“ಕರ್ನಾಟಕ ವಾತಾಪಿ, ತಂಜಾವೂರಿನ ಮುತ್ತುಸ್ವಾಮಿ ದೀಕ್ಷಿತರ ಕೃತಿಯಲ್ಲಿ ಸೇರಿ ಅಜರಾಮರವಾಗಿದ್ದು ಹೇಗೆ?”

ಕ್ರಿ.ಶ 597 ರಲ್ಲಿ ಚಾಲುಕ್ಯರಾಜ ಕೀರ್ತಿವರ್ಮನು ನಿಧನನಾದಾಗ, ಅವನ ಮಗ ಎರೆಯ ಇನ್ನೂ ಚಿಕ್ಕ ಹುಡುಗ. ಯುವರಾಜ ಹರೆಯಕ್ಕೆ ಬರುವತನಕ ಪಟ್ಟಾಭಿಷೇಕ ಮಾಡುವಂತಿರಲಿಲ್ಲ. ಆದ್ದರಿಂದ ಎರೆಯನ ಚಿಕ್ಕಪ್ಪ (ಕೀರ್ತಿವರ್ಮನ ತಮ್ಮ) ಮಂಗಳೇಶ, ಎರೆಯ ಆಡಳಿತಯೋಗ್ಯ ವಯಸ್ಸಿಗೆ ಬರುವತನಕ ರಾಜಪ್ರತಿನಿಧಿಯಾಗಿ, ಚಾಲುಕ್ಯ ರಾಜ್ಯದ ಆಡಳಿತವನ್ನು ವಹಿಸಿಕೊಂಡ. ಮಂಗಲೇಶ ಒಳ್ಳೆಯ ರಾಜನೇ ಆಗಿದ್ದರೂ, ಅವನಿಗೆ ರಾಜ್ಯಭಾರವನ್ನು ಎರೆಯನಿಗೆ ವಾಪಾಸು ವಹಿಸಿಕೊಡುವ ಮನಸ್ಸಿರಲಿಲ್ಲ. ಕ್ರಿ.ಶ 603ರಲ್ಲಿ ಎರೆಯನ ಬದಲು, ತನ್ನ ಮಗನನ್ನೇ ಯುವರಾಜನೆಂದು ಘೋಷಿಸಿ ತನ್ನ ವಂಶಕ್ಕೇ ರಾಜ್ಯಭಾರ ಸಿಗುವಂತೆ ತಂತ್ರಮಾಡುತ್ತಾನೆ.

ಇದರಿಂದ ಅತೃಪ್ತನಾದ ಎರೆಯ, ಬಾದಾಮಿಯಿಂದ ಹೊರಬಂದು ಇಂದಿನ ಕೋಲಾರದ ಬಳಿಯಿರುವ ಪ್ರದೇಶದಲ್ಲಿ ಬಲಿಷ್ಟರಾಗಿದ್ದ ‘ಬನ’ರೊಂದಿಗೆ ಸ್ನೇಹಬೆಳೆಸಿ, ಸುತ್ತಮುತ್ತಲ ಪಂಗಡಗಳೊಂದಿಗೆ ಮೈತ್ರಿಮಾಡಿಕೊಂಡು, ಸೈನ್ಯವನ್ನು ಸಂಘಟಿಸುತ್ತಾನೆ. ಹೀಗೆ ಕಟ್ಟಿದ ಸೈನ್ಯದೊಂದಿಗೆ ಎರೆಯ, ಮಂಗಳೇಶನ ಮೇಲೆ ಯುದ್ಧ ಘೋಷಿಸುತ್ತಾನೆ. ಮಂಗಳೇಶನ ಸೈನ್ಯಕ್ಕೂ, ಎರೆಯನ ಸೈನ್ಯಕ್ಕೂ ‘ಎಲಪಟ್ಟು ಸಿಂಬಿಗೆ’ (ಇಂದಿನ ಅನಂತಪುರ) ಎಂಬಲ್ಲಿ ಘೋರಯುದ್ಧ ನಡೆಯುತ್ತದೆ. ಹೀಗೆ ನಡೆದು ಮಂಗಳೇಶನ ಸಾವಿನೊಂದಿಗೆ ಅಂತ್ಯವಾದ ಯುದ್ಧದಲ್ಲಿ, ಎರೆಯ ವಿಜಯಿಶಾಲಿಯಾಗುತ್ತಾನೆ ಎಂದು ಪೆದ್ದವಡಗೂರು ಶಾಸನ ಹೇಳುತ್ತದೆ.

ಯುದ್ದದಲ್ಲಿ ಗೆದ್ದ ಎರೆಯ, ತನ್ನ ಸೈನ್ಯದೊಂದಿಗೆ ಪಟ್ಟದಕಲ್ಲು ತಲುಪುತ್ತಾನೆ. ತನ್ನ ಹೆಸರನ್ನು ಎರಡನೇ ಪುಲಿಕೇಶಿ (ಅಥವಾ ಇಮ್ಮಡಿ ಪುಲಕೇಶಿ) ಎಂದು ಬದಲಾಯಿಸಿಕೊಂಡು, ಕ್ರಿಶ 610ರಲ್ಲಿ, ಚಾಲುಕ್ಯ ರಾಜ್ಯದ ಸಿಂಹಾಸನವನ್ನೇರುತ್ತಾನೆ. ಪಟ್ಟಕ್ಕೆ ಬಂದಕೂಡಲೇ ಇಮ್ಮಡಿ ಪುಲಿಕೇಶಿಗೆ ಕಷ್ಟಕೋಟಲೆಗಳ ಸರಮಾಲೆಯೇ ಕಾದಿರುತ್ತದೆ. ಮಂಗಳೇಶನಿಗೆ ನಿಷ್ಠಾವಂತರಾಗಿದ್ದ ಗೋವಿಂದ ಮತ್ತು ಅಪ್ಪಾಯಿಕ ಎಂಬಿಬ್ಬ ರಾಷ್ಟ್ರಕೂಟರ ಸಾಮಂತರಾಜರು, ಮಂಗಳೇಶನ ಸಾವಿನ ಸುದ್ಧಿ ತಿಳಿದಕೂಡಲೇ ಚಾಲುಕ್ಯರಾಜ್ಯದ ಮೇಲೆ ಯುದ್ಧ ಘೋಷಿಸುತ್ತಾರೆ. ಭೀಮಾನದಿಯ ತಟದಲ್ಲಿ ಎದುರಾಳಿಗಳ ಸೈನ್ಯವನ್ನು ತಡೆದ, ಪುಲಿಕೇಶಿಯ ಸೈನ್ಯದ ಆರ್ಭಟಕ್ಕೆ ಎರಡೇ ವಾರದ ನಂತರ ಯುದ್ಧ ಭೂಮಿಯಲ್ಲಿ ನಿಲ್ಲಲಾಗದೆ ಅಪ್ಪಾಯಿಕ ಪಲಾಯನಮಾಡಿದನು. ಗೋವಿಂದನನ್ನು ಸೆರೆಹಿಡಿಯಲಾಯಿತು. ಕ್ರಿ.ಶ. 634ರ ಐಹೊಳೆ ಶಾಸನದ ಹೇಳುವಂತೆ, ಈ ವಿಜಯವನ್ನು ಘೋಷಿಸಿ ಆಚರಿಸಲು ಇಮ್ಮಡಿ ಪುಲಿಕೇಶಿ ಐಹೊಳೆಯಲ್ಲಿ ಒಂದು ವಿಜಯಸ್ಥಂಭವನ್ನು ಕಟ್ಟಿಸಿದನು.

