ರಸ ಝೆನು‬ – 17

ಚೈನಾದ ಒಂದೂರಲ್ಲಿ ಜಾತ್ರೆ ನಡೆಯುತ್ತಿತ್ತು. ಆ ದಿನದ ಸಂಜೆಯ ಕಾರ್ಯಕ್ರಮ ಒಬ್ಬ ಝೆನ್ ಗುರುವಿನ ಭಾಷಣ.

ಜೀವನದ ಸಾರ್ಥಕತೆಯ ಬಗ್ಗೆ ಸುಮಾರು ಇಪ್ಪತ್ತು ನಿಮಿಷ ಮಾತನಾಡಿದ ಗುರು, “ನನಗ್ಗೊತ್ತು. ನಿಮ್ಮಲ್ಲಿ ನಾನು ಮಾತನಾಡಿದ್ದರ ಬಗ್ಗೆ ಇನ್ನೂ ಸಂದೇಹ ಅಥವಾ ಗೊಂದಲಗಳಿರಬಹುದು. ಯಾವಾಗ ಬೇಕಾದರೂ ನನ್ನ ಆಶ್ರಮಕ್ಕೆ ಬನ್ನಿ. ಅವನ್ನು ಪರಿಹರಿಸುವ” ಎಂದ.

ಈ ಭಾಷಣವನ್ನು ಕೇಳಿಸ್ಕೊಳ್ಳುತ್ತಿದ್ದ ಮನಃಶಾಸ್ತ್ರಜ್ಞನೊಬ್ಬ, ಕಾರ್ಯಕ್ರಮ ಮುಗಿದ ನಂತರ ಗುರುವನ್ನು ಹಿಂಬಾಲಿಸಿ, ಮಾರ್ಗಮಧ್ಯದಲ್ಲಿ ಅವನನ್ನು ಸೇರಿದ. ಒಟ್ಟಿಗೆ ನಡೆಯುತ್ತಾ ಕೆಲ ವಿಷಯಗಳನ್ನು ಚರ್ಚಿಸಿ, ಕೊನೆಗೆ ಮನಃಶಾಸ್ತ್ರಜ್ಞ ಕೇಳಿದ “ನನ್ನದೊಂದು ಕೊನೆಯ ಪ್ರಶ್ನೆಯಿದೆ. ನಾನೊಬ್ಬ ಮನಃಶಾಸ್ತ್ರಜ್ಞ. ನಾನು ಓದಿರುವ ಶಾಸ್ತ್ರ ನನಗೆ ರೋಗಿಗಳ ತೊಂದರೆಗಳ ಬಗ್ಗೆ ತಿಳಿಸುತ್ತದೆ. ಉಳಿದ ಕೆಲ ವಿಷಯಗಳನ್ನು ನಾನು ಅವರನ್ನು ಪ್ರಶ್ನಿಸಿ ತಿಳಿದುಕೊಳ್ಳುತ್ತೇನೆ. ಇದರಿಂದ ನನಗೆ ಅವರ ಖಾಯಿಲೆಗಳನ್ನು ಗುಣಪಡಿಸಲು ಸಹಾಯಕವಾಗುತ್ತದೆ. ಆದರೆ ನಿಮ್ಮ ದಾರಿ ಬೇರೆಯೇ ಎಂದೆನಿಸುತ್ತದೆ ನನಗೆ. ನೀವು ಹೇಗೆ ಅವರ ತೊಂದರೆಗಳನ್ನು ಬಗೆಹರಿಸುತ್ತೀರಾ? ಹೇಗೆ ಉತ್ತರಿಸುತ್ತೀರಾ”

ಝೆನ್ ಗುರು ನಿಧಾನದನಿಯಲ್ಲಿ ಹೇಳಿದ “ತೊಂದರೆಗೆ ಪರಿಹಾರ ನನ್ನ ಉತ್ತರದಲ್ಲಿರುವುದಿಲ್ಲ. ಆದರೆ ನಾನು ನನ್ನ ಬಳಿ ಬಂದವರನ್ನು ಅವರು ಪ್ರಶ್ನೆಗಳನ್ನೇ ಕೇಳಲಾಗದ ಸ್ಥಿತಿಗೆ ಕೊಂಡೊಯ್ಯುತ್ತೇನೆ ಅಷ್ಟೇ. ಸಮಸ್ಯೆಗಳಿಗೆ ಸಮಾಧಾನ ಅವಕ್ಕೆ ಉತ್ತರವಲ್ಲ……ಆ ಪ್ರಶ್ನೆಗಳೇ ಇಲ್ಲದಿರುವುದು, ಅಷ್ಟೇ”
ಮನಃಶಾಸ್ತ್ರಜ್ಞನಿಗೆ ಹೊಸದೊಂದು ಹೊಳಹು ಹೊಳೆಯಿತು. ನಕ್ಕು ನಮಸ್ಕರಿಸಿ ಮುಂದುವರೆದ.

