ನಿಂದಾಸ್ತುತಿ – 3

ಇವತ್ತಿನ ನಿಂದಾಸ್ತುತಿ ನಮ್ಮ ರಾಜ್ಯದ ದಾಸಪ್ಪನವರದ್ದು. ದಾಸಪ್ಪನವ್ರು ಗೊತ್ತಿಲ್ವೇ!? ಹೇಳ್ತೀನಿ ಕೇಳಿ. ದಾಸಪ್ಪನವರು ಹುಟ್ಟಿದ್ದು ರಾಯಚೂರು ಜಿಲ್ಲೆ, ಮಾನ್ವಿ ತಾಲೂಕಿನ ಚೀಕಲಪರವಿಯಲ್ಲಿ, 1682ರಲ್ಲಿ. ತಂದೆ ಶ್ರೀನಿವಾಸಪ್ಪ ಮತ್ತು ತಾಯಿ ಕೂಸಮ್ಮ. ಕಡುಬಡತನದ ಬ್ರಾಹ್ಮಣ ಕುಟುಂಬ. ಚಿಕ್ಕವಯಸ್ಸಿನಲ್ಲೇ ಮನೆಬಿಟ್ಟು, ದೇಶಸುತ್ತಿ ಕಾಶಿಯಲ್ಲಿ ನಾಲ್ಕು ವರ್ಷ ಸಂಸ್ಕೃತ ವಿದ್ಯಾಭ್ಯಾಸವನ್ನು ಪಡೆದುಬಂದು, ಹುಟ್ಟೂರಿನಲ್ಲೇ ನೆಲೆಸುತ್ತಾರೆ. ಹದಿನಾರನೆಯ ವಯಸ್ಸಿನಲ್ಲಿ ಅರಳಮ್ಮ ಎನ್ನುವವರನ್ನು ವಿವಾಹವಾಗಿ ಗೃಹಸ್ಥಾಶ್ರಮ ಸ್ವೀಕರಿಸುತ್ತಾರೆ. ಬಡತನದ ಕಾರಣದಿಂದ ಇಲ್ಲಿ ಸಂಸಾರನಡೆಸಲಾಗದೇ, ಮರಳಿ ವಾರಣಾಸಿಗೆ ತೆರಳಿದರು ಅಂತಾ ಕಥೆಗಳು ಹೇಳುತ್ತವೆ.

ಒಂದು ದಿನ ಕನಸಿನಲ್ಲಿ ಪುರಂದರದಾಸರು ಕಾಣಿಸಿಕೊಂಡು “ಹರಿದಾಸ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗು” ಎಂದು ಹೇಳಿದರೆಂದೂ, “ವಿಜಯ ವಿಟ್ಟಲ” ಎಂಬ ಅಂಕಿತನಾಮವನ್ನೂ ಅವರೇ ಕೊಟ್ಟರೆಂದೂ ದಾಸಪ್ಪನವರು ಹೇಳಿಕೊಳ್ಳುತ್ತಾರೆ. ಹೀಗೆ ನಮ್ಮ ದಾಸಪ್ಪನವರು, ವಿಜಯದಾಸರಾದರು. ಹರಿದಾಸರಾಗಿ, ಮಧ್ವಾಚಾರ್ಯರ ತತ್ವಗಳನ್ನು ಭೋದಿಸುತ್ತಾ, ಕರ್ನಾಟಕ ಸಂಗೀತಕ್ಕೆ ಮತ್ತು ಕನ್ನಡ ಸಾಹಿತ್ಯಕ್ಕೆ ಅನರ್ಘ್ತವಾಗ ಕೊಡುಗೆಗಳನ್ನು ನೀಡಿದರು. ಸುಮಾರು 25,000ಕ್ಕೂ ಹೆಚ್ಚು ಸುಳಾದಿ, ಉಗಾಭೋಗ ಮತ್ತು ಕೀರ್ತನೆಗಳನ್ನು ವಿಜಯದಾಸರು ರಚಿಸಿದ್ದಾರೆ. ವಿಶೇಷವಾಗಿ ಪಂಚರತ್ನ ಸುಳಾದಿಗಳಲ್ಲಿ ವಿಜಯದಾಸರದ್ದು ಎತ್ತಿದ ಕೈ.

