ಚಿತ್ರ ಶಕ್ತಿ‬ – ೧೩

“ಉದಯಾಸ್ಥಮಾನ”

ಈ ಶತಮಾನದಲ್ಲಿ ಜಗತ್ತಿನಲ್ಲಿ ಅತ್ಯಂತ ಶಕ್ತಿಶಾಲಿಯಾದ ಶಾಸ್ತ್ರವೆಂದರೆ ಅರ್ಥಶಾಸ್ತ್ರ. ನಾವೇ ಕಂಡುಹಿಡಿದು, ನಮ್ಮ ನಿಯಂತ್ರಣದಲ್ಲೇ ಇದ್ದಿದ್ದು ಈಗ ಭ್ಹಸ್ಮಾಸುರನಂತಾಗಿ ಇಡೀ ಜಗತ್ತನ್ನು ನಿಯಂತ್ರಿಸುತ್ತಿರುವುದು ದುಡ್ಡು. ಅದರಲ್ಲೂ ಬ್ಯಾಂಕು, ಲೇವಾದೇವಿದಾರರು, ಬ್ರೋಕರುಗಳೆಂಬ ದ್ವಾರಪಾಲಕರು ಈ ಭಸ್ಮಾಸುರನ ದೇವಳ ಸೇರಿದಮೇಲೆ, ಇಡೀ ಜಗತ್ತು ಕಮಲದಮೇಲೆ ಮಲಗಿರೋ ವಿಷ್ಣುವಿನಂತೆ ಅತೀ ಸೂಕ್ಷ್ಮವಾಗಿದೆ. ಯಾರೋ ಎಲ್ಲೋ ಮಾಡಿದ ತಪ್ಪು ಲೆಕ್ಕಾಚಾರ ಇಡೀ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಬಲ್ಲುದು. ಅಲಾಸ್ಕದಲ್ಲಿ ಸಹಕಾರೀ ಬ್ಯಾಂಕೊಂದು ದಿವಾಳಿಯಾದರೆ, ಮನಿಲಾದಲ್ಲಿ ಕೆಲಸಗಾರರ ತಲೆಯುರುಳುತ್ತದೆ.

ಇತ್ತೀಚೆಗೆ ನಾವುಕಂಡ ಅತ್ಯಂತ ದೊಡ್ಡ ಆರ್ಥಿಕ ತಳಮಳ ಅಂದರೆ 2008ರದ್ದು. ಅಮೇರಿಕದ ಸಬ್-ಪ್ರೈಮ್ ಕ್ರಂಚ್, ಹಿಮಚೆಂಡಿನಂತೆ ಉರುಳುತ್ತಾ ಉರುಳುತ್ತಾ, ಹಿಗ್ಗಿ, ಲಕ್ಷಾಂತರ ಜನರು ಕೆಲಸಕಳೆದುಕೊಂಡು ಈಗ ಎಂಟುವರ್ಷದ ನಂತರ ಸ್ವಲ್ಪ ಸುಧಾರಿಸಿಕೊಳ್ಳುತ್ತಾ ಇದ್ದಾರೆ. 2008ರ ತಳಮಳ ಅಫೀಷಿಯಲ್ಲಾಗಿ ಶುರುವಾಗಿದ್ದು, ಲೆಹ್ಮನ್ ಬ್ರದರ್ಸ್ ಎಂಬ ಕಂಪನಿ ತಾನು ಆರ್ಥಿಕವಾಗಿ ದಿವಾಳಿಹೊಂದಿದ್ದೇನೆ ಎಂದು ಘೋಷಿಸಿದಾಗ. ಅಮೇರಿಕಾದ ಅರ್ಧಕ್ಕರ್ಧ ರಾಕ್ಷಸ ಕಂಪನಿಗಳ ಹಣೇಬರಹ ಬರೆಯೋದು ಈ ಲೆಹ್ಮನ್ ಬ್ರದರ್ಸ್ ಎಂಬ ಕಂಪನಿಯೇ. ರಾವಣ ಮುಳುಗಿದಾಗ ಇಡೀ ಲಂಕೆಯನ್ನೇ ಮುಳುಗಿಸಿದಂತೆ, ಲೆಕ್ಮನ್ ಬ್ರದರ್ಸ್’ನ ದಿವಾಳಿ ಸುದ್ಧಿ, ಇಡೀ ಆರ್ಥಿಕ ವ್ಯವಸ್ಥೆಯನ್ನೇ ದಿವಾಳಿಯೆಬ್ಬಿಸಿತು.

ಸೆಪ್ಟೆಂಬರ್ 2008ರಂದು ದಿವಾಳಿಘೋಷಣೆಯಾದ ದಿನ, ಕ್ಯಾನರಿ ವಾರ್ಫಿನಲ್ಲಿರುವ ಲೆಹ್ಮನ್ ಬ್ರದರ್ಸಿನ ಆಫೀಸಿನ ಉದ್ಯೋಗಿಗಳಿಗೆ ಮೇಲಧಿಕಾರಿಗಳು ವಿಷಯ ತಿಳಿಸುತ್ತಿರುವಾಗ ತೆಗೆದ ಈ ಚಿತ್ರ, ಪರಿಸ್ಥಿತಿಯ ಗಂಭೀರತೆಗೆ ಕನ್ನಡಿ ಹಿಡಿದಂತಿದೆ.

Staff members stand in a meeting room at Lehman Brothers offices in the financial district of Canary Wharf in London in September, 2008 during the stock market crash and financial crisis.

ಎಂತ ಸೌಂದರ್ಯ ಕಂಡೆ!

ಹನ್ನೆರಡನೇ ಶತಮಾನದ “ಗಣೇಶ ಮತ್ತಿಬ್ಬರು ವಿಧ್ಯಾದರರ” ವಿಗ್ರಹ. ಪಾಲ ಸಾಮ್ರಾಜ್ಯದ ಕುರುಹು.

The bejeweled elephant-headed God of Plenty, dancing on a plinth with his rat vehicle beneath, holding his attributes the battle axe and a bowl of sweets. He lassoes a serpent above his head as two “vidyadharas” look on from either side. The apex of the stele is ornamented with a bunch of ripe mangoes.
A rare gem from 12th Century, Pala period. Last sold by Sotheby’s at $20,000

Ganesha - Sotheby's 20000 USD

ದಾಸರು, ಸರ್ವಜ್ಞ, ಶರೀಫಜ್ಜ ಮತ್ತು ಟೇಪ್ ರೆಕಾರ್ಡರು

ನಂಗಂತೂ ವಿದ್ಯಾಭೂಷಣರ ಮೇಲೆ ಹಾಗೂ ಪುತ್ತೂರು ನರಸಿಂಹ ನಾಯಕರ ಮೇಲೆ ಭಯಂಕರ ಕೋಪವುಂಟು. ಚಿಕ್ಕವನಿದ್ದಾಗಲಿಂದಲೂ ಮನೆಯಲ್ಲಿ ಬೆಳಿಗ್ಗೆ ಭಕ್ತಿಗೀತೆ ಕ್ಯಾಸೆಟ್ ಹಾಕಿದಾಗ, ವಾರಕ್ಕೆರಡು ಸಾರಿ ಇವರ ಹಾಡುಗಳು ಕೇಳುಬರ್ತಾ ಇದ್ವು. ಅವರ ಹಾಡುಗಳನ್ನ ಕೇಳಿ ಕೇಳಿ, ನನಗಂತಲ್ಲ, I am sure, ನಿಮಗೂ ಸಹ ‘ದಾಸನಾಗು ವಿಶೇಷನಾಗು’ ಅನ್ನೋ ಸಾಲುಗಳು ಎಲ್ಲಾದ್ರೂ ಬರೆದಿದ್ದು ಕಂಡ್ರೂ, ಅವರದೇ ಹಾಡಿನ ಟ್ಯೂನ್ ಮನಸಲ್ಲಿ ಓಡುತ್ತೇ ಹೊರತು ಆ ಸಾಲುಗಳು ಬರೀ ಸಾಲುಗಳಾಗಿ ಹೊಳೆಯುತ್ತವೆಯೇ? ಅಂದರೆ, ಕನಕದಾಸರ ಆ ಇಡೀ ರಚನೆಯನ್ನು ಬೇರೆ ಯಾವ ರೀತಿಯಲ್ಲೂ ನಿಮಗೆ ಗ್ರಹಿಸಲು ಸಾಧ್ಯವೇ ಇಲ್ಲ. ಎಲ್ಲೋ ಅಲ್ಪ ಸ್ವಲ್ಪ ಸಾದ್ಯವಾದರೂ, ಅಲ್ಲೆಲ್ಲೋ ಹಿಂದೆ ನಿಮ್ಮ ಮನಸ್ಸಿನಲ್ಲಿ ಆ ಆಲಾಪ ಕೇಳಿಬರುತ್ತಾ ಇರುತ್ತೆ.