ಇಲ್ಲಿಂದ ಮುಂದಿನ ಒಂಬತ್ತುವರ್ಷ ಚಾಲುಕ್ಯ ಸಾಮ್ರಾಜ್ಯದ ಸುವರ್ಣಯುಗ. ಇಮ್ಮಡಿ ಪುಲಿಕೇಶಿ ದಖನ್ ಪ್ರಸ್ಥಭೂಮಿಯಲ್ಲಿದ್ದ ಎಲ್ಲಾ ರಾಜರನ್ನೂ ಸೋಲಿಸಿದ್ದಲ್ಲದೇ, ದಕ್ಷಿಣದಲ್ಲಿದಲ್ಲೂ ತನ್ನ ರಾಜ್ಯವನ್ನು ವಿಸ್ತರಿಸಿದ. ಪಶ್ಚಿಮ ಕರಾವಳಿಯಲ್ಲಿ ಆಳುಪರು, ಬನವಾಸಿಯ ಕದಂಬರು, ಕೊಂಕಣದಲ್ಲಿ ಮೌರ್ಯರು, ಇನ್ನೂ ಉತ್ತರಕ್ಕೆ ಮಾಳ್ವದಲ್ಲಿ ಗುರ್ಜರರು, ಪೂರ್ವಕ್ಕೆ ವಿಷ್ಣುಕುಂಡಿನಿಯರು, ಲಾಟರನ್ನೂ ಸಾಮಂತರನ್ನಾಗಿಸಿಕೊಂಡ. ಇಮ್ಮಡಿ ಪುಲಿಕೇಶಿಯ ಅತೀಮುಖ್ಯ ವಿಜಯಗಳಲ್ಲಿ ದಕ್ಷಿಣದ ಪಲ್ಲವರ ಮೇಲಿನ ವಿಜಯ ನೆನಪಿಡುವಂತದ್ದು. ಅಂದಿನ ಕಾಲಕ್ಕೆ, ಸೋಲಿಸಲೇ ಅಸಾಧ್ಯವಾದ ಸೈನ್ಯ ಎಂದು ಹೆಸರು ಪಡೆದಿದ್ದ ಪಲ್ಲವರ ಸೈನ್ಯವನ್ನು, ಅವರ ರಾಜ ‘ಒಂದನೆಯ ಮಹೇಂದ್ರವರ್ಮ’ನನ್ನು ಪಲ್ಲವರ ರಾಜಧಾನಿಗೆ 25 ಕಿ.ಮೀ ದೂರದಲ್ಲಿದ್ದ ‘ಪುಲ್ಲಲೂರ್’ನಲ್ಲಿ ನಡೆದ ಯುದ್ಧದಲ್ಲಿ ಸೋಲಿಸಿದನು. ಪುಲಿಕೇಶಿ ಗಂಗ ವಂಶದ’ದುರ್ವಿನಿತ’ ಹಾಗೂ ‘ಪಾಂಡ್ಯನ್ ಜಯಂತವರಾಮನ್ ರಾಜ’ನ ಸಹಾಯದೊಂದಿಗೆ ಪಲ್ಲವರ ರಾಜಧಾನಿ ‘ಕಂಚೀಪುರ’ಕ್ಕೆ ಮುತ್ತಿಗೆ ಹಾಕುತ್ತಾನೆ. ಮಹೇಂದ್ರವರ್ಮ ತನ್ನ ರಾಜಧಾನಿಯನ್ನು ಉಳಿಸಿಕೊಂಡರೂ ಉತ್ತರದ ಪ್ರಾಂತ್ಯವನ್ನು ಪುಲಿಕೇಶಿಗೆ ಸಮರ್ಪಿಸುತ್ತಾನೆ. ಹೀಗೆ ದಕ್ಷಿಣದ ಅತೀದೊಡ್ಡ ಏಕರಾಜ ಸಾಮ್ರಾಜ್ಯ ಸ್ಥಾಪಿಸಿದ ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ಚೀನಾದ ಯಾತ್ರಿಕ/ಇತಿಹಾಸಕಾರ ಹ್ಯುಯೆನ್-ತ್ಸಾಂಗ್, ಪರ್ಶಿಯಾದ ಇತಿಹಾಸಕಾರ ತಬರಿ ಮುಂತಾದವರು ಭೇಟಿಕೊಟ್ಟು ರಾಜ್ಯಭಾರದ ಬಗ್ಗೆ ಅಗಾಧ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇವನ ಸಮಕಾಲೀನನಾಗಿ ಇರಾನ್ ದೇಶದ ದೊರೆಯಾಗಿದ್ದ ಎರಡನೆಯ ಖುಸ್ರುವು ತನ್ನ ರಾಯಭಾರಿಯ ಕೈಯಲ್ಲಿ ಅನೇಕ ಬೆಲೆಬಾಳುವ ಬಹುಮಾನಗಳನ್ನು ಪುಲಕೇಶಿಗೆ ಕಳುಹಿಸಿಕೊಟ್ಟನೆಂದೂ, ಇವರಿಬ್ಬರಿಗೂ ಆಗಿಂದಾಗ್ಗೆ ಪತ್ರವ್ಯವಹಾರವು ನಡೆಯುತ್ತಿದ್ದಿತೆಂದೂ ತಿಳಿದುಬಂದಿದೆ.

ಇಮ್ಮಡಿ ಪುಲಿಕೇಶಿಯ ರಾಜ್ಯಭಾರದ ಅತೀಮುಖ್ಯ ಘಟನೆಯೆಂದರೆ ಗುರ್ಜರ, ಮಾಳ್ವರನ್ನು ಸೋಲಿಸಿ ಉತ್ತರಕ್ಕೂ ತನ್ನ ಸಾಮ್ರಾಜ್ಯ ವಿಸ್ತರಣೆಮಾಡುವಾಗ, ಆಗಿನ ಕನ್ನೌಜದ ಮಹಾರಾಜನಾಗಿದ್ದ ಹರ್ಷವರ್ಧನನೊಡನೆ ನಡೆದ ಯುದ್ಧ. ವಿಂಧ್ಯದ ಉತ್ತರದಿಂದ ಹಿಡಿದು ಹಿಮಾಚಲದವರೆಗೂ ರಾಜ್ಯಭಾರ ಮಾಡುತ್ತಿದ್ದ, ಇಡೀ ಜೀವನದಲ್ಲೇ ಒಂದೇ ಒಂದು ಯುದ್ಧ ಸೋಲದ, ‘ಉತ್ತರಪಥೇಶ್ವರ’ ಎಂದೇ ಬಿರುದು ಪಡೆದಿದ್ದ ಹರ್ಷವರ್ಧನ, ಇಮ್ಮಡಿ ಪುಲಿಕೇಶಿಯ ಉತ್ತರದ ಭಾಗದ ಸಾಮ್ರಾಜ್ಯ ವಿಸ್ತರಣೆಗೆ ಕಡಿವಾಣ ಹಾಕಲು ನಿರ್ಧರಿಸುತ್ತಾನೆ. ನರ್ಮದಾ ನದಿಯ ತಟದಲ್ಲಿ ಎರಡೂ ಸೇನೆಗಳು ಮುಖಾಮುಖಿಯಾಗುತ್ತವೆ. ಎಂಟುವಾರಗಳ ಕಾಲ ನಡೆದ ಜಿಗುಟುಯುದ್ಧದ ನಂತರ, ಪುಲಿಕೇಶಿಗಿಂತಾ ಮೂರುಪಟ್ಟು ದೊಡ್ಡ ಸೈನ್ಯವಿದ್ದರೂ, ತನ್ನ ಅತೀಶಕ್ತಿಶಾಲಿ ಗಜಪಡೆಯಲ್ಲೇ ಹೆಚ್ಚು ನಷ್ಟವನ್ನನುಭವಿಸಿದ ಹರ್ಷವರ್ಧನ, ಯುದ್ದದಲ್ಲಿ ಗೆಲ್ಲಲಾಗದೇ ಶಾಂತಿಸಂಧಾನಕ್ಕೆ ಮುಂದಾಗುತ್ತಾನೆ. ಇಮ್ಮಡಿ ಪುಲಿಕೇಶಿಗೆ ‘ಪರಮೇಶ್ವರ’, ‘ಸತ್ಯಾಶ್ರಯ’, ‘ಪೃಥ್ವೀವಲ್ಲಭ’ ಎಂಬ ಬಿರುದುಗಳನ್ನು ಸಮರ್ಪಿಸಿದುದ್ದಲ್ಲದೇ, ಇಮ್ಮಡಿ ಪುಲಿಕೇಶಿಯನ್ನು ತನ್ನ ದಕ್ಷಿಣದ ಸಮಬಲನೆಂದು ಸ್ಚೀಕರಿಸಿ ಆತನಿಗೆ ‘ದಕ್ಷಿಣಪಥೇಶ್ವರ’ ಎಂಬ ಬಿರುದನ್ನು ಕೊಡುತ್ತಾನೆ. ಹಾಗೂ ನರ್ಮದಾ ನದಿಯನ್ನು ಉತ್ತರದ ಹರ್ಷವರ್ಧನನ ಸಾಮ್ರಾಜ್ಯಕ್ಕೂ, ದಕ್ಷಿಣದ ಚಾಲುಕ್ಯ ಸಾಮ್ರಾಜ್ಯಕ್ಕೂ ಗಡಿಯೆಂದು ನಿರ್ಧರಿಸಿ ಹರ್ಷವರ್ಧನ ಕನ್ನೌಜಿಗೆ ಮರಳುತ್ತಾನೆ. ಈ ಯುದ್ಧ, ಇಂಗ್ಳೀಷಿನ “This is what happens when an unstoppable force meets an immovable object” ಎಂಬ ಜಾಣ್ನುಡಿಗೆ ಒಂದೊಳ್ಳೆಯ ಉದಾಹರಣೆ.

Chalukya

ಕಾಂಚೀಪುರವನ್ನು ಗೆಲ್ಲದ, ಚುಕ್ಕಿಯೊಂದು ಇಮ್ಮಡಿ ಪುಲಿಕೇಶಿಯ ಮನಸ್ಸಲ್ಲೇ ಉಳಿದಿತ್ತು. ಹಾಗಾಗಿ ವಯಸ್ಸಾಗಿ ನೇಪಥ್ಯಕ್ಕೆ ಸರಿಯುವ ಮುನ್ನ ಇನ್ನೊಮ್ಮೆ ಪಲ್ಲವರ ಮೇಲೆ ಯುದ್ಧ ಸಾರಲು ನಿರ್ಧರಿಸಿದ ಪುಲಿಕೇಶಿ, ರಥವನ್ನೇರಿಯೇ ಬಿಟ್ಟ. ಆದರೆ ಈ ಬಾರಿ ಪಲ್ಲವರ ರಾಜ ಒಂದನೇ ನರಸಿಂಹವರ್ಮ, ಪುಲಿಕೇಶಿಯ ವಿಜಯಗಳ ಸರಮಾಲೆಗೆ ಕಡಿವಾಣ ಹಾಕುತ್ತಾನೆ. ಇಮ್ಮಡಿ ಪುಲಿಕೇಶಿಯ ಮರಣದೊಂದಿಗೆ ಯುದ್ಧ ಕೊನೆಗೊಳ್ಳುತ್ತದೆ. ಯುದ್ದವನ್ನು ಗೆದ್ದ ಉತ್ಸಾಹದಲ್ಲಿ ನರಸಿಂಹವರ್ಮ ಚಾಲುಕ್ಯ್ರರ ರಾಜಧಾನಿ ಬಾದಾಮಿಯವರೆಗೂ ಸೈನ್ಯವನ್ನು ಕೊಂಡೊಯ್ದು, ಸಂಪತ್ತಲ್ಲವನ್ನೂ ಕಂಚಿಗೆ ಸಾಗಿಸುತ್ತಾನೆ. ಚಾಲುಕ್ಯರ ರಾಜಧಾನಿ “ಬಾದಾಮಿ” ಪಲ್ಲವರ ಮುಂದಿನ 13 ವರ್ಷಗಳ ರಾಜ್ಯಭಾರದಲ್ಲಿ “ವಾತಾಪಿಕೊಂಡ”ವಾಯ್ತು. (ಬಾದಾಮಿಯ ಮೂಲಹೆಸರು ವಾತಾಪಿ). ಹೀಗೆ, ಒಬ್ಬ ಮಹಾರಾಜನನ್ನು ಸೋಲಿಸಲು ಒಂದನೆಯ ನರಸಿಂಹವರ್ಮನಂತಹ ಇನ್ನೊಬ್ಬ ಮಹಾಯೋಧನೇ ಬರಬೇಕಾಯ್ತು. ದಕ್ಷಿಣದ ಮಹಾನ್ ಸಾಮ್ರಾಜ್ಯವೊಂದು ಹೀಗೆ ಕೊನೆಗೊಂಡಿತು.