Advertisements

ರಸ_ಝೆನು – 16

ಇವತ್ತಿನ ಕಥೆ, ಬಹುಷಃ ಎಲ್ಲರೂ ಕೇಳಿರಬಹುದಾದ ಝೆನ್ ಕಥೆ. “ಝೆನ್ ಅಂದ್ರೆ ಈ ಕಥೆ” ಅನ್ನೋವಷ್ಟರ ಮಟ್ಟಿಗೆ ಈ ಕಥೆ ಪ್ರಸಿದ್ಧ. ಇವತ್ತು ಅದನ್ನೇ ಹೇಳ್ತೀನಿ.
—————————————–

ನಾನ್-ಇನ್ ಎಂಬ ಪ್ರಸಿದ್ಧ ಜಪಾನೀ ಝೆನ್ ಗುರುವೊಬ್ಬನಿದ್ದ. ಮೈಝೀ ಯುಗದ (1868-1912) ತತ್ವಜ್ಞಾನಿಗಳಲ್ಲಿ ಗುರುಗಳಲ್ಲಿ ಆತ ಬಹಳ ಹೆಸರುಪಡೆದವ. ಅವನಲ್ಲಿಗೆ ಬಂದವರೆಲ್ಲರೂ ಖಂಡಿತವಾಗಿಯೂ ತಮ್ಮದೇ ಆದ ಸಾಕ್ಷಾತ್ಕಾರದೊಂದಿಗೆ ಹಿಂದಿರುಗುತ್ತಿದರು ಎಂಬ ಪ್ರತೀತಿಯಿತ್ತು. ಇವನನ್ನು ಭೇಟಿಮಾಡಲು, ಒಮ್ಮೆ ಒಬ್ಬ ಧರ್ಮಶಾಸ್ತ್ರದ ವಿಶ್ವವಿದ್ಯಾನಿಲಯದ ಉಪನ್ಯಾಸಕನೊಬ್ಬ ಬಂದಿಳಿದ. ತನ್ನನ್ನು ಪರಿಚಯಿಸಿಕೊಂಡು ‘ನಾನೊಬ್ಬ ಉಪನ್ಯಾಸಕ. ಬೇರೆ ಬೇರೆ ಧರ್ಮಶಾಸ್ತ್ರಗಳನ್ನು ಕಲಿತಿದ್ದೇನೆ ಹಾಗೂ ಕಲಿಸುತ್ತಿದ್ದೇನೆ. ಈಗ ನಿಮ್ಮ ಝೆನ್ ಜ್ಞಾನವನ್ನು ಕಲಿಯಲು ಬಂದಿದ್ದೇನೆ’ ಎಂದ.

ನಾನ್-ಇನ್ ತನ್ನ ಅತಿಥಿಯನ್ನು ಸ್ವಾಗತಿಸಿ, ಜಪಾನೀ ವಾಡಿಕೆಯಂತೆ, ಕುಡಿಯಲು ಟೀ ಕೊಡಲೆಂದು ಕಪ್ ತೆಗೆದು ಅವನ ಮುಂದಿಟ್ಟು, ಟೀ ಪಾತ್ರೆಯಿಂದ ಟೀ ಸುರಿಯಲಾರಂಭಿಸಿದ. ಕಪ್ ತುಂಬಿತು. ಆದರೂ ನಾನ್-ಇನ್ ಟೀ ಸುರಿಯುವುದನ್ನು ನಿಲ್ಲಿಸಲಿಲ್ಲ. ಈಗ ಕಪ್ ತುಂಬಿ ಟೀ ಚೆಲ್ಲಲಾರಂಭಿಸಿತು. ಉಪನ್ಯಾಸಕನಿಗೆ ಆಶ್ಚರ್ಯವಾದರೂ ನೋಡಿ ಸುಮ್ಮನಿದ್ದ. ಕಪ್ಪಿನಿಂದ ಹೊರಚೆಲ್ಲಿದ ಟೀ ಸಾಸರಿನಲ್ಲಿ ತುಂಬಲಾರಂಭಿಸಿತು. ಕೆಲವೇ ಹೊತ್ತಿನಲ್ಲಿ ಅಲ್ಲಿಯೂ ತುಂಬಿ ಮೇಜಿನ ಮೇಲೆ ಚೆಲ್ಲಲಾರಂಭಿಸಿತು. ಅಲ್ಲಿಯವರೆಗೂ ಸುಮ್ಮನಿದ್ದ ಉಪನ್ಯಾಸಕ, ತಡೆಯಲಾರದೆ ‘ಗುರುಗಳೇ, ಕಪ್ ತುಂಬಿದೆ. ಅದರೊಳಗೆ ಇನ್ನು ಹಿಡಿಸಲಾರದು’ ಎಂದ.

ಆ ಮಾತನ್ನು ಕೇಳಿದಾಕ್ಷಣ ಟೀ ಸುರಿಯುವುದನ್ನು ನಿಲ್ಲಿಸಿ, ಪಾತ್ರೆ ಬದಿಗಿಟ್ಟು, ನಾನ್-ಇನ್ ತಲೆಯೆತ್ತಿ ಹೇಳಿದ “ಈ ಕಪ್ಪಿನಂತೆಯೇ, ನಿನ್ನ ಮನಸ್ಸು ಸಹಾ ಬೇರೆ ವಿಚಾರಗಳಿಂದ ತುಂಬಿ ತುಳುಕುತ್ತಿದೆ. ನಾನು ನಿನಗೆ ಏನೇ ಕಲಿಸಿದರೂ ಅದು ಹೊರಚೆಲ್ಲುತ್ತದೆಯೇ ಹೊರತು, ನಿನ್ನೊಳಗೆ ಹೋಗಲಾರದು. ಮೊದಲು ನಿನ್ನ ಆ ಟೀ ಕಪ್ಪನ್ನು ಖಾಲಿ ಮಾಡಿಕೊಂಡು ಬಾ. ಆಮೇಲೆ ಝೆನ್ ಕಲಿಯುವುದರ ಬಗ್ಗೆ ಯೋಚಿಸುವೆಯಂತೆ”.

