ಈ ವಿಜ್ಞಾನ ಭವಿಷ್ಯ ತಿಳಿದಿದ್ದೀರೇನು? (ಭಾಗ – 2)

(…ಮುಂದುವರೆದಿದೆ)

3ಡಿ ಮುದ್ರಣ:
3d-printing

ಹತ್ತು ವರ್ಷದ ಹಿಂದೆ ಅತ್ಯಂತ ಅಗ್ಗದ 3ಡಿ ಪ್ರಿಂಟರ್’ಗೆ 18000 ಡಾಲರ್ ಬೆಲೆಯಿತ್ತು. ಇವತ್ತು 400 ಡಾಲರ್’ಗೆ 3ಡಿ ಪ್ರಿಂಟರ್ ಸಿಗುತ್ತಿದೆ. ಇದೇ ಹತ್ತು ವರ್ಷದಲ್ಲಿ ಈ ಮುದ್ರಕ ತನ್ನ ದಕ್ಷತೆ ಮತ್ತು ವೇಗವನ್ನು ನೂರುಪಟ್ಟು ಹೆಚ್ಚಿಸಿಕೊಂಡಿದೆ. ಹೆಚ್ಚಿನ ಶೂ ಕಂಪನಿಗಳು ತನ್ನ ಶೂಗಳನ್ನು 3ಡಿ ಪ್ರಿಂಟ್ ಮಾಡಲು ಪ್ರಾರಂಭಿಸಿವೆ. ಬಹಳಷ್ಟು ದೂರದ ವಿಮಾನನಿಲ್ದಾಣಗಳಲ್ಲಿ ವಿಮಾನದ ಸಣ್ಣಪುಟ್ಟ ಭಾಗಗಳನ್ನು ಫ್ರಾನ್ಸಿನಿಂದ, ಅಮೇರಿಕಾದಿಂದ, ಬ್ರೆಝಿಲ್’ನಿಂದ ಅಮದು ಮಾಡಿಕೊಳ್ಳುವ ಬದಲು ಅಲ್ಲೇ ಹ್ಯಾಂಗರುಗಳಲ್ಲಿ 3ಡಿ ಮುದ್ರಣ ಮಾಡಲಾಗ್ತಾ ಇದೆ. ದೂರದ ನಿಲ್ದಾಣಗಳನ್ನು ಬಿಡಿ, ಇಲ್ಲೇ ದುಬೈನಲ್ಲೇ ಎಮಿರೇಟ್ಸ್ ಕಂಪನಿ ಸಣ್ಣಪುಟ್ಟ ಬಿಡಿಭಾಗಗಳನ್ನು ತಾನೇ ಪ್ರಿಂಟ್ ಮಾಡುತ್ತಿದೆ. ಭೂಮಿಯಮೇಲೆ ಮಾತ್ರವಲ್ಲದೇ ಬಾಹ್ಯಾಕಾಶದಲ್ಲೂ 3ಡಿ ಮುದ್ರಣ ಶುರುವಾಗಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ಕ್ಕೆಂದೇ ವಿಶೇಷವಾಗಿ ತಯಾರಿಸಲಾದ 3ಡಿ ಮುದ್ರಕದಿಂದಾಗಿ ಎಷ್ಟೋ ಬಿಡಿಬಾಗಗಳನ್ನೂ, ಉಪಕರಣಗಳನ್ನೂ ISS ತಾನೇ ಮುದ್ರಿಸಿ, ಬಳಸುತ್ತಿದೆ. ಈಗ ಸಣ್ಣದೊಂದು ರಿವಿಟ್ ಲೂಸಾದರೆ, ಅದನ್ನು ಸರಿಪಡಿಸೋಕೆ ನಾಸಾ ತನ್ನ ಕೊಲಂಬಿಯಾ ಅಥವಾ ಅಟ್ಲಾಂಟಿಸ್ ಶಟಲ್ ಬಸ್ಸುಗಳನ್ನು ಕಳಿಸುವ ಅಗತ್ಯವಿಲ್ಲ.

ಈಗ ನಡೆಯುತ್ತಿರುವ ತಂತ್ರಜ್ಞಾನ ಅಭಿವೃದ್ಧಿ, ನಮ್ಮ ಸ್ಮಾರ್ಟ್-ಫೋನುಗಳೇ 3ಡಿ ಮುದ್ರಣ ಮಾಡಲು ಸಾಧ್ಯವೇ ಎಂಬ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ. ಅಭಿವೃದ್ಧಿಯ ವೇಗವನ್ನು ಗಮನಿಸಿದರೆ 2020ರ ಹೊತ್ತಿಗೆ, ಮನೆಯಲ್ಲೇ ನಿಮ್ಮ ಕಾಲಿನ ಸ್ಕ್ಯಾನಿಂಗ್ ಮಾಡಿ, ನಿಮ್ಮ ಕಾಲಿಗೆ ತಕ್ಕನಾದ ಚಪ್ಪಲಿಯನ್ನ ನೀವೇ ಪ್ರಿಂಟ್ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. Winsun ಎಂಬ ಕಂಪನಿ ಚೀನಾದಲ್ಲಿ ಅದಾಗಲೇ ಸಂಪೂರ್ಣ 3ಡಿ ಮುದ್ರಣದಿಂದಲೇ ಆರಂತಸ್ತಿನ ಮನೆಯೊಂದನ್ನು ಕಟ್ಟಿ ಮುಗಿಸಿದ್ದಾರೆ. 2027ರ ಹೊತ್ತಿಗೆ ಜಗತ್ತಿನಲ್ಲಿ ಉತ್ಪಾದನೆಯಾಗುತ್ತಿರುವ ಎಲ್ಲಾ ವಸ್ತುಗಳ 10% ಉತ್ಪಾದನೆ 3ಡಿ ಮುದ್ರಣದಿಂದಲೇ ನಡೆಯಲಿದೆ.

ಔದ್ಯೋಗಿಕ ಹಾಗೂ ವ್ಯವಹಾರ ಅವಕಾಶಗಳು:
future-proof

ನಿಮ್ಮ ತಲೆಯಲ್ಲೊಂದು ಈವರೆಗೂ ಯಾರೂ ಪ್ರಯತ್ನಿಸದ ಒಂದೊಳ್ಳೆಯ ಬ್ಯುಸಿನೆಸ್ ಐಡಿಯಾ ಇದೆ ಅಂತಿಟ್ಕೊಳ್ಳಿ. ಮುಂದಿನ ಆರು ತಿಂಗಳಲ್ಲಿ ನೀವು ಈ ಬ್ಯುಸಿನೆಸ್ ಶುರು ಮಾಡ್ಬೇಕು ಅಂತಿದ್ದೀರ. ಈ ಹಾಗೂ ಮುಂದಿನ ದಿನಗಳಲ್ಲಿ ಬ್ಯುಸಿನೆಸ್ ಪ್ರಾರಂಭಿಸುವ ಮುನ್ನ ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ “ಇವತ್ತಿಗೆ ನನ್ನ ಈ ಉತ್ಪನ್ನದ ಅವಶ್ಯಕತೆಯಿದೆ. ಮುಂದಿನ ಐದು ವರ್ಷಕ್ಕೂ ಈ ಅವಶ್ಯಕತೆ ಇರುತ್ತಾ?”. ಉತ್ತರ ಹೌದು ಎಂದಾದರೆ ನೀವು ತಕ್ಷಣ ಯೋಚಿಸಬೇಕಾದದ್ದು “ಆ ಐದು ವರ್ಷದ ನಂತರದ ಪ್ರಾಡಕ್ಟನ್ನ ಇಂದೇ ಉತ್ಪಾದಿಸುವುದು ಹೇಗೆ?” ಎಂದು. ನಿಮ್ಮ ಈ ಉತ್ಪನ್ನ ಅಥವಾ ಐಡಿಯಾ ಫೋನಿನೊಂದಿಗೆ ಕೆಲಸ ಮಾಡುತ್ತಾ ಎಂದು ಪರಿಶೀಲಿಸಿಕೊಳ್ಳಿ. ಫೋನಿಗೂ ಅದಕ್ಕೂ ಸಂಬಂಧವಿಲ್ಲ ಅಂತಾದರೆ ನಿಮ್ಮ ಬ್ಯುಸಿನೆಸ್ ಐಡಿಯಾ ಗೆಲ್ಲೋದು ಕಷ್ಟವಿದೆ ಎಂದೇ ಅರ್ಥ. ಇಪ್ಪತ್ತನೇ ಶತಮಾನದಲ್ಲಿ ಯಾವ್ಯಾವ ಔದ್ಯೋಗಿಕ ಅವಕಾಶಗಳು ಸಫಲವಾಗಿದ್ದವೋ, ಇಪ್ಪತ್ತೊಂದನೆಯ ಶತಮಾನದಲ್ಲಿ ಗೋತಾ ಹೊಡೆಯೋ ಸಾಧ್ಯತೆಗಳೇ ಹೆಚ್ಚು.

ಉದ್ಯೋಗವಕಾಶಗಳು:

Replaced-By-Robots_v3
ಜಗತ್ತಿನಲ್ಲಿ ಇವತ್ತಿರುವ 40%-50% ಕೆಲಸಗಳು ಮುಂದಿನ 20ವರ್ಷಗಳಲ್ಲಿ ಇರೋದೇ ಇಲ್ಲ. ರಿಸೆಪ್ಷನಿಸ್ಟ್, ಗ್ರಾಹಕರ ಕರೆ ಸ್ವೀಕಾರ ಮಾಡುವ ಕೆಲಸಗಳು, ಮೊದಲಹಂತದ ಗ್ರಾಹಕ ಸಪೋರ್ಟ್, ಮನೆಗೆ ವಸ್ತುಗಳನ್ನು ತಲುಪಿಸುವ ಕೆಲಸಗಳು ಮುಂತಾದುವೆಲ್ಲಾ ಮನುಷ್ಯರಿಗೆ ಸಿಗದೇ ಇರುವಂತೆ ಮಾಯವಾಗ್ತಾವೆ. ಆ ಜಾಗಗಳಲ್ಲಿ ಕಂಪ್ಯೂಟರ್ ಮತ್ತು ರೋಬೋಟುಗಳು ಬಂದು ಕೂರ್ತಾವೆ. ಇನ್ನೆಷ್ಟೋ ಕೆಲಸಗಳು ಈಗಿರುವ ರೀತಿಗಿಂತಾ ಹೆಚ್ಚು ಬದಲಾಗ್ತಾವೆ. ಎಲ್ಲೆಲ್ಲೆ ಸಾಧ್ಯವೋ ಅಲ್ಲಲ್ಲಿ ಕೆಲಸಗಳು ಯಾಂತ್ರೀಕೃತಗೊಳ್ತಾವೆ. ಹಾಗಂತಾ ಮನುಷ್ಯರಿಗೆ ಕೆಲಸಗಳೇ ಇರೊಲ್ಲ ಅಂತಲ್ಲಾ. ಹೊಸಹೊಸ ರೀತಿಯ ಕೆಲಸಗಳು ಸೃಷ್ಟಿಯಾಗ್ತಾವೆ. ಆದರೆ ಈಗಿರುವ ಜನಸಂಖ್ಯೆಯ ಪ್ರಮಾಣಾನುಗತವಾಗಿ ಕೆಲಸಗಳ ಸಂಖ್ಯೆಯೂ ಇರುತ್ತದೆಯೋ ಇಲ್ಲವೋ ಎಂಬುದನ್ನು ಸಮಯವೇ ಹೇಳಬೇಕು. ಆದರೆ ಕೆಲಸಗಳ ಸಂಖ್ಯೆ ಕಡಿಮೆಯಾಗುವುದಂತೂ ಹೌದು.ಕೃಷಿ:

