ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೬

ಇವತ್ತಿನ ಮಾತಿನ ಸಮರ ಜಗತ್ತಿನ ಅತೀದೊಡ್ಡ ಶೀತಲ ಸಮರ ನಡೆಯುತ್ತಿದ್ದ ಕಾಲದ್ದು. ಅಂದರೆ 1953-62ರ ಕಾಲಘಟ್ಟದ್ದು. ಅಮೇರಿಕಾ ಮತ್ತು ಸೋವಿಯತ್ ರಷ್ಯಾ ದೇಶಗಳು ಒಬ್ಬರನ್ನೊಬ್ಬರು ಎಲ್ಲ ರೀತಿಯಲ್ಲೂ ಮೀರಿಸಲು ರಣತಂತ್ರಗಳನ್ನು ಹೊಸೆಯುತ್ತಿದ್ದ ಕಾಲ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗುತ್ತಿರಲಿಲ್ಲ. ಯಾವುದೇ ದೇಶದಲ್ಲಿ, ಯಾವುದೇ ವಿಷಯದ ಮೀಟಿಂಗು ನಡೆಯಲಿ, ಆ ವೇದಿಕೆಯಲ್ಲಿ ಈ ಎರಡೂ ದೇಶದ ಅಧಿಕಾರಿಗಳು ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯದೆ ಬಿಡುತ್ತಿರಲಿಲ್ಲ. ಎರಡೂ ದೇಶಗಳ ಅವತ್ತಿನ ಮುಖಂಡರು ಪ್ರಚಂಡ ರಾಜಕಾರಣಿಗಳು. ರಾಜತಾಂತ್ರಿಕತೆಯೆ ನಿಪುಣರಷ್ಟೇ ಅಲ್ಲದೆ, ಮಾತಿನ ಚತುರರೂ ಸಹ. ಭಾಷಣಕ್ಕೆ ನಿಂತರೆ, ಮಾತಿನ ಮೋಡಿಯಿಂದ ಸೇರಿರುವ ಜನರನ್ನೇ ಉದ್ವೇಗಕ್ಕೇರಿಸಿ, ಅಲ್ಲೇ ಒಂದು ಯುದ್ಧ ಮಾಡಿಸಿಬಿಡುವಷ್ಟು ಮಾತಿನ ಮಲ್ಲರು.

ಇಂತಿರ್ಪ್ಪ ಸಮಯದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಕರೆದಾಗ, ಅಮೇರಿಕಾದ ಅಧ್ಯಕ್ಷರಾದ ಡ್ವೈಟ್.ಡಿ.ಐಸೆನ್ಹೋವರ್ ಸ್ವತಃ ಬರುತ್ತಿದ್ದಾರೆಂದು ತಿಳಿದ ರಷ್ಯಾದ ಅಧ್ಯಕ್ಷ ನಿಕಿತಾ ಕೃಶ್ಚೇವ್, ರಷ್ಯಾ ಪರವಾಗಿ ನಿಯೋಗವನ್ನು ಕಳುಹಿಸುವುದರ ಬದಲಿಗೆ ತಾನೇ ಹೋಗಲು ನಿರ್ಧರಿಸಿದರು. ಇಡೀ ವಿಶ್ವವೇ ಈ ಸಭೆಯನ್ನು ಹದ್ದಿನಕಣ್ಣಿನಿಂದ ಗಮನಿಸುತ್ತಿತ್ತು. ಯಾರು ಯಾರಿಗೆ ಸೂಕ್ಷ್ಮವಾಗಿ ತಿವಿಯುತ್ತಾರೆ ಎಂಬುದನ್ನು ಮರುದಿನದ ಹೆಡ್-ಲೈನ್ ಮಾಡಲು ಪತ್ರಿಕಾಗಣ ಕಾದುನೋಡುತ್ತಿತ್ತು. ಐಸೆನ್ಹೋವರ್ ತಮ್ಮ ಭಾಷಣದಲ್ಲಿ ಅಮೇರಿಕಾದ ಹೆಮ್ಮೆಯನ್ನು ಸಾರುತ್ತಾ, Why America is the greatest country on earth ಎಂಬುದೊಂದು ಭಾಷಣವನ್ನೂ ಮಾಡಿದರು. ಸಭೆಯತುಂಬೆಲ್ಲಾ ಕರತಾಡನ.

