ಬುದ್ಧಿಗೊಂದು ಗುದ್ದು – ೨೨

ದಯಾಮರಣಕ್ಕೊಂದು ಉತ್ಕರ್ಷದ ದಾರಿ:

ಒಂದು ಜೋಕು ಹೀಗಿದೆ:
‘ನಾನು ಸಾಯುವುದೇ ಆದರೆ, ನನ್ನಜ್ಜನಂತೆ ಶಾಂತವಾಗಿ ಸಂತೋಷದಿಂದ ನಿದ್ರೆಯಲ್ಲಿಯೇ ಮರಣಹೊಂದಬಯಸುತ್ತೇನೆ. ಅವನು ಚಲಾಯಿಸುತ್ತಿದ್ದ ಬಸ್ಸಿನ ಪ್ರಯಾಣಿಕರಂತೆ ಕಿರಿಚಾಡುತ್ತಾ ಅಲ್ಲ’.

ಕೆಲವು ಚಲನಚಿತ್ರಗಳಲ್ಲಿ ‘ನೀನು ಒಂದ್ಸಲ ಐ ಲವ್ ಯೂ ಅಂದ್ರೆ ನಾನು ಸಂತೋಷದಿಂದ ಹಾಗೇ ಪ್ರಾಣ ಬಿಟ್ಬಿಡ್ತೀನಿ’ ಅನ್ನೋ ಡಬ್ಬಾ ಡೈಲಾಗ್ ಕೂಡಾ ಕೇಳಿಬರುತ್ತೆ.

ಬರೀಮಾತಿಗೇ ಈ ಸಾಲುಗಳಾದರೂ, ‘ಸಂತೋಷದಿಂದ ಸಾಯುವುದು ಸಾಧ್ಯವಿದೆಯಾ?’ ಎಂದು ನಾನು ಯೋಚಿಸಿದ್ದುಂಟು. ಮೊನ್ನೆ ಏನೋ ಓದುವಾಗ ಎಡವಿ ಬಿದ್ದದ್ದು ಈ ವಿಷಯದ ಮೇಲೆ. ಅದೇನೆಂದರೆ, ‘ಯುಥನೇಷಿಯಾ ಕೋಸ್ಟರ್ (Euthanasia Coaster)’. ನೀವು ಗ್ರಹಿಸಿದಂತೆಯೇ, ಇದೊಂದು ರೋಲರ್-ಕೋಸ್ಟರ್. ಇವನ್ನು ನೀವು ವಂಡರ್-ಲಾ, ಅಪ್ಪುಘರ್, ಜಿಆರೆಸ್ ಪ್ಯಾಂಟಸಿ ಪಾರ್ಕುಗಳಲ್ಲಿ ನೋಡಿರುತ್ತೀರಿ. ವೇಗವಾಗಿ ಸುಯ್ಯೆಂದು ಮೇಲೆ ಹೋಗಿ, ರೊಯ್ಯೆಂದು ಕೆಳಗೆ ಬಂದು, ಅತ್ತಿತ್ತ ಓಲಾಡಿ, ನೀರಿನ ಮೇಲೆ ಓಡುತ್ತಾ ಬುಸ್ಸೆಂದು ನೀರು ಹಾರಿಸುತ್ತಾ, ಪ್ರಯಾಣಿಕರನ್ನು ಸಂತಸಗೊಳಿಸುವ ಇವನ್ನು ಯಾರನ್ನಾದರೂ ಕೊಲ್ಲಲೂ ಕೂಡಾ ಬಳಸಬಹುದು ಎಂದರೆ ನಂಬುತ್ತೀರಾ!? ಇಂತದ ಒಂದು ಸವಾರಿಯೇ ಯುಥನೇಷಿಯಾ ಕೋಸ್ಟರ್. ನಾವು ನೋಡಿರುವ ಕೋಸ್ಟರಿಗೂ, ಇದಕ್ಕೂ ಇರುವ ಒಂದೇ ವ್ಯತ್ಯಾಸವೆಂದರೆ, ಇದರ ಮೂಲ ಉದ್ದೇಶ ಮನರಂಜನೆಯಲ್ಲ…..ಸಾವು! ಆದರೆ ಸಂತೋಷದ ಸಾವು!!

ಯುಥನೇಷಿಯಾಕ್ಕೆ ಕನ್ನಡದಲ್ಲಿ ಉತ್ತಮ ಪದವೆಂದರೆ ದಯಾಮರಣ. ಗ್ರೀಕ್ ಭಾಷೆಯ ‘ಯು’ (ಒಳ್ಳೆಯ) ಹಾಗೂ ‘ಥನಾಟೋಸ್’ (ಮರಣ) ಎಂಬ ಪದಗಳಿಂದ ಹೊಮ್ಮಿರುವ ಪದ ಯುಥನೇಷಿಯಾ. ದಯಾಮರಣಕ್ಕೆ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ವ್ಯಾಖ್ಯಾನಗಳೂ, ಬೇರೆ ಬೇರೆ ಕಾನೂನುಗಳೂ ಇವೆ. ಉದಾಹರಣೆಗೆ ಬ್ರಿಟನ್ನಿನಲ್ಲಿ ವೈದ್ಯಕೀಯ ನೈತಿಕತಾ ಸಮಿತಿಯ ಪ್ರಕಾರ ದಯಾಮರಣ ಎಂದರೆ ‘ಪರಿಹರಿಸಲಾಗದ ನೋವನ್ನು ನಿವಾರಿಸಲು, ಜೀವನವನ್ನು ಕೊನೆಗಾಣಿಸುವ ಉದ್ದೇಶದಿಂದ ಕೈಗೊಂಡ ಉದ್ದೇಶಪೂರ್ವಕ ಹಸ್ತಕ್ಷೇಪ’. ಅದೇ ನೆದರ್ಲ್ಯಾಂಡಿನಲ್ಲಿ ಇದನ್ನು ‘ರೋಗಿಯ ಕೋರಿಕೆಯ ಮೇರೆಗೆ, ವೈದ್ಯರು ಜೀವನವನ್ನು ಅಂತ್ಯಗೊಳಿಸುವುದು’ ಎಂದು ವಿವರಿಸಲಾಗಿದೆ.