ಕೆಲವೇ ವರ್ಷಗಳಲ್ಲಿ ನೂರು ಡಾಲರ್’ಗೂ ಕಡಿಮೆ ಬೆಲೆಗೆ ಕೃಷಿಸಂಬಂಧೀ ರೋಬೋಟ್ ಮಾರುಕಟ್ಟೆಗೆ ಬರಲಿದೆ. ಅವುಗಳ ಸದ್ಬಳಕೆ ಮಾಡಿಕೊಂಡು ಏಷ್ಯಾದ ಕೃಷಿಪ್ರಧಾನ ದೇಶಗಳ ರೈತರು ದಿನವಿಡೀ ಹೊಲದಲ್ಲಿ ದುಡಿಯುತ್ತಾ ನಿಲ್ಲುವಬದಲು, ವರ್ತಕರು ಮತ್ತು ಮ್ಯಾನೇಜರುಗಳ ಸ್ಥಾನಗಳಲ್ಲಿ ನಿಲ್ಲಬಹುದು. ಕೃಷಿವಿಜ್ಞಾನ ಬೆಳೆದಷ್ಟೂ ನಮ್ಮ ಹೊಲಗಳಲ್ಲಿ ಕಡಿಮೆ ನೀರಿನ ಬಳಕೆಯ ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತದೆ. ಹೋದವರ್ಷವಷ್ಟೇ ವಿಜ್ಞಾನಿಗಳು ಪ್ರಯೋಗಶಾಲೆಯಲ್ಲಿ ಮಾಂಸವನ್ನು ಬೆಳೆಸಿದ್ದಾರೆ. ಕೆಲವರ್ಷಗಳಲ್ಲಿ ಪ್ರಯೋಗಶಾಲೆಯಲ್ಲಿ ಬೆಳೆಸಲಾದ ಮಾಂಸ, ಪ್ರಾಣಿಯಿಂದ ಪಡೆದ ಮಾಂಸದಷ್ಟೇ ಅಥವಾ ಅದಕ್ಕಿಂತಾ

Agricultural-Drone

ಅಗ್ಗವಾಗಲಿದೆ. ಸದ್ಯದ ಕೃಷಿಭೂಮಿಯ 30%, ಪ್ರಾಣಿಗಳ ಬಳಕೆಗಾಗಿ ಅದರಲ್ಲೂ ದನಗಳ ಬಳಕೆಗಾಗಿ ಮೀಸಲಿಡಲಾಗ್ತಾ ಇದೆ. ಮಾಂಸಕ್ಕೊಸ್ಕರ ಪ್ರಾಣಿಗಳನ್ನು ಸಾಕದೇ ಇದ್ದಲ್ಲಿ, ಆ ಜಾಗವೂ ಕೃಷಿಬಳಕೆಗೆ ಸಿಕ್ಕರೆ ಎಷ್ಟು ಉಪಯೋಗವಾಗಬಹುದು ಯೋಚಿಸಿ ನೋಡಿ! ಇದು ಮಾತ್ರವಲ್ಲದೇ ಮನುಷ್ಯರ ಮಾಂಸಸೇವನೆ ಬಾಯಿರುಚುಗೆ ಅಂತಾ ನಾವಂದುಕೊಂಡಿದ್ದರೂ ಸಹ, ಅದರ ಮುಖ್ಯ ಕಾರಣ ದೇಹದ ಪ್ರೋಟೀನ್ ಪೂರೈಕೆಗಾಗಿ ಮಾತ್ರ. ಇದೇ ಪ್ರೋಟೀನ್ ಬೇರೆ ಮೂಲಗಳಿಂದಲೂ ದೊರೆಯುವಂತಾದರೆ? ಮಾಂಸಗಳಿಂದ ದೊರೆಯುವ ರೀತಿಯದ್ದೇ ಪ್ರೋಟೀನ್ಗಳನ್ನು ಕೊಡುವ ಕೀಟಗಳಿಂದಲೂ ಅದನ್ನು ಪಡೆದು ಸಂಸ್ಕರಿಸಿ, ಮಾನವ ಬಳಕೆಗೆ ಯೋಗ್ಯಗೊಳಿಸಿ ಮಾರುಕಟ್ಟೆಗೆ ಬಿಡುವ ಸ್ಟಾರ್ಟ್-ಅಪ್ ಕಂಪನಿಗಳು ಆಗಲೇ ತಮ್ಮ ಕೆಲಸ ಆರಂಭಿಸಿವೆ. ಕೀಟಗಳಲ್ಲಿ ಮಾಂಸಕ್ಕಿಂತಾ ಹೆಚ್ಚು ಪ್ರೋಟೀನ್ ಪಡೆಯುವ ಅವಕಾಶವಿದೆ. ಸದ್ಯದಲ್ಲೇ ನಿಮ್ಮ ಸಮೀಪದ ಅಂಗಡಿಯಲ್ಲಿ “ಪರ್ಯಾಯ ಪ್ರೋಟೀನ್ ಮೂಲಗಳಿಂದ ಪಡೆದ ಪಥ್ಯ ಪೂರಕ” ಎಂಬ ಲೇಬಲ್ ಧರಿಸಿರುವ ಬಾಟಲಿ ಕಂಡುಬಂದರೆ ಗಾಬರಿಬೀಳುವ ಅಗತ್ಯವಿಲ್ಲ. (‘ಪರ್ಯಾಯ ಮೂಲ’ ಎಂಬ ಲೇಬಲ್ ಏಕೆಂದರೆ ಹೆಚ್ಚಿನ ಜನರಿನ್ನೂ ಕೀಟಗಳನ್ನು ಆಹಾರವೆಂದು ಸ್ವೀಕರಿಸುವ ಮನಸ್ಸು ಮಾಡದಿರುವುದಷ್ಟೇ).

ಮಾನವ ನಡವಳಿಕೆಗಳು ಹಾಗೂ ನೈತಿಕತೆ:

ಹೆಚ್ಚಿನ ಆಪ್-ಸ್ಟೋರುಗಳಲ್ಲಿ ‘ಮೂಡೀಸ್’ ಅನ್ನುವ ಒಂದು ಆಪ್ ಅದಾಗಲೇ ಇದೆ. ಬಿಯಾಂಡ್ ವರ್ಬಲ್ ಎಂಬ ಕಂಪನಿ ಹದಿನೈದು ವರ್ಷಗಳ ಅಧ್ಯಯನದ ನಂತರ ಬಿಡುಗಡೆ ಮಾಡಿರುವ (ಹಾಗೂ ಮತ್ತೆ ಮತ್ತೆ ಅಭಿವೃದ್ಧಿಪಡಿಸುತ್ತಲೇ ಇರುವ) ಈ ಆಪ್, ನಿಮ್ಮ ಧ್ವನಿಯನ್ನು ಕೇಳಿ ನಿಮ್ಮ ಮೂಡ್ ಹೇಗಿದೆ ಅಂತಾ ಹೇಳಬಲ್ಲದು. ನಿಮ್ಮ ಬಾಸ್ ಹತ್ರಾ ರಜಾ ಅರ್ಜಿ ಹಿಡಿದು ಹೋಗಿದ್ದೀರ. ಬಾಸ್ ನಗದೇ, ಸಿಟ್ಟು ಮಾಡದೇ ನಿಮ್ಮ ಅರ್ಜಿ ಒಪ್ಪಿದ್ದಾನೆ. ಯಾವತ್ತೂ ಇಷ್ಟು ಸುಲಭವಾಗಿ ರಜಾ ಕೊಡಲು ಒಪ್ಪದ ನಿಮ್ಮ ಬಾಸು ಒಪ್ಪಿದ್ದು ಆಶ್ಚರ್ಯವೇ? ಮನಸ್ಸಲ್ಲಿ ಸಂತೋಷವಿದ್ದರೂ, ನಿಮಗ್ಯಾಕೋ “ಈ ಒಪ್ಪಿಗೆ ಯಾಕೋ ಒಂದ್ವಾರ ಕಳೆದ ಮೇಲೆ ತಿರುಗುಬಾಣವಾಗಲಿದೆ” ಅಂತಾ ಅನ್ನಿಸುತ್ತಿದೆಯಾ? ನಿಮ್ಮ ಮೂಡೀಸ್ ಆಪ್ ತೆರೆದಿಟ್ಟು, ಮತ್ತೆ ಬಾಸ್ ಕ್ಯಾಬಿನ್ನಿಗೆ ಹೋಗಿ ಒಂದು ನಿಮಿಷ ಮಾತನಾಡಿ, ನಿಮಗೆ ಉತ್ತರ ಸಿಗಬಹುದು. ಯಾಕೆಂದರೆ ಮೂಡೀಸ್ ಬರೀ ನಿಮ್ಮ ಮೂಡ್ ಮಾತ್ರವಲ್ಲ, ನಿಮ್ಮ ಫೋನಿನ ಮೈಕ್ರೋಫೋನ್ ಅನ್ನು ತೆರೆದಿಟ್ಟರೆ ಯಾರ್ಯಾರು ಮಾತನಾಡುತ್ತಿದ್ದಾರೋ ಅವರ ಚಿತ್ತ, ವರ್ತನೆ, ಸ್ವಭಾವ ಮಾತ್ರವಲ್ಲದೇ ಅವರ ವ್ಯಕ್ತಿತ್ವದ ಬಗ್ಗೆಯೂ ತಿಳಿಯಲು ಸಹಕರಿಸಲಿದೆ.
fwl6wlng49-moodies
ನೀವು ಆಫೀಸಿನಲ್ಲಿ ಕೆಲಸ ಮುಗಿಸಿ ಹೈರಾಣಾಗಿ ಹೈವೇನಲ್ಲಿ 90ಕಿಮೀ ವೇಗದಲ್ಲಿ ಡ್ರೈವ್ ಮಾಡುತ್ತಾ ಮನೆಕಡೆಗೆ ಹೋಗುತ್ತಿದ್ದೀರ. ಹಿಂದಿನ ಸೀಟಿನಲ್ಲಿ ನಿಮ್ಮ ಮಕ್ಕಳಿಬ್ಬರೂ ಏನೋ ವಿಚಾರಕ್ಕೆ ಪಿರಿಪಿರಿಪಿರಿ ಅಂತಿದ್ದಾರೆ. ನಿಮಗೆ ತಲೆಚಿಟ್ಟುಹಿಡಿದು “ಏಯ್! ಸುಮ್ನೇ ಕೂರ್ರೋ!!” ಅಂತಾ ಅರಚುತ್ತೀರಾ. ತಕ್ಷಣ ನಿಮ್ಮ ಫೋನ್ ನಿಮ್ಮ ಧ್ವನಿಯಲ್ಲಿರುವ ಒತ್ತಡ ಹಾಗೂ ಸಿಟ್ಟನ್ನರಿತು, ತಾನು ಕನೆಕ್ಟ್ ಆಗಿರುವ ಕಾರಿನ ಕಂಪ್ಯೂಟರಿಗೆ ಹೇಳಿ ನಿಮ್ಮ ಕಾರಿನ ವೇಗವನ್ನು  60ಕ್ಕಿಳಿಸುವಂತಾದರೆ!!
2020ರ ಒಳಗೆ ನಿಮ್ಮ ಧ್ವನಿ ಮತ್ತು ಮುಖಭಾವವನ್ನು ಗಮನಿಸಿ ನೀವು ಸುಳ್ಳು ಹೇಳುತಿದ್ದೀರೋ ಇಲ್ಲವೋ ಎಂಬುದನ್ನು ಬರೀ ನಿಮ್ಮ ಮೊಬೈಲ್ ಕ್ಯಾಮೆರಾ ಉಪಯೋಗಿಸಿ ಕೆಲಸಮಾಡಿ ಹೇಳುವ ಆಪ್’ಗಳಿಗೆ ಪೇಟೆಂಟ್ ಪಡೆಯಲು ಅದಾಗಲೇ ಕಂಪನಿಗಳು ಕ್ಯೂನಲ್ಲಿ ನಿಂತಿವೆ. ನಿಮ್ಮ ಸ್ಥಳೀಯ ರಾಜಕಾರಣಿ ತನ್ನ ಭಾಷಣದಲ್ಲಿ ಕೊಡುತ್ತಿರುವ ಆಶ್ವಾಸನೆಗಳು, ಮಾಡುತ್ತಿರುವ ಆರೋಪಗಳು ನಿಜವೋ, ಟೊಳ್ಳೋ ಅಂತಾ ಗೊತ್ತಾಗುವಂತಾದರೆ!!
…….ಕಲ್ಪನೆ ಒಳ್ಳೆಯದಿದೆಯಲ್ಲವೇ?
(ಇಷ್ಟೆಲ್ಲಾ ತಂತ್ರಜ್ಞಾನ ಮುಂದುವರೆದರೂ ಹೆಣ್ಣುಮಕ್ಕಳ ಮಾತಿಗೂ, ಅದರ ನಿಜಾರ್ಥಕ್ಕೂ ಯಾವತ್ತೂ ಸಂಬಂಧವಿರಲ್ಲ ಅನ್ನೋ ಜೋಕುಗಳು ನಿಧಾನವಾಗಿ ಹಳೆಯದಾಗುತ್ತವೆಯೋ ಇಲ್ಲವೋ ಇನ್ನೂ ಗೊತ್ತಿಲ್ಲ 🙂 )

