“ಅತಿಥಿ ದೇವೋಭವ ಅನ್ನುವ ನಾವು ಒಳ್ಳೆಯ ಅತಿಥಿಗಳಾಗೋಕೆ ಯಾಕೆ ಕಲಿತಿಲ್ಲ!?”

ಮೊನ್ನೆ ಬಾಲಿಯ ಹೋಟೆಲೊಂದರಲ್ಲಿ ತಂಗಿದ್ದ ಕುಟುಂಬವೊಂದು ಅಲ್ಲಿ ಸಿಕ್ಕಿದ್ದನ್ನೆಲ್ಲಾ ಬಾಚಿದ್ದಕ್ಕೆ, ಹೋಟೆಲಿನವರು ಹಿಡಿದು ಅವರ ಮರ್ಯಾದೆ ಮೂರುಕಾಸಿಗೆ ಹರಾಜಿಹಾಕಿದ್ದಕ್ಕೆ ಬೇಸರ ಮಾಡಿಕೊಂಡವರು ಬಹಳ ಜನರಿದ್ದಾರೆ. “ಮಾಡಿದ್ದು ತಪ್ಪಾಯ್ತು. ಅದಕ್ಕೆ ತಕ್ಕ ಮಾಡಿದ್ದಕ್ಕೆ ಹಣ ಕೊಡ್ತೀವಿ” ಅಂತಾ ಅವರು ಹೇಳಿದಮೇಲೂ ಅಷ್ಟೆಲ್ಲ ಹ್ಯುಮಿಲಿಯೇಟ್ ಮಾಡುವ ಅಗತ್ಯವೇನಿತ್ತು!” ಅಂತಾ ಕೇಳಿದವರನ್ನು ನೋಡಿದ್ದೇವೆ. ನನ್ನ ಅನಿಸಿಕೆಯ ಪ್ರಕಾರ ಇದರಲ್ಲಿ ಬೇಸರ ಮಾಡಿಕೊಳ್ಳುವ ಮಾತೇ ಇಲ್ಲ. ಹೋಟೆಲಿನವ ಮಾಡಿದ್ದು ನೂರಕ್ಕೆ ನೂರು ಸರಿ. ಆ ವಿಡಿಯೋದಲ್ಲಿ, ಹೋಟೆಲಿನವ ಆ ಮಟ್ಟಕ್ಕೆ ಇಳಿದು ಅವರನ್ನು ನಡುರಸ್ತೆಯಲ್ಲಿ ಮರ್ಯಾದೆ ತೆಗೆದದ್ದಕ್ಕೆ ಆ ಕುಟುಂಬ ಕದ್ದದ್ದು ಮಾತ್ರವಲ್ಲ, ಅವರ ಒರಟು ವರ್ತನೆ ಇನ್ನೂ ಮುಖ್ಯ ಕಾರಣ. ಅದರಲ್ಲಿ ನೋಡಬಹುದು, ಹೋಟೆಲಿನವ ಮತ್ತೆ ಮತ್ತೆ ಹೇಳುತ್ತಾನೆ “ಈಗ ಎಲ್ಲಿದೆ ನಿಮ್ಮ ಒರಟು ಧ್ವನಿಯ ಮಾತುಗಳು? ಆಡಿ ತೋರಿಸಿ ನೋಡುವಾ!” ಅಂತಾ. ಕಳ್ಳತನ ಮಾಡಿ, ಆಮೇಲೆ ಅದನ್ನು ಪ್ರಶ್ನಿಸಿದವರೆಡೆಗೆ ಧ್ವನಿಯೇರಿಸಿ ಮಾತನಾಡಿದರೆ ಯಾರಿಗಾದರೂ ಸಿಟ್ಟುಬರೋದು ಸಹಜವೇ.