ದಯಾಮರಣದಲ್ಲಿ ಸ್ವಯಂಪ್ರೇರಿತ ದಯಾಮರಣ (Voluntary Euthanasia) ಮತ್ತು ಸ್ವಯಂಪ್ರೇರಿತವಲ್ಲದ ದಯಾಮರಣ (Non-Voluntary Euthanasia) ಎಂಬ ಎರಡು ಸ್ಥೂಲ ವಿಭಾಗಳಿವೆ. ಸ್ವಯಂಪ್ರೇರಿತ ದಯಾಮರಣದಲ್ಲಿ ರೋಗಿ ಸ್ವತಃ ತಾನಾಗಿಯೇ ದಯಾಮರಣವನ್ನು ಬಯಸುತ್ತಾನೆ. ತದನಂತರ ವೈದ್ಯರೊಬ್ಬರು ಅದನ್ನು ಕಾರ್ಯರೂಪಕ್ಕಿಳಿಸುವಲ್ಲಿ ಸಹಾಯಮಾಡುತ್ತಾರೆ. ಬೆಲ್ಜಿಯಂ, ಲಕ್ಸಂಬರ್ಗ್, ನೆದರ್ಲ್ಯಾಂಡ್ಸ್, ಸ್ವಿಟ್ಝೆರ್ಲ್ಯಾಂಡ್ ದೇಶಗಳಲ್ಲಿ ಹಾಗೂ ಅ.ಸಂ.ಸಂ(USA)ನ ಓರೆಗಾಂವ್ ಮತ್ತು ವಾಶಿಂಗ್ಟನ್ ರಾಜ್ಯಗಳಲ್ಲಿ ಈ ರೀತಿಯ ದಯಾಮರಣ ಕಾನೂನುಬದ್ಧ. ಅಸ್ವಯಂಪ್ರೇರಿತ ದಯಾಮರಣದಲ್ಲಿ, ರೋಗಿ ಯಾವುದೇ ಸಮ್ಮತಿ ಅಥವಾ ಅಸಮ್ಮತಿಯನ್ನು ಸೂಚಿಸಲು ಅಸಮರ್ಥನಾಗಿರುತ್ತಾನೆ ಹಾಗೂ ಬೇರೊಬ್ಬರು ರೋಗಿಯ ಪರವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ರೋಗಿ ಮಾತನಾಡಲಾರದ ಅಥವಾ ದೀರ್ಘಾವಧಿ ಕೋಮಾದಲ್ಲಿರುವುದು ಅಸ್ವಯಂಪ್ರೇರಿತ ದಯಾಮರಣದಡಿಯಲ್ಲಿ ಬರುತ್ತದೆ.

ಭಾರತದಲ್ಲಿ ಈ ಮೊದಲು ಎಲ್ಲರೀತಿಯ ದಯಾಮರಣಗಳು ಕಾನೂನುಬಾಹಿರವಾಗಿದ್ದವು. ಅರುಣಾ ಶಾನುಭಾಗ್ ಕೇಸಿನಲ್ಲಿ (http://bit.ly/1g67eho) ಆಕೆ 37 ವರ್ಷಗಳ ಕಾಲ ಅಲ್ಲಾಡಲೂ ಸಾಧ್ಯವಾಗದೇ ಆಸ್ಪತ್ರೆಯ ಹಾಸಿಗೆಯಲ್ಲೇ ಇದ್ದಾಗ, ಆಕೆ ಸ್ನೇಹಿತೆ ಅರುಣಾಳ ಪರವಾಗಿ ದಯಾಮರಣ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಳು. ಅವಳ ಕೋರಿಕೆಗೆ ಪ್ರತಿಕ್ರಿಯಿಸಿದ ನ್ಯಾಯಾಲಯ ಒಂದು ವೈದ್ಯಕೀಯ ಸಮಿತಿಯನ್ನು ರಚಿಸಿ, ಅದರ ಸಲಹೆ ಕೇಳಿತ್ತು. 7ನೇ ಮಾರ್ಚ್ 2011ರಂದು ದಯಾಮರಣ ಅರ್ಜಿಯನ್ನು ತಿರಸ್ಕರಿಸಿದ ಸರ್ವೋಚ್ಛ ನ್ಯಾಯಲಯ, ತನ್ನ ಮಹತ್ವದ ತೀರ್ಪಿನಲ್ಲಿ ಭಾರತ ದೇಶದಲ್ಲಿ ಪರೋಕ್ಷ ದಯಾಮರಣಕ್ಕೆ ಅನುವುಮಾಡಿಕೊಟ್ಟಿತು. ಪರೋಕ್ಷ ದಯಾಮರಣ ವೆದರೆ, ರೋಗಿಯ ಕೋರಿಕೆಯ ಮೇರೆಗೆ ಜೀವನದಾಯೀ ಔಷಧಗಳ ಪೂರೈಕೆಯನ್ನು ನಿಲ್ಲಿಸುವುದು. [ಇಲ್ಲಿ ಪರೋಕ್ಷ (passive) ಅನ್ನುವ ಪದಬಳಕೆ ಏಕೆಂದರೆ, ಇದೇ ರೀತಿಯಲ್ಲಿ Active Euthanasia ಕೂಡಾ ಇದೆ. ಈ ಕ್ರಿಯೆಯಲ್ಲಿ, ರೋಗಿಗೆ ವಿಷಕಾರಿ ಇಂಜೆಕ್ಷನ್ ನೋಡುವುದರ ಮೂಲಕ ದಯಾಮರಣಕ್ಕೆ ಅನುವುಮಾಡಿಕೊಡಲಾಗುತ್ತದೆ. ಸ್ವಿಟ್ಝೆರ್ಲ್ಯಾಂಡ್ ಮತ್ತು ಕೆಲ ದೇಶಗಳಲ್ಲಿ, ‘ಸಾವಿನ ಉದ್ದೇಶ ನಿಸ್ವಾರ್ಥತೆಯಿಂದ ಕೂಡಿದ್ದಲ್ಲಿ’ ಈ ರೀತಿಯ ದಯಾಮರಣಕ್ಕೆ ಕಾನೂನುರೀತ್ಯಾ ಅವಕಾಶವಿದೆ]

ಓಕೆ ಓಕೆ….ವಿಷಯಕ್ಕೆ ಬರೋಣ. 2011ರ ಡಬ್ಲಿನ್ನಿನ ವಿಜ್ಞಾನ ಗ್ಯಾಲರಿಯಲ್ಲಿ, ಲಂಡನ್ನಿನ ‘ರಾಯಲ್ ಕಾಲೇಜ್ ಆಫ್ ಆರ್ಟ್ಸ್’ನ ಪಿ.ಎಚ್.ಡಿ ವಿದ್ಯಾರ್ಥಿಯಾದ ಜೂಲಿಯೋನಸ್ ಊರ್ಬೋನಸ್ ಈ ‘ಯುಥನೇಷಿಯಾ ಕೋಸ್ಟರ್’ನ ಕಲಾತ್ಮಕ ಪರಿಕಲ್ಪನೆಯನ್ನು ಮುಂದಿಟ್ಟ (ಚಿತ್ರ 1). ಈ ಕಲ್ಪನೆ, ಈಗಾಗಲೇ ಅಸ್ತಿತ್ವದಲ್ಲಿರುವ ರೋಲರ್ ಕೋಸ್ಟರಿಗಿಂತಾ ಭಿನ್ನವಾಗೇನೂ ಇಲ್ಲ. ಕೆಲವೇ ಕೆಲವು ವ್ಯತ್ಯಾಸಗಳೆಂದರೆ, (೧) ಈ ಕೋಸ್ಟರಿನ ಗರಿಷ್ಟ ಎತ್ತರ ಸುಮಾರು 510ಮೀಟರ್; ಹಾಗೂ (೨) ಇದರ ಒಟ್ಟು ಉದ್ದ ಸುಮಾರು 7.5 ಕಿಲೋಮೀಟರುಗಳು. ಈ ರೋಲರ್-ಕೋಸ್ಟರ್ ತನ್ನ 2 ನಿಮಿಷದ ಒಟ್ಟು ಪ್ರಯಾಣದಲ್ಲಿ ಒಂದುಬಾರಿಗೆ 24 ಪ್ರಯಾಣಿಕರನ್ನು ಸ್ವರ್ಗಕ್ಕೆ (ಅಥವಾ ಇನ್ನೆಲ್ಲಿಗೋ) ತಲುಪಿಸಬಲ್ಲುದು.