ನನಗೆ ಇವರಿಬ್ಬರ ಮೇಲೆ ಸಿಟ್ಟು ಇದಕ್ಕೇ. ಕನಕ, ಪುರಂದರ, ಸರ್ವಜ್ಞ ಮಾತು ಶರೀಫರು, ಈ ನಾಲ್ಕು ಜನರ ರಚನೆಗಳನ್ನ ಅರ್ಥೈಸಿಕೊಳ್ಳಲಿಕ್ಕೆ ಒಂದು ಬಾರಿಯ ಕೇಳುವಿಕೆ ಯಾವ ಮೂಲೆಗೂ ಸಾಲಲ್ಲ. ಮತ್ತೆ ಮತ್ತೆ ಕೇಳ್ಬೇಕು. ಒಂದೈದು ಸಲ ಕೇಳಿದ್ಮೇಲೆ “ಓಹ್!!!! ಇದು ಹಿಂಗೆ” ಅನ್ಸುತ್ತೆ. ಇನ್ನೊಂದೆರಡು ಸಲ ಕೇಳಿ “ಓಹೋ!! ಇಹು ಹಿಂಗೂ ಇದೆ” ಅನ್ಸುತ್ತೆ. ಓದಿ ಅರ್ಥ ಮಾಡ್ಕೊಳ್ಳೋದೇ ಇಷ್ಟು ಕಷ್ಟ. ಇನ್ನು ಇವರ ರಚನೆಗಳಿಗೆ ತಮ್ಮ ಜೇನಿನಂತ ಧ್ವನಿ ಸೇರಿಸಿ ಅದನ್ನು ಪೂರ್ತಿ ಕರ್ಣಾನಂದಕರ ಗೀತೆಯನ್ನಾಗಿ ಮಾಡ್ತಾರಲ್ಲ…..ಸರಿಯಿಲ್ಲ ರೀ ಇವ್ರು. ನಾನು ನೀವು ಓಕೆ ಹೆಂಗೋ ಸ್ವಲ್ಪ ಓದ್ತೀವಿ. ಆದರೆ ಉಳಿದ 95% ಜನ ಇದನ್ನೊಂದು ಭಕ್ತಿಗೀತೆ ಅಂತಾ ‘ಕೇಳಿ’ ಮುಂದೆ ಹೋಗ್ತಾರೆ, ಅಷ್ಟೇ ಹೊರತು ಅದರ ನಿಜವಾದ ತಿರುಳನ್ನು ಯಾವತ್ತಿಗೂ ಅರ್ಥೈಸಿಕೊಳ್ಳಲ್ಲ.

ಅಡಿಗರದ್ದೋ, ಕೆ.ಎಸ್.ನ ಅವರದ್ದೋ ಹಾಡುಗಳಿಗೂ ಇದೇ ಗತಿಯಾಗುತ್ತೆ ಅಂತಿಲ್ಲ. ಸಿ.ಅಶ್ವತ್ಥ್ ಸರ್ ಸ್ವಲ್ಪ ಲೋ ಪಿಚ್ಚಿನಲ್ಲಿ ‘ನೀ ಹಿಂಗs ನೋಡಬ್ಯಾಡ ನನ್ನ’ ಅಂದ್ರೆ ಗೊತ್ತಾಗಿಬಿಡುತ್ತೆ ಅದೊಂದು ಶೋಕಗೀತೆ ಅಂತಾ. ಒಂದ್ಸಲ ಅದು ಗೊತ್ತಾದ ಮೇಲೆ, ಎರಡನೇ ಸಲಕ್ಕೆ ಜನ ಅದರ ಲಿರಿಕ್ಸಿಗೆ ಗಮನ ಕೊಡ್ತಾರೆ. ಎಂಡಿ ಪಲ್ಲವಿ ಮೃದುವಾಗಿ ‘ನನ್ನ ಇನಿಯನ ನೆಲೆಯ ಬಲ್ಲೆಯೇನೇ…’ ಅಂದಕೂಡ್ಲೇ ಗೊತ್ತಾಗುತ್ತೆ ಲಕ್ಷ್ಮೀನಾರಾಯಣ ಭಟ್ರು ಈ ಹಾಡಿನಲ್ಲಿ ಹೆಣ್ಣಿನ ಅಳಲನ್ನು ವಿಶದವಾಗಿ ಹೇಳಿದ್ದಾರೆ ಅಂತಾ.

ದಾಸರದ್ದು ಹಂಗಲ್ಲ. ಅದು ಕೃಷ್ಣನ ನೆನೆಯುವ ಪ್ರೇಮಗೀತೆಯೂ ಹೌದು, ಜೀವನಾನುಭವವೂ ಹೌದು, ತತ್ವವೂ ಹೌದು, ಪ್ರತಿಸಾಮಾನ್ಯನನ್ನು ತಲುಪಬಲ್ಲ ರಸಾಮೃತವೂ ಹೌದು. ಅದನ್ನು ಕೇಳಿ ಅರ್ಥಸಿಕೊಳ್ಳದಿದ್ದರೆ, ಅದೆಂತಾ ನಷ್ಟ ಅಲ್ವೇ!
“ದಾರದಿ ಕಟ್ಟಿಲ್ಲ ಮಾರು ಹಾಕುವುದಲ್ಲ
ಕೇರಿ ಕೇರಿಗಳಲ್ಲಿ ಮಾರುವುದಲ್ಲ
ಭೂರಿ ಭಕುತಿಯೆಂಬ ಭಾರಿಯ ಬೆಳಗಿದ
ಮಾರೆಂದು ಪೇಳಿದ ಶೌರಿಯ ಸೊಬಗಿನ…..ಹೂ ಬೇಕೇ ಪರಿಮಳದ
ಪರಮ ಪುರುಷ ನಮ್ಮ ಕೃಷ್ಣನ ತೋಟದ
ಹೂ ಬೇಕೇ” ಅನ್ನೋ ಈ ಹಾಡಿನ ಪದಗಳನ್ನ ಯಾರಾದ್ರೂ ಗಮನಿಸಿರ್ತಾರಾ!? ಅದನ್ನದೆಷ್ಟು ಜನ ಅರ್ಥೈಸಿಕೊಂಡಿರಬಹುದು? ಗಮನಿಸದೇ ಈ ಅನರ್ಘ್ಯಪದಗಳನ್ನ ಕಳಕೊಂಡವರೆಷ್ಟು ಜನ!