ದಾಸಪಂಥದ ಪ್ರಮುಖರಾದ ಹೆಳವನಕಟ್ಟೆ ಗಿರಿಯಮ್ಮ, ಜಗನ್ನಾಥ ದಾಸರು, ಪ್ರಸನ್ನ ವೆಂಕಟದಾಸರ ಸಮಕಾಲೀನರಾದ ವಿಜಯದಾಸರ ಪ್ರಮುಖ ಶಿಷ್ಯರಲ್ಲಿ ಗೋಪಾಲದಾಸರ ಹೆಸರು ಮುಂಚೂಣಿಯಲ್ಲಿರುತ್ತದೆ.

“ಪವಮಾನ ಪವಮಾನ ಜಗದ ಪ್ರಾಣಾ ಸಂಕರುಷಣಾ”, “ಹರಿ ಸರ್ವೊತ್ತಮ ವಾಯು ಜೀವೊತ್ತಮ”, “ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ” ಮುಂತಾದ ದಾಸರಪದಗಳಿಂದ ನಮ್ಮ ನಡುವೆ ಸದಾ ನೆನಪಿನಲ್ಲುಳಿಯುವ ವಿಜಯದಾಸರು ಶ್ರೀನಿವಾಸನ ದರ್ಶನಕ್ಕೆಂದು ತಿರುಪತಿಗೆ ಹೋದಾಗ, ಅಲ್ಲಿ ದೇವರ ದರ್ಶನ ಸಿಗದೆ ನಿರಾಶರಾಗಿ ತಿರುಪತಿಯ ವೆಂಕಟೇಶನನ್ನು ತರಾಟೆಗೆ ತೆಗೆದುಕೊಳ್ಳುವ ಕುತೂಹಲಕಾರೀ ನಿಂದಾಸ್ತುತಿ ಇಲ್ಲಿದೆ.

ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ
ಕೊಳಗದಲಿ ಹಣಗಳನು ಅಳೆದು ಕೊಂಬ
ಇಲ್ಲ ಕಾಸು ಎಂದು ಸುಳ್ಳು ಮಾತಾಡಿದರೆ
ಎಲ್ಲವನು ಕಸುಕೊಂಬ ಕಳ್ಳದೊರೆಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|

ತನ್ನ ನೋಡೆನೆಂದು ಮುನ್ನೂರು ಗಾವುದ ಬರಲು
ತನ್ನ ಗುಡಿಯ ಪೊಕ್ಕ ಜನರಿಗೆಲ್ಲ
ಹೊನ್ನು ಹಣಗಳ ಕಸಿದು ತನ್ನ ದರ್ಶನ ಕೊಡದೆ
ಬೆನ್ನೊಡೆಯ ಹೊಯ್ಯಿಸುವ ಅನ್ಯಾಯಕಾರಿಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|

ಗಿಡ್ಡ ಹಾರುವನಾಗಿ ಒಡ್ಡಿ ದಾನವ ಬೇಡಿ
ದುಡ್ಡು ಕಾಸುಗಳಿಗೆ ಕೈಯ ನೀಡಿ
ಅಡ್ಡ ಬಿದ್ದ ಜನರ ವಿಡ್ದೂರಗಳ ಕಳೆದು
ದೊಡ್ಡವರ ಮಾಳ್ಪ ಸಿರಿ ವಿಜಯ ವಿಠಲಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|

(ಸುಳಾದಿ – ಸಾಮಾನ್ಯವಾಗಿ ಕರ್ನಾಟಕ ಸಂಗೀತದಲ್ಲಿ, ರಚನೆಯೊಂದನ್ನು ಹಾಡುವಾಗ, ಇಡೀ ಹಾಡಿನಲ್ಲಿ ಒಂದೇ ರಾಗ ಮತ್ತು ಒಂದೇ ತಾಳ ಇರುವುದು ಸಾಮಾನ್ಯ. ಆದರೆ ಸುಳಾದಿಗಳಲ್ಲಿ ರಾಗವೊಂದೇ ಇದ್ದು, ತಾಳಗಳು ಬದಲಾಗುತ್ತಾ ಸಾಗುತ್ತವೆ. ಕೆಲವೊಮ್ಮೆ ರಾಗಗಳೂ ಬದಲಾಗುವುದುಂಟು. ಸುಳಾದಿಗಳನ್ನು ಹಾಡಲು ಸಂಗೀತದಲ್ಲಿ ಉನ್ನತ ಪಾಂಡಿತ್ಯ ಅತ್ಯಗತ್ಯ. ಸುಳಾದಿಗಳ ಬಗ್ಗೆಯೇ ಒಂದಿಡೀ ಲೇಖನವನ್ನೇ ಬೇರೆಯಾಗಿ ಬರೆಯಬಹುದು)

