“ಅತಿಥಿ ದೇವೋಭವ ಅನ್ನುವ ನಾವು ಒಳ್ಳೆಯ ಅತಿಥಿಗಳಾಗೋಕೆ ಯಾಕೆ ಕಲಿತಿಲ್ಲ!?”

ಮೊನ್ನೆ ಬಾಲಿಯ ಹೋಟೆಲೊಂದರಲ್ಲಿ ತಂಗಿದ್ದ ಕುಟುಂಬವೊಂದು ಅಲ್ಲಿ ಸಿಕ್ಕಿದ್ದನ್ನೆಲ್ಲಾ ಬಾಚಿದ್ದಕ್ಕೆ, ಹೋಟೆಲಿನವರು ಹಿಡಿದು ಅವರ ಮರ್ಯಾದೆ ಮೂರುಕಾಸಿಗೆ ಹರಾಜಿಹಾಕಿದ್ದಕ್ಕೆ ಬೇಸರ ಮಾಡಿಕೊಂಡವರು ಬಹಳ ಜನರಿದ್ದಾರೆ. “ಮಾಡಿದ್ದು ತಪ್ಪಾಯ್ತು. ಅದಕ್ಕೆ ತಕ್ಕ ಮಾಡಿದ್ದಕ್ಕೆ ಹಣ ಕೊಡ್ತೀವಿ” ಅಂತಾ ಅವರು ಹೇಳಿದಮೇಲೂ ಅಷ್ಟೆಲ್ಲ ಹ್ಯುಮಿಲಿಯೇಟ್ ಮಾಡುವ ಅಗತ್ಯವೇನಿತ್ತು!” ಅಂತಾ ಕೇಳಿದವರನ್ನು ನೋಡಿದ್ದೇವೆ. ನನ್ನ ಅನಿಸಿಕೆಯ ಪ್ರಕಾರ ಇದರಲ್ಲಿ ಬೇಸರ ಮಾಡಿಕೊಳ್ಳುವ ಮಾತೇ ಇಲ್ಲ. ಹೋಟೆಲಿನವ ಮಾಡಿದ್ದು ನೂರಕ್ಕೆ ನೂರು ಸರಿ. ಆ ವಿಡಿಯೋದಲ್ಲಿ, ಹೋಟೆಲಿನವ ಆ ಮಟ್ಟಕ್ಕೆ ಇಳಿದು ಅವರನ್ನು ನಡುರಸ್ತೆಯಲ್ಲಿ ಮರ್ಯಾದೆ ತೆಗೆದದ್ದಕ್ಕೆ ಆ ಕುಟುಂಬ ಕದ್ದದ್ದು ಮಾತ್ರವಲ್ಲ, ಅವರ ಒರಟು ವರ್ತನೆ ಇನ್ನೂ ಮುಖ್ಯ ಕಾರಣ. ಅದರಲ್ಲಿ ನೋಡಬಹುದು, ಹೋಟೆಲಿನವ ಮತ್ತೆ ಮತ್ತೆ ಹೇಳುತ್ತಾನೆ “ಈಗ ಎಲ್ಲಿದೆ ನಿಮ್ಮ ಒರಟು ಧ್ವನಿಯ ಮಾತುಗಳು? ಆಡಿ ತೋರಿಸಿ ನೋಡುವಾ!” ಅಂತಾ. ಕಳ್ಳತನ ಮಾಡಿ, ಆಮೇಲೆ ಅದನ್ನು ಪ್ರಶ್ನಿಸಿದವರೆಡೆಗೆ ಧ್ವನಿಯೇರಿಸಿ ಮಾತನಾಡಿದರೆ ಯಾರಿಗಾದರೂ ಸಿಟ್ಟುಬರೋದು ಸಹಜವೇ.

RPG Enterprisesನ ಮಾಲೀಕ ಹರ್ಷ್ ಗೊಯೆಂಕಾ ಕೂಡಾ ಮೊನ್ನೆ ಒಂದು ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದರು. ಸ್ವಿಟ್ಝರ್ಲ್ಯಾಂಡಿನ ಹೋಟೆಲೊಂದರಲ್ಲಿ ಅವರು ಚೆಕ್-ಇನ್ ಆದಾಗ “ಯೂ ಆರ್ ಫ್ರಂ ಇಂಡಿಯಾ? ಇಲ್ಲೊಂದಷ್ಟೂ ನಿಯಮಾವಳಿಗಳಿವೆ ಓದಿ” ಅಂತಾ ಪೇಜು ಕೊಟ್ಟರಂತೆ. ಅದೇನೂ ಎಲ್ಲಾ ಪ್ರವಾಸಿಗಲಿಗೆ ಇದ್ದ ನಿಯಮಗಳಲ್ಲ. ಭಾರತೀಯರಿಗೆ ಮಾತ್ರವೇ ಇದ್ದದ್ದು!!! (ಚಿತ್ರ ಕೆಳಗಿದೆ ನೋಡಿ). ಆ ನಿಯಮಾವಳಿಗಳ ಪ್ರಕಾರ ಭಾರತೀಯರು ಸಾಮಾನ್ಯವಾಗಿ ಕಾರಿಡಾರಿನಲ್ಲಿ ದೊಡ್ಡದಾಗಿ ಮಾತನಾಡುವವರು, ರೆಸ್ಟುರಾದಲ್ಲಿ ಬಫೆ ಬ್ರೇಕ್ಫಾಸ್ಟಿನಲ್ಲಿ ತಿಂಡಿಯನ್ನು ತಮ್ಮ ತಟ್ಟೆಗೆ ಹಾಕಿಕೊಳ್ಳುವಾಗ ಚಮಚ/ಸ್ಪಾಚುಲಾ ಬಳಸದೇ ತಮ್ಮ ಕೈಯನ್ನು ಬಳಸಿ ಹಾಕಿಕೊಳ್ಳುವವರು, ಬೆಳಗ್ಗಿನ ತಿಂಡಿಯನ್ನೇ ಮಧ್ಯಾಹ್ನದ ಊಟಕ್ಕಿರಲಿ ಅಂತಾ ಡಬ್ಬಕ್ಕೆ ತುರುಕಿಕೊಳ್ಳುವವರು, ಚಮಚ ಕದಿಯುವವರು ಅಂತೆಲ್ಲಾ ಭಾವಿಸಿದಂತಿತ್ತು. ಮಿ.ಗೊಯಂಕಾ ಅದರಬಗ್ಗೆ ಪ್ರಶ್ನಿಸಿದಾಗ, “ನೀವು ಅಂತವರು ಅಂತಾ ನಾವು ಹೇಳ್ತಾ ಇಲ್ಲ. ನಮ್ಮಲ್ಲಿ ತಂಗಿದ ಹೆಚ್ಚಿನ ಭಾರತೀಯರ ಪ್ರವಾಸಿಗಳ ಜೊತೆಗಿನ ನಮ್ಮ ಅನುಭವ ಹಾಗಿದೆ. ಆದ್ದರಿಂದ ಮ್ಯಾನೇಜ್ಮೆಂಟ್ ಈ ಪಟ್ಟಿಯನ್ನು ಚೆಕ್-ಇನ್ ಮಾಡುವ ಎಲ್ಲಾ ಭಾರತೀಯರಿಗೂ ಕೊಡು ಅಂದಿದೆ” ಅಂತಾ ರಿಸೆಪ್ಷನಿಸ್ಟು ಅಂದನಂತೆ.

ಇವತ್ತು ಗೆಳೆಯ Rangaswamy Mookanahalli ಕೂಡಾ ಅಂತಹದ್ದೊಂದು ಅನುಭವ ಹಂಚಿಕೊಂಡರು. ನಾನು ಸ್ವತಃ ಭಾರತೀಯನಾಗಿ ಇಂತಹ ವರ್ತನೆಗಳನ್ನು ನೋಡಿದ್ದೇನೆ. ನಾನು ಗ್ರೀಸ್ ಪ್ರವಾಸದಲ್ಲಿದ್ದಾಗ ಅಥೆನ್ಸಿನಿಂದಾ ಸ್ಯಾಂಟೋರಿನಿಗೆ ಹೋಗುವ ಹಡಗಲ್ಲಿ ಭಾರತೀಯರ ಗುಂಪೊಂದು ಇಡೀ ಲೌಂಜ್ ಅನ್ನು ಗಬ್ಬೆಬ್ಬಿಸಿಟ್ಟಿತ್ತು. ತಮ್ಮ ಕುಟುಂಬಕ್ಕೇ ಇಡೀ ಜಾಗ ಬೇಕು ಅನ್ನೋ ಹಪಾಹಪಿಯಲ್ಲಿ, ಉಳಿದವರಿಗೆ ಕೂರಲುಬಿಡದಂತೆ ಸೀಟುಗಳ ಮೇಲೆಲ್ಲಾ ತಮ್ಮ ಲಗೇಜ್ ಇಟ್ಟು, ಕೂರಲು ಬಂದವರಿಗೆ “ಇಲ್ಲಿ ನಮ್ಮವರಿದ್ದಾರೆ” ಅಂತಾ ಹೇಳಿ ಹೇಳಿ ಓಡಿಸುತ್ತಿತ್ತು. ಓಡಿಸಿಯಾದ ಮೇಲೆ “ಭಗಾ ದಿಯಾ ಮೈನೇ ಚೂತ್ಯೇ ಕೋ” ಅನ್ನೋ ನಗು ಬೇರೆ. ಕೊನೆಗೆ ಬ್ರಿಟೀಷನೊಬ್ಬ ಹಡಗಿನ ಸಿಬ್ಬಂದಿಗೆ ಹೇಳಿ ಖಾಲಿ ಮಾಡಿಸಿ “I know you were lying, you Indian” ಅಂತಾ ಬುಸುಗುಟ್ಟಿದ. ಇನ್ನೊಮ್ಮೆ ಇಲ್ಲಿಂದಾ (ದುಬೈಯಿಂದಾ) ಬೆಂಗಳೂರಿಗೆ ಹೋಗುವ ಫ್ಲೈಟಿನಲ್ಲಿ ಒಂದಷ್ಟು ಜನ ಕನ್ನಡದವರೇ ಹುಡುಗರಲ್ಲಿ “ಏಯ್ ಬಾತ್ರೂಮಲ್ಲಿ ಕ್ರೀಮು ಪರ್ಫ್ಯೂಮಿದೆ ಕಣ್ರೋ. ಸರಿಯಾಗಿ ಹಾಕ್ಕೊಂಡು ಬಂದೆ. ನೀವೂ ಹೋಗ್ರೋ” ಅನ್ನುವವ ಒಬ್ಬ. ಇನ್ನೊಬ್ಬ “ನಾನು ಹಾಕ್ಕೊಂಡು ಬರ್ಲಿಲ್ಲ, ಬಾಟ್ಲಿಯನ್ನೇ ತಗಂಡು ಬಂದೆ” ಅಂದ!! ಅಥೆನ್ಸಿನ ಹಡಗಲ್ಲಾದ್ರೆ ಇಲ್ಲಿನ ಭಾಷೆ ಬರದವರು ಇದ್ರು ಅನ್ನಿ. ಇದು ಬೆಂಗಳೂರಿಗೇ ಹೋಗೋ ಫೈಟು. ಸ್ವಾಭಾವಿಕವಾಗಿಯೇ ಸಹಪ್ರಯಾಣಿಕರು ಕನ್ನಡದವರು ಇರ್ತಾರೆ ಅನ್ನೋ ಕನಿಷ್ಟ ಪರಿಜ್ಞಾನವೂ ಇಲ್ಲದೇ ಕನ್ನಡದಲ್ಲೇ ಕೂಗಾಡುತ್ತಿದ್ದವರು!! ಉಳಿದವರು ಹುಬ್ಬೇರಿಸಿ ಮುಖ ಮುಖ ನೋಡಿಕೊಂಡು ಅಸಹನೆಯಲ್ಲಿ ತಲೆಕೊಡವಿಕೊಂಡರು.

ಇದು ಬಾಲಿ, ಸ್ವಿಟ್ಝರ್ಲ್ಯಾಂಡ್, ಪ್ಯಾರಿಸ್ ಮಾತ್ರವಲ್ಲ. ಜಗತ್ತಿನೆಲ್ಲೆಡೆ ಭಾರತೀಯರೆಡೆಗೆ ಈ ತಾತ್ಸಾರ ಭಾವನೆಯಿದೆ. ಎಲ್ಲರೂ ಭಾರತೀಯರು ಹಾಗಲ್ಲ ಅನ್ನೋ ಮಾತು ಖಂಡಿತಾ ಒಪ್ಪುವಂತದ್ದು. ಹೋಟೆಲ್ಲೊಂದರಲ್ಲಿ ಒಬ್ಬ ಭಾರತೀಯನ ಕೆಟ್ಟವರ್ತನೆಯನ್ನು ಹೋಟಿಲ್ಲಿನ ಸಿಬ್ಬಂದಿಯ ಮನಸ್ಸಿನಿಂದ ತೆಗೆಯಲು ಮುಂದಿನ ಹತ್ತು ಭಾರತೀಯರು ಇರುವುದಕ್ಕಿಂತಾ ಒಳ್ಳೆಯವರಾಗಿ ವರ್ತಿಸಬೇಕಾಗುತ್ತದೆ. ಆದರೆ ಹತ್ತು ಭಾರತೀಯರು ಹೋಟೆಲೊಂದರಲ್ಲಿ ಒಳ್ಳೆಯರೀತಿಯಲ್ಲಿ ನೆನಪಿಟ್ಟುಕೊಳ್ಳುವಂತಾ ವರ್ತನೆ ತೋರಿಸುವ ಪ್ರಾಬಬಲಿಟಿ ತೀರಾ ಕಮ್ಮಿ. ಈ ಕಾರಣಕ್ಕೇ ಭಾರತೀಯರೆಂದರೆ ಹೊರದೇಶದ ವರ್ತಕರಿಗೆ ಅದೊಂದು “ಮರೆಯಲಾಗದ ಅನುಭೂತಿ”.