ಹಣಕಾಸು:

BiteMyCoin-Cryptocurrency

ಎಲ್ಲೆಡೆ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ಎಲ್ಲಾ ವಿರೋಧಗಳ ನಡುವೆಯೂ ಮುಖ್ಯವಾಹಿಸಿಗೆ ಬರಲಿದೆ. ದೇಶಗಳೆಲ್ಲಾ ಒಟ್ಟಿಗೆ ಸೇರಿ ಇದಕ್ಕೊಂದು ನಿಯಮವಾಳಿಗಳನ್ನ ರೂಪಿಸಿದರೆ, ಇದೇ ಸಾಮಾನ್ಯ ರಿಸರ್ವ್ ಕರೆನ್ಸಿಯಾಗಬಹುದು. ಬರೀ ಒಂದೇ ದೇಶದ ಕರೆನ್ಸಿಯಾದ ಡಾಲರ್ ಮೇಲೆ ಅವಲಂಬಿತವಾಗುವ ಬದಲು, ಜಗತ್ತಿನ ಕರೆನ್ಸಿಯಾಗಬಲ್ಲ ಬಿಟ್-ಕಾಯಿನ್ ಮೇಲೆ ತಮ್ಮ ದೇಶೀಯ ಕರೆನ್ಸಿಗಳನ್ನು ಆಂಕರ್ ಮಾಡಿ ತಮ್ಮ ಸ್ಟಾಕ್ ಮಾರ್ಕೆಟ್ಗಳನ್ನು ಈಗಿಗಿಂತಾ ಹೆಚ್ಚು ಸ್ಥಿರವಾಗಿಸಬಹುದು.

ಆಯಸ್ಸು:

how-to-live-longer-and-feel-better-pdf_opt

ಇವತ್ತಿನ ತಂತ್ರಜ್ಞಾನಭಿವೃದ್ಧಿಯ ವೇಗದಲ್ಲಿ ಮನುಷ್ಯನ ಆಯಸ್ಸು ವರ್ಷಕ್ಕೆ ಮೂರುತಿಂಗಳಿನಂತೆ ಹೆಚ್ಚಾಗ್ತಾ ಇದೆ. ನಾಲ್ಕುವರ್ಷದ ಹಿಂದೆ ಮಾನವನ ಸರಾಸರಿ ಆಯಸ್ಸು 79ವರ್ಷವಾಗಿತ್ತು. ಇವತ್ತು ಅದು 80ವರ್ಷವಾಗಿದೆ. ಬರೀ ಸರಾಸರಿ ಆಯಸ್ಸು ಮಾತ್ರ ಹೆಚ್ಚಾಗ್ತಾ ಇಲ್ಲ, ವರ್ಷದಿಂದವರ್ಷಕ್ಕೆ ಆಯಸ್ಸಿನ ವೃದ್ಧಿಯೂ ಹೆಚ್ಚಾಗ್ತಾ ಇದೆ. 2036ರ ಹೊತ್ತಿಗೆ ವಿಜ್ಣ್ಯಾನಿಗಳು ಪ್ರತಿವರ್ಷವೂ ಮಾನವನ ಆಯಸ್ಸಿಗೆ ಒಂದುವರ್ಷ ಸೇರಿಸುವಷ್ಟು ಮುಂದುವರೆಯುತ್ತಾರೆ. ನಮ್ಮ ಆಹಾರಪದ್ಧತಿಗಳಲ್ಲಿ ಗಣನೀಯ ಮತ್ತು ಗಮನಾರ್ಹ ಗುಣಾತ್ಮಕ ಬದಲಾವಣೆಗಳಾದರೆ ಮನುಷ್ಯ ನೂರಕ್ಕಿಂತ ಹೆಚ್ಚು ವರ್ಷ ಬದುಕುವುದು ತೀರಾ ಅಸಾಧ್ಯವಾಗಲಿಕ್ಕಿಲ್ಲ.

ಶಿಕ್ಷಣ:

ಇಂದು ಆಫ್ರಿಕಾ ಮತ್ತು ಏಷ್ಯಾದ ದೇಶಗಳಲ್ಲಿ 10ಡಾಲರ್’ಗಳಿಗೆ ಅತ್ಯಂತ ಅಗ್ಗವಾದ ಸ್ಮಾರ್ಟ್ಫೋನ್ಗಳು ಲಭ್ಯವಿವೆ.

modern-education-app

2022ರ ಹೊತ್ತಿಗೆ
ಜಗತ್ತಿನ 70% ಜನಸಂಖ್ಯೆ ಸ್ಮಾರ್ಟ್ಫೋನ್ ಬಳಸಲಿದೆ. ಈ ಫೋನುಗಳ ಬಗ್ಗೆ ಜೋಕುಗಳದೇನೇ ಇರಲಿ, ಶಿಕ್ಷಣ ಕ್ಷೇತ್ರದಲ್ಲಿ ಅನುಭವವಿದ್ದವನಿಗೆ ಫೋನುಗಳನ್ನು ಬಳಸಿಕೊಂಡು ಹೇಗೆ ಶಿಕ್ಷಣಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆಗಳನ್ನು ತರಬಹುದು ಎಂದು ತಿಳಿದಿರುತ್ತೆ. ಜಗತ್ತನೆಲ್ಲೆಡೆ ಉತ್ತಮ ಶಿಕ್ಷಣ ಸುಲಭವಾಗಿ ದೊರೆಯುವಂತಾದರೆ ಅದೇ ಅಲ್ಲವೇ ಶ್ರೀಮಂತ ಭವಿಷ್ಯ?

ಇದೆಲ್ಲಾ ಬರೆಯುವಾಗ ನನಗೆ ಇತ್ತೀಚೆಗೆ ನೋಡಿದ “ಪ್ಯಾಡ್-ಮ್ಯಾನ್” ಚಿತ್ರದ ಒಂದು ಸಾಲು ಬಹಳವಾಗಿ ನೆನಪಿಗೆ ಬರುತ್ತಿದೆ. ಅದರ ನಾಯಕ ಕೊನೆಯಲ್ಲಿ UNಅನ್ನು ಉದ್ದೇಶಿಸಿ ಮಾತನಾಡುವಾಗ ಹೇಳ್ತಾನೆ “ನನ್ನ ಪ್ರಕಾರ, ಯಾವ ತಂತ್ರಜ್ಞಾನ ಮನುಷ್ಯನ ಜೀವನವನ್ನು ಮತ್ತು ಮಾನವೀಯ ಮೌಲ್ಯಗಳನ್ನು ತಟ್ಟುತ್ತದೆಯೋ, ಅದೇ ನಿಜವಾದ ಅಭಿವೃದ್ಧಿ”. ನಮ್ಮಲ್ಲಿ ಎಷ್ಟೋ ಜನರು “ಈ ಊಬರ್ ಆಪ್ ಕಂಡುಹಿಡಿದವ ಎಂತಾ ಬುದ್ಧಿವಂತ ಮಾರಾಯ, ಜಗತ್ತನ್ನೇ ಬದಲಾಯಿಸಿಬಿಟ್ಟ” ಅಂತಾ ಹೇಳಿದಾಗಲೆಲ್ಲಾ ನನಗೆ ಹುಸಿನಗು ಬರುತ್ತದೆ. ಯಾಕೆಂದರೆ ಈ ಊಬರ್, ಓಲಾಗಳಿಂದ ಆರ್ಥಿಕವಾಗಿ ನಾವು ವ್ಯವಹರಿಸುವ ರೀತಿ ಬದಲಾಗಿರಬಹುದು, ಟ್ಯಾಕ್ಸಿಗಳಿಗಾಗಿ ನಾವು ಕಾಯುವ ರೀತಿ ನಾವವುಗಳನ್ನ ಬಳಸುವ ರೀತಿ ಬದಲಾಗಿದೆಯೇ ಹೊರತು, ಅದರಿಂದ ಮನುಷ್ಯನ ಜೀವನವೇನೂ ಸುಧಾರಣೆಗೊಂಡಿಲ್ಲ.

