರಿಗೆ ಬಳಸುತ್ತಿದ್ದ ಚೀನಾದ 34.5% ನಾಗರೀಕರು ಕಳೆದ ಐದು ವರ್ಷಗಳಲ್ಲಿ ಕಾರುಗಳನ್ನು ಕೊಂಡಿದ್ದಾರೆ. ವೇಗವಾಗಿ ಬೆಳೆಯುತ್ತಿರುವ ಈ ಕಾರು ಮಾರಾಟವನ್ನು ಬೆಂಬಲಿಸಲು ಚೀನಾ ಸರ್ಕಾರ 2020ರೊಳಗೆ ತನ್ನೆಲ್ಲಾ ಪ್ರಾಂತಗಳನ್ನು ಸೇರಿಸುವ 42,000 ಮೈಲಿ ಉದ್ದದ ಹೊಸಾ ಎಕ್ಸ್ಪ್ರೆಸ್ ಹೆದ್ದಾರಿಗಳನ್ನು ನಿರ್ಮಿಸುತ್ತಿದೆ. ಭಾರತ 2022ರ ಒಳಗೆ ತನ್ನ ಹೆದ್ದಾರಿಜಾಲಕ್ಕೆ ಇನ್ನೂ 12,000 ಮೈಲಿಗಳನ್ನು ಸೇರಿಸಲಿದೆ ಹಾಗೂ ಒಳನಾಡು ಜಲಸಾರಿಗೆಯ ಬಲವನ್ನು ಹೆಚ್ಚಿಸುತ್ತಿದೆ. ರಸ್ತೆಗಳು ಹಾಗೂ ಸಂಪರ್ಕಜಾಲ ಚೆನ್ನಾಗಿದ್ದಾಗ ಸಹಜವಾಗಿಯೇ ವ್ಯವಹಾರವಲಯ ಬಲಗೊಳ್ಳುತ್ತದೆ. ಅಂದರೆ ಹೆಚ್ಚೆಚ್ಚು ಲಾರಿ ಕಾರು ಬಸ್ಸುಗಳು ರಸ್ತೆಗಿಳಿಯಲಿವೆ, ಮೋಟಾರುಬೋಟುಗಳು ನೀರಿಗಿಳಿಯಲಿವೆ. ಅಂದರೆ ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆ ಹೆಚ್ಚಾಗಲಿದೆ. ಅಂದಮೇಲೆ ಪೂರೈಕೆದಾರರೂ ತಮ್ಮ ವ್ಯವಹಾರ ಜಾಣ್ಮೆಯನ್ನು ಪ್ರದರ್ಶನಕ್ಕಿಟ್ಟು, ಪೆಟ್ರೋಲ್ ಬೆಲೆಯೊಂದಿಗೆ ಆಟವಾಡುತ್ತಾರೆ.

ಎರಡನೆಯದಾಗಿ, ಮಾರುಕಟ್ಟೆಯ ತಲ್ಲಣಗಳು. ಯಾವ ಕೊಳ್ಳುಗನೂ/ದೇಶವೂ ಮಾರಾಟಗಾರನ ಬಳಿ ಹೋಗಿ ‘ಇವತ್ತಿನ ರೇಟ್ ಎಷ್ಟು? ಎರಡು ಮಿಲಿಯನ್ ಲೀಟರ್ ಪೆಟ್ರೋಲ್ ಕೊಡಿ’ ಎಂದು ಕೇಳುವುದಿಲ್ಲ. ಈ ಬೆಲೆಗಳು ಪೂರ್ವನಿರ್ಧಾರಿತವಾಗಿರುತ್ತವೆ ಅಥವಾ ನಿರ್ಧರಿಸಲಾಗುವಂತೆ ಕೆಲ ಕುಳಗಳು ನಿರ್ದೇಶಿಸುತ್ತಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ನಿರ್ಧಾರವಾಗುವುದು ಫ್ಯೂಚರ್ಸ್ ಮಾರುಕಟ್ಟೆಯಲ್ಲಿ. ಅಂದರೆ ಮುಂದೊಂದು ದಿನ ಮಾರಾಟವಾಗುವ ತೈಲಕ್ಕೆ ಇಂದೇ ಬೆಲೆ ನಿಗದಿಮಾಡಿ ಭವಿಷ್ಯದಲ್ಲಿ ಕಾರ್ಯಗತಗೊಳಿಸಲಾಗುವಂತೆ ಒಂದು ಒಪ್ಪಂದವನ್ನೂ ಕೊಳ್ಳುಗ ಮತ್ತು ಮಾರಾಟಗಾರ ಮಾಡಿಕೊಳ್ಳುತ್ತಾರೆ. ವ್ಯವಹಾರ ಭಾಷೆಯಲ್ಲಿ ಇದನ್ನು ಫಾರ್ವರ್ಡ್ ಕಾಂಟ್ರಾಕ್ಟ್ ಎನ್ನಲಾಗುತ್ತದೆ.

ಈ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಎರಡು ರೀತಿಯ ಜನರು ಸಿಗುತ್ತಾರೆ. ಮೊದಲನೆಯವರು ‘ಹೆಡ್ಜಿಂಗ್ (hedging)’ ಮಾಡುವವರು. ಮಾರುಕಟ್ಟೆಯ ಏರಿಳಿತದಿಂದಾಗಿ ತಮ್ಮ ಸಂಸ್ಥೆಗಾಗುವ ನಷ್ಟಗಳಿಂದ ತಪ್ಪಿಸಿಕೊಳ್ಳಲು ಇವರು ಇವತ್ತೇ ಮುಂದ್ಯಾವುದೋ ದಿನಕ್ಕೆ ಬೇಕಾಗುವ ತೈಲವನ್ನು ಖರೀದಿಸುತ್ತಾರೆ. ಉದಾಹರಣೆಗೆ ವಿಮಾನಕಂಪನಿಗಳು. ಈ ಹೆಡ್ಜಿಂಗಿನಿಂದಾಗಿ ಇವರು ತಮ್ಮ ವ್ಯವಹಾರವನ್ನು ಸಂಭಾಳಿಸುವುದು ಸುಲಭವಾಗುತ್ತದೆ. ಯಾಕೆಂದರೆ, ಯಾವತ್ತು ಯಾರಿಗೆ ಎಷ್ಟು ದುಡ್ಡು ಕೊಡಬೇಕೆಂಬುದು ಇವರಿಗೆ ಮೊದಲೇ ತಿಳಿದಿರುವುದರಿಂದ ಉಳಿದ ಖರ್ಚುವೆಚ್ಚಗಳನ್ನು ನಿರ್ವಹಿಸುವುದು ಸುಲಭ. ಮಾರಾಟಗಾರನಿಗೂ ತನ್ನ ಉತ್ಪನ್ನಕ್ಕೆ ಒಬ್ಬ ಕೊಳ್ಳುಗ ಹಾಗೂ ವ್ಯಾಪಾರದ ಭರವಸೆ ದೊರೆತಿರುವುದರಿಂದ ಆತ ತನ್ನ ಉತ್ಪಾದನೆಯನ್ನು ಅದಕ್ಕನುಗುಣವಾಗಿ ಹೊಂದಿಸಿಕೊಳ್ಳಬಹುದು. ಒಪ್ಪಂದ ನಡೆದ ದಿನದಿಂದ, ನಿಜವಾಗಿಯೂ ಉತ್ಪನ್ನ ಕೈಗೆ ಬರುವ ದಿನದಂದು ತೈಲಬೆಲೆ ಹೆಚ್ಚಾಗಿದ್ದರೆ ಕೊಳ್ಳುಗನಿಗೆ ಲಾಭ. ಕಡಿಮೆಯಾಗಿದ್ದರೆ ಮಾರಾಟಗಾರನಿಗೆ ಲಾಭ. ಆದರೆ ಆ ಮಟ್ಟದ ರಿಸ್ಕ್ ಅನ್ನು ಅರಿತೇ ಬೆಲೆ ನಿಗದಿಯಾಗುತ್ತದೆ.

ಇನ್ನೊಂದು ತರಹದವರು ‘ಸ್ಪೆಕ್ಯುಲೇಟರ್’. ಇವರು ಕೊಳ್ಳುಗರೇ ಆಗಬೇಕೆಂದಿಲ್ಲ. ಸುಮ್ಮನೇ ಬೆಲೆಯನ್ನು ಊಹಿಸುವುದರ ಮೂಲಕ ಶೇರು ಮಾರುಕಟ್ಟೆಯನ್ನು ಚಾಲನೆಯಲ್ಲಿಡುವವರು. ಒಂದು ಅಂದಾಜಿನ ಪ್ರಕಾರ ಕೇವಲ 3%ದಷ್ಟು ಸ್ಪೆಕ್ಯುಲೇಟರುಗಳು ಮಾತ್ರ ಕೊನೆಗೆ ಉತ್ಪನ್ನವನ್ನು ಕೊಳ್ಳುತ್ತಾರೆ, ಉಳಿದವರದ್ದು ಬರೀ ತೆರೆಮರೆಯ ಆಟವಷ್ಟೇ. ಆದರೆ ಇವರೆಲ್ಲಾ ಆಳವಾದ ಜೇಬಿರುವ ಭಾರೀ ಪಾರ್ಟಿಗಳು. ಈ ಕುಳಗಳು ಮಾರುಕಟ್ಟೆ ಮತ್ತು ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಗಮನಿಸುತ್ತಾ, ಮಾರುಕಟ್ಟೆಯಲ್ಲಿ ತೈಲ ಬೆಲೆಯೊಂದಿಗೆ ಆಟವಾಡುತ್ತಾರೆ. ಬಹಳಷ್ಟು ಬಾರಿ ತೈಲಕಂಪನಿಗಳೇ ಈ ಸ್ಪೆಕ್ಯುಲೇಟರುಗಳಿಗೆ ಕುಮ್ಮಕ್ಕು ನೀಡಿ ಮಾರುಕಟ್ಟೆಯಲ್ಲಿ ತೈಲಬೆಲಯಬಗ್ಗೆ ಅಭದ್ರತಾ ಭಾವನೆ ಮೂಡಿಸುತ್ತಾರೆ. ಬೆಲೆಯನ್ನು ಹೆಚ್ಚಾಗುವಂತೆ ಮಾಡುತ್ತಾರೆ. ಯುಕ್ರೇನಿನಲ್ಲಿ ಸರ್ಕಾರ ಬೀಳುವುದಕ್ಕೂ ತೈಲಬೆಲೆಗೂ ಸಂಬಂಧವೇ ಇರದಿದ್ದರೂ ಈ ಸ್ಪೆಕ್ಯುಲೇಟರುಗಳು ಅದಕ್ಕೊಂದು ಕಥೆಹೆಣೆದು market sentiments ಜೊತೆ ಆಟವಾಡುತ್ತಾರೆ.