ನಿಂದಾಸ್ತುತಿ – 2

ನಿಂದಾಸ್ತುತಿಯಲ್ಲಿ ಇವತ್ತು ತೆಲುಗಿನ ಒಂದು ಕೃತಿ.

ಭದ್ರಾಚಲ ರಾಮದಾಸು, ಹದಿನೇಳನೇ ಶತಮಾನದಲ್ಲಿ ಇಂದಿನ ಆಂಧ್ರದ ಭದ್ರಾಚಲದ ಹತ್ತಿರವಿರುವ ನೆಲಕೊಂಡಪಲ್ಲಿಯಲ್ಲಿ ಜೀವಿಸಿದ್ದ ವಾಕ್ಗೇಯಕಾರರು. ಭಕ್ತಿಪಂಥದ ಹೆಚ್ಚಿನ ದಾಸರಂತೆ, ರಾಮದಾಸರೂ ಸಹ ವಿಷ್ಣುವಿನ ಅವತಾರಗಳ ಭಕ್ತರು. ರಾಮಾವತಾರ ಅವರ ನೆಚ್ಚಿನ ವಿಷ್ಣುರೂಪ. ಅವರ ಒಂದೆರಡು ಕೀರ್ತನೆಗಳನ್ನು ಬಿಟ್ಟರೆ ಉಳಿದೆಲ್ಲವೂ ರಾಮನನ್ನೇ ಸ್ತುತಿಸುವಂತವು.

ರಾಮದಾಸರ ಮೂಲ ಹೆಸರು ಕಂಚರ್ಲಾ ಗೋಪಣ್ಣ. 1620-1680ರ ನಡುವೆ ಜೀವಿಸಿದ ಗೋಪಣ್ಣರು, ವೃತಿಯಲ್ಲಿ ತಹಸೀಲ್ದಾರ್. ಕುತುಬ್ ಶಾಹಿ ಸುಲ್ತಾನರಿಗೆ ‘ಪಲ್ವಾಂಚನ ಪರಗಣ’ದ ಹಳ್ಳಿಗಳಿಂದ ರಾಜಸ್ವ ಸಂಗ್ರಹಣೆ ಮಾಡುತ್ತಲೇ ತಮ್ಮ ರಾಮಭಕ್ತಿ ಮುಂದುವರಿಸಿದವರು. ಶಿಥಿಲಾವಸ್ಥೆಯಲ್ಲಿದ್ದ ಭದ್ರಾಚಲದ ಸೀತಾರಾಮ ದೇವಸ್ಥಾನದ ಜೀರ್ಣೋದ್ಧಾರ ಮಾಡಿಸಿದ ಮಹಾನುಭಾವ.

ರಾಮನ ಮೇಲೆ ಸಾವಿರಾರು ಕೀರ್ತನೆಗಳನ್ನು ಬರೆದಿದ್ದಾರೆ ಎನ್ನಲಾಗುತ್ತದೆಯಾದರೂ, ಲಭ್ಯವಿರುವ ಕೀರ್ತನೆಗಳ ಸಂಖ್ಯೆ ತೀರಾ ಕಮ್ಮಿ. ಕರ್ನಾಟಕ ಸಂಗೀತಕ್ಕೆ ಮಹಾನ್ ಕೊಡುಗೆ ನೀಡಿದ ಶ್ಯಾಮಾಶಾಸ್ತ್ರಿಗಳು, ತ್ಯಾಗರಾಜರು, ಕ್ಷೇತ್ರಯ್ಯನವರ ಮಟ್ಟದಲ್ಲೇ ಗುರುತಿಸಬಹುದಾದ ಮಹಾನ್ ಚೇತನ, ಭದ್ರಾಚಲ ರಾಮದಾಸು.