ಇಮ್ಮಡಿ ಪುಲಿಕೇಶಿಗೆ ಚಂದ್ರಾದಿತ್ಯ, ಆದಿತ್ಯವರ್ಮ, ವಿಕ್ರಮಾದಿತ್ಯ, ಜಯಸಿಂಹ, ಅಂಬರ ಎಂಬ ಐದು ಜನ ಮಕ್ಕಳು. ತಮ್ಮ ತಮ್ಮಲ್ಲೇ ಕಚ್ಚಾಡಿ, ರಾಜ್ಯವನ್ನು ವಿಂಗಡಿಸಿಕೊಂಡು, ಪಲ್ಲವರಿಗೆ ಸಾಮಂತರಾಗಿ, ಸಣ್ಣ ಸಣ್ಣ ಭಾಗಗಳನ್ನು ಆಳುತ್ತಿದ್ದರು. ಇವರಲ್ಲಿ ಮೂರನೆಯವನಾದ ಮೊದಲನೇ ವಿಕ್ರಮಾದಿತ್ಯ, ಇವರ ಜಗಳಗಳಿಂದ ರೋಸಿಹೋಗಿ, ತನ್ನದೇ ಸೋದರರ ಮೇಲೆ ಯುದ್ಧಮಾಡಿ ಸೋಲಿಸಿ ಆಮೇಲೆ ಅವರನ್ನು ಮನ್ನಿಸಿ, ಸೋದರರನ್ನನ್ನೆಲ್ಲಾ ಒಂದುಗೂಡಿಸಿ ಕ್ರಿ.ಶ. 642ರಲ್ಲಿ ತನ್ನನ್ನು ರಾಜನೆಂದು ಘೋಷಿಸಿಕೊಂಡು, ಪಲ್ಲವರನ್ನು ಒದ್ದೋಡಿಸಿ ಚಾಲುಕ್ಯ ಸಾಮ್ರಾಜ್ಯವನ್ನು ಪುನರ್ಸ್ಥಾಪಿಸಿದನು. ಆತನ 13 ವರ್ಷದ ಆಡಳಿತದಲ್ಲಿ ಹಾಗೂ ಇವನ ಮಗನಾದ ಎರಡನೆಯ ವಿಕ್ರಮಾದಿತ್ಯ ಆಳ್ವಿಕೆಯಲ್ಲಿ ಚಾಲುಕ್ಯ ಸಾಮ್ರಾಜ್ಯ ಸಂಪೂರ್ಣವಾಗಿ ಪುನರ್ನಿರ್ಮಾಣವಾಗಿ, ಮತ್ತೆ ಇಮ್ಮಡಿ ಪುಲಿಕೇಶಿಯ ಕಾಲದ ಸಾಮ್ರಾಜ್ಯಕ್ಕೆ ಹೋಲುವ ಮೇರು ಸ್ಥಿತಿಗೆ ತಲುಪಿತು.

ಇಷ್ಟೆಲ್ಲಾ ಕಥೆ ಯಾಕೆ ಹೇಳಿದೆ ಅಂದರೆ, ಒಂದನೆಯ ನರಸಿಂಹವರ್ಮ ವಾತಾಪಿಯಿಂದ ಸಂಪತ್ತನ್ನು ಕಂಚಿಗೆ ಸಾಗಿಸುವಾಗ, ಆ ಯುದ್ದದ ಗೆಲುವಿನಲ್ಲಿ ಮುಖ್ಯಪಾತ್ರವಹಿಸಿದ್ದ ತನ್ನ ಸೈನ್ಯಾಧಿಕಾರಿ ಪರಂಜ್ಯೋತಿಗೆ, ಖಜಾನೆಯ ಕಾಲುಭಾಗದಷ್ಟು ದೊಡ್ಡ ಉಡುಗೊರೆಯನ್ನೇ ಕೊಡುತ್ತಾನೆ. ಇದರಲ್ಲಿ ಚಾಲುಕ್ಯರ ಅರಮನೆಯಲ್ಲಿದ್ದ, ಚಾಲುಕ್ಯರಾಜರ ಅತ್ಯಂತ ಪ್ರೀತಿಯ ದೊಡ್ಡದೊಂದು ಗಣಪತಿಯ ಮೂರ್ತಿಯೂ ಇರುತ್ತದೆ. ತನ್ನ ರಾಜ್ಯಕ್ಕೆ ಮರಳಿದ ಪರಂಜ್ಯೋತಿ, ತನ್ನೂರಾದ, ತಿರುಚೆಂಕಾಟಂಕುಡಿಯಲ್ಲಿ ಈ ಗಣಪತಿಗೊಂದು ದೇವಸ್ಥಾನಕಟ್ಟಿ, ಅದನ್ನು ಆದರದಿಂದ ನೋಡಿಕೊಳ್ಳುತ್ತಾನೆ. ಹೀಗೆ ಬಾದಾಮಿಯಿಂದ ಅಂದರೆ ಅಂದಿನ ವಾತಾಪಿಯಿಂದ, ಕಂಚಿಗೆ ತಲುಪಿದ ಈ ಗಣಪತಿಯೇ, ಮುತ್ತುಸ್ವಾಮಿ ದೀಕ್ಷಿತರ ಕೃತಿ “ವಾತಾಪಿ ಗಣಪತಿಂ ಭಜೇ…”ಯಲ್ಲಿ ಮೂಡಿಬಂದಿರುವುದು! 🙂

ಇದನ್ನೇ ಹೇಳಬೇಕು ಅಂತಾ ಈ ಹರಿಕಥೆ. ಈಗ ಎಲ್ಲರೂ “ವಾತಾಪಿ ಗಣಪತಿಂ ಭಜೇ….” ಎಂದು ಹಾಡುತ್ತಾ ಮುಂದಿನ ಕೆಲಸ ನೋಡಿಕೊಳ್ಳಿ 🙂

ಕೆಲ ವಿಶೇಷ ಮಾಹಿತಿಗಳು:

(1) ಈ ವಾತಾಪಿ ಗಣಪತಿ ದೇವಸ್ಥಾನ ಇವತ್ತು ತಮಿಳ್ನಾಡಿನ ನಾಗಪಟ್ಟಿನಂ ಜಿಲ್ಲೆಯ ಉತ್ರಪತೀಸ್ವರಸ್ವಾಮಿ ದೇವಸ್ಥಾನದ ಆವರಣದಲ್ಲೇ ಇದೆ. ಆ ಉತ್ರಪತೀಸ್ವರಸ್ವಾಮಿ ದೇವಸ್ಥನವನ್ನೂ ಪರಂಜ್ಯೋತಿಯೇ ಕಟ್ಟಿಸಿದ್ದು. ಇದು ಈಶ್ವರನ ದೇವಸ್ಥಾನವೇ ಆದರೂ, ಪರಂಜ್ಯೋತಿಯ ಪ್ರೀತಿಯ ದೇವ, ಗಣೇಶನ ಬಿಂಬಗಳಿಗೆ ಪ್ರಸಿದ್ಧ.

ದೇವಸ್ಥಾನದ ಮುಖ್ಯ ಗರ್ಭಗುಡಿಯಲ್ಲಿರುವ ಗಣೇಶ, ತನ್ನ ಯಥಾಪ್ರಸಿದ್ಧ ಆನೆಯ ಮುಖದಲ್ಲಿರದೆ, ಮಾನವ ಮುಖದಲ್ಲೇ ಇರೋದು ಒಂದು ವಿಶೇಷ.

(2) ಈ ಮಹಾಸೈನ್ಯಾಧಿಪತಿ ಪರಂಜ್ಯೋತಿ, ಮುಂದೆ ತನ್ನ ಕ್ಷತ್ರಿಯಾಭ್ಯಾಸಗಳನ್ನೆಲ್ಲಾ ತ್ಯಜಿಸಿ, ಜೀವನವನ್ನೇ ಬದಲಾಯಿಸಿಕೊಂಡು ‘ಸಿರುತೊಂದಾರ್’ ಎಂಬ ಹೆಸರಿನ ನಾಯನಾರ್ ಸಂತನಾಗಿ, ತನ್ನ ಜೀವನವನ್ನು ಅಲ್ಲೇ ಕಳೆಯುತ್ತಾನೆ. ನಾಯನಾರ್’ಗಳು ಹಾಗೂ ಆಳ್ವಾರ್’ಗಳು, ಎಂಟನೇ ಶತಮಾನದಲ್ಲಿ ದಕ್ಷಿಣಭಾರತದಲ್ಲಿ ‘ಭಕ್ತಿ ಚಳುವಳಿಗೆ’ ನಾಂದಿ ಹಾಡಿದ ಮಹಾಪುರುಷರು. ಆ 63 ನಾಯನಾರ್’ಗಳಲ್ಲಿ ಈ ಪರಂಜ್ಯೋತಿಯೂ ಒಬ್ಬ! ಜೀವನ ಎಷ್ಟು ವಿಚಿತ್ರ ನೋಡಿ!! ಪರಂಜ್ಯೋತಿಯಿಂದ….ಸಿರುತೊಂದಾರ್!!!