ಆ ರೀತಿಯಲ್ಲಿ ನೋಡಿದರೆ ಟೆಸ್ಲಾ ಕಂಪನಿಯ ನಿರ್ಮಾತೃ ಎಲೋನ್ ಮಸ್ಕ್’ನ ಆವಿಷ್ಕಾರಗಳು ಬಹಳಷ್ಟು ಹಂತಗಳಲ್ಲಿ , ಬೇರೆ ಬೇರೆ ಸಮಯಗಳಲ್ಲಿ ನಿಜಕ್ಕೂ ಜನರ ಜೀವನಗಳಲ್ಲಿ ಬದಲಾವಣೆ ತರಬಲ್ಲವಾಗಿವೆ. ಆತನ ಎಲೆಕ್ಟ್ರಿಕ್ ಕಾರುಗಳು, ಟ್ರಕ್ಕುಗಳು ಇವತ್ತಿಗೆ ರಸ್ತೆಯಲ್ಲಿ ಸಣ್ಣದೊಂದು ಚಳುಕು ಹುಟ್ಟಿಸಿವೆ. ಎಲೆಕ್ಟ್ರಿಕ್ ಕಾರುಗಳೆಂದರೆ ಬರೀ ಬೆಂಕಿಪೊಟ್ಟಣದ ಗಾತ್ರದವು, 60 ಕಿಮೀ ವೇಗವನ್ನು ದಾಟಲಿಕ್ಕಿಲ್ಲ ಎಂಬ ಅನಿಸಿಕೆಯನ್ನು ಚೂರುಚೂರಾಗಿಸಿ ಎಲೆಕ್ಟ್ರಿಕ್-ಕಾರು ಕೂಡಾ ಬೆಂಝ್’ನಷ್ಟೇ ಸುಂದರವಾಗಿರಬಲ್ಲುದು, ಪೋರ್ಶದಷ್ಟೇ ವೇಗವಾಗಿ ಚಲಿಸಬಲ್ಲುದು, ಹೋಂಡಾದಷ್ಟೇ ಮಾಲೀಕನ ಜೇಬಿಗೆ ಹಿತವಾಗಬಲ್ಲದು ಎಂಬುದನ್ನು ತೋರಿಸಿಕೊಟ್ಟಿದೆ. ಜೊತೆಗೇ ಈ ಕಾರುಗಳ ಮಾರಾಟ ಉಳಿದ ಕಾರು ತಯಾರಕರಿಗೂ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಯೋಚಿಸುವಂತೆ ಮಾಡಿದೆ. ಈ ಟ್ರೆಂಡ್ ಕಾರಣದಿಂದ ವಿದ್ಯುತ್ತನ್ನು ಬೇರೆ ಬೇರೆ ಮೂಲಗಳಿಂದ, ಅದರಲ್ಲೂ ಹೆಚ್ಚೆಚ್ಚು ಅಜೈವಿಕ ಮೂಲಗಳಿಂದ, ಪಡೆಯುವ ರೇಸ್ ಉಂಟಾಗಿದೆ. ಈ ಸ್ಪರ್ಧೆಯಿಂದಾಗಿ ಹೆಚ್ಚು ವಿದ್ಯುತ್ ಕೂಡಾ ಸಿಗುತ್ತಿದೆ, ಜೊತೆಗೇ ವಿದ್ಯುತ್ತಿನ ಬೆಲೆ ಕಡಿಯಾಗುತ್ತಲೇ ಹೋಗುತ್ತಿದೆ. ಅಂದರೆ ಎಲ್ಲರಿಗೂ ದಿನದ 24ಘಂಟೆಯೂ ವಿದ್ಯುತ್, ಅದರಲ್ಲೂ ಅಗ್ಗದ ವಿದ್ಯುತ್ ಸಿಗಲಾರಂಭಿಸುತ್ತದೆ. ಕೈಗಾರಿಕೆಗಳು ಹೆಚ್ಚು ಉತ್ಪಾದಕ ಉದ್ದಿಮೆಗಳಾಗಲಿವೆ. ವಿದ್ಯುತ್ ಆಧಾರಿತ ಸೇವೆಗಳು ಅಗ್ಗವಾಗಲಿವೆ. ಹೀಗೆ, ಒಬ್ಬ ಮನುಷ್ಯನ ‘ವೇಗದ ಎಲೆಕ್ಟ್ರಿಕ್ ಕಾರು ತಯಾರಿಸಬೇಕೆಂಬ’ ಹಂಬಲ, ಛಲದ ಬೆನ್ನಲ್ಲೇ ಸಮಾಜದ ಬೇರೆ ಬೇರೆ ಸ್ಥರದ ಜನರಿಗೆ ಪರೋಕ್ಷ ಉಪಯೋಗವಾಗಲಿದೆ. ಈತನ ಇನ್ನೊಂದು ಕನಸು ಮತ್ತೆ ಮತ್ತೆ ಉಪಯೋಗಿಸಬಲ್ಲ ರಾಕೆಟ್ ಅನ್ನು ತಯಾರಿಸುವುದು. ಇದೂ ಕೂಡಾ ರಾಕೆಟ್ ತಂತ್ರಜ್ಞಾನದಲ್ಲಿ ಭಾರೀ ಬದಲಾವಣೆ ತರಲಿದೆ. ಮುಂದೊಂದು ದಿನ ನಮ್ಮ ಮಕ್ಕಳು ಮಧುಚಂದ್ರಕ್ಕೆ ಚಂದ್ರನ ಮೇಲಿಳಿಯಲೂ, ಅಥವಾ ನಮ್ಮ ಮರಿಮೊಕ್ಕಳು ಬೇಸಿಗೆ ರಜಕ್ಕೆ ಮಂಗಳನ ಅಂಗಳಕ್ಕೇ ಹೋಗಲು ಇಂತಹ ಕನಸುಗಳು ಮತ್ತದಕ್ಕನುಗುಣವಾದ ಅಭಿವೃದ್ಧಿಗಳಿಂದ ಮಾತ್ರವೇ ಸಾಧ್ಯವಿದೆ. ನಾವು ನಿಂತಲ್ಲಿಗೇ ಟ್ಯಾಕ್ಸಿ ಅಥವಾ ಊಟ ಕರೆಸಿದರೇನು ಬಂತು, ಟೆಸ್ಲಾದಂತಹ ಕನಸುಗಳಿಂದಲ್ಲವೇ ಮನುಕುಲ ನಿಜಕ್ಕೂ ಮುಂದುವರೆಯಲು ಸಾಧ್ಯ?  (ಟೆಸ್ಲಾ ಒಂದು ಸುಲಭ ಉದಾಹರಣೆಯಷ್ಟೇ)

ಚಿತ್ರಕೃಪೆ: ಅಂತರ್ಜಾಲ (ಎಲ್ಲಾ ಚಿತ್ರಗಳ ಹಕ್ಕುಗಳು ಆಯಾ ವಾರಸುದಾರರಿಗೆ ಸೇರಿದ್ದು)

 

Advertisements

ಈ ವಿಜ್ಞಾನ ಭವಿಷ್ಯ ತಿಳಿದಿದ್ದೀರೇನು? (ಭಾಗ – 1)