ಕಾರ್ಯರೀತಿ:
ಈ ಕೋಸ್ಟರ್ ತನ್ನ 24 ಪ್ರಯಾಣಿಕರೊಂದಿಗೆ ಮೊದಲು ನಿಧಾನವಾಗಿ ಸಮತಲದಲ್ಲಿ ಚಲಿಸಿ ನಂತರ 510 ಮೀ. ಎತ್ತರದ ಕಡಿದಾದ ದಾರಿಯನ್ನು ನಿಧಾನವಾಗಿ ಮೇಲ್ಮುಖವಾಗಿ ಕ್ರಮಿಸುತ್ತದೆ. ತನ್ನ ಗರಿಷ್ಟ ಎತ್ತರದ ಬಿಂದುವನ್ನು ತಲುಪಿದ ನಂತರ, ಇದ್ದಕ್ಕಿಂದಂತೆ ಅತೀವ ಇಳಿಜಾರಿನ 510ಮೀ ದಾರಿಯಲ್ಲಿ ಇಳಿಯತೊಡಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೋಸ್ಟರ್ ಗಂಟೆಗೆ ಸುಮಾರು 360ಕಿಮೀಗಳಷ್ಟು ವೇಗವನ್ನು ಪಡೆಯುತ್ತದೆ. ಈ ಇಳಿಜಾರನ್ನು ಇಳಿದನಂತರ ಏಳು ಒಂದಕ್ಕಿಂತಾ ಒಂದು ಚಿಕ್ಕದಾಗಿರುವ) ತಿರುವುಗಳಲ್ಲಿ ಚಲಿಸುತ್ತದೆ. ಈ ಇಡೀ ಸವಾರಿಯಲ್ಲಿ ಪ್ರಯಾಣಿಕರು ಸುಮಾರು 10Gಗಳಷ್ಟು (ಸಾಮಾನ್ಯ ಗುರುತ್ವಬಲದ ಹತ್ತುಪಟ್ಟು) ಗುರುತ್ವಬಲದ ಪ್ರಭಾವಕ್ಕೆ ಒಳಗಾಗುತ್ತಾರೆ. ಇದರಿಂದಾಗಿ ಅವರ ಮೆದುಳಿಗೆ ರಕ್ತಸಂಚಾರ ನಿಧಾನವಾಗಿ ನಿಂತುಹೋಗುತ್ತದೆ. ಮೆದುಳಿಗೆ ರಕ್ತಸಂಚಾರವಿಲ್ಲದಾದಾಗ ಮಿದುಳಿಗೆ ಆಮ್ಲಜನಕದ ಪೂರೈಕೆಯಿಲ್ಲವಾಗುತ್ತದೆ. ಅದಿಲ್ಲದೆ ಮೆದುಳು ಕೆಲಸಮಾಡುವುದು ಅಸಾಧ್ಯ. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ಸೆರೆಬ್ರಲ್ ಹೈಪಾಕ್ಸಿಯಾ ಎಂದು ಕರೆಯುತ್ತಾರೆ. ಅರವತ್ತು ಸೆಕೆಂಡುಗಳ ಕಾಲ ಸೆರೆಬ್ರಲ್ ಹೈಪಾಕ್ಸಿಯಾ ಉಂಟಾದರೆ ಮೆದುಳು ಪುನಃ ಎಂದಿಗೂ ಸರಿಯಾಗಿ ಕೆಲಸಮಾಡಲಾಗದ ಸ್ಥಿತಿಗೆ ತಲುಪುತ್ತದೆ. ಯುಥನೇಷಿಯಾ ರೋಲರ್ ಕೋಸ್ಟರಿನ ಒಟ್ಟು ಪ್ರಯಾಣ 120 ಸೆಕೆಂಡುಗಳು! ಮೊದಲನೇ ಇಳಿಜಾರಿನಲ್ಲಿ ಪ್ರಯಾಣಿಕರ ದೃಷ್ಟಿ ಮಂಜಾಗುತ್ತದೆ, ಅಲ್ಲಿಂದ ಮುಂದೆ ಮೊದಲನೇ ಹಾಗೂ ಎರಡನೇ ಸುರುಳಿಗಳಲ್ಲಿ ನಿಧಾನವಾಗಿ ಮೆದುಳು ನಿಷ್ಕ್ರಿಯಗೊಂಡು, ಪ್ರಯಾಣಿಕರು g-LOC (ಗುರುತ್ವದಿಂದಾಗಿ ಉಂಟಾಗುವ ಅಪ್ರಜ್ಞಾವಸ್ಥೆ) ಸ್ಥಿತಿಗೆ ಜಾರುತ್ತಾರೆ. ಎಂಥ ಸೈರಣೆ ಇರುವ ಮನುಷ್ಯನಾದರೂ ಮೂರನೇ ಸುರುಳಿ ತಲುಪುವ ಹೊತ್ತಿಗೆ ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿರುತ್ತದೆ. ಮುಂದಿನ ಮೂರು ಸುರುಳಿಗಳನ್ನು, ಯಾವುದೇ ಅಸಹಜ ಪ್ರಕರಣಗಳಲ್ಲಿ ಪ್ರಯಾಣಿಕರು ಬದುಕುಳಿಯುವುದನ್ನು ತಪ್ಪಿಸಲೆಂದೇ ಸೇರಿಸಲಾಗಿದೆ.

ಜೀವನವನ್ನು ಕೊನೆಗಾಣಿಸುವುದು ಎಂದಿಗೂ ಸಂತಸದ ವಿಷಯವಲ್ಲ. ಆದರೆ ಎಲ್ಲರ ಜೀವನವೂ ಒಂದೇ ತರಾ ಇರೋಲ್ಲ. ಎಲ್ಲಾ ಮನುಷ್ಯರೂ ಜೀವನವನ್ನು ಒಂದೇ ತರಹ ಸ್ವೀಕರಿಸೋಲ್ಲ ಕೂಡಾ. ಕೆಲಸಂಧರ್ಭದಲ್ಲಿ ದಯಾಮರಣ ಸರಿಯೆಂದು ಕಂಡುಬರುವ ಸಾಧ್ಯತೆಯಿದೆ. ಅಂತಹ ಪ್ರಕರಣಗಳಲ್ಲಿ, ಆ ಕೊನೆಯ ಕೆಲ ಕ್ಷಣಗಳನ್ನು ಆದಷ್ಟೂ ನೋವಿಲ್ಲದಂತೆ ಮಾಡುವುದಕ್ಕಾಗಿ ಈ ಎಲ್ಲಾ ಸರ್ಕಸ್ಸುಗಳು. ದಯಾಮರಣ ಇಂದಿನ ವೈದ್ಯಕೀಯ ಜಗತ್ತಿನಲ್ಲಿ ಹಾಗೂ ವೈದ್ಯಕೀಯ ನೀತಿಶಾಸ್ತ್ರದ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಮಟ್ಟಿಗೆ ಚರ್ಚಿಸಲಾಗುತ್ತಿರುವ ವಿಷಯವಾಗಿದೆ.