ಅವತ್ತು ಸಂಜೆ ಐಸೆನ್ಹೋವರ್ ಮತ್ತು ಕೃಶ್ಚೇವ್ ಭೇಟಿ ನಿಗದಿಯಾಗಿತ್ತು. ಉಭಯಕುಶಲೋಪರಿ, ಫೋಟೋಗಳೆಲ್ಲ ನಡೆದ ನಂತರ ಮಾತುಕತೆಗೆ ಕೂತಾಯಿತು. ಮೊದಲ ಮಾತಿನ ಬಗ್ಗೆ ಇಬ್ಬರೂ ಯೋಚಿಸುತ್ತಿರುವಾಗಲೇ ಕೃಶ್ಚೇವ್ ‘ನಿಮ್ಮದೆಂತಹಾ ಸುಳ್ಳು ಭಾಷಣ ಮಾರಾಯ್ರೆ, ಮಧ್ಯಾಹ್ನದ್ದು?’ ಅಂದರು. ಐಸೆನ್ಹೂವರ್ ವಿಚಲಿತರಾಗದೇ ‘ಸುಳ್ಳೇನೂ ಇಲ್ಲ. ನಿರ್ಭಯದಿಂದ ಸತ್ಯವನ್ನು ಮಾತನಾಡುವವರನ್ನು ಕಂಡರೆ ರಷ್ಯಾದವರೆಲ್ಲರಿಗೂ ಅಸೂಯೆಯಿರಬೇಕು’ ಎಂದರು. ಕೃಶ್ಚೇವ್ ಕೇಳಿಸಿಕೊಳ್ಳುತ್ತಲೇ ಇದ್ದ. ‘ಅಮೇರಿಕದಲ್ಲಿರುವಷ್ಟು ವ್ಯಕ್ತಿ ಸ್ವಾತಂತ್ರ್ಯ ಬೇರೆಲ್ಲೂ ಇಲ್ಲ. ಈ ದೇಶದಲ್ಲಿ ಒಬ್ಬ ನಾಗರೀಕ ಬೇಕಾದರೆ ನ್ಯೂಯಾರ್ಕಿನ ಟೈಮ್ಸ್ ಸ್ಕ್ವೇರಿನಲ್ಲಿ ನಿಂತು ‘ಅಮೇರಿಕಾದ ಅಧ್ಯಕ್ಷ ಒಬ್ಬ ಮುಠ್ಠಾಳ’ ಎಂದು ಕೂಗಬಹುದು. ಅವನ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಅವನಿಗಿದೆ. ಅವನನ್ನೇನೂ ಬಂಧಿಸಲಾಗುವುದಿಲ್ಲ ಅಥವಾ ವಿಚಾರಣೆಗೊಳಪಡಿಸಲಾಗುವುದಿಲ್ಲ. ಅಷ್ಟೇ ಏಕೆ, ಅವನ ನಸೀಬಿಗೆ ತಕ್ಕಂತೆ ಅವನಿಗೊಂದು ಫ್ಯಾನ್ ಕ್ಲಬ್ಬು, ಬೆಂಬಲಿಗರೂ ಹುಟ್ಟಿಕೊಳ್ಳಬಹುದು. ಅಷ್ಟರಮಟ್ಟಿಗಿನ ಸ್ವಾತಂತ್ರ್ಯ ಅಮೇರಿಕದಲ್ಲಿದೆ. ರಷ್ಯಾದಲ್ಲಿರುವ ಮಾನವ ಹಕ್ಕುಗಳ ಸ್ಥಿತಿ ನಮ್ಮಲ್ಲಿಲ್ಲ. ನಮ್ಮದು ಪ್ರಜಾಪ್ರಭುತ್ವ’ ಎಂದು ಹೆಮ್ಮೆಯ ನಗೆ ಬೀರಿದ ಐಸೆನ್ಹೂವರ್.

ಕೃಶ್ಚೇವ್ ತನ್ನ ಕಾಫಿ ಹೀರುತ್ತಾ ‘ನೋಡಿ ಮಿ.ಅಧ್ಯಕ್ಷರೇ. ಮಾನವ ಹಕ್ಕುಗಳ ವಿಷಯಕ್ಕೆ ಬಂದರೆ ಇಂತಹುದೇ…..ಬಹುಷಃ ಇದಕ್ಕಿಂತಾ ಒಳ್ಳೆಯ ಪರಿಸ್ಥಿತಿ ನಮ್ಮ ರಷ್ಯಾದಲ್ಲಿದೆ’ ಎಂದ. ಐಸೆನ್ಹೂವರ್ರಿಗೆ ಆಶ್ವರ್ಯ! ಹುಬ್ಬೇರಿಸಿ ವ್ಯಂಗ್ಯ ನಗುಬೀರುತ್ತಾ ‘ಇಷ್ಟರಮಟ್ಟಿಗಿನ ಸ್ವಾತಂತ್ರ್ಯ ನಿಮ್ಮ ದೇಶದಲ್ಲಿ ಬಂದ ದಿನ, ಜಗತ್ತು ಖಂಡಿತಾ ಒಳ್ಳೆಯ ದಿನಗಳನ್ನು ನೋಡುತ್ತದೆ. ಜೋಕ್ ಸಾಕು’ ಎಂದ.

ಕೃಶ್ಚೇವ್ ಅದಕ್ಕೆ ‘ನೋಡಿ ನನಗೆ ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನಿಮ್ಮಷ್ಟು ಗೊತ್ತಿಲ್ಲ. ಆದರೆ, ನಮ್ಮಲ್ಲಿ ಆಗಲೇ ನೀವು ಹೇಳಿದಕ್ಕಿಂತಾ ಒಳ್ಳೆಯ ಪರಿಸ್ಥಿತಿ ಇದೆ. ಬೇಕಾದರೆ ನಾನು ನಿರೂಪಿಸಿ ತೋರಿಸುತ್ತೇನೆ. ನನ್ನೂರು ಮಾಸ್ಕೋದ ರೆಡ್ ಸ್ಕ್ವೇರಿನಲ್ಲಿ ಯಾರಾದರೂ ನಿಂತು ‘ಅಮೇರಿಕಾದ ಅಧ್ಯಕ್ಷ ಒಬ್ಬ ಮುಠ್ಠಾಳ’ ಎಂದು ಕೂಗಿದರೆ, ಬಂಧನ, ವಿಚಾರಣೆ ಆಗುವುದು ಹಾಗಿರಲಿ. ಅವನಿಗೊಂದು ಸೋವಿಯತ್ ರಷ್ಯಾದ ಗೌರವಾನ್ವಿತ ಮೆಡಲ್ ಸಿಕ್ಕಿದರೂ ಸಿಗಬಹುದು. ನಿಮ್ಮ ದೇಶದಲ್ಲಿ ಹೀಗಾಗುವುದು ಸಾಧ್ಯವುಂಟೇ’ ಎನ್ನುತ್ತಾ ಕಾಫಿ ಹೀರುವುದ ಮುಂದುವರೆಸಿದ.

ಕೃಶ್ಚೇವ್ ಕಾಫಿ ಹೀರುವ ಸದ್ದು ಬಿಟ್ಟರೆ ಆ ರೂಮಿನಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದ ಆವರಿಸಿತ್ತು.

