ಕನ್ನಡ ಟಿವಿ ಮಾಧ್ಯಮ ಮತ್ತದರ ಆಷಾಡಭೂತಿತನ

ಅತ್ಯಾಚಾರದ ಕಮೆಂಟಿಗೆ ಟೀವಿಯಲ್ಲಿ ನಡೆದ ಚರ್ಚೆಯಲ್ಲಿ ದೇವಸ್ಥಾನಗಳಲ್ಲಿ ಒಳಗೆ ಹೋಗೋಕೆ ಶೂದ್ರರಿಗೆ ಅವಕಾಶವಿಲ್ಲದರ ಬಗ್ಗೆ ಮಾತುಕಥೆ. ಇದೇನು ವಿ.ಆರ್ ಭಟ್ಟರ ಬಗ್ಗೆ ಚರ್ಚೆಯೋ ಅಥವಾ ಬೇರೆ ಇನ್ಯಾವುದರ ಬಗ್ಗೆಯೋ!?

ತಮ್ಮ ಧರ್ಮದ ಹೆಂಗಸರಿಗೇ ಮಸೀದಿಗೆ ಪ್ರವೇಶ ಕೊಡದ, ‘ಹಿಜಾಬ್ ಹಾಕದಿದ್ದರೆ ರೇಪ್ ಮಾಡಿ’ ಎಂದು ಕರೆಕೊಡುವ ಮೌಲ್ವಿಗಳನ್ನು ಸಮರ್ಥಿಸುವವರಿಂದ ಇಂತಹ ಪ್ರವಚನ ಕೇಳೋಕೆ ಬಹಳ ಹಾಸ್ಯಾಸ್ಪದವಾಗಿದೆ.

ಇವತ್ತು ಹೆಚ್ಚುಕಮ್ಮಿ ಎಲ್ಲಾ ಟೀವಿ ವಾಹಿನಿಗಳಲ್ಲಿ ನಡೆದ ಚರ್ಚೆಗಳಲ್ಲಿ ನನಗೆ ಖುಷಿ ತಂದ ಸಂಗತಿಯೆಂದರೆ, ಈ ಫೇಸ್ಬುಕ್ ಯುದ್ಧದಲ್ಲಿ ‘ಸಂತ್ರಸ್ತೆ’ಯಾದ ಪ್ರಭಾ ಎಂಬುವವರು, ಅವರ ಬೆಂಬಲಕ್ಕೆ ಬಂದ ಸಾಮಾಜಿಕ ‘ಓ’ರಾಟಗಾರರು ಎಂತಹ ಅತಿಬುದ್ಧಿವಂತರು ಎಂದು ತಿಳಿದು ಬಂದದ್ದು. ಅವರ ಪ್ರತಿಯೊಂದು ಮಾತಿಗೂ ಬಿದ್ದು ಬಿದ್ದು ನಗುವಷ್ಟು ಸರಕು ಅಲ್ಲಿತ್ತು.

“ವಿ.ಆರ್ ಭಟ್ಟರ ಕಮೆಂಟಿಗೆ ನಿಮ್ಮ ಬೆಂಬಲಿಗರು ಅವರಿಗೂ, ಅವರ ಮನೆಯ ಮಕ್ಕಳಿಗೂ ಕೆಟ್ಟಾ ಕೊಳಕಾ ಬೈದಿದ್ದಾರಲ್ರೀ!?” ಅಂತಾ ಕೇಳಿದ್ದಕ್ಕೆ, ‘ಅವರು ಮಾಡಿದ ಕಮೆಂಟಿನಿಂದ ಸಿಟ್ಟಿಗೊಳಗಾಗಿ ಕೆಲವರು ಹಾಗೆ ಬರೆದಿರಬಹುದು. ಅದು ಅವರು ಕೋಪದಲ್ಲಿ ಆಡಿದ ಮಾತುಗಳು. ಅದಕ್ಕೆ ಹಾಗೆಲ್ಲಾ ಬೆಲೆಕೊಡಲಾಗದು’ ಎಂದರು. ಅಂದರೆ ಇವರು ಬರೆದ ಲೇಖನ ‘ವೈಚಾರಿಕಪೂರ್ಣ’ ಹಾಗೂ ‘ಘನತೆವೆತ್ತದ್ದು’. ಅದರ ಪ್ರಖರತೆಗೆ ಯಾರಾದರೂ ಕೆಮೆಂಟು ಮಾಡಿದರೆ ತಪ್ಪು. ಆದರೆ, ಆ ಕಮೆಂಟಿನ ಮೇಲೆ ಉಳಿದವರು ಹೇಗೆ ಕಮೆಂಟು ಮಾಡಿದರೂ ಅವೆಲ್ಲಾ ಸರಿ.

ಅನುತ್ಪಾದಕ ಪುರೋಹಿತಶಾಹಿ ಎಂದು ಈಕೆ ಬರೆದದ್ದು ಎಲ್ಲಾ ಪುರೋಹಿತರನ್ನು ಸೇರಿಸಿ ಅಲ್ವಂತೆ. ಕೆಲವರನ್ನು ಮಾತ್ರವಂತೆ. ಆದರೆ ಭಟ್ ಕಮೆಂಟು ಹಾಕಿದ ಕೂಡಲೇ ಇಡೀ ಆರೆಸ್ಸಿಸ್ಸಿನ ಮೇಲೆ ಗೂಬೆ ಕೂರಿಸುವ ಈ ಗುಂಪು ತಮ್ಮನ್ನು ತಾವು ವೈಚಾರಿಕರು ಎಂದು ಕರೆದುಕೊಳ್ಳುವುದು ಹಾಸ್ಯಾಸ್ಪದವಾಗಿದೆ. ತಮ್ಮ ವಾದ ದುರ್ಬಲವಾದ ಕೂಡಲೇ ಹಾಗೇ ಲೆಫ್ಟು ತಗೊಂಡು ದಲಿತ, ಶ್ರಮ, ಶೂದ್ರ, ಅಂಬೇಡ್ಕರ್ ಅಂತಾ ಹೇಳಿ ಮಾತು ಕರಗಿಸಿಯಾಯ್ತು.

As usual, ಈ ಚರ್ಚೆಯಲ್ಲೂ ಮೋದಿ ಬರ್ಲೇ ಬೇಕಿತ್ತು. ಬಂದ ಕೂಡ. ಇರೋದು, ಇಲ್ಲದಿರೋದು ಎಲ್ಲಾ ಸೇರಿಸಿ ಕರುಣಾಜನವಾದ ಕತೆ ಮಾಡಿ ಪ್ಯಾಕೇಜ್ ಮಾಡಿಯಾಯ್ತು. ಚಿನಾವಣೆ ಸಂದರ್ಭದಲ್ಲಿ ‘ಮೋದಿಗೆ ವೋಟು ಹಾಕದಿದ್ದ ಮೇಲೆ ನೀನು ಹಿಂದೂನೇ ಅಲ್ಲ. ನೀನು ಪಾಕಿಸ್ತಾನಕ್ಕೆ ಹೋಗು ಅಂತೆಲ್ಲಾ ಹೇಳಿದ್ರು’ ಅಂತೆಲ್ಲಾ ಇಲ್ಲದ ಪುರಾಣವನ್ನೆಲ್ಲಾ ಮಾಡಿ ಒಂದು ಧಾರಾವಾಹಿಗಾಗುವಷ್ಟು ಸರಕು ರೆಡಿಯಾಗಿತ್ತು. ಟೀವಿಯವರೂ ಕಾಯ್ತಾ ಇದ್ರು. ಮಿಕ ಹಳ್ಳಕ್ಕೆ ಬೀಳುತ್ತಿದ್ದಂತೆಯೇ ಎಲ್ರೂ ಆಳಿಗೊಂದು ಕಲ್ಲು ಹೊಡೆದಾಯ್ತು. ಒಬ್ಬರಂತೂ ಟೀವಿಯಲ್ಲಿ 45 ನಿಮಿಷಚರ್ಚೆ ಮುಗಿದ ಮೇಲೆ ಕಾಲ್ ಮಾಡಿ ‘ಏನು ಮೇಡಂ!? ಹೇಗಿದ್ದೀರ!? ಏನಿದು ಗಲಾಟೆ’ ಅಂತಾ ಲೋಕಾಭಿರಾಮವಾಗಿ ಯಾರೋ ಸ್ನೇಹಿತರ ಕಷ್ಟಸುಖ ವಿಚಾರಿಸುವವರ ಹಾಗೆ ಕೇಳಿದಾಗ ಟೀವಿ ನಿರೂಪಕಿಯ ಮುಖ ನೋಡಬೇಕಿತ್ತು. ‘ಇಷ್ಟೊತ್ತಿನ ಬಗ್ಗೆ ಅದೇ ನಾವು ಮಾತಾಡಿದ್ದು. ನೀವು ಈಗ ಕೇಳ್ತಿದ್ದೀರಲ್ಲ!’ ಅಂತಾ ಆಕೆ ಗೊಣಗಿದ್ದು ಮಜಾ ಇತ್ತು.

ಇಷ್ಟೆಲ್ಲಾ ಜೋಕುಗಳ ನಡುವೆಯೂ, ಕೆಲವು ವಿಚಾರಗಳಿಗೆ ಬೇಸರ ಕೂಡ ಆಯ್ತು. ಒಂದೇ ಒಂದು ಚಾನೆಲ್ಲಿನವರು ‘ನೀವು ಹೋದ ವಾರವೆಲ್ಲಾ ಎಲ್ಲಿದ್ರೀ ಸಾರ್, ಮೇಡಂ!?’ ಅಂತಾ ಕೇಳಲಿಲ್ಲ. ಇದಕ್ಕೂ ಮುಂಚೆ ಇಂತಹುದೇ ಹಲವಾರು ಪ್ರಕರಣಗಳು ಬೆಳಕಿಗೆ ಬಂದಾಗ ಯಾರೂ ಮಾತಾನಾಡಲಿಲ್ಲವಲ್ಲ ಯಾಕೆ!? ಇಲ್ಲಿ ‘ಆರೋಪಿ’ಯ ಹೆಸರಿನಲ್ಲಿ ಭಟ್ ಎಂದು ಇರುವುದಕ್ಕಾಗಿಯೇ!? ಅಂತ ಒಬ್ಬ ನಿರೂಪಕಿಯೂ ಉಸಿರೆತ್ತಲಿಲ್ಲ. ಇಷ್ಟಕ್ಕೂ ಈ ಭಟ್ಟರ ಕಮೆಂಟಿಗೆ ಮೂಲವಾದ ಪೋಸ್ಟ್ ಏನು? ಅದರಲ್ಲಿ ಬಂದ ವಿಷಯಗಳೇನು? ಅದನ್ನು ಬರೆದ ಪ್ರಭಾ ಅವರಿಗೆ ಅದ್ಯಾಕೆ ಶ್ರಮಸಂಸ್ಕೃತಿಗೂ, ವೈಚಾರಿಕತೆಗೂ ಮಧ್ಯೆ ಇರುವ ದೊಡ್ಡ ಕಂದಕದ ಅರಿವೇಕಾಗಲಿಲ್ಲ ಎಂಬುದನ್ನು ನಿಗೂಡವಾಗಿಯೇ ಇಡಲಾಯಿತು. ಅವರ ಬರಹದಲ್ಲಿರುವ ಹುಳುಕಾಗಲೀ, ಪ್ರಭಾ ಅವರ ವಿಚಾರಧಾರೆಯಲ್ಲಿರುವ ದ್ವಂದ್ವಗಳಾಗಲೀ ಯಾರಿಗೂ ಕಾಣಲಿಲ್ಲ. ಪುರೋಹಿತಶಾಹಿಯ ಬಗ್ಗೆ ಮಾತನಾಡುತ್ತಲೇ, ‘ನಾನೂ ಪುರೋಹಿತರ ಮಗಳು’ ಎಂದು ಪ್ರಭಾ ಹೇಳಿದ್ದು ಯಾರಿಗೂ ಕಾಣಲಿಲ್ಲ, ಕೇಳಲಿಲ್ಲ. ಯಾಕೆ ಈ ಸೋ ಕಾಲ್ಡ್ ಸಮಾಜ ಕಾರ್ಯಕರ್ತರೆಲ್ಲಾ ಒಂದಕ್ಕೊಂದು ಸಂಬಂಧವೇ ಇಲ್ಲದ ‘ಪುರೋಹಿತಶಾಹಿ’, ‘ವೈಚಾರಿಕತೆ’, ‘ಶೂದ್ರ’, ‘ಜಾತಿ’, ‘ವಿಜ್ಞಾನ’ ಮುಂತಾದ ಪದಗಳನ್ನು ಮತ್ತೆ ಮತ್ತೆ ಬಳಸ್ತಾರೆ? ಭಟ್ಟರ ಕಮೆಂಟು ಆರೆಸ್ಸೆಸ್ಸಿನ ಕಮೆಂಟೂ ಒಂದೇ ಅಂತೀರಲ್ಲ ಹಾಗಾದರೆ ದಿನೀಶ್ ಹೇಳಿದ್ದೆಲ್ಲಾ ಸರ್ಕಾರಿ ಕಮೆಂಟೇ? ಎಂದು ಕೇಳಲು ಒಬ್ಬನೇ ಒಬ್ಬ ನಿರೂ’ಪೆ’ಕರೂ ಮುಂದೆ ಬರಲಿಲ್ಲ.

ಬರೀ ಈ ಒಂದು ಕಮೆಂಟಿಗೆ ವಿ.ಆರ್. ಭಟ್ಟರ ಜನ್ಮಜಾಲಾಡಿ, ಆತ ಅದ್ಯಾವತ್ತೋ ಸಿಗರೇಟು ಸೇದುತ್ತಿದ್ದ ಚಿತ್ರವನ್ನೂ, ಆರೆಸ್ಸಿಸ್ಸಿನ ಸಭೆಯ ಚಿತ್ರವನ್ನೂ (ಅದರ ಅಗತ್ಯ ಕಂಡುಬರಲಿಲ್ಲವಾದರೂ) ಚಪಾತಿಯಂತೆ ತಿರುತಿರುವಿ ಹಾಕಿ ಮಾನ ಕಳೆದು, ಅವರ ಹಳೆಯ ಪೋಸ್ಟುಗಳನ್ನೆಲ್ಲಾ ಬೀದಿಗೆಳೆದು, ಕನ್ನಡದ ಚಾನೆಲ್ಲುಗಳ್ಯಾವುವೂ, ಯಥಾಪ್ರಕಾರ, ನಂಬಲರ್ಹವಲ್ಲ ಎಂಬುದನ್ನು ಇವತ್ತಿನ ಶೋಗಳು ತೋರಿಸಿ ಕೊಟ್ಟವು. ಚರ್ಚೆಯ ಇನ್ನೊಂದು ಬದಿಯಾದ ಪ್ರಭಾ ಅವರ ‘ಶ್ರೇಷ್ಟ’ಗುಣಮಟ್ಟದ, ಸಾಮಾಜಿಕ ಕಳಕಳಿಯ, ಸಮಾಜಕ್ಕೆ ದಾರಿದೀಪವಾಗುವಂತಹ ಯಾವುದೇ ಪೋಸ್ಟುಗಳಾಗಲೀ, ಅವರ ಹಿಂದಿನ ವಾಗ್ಯುದ್ದದ ಸ್ಯಾಂಪಲ್ಲುಗಳಾಗಲೀ ಹೊರಬರಲೇ ಇಲ್ಲ. ಆಕೆಯೂ ಸಹ ‘ನಾನೊಬ್ಬ ಹೆಣ್ಣು’ ಎನ್ನುತ್ತಾ victim ಆಗಲು ಪ್ರಯತ್ನಿಸಿದರೇ ಹೊರತು, ಅವರ ವಾದಗಳಲ್ಲಿ ಯಾವುದೇ ಸಾಮಾಜಿಕ ಹೋರಾಟದ ನಿಲುವು ಕಂಡುಬರಲೇ ಇಲ್ಲ. ನಮ್ಮ ಚಾನೆಲ್ಲುಗಳಿಗೆ ಅದು ಬೇಕಿರಲೂ ಇಲ್ಲ. ಬೇಕಾಗಿದ್ದು ಬರೀ ಟಿ.ಆರ್.ಪಿ ಅಷ್ಟೆ ಅನ್ನಿಸುತ್ತೆ. ಸರ್ಕಾರದ ಮಾಧ್ಯಮ ಸಲಹೆಗಾರರೇ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಲು ಟೊಂಕ ಕಟ್ಟಿ ನಿಂತಿರುವಾಗ, ಇವೆಲ್ಲ ಯಾಕೆ ಬೇಕು ಅಲ್ಲವೇ!? ಅದನ್ನು ನಿರೀಕ್ಷಿಸುವ ನಮ್ಮಲ್ಲೇ ಏನೋ ತಪ್ಪಿದೆ ಬಿಡಿ.

ಪೋಸ್ಟ್ ಹಾಕಿದವರೂ, ಕಮೆಂಟು ಮಾಡಿದವರೂ ಇಬ್ಬರಂತವರೂ ಸಮಾಜಕ್ಕೆ ಕಂಟಕಪ್ರಾಯರೇ. ಅವರ action, ಇವರ reaction ಎರಡೂ ತಪ್ಪೇ. ಆ reactionಗೆ ಇಲ್ಲದ್ದನ್ನು ಹೇಳಿ, ಭಟ್ಟರ ಮನೆ ಹೆಣ್ಮಕ್ಕಳನ್ನು ರೇಪ್ ಮಾಡಿಸಬೇಕು ಅಂದಿದ್ದೂ ತಪ್ಪೇ. ಅದರ ನಂತರ ನಡೆದ ಟೀವಿ ಚರ್ಚೆಗಳಲ್ಲಿ, ಕೀಳು ಮಟ್ಟದ ಜನಪ್ರಿಯತೆಗಾಗಿ, ಕೆಲವರು ಇರುವುದಕ್ಕಿಂತ ಇಲ್ಲದ್ದನ್ನೇ ಹೆಚ್ಚು ಮಾತನಾಡಿ, ತಪ್ಪು ಸಿದ್ಧಾಂತಗಳನ್ನು ವೈಭವೀಕರಿಸಿದ್ದೂ ತಪ್ಪೇ. ಒಟ್ಟಿನಲ್ಲಿ ಇವತ್ತು ನಡೆದ ಚರ್ಚೆಗಳಲ್ಲಿ ವಿಷಯ ಪೂರ್ತಿ ಬದಿಗೊತ್ತಿ, ಒಬ್ಬರ ತೇಜೋವಧೆ ಮಾಡಿ, ಎಷ್ಟು ಸಾಧ್ಯವೋ ಅಷ್ಟು ಮೀಡಿಯಾ ಮೈಲೇಜ್ ಗಳಿಸಿ, ಎಲ್ಲರೂ ತಮ್ಮ ತಮ್ಮ ಮನೆಗೆ ತೆರಳಿದರು. ನಾಳೆ ಬೆಳಗ್ಗೆ ಎಲ್ರಿಗೂ ಅಜೆಂಡಾ ಮರ್ತು ಹೋಗಿರುತ್ತೆ. ಪ್ರಭಾ, ವಿ.ಆರ್.ಭಟ್ ಎಂಬ ಎರಡು ಹೆಸರು ಮಾತ್ರವೇ ನೆನಪಿರುತ್ತೆ, ಅಷ್ಟೆ.

ಅಯ್ಯೋ ದುರ್ವಿಧಿಯೇ….

ಅತ್ಯಾಚಾರ ನಡೆದಾಗಲೂ ಜನ ಇಷ್ಟೊಂದು ಹಾರಾಡಿರಲಿಲ್ಲ. ಅತ್ಯಾಚಾರ ಅನ್ನೋ ಪದ ಬಳಕೆಗಾಗಿ ಇಷ್ಟೆಲ್ಲಾ ಹಾರಾಡಿದ್ರು. ಥೂ….ನಿಮ್ಮ ಜನ್ಮಕ್ಕಿಷ್ಟು.