ಇದರಬಗ್ಗೆ ಹೆಚ್ಚಿನ ಆಸಕ್ತಿ ಇದ್ದವರು ಕೆಳಗಿನ ಕೊಂಡಿಗಳನ್ನು ಪರಿಶೀಲಿಸಬಹುದು:
http://bit.ly/Ki6MwR
http://bit.ly/1kMt8X1
http://bit.ly/1zDJSZo
http://bit.ly/1zejYKD
http://bit.ly/1wDfU1Y

10679761_726094827480465_4435169976283812951_o

Advertisements

ಬುದ್ಧಿಗೊಂದು ಗುದ್ದು‬ – ೨೧

ಮೊದಲನೆಯದಾಗಿ…..ಎಷ್ಟು ಬೇಕಾದ್ರೂ ಉಗೀರಿ. ಯಾಕಂದ್ರೆ ದಿನಾ ಬರೀತೀನಿ ಅಂತಾ ಕೊಚ್ಕೊಂಡು, ಆಮೇಲೆ ಪಕ್ಕಾ ರಾಜಕಾರಣಿ ಥರಾ ಮಾತು ಉಳಿಸಿಕೊಳ್ಳದೇ ಕೈಕೊಟ್ಟು ಎಸ್ಕೇಪ್ ಆಗಿದ್ದೆ. ಕೇಳಿದವರಿಗೆಲ್ಲಾ, ಇದ್ದಿದ್ದು ಇಲ್ಲದ್ದು ಕೆಲ ಸುಳ್ಳುಗಳನ್ನೂ ಹೇಳಿದ್ದೆ, ಬ್ಯುಸಿ ಇದ್ದೀನಿ, ಹುಷಾರಿಲ್ಲ ಅಂತೆಲ್ಲಾ. ನಿಜ ಹೇಳ್ಬೇಕು ಅಂದ್ರೆ ಸೋಂಬೇರಿಯಾಗಿದ್ದೆ. ಮಧ್ಯ ಮಧ್ಯ ಆಗಾಗ (ನಿಜವಾಗ್ಲೂ….ನನ್ನ ನಂಬಿ ಪ್ಲೀಸ್) ಬ್ಯುಸಿನೂ ಇದ್ದೆ ಅನ್ನಿ. ಆದ್ರೂ ಈ ಕೆಲಸದ ಒತ್ತಡ, ಸಂಜೆ ಆರಕ್ಕೆ ಆಫೀಸ್ ಬಿಟ್ಟಮೇಲೆ ಜಿಮ್ಮು, ಕುಕ್ಕಿಂಗೂ, ತಿನ್ನಿಂಗೂ, ಅದರ ಮಧ್ಯ ಟೈಮ್ಸ್-ನೌ ಕಿರಿಚಾಟ ಕೇಳಿಂಗೂ ಅನ್ನುವಷ್ಟರಲ್ಲಿ, ನಿದ್ದೆ ಬರಿಂಗೂ 😦  ಹಾಗಾಗಿ ಬರೆಯೋಕೆ ಸಾಧ್ಯವೇ ನಾಟ್ ಆಗಿಂಗೂ. ಅದೂ ಅಲ್ದೆ, ಯಾವುದರ ಬಗ್ಗೆ ಬರೆದರೂ ಆ ವಿಷಯದ ಬಗ್ಗೆ ಚೆನ್ನಾಗಿ ರೀಸರ್ಚ್ ಮಾಡಿ ಬರೀಬೇಕು, ಜನ ಕೆಮ್ಮಗಿರಬಾರ್ದು ಅನ್ನೋ ನನ್ನ ಪಾಲಿಸಿಯನ್ನ ಪಾಲಿಸಿಕೊಂಡು ಬಂದವನು ನಾನು. ಕೆಲವೊಮ್ಮೆ ಅಂಕಣವನ್ನು ಟೈಪು ಮಾಡೋಕ್ಕಿಂತಾ ಹೆಚ್ಚು ಸಮಯ, ಸಂಶೋಧನೆಯಲ್ಲೇ ಹೊರಟು ಹೋಗುತ್ತೆ.

ನನಗ್ಗೊತ್ತು, ಈಗ ಏನೇ ಸಬೂಬು ಕೊಟ್ರೂ ಅವೆಲ್ಲಾ ಬರೇ ಸಬೂಬು ಮಾತ್ರವೇ ಅಂತಾ. ಅದಕ್ಕೇ ಇನ್ಮೇಲೆ ದಿನಕ್ಕೊಂದು ವಿಷಯ ಅಂತಾ ಹೆಡ್ಡಿಂಗು ಹಾಕ್ಕೊಂಡು, ನನ್ ಕಾಲ್ ಮೇಲೆ ನಾನೇ ಕಲ್ಲು ಎತ್ತಾಕೊಳ್ಳೋದು ಬೇಡ ಅಂತಾ ನಿರ್ಧರಿಸಿ ಇದಕ್ಕೆ “ಬುದ್ಧಿಗೊಂದು ಗುದ್ದು” ಅಂತಾ ಹೆಸರಿಡೋದು ಅಂತಾ, ನನ್ನ ನೇತೃತ್ವದಲ್ಲಿ ನಿಯುಕ್ತಿಗೊಂಡ ಏಕ ವ್ಯಕ್ತಿ ಆಯೋಗ ತೀರ್ಮಾನಿಸಿದೆ. ಆದ್ದರಿಂದ, ದಿನಕ್ಕೊಮ್ಮೆ ಬರೆಯಲಾಗದಿದ್ದರೂ, ಆಗಾಗ ಖಂಡಿತಾ ಬರೆಯುತ್ತಿರುತ್ತೇನೆ. ನಾನು ಬರೆದ ಎಲ್ಲಾ ಬರಹಗಳನ್ನೂ ಓದಿ ಲೈಕಿಸಿದ, ಕಮೆಂಟಿಸಿದ ಎಲ್ಲಾ ಓದುಗರಿಗೆ ಹಾಗೂ ನಿಲುಮೆಯ ನಿರ್ವಾಹಕ ಬಳಗಕ್ಕೆ ಪ್ರೀತಿಯ ನಮನಗಳು.

ಇವತಿನ ಗುದ್ದು ಒಂದು ಸಣ್ಣ ಇಂಗ್ಳೀಷ್ ಪಾಠ. ಈ ವಿಷಯ ಬಹಳಷ್ಟು ಜನರಿಗೆ ತಿಳಿದಿರಬಹುದು. ಆದರೂ, ಇನ್ನೊಮ್ಮೆ ಕೇಳಿಸ್ಕೊಳ್ಳಿ. ಗೊತ್ತಿಲ್ಲದವರಿಗೆ ತಿಳಿಸಿಕೊಡಿ.

