ದಿನಕ್ಕೊಂದು ವಿಷಯ – ೧೬

ದಿನಕ್ಕೊಂದು ವಿಷಯ – ೧೬

ಭಾರತ ಬಾಂಗ್ಲಾದೊಳಗೋ…ಬಾಂಗ್ಲಾ ಭಾರತದೊಳಗೋ…ಬಾಂಗ್ಲಾ ಭಾರತವೆರಡೂ #51ರೊಳಗೋ!!?
ಕನಕದಾಸರ ಕೀರ್ತನೆಯಾದ ‘ನೀ ಮಾಯೆಯೊಳಗೋ, ಮಾಯೆ ನಿನ್ನೊಳಗೋ’ ಎಂಬುದು ಎಲ್ಲರಿಗೂ ಗೊತ್ತಿರುವಂತದ್ದೇ. ಈ ಕೀರ್ತನೆಯನ್ನು ಸರಿಯಾಗಿ ಕೇಳಿಸಿಕೊಂಡವರು ಖಂಡಿತಾ ಅದರಲ್ಲಿನ ತತ್ವಕ್ಕೆ ಮಾರುಹೋಗಿರುತ್ತಾರೆ. ಹಾಗೆಯೇ ‘ಚಂದ್ರಮುಖಿ-ಪ್ರಾಣಸಖಿ’ ಚಿತ್ರದ ‘ಮನಸೇ ಓ ಮನಸೇ…’ ಹಾಡು ಕೇಳಿದವರು ಖಂಡಿತಾ ಅದರಲ್ಲಿನ ದ್ವಂದ್ವ ಹಾಗೂ ಗೊಂದಲಕ್ಕೆ ಈಡಾಗಿರುತ್ತಾರೆ. ಈ ಒಂದರೊಳಗೊಂದಿರುವುದರ ಗೊಂದಲ ಎಲ್ಲಾಕಡೆಯೂ ಇರುತ್ತದೆ. ಬಹುಷಃ ಮನುಷ್ಯ ಇದ್ದಲ್ಲಿ ಗೊಂದಲಗಳು ಸಹಜ. ಬುದ್ಧಿ ಇದ್ದಲ್ಲಿ ಕೂಡಾ ಗೊಂದಲ ಸಹಜ. ಗೊಂದಲವೆನ್ನುವುದು ನಮ್ಮ ಬೆಳವಣಿಗೆಯ ಸಂಕೇತ. ಅದಿರಬೇಕು. ಆದರೆ ಅದನ್ನು ಪರಿಹರಿಸಿಕೊಳ್ಳುವ ಪ್ರಯತ್ನವೂ ಇರಬೇಕು. ಪರಿಹಾರವಿಲ್ಲದ ಗೊಂದಲವೆಂಬುದು, ಮನೆಯ ಮುಂದೆ ಬೆಳೆದ ಹಾಸುಂಬೆಯಂತೆ. ಅದರಿಂದಾಗಿ ಜಾರಿಬೀಳುವ ಅವಕಾಶಗಳೇ ಹೆಚ್ಚು.

ಈ ಗೊಂದಲಗಳಲ್ಲಿ ಹೆಚ್ಚಿನವು ಮನುಷ್ಯ ನಿರ್ಮಿತ. ದಿನನಿತ್ಯದ ಜೀವನದಲ್ಲಿ ನಾವು ನಮ್ಮ ಆಸೆ, ದುರಾಸೆಗೆ ಸಂಬಂಧಿಸಿದಂತೆ ಬಹಳಷ್ಟು ಗೊಂದಲಗಳನ್ನು ನೋಡುತ್ತೇವೆ, ಕೇಳುತ್ತೇವೆ. ಭಾರತದೊಂದಿಗೆ ಪಾಕಿಸ್ಥಾನದ, ಚೀನಾದ ಸರಹದ್ದಿನ ಗೊಂದಲ, ನಮ್ಮ ಹಾಗೂ ಪಕ್ಕದ ರಾಜ್ಯಗಳ ನೀರಿನ ಹಂಚಿಕೆ ಗೊಂದಲ, ಕೋಮು ಸೌಹಾರ್ದದವರಿಗೆ, ಮೋದಿ ಒಳ್ಳೆಯವನೋ? ಕೆಟ್ಟವನೋ? ಎಂಬ ಗೊಂದಲ ಇತ್ಯಾದಿ ಇತ್ಯಾದಿ. ಇವತ್ತಿನ ವಿಷಯ ಮನುಷ್ಯನ ದುರಾಸೆಗೆ ಸಂಬಂದಪಟ್ಟ ಇಂತಹುದೇ ಒಂದು ಗೊಂದಲದ ಸಣ್ಣ ಎಳೆ.

ತುಂಡು ಭೂಮಿಗಾಗಿ ಜಗಳಕಾಯುವವರನ್ನು ನಮ್ಮಲ್ಲಿ ಎಷ್ಟು ಜನ ನೋಡಿಲ್ಲ ಹೇಳಿ. ಈ ಭೂಮಿಯ ಜಗಳಗಳು ತಾರಕಕ್ಕೇರಿ, ಅದಕ್ಕೆ ಉತ್ತರಗಳು ಸಿಗದೇ ‘ಹೇಗಿದೆಯೋ ಹಾಗೇ ಇರಲಿ’ ಎಂಬ ಸ್ಟೇ ಆರ್ಡರುಗಳು ಬಂದ ಕಥೆಗಳನ್ನು ನೀವು ಕೇಳಿಯೇ ಇರುತ್ತೀರಿ. ಎರಡು ದೇಶಗಳ ಮಧ್ಯೆ ಇಂತಾ ಜಗಳಗಳಾದಾಗ ಇವು ಬಗೆಹರಿಯುವುದೇ ಇಲ್ಲ. ‘ಇಷ್ಟು ನನ್ನದು, ಇದಿಷ್ಟು ನಿನ್ನದು’ ಎಂದು ಗೆರೆ ಎಳೆದುಕೊಂಡು ಜಗಳಕಾಯುತ್ತಾರೆ. ಆದರೆ, ಒಬ್ಬನ ಭೂಮಿಯೊಳಗೇ, ಇನ್ನೊಬ್ಬನಿಗೆ ಸೇರಿದ ಭೂಮಿಯಿದ್ದರೆ!? ಇನ್ನೊಮ್ಮೆ ಓದಿ, ನಾನು ಒಬ್ಬನ ಭೂಮಿಯ ಪಕ್ಕ ಇನ್ನೊಬ್ಬನ ಭೂಮಿಯಿರುವುದರ ಬಗ್ಗೆ ಹೇಳುತ್ತಿಲ್ಲ. ಒಬ್ಬನ ಭೂಮಿಯ ಒಳಗೆ ಇನ್ನೊಬ್ಬನ ಭೂಮಿ…….ಹೌದು ಈ ರೀತಿಯ ಬಹಳಷ್ಟು ಜಾಗಗಳು ನಾವು ವಾಸಿಸುತ್ತಿರುವ ಈ ಜಗತ್ತಿನಲ್ಲಿ ಇವೆ. ಕನ್ನಡದಲ್ಲಿ ಬಹುಷಃ ಇದನ್ನು ‘ಅಂತಕ್ಷೇತ್ರ’ ಎಂದು ಅನುವಾದಿಸಬಹುದೇನೋ (ಯಾರಿಗಾದರೂ ಸರಿಯಾದ ಕನ್ನಡ ಪದ ಗೊತ್ತಿದ್ದಲ್ಲಿ ತಿಳಿಸಿ ಪುಣ್ಯಕಟ್ಟಿಕೊಳ್ಳಿ). ಇಂಗ್ಳೀಷಿನಲ್ಲಿ ಇವನ್ನು ಎನ್ಕ್ಲೇವ್ (enclave) ಎಂದು ಕರೆಯುತ್ತಾರೆ.

‘ಎನ್ಕ್ಲೇವ್’ನ ಅರ್ಥ ಹೀಗಿದೆ ‘ಒಂದು ರಾಜ್ಯ/ರಾಷ್ಟ್ರದ ಯಾವುದೇ ಭಾಗವನ್ನು, ಇನ್ನೊಂದು ರಾಜ್ಯ/ರಾಷ್ಟ್ರ ಸಂಪೂರ್ಣವಾಗಿ ಆವರಿಸಿಕೊಂಡಿರುವ ಪ್ರದೇಶ’. ಸಂಪೂರ್ಣವಾಗಿ ಆವರಿಸಿಕೊಳ್ಳುವುದು ಎಂದರೆ, ಆ ‘ಎನ್ಕ್ಲೇವ್’ನ ಯಾವುದೇ ಭಾಗದಿಂದ ಹೊರಹೋಗುವಾಗ ನೀವು ಇನ್ನೊಂದು ರಾಜ್ಯ/ರಾಷ್ಟ್ರ ಮೂಲಕವೇ ಹೋಗಬೇಕು. ಈ ಅಂತಕ್ಷೇತ್ರಗಳ ಲೆಕ್ಕಾಚಾರದಲ್ಲಿ ‘ಪ್ರತಿಕೂಲ ಅಂತಕ್ಷೇತ್ರ’ ಎಂಬ ಲೆಕ್ಕಾಚಾರವೂ ಇದೆ. ಪ್ರತಿಕೂಲ ಅಂತಕ್ಷೇತ್ರಎಂದರೆ ‘A ಯ ಒಳಗಿರುವ, B ಎಂಬ ಎನ್ಕ್ಲೇವಿವ ಒಳಗಿರುವ C ಎಂಬ ಎನ್ಕ್ಲೇವ್, ಹಾಗೂ ಈ C ಎನ್ಕ್ಲೇವ್ Aಗೆ ಸೇರಿದ್ದು’. ಹಾಗೆಯೇ ‘ಬಾಹ್ಯಕ್ಷೇತ್ರ’ (exclave) ಎಂಬ ಪದಬಳಕೆಯೂ ಇದೆ. ಎಕ್ಸ್ಕ್ಲೇವ್ ಎಂದರೆ ‘A ಗೆ ಸೇರಿದ, ಆದರೆ A ಯೊಂದಿಗೆ ಯಾವ ಗಡಿಯೂ ಇಲ್ಲದ, B ಎಂಬ ಇನ್ನೊಂದು ಜಾಗದ ಒಳಗಿರುವ ಪ್ರದೇಶ’. ಎನ್ಕ್ಲೇವುಗಳು ಎ‍ಕ್ಲೇವುಗಳಾಗುವುದೂ ಸಾಧ್ಯವಿದೆ. ಪೂರಾ ತಲೆಕೆಡ್ತಾ ಇದೆ ಅನ್ಸುತ್ತಾ? ಕೆಳಗಿರುವ ಚಿತ್ರ 1 ನೋಡಿ, ಎಲ್ಲವೂ ಅರ್ಥವಾಗುತ್ತೆ.

ಈ ಚಿತ್ರದಲ್ಲಿ:
(1) Aಗೆ ಮೂರು excalveಗಳಿವೆ. A1, A2 ಹಾಗೂ A3. ಇವು A ಎಂಬ ತಾಯ್ನಾಡಿನಿಂದ ಬೇರ್ಪಟ್ಟು, ಬೇರೆ ಪ್ರಾಂತ್ಯದ ಒಳಗೆ ಸೇರಿಕೊಂಡಿವೆ. Aಯೊಂದಿಗೆ ಯಾವುದೇ ಗಡಿಬಾಗ ಹೊಂದಿಕೊಂಡಿಲ್ಲ.

(2) A1 ಮತ್ತು A2 ಸಂಪೂರ್ಣವಾಗಿ exclaveಗಳು. ಆದರೆ A3 ಪ್ರದೇಶ Bಯ enclave ಕೂಡಾ ಹೌದು, ಯಾಕೆಂದರೆ ಅದು Bಯಿಂದ ಸಂಪೂರ್ಣವಾಗಿ ಸುತ್ತುವರಿಯಲ್ಪಟ್ಟಿದೆ.

(3) A ಸ್ವತಃ E ಎಂಬ enclave ಅನ್ನೂ, A4 ಮತ್ತು A5 ಎಂಬ counter-enclave ಅನ್ನೂ ಹೊಂದಿದೆ. ಇವನ್ನು ಎರಡನೇ ಕ್ರಮದ ಅಂತಕ್ಷೇತ್ರ (Second order enclave) ಎಂದೂ ಕರೆಯುತ್ತಾರೆ. ಹಾಗೂ E1 ಎಂಬ counter-counter-enclave ಅನ್ನೂ ಹೊಂದಿದೆ. E1 ಅನ್ನು ಮೂರನೇ ಕ್ರಮದ ಅಂತಕ್ಷೇತ್ರ (Third order enclave) ಎಂದು ಕರೆಯುತ್ತಾರೆ.

(4) D ಕೂಡಾ ಎಂದು enclave. D ಪ್ರಾಂತೀಯವಾಗಿ ಯಾವುದೇ ರೀತಿಯಲ್ಲಿ ವಿಭಾಗಿಸಲ್ಪಟ್ಟಿಲ್ಲವಾದ್ದರಿಂದ ಅದನ್ನು enclaved territory ಎಂದು ಕರೆಯುತ್ತಾರೆ.

ಎನ್ಕ್ಲೇವುಗಳು ಸೃಷ್ಟಿಯಾಗಲು ಜಗತ್ತಿನಾದ್ಯಂತ ಹಲವಾರು ಕಾರಣಗಳು ಇವೆ. ಸಾಂಸ್ಕೃತಿಕ, ಜನಾಂಗೀಯ, ತಾತ್ಕಾಲಿಕ ಕಾರಣಗಳಿಗಾಗಿ ಇವು ಸೃಷ್ಟಿಯಾಗಿವೆ. ಕ್ಯಾಥೋಲಿಕರ ಪುಣ್ಯಭೂಮಿ ವ್ಯಾಟಿಕನ್ ಸಹ ಒಂದು ಎನ್ಕ್ಲೇವ್. ಇಟಲಿಯ ರೋಮ್ ಪಟ್ಟಣದೊಳಗಡೆ ಇರುವ ವ್ಯಾಟಿಕನ್, ಒಂದು ಪುಟ್ಟ ದೇಶ ಕೂಡಾ ಹೌದು (ಜಗತ್ತಿನ ಅತೀ ಚಿಕ್ಕದೇಶ). ಇದೊಂದೇ ಅಲ್ಲದೆ, ಇಟಲಿ ದೇಶದ ಒಳಗೇ ಇರುವ ‘ಸ್ಯಾನ್ ಮರೀನೋ’, ಹಾಗೂ ದಕ್ಷಿಣ ಆಪ್ರಿಕಾದ ಒಳಗಿರುವ ‘ಲೆಸೋತೋ’ ಕೂಡಾ ಪ್ರಸಿದ್ಧ ‘ಎನ್ಕ್ಲೇವ್’ಗಳು. ಹಾಗೆಯೇ ಎರಡನೇ ಕ್ರಮದ ಎನ್ಕ್ಲೇವುಗಳಿಗೆ ಪ್ರಸಿದ್ಧ ಉದಾಹರಣೆಗಳು ಡಚ್ ಮುನಿಸಿಪಾಲಿಟಿಯ ಬಾರ್ಲೆ-ನಸ್ಸಾಉ ಪ್ರಾಂತ್ಯದಲ್ಲಿ ಬೆಲ್ಜಿಯಂ ಮುನಿಸಿಪಾಲಿಟಿಗೆ ಸೇರಿದ ಏಳು ಪ್ರಾಂತ್ಯಗಳು. ಎರಡನೇ ಮಹಾಯುದ್ಧದ ನಂತರ ಯೂರೋಪಿನಲ್ಲಿ ಅಸಂಖ್ಯಾತ ಅಂತಕ್ಷೇತ್ರಗಳು ಸೃಷ್ಟಿಯಾಗಿವೆ. ಇಲ್ಲೇ ನಾನಿರುವ ‘ಸಂಯುಕ್ತ ಅರಬ್ ಎಮಿರೇಟ್ಸ್’ನಲ್ಲಿರುವ ಒಮಾನಿಗೆ ಸೇರಿದ ‘ಮಧಾ’ ಪ್ರಾಂತ್ಯದೊಳಗಿರುವ ಸಂ.ಅ.ಎ.ಗೆ ಸೇರಿದ ‘ನಹ್ವಾ’ ಪ್ರಾಂತ್ಯ ಕೂಡಾ ಒಂದು ಎರಡನೇ ದರ್ಜೆಯ ಎನ್ಕ್ಲೇವ್.

ಜಗತ್ತಿನಲ್ಲಿ ಬೇಕಾದಷ್ಟು ಮೊದಲ ಕ್ರಮದ ಹಾಗೂ ಎರಡನೇ ಕ್ರಮದ ‘ಎನ್ಕ್ಲೇವ್’ಗಳಿವೆ. ಆದರೆ ಮೂರನೆ ಕ್ರಮದ ಎನ್ಕ್ಲೇವ್ ಇರುವುದು ಒಂದೇ ಒಂದು. ಅದೂ ಕೂಡಾ ನಮ್ಮ ಭಾರತದಲ್ಲೇ ಇದೆ. ಗೊತ್ತಿದೆಯಾ!!!!

ಜಮೀನ್ದಾರಿ ಪದ್ದತಿಯ ಅಡಿಯಲ್ಲಿದ್ದ ಭೂಮಿ ಹರಿದು ಹಂಚಿ ಹೋಗಿ, ಅದೇ ಸಮಯದಲ್ಲಿ ದೇಶಗಳು ಬೇರೆ ಬೇರೆಯಾದಾಗ ಸೃಷ್ಟಿಯಾಗಿರುವ ಎನ್ಕ್ಲೇವುಗಳ ಸರಮಾಲೆಯೇ ಭಾರತ ಹಾಗು ಬಾಂಗ್ಲಾದೇಶದಲ್ಲಿ ಇವೆ. ಅದರಲ್ಲೂ ಹೆಚ್ಚಿನವುಗಳು ತುಂಬಿರುವುದು ಬಂಗಾಳದ ‘ಕೂಚ್ ಬೆಹಾರ್’ ಜಿಲ್ಲೆಯಲ್ಲಿ. ನೆರೆಯ ಬಾಂಗ್ಲಾದೇಶಕ್ಕೆ ಅಂಟಿಕೊಂಡೇ ಇರುವ ಕೂಚ್ ಬೆಹಾರ್ ತನ್ನ ಪುರಾತನ ಅರಮನೆಗೆ ಹಾಗೂ ಮದನ್ ಮೋಹನ್ ದೇವಾಲಯಕ್ಕೆ ಪ್ರಸಿದ್ಧ. 1947ರಲ್ಲಿ ಬ್ರಿಟೀಷ್ ಭಾರತ ಹಾಗೂ ಬಂಗಾಳದ ವಿಭಜನೆ ನಡೆದಾಗ ಸೃಷ್ಟಿಯಾದ ಎರಡನೇ ಕ್ರಮದ ಎನ್ಕ್ಲೇವುಗಳಿಗೆ ಲೆಕ್ಕವೇ ಇಲ್ಲ. ಅದರೊಟ್ಟಿಗೇ ಇಲ್ಲೊಂದು, ಜಗತ್ತಿನಲ್ಲೇ ಏಕೈಕ ಮೂರನೇ ಕ್ರಮದ ಅಂತಕ್ಷೇತ್ರ ಕೂಡಾ ಸೃಷ್ಟಿಯಾಯಿತು. ಇದೇನೂ ಸಾವಿರಾರು ಎಕರೆಯಷ್ಟು ವಿಸ್ತಾರದ ಭೂಮಿಯಲ್ಲ. ಬರೇ 7000ಚದರ ಮೀಟರ್ನಷ್ಟು ವಿಸ್ತಾರದ ಭೂಮಿಯಷ್ಟೇ. ‘ದಹಾಲ ಖಗ್ರಾಬಾರಿ (ಸಂಖ್ಯೆ 51)’ ಎಂಬ ಭೂಮಿಯ ತುಂಡೇ ಈ ಅಪರೂಪದ third order enclave (ಚಿತ್ರ 2 ಮತ್ತು 3). ಈ ಭೂಮಿಯ ಒಡೆಯ ಒಬ್ಬ ಬಾಂಗ್ಲಾದೇಶೀ ರೈತ. ಆತ ವಾಸವಾಗಿರುವುದು ಇಲ್ಲೇ ಈ ಜಾಗಕ್ಕೇ ಹತ್ತಿರವಿರುವ ಬಾಂಗ್ಲಾದೇಶಕ್ಕೆ ಸೇರಿದ ಎರಡನೇ ಕ್ರಮದ ಎನ್ಕ್ಲೇವಿನ ಒಂದು ಹಳ್ಳಿಯಲ್ಲಿ (ಸ್ವತಃ ಈ ಹಳ್ಳಿ ಕೂಡಾ ಭಾರತದ ಪ್ರದೇಶದೊಳಗಿದೆ 🙂 ) ಅಂದರೆ ಈ ದಹಾಲ ಖಗ್ರಬಾರಿ ಎನ್ನುವ ಜಾಗದಲ್ಲಿ ನೀವು ನಿಂತರೆ, ನೀವು ‘ಭಾರತದೊಳಗಿರುವ ಬಾಂಗ್ಲಾದೇಶದ ಒಳಗಿರುವ ಭಾರತದ ಭೂಮಿಯಲ್ಲಿರುವ ಭಾಗ್ಲಾದೇಶದ ಒಳಗಿರುವ ಭಾರತ’ದಲ್ಲಿ ನಿಂತಂತಾಗುತ್ತದೆ (ಚಿತ್ರ 4).