(ರಾಬರ್ಟ್ ಗೋಲ್ಡ್ಮನ್’ರ Future Predictions ಎಂಬ ಪ್ರಬಂಧದಿಂದ ಪ್ರೇರಿತ ಬರಹ)
13315789_10209535133754601_5093488145198763625_n
ಲೇಖನದ ತಲೆಬರಹ ನೋಡಿ ಇದೇನಪ್ಪಾ ಹಸ್ತ ಭವಿಷ್ಯ ಗೊತ್ತು, ವಾಸ್ತು ಭವಿಷ್ಯ ಕೇಳಿದ್ದೀನಿ, ವಿಜ್ಞಾನದಲ್ಲೂ ಭವಿಷ್ಯವೇ ಅಂದ್ಕೋಬೇಡಿ. ಇದು ನಮ್ಮ ವೈಜ್ಞಾನಿಕ ಅಭಿವೃದ್ಧಿಗಳ ನಾಗಾಲೋಟದ ಬೆಳವಣಿಗೆಯ ಬಗ್ಗೆ ಭವಿಷ್ಯದ ನುಡಿ. ನಾವೀಗ ಸದ್ಯಕ್ಕೆ ವಿಜ್ಞಾನದ ಸುವರ್ಣಯುಗದಲ್ಲಿ ಬದುಕುತ್ತಿದ್ದೇವೆ. ನಮ್ಮ ಜೀವನದ ಪ್ರತಿಯೊಂದು ಅಂಗುಲದಡಿಯಲ್ಲೂ ವಿಜ್ಞಾನ ಬೆಳೆದು ಆಕ್ರಮಿಸಿಕೊಂಡಿದೆ. ಹತ್ತುವರ್ಷದ ಹಿಂದೆ ನಾವು ಊಹಿಸಿರದ ರೀತಿಯಲ್ಲಿ ವಿಜ್ಞಾನ ಬೆಳೆದಿದೆ. 2008ರಲ್ಲಿ ಇನ್ನೂ ಮೊಬೈಲ್ ಫೋನಿನ ಮುಖ್ಯ ಉದ್ದೇಶ ಇನ್ನೊಬ್ಬರಿಗೆ ಕರೆ ಮಾಡೋದೇ ಆಗಿತ್ತು. ಉಳಿದಂತೆ ಸಂಗೀತ, ಕ್ಯಾಮೆರಾಗಳೆಲ್ಲಾ ಒಂದರೊಟ್ಟಿಗೆ ಒಂದು ಫ್ರೀ ಎಂಬಂತೆ ಸಿಗುತ್ತಿದವಷ್ಟೇ. ಆದರೆ ಇವತ್ತು ಎಲ್ಲದಕ್ಕೂ ಒಂದು ಆಪ್ ಇದೆ, ಎಲ್ಲಿದ್ದೀವಿ ಏನು ಮಾಡುತ್ತಿದ್ದೀವಿ ಎಂದು ಹೇಳುವುದಕ್ಕೂ ಒಂದು ಕಂಪ್ಯೂಟರ್ ಪ್ರೋಗ್ರಾಮ್ ಬಂದಿವೆ. 2008ರಲ್ಲಿ ತಾನು ತಾಯಿಯಾದರೆ ಕರೆಮಾಡಿ ಹೇಳುತ್ತಿದ ಜನ, 2018ರಲ್ಲಿ ಇನ್ಸ್ಟಾಗ್ರಾಮ್’ನಲ್ಲಿ ಫೋಟೋ ಹಾಕಿ ಹೇಳಲಾರಂಭಿಸಿದ್ದಾರೆ. ನಮ್ಮ ಜನ ಕಟ್ಟಕಡೇ ಎಸ್ಸೆಮ್ಮೆಸ್ಸು ಕಳಿಸಿ ಯಾವ ಕಾಲಯಾವಾಯ್ತೋ! ಈಗೇನಿದ್ರೂ ವಾಟ್ಸ್ಯಾಪ್, ಟೆಲಿಗ್ರಾಮ್, ಸ್ನಾಪ್-ಚಾಟ್ ಕಾಲ. ಅಜ್ಜ ಸತ್ತರೆ ಅಳುತ್ತಿದ್ದ ಮೊಮ್ಮಕ್ಕಳು ಇವತ್ತು ಅಜ್ಜನ ಚಟ್ಟನ ಪಕ್ಕ ನಿಂತು “Last snap with my grandpa” ಅಂತಾ ಫೇಸ್ಬುಕ್ಕಿನಲ್ಲಿ ಫೋಟೋ ಹಾಕುತ್ತಿದ್ದಾರೆ. ಈ ಹತ್ತು ವರ್ಷದಲ್ಲೇ ನಮ್ಮ ಜೀವನ ಹೀಗಾಗಿರಬೇಕಾದರೆ ಮುಂದಿನ ಇಪ್ಪತ್ತು ವರ್ಷಗಳಲ್ಲಿ ಹೇಗಾಗಬಹುದು ಎಂಬ ಕಲ್ಪನೆ ನಮ್ಮೆಲ್ಲರಿಗೂ ಒಂದಲ್ಲ ಒಂದು ಸಲ ಬಂದಿರುತ್ತೆ. ಕನಸೂ ಕಂಡಿರ್ತೀವಿ.
ಆದರೆ , ಜನ ಭವಿಷ್ಯದ ಬಗ್ಗೆ ಮಾತನಾಡುವಾಗ ಎಂತೆಂತದೋ ಕಲ್ಪನೆಗಳನ್ನಿಟ್ಟುಕೊಂಡಿರ್ತಾರೆ. ಹಾಲಿವುಡ್ಡಿನ ಸೈ-ಫೈ ಚಿತ್ರಗಳನ್ನ ನೋಡಿ ಇನ್ನೇನು ಎರಡುಮೂರು ವರ್ಷಗಳಲ್ಲಿ ಹಾರುವ ಕಾರುಗಳೇ ಬಂದುಬಿಡ್ತಾವೆ ಅಂತಾ ನಿರೀಕ್ಷೆ ಇಟ್ಟುಕೊಂಡವರಿಗೇನು ಕೊರತೆಯಿಲ್ಲ. ತಮಾಷೆಯೆಂದರೆ, ಹಾಲಿವುಡ್ಡಿನ ಬರಹಗಾರರು, ಗ್ರಾಫಿಕ್ ಆರ್ಟಿಸ್ಟುಗಳು ಈ ರೀತಿ ಹಾರುವ ಕಾರುಗಳು ಬರ್ತಾವೆ ಅನ್ನೋ ಕಲ್ಪನೆಯನ್ನ 1970ರಿಂದScreen Shot 2018-04-06 at 11.14.04 AMಲೂ ಹರಿಬಿಡ್ತಾಲೇ ಇದ್ದಾರೆ.  ಕ್ರಿಯೇಟಿವಿಟಿಯ ಗ್ರೇವಿಗೆ ಯಾವುದರ ಹಂಗು? ಅದು ತನಗೆ ಹೆಂಗ್ ಬೇಕೋ ಹಂಗೆ ಹರಿಯುತ್ತೆ. ಯಾರೂ ಕೂಡಾ Air Traffic Control ಅನ್ನೋದು ಅದೆಷ್ಟು ಕ್ಲಿಷ್ಟವಿಚಾರ, ಅದೆಷ್ಟೋ ಎತ್ತರದಲ್ಲಿ ಹಾರುವ ಮಾಮೂಲಿ ಏರೋಪ್ಲ್ಲೇನುಗಳನ್ನೇ ಸುಧಾರಿಸೊಕ್ಕೆ ಕಷ್ಟಪಡ್ತಾ ಇದ್ದೀವಿ, ಇದರ ಜೊತೆಗೆ ಮಾರುತಿ-800ಗಳೂ ಹಾರೋಕೆ ಶುರುಮಾಡಿದ್ರೆ ಏನಾಗುತ್ತೆ ಅನ್ನೋದರನ್ನ ಅರ್ಥ ಮಾಡ್ಕೊಳ್ಳೋದೇ ಇಲ್ಲ. ಭವಿಷ್ಯ ಅಂದರೆ ಹೀಗೇ ಹಾರುವ ಕಾರುಗಳ, ರೋಬೋಟುಗಳ ಕಾಲ ಅಂತಲೇ ಅಂದ್ಕೊಳ್ಳುವುದರ ನಡುವೆ, ನಿಜವಾಗಲೂ ಭವಿಷ್ಯ ಹೇಗಿರುತ್ತೆ ಅಂತಾ ಯೋಚಿಸುವವರು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಒಂದು ಕ್ಷಣಕ್ಕೆ ಈ “ಇನ್ನೂ ಮುಖ್ಯವಾಹಿನಿಗೆ ಬರದಿರುವ” ತಂತ್ರಜ್ಞಾನಗಳ ಉಸಾಬರಿ ಬದಿಗಿಟ್ಟು, ಈಗಾಗಲೇ ನಮ್ಮ ಬಳಿಯಿರುವ ತಂತ್ರಜ್ಞಾನಗಳು ಹಾಗೂ ಅವುಗಳ ಸುಧಾರಿತ ವರ್ಷನ್ನುಗಳು ತರಬಹುದಾದ ಭವಿಷ್ಯದ ಬಗ್ಗೆ ಯೋಚಿಸುತ್ತಾ ಈ ಬರಹ. ಇದರಲ್ಲಿ “ಹೊಸದಾಗಿ ಏನು ಬರುತ್ತೆ” ಅಂತಾ ಬೂಸಿ ಬಿಡೋದನ್ನ ಬದಿಗಿಟ್ಟು, ಸಧ್ಯದ ಪರಿಸ್ಥಿತಿಯೇ ಮುಂದುವರೆದರೆ “ಈಗಿರುವ ಹಾಗೂ ಹಳೆಯದರ ಕಥೆ ಏನಾಗುತ್ತೆ” ಎನ್ನುವ ಬಗ್ಗೆ ಅವಲೋಕನವಿದೆ.
ಮುಂದಿನದರ ಬಗ್ಗೆ ಯೋಚಿಸುವ ಮುನ್ನ, ನಮ್ಮ ನಿನ್ನೆಗಳು ಹೇಗಿದ್ದವು ಹಾಗೂ ನನ್ನ ಇವತ್ತುಗಳು ಹೇಗೆ ನಿನ್ನೆಯ ಕೆಲ ತಂತ್ರಜ್ಞಾನಗಳನ್ನ ಅಳಿಸಿಹಾಕಿವೆ ಎಂಬುದನ್ನೊಮ್ಮೆ ನೋಡಿ. 1998ರಲ್ಲಿ ಕೊಡಾಕ್ ಎಂಬ ಕಂಪನಿ ಛಾಯಾಚಿತ್ರಗ್ರಾಹಕರ ಮೆಚ್ಚಿನ ಕಂಪನಿಯಾಗಿತ್ತು. ಜಗತ್ತಿನ 85% ಫೋಟೋ ಪೇಪರನ್ನ ತಯಾರಿಸ್ತಾ ಇದ್ದ ಈ ಕಂಪನಿ 1,70,000 ಉದ್ಯೋಗಿಗಳಿದ್ದ ದೈತ್ಯ. ಆದರೆ 2003ರಷ್ಟೊತ್ತಿಗೆ ಕಂಪನಿ ದಿವಾಳಿಯಂಚಿಗೆ ತಲುಪಿತ್ತು. ಅವರ ವ್ಯವಹಾರ ಮಾದರಿ (business model) ನಾಪತ್ತೆಯೇ ಆಗಿಹೋಗಿತ್ತು. 