ಬಹಳಷ್ಟು ಜನರಿಗೆ ಇಂಗ್ಳೀಷಿನಲ್ಲಿ discovery ಹಾಗೂ invention ಇವೆರಡೂ ಪದದ ಅರ್ಥ ತಿಳಿಯದೆ, ತಪ್ಪಾಗಿ ಬಳಸುವುದುಂಟು. ಕನ್ನಡದಲ್ಲಿ ಕಂಡುಹಿಡಿಯುವುದು ಮತ್ತು ಆವಿಷ್ಕಾರ ಎಂಬೆರಡು ಪದಗಳು ಬಳಕೆಯಲ್ಲಿದ್ದರೂ, ಆ ಪದಗಳು ಡಿಸ್ಕವರಿ ಮತ್ತು ಇನ್ವೆನ್ಶನ್ ಎಂಬ ಪದಗಳಿಗೆ ಎಲ್ಲಾ ಕಾಲದಲ್ಲೂ ಸಮಬಳಕೆಯ ಪದಗಳಾಗಿ ಬಳಕೆಯಾಗುವುದಿಲ್ಲ. ಹಾಗೂ ಇಂಗ್ಳೀಷಿನಲ್ಲಿ ಈ ಎರಡೂ ಪದಗಳಿಗೆ ಸಣ್ಣದೊಂದು ವ್ಯತ್ಯಾಸವಿದೆ. ಅದೇನೆಂದರೆ, Discovery ಎಂದರೆ, ಅದಾಗಲೇ ಅಸ್ತಿತ್ವದಲ್ಲಿದ್ದೂ ಜನರ ಕಣ್ಣಿಗೆ ಕಾಣದಿರದ ವಸ್ತು/ವಿಷಯಗಳನ್ನು ಕಂಡುಹಿಡಿದು ಪ್ರಚುರಪಡಿಸುವುದು. ಉದಾಹರಣೆಗೆ, ಕೊಲಂಬಸ್ ಅಮೇರಿಕಾವನ್ನು ಕಂಡುಹಿಡಿದದ್ದು Discovery. ರುಧರ್ಫೋರ್ಡ್ ನೂಟ್ರಾನ್ ಕಂಡುಹಿಡಿದದ್ದು ಕೂಡಾ ಡಿಸ್ಕವರಿಯೇ. ಎಚ್.ಐ.ವಿ ವೈರಸ್, ನೆಪ್ಚೂನ್ ಮತ್ತು ಪ್ಲೂಟೋ ಗ್ರಹಗಳು ಇವೆಲ್ಲವೂ ಡಿಸ್ಕವರಿಗಳೇ!

Invention ಅಂದರೆ, ಇದುವರೆಗೂ ಅಸ್ತಿತ್ವದಲ್ಲಿಲ್ಲದ ವಸ್ತುವೊಂದನ್ನು ಅಥವಾ ತಂತ್ರಜ್ಞಾನವನ್ನು ಹೊಸದಾಗಿ ಸೃಷ್ಟಿಸುವುದು ಅಥವಾ ಸಂಶ್ಲೇಷಿಸುವುದು. ಉದಾಹರಣೆಗೆ, ಮೊಬೈಲ್ ಫೋನ್ ಅನ್ನು ಡಿಸ್ಕವರ್ ಮಾಡಿದ್ದಲ್ಲ. ಇನ್ವೆನ್ಶನ್ ಮಾಡಿದ್ದು. ಕನ್ನಡದಲ್ಲಿ ಮೊಬೈಲ್ ಫೋನ್ ಅನ್ನು ಆವಿಷ್ಕರಿಸಲಾಯಿತು ಎಂದರೂ ಏನೂ ತಪ್ಪಿಲ್ಲ. ಆದರೆ ಇಂಗ್ಳೀಷಿನಲ್ಲಿ ಮೊಬೈಲ್ ಫೋನ್ ಅನ್ನು ಇನ್ವೆಂಟ್ ಮಾತ್ರ ಮಾಡಲು ಸಾಧ್ಯ 🙂  ನಾವು ಬರೆಯಲು ಉಪಯೋಗಿಸುವ ಪೆನ್, ನೀವು ಇದನ್ನು ಓದ್ತಾ ಇರೋ ಕಂಪ್ಯೂಟರ್, ಇದನ್ನು ನಾನು ಪೋಸ್ಟ್ ಮಾಡಿರೋ ಫೇಸ್ಬುಕ್ ಇವೆಲ್ಲವೂ ಇನ್ವೆನ್ಶನ್ ಗಳು.

ಮುಂದಿನ ಬಾರಿ ನೀವು ಏನನ್ನಾದರೂ ಡಿಸ್ಕವರಿ ಅಥವಾ ಇನ್ವೆನ್ಶನ್ ಮಾಡಿದಾಗ, ಈ ಮಾತು ನೆನಪಿರಲಿ.

ಕೊಸರು:

ಮೊದಲನೆಯದಾಗಿ, ‘ಕ್ರಿಸ್ಟೋಫರ್ ಕೊಲಂಬಸ್ ಅಮೇರಿಕಾವನ್ನು ಕಂಡುಹಿಡಿದನು….’ ಹೀಗಂತ ನಾವು ಆರನೇ ಕ್ಲಾಸಿನ ಸಮಾಜ ಪರಿಚಯದಲ್ಲಿ ಓದಿದ್ವಿ. ಆದರೆ ಕೊಲಂಬಸ್ ಕಂಡುಹಿಡಿದದ್ದು ವೆಸ್ಟ್ ಇಂಡೀಸ್ ಹಾಗೂ ಬಹಾಮಾಸ್ ದ್ವೀಪಗಳನ್ನಷ್ಟೇ. ಅದೂ ಕೂಡ ಪುಣ್ಯಾತ್ಮ ಆ ದ್ವೀಪಗಳು ಭಾರತಕ್ಕೆ ಸೇರಿದ ದ್ವೀಪಗಳು ಅಂತಾ ಸಿಕ್ಕಸಿಕ್ಕವರ ಹತ್ತಿರವೆಲ್ಲಾ ಜಗಳ ಮಾಡಿದ್ದ. ಅಮೇರಿಕಾದ ಮುಖ್ಯ ಭೂಭಾಗವನ್ನು ಕಂಡುಹಿಡಿದದ್ದು ಪ್ಲೋರೆಂಟೈನ್ ಮತ್ತವನ ತಂಡ ಹಾಗೂ ಅವರೆಲ್ಲರಿಗಿಂತಾ ಮುಖ್ಯವಾಗಿ ಅಮೆರಿಗೋ ವೆಸ್ಪುಸ್ಸಿ. ಅದಕ್ಕೆ ಅಮೇರಿಕಾಕ್ಕೆ ಅವನ ಹೆಸರನ್ನೇ ಇಟ್ಟಿದ್ದು! 😛  ಅದಕ್ಕೇ ಹೇಳೋದು ಜಗಳ ಮಾಡಬಾರ್ದು ಅಂತಾ 😉