ಇಲ್ಲಿನ ಜನರಿಗೆ ಆ ಸಂಕೀರ್ಣ ಪರಿಸ್ಥಿತಿಯಿಂದಾಗಿ ಇಲ್ಲದ ತಲೇನೋವು. ವೀಸಾ ನಿಯಮಗಳ ಕ್ಲಿಷ್ಟತೆ ಹಾಗು ಅರ್ಥವಾಗದ ರೂಲ್ಸುಗಳ ಮಧ್ಯೆ ಇಲ್ಲಿರುವ ಜನ ದಿನಾ ಬವಣೆ ಪಡುತ್ತಾರೆ. ಈ ಎನ್ಕ್ಲೇವುಗಳ ಕೀಟಲೆಯಿಂದಾಗಿ ಇವರಿಗೆ ಪಾಸ್ಪೋರ್ಟುಗಳೂ ಲಭ್ಯವಿಲ್ಲ. ಪಾಸ್ಪೋರ್ಟು ಇಲ್ಲದೆ ಮೇಲೆ ವೀಸಾ ಕೂಡ ಇಲ್ಲ. ಆದರೆ ಇಲ್ಲಿರುವ ಜನರಲ್ಲಿ ಹೆಚ್ಚಿನರೆಲ್ಲಾ ರೈತರು ಹಾಗೂ ಬಡತನ ರೇಖೆಗಿಂತಾ ಕೆಳಗಿರುವರು. ಅವರಿಗೆ ವೀಸಾ, ಪಾಸ್ಪೋರ್ಟುಗಳ ಅವಶ್ಯಕತೆಯಾಗಲೀ ಅದರ ಹೆಸರಿನ ಅರ್ಥವಾಗಲೀ ಅರಿಯದೆ ಸಧ್ಯಕ್ಕೆ ಅದ್ಯಾವುದೂ ನಮಗೆ ಬೇಡ ಎಂದು ಆರಾಮಾಗಿದ್ದಾರೆ. ಆದರೆ ಪಾಪ, ಆಗೀಗ ಇಲ್ಲಿ ಗಡಿ ಅತಿಕ್ರಮಣದ ಬಗ್ಗೆ ಕಿರಿಕ್ಕುಗಳು ನಡೆದು, ಪೋಲೀಸು, ಸೈನ್ಯ ಹಾಗೂ ನಾಗರೀಕರ ನಡುವ ಜಟಾಪಟಿಗಳು, ಗಾಳಿಯಲ್ಲಿ ಗುಂಡುಹಾರಿಸುವಿಕೆ ನಡೆಯುತ್ತಲೇ ಇರುತ್ತವೆ.

ಕೊಸರು:

‘ಸರ್ವೇ ಜನಾ ಸುಖಿನೋ ಭವಂತು’ ಅನ್ನೋ ಸಂಸ್ಕೃತ ಶ್ಲೋಕ ಇಲ್ಲೇಕೋ ಅರ್ಥ ತಪ್ಪುತ್ತಾ ಇದೆ. ಈ ಸರ್ವೇ ಡಿಪಾರ್ಟ್ಮೇಂನವರು ಮಾಡಿದ ತರಲೆ ಕೆಲ್ಸಕ್ಕೆ, ಎರಡೂ ಸರ್ಕಾರಗಳು (ಹಾಗೂ ಅಸಂಖ್ಯಾತ ರಾಜ್ಯಸರ್ಕಾರ ಅಧಿಕಾರಿಗಳು, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು) ಈಗಲೂ ಕಾಲು ಕೆರೆದುಕೊಂಡು ಕಾದಾಡ್ತಾ ಇವೆ 🙂 ಹಾಗಾಗಿ ಇಲ್ಲಿ ‘Survey ಜನರಿಂದಾಗಿ ಸುಖೀ No ಭವಂತು’ ಅಂತಾ ಆಗಿದೆ.

#ದಿನಕ್ಕೊಂದು_ವಿಷಯ, #Enclave, #Dahala_Khagrabari_#_51

Pic 1 Pic 2 Pic 3 Pic 4

ದಿನಕ್ಕೊಂದು ವಿಷಯ – ೧೫

ದಿನಕ್ಕೊಂದು ವಿಷಯ – ೧೫

ನಾನೊಂದು ತೀರ, ನೀನೊಂದು ತೀರ…….ನಡುವೆ ಒಂದು ದಿನದ ಅಂತರ 😦 !!

ನಮ್ಮಪ್ಪನಿಗೆ ನಾನು ಫೋನು ಮಾಡಿದಾಗಲೆಲ್ಲಾ ಅವರು ಕೇಳುವುದು ‘ಈಗ ಟೈಮೆಷ್ಟು ಅಲ್ಲಿ?’. ದುಬೈಗೂ ಭಾರತಕ್ಕೂ ಒಂದೂವರೆ ಘಂಟೆ ವ್ಯತ್ಯಾಸವಿರುವುದರಿಂದ, ನಾನು ಸಮಯ ಹೇಳಿದಾಗಲೆಲ್ಲಾ, ಅವರು ‘ಹೌದಾ!? ಇನ್ನೂ ಅಷ್ಟೇನಾ!? ನಮ್ದಿಲ್ಲಿ ಊಟ ಆಯ್ತು’ ಅಂತಾ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಮೂರುವರ್ಷವಾದರೂ ಇದು ಬದಲಾಗಿಲ್ಲ. ಅವರು ಈ ಸಮಯದ ವ್ಯತ್ಯಾಸದ ಹಿಂದಿರುವ ಲಾಜಿಕ್ಕೇ ಅರ್ಥಮಾಡಿಕೊಂಡಿಲ್ಲವಾದ್ದರಿಂದ ಅದು ಅವರಿಗೆ ಸೋಜಿಗವಾಗಿಯೇ ಉಳಿದಿದೆ. ದುಬೈಗೂ ಭಾರತಕ್ಕೂ ಸುಮಾರು ಮೂರುಸಾವಿರ ಕಿಲೋಮೀಟರ್ ದೂರ. ಆದ್ದರಿಂದ ಈ ಒಂದೂವರೆ ಘಂಟೆಯ ವ್ಯತ್ಯಾಸ ಅರ್ಥಮಾಡಿಕೊಳ್ಳಬಹುದೇನೋ. ಆದರೆ ಬರೇ ಎರಡುಮೈಲಿ ಅಂತರದಲ್ಲಿರುವ ಎರಡು ದ್ವೀಪಗಳ ಮಧ್ಯೆ 23 ಘಂಟೆಗಳ ಅಂತರವಿದೆಯೆಂದರೆ ನಂಬುತ್ತಿರಾ!? ನೀವು ಅತೀ ಬುದ್ಧಿವಂತರಾಗಿದ್ದರೆ, ಇಷ್ಟೊತ್ತಿಗೆ ನಿಮಗೆ ವಿಷಯ ಅರ್ಥವಾಗಿರುತ್ತದೆ. ಆದರೆ, ನೀವು ತೀರಾ ಬುದ್ಧಿವಂತರಲ್ಲವೆಂದಾದಲ್ಲಿ ಮುಂದೆ ಓದಿ.

ನಾವು ದಿನನಿತ್ಯ, ಜಗತ್ತಿನ ಭೂಪಟವನ್ನು ಗುಂಡಗಿನ ಗ್ಲೋಬ್(Globe)ಗಿಂತಾ ಹೆಚ್ಚಾಗಿ, ಗೋಡೆಯಲ್ಲಿ ನೇತುಹಾಕಿರುವ ಅಥವಾ ಅಂತರ್ಜಾಲದಲ್ಲಿ ಲಭ್ಯವಿರುವ 2-D ನಕ್ಷೆಗಳಲ್ಲಿ ನೋಡುವುದರಿಂದ, ನಮಗೆ ಆಸ್ಟ್ರೇಲಿಯಾ ಹಾಗೂ ನ್ಯೂಝೀಲ್ಯಾಂಡ್ ಜಗತ್ತಿನ ಪೂರ್ವಭಾಗದಲ್ಲಿಯೂ, ರಷ್ಯಾ ಹಾಗೂ ಜಗತ್ತಿನ ಮಧ್ಯಭಾಗದಲ್ಲಿಯೂ, ಅಮೇರಿಕಾ ಜಗತ್ತಿನ ಪಶ್ಚಿಮಭಾಗದಲ್ಲಿಯೂ ಕಂಡುಬರುತ್ತದೆ. ಆದರೆ, ನಿಜವಾಗಿಯೂ ಜಗತ್ತು ಇರುವುದು ಗುಂಡಗೆ. ಹೀಗಿದ್ದಾಗ ಜಗತ್ತು ಆರಂಭವಾದಲ್ಲೇ ಕೊನೆಯೂ ಆಗುವುದು.

ಈ ನಕ್ಷೆಗಳು ಅಕ್ಷಾಂಶ ಹಾಗೂ ರೇಖಾಂಶದ ಮೇಲೆ ಆಧಾರಿತವಾದವುಗಳು. ಇದರ ಪ್ರಕಾರ, ಗ್ರೀನ್ವಿಚ್ ಮೂಲಕ ಹಾದುಹೋಗುವ ೦ ಡಿಗ್ರೀ ರೇಖಾಂಶವನ್ನು ಭೂಪಟದ ಮಧ್ಯದಲ್ಲಿಟ್ಟು, ಉಳಿದ ದೇಶಗಳನ್ನು ಅದರ ಸುತ್ತಮುತ್ತ ಹರಡಲಾಗಿದೆ. ಈ ನಕ್ಷೆಗಳ ಪ್ರಕಾರ ಗ್ರೀನ್ವಿಚ್ ರೇಖಾಂಶದಿಂದ ಪಶ್ಚಿಮಕ್ಕೆ ಪ್ರತೀ 15ಡಿಗ್ರಿಗಳಿಗೆ, ಸಮಯ ಒಂದು ಘಂಟೆ ಹಿಂದೆಬೀಳುತ್ತದೆ, ಹಾಗೂ ಪೂರ್ವಕ್ಕೆ ಹೋದಂತೆ ಪ್ರತೀ 15ಡಿಗ್ರಿಗಳಿಗೆ ಸಮಯ ಮುಂದೆ ಓಡುತ್ತದೆ. ಈ ಲೆಕ್ಕಾಚಾರವನ್ನು ಸರಿಮಾಡಲು ಹಾಗೂ ಅದಕ್ಕೊಂದು ಪೂರ್ಣ ಅರ್ಥ ನೀಡಲು, ಗ್ರೀನ್ವಿಚ್ ರೇಖಾಂಶದಿಂದ ಸರಿಯಾಗಿ 180ಡಿಗ್ರಿಗಳ ನಂತರ ಬರುವ ರೇಖಾಂಶವನ್ನು ‘ಅಂತರರಾಷ್ಟ್ರೀಯ ದಿನಾಂಕ ರೇಖೆ (International Date Line)’ ಎಂದು ಗುರುತಿಸಲಾಗಿದೆ. ಅಲ್ಲಿಂದ ದಿನದ ಲೆಕ್ಕಾಚಾರ ಆರಂಭ. ಹಾಗಾಗಿ ಟೋಕಿಯೋದಿಂದ ಸ್ಯಾನ್-ಫ್ರಾನ್ಸಿಸ್ಕೋಗೆ ಹೋಗುವ ಪ್ರಯಾಣಿಕರು ಈ ‘ಅಂ.ದಿ.ರೇ’ಯನ್ನು ದಾಟುವಾಗ, ಒಂದುದಿನವನ್ನು ಕಳೆದು ಗಡಿಯಾರವನ್ನು ಹಿಂದಿಡುತ್ತಾರೆ. ಟೋಕಿಯೋದಿಂದ ಇವತ್ತು ಮಧ್ಯರಾತ್ರಿ 1ಘಂಟೆಗೆ ವಿಮಾನ ಹತ್ತಿದರೆ, ಒಂಬತ್ತು ಘಂಟೆಯ ಪ್ರಯಾಣದ ನಂತರ ನೀವು ನಿನ್ನೆ ಸಂಜೆ 6ಘಂಟೆಗೆ ಸ್ಯಾನ್-ಫ್ರಾನ್ಸಿಸ್ಕೋದಲ್ಲಿ ಬಂದಿಳಿಯುತ್ತೀರಿ!! ಕಾಲದಲ್ಲಿ ಹಿಂದೆ ಚಲಿಸುವ ಮ್ಯಾಜಿಕ್ ನೋಡಬಹುದು 🙂

ಎಲ್ಲಾ ಅಕ್ಷಾಂಶ ರೇಖಾಂಶದ ಗೆರೆಗಳು ಬರೀ ಊಹಾತ್ಮಕವಾಗಿದ್ದರೂ, ಅದೂ ಅಲ್ಲದೆ, ಈ 180ಡಿಗ್ರಿಯ ರೇಖಾಂಶ, ಅಲ್ಲೆಲ್ಲೋ ಪೆಸಿಫಿಕ್ ಸಾಗರದ ಮಧ್ಯೆ ಹಾದುಹೋಗಿದ್ದರೂ ಸಹ ಅದನ್ನು ಎಳೆದು ಗುರುತಿಸುವಾಗ ಕೆಲ ರಾಜಕೀಯ ಹಾಗೂ ಆರ್ಥಿಕ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಸುಖಾಸುಮ್ಮನೆ ನೇರವಾಗಿ ಎಳೆಯದೆ ಕೆಲ ಕಡೆ ಅಡ್ಡಾದಿಡ್ಡಿಯಾಗಿ ಎಳೆದಿದ್ದಾರೆ. [ಚಿತ್ರ 1ನ್ನು ಗಮನಿಸಿ]. ಇಲ್ಲಿ ನೀವು ಗಮನಿಸಬೇಕಾದ ವಿಷಯ ಆ ಚಿತ್ರದ ತಲೆಯ ಹತ್ತಿರ ಇದೆ ನೋಡಿ. ಅದೇನೆಂದರೆ, ಅಮೇರಿಕಾಸಂಯುಕ್ತ ಸಂಸ್ಥಾನ ಹಾಗೂ ರಷ್ಯಾ ಎರಡೂ ಈ ರೇಖೆಯಿಂದ ಬೇರ್ಪಡಿಸಲ್ಪಟ್ಟಿವೆ. ಒಂದು ಕಾಲದಲ್ಲಿ ಬದ್ಧವೈರಿಯಾಗಳಾಗಿದ್ದ ಎರಡೂ ದೇಶಗಳೂ, ‘ಇಷ್ಟೇ’ ದೂರದಿಂದ ಬೇರ್ಪಡಿಸಲ್ಪಟ್ಟಿವೆ. ಆ ಕಡೆ ಕೆನಡಾದಿಂದ ಕೇವಲ ಒಂದು ಡಾಲರ್ಗೆ ಅಮೇರಿಕಾ ಖರೀದಿಸಿದ ‘ಅಲಾಸ್ಕ’, ಈ ಕಡೆ ರಷ್ಯಾದ ಖಾಲಿ-ಖಾಲಿಯಾಗಿರುವ ಉಗೋಲ್ನಿ ಪ್ರಾಂತ್ಯ.