ಇದು ಬರೀ ಯೂರೋಪು ಅಥ್ವಾ ಅಮೇರಿಕಾದಲ್ಲಿ ಮಾತ್ರವಲ್ಲ. ಕತ್ತೆತ್ತಿದರೆ 70% ಭಾರತೀಯರೇ ಕಾಣಸಿಗುವ ದುಬೈಯಲ್ಲೂ ಇದೇ ಕಥೆ. ಸ್ವಲ್ಪ ಸಮಾಧಾನದ ವಿಷಯವೆಂದರೆ ಇಲ್ಲಿ ಭಾರತೀಯರಿಗೆಂದೇ ಟೂರು ಏರ್ಪಾಡು ಮಾಡುವ ಏಜೆನ್ಸಿಗಳಿವೆ. ಅವರು ಊಟಕ್ಕೆ ಉಳಿಯಕ್ಕೆ ಬುಕ್ ಮಾಡುವ ಹೋಟೆಲುಗಳೂ ಭಾರತೀಯರದ್ದೇ ಆಗಿರುತ್ತವೆ, ಅಥವಾ ಭಾರತೀಯರನ್ನು ಮ್ಯಾನೇಜ್ ಮಾಡಲು ತಿಳಿದಿರುವವರದ್ದೇ ಆಗಿರುತ್ತವೆ. ಆ ಹೋಟೆಲಿನವರಿಗೆ ಇವರ ಬುದ್ಧಿ ಗೊತ್ತಿರುವದಕ್ಕೋ ಏನೋ, ಡಬಲ್ ರೂಮಿನಲ್ಲೂ ಎರಡು ಟವಲ್ ಇಡುವುದಿಲ್ಲ, ಒಂದೇ ಇಟ್ಟಿರುತ್ತಾರೆ. ಹೋದರೆ ಬರೀ ಒಂದೇ ಹೋಗಲಿ ಅಂತಲೋ ಅಥವಾ ಬೇಕಾದರೆ ಕಾಲ್ ಮಾಡಿ ಇನ್ನೊಂದು ತರಿಸಿಕೊಳ್ಳಲಿ, ಲೆಕ್ಕವಿರುತ್ತೆ ಎಂಬ ಆಲೋಚನೆಯೋ ಹೋಟೆಲ್ ಮ್ಯಾನೇಜ್ಮೆಂಟಿನವರದ್ದು. ಆದರೆ ಇಲ್ಲಿನ ಮೆಟ್ರೋದಲ್ಲಿ, ರಸ್ತೆಯಲ್ಲಿ ಒಬ್ಬ ಭಾರತೀಯ ಟೂರಿಸ್ಟನ್ನು ಗುರುತಿಸುವುದು ತೀರಾ ಸುಲಭ. ಇಲ್ಲಿನ ಬಹಳಷ್ಟು ಪ್ರವಾಸಿತಾಣಗಳಲ್ಲಿ, ಮೆಟ್ರೋದಲ್ಲಿ ಮಕ್ಕಳ ಎತ್ತರ ನೋಡಿ ಟಿಕೇಟು ಬೇಕೋ ಬೇಡವೋ ಎಂದು ನಿರ್ಧರಿಸುತ್ತಾರೆ. ಅಲ್ಲೆಲ್ಲಾ “ನನ್ನ ಮಗ ಇನ್ನೂ ಯೂಕೇಜಿ. ಸ್ವಲ್ಪ ಉದ್ದ ಇದ್ದಾನೆ ಅಷ್ಟೇ” ಅಂತಾ ಜಗಳ ಮಾಡುವ ಜನ ನಿಮಗೆ ಕಂಡರೆ ಅವರ್ಯಾರು ಅಂತಾ ನಾನು ಹೇಳುವುದೇ ಬೇಡ. ದುಬೈಯ ಸ್ವಚ್ಚತೆಯನ್ನು ಮೆಚ್ಚುತ್ತಲೇ ಚಿಪ್ಸ್ ಪ್ಯಾಕೆಟ್ ಅನ್ನು ರಸ್ತೆಬದಿಗೆ ಎಸೆಯುವ, ಊಟಮಾಡಿ ಹೋಟೆಲಿಂದ ಹೊರಗೆಬಂದು ಬಾಯಿಗೆ ನೀರು ಹಾಕಿ ಮುಕ್ಕಳಿಸಿ ಪುಟ್ಫಾತ್ ಮೇಲೆ ಉಗಿಯುವ, ಮೂಗಿನಿಂದ ಸಹಸ್ರಾರದವರೆಗೆ ಸಿಂಬಳ ಏರುವಂತೆ ಎಳೆದು ಥೂ ಅಂತಾ ಉಗಿಯುವ ಪ್ರವಾಸಿಗರೆಲ್ಲಾ ಹೆಚ್ಚಾಗಿ ಒಂದೇ ದೇಶದಿಂದ ಬಂದವರಾಗಿರುತ್ತಾರೆ. ಜೀಬ್ರಾಕ್ರಾಸಿಂಗ್ ಅಲ್ಲೇ ಐವತ್ತು ಮೀಟರ್ ದೂರದಲ್ಲಿದ್ದರೂ, ಇಲ್ಲೇ ರಸ್ತೆಯ ಮೇಲೆ ಓಡುವವರೂ ಎಲ್ಲಿಯವರು ಅಂತೇನೂ ಸ್ಪೆಷಲ್ಲಾಗಿ ಹೇಳಬೇಕಿಲ್ಲ.

ನಮಗೆ ನಮ್ಮ ಜನಸಂಖ್ಯೆಯ ಕಾರಣದಿಂದಾಗಿ personal space ಅನ್ನೋ ಪರಿಕಲ್ಪನೆಯೇ ಇಲ್ಲ. ಭಾರತದಲ್ಲಿದ್ದಾಗ 8 ಜನ ನಿಲ್ಲಬಹುದಾದ ಲಿಫ್ಟಿನಲ್ಲಿ ಮೈಗೆ ಮೈಯಂಟಿಸಿಕೊಂಡು 10 ಜನ ನಿಂತೇ ಆಫೀಸಿಗೆ ಹೋಗುವ ನಾವು, ಬೇರೆ ದೇಶಕ್ಕೆ ಹೋದಾಗಲೂ ಲಿಫ್ಟಿನಲ್ಲಿ ಬೇರೆ ಯಾರಿದ್ದಾರೆ ಅನ್ನೋದನ್ನೂ ನೋಡದೇ ಎಲ್ಲರೂ ನುಗ್ಗುತ್ತೇವೆ. ಓಡುತ್ತಿರುವ ಮೆಟ್ರೋದಲ್ಲಿ, ನಿಂತ ವಿಮಾನಗಳಲ್ಲಿ, ಟಿಕೇಟಿನ ಸಾಲುಗಳಲ್ಲಿ, ಇನ್ನೊಬ್ಬರ ಮೈಗೆ ನಮ್ಮ ಮೈಯನ್ನೋ, ಬ್ಯಾಗನ್ನೋ ತಾಗಿಸಿಯೇ ನಿಲ್ಲುತ್ತೇವೆ. ನನ್ನ ಸಂತೋಷ, ದುಃಖ, ಅದ್ಯಾರದ್ದೋ ಬಗೆಗಿನ ತಿರಸ್ಕಾರ, ದುಮ್ಮಾನಗಳನ್ನು ಉಳಿದವರಿಗೆ ಕೇಳಿಸುವ ಅಗತ್ಯವಿಲ್ಲದಿದ್ದರೂ ಜೋರಾಗಿಯೇ ಮಾತನಾಡುತ್ತೇವೆ. ಫೋನ್ಕಾಲುಗಳದ್ದೂ ಅದೇ ಕಥೆ. ಲಿಫ್ಟುಗಳಲ್ಲಿ, ಕಾರಿಡಾರುಗಳಲ್ಲಿ ನಡೆಯುವಾಗ ಎದುರಾದವರೆಡೆಗೆಗೊಂದು ಸೌಜನ್ಯದ ನಗೆಯಾಗಲೀ, ಗುಡ್ಮಾರ್ನಿಂಗ್ ಗುಡೀವನಿಂಗ್ ಆಗಲೀ, ರಿಸೆಪ್ಷನ್/ಸೇಲ್ಸ್ ಟಿಲ್/ಟೋಲ್-ಗೇಟುಳಲ್ಲಿರುವ ಜನರೆಡೆಗೆ ಒಂದು ಥ್ಯಾಂಕ್ಸ್ ಆಗಲೀ ಹೇಳಲಾಗದಷ್ಟು ಬಡವರು ನಾವು. ಇದೇ ಅಭ್ಯಾಸಗಳನ್ನು ಬೇರೆಕಡೆ ಹೋದಾಗಲೂ ಮುಂದುವರೆಸುತ್ತೇವೆ. ಭಾರತದಲ್ಲಿ ಹೇಗೋ ಗೊತ್ತಿಲ್ಲ, ಬಹಳಷ್ಟು ದೇಶಗಳಲ್ಲಿ ರೆಸ್ಟೋರೆಂಟ್ ವೈಟರುಗಳಿಗೆ ಸಂಬಳ ಕಮ್ಮಿಯಿಟ್ಟು, ಗ್ರಾಹಕರಿಗೆ ಉತ್ತಮ ಸೇವೆ ಕೊಟ್ಟು ಅದಕ್ಕವರು ಟಿಪ್ಸ್ ಪಡೆಯುವ ವ್ಯವಸ್ಥೆಯಿದೆ. ಅದರ ಬಗ್ಗೆ ಕನಿಷ್ಟ ರೀಸರ್ಚ್ ಕೂಡಾ ಮಾಡದೇ ಆ ದೇಶಗಳಿಗೆ ಹೋಗಿ, ಅಲ್ಲಿ ಟಿಪ್ಸ್ ಇಡದೇ ಬರುವ ಭಾರತೀಯರೆಂದರೆ ಆ ವೈಟರುಗಳಿಗೂ ಅಷ್ಟಕ್ಕಷ್ಟೇ.

ಒಟ್ಟಿನಲ್ಲಿ ಭಾರತೀಯ ಪ್ರವಾಸಿಗಳೆಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಜನ ಸ್ವಲ್ಪ ಹುಳಿಮುಖ ಮಾಡುವುದು ಸಹಜ. ನಮ್ಮಜನರ ವರ್ತನೆಗಳ ಅನುಭವವಿರುವ ನನಗೆ ಅದರಲ್ಲೇನೂ ಆಶ್ಚರ್ಯವಿಲ್ಲ. ಭಾರತೀಯರೆಡೆಗಿರುವ ಇಂತಹದೊಂದು ಗ್ರಹಿಕೆಯನ್ನು ಕಡಿಮೆಮಾಡುವೆಡೆಗೆ ನನ್ನ ಕೈಲಾದಷ್ಟು ಪ್ರಯತ್ನವನ್ನಂತೂ ನಾನು ಮಾಡುತ್ತೇನೆ. ನನ್ನದಲ್ಲದ ಯಾವ ವಸ್ತುವನ್ನೂ ಮುಟ್ಟದ, ತೆಗೆದುಕೊಳ್ಳದ, ಪಡೆದ ಸೇವೆಗೊಂದು ಥ್ಯಾಂಕ್ಸ್ ಹೇಳುವ ಭಾರತೀಯರಾಗುವ ಮೂಲಕ ನಮ್ಮ ದೇಶಕ್ಕೂ ಹೆಮ್ಮೆ ತರೋಣ.

ಹೋಟೆಲ್ ರೂಮಿನಲ್ಲಿದ್ದ ಶಾಂಪೂ, ಸೋಪು, ಟೀಬ್ಯಾಗು ತೆಗೆದುಕೊಳ್ಳದೇ ಬಂದವರು ಇಡೀ ಜಗತ್ತಿನಲ್ಲೇ ಯಾರೂ ಇಲ್ಲ. ಎಲ್ಲಾದೇಶದವರೂ ಅದನ್ನು ಒಂದಲ್ಲೊಂದು ಕಡೆ ಮಾಡಿರುತ್ತಾರೆ. ಅದನ್ನು “ಕದಿಯೋದು” ಅನ್ನೋದೂ ಇಲ್ಲ. ಯಾಕಂದ್ರೆ ನೀವು ಬಳಸದಿದ್ದರೂ/ಅರ್ಧ ಬಳಸಿಟ್ಟರೂ ಅದು ಮತ್ತೆ ರಿಪ್ಲೇಸ್ ಆಗೇ ಆಗುತ್ತದೆ. ರೂಮಿನ ಮಿನಿಬಾರಿನಲ್ಲಿದ್ದ ಲೇಯ್ಸ್ ಚಿಪ್ಸ್ ಅಥವಾ ಚಾಕಲೇಟು ತಿಂದು, ಸಂಜೆ ಹೊರಗೆ ಹೋದಾಗ ಅದೇ ಬ್ರಾಂಡಿನ ತಿನಿಸುಗಳನ್ನು ವಾಪಾಸು ಇಟ್ಟು ನೂರಾರು ರೂಪಾಯಿ ಬಿಲ್ ತಪ್ಪಿಸಿಕೊಳ್ಳುವುದನ್ನೂ ನಾನು ತಪ್ಪು ಅನ್ನಲ್ಲ. ಆದರೆ ಹ್ಯಾಂಗರ್ರು, ಹೇರ್ ಡ್ರೈಯರ್, ಬಾತ್-ರೋಬ್, ಲೈಟುಗಳು ಇವನ್ನೆಲ್ಲಾ ತೆಗೆದುಕೊಂಡು ಬರೋದು ತೀರಾ ಅಕ್ಷಮ್ಯ. ಹಾಗೆಯೇ ಕಾಫಿಮೇಕರ್ ಹತ್ರ ಇಟ್ಟ ಚಮಚ, ಕಾಫಿ ಮಗ್ಗು, ಟೀವಿ ರಿಮೋಟಿನ ಸೆಲ್ಲು ಇವನ್ನೆಲ್ಲಾ ತೆಗೆದುಕೊಳ್ಳೋದು ಕಳ್ಳತನ ಅನ್ನೋದು ಸಾಯ್ಲಿ, ತೀರಾ ಚೀಪ್’ನೆಸ್. ಹೋಟೆಲ್ ರೂಮ್ ಬುಕಿಂಗ್ ಕಂಪೆನಿಯಾದ IXIGO, ಇಂತಹಾ ಗೊಂದಲ ನಿವಾರಿಸೋದಕ್ಕೆ, ಹೋಟೆಲ್ ರೂಮಿನಿಂದ ಏನನ್ನು ತೆಗೆದುಕೊಂಡು ಹೋಗಬಹುದು, ಯಾವುದನ್ನ ಮುಟ್ಟಬಾರದು ಅಂತಾ ಒಂದೊಳ್ಳೆಯ ವಿಡಿಯೋ ಮಾಡಿದ್ದಾರೆ, ನೋಡಿ.