RPG Enterprisesನ ಮಾಲೀಕ ಹರ್ಷ್ ಗೊಯೆಂಕಾ ಕೂಡಾ ಮೊನ್ನೆ ಒಂದು ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದರು. ಸ್ವಿಟ್ಝರ್ಲ್ಯಾಂಡಿನ ಹೋಟೆಲೊಂದರಲ್ಲಿ ಅವರು ಚೆಕ್-ಇನ್ ಆದಾಗ “ಯೂ ಆರ್ ಫ್ರಂ ಇಂಡಿಯಾ? ಇಲ್ಲೊಂದಷ್ಟೂ ನಿಯಮಾವಳಿಗಳಿವೆ ಓದಿ” ಅಂತಾ ಪೇಜು ಕೊಟ್ಟರಂತೆ. ಅದೇನೂ ಎಲ್ಲಾ ಪ್ರವಾಸಿಗಲಿಗೆ ಇದ್ದ ನಿಯಮಗಳಲ್ಲ. ಭಾರತೀಯರಿಗೆ ಮಾತ್ರವೇ ಇದ್ದದ್ದು!!! (ಚಿತ್ರ ಕೆಳಗಿದೆ ನೋಡಿ). ಆ ನಿಯಮಾವಳಿಗಳ ಪ್ರಕಾರ ಭಾರತೀಯರು ಸಾಮಾನ್ಯವಾಗಿ ಕಾರಿಡಾರಿನಲ್ಲಿ ದೊಡ್ಡದಾಗಿ ಮಾತನಾಡುವವರು, ರೆಸ್ಟುರಾದಲ್ಲಿ ಬಫೆ ಬ್ರೇಕ್ಫಾಸ್ಟಿನಲ್ಲಿ ತಿಂಡಿಯನ್ನು ತಮ್ಮ ತಟ್ಟೆಗೆ ಹಾಕಿಕೊಳ್ಳುವಾಗ ಚಮಚ/ಸ್ಪಾಚುಲಾ ಬಳಸದೇ ತಮ್ಮ ಕೈಯನ್ನು ಬಳಸಿ ಹಾಕಿಕೊಳ್ಳುವವರು, ಬೆಳಗ್ಗಿನ ತಿಂಡಿಯನ್ನೇ ಮಧ್ಯಾಹ್ನದ ಊಟಕ್ಕಿರಲಿ ಅಂತಾ ಡಬ್ಬಕ್ಕೆ ತುರುಕಿಕೊಳ್ಳುವವರು, ಚಮಚ ಕದಿಯುವವರು ಅಂತೆಲ್ಲಾ ಭಾವಿಸಿದಂತಿತ್ತು. ಮಿ.ಗೊಯಂಕಾ ಅದರಬಗ್ಗೆ ಪ್ರಶ್ನಿಸಿದಾಗ, “ನೀವು ಅಂತವರು ಅಂತಾ ನಾವು ಹೇಳ್ತಾ ಇಲ್ಲ. ನಮ್ಮಲ್ಲಿ ತಂಗಿದ ಹೆಚ್ಚಿನ ಭಾರತೀಯರ ಪ್ರವಾಸಿಗಳ ಜೊತೆಗಿನ ನಮ್ಮ ಅನುಭವ ಹಾಗಿದೆ. ಆದ್ದರಿಂದ ಮ್ಯಾನೇಜ್ಮೆಂಟ್ ಈ ಪಟ್ಟಿಯನ್ನು ಚೆಕ್-ಇನ್ ಮಾಡುವ ಎಲ್ಲಾ ಭಾರತೀಯರಿಗೂ ಕೊಡು ಅಂದಿದೆ” ಅಂತಾ ರಿಸೆಪ್ಷನಿಸ್ಟು ಅಂದನಂತೆ.

ಇವತ್ತು ಗೆಳೆಯ Rangaswamy Mookanahalli ಕೂಡಾ ಅಂತಹದ್ದೊಂದು ಅನುಭವ ಹಂಚಿಕೊಂಡರು. ನಾನು ಸ್ವತಃ ಭಾರತೀಯನಾಗಿ ಇಂತಹ ವರ್ತನೆಗಳನ್ನು ನೋಡಿದ್ದೇನೆ. ನಾನು ಗ್ರೀಸ್ ಪ್ರವಾಸದಲ್ಲಿದ್ದಾಗ ಅಥೆನ್ಸಿನಿಂದಾ ಸ್ಯಾಂಟೋರಿನಿಗೆ ಹೋಗುವ ಹಡಗಲ್ಲಿ ಭಾರತೀಯರ ಗುಂಪೊಂದು ಇಡೀ ಲೌಂಜ್ ಅನ್ನು ಗಬ್ಬೆಬ್ಬಿಸಿಟ್ಟಿತ್ತು. ತಮ್ಮ ಕುಟುಂಬಕ್ಕೇ ಇಡೀ ಜಾಗ ಬೇಕು ಅನ್ನೋ ಹಪಾಹಪಿಯಲ್ಲಿ, ಉಳಿದವರಿಗೆ ಕೂರಲುಬಿಡದಂತೆ ಸೀಟುಗಳ ಮೇಲೆಲ್ಲಾ ತಮ್ಮ ಲಗೇಜ್ ಇಟ್ಟು, ಕೂರಲು ಬಂದವರಿಗೆ “ಇಲ್ಲಿ ನಮ್ಮವರಿದ್ದಾರೆ” ಅಂತಾ ಹೇಳಿ ಹೇಳಿ ಓಡಿಸುತ್ತಿತ್ತು. ಓಡಿಸಿಯಾದ ಮೇಲೆ “ಭಗಾ ದಿಯಾ ಮೈನೇ ಚೂತ್ಯೇ ಕೋ” ಅನ್ನೋ ನಗು ಬೇರೆ. ಕೊನೆಗೆ ಬ್ರಿಟೀಷನೊಬ್ಬ ಹಡಗಿನ ಸಿಬ್ಬಂದಿಗೆ ಹೇಳಿ ಖಾಲಿ ಮಾಡಿಸಿ “I know you were lying, you Indian” ಅಂತಾ ಬುಸುಗುಟ್ಟಿದ. ಇನ್ನೊಮ್ಮೆ ಇಲ್ಲಿಂದಾ (ದುಬೈಯಿಂದಾ) ಬೆಂಗಳೂರಿಗೆ ಹೋಗುವ ಫ್ಲೈಟಿನಲ್ಲಿ ಒಂದಷ್ಟು ಜನ ಕನ್ನಡದವರೇ ಹುಡುಗರಲ್ಲಿ “ಏಯ್ ಬಾತ್ರೂಮಲ್ಲಿ ಕ್ರೀಮು ಪರ್ಫ್ಯೂಮಿದೆ ಕಣ್ರೋ. ಸರಿಯಾಗಿ ಹಾಕ್ಕೊಂಡು ಬಂದೆ. ನೀವೂ ಹೋಗ್ರೋ” ಅನ್ನುವವ ಒಬ್ಬ. ಇನ್ನೊಬ್ಬ “ನಾನು ಹಾಕ್ಕೊಂಡು ಬರ್ಲಿಲ್ಲ, ಬಾಟ್ಲಿಯನ್ನೇ ತಗಂಡು ಬಂದೆ” ಅಂದ!! ಅಥೆನ್ಸಿನ ಹಡಗಲ್ಲಾದ್ರೆ ಇಲ್ಲಿನ ಭಾಷೆ ಬರದವರು ಇದ್ರು ಅನ್ನಿ. ಇದು ಬೆಂಗಳೂರಿಗೇ ಹೋಗೋ ಫೈಟು. ಸ್ವಾಭಾವಿಕವಾಗಿಯೇ ಸಹಪ್ರಯಾಣಿಕರು ಕನ್ನಡದವರು ಇರ್ತಾರೆ ಅನ್ನೋ ಕನಿಷ್ಟ ಪರಿಜ್ಞಾನವೂ ಇಲ್ಲದೇ ಕನ್ನಡದಲ್ಲೇ ಕೂಗಾಡುತ್ತಿದ್ದವರು!! ಉಳಿದವರು ಹುಬ್ಬೇರಿಸಿ ಮುಖ ಮುಖ ನೋಡಿಕೊಂಡು ಅಸಹನೆಯಲ್ಲಿ ತಲೆಕೊಡವಿಕೊಂಡರು.