V R ಭಟ್ ಉಪಯೋಗಿಸಿದ ಮಾತು ಖಂಡಿತಾ ಅವಹೇಳನಕಾರಿಯೇ. ಅದರಲ್ಲಿ ಅನುಮಾನವೇ ಇಲ್ಲ. ಅದಕ್ಕೇ ಒಬ್ಬ ಭೋಧಿವೃಕ್ಷದಾಕೆ ಕೊಟ್ಟ ಕರೆಗೆ ಏನು ಸ್ಪಂದನೆ, ಏನು ಕಥೆ!?? “ಕೋಣ ಕಡಿಯೋಕೆ ಮಚ್ಚು ಮಸ್ಕೋ ಬೇಕು” ಎನ್ನುತ್ತಾ ಬಹಳ ಉತ್ಸಾಹದಲ್ಲಿ ಫೇಸ್ಬುಕ್ ಅಪ್ಡೇಟು ಏನು ಕೇಳ್ತೀರಿ! ರಣಉತ್ಸಾಹ ನೋಡೋಕೆ ಏನು ಮಜಾ ಇತ್ತು ಗೊತ್ತಾ? ದನದಮಾಂಸ ತಿನ್ನೋರು ‘ಅವ್ರಾ’ ಅಥ್ವಾ ಇವ್ನಾ ಅಂತಾ ಡೌಟು ಬರೋವಷ್ಟರ ಮಟ್ಟಿಗೆ ಕೋಣ ಕಡಿಯುವುದರ ಬಗ್ಗೆ ಮಾತುಕತೆ ನಡೆದಿತ್ತು. ಬಡಗಿಯೊಬ್ಬ ಆತನ ‘ಅಕ್ಕ’ ಕೊಟ್ಟ ಕರೆಗೆ ಓಗೊಟ್ಟು, ತನ್ನ ಒಂದು ಮಾತು ಹೇಳೋ ಭರದಲ್ಲಿ, ನಡೆದ ಘಟನೆಗೆ ಸಂಬಂಧವೇ ಇರದ (ಒಂದು ಕಾಲದಲ್ಲಿ ಇವನ ಸೋಗಲಾಡಿತನವನ್ನ ಮಟ್ಟಹಾಕಿದ) ನಿಲುಮೆಯೆಂಬ ಗುಂಪನ್ನ ಖಂಡಿಸುತ್ತಾ ತನ್ನ ತೊಡೆಸಂಧಿಯ ತುರಿಕೆ ನೀಗಿಸಿಕೊಂಡ. ಇನ್ನೊಬ್ಬ ತನ್ನೆಲ್ಲ ಅತಿಮುಖ್ಯವಾದ ಕೆಲಸಗಳ ನಡುವೆಯೂ ಚಂದ್ರ ಲೇಔಟ್ ಪೋಲೀಸ್ ಠಾಣೆಗೆ ಹೋಗಿದ್ನಂತೆ. ಸರ್ಕಾರದ ಮಧ್ಯಮಾ ಸಲಹೆಗಾರರು ತನ್ನೆಲ್ಲಾ ಕೆಲ್ಸ ಬದಿಗಿಟ್ಟು ಖುದ್ಧಾಗಿ ದೂರನ್ನ ಬರೆದು ಕೊಟ್ರಂತೆ. ಮ್ಯಾಚ್ ಬಾಕ್ಸ್ ಫಿಲಂ ನಿರ್ದೇಶಕರು ಕೂಡ(ಪಿಕ್ಚರ್ರು ಬಹುಷಃ ನೀರಲ್ಲಿ ಬಿದ್ದಿತ್ತೇನೋ, ಅದನ್ನ ಒಣಗಲಿಕ್ಕೆ ಹಾಕಿ) ಬಂದಿದ್ರಂತೆ. ಇತ್ತೀಚೆಗೆ ಟೋಲ್ಗೇಟಿನಲ್ಲಿ ತಮ್ಮ ಪರಾಕ್ರಮ ತೋರಿಸಿದ, ಕೋಲ್ಗೇಟ್ ವೀರರು ಕೂಡ ‘ನಂದ್ದೆಲ್ಲಿಡ್ಲಿ’ ಅಂಥಾ ಕೇಳೋಕೆ ಬಂದಿದ್ರಂತೆ. ಈಗಿನ್ನೂ ಟೀವಿಯ ಎ’ಬಿ’ಸಿಡಿ ಕಲಿಯುತ್ತಿರುವ ಚಾನೆಲ್ಲೊಂದು ಇದರ ಮೇಲೆ ಚರ್ಚೆಯನ್ನೇ ನಡೆಸಿತಂತೆ. ಇನ್ನೊಬ್ಬ ಹುಟ್ಟು ಖಾಂಗಿ, ‘ಇದು ನಿಮ್ಮಿಬ್ಬರ ಮಧ್ಯೆ ನಡೆದ ಸಂಭಾಷಣೆಯಾದರೂ ಸಹ ನಿಮಗೊಬ್ಬರಿಗೇ ಸಂಬಂಧಪಟ್ಟಿದ್ದಲ್ಲಾ’ ಅಂತಾ ಹೇಳಿ ತನ್ನ ಪಾಲನ್ನೂ ಗುರುತಿಸಿಕೊಂಡ……ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಮೊನ್ನೆ ನಡೆದ ಸರಣಿ ರೇಪುಗಳಲ್ಲಿ ಇವರೆಲ್ಲಾ ಎಲ್ಲಿ ಎಕ್ಕುಟ್ಟಿ ಹೋಗಿದ್ರೋ!? ಅವತ್ತು ಕೂಡಾ ಕಂಪ್ಲೈಂಟು ಬರೆದುಕೊಡೋಕೆ ಹೋಗಿದ್ರಾ ದಿನೇಶ್ ಅಮೀನ್!? ಸರ್ಕಾರಿ ಜವಾಬ್ದಾರಿ ಇರುವ ನೀವು ಇಂತಹ ಕೆಲಸಗಳಿಗೆ ಕೈ……ಹೋಗ್ಲಿ ಬಿಡಿ. ಸಿದ್ರಾಮಯ್ಯನ ಪ್ರೆಸ್ ಕಾನ್ಫೆರೆನ್ಸುಗಳನ್ನು ನೋಡಿದ್ರೆ ಗೊತ್ತಾಗ್ತಾ ಇದೆ, ನಿಮ್ಮ ಕೆಲ್ಸ ಎಷ್ಟು ಎಫೆಕ್ಟಿವ್ ಆಗಿ ನಡೀತಾ ಇದೆ ಅಂತಾ. ಹಾಗಾಗಿ ಸ್ವಲ್ಪ ಡಿಫೆರೆಂಟಾಗಿ ಕೆಲಸ ಸೃಷ್ಟಿ ಮಾಡ್ಕೊಂಡಿದೀರ. ಅಗತ್ಯವಿಲ್ಲದಲ್ಲೆಲ್ಲಾ ಸಮರ್ಥಿಸಿಕೊಳ್ತೀರಿಲ್ಲಾ ‘ಅವರನ್ನ!!! ಹಿಂದಿನವಾರದಲ್ಲಿ ಗಂಟಲು ಕಟ್ಟಿಹೋಗಿತ್ತಾ? ಈಗ ಕಾಳಿದಾಸನ ತರಹ ಗಂಟಲು ರಾತ್ರೋರಾತ್ರಿ ಸರಿಹೋಯ್ತೇನೋ!? ನಿಮ್ಮ ನಿನ್ನೆಯ ಉತ್ಸಾಹದಲ್ಲಿ ಅರ್ಧದಷ್ಟಾದರೂ ವಿಬ್ಗಯಾರ್ ಶಾಲೆ ಕೇಸಿನಲ್ಲೋ, ಪ್ರೇಝರ್ ಟೌನ್ ಕೇಸಿನಲ್ಲೋ ಇದ್ದಿದ್ದರೆ, ಆ ಆರೋಪಿಗಳನ್ನ ನಡುರಸ್ತೆಯಲ್ಲಿ ನಾಯಿಗಳಕೈಯಲ್ಲಿ ರೇಪ್ ಮಾಡಿಸಬಹುದಿತ್ತು. ಆದರೆ ಅವತ್ತು ಒಂದು ಕೇಸಿನಲ್ಲಿ ಹುಡುಗಿಯನ್ನೇ ಮಾನಸಿಕ ಅಸ್ವಸ್ಥೆ ಅನ್ನಿಸಿದ್ರಿ, ಇನ್ನೊಂದ್ರಲ್ಲಿ ಪೋಲೀಸ್ ಅಧಿಕಾರಿಗಳನ್ನೇ ಎತ್ತಂಗಡಿ ಮಾಡಿಸಿದ್ರಿ, ‘ಎರೆಕ್ಷನ್ ನಿಯಂತ್ರಿಸಲಾದವ ರೇಪ್ ಮಾಡ್ತಾನೆ’ ಅಂತ ಹೇಳಿಕೆ ಕೊಟ್ರಿ. (ಕೆಲಸವಿಲ್ಲದ ಬಡಗಿಯ ಉಳಿಸುತ್ತಿಗೆ ಅವತ್ತು ಕಳುವಾಗಿತ್ತೇನೋ. ಬಾಯಿಮುಚ್ಕೊಂಡು ಕೂತಿದ್ದ ಅವತ್ತು). ಈ ಕೋಮುವಾದಿ ಸಿಟ್ಟು, ರೊಚ್ಚು ಅವತ್ತಿದ್ದಿದ್ರೆ….ಓಹ್ ಬೇಡ ಬೇಡ…ಅವತ್ತಿಂದು ಸೆಕ್ಯುಲರ್ ರೇಪ್ ಅಲ್ವಾ!? ನಿಮ್ಮಮುಖ ಮುಚ್ಚಾ. ಇವತ್ತು ಒಬ್ಬ ಅತ್ಯಾಚಾರದ ಮಾತು ಹೇಳಿದ್ದಕ್ಕೆ ಏನು ಹಾರಾಟ, ಏನು ಕಥೆ. ಇದೇ ವಾದದ ಭರದಲ್ಲಿ, ಭಟ್ಟರ ಹೆಣ್ಣುಮಕ್ಕಳಿಗೂ ಬೈದರಲ್ಲಾ, ಅವರ ಬಗ್ಗೆಯೂ ಒಂದೆರಡು ದೂರು ಕೊಡಿ ನೋಡೋಣ!?

ಹಲೋ….ಅಯ್ಯೋ ಬನ್ರೀ ಇಲ್ಲಿ. ಎಲ್ಲಿಗೆ ಓಡ್ತಾ ಇದ್ದೀರ!? ಅಯ್ಯೋ ಪರವಾಗಿಲ್ಲ ದೂರು ಗೀರೆಲ್ಲಾ ಬೇಡ. ಮಾತಾಡೋಣ ಬನ್ರೀ ಇಲ್ಲಿ. ನಿಲ್ಲಪ್ಪಾ, ಓಡಬೇಡ……

ಅವತ್ತು ಕಮಕ್-ಕಿಮಕ್ ಅನ್ನದವರೆಲ್ಲಾ ಇವತ್ತು ರಣಧೀರ ಕಂಠೀರವರು. ಮಾಧ್ಯಮದಲ್ಲಿ ಕೆಲಸಮಾಡುತ್ತಲೇ, ಮಾಧ್ಯಮವನ್ನು ತಮ್ಮ ವೈಯುಕ್ತಿಕ ತೆವಲುಗಳಿಗೆ, ದ್ವೇಷಗಳಿಗೆ ಬಳಸಿಕೊಳ್ಳುವ ಇಂತಹ ಘೋಮುಖವ್ಯಾಘ್ರಗಳಿಗೆ ಅರ್ಥವಾಗದ ಕನ್ನಡದಲ್ಲಿ ಬೈಯಬೇಕೇನೋ. ಆಹಾಹಾಹಾ….ನಿಮ್ಮಂತ ಪಿಶಾಚಿಗಳನ್ನು ಪಡೆದ ಭಾರತಮಾತೆ ಧನ್ಯೆ. ಇಷ್ಟಕ್ಕೂ ಎಲ್ಲರ ಹೆಗಲಮೇಲೆ ಬಂದೂಕು ಇಟ್ಟು ಗುಂಡು ಹಾರಿಸಿದ ಶಾಂತಿಪ್ರಿಯೆ ಪತ್ರಕರ್ತೆ ಮಾತ್ರ ‘ಭೋಧಿ ವೃಕ್ಷ’ದಡಿ ತಣ್ಣಗೆ ತಪಸ್ಸುಗೈಯುತ್ತಿದ್ದಾರಂತೆ. ಮುಂದಿನ ‘ಕೋಮುವಾದಿ’ ಮಿಕ ಸಿಗುವವರೆಗೆ……

ಆ ದಿನಗಳೆಲ್ಲಿ!?

 
ದಿನದ 24 ಘಂಟೆಗಳಲ್ಲಿ ನಾವು 6-8 ತಾಸು ನಿದ್ರಿಸುತ್ತೇವೆ. 8-10 ತಾಸುಗಳನ್ನು ಕಚೇರಿಯಲ್ಲಿ ಕೆಲಸ ಮಾಡುತ್ತೇವೆ. 1-2 ತಾಸು ರಸ್ತೆಯ ಮೇಲೆ ಪ್ರಯಾಣದಲ್ಲಿ ಕಳೆಯುತ್ತೇವೆ. ಉಳಿದ ಸಮಯದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಕನಿಷ್ಟ ಒಂದೆರಡು ತಾಸು ಟೀವಿಯ ಮುಂದೆ ಕೂರುತ್ತೇವೆ. ಮನೆ ಸಂಭಾಳಿಸುವ ಮಂದಿಯಂತೂ (ನಾನು ಹೆಂಗಸರು ಅಂಥಾ ಹೇಳ್ತಾ ಇಲ್ಲ…..ಮನೆ ಸಂಭಾಳಿಸುವ ಯಾರು ಬೇಕಾಗಿದ್ರೂ ಆಗಬಹುದು. ಹೌಸ್-ವೈಫೂ ಆಗಬಹುದು, ಹೌಸ್-ಹಸ್ಬೆಂಡೂ ಆಗಬಹುದು) ಸ್ವಲ್ಪ ಹೆಚ್ಚೇ ಟೀವಿಯ ಮುಂದೆ ಕೂರುತ್ತಾರೆ. ಆದರೆ, ಈ ಸ್ವಲ್ಪ ಸಮಯದಲ್ಲೂ ನಾವು ನೋಡುತ್ತಿರುವ ಕಾರ್ಯಕ್ರಮಗಳಾದರೂ ಎಂತದ್ದು!? 
 
ನಾನು ಚಿಕ್ಕವನಾಗಿದ್ದಾಗ ವಾರ್ತೆಯೆಂದರೆ ರಾತ್ರಿ 7:30ಯಿಂದ 8:00 ರವರೆಗೋ, ದೆಹಲಿಯಿಂದಾದರೆ 8:30ರಿಂದ 9:00ರವರೆಗೋ ಬರುತ್ತಿದ್ದ ಕಾರ್ಯಕ್ರಮಗಳು. ಮೊದಲ 2 ನಿಮಿಷದಲ್ಲಿ ಮುಖ್ಯಾಂಶಗಳನ್ನು ಓದಿ, ಆನಂತರದ ಹದಿನೈದು ನಿಮಿಷಗಳಲ್ಲಿ ಅವುಗಳನ್ನು ವಿವರಿಸಿ, ನಂತರ ಕೆಲ ಸಣ್ಣ ಪುಟ್ಟ ಸುದ್ಧಿಗಳನ್ನು ಹೇಳುತ್ತಿದ್ದರು. ವಾರ್ತೆಯೆಂದರೆ ಮುಖ್ಯಾಂಶಗಳು, ಸ್ಥಳೀಯ ಹಾಗೂ ದೇಶೀಯ ಸುದ್ದಿಗಳು, ಆನಂತರ ಅಂತರರಾಷ್ಟ್ರೀಯ ಸುದ್ದಿಗಳು, ಆಮೇಲೆ ಕ್ರೀಡಾ ಸುದ್ದಿಗಳು, ಕೊನೆಗೊಮ್ಮೆ ಮತ್ತೆ ಮುಖ್ಯಾಂಶಗಳೊಂದಿಗೆ ಕೊನೆಯಾಗುತ್ತಿತ್ತು.  ಅದು ಬಿಟ್ಟರೆ ನಮಗೆ ಮುಂದಿನ ಆಗುಹೋಗುಗಳು ಗೊತ್ತಾಗುತ್ತಿದ್ದದ್ದು ಮುಂದಿನ ದಿನವೇ. ಬರಬರುತ್ತಾ ದೂರದರ್ಶನ ದಿನಕ್ಕೆರಡು ಮೂರು ಬಾರಿ ವಾರ್ತಾಪ್ರಸಾರ ಮಾಡಿ ನಮ್ಮನ್ನೆಲ್ಲಾ ಅಪ್ಡೇಟ್ ಮಾಡಲು ಪ್ರಾರಭಿಸಿತು. ಆದರೆ, ಅದ್ಯಾವ ಘಳಿಗೆಯಲ್ಲಿ ಯಾವ ಪಾಪಾತ್ಮನಿಗೆ ಈ 24ಘಂಟೆಗಳ ವಾರ್ತಾಪ್ರಸಾರ ಎಂಬ ಕುಲಗೆಟ್ಟ ಅಲೋಚನೆ ಹೊಳೆಯಿತೋ! ನಮ್ಮೆಲ್ಲಾ ನಿದ್ರೆ, ನೆಮ್ಮದಿ ಹಾರಿ ಹೋಯಿತು. ಇವತ್ತು ದೇಶಾದ್ಯಂತ 27 ಭಾಷೆಗಳಲ್ಲಿ 630ಕ್ಕೂ ಹೆಚ್ಚು ವಾರ್ತಾ ವಾಹಿನಿಗಳಿವೆ. ಇವುಗಳಲ್ಲಿ ಮೂರು ಹೊತ್ತೂ ವಾರ್ತೆ ಬಿಟ್ಟರೆ ಬೇರೇನೂ ಇಲ್ಲ. ಹಾಗೆಂದ ಮಾತ್ರಕ್ಕೆ ಇವೇನೂ ಉಪಯುಕ್ತ ಮಾಹಿತಿಗಳನ್ನೇ ಕೊಡುತ್ತಿವೆಯೆಂದೇನಲ್ಲ. ವಾರ್ತೆಯ ಹೆಸರಿನಲ್ಲಿ ಬೇಕಾದದ್ದು ಬೇಡವಾದದ್ದು ಎಲ್ಲವನ್ನೂ ನಮ್ಮ ತಲೆಗೆ ತುರುಕುತ್ತಿವೆ. ಅಮೇರಿಕಾದ PRISM ಯೋಜನೆಯಿಂದ ಹಿಡಿದು, ಜಪಾನಿನ ಅಣುವಿಕಿರಣ ಸೋರಿಕೆಯವರೆಗೂ, ಮೋದಿಯ ಭಾಷಣದ ಮಧ್ಯೆ ಮೈಕು ನಿಂತುಹೋಗಿದ್ದರಿಂದ ಹಿಡಿದು, ಬೆರ್ಲುಸ್ಕೋನಿಯ ಕಾಮಪುರಾಣದವರೆಗೂ, ಹಾಲೆಂಡಿನಲ್ಲೆಲ್ಲೋ ಒಬ್ಬ ಮಹಿಳೆಯ ತಲೆಯಲ್ಲಿ ಮೊಳೆ ಹೊಕ್ಕಿದ್ದರಿಂದ ಹಿಡಿದು, ದೀಪಿಕಾಳ ಸೊಂಟದಳತೆ ಅರ್ಧ ಇಂಚು ಹೆಚ್ಚಾಗಿದ್ದರವರೆಗೆ ಎಲ್ಲದರ ಬಗ್ಗೆಯೂ ನಮಗೆ ತಿಳಿಸಿ, ‘ಜಗತ್ತನ್ನು ನಮಗೆ ಹತ್ತಿರವಾಗಿಸುವ’ ಪ್ರಯತ್ನವನ್ನು ಮಾಡುತ್ತಿವೆ. ಕೆಲವು ವಾಹಿನಿಗಳಂತೂ ಒಂದು ಹೆಜ್ಜೆ ಮುಂದೆ ಹೋಗಿ, ಸುಪ್ರೀಂಕೋರ್ಟಿನ ಅಪರಾವತರಗಳಾಗಿವೆ. ಅಲ್ಲೇ ಡ್ರಾ, ಅಲ್ಲೇ ಬಹುಮಾನ, ಅಲ್ಲೇ ಪ್ರಶಂಸೆ, ಅಲ್ಲೇ ವಾಕ್ಸಮರ ಹಾಗೂ ತೀರ್ಪುಗಳು ಕೊಡಲ್ಪಡುತ್ತಿವೆ. ಕೆಲವು ರಾಜಕಾರಣಿಗಳು ಈ ವಾರ್ತಾವಾಹಿನಿಗಳ ‘ಶಕ್ತಿ’ಯನ್ನು ಅರಿತು, ತಮ್ಮದೇ ಆದ ವಾಹಿನಿಗಳನ್ನೂ ಪ್ರಾರಂಭಿಸಿದರು. ಅಲ್ಲಿಗೆ ನಮ್ಮ ಜೀವನದ ನೆಮ್ಮದಿಯುಕ್ತ ದಿನಗಳಿಗೆ ತರ್ಪಣ ಬಿಟ್ಟಂತಾಯಿತು.
 