(3) ಎರೆಯ ಎಂಬುವವ ಇಮ್ಮಡಿ ಪುಲಿಕೇಶಿಯಾದರೆ, ಮೊದಲನೆಯ ಪುಲಿಕೇಶಿ ಯಾರು ಎಂಬ ಅನುಮಾನ ನಿಮಗಿದ್ದರೆ:

ಮೊದಲನೇ ಪುಲಿಕೇಶಿ ಎರೆಯನ ಅಜ್ಜ. ಅಂದರೆ ಕೀರ್ತಿವರ್ಮನ ಅಪ್ಪ. ಮಂಗಳೇಶನ ಮಹಾಕೂಟ ಶಾಸನ ಹಾಗೂ ರವಿಕೀರ್ತಿಯ ಐಹೊಳೆ ಶಾಸನದ ಪ್ರಕಾರ ಚಾಲುಕ್ಯರ ಮೂಲ ಪುರುಷ ಕ್ರಿ.ಶ 500ರಲ್ಲಿ ರಾಜ್ಯಭಾರ ಆರಂಭಿಸಿದ ಜಯಸಿಂಹನೇ ಆದರೂ, ಕ್ರಿ.ಶ 540ರಲ್ಲಿ ರಾಜನಾದ ಜಯಸಿಂಹನ ಮೊಮ್ಮಗ ಪುಲಿಕೇಶಿಯೇ ಚಾಲುಕ್ಯ ಸಂತತಿಯ ಮೊದಲ ಸ್ವತಂತ್ರ ರಾಜ. ಬಾದಾಮಿಯಿಂದ ರಾಜ್ಯಭಾರ ಮಾಡಿದ ಈತನ ಕೂದಲು ಬಹುಷಃ ಕೆಂಚು ಬಣ್ಣಕ್ಕಿದ್ದಿರಿಂದ (blonde) ಪುಲಿಕೇಶಿ (ಅಂದರೆ ಹುಲಿಯಂತಾ ಕೂದಲಿರುವವನು) ಎಂಬ ಹೆಸರು ಬಂದಿರಬಹುದೇ ಎಂಬುದು ನನ್ನ ಅನುಮಾನ.

ಈ ಲೇಖನದಲ್ಲಿರುವ ಹೆಚ್ಚಿನ ಐತಿಹಾಸಿಕ ಸತ್ಯಗಳ ಬಗ್ಗೆ ನನ್ನ ಗಮನ ಸೆಳೆದದ್ದು, ಪಕ್ಕಾ ಬೆಂಗಳೂರು ಹುಡುಗ, ಟ್ವಿಟರ್ ಗೆಳೆಯ ಆದಿತ್ಯ ಕುಲಕರ್ಣಿ. ಅವರ ಟ್ವೀಟುಗಳ ಸರಮಾಲೆಯನ್ನೇ, ಅಲ್ಪಸ್ವಲ್ಪ ಸೇರ್ಪಡೆಗಳೊಂದಿಗೆ ಲೇಖನಸ್ವರೂಪದಲ್ಲಿ ಬರೆದಿದ್ದೇನೆ. ಈ ಇಡೀ ಲೇಖನ Aditya Kulkarni ಅವರಿಗೆ ಸೇರಬೇಕಾದದ್ದು.

#ರಾಘವಾಂಕಣ

ಧರ್ಮಮಂಥನ – ೨

ಧರ್ಮ ಎಂದರೇನು? ಹಿಂದೂಗೂ ಧರ್ಮಕ್ಕೂ ಏನು ಸಂಬಂಧ? ಹಿಂದುತ್ವ, ಹಿಂದೂಯಿಸಂ, ಹಿಂದೂಧರ್ಮ ಇವೆಲ್ಲಾ ಒಂದೇನಾ?…..ಎಂಬ ಜಿಜ್ಞಾಸೆ