ಇಲ್ಲೊಂದು ಪುರಂದರದಾಸರ ರಚನೆ ನೋಡಿ. ಇದನ್ನೆಲ್ಲಾ ಟೇಪ್ ರೆಕಾರ್ಡರಿನಲ್ಲಿ ಇಂಪಾದ ಹಾಡಿನ ಮೂಲಕ ಕೇಳಿ ಅರ್ಥೈಸ್ಕೊಳ್ಳೋ ಭಾಗ್ಯ ಎಷ್ಟು ಜನಕ್ಕಿರುತ್ತೆ ಹೇಳಿ 🙂 ಇದಕ್ಕೇ ನಂಗೆ ವಿದ್ಯಾಭೂಷಣರ ಮೇಲೆ ನರಸಿಂಹನಾಯಕರ ಮೇಲೆ ಸಿಟ್ಟು 🙂 ನಿಮಗೆ!?

12743827_986740784749200_2581252490178379716_n

ಚಿತ್ರ ಶಕ್ತಿ‬ – ೧೨

“ಕರ್ಣಾನಂದ”

ಜಗತ್ತನ್ನು ಪಂಚೇಂದ್ರಿಯಗಳಿಂದ ಆನಂದಿಸೋ ನಮಗೆ ಐದರಲ್ಲಿ ಒಂದೇ ಒಂದು ಇಂದ್ರಿಯ ಕೈ ಕೊಟ್ರೂ, ಜಗತ್ತೇ ಅರ್ಧ ಮುಳುಗಿ ಹೋದಂತೆ ಅನ್ನಿಸುತ್ತೆ. ಅಂತಾದ್ರಲ್ಲಿ, ನಿಮ್ಮ ಸುತ್ತಲಿನಲ್ಲೇ ಸಂಪೂರ್ಣ ಕಿವಿಯೇ ಕೇಳದೇ ಇರುವವರು ಅಥವಾ ಎರಡೂ ಕಣ್ಣು ಕಾಣದೇ ಇರುವವರೋ ಇದ್ದರೆ ಅವರ ಪರಿಸ್ಥಿತಿಯನ್ನೊಮ್ಮೆ ಊಹಿಸಿಕೊಳ್ಳಿ. ನಿಜವಾಗ್ಯೂ ಹೇಳಬೇಕೆಂದರೆ ಅವರ ನೋವನ್ನು ಅರ್ಥೈಸಿಕೊಳ್ಳುವುದು ಯಾರಿಗೂ ಸಾಧ್ಯವಿಲ್ಲ. ಯಾಕೆಂದರೆ ಸಂಪೂರ್ಣ ಕಿವುಡಾಗಿರುವುದು ಅಥವಾ ಕುರುಡಾಗಿರುವುದೇನೆಂದರೆ ನಮಗ್ಯಾರಿಗೂ ಗೊತ್ತಿಲ್ಲ. ಅದನ್ನು ಅರ್ಥೈಸಿಕೊಳ್ಳಬೇಕಾದರೆ ಬಹಳ ಆಳವಾದ ಸಹಾನುಭೂತಿ ಬೇಕಾಗುತ್ತದೆ.

ಹತ್ತೊಂಬತ್ತನೆಯ ಶತಮಾನದ ಅಂಚಿನವರೆಗೂ ಕಿವುಡು ಹಾಗೂ ಕುರುಡು ಸ್ಥಿತಿಗಳು ಗುಣಪಡಿಸಲೇ ಆಗದವು ಎಂಬ ಸ್ಥಿತಿಯಿತ್ತು. ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ನಿಧಾನವಾಗಿ ಇದು ಸುಧಾರಿಸಿತು. ಜಗತ್ತಿನ ಒಂದಂಶದ ಅನುಭೂತಿಯನ್ನೇ ಕಳೆದುಕೊಂಡವರಿಗೆ ಈ ಸುಂದರ ಜಗತ್ತನ್ನು ನೋಡುವ, ಅನುಭವಿಸುವ ಅವಕಾಶಗಳು ಸಿಗಲಾರಂಭಿಸಿದವು. ನೇತ್ರಶಸ್ತ್ರಚಿಕಿತ್ಸೆಗಳು ಕುರುಡಾಗಿದ್ದರಿಗೆ ಈ ವರ್ಣಮಯ ಜಗತ್ತನ್ನು ನೋಡುವ ಭಾಗ್ಯ ಒದಗಿಸಿದರೆ, “ಕಾಕ್ಲಿಯರ್ ಇಂಪ್ಲಾಟ್” ಎಂಬ ತಂತ್ರಜ್ಞಾನ ಸಂಪೂರ್ಣ ಕಿವುಡಾದವರಿಗೆ ಮೊತ್ತಮೊದಲ ಬಾರಿಗೆ ಜಗತ್ತಿನ ಶಬ್ಧಗಳನ್ನು ಆನಂದಿಸುವ ಅವಕಾಶ ಒದಗಿಸಿತು. ಈ ಕಾಕ್ಲಿಯರ್ ಇಂಪ್ಲಾಂಟುಗಳು ಆಗಿನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗ, ಹುಟ್ಟುಗಿವುಡನಾಗಿದ್ದ ಹೆರಲ್ಡ್ ವಿಟ್ಲ್ಸ್ (Harold Whittles) ಎಂಬ ಬಾಲಕನಿಗೆ ಮೊತ್ತಮೊದಲ ಬಾರಿಗೆ ಶಬ್ದವೊಂದನ್ನು ಕೇಳಿಸಿದಾಗ, ಜಾಕ್ ಬ್ರಾಡ್ಲೀ ತೆಗೆದ ಈ ಚಿತ್ರ, ಆ ಬಾಲಕನಲ್ಲಿ ಒಮ್ಮೆಗೇ ಸಿಡಿದ ಸಹಸ್ರ ಸಂತಸದ ಬುಗ್ಗೆಗಳನ್ನು ಅದೆಷ್ಟು ಚೆನ್ನಾಗಿ ಸೆರೆಹಿಡಿದಿದೆ ನೋಡಿ!

Harold Whittles hears for the first time ever after a doctor places an earpiece in his left ear

ಹೆರಾಲ್ಡನ ಕಣ್ಣಿನ ಪ್ರತಿ ಇಂಚೂ ಸಹ, ಅವನ ಅವರ್ಣನೀಯ ಆನಂದವನ್ನು ಹನಿಹನಿಯಾಗಿ ವಿವರಿಸುವ ಪ್ರಯತ್ನವನ್ನು ಮಾಡುತ್ತಿದೆ.

ಜೀವನವಿಡೀ ಮೌನದೊಂದಿಗೇ ಸಂಸಾರ ಮಾಡಿದವರು, ಶಬ್ದವನ್ನು ಮೊದಲ ಬಾರಿಗೆ ಅನುಭವಿಸಿದಾಗ ಅವರ ಪ್ರತಿಕ್ರಿಯೆ ನೋಡಬೇಕೆಂದರೆ ಈ ಕೆಳಗಿನ ಕೊಂಡಿಯನ್ನು ನೋಡಿ. (ಶಾಸನ ವಿಧಿಸಿದ ಎಚ್ಚರಿಕೆ: ಕೈಯಲ್ಲಿ ಕರ್ಚೀಫು, ಟಿಶ್ಯೂ ಪೇಪರ್ ಹಿಡ್ಕಂಡಿರಿ)

ಚಿತ್ರ ಶಕ್ತಿ‬ – ೧೧

“ಅಮ್ಮ ಬಂದ್ಲು”

ಮೊನ್ನೆ ಸೂಪರ್ ಮಾರ್ಕೆಟ್ಟಿನಲ್ಲಿ ಎರಡು ವರ್ಷದ ಒಂದು ಮಗು ಅಮ್ಮನ ಕೈಯಿಂದ ತಪ್ಪಿಸಿಕೊಂಡು, ಮಮ್ಮೀsss ಅಂತಾ ಅಳ್ತಾ ಓಡಾಡ್ತಾ ಇತ್ತು. ಒಂದು ನಿಮಿಷ ಪಕ್ಕದಲ್ಲಿ ಅಮ್ಮ ಇಲ್ಲ ಅಂದ್ರೆ ಹೆಂಗೆ ನೀರಿನಿಂದ ಹೊರಗೆ ತೆಗೆದ ಮೀನಿನಂತಾಗಿ ಬಿಡ್ತೀವಲ್ವಾ ನಾವು?