Advertisements

ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೫

ಸಾಹಿತ್ಯ ಹಾಗೂ ಭಾಷೆ ಒಲಿದುಬಂದಿರುವ ಇಬ್ಬರ ಮಧ್ಯೆ ನಡೆಯುವ ಜಗಳವೂ ಸಹ ಕೇಳಲು/ನೋಡಲು ಚೆಂದ. ಪದಲಾಲಿತ್ಯ ಮತ್ತು ಪದಪಾಂಡಿತ್ಯದಲ್ಲೇ ಒಬ್ಬರ ಕಾಲನ್ನು ಇನ್ನೊಬ್ಬರು, ಘನತೆ ಮೀರದಂತೆ, ಎಳೆಯುವ ಪರಿಯೇ ವಿಸ್ಮಯದ ಗೂಡು.

ಬ್ರಿಟನ್ನಿನ ಪೂರ್ವ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಮತ್ತು ಐರಿಷ್ ನಾಟಕಕಾರ ಹಾಗೂ ಲಂಡನ್ ಸ್ಕೂಲ್ ಆಫ್ ಎಕಾನಿಮಿಕ್ಸ್’ನ ಸಂಸ್ಥಾಪಕರಲ್ಲೊಬ್ಬರಾದ ಜಾರ್ಜ್ ಬರ್ನಾರ್ಡ್ ಷಾ ನಡುವಿನ ವೈಮನಸ್ಯ, ಜಗತ್ಪ್ರಸಿದ್ಧ. ಯಾವಾಗಲೂ ಕಚ್ಚಾಡುತ್ತಲೆ ಇದ್ದರು. ಅವರ ಕಚ್ಚಾಟದ ಸಣ್ಣ ತುಣುಕಿನಲ್ಲೂ ಏನೋ ಒಂಥರ ಮಜಾ. ಕೇಳಿಸಿಕೊಂಡವನಿಗೆ, ಯಾರು ಯಾರ ಕಾಲೆಳೆದರು!? ಎಂಬುದೇ ಅರ್ಥವಾಗದ ಪ್ರಕರಣಗಳವು. ಇವರಿಬ್ಬರ ಮಧ್ಯೆ ನಡೆದಿರುವ ಇಂತಹ ‘ಪದ ಯುದ್ಧ (war of words)’ ಪ್ರಕರಣಗಳು ಈ ಮಾಲಿಕೆಯಲ್ಲಿ ಪದೇ ಪದೇ ಉಲ್ಲೇಖಗೊಂಡರೆ ಅಚ್ಚರಿಯಿಲ್ಲ. ಅವುಗಳಲ್ಲೊಂದು ಇಲ್ಲಿದೆ.

ಒಮ್ಮೆ ಬರ್ನಾರ್ಡ್ ಷಾ ಲಂಡನ್ನಿನಲ್ಲಿ ಪ್ರದರ್ಶನಗೊಳ್ಳಲಿರುವ, ತಮ್ಮದೊಂದು ಹೊಸಾ ನಾಟಕಕ್ಕೆ (ಬಹುಷಃ ಪಿಗ್ಮೇಲಿಯನ್ ಇರಬೇಕು, Pygmalion) ಚರ್ಚಿಲ್ ಅವರನ್ನು ಆಹ್ವಾನಿಸುತ್ತಾ, ಒಂದು ಪತ್ರ ಬರೆದರು. ಆಗಿನ್ನೂ ಚರ್ಚಿಲ್ ಪ್ರಧನಿಯೇನೂ ಆಗಿರಲಿಲ್ಲ. ಸಂಸದರಾಗಿದ್ದರಷ್ಟೇ. ಪತ್ರ ಹೀಗಿತ್ತು “ಮಿ. ಚರ್ಚಿಲ್, ನನ್ನ ಹೊಸಾ ನಾಟಕದ ಮೊದಲ ಶೋ’ಗೆ ನಿಮ್ಮನ್ನು ಆಹ್ವಾನಿಸುತ್ತಾ, ಈ ಪತ್ರದೊಂದಿಗೆ ಎರಡು ಟಿಕೇಟುಗಳನ್ನು ಲಗತ್ತಿಸಿದ್ದೇನೆ. ಬೇಕಾದರೆ, ನಿಮ್ಮ ಸ್ನೇಹಿತರೊಬ್ಬರನ್ನೂ ಕರೆತರಬಹುದು……….ನಿಮಗ್ಯಾರಾದರೂ ‘ಸ್ನೇಹಿತರು’ ಅಂತಾ ಇದ್ದರೆ…. 😛 😛 ”

ಉತ್ತರವಾಗಿ ಚರ್ಚಿಲರ ಪತ್ರ, ಷಾ ಕೈಸೇರಿತು. ಚರ್ಚಿಲರಿಂದ ಖಡಕ್ ಉತ್ತರವನ್ನೇ ನಿರೀಕ್ಷಿಸಿದ್ದ ಷಾ ತಮ್ಮ ಆಫೀಸಿನ ಬಾಗಿಲೆಳೆದುಕೊಂಡು, ಲಕೋಟೆ ತೆರೆದರು. ಚರ್ಚಿಲರ ಟೈಪ್-ರೈಟರಿನಿಂದ ಹೊರಟ ಉತ್ತರ ಹೀಗಿತ್ತು “ಮಿ.ಷಾ, ನಿಮ್ಮ ಪತ್ರ ಮತ್ತು ಟಿಕೇಟಿಗೆ ಧನ್ಯವಾದ. ಮೊದಲ ಶೋಗೆ ಬರುವುದು ಕಷ್ಟವಾಗಬಹುದು ಎನ್ನಿಸುತ್ತಿದೆ. ಆದರೆ ಎರಡನೇ ದಿನದ ಶೋಗೆ ಖಂಡಿತಾ ಬರುತ್ತೇನೆ…….ನಿಮ್ಮ ನಾಟಕ ಎರಡನೇ ಶೋವರೆಗೂ ಉಳಿದಿದ್ದರೆ… 😛 😛 ”