ಆದರೆ ಇವತ್ತಿನ ವಿಷಯ ತಿಳಿಯಬೇಕೆಂದಾದರೆ, ಇನ್ನೂ ‘ಆಳ’ಕ್ಕಿಳಿಯಬೇಕು. ಎರಡೂ ರಾಷ್ಟ್ರಗಳ ಮಧ್ಯೆಯಿರುವುದು ‘ಬೆರಿಂಗ್ ಜಲಸಂಧಿ’. ಇಲ್ಲಿ ಸ್ವಲ್ಪ ಝೂಮ್ ಮಾಡಿ ನೋಡಿದರೆ (http://bit.ly/1ue0oMg), ನಿಮಗೆ ಎರಡು ಪುಟಾಣಿ ದ್ವೀಪಗಳು ಕಾಣಸಿಗುತ್ತದೆ. ಇವುಗಳ ಹೆಸರು ಡಿಯೋಮೇಡ್ ದ್ವೀಪಗಳು. ಅದರಲ್ಲಿ ಒಂದು ದೊಡ್ಡ ಡೀಯೋಮೇಡ್, ಇನ್ನೊಂದು ಸಣ್ಣ ಡಿಯೋಮೇಡ್ (ಚಿತ್ರ 2 ಮತ್ತು 3). ಪ್ರಕೃತಿ ಎರಡನ್ನೂ ಒಟ್ಟಿಗೇ ಸೃಷ್ಟಿಸಿದ್ದರೂ ಸಹ, ಈ ಮನುಷ್ಯನೆನ್ನುವ ಪ್ರಾಣಿ ಅದರಲ್ಲಿ ನಂದಿಷ್ಟು ನಿಂದಿಷ್ಟು ಅಂತಾ ಪಾಲುಮಾಡಿಕೊಂಡಾದ ಮೇಲೆ, ದೊಡ್ಡ ಡಿಯೋಮೇಡ್ ರಷ್ಯಾಕ್ಕೂ, ಸಣ್ಣ ಡಿಯೋಮೇಡ್ ಅಮೇರಿಕಾಕ್ಕೂ ಸೇರಿವೆ. ಎರಡಕ್ಕೂ ಮಧ್ಯೆ 3.8 ಕಿಮೀ ದೂರ, ಅಷ್ಟೇ. ಆದರೆ ಈ ಅಂತರಾಷ್ಟ್ರೀಯ ದಿನಾಂಕ ರೇಖೆ ಇವೆರಡರಮಧ್ಯೆ ಹಾದು ಹೋಗಿ, ಆಗಿರುವ ತರಲೆಗಳು ಒಂದೆರಡಲ್ಲ. ಎರಡಕ್ಕೂ ಮಧ್ಯೆ ಬರೇ ಎರಡೂವರೆ ಮೈಲುಗಳ ಅಂತರವಿದ್ದರೂ, ಎರಡೂ ದ್ವೀಪಗಳ ಮಧ್ಯೆ 23 ಗಂಟೆಗಳ ಅಂತರ!!! ದೊಡ್ಡ ದ್ವೀಪದಿಂದ ಇವತ್ತು ಫೋನು ಮಾಡಿದರೆ, ಸಣ್ಣದ್ವೀಪದವರು ನಿನ್ನೆ ಉತ್ತರಿಸುತ್ತಾರೆ 🙂 🙂 🙂 ಅದೇರೀತಿ ಸಣ್ಣದ್ವೀಪದಿಂದ ದೊಡ್ಡ ದ್ವೀಪಕ್ಕೆ ಫೋನುಮಾಡಿ, ನಾಳೆಯ ಸುದ್ಧಿ ಇವತ್ತೇ ತಿಳಿಯಬಹುದು 🙂 !! ಇದು ಮಾತ್ರವೇ ಅಲ್ಲದೆ, ಒಂದು ಕಾಲದಲ್ಲಿ ದೊಡ್ಡ ಡಿಯೋಮೇಡ್ ದ್ವೀಪವೇ ಜಗತ್ತಿನ ಪೂರ್ವ ತುದಿಯಾಗಿತ್ತು. ಹೊಸವರ್ಷದ ಮೊದಲ ಪಟಾಕಿ ಇಲ್ಲೇ ಸಿಡಿಸಬೇಕಾಗಿತ್ತು. ಆದರೆ ಅಧಿಕೃತವಾಗಿ ರಷ್ಯಾದ ಬಹುತೇಕ ಪೂರ್ವಭಾಗ ಹಾಗೂ ನ್ಯೂಝೀಲ್ಯಾಂಡ್ ಒಂದೇ ಸಮಯವಲಯ ಪಾಲಿಸುವುದರಿಂದ, ಹಾಗೂ ನ್ಯೂಝೀಲ್ಯಾಂಡಿನಲ್ಲಿ ಹಗಲಿನ ಉಳಿಕೆ (Daylight saving)ಯ ಅಭ್ಯಾಸವಿರುವುದರಿಂದ, ರಷ್ಯಾ ಬೇಸಿಗೆಯ ಸಮಯದಲ್ಲಿ ನ್ಯೂಝೀಲ್ಯಾಂಡಿಗಿಂತಾ ಒಂದು ಘಂಟೆ ಹಿಂದೆಬೀಳುತ್ತಿತ್ತು. 1995ರಲ್ಲಿ ಇದರ ಬಗ್ಗೆ ದೊಡ್ಡ ಚರ್ಚೆಯೇ ನಡೆದು, ಈ ತಲೆಬಿಸಿಯೀ ಬೇಡವೆಂದು, ಇಡೀ ಅಂ.ದಿ.ರೇ.ಯನ್ನು ಜಗತ್ತಿನ ದಕ್ಷಿಣಾರ್ದದಲ್ಲಿ ಸುಮಾರು 30ಡಿಗ್ರಿಯಷ್ಟು (ಅಂದರೆ ಸುಮಾರು 2 ಘಂಟೆಯಷ್ಟು!!) ಬಲಕ್ಕೆ ‘ಕಿರಿಬಾತಿ’ ಎಂಬ ದ್ವೀಪದೇಶದವರೆಗೆ ಸರಿಸಿ, ಅದನ್ನು ಜಗತ್ತಿನ ಪೂರ್ವದ ಹೆಬ್ಬಾಗಿಲಾಗಿ ಘೋಷಿಸಲಾಯಿತು. ಚಿತ್ರ 1ರ ಕೆಳಬಾಗದಲ್ಲಿ ನೀವಿದನ್ನು ಗಮನಿಸಬಹುದು.

ದೊಡ್ಡ ಡಿಯೋಮೇಡ್ ದ್ವೀಪದಲ್ಲಿ ವಾಸವಿದ್ದವರನ್ನೆಲ್ಲಾ, ರಷ್ಯಾ ತನ್ನ ಮುಖ್ಯಭೂಮಿಗೆ ಸ್ಥಳಾಂತರಿಸಿರುವುದರಿಂದ, ಇಡೀ ದ್ವೀಪದಲ್ಲಿ ಕೆಲ ಸೇನಾ ತುಕಡಿಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಸಣ್ಣ ದ್ವೀಪದಲ್ಲಿ ಸ್ಥಳೀಯ ‘ಇನುಯಿಟ್’ ಜನಾಂಗದ ಸುಮಾರು 170 ಜನರು, ದ್ವೀಪದ ಪಶ್ಚಿಮ ಮೂಲೆಯಲ್ಲಿರುವ ‘ಡಿಯೋಮೇಡ್’ ಎಂಬ ಸಣ್ಣ ಪಟ್ಟಣದಲ್ಲಿ (ಚಿತ್ರ 4 ಮತ್ತು 5) ವಾಸವಾಗಿದ್ದಾರೆ. ಇಡೀ ಪಟ್ಟಣಕ್ಕೆ ಒಂದು ಶಾಲೆ, ಒಂದು ಪುಟಾಣಿ ಏರ್ಪೋರ್ಟ್ ಹಾಗೂ ಒಂದೇ ಒಂದು ಅಂಗಡಿಯಿದೆ. ಈ ಜನರು ದಂತಕೆತ್ತನೆಯಲ್ಲಿ ನಿಪುಣರು. ಹವಾಮಾನ ಅವಕಾಶಮಾಡಿಕೊಟ್ಟಾಗಲೆಲ್ಲಾ ಅಲಾಸ್ಕ ಕಡೆಯಿಂದ, ಸರ್ಕಾರದ ಅಧಿಕಾರಿಗಳು ಭೇಟಿಕೊಟ್ಟು ಈ ಜನರ ಬಗ್ಗೆ ವಿಚಾರಿಸಿಕೊಳ್ಳುತ್ತಾರೆ.

ಕೊಸರು:

‘ಅಮೇರಿಕಾದಿಂದ ರಷ್ಯಾಕ್ಕೆ ನಡೆದು ಹೋಗಬಹುದು’ ಎಂದು ನಾನೇನಾದರೂ ಹೇಳಿದರೆ, ನೀವು ‘ಇವನಿಗ್ಯಾಕೋ ದಿನಕ್ಕೊಂದು ವಿಷಯ ಬರೆದು ತಲೆಕೆಟ್ಟಿದೆ’ ಎಂದು ನಗುವ ಸಾಧ್ಯತೆಗಳೇ ಹೆಚ್ಚು,ಅಲ್ಲವೇ. ಆದರೆ, ವರ್ಷದ ಎಂಟುತಿಂಗಳು ಇಲ್ಲಿ ಜಲಸಂಧಿ ಹೆಪ್ಪುಗಟ್ಟುವುದರಿಂದ (ಚಿತ್ರ 6), ಇದರ ಮೇಲೆ ನಡೆದೇ ಅಮೇರಿಕಾದಿಂದ ರಷ್ಯಾದವರೆಗೆ ಕ್ರಮಿಸಬಹುದು!

#ದಿನಕ್ಕೊಂದು_ವಿಷಯ, #Diomede_Islands, #International_Date_Line

International_Date_LineDiomede_Islands_Bering_Sea_Jul_2006BeringSt-close-VEdiomede village469from-uptop

ದಿನಕ್ಕೊಂದು ವಿಷಯ – ೧೪

ದಿನಕ್ಕೊಂದು ವಿಷಯ – ೧೪

ಎಲ್ಲಿಂದ ಬಂತು ‘ಎಡಪಂಥ’!?

ಇವತ್ತಿನ ವಿಷಯ ಮಾತ್ರ ನಿಲುಮೆಯ ಎಲ್ಲರಿಗೂ ಇಷ್ಟವಾಗುವಂತದ್ದು ಎಂದು ನನ್ನ ಭಾವನೆ. ನಿಲುಮೆಯಲ್ಲಿ ತಾತ್ವಿಕ ವಾದಗಳಿಗೇನೂ ಬರವಿಲ್ಲ ಅಲ್ಲವೇ? ನಿಲುಮೆಗರ ವಾದದ ಬಿಸಿತಾಳಲಾರದೆ, ವಾದಗಳು ಜಗಳಗಳಾಗಿ ಪರಿವರ್ತಿತಗೊಂಡು, ‘ಎಲ್ಲ ತತ್ವಗಳ ಮೀರಲಾಗದ’ ಕೆಲ ಕುರುಕುಲದರ್ಕುಲರು, ಆನಂದಾತ್ಮಜ ರಾಮಸ್ವರೂಪರು, ಮಂಜಿನ ಹನಿಯ ಮೇಲೆ ಸುವರ್ಣಾಕ್ಷರಗಳಿಂದ ಹೆಸರು ಬರೆದುಕೊಂಡವರು, ಹಾಗೂ ಇನ್ನೂ ಕೆಲವರು ವಾಚಾಮಗೋಚರ ಪದಬಳಕೆಗೆ ಇಳಿದು, ಆನಂತರ ನಮ್ಮ ಕಣ್ಣಿಗೆ ಗೋಚರವಾಗದೇ ಹೋಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಈ ರೀತಿಯ ವಾದ-ವಿವಾದಗಳು ನಡೆಯುವಾಗ ನಮ್ಮೆಲ್ಲರಿಗೂ ಕೇಳಬಂದ ಕೆಲ ವಿಚಿತ್ರ ಪದಪುಂಜಗಳೆಂದರೆ ‘ಎಡಪಂಥೀಯ’. ‘ಪ್ರಗತಿಪರ’, ‘ಜಾತ್ಯಾತೀತ’ ಹಾಗೂ ‘ಬುಧ್ಧಿಜೀವಿ’. ಇದರಲ್ಲಿ ಕೆಲವು ಪದಗಳ ಅರ್ಥಗಳು ನಿಮಗೆ ತಿಳಿದಿರಬಹುದು. ಬುದ್ಧಿಜೀವಿ ಎಂದರೆ ಬುದ್ಧಿ ಇಲ್ಲದವರು, ಪ್ರಗತಿಪರ ಎಂದರೆ ಊಟಕ್ಕೆ ಗತಿಯಿಲ್ಲದೆ ಪರ ಪರ ಎಂದು ಕೆರೆದುಕೊಳ್ಳುತ್ತಾ ಒಂದು ಧರ್ಮವನ್ನು ತೆಗಳುವವರು, ಹಾಗೂ ಜಾತ್ಯಾತೀತ ಎಂದರೆ ಹೆಸರಿನ ಕೊನೆಯಲ್ಲಿ ಜಾತಿಯನ್ನು ಸೇರಿಸಿಕೊಂಡು ‘ಜಾತಿವ್ಯವಸ್ಥೆಯನ್ನು ಕಿತ್ತೊಗೆಯಬೇಕು’ ಎಂದು ಕೂಗುವವರು. ಆದರೆ ಈ ‘ಎಡಪಂಥೀಯ’ ಎಂದರೇನು!? ಯಾವತ್ತಾದರೂ ಯೋಚಿಸಿದ್ದೀರಾ!? ಈ ಪದ ಹುಟ್ಟಿದ್ದು ಹೇಗೆ!? ಇವತ್ತು ಇದರ ಬಗ್ಗೆ ಸ್ವಲ್ಪ ತಲೆಯ ಎಡ-ಬಲಕ್ಕೆ ಕೆಲಸಕೊಡೋಣ.

ಪದದ ಹುಟ್ಟು:

ಎಡಪಂಥೀಯರು ಎಂಬ ಪದ, ಎಡಪಂಥೀಯ ರಾಜಕಾರಣ ಎಂಬ ಪದದಿಂದ ಎರವಲು ಪಡೆದದ್ದು. ಈ ಎಡಪಂಥೀಯ ರಾಜಕಾರಣವೆಂದರೇನು? ರಾಜಕಾರಣದಲ್ಲೇನು ಎಡ ಬಲ ಎಂದು ಕೇಳುತ್ತೀರಾ!? ಉತ್ತರ ಇಲ್ಲಿದೆ ನೋಡಿ. ಫ್ರೆಂಚ್ ಕ್ರಾಂತಿಯ ಸಮಯದಲ್ಲಿ, (ಅಂದರೆ 1789ರಿಂದ 1799ರವರೆಗೆ), ಅಲ್ಲಿನ ‘ಎಸ್ಟೇಟ್ ಜನರಲ್’ನ ಆಸನ ವ್ಯವಸ್ಥೆಯಲ್ಲಿ (Estate General, ಫ್ರಾನ್ಸಿನ ಅಂದಿನ ಕಾಲದ ವಿಧಾನಸಭೆಯಾಗಿತ್ತು), ಸಭಾಧ್ಯಕ್ಷರ ಎಡಬದಿಯಲ್ಲಿ ಕುಳಿತವರು ಬಹುಮಟ್ಟಿಗೆ ‘ರಾಜಪ್ರಭುತ್ವವನ್ನು (Monarchy)’ಯನ್ನು ವಿರೋಧಿಸಿ, ‘ಪ್ರಜಾಪ್ರಭುತ್ವವನ್ನು (Republic)’ ಹಾಗೂ ‘ಧರ್ಮನಿರಪೇಕ್ಷತೆ (Secularization)’ ಬೆಂಬಲಿಸುತ್ತಿದ್ದರು. ಹಾಗೂ ಬಲಗಡೆಗೆ ಕುಳಿತವರು ಹಳೆಯ ಆಡಳಿತಾತ್ಮಕ ವ್ಯವಸ್ಥೆಯನ್ನು, ಅಂದರೆ ರಾಜಪ್ರಭುತ್ವವನ್ನು, ಬೆಂಬಲಿಸುತ್ತಿದ್ದರು. ‘ಎಡಪಂಥೀಯ’ ಎಂಬ ಪದ 1815ರಲ್ಲಿ ‘ರಾಜಪ್ರಭುತ್ವ’ ಮರಳಿ ಅಧಿಕಾರಕ್ಕೆ ಬಂದ ನಂತರ ಹೆಚ್ಚು ಖ್ಯಾತಿ ಪಡೆಯಿತು. ತಮಾಷೆಯೆಂದರೆ, 1815ರ ನಂತರ ಫ್ರಾನ್ಸಿನಲ್ಲಿ ಈ ಪದ ಹೆಚ್ಚು ಉಪಯೋಗಸಲ್ಪಟ್ಟಿದ್ದು ಯಾವ ಪಕ್ಷಕ್ಕೂ ಸೇರದ ‘ಪಕ್ಷೇತರ’ರಿಗೆ 🙂

19ನೇ ಶತಮಾನದ ನಂತರ, ಈ ಪದದ ಬಳಕೆಯ ವ್ಯಾಪ್ತಿ ಹೆಚ್ಚುತ್ತಾ ಹೋಯಿತು. ಸಮಾಜವಾದ (Socialism), ಸಮಾನತಾವಾದ ಹಾಗೂ ಅರಾಜಕತಾವಾದ (Anarchism)ದ ಬೆಂಬಲಿಗರಿಗೂ ಎಡಪಂಥೀಯರೆಂದು ಕರೆಯುವುದು ಪ್ರಚಲಿತವಾಯಿತು. ಇಪ್ಪತ್ತನೆಯ ಶತಮಾನದಲ್ಲಿ ಈ ಪದ ಬರೇ ಬೆಂಬಲಿಗರಿಗಷ್ಟೇ ಅಲ್ಲದೇ, ಕೆಲ ಚಳುವಳಿಗಳಿಗೆ ಕೂಡಾ ಬಳಕೆಯಾಗಲು ಪ್ರಾರಂಭವಾಯಿತು. ನಾಗರಿಕ ಹಕ್ಕುಗಳ ಚಳುವಳಿಗಳೂ, ಯುದ್ಧ ವಿರೋಧಿ ಚಳುವಳಿಗಳೂ ಮತ್ತು ಪರಿಸರದ ಸಂಬಂಧೀ ಚಳುವಳಿಗಳೂ ಸಹ, ಎಡಪಂಥೀಯ ವಾದಕ್ಕೆ ಯಾವ ರೀತಿಯ ಸಾಮ್ಯತೆಯಿಲ್ಲದಿದ್ದರೂ, ಎಡಪಂಥೀಯ ಚಳುವಳಿಗಳೆಂದು ಕರೆಯಲ್ಪಟ್ಟವು. ಈಗಂತೂ ಈ ವ್ಯಾಖ್ಯಾನವನ್ನು ಇಡೀ ರಾಜಕೀಯ ಪಕ್ಷಗಳಿಗೆ ಬಳಸಲಾಗುತ್ತಿದೆ. ಅಮೇರಿಕಾ ಸಂಯುಕ್ತ ಸಂಸ್ಥಾನದ ಡೆಮಾಕ್ರಟಿಕ್ ಪಕ್ಷ, ಯುನೈಟೆಡ್ ಕಿಂಗ್ಡಮ್ಮಿನ ಲೇಬರ್ ಪಾರ್ಟಿ, ಭಾರತದ ಸಿ.ಪಿ.ಐ ಪಾರ್ಟಿ, ಚೀನಾದ ಲೇಬರ್ ಪಾರ್ಟಿಗಳು ಇವೆಲ್ಲಾ ಎಡಪಂಥೀಯರೆಂದು ಗುರುತಿಸಿಕೊಂಡ ಕೆಲ ಪಕ್ಷಗಳು.