ಕೆಲವೊಮ್ಮೆ, ಜಗತ್ತಿಗೆ ದೂರವಾಗಿದ್ದ, ‘ದಿನಕ್ಕೆರಡು ಬಾರಿಯಷ್ಟೇ’ ವಾರ್ತೆ ಬರುತ್ತಿದ್ದ, ಅದರಲ್ಲೂ ವಾರ್ತೆಯ ಹರಿವಿಗೆ ಒಂದು ನಿರ್ಧಿಷ್ಟ ರೂಪುರೇಷೆಯಿದ್ದ ಆ ದಿನಗಳು ಎಷ್ಟು ಹಿತವಾಗಿದ್ದವು ಎಂದೆನಿಸುವುದಿಲ್ಲವೇ!? ಆ ವಾರ್ತಾವಾಚಕರ ಹಾವ ಭಾವ, ಉಚ್ಛಾರಣೆ, ಪ್ರತಿಯೊಬ್ಬರಿಗೂ ವಿಶಿಷ್ಟವಾಗಿದ್ದ ತಮ್ಮದೇ ವಾಚನಾಶೈಲಿ, ಅವರ ಧರಿಸುತ್ತಿದ್ದ ಬಟ್ಟೆಗಳು ಪ್ರತಿಯೊಂದೂ ನನಗೆ ಇಂದಿಗೂ ನೆನಪಿನಲ್ಲಿವೆ. ಕಣ್ಣುಮುಚ್ಚಿಯೇ ನಾನು ಇವತ್ತು ವಾರ್ತೆ ಓದುತ್ತಿರುವುದು ಯಾರೆಂದು ಹೇಳುತ್ತಿದ್ದೆ. ನನಗೆ ಇಂಗ್ಲೀಷಿನಲ್ಲಿ ಮಾತನಾಡಲು ಕಲಿಯಬೇಕೆಂಬ ಆಸೆ ಹುಟ್ಟಿಸಿದವನು, ಡಿಡಿಯ ಸುನಿತ್ ಟಂಡನ್ ಎಂಬ ಮಹಾಶಯ. ಇವತ್ತು ಅವನು ಎಲ್ಲಿದ್ದಾನೋ ಗೊತ್ತಿಲ್ಲ. ಆದರೆ ನನ್ನ ಮೆದುಳಿನಿಂದ ಎಂದಿಗೂ ಮರೆಯಾಗಲಾರ. ಅವನಷ್ಟೇ ಅಲ್ಲ, ಶಮ್ಮಿ ನಾರಂಗ್, ಕಾವೇರಿ ಮುಖರ್ಜಿ, ಗೀತಾಂಜಲೀ ಅಯ್ಯರ್, ಮಂಜರೀ ಜೋಶಿ, ಅವಿನಾಶ್ ಕೌರ್, ಜೆಬಿ ರಮಣ್, ಸಲ್ಮಾ ಸುಲ್ತಾನ್, ನಮ್ಮ ಕನ್ನಡದ ಅಪರ್ಣಾ, ಈಶ್ವರ ದೈತೋಟ, ಸಬೀಹಾ ಬಾನು, ಮಂಜುಳಾ ಗುರುರಾಜ್ ಇವರನ್ನೆಲ್ಲಾ ನಾನು ಮರೆಯಲು ಸಾಧ್ಯವೇ ಇಲ್ಲವೇನೋ. ಇವರೇನೂ ಇಂದಿನ ‘ನಾನೇ ಸರ್ವಜ್ಞ’ನೆಂಬ ಅಹಮಿಕೆಯ ವಾಚಕರಾಗಿರಲಿಲ್ಲ ಅಥವಾ ‘ಪತ್ರಿಕಾರಂಗದಲ್ಲಿ ನನ್ನ ಮಾತೇ ಕೊನೆ’ ಎಂಬ ಅಹಂಭಾವದ ಸ್ತ್ರೀವಾಚಕರೂ ಆಗಿರಲಿಲ್ಲ. ಆದರೂ ಅವರು ಓದಿದ ಸುದ್ಧಿಗಳು, ಅವರ ಚಹರೆಗಳು ನಮ್ಮ ಜೀವನದ ಒಂದು ಭಾಗವೇ ಆಗಿಬಿಟ್ಟಿದ್ದವು. ನಮ್ಮ ಅಜ್ಜನಂತೂ ಈ ವಾಚಕಿಯರ ದಿನಕ್ಕೊಂದು ಸೀರೆಗಳ ಕಲೆಕ್ಷನ್ ನೋಡಿ ತನ್ನ ಹೆಂದತಿ ಮಕ್ಕಳೆಲ್ಲಾ ಹೊಸಾ ಸೀರೆಗೆ ಪೀಡಿಸುವುದರಿಂದ ಸುಸ್ತಾಗಿ, ಒಮ್ಮೆ ಈ ವಾರ್ತಾಸುಂದರಿಯರಿಗೆ ವಾರಕ್ಕೆರಡೇ ಹೊಸಾ ಸೀರೆಗಳನ್ನು ಉಡಿಸುವಂತೆ ಕೋರಿ ದೂರದರ್ಶನದ ದೆಹಲಿ ಆಫೀಸಿಗೆ ಪತ್ರವನ್ನೂ ಬರೆದಿದ್ದರೆಂದು ಪ್ರತೀತಿ. ಅಷ್ಟರಮಟ್ಟಿಗೆ ಅವು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿದ್ದವು. ಸುರಭಿ ಎಂಬ ಕಾರ್ಯಕ್ರಮವನ್ನು ನೋಡಿ ಬೆಳೆದ ನನಗೆ ಹಾಗೂ ನನ್ನ ತಮ್ಮ-ತಂಗಿಯಂದಿರಿಗೆ ಸಿದ್ಧಾರ್ಥ ಕಖ್ ಎಂಬ ಪ್ರೀತಿಯ ಮಾವನನ್ನೂ  ಹಾಗೂ ರೇಣುಕಾ ಶಹಾನೆ ಎಂಬ ನಗುಮೊಗದ ಚೆಲುವೆಯನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ನಮ್ಮ ಕೆಲವು ಅಕ್ಕಂದಿರಂತೂ ಫ್ಯಾನ್ಸಿ ಸ್ಟೋರುಗಳಿಗೆ ಹೋದಾಗ ‘ಹೋದವಾರ ರೇಣುಕಾ ಶಹಾನೆ ಹಾಕಿದ್ಲಲ್ಲಾ, ಆ ಕಿವಿಯೋಲೆ ಇದೆಯಾ’ ಅಂತಾ ಕೇಳಿ ವ್ಯಾಪಾರ ಮಾಡ್ತಾ ಇದ್ರು. 
 
ಧಾರವಾಹಿಗಳು ಹಾಗೂ ಮನರಂಜನೆಯ ಕಾರ್ಯಕ್ರಮಗಳ ಹೆಸರಿನಲ್ಲಿ ಪ್ರಸಾರವಾಗುವ ಕಾರ್ಯಕ್ರಮ ನೆನಸಿಕೊಂಡರೆ ನನ್ನ ರಕ್ತದೊತ್ತಡ ಹೆಚ್ಚಾಗಿ ನಾನು ಗೋತಾ ಹೊಡೆಯುವ ಅವಕಾಶಗಳು ಹೆಚ್ಚಿರುವುದೆಂದು ನನ್ನ ಡಾಕ್ಟರು ಹೇಳಿರುವುದರಿಂದ, ಅವರ ಮೇಲಿನ ಗೌರವಕ್ಕಾಗಿ ನಾನು ಟೀವಿ ಧಾರಾವಹಿಗಳ ಬಗ್ಗೆ ಏನೂ ಬರೆಯಲು ಇಚ್ಚಿಸುವುದಿಲ್ಲ. ಆದರೆ ಚಿತ್ರಹಾರ್, ಚಿತ್ರಮಂಜರಿ, ಸಬೀನಾ, ಅಂಕಲ್ ಇಲ್ಲಪ್ಪ, ಉಪನ್ಯಾಸ್, ವ್ಯೋಮಖೇಶ್ ಬಕ್ಷಿ, ಅಜಿತನ ಸಾಹಸಗಳು……ಒಮ್ಮೆ ನೋಡಿದರೆ ಇನ್ನೊಮ್ಮೆ ನೋಡಬೇಕೆನ್ನಿಸುವ, ಇನ್ನೊಮ್ಮೆ ನೋಡಿದರೂ ಬೋರುಹೊಡೆಸದಿರುವ ಕಾರ್ಯಕ್ರಮಗಳೆಲ್ಲಿ!? ಎಂದು ಯೋಚಿಸಿದರೆ ಹಾಗೇ ಒಂದು ರೀತಿ ಭಾವರಾಹಿತ್ಯ ಮನಸ್ಸಿನಲ್ಲಿ ತುಂಬಿಕೊಳ್ಳುತ್ತದೆ 😦
 
ಇನ್ನು ರೇಡಿಯೋದ ವಿಷಯಕ್ಕೆ ಬಂದರಂತೂ, ನಾನು ಹಾಗೆಯೇ ಇಪ್ಪತ್ತು-ಇಪ್ಪತ್ತೈದು ವರ್ಷಹಿಂದೆ ಹೋದಂತಾಗಿ ನನ್ನ ಕಣ್ಣಲ್ಲಿ ನಿಜಕ್ಕೂ ನೀರುತುಂಬಿ ಬರುತ್ತದೆ. ಟೀವಿ ನಾನು ನೊಡಿದ್ದೇ ನನ್ನ 14ನೇ ವಯಸ್ಸಿನಲ್ಲಿ. ಅಲ್ಲಿಯವರೆಗೆ ನಾನು ಬೆಳೆದ ಸಿದ್ದರಮಠವೆಂದ ಹಳ್ಳಿಯಲ್ಲಿ ವಿದ್ಯುತ್ಶಕ್ತಿ ಎಂಬುವುದು ಕೇಳದ ಪದವಾದದ್ದರಿಂದ, ನಮ್ಮ ದಿನ ಮತ್ತು ಜಗತ್ತುಗಳು ರೇಡಿಯೋದಿಂದಲೇ ಪ್ರಾರಂಭವಾಗಿ, ಅದರಿಂದಲೇ ಕೊನೆಯಾಗುತ್ತಿತ್ತು. ‘ಸಂಪ್ರತಿ ವಾರ್ತಾಃ ಶ್ರೂಯಂತಾಂ. ಪ್ರವಾಚಕಃ ಬಲದೇವಾನಂದ ಸಾಗರಃ’ ಎಂದಕೂಡಲೇ ಎದ್ದೇಳುತ್ತಿದ್ದ ನಾನು, ರಾತ್ರಿ ಎಂಟರ ಯುವವಾಣಿಯ ವೀರಗಾಸೆಯೋ, ಭಾವಗೀತೆಯೋ ಕೇಳುತ್ತಾ ಹಾಗೇ ನಿದ್ರೆ ಹೋಗುತ್ತಿದ್ದೆ. ಘಟ್ಟದ ಮೇಲಿನ ನಮ್ಮ ಮನೆಗಳಲ್ಲಿ ಭದ್ರಾವತಿ ಖಾಯಂ ಸ್ಟೇಷನ್. ಡಯಲ್ ತಿರುಗಿಸಿ ಮಂಗಳೂರು ಅಥವಾ ಧಾರವಾಡದ ಸ್ಟೇಷನ್ನಿಗೇನಾದರೂ ತಿರುಗಿಸದರೆ ಅವತ್ತು ಕಜ್ಜಾಯ ಗ್ಯಾರಂಟಿ; ಕೆಲವು ಸಲ ಅಪ್ಪನಿಂದ, ಮತ್ತೆ ಕೆಲವು ಸಲ ಅಮ್ಮನಿಂದ ಕೂಡ. ಸಾಂಸ್ಕೃತಿಕ ಕಾರ್ಯಕ್ರಮಗಳು, ಕೃಷಿರಂಗ, ಭಾನುವಾರದ ನಾಟಕಗಳು, ಚಲನಚಿತ್ರ ಧ್ವನಿಮುದ್ರಿಕೆಗಳು, ಕ್ರಿಕೆಟ್ ವಿವರಣೆಗಳು ನಮ್ಮ ಜಗತ್ತನ್ನು ಸುಂದರಗೊಳಿಸಿಯೇ ಇಟ್ಟಿದ್ದವು.
 
ಅವತ್ತಿನ ಟೀವಿ ರೇಡಿಯೋಗಳು ಎಷ್ಟಿನ ಮಟ್ಟಿನ ಜಾಗೃತಿಯನ್ನು ಮೂಡಿಸುತ್ತಿದ್ದವೋ ನನಗೆ ಗೊತ್ತಿಲ್ಲ. ಬಹುಷಃ ಜಾಗೃತಿಮೂಡಿಸುವುದರಲ್ಲಿ ಅವಗಳ ಪಾತ್ರ ಸೊನ್ನೆಯೆಂದರೂ ಒಪ್ಪುತ್ತೇನೆ. ಅಂದಿನ ಟೀವಿ, ರೇಡಿಯೋಗಳು ಕ್ರೀಡಾಸುದ್ದಿಗಳನ್ನು ಎಲ್ಲಕ್ಕಿಂತ ಕೊನೆಯಲ್ಲಿ ಓದುತ್ತಿದ್ದಕ್ಕೆ ನನಗೆ ಇದ್ದ ಅಸಮಾಧಾನ ಈಗಲೂ ಇದೆ. (ನಮ್ಮ ಬಹಳಷ್ಟು ವಾರ್ತಾಪತ್ರಿಕೆಗಳು ಕ್ರೀಡೆಗೆ ಸಂಬಂಧಿಸಿದ ಸುದ್ದಿಗೆ ಇಂದಿಗೂ ಕೊನೆಪುಟವನ್ನೇ ಉಪಯೋಗಿಸುತ್ತವೆ. ಭಾರತೀಯರ ಕ್ರೀಡಾಪ್ರೇಮಕ್ಕೆ, ನಾವು ಕ್ರೀಡಾ ಸುದ್ದಿಗೆ  ಕೊಡುತ್ತಿರುವ ಮಹತ್ವವೇ ಸಾಕ್ಷಿ 🙂 ) ವಾರ್ತಾಇಲಾಖೆಯಂದ ಬಂದ ವಿಷಯಗಳನ್ನಷ್ಟೇ ಅವು ಓದುತ್ತಿದ್ದರೂ ಸಹ ನಮಗೆ ಅದೆಂದೂ ಕೃತಿಮವೆನ್ನಿಸಲೇ ಇಲ್ಲ. ಈ ವಾಚಕ ತನ್ನದೇನೋ ಬೇಳೆ ಬೇಯಿಸಿಕೊಳ್ಳುತ್ತಿದ್ದಾನೆ ಎಂದೆನಿಸಲೇ ಇಲ್ಲ. ಎಫ್.ಐ.ಆರ್, ಕ್ರಿಮಿನಲ್ ಡೈರಿಯಂತಹ ಕಾರ್ಯಕ್ರಗಳು ಇಲ್ಲದಿದ್ದರೂ, ಜಗತ್ತು ಎಷ್ಟು ಸುರಕ್ಷಿತ ಮತ್ತು ಎಷ್ಟು ಅಪಾಯಕಾರಿಯೆಂಬುದು ನಮಗೆ ತಿಳಿದಿತ್ತು.
 
ಆದರೆ ನಾವೆಲ್ಲಿ ಎಡವಿದೆವು!?
 
(@) ಸುನಿತ್ ಟಂಡನ್ ಇದ್ದಲ್ಲಿ ಅರ್ನಬ್ ಗೋಸ್ವಾಮಿ, ರಾಜದೀಪ್ ಸರ್ದೇಸಾಯಿಯಂತಹವರು ಬಂದು ಕುಳಿತರು
(@) ಸಲ್ಮಾ ಸುಲ್ತಾನ್ ಇದ್ದಲ್ಲಿ ‘ಜಿನ್ ಡ್ರಿಂಕರ್ಸ್’, ‘ಬ್ಲಡಿ ಮೇರಿ’ಎಂಬ ಹೆಸರಿನ ಬ್ಲಾಗು ಬರೆಯುವ ಬರ್ಖಾ, ಸಾಗರಿಕಾರಂತವರು ಬಂದು ವಕ್ಕರಿಸಿದರು
(@) ರೇಡಿಯೋದಲ್ಲಿ ರಂಗರಾವ್ ಓದುತ್ತಿದ್ದ ವಾರ್ತೆಯಿದ್ದಲ್ಲಿ, ಮಧ್ವರಾಜ್ ಓದುತ್ತಿದ್ದ ಪ್ರದೇಶ ಸಮಾಚಾರವಿದ್ದಲ್ಲಿ, ಅದ್ಯಾವನೋ ದಾನಿಷ್ ಸೇಟ್ ಎಂಬುವ ನಡೆಸುವ ಫೋನಿನಲ್ಲಿ ಯಾರ್ಯಾರಿಗೋ ಕಾಲ್ ಮಾಡಿ ಅವರನ್ನು ಮೂರ್ಖರನ್ನಾಗಿಸುವ ಚೆಲ್ಲಾಟಗಳು ‘ಸರ್ವೇ ಸಾಮಾನ್ಯ’ ಎಂಬಂತೆ ನಡೆಯತೊಡಗಿದವು
(@) ಮಾಲ್ಗುಡಿ ಡೇಸ್, ಏಕ್ ಥಾ ರಸ್ಟಿ, ನಮ್ಮ ಕಂಪನಿ, ತಿರುಗುಬಾಣ ಮಂತಾದ ಧಾರವಾಹಿಗಳಿದ್ದಲ್ಲಿ ಸದಾ ಒಬ್ಬರಮೇಲೊಬ್ಬರು ಕತ್ತಿಮಸೆಯುವ ಅತ್ತೆ ಸೊಸೆ ಧಾರವಾಹಿಗಳೆಂಬ ಅನಿಷ್ಟ ಪೀಡೆಗಳು ವಕ್ಕರಿಸಿದವು.
(@) ಶಾಂತಿ, ಸ್ವಾಭಿಮಾನ್ ಎಂಬ ನೂರಿನ್ನೂರು ಕಂತಿನ ಧಾರಾವಾಹಿಗಳನ್ನೇ ನೋಡಿ ಸುಸ್ತಾಗಿದ್ದ ನಮಗೆ ಸಾವಿರಾರು ಕಂತುಗಳಷ್ಟು ಓಡುವ ಧಾರಾವಾಹಿಗಳನ್ನು ತೋರಿಸಿ ಕೊಲ್ಲಲಾರಂಭಿಸಿದರು
(@) ಪ್ರತಿಭೆಯ ಹೆಸರಿನಲ್ಲಿ ಎಂತೆಂತದೋ ತರಹದ ಅಂಡೆಪಿರ್ಕಿಗಳನ್ನು ನೋಡುವ ಕರ್ಮವೂ ನಮಗೆ ಒದಗಿ ಬಂದಿತು
(@) ರಿಯಾಲಿಟಿ ಶೋ ಎಂಬ ಪೆಡಂಭೂತ ವಕ್ಕರಿಸಿದ ದಿನ, ಮಾನವೀಯತೆಯ ಚರಮಗೀತೆಗೆ ಸಂಗೀತ ಸಂಯೋಜನೆಯೂ ಆಯಿತೆಂದು ನನ್ನ ಭಾವನೆ.
 