ಎರಡನೆಯದಾಗಿ, ಆರ್ಯಭಟ ಸೊನ್ನೆಯನ್ನು ಕಂಡುಹಿಡಿದದ್ದು Discoveryಯಾ ಅಥವಾ Inventionನ್ನಾ ಅಂತಾ ಇನ್ನೂ ಗೊತ್ತಿಲ್ವಂತೆ 😉 🙂

ಹೀಗೇ ಒಂದು ಯೋಚನೆ:

ಪ್ರಕೃತಿ ತನ್ನ ಪ್ರಯೋಗಶಾಲೆಯಲ್ಲಿ ಒಂದು ದಿನ ‘ಡೈನೋಸಾರ್’ ಗಳನ್ನು ಸೃಷ್ಟಿಸಿತು. ಅವು ಭೂಮಿಯ ಮೇಲೆ ಸಾವಿರಾರು ವರ್ಷಗಳ ಕಾಲ ಬದುಕಿದವು. ಆದರೆ ಒಂದು ದಿನ ಪ್ರಕೃತಿ, ‘ಡೈನೋಸಾರುಗಳು ಈ ಭೂಮಿಗೆ ಹೇಳಿಮಾಡಿಸಿದ್ದಲ್ಲ’ ಎಂದು ನಿರ್ಧರಿಸಿ, ಅವನ್ನು ಇಲ್ಲಿಂದ ಅಳಿಸಿ ಹಾಕಿತು. ಯಾಕೆ ‘ಹೇಳಿ ಮಾಡಿಸಿದ್ದಲ್ಲ’ ಎಂದು ನಿರ್ಧರಿಸಿತು ಎಂದು ನಮಗೆ ತಿಳಿಯುವ ವಿಷಯವಲ್ಲ, ಬಿಡಿ. ಬಹುಷಃ ಅವುಗಳ ಆಹಾರಕ್ರಮ ಪ್ರಕೃತಿಯ ನಿಯಮಗಳಿಗನುಸಾರವಾಗಿರವಾಗಿಲ್ಲದಿರಬಹುದು, ಅಥವಾ ಅವುಗಳಿಂದ ಇಡೀ ಪ್ರಕೃತಿಯ ಸಮತೋಲನ ಬಿಗಡಾಯಿಸುತ್ತಿದ್ದಿರಬಹುದು.

ಉಲ್ಕಾಪಾತದಿಂದ ಡೈನೋಸಾರ್ ಗಳು ನಾಶವಾದವೆಂದು ವಿಜ್ಞಾನ ಹೇಳುತ್ತಾದರಾದರೂ, ನಾವು ತಿಳಿಯಬೇಕಾದ ಅಂಶವೆಂದರೆ, ಉಲ್ಕೆಗಳೇನೂ ಬುಲೆಟ್ಟಿನಂತೆ ಒಂದೊಂದೇ ಡೈನೋಸಾರನ್ನು ಗುರಿಯಿಟ್ಟು ಕೊಲ್ಲಲಿಲ್ಲ. ಉಲ್ಕಾಪಾತದಿಂದ ಉಂಟಾದ ಸ್ಪೋಟದಿಂದ ಬಹಳಷ್ಟು ಪ್ರಾಣಿಗಳು ಮರಣಹೊಂದಿದ್ದು ಹೌದು. ಆದರೆ, ಅದಕ್ಕಿಂತಲೂ ಮುಖ್ಯವಾಗಿ, ಸ್ಪೋಟದಿಂದ ಮೇಲೆದ್ದ ಧೂಳು ‘ನ್ಯೂಕ್ಲಿಯರ್ ವಿಂಟರ್’ನಂತಹ ವಾತಾವರಣವನ್ನು ಸೃಷ್ಟಿಸಿತು (ನ್ಯೂಕ್ಲಿಯರ್ ವಿಂಟರ್ – ಎಲ್ಲಾದರೂ ಪರಮಾಣು ಯುದ್ಧನಡೆದರೆ, ಅಣುಬಾಂಬ್ ಸ್ಪೋಟದಿಂದ ವಾತಾವರಣವೆಲ್ಲಾ ಧೂಳಿನಿಂದ ಮುಚ್ಚಿಹೋಗಿ, ಸೂರ್ಯನ ಕಿರಣಗಳು ನೆಲಮುಟ್ಟಲು ಸಾಧ್ಯವಿಲ್ಲದೇ ಹೋದಾಗ ಉಂಟಾಗುವ ಕೃತಕ ಚಳಿ). ಇದರಿಂದಾಗಿ, ದ್ಯುತಿಸಂಶ್ಲೇಷಣೆ ನಡೆಯದೆ ಆಹಾರತಯಾರಿಕೆ ನಿಂತುಹೋಗಿ ಹಾಗೂ ಸೂರ್ಯನ ಬೆಳಕಿಲ್ಲದೆ ಸಸ್ಯರಾಶಿಗಳು ಬೆಳೆಯಲು ಸಾಧ್ಯವಿಲ್ಲದೆ, ನಾಶವಾಗಿ, ಅವುಗಳ ಮೇಲೆ ಅವಲಂಬಿತವಾದ ಪ್ರಾಣಿಸಂಕುಲ ನಾಶವಾಗಿ…ಹೀಗೆಯೇ ಮುಂದುವರೆದು ಆಹಾರಸರಪಳಿಯ ತುತ್ತತುದಿಯಲ್ಲಿರುವ ಡೈನೋಸಾರ್ ಗಳು ಅಳಿದುಹೋದವು.

ಈ ಡೈನೋಸಾರುಗಳಲ್ಲಿ, ಸ್ಪೋಟದ ನಂತರ ಅಳಿದುಳಿದ ಕೆಲ ಪ್ರಭೇಧಗಳು, ತಮ್ಮ ಆಹಾರ ಅಭ್ಯಾಸವನ್ನು ಬದಲಾಯಿಸಿಕೊಂಡು ಬದುಕಲಾರಂಭಿಸಿದವು. ಈ ಬದಲಾವಣೆಯ ಕಾರಣದಿಂದ ಅವುಗಳ ವಿಕಾಸಪಥ ಕೂಡಾ ಬದಲಾಯಿತು. ತಮಗೆ ಸಿಕ್ಕಷ್ಟೇ ಆಹಾರ ತಿಂದು ಬೆಳೆದ ಈ ಪ್ರಭೇಧಗಳು, ಡೈನೋಸಾರುಗಳಂತೆ ಅಗಾಧ ಗಾತ್ರದಲ್ಲಿ ಬೆಳೆಯದೆ ಸಣ್ಣದಾಗಿಯೇ ಉಳಿದವು. ಬಹುಷಃ, ಅವುಗಳ ಗಾತ್ರವೇ ಅವನ್ನು ಉಳಿಯುವಂತೆ ಮಾಡಿತೇನೋ. ಇವತ್ತು ನಾವು ನಮ್ಮ ಮನೆಗಳಲ್ಲಿ ನೋಡುವ ಹಲ್ಲಿಗಳಿಂದ ಹಿಡಿದು, ಮೊಸಳೆ ಹಾಗೂ ಕೊಮೊಡೋ ಡ್ರಾಗನ್ ವರೆಗೆ, ನಮಗೆ ಕಾಣುವ ಸರೀಸೃಪಗಳೆಲ್ಲಾ, ಅಗಾಧ ಬಗೆಯ ಡೈನೋಸಾರುಗಳ ಮರಿಮೊಮ್ಮಕ್ಕಳೇ. ಪ್ರಕೃತಿಯ ನಿಯಮಗಳನ್ನು ಮೀರಿ ‘ನಾನೇ ದೊಡ್ಡವ, ನನ್ನ ಬಿಟ್ಟರಿಲ್ಲ’ ಎಂದು ಎದೆ ಸೆಟೆಸಿದವರನ್ನು, ದೈನೋಸಾರರ್ಗಳಂತೆಯೇ ಪ್ರಕೃತಿ ನಿರ್ದಾಕ್ಷಿಣ್ಯವಾಗಿ ಅಳಿಸಿಹಾಕಿದೆ.