ಐವತ್ತರ ದಶಕದಲ್ಲಿ, ರಾಮದಾಸರ ಕೀರ್ತನೆಗಳಿಗೆ ಮತ್ತೆ ಜೀವತುಂಬಿದವರು ‘ಸಂಗೀತ ಕಲಾನಿಧಿ’ ಡಾ. ಬಾಲಮುರಳಿಕೃಷ್ಣ. ಅವರ ಕಂಠಸಿರಿಯಲ್ಲಿ ಪ್ರಸಿದ್ಧವಾದ ರಾಮದಾಸರ ಕೃತಿಗಳಲ್ಲೊಂದು “ಫಲುಕೇ ಬಂಗಾರಮಾಯಿನಾ”. ಇದನ್ನು ನೂರಕ್ಕೆ ನೂರು ನಿಂದಾಸ್ತುತಿ ಎನ್ನಲಾಗದಿದ್ದರೂ, ಭಗವಂತನ್ನು ಪ್ರಶ್ನಿಸುವ, ದಯನೀಯವಾಗಿ ಬೇಡಿಕೊಳ್ಳುವ toneನಿಂದ, ನಿಂದಾಸ್ತುತಿಯೊಳಗೇ ವರ್ಗೀಕರಿಸಬಹುದೆಂಬ assumptionನೊಂದಿಗೆ………

*ವಾಕ್ಗೇಯಕಾರ = ಕೀರ್ತನೆ ರಚಿಸುವುದು ಮಾತ್ರವಲ್ಲದೇ, ಅದಕ್ಕೆ ಸಂಗೀತ ರೂಪವನ್ನೂ ಸೇರಿಸುವವ. (ವಾಕ್=ಪದ/ಮಾತು, ಗೇಯ=ಹಾಡು/ಹಾಡುವಿಕೆ, ಗೇಯಕಾರ=ಹಾಡುಗಾರ)

ಪಲುಕೇ ಬಂಗಾರಮಾಯೆನಾ,
ಕೋದಂಡಪಾಣಿ ಪಲುಕೇ ಬಂಗಾರಮಾಯೆನಾ

ಪಲುಕೇ ಬಂಗಾರಮಾಯೆ ಪಿಲಚಿನಾ ಪಲುಕವೇಮಿ
ಕಲಲೋ ನೀ ನಾಮಸ್ಮರಣ ಮರುವ ಚಕ್ಕನಿ ತಂಡ್ರೀ ||ಪಲುಕೇ||

ಎಂತ ವೇಡಿನಗಾನಿ ಸುಂತೈನ ದಯರಾದು
ಪಂತಮು ಸೇಯ ನೇನೆಂತಟಿವಾಡನು ತಂಡ್ರೀ ||ಪಲುಕೇ||

ಇರವುಗ ಇಸುಕಲೋನ ಪೊರಲಿನ ಉಡುತ ಭಕ್ತಿಕಿ
ಕರುಣಿಂಚಿ ಬ್ರೋಚಿತಿವನಿ ನೆರ ನಮ್ಮಿತಿನಿ ತಂಡ್ರೀ ||ಪಲುಕೇ||

ರಾತಿ ನಾತಿಗ ಚೇಸಿ ಭೂತಲಮುನ
ಪ್ರಖ್ಯಾತಿ ಚೆಂದಿತಿವನಿ ಪ್ರೀತಿತೋ ನಮ್ಮಿತಿ ತಂಡ್ರೀ ||ಪಲುಕೇ||

ಶರಣಾಗತತ್ರಾಣ ಬಿರುದಾಂಕಿತುಡವುಕಾದಾ
ಕರುಣಿಂಚು ಭದ್ರಾಚಲ ವರರಾಮದಾಸ ಪೋಷ ||ಪಲುಕೇ||

(ಚರಣಗಳನ್ನು ಇಲ್ಲಿರುವ ಪಾಳಿಯಲ್ಲಲ್ಲದೇ, ಬೇರೆ ಬೇರೆ ಪಾಳಿಯಲ್ಲೂ ಕಲಾವಿದರು ಹಾಡಿರುವುದುಂಟು)