ಕೊಸರು:

(*) ಭಾರತೀಯರ ಬಗ್ಗೆ ಮಾತ್ರ ಯಾಕೆ ಈ ರೀತಿ ಅಪವಾದ. ಪಾಕಿಗಳ ಬಗ್ಗೆ, ಬಾಂಗ್ಲಾಗಳ ಬಗ್ಗೆ ಯಾಕಿಲ್ಲ? ಅಂತಾ ನಿಮಗೆ ಅನುಮಾನ ಬಂದಿರಬಹುದು. ಈ ರೀತಿ ಅನುಭವ ಆತಿಥೇಯರಿಗೆ ಆಗಬೇಕಾದರೆ, ಜನ ಅಲ್ಲಿಗೆ ಪ್ರವಾಸಿಗಳಾಗಿ ಹೋಗಬೇಕು. ಪ್ರವಾಸಕ್ಕೆ ಹೋಗೋಕೆ ದುಡ್ಡು ಬೇಕು. ಪಾಕಿ/ಬಂಗಾಲಿಗಳ ಕೈಲಿ ಅಷ್ಟೆಲ್ಲಾ ದುಡ್ಡಿದ್ರೆ, ಊರಲ್ಲಿ ಎರಡಂತಸ್ತಿನ ಮನೆ ಕಟ್ತಾರೆ. ಆಮೇಲೆ ಪ್ರವಾಸ ಅದೂ ಇದೂ ಎಲ್ಲಾ. ಭಾರತೀಯರು ಹಾಗಲ್ಲ. ನಮ್ ಎಕಾನಮಿ ಸಕ್ಕಾತ್ತಾಗಿದೆ. ಈಗಂತೂ ನಮ್ ಹತ್ರ ದುಡ್ಡಿದೆ. ತಿರುಗ್ತೀವಿ. ಗಬ್ಬೆಬ್ಬಿಸ್ತಾ ಇದ್ದೀವಿ. ಅವರೆಲ್ಲಾ ನಾವು 1970ರಲ್ಲಿ ಹೇಗಿದ್ವೋ ಹಾಗಿದ್ದಾರೆ. ಅವರ ಬಳಿ ಅಷ್ಟೆಲ್ಲಾ disposable income ಬರಬೇಕಾದರೆ ಇನ್ನೂ ಕನಿಷ್ಟ ಇಪ್ಪತ್ತೈದು ವರ್ಷ ಬೇಕು. ಆಗ ಈ ಕಥೆಗಳು ಅವರ ಹೆಸರಲ್ಲೂ ಬರುತ್ವೆ 🙂 ಅವರೆಡೆಗೆ ನಗುವ ಮೊದಲು ನಾವು ಸುಧಾರಿಸಿಕೊಳ್ಳೋಣ. ನಾಳೆ ಪಾಕಿಯೊಬ್ಬ ಹೋಟೆಲಲ್ಲಿ ಏನೋ ಕದ್ದು ಸಿಕ್ಕಿಹಾಕಿಕೊಂಡಾಗ ಆ ಹೋಟೆಲಿವನರು “ಎಲ್ಲಿಂದಾ ಕಲಿತ್ಯಪ್ಪಾ ಇಂತಾ ಬುದ್ಧಿ” ಅಂದರೆ, ಆತ ನಮ್ಮ ಕಡೆ ಬೆರಳುತೋರಿಸದಂತಾಗಲಿ.

(*) ನನಗೆ ಇದೇ ರೀತಿ ಸ್ಟೀರಿಯೋಟಿಪಿಕಲ್ ಭಾವನೆ ಎಲ್ಲಾ ದೇಶದವರ ಮೇಲೂ ಇದೆ. ಬಂಗಾಲಿಗಳು ಜಿಪುಣರು, ಪಠಾಣರು ಕೊಳಕರು, ಬ್ರಿಟೀಷರು ಸಿಡುಕರು, ಅಮೇರಿಕನ್ನರು ಕೇರ್ಲೆಸ್ಸು ಹೀಗೇ ಬಹಳಷ್ಟು ನನ್ನ ಮನಸ್ಸಲ್ಲೂ ಇದೆ. ಆಗಾಗ ಅದನ್ನ ಒರೆಗೆ ಹಚ್ಚುತ್ತಿರುತ್ತೇನೆ. ಸರಿಪಡಿಸಿಕೊಳ್ಳುತ್ತೇನೆ. ಆದರೆ ನಾನು ವೈಟರುಗಳು ಮೊದಲ ಬಾರಿಗೆ ನನ್ನ ಟೇಬಲ್ಲಿಗೆ ಬಂದಾಗಲೇ ನಾನು “ನೋಡಪ್ಪಾ, ನೀವು ನೋಡಿದ ಉಳಿದ ಭಾರತೀಯರಂತೆ ನಾನಲ್ಲ. ನಿನಗೆ ಸಿಗುವ ಟಿಪ್ಸು ನಿನ್ನ ಸೇವೆಯ ಮೇಲೆ ನಿರ್ಧಾರವಾಗುತ್ತೆ. ನೆನಪಿಟ್ಕೋ” ಅಂತಾ ಬಾಯಿಬಿಟ್ಟು ಹೇಳಿಬಿಡುವುದುಂಟು. ಇದು ಯಾಕೆಂದರೆ, ನಾನು ಯೂಕೆನಲ್ಲಿದ್ದಾಗ ಈ ರೀತಿಯ “ಬ್ಲಡಿ ಇಂಡಿಯನ್” ಸ್ಟೀರಿಯೋಟೈಪನ್ನು ಬಹಳ ಅನುಭವಿಸಿದ್ದೇನೆ. ಅಲ್ಲಿನ ವೈಟರುಗಳು ಬ್ರಿಟೀಷ್ ಅಥವಾ ಪೋಲಿಷ್/ಆಫ್ರಿಕನ್ನರು. ಇಲ್ಲಿ ಮಧ್ಯಪ್ರಾಚ್ಯಕ್ಕೆ ಬಂದಮೇಲೆ ಇಲ್ಲಿ ಹೆಚ್ಚಿನ ಸರ್ವರುಗಳು ಫಿಲಿಪಿನೋಗಳು ಅಥವಾ ಪೂರ್ವ ಯೂರೋಪಿಯನ್ನರು. ಎರಡೂ ಕಡೆಯಲ್ಲಿ ವೈಟರುಗಳು “ಇವ ಇಂಡಿಯನ್. ಹಾಗಾಗಿ ಇವ ಟಿಪ್ಸ್ ಕೊಡೋದಿಲ್ಲ. ಕೊಟ್ಟರೂ ಜಾಸ್ತಿ ಕೊಡಲಿಕ್ಕಿಲ್ಲ” ಅನ್ನೋ ಭಾವನೆಯಲ್ಲಿರ್ತಾರೆ. ಹಾಗಾಗಿ ಅವರು ಕೊಡುವ ಸೇವೆಯೂ ಕೆಲವೊಮ್ಮೆ ಅಷ್ಟಕ್ಕಷ್ಟೇ ಇರುತ್ತದೆ. ಅವರ ಸೇವೆ ಬರೀ ಅಷ್ಟಷ್ಟೇ ಇದ್ದಾಗ ಟಿಪ್ಸ್ ಕೊಡೋಕೆ ನಿಮಗೂ ಮನಸ್ಸು ಬರಲ್ಲ. ಒಂದಿನ ನಾನಿಲ್ಲಿನ ಪಂಚತಾರಾ ಹೋಟೆಲೊಂದರಲ್ಲಿದ್ದೆ. ಅಲ್ಲಿನ ವೈಟರು ನನ್ನೊಂದಿಗೆ ನಡೆದುಕೊಂಡ ರೀತಿ ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಯಾಕೆಂದರೆ ಉಳಿದವರೆಲ್ಲಾ ಕರೆದಕೂಡಲೇ ಬಂದು ಸರ್ವ್ ಮಾಡುತ್ತಿದ್ದವ ನಾನು ಕರೆದರೆ ಮಾತ್ರ ನಾಪತ್ತೆ. ಎರಡುಬಾರಿ ನಾನು ಕೇಳಿದ್ದೇ ಒಂದು, ಅವ ತಂದದ್ದೇ ಇನ್ನೊಂದು! ಕೊನೆಗೆ ಹೊರಡುವ ಮುನ್ನ, ಅವನನ್ನು ಮತ್ತು ಫ್ಲೋರ್ ಮ್ಯಾನೇಜರ್ ಇಬ್ಬರನ್ನೂ ಕರೆದು ಬಿಲ್ಲಿನ ಹಣ ಪಾವತಿ ಮಾಡಿ, ಜೇಬಿನಿಂದ ಐವತ್ತು ದಿರಹಂ ಹೊರಗೆ ತೆಗೆದು “ಈ ಹಣ ನಾನು ಇವನಿಗೆ ಟಿಪ್ಸ್ ಕೊಡಬೇಕು ಅಂತಲೇ ಇಟ್ಟುಕೊಂಡದ್ದು. ಆದರೆ ಇವನ ಸರ್ವೀಸು ನನಗಿಷ್ಟವಾಗಲಿಲ್ಲ. ಆದ್ದರಿಂದ ಈ ಟಿಪ್ಸು ಕೊಡುತ್ತಿಲ್ಲ FYI” ಅಂತ ಹೇಳಿ ಮರಳಿ ಜೇಬಿಗಿಟ್ಟೆ. ಅವತ್ತಿಂದ ಇವತ್ತಿನವರೆಗೂ ನಾನು ಹೊಸ ಹೋಟೆಲುಗಳಿಗೆ ಹೋದರೆ ಟಿಪ್ಸಿನ ವಿಚಾರ ಮೊದಲಿಗೇ ಹೇಳಿಬಿಡುತ್ತೇನೆ. ಕೆಲ ಹೋಟೆಲುಗಳಲ್ಲಿ ಸರ್ವೀಸ್ ಚಾರ್ಜ್ ಅಂತಾ ಮೊದಲೇ ಸೇರಿಸಿಬಿಟ್ಟಿರುತ್ತಾರೆ. ಅಂತಾಕಡೆ ನಾನು ಟಿಪ್ಸ್ ಕೊಡುವುದಿಲ್ಲ. ಸರ್ವೀಸ್ ಇಷ್ಟವಾಗಿಲ್ಲವೆಂದರೆ ಜಗಳ ಮಾಡಿ ಬಿಲ್ಲಿನಿಂದ ಸರ್ವೀಸ್ ಚಾರ್ಜ್ ತೆಗೆಸಿದ್ದೂ ಇದೆ.

ನನ್ನ ಹಾಗೂ ಯಾವ ಭಾರತೀಯರ ಬಗ್ಗೆಯೂ ಯಾರಿಗೂ ಕೆಟ್ಟ ಸ್ಟಿರಿಯೋಟೈಪು ಬರುವ ಹಾಗೆ ನಾನು ನಡೆದುಕೊಳ್ಳಲ್ಲ. ನೀವೂ ಪ್ರಯತ್ನಿಸುತ್ತೀರಿ ತಾನೇ?

#ರಾಘವಾಂಕಣ

Video credit and copyright: ixigo

ರಷ್ಯನ್ ಸಿಂಪ್ಸನ್

ಇದೊಂದು ರಷ್ಯನ್ ಅಮಿನೇಷನ್ ವಿಡಿಯೋ(V1)ವನ್ನ ರೊಮೇನಿಯನ್ ಒಬ್ಬ ವಿವರಿಸ್ತಾ ಇರೋ ವಿಡಿಯೋ (V2).

ಯಾರಿಗಾದರೂ ‘ಅಂದಿನಕಾಲದ’ ಕಮ್ಯೂನಿಸ್ಟ್ ಮತ್ತು ಸೋಷಿಯಲಿಸ್ಟ್ ದೇಶಗಳಲ್ಲಿ ಜೀವನ ಅಂದ್ರೆ ಹೇಗಿತ್ತು ಅಂತಾ ತಿಳಿದುಕೊಳ್ಳೋ ಆಸೆಯಿದ್ದರೆ, ಇದೊಂದು ನೋಡಲೇಬೇಕಾದ ವಿಡಿಯೋ. ನಿರೂಪಕನಿಗೆ ಬಹಳ ದಪ್ಪದ ರಷ್ಯನ್ ಆಕ್ಸೆಂಟ್ ಇದೆ. ಅದನ್ನ ಸ್ವಲ್ಪ ಗಮನಕೊಟ್ಟು ಅರ್ಥ ಮಾಡ್ಕೊಂಡ್ರೆ, ಇದೊಂದು ಒಳ್ಳೆಯ insight ಕೊಡೋ ವಿಡಿಯೋ.

ಈ ವಿಡಿಯೋ ಎರಡು ಕಾರಣಗಳಿಗೆ ಕುತೂಹಲಕಾರಿ:

(1) V1 ಇದು, The Simpsons ಎಂಬ ಪ್ರಸಿದ್ಧ ಅಮೇರಿಕನ್ ಕಾಮಿಡಿ ಸೀರೀಸಿನ ರಷ್ಯನ್ ಅವತರಣಿಕೆ ಬಂದಿದ್ದರೆ ಅದರ ಪಾತ್ರಗಳು ಮತ್ತು ಗ್ರಾಫಿಕ್ಸ್ ಹೇಗಿದ್ದಿರಬಹುದು ಎಂಬುದರ ಇಣುಕುನೋಟ.

(2) ಈ V1ನಲ್ಲಿರುವ ಅಟೆನ್ಷನ್ ಟು ಡೀಟೇಲ್. ಆ V1 ಇದ್ಯಲ್ಲಾ, ಅದು ಇರೋದೇ 70 ಸೆಕೆಂಡು. ಹಾಗಂತಾ ಸುಮ್ಮನೇ ಕಾಟಾಚಾರಕ್ಕೆ ಮಾಡಿ ಬಿಸಾಕಿಲ್ಲ. ಸಣ್ಣಸಣ್ಣ ವಿಷಯಕ್ಕೂ ಡಿಸೈನರುಗಳು/ನಿರ್ದೇಶಕ ಕೊಟ್ಟಿರೋ ಗಮನ ಇದ್ಯಲ್ಲಾ, ಅದು ಸಕ್ಕತ್. ಅದನ್ನೇ ಈ ಚಾನೆಲ್ಲಿನ ನಿರೂಪಕ V2ನಲ್ಲಿ ವಿವರಿಸ್ತಾ ಇರೋದು.

ಎಂಜಾಯ್ ಮಾಡಿ.

https://www.youtube.com/watch?v=aio-tQa801g

ಬಿಸಿ ಬಿಸಿ ಸರ್ವರುಗಳೂ, ಅವನ್ನು ತಂಪಾಗಿಸುವ ಕೂಲ್ ಕೂಲ್ ಐಡಿಯಾಗಳೂ

ಬೆಳಿಗ್ಗೆ ಇಂತಹದ್ದೊಂದು ಸುದ್ಧಿ ಓದಿದೆ. ಅದರಲ್ಲಿ ಹೇಗೆ ಇಮೇಲ್ ಹಾಗೂ ಅಟ್ಯಾಚ್ಮೆಂಟುಗಳು ಪರಿಸರಕ್ಕೆ ಹಾನಿ ಮಾಡುತ್ತಿವೆ ಅಂತಾ ಪತ್ರಿಕಾ ಲೇಖನವೊಂದಿತ್ತು. “ಪ್ರತಿಯೊಂದು ಈಮೇಲ್’ನಿಂದ 4ಗ್ರಾಂನಷ್ಟು ಕಾರ್ಬನ್ ಡೈ-ಆಕ್ಸೈಡ್ ವಾತಾವರಣಕ್ಕೆ ಸೇರುತ್ತದೆ. ಈಮೇಲ್ ಗಾತ್ರ ದೊಡ್ಡದಿದ್ದರೆ, ಅಥವಾ ದೊಡ್ಡ ಅಟ್ಯಾಚ್ಮೆಂಟುಗಳಿದ್ದರೆ ಇನ್ನೂ ಹೆಚ್ಚು ಇಂಗಾಲ ಪರಿಸರಕ್ಕೆ ಸೇರಿ ಮಾಲಿನ್ಯಕ್ಕೆ ಕಾರಣವಾಗುತ್ತದೆ” ಅಂತಾ ಅದರಲ್ಲಿ ಬರೆದಿದ್ದರು.