ಮೂರನೆಯದಾಗಿ ಮಾರಾಟಗಾರನ ನಿರ್ಧಾರಗಳು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನಿರ್ಧಾರ ಮಾಡುವಲ್ಲಿ OPEC ಎಂಬ ಸಂಸ್ಥೆಯ ಪಾತ್ರ ಬಹಳ ದೊಡ್ಡದು. ಜಗತ್ತಿನ ಅತೀ ಹೆಚ್ಚು ತೈಲವಿರುವ ಮೊದಲ ಇಪ್ಪತ್ತು ದೇಶಗಳಲ್ಲಿ ಹನ್ನೆರಡು ದೇಶಗಳು (ಅಲ್ಜೀರಿಯ, ಅಂಗೋಲಾ, ಈಕ್ವೆಡಾರ್, ಇರಾನ್, ಇರಾಕ್, ಕುವೈತ್, ಲಿಬಿಯಾ, ನೈಜೀರಿಯಾ, ಕತಾರ್, ಸೌದಿ ಅರೀಬಿಯಾ, ಸಂಯುಕ್ತ ಅರಬ್ ಎಮಿರೇಟ್ಸ್ ಹಾಗೂ ವೆನಿಜೂವೆಲಾ) ಒಟ್ಟಾಗಿ ಈ ಸಂಸ್ಥೆಯನ್ನು ರಚಿಸಿಕೊಂಡಿವೆ. ಪ್ರತೀವರ್ಷ OPEC ತನ್ನ ಸದಸ್ಯ ರಾಷ್ಟ್ರಗಳಿಗೆ ಉತ್ಪಾದನಾ ಗುರಿಯನ್ನು ನಿಗದಿಪಡಿಸುತ್ತದೆ. ಜಗತ್ತಿನ ತೈಲವೆಲ್ಲಾ ಹತ್ತೇ ವರ್ಷದಲ್ಲಿ ಮುಗಿದು ಹೋಗದಂತೆ ನೋಡಿಕೊಳ್ಳುವಲ್ಲಿ ಈ ಗುರಿನಿಗದಿಪ್ರಕ್ರಿಯೆ ಮಹತ್ವದ್ದು. ಈ ಗುರಿ ಹೆಚ್ಚುಕಡಿಮೆಯಾದಾಗ ಮಾರುಕಟ್ಟೆಯಲ್ಲಿ ತೈಲಬೆಲೆಯೂ ಏರಿಳಿಕೆಯಾಗುತ್ತದೆ. ಯಾವಯಾವ ದೇಶಗಳು ತೈಲಾವಲಂಬಿತ ಪ್ರಾಜೆಕ್ಟುಗಳನ್ನು ಕಮ್ಮಿಕೊಂಡಿವೆಯೋ ಅಲ್ಲಿ ಬೆಲೆ ಹೆಚ್ಚಾಗುತ್ತದೆ. OPEC ತರಹದ್ದೇ ಇನ್ನೂ ಎರಡು ಸಂಸ್ಥೆಗಳಿವೆ (OAPEC, GECF). ಆದರೆ OPECಗೆ ಹೋಲಿಸಿದರೆ ಇವುಗಳ ಪಾತ್ರ ತೀರಾ ಕಡಿಮೆ.

ಕೊನೆಯದಾಗಿ, ತೈಲಮಾರುಕಟ್ಟೆ ಬರೀ ಒಂದು ದೇಶಕ್ಕೆ ಸೀಮಿತವಾದದ್ದಲ್ಲ. ಇದೊಂದು ಜಾಗತಿಕ ಮಾರುಕಟ್ಟೆ. ಬೇರೆ ಬೇರೆ ದೇಶಗಳಿಂದ ಬೇರೆ ಬೇರೆ ದೇಶಗಳು ತೈಲವನ್ನು ಖರೀದಿಸುತ್ತವೆ. ಅಂದಮೇಲೆ ಯಾವುದೇ ಒಂದು ದೇಶಕ್ಕೆ ಹೆಚ್ಚು ಲಾಭವಾಗದಂತೆ ನೋಡಿಕೊಳ್ಳಲು, ಬಾಕಿ ಎಲ್ಲಾ ವ್ಯವಹಾರಗಳಂತೆಯೇ ತೈಲ ಮಾರುಕಟ್ಟೆ ಕೂಡಾ ಡಾಲರ್ ಅನ್ನು ತನ್ನ ವ್ಯವಹಾರಕ್ಕೆ ಮೊದಲಿನಿಂದಲೂ ಲಂಗರನ್ನಾಗಿ ಬಳಸಿಕೊಳ್ಳುತ್ತಾ ಬಂದಿದೆ. ಹಾಗಾಗಿ ಅಮೇರಿಕದ ಆರ್ಥಿಕತೆಗನುಗುಣವಾಗಿ ತೈಲಬೆಲೆ ನಿರ್ಧರಿಸಲ್ಪಡುತ್ತದೆ. ಅಮೇರಿಕಾದಲ್ಲಿ ವಿತ್ತೀಯ ಕೊರತೆಯುಂತಾಗಿ, ಹಣದುಬ್ಬರ ಹೆಚ್ಚಾಗಿ ಡಾಲರ್ ಬೆಲೆ ಕುಸಿದರೆ, ತೈಲಬೆಲೆಯೂ ಹೆಚ್ಚಾಗುತ್ತದೆ.

ಕೊಳ್ಳುಗನ ಬದಿಯ ನೋಟ:

ಬೇರೆ ಬೇರೆ ದೇಶಗಳು ಈ ಬೆಲೆ ನಿರ್ಧಾರದಲ್ಲಿ ಬೇರೆ ಬೇರೆ ನೀತಿಯನ್ನರಿಸುತ್ತವೆ ಹಾಗೂ ಬೆಲೆನಿರ್ಧಾರಕ್ಕೆ ಬೇರೆ ಬೇರೆ ನಿಯಮಾವಳಿಗಳು ಹಾಗೂ ವೈಪರೀತ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ ಜಗತ್ತಿನ ಎರಡನೇ ಅತಿಹೆಚ್ಚು ತೈಲ ಉತ್ಪಾದಿಸುವ ದೇಶವಾದ ಸೌದಿಯಲ್ಲಿ ಯಾವುದೇ ಹೆಚ್ಚಿನ ತೆರಿಗೆ ಇಲ್ಲದಿರುವುದರಿಂದ ಹಾಗೂ ತೈಲಬಾವಿಯಿಂದ ಕಾರಿನ ಟ್ಯಾಂಕಿನವರೆಗಿನ ದೂರ ಕಡಿಮೆಇರುವುದರಿಂದ ಅಲ್ಲಿ ಪೆಟ್ರೋಲ್ ಸಹಜವಾಗಿಯೇ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ. ಆದರೆ ಜಗತ್ತಿನ ಅತೀ ದೊಡ್ಡ ಉತ್ಪಾದಕ ದೇಶ ರಷ್ಯಾದಲ್ಲಿ ಅಲ್ಲಿಯ ಬೆಲೆನಿಯಂತ್ರಣಾ ಕಾಯ್ದೆ ಬೇರೆ ಸೇವಾಶುಲ್ಕ, ತೆರಿಗೆಗಳನ್ನು ಹೇರುವುದರಿಂದ ಇಡೀ ಚಿತ್ರವೇ ಬದಲಾಗುತ್ತದೆ. ಅದೂ ಅಲ್ಲದೆ ಯಾವ ದೇಶ ತೈಲ ಅಥವಾ ಪೆಟ್ರೋಲನ್ನು ಖರೀದಿಸುತ್ತಿದೆಯೋ ಅದರ ತೆರಿಗೆ ನಿಯಮಾವಳಿ ಹಾಗೂ ಯಾರಿಂದ ತೈಲವನ್ನು ಕೊಳ್ಳಲಾಗುತ್ತಿದೆ ಎಂಬ ಅಂಶಗಳು ಆಯಾ ದೇಶದಲ್ಲಿ ತೈಲ ಬೆಲೆಯ ಏರಿಳಿತಕ್ಕೆ ಕಾರಣವಾಗುತ್ತದೆ.

ಎಲ್ಲಾ ದೇಶಗಳ ಬಗ್ಗೆ ಓದುತ್ತಾ ಕೂತರೆ ಈ ಅಂಕಣ ಇವತ್ತಿಗೆ ಮುಗಿಯುವುದಿಲ್ಲ. ಆದ್ದರಿಂದ ಈ ಮಾತುಕತೆಯನ್ನು ಭಾರತಕ್ಕೆ ಸೀಮಿತಗೊಳಿಸೋಣ. ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚೆ ಪೆಟ್ರೋಲ್ ಅಮದು ಮಾಡುತ್ತಿದ್ದವರು ಬ್ರಿಟೀಷರಾದ್ದರಿಂದ ಅದರ ಬೆಲೆಯನ್ನೂ ಅವರೇ ನಿರ್ಧರಿಸುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ ನಮ್ಮ ಪಾಲಿಗೆ ಬಂದ ತೈಲಕಂಪನಿಗಳು ಮೌಲ್ಯಾಧಾರಿತ ಬೆಲೆ ನಿಗದಿಸುವಿಕೆ (VSP – Value Stock Pricing)ಯನ್ನು ಪಾಲಿಸತೊಡಗಿದವು. ಇದರಲ್ಲಿ ಹೆಚ್ಚಿನ ತಲೆಬಿಸಿಯೇನೂ ಇರಲಿಲ್ಲ. ಇದೊಂದು ಕಚ್ಚಾ ತೈಲಬೆಲೆ+ಇತರೆ ಖರ್ಚುಗಳು (ಸಾಗಣೆವೆಚ್ಚ+ವಿಮೆ+ಸಾರಿಗೆ ನಷ್ಟ+ಆಮದು ಸುಂಕ+ತೆರಿಗೆ+ಇನ್ಯಾವುದೇ ಶುಲ್ಕಗಳು). ಆದರೆ ನೆಹರೂ ತನ್ನ ಎರಡನೇ ಅವಧಿಯಲ್ಲಿ ಕಾಲದಲ್ಲಿ ‘ಆಡಳಿತ ದರ ಪದ್ಧತಿ (APM – Administered Price Mechanism)’ ಎನ್ನುವ ಹೊಸಾ ಪದ್ಧತಿಯನ್ನು ಪ್ರಾರಂಭಿಸಿದರು.