ಮೇಜರ್ ಟೆರ್ರಿ ಗುರ್ರೊಲಾ ಇರಾಕಿನಲ್ಲಿ ಏಳು ತಿಂಗಳು ಪೋಸ್ಟಿಂಗ್ ಮುಗಿಸಿ ವಾಪಾಸುಬಂದಾಗ, ಅಕೆಯ ಗಂಡ ಜಾರ್ಜ್ ಮತ್ತು ಮಗಳು ಗ್ಯಾಬಿ ಏರ್ರ್ಪೋಟಿನಲ್ಲಿ ಕಾಯುತ್ತಿದ್ದರು. ಎರಡು ವರ್ಷದ ಮಗಳನ್ನು ಬಿಟ್ಟು ಯುದ್ಧಭೂಮಿಗೆ ಹೋಗುವುದು ತಾಯಿಯೊಬ್ಬಳಿಗೆ ಅದೆಷ್ಟು ನೋವಿನ ಕೆಲಸ ಎಂಬುದು, 11 ಸೆಪ್ಟೆಂಬರ್ 2007ರ ಆ ದಿನ ಅಟ್ಲಾಂಟದ ಏರ್ಪೋರ್ಟಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ತಿಳಿಯಿತು. ಅಮ್ಮನ ನೋಡಿದ ಕೂಡಲೇ ಗ್ಯಾಬಿ, “ಮಮ್ಮೀ….ಐ ಮಿಸ್ಡ್ ಯೂ” ಅಂತಾ ಓಡಿಬಂದಳು. ಎರಡು ವರ್ಷದ ಕೂಸದು. ಏಳು ತಿಂಗಳು ತನ್ನನ್ನು ಅಮ್ಮ ಬಿಟ್ಟು ಹೋಗಿದ್ದರೂ, ತನ್ನನ್ನು ಸ್ವಲ್ಪವೂ ಮರೆಯದೇ, ಒಂದೇ ಕ್ಷಣದಲ್ಲೇ ಗುರುತಿಸಿದ ಮಗಳನ್ನು ನೋಡಿ ಟೆರ್ರಿ ನೆಲಕ್ಕೆ ಕುಸಿದು, ಗ್ಯಾಬಿಯನ್ನು ತಬ್ಬಿ ಹಿಡಿದು, ಒಂದೇಸಮನೆ ಅತ್ತು, ನಾಲ್ಕು ನಿಮಿಷದ ನಂತರ ಸುಧಾರಿಸಿಕೊಂಡು ಎದ್ದುನಿಂತಾಗ, ಆಕೆಗೆ ಕಂಡದ್ದು ತೇವಗೊಂಡ ಸಾವಿರಾರು ಕಣ್ಣುಗಳು. “ಇಡೀ ಏರ್ಪೋರ್ಟಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿ….ನಾನು ತಮಾಷೆಗೆ ಹೇಳುತ್ತಿಲ್ಲಾ….ಪ್ರತಿಯೊಬ್ಬ ಗಂಡಸು, ಹೆಂಗಸು, ಮಗುವಿನ ಕಣ್ಣುಗಳು ತೇವಗೊಂಡಿದ್ದವು” ಅಂತಾರೆ ಟೆರ್ರಿ.

ಯುದ್ಧದ ದುಃಖತಪ್ತ ಮುಖವನ್ನು ತೋರಿಸುವ ಈ ಚಿತ್ರ, ತಾಯಿಮಗುವಿನ ಬಾಂಧವ್ಯವನ್ನೂ ಮಾತಿಲ್ಲದೇ ಸಾರುತ್ತದೆ. ತಾಯಿ ಮಗಳು ಇಬ್ಬರೂ ಜಗತ್ತನ್ನು ಮರೆತ ಒಂದು ಕ್ಷಣ, ಇತಿಹಾಸದ ಶಕ್ತಿಶಾಲಿ ಚಿತ್ರಗಳಲ್ಲೊಂದಾಯ್ತು.

10329048_984236591666286_2402200037685426014_n

ಚಿತ್ರ ಶಕ್ತಿ‬ – ೧೦

“ಬಾನದಾರಿಯಲ್ಲಿ ಭೂಮಿ ಮೇಲೆ ಬಂದ್ಳು….”

ನನಗೆ “ಸತ್ಯ”ಗಳನ್ನು ಪ್ರಶ್ನಿಸಿ, ಅದನ್ನು ಹಿಂದೆ ಮುಂದೆ ಮೇಲೆ ಕೆಳಗೆ ತಿರುಗಿಸಿ ಎಲ್ಲಾ ಕೋನಗಳಿಂದ ನೋಡಿ, ಕೆಲವೊಮ್ಮೆ ಅಸಾಧ್ಯದಿಕ್ಕಿನಿಂದಲೂ ನೋಡಲು ಪ್ರಯತ್ನಿಸುವುದೆಂದರೆ ಏನೋ ಒಂತರಾ ವಿಕೃತ ಆನಂದ. ಕಾಲೇಜಿನಲ್ಲಿ ಕೆಮಿಸ್ಟ್ರಿ ಲೆಕ್ಚರರ್ರು “ಸಲ್ಫ್ಯೂರಿಕ್ ಆಸಿಡ್ ಅನ್ನು ನೀರಿಗೆ ಬೆರೆಸಬೇಕು. ನೀರನ್ನು ಆಸಿಡ್ಡಿಗೆ ಬೆರೆಸಬಾರದು” ಅಂತಾ ಹೇಳಿದ್ರೂ ಸಹ, “ಅಯ್ಯೋ ಮಿಕ್ಸಿಂಗ್ ಅಂದಮೇಲೆ ಮಿಕ್ಸಿಂಗಪ್ಪಾ. ಅದರಲ್ಲೇನು ಅಸಿಡ್ ಅನ್ನು ನೀರಿಗೆ ಹಾಕಬೇಕು, ನೀರನ್ನು ಆಸಿಡ್ಡಿಗೆ ಹಾಕಬಾರದು ಅಂತೆಲ್ಲಾ ವಿಂಗಡಣೆ!! ಈ ಮೇಸ್ಟ್ರು ಸುಮ್ನೆ ಏನೇನೋ ಹೇಳ್ತಾರೆ” ಅಂತಾ ಮನಸ್ಸಲ್ಲೇ ಬೈದು, ಟೆಸ್ಟ್-ಟ್ಯೂಬಲ್ಲಿ ಸಲ್ಫ್ಯೂರಿಕ್ ಆಸಿಡ್ ತಗಂಡು, ಅದಕ್ಕೆ ಎರಡು ಹನಿ ನೀರು ಹಾಕಿದ್ದೆ. ಮುಂದಿನ ಕಥೆ ನೀವು ಕೇಳಬಾರ್ದು ನಾನು ಹೇಳಬಾರ್ದು. ಒಟ್ನಲ್ಲಿ ಕಣ್ಣು 2ಮಿಲೀಮೀಟರ್ ದೂರದಲ್ಲಿ ಬಚಾವಾಯ್ತು ಅಂತ ಹೇಳಬಲ್ಲೆ ಅಷ್ಟೇ. ಆಮೇಲೆ ಯಾಕೆ ಆಸಿಡ್ಡನ್ನ ನೀರಿಗೆ ಬೆರೆಸಬೇಕು ಅಂತಾ ತಿಳ್ಕಂಡು ಅರ್ಥಮಾಡ್ಕಂಡೆ ಬಿಡಿ, ಅದು ಬೇರೆ ಕಥೆ.