ಆ ಉಪನ್ಯಾಸಕನಿಗೆ ಸತ್ಯದರ್ಶನವಾಯ್ತು. ನಾನ್-ಇನ್’ಗೆ ನಮಸ್ಕರಿಸಿ ಹೊರಟುಹೋದ. ಎರಡೇ ತಿಂಗಳೊಳಗೆ ಮರಳಿಬಂದು ಅಲ್ಲಿನ ಶಿಷ್ಯನಾದ ಎಂಬ ಕಥೆಗಳಿವೆ.

ರಸ ಝೆನು‬ – 15

ಕ್ಯೋಗನ್ ಎಂಬ ಬೌದ್ಧಬಿಕ್ಕು ಇಸನ್ ಎಂಬ ಗುರುವಿನಡಿಯಲ್ಲಿ ಶಿಕ್ಷಣ ಪಡೆಯುತ್ತಿದ್ದ. ಕ್ಯೋಗನ್’ನ ಬುದ್ಧಿಮತ್ತೆ, ತಾತ್ವಿಕ ಅಲೋಚನೆಗಳು ಶಾಲೆಯಲ್ಲಿ ಪ್ರಸಿದ್ಧಿಪಡೆದಿದ್ದವು.

ಒಂದುದಿನ ಇಸನ್ ಕೇಳಿದ “ಕ್ಯೋಗನ್, ನೀನು ಹುಟ್ಟುವ ಮೊದಲು ಏನಾಗಿದ್ದೆ!?”

ಕ್ಯೋಗನ್ ಆ ಪ್ರಶ್ನೆ ಕೇಳಿ ಸ್ಥಂಭೀಭೂತನಾದ. ಆತನ ಬಳಿ ಉತ್ತರವಿರಲಿಲ್ಲ. ಇಸನ್ ಸುಮ್ಮನೇ ಇಂತಹ ಪ್ರಶ್ನೆ ಕೇಳುವುದಿಲ್ಲವೆಂದು ತಿಳಿದಿದ್ದ ಆತ, ತನ್ನ ಬುದ್ಧಿಗೆ ಕೆಲಸ ಕೊಟ್ಟ. ಎಷ್ಟೇ ಆಲೋಚಿಸಿದರೂ ಅರ್ಥವುಳ್ಳ ಉತ್ತರ ಹೊಳೆಯಲಿಲ್ಲ. ಹತಾಶೆಗೊಂಡು ಇಸನ್’ನನ್ನೇ ಸಂದೇಶ ನಿವಾರಿಸುವಂತೆ ಕೇಳಿಕೊಂಡ.

ಅದಕ್ಕೇ ಇಸನ್ ಹೇಳಿದ ‘ನೋಡು, ನಾನಿದಕ್ಕೆ ಉತ್ತರ ಹೇಳಿದರೆ, ಜೀವನವಿಡೀ ನನ್ನನ್ನು ದ್ವೇಷಿಸುತ್ತೀಯ. ಹಾಗಾಗಿ ನಾನಿದಕ್ಕೆ ಉತ್ತರಿಸಲಾರೆ’.

ಕ್ಯೋಗನ್ನನಿಗೆ ಇದ್ದಕ್ಕಿಂದಂತೆ ತಾನೊಬ್ಬ ನಿಷ್ಪ್ರಯೋಜಕ ಎಂಬ ಭಾವನೆ ಆವರಿಸಿತು. ಇಷ್ಟು ವರ್ಷ ಸಾಧನೆ ಮಾಡಿದರೂ, ಓದಿದರೂ ಇಷ್ಟು ಸಣ್ಣ ಪ್ರಶ್ನೆಗೆ ಅರ್ಥಪೂರ್ಣ ಉತ್ತರ ಕೊಡಲು ನನಗಾಗಲಿಲ್ಲವಲ್ಲಾ ಎಂಬ ಭಾವನೆ ದಿನೇದಿನೇ ಬೆಳೆಯಲಾಂಭಿಸಿತು. ಒಂದು ದಿನ ತಾನು ಬರೆದಿಟ್ಟಿದ್ದ ಸೂತ್ರಗಳಿಗೆಲ್ಲಾ ಬೆಂಕಿಯಿಟ್ಟು, ಆಶ್ರಮವನ್ನೆ ಬಿಟ್ಟು ಹೊರಟ.

ಕೆಲದಿನಗಳ ಕಾಲ ಎಲ್ಲೆಲ್ಲೋ ಅಲೆದಾಡಿ, ಕೊನೆಗೆ ಜೀರ್ಣಾವಸ್ಥೆಯಲ್ಲಿದ್ದ ದೇವಾಲಯವೊಂದರಲ್ಲಿ ನೆಲೆನಿಂತ. ಹಲವಾರುವರ್ಷಗಳ ಕಾಲ ಅದೇ ಅವನ ನೆಲೆಯಾಯಿತು. ಅಲ್ಲೇ ಇದ್ದು, ಗಂಟೆಗಟ್ಟಲೇ ಧ್ಯಾನಮಾಡುತ್ತಿದ್ದ. ಜೊತೆಗೇ ಅಲ್ಲಲ್ಲಿ ದೇವಸ್ಥಾನದ ದುರಸ್ತಿಯನ್ನೂ ಮಾಡುತ್ತಿದ್ದ.