ಆ ಕೋಣೆಯಲ್ಲಿದ್ದ ಗಡಿಯಾರದ ಟಿಕ್-ಟಿಕ್ ಶಬ್ದವೊಂದನ್ನು ಬಿಟ್ಟರೆ, ಸೂಜಿ ಕೂಡಾ ಬಿದ್ದರೆ ಸ್ಪಷ್ಟವಾಗಿ ಕೇಳುವಷ್ಟು ಮೌನವಿತ್ತು. ಷಾ ಮುಖದಲ್ಲಿ ಸಣ್ಣದೊಂದು ಮುಗುಳ್ನಗೆಯಿತ್ತು.

ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೪

ರಾಬರ್ಟ್ ವೈಟಿಂಗ್, ಸುಮಾರು 83 ವರ್ಷದ ಅಮೇರಿಕದ ಹಿರಿಯ ನಾಗರೀಕ ಮತ್ತು ಮಾಜಿ ಸೈನಿಕ, ಪ್ಯಾರೀಸ್ ನಗರದ ಏರ್ಪೋರ್ಟಿನಲ್ಲಿ ಬಂದಿಳಿದ.

ಇಮಿಗ್ರೇಷನ್ ಕೌಂಟರಿನ ಅಧಿಕಾರಿಣಿ ಆತನ ಪಾಸ್ಪೋರ್ಟ್ ಕೇಳಿದಾಗ, ಆತ ತನ್ನ ಬ್ಯಾಗಿನಲ್ಲಿ ಹುಡುಕತೊಡಗಿದ. ಎಲ್ಲಿಟ್ಟಿದ್ದೇನೆಂದೇ ಮರೆತುಹೋದಂತಿತ್ತು. ಅದೂ ಅಲ್ಲದೆ ಹನ್ನೆರಡು ಗಂಟೆಗಳ ವಿಮಾನ ಪ್ರಯಾಣ ಆತನನ್ನು ಸುಸ್ತಾಗಿಸಿತ್ತು. ಮೂವತ್ತು ಸೆಕೆಂಡು ಹುಡುಕಿದರೂ ಪಾಸ್ಪೋರ್ಟ್ ಸಿಗದಾದಾಗ, ಕೌಟರಿನಲ್ಲಿದ್ದ ಅಧಿಕಾರಿಣಿ, ” ಮೆಸ್ಯೂ, ನೀವು ಇದಕ್ಕಿಂತ ಮೊದಲು ಫ್ರಾನ್ಸಿಗೆ ಬಂದಿದ್ದೀರಾ!?” (Monsieur – ಮಿಲಾರ್ಡ್ ಎನ್ನುವಂತಹ ಪದ. ಗೌರವಸೂಚಕ) ಎಂದು ಸ್ವಲ್ಪ ಕೊಂಕುದ್ವನಿಯಲ್ಲೇ ಕೇಳಿದಳು.

‘ಹೌದು ಬಂದಿದ್ದೆ” ಎಂದ ರಾಬರ್ಟ್ ಹುಡುಕುವುದನ್ನು ಮುಂದುವರಿಸಿದ. “ಹಾಗಿದ್ದಮೇಲೆ ಪಾಸ್ಪೋರ್ಟ್ ಅನ್ನು ಕೈಯಲ್ಲೇ ಹಿಡಿದು ತಯಾರಾಗಿರಬೇಕು ಎಂಬುದು ನಿಮಗೆ ತಿಳಿಯದೇ ಹೋಯಿತೇ” ಎಂದಳು ಆ ಅಧಿಕಾರಿಣಿ.

ಈಗ ಹುಡುಕುವುದನು ನಿಲ್ಲಿಸಿದ ರಾಬರ್ಟ್, ಆಕೆಯ ಮುಖ ನೋಡಿ ಆಶ್ಚರ್ಯಮಿಶ್ರಿತ ದ್ವನಿಯಲ್ಲಿ “ಆದರೆ ಹಿಂದಿನ ಸಲ ಬಂದಾಗ ನನಗೆ ಪಾಸ್ಪೋರ್ಟ್ ತೋರಿಸುವ ಅಗತ್ಯ ಬಿದ್ದಿರಲಿಲ್ಲ!!” ಎಂದ.

“ಸಾಧ್ಯವೇ ಇಲ್ಲ! ಪ್ರಾನ್ಸಿಗೆ ಬರುವ ಪ್ರತಿಯೊಬ್ಬನೂ ಪಾಸ್ಪೋರ್ಟ್ ತೋರಿಸಿಯೇ ಒಳಹೋಗಬೇಕು. ನಮ್ಮ ವ್ಯವಸ್ಥೆ ಮತ್ತು ತಂತ್ರಜ್ಞಾನವನ್ನು ಬೈಪಾಸ್ ಮಾಡಿ ಯಾರೂ ಪಾಸ್ಪೋರ್ಟ್ ತೋರಿಸದೇ ಹೋಗುವುದು ಸಾಧ್ಯವೇ ಇಲ್ಲ. ಅಮೇರಿಕನ್ನಿರಿಗೂ ಇದು ಅನ್ವಯಿಸುತ್ತದೆ” ಹೆಮ್ಮೆಯಿಂದ ಎಂದಳಾಕೆ.