ವಿಷಯಗಳನ್ನು ಅವುಗಳ ಚೌಕಟ್ಟಿನಿಂದ ಹೊರಬಂದು ನೋಡುವುದರಲ್ಲಿರುವ ಆನಂದ, ಬೇರೆಲ್ಲೂ ಸಿಗುವುದಿಲ್ಲ. ದಿನಾ ನಾವು ಸೂರ್ಯೋದಯ ನೋಡ್ತೀವಿ, ಸೂರ್ಯಾಸ್ತ ನೋಡ್ತೀವಿ. ಅದೇ ಸೂರ್ಯನ ಮೇಲೆ ಹೋದ್ರೆ ಭೂಮ್ಯೋದಯ, ಭೂಮ್ಯಾಸ್ತ ಹೆಂಗಿರಬಹುದು ಅಂತಾ ಯೋಚಿಸಿದ್ದೀರಾ? ಸೂರ್ಯನ ಮೇಲೆ ಹೋಗೋದು ತುಂಬಾ ಕಷ್ಟ ಅಂತೀರಾ? ನೀವು ಹೇಳೋದೂ ಸರೀನೇ. ಅದೂ ಅಲ್ದೆ ಸೂರ್ಯನ ಮೇಲೆ ತುಂಬಾ ಬೆಳಕಿನಮಾಲಿನ್ಯ ಇರೋದ್ರಿಂದ ಭೂಮಿ ಸರಿಯಾಗಿ ಕಾಣೋದೂ ಇಲ್ಲ. ಅದಕ್ಕೆ ಸರಿಯಾಗಿ ನಮ್ ಭೂಮಿ ಅಲ್ಲಿಂದ ಸಣ್ಣದೊಂದು ಪುಟಾಣಿ ಬಟಾಣಿ ತರಹ ಕಾಣುತ್ತೆ. ಅದಕ್ಕೇ ನಮ್ ಕಲ್ಪನೆಯನ್ನ ಸೂರ್ಯನ ಮೇಲ್ಮೈನಿಂದ ಚಂದ್ರನಲ್ಲಿಗೆ ಬದಲಾಯಿಸೋಣ, ಏನಂತೀರಿ! ಅಲ್ಲಿಂದಾ ನಮ್ಮ ಭೂಮಿ ದಿಗಂತದಿಂದ ಮೇಲೇರೋದು ಅದೆಂತಾ ಭವ್ಯ ನೋಟ ಗೊತ್ತಾ. ಅಂಧಕಾರ ತುಂಬಿದ ಭಾಹ್ಯಾಕಾಶದಲ್ಲಿ ನೀಲಮಣಿಯಂತೆ ತೇಲುವ ನಮ್ಮೀ ಭೂಮಿ ಅದೆಂತಾ ರಮಣಿ ಅಂತೀರಾ!!

ವಿಲಿಯಂ ಆಂಡರ್ಸ್ ಎಂಬ ಗಗನಯಾತ್ರಿ 1968ರಲ್ಲಿ ಅಪೋಲೋ-8ರಲ್ಲಿ ಚಂದ್ರನಲ್ಲಿಗೆ ಟ್ರಿಪ್ ಹೋಗಿದ್ದಾಗ ತೆಗೆದ “ಭೂಮ್ಯೋದಯ”ದ (Earthrise) ಮೊದಲ ಹಾಗೂ ಅತ್ಯದ್ಭುತ ಚಿತ್ರ. ನೋಡಿ, ಆನಂದಿಸಿ.

12670608_983078311782114_8504068124396079406_n

ಚಿತ್ರ ಶಕ್ತಿ – ೯

“ಎತ್ತರೆತ್ತರದಲ್ಲೊಂದು ಫಲಾಹಾರ”

ಮನುಷ್ಯನೆನ್ನುವ ಈ ಪ್ರಾಣಿ ಎಂತಾ ವಿಚಿತ್ರ ಅಲ್ವಾ!? ಸರಿಯಾಗಿ ಹತ್ತುಸುತ್ತು ಜೋರಾಗಿ ಸುತ್ತಿ ನಿಂತರೆ, ಕಾಲೇ ಕಂಟ್ರೋಲಿಗೆ ಸಿಗಲ್ಲ. ಆದರೂ ಅದೇನಾಗುತ್ತೆ ನೋಡೇ ಬಿಡೋಣ ಅಂತಾ ಹೊರಡ್ತಾನೆ. ಸುತ್ತು ಹೊಡೆದು ಬೀಳ್ತಾನೆ. ಮತ್ತೆ ಎದ್ದು ನಿಲ್ತಾನೆ. ಇನೊಮ್ಮೆ ಮಾಡ್ತಾನೆ. ಬೀಳದಿರೋದು ಹೆಂಗೆ ಅಂತಾ ಕಲೀತಾನೆ. ಒಟ್ನಲ್ಲಿ ಸೋಲೊಪ್ಪಲ್ಲ. ಮನುಷ್ಯನ ಈ ಛಲ, ನನ್ನ ಅತೀ ಇಷ್ಟದ ಗುಣಗಳಲ್ಲೊಂದು. ಈ ಛಲದ ಹಿಂದಿನ ಪ್ರೇರಕಶಕ್ತಿ ಅಷ್ಟೇ ಕುತೂಹಲಕಾರಿ ಸಹ.

ಇವತ್ತಿನ ಚಿತ್ರ ಮನುಷ್ಯನ ಇಂತಹದ್ದೇ ಛಲದ ಬಗ್ಗೆ. ಮುಂದೆಬರಬಹುದಾದ ಆಪತ್ತಿನ ಬಗ್ಗೆ ತನ್ನ ಹೆದರಿಕೆಯನ್ನೂ ತುಳಿದುನಿಂತು, ಮನುಷ್ಯನ ಸಾಧಿಸಿದ ಬಗ್ಗೆ. 1932 ಸೆಪ್ಟೆಂಬರ್ 20ರಂದು ತೆಗೆದ ಈ ಚಿತ್ರದಲ್ಲಿ ಹನ್ನೊಂದು ಜನ, ಉಕ್ಕಿನಗುಂಡಿಗೆಯ ಕೆಲಸಗಾರರು ನ್ಯೂಯಾರ್ಕಿನ ಬೀದಿಗಳಿಂದ 256ಮೀಟರ್ (ಸುಮಾರು 840 ಅಡಿ) ಎತ್ತರದ ಗರ್ಡರ್ (girder) ಒಂದರ ಮೇಲೆ ಕೂತು, ಮಧ್ಯಾಹ್ನದ ಊಟಕ್ಕೆ ತಯಾರಾಗುತ್ತಿದ್ದಾರೆ! ರಾಕರ್ಫೆಲ್ಲರ್ ಸೆಂಟರಿನ ಆರ್.ಸಿ.ಎ ಕಟ್ಟಡ ಕಟ್ಟುವಾಗ, ಚಾರ್ಲ್ಶ್ ಎಬ್ಬೆಟ್ಸ್ ಎಂಬ ಛಾಯಾಗ್ರಾಹಕ ಕ್ಲಿಕ್ಕಿಸಿದ ಚಿತ್ರವಿದು. ಈ ಚಿತ್ರ ಅಚಾನಕ್ಕಾಗಿ ತೆಗೆದದ್ದೇನಲ್ಲ. ರಾಕರ್ಫೆಲ್ಲರ್ ಸೆಂಟರ್ ಹೊಸದಾಗಿ ಕಟ್ಟಲ್ಪಡುತ್ತಿದ್ದ ತನ್ನ ಗಗನಚುಂಬಿಕಟ್ಟಡಕ್ಕೆ ಸ್ವಲ್ಪ ಪ್ರಚಾರ ಕೊಡಲೆಂದೇ, ತೆಗೆಸಿದ ಚಿತ್ರ. ಈ ಫೋಟೋ ಅಕ್ಟೋಬರ್ 2ರ “ನ್ಯೂಯಾರ್ಕ್ ಹೆರಾಲ್ಡ್ ಟ್ರಿಬ್ಯೂನ್”ನ ಭಾನುವಾರದ ಪುರವಣಿಯಲ್ಲಿ ಕಾಣಿಸಿಕೊಂಡಿತ್ತು. ಹಾಗಂತ ಇದೇನೂ ಮಾಡೆಲ್ಲುಗಳನ್ನು ಕೆಲಸಗಾರರ ವೇಷದಲ್ಲಿ ಕೂರಿಸಿ ತೆಗೆಸಿದ, ಅಥವಾ ಎಲ್ಲೋ ತೆಗೆದು ಆಮೇಲೆ ಎಡಿಟ್ ಮಾಡಿದ ಚಿತ್ರವಲ್ಲ. ನಿಜವಾದ ಕೆಲಸಗಾರರೇ ಊಟಕ್ಕೆ ತಯಾರಾಗುತ್ತಿದ್ದಾಗ ತೆಗೆಸಿದ ಚಿತ್ರ.