ಕೆಲತಿಂಗಳ ಹಿಂದೆ, ರಕ್ಷಿತ್ ಪೊನ್ನಾಥಪುರ ಎಂಬ wannabe ಚಿಂತಕನೊಂದಿಗೆ ಯಾವುದೋ ವಿಷಯ ಚರ್ಚಿಸುತ್ತಿದ್ದಾಗ, ಆತ ಹಿಂದುತ್ವ ಬೇರೆ, ಹಿಂದೂಯಿಸಂ ಬೇರೆ. ನಾನು ಹಿಂದೂಯಿಸಂಗೆ ಬೆಂಬಲಿಸ್ತೀನಿ, ಹಿಂದುತ್ವಕ್ಕೆ ನನ್ನ ಬೆಂಬಲವಿಲ್ಲ ಅಂದಾಗ ನಾನು ಚರ್ಚೆ ಅಲ್ಲಿಯೇ ನಿಲ್ಲಿಸಿಬಿಟ್ಟೆ. ನಿಲ್ಲಿಸಲು ಮೊದಲ ಕಾರಣ ನನಗೆ ಉಕ್ಕಿ ಬಂದ ನಗು. ಎರಡನೆಯದು, ಈ ಕೆಲ ಜೊಳ್ಳುಗಳಿಗೆ ಕೆಲ ಇಂಗ್ಳೀಷ್ ಪುಸ್ತಕಗಳನ್ನೋದಿಕೊಂಡು ಅದನ್ನು ಕನ್ನಡೀಕರಿಸುವ ಅಥವಾ ಇಂಡೀಕರಿಸುವ ರೋಗವಿದೆ. ಈ ಹಿಂದೂಯಿಸಂ, ಹಿಂದುತ್ವದ್ದೂ ಇದೇ ತಲೆಹರಟೆ. ಇದಕ್ಕೆ ಮದ್ದು ನಾವು ಅರೆಯುವುದು ಕಷ್ಟ. ಅದು ಇನ್ನೂ ಹೆಚ್ಚಾಗಿ, ಯಾವುದೇ ಪೂರ್ವಗ್ರಹವಿಲ್ಲದೇ ಈ ನೆಲದ ಜ್ಞಾನವನ್ನ ಅಧ್ಯಯನ ಮಾಡಿದಾಗ ಮಾತ್ರ ಗುಣವಾಗಬಲ್ಲಂತದ್ದು. ಈ ರೋಗ ಶಶಿ ತರೂರನಿಗೂ ಬಿಟ್ಟಿಲ್ಲ. Infact, ಈ ರೋಗ ಇಲ್ಲಿಯದನ್ನು ಅರ್ಧ ಓದಿಕೊಂಡು, ಅಲ್ಲಿಯದನ್ನು ಅರ್ಧ ಓದಿಕೊಂಡು ಅದನ್ನು ಸಮ್ಮಿಳಿಸುವ ಪ್ರಯತ್ನದ ಫಲ. ಆಯಾ ಜ್ಞಾನಗಳು ಆಯಾ ಪ್ರದೇಶದಿಂದ, ಅಲ್ಲಿನ ಇತಿಹಾಸದಿಂದ, ಅಲ್ಲಿಗೆ ಅನನ್ಯವಾಗಿ ಹುಟ್ಟಿದಂತವು. ಅವನ್ನು ಇನ್ನೊಂದರೊಂದಿಗೆ ಸಮೀಕರಿಸುವುದು, ಸಮ್ಮಿಳಿಸುವುದು ಎಲ್ಲಾ ಸಮಯದಲ್ಲೂ ಸೂಕ್ತವಲ್ಲ. ವಸಾಹತುಶಾಹಿ ಚಿಂತನೆ ಇಂತಹುದೇ ಒಂದು ಸಮ್ಮಿಳಿತದಿಂದ ಹುಟ್ಟಿದ ವ್ಯಾಧಿ.
ಈಗ ಇದೊಂದು ಹೊಸಾ ಟ್ರೆಂಡ್ ಶುರುವಾಗಿದೆ. ಹಿಂದುತ್ವ ಬೇರೆ, ಹಿಂದೂಯಿಸಂ ಅಂದ್ರೆ ಬೇರೆ, ಹಿಂದೂ ಧರ್ಮ ಅಂದ್ರೆ ಬೇರೆ….ಬ್ಲಾ….ಬ್ಲಾ…ಬ್ಲಾ ಅಂತಾ ಕೂಗಾಡುವುದು. ಇದು ಹಿಂದೂ ಜೀವನರೀತಿಯನ್ನು ಪಾಶ್ಚಾತ್ಯ ರೀತಿಯಲ್ಲೇ ಅರ್ಥಸಿಕೊಳ್ಳುವ ಪ್ರಯತ್ನ ಮಾಡುವ ರಿಲೀಜಿಯನ್ ಮನಸ್ಥಿತಿಗಳು ಹುಟ್ಟುಹಾಕಿರುವ ಹೊಸಾದೊಂದು ತಲೆಕೆರೆತವಷ್ಟೇ. ಮತ್ತೇನೂ ಅಲ್ಲ. ಹಿಂದೂಯಿಸಂ ಎಂಬುದೊಂದು ‘ಇಸಂ’ ಇರಲು ಸಾಧ್ಯವೇ ಇಲ್ಲ ಅಂತಾ ಈ ism ಎಂಬ ಪದದ ಮೂಲಗೊತ್ತಿರುವವರಿಗೆ ತಿಳಿದಿರುತ್ತೆ.
ಈ ಇಸಂ ಎಂಬ ಪ್ರತ್ಯಯದ ಮೂಲ ಪುರಾತನ ಗ್ರೀಕ್ ಭಾಷೆಯ ಇಸ್ಮೋಸ್ (-ismos) ಎಂಬ ಪ್ರತ್ಯಯ. ಇದು ಲ್ಯಾಟಿನ್ನಿನಲ್ಲಿ ಇಸ್ಮಸ್ (-ismus) ಆಗಿ, ಅಲ್ಲಿಂದ ಫ್ರೆಂಚಿನಲ್ಲಿ ಇಸ್ಮೆ (-isme)ಯಾಗಿ ಇಂಗ್ಳಿಷಿನಲ್ಲಿ ಇಸಂ ಆಯ್ತು. 1680ರಲ್ಲಿ ಈ ಇಸಮು ಎಂಬುದನ್ನು ಕ್ರಿಯಾಪದವನ್ನು ನಾಮಪದವಾಗಿ ಬದಲಾಯಿಸಲು ಬಳಸಲಾರಂಭಿಸಲಾಯ್ತು. ಉದಾಹರಣೆಗೆ baptize ಮಾಡುವುದನ್ನು baptism ಎಂದೂ, criticize ಮಾಡುವುದನ್ನು criticism ಎಂದೂ, plagiarize ಮಾಡುವುದನ್ನು plagiarism ಎಂದು ಕರೆಯಲು ಬಳಸಲಾಯ್ತು. 19ನೇ ಶತಮಾನದಲ್ಲಿ ಥಾಮಸ್ ಕಾರ್ಲೈಲ್ ಈ ಪದವನ್ನು ಒಂದು ಪೂರ್ವನಿಯೋಜಿತ ಐಡಿಯಾಲಜಿಗಳನ್ನ ಅಂದರೆ ಸಿದ್ಧಾಂತಗಳನ್ನ ಸೂಚಿಸಲು ಬಳಸಿದ. ನಂತರದ ಚಿಂತಕರಾದ ಜೂಲಿಯನ್ ಹಕ್ಸ್ಲೀ ಮತ್ತು ಜಾರ್ಜ್ ಬರ್ನಾರ್ಡ್ ಷಾ ಕೂಡಾ ಸಾಮಾಜಿಕ ಮೌಲ್ಯಗಳ ತಮ್ಮ ಬರಹಗಳಲ್ಲಿ ಬಳಸಿ ಪ್ರಸಿದ್ಧಿಗೆ ತಂದರು. ಅಮೇರಿಕದಲ್ಲಿ ಹತ್ತೊಂಬತ್ತನೇ ಶತಮಾನದ ಮದ್ಯಭಾಗದಲ್ಲಿ ಈ -ಇಸಂ ಪ್ರತ್ಯಯಗಳನ್ನು ಅಂದಿನಕಾಲದಲ್ಲಿ ನಡೆಯುತ್ತಿದ್ದ ಸಾಮಾಜಿಕ ಚಳುವಳಿಗಳನ್ನು, ಅಂದರೆ ಫೆಮಿನಿಸಂ, ಅಲ್ಕೋಹಾಲ್ ಪ್ರಾಹಿಬಿಷನಿಸಂ, ಪ್ಯಾಸಿಫಿಸಂ, ಅರ್ಲೀ ಸೋಷಿಯಲಿಸಂ ಇತ್ಯಾದಿಗಳನ್ನು ಉದ್ದೇಶಿಸಿ ಬಳಸಲಾಯಿತು. ಹೀಗೆ ಒಂದು ಸಿದ್ಧಾಂತವನ್ನು ವಿವರಿಸುವಾಗ ಬಳಸುವ ಪದ ಇಸಂ. ಹಿಂದುತ್ವ ಅನ್ನೋದು ಒಂದು ಸಿದ್ಧಾಂತ ಅಲ್ಲವೆಂದು ಏಳನೇ ಕ್ಲಾಸಿನ ಮಗುವಿಗೂ ತಿಳಿದಿದೆ. ಇದು ಯಾರೋ ಕಮ್ಯೂನಿಸಂ, ಕ್ಯಾಥೋಲಿಕಿಸಂ, ಸೋಷಿಯಲಿಸಂನ ಸಿದ್ಧಾಂತಗಳನ್ನು ಓದಿ ತಲೆಕೆಡಿಸಿಕೊಂಡ ಅಡ್ಡಕಸಬಿಗಳು ಹುಟ್ಟುಹಾಕಿದ ಪದವಷ್ಟೇ. ಹಿಂದೂಯಿಸಂ ಎಂಬ ಪದಕ್ಕೆ ಯಾವುದೇ ಅರ್ಥವಿಲ್ಲ.
ಇನ್ನುಳಿದದ್ದು ಎರಡು ಪದಗಳು, ಹಿಂದುತ್ವ ಹಾಗೂ ಹಿಂದೂಧರ್ಮ. ಇವೆರಡೂ mutually exclusive ಪದಗಳಲ್ಲ. ಒಂದನ್ನು ಬಿಟ್ಟು ಇನ್ನೊಂದನ್ನು ವಿವರಿಸಲು ಸಾಧ್ಯವಿಲ್ಲ. ಹಿಂದೂಧರ್ಮಕ್ಕನುಗುಣವಾಗಿ ಜೀವನ ನಡೆಸುವುದಷ್ಟೇ ಹಿಂದುತ್ವ. ಜೀವನವೆಂದರೆ ಅದು ಯಾರದ್ದೂ ಆಗಬಹುದು. ರಾಜನದ್ದಾಗಬಹುದು, ರೈತನದ್ದಾಗಬಹುದು, ಸೈನಿಕನದ್ದಾಗಬಹುದು, ವೈದ್ಯನದ್ದಾಗಬಹುದು, ಚಮ್ಮಾರ ಕಮ್ಮಾರ ಬಾಣಸಿಗ ಕೂಲಿ ಯಾರದ್ದೂ ಸಹ. ಯಾರ ಜೀವನವೂ, ಅವರ ವರ್ತನೆಗಳೂ, ಜೀವನ ನಿರ್ಧಾರಗಳು ಧರ್ಮಕ್ಕನುಗುಣವಾಗಿರುತ್ತೋ ಅವನ ಜೀವನವೇ ಹಿಂದುತ್ವದ ಉದಾಹರಣೆ, ಅಷ್ಟೇ.
ಹಾಗಾದರೆ ಹಿಂದೂಧರ್ಮವೆಂದರೇನು? ಹಿಂದೂಧರ್ಮಕ್ಕನುಗುಣವಾಗಿ ಬದುಕುವುದು ಎಂದರೇನು? ವೇದಗಳನ್ನು ಪಾಲಿಸುವುದೇ, ಮನುಸ್ಮೃತಿಯ ಪ್ರಕಾರ ಬದುಕುವುದೇ? ವರ್ಷಕ್ಕೊಮ್ಮೆ ಗಣೇಶನ ಹಬ್ಬ ಮಾಡುವುದು ಹಿಂದೂಧರ್ಮವೇ? ಯುಗಾದಿಯನ್ನು ವರ್ಷದ ಮೊದಲ ದಿನ ಅನ್ನೋದು ಹಿಂದುತ್ವವೇ? ಅಲ್ಲ. ಯಾವುದೇ ಒಂದು ಪುಸ್ತಕ, ಪ್ರವಚನ, ವ್ಯಕ್ತಿ ಬರೆದಿಟ್ಟ ಡಾಕ್ಟರಿನ್ ಅಲ್ಲ ಹಿಂದುತ್ವ. “ಎಲ್ಲವೂ ಹೌದು, ಯಾವುದೂ ಅಲ್ಲ” ಅನ್ನುವಂತೆ ಬದುಕುತ್ತದೆ ಹಿಂದೂ ಧರ್ಮ. ಸರಳವಾಗಿ ಹೇಳಬೇಕೆಂದರೆ ಇಡಿಯ ಹಿಂದೂ ಧರ್ಮವನ್ನು ಒಂದು ಹೂವಿಗೆ ಹೋಲಿಸಬಹುದು. ಸಂಪ್ರದಾಯ, ಆಚರಣೆ, ಹಬ್ಬಗಳು, ಜ್ಯೋತಿಷ್ಯ, ವೇದಗಳು, ಅಷ್ಟಾಂಗ ಯೋಗಗಳು, ಸಂಗೀತ, ನಾಟ್ಯ, ಶಾಸ್ತ್ರ, ಸೂತ್ರಗಳೆಲ್ಲವೂ ಹೂವಿನ ಪಕಳೆಗಳಂತೆ. ಆದರೆ ಈ ಎಲ್ಲಾ ಪಕಳೆಗಳನ್ನು ಹಿಡಿದಿಡುವ ಹೂವಿನ ಇದರ ಮಧ್ಯಭಾಗ ಅಂದರೆ ಶಲಾಕೆ ಏನಿದೆ ಅದು ‘ಧರ್ಮ’. ಇಡೀ ಹಿಂದೂ ಜೀವನಪದ್ದತಿಯ ಜೀವಾಳವೇ ಈ ಧರ್ಮವೆನ್ನುವ ಶಲಾಕೆ. ಅದರಿಂದಲೇ ಹೊಮ್ಮಿದ್ದು, ಅದರಿಂದಲೇ ಹಿಡಿದಿಡಲ್ಪಟ್ಟಿದ್ದು ನಮ್ಮ ಹಿಂದೂ ಪದ್ದತಿಗಳು, ಸಂಪ್ರದಾಯ ಹಾಗೂ ನಂಬಿಕೆಗಳು.