ಹೌದು ಒಪ್ಪಿಕೊಳ್ಳುತ್ತೇನೆ, ಇದೇ ವಾಹಿನಿಗಳ ಪಟ್ಟಿಯಲ್ಲಿ ಜ್ಞಾನಾರ್ಜನೆಗೆ ಸಹಾಯ ಮಾಡುವ ಡಿಸ್ಕವರಿ, ನ್ಯಾಶನಲ್ ಜಿಯೋಗ್ರಾಫಿಕ್ ನಂತಹವೂ ಇವೆ. ಥಟ್ ಅಂತ ಹೇಳಿ ಅನ್ನುವ ಕಾರ್ಯಕ್ರಮಗಳೂ ಇವೆ. ಆದರೆ ಅವಕ್ಕೆ ತೆರೆದುಕೊಳ್ಳುತ್ತಿರುವ ಮನಸ್ಸುಗಳೆಷ್ಟು? ಹಾಗೂ ಮನೆಯೊಂದು ಮೂರು ಬಾಗಿಲು, ಬಿಗ್- ಬಾಸ್, ಪ್ಯಾಟೆ ಮಂದಿ ಕಾಡಿಗೆ ಬಂದ್ರು, ರೋಡಿಸ್, ಸ್ಪ್ಲಿಟ್-ವಿಲ್ಲಾ ದಂತಹ ಕಾರ್ಯಕ್ರಮ ನೋಡುವವರೆಷ್ಟು!? ನಾನು ನೋಡಿದ ಕೊನೆಯ ಕನ್ನಡ ಧಾರಾವಾಹಿಯೆಂದರೆ, ಈಟೀವಿಯಲ್ಲಿ ರಾತ್ರಿ ಹತ್ತಕ್ಕೆ ಬರುತ್ತಿದ್ದ ‘ಗರ್ವ’. ಅದರ ಪ್ರಸಾರ ನಿಂತುಹೋಗಿ ಸುಮಾರು ಹತ್ತು ವರ್ಷದ ಮೇಲಾಯಿತು. ಹಿಂದಿಯಲ್ಲಂತೂ ನಾನು ನೋಡಿದ ಕೊನೆಯ ಧಾರವಾಹಿಯ ನೆನಪೂ ಇಲ್ಲ. ಬಹುಷಃ ರಸ್ಕಿನ್ ಬಾಂಡ್ ನ ‘ಏಕ್ ಥಾ ರಸ್ಟಿ’ಯೆರಬೇಕು. ಸೃಜನಶೀಲತೆಯೆಂದರೆ “WTF is that!!!??” ಎಂದು ಹುಬ್ಬೇರಿಸುವ ನಿರ್ಮಾ’ಪೆ’ಕರುಗಳೂ,  ನಿರೂಪಕರು ಇರುವಂತಹ ಕಾಲಘಟ್ಟದಲ್ಲಿ ನಿಂತು ಅಂತಹ ಕಾರ್ಯಕ್ರಮಗಳನ್ನು ನಿರೀಕ್ಷಿಸುವುದು ಬಹುಷಃ ನಮ್ಮದೇ ತಪ್ಪೇನೋ 😦
 
ಇದಕ್ಕೆ ಸರಿಯಾಗಿ ನಮ್ಮ ಪ್ರಾಯೋಜಕರೂ ತಮ್ಮ ಕಳಪೆ ಜಾಹೀರಾತುಗಳನ್ನು ಈ ಅತೀ ಕಳಪೆ ಕಾರ್ಯಕ್ರಮಗಳ ಜೊತೆಗೇ ತೋರಿಸುವ ಕೃಪೆ ಮಾಡಿರುವುದರಿಂದ ನಮ್ಮ ಮಕ್ಕಳನ್ನು ಹಳ್ಳ ಹಿಡಿಸುವ ಇವರ ತಂತ್ರ ಇನ್ನಷ್ಟು ಫಲಿಸುತ್ತಿದೆ. ಹೆಣ್ಣನ್ನು ಆಕರ್ಷಿಸುವ ಪಾಠಗಳನ್ನು ಇಂತವರಿಂದ ಕಲಿತ ಗಂಡು ಮಕ್ಕಳು ಇಂದು ಹೆಣ್ನಿಗೆ ಕೊಡುತ್ತಿರುವ ಬೆಲೆಯನ್ನು ಹಾಗೂ ಅವರ ಪ್ರತಾಪಗಳನ್ನು ದಿನವೂ ಪತ್ರಿಕೆಗಳಲ್ಲೂ, ಇದೇ ವಾಹಿನಿಗಳಲ್ಲಿಯೂ ಮತ್ತೆ ಮತ್ತೆ ನೋಡಿ ಹತಾಶೆಯ ಪರಮಾವಧಿ ತಲುಪುವಂತಾಗಿದೆ.
 
ಜಗತ್ತಿಗೆ ಹತ್ತಿರಾಗುವ ತವಕದಲ್ಲಿ ನಮ್ಮನ್ನು ಮತ್ತು ನಮ್ಮ ಮುಂದಿನ ತಲೆಮಾರನ್ನು, ಈ ಟೀವಿಯೆಂಬ ಮಾರಿಗೆ ಬಲಿಕೊಟ್ಟಿದ್ದೇವೆ ಎಂದು ನಿಮಗನ್ನಿಸುವುದಿಲ್ಲವೇ!? ಈ ಚಲನಚಿತ್ರಗಳಿಗೆ ಸೆನ್ಸಾರ್ ಬೋರ್ಡ್ ಇದ್ದೂ ಸಹ, ಇಂತಹ ಕುಲಗೆಟ್ಟ ಚಿತ್ರಗಳು ಬರ್ತಾ ಇವೆ. ಇನ್ನೇನಾದರೂ ಸೆನ್ಸಾರ್ ಇಲ್ಲದೇ ಹೋಗಿದ್ದರೆ ಅವು ಇನ್ನೆಂತಹ ‘ಶ್ರೇಷ್ಠ’ ಮಾಣಿಕ್ಯಗಳನ್ನು ನಿರ್ಮಿಸುತ್ತಿದ್ದವು!? ಒಮ್ಮೆ ಯೋಚಿಸಿ. ಆದರೆ ನನಗೆ ಭಯ ಹುಟ್ಟಿಸುವ ವಿಷಯವೆಂದರೆ, ವಾರಕ್ಕೆ ಎಲ್ಲೋ ಮೂರು ಘಂಟೆ ನೋಡುವ ಈ ಚಲನಚಿತ್ರಗಳಿಗೇ ನಿಯಂತ್ರಣ ಬೋರ್ಡ್ ನಿರ್ಮಿಸಿರುವ ನಾವು, ದಿನಕ್ಕೆ 2-14 ಘಂಟೆಯವರೆಗೆ ನಮ್ಮನ್ನು ನಿಯಂತ್ರಿಸುವ ಟೀವಿಗೇಕೆ ನಿಯಂತ್ರಣ ಬೋರ್ಡ್ ಕಟ್ಟಿಲ್ಲ. ಮನರಂಜನೆಯ, ಮಾಹಿತಿಯ ಹೆಸರಿನಲ್ಲಿ ಮನೆಹಾಳು ಮಾಡುವಂತಹ ಈ ಕಾರ್ಯಕ್ರಮಳಿಗೇಕೆ ನಿಯಮಾವಳಿಗಳಿಲ್ಲ!? ಎಲ್ಲೋ ಕೇಳಿದ ಪ್ರಕಾರ (ಇದರ ಖಚಿತತೆಯ ಬಗ್ಗೆ ನಿಖರ ಮಾಹಿತಿಯಿಲ್ಲ), ಚೀನಾದಲ್ಲಿ 1996ರಲ್ಲಿ ಸರ್ಕಾರ ಸಂಜೆ 4 ರಿಂದ 6 ಗಂಟೆ ಮಧ್ಯೆ ಯಾವುದೇ ಕಾರ್ಟೂನುಗಳನ್ನು ಪ್ರಸಾರ ಮಾಡುವಂತಿಲ್ಲ ಎಂಬ ನಿಯಮ ಹೊರಡಿಸಿತ್ತಂತೆ. ಯಾಕೆಂದರೆ, ಮಕ್ಕಳು ಶಾಲೆಯಂದ ಬಂದಕೂಡಲೇ ಟಿವಿಯ ಮುಂದೆ ಕುಳಿತು, ಆಟವಾಡುವುದನ್ನೇ ಮರೆಯುತ್ತಿದ್ದರಂತೆ. ಅದನ್ನು ನಿಲ್ಲಿಸಿ, ಮಕ್ಕಳನ್ನು ಮತ್ತೆ ಪ್ರಕೃತಿಯೆಡೆಗೆ ಕರೆದೊಯ್ಯಲು ಸರ್ಕಾರ ಟೀವಿ ಕಾರ್ಯಕ್ರಮಗಳಿಗೆಂದೇ ಹೊಸ ನಿಯಮಾವಳಿಗಳನ್ನು ರೂಪಿಸಿತಂತೆ. ಇದನ್ನೇದರೂ ನಮ್ಮ ಸರ್ಕಾರಗಳು ಕಾರ್ಯರೂಪಕ್ಕೆ ತಂದರೆ ‘ಹಿಟ್ಲರ್ ಸರ್ಕಾರ’ ಎಂದು ನಮ್ಮ ಮಾಧ್ಯಮಗಳು ಬೊಬ್ಬಿರಿಯುತ್ತವೆ. 
 
ಆದರೆ ಈ ಟೀವಿ ಕಾರ್ಯಕರ್ಮಗಳಿಗೆ, ಅವುಗಳನ್ನು ಪ್ರಾಯೋಜಿಸುವ ಕೆಲ ಉತ್ಪನ್ನಗಳ ಜಾಹೀರಾತುಗಳಿಗೆ ಕಡಿವಾಣ ಹಾಕದಿದ್ದರೆ ನಾವೆಂತಹ ಕೀಳುಅಭಿರುಚಿಯ ಮುಂದಿನ ಜನಾಂಗವೆಂದನ್ನು ನಿರ್ಮಿಸುತ್ತಿದ್ದೇವೆ ಎಂಬುದರ ಬಗ್ಗೆ ನಾವು ಯೋಚಿಸಿದ್ದೇವೆಯೇ!? ಎಸ್ಸೆಸ್ಸೆಲ್ಸಿ ಪರೀಕ್ಷೆ ನಪಾಸಾದದ್ದಕ್ಕೆ ನೇಣಿಗೆ ಶರಾಣಾಗುವ, ಧಾರವಾಹಿಯಲ್ಲಿ ತನ್ನ ಪ್ರಿಯತಮನನ್ನು ಕಸಿದುಕೊಂಡದ್ದಕ್ಕೆ ಒಂದು ಹುಡುಗಿ ಇನ್ನೊಬ್ಬಳನ್ನು ಕೊಲೆಗೈದಿದ್ದನ್ನು ನೋಡಿ ಪ್ರೇರಣೆಗೊಂಡು ತನ್ನ ಸಹಪಾಠಿಯ ಮೇಲೆ ಪೆನ್ನಿನಿಂದ ಕೈವಾರದಿಂದ ಹಲ್ಲೆ ಮಾಡುವಂತ, ತನ್ನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದಕ್ಕೆ ಹೆಣ್ಣಿನ ಮೇಲೆ ಆಸಿಡ್ ಎರಚುವ, ಯಾವುದೋ ಕಾರ್ಯಕ್ರಮದಲ್ಲಿ ನಾಯಕ ನಾಯಕಿಯರು ಕುಡಿದರೆಂಬ ಕಾರಣಕ್ಕೆ ತಾನೂ ಕುಡಿಯುವ, ಹೊಗೆ ಬಿಡುವ ಚಟಕ್ಕೆ ಬಲಿಯಾಗುವಂತಹ, ಬೆಳ್ಳಗಿದ್ದರಷ್ಟೇ ಸುಂದರ ಹಾಗೂ ಸದೃಡ ವ್ಯಕ್ತಿವಿರಲು ಸಾಧ್ಯ ಎಂದು ತಿಳಿದಿರುವ, ಎಲ್ಲೋ ನೋಡಿದ ತುಂಬಿದೆದೆಯ ಹೆಣ್ಣಿನ ಚಿತ್ರಕ್ಕೆ ತಲೆಕೆಡಿಸಿಕೊಂಡು ದಾರಿಯಲ್ಲಿ ಕಂಡ ಹೆಣ್ಣಿನ ಮೇಲೆರಗುವ ನಾಮರ್ದಗಳನ್ನೂ, ಟೊಳ್ಳು ಆತ್ಮವಿಶ್ವಾಸದ ಹೆಣ್ಣುಮಕ್ಕಳನ್ನೂ ಸೃಷ್ಟಿಸುತ್ತಿದ್ದೇವೆ ಎಂಬ ಅಪಾಯದ ಅರಿವಿದೆಯೇ ನಮಗೆ?
 
‘ಸಮಾಜದಲ್ಲಿ ನಡೆಯುದನ್ನೇ ನಾವು ತೋರಿಸುತ್ತಿದ್ದೇವೆ’ ಎನ್ನುವ ಕಾರ್ಯಕ್ರಮಗಳ ವಾದಕ್ಕೂ, ‘ಇಂತಹ ಕಾರ್ಯಕ್ರಮಗಳನ್ನು ನೋಡಿಯೇ, ಇಂತಹ ಅಪರಾದಗಳು ನಡೆಯುತ್ತಿರುವುದು’ ಎನ್ನುವ ಪೋಷಕರ ವಾದಕ್ಕೂ ಮಧ್ಯದ ಆವರ್ತಕ ತರ್ಕಕ್ಕೆ ಕೊನೆಯಲ್ಲಿ!? ಸಮಾಜವನ್ನು ಜೀವನ್ಮುಖಿಯಾಗಿಸಿ, ಸೃಜನಾತ್ಮಕ ಮನರಂಜನೆ ಒದಗಿಸಿ, ಜಗತ್ತಿನ ಆಳಗಲ ತೆರೆದಿಟ್ಟು, ಅದರ ಆರೋಗ್ಯ ಕಾಪಾಡುವ ಹೊಣೆ ಸಾಮಾಜಿಕ ವಾಹಿನಿಗಳ ಮೇಲೆಯೇ ನಿಲ್ಲುತ್ತದೆಯೇ ಹೊರತು, ವಾಹಿನಿಗಳ ಕಾರ್ಯಕ್ರಮ ನೋಡಿ ತಮಗೆ ಬೇಕಾದ್ದನ್ನು ಮಾತ್ರ ಆಯ್ಕೆಮಾಡುವ ಹೊಣೆ ವೀಕ್ಷಕರ ಮೇಲೆ ನಿಲ್ಲುವುದಿಲ್ಲ. ಯಾಕೆಂದರೆ ನಮಗೆ ಗೊತ್ತಿಲ್ಲದಂತೆಯೇ, ನಮ್ಮ ಆಯ್ಕೆಯ ಸ್ವಾತಂತ್ರ್ಯದ ಪರಿಧಿಯಿಂದ ಹೊರನಿಂತು ನಾವು ಈ ಕಾರ್ಯಕ್ರಮಗಳಿಗೆ ತೆರೆದುಕೊಳ್ಳುತ್ತೇವೆ. ನಮ್ಮಷ್ಟಕ್ಕೆ ನಾವು ಟೀ ಕುಡಿಯುತ್ತಿದ್ದರೂ ಹೋಟೆಲಿನವ ಹಾಕಿದ ಯಾವುದೋ ‘ಪ್ರತಿಭಾನ್ವೇಷಣೆ’ಯ ಕಾರ್ಯಕ್ರಮಕ್ಕೋ, ಬಸ್ಸಿನಲ್ಲಿ ಪ್ರಯಾಣಿಸುವಾಗ ಚಾಲಕ ಹಾಕಿದ ಎಫ್.ಎಂ ಕಾರ್ಯಕ್ರಮಕ್ಕೋ ನಾವು ಬಲಿಪಶುಗಳಾಗಿಬಿಟ್ಟಿರುತ್ತೇವೆ. ಆದ್ದರಿಂದ ನನ್ನ ಪ್ರಕಾರ, ಈ ಹೊಣೆಯ ವಾದ ಕೊನೆಗೂ ಬಂದು ನಿಲ್ಲುವುದು ಟೀವಿ ಕಾರ್ಯಕ್ರಮಗಳ ಮೇಲೆಯೇ.
 
 
ಇಷ್ಟೆಲ್ಲಾ ತಲೆಕೆರೆದುಕೊಂಡ ಮೇಲೆ, ಕೊನೇ ಪ್ರಶ್ನೆ:
 
“ಟೀವಿ ಕಾರ್ಯಕ್ರಮಗಳಿಗೆ ಸೆನ್ಸಾರ್ ಬೇಕೆ!?”

ಐನೂರಾತೊಂಬತ್ತೇಳು ಅಡಿ ಎತ್ತರದ ಕನಸು ಮತ್ತದರ ಅಗತ್ಯತೆ

ಮಾನವರು ಅನಾದಿಕಾಲದಿಂದಲೂ ದೇವರು, ಪ್ರಾಣಿಗಳು ಹಾಗೂ ಇನ್ನಿತರ ನಿರ್ಜೀವಿ ವಸ್ತುಗಳ ವಿಗ್ರಹ ಹಾಗೂ ಪ್ರತಿಮೆಗಳನ್ನು ಕಟ್ಟುತ್ತಲೇ ಬಂದಿದ್ದಾರೆ. 1939ರಲ್ಲಿ ಜರ್ಮನಿಯ ಗುಹೆಯೊಂದರಲ್ಲಿ ಪತ್ತೆಯಾದ ಜಗತ್ತಿನ ಅತ್ಯಂತ ಪುರಾತನವಾದ ‘ಸಿಂಹಮಾನವ (Lion Man)’ನ ವಿಗ್ರಹ ಸರಿಸುಮಾರು ನಲವತ್ತು ಸಾವಿರ ವರ್ಷಗಳಷ್ಟು ಹಳೆಯದು. ವಿಗ್ರಹ ಹಾಗೂ ಪ್ರತಿಮೆಗಳ ಬಗೆಗಿನ ನಮ್ಮ ಒಲವು ಎಷ್ಟು ಹಳೆಯದು ಎಂದು ಇದರಿಂದಲೇ ತಿಳಿದುಬರುತ್ತದೆ. ಅಂದಿನಿಂದಲೂ ನಾವು ಹಲವಾರು ಕಾರಣಗಳಿಗಾಗಿ ಪ್ರತಿಮೆಗಳನ್ನು ಕಟ್ಟುತ್ತಲೇ ಬಂದಿದ್ದೇವೆ.