ಮ್ಯಾಂಚೆಸ್ಟರ್ ಯುನೈಟೆಡ್ ಎಂಬ ಪ್ರಖ್ಯಾತ ಫುಟ್ಬಾಲ್ ಕ್ಲಬ್ಬಿನ ಮ್ಯಾನೇಜರ್ ಆಗಿದ್ದ ಸರ್ ಅಲೆಕ್ಸ್ ಫರ್ಗುಸನ್ ಈ ಚಿತ್ರವನ್ನು ಸದಾ ತನ್ನ ಆಟಗಾರರಿಗೆ ತೋರಿಸಿ ಅವರನ್ನು ಹುರಿದುಂಬಿಸುತ್ತಿದ್ದನಂತೆ. ಫುಟ್ಬಾಲ್ ಟೀಮಿನಲ್ಲಿದ್ದಂತೆ ಈ ಚಿತ್ರದಲ್ಲೂ ಹನ್ನೊಂದು ಜನರಿದ್ದುದರಿಂದ, ಈ ಚಿತ್ರವನ್ನು “ಒಂದು ತಂಡವಾಗಿ ಆಡುವುದು ಹೇಗೆ ಎಂಬುದನ್ನು, ಕೂತರೇ ಒಟ್ಟಿಗೆ, ಬಿದ್ದರೂ ಒಟ್ಟಿಗೆ ಎಂಬಂತೆ ಕೂತಿರುವ ಈ ಕೆಲಸಗಾರರನ್ನು ನೋಡಿ ಕಲಿಯಿರಿ. ನೀವೂ ಸಹ ಆಟದ ಮೈದಾನದಲ್ಲಿ ಇವರಂತೆಯೇ ಒಟ್ಟಿಗೆ ಅಪಾಯದಲ್ಲಿ ಸಿಲುಕಿಕೊಂಡಿರುವ ಒಂದು ಗುಂಪು. ಒಬ್ಬನ ತಪ್ಪು ಎಲ್ಲರಿಗೂ ಮುಳುವಾಗಬಹುದು. ಹಾಗೆಯೇ ಒಬ್ಬ ಬಿದ್ದರೆ, ಇನ್ನಿಬ್ಬರು ಅವನ ಸಹಾಯಕ್ಕೆ ಧಾವಿಸಲೂಬಹುದು” ಅಂತಾ ಹೇಳಿ ಆಟದಲ್ಲಿ ಗೆಲ್ಲಲು ಪ್ರೇರೇಪಿಸುತ್ತಿದ್ದನಂತೆ.

ವಿ.ಸೂ: ಹೌದು, ಮನುಷ್ಯ ಭೂಮಿಯನ್ನು ಹಾಳುಗೆಡವಿದ್ದಾನೆ. ಪ್ರಕೃತಿಯನ್ನು ತುಳಿದು ಅಲ್ಲಲ್ಲಿ ಆಕಾಶದೆತ್ತರಕ್ಕೆ ಕಾಂಕ್ರೀಟಿನ ಕಾಡುಗಳನ್ನು ಬೆಳೆಸಿದ್ದಾನೆ. ಅವೆಲ್ಲಾ ನಿಜವೇ. ಆದರೆ ಅದರಿಂದ ಉತ್ಪತ್ತಿಯಾದ ಕೆಟ್ಟಪರಿಣಾಮಗಳಿಗೆ ಪರಿಹಾರ ಕಂಡುಹಿಡಿಯುತ್ತಿರುವುದೂ ಸಹ ಇದೇ ಮನುಷ್ಯನೇ. ಅದ್ದರಿಂದ, ಮನುಷ್ಯನ ಕೆಟ್ಟಕೆಲಸಗಳಿಗೆ ಮಾತ್ರ ಹೀಗಳೆಯುವ ಕೆಲಸ ಮಾಡುವುದು ಬೇಡ. ಇವತ್ತಿನ ನನ್ನ ಮಾತುಗಳು ಮನುಷ್ಯನ ಛಲದ ಬಗ್ಗೆಯಷ್ಟೇ.

12743482_982474821842463_576430764579129947_n

ಚಿತ್ರ ಶಕ್ತಿ – ೮

“ಯಾವುದಾದರೇನು ನಿನ್ನ ಬಣ್ಣ…. ಎಂದೆಂದಿಗೂ ನೀನೆ ನನ್ನ ಅಣ್ಣ”

ಮೈಬಣ್ಣದ ಆಧಾರದ ಮೇಲೆ ಜನರನ್ನು ವಿಂಗಡಿಸುವ ಕೆಟ್ಟಚಾಳಿಗೆ ಸುಮಾರು ಒಂಬೈನೂರು ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಇದನ್ನು ಪ್ರಾರಂಭಿಸಿದ ಹಾಗೂ ಪ್ರಸಿದ್ಧಿಗೊಳಿಸಿದ ಕೀರ್ತಿ ಬಹುಷಃ ಅರಬ್ ವ್ಯಾಪಾರಿಗಳಿಗೆ ಸೇರಬೇಕು. ಇದಕ್ಕೆ ತಡೆ ಬೀಳಲು ಅದೆಷ್ಟೋ ದೇಶಗಳ ಅದೆಷ್ಟೋ ಜನರ ಜೀವ ಸವೆಯಬೇಕಾಯ್ತು.