APMನ್ನು ನೆಹರೂ ‘ಅಂತರರಾಷ್ಟ್ರೀಯ ಬೆಲೆಯೇರಿಕೆ ಹಾಗೂ ಇಳಿಕೆಯಿಂದ ಗ್ರಾಹಕರನ್ನು ರಕ್ಷಿಸುವ ನಿಯಮ’ ಎಂಬುದಾಗಿ ಬೆಣ್ಣೆಹಚ್ಚಿ ಜನರಿಗೆ ಹಂಚಿದರು. ಆದರೆ ಆಳದಲ್ಲಿ ಇದೊಂದು ರಾಜಕೀಯ ದಾಳವಾಗಿತ್ತು. ತೈಲಕಂಪನಿಗಳು ಸರ್ಕಾರದ ಅಧೀನದಲ್ಲೇ ಇದ್ದಿದ್ದರಿಂದ ಹಾಗೂ ಅವುಗಳ ಬ್ಯಾಲೆನ್ಸ್ ಶೀಟಿನ ಬಗ್ಗೆ ಸಾಮಾನ್ಯ ನಾಗರೀಕ ತಲೆಕೆಡಿಸಿಕೊಳ್ಳುವುದಿಲ್ಲವೆಂದ ನೆಹರೂ ಮನಗಂಡಿದ್ದರಿಂದ, ಸರ್ಕಾರದ ಖಜಾನೆಯಿಂದ ಹಣವನ್ನು ಈ ತೈಲಕಂಪನಿಗಳಿಗೆ ಸಹಾಯಧನ (ಸಬ್ಸಿಡಿ)ದ ಹೆಸರಲ್ಲಿ ವರ್ಗಾಯಿಸಿ, ಬಹುಪಯೋಗಿ ತೈಲಉತ್ಪನ್ನಗಳಾದ ಪೆಟ್ರೋಲ್, ಸೀಮೆಯೆಣ್ಣೆಯನ್ನು ಜನರಿಗೆ ಕಡಿಮೆದರದಲ್ಲಿ ದೊರಕುವಂತೆ ಮಾಡಿದರು. ಮೊದಲೆರಡು ಪಂಚವಾರ್ಷಿಕಯೋಜನೆಗಳಡಿಯಲ್ಲಿ ಇದರಿಂದ ದೇಶಕ್ಕೆ ಉಪಯೋಗವಾಯಿತಾಯಿದರೂ, ನೆಹರೂ ಸಬ್ಸಿಡಿಯ ಅಮಲೇರಿಸಿ ದೇಶವನ್ನು ಅಪಾಯದಂಚಿಗೆ ದೂಡಿಯಾಗಿತ್ತು. 62ರ ಯುದ್ಧದನಂತರ ಸರ್ಕಾರದ ಖಜಾನೆ ಬರಿದಾದಾಗ ನೆಹರೂ ಸಬ್ಸಿಡಿಯನ್ನು ಹಿಂತೆಗೆಯಲೇ ಬೇಕಾಯಿತು. ಪೆಟ್ರೋಲು ದುಬಾರಿಯಾಯಿತು. ಖಜಾನೆಯನ್ನು ತುಂಬಿಸಲು ಜನರಿಗೆ ‘ಒಂದುಹೊತ್ತು ಊಟ ಬಿಡಿ’ ಎಂಬ ಕರೆಕೊಟ್ಟ ಶಾಸ್ತ್ರೀಜಿಯೇ ಬರಬೇಕಾಯಿತು. ಆದರೆ ನಂತರ ಅಧಿಕಾರಕ್ಕೆ ಬಂದ ಇಂದಿರಾ, ಅದಾಗಲೇ ಜನರನ್ನು ಹಾಗೂ ಮತಗಳನ್ನು ಸಬ್ಸಿಡಿಯ ಮೂಲಕೆ ಹೇಗೆ ಆಟವಾಡಿಸಬಹುದೆಂದು ಕಲಿತಾಗಿತ್ತು. ಆಕೆ ಅದನ್ನು ತನ್ನ ರಾಜಕೀಯ ಲಾಭಕ್ಕೆ ಅದನ್ನು ಉಪಯೋಗಿಸಿಕೊಂಡರು ಕೂಡಾ. ಮುಂದೆ ಬಂದ ಸರ್ಕಾರಗಳೂ ಇದರ ಲಾಭವನ್ನರಿತು ತೈಲಬೆಲೆಗಳ ಸತ್ಯದ ಬಗ್ಗೆ ಜನರನ್ನು ಕತ್ತಲಲ್ಲೇ ಇಟ್ಟರು. ಸರ್ಕಾರಗಳು ಕಡಿಮೆ ಬೆಲೆಯಲ್ಲಿ ಡೀಸೆಲ್, ಸೀಮೆಯೆಣ್ಣೆ ಹಾಗೂ ಗ್ಯಾಸ್ ಸಿಲಿಂಡರುಗಳನ್ನು ಕೊಡುತ್ತಾ ದೇಶದ ಮತಬ್ಯಾಂಕುಗಳೊಂದಿಗೆ ಚೆಲ್ಲಾಡಿದರು. 2002ರಲ್ಲಿ ಭಾರತ ಸರ್ಕಾರ ಈ APMನಿಂದ ಹೊರಬಂದು ಅಂತರರಾಷ್ಟ್ರೀಯ ಬೆಲೆ ಏರುಪೇರಿನಿಂದ ಸ್ವಲ್ಪಮಟ್ಟಿಗೆ ಸಹಾಯಕವಾಗಬಲ್ಲ ಸೂತ್ರವನ್ನೇನೋ ಜಾರಿಗೆ ತಂದಿತು. ಆದರೆ ಡೀಸೆಲ್, ಸೀಮೆಯೆಣ್ಣೆ ಮತ್ತು ಗ್ಯಾಸ್ ಮೇಲಿನ ಸಬ್ಸಿಡಿಯನ್ನೇನೂ ನಿಲ್ಲಿಸಲಿಲ್ಲ. ಗ್ರಾಹಕ ತೆರೆಬೇಕಾದ ಬೆಲೆಯೇನೂ ಕಡಿಮೆಯಾಗಲಿಲ್ಲ. ಮತ್ತು ಈ ಸೂತ್ರ ಸರಳವಾಗೇನೂ ಇರಲಿಲ್ಲ.

ಭಾರತದಲ್ಲಿ ಪೆಟ್ರೋಲ್ ಬೆಲೆ ಹೇಗೆ ನಿರ್ಧಾರವಾಗುತ್ತದೆ?

ಭಾರತದ ಹೆಚ್ಚಿನ ಪೆಟ್ರೋಲ್ ಬೇಡಿಕೆ ಬೇರೆ ದೇಶಗಳಿಂದ ಅಮದುಮಾಡುವ ತೈಲದಿಂದಲೇ ಪೂರೈಸಲಾಗುತ್ತದೆ. ನಮ್ಮದೇ ಆದ ತೈಲಭಾವಿಗಳಿವೆಯಾದರೂ ಅವುಗಳಿಂದ ನಮ್ಮ ದೇಶಕ್ಕೆ ಪೂರೈಕೆಯಾಗುತ್ತಿರುವುದು ನಮ್ಮ ಬೇಡಿಕೆಯ 30%ರಷ್ಟು ಮಾತ್ರ. ಇಷ್ಟೇ ಅಲ್ಲದೆ ಭಾರತ ಜಗತ್ತಿನಲ್ಲೇ ಅತ್ಯಂತ ಮೊದಲ 10 ದೊಡ್ಡ ತೈಲ ಗ್ರಾಹಕರಲ್ಲೊಂದು. ಹಾಗಾಗಿ ತೈಲಬೆಲೆಯ ಬಗ್ಗೆ ಇಲ್ಲಿ ಏನೇ ಸಣ್ಣ ನಿರ್ಧಾರ ತೆಗೆದುಕೊಂಡರೂ ದೊಡ್ಡ ಪರಿಣಾಮಗಳಾಗುತ್ತವೆ. ಹಾಗಾಗಿ ಪೆಟ್ರೋಲ್ ಬೆಲೆ ಹೇಗೆ ನಿರ್ಧಾರವಾಗುತ್ತದೆಯೆಂಬುದೊಂದು ಹತ್ತಾರು ‘ವೇರಿಯಬಲ್’ಗಳ ಒಂದು ಸಂಕೀರ್ಣ ಸಮೀಕರಣ.

“ನಮ್ಮ ದೇಶ ಪೆಟ್ರೋಲ್ ಅನ್ನು ಆಮದು ಮಾಡಿಕೊಳ್ಳುವುದಿಲ್ಲ. ಕಚ್ಚಾತೈಲವನ್ನು ಆಮದುಮಾಡಿಕೊಳ್ಳುತ್ತದೆ” ಎಂಬಲ್ಲಿಂದ ಪ್ರಾರಂಭಿಸೋಣ:

ಇಡೀ ತೈಲಬೆಲೆ ಸಮೀಕರಣಕ್ಕೆ ನಾಲ್ಕು ಮಂದಿ ಪಾಲುದಾರರು. ತೈಲ ಉತ್ಪಾದಕ, ಆಮದು ಕಂಪನಿ, ಸಂಸ್ಕರಣಾ ಕಂಪನಿ ಹಾಗೂ ಮಾರಾಟಗಾರ.

(*) ಉತ್ಪಾದಕ ಕಚ್ಚಾತೈಲವನ್ನು ಭೂಮಿಯಡಿಯಿಂದ ಹೊರತೆಗೆದು ಬ್ಯಾರಲ್ಲುಗಳಲ್ಲಿ ತುಂಬಿ ಮಾರುತ್ತಾನೆ. ಈ ಕಚ್ಚಾತೈಲ ತನ್ನಲ್ಲಿರುವ ಅಶುದ್ಧಿ(impurity) ಗಳಿಗನುಸಾರವಾಗಿ ‘ಸಿಹಿ’ಯಿಂದ ‘ಹುಳಿ’ಯೆಂಬ (sweet -> sour) ಶ್ರೇಣಿಯೆಡೆಗೂ, ಸ್ನಿಗ್ದತೆ(viscosity) ಗನುಗುಣವಾಗಿ ‘ಹಗುರ’ದಿಂದ ‘ಭಾರ’ವೆಂಬ (light -> heavy) ಶ್ರೇಣಿಯೆಡೆಗೂ ವರ್ಗೀಕರಿಸಲ್ಪಡುತ್ತದೆ. ‘ಸಿಹಿ ಮತ್ತು ಹಗುರ’ವಾದ ತೈಲವನ್ನು, ಉತ್ಪಾದಕ ಹೆಚ್ಚಿನ ಬೆಲೆಯಲ್ಲಿ ಮಾರುತ್ತಾನೆ. ಯಾಕೆಂದರೆ ಇದರಿಂದ ಪೆಟ್ರೋಲ್ ಸಂಸ್ಕರಿಸುವುದು ಕಡಿಮೆ ಖರ್ಚಿನ ವ್ಯವಹಾರ. ಆದರೆ ಈ ಶ್ರೇಣಿಯ ತೈಲ ಜಗತ್ತಿನಲ್ಲಿ ಸಿಗುವುದು ಬಹಳ ಕಡಿಮೆ. ಹೆಚ್ಚಿನವೆಲ್ಲಾ ಹುಳಿ-ಹಗುರ ಅಥವಾ ಹುಳಿ-ಭಾರ ವರ್ಗದವೇ. ಇದನ್ನು ಉತ್ಪಾದಕ Free On Board (FOB) ಬೆಲೆಗೆ ಭಾರತದ ಆಮದು ಕಂಪನಿಗೆ (ಉದಾಹರಣೆಗೆ IOC – ಇಂಡಿಯನ್ ಆಯಿಲ್ ಕಂಪನಿ) ಮಾರುತ್ತಾನೆ. ಈ ತೈಲ ಭಾರತದ ಹತ್ತಿರದ ಅಂತರರಾಷ್ಟ್ರೀಯ ಬಂದರಿಗೆ ಬಂದು ಸೇರುತ್ತದೆ. ಉದಾಹರಣೆಗೆ ಒಮಾನ್ ದೇಶದ ಮಸ್ಕತ್ ಬಂದರು.

(*) ಇಂಡಿಯನ್ ಆಯಿಲ್ ಕಂಪನಿ ಈಗ ಈ ತೈಲವನ್ನು ತನ್ನ ರಿಫೈನರಿಗಳಿಗೆ ಹತ್ತಿರವಾಗಿರುವ ಬಂದರುಗಳಿಗೆ ಸಾಗಿಸುತ್ತದೆ. ಉದಾಹರಣೆ ಮುಂಬೈ, ಮಂಗಳೂರು, ಕೋಲ್ಕತ್ತಾ. ಇದಕ್ಕಾಗಿ IOC ಸಾಗಾಣಿಕಾದಾರನನ್ನು ನಿಯಮಿಸುತ್ತದೆ. ಸಾಗಾಣಿಕೆದಾರನ ಶುಲ್ಕವೂ (Ocean Freight) ಸೇರಿ ಈಗ ತೈಲದಬೆಲೆ Cost&Freight ಬೆಲೆಯಾಗುತ್ತದೆ. C&F Price = FOB Price + Ocean Freight

(*) ಈಗ ಹೀಗೆ ಭಾರತದ ಬಂದರು ಸೇರಿದ ಈ ತೈಲಕ್ಕೆ ಈಗ ಆಮದು ಶುಲ್ಕವನ್ನು ವಿಧಿಸಲಾಗುತ್ತದೆ. ಈ ಶುಲ್ಕದಲ್ಲಿ ಮೂರು ಭಾಗಗಳು: ವಿಮಾ ವೆಚ್ಚ+ಬಂದರು ಶುಲ್ಕ+ಸಾಗಾಣಿಕಾ ನಷ್ಟದ ವೆಚ್ಚ. ಇದಿಷ್ಟೇ ಅಲ್ಲದೆ ಭಾರತ ಸರ್ಕಾರ ಈ ತೈಲದಮೇಲೆ C&F ಬೆಲೆಯ 2.5%ರಷ್ಟು ಕಸ್ಟಮ್ಸ್ ಸುಂಕವನ್ನು ವಿಧಿಸುತ್ತದೆ. ಇಲ್ಲಿಗೆ ತೈಲದ ಬೆಲೆ “ಆಮದು ಸಮಾನತೆ ಬೆಲೆ” – Import Parity Price (IPP) ಎಂಬಲ್ಲಿಗೆ ಬಂದು ನಿಲ್ಲುತ್ತದೆ. ದೇಶದಲ್ಲಿ ಪೆಟ್ರೋಲ್ ಬೆಲೆ ನಿಗದಿಯಾಗಲು IPPಮೂಲ. ಈಗ ಸಮೀಕರಣ “IPP = C&F ಬೆಲೆ + ಆಮದು ಶುಲ್ಕ + ಕಸ್ಟಮ್ಸ್ ಸುಂಕ” ಎನ್ನುವಲ್ಲಿಗೆ ಬಂದು ನಿಂತಂತಾಯಿತು.