ಈಗ ಧರ್ಮ ಎಂದರೇನು? ಎನ್ನುವಲ್ಲಿಗೆ ಬರೋಣ. ಧರ್ಮವೆಂದರೆ ಸ್ಥೂಲವಾಗಿ “ಸರಿಯಾದದ್ದು” ಎನ್ನಬಹುದು. ದಾರಿಯಲ್ಲಿ ಭಿಕ್ಷುಕ ‘ಧರ್ಮ ಮಾಡೀ ಸ್ವಾಮಿ” ಅಂದಾಗ, ಅದರರ್ಥ ಭಿಕ್ಷೆ ಹಾಕಿ ಅಂತಲ್ಲ. “ನನ್ನ ಬಳಿಯಿಲ್ಲದ್ದು ನಿನ್ನ ಬಳಿಯಿದೆ. ಅದರಲ್ಲಿ ಸ್ವಲ್ಪ ನನಗೂ ಕೊಟ್ಟರೆ ನಿನಗೆ ಅಭಾವವುಂಟಾಗುವುದಿಲ್ಲ ಅಂತಾದರೆ, ನನಗೆ ಕೊಡುವುದು ಸರಿಯಲ್ಲವೇ? ನಿನ್ನ ವಿವೇಚನೆಯನ್ನು ಉಪಯೋಗಿಸಿ ಏನು ಕೊಟ್ಟರೆ ಸರಿ ಅಂತನ್ನಿಸುತ್ತದೋ ಅದನ್ನು ಕೊಡು” ಎಂದರ್ಥ. ಧರ್ಮ ಮಾಡಿ ಅಂದಾಗ, ಸರಿಯಾದದ್ದು ಮಾಡಿ ಅಂತಾ ಅರ್ಥ. ನೀವು ಯಾರನ್ನಾದರೂ ಅಧರ್ಮಿ ಅಂತಾ ಯಾವಾಗ ಕರೀತೀರಿ? ಯಾವಾಗ ಕೆಲ ಪ್ರಾಕೃತಿಕ ವರ್ತನೆಗಳನ್ನೂ, ಗುಣಗಳನ್ನೂ ಮನುಷ್ಯ ಮರೆಯುತ್ತಾನೋ ಆಗವನು ಅಧರ್ಮಿಯಾಗ್ತಾನೆ, ಹೌದೋ ಅಲ್ಲವೋ? ಯಾವುದು ಈ ಪ್ರಾಕೃತಿಕ ವರ್ತನೆಗಳು!? ಕೆಲ ತೀರಾ ಸರಳ ಉದಾಹರಣೆಗಳು “ದುರ್ಬಲರನ್ನು ಶೋಷಿಸದಿರುವುದು”, “ಕೊಟ್ಟ ಮಾತನ್ನು ಮರೆಯದಿರುವುದು”, “ಅಭಾವವಿಲ್ಲವೆಂದಾದಲ್ಲಿ ಉಳಿದವರೊಡನೆ ಹಂಚಿಕೊಳ್ಳುವುದು” ಇಂತವು. ಎಲ್ಲರಿಗೂ ಹೊಂದುವಂತಹ ಕೆಲ ನಿಯಮಗಳು. ಒಟ್ಟಿನಲ್ಲಿ ಪ್ರಕೃತಿಯೊಂದಿಗೇ ಬದುಕಿ ಈ ಇಡೀ ಜೀವನ ಹಾಗೂ ಜಗತ್ತನ್ನು ಸಾಧ್ಯವಾಗಿಸುವಂತಾ ಕೆಲ ಕ್ರಮಗಳ ಸಮೂಹವನ್ನೇ ಒಟ್ಟಾಗಿ “ಧರ್ಮ” ಎನ್ನುವುದು. ಯಾವ ಕನಿಷ್ಟ ನಿಯಮಗಳನ್ನು ಮುರಿದರೆ ಒಂದು ಸಮುದಾಯ ಪರಸ್ಪರ ಕಚ್ಚಾಡಿ ಸಾಯುತ್ತದೆಯೋ ಆ ಕನಿಷ್ಟ ನಿಯಮಗಳೇ ಧರ್ಮ. ಸಮುದಾಯಗಳೇ ಸತ್ತಮೇಲೆ ಜಗತ್ತು ಇದ್ದರೂ, ನಮ್ಮಪಾಲಿಗೆ ಅದು ಇಲ್ಲ ಅಲ್ಲವೇ? ನಾವು ಕಣ್ಣುಮುಚ್ಚಿದರೆ ಜಗತ್ತಿದೆ ಹೌದು. ಆದರೇ ನಾವೇ ಇಲ್ಲದಿದ್ದರೆ ಜಗತ್ತೇ ಇಲ್ಲ. ಹೌದು ತಾನೇ? ಅದಕ್ಕೇ ಧರ್ಮವನ್ನು “ಜೀವನ ಹಾಗೂ ಜಗತ್ತನ್ನು ಸಾಧ್ಯವಾಗಿಸುವಂತಾ ಕೆಲ ಕ್ರಮಗಳ ಸಮೂಹ” ಅಂದಿದ್ದು. Dharma doesn’t give life, but it preserves life. ಆ ಕಾರಣಕ್ಕಾಗಿ ಧರ್ಮ ಅಗತ್ಯ.
ಈಗ, ಮೇಲೆ ಹೇಳಿದ ಕೆಲವಷ್ಟೇ ಧರ್ಮಗಳೇ? ಅಲ್ಲ, ಅವು ಕೆಲ ಸರಳ ಉದಾಹರಣೆಗಳಷ್ಟೇ. ಹಾಗೂ ಆ ಸರಳ ಉದಾಹರಣೆಗಳು ಸಮುದಾಯದ ಎಲ್ಲರಿಗೂ ಅನ್ವಯವಾಗುವಂತದ್ದು. ಸಮುದಾಯದ ನಾಯಕನಾದವನಿಗೆ ಧರ್ಮದ ಅರ್ಥ ಹಾಗೂ ಅಗತ್ಯ ಬೇರೆಯೇ ಇರುತ್ತದೆ. “ಎಲ್ಲರನ್ನೂ ಅವರವರ ಸಾಮರ್ಥ್ಯಕ್ಕನುಗುಣವಾಗಿ ನೋಡು ಹಾಗೂ ಸತ್ಕರಿಸು”, “ಸಮುದಾಯ ತೊಂದರೆಯಲ್ಲಿ ಸಿಕ್ಕಿಕೊಂಡಾಗ ಹೆಂಗಸರನ್ನು, ಮಕ್ಕಳನ್ನು ಹಾಗೂ ಹಿರಿಯರನ್ನು ಮೊದಲು ಕಾಪಾಡುವಂತೆ ನೋಡಿಕೋ”, “ಸಾಮಾಜಿಕ ನಿಯಮಗಳು ಎಲ್ಲರಿಗೂ ಒಂದೇ ಇರಲಿ” ಹೀಗೆ ಮುಂತಾದ ನಿಯಮಗಳು ಧರ್ಮವಾಗುತ್ತವೆ. ಮುಂದೆ ಸಮುದಾಯಗಳು ಬೆಳೆದು ದೊಡ್ಡದಾದಂತೆ, ಬುಡಕಟ್ಟುಗಳು ರಾಜ್ಯಗಳಾದಾಗ ಈ ನಿಯಮಗಲೇ ರಾಜಧರ್ಮಗಳಾದವು. ರಾಜ್ಯಭಾರ ಮಾಡುವುದು, ಪಕ್ಕದ ರಾಜ್ಯಗಳೊಂದಿಗೆ ವ್ಯವಹಾರ ಮಾಡುವ ರಾಜಕೀಯವನ್ನೂ ಧರ್ಮದ ಚೌಕಟ್ಟಿನಲ್ಲಿ ನಡೆಸಿದ ಹೆಮ್ಮೆಯ ನಾಗರೀಕ ಜಗತ್ತು ಈ ಭರತಖಂಡ. ಅದನ್ನು ಸಾಧ್ಯವಾಗಿಸಿದ್ದೇ ಹಿಂದೂಧರ್ಮ. ಯಾಕೆಂದರೆ ಆ ರಾಜಕೀಯವೂ ಹಿಂದೂಧರ್ಮದ ನಿಯಮಗಳನ್ನು ಪಾಲಿಸಿಕೊಂಡೇ ಬೆಳೆದದ್ದು. ನಮ್ಮ ರಾಜರುಗಳು ಯುದ್ಧಗೆದ್ದಾಗ ಎದುರಾಳಿ ಸೈನಿಕರ ಸಾಮೂಹಿಕ ತಲೆಕಡಿದ ಒಂದೇ ಒಂದು ಉದಾಹರಣೆಯಿಲ್ಲ. ಸೋತ ರಾಜನ ರಾಜ್ಯದ ಸಂಪತ್ತು ಗೆದ್ದವರದ್ದಾದರೂ, ಸೋತವರ ಮನೆಮನೆಗೆ ನುಗ್ಗಿ ಹೆಂಗಸರನ್ನು ಅತ್ಯಾಚಾರ ಮಾಡಿ, ಮಕ್ಕಳ ತಲೆಕಡಿದ ಉದಾರಣೆಗಳಿಲ್ಲ. ಯಾಕೆಂದರೆ ರಾಜಧರ್ಮ ಅದನ್ನೊಪ್ಪುತ್ತಿರಲಿಲ್ಲ. ಅಂತಹ ವರ್ತನೆ ತೋರಿದವರನ್ನು ನಮ್ಮ ಕಥೆಗಳೂ ಸಹ ಅಧರ್ಮಿಗಳೆಂದೇ ಕಂಡಿವೆ.
(ಇದೇ ಕಾರಣಕ್ಕೆ ಕೆಲವರು ಇವತ್ತಿನ ಕಾಲದಲ್ಲಿ ಬಿಜೆಪಿ ಒಂದು ರಾಜಕೀಯಪಕ್ಷ. ಅವರು ಧರ್ಮದ ವಿಚಾರ ಮಾತನಾಡಬಾರದು ಎಂದಾಗ ನನಗೆ ಆಶ್ಚರ್ಯವಾಗುತ್ತದೆ. ಯಾಕೆಂದರೆ ಹಿಂದೂ ಜೀವನಪದ್ದತಿಯಲ್ಲಿ ಎಲ್ಲದರಲ್ಲೂ ಧರ್ಮದ ಎಳೆ ಇದೆ. ರಾಜಕೀಯದಲ್ಲೂ ಸಹ. ಇದೇ ಕಾರಣಕ್ಕೆ ವೈಯುಕ್ತಿಕವಾಗಿ ಯಾವುದೇ ಪಾರ್ಟಿ ನಾನು ಹಿಂದೂ ಧರ್ಮದ ನಿಯಮಗಳಿಗೆ ಬದ್ಧನಾಗಿ ರಾಜ್ಯನಡೆಸುತ್ತೇನೆ ಎಂದಾಗ ನನಗದು ತಪ್ಪೆನಿಸುವುದಿಲ್ಲ.)
#ಧರ್ಮಮಂಥನ – ೨
[ಮುಂದಿನ ಭಾಗ: ಹಿಂದೂ ಶಾಸ್ತಗಳು, ಚಿಂತನೆಗಳು (ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಮೀಮಾಂಸ, ವೇದಾಂತ, ನಾಟ್ಯ, ಆಯುರ್ವೇದ, ಶಾಸ್ತ್ರೀಯ ಸಂಗೀತ ಇತ್ಯಾದಿ) ಮತ್ತು ಹಿಂದೂ ಧರ್ಮ. ಹೇಗೆ ಯೋಗ, ಸಂಗೀತ ಮತ್ತು ಭಾರತನಾಟ್ಯಗಳು ಹಿಂದೂ?]