ಇದರ ಪಲ್ಲವಿಯಲ್ಲಿ ರಾಮದಾಸರು “ಏನು ರಾಮ, ನಿನ್ನ ಮಾತುಗಳು ಬಂಗಾರಕ್ಕಿಂತಲೂ ಹೆಚ್ಚು ಬೆಲೆಯುಳ್ಳದಾಗಿಬಿಟ್ಟವಾ (ಬಂಗಾರದಷ್ಟೂ ಅಪರೂಪವಾಗಿಬಿಟ್ಟವಾ)? ನಾನೆಷ್ಟು
ಕರೆದರೂ, ಮಾತನಾಡಿಸಿದರೂ, ಕೇಳಿಕೊಂಡರೂ ಮಾತೇ ಆಡುತ್ತಿಲ್ಲ ನೀನು” ಅಂತಾ ಕೇಳ್ತಾರೆ. ಸಾಮಾನ್ಯರಾದ ನಾವು ಪರಸ್ಪರ “ಏನಪ್ಪಾ, ಸುಮ್ಮನಾಗಿಬಿಟ್ಟಿದ್ದೀಯಾ! ಮಾತೇ ಇಲ್ಲ!! ಮಾತನಾಡಿದರೆ ಮುತ್ತು ಉದುರುತ್ತಾ?” ಅಂತ ಕೇಳಿದಹಾಗೆ, ಭದ್ರಾಚಲರು ರಾಮನನ್ನು ಮೆಲ್ಲಗೆ ತಿವಿಯುತ್ತಾರೆ.

ಮುಂದುವರೆಯುತ್ತಾ ರಾಮನ ಲೀಲೆಗಳನ್ನು ಮೆಲುಕುಹಾಕುತ್ತಾ “ಅಳಿಲಿನ ಸೇವೆಗೇ ಮರುಳಾದವ ನೀನು (ಅಂತಾ ಲೋಕ ಹೇಳುತ್ತೆ). ಆದರೂ ನನ್ನ ಮಾತು ನಿನಗೆ ಕೇಳುತ್ತಿಲ್ಲ. ಕಲ್ಲಾಗಿದ್ದ ಅಹಲ್ಯೆಗೆ ಮುಕ್ತಿ ಕೊಡಿಸಿದೆ ನೀನು ಅಂತ ಜನ ಹೊಗಳುತ್ತಾರೆ. ನನ್ನ ಮಾತು ಕೇಳದಷ್ಟೂ ನೀನು ಕಲ್ಲಾಗಿದ್ದೀಯಲ್ಲಾ. ಅದೆಷ್ಟು ಬೇಡಿಕೊಂಡರೂ ನಿನಗೆ ದಯೆಯೇ ಇಲ್ಲವಲ್ಲಾ! ನಿನಗೆ ‘ಶರಣಾಗತ ತ್ರಾಣ’ ಅಂತಾ ಬಿರುದುಬೇರೆ ಕೊಟ್ಟಿದ್ದಾರೆ. ನಾನಿಷ್ಟು ನಿನ್ನ ವಶವಾದರೂ ನನ್ನೊಂದಿಗೆ ಮಾತನಾಡದ ನಿನ್ನ ಆ ಬಿರುದುಗಳು, ನಿನ್ನ ಆ ದಯೆಯ ಕಥೆಗಳನ್ನ ಹೇಗೆ ನಂಬಲಿ?” ಅಂತಾ ಪ್ರಶ್ನಿಸುತ್ತಾರೆ.

ಒಟ್ಟಿನಲ್ಲಿ ಅವನ ಶರಣಾಗತಿಯ ಮಂತ್ರಪಠಿಸುತ್ತಲೇ, ಮಾತು ಬಂಗಾರವಾಯಿತೇನು? ಅಂತಾ ಕೇಳುತ್ತಾ ರಾಮನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ.