2012ರ ಜನವರಿಯಲ್ಲಿ ಅಧಿಕೃತವಾಗಿ ದಿವಾಳಿಯೆಂದು ಘೋಷಿಸಿಕೊಂಡು ಸರ್ಕಾರದಿಂದ ಸಹಾಯ ಕೋರಿಕೆಗೆ ಅರ್ಜಿ ಹಾಕಿತು. ಕೊಡಾಕ್’ಗೆ ಆದ ಗತಿಯೇ ಇನ್ನೂ ಎಷ್ಟೋ ಕಂಪನಿಗಳಿ ಮುಂದಿನ ಹತ್ತುವರ್ಷಗಳಲ್ಲಿ ಆಗಲಿದೆ. ಹಾಗೂ ಎಷ್ಟೋ ಕಂಪನಿಗಳಿಗೆ ಅದಿನ್ನೂ ತಿಳಿದೂ ಇಲ್ಲ. 1998ರಲ್ಲಿ, ಇನ್ನು ಮೂರುವರ್ಷಗಳಲ್ಲಿ 80% ಜನಸಾಮಾನ್ಯರು ಫಿಲಂಗಳನ್ನುಪಯೋಗಿಸಿ ಫೋಟೋ ತೆಗೆಯೋದೇ ಇಲ್ಲ ಅಂತಾ ಸ್ವತಃ ಕೊಡಾಕ್’ಗೆ ಕೂಡಾ ತಿಳಿದಿರಲಿಲ್ಲ. ತಮಾಷೆಯ ವಿಷಯವೆಂದರೆ 1975ರಲ್ಲಿ ಜಗತ್ತಿನ ಮೊತ್ತಮೊದಲ ಡಿಜಿಟಲ್ ಕ್ಯಾಮೆರಾ ತಯಾರಿಸಿದ್ದು ಇದೇ ಕೊಡಾಕ್ ಕಂಪನಿ. ಆಗಿನ್ನೂ ಅದರಲ್ಲಿದ್ದದ್ದು ಬರೇ ಹತ್ತುಸಾವಿರ ಪಿಕ್ಸೆಲ್’ಗಳು. ಆಮೇಲೆ ಅದನ್ನ ಅಭಿವೃದ್ಧಿಪಡಿಸಿ ಅಗ್ಗವಾಗಿಸಿದ್ದೂ ಸಹಾ ಇದೇ ಕೊಡಾಕ್ ಕಂಪನಿ. ಆದರೆ ಡಿಜಿಟಲ್ ಕ್ಯಾಮರಾವನ್ನ ಕೊಡಾಕ್ ಯಾವತ್ತೂ ಜನಸಾಮಾನ್ಯರ ತಂತ್ರಜ್ಞಾನ ಅಂತಾ ಪರಿಗಣಿಸಲೇ ಇಲ್ಲ. ಅವರು ಬಹುಷಃ ಅದನ್ನ ಹೆಚ್ಚೆಚ್ಚು ಅಭಿವೃದ್ಧಿಪಡಿಸಿ ಹಾಲಿವುಡ್’ಗೆ ಮಾರುವ ಯೋಚನೆಯಲ್ಲಿದ್ದರು. ಕೊಡಾಕ್’ನ ಎಕ್ಸಿಕ್ಯೂಟಿವ್’ಗಳಿಗೆ ಫಿಲಂ ಕ್ಯಾಮರಾ ಇಲ್ಲದ ಜಗತ್ತನ್ನ ಊಹಿಸಲು ಸಾಧ್ಯವಾಗಲೇ ಇಲ್ಲ. ಫ್ಯೂಜಿಪಿಲಂನೊಂದಿಗಿನ ತನ್ನ ವ್ಯವಹಾರ ವೈರತ್ವದಲ್ಲೇ ಬಿಡುವಿಲ್ಲದೇ ತೊಡಗಿಸಿಕೊಂಡ ಕೊಡಾಕ್, ಮೂರ್’ನ ನಿಯಮ (Moore’s Law) ಅರ್ಥೈಸಿಕೊಳ್ಳುವಲ್ಲಿ ಎಡವಿತು. (ಮೂರ್’ನ ನಿಯಮ – ಫೈರ್ಚೈಲ್ಡ್ ಸೆಮಿಕಂಡಕ್ಟರ್ ಹಾಗೂ ಇಂಟೆಲ್’ನಂತಹ ಕಂಪನಿಗಳ ಸ್ಥಾಪಕ ಗೋರ್ಡನ್ ಮೂರ್, 1965ರ ತನ್ನ ಪ್ರಬಂಧವೊಂದರಲ್ಲಿ “ವಿದ್ಯುನ್ಮಾನ ಕ್ಷೇತ್ರದಲ್ಲಿ ಪ್ರತೀ ವರ್ಷಕ್ಕೊಮ್ಮೆ ಇಂಟಿಗ್ರೇಟೆಡ್ ಸರ್ಕ್ಯೂಟ್’ಗಳ ಮೇಲಿರುವ ಘಟಕಗಳ ಸಂಖ್ಯೆ ದ್ವಿಗುಣಗೊಳ್ಳುತ್ತದೆ” ಎಂದಿದ್ದ. ಈಗ ಇದು ಪ್ರತಿ 18ತಿಂಗಳಿಗೊಮ್ಮೆ ದ್ವಿಗುಣಗೊಳ್ಳುತ್ತೆ ಎಂಬಲ್ಲಿಗೆ ಬಂದು ನಿಂತಿದೆ). 1995ರ ತನಕವೂ ತೆವಳುತ್ತಲೇ ಸಾಗಿದ ಈ ಡಿಜಿಟಲ್ ಕ್ಯಾಮರಾ ತಂತ್ರಜ್ಞಾನ, ಮುಂದಿನ ಐದು ವರ್ಷಗಳಲ್ಲಿ ಘಾತೀಯ ಮಟ್ಟದಲ್ಲಿ (exponential rate) ಅಭಿವೃದ್ಧಿ ಹೊಂದಿತು. ಇದೇ ರೀತಿಯ ಬೆಳವಣಿಗೆ ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (ಅಥವಾ ಕೃ-ಬುದ್ಧಿಮತ್ತೆ) ಅಭಿವೃದ್ಧಿ (Artifical Intelligence), ವೈದ್ಯಕೀಯ ರಂಗ, ಸ್ವಯಂಚಾಲಿತ ಹಾಗೂ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿ, ಶಿಕ್ಷಣರಂಗ, 3D ಪ್ರಿಂಟಿಂಗ್, ಕೃಷಿ ಹಾಗೂ ಉದ್ಯೋಗರಂಗದಲ್ಲಿ ಆಗಲಿದೆ. ನಾಲ್ಕನೇ ಕೈಗಾರಿಕಾ ಕ್ರಾಂತಿಯ ಘಟ್ಟದಲ್ಲಿ ನಾವೀಗ ನಿಂತಿದ್ದೀವಿ. ರಾಬರ್ಟ್ ಗೋಲ್ಡ್ಮನ್ ಎಂಬ ತಂತ್ರಜ್ಞ, ತಮ್ಮ ದ್ವಿಗುಣ-ತ್ರಿಗುಣ ವೇಗದ ಅಭಿವೃದ್ಧಿಯಿಂದ ಜಗತ್ತಿನ ಚಹರೆಯನ್ನೇ ಬದಲಿಸಬಲ್ಲ ಈ ಕೆಲವು ತಂತ್ರಜ್ಞಾನಗಳನ್ನು ಘಾತೀಯ ತಂತ್ರಜ್ಞಾನಗಳು (Exponential technologies) ಎಂದೂ, ಈ ತಂತ್ರಜ್ಞಾನಗಳು ಉಪಯೋಗಿಸಲ್ಪಡುವ ಈ ಕಾಲಘಟ್ಟಕ್ಕೆ ಘಾತೀಯ ಯುಗ (Exponential age) ಅಂತಲೂ ಕರೆದಿದ್ದಾನೆ. ಈ ಯುಗದ ಕೆಲ ಪದರಗಳನ್ನ ಅವಲೋಕಿಸೋಣ ಬನ್ನಿ.
ಹೊಸರೀತಿಯ ಉದ್ಯೋಗಗಳು:
Future-Jobsಕಳೆದ ಹತ್ತುವರ್ಷ ಕಂಪ್ಯೂಟರುಗಳು ನಮ್ಮ ಜೀವನವನ್ನ ಬದಲಾಯಿಸಿದವು. ಕಂಪ್ಯೂಟರುಗಳ ಅವಲೋಕನಾ ಸಾಮರ್ಥ್ಯ ಮತ್ತು ವೇಗ ಎರಡು ಹತ್ತುಪಟ್ಟು ಹೆಚ್ಚಿದವು. ಟಿಕೇಟುಗಳು ಟೂರ್ ಏಜೆನ್ಸಿಗಳಲ್ಲಿ, ಉದ್ದ ಕ್ಯೂ ಇರುವ ಕೌಂಟರುಗಳ ಮುಂದೆ ಬುಕ್ ಆಗುವುದು ನಿಂತು ಯಾವುದೋ ಕಾಲವಾಯಿತು. ಇಂದು ಎಲ್ಲಾ ರೀತಿಯ ಟಿಕೇಟುಗಳು ನಮ್ಮ ಫೋನುಗಳಲ್ಲಿ, ಸಣ್ಣ ಕ್ಯೂಗಳ ಕೌಂಟರುಗಳಲ್ಲಿ ಬುಕ್ ಆಗುತ್ತಿವೆ. ಬಿಲ್ ಕಟ್ಟಲು ಕೆಇಬಿ ಆಫೀಸಿಗೆ ಹೋಗುವ ಅಗತ್ಯ ಇಂದಿಲ್ಲ. ಸಾಫ್ಟ್ವೇರುಗಳು ಎಷ್ಟೋ ಸಾಂಪ್ರದಾಯಿಕ ಬ್ಯುಸಿನೆಸ್ ಮಾಡೆಲ್’ಗಳನ್ನು ಹಾಗೂ ಜೊತೆಗೇ ಜಗತ್ತನ್ನೂ ನಾವಂದುಕೊಂಡದ್ದಕ್ಕಿಂತಾ ಚಿತ್ರ-ವಿಚಿತ್ರರೀತಿಯಲ್ಲಿ ಬದಲಾಯಿಸುತ್ತಿವೆ. ‘ಊಬರ್’ ಇವತ್ತು ಜಗತ್ತಿನ ಅತೀದೊಡ್ಡ ಟ್ಯಾಕ್ಸಿ ಕಂಪನಿ. ಆದರೆ ಈ ಕಂಪನಿಯ ಬ್ಯಾಲೆನ್ಸ್ ಶೀಟಿನಲ್ಲಿ ಒಂದೇ ಒಂದು ಕಾರು ಟ್ಯಾಕ್ಸಿಯ ರೂಪದಲ್ಲಿಲ್ಲ. ‘ಏರ್ ಬಿ-ಎನ್-ಬಿ’ ಎಂಬುದು ಜಗತ್ತಿನ ಅತೀದೊಡ್ಡ ಹೋಟೆಲ್ ಕಂಪನಿ. ಆದರೆ ಇಡೀ ಭೂಮಿಯಮೇಲೆ ಅವರು ‘ನಮ್ಮದು’ ಅಂತಾ ಹೇಳಿಕೊಳ್ಳುವ ಒಂದೇ ಒಂದು ಹೋಟೆಲ್ ಕಟ್ಟಡವಿಲ್ಲ. ಭಾರತದಲ್ಲಿ ಓಲಾ, ಓಯೋ ರೂಮ್ಸ್, ಪೇಟಿಎಂನಂತಹ ಕಂಪನಿಗಳು ಹೊಸರೀತಿಯದ್ದೇ ಕೆಲಸಗಳನ್ನು ಸೃಷ್ಟಿಸುತ್ತಿವೆ. ನೀವಿರುವ ಜಾಗದಿಂದೆದ್ದು ಹೋಟೆಲಿನವರೆಗೆ ಸೋಮಾರಿತನ ಇರುವವರಿಗಾಗಿ ಇವತ್ತು ಝೊಮ್ಯಾಟೋ, ಸ್ವಿಗ್ಗಿಯಂತಹಾ ಆಪ್ ಬಂದಿವೆ. ಜೊತೆಗೇ, ಆರ್ಡರ್ ಮಾಡಿದ ಊಟವನ್ನು ಹೋಟೆಲಿನಿಂದ ನಿಮ್ಮ ಮನೆಗೆ ಕಳುಹಿಸುವ ಡೆಲಿವರಿ ಕಂಪನಿಗಳ ಹೊಸಾದೊಂದು ಉದ್ಯೋಗಾವಕಾಶ ಸಾಧ್ಯತೆಯನ್ನೇ ತೆರೆದಿಟ್ಟಿವೆ.
ಕೃ-ಬುದ್ಧಿಮತ್ತೆ (Artificial Intelligence):
ಕಂಪ್ಯೂಟರುಗಳೀಗ ಜಗತ್ತನ್ನು ಅರ್ಥೈಸಿಕೊಳ್ಳುವಲ್ಲಿಯೂ ಹಿಂದೆಂದೆಂದಿಗಿಂತಲೂ ಹೆಚ್ಚು ನಿಪುಣತೆಯನ್ನು ಪಡೆದಿವೆ. 2017ರಲ್ಲಿ, ಗೂಗಲ್ ಅಭಿವೃದ್ಧಿ ಪಡಿಸಿದ ಆಲ್ಫಾ-ಗೋ ಎಂಬ ಕಂಪ್ಯೂಟರ್, Go ಆಟ(19×19 ಮನೆಯ ಬೋರ್ಡ್ ಮೇಲೆ ಆಡುವ ಸ್ಟ್ರಾಟಜೀ ಗೇಮ್)ದಲ್ಲಿ ಜಗತ್ತಿನಲ್ಲೇ ಚತುರನೆಂದು ಹೆಸರು ಪಡೆದಿದ್ದ ಕೆ ಜೇಯೀ ಎಂಬ 19 ವರ್ಷದ ಆಟಗಾರನನ್ನು ಸೋಲಿಸಿತು. ವಿಜ್ಞಾನಿಗಳ ಹಳೆಯ ಲೆಕ್ಕಾಚಾರದ ಪ್ರಕಾರ ಕಂಪ್ಯೂಟರೊಂದು ಮನುಷ್ಯನನ್ನು ಈ ಆಟದಲ್ಲಿ ಸೋಲಿಸಲು ಇನ್ನೂ ಹತ್ತು ವರ್ಷ ಬೇಕಿತ್ತು.