ಇದು ಬಾಲಿ, ಸ್ವಿಟ್ಝರ್ಲ್ಯಾಂಡ್, ಪ್ಯಾರಿಸ್ ಮಾತ್ರವಲ್ಲ. ಜಗತ್ತಿನೆಲ್ಲೆಡೆ ಭಾರತೀಯರೆಡೆಗೆ ಈ ತಾತ್ಸಾರ ಭಾವನೆಯಿದೆ. ಎಲ್ಲರೂ ಭಾರತೀಯರು ಹಾಗಲ್ಲ ಅನ್ನೋ ಮಾತು ಖಂಡಿತಾ ಒಪ್ಪುವಂತದ್ದು. ಹೋಟೆಲ್ಲೊಂದರಲ್ಲಿ ಒಬ್ಬ ಭಾರತೀಯನ ಕೆಟ್ಟವರ್ತನೆಯನ್ನು ಹೋಟಿಲ್ಲಿನ ಸಿಬ್ಬಂದಿಯ ಮನಸ್ಸಿನಿಂದ ತೆಗೆಯಲು ಮುಂದಿನ ಹತ್ತು ಭಾರತೀಯರು ಇರುವುದಕ್ಕಿಂತಾ ಒಳ್ಳೆಯವರಾಗಿ ವರ್ತಿಸಬೇಕಾಗುತ್ತದೆ. ಆದರೆ ಹತ್ತು ಭಾರತೀಯರು ಹೋಟೆಲೊಂದರಲ್ಲಿ ಒಳ್ಳೆಯರೀತಿಯಲ್ಲಿ ನೆನಪಿಟ್ಟುಕೊಳ್ಳುವಂತಾ ವರ್ತನೆ ತೋರಿಸುವ ಪ್ರಾಬಬಲಿಟಿ ತೀರಾ ಕಮ್ಮಿ. ಈ ಕಾರಣಕ್ಕೇ ಭಾರತೀಯರೆಂದರೆ ಹೊರದೇಶದ ವರ್ತಕರಿಗೆ ಅದೊಂದು “ಮರೆಯಲಾಗದ ಅನುಭೂತಿ”.