ನಿಂದಾಸ್ತುತಿ – 1

ದೇವರನ್ನು ಎರಡು ರೀತಿಯಿಂದ ಒಲಿಸಿಕೊಳ್ಳಬಹುದು. ಹೊಗಳಿಕೆಯಿಂದ, ಭಕ್ತಿಯ ಭಜನೆ, ಪ್ರಾರ್ಥನೆ, ಧ್ಯಾನದಿಂದ ಒಲಿಸಿಕೊಳ್ಳಲು ಪ್ರಯತ್ನಿಸಬಹುದು. ಇನ್ನೊಂದು ನಿಂದಾ ಸ್ತುತಿಯಿಂದ ಭಗವಂತನನ್ನು ಒಲಿಸಲು ಪ್ರಯತ್ನಿಸಬಹುದು. ಭಕ್ತಿಪಂಥದಲ್ಲಿ ಭಕ್ತಿಸ್ತುತಿಯ ಸಂಖ್ಯೆಯೇ ಹೆಚ್ಚಾಗಿದರೂ ಸಹ, ನಿಂದಾಸ್ತುತಿಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಹಾಗಂತಾ ನಿಂದಾಸ್ತುತಿಯೇನು ವೈದಿಕರ ಇಡುಗಂಟಲ್ಲ. ಜಿನಸಾಹಿತ್ಯದಲ್ಲೂ, ವಚನಸಾಹಿತ್ಯದಲ್ಲೂ, ಜನಪದ ಸಾಹಿತ್ಯದಲ್ಲೂ ಸಹ ದೇವರನ್ನು ನಿಂದಿಸುತ್ತಲೇ ಬೇಡಿಕೊಳ್ಳುವ ಪರಿಪಾಠ ಬೇಕಾದಷ್ಟಿದೆ.

ದೇವರನ್ನು ಬರೀ ಸರ್ವಶಕ್ತ ಭಗವಂತನನ್ನಾಗಿ ನೋಡದೇ, ಕ್ರಿಶ್ಚಿಯಾನಿಟಿಯ #blasphemy ಎಂಬ ಪರಿಕಲ್ಪನೆಯ ಹಂಗಿಲ್ಲದೇ, ದೇವರು ನನ್ನ ಪಕ್ಕದಲ್ಲೇ ಕೂತ ಸ್ನೇಹಿತನನ್ನಾಗಿ ನೋಡುವ ಭಾಗ್ಯ ಹಿಂದೂಗಳಿಗೆ, ಹಳೆಯ ಗ್ರೀಕರಿಗೆ ಬಿಟ್ಟರೆ ಬೇರಾವ ರಿಲೀಜಿಯನ್ನಿಗೂ ಇಲ್ಲ. ಅಮ್ಮ ಮಾಡಿದ ದೋಸೆ ಚೆಂದವಿದ್ದಾಗ ಅಮ್ಮನಿಗೆ ಹೊಗಳಿ, ಚಟ್ನಿ ಖಾರವಿದ್ದಾಗ “ಎಂತದೇ ಅಮ್ಮಾ, ಇಷ್ಟ್ ಖಾರ ಮಾಡಿದ್ದೀ? ಹೆಂಗ್ ತಿನ್ನೂದು ಇದನ್ನ. ಎಷ್ಟು ಹೇಳಿದ್ರೂ ಕೇಳಲ್ಲ. ನನ್ನ ಸಾಯ್ಸೋಕೇ ಪ್ಲಾನ್ ಹಾಕಿದ್ದೀಯಾ ನೀನು” ಅಂತಾ ಬೈದು, ಆಮೇಲೆ ನೀರು ಕುಡಿದು ಅಮ್ಮನನ್ನ ತಬ್ಬಿಕೊಳ್ಳೋ ಮಗುವಿನಂತೆ, ನಮ್ಮ ಭಕ್ತ-ದೇವರ ನಡುವಿನ ಸಂಬಂಧ.