ಒಂದು ದಿನ ಹೀಗೇ ಬಾಗಿಲಬಳಿ ಗುಡಿಸುತ್ತಿರುವಾಗ, ಹೆಬ್ಬಾಗಿಲ ಕೆಳಬಾಗದಲ್ಲಿದ್ದ ಕಲ್ಲೊಂದು ಕಿತ್ತುಬಂತು. ಅದನ್ನು ಜೋರಾಗಿ ಗುಡಿಸಿ ದೂಡಿದಾಗ ಅದು ಹಾರಿಹೋಗಿ ಪಕ್ಕದಲ್ಲಿದ್ದ ಬಿದಿರಿನ ಕಾಂಡಕ್ಕೆ ಬಡಿಯಿತು……”ಟೋಕ್………” ಅಲ್ಲೆಲ್ಲಾ ಅದರದೇ ಪ್ರತಿಧ್ವನಿ ಅನುರಣಗೊಂಡಿತು.

ಆ ಶಬ್ದದೊಂದಿಗೇ ಕ್ಯೋಗನ್ನನ ಮುಖದಲ್ಲಿ ಮುಗುಳ್ನಗೆ ಮೂಡಿತು. ಆ ನಗುವಿನ ಹಿಂದೆಯೇ, ಮುಖದಲ್ಲಿ ಹಿಂದೆಂದೂ ಇರದ ಕಾಂತಿಯೊಂದು ಆವರಿಸಿತು. ಎರಡು ಕ್ಷಣ ಅವಕ್ಕಾಗಿ ನಿಂತ ಕ್ಯೋಗನ್ ತಕ್ಷಣವೇ ಸಾವರಿಸಿಕೊಂಡು, ಇಸಾನ್ ಇದ್ದಿರಬಹುದಾದ ದಿಕ್ಕಿನೆಡೆಗೆ ತಿರುಗಿ ತಲೆಬಾಗಿ “ಗುರುಗಳೇ ನೀವಂದದ್ದು ಸರಿ. ಇದನ್ನೆಲ್ಲಾ ನೀವೇ ನನಗೆ ಹೇಳಿದ್ದಿದ್ದರೆ, ನಾನೇನೆಂದು ನನ್ನ ಪ್ರಶ್ನೆಗೆ ಅಂದೇ ಉತ್ತರಿಸಿದ್ದಿದ್ದರೆ, ನಾನು ಆ ಉತ್ತರವೇ ಆಗಿ ಉಳಿದಿಬಿಡುತ್ತಿದ್ದೆ. ನನ್ನನ್ನು ನಾನು ಮೀರಿ ಬೆಳೆಯುತ್ತಿರಲಿಲ್ಲ. ಆ ಉತ್ತರದೊಳಗೇ, ಅದರಲ್ಲಿದ್ದಿರಬಹುದಾದ ಕಹಿಯೊಂದಿಗೇ, ಅದನ್ನು ದೂಷಿಸುತ್ತಾ, ಅದೊಂದು ಭ್ರಾಂತಿಯೊಳಗೇ ಬದುಕಿರುತ್ತಿದ್ದೆ. ಧನ್ಯವಾದ ನಾನು ಹುಟ್ಟುವ ಮೊದಲು ಏನಾಗಿದ್ದೆ ಎಂದು ತೋರಿಸ್ಕೊಟ್ಟಿದ್ದಕ್ಕೆ. ಧನ್ಯವಾದ ನನ್ನೊಳಗಿಂದ ನನ್ನನ್ನು ಹೊರಗೆಳೆದದ್ದಕ್ಕೆ” ಎಂದು ಕೈಮುಗಿದ.

ಕ್ಯೋಗನ್ ಅಲ್ಲಿಂದ ಮುಂದೆ ಸೃಜನಶೀಲ ಸಹಾನುಭೂತಿಯ ಹಾಗೂ ತೀವ್ರವಾದ ಒಳನೋಟವುಳ್ಳ ಗುರುವಾಗಿ ಬೌದ್ಧಧರ್ಮದ ಮಹಾನ್ ಸೂತ್ರಗಳನ್ನು ಬರೆದ. ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಧರ್ಮವನ್ನು ಪ್ರಸ್ತುತವಾಗಿಸಿ ಪ್ರಚುರಪಡಿಸಿದ. ಜನರಿಗೆ ತಮ್ಮನ್ನು ತಾವು ಬಿಡುಗಡೆಗೊಳಿಸುವುದರ ಬಗ್ಗೆ ತಿಳಿಸುತ್ತಾ ಹೋದ.

ರಸ ಝೆನು‬ – 14

ಗುರುಗಳು ಉರಿಬಿಸಿಲಿನಡಿ ಕೈತೋಟದಲ್ಲಿ ಕೆಲಸ ಮಾಡುತ್ತಿದ್ದರು.
ಶಿಷ್ಯ ಗುರುವಿಗಾಗಿ ಛತ್ರಿಯೊಂದನ್ನು ಹಿಡಿದುಬಂದ. “ಗುರುಗಳೇ ಇಲ್ಯಾಕೆ ಕೆಲಸ ಮಾಡುತ್ತಿದ್ದೀರ?” ಕೇಳಿದ.
ಗುರು: “ಯಾಕೆಂದರೆ ನಾನು ಇಲ್ಲಿದ್ದೇನೆ. ಅದಕ್ಕೇ!”
ಶಿಷ್ಯ: “ಆದರೆ ಈ ಬಿಸಿಲಲ್ಯಾಕೆ ಈ ಕೆಲಸ?”
ಗುರು: “ಯಾಕೆಂದರೆ ಕೆಲಸ ಈಗ ಇಲ್ಲಿದೆ, ಅದಕ್ಕೇ!!”