(*) ಇಲ್ಲೊಂದು ಸಣ್ಣ ಮ್ಯಾಜಿಕ್ ನಡೆಯುತ್ತದೆ. ಅದೇನೆಂದರೆ, ಭಾರತ ತೈಲದ ಒಂದು ಹನಿಯನ್ನೂ ರಫ್ತು ಮಾಡುವುದಿಲ್ಲವಾದರೂ “ರಫ್ತು ಸಮಾನತೆ ಬೆಲೆ” – Export Parity Price (EPP) ಎಂಬುದೊಂದು ಪರಿಕಲ್ಪನೆಯನ್ನು ಇಲ್ಲಿಗೆ ಎಳೆತರಲಾಗುತ್ತದೆ. ‘ಮುಂದೆಂದಾದರೂ’ IOC ತೈಲವನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರುವಂ’ತಾದರೆ’ ಎಂಬ ಊಹೆಯ ಮೇಲೆ ಈ ಬೆಲೆ ನಿಂತಿದೆ. ಇದನ್ಯಾಕೆ ಹೇಳಿದೆ ಎಂದರೆ, ನಮ್ಮ ದೇಶದಲ್ಲಿ ಈ EPP ಮತ್ತು IPPಯ ಸರಾಸರಿಯ ಮೇಲೆ ತೈಲದ ಬೆಲೆ ನಿಗದಿಯಾಗಿತ್ತದೆ. ಇಲ್ಲೀಗ ನಮಗೆ “ಮಾರಾಟ ಸಮಾನ ಬೆಲೆ” – Trade Parity Price (TPP) ಎಂಬುದೊಂದು ಹೊಸಾ ಪದ ಸಿಗುತ್ತದೆ. TPP = 0.8*IPP + 0.2*EPP. ಈ TPP ದೇಶದ ಯಾವುದೇ ಕಂಪನಿ ತೈಲವನ್ನು ಆಮದು ಮಾಡಿದರೂ, ಬೆಲೆ ಹೆಚ್ಚುಕಮ್ಮಿ ಒಂದೇ ಇರುವಂತೆ ನೋಡಿಕೊಳ್ಳುತ್ತದೆ.

(*) ಈಗ ಈ ತೈಲ ಸಂಸ್ಕರಣಾಘಟಕದೆಡೆಗೆ ಪ್ರಯಾಣ ಬೆಳೆಸುತ್ತದೆ. ಇಲ್ಲಿ ಇನ್ನೊಂದು ಪದಪ್ರಯೋಗ. Refinery Transfer Price (RTP), ಅಂದರೆ ರಿಫೈನರಿ ವರ್ಗಾವಣಾ ಬೆಲೆ. ಭಾರತದಲ್ಲಿ ಅತೀದೊಡ್ಡ ಮೂರು ಅಮದು ಮತ್ತು ಮಾರಾಟ ಕಂಪನಿಗಳಾದ IOCL, HPCL, BPCL ತಮ್ಮದೇ ರಿಫೈನರಿಗಳನ್ನು ಹೊಂದಿರುವುದರಿಂದ TPP ಹಾಗೂ RTP ಯಲ್ಲಿ ಏನೂ ಬದಲಾವಣೆಯಾಗುವುದಿಲ್ಲ. ಆದ್ದರಿಂದ RTP=TPP

(*) ರಿಫೈನರಿಗೆ ಹೋದ ಕಚ್ಚಾತೈಲ ಪೆಟ್ರೋಲ್, ಡೀಸೆಲ್, ಸೀಮೆಯೆಣ್ಣೆ, ವಿಮಾನಇಂಧನ, ಅನಿಲ, ತುಟಿಗೆ ಹಚ್ಚುವ ಪೆಟ್ರೋಲಿಯಂ ಜೆಲ್ಲಿ ಹಾಗೂ ಇನ್ನಿತರ ಉತ್ಪಾದನೆಗಳಾಗಿ ಹೊರಬರುತ್ತದೆ. ನಮ್ಮ ಮಾತುಕತೆಯನ್ನು ನಾವು ಪೆಟ್ರೋಲಿಗೆ ಸೀಮಿತಗೊಳಿಸೋಣ. ಈ ರಿಫೈನರಿಯಿಂದ ಹೊರಬಂದ ಪೆಟ್ರೋಲ್ ರಸ್ತೆಯ ಮೂಲಕ ಚಿಲ್ಲರೆ ಮಾರಾಟಮಳಿಗೆಗಳನ್ನು ತಲುಪುತ್ತದೆ. ಅದಲ್ಲದೆ ಮಾರಾಟಕಂಪನಿಗಳು ತಮ್ಮ ಬ್ರಾಂಡುಗಳನ್ನು ಮಾರ್ಕೆಟಿಂಗ್ ಮಾಡಲು ಖರ್ಚನ್ನೂ ಮಾಡುತ್ತವೆ. ಈ ಖರ್ಚುಗಳೆಲ್ಲಾ ಸೇರಿ ‘ಒಟ್ಟು ಬಯಸಿದ ಬೆಲೆ’ Total Desired Price – TDP ಎಂಬುದೊಂದು ಸಿಗುತ್ತದೆ. TDP = RTP+ರಸ್ತೆ ಸಾಗಣೆ ವೆಚ್ಚ್ಚ+ಮಾರ್ಕೆಟಿಂಗ್ ವೆಚ್ಚ

(*) ಈ ಪೆಟ್ರೋಲ್ ನಮ್ಮ ನಿಮ್ಮ ಹತ್ತಿರದ ಬಂಕ್ ಒಂದಕ್ಕೆ ಬಂದಿಳಿಯುತ್ತದೆ. ಈಗ ರಿಫೈನರಿ ಎಲ್ಲೇ ಇರಲಿ, ಬಂಕ್ ಎಲ್ಲಿದೆ ಎಂಬುದರ ಮೇಲೆ ಪೆಟ್ರೋಲಿನ ಚಿಲ್ಲರೆ ಬೆಲೆ Retail Price ನಿರ್ಧಾರಿತವಾಗುತ್ತದೆ. ಯಾಕೆಂದರೆ ಬೇರೆ ಬೇರೆ ರಾಜ್ಯಗಳು ಬೇರೆ ರೀತಿಯ ಮೌಲ್ಯಾಧಾರಿತ ತೆರಿಗೆ ನಿಯಾಮಾವಳಿಗಳನ್ನು ಪಾಲಿಸುತ್ತವೆ. ಇದಲ್ಲದೆ ಕೇಂಡ್ರ ಸರ್ಕಾರ ಈ ಸರಪಳಿಯ ಕೊನೆಯ

ಉತ್ಪನ್ನದ ಮೇಲೆ ಅಬಕಾರಿ ಸುಂಕ ವಿಧಿಸುತ್ತದೆ. ಕಟ್ಟಕೊನೆಯದಾಗಿ ಚಿಲ್ಲರೆ ಮಾರಾಟಗಾರ ತನ್ನ ಲಾಭಾಂಶವನ್ನು ಸೇರಿಸಿ ಮಾರಾಟದರ ನಿರ್ಧಾರವಾಗುತ್ತದೆ. ಅಂದರೆ Retail Price (RP) = TDP + ಅಬಕಾರಿ ಸುಂಕ + ಮೌಲ್ಯಾಧಾರಿತ ತೆರಿಗೆ (VAT) + ಸೆಸ್+ ಮಾರಾಟಗಾರನ ಲಾಭಾಂಶ (ಸುಮಾರು 0.9% – 1.5%)

ಆದರೆ ರಾಜ್ಯಗಳು ತಮ್ಮದೇ ತೆರಿಗೆ ನಿಯಮಾವಳಿಗಳನ್ನು ಪಾಲಿಸುವುದರಿಂದ (ಉದಾ: ಗೋವಾದಲ್ಲಿ VAT ಬರೀ 0.1%, ದೆಹಲಿಯಲ್ಲಿ 20%, ಕರ್ನಾಟಕದಲ್ಲಿ 25% VAT) ಪೆಟ್ರೋಲಿನ ಬೆಲೆ ಏರುಪೇರಾಗುತ್ತದೆ. ಇದರ ಮೇಲೆ ಕರ್ನಾಟಕ 5% ಪ್ರವೇಶ ತೆರಿಗೆಯನ್ನೂ ಮತ್ತೊಂದಷ್ಟು ಸೆಸ್ ಅನ್ನೂ ವಿಧಿಸುತ್ತದೆ. ಹಾಗಾಗಿ ಕರ್ನಾಟಕದ ಗ್ರಾಹಕರು ದೇಶದ ಸರಾಸರಿಗಿಂತ ಹೆಚ್ಚು ಬೆಲೆ ತೆರುತ್ತಾರೆ. ಭಾರತ ಹಾಗೂ ಅಮೇರಿಕಾದ ಗ್ರಾಹಕ ಹೆಚ್ಚುಕಡಿಮೆ ಒಂದೇ ಬೆಲೆತೆತ್ತು ಪೆಟ್ರೋಲ್ ಕೊಳ್ಳುತ್ತಾರೆ. ಆದರೆ ನಮ್ಮದೇಶದ ಹಾಗೂ ಅಮೇರಿಕಾದ ಪೆಟ್ರೋಲ್ ಬೆಲೆಯ ಬನಾವಣೆ ಹೇಗಿದೆಯೆಂದು ಚಿತ್ರ ೧ ಹಾಗೂ ಚಿತ್ರ ೨ ರದಲ್ಲಿ ನೋಡಬಹುದು.

gas-prices-breakdown-Indiagas-prices-breakdown-US

ತಮಾಷೆಯ ವಿಷಯವೆಂದರೆ, ಈ ಪೆಟ್ರೋಲ್ ಮಾರಾಟಕಂಪನಿಗಳಿಂದ ಇಷ್ಟೆಲ್ಲಾ ತೆರಿಗೆ ಪೀಕುವ ರಾಜ್ಯಸರ್ಕಾರಗಳು ಅದಕ್ಕೆ ಪ್ರತಿಯಾಗಿ ತೈಲಕಂಪನಿಗಳಿಗೇನನ್ನೂ ಕೊಡುವುದಿಲ್ಲ. ಆ ಕಂಪನಿಗಳಿಗೆ ಬರುವ ಸಹಾಯಧನವೆಲ್ಲಾ ಕೇಂದ್ರ ಸರ್ಕಾರದಿಂದಲೇ ಬರುವುದು. ಇದರಿಂದಾಗಿ ತೈಲಮಾರಾಟದಲ್ಲಿ ಅಂತಿಮ ನಷ್ಟ ಕೇಂದ್ರಸರ್ಕಾರಕ್ಕೇನೇ. ಅದೂ ಅಲ್ಲದೆ ಈ ಸಹಾಯಧನ, ಕೇಂದ್ರ ಸರ್ಕಾರದ ಬೇರೆ ಬಹುಮುಖ್ಯ ಯೋಜನೆಗಳಿಗೆ (ಉದಾ: ದೇಶ ರಕ್ಷಣೆ, ವಿಜ್ಞಾನ ಅಭಿವೃದ್ಧಿ, ರಸ್ತೆ ಸಾರಿಗೆ ವ್ಯವಸ್ಥೆ) ಅಗತ್ಯವಾದ ಹಣವನ್ನು ನುಂಗಿಹಾಕುತ್ತದೆ. ಅಂದಹಾಗೆ ಕಳೆದ ವರ್ಷದ 2013-14ರ ಬಜೆಟ್ಟಿನಲ್ಲಿ ಈ ಸಬ್ಸಿಡಿಗಾಗಿ ಮೀಸಲಿಟ್ಟಿದ್ದ ಹಣವೆಷ್ಟು ಗೊತ್ತೇ? 65ಸಾವಿರ ಕೋಟಿ!! ಈ ಸಬ್ಸಿಡಿಯ ಅಗತ್ಯವೇನಿತ್ತು ಗೊತ್ತೇ? ಇದಿಲ್ಲದ್ದಿದ್ದಿದ್ದರೆ ಪೆಟ್ರೋಲ್ ಬೆಲೆ ಲೀಟರಿಗೆ ಕನಿಷ್ಟ 17ರೂ ಹೆಚ್ಚಾಗುತ್ತಿತ್ತು, ಡೀಸೆಲ್ ಬೆಲೆ 19ರೂ ಹೆಚ್ಚಾಗುತ್ತಿತ್ತು, ಸೀಮೆಯೆಣ್ಣೆ 7ರೂ ಹೆಚ್ಚಾಗುತ್ತಿತ್ತು. ಇಷ್ಟೆಲ್ಲಾ ಹೆಚ್ಚಾದ ಮೇಲೆ ಆ ಪಕ್ಷ ಅಧಿಕಾರಕ್ಕೆ ಬರುತ್ತಿತ್ತೇ!? ಇಲ್ಲ. ಆದ್ದರಿಂದ ಸರ್ಕಾರ ಮಾಡಿದ ಘನಕಾರ್ಯವೆಂದರೆ ‘ಪ್ರಜೆಗಳ ತೆರಿಗೆ ದುಡ್ಡನ್ನೇ ಸರ್ಕಾರಿಕಂಪನಿಗಳಿಗೆ ಸಬ್ಸಿಡಿಯಾಗಿ ಕೊಟ್ಟು ಪ್ರಜೆಗಳಿಗೆ ಕಡಿಮೆ ದರದಲ್ಲಿ ತೈಲ ಒದಗಿಸಿ ವೋಟು ಗಳಿಸಿಕೊಂಡಿದ್ದು’. ಅಂದರೆ ನಮ್ಮ ಜೇಬಿನಿಂದಲೇ ದುಡ್ಡು ತೆಗೆದುಕೊಂಡು ‘ಇಗೋ ಕಡಿಮೆಬೆಲೆಯ ಪೆಟ್ರೋಲ್’ ಎಂದು ಆಸೆತೋರಿಸಿ ತಾನು ವರ್ಷಾನುಗಟ್ಟಲೆ ಆಡಳಿತ ಮಾಡಿದ್ದು.