ನಿಂದಾಸ್ತುತಿಗಳಲ್ಲಿ ಹೆಸರೇ ಹೇಳುವಂತೆ ದೇವರ ನಿಂದನೆ ನಡೆಯುತ್ತದೆ. ಆದರೆ ನಮ್ಮ ದಾಸರು ಅದೆಷ್ಟು ಚಂದವಾಗಿ ಬೈಯುತಾರೆ ಅಂದರೆ ದೇವನನ್ನು ಬೈದರೂ ಮುದ್ದುಗರೆಯುವಂತಿರುತ್ತದೆ. “ನಿನ್ನ ಸೇವಕ ನಾನು” ಅಂತಾ ಹೇಳುತ್ತಲೇ, “ನನ್ನ ಸೇವಕ ನೀನು” ಅನ್ನುತ್ತಾ ಅವನ್ನನು ಕಳ್ಳಕೃಷ್ಣ, ಭೋಳೇಶಂಕರ, ಟೊಣಪಗಣಪ ಅಂತೆಲ್ಲಾ ಹೆಸರಿಡುತ್ತಾರೆ. Obviously, “ಕಳ್ಳ, ಪುಂಡ, ಪಟಿಂಗ” ಎಂದೆಲ್ಲಾ ಬೈಯುವುದು ಮುದ್ದಿನ ಮಕ್ಕಳನ್ನು ತಾನೆ. “ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ…” ಎಂದು ಸಮರ್ಪಿತರಾದ ದಾಸರು, “ಆರು ಬದುಕಿದರಯ್ಯಾ ಹರಿನಿನ್ನ ನಂಬಿ, ತೋರು ಈ ಧರೆಯೊಳಗೆ ಒಬ್ಬರನು ಕಾಣೆ” ಅಂತಾ ನಿಂದಿಸುತ್ತಾರೆ.

ಭಕ್ತಿಗೀತೆಗಳನ್ನು ಎಲ್ಲರೂ ಶೇರ್ ಮಾಡ್ತಾರೆ. ಆದರೆ ನಾನು ಈ ರೀತಿಯ ಕೆಲ ನಿಂದಾಸ್ತುತಿಗಳನ್ನ ಶೇರ್ ಮಾಡೋಣ ಅಂತಿದ್ದೀನಿ.

ಇವತ್ತಿನ ನಿಂದಾಸ್ತುತಿ:

ಆರು ಬದುಕಿದರಯ್ಯ ಹರಿ ನಿನ್ನ ನಂಬಿ ||ಪ||
ತೋರು ಈ ಧರೆಯೊಳಗೆ ಒಬ್ಬರನು ಕಾಣೆ ||ಅಪ||

ಕರಪತ್ರದಿಂದ ತಾಮ್ರಧ್ವಜನ ತಂದೆಯ
ಕೊರಳ ಕೊಯಿಸಿದೆ ನೀನು ಕುಂದಿಲ್ಲದೇ
ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆ
ಅರಿತು ತ್ರಿಪುರಾಸುರನ ಹೆಂಡಿರನು ಬೆರೆತೆ ||೧||

ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆ
ಸುಲಭದಲಿ ಕೌರವರ ಮನೆಯ ಮುರಿದೆ
ನೆಲವ ಬೇಡಲು ಹೋಗಿ ಬಲಿಯ ಭೂಮಿಗೆ ತುಳಿದೆ
ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ || ೨ ||

ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆ
ಗರುಡವಾಹನ ನಿನ್ನ ಚರಿಯನರಿಯೆ
ದೊರೆಪುರಂದರ ವಿಠಲ ನಿನ್ನನ್ನು ನಂಬಿದರೆ
ತಿರುಪೆಯೂ ಸಿಗಲೊಲ್ಲದು ಕೇಳೊ ಹರಿಯೇ! ||೩||

ಈ ಉಗಾಭೋಗವನ್ನು ತಪ್ಪಾಗಿ ಅರ್ಥೈಸಿಕೊಂಡು ಪುರಂದರದಾಸರಿಗೆ ವೈಚಾರಿಕ ಪಟ್ಟವನ್ನೂ ನಮ್ಮ ಲಿಬರಲ್ಲುಗಳು ಕೊಡಲು ಪ್ರಯತ್ನಿಸಿದ್ದಿದೆ. ಆದರೆ ಸೂಕ್ಷ್ಮವಾಗಿ ನೋಡಿದಾಗ ದಾಸರು ಅಧರ್ಮಿಗಳನ್ನು ಕೃಷ್ಣ ಹೇಗೆ ಬೇರೆ ಬೇರೆ ರೀತಿಯಲ್ಲಿ ಮಣಿಸಿದ ಅನ್ನೋದನ್ನೇ ನಿಂದನೆಯ ರೂಪದಲ್ಲಿ ಹೇಳಿದ್ದಾರೆ ಎನ್ನುವುದು ಕಂಡುಬರುತ್ತದೆ.