ಇದೇ ರೀತಿ ಪ್ರಕೃತಿ ಒಂದು ದಿನ, ತನ್ನ ಪ್ರಯೋಗಶಾಲೆಯಲ್ಲಿ ಮಾನವರನ್ನ ಸೃಷ್ಟಿಸಿತು. ‘ಸೃಷ್ಟಿಸಿತು’ ಎಂದರೆ, ಮಂಗಗಳಾಗಿರುವುದರಿಂದ ಮುಂದುವರಿದು ಮಾನವರಾಗಲು ನಾವು ಯೋಗ್ಯರು ಎಂದು ಪ್ರಕೃತಿ ಅಪ್ರೂವ್ ಮಾಡಿತು. ಅದರ ನಂತರ ವಿಕಾಸಹೊಂದಿ, ಮನುಷ್ಯ ಈಗ ಆಹಾರ ಸರಪಳಿಯ ತುದಿಯತ್ತ ಮುಂದುವರೆಯುತ್ತಿದ್ದಾನೆ. ಮುಂದೊಂದು ದಿನ, ಬಹುಷಃ ಪ್ರಕೃತಿಗೆ ನಾವು ಈ ಭೂಮಿಯಲ್ಲಿ ಬದುಕಲು ಲಾಯಕ್ಕಾದವರಲ್ಲ ಎಂದನಿಸಿದ ದಿನ, ನಾವೂ ಕೂಡಾ…….

ಹೀಗೇ ಯೋಚಿಸಿತ್ತಿದ್ದಾಗ ನನಗನ್ನಿಸಿದ್ದು, ಇಷ್ಟೆಲ್ಲಾ ಪ್ರಯೋಗಗಳನ್ನು ಮಾಡಿದರೂ ಸಹ, ಪ್ರಕೃತಿ ವೀರ್ಯ ಹಾಗೂ ಅಂಡಾಣುವನ್ನು ಬೇರೆ ಬೇರೆಯಾಗಿಯೇ ಇಟ್ಟಿದೆ. ಸೃಷ್ಟಿಯಲ್ಲಿ ಅಲೈಂಗಿಕ ಪುರುತ್ಪಾದನೆ (Asexual reproduction) ಇದೆಯಾದರೂ, ಅದು ವಿಕಾಸಹೊಂದಿದ ಜೀವ ಪ್ರಭೇಧಗಳಲ್ಲಿ ಹೆಚ್ಚಿನ ಮಟ್ಟಿಗೆ ಕಂಡುಬರುವುದಿಲ್ಲ. ಇಲ್ಲಿ sexual reproduction ಅಂದರೆ ಲೈಂಗಿಕ ಪುನರುತ್ಪಾದನೆಯೇ ಅಗತ್ಯ ಹಾಗೂ ಅನಿವಾರ್ಯ.

ಪ್ರಕೃತಿಯ ತುಂಬೆಲ್ಲ ನಮಗೆ ಲೈಂಗಿಕ ದ್ವಿರೂಪತೆ (ಇಂಗ್ಳೀಷಿನಲ್ಲಿ ಇದಕ್ಕೆ sexual dimorphism ಎಂದೆನ್ನುತ್ತಾರೆ) ಎದ್ದು ಕಾಣುತ್ತದೆ. ಹೆಣ್ಣು-ಗಂಡು ವರ್ಗಗಳು ಎಲ್ಲಾರೀತಿಯಲ್ಲಿಯೂ, ಅಂದರೆ ಬಣ್ಣ, ರಚನೆ, ಶಕ್ತಿ, ವರ್ತನೆ, ಅಲಂಕಾರ, ಸಂತಾನೋತ್ಪತ್ತಿಯ ಅಂಗರಚನೆ ಎಲ್ಲವೂ ವಿಭಿನ್ನವಾಗಿರುವುದು ಕಂಡುಬರುತ್ತದೆ. ಇದು ಬರೀ ಒಂದು ಪ್ರಭೇದಕ್ಕಲ್ಲ, ಸಸ್ಯಸಂಕುಲಕ್ಕೂ ಸೇರಿದಂತೆ ಇಡೀ ಪ್ರಕೃತಿಯ ತುಂಬೆಲ್ಲಾ ಇದೇ ತುಂಬಿದೆ. ಆ ಪ್ರಭೇಧ ಮುಂದುವರಿಯಲು ಗಂಡು ಮತ್ತು ಹೆಣ್ಣು ಎರಡರ ಅಗತ್ಯವೂ ಇದೆ. ಎಲ್ಲಾ ಪ್ರಭೇಧಗಳು ಜೋಡಿಯಾಗಿಯೇ ವಿಕಾಸಹೊಂದಿರುವುದೇಕೆ ಎಂಬ ಪ್ರಶ್ನೆಗೆ ಇಂದಿಗೂ ಸಮರ್ಪಕವಾದ ಉತ್ತರ ಸಿಕ್ಕಿಲ್ಲ.