ನಾಗರೀಕತೆ ಬೆಳೆದಂತೆ, ಮುಂದುವರೆದಂತೆ ಮಾನವರು ದೇವರಿಗೆ ಮಾತ್ರವಲ್ಲದೆ, ಕೆಲವೊಂದು ಐತಿಹಾಸಿಕ ಘಟನೆಗಳು (ಯುದ್ಧದ ಗೆಲುವು, ಸ್ವಾಂತತ್ರ್ಯ), ಗಣ್ಯವ್ಯಕ್ತಿಗಳು (ಚಿಂತಕರು, ಅತೀಂದ್ರೀಯ ಶಕ್ತಿಯುಳ್ಳವರು) ಹಾಗೂ ಸ್ಮರಣೀಯ ಪ್ರಾಣಿ (ಸ್ಫಿಂಕ್ಸ್, ಬ್ಯಾರಿ ದ ಸೈಂಟ್ ಬರ್ನಾರ್ಡ್)ಗಳ ನೆನಪು ದೀರ್ಘಕಾಲ ಉಳಿಯಲು, ಹಾಗೂ ಆ ನೆನಪುಗಳನ್ನು ಮುಂದಿನ ತಲೆಮಾರಿಗೆ ದಾಟಿಸಲು ಸಹ ಶಿಲ್ಪಕಲಾಕೃತಿಗಳು ಒಂದು ಒಳ್ಳೆಯ ಮಾರ್ಗ ಎಂಬುದನ್ನು ಅರಿತುಕೊಂಡರು. ಆ ಕಾರಣಕ್ಕಾಗಿಯೇ ಝೀಯಸ್ ನ ಮೂರ್ತಿ, ಲಿಬರ್ಟಿ ಪ್ರತಿಮೆ, ಸಾಂಚೀ ಸ್ತೂಪ, ಕಮಕೂರದ ಬುದ್ದ, ಕೋಪನ್ ಹೇಗನ್ನಿನ ಮತ್ಯಕನ್ಯೆ, ರೀಯೋದ ವಿಮೋಚಕ ಕ್ರಿಸ್ತ (ಇತ್ತೀಚಿನ ಉದಾಹರಣೆಯಲ್ಲಿ ಮಾಯಾವತಿ ಹಾಗೂ ಆಕೆಯ ಆನೆಗಳು ) ಮುಂತಾದುವು ಸೃಷ್ಟಿಸಲ್ಪಟ್ಟವು. ಮುಂದೆ ಲೋಹಯುಗದಲ್ಲಿ ಈ ಕಾರ್ಯಕ್ಕಾಗಿ ಕಲ್ಲಿನಬದಲು ಲೋಹವೂ ಉಪಯೋಗವಾಯಿತು. ನಾಗರೀಕತೆಯ ಮಟ್ಟ ಹಾಗೂ ಗಣ್ಯತೆಯ ಮಟ್ಟಕ್ಕನುಗುಣವಾಗಿ ಕಬ್ಬಿಣ, ಕಂಚು, ಉಕ್ಕು, ಹಾಗೂ ಚಿನ್ನ ಈ ಕೆಲಸಕ್ಕಾಗಿ ಬಳಕೆಯಾಗಲಾರಂಭಿಸಿದವು. ಪಿರಮಿಡ್ಡುಗಳಲ್ಲಿ ಫೆರ್ಹೋಗಳ ಪ್ರತಿಮೆಗಳು ಚಿನ್ನದಲ್ಲೂ, ಹಾಗೂ ಸೇವಕರು ಹಾಗೂ ಕಾವಲಿಗಾರರ ಪ್ರತಿಮೆಗಳು ಕಬ್ಬಿಣ/ಕಂಚಿನಲ್ಲಿ ಇರುವುದನ್ನು ನೀವು ಗಮನಿಸರಬಹುದು. ಹಲವಾರು ಬಾರಿ ನಾಗರೀಕತೆಯ ಚಿಂತನೆಗಳನ್ನೂ ಕೂಡ ಶಿಲ್ಪಗಳಲ್ಲಿ ಬೆಸೆಯಲು ಪ್ರಯತ್ನಗಳು ನಡೆದವು. ಉದಾಹರಣೆಗೆ, ಈಸ್ಟರ್ ದ್ವೀಪದಲ್ಲಿರುವ ನೂರಾರು ಮಾನವರೂಪಿ ನಿಗೂಡ ಶಿಲ್ಪಗಳು ಏನನ್ನೋ ಹೇಳಲು ಬಯಸುತ್ತಿವೆ ಎಂದು ನೋಡುಗರಿಗೆ ಅನಿಸಿದರೆ ಆಶ್ಚರ್ಯವೇನಿಲ್ಲ. ಒಟ್ಟಿನಲ್ಲಿ ಇತಿಹಾಸದುದ್ದಕ್ಕೂ ಒಂದು ನಗರದ, ದೇಶದ, ಹಾಗೂ ನಾಗರೀಕತೆಯ ಔನ್ನತ್ಯವನ್ನು ಪ್ರತಿಮೆ ಹಾಗೂ ಕಲಾಕೃತಿಗಳು ಸಾರಲು ಪ್ರಯತ್ನಿಸಿವೆ ಎಂದರೆ ತಪ್ಪೇನಿಲ್ಲ. ಹತ್ತಾರುಸಾವಿರ ವರ್ಷಗಳಿಂದ ಮಾನವರು, ನಾಗರೀಕತೆಗಳು, ದೇಶಗಳು ಹಾಗೂ ಪ್ರದೇಶಗಳು ತಮ್ಮ ಅಸ್ಮಿತೆಯನ್ನು ಕೆಲ ಪ್ರತಿಮೆಗಳ ಮೂಲಕ ಪ್ರಚುರಪಡಿಸಲು ಪ್ರಯತ್ನಿಸಿವೆ.

ಇನ್ನು ಭಾರತದ ವಿಷಯಕ್ಕೆ ಬಂದರೆ ನಮಗೆ ಕಾಣಸಿಗುವುದೇನೆಂದರೆ, ಭಾರತೀಯ ನಾಗರೀಕತೆಗಳು (ಹಾಗೂ ರಾಜರ ಸಾಮ್ರಾಜ್ಯಗಳು) ಸಾಂಕೇತಿಕ ಜೀವನಶೈಲಿಯಲ್ಲಿ ಗಾಡವಾದ ನಂಬಿಕೆಯನ್ನು ಹೊಂದಿರುವುದು ಹಾಗೂ ಇದಕ್ಕನುಗುಣವಾಗಿ ಭಾರತಖಂಡದ ಮೂಲಧರ್ಮವಾದ ಹಿಂದೂ ಧರ್ಮದಿಂದ ಹಿಡಿದು, ವಾಸ್ತುಶಿಲ್ಪ, ಕಲಾಪ್ರಕಾರಗಳವರೆಗೆ ಎಲ್ಲವೂ ಸಾಂಕೇತಿಕವಾದ ಜೀವನಮೌಲ್ಯವನ್ನು ಬಿಂಬಿಸುವುದು. ನಮ್ಮ ಪುರಾಣಕಥೆಗಳಲ್ಲಿ ಬರುವ ಕತೆಗಳು, ಅವುಗಳಲ್ಲಿನ ಪಾತ್ರಗಳು, ಪೂಜಿಸಲ್ಪಡುವ ದೇವರುಗಳು ಮತ್ತವುಗಳ ರೂಪಗಳು ಯಾವುದನ್ನೂ ನೀವು ಬರೀ ತೋರಿಕೆಯೆಂದು ಭಾವಿಸುವ ಹಾಗೆಯೇ ಇಲ್ಲ. ಅಲ್ಲಿ ಪ್ರತಿಯೊಂದಕ್ಕೂ ಅರ್ಥವಿದೆ, ನಾಗರೀಕತೆ ಏನನ್ನೋ ಹೇಳಲು ಹೊರಟಿರುವ ತುಡಿತ ಎದ್ದು ಕಾಣುತ್ತದೆ. ನಮ್ಮ ದೇವರುಗಳಾದ ಗಣಪ, ತ್ರಿಮೂರ್ತಿಗಳು, ನಂದಿ, ನಾಗ, ರಾಮಾಯಣದ ಹತ್ತುಮುಖದ ರಾವಣ, ಅವನನ್ನು ಸೋಲಿಸಲು ರಾಮನಿಗೆ ಸಹಾಯಮಾಡಿದ ಹನುಮಂತ, ರಾವಣನೊಂದಿಗೆ ಒಮ್ಮೆ ಹೋರಾಡಿದ ಜಟಾಯು, ಕುಂಭಕರ್ಣ, ಮಹಾಭಾರತದ ಗಾಂಧಾರಿ, ಸಂಜಯ, ವಿಧುರ, ಶಕುನಿ, ಬಕಾಸುರ, ಘಟೋತ್ಕಜ, ಹಿಡಿಂಬೆ, ಜರಾಸಂಧ, ಶಿಶುಪಾಲ….ಈ ಪಾತ್ರಗಳು ನಿಜಜೀವನದಲ್ಲಿ ಘಟಿಸುವುದು ಎಷ್ಟೇ ಅಸಾಧ್ಯವೆನ್ನಿಸಿದರೂ ಸಹ, ಅಲ್ಲಿ ಪ್ರತಿಯೊಂದಕ್ಕೂ ಒಂದು ಸಾಂಕೇತಿಕ ಅರ್ಥವಿದೆ, ಔಚಿತ್ಯವಿದೆ, ಅವುಗಳ ಹಿಂದೆ ಒಂದು ಸಂದೇಶವಿದೆ. ಹೀಗಾಗಿ ಭಾರತೀಯರಿಗೆ ಸಾಂಕೇತಿಕವಾಗಿ ಪ್ರತಿಮೆಗಳನ್ನು ನಿರ್ಮಿಸುವಿದರಲ್ಲಿ ಎಲ್ಲಿಲ್ಲದ ಆಸಕ್ತಿ. ನಮ್ಮ ರಾಷ್ಟ್ರೀಯ ಲಾಂಚನವನ್ನು ನಾವು ಅಶೋಕನ ಕಾಲದ ಒಂದು ಪ್ರತಿಮಾಸ್ತಂಭಯಿಂದಲೇ ಆಯ್ಕೆಮಾಡಿರುವುದೂ ಇದಕ್ಕೊಂದು ಸಣ್ಣ ನಿದರ್ಶನ.

ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ, ಸರಿಸುಮಾರು ಒಂದುವರ್ಷದಿಂದ ಭಾರತದಲ್ಲಿ ಅತ್ಯಂತ ಚರ್ಚಿಸಲ್ಪಟ್ಟಿರುವ ಒಂದು ವಿಷಯವೆಂದರೆ, ಸರ್ದಾರ ವಲ್ಲಬಾಭಾಯಿ ಪಟೇಲರ ‘ಐಕ್ಯತಾ ಪ್ರತಿಮೆ’(Statue of Unity)ಯ ನಿರ್ಮಾಣ. ಪ್ರಧಾನಿ ಪದವಿಗೆ ಅಂದು ಮುಂಚೂಣಿಯಲ್ಲಿದ್ದ ಮೋದಿ ತಮ್ಮ ಕನಸಾದ ‘ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ’ಯೊಂದನ್ನು ನಿರ್ಮಿಸಬೇಕೆಂಬ ಬಯಕೆಯನ್ನು ಜನರಿಗೆ ಪರಿಚಯಿಸಿದರು. ಎತ್ತರವೆಂದರೆ ಬರೀ ಅಂತಿಂಥಾ ಎತ್ತರವಲ್ಲ, ಸಧ್ಯದ ಅತ್ಯಂತ ಎತ್ತರದ ಪ್ರತಿಮೆಯಾದ 153ಮೀ ಎತ್ತರದ ‘ವಸಂತ ದೇವಾಲಯದ ಬುಧ್ಧ (Spring Temple Buddha)’ನಿಗಿಂತ ಬರೀ ಒಂದೆರಡು ಮೀಟರ್ ಎತ್ತರವಲ್ಲ. ಮೋದಿ ಕನಸು ಕಾಣುವಾಗ ಸಣ್ಣದ್ದನ್ನು ಎಂದಿಗೂ ಕಾಣುವುದಿಲ್ಲ ಎಂಬುದು ಗೊತ್ತಿರುವ ವಿಷಯವೇ. ಹಾಗಾಗಿ ಅವರು ಈಗಿರುವ ಪ್ರತಿಮೆಯನ್ನು ಮೀರಿಸಿ, ಅದಕ್ಕಿಂತಾ ಬರೋಬ್ಬರಿ 29ಮೀ ಎತ್ತರದ ಪ್ರತಿಮೆಯನ್ನು ಕಟ್ಟುವ ಕನಸು ಕಂಡರು. ಇಂಥಾ ದೊಡ್ಡ ಯೋಜನೆಯ ರೂಪುರೋಷೆ ಸಿದ್ದಮಾಡುವಾಗ ಸಹಜವಾಗಿಯೇ ಅವರ ಮನಸ್ಸಿಗೆ ಬಂದದ್ದು, ಹರಿದುಹಂಚಿದ್ದ ಭಾರತವನ್ನು ಒಂದು ಒಕ್ಕೂಟವನ್ನಾಗಿ ಮಾಡಿದ ‘ಉಕ್ಕಿನ ಮನುಷ್ಯ’, ತಮ್ಮ ರಾಜ್ಯದವರೇ ಆದ ಸರ್ದಾರ ಪಟೇಲರು. ಅವರ ಪ್ರತಿಮೆಯನ್ನೇ ಜಗತ್ತಿನ ಅತ್ಯಂತ ದೊಡ್ಡ ಪ್ರತಿಯನ್ನಾಗಿಸುವ ಕನಸು ಹಂಚಿದರು. ಅತ್ಯಂತ ದೊಡ್ಡ ಪ್ರತಿಮೆಯೆಂದ ಮೇಲೆ ಅದಕ್ಕೆ ವೆಚ್ಚವಾಗುವ ಹಣವೂ ದೊಡ್ಡದೇ, ಅದರ ಬಗ್ಗೆ ಪ್ರತಿಮಾತೂ ದೊಡ್ಡದೇ. ಈಗ ಸಧ್ಯಕ್ಕೆ ಅದರ ಸುತ್ತಮುತ್ತ ನಿರ್ಮಾಣವಾಗಿರುವ ವಿವಾದವೂ ಸಹ ದೊಡ್ಡದೇ

ಬಹುಷಃ ನಮ್ಮ ನಿಮ್ಮಂತಹ ಯಾರೇ ಒಬ್ಬ ಸಾಮಾನ್ಯ ವ್ಯಕ್ತಿ ಅಥವಾ ಒಂದು ಸಂಸ್ಥೆ ಈ ಕೆಲಸಕ್ಕೆ ಕೈ ಹಾಕಿದ್ದರೆ, ಜನ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದರೇನೋ. ಆದರೆ ಇತ್ತೀಚೆಗಿನ ಕೇಂದ್ರ ವಿತ್ತೀಯ ಬಜೆಟ್ಟಿನಲ್ಲಿ ಈ ಯೋಜನೆಗೆ ಸರ್ಕಾರ ಇನ್ನೂರು ಕೋಟಿ ಮೀಸಲಿಟ್ಟುರುವುದು ಬಹಳ ಜನರಿಗೆ ಅಪಥ್ಯವಾದಂತಿದೆ. ಅರುಣ್ ಜೇಟ್ಲಿಯವರು ಈ ಅನುದಾನವನ್ನು ಘೋಷಣೆ ಮಾಡಿದ್ದೇ ತಡ, ಸಾಮಾಜಿಕ ತಾಣಗಳಲ್ಲಿ ಯುದ್ಧವೇ ನಡೆದು ಹೋಯಿತು. ಕೆಲವರು ‘ಅದೇ 200 ಕೋಟಿಯಲ್ಲಿ ಬಹಳಷ್ಟು ಬಡವರ ಹೊಟ್ಟಿ ತುಂಬಿಸಬಹುದಿತ್ತು’ ಎಂದರೆ, ಇನ್ನು ಕೆಲವರು ‘ಇದರ ಅಗತ್ಯವೇನಿದೆ!? ನಾವ್ಯಾಕೆ ಜಗತ್ತಿನಲ್ಲಿ ಅತೀ ಎತ್ತರದ ಪ್ರತಿಮೆ ಕಟ್ಟಬೇಕು!? ಜಗತ್ತನ್ನೇ ಗೆಲ್ಲಬೇಕೆಂಬ ಕೆಟ್ಟ ಹಪಹಪಿ ಇದರಿಂದ ವ್ಯಕ್ತವಾಗುತ್ತದೆ. ಜಗತ್ತು ನಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತದೆ’ ಎಂದರು . ಕೆಲವರಂತೂ ‘ಇದು ನರೇಂದ್ರ ಮೋದಿಯವರ ವೈಯುಕ್ತಿಕ ಕನಸು. ಅವರ ಕನಸಿನ ಯೋಜನೆಗೆ, ಯಾರೋ ಒಬ್ಬ ‘ಗುಜರಾತಿ’ಯ ಪ್ರತಿಮೆಗೆ ಎಲ್ಲಾ ಭಾರತೀಯರು ಯಾಕೆ ಹಣ ತೆರಬೇಕು!?’ ಎಂಬ ಅಲ್ಪತನವನ್ನೂ ತೋರಿದರು.

ನಾನೇಕೆ ಇಂತಹ ಒಂದು ಬೃಹತ್ ಯೋಜನೆಯನ್ನು ಭಾರತೀಯರು ಬೆಂಬಲಿಸಬೇಕೆಂಬ ಒಂದೆರಡು ಮಾತನ್ನು ಹಂಚಿಕೊಳ್ಳಬಯಸುತ್ತೇನೆ. ಈ ದುಡ್ಡನ್ನು ಬೇರೆ ಕಡೆ ಖರ್ಚುಮಾಡಬಹುದೆಂಬ ಉದ್ದೇಶವನ್ನು ಒಂದುಕಡೆ ಒಪ್ಪಿಕೊಂಡರೂ ಸಹ, ಈ ಯೋಜನೆಯನ್ನು ಒಪ್ಪಿಕೊಳ್ಳವಂತೆ ಮಾಡುವ ಅಂಶಗಳು, ತಿರಸ್ಕರಿಸುವ ಅಂಶಗಳಿಗಿಂತ ಹೆಚ್ಚು ಬಲಶಾಲಿಯಾಗಿವೆ. ನನ್ನ ಪ್ರಕಾರ ಇಂತಹ ಪ್ರತಿಮೆಯೊಂದನ್ನು ನಿರ್ಮಿಸುವುದು ‘ಕೆಟ್ಟದ್ದೇನೂ’ ಅಲ್ಲ. ಅಂಕಿಅಂಶಗಳು ನನಗೆ ತಿಳಿದಂತೆ ಹೀಗಿವೆ:

(*) ಈ ಯೋಜನೆಯ ಒಟ್ಟುವೆಚ್ಚ 2500 ಕೋಟಿರೂಪಾಯಿಗಳು ಹಾಗೂ ಇದರಲ್ಲಿ ಉಪಯೋಗಿಸಲ್ಪಡುವ ಬಹುಪಾಲು ಉಕ್ಕು ಮತ್ತು ಕಬ್ಬಿಣ ಮರುಉಪಯೋಗಸಲ್ಪಡುವ ಲೋಹಗಳಿಂದ ಬರಲಿದೆ. ಕೇಂದ್ರ ಸರ್ಕಾರದ ಬಜೆಟ್ ವೆಚ್ಚ (ರೂ. 200ಕೋಟಿ), ಇದರಲ್ಲಿ ಶೇಕಡಾ 10ಕ್ಕಿಂತ ಕಡಿಮೆ. ಗುಜರಾತಿನ ಸರ್ಕಾರ ಸಹ ತನ್ನ ಬಜೆಟ್ಟಿನಲ್ಲಿ ಈ ಯೋಜನೆಗಾಗಿ ನೂರು ಕೊಟಿಯಷ್ಟು ಹಣ ಮೀಸಲಿಟ್ಟಿದೆ.