finnovate-blog-ai-and-blockchain-for-global-stage-banner

ಅಮೇರಿಕಾದಲ್ಲಿ ಹೊಸದಾಗಿ ಕಾನೂನು ಪದವಿ ಪಡೆಯುತ್ತಿರುವವರಿಗೆ ಕೆಲಸಗಳು ಸಿಗುವುದೇ ಕಷ್ಟವಾಗುತ್ತಿದೆ. ಯಾಕೆಂದರೆ ರಾಸ್ಸ್ ಇಂಟೆಲಿಜೆನ್ಸ್ ಎಂಬ ಹೊಸಾ ಕಂಪನಿಯೊಂದು ಐಬಿಎಮ್’ನ ವಾಟ್ಸನ್ ಎಂಬ ಪ್ರಶ್ನೋತ್ತರ ತಂತ್ರಾಂಶಕ್ಕೆ ಅಮೇರಿಕಾದ ಎಲ್ಲಾ ಪ್ರಾಂತ್ಯಗಳ ಕಾನೂನನ್ನೂ, ಹಾಗೂ ಸಾಧ್ಯವಿರುವಷ್ಟು ಎಲ್ಲಾ ಕೇಸುಗಳನ್ನೂ ಕಲಿಸಿಟ್ಟಿದೆ. ಈಗ ಪಾರಾಲೀಗಲ್ಲುಗಳು ಮಾಡಬೇಕಾದ ಕೆಲಸ ತಮ್ಮದೇ ಸಹದ್ಯೋಗಿಯೊಂದಿಗೆ ಮಾತನಾಡುವ ಭಾಷೆಯಲ್ಲೇ ಕಾನೂನಾತ್ಮಕ ಸಮಸ್ಯೆಯೊಂದನ್ನು ಪ್ರಶ್ನಾರೂಪದಲ್ಲಿ ಕೇಳಿದರಾಯಿತು. ವಾಟ್ಯ್ಸನ್ ತನ್ನ ಡೇಟಾಬೇಸಲ್ಲಿರುವ ಕೇಸುಗಳನ್ನೂ, ಪ್ರಶ್ನೆಗೆ ಸಂಬಂಧಿಸಿದ ಕಾನೂನು ಪರಿಚ್ಛೇದಗಳನ್ನೂ ಅವಲೋಕಿಸಿ ಪರಿಹಾರವನ್ನು ಮುಂದಿಡುತ್ತದೆ, ಅದೂ ಸೆಕೆಂಡುಗಳಲ್ಲಿ. ಅದೇ ಪ್ರಶ್ನೆಗಳಿಗೆ ಮಾನವ ಲಾಯರೊಬ್ಬ 70% ಕರಾರುವಕ್ಕಾಗಿ ಉತ್ತರ ಕೊಡುವಲ್ಲಿ (ಅದೂ ಗಂಟೆಗಟ್ಟಲೇ ಅಭ್ಯಾಸದ ನಂತರ), ವಾಟ್ಸನ್ 90% ಕರಾರುವಕ್ಕಾಗಿ ಉತ್ತರಕೊಡುತ್ತದೆ. ಹಾಗಂತ ಲಾಯರುಗಳಿಗೆ ಮುಂದೆ ಕೆಲಸವೇ ಇರುವುದಿಲ್ಲ ಎಂದಲ್ಲ. ಲಾಯರುಗಳು ಇನ್ನುಮುಂದೆ ಕಾನೂನಿನ ನಿರ್ದಿಷ್ಟ ವಿಚಾರಗಳಲ್ಲಿ ಪರಿಣಿತರಾಗುತ್ತಾರೆ. ಆದರೆ ಸಣ್ಣಪುಟ್ಟ ಸಾಮಾನ್ಯಕೇಸುಗಳನ್ನೂ, ಹಾಗೂ ಎಲ್ಲಾ ಕೇಸಿಗಳಿಗೆ ಸಂಬಂಧಪಟ್ಟ ಸಣ್ಣಪುಟ್ಟ ಕೆಲಸಗಳಿಗೆ ಜೂನಿಯರ್ ಲಾಯರುಗಳ ಅವಶ್ಯಕತೆ ಇಲ್ಲವಾಗುತ್ತದೆ. ಇದೇ ವಾಟ್ಸನ್, ವೈದ್ಯಕೀಯ ರಂಗದಲ್ಲಿ, ಕ್ಯಾನ್ಸರ್ ಪತ್ತೆಹಚ್ಚುವಲ್ಲಿ ನರ್ಸ್ ಮತ್ತು ಲ್ಯಾಬ್ ಅಸಿಸ್ಟೆಂಟುಗಳಿಗೇ ಸವಾಲೊಡ್ಡುತ್ತಿದೆ. ಅದೂ ಸಹ ಮನುಷ್ಯರಿಗಿಂತ ನಾಲ್ಕುಪಟ್ಟು ಹೆಚ್ಚು ಪರಿಣಾಮಕಾರಿಯಾಗಿ. ಮನುಷ್ಯರ ಮುಖಗಳನ್ನು ಮನುಷ್ಯರಿಗಿಂತಾ ಹೆಚ್ಚು ಕರಾರುವಕ್ಕಾಗಿ ಫೇಸ್ಬುಕ್ ಗುರುತಿಸಲು ಪ್ರಾರಂಭಿಸಿದೆ. ಮಷೀನ್ ಲರ್ನಿಂಗ್, ನ್ಯಾಚುರಲ್ ಲ್ಯಾಂಗ್ವೇಜ್ ಪ್ರೋಸಿಸಿಂಗ್, ಡೀಪ್ ಲರ್ನಿಂಗ್ ಕ್ಷೇತ್ರಗಳಲ್ಲಿ ಇದೇ ರೀತಿ ಅಭಿವೃದ್ಧಿ ಮುಂದುವರೆದರೆ, 2030ರಲ್ಲಿ ಕಂಪ್ಯೂಟರುಗಳು ಎಷ್ಟೋ ಕೆಲಸಗಳಲ್ಲಿ ಮನುಷ್ಯರಿಗಿಂತಾ ಹೆಚ್ಚು ಬುದ್ಧಿವಂತರಾಗಲಿವೆ.
ಸ್ವಯಂಚಾಲಿತ ಕಾರುಗಳು:
ಭವಿಷ್ಯದ ಕಾರುಮಾರುಕಟ್ಟೆ ಮೈನವಿರೇಳಿಸುವ ಸಾಧ್ಯತೆಗಳಿಂದ ಕೂಡಿದೆ. ಯಾವುದೇ ಹಾಲಿವುಡ್ ಚಿತ್ರಕ್ಕೂ ಕಮ್ಮಿಯಿಲ್ಲದಂತೆ ನಿಮ್ಮನ್ನು ಅಚ್ಚರಿಗೊಳಿಸಲಿಗೆ. ಈ ವರ್ಷದ ಕೊನೆಯಲ್ಲಿ ಮೊತ್ತಮೊದಲ ಸ್ವಯಂಚಾಲಿತ ಕಾರುಗಳು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ನಿರೀಕ್ಷಿಸಿದಂತೆಯೇ ನಡೆದರೆ ಇನ್ನೈದು ವರ್ಷದಲ್ಲಿ ನೀವು ಸ್ವಂತಕ್ಕೆ ಕಾರು ಕೊಳ್ಳುವುದೇ ಬೇಡವೆನ್ನುವ ಮನಸ್ಸು ಮಾಡಿದರೂ ಆಶ್ವರ್ಯವೇನಿಲ್ಲ. ನಿಮಗೆ Aಯಿಂದ Bಗೆ ಹೊಗಬೇಕೆಂದೆನಿಸಿದಲ್ಲಿ, ಫೋನಿನಲ್ಲಿ ಊಬರ್ ಅಥವಾ ಓಲಾ ಬುಕ್ ಮಾಡಿದಂತೆಯೇ ಕಾರೊಂದನ್ನು ಬುಕ್ ಮಾಡಿದರಾಯ್ತು. ಸ್ವಯಂಚಾಲಿತ ಕಾರೊಂದು ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತದೆ. ಪಾರ್ಕಿಂಗ್ ಹುಡುಕುವ ಅಥವಾ ಪಾರ್ಕ್ ಮಾಡುವ ಅಗತ್ಯವಿಲ್ಲ. ನೀವು ಎಷ್ಟು ದೂರ ಓಡಿಸಿದ್ದೀರೋ ಅಷ್ಟಕ್ಕೇ ಹಣ ಪಾವತಿಸಿದರಾಯ್ತು. ಅದೂ ಅಲ್ಲದೇ ಡ್ರೈವರ್’ನ ಕಚಿಪಿಚಿಯಿಲ್ಲ. ನೀವೇ ಡ್ರೈವ್ ಮಾಡುತ್ತಾ ಸಮಯ ವ್ಯರ್ಥ ಮಾಡುವ ಅಗತ್ಯವೂ ಇಲ್ಲ. ಆಫೀಸಿನ ಕೆಲಸವಿದ್ದರೆ ಮುಗಿಸಿಕೊಳ್ಳಿ, ಅಥವಾ ಪ್ರಯಾಣಿಸುತ್ತಲೇ ಅಮ್ಮನಿಗೊಂದು ಸ್ಕೈಪ್ ಕಾಲ್ ಮಾಡಿ. ಬಹುಷಃ ನಮ್ಮ ಮಕ್ಕಳಿಗೆ (ಮಕ್ಕಳಿಗಲ್ಲದಿದ್ದರೂ