Some-ಶೋಧನೆ:

ನಾನು ಈ ವಿಷಯದ ಬಗ್ಗೆ ಸಣ್ಣಮಟ್ಟಿಗಿನ ಸಂಶೋಧನೆ ಮಾಡಿದಾಗ ತಿಳಿದದ್ದು, ಈ ಎಡಪಂಥೀಯರಲ್ಲಿ ಮಧ್ಯ-ಎಡ (center-left)ದಿಂದ ಹಿಡಿದು ತೀರಾ ಎಡ (far left), ಎಂಬ ಬೇರೆ ಬೇರೆ ಪಂಗಡಗಳಿವೆ. ಕೆಲವೆಡೆ ಈ ಫಾರ್ ಲೆಫ್ಟಿಗರನ್ನು ತೀರಾ ಅತ್ತತ್ಲಾಗೆ ಅನ್ನೋ ಹಾಗೇ ultra left ಎಂದೂ ಕರೆಯುತ್ತಾರೆ. ಈ ಮಧ್ಯ-ಎಡದಲ್ಲಿ ಮತ್ತೆ ಸೋಶಿಯಲ್ ಡೆಮಾಕ್ರೇಟರು (Social Democrats – ಸಾಮಾಜಿಕ ಪ್ರಜಾಪ್ರಭುತ್ವವಾದಿಗಳು), ಸೋಶಿಯಲ್ ಲಿಬರಲ್ಲರು (Social Liberals – ಸಾಮಾಜಿಕ ಪ್ರಗತಿಪರರು), ಡೆಮಾಕ್ರೆಟಿಕ್ ಸೋಶಿಯಲಿಸ್ಟರು (Democratic Socialists – ಪ್ರಜಾಪ್ರಭುತ್ವವಾದಿ ಸಮಾಜವಾದಿಗಳು) ಹಾಗೂ ಎಕೋ ಸೋಶಿಯಲಿಸ್ಟರು (Eco socialists – ಪರಿಸರ ಸಮಾಜವಾದಿಗಳು) ಎಂಬ ಒಡಕು ಬೇರೆ. ಇವರ ಪ್ರಕಾರ ‘ತೀರ ಎಡ’ದವರು ತೀವ್ರಗಾಮಿಗಳಂತೆ. ಅವರು ಎಡಪಂಥಕ್ಕೇ ಅವಮಾನವಂತೆ. ಒಂಥರಾ ‘ಅಲ್-ಖೈದಾ’ದವರು ‘ಇಸಿಸ್’ನವರಿಗೆ ಸರ್ಟಿಫಿಕೇಟ್ ಕೊಟ್ಟಂತೆ ಇವರ ಕ್ಲಾಸಿಫಿಕೇಷನ್ನು 🙂

ಇನ್ನೂ ತಮಾಷೆಯ ವಿಷಯವೆಂದರೆ, ಅಮೇರಿಕಾ ಸಂಯುಕ್ತ ಸಂಸ್ಥಾನದ, Department of Homeland Security ಪ್ರಕಾರ ‘ರಾಜಕೀಯ ಪ್ರಕ್ರಿಯೆಗಳ ಬದಲಾಗಿ ಹಿಂಸಾತ್ಮಕ ಕ್ರಾಂತಿಯಿಂದ ಬದಲಾವಣೆ ತರಲು ಪ್ರಯತ್ನಿಸುವ’ ಗುಂಪುಗಳನ್ನು ಎಡಪಂಥೀಯ ತೀವ್ರಗಾಮಿಗಳೆನ್ನಲಾಗುತ್ತದೆ. ಈ ಪಟ್ಟಿಯಲ್ಲಿ ‘ಟ್ರಾಟ್ ಸ್ಕಿಯಿಸ್ಟರು’ (Trotskyists), ‘ಮಾವೋಯಿಸ್ಟರು’ (Maoists), ‘ಅರಾಜಕತಾವಾದಿಗಳು'(Anarchists) ಹೆಸರನ್ನು ಸೇರಿಸಲಾಗಿದೆ. Anarchists ಎಂಬ ಪದ ಓದಿ, ಭಾರತದ ರಾಜಕೀಯ ಸನ್ನಿವೇಶದಲ್ಲಿ ಖಂಡಿತವಾಗಿಯೂ AAP ಪಾರ್ಟಿ, ಕಮ್ಯೂನಿಸ್ಟರುಗಳು ಈ ಪಟ್ಟಿಯಲ್ಲಿ ಸೇರುತ್ತಾರೆಂದು ಮೇಲ್ನೋಟಕ್ಕೆ ನಿಮಗೆನ್ನಿಸಿದರೆ ಆಶ್ಚರ್ಯವೇನಿಲ್ಲ.

ಇಷ್ಟರಮಧ್ಯೆ ಗಮನಿಸಬೇಕಾದ ವಿಷಯವೆಂದರೆ, ‘ಎಡಪಂಥೀಯ’ ಎಂಬ ಪಂಗಡವೊಂದಿದೆಯೇ ಹೊರತು, ಬಲಪಂಥೀಯ ಎಂಬ ಪಂಗಡವಾಗಲೀ, ಬಲಪಂಥೀಯರೆಂಬುವವರಾಗಲೀ ಯಾರೂ ಇಲ್ಲ. ಫ್ರೆಂಚ್ ಕ್ರಾಂತಿಯ ನಂತರ ಬಲಪಂಥವೆನನ್ನುವುದು ಯಾವುದೂ ಉಳಿಯಲಿಲ್ಲ. ಇವತ್ತು ರಾಜಪ್ರಭುತ್ವವನ್ನು ಬೆಂಬಲಿಸುವ ಯಾವುದೇ ಪಕ್ಷ ಜಗತ್ತಿನಲ್ಲಿ ಇಲ್ಲ. ರಾಜಪ್ರಭುತ್ವ ಚಾಲ್ತಿಯಲ್ಲಿರುವ ದೇಶಗಳು ಇಂದಿಗೂ ಇವೆ. ಆದರೆ ಅಲ್ಲಿ ಅದನ್ನು ಬೆಂಬಲಿಸುವಂತಹ ಯಾವ ಪಕ್ಷಗಳೂ ಇಲ್ಲ. ಮಾಡಲು ಕೆಲಸವಿಲ್ಲದ ರಾಜಕೀಯ ಪರಿಣಿತರು, ಯಾರ್ಯಾರು ಎಡಪಂಥೀಯರನ್ನು ವಿರೋಧಿಸಿದರೋ ಅವರೆನ್ನೆಲ್ಲಾ ‘ಬಲಪಂಥೀಯ’ರೆಂದು ಕರೆಯುವ ಮೂರ್ಖತನವೊಂದನ್ನು ಮಾಡಿದರು. ಅದು ಇವತ್ತಿಗೂ ಮುಂದುವರೆಯುತ್ತಿದೆ.

ಕೊಸರು:

ಎಡಪಂಥೀಯರು ಎಂಬ ಪದ ಇಂದು ಕೆಲವೊಮ್ಮೆ ಹಾಸ್ಯಕ್ಕಾಗಿಯೂ ಬಳಸಲ್ಪಡುತ್ತಿದೆ. ದೂರದೃಷ್ಟಿತ್ವವಿಲ್ಲದ ಚಳುವಳಿಗಳು, ಜನರನ್ನು ಒಗ್ಗೂಡಿಸಲಾಗದ ನಾಯಕರು, ಮತ್ತವರ ಸೋಗಲಾಡಿ ರಾಜಕೀಯ ನೀತಿಗಳು ಈ ಹಾಸ್ಯವನ್ನು ಹುಟ್ಟುಹಾಕುವುದರಲ್ಲಿ ಹಾಗೂ ಮುಂದುವರೆಸುವುದರಲ್ಲಿ ಮಹತ್ವದ ಪಾತ್ರವಹಿಸಿವೆ ಎಂದರೆ ಸುಳ್ಳಾಗಲಾರದು.

ಸಧ್ಯದಲ್ಲೇ ಎಡಪಂಥೀಯ ಎಂಬ ಪದ ಬೈಗುಳವಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ‘ಗ್ರಹಗತಿ ನೋಡಿಯೇ ಗೊಣ್ಣೆ ತೆಗೆಯುವ’ ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದ್ದಿದ್ದಾರಂತೆ. ‘ಎಡ’ಗೈ ಜೋಪಾನ ಮಾರಾಯ್ರೆ 🙂

#ದಿನಕ್ಕೊಂದು_ವಿಷಯ, #Leftists, # French_Revolution

jerm-biggish-five-left-wing-right-wing Stickles 63D

ದಿನಕ್ಕೊಂದು ವಿಷಯ – ೧೩

ದಿನಕ್ಕೊಂದು ವಿಷಯ – ೧೩

‘ದೇವರ ಅಸ್ತಿತ್ವದ ವಾದಕ್ಕೆ ಅಸ್ತಿತ್ವವಿದೆಯೇ?’

ಮೊದಲನೆಯದಾಗಿ, ನಿನ್ನೆಯೇ ಬರಬೇಕಾಗಿದ್ದ ವಿಷಯ ಇಂದು ಬಂದದ್ದಕ್ಕೆ ಕ್ಷಮೆ ಇರಲಿ. ಈ ಕಾರ್ಪೋರೇಟ್ ಕತ್ತೆಗಳಿಗೆ, ವಾರದಲ್ಲಿ ಎರಡು ದಿನ ರಜಾ. ಈ ಕತ್ತೆಗೆ ನಿನ್ನೆ ಸ್ವಲ್ಪ ಹೆಚ್ಚೇ ಕೆಲಸವಿದ್ದಿದ್ದರಿಂದ ಬರೆಯಲು ಸಾಧ್ಯವಾಗಲಿಲ್ಲ.

ಎರಡನೆಯದಾಗಿ, ಇವತ್ತಿನ ವಿಷಯ ನಿನ್ನೆಯದಕ್ಕಿಂತಾ ಇನ್ನೂ ಹೆಚ್ಚು ಸೂಕ್ಷ್ಮವಾದದ್ದು. ನಿನ್ನೆ, ದೇವರ ಅಸ್ತಿತ್ವವನ್ನು ಪೂರೈಸುವ ನಾಲ್ಕು ವಾದಗಳನ್ನು ಓದಿದಿರಿ. ಇವತ್ತು ದೇವರ ಅಸ್ತಿತ್ವವನ್ನು ಅಲ್ಲಗಳೆಯುವ ಕೆಲ ವಾದಗಳನ್ನು ನೋಡೋಣ.

(೧) ‘ಜಗತ್ತಿನ ಸರಳತೆ’ಯ ವಾದ ಹಾಗೂ ‘ಓಖ್ಯಾಮ್’ನ ರೇಝರ್ (The argument of simplicity and Occam’s Razor): ಈ ವಾದದ ಪ್ರಕಾರ ‘ಜಗತ್ತಿಗೆ ಕ್ಲಿಷ್ಟತೆಯನ್ನು ಆರೋಪಿಸುತ್ತಿರುವುದು ನಾವು ಮಾತ್ರ. ಅದು ಸರಳವಾಗಿಯೇ ಇದೆ. ಹಾಗೂ ದೇವರು ಅದೃಷ್ಯನಾಗಿಯೇ ಇದ್ದಾನಾದ್ದರಿಂದ, ಅವನು ಇರುವ ಜಗತ್ತಿಗೂ ಹಾಗೂ ಅವನಿಲ್ಲದಿರುವ ಜಗತ್ತಿಗೂ ಏನೂ ಪ್ರತ್ಯಕ್ಷ ವ್ಯತ್ಯಾಸಗಳಿಲ್ಲ. ಹಾಗಾಗಿ, ಅವನಿಲ್ಲ ಎಂದು ನಂಬುವುದೇ ಉತ್ತಮ’. ಇದನ್ನು ‘ಮಿತವ್ಯಯದ ವಾದ (Argument of Parsimony)’ ಎಂದೂ ಕರೆಯಲಾಗುತ್ತದೆ.

ಈ ವಾದಕ್ಕೆ ಪೂರಕವಾಗಿ ಬಳಸಲ್ಪಡುವುದು ‘ಒಖ್ಯಾಮ್ ನ ವಿಲಿಯಮ್ (WIlliam of Occam 1287-1347)’ ಎಂಬುವವನ ಒಂದು ತತ್ವ. ಇದನ್ನು ‘ಒಖ್ಯಾಮ್’ನ ರೇಝರ್ ಎಂದೂ ಕರೆಯಲಾಗುತ್ತದೆ. ಅದು ಹೇಳುವುದೇನೆಂದರೆ ‘ಒಂದು ವಿಷಯದ ಬಗ್ಗೆ ಹಲವು ವಿಚಾರಧಾರೆಗಳಿದ್ದರೆ, ಹಾಗೂ ಅವುಗಳ ಮಧ್ಯೆ ಸ್ಪರ್ಧೆಯುಂಟಾಗಿದ್ದಲ್ಲಿ, ಯಾವುದರಲ್ಲಿ ಅತ್ಯಂತ ಕಡಿಮೆ ಊಹೆಗಳಿವೆಯೋ, ಅದನ್ನು ಮುಂಚೂಣಿಯಲ್ಲಿ ಪರಿಗಣಿಸಬೇಕು’. ಉದಾಹರಣೆಗೆ, ನಮ್ಮ ಗ್ರಹಮಂಡಲವನ್ನು ಮತ್ತದರ ಕಾರ್ಯವಿಧಿಯನ್ನು ಸೂರ್ಯಕೇಂದ್ರಿತ ವ್ಯವಸ್ಥೆಯಿಂದಲೂ (Heliocentric system), ಭೂಕೇಂದ್ರಿತ ವ್ಯವಸ್ಥೆಯಿಂದಲೂ (Geocentric System) ಉತ್ತರಿಸಬಹುದು. ಆದರೆ ತುಲನಾತ್ಮಕವಾಗಿ ನೋಡಿದಾಗ ಸೂರ್ಯಕೇಂದ್ರಿತ ವ್ಯವಸ್ಥೆಯಲ್ಲಿ ಕಡಿಮೆ ‘ಊಹೆ’ಗಳಿರುವುದರಿಂದ (ಕೇವಲ ಏಳು ಊಹೆಗಳು) ಅದು ಹೆಚ್ಚು ಸತ್ಯವಾಗಿ ಹಾಗೂ ಸುಸ್ಥಿರವಾದ ವಾದವಾಗಿ ಕಂಡುಬರುತ್ತದೆ. ಸೌರಕೇಂದ್ರಿತ ವ್ಯವಸ್ಥೆಯನ್ನು ಕೋಪರ್ನಿಕಸ್ 1543ರಲ್ಲಿ ಪ್ರತಿಪಾದಿಸಿದಾಗ ಅದರ ಬೆನ್ನುಲುಬಾಗಿ ನಿಂತದ್ದು ಇದೇ ತತ್ವ. ವಿಲಿಯಂನ ತತ್ವ ಅನಗತ್ಯವಾದ ಊಹೆಗಳನ್ನು ‘ಬೋಳಿಸಿ ಬದಿಗಿಡುವುದರಿಂದ’ ಅದು ‘ಒಖ್ಯಾಮ್’ನ ರೇಝರ್ ಎಂದು ಕರೆಯಲ್ಪಟ್ಟಿತು. ಇದರ ಪ್ರಕಾರ, ಜಗತ್ತಿನ ಅಸ್ತಿತ್ವದ್ದಲ್ಲಿ ದೇವರ ಯಾವುದೇ ಸಮರ್ಥನೀಯ ಪಾತ್ರ ಕಂಡುಬರುತ್ತಿಲ್ಲವಾದ್ದರಿಂದ, ಅದನ್ನು ಬದಿಗಿಡುವುದು ಸೂಕ್ತ ಎಂಬುದು ಈ ವಾದದ ತಿರುಳು. 1960ರಲ್ಲಿ ‘ರೇ ಸೋಲೊಮೊನಾಫ್’ ಎಂಬ ಗಣಿತಜ್ಞ ತನ್ನ ‘ಅನುಗಮನಾ ಉಲ್ಲೇಖದ ಸಿದ್ಧಾಂತ’ದ (Solomonoff’s theory of inductive inference) ಮೂಲಕ, ಒಖ್ಯಾಮ್’ನ ರೇಝರ್ ತತ್ವಕ್ಕೆ ಗಣಿತದ ರೂಪುರೇಷೆ ಕೂಡಾ ಕೊಟ್ಟ.

(೨) ಬಹುಸಂಖ್ಯೆಯ ವಾದ (The argument of multiplicity): ಈ ವಾದದ ಪ್ರಕಾರ, ಬೇರೆ ಬೇರೆ ಧರ್ಮಗಳಲ್ಲಿ ದೇವರ ಇರುವಿಕೆಯ ಬಗ್ಗೆ ಹಾಗೂ ಅವನ ಗುಣಧರ್ಮಗಳ ಬಗ್ಗೆ ಸಾಮ್ಯತೆ ಇಲ್ಲದಿರುವುದರಿಂದ, ಅವ್ಯಾವುದಕ್ಕೂ ದೇವರ ಬಗ್ಗೆ ಏಕರೂಪವಾದ ಅಭಿಮತವಿಲ್ಲದಿರುವುದರಿಂದ, ದೇವರ ಬಗ್ಗೆ ಇರುವ ಎಲ್ಲಾ ವಾದಗಳೂ ತಪ್ಪು.

(೩) ದುಷ್ಟತೆ, ನೋವು ಹಾಗೂ ಅನ್ಯಾಯದ ವಾದ (The Argument of Evil, Pain and Injustice): ದೇವರು ಇದ್ದಾನೆ ಹಾಗೂ ಅವನೇ ನಮ್ಮನ್ನು ಸೃಷ್ಟಿಸಿ, ಸಲಹುತ್ತಿದ್ದಾನೆ ಎಂದಾದರೆ ಆತ ನೂರಕ್ಕೆ ನೂರು ಪ್ರೇಮಮಯಿಯಿಲ್ಲ. ಯಾಕೆಂದರೆ ಜಗತ್ತಿನಲ್ಲಿ ದುಷ್ಟರಿದ್ದಾರೆ, ಒಳ್ಳೆಯವರಿಗೆ ಕಷ್ಟಗಳು ಬರುತ್ತಿವೆ ಹಾಗೂ ಅನ್ಯಾಯ ಕಾಲದಿಂದ ಕಾಲಕ್ಕೆ ತಾಂಡವವಾಡುತ್ತಿದೆ. ಹೀಗಿದ್ದಮೇಲೆ, ಜಗತ್ತಿನ ಅನ್ಯಾಯದ ಮೇಲೆ ಆತನಿಗೆ ನಿಯಂತ್ರಣವಿಲ್ಲ. ಅಂದಮೇಲೆ, ಆತ ಸರ್ವಶಕ್ತನಲ್ಲ. ಅಥವಾ ಆತ ಸರ್ವಶಕ್ತನಾಗಿದ್ದರೂ, ಜಗತ್ತಿನಲ್ಲಿ ನೋವು ಇದೆ ಅಂತಾದರೆ ಆತ ಪ್ರೇಮಮಯಿಯಲ್ಲ. ಹೀಗೆ ‘ಸರ್ವಶಕ್ತ’ ಮತ್ತು ‘ಪ್ರೇಮಮಯಿ’ಯಾದ ದೇವರಿಲ್ಲವೆಂದ ಮೇಲೆ, ಆತ ದೇವರಲ್ಲ ಹಾಗೂ ಆತನ ಅಸ್ತಿತ್ವಕ್ಕೆ ಕಾರಣಗಳೇ ಇಲ್ಲ.

[ನೋವು ಹಾಗೂ ಕಷ್ಟಗಳನ್ನು ‘ಹಿಂದೆ ಮಾಡಿದ ಪಾಪ/ತಪ್ಪುಗಳ’ ಅಥವಾ ‘ಹಿಂದಿನ ಜನ್ಮದ ಪಾಪಗಳ’ ಕಾರಣ ಕೊಟ್ಟು ವಾದಿಸಬಹುದು. ಆದರೆ ಮೇಲೆ ಹೇಳಿದಂತೆ, ಒಂದನ್ನು ನಿರೂಪಿಸಲು ನಾವು ಹತ್ತು ಬೇರೆ ಬೇರೆ ಊಹೆಗಳ ಮೊರೆ ಹೋಗಬೇಕಾಗುತ್ತದೆ. ಹಾಗಾಗಿ ‘ಪುನರ್ಜನ್ಮ’ದ ಹಾಗೂ ‘ಎಂದೋ ಮಾಡಿದ ಪಾಪ’ದ ವಾದ ಸುಸ್ಥಿರವಲ್ಲ]

(೪) ‘ಸರ್ವಶಕ್ತ ದೇವರು ಹಾಗೂ ಕಲ್ಲಿನ’ ದ್ವಂದ್ವ (‘The Omnipotent God and Stone’ Pradox): ಇದು ವಾದವಲ್ಲವಾದರೂ, ಆಸ್ತಿಕರ ‘ದೇವರು ಸರ್ವಶಕ್ತ’ನೆಂಬ ವಾದಕ್ಕೆ ತಾರ್ಕಿಕವಾಗಿ ಪೆಟ್ಟು ಕೊಡುವ ಪ್ರಯತ್ನ. ‘ದೇವರು ಸರ್ವಶಕ್ತ ಎಂದಾದರೆ, ಆತ ತನ್ನಿಂದ ಎತ್ತಲಾಗದ ಕಲ್ಲುಬಂಡೆಯೊಂದನ್ನು ಸೃಷ್ಟಿಸಬಲ್ಲನೇ!?’ ಎಂಬುದು ಇದರ ಹೂರಣ. ಈ ಪ್ರಶ್ನೆಗೆ ಉತ್ತರ ಹೌದೆಂದಾದರೂ, ಆಸ್ತಿಕರ ವಾದಕ್ಕೆ ಪೆಟ್ಟು, ಇಲ್ಲವೆಂದಾದರೂ ಪೆಟ್ಟು. ಇದು ‘ದೇವರಿಲ್ಲ’ ಎಂದು ನಿರೂಪಿಸುವುದಿಲ್ಲವಾದರೂ, ‘ದೇವರಿದ್ದಾನೆ ಹಾಗೂ ಆತ ಸರ್ವಶಕ್ತ’ ಎಂಬ ವಾದವನ್ನು ಹುಸಿಮಾಡಬಲ್ಲುದು.