ಕೊನೆಯದಾಗಿ, ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಪೆಟ್ರೋಲೆ ಬೆಲೆ ಇಳಿದಿದ್ದಕ್ಕೆ ನೇರ ಕಾರಣ ಮೋದಿ ಸರ್ಕಾರವಲ್ಲ ಎಂದು ನಾನು ಈ ಮೊದಲೇ ಒಂದು ಬಾರಿ ಹೇಳಿದ್ದೆ. OPECನ ಉತ್ಪಾದನಾ ಗುರಿ ಹೆಚ್ಚಾಗಿರುವುದು, ಯೂರೋಪಿಯನ್ ದೇಶಗಳಲ್ಲಿ ತೈಲಾಧಾರಿತವಲ್ಲದ ಶಕ್ತಿಮೂಲಗಳ ಜನಪ್ರಿಯತೆ ಹೆಚ್ಚಿರುವುದು, ಕಚ್ಚಾತೈಲದ ಉತ್ಪಾದನೆಯಲ್ಲಿ ಸುಧಾರಿತ ಶೇಲ್ ತಂತ್ರಜ್ಞಾನದ (shale technology) ಬಳಕೆ, ಜಪಾನ್ ಸೇರಿದಂತೆ ಜಗತ್ತಿನ ಕೆಲ ಮುಖ್ಯ ಮಾರುಕಟ್ಟೆಗಳು ಮಂದವಾಗಿರುವುದೂ ಕಾರಣಗಳು ಸೇರಿ ಜಾಗತಿಕ ಮಾರುಕಟ್ಟೆಯಲ್ಲಿ ಅಗತ್ಯಕ್ಕಿಂತ ಹೆಚ್ಚಾದ ತೈಲ ಲಭ್ಯವಾಗುತ್ತಿದೆ. ಇದರಿಂದಾಗಿ ಕಚ್ಚಾತೈಲದ ಬೆಲೆ ಕಡಿಮೆಯಾಗಿದೆ.

ಆದರೆ ಸಧ್ಯದ ಸರ್ಕಾರ ಇರಾನಿನಿಂದ ಹೆಚ್ಚಿನ ಆಮದಿಗೆ ಇಂಬುಕೊಟ್ಟಿರುವುದೂ, ತೈಲ ಬೆಲೆಗಳನ್ನು ಅನಿಯಂತ್ರಿತ ವ್ಯವಸ್ಥೆಯೆಡೆಗೆ ತಿರುಗಿಸಿದ್ದು ನಿಜವಾಗಿಯೂ ಒಳ್ಳೆಯ ಯೋಜನೆ. ಈಗ ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಗನುಗುಣವಾಗಿ ತೈಲಕಂಪನಿಗಳು ಬೆಲೆ ನಿರ್ಧರಿಸುವುದರಿಂದ ಸರ್ಕಾರದ ಸಬ್ಸಿಡಿಯ ಅಗತ್ಯ ಇಳಿಮುಖವಾಗುತ್ತದೆ ಹಾಗೂ ಈ ಹಣವನ್ನು ಸರ್ಕಾರ ಸಮರ್ಪಕವಾದ ರೀತಿಯಲ್ಲಿ ಬೇರೆ ಯೋಜನೆಗಳಿಗಾಗಿ ಬಳಸಿಕೊಳ್ಳಬಹುದು. ಅದೂ ಅಲ್ಲದೆ ಎಲ್ಲಾಬಾರಿಯೂ ಪೆಟ್ರೋಲ್ ಬೆಲೆ ಬರೇ ಕಚ್ಚಾತೈಲದ ಬೆಲೆಯ ಮೇಲೆ ಅವಲಂಬಿತವಲ್ಲ. ಡಾಲರಿನೆದುರು ರೂಪಾಯಿಯ ಶಕ್ತಿಯನ್ನೂ ಗಮನಿಸಬೇಕು. ಕಳೆದ ನವೆಂಬರಿನಲ್ಲಿ ಕಚ್ಚಾತೈಲದ ಬೆಲೆ 18.3% ಇಳಿಕೆಯಾಯಿತು. ಆದರೆ ದುರ್ಬಲ ರೂಪಾಯಿಯಿಂದಾಗಿ ಭಾರತಕ್ಕೆ ಬರೇ 12.3%ರಷ್ಟು ಕಡಿಮೆ ಬೆಲೆಯಲ್ಲಿ ದೊರಕುವಂತಾಯಿತು. ತೈಲಬೆಲೆ ಇಳಿಕೆಯಿಂದಾಗಿ ಯಾವ ರೀತಿ ಆರ್ಥಿಕಸ್ಥಿತಿ ಸುಧಾರಿಸಬಹುದು ಎಂಬುದರ ಬಗ್ಗೆ ತಿಳಿಯಲು ಆಸಕ್ತಿ ಇರುವವರು, ಇನ್ನೊಂದು ಲೇಖನವನ್ನು http://on.fb.me/14E1Tt6 ಇಲ್ಲಿ ಓದಬಹುದು.

ಕೊಸರು:

ತೈಲಬೆಲೆ ಕಡಿಮೆಯಾದಷ್ಟೂ ರಸ್ತೆಗಳು ಹೆಚ್ಚೆಚ್ಚು ಅಸುರಕ್ಷಿತ ಹಾಗೂ ಅಪಾಯಕಾರಿಯಾಗಿರುತ್ತವೆ ಎಂಬ ಹೊಸ ಸಂಶೋಧನಾ ವರದಿಯೊಂದು ಹೊರಬಂದಿದೆ (http://bit.ly/1xNgq0n) 🙂 ವಿಚಿತ್ರ ಆದರೂ ಸತ್ಯ!!

#ಬುದ್ಧಿಗೊಂದು_ಗುದ್ದು, #ಪೆಟ್ರೋಲ್_ಬೆಲೆ, #PetrolPrice

ಉಳಿದ ‘ಬುದ್ಧಿಗೊಂದು ಗುದ್ದು’ ಲೇಖನಗಳಿಗೆ https://loadstotalk.wordpress.com/ ಗೆ ಭೇಟಿ ಕೊಡಿ

ಬುದ್ಧಿಗೊಂದು ಗುದ್ದು – ೨೬

ಯಾರಪ್ಪನ ಆಸ್ತಿ ಈ ಅಂತರ್ಜಾಲ!?

99991395150064

ದಿನಾ ಬೆಳಗ್ಗೆ ಎದ್ದು ಮಲಗೋ ಮುಂಚಿನ ನಿಮಿಷದವರೆಗೂ ಇಂಟರ್ನೆಟ್ಟು ಅನ್ನೋ ಜೇಡರಬಲೆಯಲ್ಲಿ ಸಿಕ್ಕಾಂಡಿರ್ತೀರಲ್ಲ, ಯಾವತ್ತಾದ್ರೂ ಇಂಟರ್ನೆಟ್ಟು ನಿಂತುಹೋದ್ರೆ ಏನ್ ಕಥೆ ಅಂತಾ ಯೋಚ್ನೆ ಮಾಡಿದ್ದೀರಾ? “ಏನು!! ಇಂಟರ್ನೆಟ್ಟು ನಿಂತುಹೋಗುತ್ತಾ!? ಅದು ಯಾರಪ್ಪನ ಮನೆಯದ್ದು ಹಾಗೆಲ್ಲಾ ನಿಲ್ಸೋಕೆ? ಅದು ಹೇಗೆ ನಿಂತೋಗತ್ತೆ?” ಅಂತಾ ಅವಾಜ್ ಹಾಕ್ತಿದ್ದೀರಾ!? ಸಮಾಧಾನ ಮಾಡ್ಕಳ್ಳಿ. ನಾನು ನೀವು ಅಂದ್ಕೊಂಡಷ್ಟು ಸರ್ವತಂತ್ರ ಸ್ವತಂತ್ರವಾಗೇನಿಲ್ಲ ಇಂಟರ್ನೆಟ್ಟು. ನಿಲ್ಸೋಕೆ ಯಾರಪ್ಪನ ಮನೆಯದ್ದಲ್ಲದಿದ್ದರೂ, ಇದನ್ನ ನಡೆಸೋಕೆ ಕೆಲವು ದೊಣ್ಣೆನಾಯಕರುಗಳಿದ್ದಾರೆ. ಅಷ್ಟೇ ಅಲ್ಲ, ಅಂತರ್ಜಾಲಕ್ಕೊಂದು ಕೀಲಿಕೈ ಕೂಡ ಇದೆ. ಕೀಲಿಕೈಯೆಂದರೆ ಸುಮ್ಮನೆ ಸಾಹಿತ್ಯಿಕವಾಗಿ (literal) ಹೇಳ್ತಾ ಇಲ್ಲ. ನಿಜವಾಗಿಯೂ ಅಂತರ್ಜಾಲಕ್ಕೊಂದು ಕೀಲಿಕೈ (Key) ಇದೆ. ಈ ಕೀಲಿಕೈ ಸಿಗಬೇಕಾದರೆ ಜಗತ್ತಿನಾದ್ಯಂತ ಹರಡಿರುವ 14ಜನ ಸೇರಬೇಕು. ಈ 14ಜನರ ಹತ್ತಿರವಿರುವ ಏಳು ಕೀಲಿಕೈಗಳು ಸೇರಿದರೆ ಮಾತ್ರ ಆ ‘ಮಾಸ್ಟರ್ ಕೀ’ ಸಿಗುವುದು. ಆ ಮಾಸ್ಟರ್ ಕೀ ಸಿಕ್ಕಿದರೆ ಅಂತರ್ಜಾಲಕ್ಕೆ ನೀವೇ ಒಡೆಯ! ಹೇಗೆ ಅಂತೀರಾ? ಮುಂದೆ ಓದಿ.