ರಾಬರ್ಟ್ ತನ್ನ ಕೈಗಳನ್ನು ಕೌಟರ್ ಮೇಲಿಡುತ್ತಾ “ನೋಡಮ್ಮಾ…..ಹಿಂದಿನ ಬಾರಿ ನಾನು ಪ್ರಾನ್ಸಿಗೆ ಬಂದಾಗ, ಬೆಳಿಗ್ಗಿನ ಸುಮಾರು 4 ಘಂಟೆ 4 ನಿಮಿಷವಾಗಿತ್ತು. ನಿಮ್ಮ ದೇಶವನ್ನು ನಾಝೀ ಹಿಡಿತದಿಂದ ವಿಮುಕ್ತಗೊಳಿಸಲು, 1944 ಜೂನ್ 6ರ D-Day ದಿನ ಒಮಾಹ ಬೀಚಿನ ಮೇಲೆ ಬಂದಿಳಿದಾಗ, ಒಬ್ಬನೇ ಒಬ್ಬ ಫ್ರೆಂಚ್ ಅಧಿಕಾರಿಯೂ ನನಗೆ ಪಾಸ್ಪೋರ್ಟ್ ತೋರಿಸುವಂತೆ ಕೇಳಲೇ ಇಲ್ಲ” ಎಂದವ, ಕೋಟಿನ ಜೇಬಿನಲ್ಲಿದ್ದ ಪಾಸ್ಪೋರ್ಟ್ ತೆಗೆದು ಕೊಟ್ಟ.

…………ಕೆಂಪು ಮುಖದ ಅಧಿಕಾರಿಣಿ ರಾಬರ್ಟನ ಪಾಸ್ಪೋರ್ಟಿನ ಒಂದಿಚನ್ನೂ ನೋಡದೇ ಅದರ ಮೇಲೆ ಠಸ್ಸೆ ಗುದ್ದಿದ್ದೊಂದು ಬಿಟ್ಟರೆ, ಅಲ್ಲಿ ಸೂಜಿ ಬಿದ್ದರೂ ಕೇಳುವಷ್ಟೂ ಮೌನ ಆವರಿಸಿತ್ತು 🙂 🙂

* D-Day – ಜೂನ್ 6, 1944ರ ಸೋಮವಾರದಂದು ಮಿತ್ರರಾಷ್ಟ್ರಗಳು, ಅತೀ ರಹಸ್ಯ ಕಾರ್ಯಾಚರಣೆಯೊಂದರ ಪ್ರಕಾರ, ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ, ಸೂರ್ಯ ಹುಟ್ಟುವ ಮುಂಚೆ, ನಾರ್ಮಂಡಿಯ ಬೀಚಿನ ಮೂಲಕ ಪ್ರಾನ್ಸ್ ಪ್ರವೇಶಿಸಿ, ನಾಝೀ ಪಡೆಗಳನ್ನು ಸೋಲಿಸುವ ಮೂಲಕ ಎರಡನೇ ಮಹಾಯುದ್ಧಕ್ಕೆ ಮಹತ್ವದ ತಿರುವನ್ನು ದೊರಕಿಸಿಕೊಟ್ಟವು. ಇಲ್ಲಿಂದ ಮುಂದೆ ಜರ್ಮನ್ ಸೈನ್ಯದ ಪತನ ಆರಂಭವಾಯಿತು.

ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೩

ಫೆಬ್ರುವರಿ 1966. ಫ್ರಾನ್ಸಿನ ಅಂದಿನ ಅಧ್ಯಕ್ಷ ಚಾರ್ಲ್ಸ್ ಡಿ’ಗಾಲ್, ತನ್ನ ದೇಶವನ್ನು NATOದಿಂದ ಹೊರತೆಗೆಯಲು ಉದ್ದೇಶಿಸಿದ್ದರು. ಅಮೇರಿಕ ಈ ಪರಿಸ್ಥಿತಿಯನ್ನು ನಿಧಾನವಾಗಿ ಪರಿಹರಿಸಲು ಯತ್ನಿಸುತ್ತಿತ್ತು. ಕೆಲವಾರಗಳ ನಂತರವೂ ರಾಯಭಾರಿಗಳ ಮಾತುಕತೆಗಳಿನ್ನೂ ಮೊದಲ ಹಂತದಲ್ಲೇ ಇದ್ದದ್ದನ್ನು ಕಂಡ ಡಿ’ಗಾಲ್ ಕೋಪಗೊಂಡು “ಈಗಿಂದೀಗಲೇ ಇಡೀ ಅಮೇರಿಕನ್ ಸೈನ್ಯ ಫ್ರಾನ್ಸ್ ಬಿಟ್ಟು ತೆರಳಬೇಕು ಎಂದು ಅವರಿಗೆ ತಿಳಿಸಿ” ಎಂದು ತನ್ನ ರಾಯಭಾರಿಯೆಡೆಗೆ ಕೆಂಡಕಾರಿದರು.

ಅಮೇರಿಕದ ಕಡೆಯಿಂದ, ಅಧ್ಯಕ್ಷ ಲಿಂಡನ್ ಜಾನ್ಸನ್ ಪರವಾಗಿ ಅಂದಿನ ವಿದೇಶಾಂಗ ಖಾತೆಯ ಕಾರ್ಯದರ್ಶಿ ಡೀನ್ ರಸ್ಕ್ ಕಳಿಸಿದ ಉತ್ತರ ಹೀಗಿತ್ತು “ಈ ಆಜ್ಞೆ ಬರೀ ಈಗ ಫ್ರಾನ್ಸಿನಲ್ಲಿರುವ ಅಮೇರಿಕನ್ ಸೈನ್ಯಕ್ಕೋ. ಅಥವಾ ಮೊದಲ ಮಹಾಯುದ್ಧದ ಕಾಲದಿಂದ ಫ್ರಾನ್ಸಿನಲ್ಲೇ ಸಮಾಧಿಯಡಿ ಮಲಗಿರುವ 124 ಸಾವಿರ ಅಮೇರಿಕನ್ ಸೈನಿಕರಿಗೂ ಅನ್ವಯಿಸುತ್ತದೋ!?”