ಇವಿಷ್ಟೇ ಅಲ್ಲದೆ, ನಿನ್ನೆ ಮುಂದಿಡಲಾದ ವಾದಗಳನ್ನು ಅಲ್ಲಗಳೆಯುವಂತಹ ಎಲ್ಲಾ ವಾದಗಳೂ ಇವೆ. ಆದರೆ ಅವನ್ನು ಮುರಿಯಬಲ್ಲಂತಹಾ ಎಲ್ಲಾ ಪ್ರತ್ಯುತ್ತರಗಳೂ ಅಲ್ಲಿಯೇ ಇವೆ. ಆದ್ದರಿಂದ ಅವುಗಳ ಬಗ್ಗೆ ಇಲ್ಲಿ ಮಾತನಾಡುತ್ತಿಲ್ಲ. ಉಳಿದ ವಾದಗಳು ನಿಮ್ಮಿಂದ ಬರಲಿ ಎಂದು ಆಶಿಸುತ್ತೇನೆ.

ಕೊಸರು:

ಜಗತ್ತಿನಲ್ಲಿ ಎಡಪಂಥೀಯರಿದ್ದಂತೆ, ಬಲಪಂಥೀಯರೂ ಇದ್ದಾರೆ. ಇವೆರಡರ ನಡುವೆ ‘ಅವ್ರೂ ಸರಿಯಿಲ್ಲ, ಇವ್ರೂ ಸರಿಯಿಲ್ಲ. ನಮಗೆ ಯಾವ್ದೂ ಬೇಡಪ್ಪಾ’ ಎನ್ನುವ ನಡುಪಂಥೀಯರೂ ಇದ್ದಾರೆ. ಹಾಗೆಯೇ ಈ ವಿಷಯದಲ್ಲೂ ಸಹ, ‘ದೇವರ ಇರುವಿಕೆಯನ್ನು ನಿರೂಪಿಸಲಾಗಲೀ, ಅಲ್ಲಗಳೆಯಲಾಗಲೀ ಪೂರ್ಣಪ್ರಮಾಣದ ಸಾಕ್ಷಿಗಳು ಲಭ್ಯವಿಲ್ಲ’ ಎಂದುಕೊಂಡು, ಇದರಬಗ್ಗೆ ತಲೆಯೇ ಕೆಡಿಸಿಕೊಳ್ಳದ (ಅಥವಾ ಎರಡೂ ಕಡೆಯ ವಾದಗಳನ್ನು ಕೇಳಿ, ಇನ್ನೂ ಸತ್ಯದ ಹುಡುಕಾಟದಲ್ಲಿರುವ) ನಡುಪಂಥೀಯರೂ ಇದ್ದಾರೆ. ಇವರಿಗೆ ಅನಾಸ್ತಿಕ(Agnostics)ರೆಂದು ಕರೆಯುತ್ತಾರೆ.

ಅನಾಸ್ತಿಕರಲ್ಲಿ ಎರಡು ಪಂಥ. ‘ನಮಗ್ಯಾಕೆ ಮಾರ್ರೆ!? ಈ ಆಸ್ತಿಕರು, ನಾಸ್ತಿಕರು, ಅವರ ಮಧ್ಯ ಸಿಕ್ಕಿಹಾಕಿಕೊಂಡಿರುವ ದೇವರು ಎಲ್ಲರೂ ಹಾಳಾಗಿ ಹೋಗಲಿ. ನಮಗೆ ಅದರ ಉಸಾಬರಿಯೇ ಬೇಡ’ ಎನ್ನುವವರು. ಹಾಗೂ ‘ಅದೂ ಸರಿ, ಇದೂ ಸರಿ!! ಹಾಗಿದ್ದರೆ ದೇವರಿದ್ದಾನೆಯೋ ಇಲ್ಲವೋ!? ಇದನ್ನೆಲ್ಲಾ ಯೋಚಿಸುತ್ತಿರುವ ನಾನು ಇದ್ದೇನೋ ಇಲ್ಲವೋ!? ನಾನು ಮತ್ತು ನನ್ನ ಆಲೇಚನೆಗಳು ಎರಡೂ ಒಂದೆಯೋ!? ಅಥವಾ ಬೇರೆಬೇರೆಯೋ!?’ ಅಂತಾ ತಲೆಕೆಡಿಸಿ ಹನ್ನೆರಡಾಣೆ ಮಾಡಿಕೊಂಡು, ಉಳಿದವರ ತಲೆಯನ್ನೂ ತಿನ್ನುವವರದ್ದು ಇನ್ನೊಂದು ಪಂಥ.

ಇಷ್ಟೆಲ್ಲಾ ಆದರೂ, ದೇವರಿದ್ದಾನೋ ಇಲ್ಲವೋ ಎಂಬುದು ಎಂದಿಗೂ ಬಗೆಹರಿಯಲಾಗದ ಒಗಟಾಗಿ ಕಂಡುಬರುತ್ತಿದೆ. ದೇವರ ಬಗ್ಗೆ ಇದುವರೆಗೂ ನಾವು ಕಂಡುಕೊಂಡಿರುವುದೆಲ್ಲಾ ಕ್ಷಣಿಕ ಸತ್ಯಗಳಷ್ಟೇ. ಸತ್ಯವಾದ ಸತ್ಯ ಸದಾ ನಮ್ಮಿಂದ ಎರಡು ಹೆಜ್ಜೆ ಮುಂದಿರುತ್ತದೆ. ಅದನ್ನು ಈ ಜೀವನದಲ್ಲಿ ಕಂಡುಕೊಳ್ಳುತ್ತೇವೆಯೋ ಇಲ್ಲವೋ ನನಗಂತೂ ಗೊತ್ತಿಲ್ಲ. ನಿಮಗೇನಾದರೂ ಗೊತ್ತಿದೆಯೇ!?

#ದಿನಕ್ಕೊಂದು_ವಿಷಯ, #ನಾಸ್ತಿಕವಾದ, #Atheism, #Arguments_Against_the_existence_of_God

 

No_God

ದಿನಕ್ಕೊಂದು ವಿಷಯ – ೧೨

ದಿನಕ್ಕೊಂದು ವಿಷಯ – ೧೨

“ಅವರಿವರನ್ನೆಲ್ಲಾ ಪೊರೆಯುವ ದೇವರಿಗೊಂದು ಇರುವಿಕೆಯಿದೆಯೇ?”

IS-THERE-A-GOD

ವಿಷಯ ಪ್ರಾರಂಭಿಸುವ ಮುನ್ನವೇ ಹೇಳಿಬಿಡುತ್ತೇನೆ. ಇಲ್ಲಿ ಬರೆದಿರುವುದು ಶತಮಾನಗಳಿಂದ ತತ್ವಶಾಸ್ತ್ರಜ್ಞರನ್ನು ಕಾಡಿದ ಪ್ರಶ್ನೆ ಹಾಗೂ ಅದಕ್ಕೆ ಅವರು ಕಂಡುಕೊಂಡ ಉತ್ತರಗಳೇ ಹೊರತು, ನನ್ನ ಅನಿಸಿಕೆಯಲ್ಲ. ಈ ಮಾಲಿಕೆಯ ಉದ್ಧೇಶವೂ ಸಹ, ನಮ್ಮ ಸುತ್ತಲಿರುವ ಜ್ಞಾನವನ್ನು ಹಂಚುವುದೇ ಹೊರತು, ನನ್ನ ಅಭಿಪ್ರಾಯವನ್ನು ನಿಮ್ಮ ಮೇಲೆ ಹೇರುವುದಲ್ಲ. Epistemologyಯ (ಜ್ಞಾನದ ಮೂಲ, ಪ್ರಕೃತಿ, ಮತ್ತು ಅದರ ವ್ಯಾಪ್ತಿಯನ್ನು ಅಧ್ಯಯನಮಾಡುವ ತತ್ವಶಾಸ್ತ್ರದ ಒಂದು ಶಾಖೆ, ಕನ್ನಡದಲ್ಲಿ ಬಹುಷಃ ಇದಕ್ಕೆ ಜ್ಞಾನಮೀಮಾಂಸೆ ಎನ್ನಬಹುದು) ಬೇರೆ ಬೇರೆ ಮೂಲೆಗಳಿಂದ ಪ್ರಭಾವಿತನಾಗಿ ನಾನು ಓದಿ ತಿಳಿದ ವಿಷಯಗಳಷ್ಟೇ ಇಲ್ಲಿ ಕಂಡುಬರುವುದು.

ಇವತ್ತಿನ ವಿಷಯ ಸ್ವಲ್ಪ ಸೂಕ್ಷ್ಮವಾದುದು. ಕೆಲವರಿಗೆ ಇದರ ಚರ್ಚೆಯೂ ಇಷ್ಟವಾಗಲಿಕ್ಕಿಲ್ಲ. ಅಂತವರು ಇದರಿಂದ ದೂರ ಉಳಿದರೇ ಒಳ್ಳೆಯದೇನೋ.

ಮನುಷ್ಯನ ಅಸ್ತಿತ್ವಕ್ಕೆ ಮೂಲಗಳನ್ನು ಹುಡುಕುತ್ತಾ ಹೋದರೆ, ಚಾರ್ಲ್ಸ್ ಡಾರ್ವಿನ್ನನ ಸಿದ್ಧಾಂತ ಹಾಗೂ ಗ್ರೆಗೊರ್ ಮೆಂಡಲನ ಸಿದ್ಧಾಂತ ವೈಜ್ಞಾನಿಕವಾಗಿ ಕೆಲ ಕುತೂಹಲಕಾರಿ ವಿಷಯಗಳನ್ನು ಪ್ರತಿಪಾದಿಸುತ್ತವೆ. ಆ ಸಿದ್ಧಾಂತಗಳು ಜೀವಶಾಸ್ತ್ರದ ಪರಿಮಿತಿಯಲ್ಲಿ ಸರಿಯಾಗಿ ಕಂಡುಬಂದರೂ ಸಹ, ಅದರಿಂದ ಹೊರಬಂದು ಜಗತ್ತಿನ ಅಸ್ತಿತ್ವದ ಬಗ್ಗೆ ಪ್ರಶ್ನಿಸಿದಾಗ ನಿರುತ್ತರವಾಗುವ ಸಂಧರ್ಭಗಳೇ ಹೆಚ್ಚು. ಈಗ ನಾವು ‘ಇಲ್ಲಿ’ ಇದ್ದೇವೆ ಅಂತಾದರೆ ‘ಇದನ್ನು’ ಸೃಷ್ಟಿಸಿದ್ದು ಯಾರು? ನಮ್ಮ ಅಸ್ತಿತ್ವ ‘ಕಣ(particle)’ರೂಪದಲ್ಲಿದೆಯೋ ಅಥವಾ ‘ಅಲೆ(wave)’ಗಳ ರೂಪದಲ್ಲಿದೆಯೋ!? ಇವನ್ನೆಲ್ಲಾ ನಿರ್ಧರಿಸಿದ್ದು ಯಾರು? ಇಂತಹ ಪ್ರಶ್ನೆಗಳು ನಮ್ಮೆಲ್ಲರನ್ನೂ ಕಾಡಿರಬಹುದು. ಇದನ್ನು ಸೃಷ್ಟಿಸಿದ್ದು ದೇವರೆಂದಾದರೆ, ಅವನನ್ನು ಸೃಷ್ಟಿಸಿದ್ದು ಯಾರು!? ಎಂಬ ಪ್ರಶ್ನೆಯೂ ಬರುತ್ತದೆ, ಹೌದು. ಆದರೆ, ಸಧ್ಯಕ್ಕೆ ಆ ಪ್ರಶ್ನೆಯ ಗೋಜಿಗೆ ಹೋಗುವುದು ಬೇಡ. ಯಾಕೆಂದರೆ, ಅದನ್ನು ಉತ್ತರಿಸುವ ಮುನ್ನ ನಾವು ಮೊದಲು ‘ದೇವರಿದ್ದಾನೋ? ಇಲ್ಲವೋ?’ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು. ಅವನಿಲ್ಲವೆಂದಾದ ಮೇಲೆ ‘ಅವನ ಸೃಷ್ಟಿ ಮಾಡಿದ್ದು ಯಾರು?’ ಎಂಬ ಪ್ರಶ್ನೆಯ ಅಗತ್ಯತೆಯೇ ಇಲ್ಲ, ಅಲ್ಲವೇ?

ಇದುವರೆಗೂ ದಾಖಲಿಸಲಾದ ತತ್ವಶಾಸ್ತ್ರದ ಚರ್ಚೆಗಳಲ್ಲಿ ದೇವರ ಅಸ್ತಿತ್ವವನ್ನು ಸಕಾರಾತ್ಮಕವಾಗಿ ಎತ್ತಿ ತೋರಿಸುವ ನಾಲ್ಕು ಮುಖ್ಯ ವಾದಗಳು ಇಲ್ಲಿವೆ.

(೧) ವಿಶ್ವವಿಜ್ಞಾನ ವಾದ (The Cosmological Argument): ಈ ವಾದದ ಪ್ರಕಾರ ನಮ್ಮ ಸುತ್ತಮುತ್ತ ನಡೆಯುವ ಎಲ್ಲಾ ಕ್ರಿಯೆಗಳಿಗೂ ಕಾರಣವಿದೆ. ಹಾಗೂ ಎಲ್ಲದ್ದಕ್ಕೂ ಮೂಲವಾಗಿ ‘ಮೊದಲ ಕಾರಣ’ವಾಗಿ ದೇವರು ಉಳಿದುಕೊಳ್ಳುತ್ತಾನೆ. ಅವನನ್ನು ನಿರಾಕರಿಸಿದರೆ, ಯಾವ ಕ್ರಿಯೆಗಳೂ ಅಥವಾ ಕಾರಣಗಳೂ ಉಳಿಯುವುದಿಲ್ಲ. ಹಾಗಾಗಿ ದೇವರಿದ್ದಾನೆ.

ತತ್ವಶಾಸ್ತ್ರದಲ್ಲಿ ‘ನಿರ್ಧಾರವಾದ’ (Determinism) ಎಂಬ ಆಲೋಚನಾಶಾಖೆಯಿದೆ. ಅದರ ಪ್ರಕಾರ ಜಗತ್ತಿನಲ್ಲಿ ನಡೆಯುವ ಎಲ್ಲಾ ಕ್ರಿಯೆಗಳಿಗೂ ಒಂದು ಕಾರಣವಿದೆ. ಇದನ್ನು ‘ಮೂಲಕಾರಣ ಸಿದ್ಧಾಂತ’ ಎಂದೂ ಕರೆಯುತ್ತಾರೆ. ಈಗ ನೀವಿದನ್ನು ಓದುತ್ತಿರುವುದಕ್ಕೆ, ನಾನು ಬರೆದದ್ದು ಕಾರಣ. ನಾನು ಬರೆದದ್ದಕ್ಕೆ ನಾನು ಇರುವುದು ಕಾರಣ. ನಾನಿರುವುದಕ್ಕೆ…….ಹೀಗೇ ಸಮಯದಲ್ಲಿ ಹಿಂದೆ ಹೋಗುತ್ತಾ, ಈ ಸಿದ್ಧಾಂತ ಪ್ರತಿಯೊಂದಕ್ಕೂ ಕಾರಣವಿದೆ ಎಂದು ಪ್ರತಿಪಾದಿಸುತ್ತದೆ. ಕೆಲವಿಜ್ಞಾನಿಗಳು ಇದನ್ನು ತಪ್ಪೆಂದು ಸಾಧಿಸಲು ‘ಮಹಾಸ್ಪೋಟ ಸಿದ್ಧಾಂತ (Big Bang Theory)’ಯನ್ನು ಉಪಯೋಗಿಸಲು ಪ್ರಯತ್ನಿಸಿದರು. ಅವರ ಪ್ರಕಾರ ಇಡೀ ಜಗತ್ತು ಒಂದು ಮಹಾಸ್ಪೋಟದಿಂದ ಹುಟ್ಟಿತು. ಅದಕ್ಕೆ ಮುಂಚೆ ‘ಏನೂ ಇರಲಿಲ್ಲ’, ಸಮಯವೂ ಸಹ ಇರಲಿಲ್ಲ. ಹಾಗಾಗಿ ದೇವರಿರಲು ಸಾಧ್ಯವಿಲ್ಲ. ಇದ್ದರೆ, ಅವನು ವಯಸ್ಸಿನಲ್ಲಿ ಮಹಾಸ್ಪೋಟಕ್ಕಿಂತ ಚಿಕ್ಕವನು. ಆದ್ದರಿಂದ ಅವನು ಮೂಲಕಾರಣವಾಗಲು ಸಾಧ್ಯವಿಲ್ಲೆಂದು ಪ್ರತಿಪಾದಿಸಿದರು. ಇಂದು, ವಿಜ್ಞಾನವೇ ಅವರ ಮಾತನ್ನು ಸುಳ್ಳು ಮಾಡಿದೆ. ಇತ್ತೀಚಿನ ಥಿಯರಿಗಳ ಪ್ರಕಾರ, ಜಗತ್ತು ಸ್ಪೋಟದ ನಂತರ ಬಲೂನಿನಂತೆ ಹಿಗ್ಗುತ್ತಿದೆ, ಹೌದು. ಆದರೆ ಒಂದು ಸಮಯದ ನಂತರ, ಹಿಗ್ಗುವುದು ನಿಂತು ಕುಗ್ಗಲು ಪ್ರಾರಂಭಿಸುತ್ತಿದೆ. ಕೊನೆಗೊಂದು ಮಹಾಕುಸಿತ (ಪದಬಳಕೆಗೆ ಕ್ಷಮೆ ಇರಲಿ, The Big Crunchಗೆ ಬೇರೆ ಪದ ಸಿಗುತ್ತಿಲ್ಲ) ಉಂಟಾಗಲಿದೆ. ಇದನ್ನೇ ಮುಂದುವರಿಸಿ ‘ಎನ್ರಿಕೋ ಫರ್ಮಿ’ ತನ್ನ ಫರ್ಮಿ ಪ್ಯಾರಾಡಕ್ಸ್ ಅನ್ನು ಮಂಡಿಸಿದ. ಅದರ ಪ್ರಕಾರ ಜಗತ್ತಿನಲ್ಲಿ ಇದಕ್ಕೂ ಮುಂಚೆ ಬಹಳ ಬಾರಿ ಮಹಾ ಕುಸಿತ ಹಾಗೂ ಮಹಾ ಸ್ಪೋಟಗಳು ಉಂಟಾಗಿವೆ. ಅದೊಂದು ನಿರಂತರ ಪ್ರಕ್ರಿಯೆ ಎಂದು ಹೇಳುತ್ತಾನೆ. ಹಾಗಾಗಿ ದೇವರೇ ಜಗತ್ತಿಗೆ ಮೂಲಕಾರಣವಲ್ಲ ಎಂಬ ವಾದವನ್ನು ಬಿಗ್ ಬ್ಯಾಂಗ್ ಸಿದ್ಧಾಂತದಿಂದ ಮುಚ್ಚಲು ಸಾಧ್ಯವಿಲ್ಲ.