ಅಂತರ್ಜಾಲ ಅನ್ನುವುದೊಂದು ಒಂಟಿಮನೆಯೇನಲ್ಲ. ಹಾಗಂತ ಇದನ್ನ ಒಂದಷ್ಟು ಮನೆಗಳ ಜಾಲ ಅಂತಾ ತಿಳ್ಕೊಂಡಿದ್ರೆ ಅದು ತಪ್ಪು ತಿಳುವಳಿಕೆ. ಇಂಗ್ಳೀಷಿನ Internet ಹೆಸರು ಇದಕ್ಕೆ ಹೆಚ್ಚು ಸೂಕ್ತ ಅರ್ಥ ಕೊಡುತ್ತದೆ. ಯಾಕೆಂದರೆ, ಇದೊಂದು ಜಾಲಗಳನ್ನು ಸಂಪರ್ಕಿಸುವ ಮಹಾಜಾಲ. It’s a network of networks. ಬೇರೆ ಬೇರೆ ದೇಶದ, ಬೇರೆ ಬೇರೆ ಸಂಸ್ಥೆಗಳ, ಬೇರೆ ಬೇರೆ ಸಂಘಟನೆಗಳ ತಾಣಗಳನ್ನು ಸಂಪರ್ಕಿಸುವ ಒಂದು ಮಹಾಜಾಲ. ಹೀಗಿದ್ದಾಗ ಇದನ್ನು ಯಾರೋ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆ ನಿರ್ಬಂಧಿಸಲು ಸಾಧ್ಯವಿಲ್ಲ. ಆದರೆ ಕೆಲವೊಂದು ದೇಶಗಳಲ್ಲಿ ಅಂತರಜಾಲದ ಪ್ರವೇಶವನ್ನು ಒಂದೊಂದೇ ಸಂಸ್ಥೆ ಅಥವಾ ವ್ಯಕ್ತಿ ಅಥವಾ ಒಂದು ಗುಂಪು ನಿರ್ಬಂಧಿಸಬಹುದು. ಉದಾಹರಣೆಗೆ ನಾನಿರುವ ಸಂಯುಕ್ತ ಅರಬ್ ಎಮಿರೆಟ್ಸಿನಲ್ಲಿ 2006ಕ್ಕೆ ಮುಂಚೆ ದೇಶದ ಇಂಟರ್ನೆಟ್ ಟ್ರಾಫಿಕ್ಕನ್ನು ‘ಎತಿಸಲಾತ್’ ಎಂಬ ಕಂಪನಿಯೇ ನಿರ್ಧರಿಸುತ್ತಿತ್ತು. ಈಗ ‘ಎತಿಸಲಾತ್’ ಮತ್ತು ‘ಡು’ ಎಂಬ ಎರಡು ಕಂಪನಿಗಳಿವೆ. ನಾಳೆ ಏನಾದರೂ ಇವೆರಡೂ ಕಂಪನಿಗಳ ಸಿ.ಇ.ಒಗಳು ಸೇರಿ ಯು.ಎ.ಇ ಗೆ ಇಂಟರ್ನೆಟ್ ಬೇಡ ಎಂದಾಗಲೀ ಅಥವಾ ಅಂತರ್ಜಾಲದ ಇಂತಿಂತಾ ಪುಟಗಳು ಮಾತ್ರ ಇಲ್ಲಿನ ನಾಗರೀಕರಿಗೆ ಸಿಗುವಂತಾಗಲಿ ಎಂದು ನಿರ್ಧರಿಸಿದರೆ ನನಗೆ ಅವರು ಕೊಟ್ಟಷ್ಟು ಪ್ರಸಾದವೇ ಗತಿ. ಹಾಗೂ ಇದು ನಡೆಯುತ್ತಿದೆ ಕೂಡಾ. ಇಲ್ಲಿನ ಸರ್ಕಾರ ಅಥವಾ ಇಸ್ಲಾಂಗೆ ವಿರುದ್ಧವಾಗಿ ಮಾತನಾಡುವ ಜಾಲಪುಟಗಳನ್ನು ಹಾಗೂ ಅಶ್ಲೀಲತೆ/ನಗ್ನತೆಯನ್ನು ತೋರಿಸುವ ಪುಟಗಳನ್ನು ಈ ಕಂಪನಿಗಳು ನಿರ್ಬಂಧಿಸುತ್ತವೆ. ಇದೇ ರೀತಿ ಚೀನಾ, ಉ.ಕೊರಿಯಾ, ಇರಾನ್ ಮುಂತಾದ ದೇಶಗಳಲ್ಲಿಯೂ ಇದೇ ರೀತಿ ನಡೆಯುತ್ತದೆ. ಪ್ರತಿಯೊಂದು ಸರ್ಕಾರ ಹಾಗೂ ಆಯಾ ದೇಶದ ಟೆಲಿಕಾಂ ಕಂಪನಿಗಳು ಜಾಲವನ್ನು ಸ್ವಲ್ಪಮಟ್ಟಿಗೆ ನಿರ್ಬಂಧಿಸುತ್ತವೆ.

ಆದರೆ, ಜಗತ್ತಿನ ಕೆಲ ಕಂಪನಿಗಳಿಗೆ ಇಡೀ ಇಂಟರ್ನೆಟ್ಟನ್ನೇ ನಿರ್ಬಂಧಿಸುವ ಶಕ್ತಿಯಿದೆಯೆಂದರೆ ನಂಬುತ್ತೀರಾ? ಇಲ್ಲಿ ಕೇಳಿ. ನಮ್ಮ ನಮ್ಮ ದೇಶದ ಟೆಲಿಕಾಂ ಕಂಪನಿಗಳಿಗೆ ನಾವು ISP (Internet Service Providers) ಎಂದು ಕರೆಯುತ್ತೇವೆ. ಈ ISPಗಳು ನೇರವಾಗಿ ತಾವೇ ಅಂತರ್ಜಾಲವನ್ನು ನಿಮಗೆ ಒದಗಿಸುವುದಿಲ್ಲ. ಇವುಗಳಿಗೂ ಸೇವೆ ಒದಗಿಸುವ ಕೆಲ ಸಂಸ್ಥೆಗಳಿವೆ. ಇವನ್ನು upstream ISPಗಳೆನ್ನುತ್ತಾರೆ. ಅಂತರ್ಜಾಲ ಪ್ರಾರಂಭವಾದಾಗಲಿಂದಲೂ ಈ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದರಿಂದ, ಅಂತರ್ಜಾಲದ ಪರಿಕಲ್ಪನೆಯನ್ನು ನಿಜವಾಗಿಸಿದ್ದೇ ಈ ಕಂಪನಿಗಳಾದ್ದರಿಂದ, ಹಾಗೂ ಇವತ್ತಿನ ಅಂತರ್ಜಾಲದ ಎಲ್ಲಾ ತಂತ್ರಜ್ಞಾನಗಳೂ ಈ ಕಂಪನಿಗಳಿಂದಲೇ ಉಗಮವಾದ್ದರಿಂದ ಇಡೀ ಅಂತರ್ಜಾಲದ ಬೆನ್ನೆಲುಬಾಗಿ ಈ ಕಂಪನಿಗಳು ಕಾರ್ಯನಿರ್ವಹಿಸುತ್ತವೆ. ಇವುಗಳಲ್ಲಿ ಅತ್ಯಂತ ಮುಖ್ಯವಾದವುಗಳು:

(*) UUNET
(*) Verizon
(*) Level3
(*) AT&T
(*) Qwest
(*) Sprint
(*) IBM

ಅಂತರ್ಜಾಲದ ಪ್ರತಿಯೊಂದು ಬೈಟ್ ಮಾಹಿತಿ ಹರಿಯುವುದೇ ಇವುಗಳ ಮೂಲಕ. ಇವು ಯಾವಾಗ ಬೇಕಾದರೂ ನಿಮ್ಮ ಅಂತರ್ಜಾಲದ ಬಾಗಿಲನ್ನು ಮುಚ್ಚಬಲ್ಲವು. ಆದರೆ, ಹಾಗಾಗುವ ಸಾಧ್ಯತೆ ಕಡಿಮೆ. ಯಾಕೆಂದರೆ, ಇವೆಲ್ಲವೂ ಬಂಡವಾಳಶಾಹಿ ಕಂಪನಿಗಳಾದ್ದರಿಂದ, ಇವುಗಳ ಆದಾಯವೂ ಅಂತರ್ಜಾಲದಿಂದಲೇ ಬರುತ್ತಿರುತ್ತದೆ. ಇವುಗಳಲ್ಲಿ ಯಾವ ಕಂಪನಿಯೂ ಅಂತರ್ಜಾಲವನ್ನು ನಿಲ್ಲಿಸಹೋಗಿ ತನ್ನ ಕಾಲಿಗೆ ತಾನೇ ಗುಂಡು ಹೊಡೆದುಕೊಳ್ಳುವ ಕೆಲಸ ಮಾಡಲಾರದು. ಹಾಗೂ ಈ ಕಂಪನಿಗಳು ವ್ಯಾವಹಾರಿಕ ಕಾಯ್ದೆಯಡಿಯಲ್ಲಿ ಬರುವುದರಿಂದ ಸರ್ಕಾರಗಳು ಮತ್ತು ಗ್ರಾಹಕರು ಇವನ್ನು ನಿಯಂತ್ರಿಸಬಹುದು.

ಆದರೆ, ಅಂತರ್ಜಾಲವನ್ನು ನಿಯಂತ್ರಿಸುವಲ್ಲಿ ಇವುಗಳಷ್ಟೇ ಮುಖ್ಯವಾದ ಇನ್ನೂ ಕೆಲವು ಅಂಗಗಳಿವೆ. ಅಂತರ್ಜಾಲದ ಆವಿಷ್ಕಾರವಾದಾಗ (ಅದಿನ್ನೂ ARPANET ಎಂದು ಕರೆಯಲ್ಪಡುತ್ತಿದ್ದಾಗ) ಅದನ್ನು ಒಂದೇ ಸಂಸ್ಥೆ ನಿರ್ವಹಿಸುತ್ತಿತ್ತು. ಆದರೆ, ನಿಧಾನವಾಗಿ ಬೇರೆ ಬೇರೆ ಅಂಗಗಳು ARPANETನೊಂದಿಗೆ ಸೇರಲಾರಂಭಿಸಿದಾಗ, ಇದರ ಕ್ಲಿಷ್ಟತೆ ಹೆಚ್ಚುತ್ತಾ ಹೋಯಿತು. ಹಾಗೂ ಕೆಲವೊಮ್ಮೆ ಈ ಅಂಗಸಂಸ್ಥೆಗಳು ಬೇರೆ ದೇಶಗಳಿಗೆ ಸೇರಿದವುಗಳಾಗಿದ್ದವು. ಅಂತರ್ಜಾಲ ಬೆಳೆಯುತ್ತಿರುವ ವೇಗ ನೋಡಿದ ಕೆಲ ತಜ್ಞರು ಇದನ್ನು ತಹಬಂದಿಯಲ್ಲಿಡಲು ಒಂದಷ್ಟು ನಿಯಮಾವಳಿಗಳನ್ನು ರೂಪಿಸಬೇಕೆಂಬ ಅಭಿಪ್ರಾಯಕ್ಕೆ ಬಂದರು. ಅಷ್ಟೇ ಅಲ್ಲದೆ, ಅಂತರ್ಜಾಲ ಬೆಳೆಯಲಾರಂಭಿಸಿದಂತೆ ಒಂದೇ ಹೆಸರಿನ ಹಲವು ಅಂತರ್ಜಾಲ ಪುಟಗಳು ಬರಲಾರಂಭಿಸಿದವು. ನೆನಪಿರಲಿ, ಕಂಪ್ಯೂಟರುಗಳಿಗೆ ನಾನು ನೀವು ಮಾತನಾಡುವ ಭಾಷೆ ಅರ್ಥವಾಗುವುದಿಲ್ಲ. ಅವಕ್ಕೇನಿದ್ದರೂ ಅಂಕಿಸಂಖ್ಯೆಗಳಷ್ಟೇ ಅರ್ಥವಾಗುವುದು. ನೀವು http://www.businessinsider.com ಎಂದು ಬರೆದದ್ದು ಅವಕ್ಕೆ 64.27.101.155 ಎಂದೇ ಅರ್ಥವಾಗುವುದು. ಹೀಗಿದ್ದಾಗ ಪ್ರತಿಯೊಂದು ಅಂತರ್ಜಾಲ ಪುಟಕ್ಕೆ ಅದರದ್ದೇ ಆದ ಸಂಖ್ಯಾವಿಳಾಸ (numeric address) ಇರಬೇಕಲ್ಲವೇ? ಇದನ್ನು ನಿರ್ಧರಿಸುವುದ್ಯಾರು? ಅದಕ್ಕಾಗಿಯೇ, ಜಗತ್ತಿನಲ್ಲಿ ಕೆಲ ಸಂಸ್ಥೆಗಳಿವೆ. ಇವು ಅಂತರ್ಜಾಲದ ನಿಯಾಮಾವಳಿಗಳನ್ನು (protocols) ರೂಪಿಸುತ್ತವೆ, ಅಂತರ್ಜಾಲದಲ್ಲಿ ಮಾಹಿತಿಗಳು ಹೇಗೆ ಹರಿದಾಡಬೇಕೆಂದು ನಿರ್ಧರಿಸುತ್ತವೆ, ಹಾಗೂ ಪ್ರತಿಯೊಂದು ಅಂತರ್ಜಾಲ ಪುಟಕ್ಕೂ ಸಂಖ್ಯಾನಾಮಕರಣ ಮಾಡುತ್ತವೆ. Internet Engineering Task Force, ICANN, National Science Foundation, InterNIC, Internet Architecture Board ಈ ಸಂಸ್ಥೆಗಳು. ಇವೆಲ್ಲವೂ ಯಾವುದೇ ಲಾಭಕ್ಕಾಗಿ ನಡೆಯುವ ಸಂಸ್ಥೆಗಳಲ್ಲ. ಉತ್ತಮವಾದ ಅಂತರ್ಜಾಲ ಅನುಭವ ನೀಡುವ ನಿಟ್ಟಿನಲ್ಲಿ ಕೆಲಸಮಾಡುವ nonprofit organisationಗಳು. ಯಾರೋ ಪ್ರೋಗ್ರಾಮರ್ ಮೌಟನ್-ವ್ಯೂನಲ್ಲಿ ಕುಳಿತು ತನ್ನ ವಿಂಡೋಸ್ ಕಂಪ್ಯೂಟರಿನಲ್ಲಿ http ನಿಯಮದಡಿ ಬರೆದ ಅರಬ್ಬೀ ಭಾಷೆಯ ಅಂತರ್ಜಾಲ ಪುಟವೊಂದು, ಐಬಿಎಂನ ಡೇಟಾ ಸೆಂಟರುಗಳ ಮೂಲಕ ಹಾದು, AT&Tಯ ಕೇಬಲ್ಲುಗಳಲ್ಲಿ ಹರಿದು, ಕಝಕಿಸ್ಥಾನದ kaznetನ ಕೇಬಲ್ಲು ತಲುಪಿ, ಅಲ್ಲಿನ ಗ್ರಾಹಕನೊಬ್ಬನ ಆಡ್ರಾಯ್ಡ್ ಫೋನಿನಲ್ಲಿ ಒಪೇರಾ ಬೌಸರಿನಲ್ಲಿ ನೋಡಿದರೂ ಮೂಲರೂಪದಲ್ಲೇ ದೊರಕುವ ‘ಅಂತರ್ಜಾಲ ಪಯಣ’ದಲ್ಲಿ ಒಂದೇ ಒಂದು ಬೈಟ್ ದತ್ತಾಂಶ ಕಳೆದುಹೋಗದಂತೆ ಮಾಡುವಲ್ಲಿ ಈ ಸಂಸ್ಥೆಗಳ ಪಾತ್ರ ಬಹು ದೊಡ್ಡದು.