ಇದು ಬರೀ ಯೂರೋಪು ಅಥ್ವಾ ಅಮೇರಿಕಾದಲ್ಲಿ ಮಾತ್ರವಲ್ಲ. ಕತ್ತೆತ್ತಿದರೆ 70% ಭಾರತೀಯರೇ ಕಾಣಸಿಗುವ ದುಬೈಯಲ್ಲೂ ಇದೇ ಕಥೆ. ಸ್ವಲ್ಪ ಸಮಾಧಾನದ ವಿಷಯವೆಂದರೆ ಇಲ್ಲಿ ಭಾರತೀಯರಿಗೆಂದೇ ಟೂರು ಏರ್ಪಾಡು ಮಾಡುವ ಏಜೆನ್ಸಿಗಳಿವೆ. ಅವರು ಊಟಕ್ಕೆ ಉಳಿಯಕ್ಕೆ ಬುಕ್ ಮಾಡುವ ಹೋಟೆಲುಗಳೂ ಭಾರತೀಯರದ್ದೇ ಆಗಿರುತ್ತವೆ, ಅಥವಾ ಭಾರತೀಯರನ್ನು ಮ್ಯಾನೇಜ್ ಮಾಡಲು ತಿಳಿದಿರುವವರದ್ದೇ ಆಗಿರುತ್ತವೆ. ಆ ಹೋಟೆಲಿನವರಿಗೆ ಇವರ ಬುದ್ಧಿ ಗೊತ್ತಿರುವದಕ್ಕೋ ಏನೋ, ಡಬಲ್ ರೂಮಿನಲ್ಲೂ ಎರಡು ಟವಲ್ ಇಡುವುದಿಲ್ಲ, ಒಂದೇ ಇಟ್ಟಿರುತ್ತಾರೆ. ಹೋದರೆ ಬರೀ ಒಂದೇ ಹೋಗಲಿ ಅಂತಲೋ ಅಥವಾ ಬೇಕಾದರೆ ಕಾಲ್ ಮಾಡಿ ಇನ್ನೊಂದು ತರಿಸಿಕೊಳ್ಳಲಿ, ಲೆಕ್ಕವಿರುತ್ತೆ ಎಂಬ ಆಲೋಚನೆಯೋ ಹೋಟೆಲ್ ಮ್ಯಾನೇಜ್ಮೆಂಟಿನವರದ್ದು. ಆದರೆ ಇಲ್ಲಿನ ಮೆಟ್ರೋದಲ್ಲಿ, ರಸ್ತೆಯಲ್ಲಿ ಒಬ್ಬ ಭಾರತೀಯ ಟೂರಿಸ್ಟನ್ನು ಗುರುತಿಸುವುದು ತೀರಾ ಸುಲಭ. ಇಲ್ಲಿನ ಬಹಳಷ್ಟು ಪ್ರವಾಸಿತಾಣಗಳಲ್ಲಿ, ಮೆಟ್ರೋದಲ್ಲಿ ಮಕ್ಕಳ ಎತ್ತರ ನೋಡಿ ಟಿಕೇಟು ಬೇಕೋ ಬೇಡವೋ ಎಂದು ನಿರ್ಧರಿಸುತ್ತಾರೆ. ಅಲ್ಲೆಲ್ಲಾ “ನನ್ನ ಮಗ ಇನ್ನೂ ಯೂಕೇಜಿ. ಸ್ವಲ್ಪ ಉದ್ದ ಇದ್ದಾನೆ ಅಷ್ಟೇ” ಅಂತಾ ಜಗಳ ಮಾಡುವ ಜನ ನಿಮಗೆ ಕಂಡರೆ ಅವರ್ಯಾರು ಅಂತಾ ನಾನು ಹೇಳುವುದೇ ಬೇಡ. ದುಬೈಯ ಸ್ವಚ್ಚತೆಯನ್ನು ಮೆಚ್ಚುತ್ತಲೇ ಚಿಪ್ಸ್ ಪ್ಯಾಕೆಟ್ ಅನ್ನು ರಸ್ತೆಬದಿಗೆ ಎಸೆಯುವ, ಊಟಮಾಡಿ ಹೋಟೆಲಿಂದ ಹೊರಗೆಬಂದು ಬಾಯಿಗೆ ನೀರು ಹಾಕಿ ಮುಕ್ಕಳಿಸಿ ಪುಟ್ಫಾತ್ ಮೇಲೆ ಉಗಿಯುವ, ಮೂಗಿನಿಂದ ಸಹಸ್ರಾರದವರೆಗೆ ಸಿಂಬಳ ಏರುವಂತೆ ಎಳೆದು ಥೂ ಅಂತಾ ಉಗಿಯುವ ಪ್ರವಾಸಿಗರೆಲ್ಲಾ ಹೆಚ್ಚಾಗಿ ಒಂದೇ ದೇಶದಿಂದ ಬಂದವರಾಗಿರುತ್ತಾರೆ. ಜೀಬ್ರಾಕ್ರಾಸಿಂಗ್ ಅಲ್ಲೇ ಐವತ್ತು ಮೀಟರ್ ದೂರದಲ್ಲಿದ್ದರೂ, ಇಲ್ಲೇ ರಸ್ತೆಯ ಮೇಲೆ ಓಡುವವರೂ ಎಲ್ಲಿಯವರು ಅಂತೇನೂ ಸ್ಪೆಷಲ್ಲಾಗಿ ಹೇಳಬೇಕಿಲ್ಲ.