ಮೇಲ್ನೋಟಕ್ಕೆ ಕಾಮಿಡಿಯಾಗಿ ಕಾಣುವ ಈ ಲೇಖನ ನಿಜಕ್ಕೂ ಸತ್ಯದ ಅಂಶಗಳಿಂದ ಕೂಡಿದೆ. ಆದರೆ ಅವರು ಅದನ್ನು ಬರೆದ ರೀತಿ ಹಾಸ್ಯಾಸ್ಪದವಾಗಿ, ತಪ್ಪುಮಾಹಿತಿಗಳಿಂದ ಕೂಡಿ ಅರ್ಧಸತ್ಯವಾಗಿದೆ ಅಷ್ಟೇ. ಅವರು “ಸಣ್ಣ ಈಮೇಲ್’ಗಳನ್ನು ಕಳುಹಿಸಿ, ಮೊಬೈಲ್ ಚಾರ್ಜ್ ಆದಮೇಲೆ ಸ್ವಿಚ್ ಆಫ್ ಮಾಡಿ, ಬಳಸದೇ ಇರೋ ಆಪ್’ಗಳನ್ನು ಫೋನಿನಿಂದ ಅಳಿಸಿ, ಸಾಮಾಜಿಕ ತಾಣದಲ್ಲಿ ಅನಗತ್ಯ ಚರ್ಚೆ ಮಾಡಬೇಡಿ” ಅಂತೆಲ್ಲಾ ಬರೆದಿರೋದು ಮಾತ್ರ ಪೂರ್ತಿ ಕಾಮಿಡಿಯೇ ಆಗಿದೆ.

ವಿಷಯಕ್ಕೆ ಬರೋಣ. ನಾವು ಬಳಸುವ ಪ್ರತಿಯೊಂದು ವೆಬ್ಸೈಟು, ಅಂತರ್ಜಾಲ ಸೇವೆಗಳು (ಈಮೇಲ್, ಶಾಪಿಂಗ್, ಚಾಟ್) ಮತ್ತು ಸಾಮಾಜಿಕ ತಾಣಗಳು ದೊಡ್ಡಮಟ್ಟದ ಡೇಟಾಸೆಂಟರುಗಳನ್ನು ಬಳಸುತ್ತವೆ. ಸಾವಿರಾರು ಸರ್ವರುಗಳ ಈ ಬೃಹತ್ ಡೇಟಾಸೆಂಟರುಗಳಲ್ಲಿ ಸರ್ವರುಗಳು ಬಳಸುವ ವಿದ್ಯುತ್ ದೊಡ್ಡಮಟ್ಟದ್ದೇ. ಈ ಸರ್ವರುಗಳು ನಮ್ಮ ನಿಮ್ಮ ಕಂಪ್ಯೂಟರುಗಳಂತೆ ಸಾವಿರಾರು ಸಣ್ಣಸಣ್ಣಕೆಲಸಗಳನ್ನು ಮಾಡುವವಲ್ಲ. ಅವು ತಮಗೆ ಕೊಟ್ಟ ಕೆಲವೇ ಕೆಲವು ಕೆಲಸಗಳನ್ನು ಮತ್ತೆ ಮತ್ತೆ ಶರವೇಗದಲ್ಲಿ ಮುಗಿಸುವಂತವು. ಈ ಶರವೇಗದ ಸರದಾರರು ತಮ್ಮ ಕ್ಷಮತೆಯ 80-90% ಎಫಿಷೆಯೆನ್ಸಿ ಲೆವೆಲ್ಲಿನಲ್ಲಿ ಕೆಲಸ ಮಾಡುವಾಗ ವಿಪರೀತ ಬಿಸಿಯಾಗುತ್ತವೆ. ಹಾಗಾಗಿ ಈ ಸರ್ವರುಗಳು ಬಳಸುವ ಶಕ್ತಿಗಿಂತಲೂ ಮೂರುಪಟ್ಟು ಹೆಚ್ಚು ವಿದ್ಯುತ್ಚಕ್ತಿ, ಈ ಡೇಟಾಸೆಂಟರುಗಳನ್ನು ತಣ್ಣಗಿಡುವುದಕ್ಕೇ ಖರ್ಚಾಗುತ್ತದೆ. ಸಾವಿರಾರು ಟನ್ ಕ್ಷಮತೆಯ ದೈತ್ಯಾಕಾರದ ಏರ್ಕಂಡೀಷನರುಗಳು ಡೇಟಾಸೆಂಟರುಗಳನ್ನು ಹದಿಮೂರದಿನಾಲ್ಕು ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಸದಾ ತಣ್ಣಗಿಡುತ್ತವೆ. ಸರ್ವರುಗಳ ಮೇಲೆ ಹೆಚ್ಚೆಚ್ಚು ಕೆಲಸ ಬಿದ್ದಷ್ಟೂ ಉದಾಹರಣೆಗೆ ಭಾರತದಲ್ಲಿ ಸರ್ಕಾರ ಬಿದ್ದ ದಿನ, ಕಿಮ್ ಕರ್ದಾಷಿಯಾನಳ ತೊಡೆಸಂಧಿಯೊಂದು ಸಾರ್ವಜನಿಕವಾಗಿ ಕಂಡದಿನ, ಫ್ಲಿಪ್ಕಾರ್ಟ್-ಅಮೆಜಾನ್’ಗಳಲ್ಲಿ ಸೂಪರ್ ಸೇಲ್ ನಡೆವ ದಿನ, ಟ್ರಂಪ್ ಮೆಕ್ಸಿಕೋ ಬಗ್ಗೆ ಏನಾದರೂ ಹೇಳಿದ ದಿನ ಜನ ಸಾಮಾಜಿಕ ತಾಣಗಳಲ್ಲಿ ಮುಗಿಬಿದ್ದಾಗ, ಈ ಸರ್ವರುಗಳು ಅಕ್ಷರಷಃ ಅಂಡಿಗೆ ಬೆಂಕಿಬಿದ್ದಂಗೆ ಕೆಲಸ ಮಾಡುತ್ತಿರುತ್ತವೆ. ಇದನ್ನೇ ಸ್ವಲ್ಪ ದೊಡ್ಡಮಟ್ಟದಲ್ಲಿ ನೋಡಿದಾಗ, ಆ ಲೇಖನದಲ್ಲಿ ಹೇಳಿದಂಗೆ ದೊಡ್ಡ ಈಮೇಲುಗಳು, ದೊಡ್ಡ ಅಟ್ಯಾಚ್ಮೆಂಟುಗಳನ್ನು ಕಳಿಸಿದಾಗ, ಇನ್ಸ್ಟಾಗ್ರಾಂಗೆ ಫೋಟೋಗಳನ್ನು ಅಪ್ಲೋಡ್ ಮಾಡಿದಾಗ, ನಾನೀ ಆರ್ಟಿಕಲ್ ಬರೆದಾಗ, ಅದನ್ನು ನೀವು ಓದಿ ಕಮೆಂಟು ಮಾಡಿದಾಗ, ಶೇರ್ ಮಾಡಿದಾಗಲೆಲ್ಲಾ ಸ್ವಲ್ಪಸ್ವಲ್ಪವೇ ಕೆಲಸ ಹೆಚ್ಚಾಗಿ ಸರ್ವರುಗಳು ಒಂದಂಶ ಬಿಸಿಯಾಗುತ್ತವೆ. ಅವನ್ನು ತಣ್ಣಗಾಗಿಸುವ ಏರ್ಕಂಡೀಷನರ್ಗಳ ಮೇಲೂ ಒಂದಂಶ ಕೆಲಸ ಹೆಚ್ಚಾಗುತ್ತದೆ. ಅವನ್ನು ನಡೆಸುವ ಜನರೇಟರುಗಳು, ಅಥವಾ ವಿದ್ಯುತ್ ಒದಗಿಸುವ ಗ್ರಿಡ್ ಅವುಗಳೆಡೆಗೆ ಹೆಚ್ಚು ಶಕ್ತಿ ಹರಿಸುತ್ತಾ ಸಣ್ಣಗೆ ಒಂದುಸಲ ಹೂಂಕರಿಸುತ್ತದೆ. ಈ ಹೂಂಕಾರದಲ್ಲಿ ಇಂಗಾಲವೊಂದಷ್ಟು ವಾತಾವರಣ ಸೇರುತ್ತದೆ. ಇದು ಆ ಲೇಖನದ ಮೂಲೋದ್ದೇಶ.

ಆದರೆ ನಿಜಕ್ಕೂ ಕಥೆ ಹೀಗೆಲ್ಲಾ ಇದೆಯೇ? 2012ರ ಒಂದು ಅಂದಾಜಿನ ಪ್ರಕಾರ 2025ಕ್ಕೆ ಜಗತ್ತಿನಲ್ಲಿ ಉತ್ಪಾದನೆಯಾದ ಐದನೇ ಒಂದು ಭಾಗ ವಿದ್ಯುತ್ಶಕ್ತಿ ಈ ರೀತಿಯ ಡೇಟಾ ಸೆಂಟರುಗಳನ್ನು ತಣ್ಣಗಿಡುವುದಕ್ಕೇ ಬೇಕಾಗುತ್ತದೆ ಅಂತಾ ಹೇಳಲಾಗಿತ್ತು. ಆದರೆ ಕಳೆದ ಕೆಲ ವರ್ಷಗಳಲ್ಲಿ ಈ ರಂಗದಲ್ಲಿ ಅದ್ವಿತೀಯ ಬದಲಾವಣೆಗಳಾಗಿವೆ. 2017ರಿಂದೀಚೆಗೆ ಡೇಟಾಸೆಂಟರ್ ಮ್ಯಾನೇಜ್ಮೆಂಟ್ ಕಂಪನಿಗಳು ತಮ್ಮ ಒಟ್ಟು ವಿದ್ಯುತ್ ಬಳಕೆಯಲ್ಲಿ ಶೇಕಡಾ 17%ಕಡಿಮೆ ಮಾಡಿವೆ! ಹೇಗೆ ಅಂತೀರಾ? ಇಲ್ಲಿ ನಡೆದಿರುವ ಕೆಲ ತಾಂತ್ರಿಕಬೆಳವಣಿಗೆಗಳನ್ನು ನೋಡೋಣ ಬನ್ನಿ:

(೧) ತಂತ್ರಜ್ಞಾನ ಜಗತ್ತಿನ ದೈತ್ಯ ಗೂಗಲ್ ಇವತ್ತಿಗೂ ಜಗತ್ತಿನ ಕೆಲ ಅತೀದೊಡ್ಡ ಡೇಟಾಸೆಂಟರುಗಳನ್ನು ಹೊಂದಿದೆ. ತನ್ನ ಹತ್ತು ಹಲವು ಸೇವೆಗಳಿಗೆ ಮಾತ್ರವಲ್ಲದೇ, ಬೇರೆ ಕಂಪನಿಗಳ ದತ್ತಾಂಶವನ್ನೂ ತನ್ನ ಡೇಟಾಸೆಂಟರುಗಳಲ್ಲಿ ಕಾಪಿಡುತ್ತದೆ. ಮೊತ್ತಮೊದಲಿಗೆ ಗೂಗಲ್ ತಂದ ಬದಲಾವಣೆಯೇನೆಂದರೆ, ಕಡಿಮೆ ಬಾಡಿಗೆಗೆ ಜಾಗ ಸಿಗುತ್ತದೆ ಎಂಬ ಕಾರಣಕ್ಕೆ ಅರಿಝೋನಾ, ನೆವಾಡಾದಂತಹ ಮರುಭೂಮಿ ರಾಜ್ಯಗಳಲ್ಲಿ ಸ್ಥಾಪಿಸಿದ್ದ ತನ್ನ ಡೇಟಾಸೆಂಟರುಗಳನ್ನು ತಂಪಾದ ಹವಾಮಾನವಿರುವ ಜಾಗಗಳಿಗೆ ಬದಲಾಯಿಸಿದ್ದು. ಇಲ್ಲಿ ನೈಸರ್ಗಿಕವಾಗಿಯೇ ಹವಾಮಾನ ತಂಪಿರುವುದರಿಂದ ನೀವು ಆ ತಂಪುಗಾಳಿಯನ್ನೇ ಬಳಸಿ aircooled ಡೇಟಾಸೆಂಟರುಗಳ ಪರಿಕಲ್ಪನೆ ರೂಪಿಸಿದ್ದು. ಯಾವಾಗ ಬರೀ aircooling ಸಾಕಾಗುವುದಿಲ್ಲ ಎಂದೆನಿಸಿತೋ ಆಗ ನೀರನ್ನು ಉಪಯೋಗಿಸಿ watercooled ಡೇಟಾಸೆಂಟರುಗಳನ್ನಾಗಿ ಪರಿವರ್ತಿಸಿದ್ದು. ಇದಾದ ಆರೇತಿಂಗಳಿಗೆ ನೀರನ್ನು ಬಳಸಿ ತಂಪುಮಾಡುವಾಗ ಅದೇನೂ ತಾಜಾನೀರಾಗಬೇಕಿಲ್ಲ ಎಂಬುದನ್ನರಿತು, ಆ ಡೇಟಾಸೆಂಟರುಗಳಿರುವ ಊರುಗಳ ಅಕ್ಕಪಕ್ಕದ ಮುನಿಸಿಪಲ್ ಕೌನ್ಸಿಲುಗಳೊಂದಿಗೆ ಮಾತುಕಥೆಯಾಡಿ, ಆ ಊರು/ನಗರಗಳ ಕೊಳಚೆನೀರನ್ನೇ ಬಳಸಿ ಡೇಟಾಸೆಂಟರುಗಳನ್ನು ತಂಪಾಗಿಟ್ಟಿದ್ದು. ಇದಾದ ಮೇಲೆ, ತನ್ನೆಲ್ಲಾ ಕಚೇರಿಗಳಿಗೆ ಬರುವ ವಿದ್ಯುತ್ತನ್ನು ಸೌರ, ವಾಯು ಮತ್ತು ಜಲಸಂಪನ್ಮೂಲಗಳನ್ನೇ ಬಳಸಿ ವಿದ್ಯುತ್ ತಯಾರಿಸುವ ಕಂಪನಿಗಳಿಂದ ಮಾತ್ರವೇ ಕೊಳ್ಳಲಾರಂಭಿಸಿದ್ದು. ಈ ಮೇಲಿನ ಉಪಾಯಗಳಿಂದಾಗಿ ಉಳಿಸಿದಷ್ಟೇ ವಿದ್ಯುತ್ ಅನ್ನು ಬಳಸಿ, ಜೊತೆಗೆ ತನ್ನೆಲ್ಲಾ ಆಫೀಸುಗಳ ಮೇಲೆ ಸೋಲಾರ್ ಪ್ಯಾನೆಲ್ ಕೂರಿಸಿ ಅದರಿಂದ ಬಂದ ವಿದ್ಯುತ್ ಬಳಸಿ, ಉಪಯೋಗಿಸಿಕೊಂಡ ಆ ಕೊಳಚೆ ನೀರನ್ನೂ ಶುದ್ಧೀಕರಿಸಿ, ನೀರನ್ನೂ ಅದರಜೊತೆಗೆ ಸ್ವಲ್ಪಮಟ್ಟಿನ ವಿದ್ಯುತ್ತನ್ನೂ ಅದೇ ನಗರಗಳಿಗೆ ಮರಳಿ ಕೊಟ್ಟು, ಗೂಗಲ್ ಕೇವಲ ಕಾರ್ಬನ್ ನ್ಯೂಟ್ರಲ್ ಆಗಿದ್ದು ಮಾತ್ರವಲ್ಲದೆ, ಜಗತ್ತಿನ ಮೊದಲ ಕಾರ್ಬನ್ ನೆಗೆಟಿವ್ ಕಂಪನಿಯೂ ಆಯ್ತು. ಈಗ ಗೂಗಲ್ ತನ್ನ ಡೇಟಾಸೆಂಟರುಗಳನ್ನು ನೋಡಿಕೊಳ್ಳಲು ಡೀಪ್-ಮೈಂಡ್ ಎಂಬ ಕೃತಕಬುದ್ಧಿಮತ್ತೆಯನ್ನೂ ಅಭಿವೃದ್ಧಿಪಡಿಸಿದೆ. ಡೀಪ್-ಮೈಂಡ್ ಇಡೀ ಡೇಟಾಸೆಂಟರಿನಲ್ಲಿ ಎಲ್ಲಾ ಕಡೆಗೂ ಅನಗತ್ಯವಾಗಿ ತಂಪುಗಾಳಿ ತಳ್ಳದೇ, ಯಾವಾಗ ಯಾವ ಸರ್ವರಿನ ಮೇಲೆ ಲೋಡ್ ಹೆಚ್ಚಾಗಿ ಅದು ಬಿಸಿಯಾಗುತ್ತದೆ ಎಂದೆನಿಸುತ್ತದೆಯೋ ಆಗ ಮಾತ್ರ ಅಲ್ಲಿಗೆ ತಂಪುಗಾಳಿಹರಿಸುವ ಮೂಲಕ, ಮತ್ತಷ್ಟು ಅನಗತ್ಯ ವಿದ್ಯುತ್ ಬಳಕೆಯನ್ನು ಕಡಿತಗೊಳಿಸುತ್ತದೆ. ಎಂಟುವರ್ಷದಲ್ಲಿ ಗೂಗಲ್ಲಿನ ಡೇಟಾಸೆಂಟರುಗಳು 350% ಬೆಳೆದಿವೆ, ಆದರೆ ಒಟ್ಟು ಬಳಸುತ್ತಿದ್ದ ವಿದ್ಯುತ್ತಿನಲ್ಲಿ 50% ಕಡಿಮೆಯಾಗಿದೆ.