ಈ ಪ್ರತಿಮೆಯ ನಿರ್ಮಾಣ “ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದೊಂದಿಗೆ” ನಡೆಯಲಿದೆ. ಅಂದರೆ ಯೋಜನೆಯ ಒಟ್ಟು ಹಣ ಸರ್ಕಾರ, ಖಾಸಗಿ ಸಂಸ್ಥೆಗಳ ಹೂಡಿಕೆ ಹಾಗೂ ಜನಸಾಮಾನ್ಯರ ದೇಣಿಗೆಯಿಂದ ಬರಲಿದೆ. ಇದರಲ್ಲಿ ಹೆಚ್ಚಿನ ಹಣ ಸ್ವಯಂಪ್ರೇರಿತ ಕೊಡುಗೆಯಾಗಿರುವುದರಿಂದ, ‘ಸರ್ಕಾರ ಈ ಹಣವನ್ನು ಬೇರೆ ಉತ್ತಮ ಕಾರ್ಯಗಳಿಗೆ ವಿನಿಯೋಗಿಸಬಹುದಿತ್ತು’ ಎಂಬ ವಾದ ಸುಸಂಬದ್ಧವೇ ಅಲ್ಲ. ಈ ಪೂರ್ತಿ ಹಣ ‘ಒಂದು ನಿರ್ದಿಷ್ಟಕಾರ್ಯಕ್ಕಾಗಿ’ ಬಳಸಲ್ಪಡುತ್ತಿರುವುದರಿಂದ, ಯಾವ ‘ಬೇರೆ ಉತ್ತಮ ಕಾರ್ಯ’ಕ್ಕಾಗಿ ಈ ಹಣವನ್ನು ಬಳಸಬಹುದಿತ್ತು? ಎಂಬುದನ್ನು ಸ್ಪಷ್ಟಪಡಿಸದೆ, ಅದಕ್ಕಾಗಿ ಜನರನ್ನು ಹುರಿದುಂಬಿಸದೆ, ಹಣವನ್ನು ಒಟ್ಟುಗೂಡಿಸುವ ಸಾಹಸವನ್ನೂ ತೋರದೆ ಬರೀ ‘ಬೇರೆ’ ಹಾಗೂ ‘ಉತ್ತಮ’ ಕಾರ್ಯಗಳ ವಾದದ ಗೋಡೆಯ ಹಿಂದೆ ಅವಿತು ಒಬ್ಬ ವ್ಯಕ್ತಿಯ ಜನಾನುರಾಗಿ ಶ್ರಮವನ್ನು ವ್ಯರ್ಥವೆಂದು ಕರೆಯುವುದು ಹೇಡಿತನ ಹಾಗೂ ಅಲೋಚನಾರಾಹಿತ್ಯದ ತುತ್ತತುದಿಯಷ್ಟೇ.

(*) ಈ ಪ್ರತಿಮೆ ಅತ್ಯಂತ ಎತ್ತರವಾದದ್ದು. ಹಾಗಾಗಿ ಇದು ಬರೀ ನಿರ್ಮಾಣ ಸಾಹಸವಷ್ಟೇ ಅಲ್ಲ. ಬಹಳ ದೊಡ್ಡ ಅಭಿಯಂತರ (engineering) ಸವಾಲು ಹಾಗೂ ಸಾಹಸವೂ ಹೌದು. ಅತೀಕ್ಲಿಷ್ಟವಾದ ಗಣಕೀಕೃತ ದ್ರವ ಬಲವಿಜ್ಞಾನ ವಿಶ್ಲೇಷಣೆ (computational fluid dynamics analysis), ವಾಯು ಭಾರ ವಿಶ್ಲೇಷಣೆ (wind load analysis), ಹಾಗೂ ರಾಚನಿಕ ವಿಶ್ಲೇಷಣೆ (structural analysis)ಯ ಸವಾಲುಗಳನ್ನು ಮೆಟ್ಟಿನಿಂತು ಇಂತಹ ಪ್ರತಿಮೆಯ ನಿರ್ಮಾಣ ಮಾಡಿ ಪ್ರಪಂಚಕ್ಕೆ ತೋರಿಸುವುದು, ಭಾರತೀಯರಿಗೆ ಎಷ್ಟು ಹೆಮ್ಮೆಯ ವಿಷಯವಾಗಲಿದೆ ಎನ್ನುವುದನ್ನು ಟೀಕಾಕಾರೊಮ್ಮೆ ಅರ್ಥೈಸಿಕೊಳ್ಳುವುದೊಳ್ಳೆಯದು. ಜಗತ್ತಿನ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾವನ್ನು ಕಟ್ಟುವ ಪ್ರಯತ್ನದಲ್ಲಿ ಎಂಜಿನಿಯರುಗಳು ದಿನನಿತ್ಯದ ಜೀವನದಲ್ಲಿ ಉಪಯೋಗವಾಗುವಂತ ಎಷ್ಟೊಂದು ಉತ್ತರಗಳನ್ನು ಕಂಡುಹಿಡಿದರು ಎಂದೊಮ್ಮೆ ತಿಳಿಯುವುದೊಳ್ಳೆಯದು.

(*) ಸಮಸ್ಯೆಗಳಿದ್ದಲ್ಲಿ ಪರಿಹರಿಸಲು ತಜ್ಞರು ಬೇಕು. ಅಂದಮೇಲೆ ಈ ಯೋಜನೆ ತನ್ನ ಬಹಳಷ್ಟು ಸಮಸ್ಯೆಗಳೊಂದಿಗೆ, ಬಹಳಷ್ಟು ಉದ್ಯೋಗಗಳನ್ನೂ ಸೃಷ್ಟಿಸಲಿದೆ. ಬರೀ ಉದ್ಯೋಗಗಳನ್ನಲ್ಲ, ಬಹಳಷ್ಟು ಭಾರತೀಯ ಉದ್ಯೋಗಗಳನ್ನು. ಹೌದು, ಸಧ್ಯದ ಸುದ್ದಿಗಳ ಪ್ರಕಾರ ಅಮೇರಿಕಾ ಮೂಲದ ಟರ್ನರ್ ಕಂಪನಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಿದೆ. ಆದರೆ, ಕೆಲವು ಟೀಕಾಕಾರರ ಪ್ರಕಾರ ಭಾರತೀಯ ಯೋಜನೆಯೊಂದನ್ನು ಅಮೇರಿಕಾ ಮೂಲದ ಕಂಪನಿ ಮಾಡಿದರೆ ಉದ್ಯೋಗಗಳು ಭಾರತದಲ್ಲಲ್ಲ, ಅಮೇರಿಕಾದಲ್ಲಿ ಸೃಷ್ಟಿಯಾಗಲಿವೆ ಎಂದು ಕೂಗಾಡುತ್ತಾ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಜೆಕ್ಟುಗಳು ಯಾವರೀತಿಯಲ್ಲಿ ಕಾರ್ಯಗತಗೊಳ್ಳುತ್ತವೆ ಎಂದು ತಿಳಿಯದೆ ತಮ್ಮ ವಿವೇಚನಾಶೂನ್ಯತೆಯನ್ನು ಮೆರೆದಿದ್ದಾರೆ. ತಮಾಷೆಯೆಂದರೆ ಇವರಲ್ಲಿ ಬಹಳಷ್ಟು ಮಂದಿ ಬೆಂಗಳೂರು, ಗುರಗಾಂವ್ ಹಾಗೂ ಹೈದರಾಬಾದಿನಲ್ಲಿರುವ ಗೂಗಲ್, ಹನಿವೆಲ್, ಮೈಕ್ರೋಸಾಫ್ಟಿನ ಆಫೀಸುಗಳಲ್ಲಿ ಕುಳಿತು ಈ ಚರ್ಚೆಗಳನ್ನು ಮಾಡುತ್ತಿದ್ದಾರೆ. ಅಮೇರಿಕಾದ ಕಂಪನಿಗಳು ಭಾರತದಲ್ಲಿ ಇವರನ್ನು ಕೂರಿಸಿಕೊಂಡು ಅಮೇರಿಕಾದ ಕೆಲಸಗಳನ್ನು ಮಾಡಿಸಿಕೊಂಡರೆ ಏನೂ ತೊಂದರೆಯಿಲ್ಲ, ಆದರೆ ಅಮೇರಿಕಾದ ಕಂಪನಿಯೊಂದು ಭಾರತದಲ್ಲಿ ಇವರಂತವರನ್ನೇ ಕೂರಿಸಿಕೊಂಡು ಭಾರತದ ಕೆಲಸಗಳನ್ನು ಮಾಡುವಂತಿಲ್ಲವಂತೆ, ಇವರ ಪ್ರಕಾರ ಇಂತವರಿಗೆ, ಟರ್ನರ್ ಈ ಯೋಜನೆಯನ್ನು ಪ್ರಾಂಭಿಸುವ ಮುನ್ನ, ಭಾರತದಲ್ಲಿ ಟರ್ನರ್ (ಇಂಡಿಯಾ) ಪೈವೇಟ್ ಲಿಮಿಟೆಡ್ ಎಂಬ ಕಂಪನಿಯನ್ನು ತೆರೆಯಬೇಕು, ಅದರ ಒಟ್ಟು ಉದ್ಯೋಗಿಗಳಲ್ಲಿ 90% ಗಿಂತ ಹೆಚ್ಚಿನಷ್ಟು ಭಾರತೀಯರನ್ನೇ ನೇಮಿಸಿಕೊಳ್ಳಬೇಕೆಂಬ ಕನಿಷ್ಟ ನಿಯಮಾವಳಿಗಳೂ ತಿಳಿದಂತಿಲ್ಲ. ಒಟ್ಟಿನಲ್ಲಿ, ‘ದೇಶದ ಅರ್ಥಿಕತೆಗೆ, ಔದ್ಯೋಗಿಕತೆಗೆ ಈ ಯೋಜನೆ ಸಹಾಯಮಾಡುವುದಿಲ್ಲ’ ಎಂಬ ಇವರ ವಾದದಲ್ಲಿ ಯಾವುದೇ ಹುರುಳಿಲ್ಲ.

(*) “ಪ್ರತಿಮೆಗಳ ಮೇಲೆ ಹಕ್ಕಿಗಳು ಪಿಕ್ಕೆ ಹಾಕುತ್ತವೆ, ಅದಕ್ಕೆ ಯಾರೋ ಚಪ್ಪಲಿಯಲ್ಲಿ ಹೊಡೆಯುತ್ತಾರೆ, ಅದರಿಂದ ಗಲಭೆಗಳಾಗುತ್ತವೆ” ಎಂದು ವಿರೋಧಿಸುತ್ತಿರುವ ಕೆಲ ಪ್ರಭೃತಿಗಳು ಈ ಪ್ರಾಜೆಕ್ಟಿನ ಮಹಾಗಾತ್ರವನ್ನೇ ಅರ್ಥಮಾಡಿಕೊಂಡಂತಿಲ್ಲ. ಅವರ ಆಲೋಚನೆಗಳು, ಅವರು ಊಹಿಸಿರುವ ಪ್ರತಿಮೆಗಳಷ್ಟೇ ಕುಬ್ಜವಾದದ್ದರಿಂದ ಅಂತವರಿಗೆ ನಾನು ಏನೂ ಹೇಳಬಯಸುವುದಿಲ್ಲ. ಹಾಗೇಸುಮ್ಮನೇ 93ಮೀಟರ್ ಎತ್ತರದ ಲಿಬರ್ಟಿ ಪ್ರತಿಮೆಯ ಕಡೆಗೆ ಯಾರೋ ಒಬ್ಬ ಚಪ್ಪಲಿ ಎಸೆಯುವ ದೃಶ್ಯವನ್ನೊಮ್ಮೆ ಊಹಿಸಿಕೊಂಡು ನಗುತ್ತೇನಷ್ಟೇ.

(*) ಈ ಪ್ರತಿಮೆ ಸಾಂಕೇತಿಕವಾಗಿ ಭಾರತದ ಐಕ್ಯತೆ ಹಾಗೂ ಪಟೇಲರಿಗೆ ಸಲ್ಲುವ ಸನ್ಮಾನವಾದರೂ ಸಹ, ಈ ಸ್ಮಾರಕ ಒಂದು ಪ್ರವಾಸಿತಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದನ್ನು ನೋಡಲು ಜನರು ಬಂದೇ ಬರುತ್ತಾರೆ. ಒಬ್ಬಿಬ್ಬರಲ್ಲ, ಬಹಳಷ್ಟು ಜನರು ಬರುತ್ತಾರೆ. ನಮ್ಮ ದೇಶದಿಂದ ಮಾತ್ರವಲ್ಲದೇ, ವಿದೇಶದಿಂದಲೂ ಬರುತ್ತಾರೆ. ಅಂದ ಮೇಲೆ ಈ ಪ್ರತಿಮೆಯಿರುವ ಸುತ್ತಲಿನ ಪ್ರದೇಶದಲ್ಲಿ ಹೋಟೆಲುಗಳು, ಪಾರ್ಕುಗಳು, ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳನ್ನು ಕಾಪಿಡುವ ಒಂದು ವಸ್ತುಸಂಗ್ರಹಾಲಯ ಎಲ್ಲವೂ ನಿರ್ಮಾಣವಾಗಲಿವೆ. ಅಂದಮೇಲೆ ಮತ್ತಷ್ಟು ಉದ್ಯೋಗಗಳ ಸೃಷ್ಟಿ. ಇದರೊಂದಿಗೆ, ಸ್ಥಳೀಯ ಅರ್ಥಿಕತೆ ಮತ್ತಷ್ಟು ಚುರುಕುಪಡೆಯಲಿದೆ. ನಾವಿನ್ನೂ ಪ್ರವಾಸಿಗಳು ವ್ಯಯಿಸಲಿರುವ ಹಣ, ಟಿಕೇಟಿನ ದುಡ್ಡಿನ ಬಗ್ಗೆ ಮಾತೇ ತೆಗೆದಿಲ್ಲ. ನನ್ನ ಆಲೋಚನೆ ಪ್ರಕಾರ ಈ ಯೋಜನೆ, ಈ ಪ್ರತಿಮೆಯೊಳಗೆ ಅಥವಾ ಪಕ್ಕದಲ್ಲಿ ಎಲವೇಟರ್ ಅಥವಾ ಮೆಟ್ಟಿಲುಗಳನ್ನು ನಿರ್ಮಿಸಿ, ಪ್ರವಾಸಿಗಳಿಗೆ ಮೇಲಿನಿಂದ ವಿಹಂಗಮ ನೋಟವೊಂದಕ್ಕೆ ಅನುವು ಮಾಡಿಕೊಡಲಿದೆ. ಅದರ ಟಿಕೇಟಿನ ಶುಲ್ಕವನ್ನೂ ಸೇರಿಸಿ ನೀವೇ ಲೆಕ್ಕ ಹಾಕಿ. ಇದು ನಿಜವಾಗಿಯೂ ಜಗತ್ತಿನ ಅತಿ ದೊಡ್ಡ ಪ್ರತಿಮೆಯಾದಲ್ಲಿ, ಮುಂದಿನ 25 ವರ್ಷಗಳಲ್ಲಿ ಇದನ್ನು ನೋಡಲು ಬರುವ ಜನರ ಸಂಖ್ಯೆಯನ್ನೊಮ್ಮೆ ಊಹಿಸಿ ಮತ್ತೊಮ್ಮೆ ಲೆಕ್ಕ ಹಾಕಿ. ಈ ಬಹಳಷ್ಟು ಟೀಕಾಕಾರರ ಪ್ರಕಾರ ಅಮೇರಿಕಾದ ಲಿಬರ್ಟಿ ಪ್ರತಿಮೆಯೂ ಸಹ ದುಡ್ಡಿನ ಅಪವ್ಯಯವೇ ಆಗಿರಬಹುದು. ಆದರೆ ಅದನ್ನು ಕಟ್ಟಿದಾಗಿನಿಂದ ಇಂದಿನವರೆಗಿನ ಹೂಡಿಕೆಯ ಪ್ರತಿಪಲ(ROI – Return On Investment)ವನ್ನೊಮ್ಮೆ ಗಮನಿಸಿದರೆ, ಆ ಪ್ರತಿಮೆಯನ್ನು ಫ್ರೆಂಚರು ಕಟ್ಟಿಮುಗಿಸಿದ ನಂತರ ನೂರುಪಟ್ಟು ಆದಾಯವನ್ನು ಒದಗಿಸಿದೆ.

(*) ಇನ್ನೊಂದು ಮಾತು ಮರೆಯದಿರೋಣ. ಇಷ್ಟೆಲ್ಲಾ ‘ಖರ್ಚು’ ಭಾರತದ ಅತ್ಯಂತ ಉನ್ನತಮಟ್ಟದ ನಾಯಕರಾದ ಪಟೇಲರಿಗಾಗಿ ಅಂತಾದಲ್ಲಿ, ಅದರಿಂದ ಸೃಷ್ಟಿಯಾಗಲಿರುವ ಉದ್ಯೋಗಗಳು, ಅದರಿಂದ ಬರಲಿರುವ ಆದಾಯ ಇವೆಲ್ಲಾ ಅವರ ಹೆಸರಿನಿಂದ ಅಂತಾದಲ್ಲಿ, ನನ್ನ ಪ್ರಕಾರ ಇದು ಕಾರ್ಯಗತಮಾಡಲೇ ಬೇಕಾದ ಯೋಜನೆ. ಇಷ್ಟು ವರ್ಷ, ದೇಶದ ಪ್ರತೀ ನಗರದಲ್ಲೂ ಒಂದು ರಸ್ತೆಗೆ ಒಬ್ಬರದೇ ಹೆಸರಿಟ್ಟು, ಎಲ್ಲಾ ವಿಮಾನನಿಲ್ದಾಣಗಳೂ ಒಂದೇ ಕುಟುಂಬದ ಬಳುವಳಿಯೇನೋ ಎಂಬಂತೆ ಹೆಸರಿಟ್ಟು ಸಂಭ್ರಮಿಸುತ್ತಿರುವ ನಾವು, ಅಖಂಡ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಿದ ‘ಉಕ್ಕಿನ ಮನುಷ್ಯ’ನಿಗೆ, ಆತನ ನೆನಪಿಗೆ ಒಂದು ಪ್ರತಿಮೆ ನಿರ್ಮಿಸಲೂ ಹಿಂದೆ ಮುಂದೆ ನೋಡುವಂತಾದೆವೇ!? ಅದಕ್ಕಾಗಿ ವ್ಯಯಿಸಲು ಇಚ್ಚಿಸುವ ಇನ್ನೂರು ಕೋಟಿಗೂ ಲೆಕ್ಕ ಕೇಳುತ್ತಿದ್ದೇವೆಯೇ!? ಹಾಗೇ ಲೆಕ್ಕಕ್ಕೆ ಒಂದು ಮಾತು, ಸರ್ಕಾರ ವ್ಯಯಿಸಲಿರುವ ಈ ಇನ್ನೂರು ಕೋಟಿ ಹಣ, 2G ಹಗರಣದ ಒಟ್ಟು ಮೊತ್ತದ 0.02% ಅಷ್ಟೇ.