ನಮಗೆ ನಮ್ಮ ಜನಸಂಖ್ಯೆಯ ಕಾರಣದಿಂದಾಗಿ personal space ಅನ್ನೋ ಪರಿಕಲ್ಪನೆಯೇ ಇಲ್ಲ. ಭಾರತದಲ್ಲಿದ್ದಾಗ 8 ಜನ ನಿಲ್ಲಬಹುದಾದ ಲಿಫ್ಟಿನಲ್ಲಿ ಮೈಗೆ ಮೈಯಂಟಿಸಿಕೊಂಡು 10 ಜನ ನಿಂತೇ ಆಫೀಸಿಗೆ ಹೋಗುವ ನಾವು, ಬೇರೆ ದೇಶಕ್ಕೆ ಹೋದಾಗಲೂ ಲಿಫ್ಟಿನಲ್ಲಿ ಬೇರೆ ಯಾರಿದ್ದಾರೆ ಅನ್ನೋದನ್ನೂ ನೋಡದೇ ಎಲ್ಲರೂ ನುಗ್ಗುತ್ತೇವೆ. ಓಡುತ್ತಿರುವ ಮೆಟ್ರೋದಲ್ಲಿ, ನಿಂತ ವಿಮಾನಗಳಲ್ಲಿ, ಟಿಕೇಟಿನ ಸಾಲುಗಳಲ್ಲಿ, ಇನ್ನೊಬ್ಬರ ಮೈಗೆ ನಮ್ಮ ಮೈಯನ್ನೋ, ಬ್ಯಾಗನ್ನೋ ತಾಗಿಸಿಯೇ ನಿಲ್ಲುತ್ತೇವೆ. ನನ್ನ ಸಂತೋಷ, ದುಃಖ, ಅದ್ಯಾರದ್ದೋ ಬಗೆಗಿನ ತಿರಸ್ಕಾರ, ದುಮ್ಮಾನಗಳನ್ನು ಉಳಿದವರಿಗೆ ಕೇಳಿಸುವ ಅಗತ್ಯವಿಲ್ಲದಿದ್ದರೂ ಜೋರಾಗಿಯೇ ಮಾತನಾಡುತ್ತೇವೆ. ಫೋನ್ಕಾಲುಗಳದ್ದೂ ಅದೇ ಕಥೆ. ಲಿಫ್ಟುಗಳಲ್ಲಿ, ಕಾರಿಡಾರುಗಳಲ್ಲಿ ನಡೆಯುವಾಗ ಎದುರಾದವರೆಡೆಗೆಗೊಂದು ಸೌಜನ್ಯದ ನಗೆಯಾಗಲೀ, ಗುಡ್ಮಾರ್ನಿಂಗ್ ಗುಡೀವನಿಂಗ್ ಆಗಲೀ, ರಿಸೆಪ್ಷನ್/ಸೇಲ್ಸ್ ಟಿಲ್/ಟೋಲ್-ಗೇಟುಳಲ್ಲಿರುವ ಜನರೆಡೆಗೆ ಒಂದು ಥ್ಯಾಂಕ್ಸ್ ಆಗಲೀ ಹೇಳಲಾಗದಷ್ಟು ಬಡವರು ನಾವು. ಇದೇ ಅಭ್ಯಾಸಗಳನ್ನು ಬೇರೆಕಡೆ ಹೋದಾಗಲೂ ಮುಂದುವರೆಸುತ್ತೇವೆ. ಭಾರತದಲ್ಲಿ ಹೇಗೋ ಗೊತ್ತಿಲ್ಲ, ಬಹಳಷ್ಟು ದೇಶಗಳಲ್ಲಿ ರೆಸ್ಟೋರೆಂಟ್ ವೈಟರುಗಳಿಗೆ ಸಂಬಳ ಕಮ್ಮಿಯಿಟ್ಟು, ಗ್ರಾಹಕರಿಗೆ ಉತ್ತಮ ಸೇವೆ ಕೊಟ್ಟು ಅದಕ್ಕವರು ಟಿಪ್ಸ್ ಪಡೆಯುವ ವ್ಯವಸ್ಥೆಯಿದೆ. ಅದರ ಬಗ್ಗೆ ಕನಿಷ್ಟ ರೀಸರ್ಚ್ ಕೂಡಾ ಮಾಡದೇ ಆ ದೇಶಗಳಿಗೆ ಹೋಗಿ, ಅಲ್ಲಿ ಟಿಪ್ಸ್ ಇಡದೇ ಬರುವ ಭಾರತೀಯರೆಂದರೆ ಆ ವೈಟರುಗಳಿಗೂ ಅಷ್ಟಕ್ಕಷ್ಟೇ.

ಒಟ್ಟಿನಲ್ಲಿ ಭಾರತೀಯ ಪ್ರವಾಸಿಗಳೆಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಜನ ಸ್ವಲ್ಪ ಹುಳಿಮುಖ ಮಾಡುವುದು ಸಹಜ. ನಮ್ಮಜನರ ವರ್ತನೆಗಳ ಅನುಭವವಿರುವ ನನಗೆ ಅದರಲ್ಲೇನೂ ಆಶ್ಚರ್ಯವಿಲ್ಲ. ಭಾರತೀಯರೆಡೆಗಿರುವ ಇಂತಹದೊಂದು ಗ್ರಹಿಕೆಯನ್ನು ಕಡಿಮೆಮಾಡುವೆಡೆಗೆ ನನ್ನ ಕೈಲಾದಷ್ಟು ಪ್ರಯತ್ನವನ್ನಂತೂ ನಾನು ಮಾಡುತ್ತೇನೆ. ನನ್ನದಲ್ಲದ ಯಾವ ವಸ್ತುವನ್ನೂ ಮುಟ್ಟದ, ತೆಗೆದುಕೊಳ್ಳದ, ಪಡೆದ ಸೇವೆಗೊಂದು ಥ್ಯಾಂಕ್ಸ್ ಹೇಳುವ ಭಾರತೀಯರಾಗುವ ಮೂಲಕ ನಮ್ಮ ದೇಶಕ್ಕೂ ಹೆಮ್ಮೆ ತರೋಣ.