ಆದರೆ, ಈ ವಿಶ್ವವಿಜ್ಞಾನ ವಾದಕ್ಕೊಂದು ಸಣ್ಣ ಕೊಸರಿದೆ. ಅದೇನೆಂದರೆ, ಕ್ರಿಯೆಗಳಿಗೆ ಕಾರಣದ ಕಂಬ ಕೊಟ್ಟು ನಿಲ್ಲಿಸುವುದು ಕೇವಲ ‘ನೋಡಬಹುದಾದ ವಿಶ್ವದ, ನೋಡಬಹುದಾದ ಸಂಗತಿಗಳಿಗೆ’ ಮಾತ್ರ ಸಾಧ್ಯ. ಮಾನವನ ಅನುಭವಕ್ಕೆ ಬಾರದ ಎಷ್ಟೋ ವಿಷಯಗಳು ಅವನ ಸುತ್ತಮುತ್ತಲೇ ನಡೆಯುತ್ತವೆ. ಅಲ್ಲೆಲ್ಲಾ ಇದು ನಿರುತ್ತರವಾಗುತ್ತದೆ. ನಮ್ಮ ಗ್ರಹಣಶಕ್ತಿ ಬಹಳ ಸೀಮಿತ. ಇನ್ಪ್ರಾರೆಡ್ ಹಾಗೂ ಅಲ್ಟ್ರಾವಯೋಲೆಟ್ ಕಿರಣಗಳಿಂದ ಆಚೆ ನೊಡಲಾರೆವು, ಸಬ್-ಸಾನಿಕ್ ಹಾಗೂ ಸೂಪರ್ ಸಾನಿಕ್ ಶಬ್ದಗಳನ್ನು ಕೇಳಲಾರೆವು, ಒಂದಿಪ್ಪತ್ತು ತರಹದ ವಾಸನೆಯನ್ನಷ್ಟೇ ಮೂಸಬಲ್ಲೆವು. ಹೀಗೇ, ನಮ್ಮ ಗ್ರಹಿಕೆಯಿಂದ ಆಚೆ ಇರುವ ವಿಶ್ವದಲ್ಲಿ ವಿಶ್ವವಿಜ್ಞಾನ ವಾದದ ಬುಡ ಗಟ್ಟಿಯಾಗಿ ನಿಲ್ಲುವುದಿಲ್ಲ.

(೨) ವಿಶ್ವ ವಿನ್ಯಾಸ ವಾದ (The Argument from Design): ಈ ವಾದದ ಪ್ರಕಾರ ಜಗತ್ತು ಇಷ್ಟೊಂದು ಕ್ಲಿಷ್ಟವಾಗಿರುವುದರಿಂದ, ಇದು ತಂತಾನೇ ಸೃಷ್ಟಿಯಾಗುವುದು ಸಾಧ್ಯವಿಲ್ಲ. ಇದನ್ನು ಸೃಷ್ಟಿಸಲು ಒಂದು ಸರ್ವಜ್ಞನಾದ, ಸರ್ವಶಕ್ತನಾದ ವಿನ್ಯಾಸಕಾರನ ಅಗತ್ಯವಿದೆ. ಆತನನ್ನು ದೇವರೆಂದು ಕರೆಯಬಹುದು. [ಅದಕ್ಕೇ ಹಿಂದೂ ದೇವತೆಯಾದ ಬ್ರಹ್ಮನಿಗೆ ನಾಲ್ಕು ತಲೆಯ ಚಿತ್ರಣ. ಹಿಂದೂ ಧರ್ಮ ಪುರಾಣದ ಪ್ರಕಾರ ಜಗತ್ತನ್ನು ಸೃಷ್ಟಿಸಿದ್ದು ಆತನಾದ್ದರಿಂದ, ಒಂದು ತಲೆಯಿರುವವನು ಇಷ್ಟು ಕ್ಲಿಷ್ಟ ಜಗತ್ತನ್ನು ನಿರ್ಮಿಸಲು ಸಾಧ್ಯವಿಲ್ಲವಾದ್ದರಿಂದ, ಅವನಿಗೆ ನಾಲ್ಕು ತಲೆ. ದೇವರು ನಮಗಿಂತಾ ಶಕ್ತಿಶಾಲಿ ಅಂತಾದರೆ, ಅದೂ ಅವನು ‘ನಮ್ಮೆಲ್ಲರನ್ನೂ’ ರಕ್ಷಿಸುತ್ತನೆ ಎಂದಾದರೆ ಅವನಿಗೆ ಎರಡು ಕೈಯಲ್ಲಿ ಹೇಗೆ ಅದೆಲ್ಲಾ ಮಾಡಲು ಸಾಧ್ಯ. ಹಾಗಾಗಿಯೇ ಹಿಂದೂ ದೇವತೆಗಳಿಗೆ ಎರಡಕ್ಕಿಂತಾ ಹೆಚ್ಚು ಕೈಗಳು.]

ಈ ವಾದ ಮೇಲಿನ ವಿರುದ್ಧ ದಿಕ್ಕಿಗೆ ಸಾಗಿ ‘ಜಗತ್ತಿನಲ್ಲಿರುವುದಕ್ಕೆಲ್ಲ ಒಂದು ಉದ್ಧೇಶವಿದೆ’ ಎಂದು ಪ್ರತಿಪಾದಿಸುತ್ತದೆ. ಕಾರಣವೆಂಬುದು ಹಿಂದೆ ನೋಡಿದಂತೆ, ಉದ್ಧೇಶ ಮುಂದೆ ನೋಡಿದಂತೆ ಅಲ್ಲವೇ?

(೩) ಸತ್ತೀಯವಾದ (The Ontological Argument): ಈ ವಾದದ ಪ್ರಕಾರ “ದೇವರು ಎಂದರೆ ‘ಯಾವುದಕ್ಕಿಂತ ಮೇಲೆ/ಅಥವಾ ಮುಂದೆ ಬೇರೆನನ್ನೂ ಊಹಿಸಲು/ರೂಪಿಸಲು ಸಾಧ್ಯವಿಲ್ಲವೋ ಅವನು’ ಎಂದಾದರೆ ಅವನಿರಲೇಬೇಕು”. ದೇವರ ಭೌತಿಕ ಇರುವಿಕೆಯನ್ನು ಪ್ರಶ್ನಿಸುವುದು ಮೂರ್ಖತನ. ಬದಲಿಗೆ ದೇವರನ್ನು ತಾರ್ಕಿಕವಾಗಿ ಕಾಣುವುದು ಹೆಚ್ಚು ಸೂಕ್ತ. ದೇವರ ಇರುವಿಕೆಯನ್ನು ಪ್ರಶ್ನಿಸುವುದು ‘ನಾಲ್ಕು ಬದಿಗಳಿರುವ ತ್ರಿಕೋನವನ್ನು ಬರೆದಷ್ಟೇ ಕಷ್ಟ’. ಹಾಗೂ ಆ ಇರುವಿಕೆಯನ್ನು ತಿಳಿಯಲು ನಾವೂ ಕೂಡ ಆ ಮಟ್ಟಕ್ಕೇರಬೇಕು ಎನ್ನುತ್ತದೆ. ರೆನೆ ಡೆಸ್ಕಾರ್ಟೆಸ್ ಇದೇ ವಾದದ ಬಗ್ಗೆ ಮಾತನಾಡುತ್ತಾ ‘ನಾನು ಯೋಚಿಸುತ್ತೇನೆ……ಆದ್ದರಿಂದ ನಾನು ಇದ್ದೇನೆ (I think……therefore I AM)’ ಅಂತಾ ಹೇಳಿದ್ದು

(೪) ನೈತಿಕ ವಾದ (The Moral Argument): “ನೈತಿಕತೆಯೆನ್ನುವುದು ಇದೆ. ಒಳ್ಳೆಯದು ಇರಬೇಕು, ಉಳಿಯಬೇಕು ಎನ್ನುವ ಆಲೋಚನೆಯಿಲ್ಲದ ದೇವರಿಲ್ಲದೆ, ಒಳ್ಳೆಯತನ ಎಂಬುದು ಜಗತ್ತಿನಲ್ಲಿ ಉಳಿಯುವುದು ಸಾಧ್ಯವಿಲ್ಲ. ಇಲ್ಲವಾದಲ್ಲಿ, ಮಾನವನ ವಿಕಾಸದ ಇಷ್ಟು ವರ್ಷಗಳಲ್ಲಿ ಕೆಟ್ಟದ್ದು ಎಂಬುದು ಜಗತ್ತನ್ನು ಖಂಡಿತಾ ಆವರಿಸಿಬಿಡುತ್ತಿತ್ತು” ಎನ್ನುವುದು ಈ ವಾದದ ನೆಲೆಗಟ್ಟು. ಈ ವಾದವನ್ನು ವಿಶ್ಲೇಷಿಸಿದಾಗ ಸ್ವರ್ಗ, ನರಕ, ರಾಕ್ಷಸೀ ಪ್ರವೃತ್ತಿ ಮುಂತಾದುವುಗಳ ಅನಾವರಣವಾಗುತ್ತಾ ಹೋಗುತ್ತದೆ.

(ಇಲ್ಲಿ ದೇವರ ರೆಫರೆನ್ಸಿನಲ್ಲಿ ಉಪಯೋಗಿಸಿರುವ ಪುಲ್ಲಿಂಗ ಶಬ್ದಗಳು ಬರೀ generic ಆಗಿ ಬಳಸಿದ್ದಷ್ಟೇ. ದೇವರಿಗೆ ಲಿಂಗವನ್ನು ಆರೋಪಿಸುವುದು, ತೀರಾ ಅಪಕ್ವವಾದ ಆಲೋಚನೆ 🙂 )

ಇವಿಷ್ಟು ‘ದೇವರು ಇದ್ದಾನೆ’ ಎಂಬುದಕ್ಕೆ ಪೂರಕವಾಗಿ ನಿಲ್ಲುವ ವಾದಗಳು. ದೇವರೆಲ್ಲಿದ್ದಾನೆ? ನನಗೆ ತೋರಿಸಿ? ನೀವು ನೊಡಿದ್ದೀರಾ? ಬ್ರಹ್ಮನಿಗೆ ನಾಲುತಲೆಯಾದರೆ ಅವನು ಮಲಗುವುದು ಹೇಗೆ!? ಒಳ್ಳೆಯವರಿಗೆ ಕಷ್ಟವೇಕೆ ಬರುತ್ತದೆ? ಪಾಪ ಎಂದರೇನು? ಇಂತಾ ಪ್ರಶ್ನೆಗಳೆಲ್ಲಾ ತೀರಾ ತಳಮಟ್ಟದ್ದು. ಅವನ್ನು ಬಿಟ್ಟು, ಬೇರೆ ಏನಾದರೂ ಚರ್ಚೆಗಳಿದ್ದರೆ ಕೆಳಗೆ ಕಮೆಂಟುಗಳಲ್ಲಿ ಮಾಡೋಣ.

ಕೊಸರು:

“ಮನುಷ್ಯರ ಜಗತ್ತಿನಲ್ಲಿ ದೇವರಿಗೂ ಮನುಷ್ಯರ ತರಾನೇ ಕೈ ಕಾಲು ತಲೆ ಎಲ್ಲಾ ಇದ್ಯಂತೆ. ಹಾಗಾದರೆ ಅಳಿಲು, ಜಿಂಕೆ, ಮೀನು, ಬೆಕ್ಕುಗಳ ಜಗತ್ತಿನಲ್ಲಿ ದೇವರು ಹೇಗಿರ್ತಾರೆ ಅಂತಾ?” ಒಬ್ಬ ಕೇಳಿದ್ನಂತೆ

ಅದಕ್ಕೆ ಇನ್ನೊಬ್ಬ, “ಹೌದಲ್ವಾ!? ನೀನೀಗ ಇದು ಹೇಳಿದ ನಂತರ. ನನಗೀಗ, ಬುದ್ಧಿಜೀವಿಗಳ ಜಗತ್ತಿನಲ್ಲಿ ದೇವರು ಹೇಗಿರ್ತಾನೆ!!? ಅಂತಾ ಈಗ ಯೋಚ್ನೆ ಶುರುವಾಯ್ತು” ಅಂದ್ನಂತೆ.

#ದಿನಕ್ಕೊಂದು_ವಿಷಯ, #Existence_of_God

ದಿನಕ್ಕೊಂದು ವಿಷಯ – ೧೧

ದಿನಕ್ಕೊಂದು ವಿಷಯ – ೧೧

“ಯಮನನ್ನೇ ಗೆದ್ದ ಯಾಮಾಗುಚಿ”

ನಮ್ಮಲ್ಲಿ ಒಂದು ಮಾತಿದೆ ‘ಪಾಪಿ ಚಿರಾಯು’ ಅಂತಾ. ಇದರ ಮೂಲ ಎಲ್ಲಾ ನಂಗೊತ್ತಿಲ್ಲಾ. ನಾನು ಇದನ್ನು ಕಲಿತಿದ್ದು ರವಿ ಬೆಳಗೆರೆಯವರಿಂದ. ನಾನು ಈ ಮಾತನ್ನು ಯಾರ ಹತ್ರನೂ ವಿವರವಾಗಿ ಚರ್ಚಿಸಿಲ್ಲ. ಆದರೆ ಮೇಲ್ನೋಟಕ್ಕೆ ಕಂಡುಬಂದಂತೆ ಇದರರ್ಥ ‘ಪಾಪಿಗಳಿಗೆ ಸಾವಿಲ್ಲ’ ಅಂತಾ. ತಪ್ಪಿದ್ದರೆ ತಿಳಿಸಿ. ಆದರೆ, ಒಮ್ಮೆ ಯೋಚಿಸಿ ನೋಡಿ. ಪಾಪಿಗೆ ಸಾವಿಲ್ಲವೇ!? ‘ಜೀವನ ಅತ್ಯಮೂಲ್ಯ’ ಅಂತಾ ಆದ ಮೇಲೆ, ಸಾಯದೇ ಬದುಕುಳಿದವ ಪುಣ್ಯವಂತಾ ಅಲ್ವೇ!? ಏನೋಪ್ಪಾ! ಮೊನ್ನೆ ನಾನು ಹೇಳಿದ ‘ಜೌರ್ಡಿಯನ್ ಪಾರಡಕ್ಸ್’ನ ಅನ್ಯೋನ್ಯಾಶ್ರಯ ದೋಷದಂತೆ ಇದೆ ಈ ಪಾಪಿ, ಪುಣ್ಯವಂತರ ಲೆಕ್ಕಾಚಾರ. ಪಾಪಿ ಅಂತಾ ಶುರುಮಾಡಿ ಪುಣ್ಯವಂತ ಅನ್ನುವಲ್ಲಿಗೆ ಬಂತು 😛

ಸಾವನ್ನು ವಂಚಿಸಿ ಬದುಕುಳಿದವರ ಬಗೆ ಸದಾ ಗೌರವವಿದೆ. ಅದ್ಯಾರೋ ರಾಯ್ ಸಲ್ಲಿವಾನ್ ಎಂಬ ಪುಣ್ಯಾತ್ಮನೊಬ್ಬ ಏಳು ಬಾರಿ ಸಿಡಿಲು ಹೊಡೆಸಿಕೊಂಡೂ ಬದುಕಿದ್ದಾನಂತೆ (ಪಾಪ ಅದೆಷ್ಟು ಬಾರಿ ಮದುವೆಯಾಗಿದ್ದನೋ ಏನೋ! ಹಾಗಾಗಿ ಮತ್ತೆ ಮತ್ತೆ ಸಿಡಿಲುಬಡಿದರೂ ಕಮಕ್-ಕಿಮಕ್ ಎನ್ನದೇ ಬದುಕುಳಿದಿದ್ದಾನೆ). ಅವನ ಬಗ್ಗೆ ಓದಿ ನನಗೆ ‘ಇವನಪ್ಪಾ ನಿಜವಾದ ಧೈರ್ಯಶಾಲಿ’ ಅಂದ್ಕೊಂಡಿದ್ದೆ.
ಕ್ಯಾನ್ಸರ್ ಗೆದ್ದು ಬರುವವರ ಮೇಲೂ ಸಹ ನನಗೆ ಬಹಳ ಗೌರವವಿದೆ. ಯಾಕೆಂದರೆ, ಕ್ಯಾನ್ಸರ್ಗಿಂತಲೂ ಅದಕ್ಕೆ ಕೊಡಲಾಗುವ ಚಿಕಿತ್ಸೆಯಿದೆಯಲ್ಲ, ಅದು ನರಕಕ್ಕಿಂತಲೂ ಹೆಚ್ಚು ಯಾತನಾಮಯ. ಕೀಮೋಥೆರಪಿಯ ಜೀವಹಿಂಡುವ ನೋವು, ಅನುಭವಿದವರಿಗೇ ಗೊತ್ತು. ಎಷ್ಟೋ ಜನ ಕ್ಯಾನ್ಸರ್ಗೆ ತುತ್ತಾದವರು, ರೋಗಕ್ಕಿಂತ ಹೆಚ್ಚಾಗಿ, ಆ ನೋವಿಗೇ ಖಿನ್ನತೆಗೊಳಗಾಗಿ, ಬದುಕುವ ಆಸೆ ಬಿಟ್ಟು ಬಿಡುತ್ತಾರೆ. ಆ ಸಮಯಕ್ಕೇ ಅಂತಲೇ ಕಾಯುತ್ತಿರುವ ಸಾವು ಹಾಗೇ ಹೆಗಲೇರಿ ಕುಳಿತುಬಿಡುತ್ತದೆ.
ವಿಮಾನ ಅಪಘಾತವೊಂದರಲ್ಲಿ ಸರಿಸುಮಾರು ಮೂರುಕಿಲೋಮೀಟರ್ ಕೆಳಗೆ ಬಿದ್ದ ಜೂಲಿಯನ್ ಕೊಯೆಪ್ಕೆ (Juliane Koepcke), ಎರಡನೇ ಮಹಾಯುದ್ಧದಲ್ಲಿ 18,000 ಅಡಿಯಿಂದ ಬಿದ್ದೂ ಬದುಕುಳಿದ ಗನ್ನರ್ ನಿಕೊಲಸ್ ಅಲ್ಕೆಮೇಡ್ (Nicholas Alkemade), 22,000 ಅಡಿಯಿಂದ ವಿಮಾನದಿಂದ ಹಾರಿ ಬದುಕಿದ ಅಲನ್ ಮ್ಯಾಗೀ (Alan Magee) ಎಂಬ ಏರ್ಮ್ಯಾನ್, 23,000ಅಡಿಯಲ್ಲಿ ವಿಮಾನಕ್ಕೆ ಬೆಂಕಿಬಿದ್ದಾಗ, ಬೆಂಕಿಯಲ್ಲಿ ಉರಿದು ಸಾಯುವುದಕ್ಕಿಂತಾ ನೆಲಕ್ಕಪ್ಪಳಿಸಿ ಒಂದೇ ಬಾರಿಗೆ ಸಾಯುವುದೇ ಮೇಲು ಎದು ನಿರ್ಧರಿಸಿ ಹಾರಿ ಬದುಕುಳಿದ ಇವಾನ್ ಮಿಖಾಯ್ಲೋವಿಚ್ ಚಿಸ್ಸೋವ್ (Ivan Mikhailovich Chisov)ನ ಕಥೆಗಳನ್ನೆಲ್ಲಾ ಓದಿ ತಲೆಯೆಲ್ಲಾ ಗಿರ್ರೆಂದಿತ್ತು ನನಗೆ. ಇವರೆಲ್ಲಾ ಮಿಲಿಟರಿಯವರು, ಗಟ್ಟಿಮುಟ್ಟಾಗಿದ್ದರು ಎಂದುಕೊಳ್ತೀರಾ!? 1972ರಲ್ಲಿ ಪ್ಯಾರಾಚೂಟ್ ಕೂಡ ಇಲ್ಲದೇ 33,000 ಅಡಿಯಿಂದ ಬಿದ್ದೂ ಬದುಕುಳಿದ ವೆಸ್ನಾ ವುಲೋವಿಕ್ (Vesna Vulović) ಎಂಬ ಗಗನಸಖಿಯ ಕಥೆಯನ್ನು ಕೇಳಿ ಕುರ್ಚಿಯಿಂದ ಕೆಳಗೇ ಬಿದ್ದು ಬಿಟ್ಟಿದ್ದೆ!