1998ರಲ್ಲಿ ಪ್ರಾರಂಭವಾದ ICANN (Internet Corporation for Assigned Names and Numbers)ದ ಮುಖ್ಯ ಕೆಲಸ ಅಂತರ್ಜಾಲ ಪುಟಗಳಿಗೆ ತನ್ನದೇ ಆದ ವಿಶಿಷ್ಟ ಸಂಖ್ಯಾವಿಳಾಸ ನಿಯೋಜಿಸುವುದು. ಅಂದರೆ http://www.hotmail.com ಹಾಗೂ http://www.hotmale.com ಎರಡಕ್ಕೂ ವ್ಯತ್ಯಾಸ ಇರುವಂತೆ ನೋಡಿಕೊಳ್ಳುವುದು 😉 ಅಂದರೆ, ಯಾವುದೋ ಒಂದು ಫೋನು ಡಯಲ್ ಮಾಡಿದಾಗ ‘ಆ’ ನಂಬರಿಗೇ ಕರೆಹೋಗುವಂತೆ ಹೇಗೆ ಟೆಲಿಫೊನು ಎಕ್ಸ್ಚೇಂಜುಗಳು ನೋಡಿಕೊಳ್ಳುತ್ತವೋ, ಹಾಗೆಯೇ ICANN ಒಂದು ಇಂಟರ್ನೆಟ್ ಡೈರೆಕ್ಟರಿ ಇದ್ದಹಾಗೆ. ಎಲ್ಲ ಅಂತರ್ಜಾಲ ಪುಟಗಳ ನಂಬರುಗಳನ್ನು ಇಟ್ಕೊಂಡಿರುತ್ತೆ, ಹಾಗೂ ಒಂದೇ ಪೋನ್ ನಂಬರ್ ಇಬ್ಬರಿಗೆ ಸಿಗದಿರುವ ಹಾಗೆ ನೋಡಿಕೊಳ್ಳುತ್ತೆ. ಇದೇ ಅಲ್ಲದೆ ಈ ಸಂಸ್ಥೆ ಅಂತರ್ಜಾಲವನ್ನು ಸ್ಥಿರವಾಗಿ ನಿಲ್ಲುವಂತೆ ಮಾಡುವಲ್ಲಿ, ನಮ್ಮ ನಿಮ್ಮ ಮಧ್ಯದ ಕನೆಕ್ಷನ್ ಮುರಿದುಹೋಗದಿರುವಂತೆ ನೋಡಿಕೊಳ್ಳುವಲ್ಲಿ ಕೂಡಾ ಮಹತ್ವದ ಪಾತ್ರವಹಿಸುತ್ತದೆ.

ಈಗ ವಿಷಯಕ್ಕೆ ಬರೋಣ. ಯಾರಾದರೂ ಕಂಪ್ಯೂಟರ್ ಕಿಲಾಡಿ ICANN ಸಂಸ್ಥೆಯ ಡೇಟಾಬೇಸಿಗೆ ಲಗ್ಗೆ ಹಾಕಿ ಇಡೀ ಅಂತರ್ಜಾಲವನ್ನು ನಿಯಂತ್ರಿಸಬಹುದು ಮತ್ತು ಅಂತರ್ಜಾಲ ಕುಸಿದುಬೀಳಲೂ ಕಾರಣನಾಗಬಹುದು. ಹೇಗೆ ಅಂತೀರಾ? ಇದರ ಡೇಟಾಬೇಸಿಗೆ ಹೋಗಿ ನಿಜವಾದ ಬ್ಯಾಂಕ್ ವೆಬ್ಸೈಟಿನ ಬದಲು ನಕಲಿ ವೈಬ್ಸೈಟಿಗೆ ಗ್ರಾಹಕರನ್ನು ಕಳಿಸಿ, ದುಡ್ಡು ಲಪಟಾಯಿಸಬಹುದು. ಗೂಗಲ್ ಅಂತಾ ಟೈಪಿಸಿದವರನ್ನು ಇನ್ಯಾವುದೋ ಅಶ್ಲೀಲ ವೆಬ್ಸೈಟಿಗೆ ಕಳುಹಿಸಿ ಮುಜುಗರವನ್ನುಂಟು ಮಾಡಬಹುದು ಇತ್ಯಾದಿ ಇತ್ಯಾದಿ. ಅಂದರೆ, ಈ ಕಂಪನಿಯ ಡೇಟಾಬೇಸೇ ಅಂತರ್ಜಾಲಕ್ಕೆ ಹೆಬ್ಬಾಗಿಲಿದ್ದಂತೆ!!

ಹೀಗೇನಾದರೂ ಆಗಿ (ಅಥವಾ ಜಗತ್ತಿನಲ್ಲೇದರೂ ಅನಿರೀಕ್ಷಿತ ವಿಪತ್ತು ಘಟಿಸಿ) ಅಂತರ್ಜಾಲವೇ ಕುಸಿದುಬಿದ್ದರೆ, ಮತ್ತೆ ಅದನ್ನು ಕಟ್ಟಲು ಬಹಳಷ್ಟು ಸಮಯ ಬೇಕಾಗುತ್ತದೆ. ಹೀಗಿದ್ದಾಗ, ICANN ತನ್ನಲ್ಲಿರುವ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿ ಕಾಯ್ದಿಡಬೇಕು (ಅಂದರೆ ಹೆಚ್ಚು ಜನರಿಗೆ ತಿಳಿಯದಂತೆ) ಆದರೆ ಹಾಗಂತ ಒಬ್ಬರಿಗೇ ಇದರ ಕೀಲಿಕೈ ಕೊಟ್ಟರೆ ಅದೂ ಕಷ್ಟ. ಒಳ್ಳೇ ಪೀಕಲಾಟಕ್ಕೆ ಬಂತಲ್ಲಾಪ್ಪಾ! ಇದಕ್ಕಾಗಿಯೇ ICANN ತನ್ನ ಡೇಟಾಬೇಸ್ ಅನ್ನು ಅತ್ಯಂತ ಸುರಕ್ಷತೆಯಿಂದ ಕಾಯಲು ಹಾಗೂ ಅದರ ನಿಯಂತ್ರಣ ಒಬ್ಬನೇ ವ್ಯಕ್ತಿಯಲ್ಲಿ ಇರದಿರುವಂತೆ ನೋಡಿಕೊಳ್ಳಲು ಅನುಕೂಲವಾಗುವಂತೆ ಒಂದು ಕೆಲಸ ಮಾಡಿದೆ. ಅದೇನೆಂದರೆ ಜಗತ್ತಿನಾದ್ಯಂತ ಬೇರೆ ಬೇರೆ ದೇಶದಲ್ಲಿ ಹರಡಿ ಹೋಗಿರುವ ಏಳುಜನರನ್ನು ಆರಿಸಿ ಅವರಿಗೊಂದೊಂದು ‘ಅಂತರ್ಜಾಲದ ಕೀಲಿಕೈ’ಯನ್ನು ಕೊಟ್ಟಿದೆ. ಕೀಲಿಕೈಯೆಂದರೆ ಪಾಸ್ವರ್ಡ್ ಅಲ್ಲ. ನಿಜವಾದ ಕೀಲಿಕೈ!! ಈ ಏಳು ಜನರಿಗೆ ಒಬ್ಬೊಬ್ಬರು ಬ್ಯಾಕ್-ಅಪ್ ಇದ್ದಾರೆ. ಅಂದರೆ ಈ ಒಟ್ಟು ಹದಿನಾಲ್ಕು ಜನರ ಹತ್ತಿರ ಅಂತರ್ಜಾಲದ ಕೀಲಿಕೈ ಇರುತ್ತದೆ. ವರ್ಷದಲ್ಲಿ ನಾಲ್ಕು ಬಾರಿ ಈ ಹದಿನಾಲ್ಕು ಮಂದಿ ಅಮೇರಿಕಾದ ಪೂರ್ವತೀರ ಮತ್ತು ಪಶ್ಚಿಮ ತೀರದಲ್ಲಿ ಸೇರಿ, ಈ ಕೀಲಿಕೈಯನ್ನು ಬದಲಾಯಿಸುತ್ತಾರೆ. ಅಂತರ್ಜಾಲವನ್ನು ಸುರಕ್ಷಿತವಾಗಿಡಲು ಈ ನಿಯಮವನ್ನು 2010ರಿಂದ ICANN ಪಾಲಿಸಿಕೊಂಡು ಬಂದಿದೆ.