ಹೋಟೆಲ್ ರೂಮಿನಲ್ಲಿದ್ದ ಶಾಂಪೂ, ಸೋಪು, ಟೀಬ್ಯಾಗು ತೆಗೆದುಕೊಳ್ಳದೇ ಬಂದವರು ಇಡೀ ಜಗತ್ತಿನಲ್ಲೇ ಯಾರೂ ಇಲ್ಲ. ಎಲ್ಲಾದೇಶದವರೂ ಅದನ್ನು ಒಂದಲ್ಲೊಂದು ಕಡೆ ಮಾಡಿರುತ್ತಾರೆ. ಅದನ್ನು “ಕದಿಯೋದು” ಅನ್ನೋದೂ ಇಲ್ಲ. ಯಾಕಂದ್ರೆ ನೀವು ಬಳಸದಿದ್ದರೂ/ಅರ್ಧ ಬಳಸಿಟ್ಟರೂ ಅದು ಮತ್ತೆ ರಿಪ್ಲೇಸ್ ಆಗೇ ಆಗುತ್ತದೆ. ರೂಮಿನ ಮಿನಿಬಾರಿನಲ್ಲಿದ್ದ ಲೇಯ್ಸ್ ಚಿಪ್ಸ್ ಅಥವಾ ಚಾಕಲೇಟು ತಿಂದು, ಸಂಜೆ ಹೊರಗೆ ಹೋದಾಗ ಅದೇ ಬ್ರಾಂಡಿನ ತಿನಿಸುಗಳನ್ನು ವಾಪಾಸು ಇಟ್ಟು ನೂರಾರು ರೂಪಾಯಿ ಬಿಲ್ ತಪ್ಪಿಸಿಕೊಳ್ಳುವುದನ್ನೂ ನಾನು ತಪ್ಪು ಅನ್ನಲ್ಲ. ಆದರೆ ಹ್ಯಾಂಗರ್ರು, ಹೇರ್ ಡ್ರೈಯರ್, ಬಾತ್-ರೋಬ್, ಲೈಟುಗಳು ಇವನ್ನೆಲ್ಲಾ ತೆಗೆದುಕೊಂಡು ಬರೋದು ತೀರಾ ಅಕ್ಷಮ್ಯ. ಹಾಗೆಯೇ ಕಾಫಿಮೇಕರ್ ಹತ್ರ ಇಟ್ಟ ಚಮಚ, ಕಾಫಿ ಮಗ್ಗು, ಟೀವಿ ರಿಮೋಟಿನ ಸೆಲ್ಲು ಇವನ್ನೆಲ್ಲಾ ತೆಗೆದುಕೊಳ್ಳೋದು ಕಳ್ಳತನ ಅನ್ನೋದು ಸಾಯ್ಲಿ, ತೀರಾ ಚೀಪ್’ನೆಸ್. ಹೋಟೆಲ್ ರೂಮ್ ಬುಕಿಂಗ್ ಕಂಪೆನಿಯಾದ IXIGO, ಇಂತಹಾ ಗೊಂದಲ ನಿವಾರಿಸೋದಕ್ಕೆ, ಹೋಟೆಲ್ ರೂಮಿನಿಂದ ಏನನ್ನು ತೆಗೆದುಕೊಂಡು ಹೋಗಬಹುದು, ಯಾವುದನ್ನ ಮುಟ್ಟಬಾರದು ಅಂತಾ ಒಂದೊಳ್ಳೆಯ ವಿಡಿಯೋ ಮಾಡಿದ್ದಾರೆ, ನೋಡಿ.

ಕೊಸರು:

(*) ಭಾರತೀಯರ ಬಗ್ಗೆ ಮಾತ್ರ ಯಾಕೆ ಈ ರೀತಿ ಅಪವಾದ. ಪಾಕಿಗಳ ಬಗ್ಗೆ, ಬಾಂಗ್ಲಾಗಳ ಬಗ್ಗೆ ಯಾಕಿಲ್ಲ? ಅಂತಾ ನಿಮಗೆ ಅನುಮಾನ ಬಂದಿರಬಹುದು. ಈ ರೀತಿ ಅನುಭವ ಆತಿಥೇಯರಿಗೆ ಆಗಬೇಕಾದರೆ, ಜನ ಅಲ್ಲಿಗೆ ಪ್ರವಾಸಿಗಳಾಗಿ ಹೋಗಬೇಕು. ಪ್ರವಾಸಕ್ಕೆ ಹೋಗೋಕೆ ದುಡ್ಡು ಬೇಕು. ಪಾಕಿ/ಬಂಗಾಲಿಗಳ ಕೈಲಿ ಅಷ್ಟೆಲ್ಲಾ ದುಡ್ಡಿದ್ರೆ, ಊರಲ್ಲಿ ಎರಡಂತಸ್ತಿನ ಮನೆ ಕಟ್ತಾರೆ. ಆಮೇಲೆ ಪ್ರವಾಸ ಅದೂ ಇದೂ ಎಲ್ಲಾ. ಭಾರತೀಯರು ಹಾಗಲ್ಲ. ನಮ್ ಎಕಾನಮಿ ಸಕ್ಕಾತ್ತಾಗಿದೆ. ಈಗಂತೂ ನಮ್ ಹತ್ರ ದುಡ್ಡಿದೆ. ತಿರುಗ್ತೀವಿ. ಗಬ್ಬೆಬ್ಬಿಸ್ತಾ ಇದ್ದೀವಿ. ಅವರೆಲ್ಲಾ ನಾವು 1970ರಲ್ಲಿ ಹೇಗಿದ್ವೋ ಹಾಗಿದ್ದಾರೆ. ಅವರ ಬಳಿ ಅಷ್ಟೆಲ್ಲಾ disposable income ಬರಬೇಕಾದರೆ ಇನ್ನೂ ಕನಿಷ್ಟ ಇಪ್ಪತ್ತೈದು ವರ್ಷ ಬೇಕು. ಆಗ ಈ ಕಥೆಗಳು ಅವರ ಹೆಸರಲ್ಲೂ ಬರುತ್ವೆ 🙂 ಅವರೆಡೆಗೆ ನಗುವ ಮೊದಲು ನಾವು ಸುಧಾರಿಸಿಕೊಳ್ಳೋಣ. ನಾಳೆ ಪಾಕಿಯೊಬ್ಬ ಹೋಟೆಲಲ್ಲಿ ಏನೋ ಕದ್ದು ಸಿಕ್ಕಿಹಾಕಿಕೊಂಡಾಗ ಆ ಹೋಟೆಲಿವನರು “ಎಲ್ಲಿಂದಾ ಕಲಿತ್ಯಪ್ಪಾ ಇಂತಾ ಬುದ್ಧಿ” ಅಂದರೆ, ಆತ ನಮ್ಮ ಕಡೆ ಬೆರಳುತೋರಿಸದಂತಾಗಲಿ.