ಶಿಷ್ಯ ಸುಮ್ಮನಾದ.

ರಸ ಝೆನು‬ – 13

ಶಿಷ್ಯನೊಬ್ಬ ಗುರುಗಳ ಬಳಿಬಂದು ಹೇಳಿದ “ಗುರುಗಳೇ, ಧ್ಯಾನ ಕಷ್ಟವೆನ್ನಿಸುತ್ತಿದೆ. ಏಕಾಗ್ರತೆ ದೊರಕುತ್ತಿಲ್ಲ. ಕಾಲು ನೋವು. ಹೀಗಾದರೆ ನಾನು ನಿರ್ವಾಣ ತಲುಪುದ್ಯಾವಾಗ?

ಗುರುವೆಂದ “ಆಗಾಗ ಹೀಗೆ ಅನ್ನಿಸುವುದುಂಟು. ಧ್ಯಾನ ಮುಂದುವರೆಸು. ಎಲ್ಲವೂ ಸರಿಹೋಗುತ್ತದೆ.

ಹತ್ತು ವಾರಗಳ ನಂತರ ಶಿಷ್ಯ ಮರಳಿ ಬಂದು ಸಂತೋಷದಲ್ಲಿ ಕೂಗಿ ಹೇಳಿದ “ಗುರುಗಳೇ!! ಎಲ್ಲವೂ ಸರಿಯಾಯಿತು. ನಾನು ನಿರ್ವಾಣ ಜ್ಯೋತಿಯನ್ನು ಕಂಡೆ! ನಾನೀಗ ನಿಜವಾದ ಝೆನ್! ಧನ್ಯವಾದ ಗುರುದೇವ”

ತಣ್ಣಗಿನ ಧ್ವನಿಯಲ್ಲಿ ಗುರುವೆಂದ “ಶಿಷ್ಯಾ! ಆಗಾಗ ಹೀಗೆ ಅನ್ನಿಸುವುದುಂಟು. ಧ್ಯಾನ ಮುಂದುವರೆಸು. ಎಲ್ಲವೂ ಸರಿಹೋಗುತ್ತದೆ.

ರಸ ಝೆನು – 12

ಝೆನ್ ಶಾಲೆಗಳಲ್ಲಿ ಕಲಿಯಲು ಬಂದವರು, ಕನಿಷ್ಟ ಹತ್ತುವರ್ಷ ಗುರುವಿನೊಂದಿಗೆ ಕಲಿತಮೇಲೆಯೇ, ಬೇರೆಯವರಿಗೆ ಕಲಿಸಲು ಯೋಗ್ಯರೆಂದು ಪರಿಗಣಿಸಲ್ಪಡುತ್ತಾರೆ.
ಗೆಝಿನ್ ಎಂಬಾತ ಹತ್ತು ವರ್ಷ ಹೀಗೆಯೇ ಕಲಿತು ತನ್ನದೊಂದು ಆಶ್ರಮ ತೆರೆದಿದ್ದ. ಒಂದು ದಿನ ತನ್ನ ಗುರು ತೆನ್ನೆತೋನ್’ನನ್ನು ಬೇಟಿಯಾಗಲು ಬಂದ. ಅವತ್ಯಾಕೋ ಜೋರು ಮಳೆ. ಆದ್ದರಿಂದ ಗೆಝಿನ್ ತನ್ನ ಮರದಿಂದ ಮಾಡಿದ ಪಾದುಕೆಗಳನ್ನು ಧರಿಸಿ, ಛತ್ರಿಹಿಡಿದು ಬಂದಿದ್ದ.

ಗುರುಗಳ ಆಶ್ರಮ ತಲುಪಿದ ಗೆಝಿನ್ ಟೀ ಹೀರುತ್ತಾ, ಜಗದ ಅಸ್ತಿತ್ವದ ಬಗ್ಗೆ ಒಂದೊಳ್ಳೆ ಚರ್ಚೆ ನಡಿಸಿ, ಆಶೀರ್ವಾದ ಪಡೆದು ಹೊರಟು ನಿಂತಾಗ, ಗುರುಗಳೇ ‘ಇವತ್ತಿನ ಮಟ್ಟಿಗೆ, ನನಗೊಂದು ಹೊಸ ವಿಷಯ ತಿಳಿಸಿ’ ಎಂದ. ತೆನ್ನೆತೋನ್ ಆಕಾಶವನ್ನೊಮ್ಮೆ ನೋಡಿ, ‘ಹ್ಮ್ಮ್….ಮಳೆ ಬರುತ್ತಿದೆಯೆಂದ ಮೇಲೆ, ಪಾದುಕೆ ಧರಿಸಿ ಛತ್ರಿಹಿಡಿದು ಬಂದಿರುತ್ತೀಯ. ಪಾದುಕೆಗಳನ್ನು ಹೊಸ್ತಿಲಲ್ಲೇ ಬಿಟ್ಟಿದ್ದೀಯ ಎಂದಾಯ್ತು. ಈಗ ಹೇಳು ನಿನ್ನ ಛತ್ರಿಯನ್ನು ಪಾದುಕೆಗಳ ಬಲಕ್ಕೆ ಇಟ್ಟೆಯೋ, ಎಡಕ್ಕಿಟ್ಟಿಯೋ?’ ಗೆಝಿನ್ ದಂಗಾದ. ತಕ್ಷಣ ಉತ್ತರ ಹೊಳೆಯಲಿಲ್ಲ. ಎಷ್ಟು ಯೋಚಿಸಿದರೂ, ಮೆದುಳಿನ ಮೇಲೆ ಒತ್ತಡ ಹೇರಿದರೂ ಉತ್ತರ ಹೊಳೆಯಲಿಲ್ಲ.