ಸಿಡಿಲಾಯಿತು, ರೋಗಗಳಾಯಿತು, ವಿಮಾನದಿಂದ ಬಿದ್ದದ್ದಾಯಿತು. ಇನ್ಯಾವುದರಲ್ಲಿ ಸಾವನ್ನು ವಂಚಿಸುತ್ತೀರ!? ಅಣುಬಾಂಬಿನಿಂದ!? ಅದರಿಂದರೂ ಬದುಕುಳಿದವನೊಬ್ಬನ ಕಥೆಯಿದೆ ಎಂದರೆ ನಂಬುತ್ತೀರಾ!? ಓಕೆ…ಓಕೆ ಹುಬ್ಬು ಕೆಳಗಿಳಿಸಿ. ಮುಖ್ಯ ವಿಷಯ ಅದಲ್ಲ. ಆತ ಒಂದಲ್ಲ ಎರಡು ಅಣುಬಾಂಬ್ ಸ್ಪೋಟಗಳಿಂದ ಬಚಾವಾಗಿದ್ದಾನೆ!!! ಓಕೆ ಈಗ ನೀವು ಹುಬ್ಬು ಮತ್ತೆ ಮೇಲೇರಿಸಬಹುದು….ಪರವಾಗಿಲ್ಲ 🙂

ಅಣುಬಾಂಬಿನಿಂದ ಬಚಾವಾಗುವುದು ಸುಲಭವಲ್ಲ. ಅದು ಬಿದ್ದ ಕ್ಷಣವೇ ಉಂಟಾಗುವ ಮೊದಲ ಶಾಕ್ ಅಲೆಯಿಂದಲೇ, ಸ್ಪೋಟಕೇಂದ್ರದಿಂದ (ಇದನ್ನು ಬಾಂಬಿಂಗಿನ ಪರಿಭಾಷೆಯಲ್ಲಿ Ground Zero ಅಂತಾರೆ) 2 ಕಿಲೋಮೀಟರ್ ಸುತ್ತಳತೆಯಲ್ಲಿರುವ ಮನುಷ್ಯರೆಲ್ಲಾ ಛಿದ್ರವಿಛ್ಛಿದ್ರವಾಗುತ್ತಾರೆ. ಅಲ್ಲಿ ಅಕಸ್ಮಾತ್ ಬದುಕುಳಿದಿರೋ, ಮರುಕ್ಷಣದಲ್ಲೇ ಬರುವ ಸ್ಪೋಟದ ಶಾಖಕ್ಕೆ, 3 ಕಿಲೋಮೀಟರ್ ಸುತ್ತಳತೆಯಲ್ಲಿರುವ ಎಲ್ಲಾ ವಸ್ತುಗಳು ಉರಿದು ಆವಿಯಾಗುತ್ತವೆ. ಆದರೆ ಈ ಮನುಷ್ಯ ಬದುಕುಳಿದ. ಇವನ ಹೆಸರು ತ್ಸುತೋಮು ಯಾಮಾಗುಚೀ (Tsutomu Yamaguchi). ಎರಡನೇ ಮಹಾಯುದ್ಧದಲ್ಲಿ ಹಿರೋಶಿಮಾ ಮತ್ತು ನಾಗಾಸಾಕಿ ಎರಡೂ ನಗರಗಳ ಮೇಲೆ ಬಿದ್ದ ಎರಡೂ ಬಾಂಬುಗಳಿಂದ ಬಚಾವಾದ ಏಕೈಕ ವ್ಯಕ್ತಿ ಈತ.

ನಾಗಾಸಾಕಿಯಲ್ಲಿದ್ದ ಮಿತ್ಸುಬಿಷಿಯ ಕಚೇರಿಯಲ್ಲಿ ಕೆಲಸ ಮಾಡುತ್ತಾ ಜೀವನ ನಡೆಸುವ ಈ ಯಾಮಾಗುಚಿ, ಮೂರು ತಿಂಗಳ ಕಾಲ ಕಂಪನಿಯ ಕೆಲಸಕ್ಕಾಗಿ ಹಿರೋಶಿಮಾಕ್ಕೆ ಬಂದಿದ್ದ. ಆಗಸ್ಟ್ 6, 1945 ಹಿರೋಶಿಮಾದಲ್ಲಿ ಅವನ ಕೆಲಸದ ಕೊನೆಯ ದಿನ. ಅವತ್ತು ತನ್ನ ಕೆಲಸ ಮುಗಿಸಿ ನಾಗಾಸಾಕಿಗೆ ಹೊರಡಲುನುವಾಗಿ ಬಂದರಿನ ಕಡೆ ಹೊರಟವನಿಗೆ, ತನ್ನ ‘ಹಾನ್ಕೋ'(ಪ್ರಯಾಣಕ್ಕೆ ಅಗತ್ಯವಾಗಿ ಬೇಕಾದ, ಕೆಲಸದ ಕಂಪನಿಯಿಂದ ಕೊದಲಾಗುವ ಒಂದು ಸೀಲು ಮಾಡಿದ ಕಾಗದ)ವನ್ನು ಆಫೀಸಿನಲ್ಲೇ ಮರೆತುಬಿಟ್ಟು ಬಂದಿದ್ದು ಗೊತ್ತಾಯ್ತು. ಜೊತೆಗಿದ್ದ ಇಬ್ಬದು ಸ್ನೇಹಿತರಿಗೆ ಮುಂದುವರಿಯಲು ಹೇಳಿ ತಾನು ಆಫೀಸಿಗೆ ಹೋಗಿ, ಕಾಗದಪತ್ರವನ್ನು ತೆಗೆದುಕೊಂಡು ಬಂದರಿನ ಕಡೆಗೆ ಒಂದು ಹತ್ತು ಹೆಜ್ಜೆ ಹಾಕಿದ್ದನಷ್ಟೇ. ದೂರದಲ್ಲಿ ಅವನಿಗೆ ಎನೋಲಾ ಗೇ ಬಾಂಬರ್ ವಿಮಾನವೂ, ಅದರಿಂದ ಕೆಳಗಿಳಿಯುತ್ತಿದ್ದ ‘ಲಿಟ್ಲ್ ಮ್ಯಾನ್’ ಅಣುಬಾಂಬಿನ ಎರಡು ಪ್ಯಾರಾಚೂಟುಗಳೂ ಕಂಡವು. ಅದೇನೆಂದು ಕುತೂಹಲದಿಂದ ನೋಡುವಷ್ಟರಲ್ಲೇ ‘ಆಕಾಶದಲ್ಲಿ ಒಂದು ಕಣ್ಣು ಕೋರೈಸುವ ಬೆಳಕು ಕಂಡುಬಂತು, ಹಾಗೂ ತನ್ನನ್ನು ತೆಗೆದೆಸೆದ ಅನುಭವವಾಯ್ತು’ ಅಂತಾ ಯಾಮಾಗುಚಿ ಹೇಳುತ್ತಾನೆ. ಆತ ಸ್ಪೋಟದ 3 ಕಿ.ಮೀ. ವ್ಯಾಪ್ತಿಯ ಹೊರಗಿದ್ದಿದ್ದರಿಂದ ಬಚಾವಾದ. ಹಾಗಂತ, ಕೂದಲೇ ಕೊಂಕಲಿಲ್ಲವೆಂದೇನಲ್ಲ. ಸ್ಪೋಟದ ಸದ್ದಿಗೆ ಆತ ಸಂಪೂರ್ಣ ಕಿವುಡನಾದ, ಆ ಬೆಳಕಿನಿಂದಾಗಿ ತಾತ್ಕಾಲಿಕವಾಗಿ ಮೂರು ಘಂಟೆಗಳ ಕಾಲ ಕುರುಡನೂ ಆದ, ದೇಹದ ಮೇಲ್ಬಾಗದ ಎಡಬದಿಯೆಲ್ಲಾ ಸುಟ್ಟ ಗಂಭೀರ ಗಾಯಗಳಾದವು. ಇಷ್ಟಾದರೂ ಆತ ಮುಂದೆ ಓಡಿ ತನ್ನ ಸ್ನೇಹಿತರಿಗಾಗಿ ಹುಡುಕಿದ. ಎಲ್ಲೆಲ್ಲೋ ಹುಡುಕಿದ ಮೇಲೆ ಅವರಲ್ಲಿ ಇಬ್ಬರು ಬದುಕಿದ್ದರೆಂಬ ವಿಷಯ ತಿಳಿದು, ಅವರನ್ನು ಹುಡುಕಿ, ರಾತ್ರಿಯೆಲ್ಲಾ ಅವರೊಂದಿಗೇ ಕಳೆದ. ಹಿರೋಷಿಮಾದ ಆಸ್ಪತ್ರೆಗಳಲ್ಲಿ ಜಾಗವಿಲ್ಲದ್ದರಿಂದ, ಮರುದಿನ ಅವರನ್ನೆಲ್ಲಾ ಹಡಗು ಹತ್ತಿಸಿ ನಾಗಾಸಾಕಿಗೆ ಕಳಿಸಲಾಯ್ತು. ಅಲ್ಲಿ ಅವನಿಗೆ ಪೂರ್ಣಪ್ರಮಾಣದ ಚಿಕಿತ್ಸೆಯನ್ನೂ ಕೊಡಲಾಯ್ತು. ಅಷ್ಟು ಗಾಯಗಳ ನಡುವೆಯೂ, ಬ್ಯಾಂಡೇಜ್ ಸುತ್ತಿಕೊಂಡೇ, ಈ ಮಹಾರಾಯ ಆಗಸ್ಟ್ 9ರಂದು ಕೆಲಸಕ್ಕೆ ಹಾಜರಾದ.

ಅವತ್ತು ಬೆಳಗ್ಗೆ ಸುಮಾರು ಹನ್ನೊಂದು ಘಂಟೆಗೆ, ತನ್ನ ಮೇಲಧಿಕಾರಿಗೆ ಹಿರೋಶಿಮಾದ ಘಟನೆ ವಿವರಿಸುತ್ತಿದ್ದಾಗಲೇ (ಇದು ತಮಾಷೆಯಾಗಿ ಕಂಡರೂ ಸಹ, ನಿಜ), ಅಮೇರಿಕಾದ ‘ಬಾಕ್ಸ್ಕಾರ್’ ಯುದ್ಧವಿಮಾನ, ಎರಡನೇ ಅಣುಬಾಂಬ್ ‘ಫ್ಯಾಟ್-ಮ್ಯಾನ್’ ಅನ್ನು ನಾಗಾಸಾಕಿಯ ಮೇಲೆ ಹಾಕಿತು. ಈ ಸಲವೂ ಸಲ ಬಾಂಬ್ ಸ್ಪೋಟದ ಕೇಂದ್ರದಿಂದ 3 ಕಿ.ಮೀ ಹೊರಗಿದ್ದ ಯಮಾಗುಚಿ ಬದುಕುಳಿದ. ಯಾವ ಹೊಸಗಾಯಗಳೂ ಆಗಲಿಲ್ಲ. ಆದರೆ ‘ಅವತ್ತಷ್ಟೇ ಹಾಕಿದ್ದ ನನ್ನ ಹೊಸಾ ಬ್ಯಾಂಡೇಜುಗಳೆಲ್ಲಾ ಹಾಳಾಗಿಹೋದವು. ಮೊದಲಿನಂತೆಯೂ ಈ ಬಾರಿ ಸಹಾ ನಾಗಾಸಾಕಿಯ ಆಸ್ಪತ್ರೆಗಳೆಲ್ಲಾ ಅವಿರತವಾಗಿ ಕೆಲಸಮಾಡುತ್ತಿದ್ದರಿಂದಾ, ಹೊಸಾ ಬ್ಯಾಂಡೇಜು ಸಿಗದೆ ನಾನು ಒಂದು ವಾರ ಅತೀವ ಜ್ವರದಿಂದ ಬಳಲುವಂತಾಯ್ತು’ ಎಂಬ ಅಳಲು ತೋಡಿಕೊಂಡ, ಅಷ್ಟೇ.

ಯಾಮಾಗುಚಿಯ ಮುಂದಿನ ಕೆಲವರ್ಷಗಳು ಅಷ್ಟೇನೂ ಸುಖಮಯವಾಗಿರಲಿಲ್ಲ. ಕಂಪನಿ ಬಹಳ ನಷ್ಟದಲ್ಲಿ ನಡೆಯತೊಡಗಿದರಿಂದ, ಆತನನ್ನು ಕೆಲಸದಿಂದ ತೆಗೆಯಲಾಯ್ತು. ತನ್ನ ಇಡೀ ಕುಟುಂಬವನ್ನೇ ನಿದ್ರೆಮಾತ್ರೆ ಕೊಟ್ಟು ಸಾಯಿಸುವ ಯೋಚನೆಯನ್ನೂ ಒಮ್ಮೆ ಮಾಡಿದ್ದನಂತೆ. ಆದರೆ ಸಧ್ಯ, ಅಂತಾ ಪ್ರಮೇಯ ಬಂದೊರಗಲಿಲ್ಲ. ಯುದ್ಧಾನಂತರ ಅಮೇರಿಕಾದ ಸೇನೆಗೆ ಭಾಷಾ ಅನುವಾದಕನಾಗಿ ಕೆಲಸ ಮಾಡಿದ. ನಂತರ ಸ್ವಲ್ಪ ಕಾಲ ಶಾಲೆಯಲ್ಲಿ ಶಿಕ್ಷಕನಾಗಿ ಕೂಡಾ ಕೆಲಸಮಾಡಿದ. ಕೊನೆಗೆ, ತನ್ನ ಹಳೆಯ ಕಂಪನಿ ಮಿತ್ಸುಬಿಷಿ ಪುನಃ ಕೆಲಸಕ್ಕೆ ಕರೆದಾಗ, ಅವರ ಆಯಿಲ್ ಟ್ಯಾಂಕರ್ ತಯಾರಿಕಾ ಘಟಕದಲ್ಲಿ ಕೆಲಸಕ್ಕೆ ಸೇರಿದ. ಹಾಗೂ ಅಲ್ಲೇ ನಿವೃತ್ತಿ ಕೂಡಾ ಹೊಂದಿದ. ಹಿರೋಶಿಮಾದ ಸ್ಪೋಟದಲ್ಲಿ ಎಡಕಿವಿ ಕಳೆದುಕೊಂಡದ್ದು ಹಾಗೂ ಸ್ವಲ್ಪ ಕೂದಲು ಉದುರಲು ಪ್ರಾರಂಭಿಸಿದ್ದು ಬಿಟ್ಟರೆ ಅಂತದ್ದೇನೂ ಹೇಳುವಂತಾ ಅನಾರೋಗ್ಯ ಕಾಡಲಿಲ್ಲ, ಅವನಿಗೆ. ಆದರೆ, ಆತನ ಹೆಂಡತಿ ಮಾತ್ರ ನಾಗಾಸಾಕಿಯ ಸ್ಪೋಟದ ನಂತರ ಉಂಟಾದ ಕಪ್ಪು ಮಳೆ(black rain)ಯಿಂದಾಗಿ ಜೀವನವಿಡೀ ನರಳಿ 88ನೇ ತನ್ನ ವಯಸ್ಸಿನಲ್ಲಿ, 2008ರಲ್ಲಿ ಕಿಡ್ನಿ ಹಾಗೂ ಯಕೃತ್ತಿನ ಕ್ಯಾನ್ಸರಿನಿಂದ ಮರಣಿಸಿದಳು. ಆತನ ಮಕ್ಕಳೂ ಸಹ ಜೀವನವಿಡೀ ಸಣ್ಣಪುಟ್ಟ ಖಾಯಿಲೆಯಿಂದ ನರಳುತ್ತಲೇ ಇದ್ದರು.

ಆದರೆ ಕೊನೆಗಾಲದಲ್ಲಿ ಮಾತ್ರ ಯಾಮಾಗುಚಿ ವಿಕಿರಣಸಂಬಂಧೀ ಕಾಯಿಲೆಗಳಾದ ಕ್ಯಾಟರಾಕ್ಟ್ ಹಾಗೂ ಲ್ಯುಕೇಮಿಯಾದಿಂದ ಹಾಸಿಗೆ ಹಿಡಿದ. ಜನವರಿ 4, 2010ರಂದು, ತನ್ನ 93ನೇ ವಯಸ್ಸಿನಲ್ಲಿ, ತನ್ನನ್ನು ಒಂದು ವರ್ಷ ಕಾಲ ಕಾಡಿದ ಹೊಟ್ಟೆಯ ಕ್ಯಾನ್ಸರಿಗೆ ಶರಣಾಗಿ ಮರಣಹೊಂದಿದ.

ಸ್ಪೋಟಗಳು ನಡೆದಾಗ ಈತನಿಗೆ 29ವರ್ಷ ವಯಸ್ಸು. 1950ರಲ್ಲಿ ಅವನ ಹೆಂಡತಿ (ಆಕೆ ಕೂಡಾ ನಾಗಾಸಾಕಿ ಸ್ಪೋಟದಲ್ಲಿ ಬದುಕುಳಿದವಳು) ಎರಡು ಹೆಣ್ಣು ಮಕ್ಕಳಿಗೆ ಜನ್ಮಟ್ಟಳು. ಮಕ್ಕಳೂ ಸಹ ಆರೋಗ್ಯವಾಗಿಯೇ ಇದ್ದವು. 1957ರಲ್ಲಿ ಜಪಾನ್ ಸರ್ಕಾರ ‘ಹಿಬಾಕುಶಾ'(ಅಣುಬಾಂಬ್ ಸ್ಪೋಟದಲ್ಲಿ ಬದುಕುಳಿದವರು)ಗಳನ್ನು ಗುರುತಿಸಿದಾಗ, ಯಾಮಾಗುಚಿಯನ್ನು ಬರೇ ನಾಗಾಸಾಕಿಯ ಸ್ಪೋಟದಡಿ ಮಾತ್ರ ಸೇರಿಸಿದ್ದರು. ಆತ ಅದರಿಂಲೇ ಸಂತುಷ್ಟನಾಗಿದ್ದ. ತನ್ನ ‘ಸಾಹಸ’ವನ್ನು ಹೇಳಿಕೊಳ್ಳಬೇಕೆಂದು ಅವನಿಗೇನೂ ಅನ್ನಿಸಲಿಲ್ಲ. ಹಾಗಾಗಿ ಆದಷ್ಟು ತೆರೆಮರೆಯಲ್ಲೇ ಇದ್ದ. ಆದರೆ ವಯಸ್ಸಾದಂತೆಲ್ಲಾ ಅವನಿಗೆ ಅಣುವಿಕಿರಣದ ಅಪಾಯಗಳ ಬಗ್ಗೆ ತನ್ನ ಮುಂದಿನ ಪೀಳಿಗೆಯನ್ನು ಎಚ್ಚರಿಸಬೇಕೆಂದು ಆತನಿಗೆ ಎನ್ನಿಸಲು ಪ್ರಾರಂಭಿಸಿತು. 2009ರ ಜನವರಿಯಲ್ಲಿ ಆತ ತನ್ನನ್ನು ಎರಡೂ ಸ್ಪೋಟಗಳಡಿಯಲ್ಲಿ ಗುರುತಿಸುವಂತೆ ಜಪಾನ್ ಸರ್ಕಾರಕ್ಕೆ ಮನವಿ ಸಲ್ಲಿಸಿದ. 2009ರ ಮಾರ್ಚ್ ನಲ್ಲಿ ಆತನ ಮನವಿ ಪುರಸ್ಕರಿಸಿದ ಸರ್ಕಾರ ಆತನನ್ನು ಎರಡು ಬಾರಿ ಗುರುತಿಸಿತು (Double Recognition). ಅದನ್ನು ಸ್ವೀಕರಿಸುತ್ತಾ ‘ಈಗ ನಾನು ಎರಡೆರಡು ಬಾರಿ ಅಣುವಿಕಿರಣಕ್ಕೆ ತುತ್ತಾಗಿರುವುದು ಸರ್ಕಾರೀ ದಾಖಲೆಯಾಗಿ ಗುರುತಿಸಲ್ಪಟ್ಟಿದೆ. ನನ್ನ ಮುಂದಿನ ಪೀಳಿಗೆಗಳು ಈಗ ಅಣುಬಾಂಬಿನ ಕೆಟ್ಟಪರಿಣಾಮಗಳ ಬಗ್ಗೆ ಖಂಡಿತಾ ತಿಳಿಯಬಹುದು. ಈ ದಿನಗಳು ನಮ್ಮ ಜೀವನದಲ್ಲಿ ಮತ್ತೆಂದೂ ಬರದಿರಲಿ’ ಎಂದ.