ಧರ್ಮಮಂಥನ – ೧

ಧರ್ಮ ಎಂದರೇನು? ಹಿಂದೂಗೂ ಧರ್ಮಕ್ಕೂ ಏನು ಸಂಬಂಧ? ಹಿಂದುತ್ವ, ಹಿಂದೂಯಿಸಂ, ಹಿಂದೂಧರ್ಮ ಇವೆಲ್ಲಾ ಒಂದೇನಾ?…..ಎಂಬ ಜಿಜ್ಞಾಸೆ

ಈ ಸರಣಿ ಯಾಕೆ ಬರೀತಿದ್ದೀನಿ ಅಂತಾ ಮುಂದೆ ಹೇಳ್ತೀನಿ. ಈಗ ಸದ್ಯಕ್ಕೆ ಈ ಸಣ್ಣ ಸಣ್ಣ ತುಣುಕುಗಳನ್ನು ಓದೋಣ.

(*****)

ಪ್ರಕೃತಿಯೊಂದಿಗೆ ಬೆಳೆದು ಬದುಕುವುದೂ ಹಿಂದೂ ಧರ್ಮದ ಮುಖ್ಯ ನಿಯಮಗಳಲ್ಲೊಂದು. ಇದೇ ಕಾರಣಕ್ಕೆ ನಮಗೆ ಕಾಲಿಲ್ಲದೇ ನಡೆಯುವ, ಒಂದೇ ಒಂದು ಹೊಡೆತದಲ್ಲಿ ಮನುಷ್ಯರನ್ನು ಕೊಲ್ಲಬಲ್ಲ ಹಾವಿನಲ್ಲಿ ನಮಗೆ ದೇವರು ಕಂಡಿದ್ದು. ನಮ್ಮಷ್ಟೇ ಬುದ್ಧಿಮತ್ತೆ ಹೊಂದಿದ್ದ ಕೋತಿಗಳಲ್ಲಿ ನಮಗೆ ದೇವರು ಕಂಡಿದ್ದು. ಅಷ್ಟು ದೊಡ್ದದೇಹವಿದ್ದ ಆನೆಯೂ ದೇವರಾಗಿ ಕಂಡಿದ್ದು, ಕರಡಿಯೂ ಪೂಜ್ಯವಾಗಿದ್ದು, ಮನೆಗೆ ಸಾವಿರ ರೀತಿಯಲ್ಲಿ ಸಹಾಯಕವಾಗಿದ್ದ ದನ ಕೂಡಾ ದೇವರ ಸಮಾನವಾಗಿದ್ದು. ನಾನಿಲ್ಲಿ ಸಾಮಾಜಿಕ ಹಾಗೂ ಮನೋವೈಜ್ಞಾನಿಕ ದೃಷ್ಟಿಕೋನದಿಂದ ನೋಡುತ್ತಿದ್ದೇನೆಯೇ ಹೊರತು, ಪುರಾಣ ಪುಣ್ಯಕಥೆಗಳ ಕೋನದಿಂದಲ್ಲ. ಅನಾಸ್ತಿಕನಾದ ನನಗೆ, ಈ ಚರ್ಚೆಗೆ, ಹಿರಣ್ಯಕಶಿಪು ಇದ್ದನೋ ಇಲ್ಲವೋ ಎಂಬುದರ ಅಗತ್ಯವಿಲ್ಲ, ಕಾಮಧೇನು ಎಂಬ ಹಸುವಿತ್ತೋ ಅನ್ನೋದೂ ಬೇಡ, ಇಂದ್ರ ವಜ್ರಾಯುಧಗಳ ಕಥೆಯೂ ಬೇಡ. ನಾನು ಕ್ರಿಪೂ 7000ದಿಂದ ಕ್ರಿಶ 100ರವರೆಗೆ ಅಸ್ತಿತ್ವದಲ್ಲಿದ್ದ ಮನುಷ್ಯಕುಲದ ಜೀವನದಲ್ಲಿ ಏನೇನಾಗಿರಬಹುದು ಎಂಬುದರ ಆಧಾರದ ಮೇಲಷ್ಟೇ ಧರ್ಮವನ್ನು ಅವಲೋಕಿಸುತ್ತಿರುವುದು. ನನ್ನ ಪ್ರಕಾರ ಇಂದ್ರನೂ ಇಲ್ಲ, ಅವನಿಗೆ ವಜ್ರಾಯುಧವೂ ಇಲ್ಲ. ಅವೆಲ್ಲಾ (ಹಿರಣ್ಯಕಶಿಪು, ಕಾಮಧೇನು, ಕಲ್ಪವೃಕ್ಷ, ಇಂದ್ರ ಎಲ್ಲವೂ) ಬೇರೆ ಬೇರೆ ಪಾಠಗಳನ್ನು ಕಲಿಯಲು ಬೇಕಾಗುವ ಸಿಂಬಾಲಿಸಂಗಳು.

ಆದರೆ ಶಿಲಾಯುಗದ ಕಾಲದಿಂದಲೂ ಮಿಂಚು ನೆಲಕ್ಕೆ ಬಡಿದಾಗಲೆಲ್ಲಾ ಆದ ಅನಾಹುತಗಳನ್ನೆಲ್ಲಾ ನೋಡಿದ ಮನುಷ್ಯನಿಗೆ ಅಲ್ಲಿ ನಡೆದ ಆ ಹಠಾತ್ ವಿದ್ಯಮಾನಕ್ಕೆ ಒಂದು ಕಾರಣ ಬೇಕಲ್ಲ. ಆಗ ಹುಟ್ಟಿದ್ದೇ ಆ ವಜ್ರಾಯುಧ. ಮಿಂಚೇ ವಜ್ರಾಯುಧ. ಅದನ್ನು ಮುಟ್ಟಿದಾಗಲೆಲ್ಲಾ (ಅಂದರೆ ಸಿಡಿಲು ಮನುಷ್ಯನೊಬ್ಬನಿಗೆ ಬಡಿದಾಗಲೆಲ್ಲಾ) ಜನ ಸತ್ತದ್ದು ನೋಡಿ, ಅದರ ಶಕ್ತಿಯ ಅಗಾಧತೆಯೆಡೆಗೆ ಭಯವೂ, ಗೌರವವೂ ಮೂಡಿತು. ಹೀಗಿದ್ದ ವಜ್ರಾಯುಧವನ್ನು ಬಳಸಲು ಸಾಮಾನ್ಯರಿಗೆ ಸಾಧ್ಯವೇ? ಇದು ದೇವರೇ ಬಳಸುತ್ತಿರುವ ಆಯುಧ. ಅದೂ ಎಂತಾ ದೇವರು!? ಮಿಂಚಿನಿಂದ ಬೆಂಕಿ ಹುಟ್ಟಿದೆ. ಮಿಂಚಿನಿಂದ ಬೆಳಕು ಹುಟ್ಟಿದೆ. ಮಿಂಚಿನಿಂದ ನೀರು ಅಲ್ಲೋಲಕಲ್ಲೋಲವಾಗಿದೆ. ಹಾಗಿದ್ದಮೇಲೆ ಇದನ್ನು ಬಳಸುವವ ಈ ಎಲ್ಲದಕ್ಕೂ ಒಡೆಯ, ಅಂದರೆ ನಮ್ಮ ಬುಡಕಟ್ಟಿನ ನಾಯಕನಿದ್ದಂತೆ ಅವ ದೇವರುಗಳ ನಾಯಕ. ಆ ಒಡೆಯನೇ ಇಂದ್ರನಾದ. (ಇದು ಹಿಂದೂ ಪುರಾಣದಲ್ಲಿ ಮಾತ್ರವಲ್ಲ, ಗ್ರೀಕರ ಝಿಯಸ್’ನ ಆಯುಧವೂ ಈ ಮಿಂಚೇ.) Anyway, ವಿಷಯಾಂತರವಾಯ್ತು. ಏನು ಮಾತಾಡ್ತಿದ್ವಿ!?