ತೆನ್ನೆತೋನ್ ‘ಗೆಝಿನ್, ನೀನು ಝೆನ್ ಕಲಿತೆ. ಆದರೆ ಅದನ್ನು ನೀನು ಪ್ರತಿಕ್ಷಣವೂ ನಿನ್ನೊಂದಿಗೆ ಒಯ್ಯುತ್ತಿಲ್ಲ. ಇವತ್ತಿನ ಮಟ್ಟಿಗೆ ನಿನಗೆ ಹೇಳಬಹುದಾದ ಹೊಸ ವಿಷಯ, ಇದೇ’ ಎಂದ.

ಹೊಸ ವಿಷಯ ಕಲಿತ ಗೆಝಿನ್ ಹೊರಬಾಗಿಲೆಡೆಗೆ ಹೋಗಲಿಲ್ಲ. ಬದಲಿಗೆ, ಆಶ್ರಮದ ಒಳಹೊಕ್ಕು ಮತ್ತೆ ಶಿಷ್ಯನಾಗಿ ಆರು ವರ್ಷ ಝೆನ್ ಕಲಿತ. ಪ್ರತಿನಿಮಿಷವೂ ಝೆನ್’ಅನ್ನು ತನ್ನೊಂದಿಗೆ ಒಯ್ಯಲು ಶಕ್ತನಾದ ನಂತರ ತನ್ನ ಆಶ್ರಮಕ್ಕೆ ಮರಳಿದ.

ರಸ ಝೆನು – 11

ಹಳೇಚೀನಾದರ ಮಂದಿರವೊಂದರಲ್ಲಿದ್ದ ಹೈಕುನ್ ಎಂಬ ಗುರುವೊಬ್ಬನ ಬಳಿ ಒಂದು ದಿನ ನೋಬು ಎಂಬ ಸಮುರಾಯ್ ಯೋಧನೊಬ್ಬ ಬಂದು, “ಗುರುಗಳೇ, ಸ್ವರ್ಗ ಮತ್ತು ನರಕ ಇರುವುದು ನಿಜವೇ” ಎಂದು ಕೇಳಿದ.

ಹೈಕುನ್ ‘ನೀನು ಯಾರು?’ ಎಂದು ಕೇಳಿದ. ನೋಬು ಅದಕ್ಕೆ ‘ನಾನೊಬ್ಬ ಸಮುರಾಯ್’ ಎಂದುತ್ತರಿಸಿದ.

‘ನೀನು!! ಒಬ್ಬ ಸಮುರಾಯ್ ಯೋಧನೇ!? ಅದ್ಯಾವ ಮತಿಗೆಟ್ಟ ರಾಜ ನಿನ್ನನ್ನು ಯೋಧನನ್ನಾಗಿ ನೇಮಿಸಿಯಾನು? ನಿನ್ನ ಮುಖ ನೋಡಿದರೆ ಯಾರೋ ಬಿಕ್ಷುಕನ ಮುಖದಂತಿದೆ’ ಎಂದ ಹೈಕುನ್. ನೋಬುಗೆ ಬಂದ ಕೋಪಕ್ಕೆ, ಕೈ ಖಡ್ಗದೆಡೆಗೆ ಹೋಯ್ತು. ಅದನ್ನು ಗಮನಿಸಿದ ಹೈಕುನ್ ‘ಓಹ್!! ನಿನ್ನಲ್ಲಿ ಖಡ್ಗ ಬೇರೆ ಇದೆಯೋ! ಅದು ಬೇರೆ ಕೇಡು ನಿನಗೆ. ನಿನ್ನ ಕತ್ತಿಯಿಂದ ನನ್ನ ತಲೆ ಕತ್ತರಿಸುವುದಿರಲಿ, ಇಲ್ಲಿರುವ ಸೌತೇಕಾಯಿಯನ್ನೂ ಕತ್ತರಿಸಲಿಕ್ಕಿಲ್ಲ’ ಎಂದ.

ಯೋಧನ ಸಹನೆ ಮಿತಿ ಮೀರಿತ್ತು. ಹಲ್ಲುಕಚ್ಚುತ್ತಾ, ಖಡ್ಗವನ್ನು ಹೊರಗೆಳೆಯಲಾರಂಭಿಸಿದ. ಇದ್ದಕ್ಕಿದ್ದಂತೆ ಹೈಕುನ್’ನ ಮುಖ ಚಹರೆ ಬದಲಾಯಿತು. ಸಣ್ಣದೊಂದು ನಗುವಿನೊಂದಿಗೆ ‘ನೋಡು ನೋಬು. ನರಕದ ಬಾಗಿಲು ತೆರೆಯುತ್ತಿದೆ’ ಎಂದ.