……….ಸಂದೇಶ ಓದಿದ ಪ್ರಾನ್ಸಿನ ರಾಯಭಾರಿ ಮತ್ತು ಚಾರ್ಲ್ಸ್ ಡಿ’ಗಾಲ್ ಮಧ್ಯೆ ಅಲ್ಲಿ ಸೂಜಿ ಬಿದ್ದರೂ ಕೇಳುವಷ್ಟೂ ಮೌನ ಆವರಿಸಿತ್ತು 🙂 🙂

*ಮೊದಲೆರಡು ಮಹಾಯುದ್ಧಗಳಲ್ಲಿ ಅಮೇರಿಕ ಫ್ರಾನ್ಸಿಗೆ ಸಹಾಯ ಮಾಡಿದಾಗ, ಅಲ್ಲಿ ಸತ್ತ ಒಟ್ಟು ಅಮೇರಿಕನ್ ಸೈನಿಕರ ಸಂಖ್ಯೆ ಸರಿಸುಮಾರು ನೂರಾಇಪ್ಪತ್ನಾಲಕ್ಕುಸಾವಿರ.

ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೨

ಫೀಲ್ಡ್ ಮಾರ್ಷಲ್ ಸ್ಯಾಮ್ ಬಹದ್ದೂರ್ ಮಾನೆಕ್’ಶಾ ಅವರಿಗೆ ಒಮ್ಮೆ ಅಹ್ಮದಾಬಾದಿನಲ್ಲಿ ಜನರನ್ನುದ್ದೇಶಿಸಿ ಒಮ್ಮೆ ಭಾಷಣ ಮಾಡುವ ಸಂದರ್ಭ ಒದಗಿ ಬಂದಿತ್ತು. ಸ್ಯಾಮ್ ಮೈಕಿನ ಬಳಿ ಬಂದು ಇಂಗ್ಳೀಷಿನಲ್ಲಿ ತಮ್ಮ ಭಾಷಣ ಆರಂಭಿಸಿದರು. ತಕ್ಷಣ ಸಭಿಕರಿಂದ ‘ಗುಜರಾತೀ ಭಾಷೆಯಲ್ಲೇ ಮಾತನಾಡಿ. ಗುಜರಾತಿಯಲ್ಲಿ ಮಾತನಾಡಿದರೆ ಮಾತ್ರ ನಾವು ನಿಮ್ಮ ಭಾಷಣ ಕೇಳುವುದು’ ಎಂಬ ಮಾತುಗಳು ಕೇಳಿಬಂದವು.

ಮಾನೆಕ್’ಶಾ ಮಾತು ನಿಲ್ಲಿಸಿ ಇಡೀ ಸಭೆಯನ್ನೊಮ್ಮೆ ಗಂಭೀರವಾಗಿ ನೋಡಿದರು. ಕಂಚಿನ ಕಂಠದಿಂದ ಈ ಮಾತುಗಳು ಹೊರಬಂದವು (ಇಂಗ್ಳೀಷಿನಲ್ಲೇ) “ಸ್ನೇಹಿತರೇ, ನಾನು ನನ್ನ ವೃತ್ತಿಜೀವನದಲ್ಲಿ ಬಹಳಷ್ಟು ಯುದ್ಧಗಳನ್ನು ಹೋರಾಡಿದ್ದೇನೆ. ಹೀಗೆ ಹೋರಾಡುವಾಗ ನನಗೆ ಬಹಳಷ್ಟು ಜನರ ಪರಿಚಯವಾಯ್ತು. ಅವರ ಭಾಷೆ ರೀತಿ ರಿವಾಜುಗಳನ್ನೂ ಕಲಿತೆ. ನಾನು ಹುಟ್ಟಿ ಬೆಳೆದದ್ದೂ ಪಂಜಾಬಿನಲ್ಲೇ ಆದರೂ ಪಂಜಾಬ್ ರೆಜೆಮೆಂಟಿನಲ್ಲಿದ್ದಾಗ ಚೆನ್ನಾಗಿ ಪಂಜಾಭಿ ಭಾಷೆ ಕಲಿತೆ. ಮರಾಠಾ ರೆಜೆಮೆಂಟಿನಲ್ಲಿದ್ದಾಗ ಮರಾಠಿ ಕಲಿತೆ. ಮದ್ರಾಸ್ ಸಾಪ್ಪರ್ಸ್ ಜೊತೆಗಿದ್ದಾಗ ತಮಿಳು, ತೆಲುಗು, ಕನ್ನಡ ಸ್ವಲ್ಪ ಕಲಿತೆ. ಬೆಂಗಾಲ್ ಸಾಪ್ಪರ್ಸ್ ಗುಂಪಿನಲಿದ್ದಾಗ ಬೆಂಗಾಲಿ ಕಲಿತೆ. ಬಿಹಾರ್ ರೆಜಿಮೆಂಟಿನಲ್ಲಿದ್ದಾಗ ನನ್ನ ಹಿಂದಿ ಶುದ್ಧವಾಯಿತು. ಗೂರ್ಖಾ ರೆಜಿಮೆಂಟಿನಲ್ಲಿದ್ದಾಗ ನೇಪಾಲೀ ಕೂಡಾ ಕಲಿತೆ. ಆದರೆ ದುರದೃಷ್ಟವಶಾತ್ ಸೈನ್ಯದಲ್ಲಿ ಗುಜರಾತಿನಿಂದ ಸೈನಿಕರೇ ಇಲ್ಲದ ಕಾರಣ…………………..ಗುಜರಾತಿ ಕಲಿಯಲಾಗಲಿಲ್ಲ……..ಕ್ಷಮಿಸಿ”