ಅಷ್ಟೆಲ್ಲಾ ಹೋರಾಟಗಳು ನಡೆದ ಮೇಲೂ, ಕರಿಯರಿಗೆ ಬಹಳಷ್ಟು ಸಾಮಾಜಿಕ ಸ್ಥರಗಳಲ್ಲಿ ಸಮಾನಅವಕಾಶಗಳೇ ಸಿಗುತ್ತಿರಲಿಲ್ಲ. ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಯಾದ ಫುಟ್ಬಾಲ್ ಕೂಡಾ ಇದಕ್ಕೆ ಹೊರತಾಗಿರಲಿಲ್ಲ. ಕರಿಯರು ರಾಷ್ಟ್ರೀಯ ತಂಡಗಳಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡಬೇಕಾಗಿತ್ತು. ಇದೇ ಅಲ್ಲದೆ, ಕರಿಯರೇ ತುಂಬಿದ್ದ ದೇಶಗಳ ತಂಡಗಳು ಸಹ ಫುಟ್ಬಾಲ್ ವಿಶ್ವಕಪ್’ನಲ್ಲಿ ಕಾಲ ಸ್ಥಾನವೇ ಸಿಗದೇ ಕೆಲವರ್ಷಗಳ ಕಾಲ ನಿರಾಶೆಗೊಳಗಾಗಬೇಕಿತ್ತು. (ಕ್ರಿಕೆಟ್ಟಿನಲ್ಲಿ, ಇದಕ್ಕೆ ತದ್ವಿರುದ್ಧವಾಗಿ, ದಕ್ಷಿಣ ಆಫ್ರಿಕಾ ತಂಡಕ್ಕೆ ಐಸಿಸಿ 1995ರವರೆಗೆ ನಿಷೇಧ ಹೇರಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು).

ಕ್ರೀಡಾಸಂಸ್ಥೆಗಳು ಇಂತಹ ಕೆಟ್ಟಪದ್ದತಿಯನ್ನು ಜೀವಂತವಾಗಿಟ್ಟರೂ ಸಹ, ಕ್ರೀಡಾಳುಗಳು ಸದಾ ಇಂತಹ ಕ್ಷುಲ್ಲಕ ವಿಷಯಗಳನ್ನು ಬದಿಗೆ ತಳ್ಳಿ ಸಹೋದರತೆಯನ್ನು ಪ್ರದರ್ಶಿಸಿದ್ದಾರೆ. 1970ರ ವಿಶ್ವಕಪ್ ಪಂದ್ಯವೊಂದರಲ್ಲಿ ಬ್ರಜೀಲ್ ತಂಡ ಇಂಗ್ಲೆಂಡ್ ವಿರುದ್ಧ 1-0ರ ಜಯ ಸಾಧಿಸಿದಾಗ, ಬ್ರಝೀಲ್’ನ ಫುಟ್ಬಾಲ್ ತಾರೆ ಪಿಲೇ ಹಾಗೂ ಇಂಗ್ಲೆಂಡ್ ತಂಡದ ನಾಯಕ ಬಾಬ್ಬೀ ಮೂರ್ ತಮ್ಮ ಜೆರ್ಸಿಗಳನ್ನು ಬದಲಾಯಿಸಿಕೊಂಡ ಅಪೂರ್ವ ಕ್ಷಣವೊಂದು ದಾಖಲಾಗಿದ್ದು ಹೀಗೆ.

ಬಾಬ್ಬಿ ಹಾಗೂ ಪಿಲೇ, ಆಟದ ಮೈದಾನದ ಹೊರಗೆ ಬಹಳ ಒಳ್ಳೆಯ ಸ್ನೇಹಿತರಾಗಿದ್ದವರು. ಈ ಫೋಟೋ ತೆಗೆಯುವಾಗ ಇಬ್ಬರೂ ಹೆಚ್ಚುಕಮ್ಮಿ ತಮ್ಮ ಕ್ರೀಡಾಜೀವನದ ನಿವೃತ್ತಿಯ ಅಂಚಿನಲ್ಲಿದ್ದರು. ಈ ಚಿತ್ರ ಬಹಳ ವರ್ಷಗಳವರೆಗೆ ಸಾಂಸ್ಕೃತಿಕ, ಜನಾಂಗೀಯ ಹಾಗೂ ಪ್ರಾಂತೀಯ ಒಗ್ಗಟ್ಟಿನ ಪ್ರತೀಕವಾಗಿ ನಿಂತಿತು. ತೊಟ್ಟ ಅಂಗಿಯ ಅಡಿಯಲ್ಲಿ, ಬಣ್ಣದ ಚರ್ಮವೊಂದನ್ನು ಬಿಟ್ಟರೆ ನಾವೆಲ್ಲರೂ ಒಂದೇ ಎಂಬುದನ್ನು ಈ ದಿಗ್ಗಜರ ಈ ಚಿತ್ರ ಬಹಳ ಸೂಕ್ಷ್ಮವಾಗಿ ಹಾಗೂ ಸೂಚ್ಯವಾಗಿ ಸಾರುತ್ತದೆ.

12670848_980678155355463_6457564588448921655_n

ಚಿತ್ರ ಶಕ್ತಿ – ೭

“ನನ್ನವರಿಗಾಗಿ ನಾನು”.

ದಿನವಿಡೀ ಹಿಮಕ್ಕೆ ಎದೆಕೊಟ್ಟು ದೇಶ ಕಾದ ಹನುಮಂತಪ್ಪನ ಮೇಲೆ ಮೊನ್ನೆ ಹಿಮಕ್ಕೆ ಪ್ರೀತಿ ಹೆಚ್ಚಾಗಿ, ಓಡಿ ಬಂದು ಬರಸೆಳೆದು ಅಪ್ಪಿಕೊಂಡಾಗ ಅದನ್ನು ನಿರಾಸೆಗೊಳಿಸದೆ, ಆರುದಿನಗಳ ಕಾಲ ಅಪ್ಪಿಹಿಡಿದು, ಹಿಮದಡಿಯಲ್ಲಿ ಬಂದ ಸಾವನ್ನೂ ಮಾತನಾಡಿ, ತಡವಿ, ವಾಪಾಸುಕಳಿಸಿ ಕುಳಿತಿರುವ ಈ ದಿನ, ಹುಲುಮಾನವರಾದ ನಾವುಗಳು ನಮ್ಮ ಮನೆಯ ದೇವರಜೊತೆ ಇಂತಹ ಕೆಚ್ಚೆದೆಯ ಯೋಧರಿಗೂ ನಮಿಸಿ, ಅದೇ ದೇವರಲ್ಲಿ ಈ ಸೈನಿಕರನ್ನು ರಕ್ಷಿಸು ಅಂತಾ ಕೇಳಬೇಕಾದ ದಿನವೂ ಹೌದು.

ಪ್ರೀತಿ ಎಂತೆಂತಾ ಹುಚ್ಚುಕೆಲಸವನ್ನೂ ಮಾಡಿಸುತ್ತೆ. ಮಧ್ಯರಾತ್ರಿಯಲ್ಲಿ ಅವಳ ಮನೆಮುಂದೆ ನಿಲ್ಲಿಸುತ್ತೆ. ಕೈಯಲ್ಲಿ ಕ್ಯಾಮರಾ ಹಿಡಿದು ಹುಚ್ಚನಂತೆ ತಿರುಗಾಡಿಸುತ್ತೆ. ನಾಯಿಮರಿಯನ್ನು ಮುದ್ದುಮಾಡಿಸುತ್ತೆ. ಕೈಯಲ್ಲಿ ಬಂದೂಕು ಹಿಡಿದು ಗಡಿಯನ್ನೂ ರಕ್ಷಿಸುತ್ತೆ. ನೀವು ಯಾರನ್ನ ಪ್ರೀತಿಸುತ್ತೀರಿ ಅನ್ನುವುದರಮೇಲೆ ಅದು ಅವಲಂಬಿತವಷ್ಟೇ 🙂