ಕ್ಷಣದಲ್ಲಿ ನೋಬುಗೆ ಹೈಕುನ್ ಹೇಳಿದ ಮಾತಿನ ಸಾಕ್ಷಾತ್ಕಾರವಾಯಿತು. ಖಡ್ಗವನ್ನು ಒರೆಗೆ ಹಚ್ಚಿ, ಬಗ್ಗಿ ನಮಸ್ಕರಿಸಿದ. ಹೈಕುನ್ ‘ನೋಬು, ಸ್ವರ್ಗದ ಬಾಗಿಲು ಈಗಷ್ಟೇ ತೆರೆಯಿತು. ಸ್ವರ್ಗ ನರಕ ಎರಡನ್ನೂ ಕಂಡೆಯಲ್ಲವೇ?’ ಎನ್ನುತ್ತಾ ಕಣ್ಣುಮುಚ್ಚಿ ಧ್ಯಾನಾಸಕ್ತನಾದ.

 

ವಿ.ಸೂ: ಈ ಕಥೆ ಮೊದಲಬಾರಿಗೆ ಕಂಡುಬಂದಿದ್ದು ಸುಮಾರು 1827ರಲ್ಲಿ. ಆದರೆ, 1160ರಲ್ಲೇ ನಮ್ಮ ಶರಣರು ‘ಎಲವೋ ಎಂದರೆ ನರಕ, ಅಯ್ಯಾ ಎಂದರೆ ಸ್ವರ್ಗವಯ್ಯಾ’ ಎಂದಿದ್ದರು

ರಸ ಝೆನು – 10

ಹೊಸದಾಗಿ ಶಾಲೆಗೆ ಸೇರಿದ ಬಿಕ್ಕುವೊಬ್ಬ ಧ್ಯಾನ ಮಧ್ಯದಲ್ಲೇ ನಿಲ್ಲಿಸಿ ಕಣ್ತೆರೆದ. ಅವನಿಗೆ ಚಿತ್ತವನ್ನು ಧ್ಯಾನದಲ್ಲಿ ಕೇಂದ್ರೀಕರಿಸಲಾಗುತ್ತಿರಲಿಲ್ಲ. ಮನಸ್ಸಿನ ಮೂರನೇ ಪದರದಡಿಯಲ್ಲಿ ಏನೋ ಸದ್ದು. ಅದರಿಂದ ಹೊರಬಂದಷ್ಟೂ ಮತ್ತೂ ಸದ್ದು. ಕಣ್ಣುಬಿಟ್ಟು ನೋಡಿದ. ದೂರದಲ್ಲಿ ಆಶ್ರಮದ ಬಾವುಟ ಪಟಪಟನೆ ಸದ್ದು ಮಾಡುತ್ತಿರುವುದು ಸ್ಪುಟವಾಗಿ ಕೇಳಿಸುತ್ತಿತ್ತು.

ಬಿಕ್ಕು ಸಣ್ಣದಾಗಿ ನಕ್ಕು ‘ಓಹ್…ಬಾವುಟ ಸದ್ದುಮಾಡುತ್ತಿದೆ’ ಎಂದ.

ಪಕ್ಕದಲ್ಲಿದ್ದ ಹಳೆಯ ವಿದ್ಯಾರ್ಥಿ ಉಸಿರುಬಿಟ್ಟು ‘ಬಾವುಟವಲ್ಲ. ಗಾಳಿ ಸದ್ದುಮಾಡುತ್ತಿದೆ’ ಎಂದ

ಅಲ್ಲೇ ನಿಂತಿದ್ದ ಗುರು ದಿಗಂತದಿಡೆಗೆ ನೋಡಿ ‘ಬಾವುಟ, ಗಾಳಿಗಳಲ್ಲ. ಮನಸ್ಸು ಸದ್ದುಮಾಡುತ್ತಿದೆ’ ಎಂದ

ಅಲ್ಲೇ ಅವರೆಲ್ಲರ ಹಿಂದೆ ನಡೆದು ಹೋಗುತ್ತಿದ್ದ ಆಶ್ರಮದ ಹಿರಿಯಗುರು ‘ಹ್ಮ್…..ಯಾವುದೂ ಅಲ್ಲ. ಬಾಯಿಗಳು ಸದ್ದುಮಾಡುತ್ತಿವೆ’ ಎಂದು ಕೋಪಮಿಶ್ರಿತ ದ್ವನಿಯಲ್ಲಿ ಗೊಣಗುತ್ತಾ ಮುಂದೆ ಸಾಗಿದ.

ಗುರು ಶಿಷ್ಯರೆಲ್ಲಾ ತಲೆ ತಗ್ಗಿಸಿ, ಧ್ಯಾನ ಮುಂದುವರೆಸಿದರು.

ರಸ ಝೆನು – 9

ಗುರು ಶಿಷ್ಯರಿಬ್ಬರು ಕಾಡಿನಲ್ಲಿ ನಡೆಯುತ್ತಾ ಇದ್ದರು. ಒಂದು ನದೀತೀರ ತಲುಪಿದಾಗ ನಿಮಿಷ ನಿಮಿಷಕ್ಕೂ ನದಿಯ ಮಟ್ಟ ನಿಧಾನವಾಗಿ ಏರುತ್ತಿರುವುದು ಗುರುಗಳ ಗಮನಕ್ಕೆ ಬಂತು. ‘ಹತ್ತಿರದೆಲ್ಲಾದರೂ ಸೇತುಯಂತದ್ದೇನಾದರೂ ಇದೆಯೋ ನೋಡಿ ಬಾ’ ಎಂದು ಶಿಷ್ಯನಿಗೆ ಹೇಳಿದರು.