(೨) ಗೂಗಲ್ಲಿನ ಉಪಾಯಗಳ ಎಳೆಯನ್ನೇ ಮುಂದಿನ ಹಂತಕ್ಕೆ ಕೊಂಡೊಯ್ದ ಐಬಿಎಮ್, ಫೇಸ್ಬುಕ್, ಅಮೆಝಾನ್, ಟ್ವಿಟರುಗಳೂ ತಂತಮ್ಮ ಡೇಟಾಸೆಂಟರುಗಳನ್ನು ಸ್ವೀಡನ್, ನಾರ್ವೆ, ಫಿನ್ಲೆಂಡ್, ಐರ್ಲೆಂಡುಗಳಿಗೆ ಸ್ಥಳಾಂತರಿಸಿದವು. ಈ ದೇಶಗಳ ವಿದ್ಯುತ್ 90ರಿಂದ 100% ಸ್ವಚ್ಚ ರೀತಿಯಲ್ಲಿ ಅಂದರೆ ಪರಿಸರಕೆ ಅತ್ಯಂತ ಕಡಿಮೆ ಅಥವಾ ಯಾವುದೆ ಹಾನಿಯಿಲ್ಲದೇ ತಯಾರಾಗುತ್ತದೆ.

(೩) ಕೆಲ ಕಂಪನಿಗಳು ಸಮುದ್ರಮಧ್ಯದಲ್ಲಿ ಕೆಲಸಮಾಡದೇ ಡೀಫಂಕ್ಟ್ ಆಗಿರುವ ಆಯಿಲ್-ರಿಗ್’ಗಳನ್ನು ಬಾಡಿಗೆಗೆ ಪಡೆದು, ಅಲ್ಲಿ ವೈರ್ಲೆಸ್ ಡೇಟಾಸೆಂಟರುಗಳನ್ನು ಸ್ಥಾಪಿಸಿ, ಸಮುದ್ರದ ನೀರನ್ನೇ ಪಂಪ್ ಮಾಡಿ ಕೂಲಿಂಗಿಗೆ ಬಳಸಲಾರಂಭಿಸಿದರು. ಆದರೆ ಈ ರಿಗ್’ಗಳು ಅಂತರರಾಷ್ಟ್ರೀಯ ಸಮುದ್ರದಲ್ಲಿರುವುದರಿಂದ, ಅವುಗಳಲ್ಲಿರುವ ಡೇಟಾ ಯಾವ ದೇಶದ ಸುಪರ್ದಿಗೂ ಸೇರದೇ, ಯಾರು ಬೇಕಾದರೂ ಎಂತಹ ಡೇಟಾವನ್ನು ಕೂಡಾ ಸಂಗ್ರಹಿಸಿಡಬಹುದಾದ ಕಾನೂನು ತೊಡಕುಂಟಾಗುವುದನ್ನು ಅರಿತ ಕೆಲಸ CIA ಈ ಯೋಜನೆಗಳಿಗೆ ತಣ್ಣೀರೆರಚಿತು.

(೩) ಮೈಕ್ರೋಸಾಫ್ಟು ತನ್ನ ಪ್ರಾಜೆಕ್ಟ್ ನಾಟ್ವಿಕ್ ಎಂಬ ಯೋಜನೆಯಡಿಯಲ್ಲಿ ಹಡಗುಗಳಲ್ಲಿ ಸರಕುಸಾಗಿಸಲು ಉಪಯೋಗಿಸುವ ಶಿಪ್ಪಿಂಗ್ ಕಂಟೈನರುಗಳನ್ನು ಒಂದಕ್ಕೊಂದು ವೆಲ್ಡ್ ಮಾಡಿ, ದೊಡ್ಡದೊಂದು ಲೋಹದ ಬಾಕ್ಸ್ ಮಾಡಿ, ಅದರಲ್ಲಿ ಸರ್ವರುಗಳನ್ನು ಒಪ್ಪವಾಗಿ ಜೋಡಿಸಿ, ಇಡೀ ಬಾಕ್ಸನ್ನೇ ಸ್ಕಾಟ್ಲೆಂಡಿನ ಹತ್ತಿರದಲ್ಲಿ, ತಣ್ಣಗಿನ ಸಮುದ್ರದಡಿಯಲ್ಲಿ ಮುಳುಗಿಸಿಟ್ಟಿದೆ. ಯಾವುದೇ ಎಸಿಯ ಅಗತ್ಯವಿಲ್ಲದೇ, ಸರ್ವರುಗಳು ಸಮರ್ಥವಾಗಿಯೇ ಕಾರ್ಯನಿರ್ವಹಿಸುತ್ತಿವೆ. ಐದು ವರ್ಷ ಇದನ್ನು ಅಧ್ಯಯನ ಮಾಡಿ, ಮುಂದಿನ ವರ್ಷಗಳಲ್ಲಿ ದೊಡ್ಡ ರೂಪದಲ್ಲಿ ಪ್ರಾರಂಭಿಸುವ ಇರಾದೆ ಮೈಕ್ರೋಸಾಫ್ಟ್’ಗಿದೆ.

(೪) ನಾರ್ವೆಯ ಗ್ರೀನ್ ಮೌಂಟೆನ್ ಎಂಬ ಕಂಪನಿಯ ಹೊಸಾ DC1-Stavanger ಡೇಟಾಸೆಂಟರ್ NATOದ ಹಳೆಯದೊಂದು ಶಸ್ತ್ರಾಸ್ತ್ರ ಸಂಗ್ರಹಣಾ ಬಂಕರಿನಲ್ಲಿದೆ. ನೆಲದಡಿಯಲ್ಲಿ ಅಣುಬಾಂಬಿನ ಸ್ಪೋಟದಿಂದಲೂ ರಕ್ಷಣೆಸಿಗುವಷ್ಟು ಗಟ್ಟಿಯಾಗಿ NATO ಇದನ್ನು ಕಟ್ಟಿರುವುದರಿಂದ, ಇಲ್ಲಿರುವ ಸರ್ವರುಗಳು ಸದಾ ಕ್ಷೇಮ. ಬಂಕರಿನ ಪಕ್ಕದಲ್ಲಿಯೇ ಹರಿಯುತ್ತಿರುವ ಫ್ಯೋರ್ದ್ (Fjord – ಬೆಟ್ಟಗಳ ನಡುವಿನಲ್ಲಿ ಒಂದಾನೊಂದುಕಾಲದಲ್ಲಿ ಹಿಮನದಿಯಿದ್ದ ತಗ್ಗುಪ್ರದೇಶದಲ್ಲಿ ನುಗ್ಗಿರುವ ಸಮುದ್ರ. ನಾರ್ವೆ, ಫಿನ್ಯಾಂಡುಗಳಲ್ಲಿ ಹೆಚ್ಚಾಗಿ ಕಾಣಬರುತ್ತದೆ) ಒಂದರಿಂದ ಗುರುತ್ವಬಲವನ್ನುಪಯೋಗಿಸಿಕೊಂಡು 6-10 ಡಿಗೀ ಸೆಂಟಿಗ್ರೇಡಿನಷ್ಟು ತಣ್ಣಗಿನ ನೀರನ್ನು ಡೇಟಾಸೆಂಟರಿನ ಸುತ್ತಲೂ ಹರಿಸಿ, ಅದನ್ನು ತಂಪಾಗಿಸಿ, ಮತ್ತೆ ನೀರನ್ನು ಮರಳಿ ಫ್ಯೋರ್ದಿಗೇ ಕೊಟ್ಟು, ಪುಗಸಟ್ಟೆ ಕೆಲಸ ಮಾಡಿಸಿಕೊಂಡಿದ್ದಾರೆ. ಜೊತೆಗೇ ಇಡೀ ಡೇಟಾಸೆಂಟರನ್ನು ಗಾಳಿಯಾಡದಂತೆ ಏರ್-ಟೈಟ್ ಮಾಡಿ ಆಮ್ಲಜನಕದ ಕೊರತೆಯುಂಟಾಗುವಂತೆ ಮಾಡಿರುವುದರಿಂದ ಅಲ್ಲಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಯೇ ಇಲ್ಲ. ಇದರಿಂದ ಬೆಂಕಿ ನಂದಿಸುವ ಸಿಸ್ಟಮಿನ ಮೇಲಿನ ಲಕ್ಷಾಂತರ ಡಾಲರ್ ಹೂಡಿಕೆಯೂ ಉಳಿದಿದೆ.

(೫) ದೊಡ್ಡಕಂಪನಿಗಳಿಗೇನೋ ದೊಡ್ಡ ಸರ್ವರ್’ಗಳು ಬೇಕು. ಈ ಸರ್ವರುಗಳು ಒಂದೊಂದೂ ಸಹ 75-150 ವ್ಯಾಟ್’ನಷ್ಟು ವಿದ್ಯುತ್ ಕುಡಿಯುತ್ತವೆ. ಕಂಪನಿ ಸಣ್ಣದಿದ್ದರೆ, ಅದರ ಡೇಟಾಸೆಂಟರುಗಳ ಸರ್ವರುಗಳೂ ಸಣ್ಣದಾಗುವಂತಿದ್ದರೆ? ಹೆಚ್-ಪಿ/ಇಂಟೆಲ್ಲಿನ ದೊಡ್ಡ ಸರ್ವರ್ ಬದಲು ರಾಸ್ಪ್ಬೆರ್ರಿ-ಪೈ ಕೂರಿಸುವಂತಾದರೆ? ರಾಸ್ಪ್ಬೆರ್ರಿ-ಪೈ ಎಂಬುವು ಸಣ್ಣ ಸಿಂಗಲ್-ಬೋರ್ಡ್ ಕಂಪ್ಯೂಟರ್ಗಳು. ಇವು ಬರೇ 3 ವ್ಯಾಟ್ ವಿದ್ಯುತ್ತಿನಲ್ಲಿ, ನಿಮ್ಮದೊಂದು ಲ್ಯಾಪ್ಟಾಪ್ ಅಥವಾ ಪಿಸಿ ಮಾಡುವಷ್ಟೇ ಕೆಲಸ ಕೆಲಸಮಾಡಬಲ್ಲವು. ಸಣ್ಣಕಂಪನಿಗಳಿಗೆ ಸರ್ವರುಗಳನ್ನೂ ಇದೇ ರೀತಿ ಬಳಸಲು ಸಾಧ್ಯವಾದರೆ!? PC Extreme ಎಂಬ ಕಂಪನಿ ಈ ನಿಟ್ಟಿನಲ್ಲೂ ಹೆಜ್ಜೆಯಿಟ್ಟಿದೆ. ಸಣ್ಣಮಟ್ಟಿನ ಯಶಸ್ಸನ್ನೂ ಸಾಧಿಸಿದೆ.

(೬) ಉತ್ತರದ್ರುವದ ಬಳಿಯ ದೇಶವಾದ ಸ್ವೀಡನ್ನಿನ ಡಿಜಿಪ್ಲೆಕ್ಸ್ ಎಂಬ ಕಂಪನಿ ಈ ಡೇಟಾಸೆಂಟರಿನ ವ್ಯವಹಾರದ ಮಾದರಿ(business model)ಯನ್ನೇ ಉಲ್ಟಾ ಮಾಡಿ, ಸರ್ವರುಗಳು ಉತ್ಪಾದಿಸುವ ಶಾಖವನ್ನು ‘ಸಮಸ್ಯೆ’ ಎಂದು ಪರಿಗಣಿಸದೇ, ಆ ಶಾಖವನ್ನು ಅಕ್ಕಪಕ್ಕದ ಕಾಲೋನಿಯ ಮನೆಗಳನ್ನು ಬೆಚ್ಚಗಿಡಲು ಮಾರುತ್ತಿದೆ. ಗ್ರಿಡ್’ನಿಂದ ದುಬಾರಿ ವಿದ್ಯುತ್ ಬಳಸಿ ಮನೆಯನ್ನು ಬೆಚ್ಚಗಿಡುವ ಬದಲು, ಹತ್ತರಷ್ಟು ಕಮ್ಮಿಬೆಲೆಯಲ್ಲಿ ಸಿಗುತ್ತಿರುವ ಬಿಸಿಗಾಳಿಯನ್ನೇ ಬಳಸಿ, ಪರಿಸರಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ಡಿಜಿಪ್ಲೆಕ್ಸ್ 2020ಕ್ಕೆ ಸುಮಾರು 10,000 ಮನೆಗಳಿಗೆ ಶಾಖ ಒದಗಿಸುವ ಯೋಜನೆ ಹೊಂದಿದೆ.