ಈ ಏಳು ಜನ ಯಾರ್ಯಾರೋ ದಾರಿಹೋಕರಲ್ಲ. ಬದಲಿಗೆ ಅಂತರರ್ಜಾಲ ಸುರಕ್ಷತೆಗಾಗಿ ಶ್ರಮಿಸಿ, ಅದರಲ್ಲಿ ಅಪಾರ ಜ್ಞಾನವುಳ್ಳವರೂ ಹಾಗೂ ಬೇರೆ ಬೇರೆ ಅಂತರ್ಜಾಲ ಸಂಬಂಧಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದವರಾಗಿರುತ್ತಾರೆ. ಇವರ ಆಯ್ಕೆ ಪ್ರಕ್ರಿಯೆ ಹಾಗೂ ಕೀಲಿಕೈ ಮಾರ್ಪಾಡುವಿಕೆಯ ಕೆಲಸ ಅತ್ಯಂತ್ಯ ಗೌಪ್ಯವಾಗಿ ನಡೆಯುತ್ತದೆ. ವರ್ಷಕ್ಕೆ ನಾಲ್ಕುಬಾರಿ ನಡೆಯುವ ಕೀ ಬದಲಾವಣೆಯ ಗೌಪ್ಯ ಕಾರ್ಯಕ್ರಮಕ್ಕೆ ‘key ceremony’ ಎಂದೇ ಹೆಸರು. ಈವರೆಗೆ ಎರಡು ಬಾರಿ ಈ ಕಾರ್ಯಕ್ರಮದ ವೀಕ್ಷಣೆಗೆ ಕೆಲ ಪತ್ರಕರ್ತರನ್ನೂ ಆಹ್ವಾನಿಸಲಾಗಿದೆ ಹಾಗೂ ಇದರ ಬಗ್ಗೆ ಬರೆದಿದ್ದಾರೋ ಅದಷ್ಟೇ ನಮಗೆ ತಿಳಿದಿರುವ ವಿಷಯ.

Key ceremoneyಯ ದಿನ ಒಂದೆಡೆ ಸೇರುವ ಈ ಏಳೂ ಜನರನ್ನು ಒಂದು ಅತೀವ ಸುರಕ್ಷತೆಯ ಕೋಣೆಯಲ್ಲಿ ಸೇರಿಸಲಾಗುತ್ತದೆ. ಆ ಕೋಣೆಗೆ ಹೋಗುವ ಮುನ್ನ ಬಹಳಷ್ಟು ಸುರಕ್ಷತಾ ಬಾಗಿಲುಗಳನ್ನು ದಾಟಿಯೇ ಹೊಗಬೇಕು. ಕೀಗಳು, ಫಿಂಗರ್ ಪ್ರಿಂಟ್, ಆಕ್ಸೆಸ್ ಕಾರ್ಡ್, ಐರಿಸ್ ಸ್ಕ್ಯಾನ್ ಮುಂತಾದ ಹಂತಗಳನ್ನು ದಾಟಿ ಆ ceremony ನಡೆಯುವ ಕೋಣೆಗೆ ತಲುಪುವ ಈ ‘ಅಂತರ್ಜಾಲ ವಾರಸುದಾರರು’ ತಂತಮ್ಮ ಕೀಗಳಿಂದ ಒಂದೊಂದ್ ಲಾಕರ್ ಡಬ್ಬವನ್ನು ತೆರೆಯುತ್ತಾರೆ. ಅದರೊಳಗೆ ಇಟ್ಟಿರುವ ತಂತಮ್ಮ ಸ್ಮಾರ್ಟ್-ಕಾರ್ಡುಗಳನ್ನು ತೆಗೆದುಕೊಳ್ಳುತ್ತಾರೆ. ಅವುಗಳನ್ನು ಉಪಯೋಗಿಸಲೂ ಒಂದೊಂದು ಪಾಸ್ವರ್ಡುಗಳನ್ನು ಆ ಕಾರ್ಡುಗಳ ಬಳಕೆದಾರರೇ ನಿರ್ಧರಿಸುತ್ತಾರೆ. ಈ ಏಳೂ ಸ್ಮಾರ್ಟ್ ಕಾರ್ಡುಗಳನ್ನು ಒಟ್ಟಿಗೆ ಉಪಯೋಗಿಸಿದಾಗ ಅಂತರ್ಜಾಲದ ಮಹಾದ್ವಾರವನ್ನು ತೆಗೆಯುವ ‘ಮಾಸ್ಟರ್ ಕೀ’ ದೊರೆಯುತ್ತದೆ. ಅದನ್ನು ಜನರೇಟ್ ಮಾಡಲೂ ಸುಮಾರು ನೂರಾಏಳು ಹಂತಗಳ ಕ್ರಮಸೂಚಿಯಿದೆ. ಇದೆಲ್ಲಾ ನಡೆಯುವುದು ಸುಮಾರು ಒಂಬತ್ತು ಜನ ನಿಲ್ಲಬಹುದಾದ ಸಣ್ಣ ಪಂಜರದಲ್ಲಿ ಹಾಗೂ ಒಂದಿಪ್ಪತು ಜನ ಕೂರಬಹುದಾದ ಸಣ್ಣ ಕೋಣೆಯಲ್ಲಿ. ಈ ಮಾಸ್ಟರ್ ಕೀ ಒಂದು ಪಾಸ್ವರ್ಡ್ ತರಹದ್ದೇನೋ ಆಗಿರುತ್ತದೆ. ಈ ಪಾಸ್ವರ್ಡ್ ಬಳಸಿದರೆ ಮಾತ್ರ ಮುಖ್ಯ ಡೇಟಾಬೇಸ್ ಅನ್ನು ಉಪಯೋಗಿಸಲು ಸಾಧ್ಯ.

ಓಹೋ ಸರಿ ಸರಿ. ಒಂದುವೇಳೆ ಈ ಮಾಸ್ಟರ್ ಕೀ ಜನರೇಟ್ ಮಾಡುವ ಯಂತ್ರವೇ ಏನಾದರೂ ಕೆಲಸಮಾಡುವುದನ್ನು ನಿಲ್ಲಿಸಿದರೆ ಏನು ಮಾಡುತ್ತಾರೆ ಅಂತಾ ಕೇಳ್ತೀರಾ? ICANN ಅದಕ್ಕೂ ಒಂದು ವ್ಯವಸ್ಥೆ ಮಾಡಿದೆ. ಅದೇನೆಂದರೆ, ಜಗತ್ತಿನಾದ್ಯಂತ ಹರಡಿಹೋಗಿರುವ ಇನ್ನೂ ಏಳು ಜನ ಈ ಇಡೀ ವ್ಯವಸ್ಥೆಗೆ ಸೂಪರ್ ಬ್ಯಾಕ್-ಅಪ್ ಆಗಿ ನಿಲ್ಲುವಂತಹ ವ್ಯವಸ್ಥೆ. ಒಂದು ವೇಳೆ ಈ ಮಾಸ್ಟರ್ ಕೀ ಜನರೇಟ್ ಮಾಡುವ ಯಂತ್ರ ಕೆಲಸಮಾಡುವುದನ್ನು ನಿಲ್ಲಿಸಿದರೆ, ಅಥವಾ ಏನಾದರೂ ಅವಘಡ ಸಂಭವಿಸಿದರೆ, ಅದನ್ನು ಪುನಃ ರಚಿಸಲು ಬೇಕಾಗುವ ಕಂಪೂಟರ್ ಪ್ರೋಗ್ರಾಮ್ ಅನ್ನು ಏಳು ಭಾಗಗಳಾಗಿ ವಿಂಗಡಿಸಿ ಈ ಏಳು ಜನರ ಮಧ್ಯೆ ಹಂಚಲಾಗಿದೆ. ಒಂದುವೇಳೆಯೇನಾದರೂ ICANNನ ಆಫೀಸೇನಾದರೂ ನಿರ್ನಾಮವಾದರೆ ಇನ್ನೊಂದು ಕಡೆ ಈ ಯಂತ್ರವನ್ನು ಪುನರ್ನಿಮಿಸಲು ಈ ಏಳು ಜನ ಒಂದಾಗುತ್ತಾರೆ. ವರ್ಷಕ್ಕೊಮ್ಮೆ ಈ ಏಳು ಜನ ತಾವು ಸುರಕ್ಷಿತವಾಗಿದ್ದೇವೆ ಹಾಗೂ ‘ಎಲ್ಲವೂ ಸರಿಯಿದೆ’ ಎಂದು ನಿರೂಪಿಸಲು, ತಮ್ಮ ಒಂದು ಭಾವಚಿತ್ರ, ಅಂದಿನ ದಿನಪತ್ರಿಕೆ ಮತ್ತು ತಮ್ಮ ಕೀ (ಕೋಡ್) ಅನ್ನು ICANN ಆಫೀಸಿಗೆ ಕಳಿಸುತ್ತಾರೆ. ಹೇಗಿದೆ ವ್ಯವಸ್ಥೆ!?

ಇದರ ಬಗ್ಗೆ ಹೆಚ್ಚಿನ ಆಸಕ್ತಿಯಿದ್ದರೆ, http://bit.ly/1pDUq3g ಇಲ್ಲಿ ಕ್ಲಿಕ್ಕಿಸಿ. ಅಲ್ಲೊಂದು ಸಣ್ಣ ವಿಡಿಯೋ ಕೂಡಾ ಇದೆ. ಇತ್ತೀಚೆಗೆ ನಡೆದ key ceremoneyಯೊಂದರ ದೃಶ್ಯ ತುಣುಕು ಕೂಡಾ ಇದೆ. ಓದಿ….ನೋಡಿ.

ಇಷ್ಟೆಲ್ಲಾ ಸರ್ಕಸ್ಸು ನಡೆಯುವುದು ನಾವು ನೀವು ನಿರಂತರವಾಗಿ ಅವಲಂಬಿತವಾಗಿರುವ ಅಂತರ್ಜಾಲವನ್ನು ಸುರಕ್ಷಿತವಾಗಿಸಲು ಹಾಗೂ ಅದರ ಮೇಲೆ ನಾವಿಟ್ಟಿರುವ ನಂಬಿಕೆಯನ್ನು ಹಾಗೆಯೇ ನಿಲ್ಲಿಸುವುದಕ್ಕಾಗಿ. ಜನರ ಜೀವನಗಳನ್ನು, ದೇಶಗಳ ಸರ್ಕಾರಗಳನ್ನು, ಜಗತ್ತಿನ ಇತಿಹಾಸವನ್ನೇ ಬದಲಾಯಿಸುವಷ್ಟರಮಟ್ಟಿಗೆ ಶಕ್ತಿಶಾಲಿಯಾಗಿರುವ ಅಂತರ್ಜಾಲವನ್ನು ನಂಬಿಕಾರ್ಹ ವೇದಿಕೆಯಾಗಿ ಉಳಿಸುವುದಕ್ಕಾಗಿ. ನಾವು ಇವೆಲ್ಲರ ತಲೆಬಿಸಿಯೇ ಇಲ್ಲದೆ, ಸುಮ್ಮನೆ ಗೂಗಲ್ಲಿಗೆ ಹೋಗಿ ನಮಗೆ ಬೇಕಾದ ವಿಷಯವನ್ನು ಟೈಪಿಸುತ್ತೇವೆ. ಅದು ಉತ್ತರಗಳನ್ನು ಕೊಡುತ್ತದೆ. ನಾವು ಅದನ್ನೇ ನಂಬಿ ಕ್ಲಿಕ್ಕಿಸುತ್ತೇವೆ. ಅಲ್ಲಿ ಏನಿದೆಯೋ ಇಲ್ಲವೋ ಒಂದೂ ಗೊತ್ತಿಲ್ಲದೆ ಗುರುತು ಪರಿಚಯವಿರದ ಹುತ್ತಕ್ಕೆ ಕೈ ಹಾಕುತ್ತೇವೆ. ಅದನ್ನೆಲ್ಲಾ ನಂಬಿಕಾರ್ಹವಾಗಿ ಉಳಿಸುವುದು ICANNನಂತಹ ಕೆಲ ಸಂಸ್ಥೆಗಳು. ಅವರಿಗೊಂದು ಸಣ್ಣ ಥಾಂಕ್ಸ್ ಕೊಡಲೇ ಬೇಕಲ್ಲವೇ?

 

ಚಿತ್ರಕೃಪೆ: ಆರೋನ್ ಟಿಲ್ಲಿ
Image courtesy: Aaron Tilley