(*) ನನಗನ್ನಿಸಿದ ಪ್ರಕಾರ ಈ ಟೀಕಾಕಾರ ಪ್ರಕಾರ ಭಾರತದ ಮಂಗಳಯಾನವೂ ಸಹ ವೃಥಾ ಖರ್ಚೇ! ಇಡೀ ವಿಶ್ವದಲ್ಲಿ ಎಲ್ಲರಿಗಿಂತ ಅತೀ ಕಡಿಮೆ ವೆಚ್ಚದಲ್ಲಿ ಮಂಗಳನಲ್ಲಿ ಕಾಲಿರಿಸುವ ಕನಸು ಕಂಡು, ಅದನ್ನು ಮಾಡಿತೋರಿಸಿ, ಜಗತ್ತನೇ ನಿಬ್ಬೆರಗಾಗಿಸಿದ ನಮ್ಮ ಸಾಧನೆಯೂ ಇವರ ಮಟ್ಟಿಗೆ ಸಣ್ಣದು ಹಾಗೂ ವೃಥಾಖರ್ಚು. ರಾಕೇಶ ಶರ್ಮಾ ಚಂದ್ರಯಾನ ಮಾಡಿದ್ದೂ ವ್ಯರ್ಥ. ‘ಅವನಲ್ಲಿಗೆ ಹೋದರೆ ನಮಗೇನು ಸಿಕ್ಕಿತು!? ಪಾಪ, ಇಲ್ಲೆಷ್ಟು ಹಸಿದ ಹೊಟ್ಟೆಗಳಿವೆ ನೋಡಿ!?’ ಅಂದು ಕೇಳುತ್ತಾರೆ. “ಕ್ರೀಡಾ ವಿಶ್ವವಿದ್ಯಾಲಯವನ್ನೇಕೆ ಸ್ಥಾಪಿಸಬೇಕು!? ಪಿ.ಟಿ ಉಷಾ ಒಲಂಪಿಕ್ಸಿನಲ್ಲಿ ಓಡಿದರೆ ನನಗೇನು!? ಪಾಪ, ಇಲ್ಲೆಷ್ಟು ಜನ ಪುಟ್ಪಾತಿನ ಮೇಲೆ ಮಲಗಿದ್ದಾರೆ ನೋಡಿ!?” ಅನ್ನಬಹುದು. ಅದಕ್ಕೇ ಇರಬೇಕು ದಾರ್ಶನಿಕರು ಹೇಳಿರುವುದು ‘ಕೆಲವರನ್ನು ಎಂದಿಗೂ ಮೆಚ್ಚಿಸಲು ಸಾಧ್ಯವಿಲ್ಲ’ ಎಂದು

ಕೊನೇ ಮಾತು: ಈ ಪ್ರತಿಮೆ ನಿರ್ಮಾಣವಾಗಲಿಲ್ಲವೆಂದರೆ ನಾವೇನೂ ಪಟೇಲರನ್ನು ನೆನಪಿಸಿಕೊಳ್ಳುವುದೆಲ್ಲವೆಂದಲ್ಲ. ನಮ್ಮ ಮನಸ್ಸಿನಲ್ಲಿ ಅವರು ಖಂಡಿತಾ ಬದುಕಿರುತ್ತಾರೆ. ಆದರೆ, ಒಬ್ಬ ನಾಯಕನಿಗೆ ವಿನೂತನವಾದ ರೀತಿಯಲ್ಲಿ ಧನ್ಯವಾದಗಳನ್ನರ್ಪಿಸುವ ಕನಸೊಂದನ್ನು, ಅವಕಾಶವೊಂದನ್ನು ನಮ್ಮ ಸಧ್ಯದ ಪ್ರಧಾನಿ ಕಟ್ಟಿಕೊಟ್ಟಿದ್ದಾರೆ. ಅದನ್ನು ಪೂರ್ತಿಮಾಡುವ ಮೂಲಕ ಇಡೀ ವಿಶ್ವದ ಕಣ್ಸೆಳೆಯುವ ಅದ್ಬುತ ಸುವರ್ಣಾವಕಾಶ ನಮಗೆ ಒದಗಿಬಂದಿದೆ. ಅದನ್ನು ಎರಡೂ ಕೈಗಳಿಂದ ಬಾಚಿಕೊಳ್ಳುತ್ತೇವೆಯೋ ಅಥವಾ ಕೈಚೆಲ್ಲುತ್ತೇವೆಯೋ ಎನ್ನುವುದು ನಮಗೆ ಬಿಟ್ಟದ್ದು. ಅಖಂಡ ಭಾರತದ ಪೂರ್ಣ ಪರಿಕಲ್ಪನೆ ಹಾಗೂ ಅದರ ಬಗ್ಗೆ ಹೆಮ್ಮೆ ಇರುವ ಯಾವ ಭಾರತೀಯನೂ ಈ ಯೋಜನೆಯನ್ನು ವಿರೋಧಿಸಲಾರ ಎಂದು ನನ್ನ ದೃಡವಾದ ನಂಬಿಕೆ.

ಅತ್ಯಾಚಾರವೆಂಬ ಸಮಸ್ಯೆ….

(*) ಲೈಂಗಿಕ ಶಿಕ್ಷಣ ಕೊಟ್ರೆ ಅತ್ಯಾಚಾರಗಳು ಕಡಿಮೆಯಾಗುತ್ತವೆ ಅನ್ನೋದನ್ನ ನಾನೊಪ್ಪಲ್ಲ.
(*) ಹುಡುಗೀರು ಗಿಡ್ಡವಾದ, ಬಿಗಿಯಾದ ಉಡುಪು ತೊಡೋದನ್ನ ನಿಲ್ಲಿಸಿದ್ರೆ, ಮೊಬೈಲ್ ಉಪಯೋಗ ಕಡಿಮೆ ಮಾಡಿದ್ರೆ ಅತ್ಯಾಚಾರಗಳು ಕಡಿಮೆಯಾಗುತ್ತವೆ ಅನ್ನೋದನ್ನೂ ನಾನೊಪ್ಪಲ್ಲ.
(*) ಯಾವನೋ ಎರೆಕ್ಷನ್ ತಡೆಯಲಾಗದವ ಮಾತ್ರ ರೇಪ್ ಮಾಡ್ತಾನೆ ಅನ್ನೋದನ್ನೂ ನಾನೊಪ್ಪಲ್ಲ.

ಹೆಣ್ಣು ಬೈಕ್ ಓಡಿಸಿದ್ರೂ ಮರುಳಾಗ್ತಾಳೆ, ಡಿಯೋ ಹಾಕಿದ್ರೂ ಆಕರ್ಷಿತಳಾಗ್ತಾಳೆ, ಹೇರ್ ಜೆಲ್ ಹಾಕಿಯೂ ಹುಡುಗಿಯರನ್ನ ಪಟಾಯಿಸಬಹುದು ಅನ್ನೋ ಮೂರನೇ ದರ್ಜೆಯ ಜಾಹೀರಾತಿನ ಬಗ್ಗೆ ಕಮಕ್-ಕಿಮಕ್ ಎನ್ನದ ನಮ್ಮ ಮಹಿಳಾವಾದಿಗಳು ಹಾಗೂ ಬುದ್ಧಿಜೀವಿಗಳು, ಅತ್ಯಾಚಾರ ನಡೆದಾಗ ಮಾತ್ರ ಬೊಬ್ಬಿರಿಯುವುದನ್ನು ಸ್ವಲ್ಪ ಕಡಿಮೆ ಮಾಡಿದರೆ ನಮ್ಮ ಸಮಾಜ ಉದ್ಧಾರವಾಗುವುದರೆಡೆಗೆ ಮೊದಲ ಹೆಜ್ಜೆ ಇಡಬಹುದೇನೋ. ಇನ್ನು ನಮ್ಮ ಸಿನಿಮಾಗಳೋ, ಅದರ ಸೂಪರ್ ಸ್ಟಾರ್ ಕಪೂರ್, ಖಾನ್ ಮಹಾಶಯರ ಕಥೆಯಂತೂ ಕೇಳುವುದೇ ಬೇಡ. ಸಿನಿಮಾಗಳಲ್ಲಿ ತಮ್ಮ ಮಕ್ಕಳ ವಯಸ್ಸಿನ ಹೆಂಗೆಳೆಯರನ್ನು ಚೀಪ್-ಟ್ರಿಕ್ ಉಪಯೋಗಿಸಿ ಬಲೆಗೆ ಬೀಳಿಸುವುದಲ್ಲದೇ, ಚಡ್ಡಿ-ಬನಿಯಾನ್ ಜಾಹಿರಾತಿನಲ್ಲೂ ಹೆಣ್ಣುಗಳು ತಮ್ಮನ್ನು ಮುತ್ತುವುದರಂತಹ ಸಂದೇಶವನ್ನು ಜನರಿಗೆ ಕೊಡುತ್ತಾರೆ. ಇಂತಹ ಟೀವಿ ಜಾಹೀರಾತುಗಳು, ದ್ವಂದ್ವಾರ್ಥ ಸಂಭಾಷಣೆಯ ಚಿತ್ರಗಳನ್ನು ನೋಡಿ ಬೆಳೆದ ಮಕ್ಕಳು ಇನ್ನೆಂತಹ ಪಾಠ ಕಲಿಯಲು ಸಾಧ್ಯ!? ಸಧ್ಯಕ್ಕೆ ಲೈಂಗಿಕ ಶಿಕ್ಷಣಕ್ಕಿಂತ ಮುಖ್ಯವಾಗಿ ಬೇಕಿರುವುದು, ನಮ್ಮ ಕುಲಗೆಟ್ಟ ಟಿವಿ ಸಿನಿಮಾ ಮಾಧ್ಯಮದ ಮೇಲಿನ ಹಿಡಿತ ಹಾಗೂ ಸ್ವಲ್ಪ ನೈತಿಕತೆಯ ಪಾಠಗಳು.

ಇನ್ನೊಂದು ಮಾತು ತಿಳಿಯೋಣ. ಅತ್ಯಾಚಾರಿಯ ಮನಸ್ಸು ವಿಕೃತಿಯಿಂದ ತುಂಬಿರುವಂತದ್ದು. ಅದೊಂದು ಮಾನಸಿಕ ರೋಗಗಳ ಗೂಡು. ವಿಕ್ಷಿಪ್ತ ವಾಂಛೆಗಳ ಕೂಪ. ಆ ವ್ಯಕ್ತಿಗೆ ‘ಆ ಸಮಯಕ್ಕೆ’ ಏನೋ ಒಂದು ಸಿಕ್ಕಿದರಾಯ್ತು. ಮಗುವೋ, ಹೆಂಗಸೋ, ವೃದ್ಧೆಯೋ ಯಾವುದಾದರೂ ಸರಿ. ಅದು ಸಿಗಲಿಲ್ಲವೆಂದಾದಲ್ಲಿ ಗಂಡಸರ ಮೇಲೂ, ಪ್ರಾಣಿಗಳ ಮೇಲೂ ಏರಿದವರ ಬಗ್ಗೆ ನಾವು ಕೇಳಿದ್ದೇವೆ. ನಿಜವಾದ ಗಂಡಸು ಹೆಣ್ಣಿನ ಮೈಮೇಲೆ ಏರುವುದಿಲ್ಲ. ಮೃಗದಂತೆ ಬಳಸಿ ಬಿಸಾಡುವುದಿಲ್ಲ. ಆದ್ದರಿಂದ ನನ್ನ ಪ್ರೀತಿಯ ಮಹಿಳಾವಾದಿಗಳೇ….ಯಾವನೋ ಒಬ್ಬ ಝಿಪ್ ನಿಲ್ಲದವ ಪ್ಯಾಂಟ್ ಬಿಚ್ಚಿದ್ದಕ್ಕೆ ಇಡೀ ಗಂಡುಕುಲದ ಮೇಲೆ ಹರಿಹಾಯ್ದು, ಮನುಸ್ಮೃತಿಯನ್ನು ಚರ್ಚೆಗೆ ಎಳೆದು ನಿಲ್ಲಿಸುವ ಅಗತ್ಯವಿಲ್ಲ. ಯಾವುದೋ ಒಂದು ಹೆಣ್ಣು ರಾತ್ರಿ ಹನ್ನೆರಡಕ್ಕೆ ತನ್ನ ಗೆಳೆಯನೊಂದಿಗೆ ಮಾತನಾಡುತ್ತಾ ನಿಂತದ್ದಕ್ಕೆ ‘ರಾತ್ರಿ ಹನ್ನೆರಡಕ್ಕೆ ಗಂಡಸಿನೊಡನೆ ಮನೆಯ ಹೊರಗೆ ಇವಳಿಗೇನು ಕೆಲಸ!?’ ಎಂದು ಅನುಮಾನಿಸುವ ಅಗತ್ಯವೂ ಇಲ್ಲ. ಅತ್ಯಾಚಾರಕ್ಕೆ ಹೆಣ್ಣಿನ ಸ್ವಾತಂತ್ರ್ಯಹರಣ ಉತ್ತರವಲ್ಲ. ಹಾಗಂತ ಸ್ವಾತಂತ್ರ್ಯ ಹಾಗೂ ಸ್ವೇಚ್ಛೆಯ ಮಧ್ಯದ ಅಂತರವನ್ನೂ fairer sex ಅರ್ಥೈಸಿಕೊಳ್ಳಬೇಕು.

ಬೆಂಗಳೂರಿನಲ್ಲಿ ಸರಗಳ್ಳತನ ಯಾಕೆ ಹೆಚ್ಚಾಯಿತು? ಎನ್ನುವುದನ್ನೊಮ್ಮೆ ಯೋಚಿಸಿ ನೋಡಿ. ಯಾವ ಹೆಣ್ಣೂ ಕೂಡ ‘ಬಾ ನನ್ನ ಸರವನ್ನು ಕದಿ’ ಎಂದು ಕೂಗಲಿಲ್ಲ. ಆದರೆ, ಕದಿಯುವವನ ಮನಸ್ಥಿಯನ್ನೂ ಒಮ್ಮೆ ಅವಲೋಕಿಸಿ ನೋಡಿ. ಅವನ ವೈಯುಕ್ತಿಕ ಆರ್ಥಿಕ ಕಾರಣಗಳೇನೋ, ಎಷ್ಟೋ!? ಸರಗಳ್ಳತನದಲ್ಲಿ ನಾವು ಹೇಗೆ ಕಳ್ಳನನ್ನು ಬಂಧಿಸಿ ಶಿಕ್ಷಿಸುವುದು ಮಾತ್ರವಲ್ಲದೇ, ಹೆಂಗೆಳೆಯರಿಗೂ ಎಚ್ಚರ ಕೊಡುತ್ತೇವೆಯೋ ಹಾಗೆಯೇ ಬೇರೆ ಅಪರಾಧಗಳಲ್ಲಿಯೂ ಶೋಷಿತವರ್ಗವನ್ನು ಎಚ್ಚರಗೊಳಿಸುವುದು ಅತ್ಯಗತ್ಯ. ಹಸುಳೆಗಳ ಮೇಲೆ ಅತ್ಯಾಚಾರಗೈಯ್ಯುವ ಪಶುಗಳ ಬಗ್ಗೆ ಈ ಯಾವ ಥಿಯರಿಗಳೂ ಕೆಲಸಕ್ಕೆ ಬರೋಲ್ಲ. ಅಂಥವರನ್ನು ಸುಮ್ಮನೆ ನಾಲ್ಕು ರಸ್ತೆ ಸೇರುವಲ್ಲಿ ನಿಲ್ಲಿಸಿ ಕಲ್ಲು ಹೊಡೆದು ಸಾಯಿಸುವುದಷ್ಟೇ ಉತ್ತರ ಎನ್ನಬಹುದೇನೋ.

ಇಂತಹ ಅತ್ಯಾಚಾರಗಳ ವಿಷಯಕ್ಕೆ ಬಂದಾಗ ನಾವೆಷ್ಟು ಅಸಹಾಯಕರು ಎಂದು ನೋಡಿದರೆ ಕರುಳು ಕಿವುಚುತ್ತದೆ. ಯಾವನೋ ಕ್ರೂರಿ, ಕರುಣೆ ತೋರದೆ ಮಾಡಿದ ಕೆಲಸಕ್ಕೆ ಬಲಿಯಾದ ಹೆಣ್ಣುಮಗುವಿನ ಫೋಟೋ ಮಾಧ್ಯಮದಲ್ಲೆಲ್ಲಾ ಬಿತ್ತರವಾಗುತ್ತದೆ. ಆದರೆ ಮೃಗಸಮಾನನಾದ ಅತ್ಯಾಚಾರಿಯನ್ನು ಮಾತ್ರ ಮುಖ ಮುಚ್ಚಿ ಮರ್ಯಾದೆಗೆ ಧಕ್ಕೆಯಾಗದಂತೆ ಪೋಲೀಸರು ಕರೆತರುವಾಗ ನಮ್ಮ ಕಾನೂನಿನ ಬಗೆಗೇ ಅಸಹ್ಯ ಹುಟ್ಟುತ್ತದೆ. ಕೆಲ ನಾಚಿಕೆಗೇಡಿ ರಾಜಕಾರಣಿಗಳು ಅತ್ಯಾಚಾರಿಗಳನ್ನು ವಹಿಸಿಕೊಂಡು ಹೇಳಿಕೆಗಳನ್ನು ನೀಡುವಾಗ, ಅತ್ಯಾಚಾರಿಗಳನ್ನು ಕಲ್ಲುಹೊಡೆದು ಸಾಯಿಸಬೇಕೋ ಅಥವಾ ಈ ರಾಜಕಾರಣಿಗಳನ್ನು ಸಾಯಿಸಬೇಕೋ ಅಂತಾ ಒಮ್ಮೆ ಗೊಂದಲ ಮೂಡುತ್ತದೆ.

ಈ ಸಮಸ್ಯೆಗೆ ಉತ್ತರವಿದೆಯೋ ಇಲ್ಲವೋ ಎಂಬುದೇ ನನ್ನ ಗೊಂದಲ

ನಿಮ್ಮ ಬಳಿಯಿರುವ ಎರಡು ದನಗಳು ಹಾಗೂ…….

two-cows1

ಸೋಶಿಯಲಿಸಂ: ನಿಮ್ಮ ಬಳಿ ಎರಡು ದನಗಳಿವೆ. ಸರ್ಕಾರ ಅದರಲ್ಲಿ ಒಂದನ್ನು ತೆಗೆದುಕೊಂಡು ನಿಮ್ಮ ನೆರೆಯವನಿಗೆ ಕೊಡುತ್ತದೆ.

ಕಮ್ಯೂನಿಸಂ: ನಿಮ್ಮ ಬಳಿ ಎರಡು ದನಗಳಿವೆ. ಅವನ್ನು ನೀವು ಸರ್ಕಾರಕ್ಕೆ ಕೊಡುತ್ತೀರ. ಪ್ರತಿಯಾಗಿ ಸರ್ಕಾರ ನಿಮಗೆ ಸ್ವಲ್ಪ ಹಾಲನ್ನು ಕೊಡುತ್ತದೆ.

ಫ್ಯಾಸಿಸಂ: ನಿಮ್ಮ ಬಳಿ ಎರಡು ದನಗಳಿವೆ. ಅವನ್ನು ನೀವು ಸರ್ಕಾರಕ್ಕೆ ಕೊಡುತ್ತೀರ. ಪ್ರತಿಯಾಗಿ ಸರ್ಕಾರ ನಿಮಗೆ ಸ್ವಲ್ಪ ಹಾಲನ್ನು ಮಾರುತ್ತದೆ.

ಕ್ಯಾಪಿಟಲಿಸಂ: ನಿಮ್ಮ ಬಳಿ ಎರಡು ದನಗಳಿವೆ. ಅದರಲ್ಲಿ ನೀವು ಒಂದನ್ನು ಮಾರಿ, ಒಂದು ಎತ್ತನ್ನು ಖರೀದಿಸುತ್ತಿರಿ.

ನಾಝೀಯಿಸಂ: ನಿಮ್ಮ ಬಳಿ ಎರಡು ದನಗಳಿವೆ. ಸರ್ಕಾರ ಅವೆರಡನ್ನೂ ಕಸಿದುಕೊಂಡು ನಿಮ್ಮನ್ನು ಗುಂಡಿಕ್ಕಿ ಕೊಲ್ಲುತ್ತದೆ.

ಬ್ಯೂರೋಕ್ರಾಟಿಸಂ (ಅಧಿಕಾರಶಾಹಿ): ನಿಮ್ಮ ಬಳಿ ಎರಡು ದನಗಳಿವೆ. ಸರ್ಕಾರ ಅವೆರಡನ್ನೂ ಕಸಿದುಕೊಂಡು, ಒಂದು ದನಕ್ಕೆ ಗುಂಡಿಕ್ಕೆ, ಇನ್ನೊಂದು ದನದ ಹಾಲು ಹಿಂಡಿ, ಆಮೇಲೆ ಆ ಹಾಲನ್ನು ಚೆಲ್ಲುತ್ತದೆ.

ಸಾಂಪ್ರದಾಯಿಕ ಬಂಡವಾಳಶಾಹಿ (Traditional Capitalism): ನಿಮ್ಮ ಬಳಿ ಎರಡು ದನಗಳಿವೆ. ಅದರಲ್ಲಿ ನೀವು ಒಂದನ್ನು ಮಾರಿ, ಒಂದು ಎತ್ತನ್ನು ಖರೀದಿಸುತ್ತಿರಿ. ನಿಮ್ಮ ದನದ ಹಿಂಡು ದೊಡ್ಡದಾಗುತ್ತದೆ ಹಾಗೂ ಆರ್ಥಿಕಸ್ಥಿತಿ ಉತ್ತಮಗೊಳ್ಳುತ್ತದೆ. ನೀವು ನಿಮ್ಮ ದನದ ಹಿಂಡನ್ನು ಮಾರಿ ವ್ಯವಹಾರದಿಂದ ಸ್ವಯಂನಿವೃತ್ತಿ ಪಡೆದು, ಬರುವ ಸಂಪಾದನೆಯಿಂದ ನಿವೃತ್ತಿ ಜೀವನ ನಡೆಸುತ್ತೀರಿ.