……….ಸಭಾಂಗಣ ತುಂಬಿದ್ದರೂ ಸಹ ಅಲ್ಲಿ ಸೂಜಿ ಬಿದ್ದರೂ ಕೇಳುವಷ್ಟೂ ಮೌನ ಆವರಿಸಿತ್ತು 🙂 🙂

* ಈ ಪ್ರಸಂಗ ಮಾಜಿ ಸಿಬಿಐ ನಿರ್ದೇಶಕ ಜೋಗಿಂದರ್ ಸಿಂಗ್ ಅವರ “ಭಾರತೀಯ ಯುವಕರು ನಿಜವಾಗಿಯೂ ಸೇನೆ ಸೇರಲಿಚ್ಚಿಸುತ್ತಾರೆಯೇ!?” ಎಂಬ ಲೇಖನದಿಂದ ಹೆಕ್ಕಲ್ಪಟ್ಟಿದ್ದು. ಜೋಕ್ ಇದ್ದರೂ ಇರಬಹುದು.

** ಸ್ಯಾಮ್ ಬಹದ್ದೂರ್ ಅನ್ನುವುದು ಮಾನೆಕ್’ಶಾ ಅವರನ್ನು ಜನರು ಪ್ರೀತಿಯಿಂದ ಕರೆದ ಹೆಸರು. ಅವರ ಪೂರ್ತಿ ಹೆಸರು ಸ್ಯಾಮ್ ಹೊರ್ಮುಸ್ಜೀ ಪ್ರಾಮ್ಜೀ ಜಮ್ಶೆಡ್ಜೀ ಮಾನೆಕ್’ಶಾ. ಭಾರತದ ಅತ್ಯಂತ ಪ್ರೀತಿಪಾತ್ರ ಸೇನಾನಿಯಲ್ಲೊಬ್ಬರಾದ ಸ್ಯಾಮ್ ಬಹದ್ದೂರ್ ಬಗ್ಗೆ ಬರೆದಷ್ಟೂ ಕಮ್ಮಿ. ಹಾಗೆಯೇ ಪುರುಸೊತ್ತಿದ್ರೆ, ಇದೊಂದು ಲೇಖನ ಓದಿ.

http://timesofindia.indiatimes.com/india/The-legacy-of-Sam-Bahadur-Manekshaw-lives-on/articleshow/33175580.cms

ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೧

ಭಾರತಕ್ಕೆ ಆಗಿನ್ನೂ ಸ್ವಾತಂತ್ರ್ಯ ಸಿಕ್ಕಿ ಸ್ವಲ್ಪ ಸಮಯವಾಗಿತ್ತು. 1948ರ ಸಮಯ. ನಮ್ಮ ‘ಅಮೋಘ’ ಪ್ರಧಾನಿಗಳು ಒಂದು ಉಚ್ಚಮಟ್ಟದ ಆಯೋಗದ ಸಭೆಯೊಂದನ್ನು ಕರೆದಿದ್ದರು. ಆ ಸಭೆಯ ಉದ್ದೇಶ, ಆಗಷ್ಟೇ ನಿವೃತ್ತಿ ಹೊಂದುತ್ತಿದ್ದ ಅಂದಿನ ಭಾರತೀಯ ಸೇನೆಯ ಬ್ರಿಟೀಷ್ ಜನರಲ್ ಆಗಿದ್ದ ‘ಜನರಲ್ ರಾಯ್ ಬುಚರ್’ನ ಬದಲಿಗೆ, ಸ್ವತಂತ್ರ ಭಾರತದ ಮೊದಲ ಕಮಾಂಡರ್-ಇನ್-ಚೀಫ್ ಅನ್ನು ನೇಮಿಸುವುದಾಗಿತ್ತು.

ನೆಹರೂ ತಮ್ಮ ಅನರ್ಘ್ಯ ಸಲಹೆಯೊಂದನ್ನು ಮುಂ‍ದಿಟ್ಟರು. “ನಮ್ಮಲ್ಲಿ ಯಾರಿಗೂ ಸೈನ್ಯವೊಂದನ್ನು ಮುನ್ನಡೆಸಿದ ಅನುಭವವಿಲ್ಲವಾದ್ದರಿಂದ, ಸಧ್ಯಕ್ಕೆ ಇನ್ನೂ ಒಂದೆರಡು ವರ್ಷಗಳವರೆಗೆ, ನಾವೊಬ್ಬ ಬ್ರಿಟೀಷ್ ಅಧಿಕಾರಿಯನ್ನೇ ಕಮಾಂಡರ್-ಇನ್-ಚೀಫ್ ಆಗಿ ನೇಮಿಸುವುದೊಳ್ಳೆಯದು. ಏನಂತೀರಿ?”
ಬ್ರಿಟೀಷರ ಅಡಿಯಾಳುಗಳಾಗಿಯೇ ಕೆಲಸ ಮಾಡಿ ಅಭ್ಯಾಸವಾಗಿದ್ದವರೇ ಹೆಚ್ಚಾಗಿ ತುಂಬಿದ್ದ ಆ ರೂಮಿನಲ್ಲಿದ್ದ ಕೆಲ ಯೂನಿಫಾರ್ಮುಗಳು ಹೌದೌದು ಎಂದು ತಲೆಯಾಡಿಸಿದರು. ಸೈನ್ಯದ ಬಗ್ಗೆ ಏನೂ ಗೊತ್ತಿಲ್ಲದ, ನೆಹರೂವನ್ನೇ ನಾರಾಯಣನ ಪ್ರತಿರೂಪ ಎಂದುಕೊಂಡಿದ್ದ, ಖಾದಿಗಳೂ ಹೌದೌದು ಎಂದು ತಲೆಯಾಡಿಸಿದರು.