ಹೀಗೆ ವಿಜ್ಞಾನ ಇವತ್ತು ನಾವಂದುಕೊಂಡದ್ದಕಿಂತಲೂ ವೇಗವಾಗಿ ನಮ್ಮ ಬದುಕನ್ನು ಸುಂದರವಾಗಿಸುತ್ತಿದೆ. ಹೌದು ನಮ್ಮಂತಹಾ ಸಾಮಾನ್ಯರು ಚಾರ್ಜಿಗೆ ಹಾಕಿದ ಫೋನು 100% ಚಾರ್ಜ್ ಆದರೂ ತೆಗೆಯುವುದಿಲ್ಲ. ಅದರಿಂದ ಸಣ್ಣದೊಂದು ಮೊತ್ತದ ವಿದ್ಯುತ್ ಪೋಲಾಗುವುದು ಹೌದು. ಅದರಿಂದ ಪರಿಸರಕ್ಕೆ ಎಲ್ಲೋ ಒಂದು ಕಡೆ ಹಾನಿಯಾಗುವುದೂ ಹೌದು. ಆದರೆ ಅದೇ ಸಮಯಕ್ಕೆ ವಿಶ್ವದಾದ್ಯಂತ ಈ ಟೆಕ್ ಕಂಪನಿಗಳು ನಮ್ಮ ಅರಿವಿಗೆ ಬಾರದಂತೆಯೇ ಎಷ್ಟೋ ಹೊಸಹೊಸ ವಿಧಾನಗಳಿಂದ ವಿದ್ಯುತ್ ಉಳಿಸುತ್ತಿದ್ದಾರೆ. ನಿಧಾನಕ್ಕೆ ಈ ವಿಧಾನಗಳೇ ನಮ್ಮ ನಿಮ್ಮ ಮನೆಗೂ ಬಂದಿಳಿಯುತ್ತೆ. ನಾನು ಮತ್ತು ನೀವೂ ಸಹ ಸಂಪೂರ್ಣ ಸ್ವಚ್ಚ ವಿದ್ಯುತ್ (ಅಂದರೆ ವಾಯು, ಸೌರ ಅಥವಾ ಜಲಮೂಲಗಳಿಂದಷ್ಟೇ ಉತ್ಪನ್ನವಾದ ಹಾಗೂ ಪರಿಸರಕ್ಕೆ ಯಾವ ಹಾನಿಯನ್ನೂ ಮಾಡದ) ಮಾತ್ರವೇ ಬಳಸುವ ನಿರ್ಧಾರ ಮಾಡಿದರೂ, ನಮ್ಮ ನಾಳೆಗಳು ಮತ್ತಷ್ಟು ಸುಂದರವಾಗಲು ಸಾಧ್ಯ.

ಆದರೆ ಇದಕ್ಕೆ ತಕ್ಕನಾಗಿ ನಮ್ಮ ಸರ್ಕಾರಗಳೂ ಈ ನಿಟ್ಟಿನಲ್ಲಿ ಯೋಚಿಸಬೇಕು. ಮೊನ್ನೆ ಒಂದು ಲೇಖನ ಓದಿದೆ. ಅಮೇರಿಕ ಒರೆಗಾನ್ ರಾಜ್ಯದ ಪೋರ್ಟ್ಲ್ಯಾಂಡ್ ನಗರ ‘ಲೂಸಿಡ್ ಎನರ್ಜಿ’ ಎಂಬ ಕಂಪನಿಯೊಂದಿಗೆ ಕೈಜೋಡಿಸಿ ತನ್ನ ನೀರುಸರಬರಾಜು ಮತ್ತು ಕೊಳಚೆ ಜಾಲದ ಪೈಪುಗಳನ್ನು ಲೂಸಿಡ್ ಎನರ್ಜಿ ಕಂಪನಿಯ ಪೈಪುಗಳೊಂದಿಗೆ ಬದಲಾಯಿಸಿತು. ಇಡೀ ನಗರದ್ದಲ್ಲ, ಪ್ರಯೋಗಾತ್ಮಕವಾಗಿ ನಗರದ ಒಂದು ಭಾಗದಲ್ಲಿ ಸಧ್ಯಕ್ಕೆ ಹೊಸಾ ಪೈಪುಗಳನ್ನು ಅಳವಡಿಸಲಾಗಿದೆ. ಈ ಪೈಪುಗಳಲ್ಲಿ ಏನು ವಿಶೇಷ ಅಂತೀರಾ? 44 ಇಂಚಿನ ಈ ಪೈಪುಗಳನ್ನು ಸ್ವಲ್ಪವೇ ಸ್ವಲ್ಪ ಅಂದರೆ ಕನಿಷ್ಟ 2 ಡಿಗ್ರೀ ಓಟದ ಇಳಿಜಾರಿನಲ್ಲಿ ಅಳವಡಿಸಿದರೂ ಸಾಕು. ಇದರೊಳಗೆ ಅಷ್ಟಷ್ಟು ಅಡಿ ದೂರದಲ್ಲಿ ಜೋಡಿಸಿರುವ ಟರ್ಬೈನುಗಳು ವಿದ್ಯುತ್ಚಕ್ತಿಯನ್ನು ಉತ್ಪಾದಿಸುತ್ತವೆ!! ಹೆಂಗೆ ಐಡಿಯಾ!? ನೀರನ್ನು ಎಲ್ಲೂ ಪಂಪ್ ಮಾಡುವ ಅಗತ್ಯವಿಲ್ಲ. ಸುಮ್ಮನೇ ಹರಿಫು ಹೋಗುವ ನೀರಿನ ಓಟವನ್ನೇ ಬಳಸಿಕೊಂಡು ಹತ್ತು ಮೀಟರ್ ಓಟದಲ್ಲಿ ಒಂದು ವ್ಯಾಟ್ ವಿದ್ಯುತ್ ಉತ್ಪಾದನೆಯಾದರೂ ಲಾಭವೇ! ಯೋಚನಾಲಹರಿಯಲ್ಲಿ ಬಂದ ಈ ಸಣ್ಣದೊಂದು ಬದಲಾವಣೆ, ಸಧ್ಯಕ್ಕೆ 150 ಮನೆಗಳಿಗೆ ವಿದ್ಯುತ್ ಒದಗಿಸುತ್ತಿದೆ. ಸಂಪೂರ್ಣ ಸ್ವಚ್ಚ ವಿದ್ಯುತ್. ಗಾಳಿಯಿಲ್ಲ ಅಂತಾ ಟರ್ಬೈನ್ ನಿಲ್ಲುವ ಹೆದರಿಕೆಯಿಲ್ಲ, ಬರಗಾಲ ಬಂತು ಅಂತಾ ಅಣೆಕಟ್ಟು ಖಾಲಿಯಾಗುವ ತಲೆಬಿಸಿಯಿಲ್ಲ. ಮನೆಗಳಿಗೆ ನೀರು ಹೋದಾಗಲೆಲ್ಲಾ, ಮನೆಗಳಿಂದ ಕೊಳಚೆನೀರು ಹೊರಬಂದಲ್ಲೆಲ್ಲಾ ವಿದ್ಯುತ್ ಉತ್ಪಾದನೆ!

ಹೀಗೆ ಸರ್ಕಾರ-ಖಾಸಗೀ ಸಂಸ್ಥೆಗಳು-ಸಾರ್ವಜನಿಕರು ಸೇರಿದರೆ ಪರಿಸರವನ್ನು ಸ್ವಚ್ಚವಾಗಿಸುವುದು ದೊಡ್ಡ ವಿಷಯವೇನಲ್ಲ. ಅದಕ್ಕೊಬ್ಬ ನಾಯಕನ ಸಂಕಲ್ಪ, ಸೃಜನಶೀಲ ಪ್ರತಿಭೆಯೊಂದರ ಪ್ರಚೋದನೆ, ಜೊತೆಗೆ ಜನರ ಕೊಡುಗೆಯಿದ್ದರೆ ಸಾಕು.

(ಈಗ ಇದಕ್ಕೆ ಕಮೆಂಟು ಮಾಡಿದರೆ, ಶೇರ್ ಮಾಡಿದರೆೆ ಅಲ್ಲೆಲ್ಲೋ ವರ್ಡ್ಪ್ರೆಸ್ಸಿನ ಸರ್ವರ್ ಮೇಲೆ ಹೊರೆಬೀಳುತ್ತೆ ಅಂತಾ ಅಂಜಬೇಡಿ. ನೀವು ಏನು ಮಾಡದೇ ಇದ್ದರೂ ಅಲ್ಲಿ ಅಷ್ಟೇ ವಿದ್ಯುತ್ ಬಳಕೆಯಾಗುತ್ತಿರುತ್ತದೆ. ಹಾಗಾಗಿ ಯಾವ ಅಂಜಿಕೆಯೂ ಇಲ್ಲದೇ ಕಮೆಂಟು ಮಾಡಿ, ಶೇರ್ ಮಾಡಿ 🙂 )

ಹೆಣ್ಣು ‘ರಸಭರಿತ’ವಾದಾಗ

ದೆಹಲಿಯಲ್ಲಿ ಕೆಲಸಮಾಡುವಾಗ ಒಬ್ಳು ಒಡಿಸ್ಸಿ ಹುಡ್ಗಿ ನಮ್ಮಾಫೀನ ಆಫೀಸ್ ಸರ್ವೀಸಸ್ ಡೀಪಾರ್ಟ್ಮೆಂಟಿನಲ್ಲಿದ್ಲು. ನಾನು ಕೆಲಸಕ್ಕೆ ಸೇರಿದ ಮೊದಲ ದಿನ ಬಂದು, ನನ್ನ ನಾಯಿಬೆಲ್ಟು (ಐಡಿ ಕಾರ್ಡು ಕಣ್ರೀ), ಆಕ್ಸೆಸ್ ಕಾರ್ಡು, ಮೊಬೈಲ್ ಫೋನು, ಕಾರ್ ಪಾರ್ಕಿಂಗ್ ಸ್ಟಿಕ್ಕರು ಎಲ್ಲಾ ಕೊಡೋಕೆ ಬಂದಿದ್ಲು. ಆಕೆಯ ಹೆಸರೇನು ನೋಡೋಣ ಅಂತಾ ಹಾಗೇ ಸ್ವಾಭಾವಿಕವಾಗಿ ಅವಳ ಕತ್ತಿನಲ್ಲಿ ನೇತಾಡ್ತಿದ್ದ ಐಡಿಕಾರ್ಡಿನ ಮೇಲೆ ಕಣ್ಣಾಡಿಸಿದೆ. ಎದೆ ಧಸಕ್ಕಂತು!

ಯಾಕಂದ್ರೆ ಅವಳ ಹೆಸರು “ರಸಭರಿತ” ಅಂತಾ ಇತ್ತು!!

ಕಣ್ಣುಜ್ಜಿ ನೋಡ್ಕಂಡೆ. ಆ ಕಾರ್ಡು ಇದ್ದ ಜಾಗ, ಆ ಹೆಸರು ಎರಡೂ ನೋಡಿ, ತಲೆಯಲ್ಲಿ ಏನೇನೋ ಈಕ್ವೇಷನ್ನುಗಳೆಲ್ಲಾ ಕ್ರಿಯೇಟ್ ಆಗಿ ಮೈಯೆಲ್ಲಾ ಗಡಗಡ ಅಂತು. “ಇದೆಂತಾ ಹೆಸರು!? ರಸಭರಿತ ಅಂತೆ! ರಸಭರಿತವೇ ಇರಬಹುದು. ಹಾಗಂತಾ ಅದನ್ನ ಹೇಳ್ಕಂಡು ತಿರುಗಾಡ್ಬೇಕಾ!? ಯಾವ ಅಪ್ಪ ಅಮ್ಮ ಇಂತಾ ಹೆಸರಿಡ್ತಾರೆ!? ಇದೇನಾದ್ರೂ ಆಫೀಸಿಗೋಸ್ಕರ ಅಂತಾ ಇವ್ಳೇ ಇಟ್ಕಂಡ ಹೆಸ್ರಾ? ಎಂತಾ ಕಂಪನಿ ಸೇರ್ಕಂಡುಬಿಟ್ನಪ್ಪಾ! ಇಲ್ಲೇನಾದ್ರೂ ಮನುಷ್ಯರ ಹೆಸರಿನ ಬದಲು ಅನ್ವರ್ಥನಾಮಗಳನ್ನೇನಾದ್ರೂ ಪ್ರಿಂಟ್ ಮಾಡೋ ಅಭ್ಯಾಸವಿದ್ಯಾ!? ಈಗೆಲ್ಲಾ ಇಂತ ಇನಿಷಿಯೇಟಿವ್ಗಳನ್ನ ಕೂಲ್ ಅಂತಾ ಬೇರೆ ಕರೀತಾರೆ” ಅಂತೆಲ್ಲಾ ಸರಸರನೆ ಆಲೋಚನೆಗಳು ಓಡಿದ್ವು. ಅನ್ವರ್ಥನಾಮದ ಗಾಬರಿಯಲ್ಲೇ “ನನ್ನ ಕಾರ್ಡಿನಲ್ಲಿನಾದ್ರೂ ನನ್ನ ಹೆಸರು “ಸಿಳ್ಳೇಕ್ಯಾತ” ಅಂತ್ಲೋ, ನಾನು ಕಪ್ಪಗೆ ಉದ್ದಕ್ಕೆ ಇದ್ದದ್ದರಿಂದ “ಕರಿಬಾಳೆಕಾಯಿ” ಅಂತ್ಲೋ, “ಕಾಳಿಂಗನ್ಹಾವು” ಅಂತೇನಾದ್ರೂ ಪ್ರಿಂಟಾಗಿದ್ಯಾ!?” ಅಂತಾ ಚೆಕ್ ಮಾಡ್ದೆ. ಇಲ್ಲ..ರಾಘವೇಂದ್ರ ಅಂತಲೇ ಇತ್ತು. ಸಮಾಧಾನವೂ ಆಯ್ತು.

ನನ್ನ ಗಡಿಬಿಡಿ ನೋಡಿ ಮಿಸ್.ರಸಭರಿತ “ಕ್ಯಾ ಹುವಾ! ಆಲ್ ವೆಲ್? ಯುವರ್ ನೇಮ್ ಈಸ್ ಪ್ರಿಂಟೆಡ್ ರಾಂಗ್? ಶುಡ್ ಇಟ್ ಬಿ ರಾಘವನ್?” ಅಂದ್ಳು. ಸ್ವಲ್ಪ ಸುಧಾರಿಸಿಕೊಂಡು “ಇಲ್ಲಾ ತಾಯಿ. ಸರ್ಯಾಗಿಯೇ ಪ್ರಿಂಟಾಗಿದೆ. ಥ್ಯಾಂಕ್ಯೂ ಥ್ಯಾಂಕ್ಯೂ. ನಿಮ್ಮನ್ನ ಮೊದಲ ಸಲ ನೋಡಿದ್ದು ನಾನು. ಅಂಡ್ ಯೂ ಆರ್…” ಅಂತಾ ಕೈ ಚಾಚಿದೆ.

“ಓಹ್ ಸ್ಸಾರಿ! ಐ ಆಮ್ ಸಬರಿತಾ. ಯೂ ಆಲ್ರೆಡೀ ನೋ ಐ ವರ್ಕ್ ವಿತ್ ಆಫೀಸ್ ಸರ್ವೀಸಸ್. ನೈಸ್ ಮೀಟಿಂಗ್ ಯೂ. ಕಾಲ್ ಮಿ ಆನ್ 2308 ಇಫ್ ಯೂ ನೀಡ್ ಎನಿಥಿಂಗ್” ಅಂದು ಕೈಕುಲುಕಿ ಹೋದ್ಳು.