ಹಾ! ನಮಗೆ ಎಲ್ಲದರಲ್ಲೂ ದೇವರುಗಳು ಕಂಡರು. ಕಂಡರು ಅನ್ನುವುದಕ್ಕಿಂತಾ, ನಮಗೆ ಎಲ್ಲವೂ ದೇವರೇ ಆಯ್ತು. ಊಟವಿಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ. ಊಟ ದೇವರು (ಅನ್ನಪೂರ್ಣೆ). ನೀರಿಲ್ಲದೇ ಬರಗಾಲ ಬಂದಾಗ ಜನ ಸತ್ತರು, ಅಂದ ಮೇಲೆ ನೀರು ದೇವರು (ವರುಣ). ಬೆಂಕಿಯಿದ್ದರೂ ಕಷ್ಟ, ಇಲ್ಲದಿದ್ದರೇ ಕಷ್ಟ. ಅಂದಮೇಲೆ ಅದೂ ನಮ್ಮ ಅಸ್ತಿತ್ವಕ್ಕೆ ಮುಖ್ಯ. ಅಲ್ಲಿಗೆ ಅದೂ ದೇವರು (ಅಗ್ನಿ). ನೀರಿನಡಿಯಿದ್ದಾಗ ಉಸಿರುಗಟ್ಟಿ ಸತ್ತರು ಅಂದಮೇಲೆ ಗಾಳಿಯಂತೂ ಮಹಾನ್ ಮುಖ್ಯ ದೇವರು (ವಾಯು). ದನವಿಲ್ಲದಿದ್ದರೆ ಸಗಣಿಯಿಲ್ಲ, ಹಾಲಿಲ್ಲ, ಇನ್ನೊಂದಿಲ್ಲ, ಅಂದಮೇಲೆ ದನ ಗೋಮಾತೆಯಾದ್ಲು. ಹೀಗೆ ಬೆಳೆದದ್ದು ನಮ್ಮ ಸಾಮಾನ್ಯ ಜನರ ದೇವರ ಕಲ್ಪನೆ. ಈ ರೀತಿ ನಾವು ಒಂದಕ್ಕಿಂತಾ ಹೆಚ್ಚಿನದರಲ್ಲಿ ದೇವರನ್ನು ಕಂಡೆವು. ಹಾಗೂ ಎಲ್ಲರೂ ನಮಗೆ ಪೂಜ್ಯರಾದರು. ಈ ರೀತಿ ನಾವು ಒಂದಕ್ಕಿಂತಾ ಹೆಚ್ಚು ದೇವರುಗಳನ್ನ ಕಂಡುಕೊಂಡೆವು.

ಈ ಪ್ರಕ್ರಿಯೆಯ ಬೈ-ಪ್ರಾಡಕ್ಟೇ ತಾಳ್ಮೆ, ಸಹನೆ, ಸಹಿಷ್ಣುತೆ ಹಾಗೂ ಸಹಬಾಳ್ವೆ. ಹೇಗೆ ಅಂತೀರಾ? ಅಗ್ನಿಯನ್ನೇ ದೇವರು ಅಂತಾ ಭಾವಿಸಿದ್ದ ಬುಡಕಟ್ಟೊಂದು, ನೀರನ್ನೇ ದೇವರೆಂದು ಭಾವಿಸಿದ್ದ ಬುಡಕಟ್ಟನ್ನು ಸಂಧಿಸಿದ ದಿನವನ್ನು ಊಹಿಸಿಕೊಳ್ಳಿ. ಅವತ್ತು ಖಂಡಿತಾ ಹೊಡೆಬಡಿದಾಟಗಳಾಗಿರಬಹುದು. ಗೆದ್ದವನ ದೇವರೇ ಅಂತಿಮ ಅಂತ ನಿಯಮವೂ ಆಗಿದ್ದರಬಹುದು. (ಹಾಗೆಯೇ ಹೊಡೆದಾಟ ಆಗದೆಯೂ ಇದ್ದಿರಬಹುದು). ಹಾಗೂ ಪರಸ್ಪರ ತಮ್ಮ ತಮ್ಮ ದೇವರ ಬಗ್ಗೆ ಮಾತನಾಡುವಾಗ ನೀರಿನ ಬುಡಕಟ್ಟಿನವರು, ಅಗ್ನಿಯ ಬುಡಕಟ್ಟಿನವರ ದೇವರ ಮೇಲೆ ತಮ್ಮ ದೇವರನ್ನು ಚೆಲ್ಲಿ “ನೋಡಿ ನಿಮ್ಮ ದೇವರನ್ನು ಕೊಂದೆವು” ಎಂದಿದ್ದರಬಹುದು. ಮರುದಿನ ಅಗ್ನಿಯ ಪಾರ್ಟಿಗಳು, ನೀರಿನ ದೇವರನ್ನು ಒಂದು ಪಾತ್ರೆಯಲ್ಲಿಟ್ಟು ಕುದಿಸಿ ಆವಿಯಾಗಿಸಿ “ನೋಡಿ ನಿಮ್ಮ ದೇವರನ್ನು ನಾಪತ್ತೆ ಮಾಡಿದೆವು” ಎಂದಿದ್ದರಬಹುದು. ಇಬ್ಬರಿಗೂ ಆಶ್ಚರ್ಯ!!! ಇಬ್ಬರಿಗೂ “ಓಹೋ ಈ ಎರಡು ದೇವರೂ ಸಮಬಲರು. ಹಾಗೂ ನಮಗೆ ಇಬ್ಬರದ್ದೂ ಅಗತ್ಯವಿದೆ” ಎಂದು ನಂಬಿ ಬುಡಕಟ್ಟುಗಳು ಎರಡೂ ದೇವರನ್ನು ಜೊತೆಜೊತೆಗೆ ಆರಾಧಿಸಿ ಮುಂದುವರಿವೆ. ಈ ಪ್ರಕ್ರಿಯೆ ಒಂದು ದಿನದಲ್ಲೂ ನಡೆದಿರಬಹುದು, ಅಥವಾ ಸಾವಿರ ವರ್ಷಗಳೂ ತೆಗೆದುಕೊಂಡಿರಬಹುದು. ಆದರೆ ಕೊನೆಯಲ್ಲಿ “ಒಂದಕ್ಕಿಂತಾ ಹೆಚ್ಚು ದೇವರನ್ನು ನಂಬುವುದರಿಂದ ತೊಂದರೆಯಂತೂ ಇಲ್ಲ. ಇದ್ದರೆ ಉಪಯೋಗ ಮಾತ್ರವಷ್ಟೇ” ಎಂಬುದೇ ಎಲ್ಲರ ಕೊನೆಯ ಅಭಿಪ್ರಾಯ.

ಹೀಗೆ ಹಿಂದೂ ಧರ್ಮದ ಒಂದು ಮುಖ್ಯ ಗುಣವಾದ ಬಹುಸಂಸ್ಕೃತಿತ್ವ (ನಾನದನ್ನ ಪ್ರಕೃತಿಯ ಆರಾಧನೆ ಅಂತಾ ಕರೆಯಲಿಚ್ಚಿಸುತ್ತೇನೆ) ಚಾಲ್ತಿಗೆ ಬಂತು. ಇಲ್ಲೂ ಕೂಡಾ ಕೆಲ ರಿಲೀಜಿಯನ್ ಮನಸ್ಥಿತಿಗಳು ಇದನ್ನು polytheism, ಅಂದರೆ ಬಹುದೇವೋಪಾಸನೆ, ಅಂತಾ ಬರೆಯುತ್ತಾರೆ. ಅದು ತಪ್ಪು. ನಾವು ಬಹುದೇವರನ್ನು ಉಪಾಸಿಸುತ್ತಿಲ್ಲ. ನಮ್ಮದು pluralistic, ಅಂದರೆ ಬಹುಸಂಸ್ಕೃತಿತ್ವದ ನಾಗರೀಕತೆ. ಅಂದರೆ ಅಂತಿಮ ಸತ್ಯವನ್ನು ಬೇರೆ ಬೇರೆ ರೀತಿಗಳಿಂದಾ ಕಂಡುಕೊಳ್ಳಬಹುದು ಎಂಬುದನ್ನು ಪ್ರತಿಪಾದಿಸಿ, ನಿರೂಪಿಸಿಕೊಂಡ ಬಹುಸಂಸ್ಕೃತಿಗಳ ಆಗರ ಭಾರತ.

ಜನಪದರು, ಅಂದರೆ ಸಾಮಾನ್ಯಜನರು, ಈ ರೀತಿಕಂಡುಕೊಂಡಿದ್ದನ್ನ, ಆಧ್ಯಾತ್ಮಿಕ ಶೋಧಕರು ಒಂದು ಚೌಕಟ್ಟಿನಲ್ಲಿ ಬರೆದರು. ಅದನ್ನು ಚರ್ಚಿಸಿ, ಹಲವಾರು ತಲೆಮಾರುಗಳ ಕಾಲ ಮಂಥಿಸಿ ‘ಏಕಂ ಸತ್ ವಿಪ್ರಾ ಬಹುಧಾ ವದಂತಿ’ ಎಂದರು.

ಅಲ್ಲಿಗೆ,
(೧) ನಾವು ಬಹುದೇವೋಪಾಸಕರಲ್ಲ. ಬಹುಸಂಸ್ಕೃತಿತ್ವರು. We are not polytheists. We are pluralists.
(೨) ಈ ಬಹುಸಂಸ್ಕೃತಿತ್ವ ನಮಗೆ ಸಹಸ್ರ ವರ್ಷಗಳ ಹಿಂದೆ ನಮ್ಮತರದಲ್ಲದ ನಂಬಿಕೆಗಳೆಡೆಗೆ ಸಹಿಷ್ಣುತೆಯನ್ನ ಕಲಿಸಿಯಾಗಿದೆ. ಹಾಗೂ ಆ ಬೇರೆ ಬೇರೆ ನಂಬಿಕೆಗಳನ್ನು ಚರ್ಚೆ ಹಾಗೂ ಮಂಥನಗಳ ಮೂಲಕ ಪರಿಹರಿಸಿಕೊಳ್ಳಬಹುದೆಂಬ ಸತ್ಯವನ್ನೂ ಪ್ರತಿಪಾದಿಸಿ, ನಿರೂಪಿಸಿ ತೋರಿಸಿಯಾಗಿದೆ.