ಅಲ್ಲಿದ್ದ ಲೆಫ್ಟಿನೆಂಟ್ ಜನರಲ್ ನಾಥೂಸಿಂಗ್ ರಾಥೋಡ್ ಎಂಬ ಸೀನಿಯರ್ ಆಫೀಸರ್ ಒಬ್ಬರು, ಸ್ವಲ್ಪ ಧೈರ್ಯ ಮಾಡಿ, ಸಭೆಯಲ್ಲಿ ಮಾತನಾಡಲು ನೆಹರೂ ಅನುಮತಿ ಕೇಳಿದರು. ಉಳಿದೆಲ್ಲಾ ಮಿಲಿಟರ್ ಆಫೀಸರ್ಗಳು ತಲೆಯಾಡಿಸಿದ ನಂತರವೂ ತನ್ನೆದುರು ಮಾತನಾಡುವ ಧೈರ್ಯ ತೋರಿದ ಆಫೀಸರ್ ಬಗ್ಗೆ ನೆಹರೂಗೆ ಆಶ್ಚರ್ಯವಾದರೂ ಸಹ, ಮಾತನಾಡುವಂತೆ ಸೂಚಿಸಿದರು.
ರಾಥೋಡ್ ನಿರ್ಭಿಡೆಯಿಂದ ‘ನೋಡಿ ಸರ್. ನಮ್ಮಲ್ಲಿ ಯಾರಿಗೂ ಇಡೀ ದೇಶವನ್ನು ಮುನ್ನಡೆಸುವ ಅನುಭವ ಇಲ್ಲ. ಹಾಗಿದ್ದ ಮೇಲೆ ನಾವು ಒಬ್ಬ ಬ್ರಿಟೀಷನನ್ನೇ ನಮ್ಮ ದೇಶದ ಮೊದಲ ಪ್ರಧಾನಿಯನ್ನಾಗಿ ಆರಿಸೋಣವೇ?’ ಎಂದರು.

……….ಆ ರೂಮಿನಲ್ಲಿ ಮುಂದಿನ ಮೂವತ್ತು ಸೆಕೆಂಡುಗಳವರೆಗೆ ಸೂಜಿ ಬಿದ್ದರೂ ಕೇಳುವಷ್ಟೂ ಮೌನ ಆವರಿಸಿತ್ತು 🙂 🙂

* ಇಲ್ಲಿಂದ ಮುಂದೆ ಇರೋದು ಎಕ್ಸ್ಟ್ರಾ ಇನ್ಫರ್ಮೇಷನ್ನು. ಕಥೆ ಹೀಗೆ ಮುಂದುವರೆಯುತ್ತದೆ. ಆ ಮಾತಿಗೆ ನೆಹರೂ ಮುಖಕೆಂಪಾಗಿದ್ದುದ್ದನ್ನು ಗಮನಿಸಿದ ಅಂದಿನ ರಕ್ಷಣಾಮಂತ್ರಿಗಳಾದ ಬಲ್ದೇವ್ ಸಿಂಗ್, ನಾಥೂಸಿಂಗ್ ರಾಥೋಡರೆಡೆಗೆ ಕೆಂಗಣ್ಣು ತಿರುಗಿಸಿ ಕೂತುಕೊಳ್ಳುವಂತೆ ಸಂಜ್ಞೆ ಮಾಡಿದರು. ನೆಹರೂ ಸಾವರಿಸಿಕೊಂಡು ‘ಸರಿ ಹಾಗಾದರೆ, ಸ್ವತಂತ್ರ ಭಾರತದ ಸೇನೆಯ ಮೊದಲ ಸೇನಾ ಕಮಾಂಡರ್-ಇನ್-ಚೀಫ್ ಆಗಲು ನೀನು ತಯಾರಿದ್ದೀಯಾ?’ ಎಂದು ಕೇಳಿದಾಗ, ರಾಥೋಡ್ ಒಂದೂ ಕ್ಷಣವೂ ವ್ಯಯಿಸದೆ, ‘ಇಲ್ಲ ಸಾರ್. ಯಾಕೆಂದರೆ ಈ ಹುದ್ದೆಗೆ ಅತ್ಯಂತ ಸೂಕ್ತ ವ್ಯಕ್ತಿ ನನ್ನ ಸೀನಿಯರ್, ಜನರಲ್ ಕೆ.ಎಂ ಕಾರಿಯಪ್ಪ. ಇದು ಅವರಿಗೆ ಸೇರಬೇಕಾದ ಹುದ್ದೆ’ ಎಂದು ಖಡಕ್ಕಾಗಿ ಅಂದರು. ಅವರ ಸಲಹೆಯನ್ನು ಪುರಸ್ಕರಿಸಿದ ನೆಹರೂ, ಬಲ್ದೇವ್ ಸಿಂಗ್ ಅವರೆಡೆಗೆ ನೋಡಿದರು. ಬಲ್ದೇವ್ ಆ ನೋಟವನ್ನು ಅರ್ಥೈಸಿಕೊಂಡರು. ಆ ನೇಮಕಾತಿ ಪ್ರಕ್ರಿಯೆ ಮುಂದುವರೆದು, 15 ಜನವರಿ 1949ರಂದು ಜನರಲ್ ಕಾರಿಯಪ್ಪ ಭಾರತೀಯ ಸೇನೆಯ ಮೊತ್ತಮೊದಲ ಕಮಾಂಡರ್-ಇನ್-ಚೀಫ್ ಆಗಿ ನೇಮಕವಾಗುವುದರೊಂದಿಗೆ ಅಂತ್ಯ ಕಂಡಿತು.

ನಾಥೂಸಿಂಗ್ ರಾಥೋಡ್ ಸೈನ್ಯದ ತರಬೇತಿ ಮತ್ತು ಮೌಲ್ಯಮಾಪನಾ ಇನ್ಸ್ಪೆಕ್ಟರ್ ಜನರಲ್ ಆಗಿ ನೇಮಕಗೊಂಡರು.