ಮೆದುಳಲ್ಲೆಲ್ಲೋ ಒಂದ್ಕಡೆ “ಓಹ್..ಸಬರಿತಾ..ಆರ್ ಎ ಸಬರಿತಾ…R A SABARITA…ಸಧ್ಯ” ಅಂತಾ ನಿಟ್ಟುಸಿರೂ ಕೇಳ್ತು. ಇನೊಂದ್ಕಡೆಯಿಂದಾ “ಥತ್….ಕೊಳಕು ನನ್ಮಗ್ನೇ! ಸಬರಿತಾ ಅನ್ನೋದನ್ನ ರಸಭರಿತ ಅಂತಾ ಏನೇನೋ ಯೋಚಿಸಿಬಿಟ್ಯಲ್ಲೋ…ಫಟಾರ್!” ಅಂತ ಶಬ್ದ ಬಂತು. ತಲೆ ಮುಟ್ಟಿ ನೋಡಿಕೊಂಡೆ. “ಅಯ್ಯೋ! ನನ್ ತಪ್ಪೇನಿದೆ ಇದ್ರಲ್ಲಿ!? ಎಲ್ಲಾ “ಇಂಗ್ಳೀಷಿನ ತಪ್ಪು” ಅಂತಾ ಸಮಾಧಾನ ಮಾಡ್ಕೊಳ್ತಾ ಅಲ್ಲೇ ತಲೆ ನೀವಿಕೊಂಡೆ”

#ದೇವ್ರಾಣೆ_ನಿಜ

ನಿಂದಾಸ್ತುತಿ – 3

ಇವತ್ತಿನ ನಿಂದಾಸ್ತುತಿ ನಮ್ಮ ರಾಜ್ಯದ ದಾಸಪ್ಪನವರದ್ದು. ದಾಸಪ್ಪನವ್ರು ಗೊತ್ತಿಲ್ವೇ!? ಹೇಳ್ತೀನಿ ಕೇಳಿ. ದಾಸಪ್ಪನವರು ಹುಟ್ಟಿದ್ದು ರಾಯಚೂರು ಜಿಲ್ಲೆ, ಮಾನ್ವಿ ತಾಲೂಕಿನ ಚೀಕಲಪರವಿಯಲ್ಲಿ, 1682ರಲ್ಲಿ. ತಂದೆ ಶ್ರೀನಿವಾಸಪ್ಪ ಮತ್ತು ತಾಯಿ ಕೂಸಮ್ಮ. ಕಡುಬಡತನದ ಬ್ರಾಹ್ಮಣ ಕುಟುಂಬ. ಚಿಕ್ಕವಯಸ್ಸಿನಲ್ಲೇ ಮನೆಬಿಟ್ಟು, ದೇಶಸುತ್ತಿ ಕಾಶಿಯಲ್ಲಿ ನಾಲ್ಕು ವರ್ಷ ಸಂಸ್ಕೃತ ವಿದ್ಯಾಭ್ಯಾಸವನ್ನು ಪಡೆದುಬಂದು, ಹುಟ್ಟೂರಿನಲ್ಲೇ ನೆಲೆಸುತ್ತಾರೆ. ಹದಿನಾರನೆಯ ವಯಸ್ಸಿನಲ್ಲಿ ಅರಳಮ್ಮ ಎನ್ನುವವರನ್ನು ವಿವಾಹವಾಗಿ ಗೃಹಸ್ಥಾಶ್ರಮ ಸ್ವೀಕರಿಸುತ್ತಾರೆ. ಬಡತನದ ಕಾರಣದಿಂದ ಇಲ್ಲಿ ಸಂಸಾರನಡೆಸಲಾಗದೇ, ಮರಳಿ ವಾರಣಾಸಿಗೆ ತೆರಳಿದರು ಅಂತಾ ಕಥೆಗಳು ಹೇಳುತ್ತವೆ.

ಒಂದು ದಿನ ಕನಸಿನಲ್ಲಿ ಪುರಂದರದಾಸರು ಕಾಣಿಸಿಕೊಂಡು “ಹರಿದಾಸ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗು” ಎಂದು ಹೇಳಿದರೆಂದೂ, “ವಿಜಯ ವಿಟ್ಟಲ” ಎಂಬ ಅಂಕಿತನಾಮವನ್ನೂ ಅವರೇ ಕೊಟ್ಟರೆಂದೂ ದಾಸಪ್ಪನವರು ಹೇಳಿಕೊಳ್ಳುತ್ತಾರೆ. ಹೀಗೆ ನಮ್ಮ ದಾಸಪ್ಪನವರು, ವಿಜಯದಾಸರಾದರು. ಹರಿದಾಸರಾಗಿ, ಮಧ್ವಾಚಾರ್ಯರ ತತ್ವಗಳನ್ನು ಭೋದಿಸುತ್ತಾ, ಕರ್ನಾಟಕ ಸಂಗೀತಕ್ಕೆ ಮತ್ತು ಕನ್ನಡ ಸಾಹಿತ್ಯಕ್ಕೆ ಅನರ್ಘ್ತವಾಗ ಕೊಡುಗೆಗಳನ್ನು ನೀಡಿದರು. ಸುಮಾರು 25,000ಕ್ಕೂ ಹೆಚ್ಚು ಸುಳಾದಿ, ಉಗಾಭೋಗ ಮತ್ತು ಕೀರ್ತನೆಗಳನ್ನು ವಿಜಯದಾಸರು ರಚಿಸಿದ್ದಾರೆ. ವಿಶೇಷವಾಗಿ ಪಂಚರತ್ನ ಸುಳಾದಿಗಳಲ್ಲಿ ವಿಜಯದಾಸರದ್ದು ಎತ್ತಿದ ಕೈ.

ದಾಸಪಂಥದ ಪ್ರಮುಖರಾದ ಹೆಳವನಕಟ್ಟೆ ಗಿರಿಯಮ್ಮ, ಜಗನ್ನಾಥ ದಾಸರು, ಪ್ರಸನ್ನ ವೆಂಕಟದಾಸರ ಸಮಕಾಲೀನರಾದ ವಿಜಯದಾಸರ ಪ್ರಮುಖ ಶಿಷ್ಯರಲ್ಲಿ ಗೋಪಾಲದಾಸರ ಹೆಸರು ಮುಂಚೂಣಿಯಲ್ಲಿರುತ್ತದೆ.

“ಪವಮಾನ ಪವಮಾನ ಜಗದ ಪ್ರಾಣಾ ಸಂಕರುಷಣಾ”, “ಹರಿ ಸರ್ವೊತ್ತಮ ವಾಯು ಜೀವೊತ್ತಮ”, “ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ” ಮುಂತಾದ ದಾಸರಪದಗಳಿಂದ ನಮ್ಮ ನಡುವೆ ಸದಾ ನೆನಪಿನಲ್ಲುಳಿಯುವ ವಿಜಯದಾಸರು ಶ್ರೀನಿವಾಸನ ದರ್ಶನಕ್ಕೆಂದು ತಿರುಪತಿಗೆ ಹೋದಾಗ, ಅಲ್ಲಿ ದೇವರ ದರ್ಶನ ಸಿಗದೆ ನಿರಾಶರಾಗಿ ತಿರುಪತಿಯ ವೆಂಕಟೇಶನನ್ನು ತರಾಟೆಗೆ ತೆಗೆದುಕೊಳ್ಳುವ ಕುತೂಹಲಕಾರೀ ನಿಂದಾಸ್ತುತಿ ಇಲ್ಲಿದೆ.

ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ
ಕೊಳಗದಲಿ ಹಣಗಳನು ಅಳೆದು ಕೊಂಬ
ಇಲ್ಲ ಕಾಸು ಎಂದು ಸುಳ್ಳು ಮಾತಾಡಿದರೆ
ಎಲ್ಲವನು ಕಸುಕೊಂಬ ಕಳ್ಳದೊರೆಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|

ತನ್ನ ನೋಡೆನೆಂದು ಮುನ್ನೂರು ಗಾವುದ ಬರಲು
ತನ್ನ ಗುಡಿಯ ಪೊಕ್ಕ ಜನರಿಗೆಲ್ಲ
ಹೊನ್ನು ಹಣಗಳ ಕಸಿದು ತನ್ನ ದರ್ಶನ ಕೊಡದೆ
ಬೆನ್ನೊಡೆಯ ಹೊಯ್ಯಿಸುವ ಅನ್ಯಾಯಕಾರಿಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|

ಗಿಡ್ಡ ಹಾರುವನಾಗಿ ಒಡ್ಡಿ ದಾನವ ಬೇಡಿ
ದುಡ್ಡು ಕಾಸುಗಳಿಗೆ ಕೈಯ ನೀಡಿ
ಅಡ್ಡ ಬಿದ್ದ ಜನರ ವಿಡ್ದೂರಗಳ ಕಳೆದು
ದೊಡ್ಡವರ ಮಾಳ್ಪ ಸಿರಿ ವಿಜಯ ವಿಠಲಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|

(ಸುಳಾದಿ – ಸಾಮಾನ್ಯವಾಗಿ ಕರ್ನಾಟಕ ಸಂಗೀತದಲ್ಲಿ, ರಚನೆಯೊಂದನ್ನು ಹಾಡುವಾಗ, ಇಡೀ ಹಾಡಿನಲ್ಲಿ ಒಂದೇ ರಾಗ ಮತ್ತು ಒಂದೇ ತಾಳ ಇರುವುದು ಸಾಮಾನ್ಯ. ಆದರೆ ಸುಳಾದಿಗಳಲ್ಲಿ ರಾಗವೊಂದೇ ಇದ್ದು, ತಾಳಗಳು ಬದಲಾಗುತ್ತಾ ಸಾಗುತ್ತವೆ. ಕೆಲವೊಮ್ಮೆ ರಾಗಗಳೂ ಬದಲಾಗುವುದುಂಟು. ಸುಳಾದಿಗಳನ್ನು ಹಾಡಲು ಸಂಗೀತದಲ್ಲಿ ಉನ್ನತ ಪಾಂಡಿತ್ಯ ಅತ್ಯಗತ್ಯ. ಸುಳಾದಿಗಳ ಬಗ್ಗೆಯೇ ಒಂದಿಡೀ ಲೇಖನವನ್ನೇ ಬೇರೆಯಾಗಿ ಬರೆಯಬಹುದು)

ನಿಂದಾಸ್ತುತಿ – 2

ನಿಂದಾಸ್ತುತಿಯಲ್ಲಿ ಇವತ್ತು ತೆಲುಗಿನ ಒಂದು ಕೃತಿ.

ಭದ್ರಾಚಲ ರಾಮದಾಸು, ಹದಿನೇಳನೇ ಶತಮಾನದಲ್ಲಿ ಇಂದಿನ ಆಂಧ್ರದ ಭದ್ರಾಚಲದ ಹತ್ತಿರವಿರುವ ನೆಲಕೊಂಡಪಲ್ಲಿಯಲ್ಲಿ ಜೀವಿಸಿದ್ದ ವಾಕ್ಗೇಯಕಾರರು. ಭಕ್ತಿಪಂಥದ ಹೆಚ್ಚಿನ ದಾಸರಂತೆ, ರಾಮದಾಸರೂ ಸಹ ವಿಷ್ಣುವಿನ ಅವತಾರಗಳ ಭಕ್ತರು. ರಾಮಾವತಾರ ಅವರ ನೆಚ್ಚಿನ ವಿಷ್ಣುರೂಪ. ಅವರ ಒಂದೆರಡು ಕೀರ್ತನೆಗಳನ್ನು ಬಿಟ್ಟರೆ ಉಳಿದೆಲ್ಲವೂ ರಾಮನನ್ನೇ ಸ್ತುತಿಸುವಂತವು.

ರಾಮದಾಸರ ಮೂಲ ಹೆಸರು ಕಂಚರ್ಲಾ ಗೋಪಣ್ಣ. 1620-1680ರ ನಡುವೆ ಜೀವಿಸಿದ ಗೋಪಣ್ಣರು, ವೃತಿಯಲ್ಲಿ ತಹಸೀಲ್ದಾರ್. ಕುತುಬ್ ಶಾಹಿ ಸುಲ್ತಾನರಿಗೆ ‘ಪಲ್ವಾಂಚನ ಪರಗಣ’ದ ಹಳ್ಳಿಗಳಿಂದ ರಾಜಸ್ವ ಸಂಗ್ರಹಣೆ ಮಾಡುತ್ತಲೇ ತಮ್ಮ ರಾಮಭಕ್ತಿ ಮುಂದುವರಿಸಿದವರು. ಶಿಥಿಲಾವಸ್ಥೆಯಲ್ಲಿದ್ದ ಭದ್ರಾಚಲದ ಸೀತಾರಾಮ ದೇವಸ್ಥಾನದ ಜೀರ್ಣೋದ್ಧಾರ ಮಾಡಿಸಿದ ಮಹಾನುಭಾವ.

ರಾಮನ ಮೇಲೆ ಸಾವಿರಾರು ಕೀರ್ತನೆಗಳನ್ನು ಬರೆದಿದ್ದಾರೆ ಎನ್ನಲಾಗುತ್ತದೆಯಾದರೂ, ಲಭ್ಯವಿರುವ ಕೀರ್ತನೆಗಳ ಸಂಖ್ಯೆ ತೀರಾ ಕಮ್ಮಿ. ಕರ್ನಾಟಕ ಸಂಗೀತಕ್ಕೆ ಮಹಾನ್ ಕೊಡುಗೆ ನೀಡಿದ ಶ್ಯಾಮಾಶಾಸ್ತ್ರಿಗಳು, ತ್ಯಾಗರಾಜರು, ಕ್ಷೇತ್ರಯ್ಯನವರ ಮಟ್ಟದಲ್ಲೇ ಗುರುತಿಸಬಹುದಾದ ಮಹಾನ್ ಚೇತನ, ಭದ್ರಾಚಲ ರಾಮದಾಸು.