intel_lebron_car_0102_lv_1080x10801

ಮೊಮ್ಮಕ್ಕಳಿಗೆ) ಡ್ರೈವಿಂಗ್ ಲೈಸೆನ್ಸ್ ಎಂದರೇನೂ ಎಂದು ತಿಳಿಯಲಿಕ್ಕಿಲ್ಲ ಹಾಗೂ ಅವರುಗಳಿಗೆ ನಾನು ನೀವು ಅನುಭವಿಸಿದ “ನನ್ನ ಮೊದಲ ಕಾರು” ಎಂಬ ಅನುಭೂತಿಯೂ ಆಗಲಿಕ್ಕಿಲ್ಲ.
ಇದರ ನೇರಪರಿಣಾಮವಾಗಿ ನಗರಗಳೂ ಬದಲಾಗಲಿವೆ. ಈ ತಂತ್ರಜ್ಞಾನ ಹೆಚ್ಚೆಚ್ಚು ಫೈನ್-ಟ್ಯೂನ್ ಆದಷ್ಟೂ ರಸ್ತೆಯ ಮೇಲಿನ ಕಾರುಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಲಿದೆ. ಇನ್ನು ಹತ್ತುವರ್ಷದಲ್ಲಿ ಕಾರುಗಳ ಸಂಖ್ಯೆ 60-70% ಕಡಿಮೆಯಾಗಲಿದೆ. ಇದುವರೆಗೆ ಪಾರ್ಕಿಂಗ್ ಮಾಡಲು ಉಪಯೋಗಿಸುತ್ತಿದ ಸ್ಥಳಗಳಲ್ಲಿ ಪಾರ್ಕುಗಳು ನಿರ್ಮಾಣವಾಗಬಹುದು. (ಬೆಂಗಳೂರಂತಾ ನಗರದಲ್ಲಿ ಇನ್ನೊಂದಷ್ಟು ಅಪಾರ್ಟ್ಮೆಂಟುಗಳೂ ತಲೆಯೆತ್ತಬಹುದು ಎಂದು ಕುಹಕವಾಡುತ್ತೀರೇನೋ 🙂 )
ಜಗತ್ತಿನಲ್ಲಿ ಪ್ರತೀವರ್ಷ 12ಲಕ್ಷ ಜನ ರಸ್ತೆ ಅಪಘಾತಗಳಿಂದಾಗಿ ಸಾಯುತ್ತಿದ್ದಾರೆ. ಪ್ರತೀ ಲಕ್ಷ ಕಿಲೋಮೀಟರ್ ಪ್ರಯಾಣಕ್ಕೊಂದು ಅಪಘಾತ ನಡೆಯುತ್ತಿದೆ. ರಸ್ತೆಯಲ್ಲಿ ಸ್ವಯಂಚಾಲಿತ ಕಾರುಗಳ ಸಂಖ್ಯೆ ಹೆಚ್ಚಿದಷ್ಟೂ ಈ ಅಪಘಾತ ಹಾಗೂ ಸಾವುನೋವುಗಳ ಸಂಖ್ಯೆ ಗಣನೀಯವಾಗಿ ಇಳಿಯುತ್ತದೆ. ಅಪಘಾತಗಳ ಸಂಖ್ಯೆ ಪ್ರತೀ ಕೋಟಿ ಕಿಲೋಮೀಟರಿಗೊಂದಾಗುತ್ತದೆ.
ತಮ್ಮ ವ್ಯವಹಾರದ ಮಾದರಿಯನ್ನು ಬದಲಾಯಿಸಿಕೊಳ್ಳದಿದ್ದಲ್ಲಿ ಅನೇಕ ಕಾರುಗಳ ಕಂಪನಿಗಳು ದಿವಾಳಿಯಾಗುತ್ತವೆ. ಹೆಚ್ಚಿನ ಕಂಪನಿಗಳು ವಿಕಾಸನಾಕಾರಿ ತಂತ್ರವನ್ನೇ ಅನುಸರಿಸುತ್ತವೆ ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ತಮ್ಮ ಕಾರುಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತವೆ. ಇದೇ ವೇಳೆ ಟೆಸ್ಲಾ, ಆಪಲ್ ಮತ್ತು ಗೂಗಲ್’ನಂತಹ ತಂತ್ರಜ್ಞಾನೀಯ ಕಂಪನಿಗಳು ಕ್ರಾಂತಿಕಾರಿ ತಂತ್ರವನ್ನನುಸರಿಸಿ, ನಾಲ್ಕು ಚಕ್ರಗಳ ಮೇಲೆ ಕಂಪ್ಯೂಟರನ್ನು ಕೂರಿಸಿ, ಆ ಕಂಪ್ಯೂಟರನ್ನು ಅಭಿವೃದ್ಧಿಪಡಿಸುತ್ತವೆ. ಫೋಕ್ಸ್-ವ್ಯಾಗನ್, ಔಡಿಗಳಲ್ಲಿ ಟೆಸ್ಲಾ ಈಗಾಗಲೇ ನಡುಕ ಹುಟ್ಟಿಸಿದೆ. VW ಆಗಲೇ ತನ್ನ ಮರಿಕಂಪನಿಯಾದ ಪೋರ್ಷ’ಗೆ ಮಿಷನ್-ಇ ಎಂಬ ಎಲೆಕ್ಟ್ರಿಕ್ ಕಾರು ತಯಾರಿಸಲು ಸಜ್ಜು ಮಾಡಿದೆ. ಅದೂ ಸ್ವಯಂಚಾಲಿತವಾಗುವ ದಿನ ದೂರವಿಲ್ಲ.
ಇವೆಲ್ಲಕ್ಕಿಂತಾ ಹೆಚ್ಚಾಗಿ ವಾಹನ ಇನ್ಷೂರೆನ್ಸ್ ಕಂಪನಿಗಳಿಗೆ ಹೊಡೆತ ಬೀಳಲಿದೆ. ಸ್ವಯಂಚಾಲಿತ ಕಾರುಗಳೇ ತುಂಬಿರುವ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆ ಬೆರಳಿನಲ್ಲೆಣಿಸಬಹುದಾದಷ್ಟಾದರೆ, ವಾಹನ ವಿಮೆಯ ಪ್ರೀಮಿಯಂ ಗಮನಾರ್ಹವಾಗಿ ಇಳಿಕೆಯಾಗಲಿದೆ. ಹೀಗೇ ಮುಂದುವರೆದರೆ ಆಮೇಲೆ ಸ್ವಲ್ಪ ಸಮಯದಲ್ಲಿ ಕಾರ್ ವಿಮೆಯ ವ್ಯವಹಾರವೇ ಬಂದ್ ಆಗಬಹುದು.
ರಿಯಲ್ ಎಸ್ಟೇಟ್ ಉದ್ಯಮ ಸಂಪೂರ್ಣ ಬದಲಾಗಲಿದೆ. ಯಾಕೆಂದರೆ ನಿಮ್ಮ ಮನೆಯಿಂದ ಆಫೀಸಿಗೆ ತಲುಪುವ ಸಮಯ ಹೆಚ್ಚೆಚ್ಚು ಕರಾರುವಕ್ಕಾಗಿ ಊಹಿಸಬಲ್ಲುದಾದಾಗ, ನಿಮ್ಮ ಆಫೀಸು ಹೆಬ್ಬಾಳದಲ್ಲಿದ್ದರೂ ಸಹ ಕೆಂಗೇರಿಯಲ್ಲಿ ನೋಡಿದ ಸುಂದರವಾದ ಅಪಾರ್ಟ್ಮೆಂಟಿಗೆ ಹಣಹೂಡಲು ನೀವು ಹಿಂಜರಿಯುವುದಿಲ್ಲ.
ಇವಿಷ್ಟೂ ಸ್ವಯಂಚಾಲಿತ ಕಾರುಗಳ ವಿಷಯವಾಯ್ತು. ಈಗ ಇನ್ನೊಂದು ಮುಖ್ಯ ವಿಚಾರ ಅವಲೋಕಿಸೋಣ. ಈ ಸ್ವಯಂಚಾಲಿತ ಕಾರುಗಳಲ್ಲಿ ಹೆಚ್ಚಿನವು ಎಲೆಕ್ಟ್ರಿಕ್ ಕಾರುಗಳು. ಈ ಎಲೆಕ್ಟ್ರಿಕ್ ಕಾರುಗಳು ನಮ್ಮ ಭವಿಷ್ಯವನ್ನು ಹೇಗೆ ಬದಲಾಯಿಸಬಲ್ಲವು ಅಂತಾ ನೋಡೋಣ. ಪೆಟ್ರೋಲ್ ಬೆಲೆ ಕಮ್ಮಿಯಾಗುತ್ತೆ ಅನ್ನೋ ವಿಷಯಗಳೆಲ್ಲಾ ಬೇಡ. ಅಂತಾ ಭವಿಷ್ಯವನ್ನ ಯಾರು ಬೇಕಾದರೂ ಹೇಳಬಲ್ಲರು. ನಾವಿಲ್ಲಿ ಮಾತಾಡ್ತಾ ಇರೋದು ಈ ತಂತ್ರಜ್ಞಾನಗಳಿಂದ ನಮ್ಮ ಜೀವನಶೈಲಿ ಹೇಗೆ ಬದಲಾಗುತ್ತೆ ಅಂತಾ. 2020ರೊಳಗೆ ಭಾರತದಲ್ಲೂ ಎಲೆಕ್ಟ್ರಿಕ್ ಕಾರುಗಳು ಬರಲಾರಂಭಿಸುತ್ತವೆ. ಎಲೆಕ್ಟ್ರಿಕ್ ಕಾರುಗಳು ಹೆಚ್ಚಾದಷ್ಟೂ ರಸ್ತೆಗಳು, ನಗರಗಳು ಹೆಚ್ಚೆಚ್ಚು ಶಾಂತವಾಗುತ್ತವೆ. ವಿದ್ಯುದ್ಶಕ್ತಿ ಇನ್ನೂ ಅಗ್ಗವಾಗುತ್ತದೆ, ಇನ್ನೂ ಹೆಚ್ಚು ಶುದ್ಧವಾಗುತ್ತದೆ. ಸೌರಶಕ್ತಿಯಿಂದ ಉತ್ಪಾದಿಸಲಾಗುತ್ತಿರುವ ವಿದ್ಯುತ್ತಿನ ಪ್ರಮಾಣ ಕಳೆದ 30ವರ್ಷಗಳಿಂದ ಊರ್ಧ್ವಮುಖದಲ್ಲೇ ಇದೆಯಾದರೂ, ಅದರ ಪರಿಣಾಮ ನಮಗೆ ಈಗಷ್ಟೇ ಅರಿವಾಗ್ತಾ ಇದೆ. 2016 ಹಾಗೂ 2017ರಲ್ಲಿ ನಾವು ಸೌರಮೂಲದಿಂದ ಉತ್ಪಾದಿಸಿದ ವಿದ್ಯುತ್ತಿನ ಪ್ರಮಾಣ, ಬೇರೆ ಇಂಧನಮೂಲಗಳಿಂದ ತಯಾರಿಸಿದ ವಿದ್ಯುತ್ತಿಗಿಂತಾ ಹೆಚ್ಚು. ಹಾಗೂ, ಮುಂದಿನ ವರ್ಷಗಳಲ್ಲಿ ಈ ಪ್ರಮಾಣ ಹೆಚ್ಚಾಗುತ್ತಲೇ ಹೋಗಲಿದೆ. ಸೌರವಿದ್ಯುತ್ ಅದೆಷ್ಟು ಗಮನಾರ್ಹ ಪ್ರಮಾಣದಲ್ಲಿ ಉತ್ಪಾದನೆಯಾಗಲಿದೆ ಹಾಗೂ ಅಗ್ಗವಾಗಲಿದೆ ಎಂದರೆ, 2028ರ ವೇಳೆಗೆ ಕಲ್ಲಿದ್ದಲಿನ ಸ್ಥಾವರಗಳನ್ನಿಟ್ಟ ಕಂಪನಿಗಳು ದಿವಾಳಿಯೇಳುವಷ್ಟು!
shutterstock_326698985.0
ವಿದ್ಯುತ್ ಅಗ್ಗವಾದಷ್ಟೂ ನೀರು ಅಗ್ಗ ಹಾಗೂ ಹೇರಳವಾಗಲಿದೆ. ನಮಗೆ ತಿಳಿದಿರಬೇಕಾದ ಇನ್ನೊಂದು ವಿಷಯವೆಂದರೆ ಭೂಮಿಯ ಮೇಲೆ ನೀರಿಗೆ ಕೊರತೆಯಿಲ್ಲ. ಸ್ವಚ್ಚ ಕುಡಿಯುವ ನೀರಿಗಷ್ಟೇ ಕೊರತೆಯಿರೋದು. ಇವತ್ತು ಉಪ್ಪುನೀರಿನ ಅಲವಣೀಕರಣ ತಂತ್ರಜ್ಞಾನ (desalination technology) ಅದಾಗಲೇ ಅಭಿವೃದ್ಧಿಗೊಂಡು ಪ್ರತಿ ಘನ ಅಡಿ ನೀರಿಗೆ 2 ಕಿಲೋವ್ಯಾಟ್ ಅಷ್ಟೇ ವಿದ್ಯುತ್ ಬಳಸುವಷ್ಟು ಸಮರ್ಥವಾಗಿದೆ. ಇದಕ್ಕೆ ಜೊತೆಯಾಗಿ ವಿದ್ಯುತ್ತಿನ ಬೆಲೆಯೂ ಇಳಿದರೆ ಎಷ್ಟೂ ಸುಲಭವಾಗಿ ಖರ್ಚೇ ಇಲ್ಲದಂತೆ, ಅಥವಾ ಅತೀ ಕಡಿಮೆ ಖರ್ಚಿನಲ್ಲಿ, ಪ್ರತಿಮನುಷ್ಯನಿಗೂ ಸ್ವಚ್ಚ ಹಾಗೂ ಅನಿಯಮಿತ ನೀರು ಒದಗಿಸಬಹುದು, ಯೋಚಿಸಿ!
(ಭಾಗ – ೨…..ಸಧ್ಯದಲ್ಲೇ)