ಹುಡುಕಿ ಹೋದ ಶಿಷ್ಯ ಕೆಲಹೊತ್ತಾದರೂ ಮರಳದಿರುವುದನ್ನು ನೋಡಿದ ಗುರು, ನಿಧಾನವಾಗಿ ಹೆಜ್ಜೆಯಿಡುತ್ತಾ ನದಿಯನ್ನು ದಾಟಿಯೇ ಬಿಟ್ಟರು. ಶಿಷ್ಯ ಒಂದುಘಂಟೆಯ ನಂತರ ಬಂದು ನೋಡುತ್ತಾನೆ, ನದಿ ಅದಾಗಲೇ ದಾಟಲಾಗದಷ್ಟು ವ್ಯಗ್ರವಾಗಿದೆ!! ಗುರುಗಳು ಅದಾಗಲೇ ಇನ್ನೊಂದು ದಡದಲ್ಲಿದ್ದಾರೆ!!

ಶಿಷ್ಯ ಗುರುಗಳೆಡೆಗೆ ಕೂಗು ಹಾಕಿದ ‘ಗುರುಗಳೇ, ನಾನೀಗ ಆಚೆ ದಡ ಹೇಗೆ ತಲುಪಲಿ!?’
.
.
ಇತ್ತಕಡೆಯಿದ್ದ ಗುರುಗಳ ಮುಖದಲ್ಲಿ ಸಣ್ಣದೊಂದು ಗೊಂದಲ ಮೂಡಿಬಂತು. ಅದನ್ನು ಮರೆಮಾಚಿ ಹೇಳಿದರು “ಶಿಷ್ಯ! ಸರಿಯಾಗಿ ನೋಡು!! ನೀನೀಗ ಆಚೆ ದಡಲ್ಲೇ ಇದ್ದೀಯ”

ರಸ ಝೆನು – 8

ಊರೊಂದೂರಿಗೆ ತಿರುಗುತ್ತಿದ್ದ ಬಿಕ್ಕುಗಳ ಬಹಳಷ್ಟು ಗುಂಪುಗಳು, ನಾಲ್ಕು ರಸ್ತೆಗಳು ಸೇರುವ ಊರೊಂದರಲ್ಲಿ ತಂಗಿದ್ದವು. ಬೇರೆ ಬೇರೆ ಗುಂಪಿನ ನಾಲ್ಕುಜನ ಶಿಷ್ಯರು ತಮ್ಮ ತಮ್ಮಲ್ಲೇ ತಮ್ಮ ಅನುಭವಗಳ ಬಗ್ಗೆ ಚರ್ಚಿಸುತ್ತಾ, ಅವರ ಮಾತು ‘ಯಾರ ಗುರು ಅತ್ಯುತ್ತಮನು?’ ಎಂಬುದರೆಡೆಗೆ ಹೊರಳಿತು.

ಒಬ್ಬನೆಂದ ‘ನನ್ನ ಗುರು ಎಷ್ಟು ಶಕ್ತಿಶಾಲಿಯೆಂದರೆ, ನಾಲ್ಕುದಿನಗಳ ಹಿಂದೆ ನಮ್ಮ ಗುಂಪನ್ನು ಡಕಾಯಿತರು ಸುತ್ತುವರೆದಾಗ, ಬರೇ ತನ್ನ ಕಣ್ಸನ್ನೆಯಿಂದಲೇ ಎಲ್ಲರನ್ನೂ ಹಿಮ್ಮೆಟ್ಟಿಸಿದ’

ಇನ್ನೊಬ್ಬನೆಂದ ‘ನನ್ನ ಗುರು ಝೆನ್ ಮಾತ್ರವಲ್ಲ, ರಕ್ಷಣಾ ಕಲೆಯಲ್ಲೂ ಪಾರಂಗತ. ನಲವತ್ತು ಜನರೊಂದಿಗೆ ಕತ್ತಿಹಿಡಿದು ಹೋರಾಡುತ್ತಲೇ, ಇನ್ನೂ ಇಪ್ಪತ್ತು ಜನರನ್ನು ವಾದದಲ್ಲಿ ಮಣಿಸಬಲ್ಲ’

ಮೂರನೆಯವನೆಂದ ‘ನನ್ನ ಗುರುವಿಗೆ ಇರುವಷ್ಟು ನಿಯಂತ್ರಣ ನಿಮ್ಮಲ್ಲಿ ಯಾರ ಗುರುವಿಗೂ ಇದ್ದಂತಿಲ್ಲ. ಆತ ದಿನಗಟ್ಟಲೇ ನಿದ್ದೆಮಾಡದೇ, ಆಹಾರ ಸೇವಿಸದೇ, ಇರಬಲ್ಲ’

ಕೊನೆಯವನೆಂದ ‘ನನ್ನ ಗುರು ಅದೆಷ್ಟು ಬುದ್ಧಿವಂತನೆಂದರೆ, ಹಸಿವಾದಾಗ ತಿನ್ನುತ್ತಾನೆ ಮತ್ತು ಸುಸ್ತಾದಾಗ ಮಲಗುತ್ತಾನೆ ಮತ್ತು ಅಗತ್ಯವಿದ್ದಾಗ ಮಾತನಾಡುತ್ತಾನೆ’