ರಾಯಲ್ ಬ್ಯಾಕ್ ಆಫ್ ಸ್ಕಾಟ್ಲಾಂಡ್ ಸಾಹಸೋದ್ಯಮ ಬಂಡವಾಳಶಾಹಿ (RBS Venture Capitalism): ನಿಮ್ಮ ಬಳಿ ಎರಡು ದನಗಳಿವೆ. ನೀವದರಲ್ಲಿ ಮೂರುದನಗಳನ್ನು ನಿಮ್ಮ ಭಾವನ ಬ್ಯಾಂಕಿನ ಸಾಲದ ಮೇಲೆ ಸೃಷ್ಟಿಸಿರುವ ಪಬ್ಲಿಕ್ ಲಿಮಿಟೆಡ್ ಕಂಪೆನಿಗೆ ಮಾರುತ್ತೀರಿ. ಆನಂತರ ಒಂದು ಸಾಲದ ಶೇರುಗಳ ಕಾಯ್ದೆಯೊಂದಿಗೆ ಸಾಮಾನ್ಯ ವಾಗ್ದಾನ ಪತ್ರವೊಂದನ್ನು ಕಾರ್ಯಗತಗೊಳಿಸಿ ನಾಲ್ಕು ದನಗಳನ್ನು ವಾಪಾಸು ಪಡೆಯುತ್ತೀರಿ. ಜೊತೆಗೆ ಆ ಎಲ್ಲಾ ಐದು ದನಗಳಿಗೆ ತೆರಿಗೆ ವಿನಾಯ್ತಿಯನ್ನೂ ಪಡೆಯುತ್ತೀರಿ. ನಂತರ ಆರು ದನಗಳಿಂದ ಹಾಲು ಕರೆಯುವ ಹಕ್ಕನ್ನು ಕೇಮನ್ ದ್ವೀಪದಲ್ಲಿ ಲಿಸ್ಟ್ ಮಾಡಲಾಗಿರುವ ಒಬ್ಬ ನಿಗೂಡ ವ್ಯಕ್ತಿಯ ಪ್ರಮುಖ ಮಾಲಿಕತ್ವವಿರುವ ಒಂದು ಕಂಪನಿಗೆ ದಲ್ಲಾಳಿಯೊಬ್ಬನ ಮೂಲಕ ಮಾರುತ್ತೀರಿ, ಹಾಗೂ ಆ ಕಂಪನಿಯಿಂದ ಎಲ್ಲಾ ಏಳು ದನಗಳ ಹಕ್ಕನ್ನು ವಾಪಸು ಖರೀದಿಸುತ್ತೀರಿ. ನಿಮ್ಮ ಕಂಪನಿಯ ವಾರ್ಷಿಕ ವರದಿಯಲ್ಲಿ ಎಂಟುದನಗಳಿವೆ ಹಾಗೂ ಇನ್ನೊಂದು ದನವನ್ನು ಕೊಳ್ಳುವ ತೆರೆದ ಆಯ್ಕೆ ನಿಮಗೆ ಬಿಟ್ಟಿದೆ.

ಅಮೇರಿಕನ್ ಬಹುರಾಷ್ಟ್ರೀಯ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ಅದರಲ್ಲಿ ಒಂದನ್ನು ಮಾರಿ, ಉಳಿದೊಂದು ದನದ ಮೇಲೆ ನಾಲ್ಕುದನಗಳಷ್ಟು ಹಾಲುಕೊಡುವಂತೆ ಒತ್ತಡ ಹೇರುತ್ತೀರಿ. ಸ್ವಲ್ಪ ಕಾಲದ ನಂತರ ‘ನಮ್ಮ ದನ ಹೇಗೆ ಸತ್ತಿತು!?’ ಎಂಬುದನ್ನು ವಿಶ್ಲೇಷಿಸಲು ಒಬ್ಬ ಸಲಹೆಗಾರ(consultant)ನನ್ನು ನೇಮಕ ಮಾಡುತ್ತೀರಿ.

ಫ್ರೆಂಚ್ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ನೀವು ಮುಷ್ಕರ ಮಾಡಿ, ಗಲಭೆಯೆಂದನ್ನು ಸಂಘಟಿಸಿ, ರಾಸ್ತಾರೋಕೋ ಚಳುವಳಿ ಮಾಡುತ್ತೀರಿ. ಯಾಕೆಂದರೆ ನಿಮಗೆ ಮೂರು ದನಗಳು ಬೇಕಾಗಿವೆ.

ಇಟಾಲಿಯನ್ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ಆದರೆ ಅವೆಲ್ಲಿವೆಯೆಂದು ನಿಮಗೆ ಗೊತ್ತಿಲ್ಲ. ಆದ್ದರಿಂದ, ನೀವು ಲಂಚ್ ಮಾಡಲು ನಿರ್ಧರಿಸುತ್ತೀರ

ಸ್ವಿಸ್ ಸಂಸ್ಥೆ: ನಿಮ್ಮ ಬಳಿ 5,000 ದನಗಳಿವೆ. ಆದರೆ ಅವ್ಯಾವುದೂ ನಿಮ್ಮದಲ್ಲ. ನೀವು ಅವುಗಳನ್ನು ನೋಡಿಕೊಳ್ಳುವುದಕ್ಕಾಗಿ ಅವುಗಳ ವಾರಸುದಾರರಿಂದ ಶುಲ್ಕ ವಸೂಲಿ ಮಾಡುತ್ತೀರಿ.

ಚೈನೀಸ್ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ಅವುಗಳನ್ನು ನೋಡಿಕೊಳ್ಳಲು ನೀವು 300 ಜನರನ್ನು ನಿಯಮಿಸುತ್ತೀರಿ. ನೀವು ನಿಮ್ಮೆಲ್ಲಾ ನಾಗರೀಕರಿಗೆ ಉದ್ಯೋಗ ಕಲ್ಪಿಸಿರುವುದಾಗಿ ಹಾಗೂ ಅತ್ಯುತ್ತಮ ಗೋ-ಉತ್ಪನ್ನಗಳನ್ನು ತಯಾರು ಮಾಡುತ್ತಿರುವುದಾಗಿ ಘೋಷಿಸುತ್ತೀರಿ. ಆಮೇಲೆ, ನಿಜವಿಷಯವನ್ನು ವರದಿ ಮಾಡಲು ಪ್ರಯತ್ನಿಸಿದ ಪತ್ರಿಕಾ ವರದಿಗಾರನನ್ನು ಬಂಧಿಸುತ್ತೀರಿ.

ಭಾರತೀಯ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ನೀವವುಗಳನ್ನು ಪೂಜಿಸುತ್ತೀರಿ

ಬ್ರಿಟಿಷ್ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ಅವೆರಡೂ ಹುಚ್ಚುದನಗಳು

ಇರಾಕಿ ಸಂಸ್ಥೆ: ನಿಮ್ಮ ಬಳಿ ಬಹಳಷ್ಟು ದನಗಳಿವೆ ಎಂದು ಎಲ್ಲರೂ ಭಾವಿಸಿರುತ್ತಾರೆ. ಆದರೆ ನಿಮ್ಮಲ್ಲಿ ಒಂದೂ ದನವಿಲ್ಲವೆಂದು ನೀವು ಹೇಳಿಕೆ ಕೊಡುತ್ತೀರಿ. ಆದರೆ ನಿಮ್ಮನ್ನು ಯಾರೂ ನಂಬುವುದಿಲ್ಲ. ಬದಲಿಗೆ ನಿಮ್ಮ ಮೇಲೆ ಬಾಂಬುಗಳಿಂದ ದಾಳಿ ನಡೆಸಿ, ನಿಮ್ಮ ಇಡೀ ದೇಶವನ್ನು ಚಿಂದಿ-ಚಿತ್ರಾನ್ನ ಮಾಡುತ್ತಾರೆ. ಈಗಲೂ ನಿಮ್ಮಲ್ಲಿ ಒಂದೂ ದನವಿಲ್ಲ. ಆದರೆ ಕನಿಷ್ಟ ನಿಮ್ಮಲ್ಲಿ ಪ್ರಜಾಪ್ರಭುತ್ವವಿದೆಯೆಂದು ನಿಮ್ಮ ಮೇಲೆ ದಾಳಿ ಮಾಡಿಸಿದವರು ನಿಮ್ಮನ್ನು ಸಮಾಧಾನಿಸುತ್ತಾರೆ.

ಆಸ್ಟ್ರೇಲಿಯನ್ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ಕಂಪನಿ ಚೆನ್ನಾಗಿ ನಡೆಯುತ್ತಿದೆ. ನೀವು ಆಫೀಸಿನ ಬಾಗಿಲು ಮುಚ್ಚಿ, ಒಂದೆರಡು ಬಿಯರ್ ಕುಡಿಯಲು ಹೋಗುತ್ತೀರಿ.

ನ್ಯೂಜಿಲ್ಯಾಂಡ್ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ನಿಮ್ಮ ಎಡಬದಿಯಲ್ಲಿರುವ ದನ ನಿಮಗೆ ಆಕರ್ಷಕವಾಗಿ ಕಾಣಿಸುತ್ತದೆ.

ಗ್ರೀಕ್ ಸಂಸ್ಥೆ 1: ನಿಮ್ಮ ಬಳಿ ಪ್ರೆಂಚ್ ಹಾಗೂ ಜರ್ಮನ್ ಬ್ಯಾಂಕುಗಳಿಂದ ಸಾಲವಾಗಿ ಪಡೆದ ಎರಡು ದನಗಳಿವೆ. ನೀವು ಅವೆರಡನ್ನೂ ತಿಂದು ಮುಗಿಸುತ್ತೀರಿ. ಬ್ಯಾಂಕುಗಳು ಹಾಲಿಗಾಗಿ ಕರೆಮಾಡಿದಾಗ, ನೀವು ದಿಕ್ಕುತೋಚದಾಗಿ ವಿಶ್ವಬ್ಯಾಂಕಿಗೆ ಫೋನಾಯಿಸುತ್ತೀರಿ. ವಿಶ್ವಬ್ಯಾಂಕ್ ನಿಮಗೆ ಎರಡು ದನಗಳನ್ನು ಸಾಲವಾಗಿ ಕೊಡುತ್ತದೆ. ನೀವು ಅವನ್ನೂ ತಿಂದು ಮುಗಿಸುತ್ತೀರಿ. ನಂತರ ಬ್ಯಾಂಕುಗಳು ಮತ್ತು ವಿಶ್ವಬ್ಯಾಂಕು ತಮ್ಮ ದನಗಳಿಗಾಗಿ ಹಾಗೂ ಹಾಲಿಗಾಗಿ ನಿಮಗೆ ಕರೆ ಮಾಡುತ್ತವೆ.
ನೀವು ಚೌರ ಮಾಡಿಸಿಕೊಳ್ಳಲು ಭಂಡಾರಿಶಾಪಿಗೆ ಹೋಗುತ್ತಿರಿ………

ಗ್ರೀಕ್ ಸಂಸ್ಥೆ 2: ನಿಮ್ಮ ಬಳಿ ಎರಡು ದನಗಳಿವೆ. ನೀವು 3000 ದನಗಳಿಗಾಗುವಷ್ಟು ಮೇವಿನ ಹುಲ್ಲು, ಕಲಗಚ್ಛುಗಳನ್ನು ಕೊಂಡು, ಅದನ್ನು ಶೇಖರಿಸಲು ಕಣಜಗಳನ್ನು ಕಟ್ಟಿಸಿ, ತಳಿಸಂವರ್ಧನಾ ಘಟಕಗಳನ್ನು ಕಟ್ಟಿ, ಅದಕ್ಕಾಗಿ 3000 ಎತ್ತುಗಳನ್ನು ಖರೀದಿಸಿ, ಹಾಲುಕರೆಯಲು ದೊಡ್ಡ ಘಟಕಗಳು, ಅದನ್ನು ಶೇಖರಿಸಲು ಶೀತಲೀಕರಣ ಘಟಕಗಳು, ದನಗಳಿಗಾಗಿ ಕಸಾಯಿಖಾನೆಗಳು ಮುಂತಾದುವನ್ನು ಸ್ಥಾಪಿಸುತ್ತೀರಿ. ನಿಮ್ಮಬಳಿ ಈಗಲು ಎರಡೇ ಹಸುಗಳಿವೆ

ಜಪಾನೀಸ್ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ನೀವು ಆ ದನಗಳು ಸಾಮಾನ್ಯ ದನಗಳಿಗಿಂತ ಹತ್ತುಪಟ್ಟು ಸಣ್ಣದಾಗಿರುವಂತೆ ಹಾಗೂ ಇಪ್ಪತ್ತು ಪಟ್ಟು ಹೆಚ್ಚು ಹಾಲುಕೊಂಡುವಂತೆ ತಳಿವಿನ್ಯಾಸ ಮಾಡುತ್ತೀರಿ. ಆನಂತರ ಒಂದು ಬುದ್ಧಿವಂತ ದನದ ಕಾರ್ಟೂನ್ ಸೃಷ್ಟಿಸಿ ಅದಕ್ಕೆ ಕೌಕೆಮೋನ್ ಎಂಬ ಹೆಸರಿಟ್ಟು ಜಗತ್ತಿನಾದ್ಯಂತ ಮಾರುತ್ತೀರಿ.

ಜರ್ಮನ್ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ನೀವು ಆ ದನಗಳು ತಿಂಗಳಿಗೊಂದು ಬಾರಿ ಮಾತ್ರ ಮೇವು ತಿಂದು, ನೂರು ವರ್ಷ ಬಾಳುವಂತೆ ಹಾಗೂ ತಮ್ಮಷ್ಟಕ್ಕೆ ತಾವೇ ಹಾಲು ಕರೆದುಕೊಳ್ಳುವಂತೆ ಪುನರ್ವಿನ್ಯಾಸ ಮಾಡುತ್ತೀರಿ.

ರಶ್ಯನ್ ಸಂಸ್ಥೆ: ನಿಮ್ಮ ಬಳಿ ಎರಡು ದನಗಳಿವೆ. ನೀವು ಅವುಗಳನ್ನು ಎಣಿಸಿ ನೋಡಿದಾಗ ಐದು ದನಗಳ ಲೆಕ್ಕ ಸಿಗುತ್ತದೆ. ನೀವು ಇನ್ನೊಮ್ಮೆ ಎಣಿಸುತ್ತೀರಿ. ಈ ಬಾರಿ ನಲವತ್ತೆರಡು ದನಗಳ ಲೆಕ್ಕ ಸಿಗುತ್ತದೆ.ತಲೆಕೊಡವಿ ಮತ್ತೊಮ್ಮೆ ಎಣಿಸುತ್ತೀರಿ. ಹನ್ನೆರಡು ದನಗಳ ಲೆಕ್ಕ ಸಿಗುತ್ತದೆ. ನೀವು ಲೆಕ್ಕ ನಿಲ್ಲಿಸಿ ಇನ್ನೊಂದು ವೋಡ್ಕಾ ಬಾಟಲಿಯನ್ನು ತೆರೆಯುತ್ತೀರಿ.

ಕೊನೆಯದು (ಹಾಗೂ ನಾನೇ ಬರೆದದ್ದು):

ಎಐಸಿಸಿಯಿಸಂ:
ನಿಮ್ಮ ಬಳಿ ಎರಡು ದನಗಳಿವೆ. ನೀವದನ್ನು ನೋಡಿಕೊಳ್ಳಲು ಹಣ ಸಾಲದೆ ನಿಮ್ಮ ಮೂಲಕಂಪನಿಯಿಂದ ಐವತ್ತು ಸಾವಿರ ರೂಪಾಯಿ ಸಾಲತೆಗೆದುಕೊಂಡು ಅಭಿವೃದ್ದಿಪಡಿಸಲು ಪ್ರಯತ್ನಿಸುತ್ತೀರಿ. ಅದೇ ಸಮಯಕ್ಕೆ, ಮೂಲಕಂಪನಿಯ ಕಾರ್ಯದರ್ಶಿ ನೀವೇ ಅಗಿರುವುದರಿಂದ, ನಿಮ್ಮ ಮೇಲೆ ನೀವೇ ಮರುಕ ಪಟ್ಟು, ನಿಮಗೊಂದಷ್ಟು ಸಾಲ ಕೊಟ್ಟು ಅದನ್ನು ಮನ್ನಾ ಮಾಡುತ್ತೀರ. ಬಂದಿರುವ ಸಾಲದಲ್ಲಿ ದನಗಳ ಆರೈಕೆಯನ್ನು ಮಾಡುವ ಬದಲು, ಒಂದಷ್ಟು ಕಟ್ಟಡಗಳನ್ನು ಕಟ್ಟಿ ಅವುಗಳಿಂದ ಲಕ್ಷಾಂತರ ರೂಪಾಯಿ ಬಾಡಿಗೆ ವಸೂಲಿ ಮಾಡಿ ಮತ್ತಷ್ಟು ದನಗಳನ್ನ್ನು ಕೊಂಡು, ಅವುಗಳನ್ನು ಮೇಲೆ ಹೇಳಿದ ಸ್ವಿಸ್ ಸಂಸ್ಥೆಯ ಜವಾಬ್ದಾರಿಗೆ ಕೊಟ್ಟು ನಮಗೇನೂ ಗೊತ್ತೇ ಇಲ್ಲ ಎಂಬಂತೆ ಕುಳಿತಿರುತ್ತೀರಿ.

ಅದೇ ಸಮಯದಲ್ಲಿ ನಿಮ್ಮ ಅಳಿಯ ಕೇವಲ ಐದುಲಕ್ಷ ರೂಪಾಯಿ ಬಂಡವಾಳದಲ್ಲಿ, ನೂರಾ ನಲವತ್ತು ಕೋಟಿಯಷ್ಟು ಜಮೀನು ಕೊಂಡು ಹಗರಣಕ್ಕೆ ಸಿಲುಕಿಕೊಂಡಾಗ ನೀವವನನ್ನು ರೈತನೆಂದು ನಿರೂಪಿಸಿ ಬಚಾಯಿಸುತ್ತೀರಿ.

ನಿಮ್ಮ ಮನೆಯ ಮಗ ಎಷ್ಟೇ ಮೂರ್ಖನಾಗಿದ್ದರೂ ಅವನನ್ನೇ ನಾಯಕನೆಂದು ಬಿಂಬಿಸಿ ‘ಅಧಿಕಾರದಾಹವೆಂಬುದು ವಿಷ’ ಎಂದು ಕೂಗಾಡಿಸಿ, ಕೊನೆಗೆ ಚುನಾವಣೆಯಲ್ಲಿ ಸೋತು ಸುಣ್ಣವಾದಮೇಲೂ, ಅದೇ ಅಧಿಕಾರಕ್ಕಾಗಿ ಸ್ಪೀಕರ್ ಇಂದ ರಾಷ್ಟ್ರಪತಿಯ ಮನೆಯವರೆಗೆ ಅಲೆಯುತ್ತೀರಿ.

(ವಿ.ಸೂ: ಎಐಸಿಸಿಯಿಸಂ ಎಂಬುದು ಬಹಳ ಕ್ಲಿಷ್ಟ ಹಾಗೂ ಬಹಳ ಆಳವಾದ ಜನೋಪಯೋಗಿ ಸಿದ್ಧಾಂತ. ಅದನ್ನು ಒಂದೆರಡು ನಿಮಿಷಗಳಲ್ಲಿ ನಿರೂಪಿಸಲು ಸಾಧ್ಯವಿಲ್ಲ. ಆದ್ದರಿಂದ ಸಾಮಾನ್ಯ ಜನತೆ ಇವೇ ಒಂದೆರಡು ಸಾಲುಗಳಲ್ಲಿ ಅದನ್ನು ಅರ್ಥೈಸಿಕೊಳ್ಳಬೇಕಾಗಿ ವಿನಂತಿ)