ಪ್ರಕೃತಿಯ ಈ ನಿಯಮವನ್ನು ಮುರಿದರೆ, ಆ ಪ್ರಭೇದ ನಾಶದೆಡೆಗೆ ಒನ್-ವೇ ಟಿಕೆಟ್ಟು ತೆಗೆದುಕೊಂಡಂತೆ. ಪ್ರಕೃತಿಯ ನಿಯಮ ಹೀಗಿದ್ದಾಗ, ನಮ್ಮ ಸುತ್ತಮುತ್ತಲಿನ ಕೆಲವರು ಹೆಣ್ಣೇ ಶ್ರೇಷ್ಟ, ಗಂಡೇ ಶ್ರೇಷ್ಟ ಎಂದು ಸ್ತ್ರೀವಾದ, ಪುರುಷವಾದಗಳನ್ನು ಮುಂದಿಟ್ಟುಕೊಂಡು ಕೂಗಾಡುವುದನ್ನು ಕಂಡಾಗ, ನನಗೆ ಬಹಳ ಆಶ್ವರ್ಯವಾಗುವುದುಂಟು 🙂 ಗಂಡೆಂದರೆ ಬರೀ ಕ್ರೂರಿ, ಭಾವನಾರಹಿತ ಪ್ರಾಣಿ ಎಂದೆಲ್ಲಾ ಹೇಸಿಗೆಪಟ್ಟು, ಅವನನ್ನು ವರ್ಣಿಸಲೂ ಒಳ್ಳೆಯ ನಾಲ್ಕು ಮಾತು ಸಿಗದ ಜನರೂ ನಮ್ಮ ಮಧ್ಯೆ ಇದ್ದಾರಲ್ಲ ಎಂದು ನನಗೆ ನಗು ಬರುವುದುಂಟು. ಹಾಗೆಯೇ ಹೆಣ್ಣೆಂದರೆ ಮಹಾ ಕೋಮಲೆ, ತೊಂಡೆಹಣ್ಣ ತುಟಿ, ನಾಚಿಕೆಯ ಸ್ವಭಾವ, ಸದಾ ಅತ್ಯಾಚಾರಕ್ಕೆ ಹಾಗೂ ತುಳಿತಕ್ಕೊಳಗಾದವಳು ಎನ್ನುವ ಕಲ್ಪನೆ ಬಿಟ್ಟರೆ ಬೇರೇನೂ ಮನಸ್ಸಿಗೆ ಸುಳಿಯದಿರದವರೂ ನಮ್ಮ ಮಧ್ಯೆಯೇ ಇದ್ದಾರೆ ಎಂದು ನೆನಪಾಗಿ ಹಣೆಚಚ್ಚಿಕೊಂಡದ್ದೂ ಉಂಟು. ಪ್ರಕೃತಿಗೇ ಕಾಣದ ಮೇಲು ಕೀಳು ಈ ಬುದ್ಧಿಜೀವಿಗಳಿಗೆ ಕಂಡಿದ್ದು ಈ ಸಹಸ್ರಮಾನದ ಅತ್ಯಂತ ಆಶ್ವರ್ಯಕರ ವಿಷಯವೇ ಸರಿ. ಯಾವತ್ತು ಇವರಿಗೆ ಪ್ರಕೃತಿ ಅರ್ಥವಾಗುತ್ತದೋ, ಪ್ರಕೃತಿಗೂ ಬಹುಷಃ ತಿಳಿದಂತಿಲ್ಲ 🙂 🙂

ಗುಟ್ಟಿನ ಮಾತು:

ಪ್ರಕೃತಿಯಲ್ಲಿ ಕೆಲವು ಪ್ರಾಣಿಪ್ರಭೇದಗಳು ಲಿಂಗ ಬದಲಾವಣಾ ಸಾಮರ್ಥ್ಯವನ್ನು ಹೊಂದಿವೆ. ಅಂದರೆ ಅವು ಹೆಣ್ಣು ಮತ್ತು ಗಂಡು ಎರಡರಂತೆಯೂ ಕಾಣಬಲ್ಲವು ಹಾಗೂ ವರ್ತಿಸಬಲ್ಲವು ಸಹಾ. ಕೆಲವು ಪ್ರಾಣಿಗಳಿಗೆ ಪುರುಷ ಹಾಗೂ ಸ್ತ್ರೀ ಪುನರುತ್ಪಾದಕ (ಎರಡೂ) ಅಂಗಗಳೂ ಇರುತ್ತವೆ! ತಾವು ಯಾರ ಜೊತೆಗಿದ್ದೇವೆ ಎಂಬುದರ ಮೇಲೆ ಅವಲಂಬಿತವಾಗಿ ಆ ಪ್ರಾಣಿಗಳು ಗಂಡು ಅಥವಾ ಹೆಣ್ಣಿನಂತೆ ವರ್ತಿಸುತ್ತವೆ!!! ಕೆಲಪ್ರಾಣಿಗಳು ಹುಟ್ಟುವಾಗ ಗಂಡಾಗಿದ್ದು ಬೆಳೆಯುತ್ತಾ ಬೆಳೆಯುತ್ತಾ ಹೆಣ್ಣಾಗುವುದೂ ಇದೆ! ಗಂಡಾಗಿ ಹುಟ್ಟಿ, ಹೆಣ್ಣಾಗಿ ಪರಿವರ್ತನೆ ಹೊಂದಿ ಮತ್ತೆ ತಿರುಗಿ ಗಂಡಾಗಬಲ್ಲ ಪ್ರಭೇದಗಳು ಇವೆ! ಇಂತಹ ಪ್ರಾಣಿಗಳಿಗೆ hermaphrodites ಎಂದು ಕರೆಯಲಾಗುತ್ತದೆ. ಕನ್ನಡದಲ್ಲಿ ಇದಕ್ಕೆ ಯಾವುದೇ ಸಮರ್ಪಕವಾದ ವೈಜ್ಞಾನಿಕ ಹೆಸರೂ ಇಲ್ಲದಿದ್ದರೂ, ಬಹುಷಃ ಇವನ್ನು ಉಭಯಲಿಂಗಿಗಳೆಂದು ಕರೆಯಬಹುದೇನೋ. ಗ್ರೀಕ್ ಪುರಾಣದಲ್ಲಿ ಕಂಡುಬರುವ -‘ರತಿ-ಮನ್ಮಥ’ರಿಗೆ ಸಮಾನದೇವತೆಗಳಾದ- ಅಫ್ರೋಡೈಟ್ ಮತ್ತು ಹರ್ಮಿಸ್ ರ ಮಗನಾದ ‘ಹರ್ಮಾಫ್ರೋಡಿಟೋಸ್’ ಹುಟ್ಟುವಾಗಲೇ ಉಭಯಲಿಂಗಿಯಾಗಿದ್ದರಿಂದ ಅವನ ನೆನಪಿನಲ್ಲಿ ಈ ಹೆಸರನ್ನು ಹೆಕ್ಕಲಾಗಿದೆ.

ಆದರೆ, ಇವೆಲ್ಲಾ ವಿಚಿತ್ರಗಳ ನಡುವೆಯೂ, ಪುನರುತ್ಪಾದನೆಗೆ ಗಂಡು ಹಾಗೂ ಹೆಣ್ಣು ‘ಎರಡರ’ ಅಗತ್ಯತೆ ಅನಿವಾರ್ಯ. ತಾನೇ ಹೆಣ್ಣಾಗಿ ಹಾಗೂ ತಾನೇ ಗಂಡಾಗಿಯೂ ಭಾಗವಹಿಸಿ, ಪುನರುತ್ಪಾದನೆ ಮಾಡಬಲ್ಲ ಜೀವ ಪ್ರಭೇದ ಇಡೀ ಪ್ರಕೃತಿಯಲ್ಲಿ ಯಾವುದೂ ಇಲ್ಲ. ಅಂದ ಮೇಲೆ ಹೆಣ್ಣೇ ಮೇಲು, ಗಂಡೇ ಮೇಲು ಎನ್ನುವ ವಾದ ಕೈಬಿಡಿ. ಪ್ರಕೃತಿಯನ್ನು ಅರಿಯುವ, ಅದರ ರಹಸ್ಯವನ್ನು ಬಿಡಿಸುವ ಕೆಲಸದಲ್ಲಿ ನಿರತರಾಗಿ 🙂