(*) ನನಗೆ ಇದೇ ರೀತಿ ಸ್ಟೀರಿಯೋಟಿಪಿಕಲ್ ಭಾವನೆ ಎಲ್ಲಾ ದೇಶದವರ ಮೇಲೂ ಇದೆ. ಬಂಗಾಲಿಗಳು ಜಿಪುಣರು, ಪಠಾಣರು ಕೊಳಕರು, ಬ್ರಿಟೀಷರು ಸಿಡುಕರು, ಅಮೇರಿಕನ್ನರು ಕೇರ್ಲೆಸ್ಸು ಹೀಗೇ ಬಹಳಷ್ಟು ನನ್ನ ಮನಸ್ಸಲ್ಲೂ ಇದೆ. ಆಗಾಗ ಅದನ್ನ ಒರೆಗೆ ಹಚ್ಚುತ್ತಿರುತ್ತೇನೆ. ಸರಿಪಡಿಸಿಕೊಳ್ಳುತ್ತೇನೆ. ಆದರೆ ನಾನು ವೈಟರುಗಳು ಮೊದಲ ಬಾರಿಗೆ ನನ್ನ ಟೇಬಲ್ಲಿಗೆ ಬಂದಾಗಲೇ ನಾನು “ನೋಡಪ್ಪಾ, ನೀವು ನೋಡಿದ ಉಳಿದ ಭಾರತೀಯರಂತೆ ನಾನಲ್ಲ. ನಿನಗೆ ಸಿಗುವ ಟಿಪ್ಸು ನಿನ್ನ ಸೇವೆಯ ಮೇಲೆ ನಿರ್ಧಾರವಾಗುತ್ತೆ. ನೆನಪಿಟ್ಕೋ” ಅಂತಾ ಬಾಯಿಬಿಟ್ಟು ಹೇಳಿಬಿಡುವುದುಂಟು. ಇದು ಯಾಕೆಂದರೆ, ನಾನು ಯೂಕೆನಲ್ಲಿದ್ದಾಗ ಈ ರೀತಿಯ “ಬ್ಲಡಿ ಇಂಡಿಯನ್” ಸ್ಟೀರಿಯೋಟೈಪನ್ನು ಬಹಳ ಅನುಭವಿಸಿದ್ದೇನೆ. ಅಲ್ಲಿನ ವೈಟರುಗಳು ಬ್ರಿಟೀಷ್ ಅಥವಾ ಪೋಲಿಷ್/ಆಫ್ರಿಕನ್ನರು. ಇಲ್ಲಿ ಮಧ್ಯಪ್ರಾಚ್ಯಕ್ಕೆ ಬಂದಮೇಲೆ ಇಲ್ಲಿ ಹೆಚ್ಚಿನ ಸರ್ವರುಗಳು ಫಿಲಿಪಿನೋಗಳು ಅಥವಾ ಪೂರ್ವ ಯೂರೋಪಿಯನ್ನರು. ಎರಡೂ ಕಡೆಯಲ್ಲಿ ವೈಟರುಗಳು “ಇವ ಇಂಡಿಯನ್. ಹಾಗಾಗಿ ಇವ ಟಿಪ್ಸ್ ಕೊಡೋದಿಲ್ಲ. ಕೊಟ್ಟರೂ ಜಾಸ್ತಿ ಕೊಡಲಿಕ್ಕಿಲ್ಲ” ಅನ್ನೋ ಭಾವನೆಯಲ್ಲಿರ್ತಾರೆ. ಹಾಗಾಗಿ ಅವರು ಕೊಡುವ ಸೇವೆಯೂ ಕೆಲವೊಮ್ಮೆ ಅಷ್ಟಕ್ಕಷ್ಟೇ ಇರುತ್ತದೆ. ಅವರ ಸೇವೆ ಬರೀ ಅಷ್ಟಷ್ಟೇ ಇದ್ದಾಗ ಟಿಪ್ಸ್ ಕೊಡೋಕೆ ನಿಮಗೂ ಮನಸ್ಸು ಬರಲ್ಲ. ಒಂದಿನ ನಾನಿಲ್ಲಿನ ಪಂಚತಾರಾ ಹೋಟೆಲೊಂದರಲ್ಲಿದ್ದೆ. ಅಲ್ಲಿನ ವೈಟರು ನನ್ನೊಂದಿಗೆ ನಡೆದುಕೊಂಡ ರೀತಿ ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಯಾಕೆಂದರೆ ಉಳಿದವರೆಲ್ಲಾ ಕರೆದಕೂಡಲೇ ಬಂದು ಸರ್ವ್ ಮಾಡುತ್ತಿದ್ದವ ನಾನು ಕರೆದರೆ ಮಾತ್ರ ನಾಪತ್ತೆ. ಎರಡುಬಾರಿ ನಾನು ಕೇಳಿದ್ದೇ ಒಂದು, ಅವ ತಂದದ್ದೇ ಇನ್ನೊಂದು! ಕೊನೆಗೆ ಹೊರಡುವ ಮುನ್ನ, ಅವನನ್ನು ಮತ್ತು ಫ್ಲೋರ್ ಮ್ಯಾನೇಜರ್ ಇಬ್ಬರನ್ನೂ ಕರೆದು ಬಿಲ್ಲಿನ ಹಣ ಪಾವತಿ ಮಾಡಿ, ಜೇಬಿನಿಂದ ಐವತ್ತು ದಿರಹಂ ಹೊರಗೆ ತೆಗೆದು “ಈ ಹಣ ನಾನು ಇವನಿಗೆ ಟಿಪ್ಸ್ ಕೊಡಬೇಕು ಅಂತಲೇ ಇಟ್ಟುಕೊಂಡದ್ದು. ಆದರೆ ಇವನ ಸರ್ವೀಸು ನನಗಿಷ್ಟವಾಗಲಿಲ್ಲ. ಆದ್ದರಿಂದ ಈ ಟಿಪ್ಸು ಕೊಡುತ್ತಿಲ್ಲ FYI” ಅಂತ ಹೇಳಿ ಮರಳಿ ಜೇಬಿಗಿಟ್ಟೆ. ಅವತ್ತಿಂದ ಇವತ್ತಿನವರೆಗೂ ನಾನು ಹೊಸ ಹೋಟೆಲುಗಳಿಗೆ ಹೋದರೆ ಟಿಪ್ಸಿನ ವಿಚಾರ ಮೊದಲಿಗೇ ಹೇಳಿಬಿಡುತ್ತೇನೆ. ಕೆಲ ಹೋಟೆಲುಗಳಲ್ಲಿ ಸರ್ವೀಸ್ ಚಾರ್ಜ್ ಅಂತಾ ಮೊದಲೇ ಸೇರಿಸಿಬಿಟ್ಟಿರುತ್ತಾರೆ. ಅಂತಾಕಡೆ ನಾನು ಟಿಪ್ಸ್ ಕೊಡುವುದಿಲ್ಲ. ಸರ್ವೀಸ್ ಇಷ್ಟವಾಗಿಲ್ಲವೆಂದರೆ ಜಗಳ ಮಾಡಿ ಬಿಲ್ಲಿನಿಂದ ಸರ್ವೀಸ್ ಚಾರ್ಜ್ ತೆಗೆಸಿದ್ದೂ ಇದೆ.

ನನ್ನ ಹಾಗೂ ಯಾವ ಭಾರತೀಯರ ಬಗ್ಗೆಯೂ ಯಾರಿಗೂ ಕೆಟ್ಟ ಸ್ಟಿರಿಯೋಟೈಪು ಬರುವ ಹಾಗೆ ನಾನು ನಡೆದುಕೊಳ್ಳಲ್ಲ. ನೀವೂ ಪ್ರಯತ್ನಿಸುತ್ತೀರಿ ತಾನೇ?

#ರಾಘವಾಂಕಣ

Video credit and copyright: ixigo

Leave a comment