ಈ ಸೈನಿಕರೆಂದರೇ ನನಗೊಂತರಾ ವಿಸ್ಮಯ. ನೋಡಲು ನನ್ನನಿಮ್ಮಂತೆಯೇ ಇರುವ ಈ ಜೀವಗಳ ಜೀವನೋತ್ಸಾಹವೇ ಅದಮ್ಯ. ಒಮ್ಮೆ ರಜೆಕಳೆದು ಸೇವೆಗೆ ಮರಳಿದರೆ ಇನ್ಯಾವಾಗ ಸಂಸಾರದ ಮುಖ ನೋಡುವುದೋ ತಿಳಿಯದು. ನೋಡುತ್ತೀವೋ ಇಲ್ಲವೋ ಎಂಬುದೂ ತಿಳಿಯದು. ಆದರೂ, ತನ್ನದೆಲ್ಲವನ್ನೂ ತನ್ನದಲ್ಲವೆಂದು ಬದಿಗಿಟ್ಟು, ತನ್ನವರೇ ಅಲ್ಲದ ನನ್ನ ನಿಮ್ಮ ರಕ್ಷಣೆಗೆ, ಒಂದು ಪುಟಗೋಸಿ ಬಂದೂಕು ಹಿಡಿದು ಗಡಿಯಲ್ಲಿ ನಿಂತು ಮಳೆ ಚಳೆ ಗಾಳಿಗೆ ಎದೆಯೊಡ್ಡುತ್ತಾರೆ. ನಮ್ಮ ಸಂತೋಷಕ್ಕೆ ಕಲ್ಲುಹಾಕಲು ಬರುವವರನ್ನು ಮಟ್ಟಹಾಕುತ್ತಾರೆ. ಈ ಪ್ರಯತ್ನದಲ್ಲಿ ತಮ್ಮದೇ ಕೈ, ಕಾಲು, ಕಣ್ಣು ಕೆಲವೊಮ್ಮೆ ಜೀವವನ್ನೂ ಕಳೆದುಕೊಳ್ಳುತ್ತಾರೆ.

ಈ ಚಿತ್ರದಲ್ಲಿರುವ ಸೈನಿಕನ ಹೆಸರು “ಕೈಲ್ ಹಕೆನ್ಬೆರ್ರಿ”. ಹತ್ತೊಂಬತ್ತು ವರ್ಷದ ವಯಸ್ಸಿನಲ್ಲಿ ನಾವೆಲ್ಲಾ ಹುಡುಗಿರ ಹಿಂದೆ ಸುತ್ತುತ್ತಿದ್ದಾಗ, ಈ ಪುಣ್ಯಾತ್ಮ ಅಮೇರಿಕಾದ ಸೈನ್ಯಕ್ಕೆ ಸೇರಿದ. ಮೂರೇ ತಿಂಗಳಲ್ಲಿ ಈತನ ಚಾಕಚಕ್ಯತೆಯನ್ನು ಮೆಚ್ಚಿದ ಅಧಿಕಾರಿಗಳು ಒಂದುವರ್ಷದಮಟ್ಟಿಗೆ ಡ್ಯೂಟಿಗೆಂದು ಅಪ್ಘಾನಿಸ್ತಾನಕ್ಕೆ ಕಳುಹಿಸಿದರು. ಅಲ್ಲಿ ತಲುಪಿದ ನಾಲ್ಕನೇ ತಿಂಗಳಲ್ಲಿ ಒಂದು ತಣ್ಣನೆಯಸಂಜೆ, ಗಸ್ತುತಿರುಗುತ್ತಿದ್ದಾಗ ಸ್ಪೋಟಕವೊಂದರ ಮೇಲೆ ಕಾಲಿಟ್ಟು, ಜೀವನವೇ ಸಿಡಿದು ನಿಂತಿತು. ಸ್ಪೋಟದೊಂದಿಗೇ ಆಕಾಶಕ್ಕೆಸೆಯಲ್ಪಟ್ಟ ಕೈಲ್ ಎರಡೂ ಕಾಲುಗಳು ಮಾತು ಎಡಗೈಯನ್ನು ಕಳೆದುಕೊಂಡ. ಅವನನ್ನು ಸ್ಪೋಟನಡೆದ ಸ್ಥಳದಿಂದ ಆಸ್ಪತ್ರೆಗೆ, ಅಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ ಜರ್ಮನಿ ಮಾರ್ಗವಾಗಿ, ಅಮೇರಿಕಾಕ್ಕೆ ಕರೆತರುವ ನಡುವೆ, ಈ ಪುಣ್ಯಾತ್ಮ ನಾಲ್ಕುಬಾರಿ ‘ಇನ್ನಿಲ್ಲ’ವಾಗಿದ್ದನಂತೆ. ಆದರೂ ಗಟ್ಟಿಜೀವ ಕೊನೆಗೂ ನಿಂತೇಬಿಟ್ಟಿತು!

ಸೈನ್ಯಕ್ಕೆ ಸೇರಿದ ಕೆಲದಿನಗಳನಂತರ, ಅಫ್ಘಾನಿಸ್ತಾನಕ್ಕೆ ಹಾರುವ ಕೆಲವೇ ದಿನಗಳ ಮುಂಚೆ ಈ ಹುಡುಗ ಹಾಕಿಸಿಕೊಂಡ ಈ ಟ್ಯಾಟೂ (ಹಚ್ಚೆ) ನೋಡಿ. For those I love, I will sacrifice (ನಾನು ಪ್ರೀತಿಸುವರಿಗಾಗಿ, ನನ್ನನ್ನು ಅರ್ಪಿಸಿಕೊಳ್ಳುತ್ತೇನೆ) ಅಂತಾ ಬರೆಸಿಕೊಂಡಿದ್ದಾನೆ. ಇದು ಅಕ್ಷರಃ ನಿಜವಾಗುತ್ತದೆಂದು ಸ್ವತಃ ಈತನೂ ಯೋಚಿಸಿರಲಿಕ್ಕಿಲ್ಲ. ಅಫ್ಘಾನಿಸ್ತಾನದಲ್ಲಿ ಅಮೇರಿಕಾದ ಪಾತ್ರವದೇನೇ ಇರಲಿ, ಅದನ್ನು ಬದಿಗಿಡಿ. ನೋಡಿದ ಒಂದು ಕ್ಷಣಕ್ಕೆ ಈ ಚಿತ್ರ, ತನ್ನ ದೇಶದ ಕೆಲಸಕ್ಕಾಗಿ ಜೀವವನ್ನೇ ಪಣವಾಗಿಟ್ಟ ಒಬ್ಬ ಸೈನಿಕನ ಮೇಲೆ ಹೆಮ್ಮೆ ಹುಟ್ಟದಿರದು.

ನಾಲ್ಕೂವರೆ ದಿನದ ನಂತರ ಪ್ರಜ್ಣೆ ಮರಳಿಬಂದಾಗ, ನೀರುತುಂಬಿದ ಕಣ್ಣೊಂದಿಗೆ, ಕೈ ಹಿಡಿದು ಕೈಲ್’ನ ಅಮ್ಮ “ಮುಂದೇನು!” ಅಂತಾ ಕೇಳಿದಕ್ಕೆ, ಕೈಲ್ ಅರೆಕ್ಷಣವೂ ಯೋಚಿಸದೆ ಹೇಳಿದ್ದೇನು ಗೊತ್ತಾ “ಇನ್ನೇನು! ಕೃತಕ ಕಾಲು ಕೈ ಜೋಡಿಸಿಕೊಂಡು ಮರಳಿ ಅಫ್ಘಾನಿಸ್ತಾನಕ್ಕೆ. ಕಡೇ ಪಕ್ಷ ಅಲ್ಲಿ ಮೆಸ್ ಹಾಲ್ ಕ್ಲೀನ್ ಮಾಡಿಕೊಂಡಾದರೂ ಇರ್ತೀನಿ. ಅದೇ ನನ್ನ ದೇಶಕ್ಕೆ, ನನ್ನ ಸೈನ್ಯದ ಅಣ್ಣತಮ್ಮಂದಿರಿಗೆ ನಾನು ಮಾಡಬಹುದಾದ ಸಹಾಯ”.

http://www.army.mil/article/71611/

 

12697208_980166578739954_1064642245642135486_o