ಐವತ್ತರ ದಶಕದಲ್ಲಿ, ರಾಮದಾಸರ ಕೀರ್ತನೆಗಳಿಗೆ ಮತ್ತೆ ಜೀವತುಂಬಿದವರು ‘ಸಂಗೀತ ಕಲಾನಿಧಿ’ ಡಾ. ಬಾಲಮುರಳಿಕೃಷ್ಣ. ಅವರ ಕಂಠಸಿರಿಯಲ್ಲಿ ಪ್ರಸಿದ್ಧವಾದ ರಾಮದಾಸರ ಕೃತಿಗಳಲ್ಲೊಂದು “ಫಲುಕೇ ಬಂಗಾರಮಾಯಿನಾ”. ಇದನ್ನು ನೂರಕ್ಕೆ ನೂರು ನಿಂದಾಸ್ತುತಿ ಎನ್ನಲಾಗದಿದ್ದರೂ, ಭಗವಂತನ್ನು ಪ್ರಶ್ನಿಸುವ, ದಯನೀಯವಾಗಿ ಬೇಡಿಕೊಳ್ಳುವ toneನಿಂದ, ನಿಂದಾಸ್ತುತಿಯೊಳಗೇ ವರ್ಗೀಕರಿಸಬಹುದೆಂಬ assumptionನೊಂದಿಗೆ………

*ವಾಕ್ಗೇಯಕಾರ = ಕೀರ್ತನೆ ರಚಿಸುವುದು ಮಾತ್ರವಲ್ಲದೇ, ಅದಕ್ಕೆ ಸಂಗೀತ ರೂಪವನ್ನೂ ಸೇರಿಸುವವ. (ವಾಕ್=ಪದ/ಮಾತು, ಗೇಯ=ಹಾಡು/ಹಾಡುವಿಕೆ, ಗೇಯಕಾರ=ಹಾಡುಗಾರ)

ಪಲುಕೇ ಬಂಗಾರಮಾಯೆನಾ,
ಕೋದಂಡಪಾಣಿ ಪಲುಕೇ ಬಂಗಾರಮಾಯೆನಾ

ಪಲುಕೇ ಬಂಗಾರಮಾಯೆ ಪಿಲಚಿನಾ ಪಲುಕವೇಮಿ
ಕಲಲೋ ನೀ ನಾಮಸ್ಮರಣ ಮರುವ ಚಕ್ಕನಿ ತಂಡ್ರೀ ||ಪಲುಕೇ||

ಎಂತ ವೇಡಿನಗಾನಿ ಸುಂತೈನ ದಯರಾದು
ಪಂತಮು ಸೇಯ ನೇನೆಂತಟಿವಾಡನು ತಂಡ್ರೀ ||ಪಲುಕೇ||

ಇರವುಗ ಇಸುಕಲೋನ ಪೊರಲಿನ ಉಡುತ ಭಕ್ತಿಕಿ
ಕರುಣಿಂಚಿ ಬ್ರೋಚಿತಿವನಿ ನೆರ ನಮ್ಮಿತಿನಿ ತಂಡ್ರೀ ||ಪಲುಕೇ||

ರಾತಿ ನಾತಿಗ ಚೇಸಿ ಭೂತಲಮುನ
ಪ್ರಖ್ಯಾತಿ ಚೆಂದಿತಿವನಿ ಪ್ರೀತಿತೋ ನಮ್ಮಿತಿ ತಂಡ್ರೀ ||ಪಲುಕೇ||

ಶರಣಾಗತತ್ರಾಣ ಬಿರುದಾಂಕಿತುಡವುಕಾದಾ
ಕರುಣಿಂಚು ಭದ್ರಾಚಲ ವರರಾಮದಾಸ ಪೋಷ ||ಪಲುಕೇ||

(ಚರಣಗಳನ್ನು ಇಲ್ಲಿರುವ ಪಾಳಿಯಲ್ಲಲ್ಲದೇ, ಬೇರೆ ಬೇರೆ ಪಾಳಿಯಲ್ಲೂ ಕಲಾವಿದರು ಹಾಡಿರುವುದುಂಟು)

ಇದರ ಪಲ್ಲವಿಯಲ್ಲಿ ರಾಮದಾಸರು “ಏನು ರಾಮ, ನಿನ್ನ ಮಾತುಗಳು ಬಂಗಾರಕ್ಕಿಂತಲೂ ಹೆಚ್ಚು ಬೆಲೆಯುಳ್ಳದಾಗಿಬಿಟ್ಟವಾ (ಬಂಗಾರದಷ್ಟೂ ಅಪರೂಪವಾಗಿಬಿಟ್ಟವಾ)? ನಾನೆಷ್ಟು
ಕರೆದರೂ, ಮಾತನಾಡಿಸಿದರೂ, ಕೇಳಿಕೊಂಡರೂ ಮಾತೇ ಆಡುತ್ತಿಲ್ಲ ನೀನು” ಅಂತಾ ಕೇಳ್ತಾರೆ. ಸಾಮಾನ್ಯರಾದ ನಾವು ಪರಸ್ಪರ “ಏನಪ್ಪಾ, ಸುಮ್ಮನಾಗಿಬಿಟ್ಟಿದ್ದೀಯಾ! ಮಾತೇ ಇಲ್ಲ!! ಮಾತನಾಡಿದರೆ ಮುತ್ತು ಉದುರುತ್ತಾ?” ಅಂತ ಕೇಳಿದಹಾಗೆ, ಭದ್ರಾಚಲರು ರಾಮನನ್ನು ಮೆಲ್ಲಗೆ ತಿವಿಯುತ್ತಾರೆ.

ಮುಂದುವರೆಯುತ್ತಾ ರಾಮನ ಲೀಲೆಗಳನ್ನು ಮೆಲುಕುಹಾಕುತ್ತಾ “ಅಳಿಲಿನ ಸೇವೆಗೇ ಮರುಳಾದವ ನೀನು (ಅಂತಾ ಲೋಕ ಹೇಳುತ್ತೆ). ಆದರೂ ನನ್ನ ಮಾತು ನಿನಗೆ ಕೇಳುತ್ತಿಲ್ಲ. ಕಲ್ಲಾಗಿದ್ದ ಅಹಲ್ಯೆಗೆ ಮುಕ್ತಿ ಕೊಡಿಸಿದೆ ನೀನು ಅಂತ ಜನ ಹೊಗಳುತ್ತಾರೆ. ನನ್ನ ಮಾತು ಕೇಳದಷ್ಟೂ ನೀನು ಕಲ್ಲಾಗಿದ್ದೀಯಲ್ಲಾ. ಅದೆಷ್ಟು ಬೇಡಿಕೊಂಡರೂ ನಿನಗೆ ದಯೆಯೇ ಇಲ್ಲವಲ್ಲಾ! ನಿನಗೆ ‘ಶರಣಾಗತ ತ್ರಾಣ’ ಅಂತಾ ಬಿರುದುಬೇರೆ ಕೊಟ್ಟಿದ್ದಾರೆ. ನಾನಿಷ್ಟು ನಿನ್ನ ವಶವಾದರೂ ನನ್ನೊಂದಿಗೆ ಮಾತನಾಡದ ನಿನ್ನ ಆ ಬಿರುದುಗಳು, ನಿನ್ನ ಆ ದಯೆಯ ಕಥೆಗಳನ್ನ ಹೇಗೆ ನಂಬಲಿ?” ಅಂತಾ ಪ್ರಶ್ನಿಸುತ್ತಾರೆ.

ಒಟ್ಟಿನಲ್ಲಿ ಅವನ ಶರಣಾಗತಿಯ ಮಂತ್ರಪಠಿಸುತ್ತಲೇ, ಮಾತು ಬಂಗಾರವಾಯಿತೇನು? ಅಂತಾ ಕೇಳುತ್ತಾ ರಾಮನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ.

ನಿಂದಾಸ್ತುತಿ – 1

ದೇವರನ್ನು ಎರಡು ರೀತಿಯಿಂದ ಒಲಿಸಿಕೊಳ್ಳಬಹುದು. ಹೊಗಳಿಕೆಯಿಂದ, ಭಕ್ತಿಯ ಭಜನೆ, ಪ್ರಾರ್ಥನೆ, ಧ್ಯಾನದಿಂದ ಒಲಿಸಿಕೊಳ್ಳಲು ಪ್ರಯತ್ನಿಸಬಹುದು. ಇನ್ನೊಂದು ನಿಂದಾ ಸ್ತುತಿಯಿಂದ ಭಗವಂತನನ್ನು ಒಲಿಸಲು ಪ್ರಯತ್ನಿಸಬಹುದು. ಭಕ್ತಿಪಂಥದಲ್ಲಿ ಭಕ್ತಿಸ್ತುತಿಯ ಸಂಖ್ಯೆಯೇ ಹೆಚ್ಚಾಗಿದರೂ ಸಹ, ನಿಂದಾಸ್ತುತಿಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಹಾಗಂತಾ ನಿಂದಾಸ್ತುತಿಯೇನು ವೈದಿಕರ ಇಡುಗಂಟಲ್ಲ. ಜಿನಸಾಹಿತ್ಯದಲ್ಲೂ, ವಚನಸಾಹಿತ್ಯದಲ್ಲೂ, ಜನಪದ ಸಾಹಿತ್ಯದಲ್ಲೂ ಸಹ ದೇವರನ್ನು ನಿಂದಿಸುತ್ತಲೇ ಬೇಡಿಕೊಳ್ಳುವ ಪರಿಪಾಠ ಬೇಕಾದಷ್ಟಿದೆ.

ದೇವರನ್ನು ಬರೀ ಸರ್ವಶಕ್ತ ಭಗವಂತನನ್ನಾಗಿ ನೋಡದೇ, ಕ್ರಿಶ್ಚಿಯಾನಿಟಿಯ #blasphemy ಎಂಬ ಪರಿಕಲ್ಪನೆಯ ಹಂಗಿಲ್ಲದೇ, ದೇವರು ನನ್ನ ಪಕ್ಕದಲ್ಲೇ ಕೂತ ಸ್ನೇಹಿತನನ್ನಾಗಿ ನೋಡುವ ಭಾಗ್ಯ ಹಿಂದೂಗಳಿಗೆ, ಹಳೆಯ ಗ್ರೀಕರಿಗೆ ಬಿಟ್ಟರೆ ಬೇರಾವ ರಿಲೀಜಿಯನ್ನಿಗೂ ಇಲ್ಲ. ಅಮ್ಮ ಮಾಡಿದ ದೋಸೆ ಚೆಂದವಿದ್ದಾಗ ಅಮ್ಮನಿಗೆ ಹೊಗಳಿ, ಚಟ್ನಿ ಖಾರವಿದ್ದಾಗ “ಎಂತದೇ ಅಮ್ಮಾ, ಇಷ್ಟ್ ಖಾರ ಮಾಡಿದ್ದೀ? ಹೆಂಗ್ ತಿನ್ನೂದು ಇದನ್ನ. ಎಷ್ಟು ಹೇಳಿದ್ರೂ ಕೇಳಲ್ಲ. ನನ್ನ ಸಾಯ್ಸೋಕೇ ಪ್ಲಾನ್ ಹಾಕಿದ್ದೀಯಾ ನೀನು” ಅಂತಾ ಬೈದು, ಆಮೇಲೆ ನೀರು ಕುಡಿದು ಅಮ್ಮನನ್ನ ತಬ್ಬಿಕೊಳ್ಳೋ ಮಗುವಿನಂತೆ, ನಮ್ಮ ಭಕ್ತ-ದೇವರ ನಡುವಿನ ಸಂಬಂಧ.

ನಿಂದಾಸ್ತುತಿಗಳಲ್ಲಿ ಹೆಸರೇ ಹೇಳುವಂತೆ ದೇವರ ನಿಂದನೆ ನಡೆಯುತ್ತದೆ. ಆದರೆ ನಮ್ಮ ದಾಸರು ಅದೆಷ್ಟು ಚಂದವಾಗಿ ಬೈಯುತಾರೆ ಅಂದರೆ ದೇವನನ್ನು ಬೈದರೂ ಮುದ್ದುಗರೆಯುವಂತಿರುತ್ತದೆ. “ನಿನ್ನ ಸೇವಕ ನಾನು” ಅಂತಾ ಹೇಳುತ್ತಲೇ, “ನನ್ನ ಸೇವಕ ನೀನು” ಅನ್ನುತ್ತಾ ಅವನ್ನನು ಕಳ್ಳಕೃಷ್ಣ, ಭೋಳೇಶಂಕರ, ಟೊಣಪಗಣಪ ಅಂತೆಲ್ಲಾ ಹೆಸರಿಡುತ್ತಾರೆ. Obviously, “ಕಳ್ಳ, ಪುಂಡ, ಪಟಿಂಗ” ಎಂದೆಲ್ಲಾ ಬೈಯುವುದು ಮುದ್ದಿನ ಮಕ್ಕಳನ್ನು ತಾನೆ. “ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ…” ಎಂದು ಸಮರ್ಪಿತರಾದ ದಾಸರು, “ಆರು ಬದುಕಿದರಯ್ಯಾ ಹರಿನಿನ್ನ ನಂಬಿ, ತೋರು ಈ ಧರೆಯೊಳಗೆ ಒಬ್ಬರನು ಕಾಣೆ” ಅಂತಾ ನಿಂದಿಸುತ್ತಾರೆ.

ಭಕ್ತಿಗೀತೆಗಳನ್ನು ಎಲ್ಲರೂ ಶೇರ್ ಮಾಡ್ತಾರೆ. ಆದರೆ ನಾನು ಈ ರೀತಿಯ ಕೆಲ ನಿಂದಾಸ್ತುತಿಗಳನ್ನ ಶೇರ್ ಮಾಡೋಣ ಅಂತಿದ್ದೀನಿ.

ಇವತ್ತಿನ ನಿಂದಾಸ್ತುತಿ:

ಆರು ಬದುಕಿದರಯ್ಯ ಹರಿ ನಿನ್ನ ನಂಬಿ ||ಪ||
ತೋರು ಈ ಧರೆಯೊಳಗೆ ಒಬ್ಬರನು ಕಾಣೆ ||ಅಪ||

ಕರಪತ್ರದಿಂದ ತಾಮ್ರಧ್ವಜನ ತಂದೆಯ
ಕೊರಳ ಕೊಯಿಸಿದೆ ನೀನು ಕುಂದಿಲ್ಲದೇ
ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆ
ಅರಿತು ತ್ರಿಪುರಾಸುರನ ಹೆಂಡಿರನು ಬೆರೆತೆ ||೧||

ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆ
ಸುಲಭದಲಿ ಕೌರವರ ಮನೆಯ ಮುರಿದೆ
ನೆಲವ ಬೇಡಲು ಹೋಗಿ ಬಲಿಯ ಭೂಮಿಗೆ ತುಳಿದೆ
ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ || ೨ ||

ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆ
ಗರುಡವಾಹನ ನಿನ್ನ ಚರಿಯನರಿಯೆ
ದೊರೆಪುರಂದರ ವಿಠಲ ನಿನ್ನನ್ನು ನಂಬಿದರೆ
ತಿರುಪೆಯೂ ಸಿಗಲೊಲ್ಲದು ಕೇಳೊ ಹರಿಯೇ! ||೩||

ಈ ಉಗಾಭೋಗವನ್ನು ತಪ್ಪಾಗಿ ಅರ್ಥೈಸಿಕೊಂಡು ಪುರಂದರದಾಸರಿಗೆ ವೈಚಾರಿಕ ಪಟ್ಟವನ್ನೂ ನಮ್ಮ ಲಿಬರಲ್ಲುಗಳು ಕೊಡಲು ಪ್ರಯತ್ನಿಸಿದ್ದಿದೆ. ಆದರೆ ಸೂಕ್ಷ್ಮವಾಗಿ ನೋಡಿದಾಗ ದಾಸರು ಅಧರ್ಮಿಗಳನ್ನು ಕೃಷ್ಣ ಹೇಗೆ ಬೇರೆ ಬೇರೆ ರೀತಿಯಲ್ಲಿ ಮಣಿಸಿದ ಅನ್ನೋದನ್ನೇ ನಿಂದನೆಯ ರೂಪದಲ್ಲಿ ಹೇಳಿದ್ದಾರೆ ಎನ್ನುವುದು ಕಂಡುಬರುತ್ತದೆ.