ಕೊಸರು:
ಮೇಲಿನ ಕಥೆಗಳಿಂದ ಪ್ರೇರಿತರಾಗಿ, ದಯವಿಟ್ಟು ವಿಮಾನದಿಂದ ಹಾರಲು ಪ್ರಯತ್ನಿಸಬೇಡಿ 😛

ಸಾವನ್ನು ಒಂದೆರಡು ಬಾರಿ ವಂಚಿಸಬಹುದಷ್ಟೇ. ಆದರೆ ಅದರಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಒಂದಲ್ಲಾ ಒಂದು ದಿನ ನಿಮ್ಮ ಹತ್ತಿರಕ್ಕೆ ಅದು ಬಂದೇ ಬರುತ್ತದೆ. ಅದು ಬರುವ ಮುನ್ನ, ನಾಲ್ಕು ಜನಕ್ಕೆ ಒಳ್ಳೆಯದಾಗುವಂತಹ ಕೆಲಸ ಮಾಡಿ. ಒಬ್ಬ ಉಪವಾಸವಿದ್ದ ಮನುಷ್ಯನಿಗೆ ಊಟ ಕೊಡಿ. ವರ್ಷಕ್ಕೆರಡು ಬಾರಿ ರಕ್ತದಾನ ಮಾಡಿ. ಪರಿಚಯವೇ ಇಲ್ಲದ ಯಾವುದಾದರೂ ಮಗುವನ್ನು ಸಲಹಿ, ಅದಕ್ಕೊಂದು ಒಳ್ಳೆಯ ವಿಧ್ಯಾಭ್ಯಾಸ ಸಿಗಲು ಸಹಾಯ ಮಾಡಿ. ಜಾತಿಗಳನ್ನು ಬದಿಗಿಟ್ಟೂ ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣಿ.

#ದಿನಕ್ಕೊಂದು_ವಿಷಯ, #Tsutomu_Yamaguchi, #Man_who_survived_two_atomic_bombs

Tsutomu-Yamaguchi

ದಿನಕ್ಕೊಂದು ವಿಷಯ – ೧೦

ದಿನಕ್ಕೊಂದು ವಿಷಯ – ೧೦

‘ಟ್ವಿಟರ್’ನ ತೆಳುನಡುವಿನ ಹಿಂದಿನ ತಿರುಳು

ಈಗೆಲ್ಲಾ ಬರೀ ಆನ್ಲೈನ್ ಜೀವನ. ಫೇಸ್ಬುಕ್ ಬಂದಮೇಲೆ ನಿಮ್ಮ ‘ಸ್ನೇಹಿತರು’ ಎಂದೆನಿಸಿಕೊಂಡವರು ತಿಂದಿದ್ದೂ, ಕುಡಿದದ್ದೂ ಕೂಡಾ ಆನ್ಲೈನ್ ನಲ್ಲಿ ಗೊತ್ತಾಗುತ್ತೆ. ಬಹುಷಃ ಫೇಸ್ಬುಕ್ ನಿರ್ಮಿಸಿದ ಝುಕರ್ಬರ್ಗಿಗೂ ಗೊತ್ತಿರಲಿಲ್ಲವೇನೋ ಇದು ಮುಂದೆ ಬೆಳೆದು ಇಂತಾ ಪಿಡುಗಾಗುತ್ತೆ ಅಂತಾ.

ಫೇಸ್ಬುಕ್ಕಿನ ಜೊತೆಜೊತೆಗೇ ಬಂದ ಟ್ವಿಟ್ಟರ್ ಸಧ್ಯಕ್ಕೆ ಅತ್ಯಂತ ಜನಪ್ರಿಯ ‘ಸಾಮಾಜಿಕ ತಾಣ’ಗಳಲ್ಲೊಂದು. 2006ರಲ್ಲಿ ಜಾಕ್ ಡೋರ್ಸಿ ಮತ್ತವನ ಸ್ನೇಹಿತರು ಪ್ರಾರಂಭಿಸಿದ ಟ್ವಿಟ್ಟರ್, ಇಂದು ಜಗತ್ತಿನ ಅತ್ಯಂತ ಲಾಭದಾಯಕ ಹಾಗೂ ಶ್ರೀಮಂತ ಕಂಪನಿಗಳಲ್ಲೊಂದು. ‘ಅಂತರ್ಜಾಲದ ಎಸ್ಸೆಮ್ಮೆಸ್’ ಎಂದೇ ಹೆಸರಾಗಿರುವ ಟ್ವಿಟ್ಟರ್, ಇವತ್ತು ಜಗತ್ತಿನ ಅತ್ಯಂತ ಹೆಚ್ಚು ಭೇಟಿಮಾಡಲಾಗುವ ಮೊದಲನೇ ಹತ್ತು ತಾಣಗಳಲ್ಲೊಂದು. ಫೇಸ್ಬುಕ್ಕಿನಂತೆಯೇ, ನಿಮಗೆ ಬೇಕಾದದ್ದು, ಬೇಡವಾದದ್ದು ಎಲ್ಲವನ್ನೂ ಇಲ್ಲೂ ಹೇಳಬಹುದು. ಫೇಸ್ಬುಕ್ಕಿನ ಸ್ಟೇಟಸ್ ಇಲ್ಲಿ ಟ್ವೀಟ್ ಎಂದು ಕರೆಸಿಕೊಳ್ಳುತ್ತದೆ. ಕುಕೂ ಹಕ್ಕಿಗಳ (Cuckoo birds) ಸಣ್ಣ ಹಾಗೂ ಮಧುರ ಕೂಗುವಿಕೆಯನ್ನು ಅನುಕರಿಸಿ, ಟ್ವಿಟ್ಟರಿನ ಸಂದೇಶಗಳನ್ನು ‘ಟ್ವೀಟ್’ ಎಂದು ಕರೆಯಲಾಗುತ್ತದೆ. ಇಲ್ಲೂ ಕೂಡ ಬೇಕಾದರೆ ಚಿತ್ರಗಳನ್ನೂ ಅಪ್ಲೋಡ್ ಮಾಡಬಹುದು, 6 ಸೆಕೆಂಡುಗಳ ಪುಟಾಣಿ ವಿಡಿಯೋ(ಟಿಟ್ಟರ್ ಭಾಷಾಪ್ರಭೇದದಲ್ಲಿ ಇದನ್ನು ವೈನ್,Vine, ಅಂತಲೂ ಕರೆಯುತ್ತಾರೆ) ಕೂಡಾ ಅಪ್ಲೋಡ್ ಮಾಡಬಹುದು. ಇಷ್ಟವಾದವರು ಪೇವರಿಟ್ಟಿಸುತ್ತಾರೆ (ಲೈಕು ಕುಟ್ಟುವ ಹಾಗೆ), ಇನ್ನೂ ಇಷ್ಟವಾದವರು ರೀಟ್ವೀಟಿಸುತ್ತಾರೆ (ಶೇರ್ ಮಾಡಿದ ಹಾಗೆ). ಕೆಲವರು ನಿಮ್ಮ ಟ್ವೀಟಿನ ಜೊತೆ ತಮ್ಮದೊಂದು ಉತ್ತರದ ಟ್ವೀಟನ್ನು ಉಲಿಯುತ್ತಾರೆ. ರಚನೆಯಲ್ಲಿ ಹಾಗೂ ಕೆಲಸಮಾಡುವ ರೀತಿಯಲ್ಲಿ ಟ್ವಿಟ್ಟರಿಗೂ ಹಾಗೂ ಫೇಸ್ಬುಕ್ಕಿಗೂ ಏನೂ ವ್ಯತ್ಯಾಸವಿಲ್ಲ. ಎರಡು ವಿಷಯಗಳನ್ನು ಬಿಟ್ಟು:

(೧) ಟ್ವಿಟ್ಟರಿನಲ್ಲಿ, ಫ್ರೆಂಡ್ ರಿಕ್ವೆಸ್ಟ್ಟಿನ ತಲೆಬಿಸಿಯಿಲ್ಲ. ಯಾರು ಬೇಕಾದ್ರೂ ನಿಮ್ಮ ಅನುಮತಿಯಿಲ್ಲದೆ ‘ಫಾಲೋ’ ಮಾಡಬಹುದು. ಆದ್ದರಿಂದ ನೀವು ಬರೆಯುವ ಮುನ್ನ ಬಹಳ ಹುಷಾರಾಗಿರಬೇಕು. Ofcourse, ನೀವು ರಿಕ್ವೆಸ್ಟ್ ಬರುವಂತೆ ವ್ಯವಸ್ಥೆ ಕೂಡಾ ಮಾಡಿಕೊಳ್ಳಬಹುದು. ಆದರೆ, ಅಂತಹ ವ್ಯವಸ್ಠೆಯಿದ್ದಾಗ ನಿಮ್ಮ ಟ್ವೀಟ್ಸ್ ಬೇರೆ ಯಾರಿಗೂ ಕಾಣುವುದಿಲ್ಲ. ಅದೂ ಅಲ್ಲದೆ, ಇಷ್ಟೆಲ್ಲಾ ಕಣ್ಣಾಮುಚ್ಚಾಲೆ ಆಡುವ ಜರೂರತ್ತು ಇದ್ದಮೇಲೆ ‘ಸಾಮಾಜಿಕ’ ತಾಣದಲ್ಲಿದ್ದು ಏನು ಪ್ರಯೋಜನ ಅಲ್ವಾ!?

“ಫೇಸ್ಬುಕ್ಕು ಟ್ವಿಟರ್ನಲ್ಲಿ ಅಕೌಂಟು ತೆಗೆದು ಜನರಿಗಂಜಿದೊಡೆಂತಯ್ಯಾ” ಅಲ್ವಾ?

(೨) ಒಮ್ಮೆ ಟ್ವೀಟ್ ಮಾಡಿದ ಮೇಲೆ ಅದನ್ನು ಎಡಿಟ್ ಮಾಡುವ ಹಾಗಿಲ್ಲ. ‘ಏಕ್ ಮಾರ್ ದೋ ತುಕ್ಡಾ’ ತರಾ. ಫೇಸ್ಬುಕ್ಕಿನಲ್ಲಾದರೆ, ಈಗೊಂದು ‘ಮೋದಿಗೆ ದಿಕ್ಕಾರ’ ಅನ್ನೋ ಸ್ಟೇಟಸ್ ಹಾಕಿ ಎಡಪಂಥೀಯರೆಲ್ಲಾ ಖುಷಿಯಾಗಿ ಲೈಕ್ ಒತ್ತಿಯಾದ ಮೇಲೆ ಸ್ವಲ್ಪ ಹೊತ್ತು ಬಿಟ್ಟು ಅದನ್ನು ‘ಮೋದಿಗೆ ಜೈ’ ಅಂತಾ ಎಡಿಟ್ ಮಾಡಿ, ಲೈಕು ಒತ್ತಿದವರನ್ನೆಲ್ಲಾ ಕಂಗಾಲು ಮಾಡಬಹುದು. ಇಲ್ಲಿ ಆ ಆಟ ನಡೆಯೋಲ್ಲ.

ಇದೆಲ್ಲಕ್ಕಿಂತಾ ಟ್ವಿಟ್ಟರಿನ ವಿಶಿಷ್ಟತೆಯೆಂದರೆ ಅದರ ಟೈಪಿಸುವ ಮಿತಿ. ನೀವು ನಿಮ್ಮೆಲ್ಲಾ ಹೇಳಿಕೆಯನ್ನು 140ಅಕ್ಷರ(charecters)ಗಳಲ್ಲೇ ಹೇಳಬೇಕು. ಫೇಸ್ಬುಕ್ಕಿನಲ್ಲಿ ಪೇಜುಗಟ್ಟಲೆ ಬರೆದು ಅಭ್ಯಾಸವಿದ್ದವರಿಗೆ, ಟ್ವಿಟ್ಟರಿಗೆ ಹೋಗುವುದೆಂದರೆ ಹಳ್ಳಿಯಲ್ಲಿ ದೊಡ್ಡಮನೆಯಲ್ಲಿದ್ದು ಬೆಂಗಳೂರಿನ 20×30ಸೈಟಿನ ಮನೆಗೆ ಹೊಕ್ಕಂತೆ. ಎಲ್ಲಾ ಭಾವನೆಗಳನ್ನೂ 140ಅಕ್ಷರದಲ್ಲಿ ಹೇಳಬೇಕು ಅಂದ್ರೆ ಹೆಂಗ್ರೀ? ನವ್ಯಕಾವ್ಯದಂತೆ ಅಡೆತಡೆಯಿಲ್ಲದೆ ಭಾವನೆಗಳು ಹರಿದರೇನು ಗತಿ!? ಏನೂ ಮಾಡೋಕಾಗೊಲ್ಲ. ಎಲ್ಲರಿಗೂ ಹೇಳಿ ಮಾಡಿಸಿದ್ದಲ್ಲ ಟ್ವಿಟ್ಟರ್ ಬಿಡಿ. ‘ನಾನು ಹೇಳುತ್ತಿದ್ದೇನೆ. ಯಾರು ಬೇಕಾದರೂ ನೋಡ್ಕೊಳ್ಳಿ. ಏನು ಬೇಕಾದರೂ ಮಾಡ್ಕೊಳ್ಳಿ’ ಎಂದೆನ್ನುವಷ್ಟು ಎದೆಗಾರಿಕೆ ಬೇಕು.

ಆದರೆ ಈ 140 charectersನ ಮಿತಿ ಯಾಕೆ!? ನಾನು ತಲೆಕೆಡಿಸಿಕೊಂಡು ಕೇಳಿದ್ದಕ್ಕೆ ಮೊದಲು ಕೆಲವರು ‘ಟ್ವಿಟ್ಟರ್ನಲ್ಲಿ ಕೋಟ್ಯಂತರ ಜನರಿದ್ದಾರೆ. ಹಾಗಾಗಿ, ಸರ್ವರ್ ಲೋಡ್ ಕಡಿಮೆ ಮಾಡೋಕೆ’ ಅಂತಾ ಬಶೀರನ ಮಾದರಿಯಲ್ಲಿ ಬೂಸಿ ಬಿಟ್ಟಿದ್ದರು. ಅದು ಸುಳ್ಳು ಅಂತಾ ತಕ್ಷಣವೇ ಗೊತ್ತಾಯ್ತು. ಕೊನೆಗೆ ‘ಆಳದ ಸಂಶೋಧನೆ’ ಮಾಡಿದಾಗ ತಿಳಿದದ್ದಿಷ್ಟು.

ಟ್ವಿಟ್ಟರ್ ಮೊದಲು ಪ್ರಾರಂಭವಾದದ್ದೇ ‘ಎಸ್ಸೆಮ್ಮೆಸ್ ಕಳುಹಿಸುವ ಮೂಲಕ ಜನ ಸಾಮಾಜಿಕವಾಗಿ ಸಂಪರ್ಕಗೊಳ್ಳಲು ಸಾಧ್ಯವಾದರೆ ಹೇಗೆ!?’ ಎಂಬ ಆಲೋಚನೆಯ ಮೂಲಕ. 2006ರಲ್ಲಿ ಇನ್ನೂ ಫೋನುಗಳು ಈಗಿನಷ್ಟು ಸ್ಮಾರ್ಟ್ ಆಗಿರಲಿಲ್ಲ. ಜನರೇ ಹೆಚ್ಚು ಸ್ಮಾರ್ಟ್ ಆಗುವ ಅವಶ್ಯಕತೆ ಆಗಿನ್ನೂ ಇತ್ತು. ಇಂಟರ್ನೆಟ್ ಕೂಡ ಜಗತ್ತಿನ ಎಲ್ಲಾ ಜಾಗದಲ್ಲಿ ಈಗಿನಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಆದರೆ, ಫೋನುಗಳು ಎಲ್ಲಾಕಡೆ ತಲುಪಿದ್ದವು. ಫೋನಿದ್ದಮೇಲೆ ಎಸ್ಸೆಮ್ಮೆಸ್ ಇದ್ದೇ ಇರುತ್ತದೆ ತಾನೇ? ಹಾಗಾಗಿ ಎಸ್ಸೆಮ್ಮೆಸ್ ಕಳುಹಿಸುವ ಮೂಲಕವೇ ಜನರು ಸಾಮಾಜಿಕ ಜಾಲವೊಂದರ ಭಾಗವಾಗಲು ಸಾಧ್ಯವಾಗುವುದಾದರೆ, ಈ ತಾಣ ಬಹಳ ಪ್ರಸಿದ್ಧಿಯಾಗುವುದು ಸಾಧ್ಯ ಎಂಬುದನ್ನು ಮನಗಂಡ ಜಾಕ್ ಡಾರ್ಸಿ ‘twttr’ ಎಂಬ ಪ್ರಾಜೆಕ್ಟ್ ಆರಂಭಿಸಿದ. ಹೂಡಿಕೆದಾರರು ದೊರೆತನಂತರ twttr ಜನಪ್ರಿಯವಾಗುವುದನ್ನು ಮನಗಂಡ, ಮಾಲೀಕರು ಹೆಸರನ್ನ್ನು Twitter ಎಂದು ಬದಲಾಯಿಸಿದರು. ಜಗತ್ತಿನಾದ್ಯಂತ, ಒಂದು ಎಸ್ಸೆಮ್ಮೆಸ್ ಕಳುಹಿಸಲು ಇರುವ ಅಕ್ಷರಮಿತಿ (character limit) 160 ಅಕ್ಷರಗಳು. ಇದರಲ್ಲಿ 20 ಅಕ್ಷರಗಳನ್ನು ಬಳಕೆದಾರನ ಹೆಸರಿ(Username)ಗೆ ಮೀಸಲಿಟ್ಟು ಉಳಿದ 140 ಅಕ್ಷರಗಳನ್ನು, Twitter, ಸಂದೇಶಕ್ಕಾಗಿ ಕಾದಿಟ್ಟಿತು. ಇವತ್ತಿಗೂ ಇಂಟರ್ನೆಟ್ ಲಭ್ಯವಿರದ ಕಡೆಯಲ್ಲಿ ಎಸ್ಸೆಮ್ಮೆಸ್ ಮೂಲಕವೇ ಕೆಲವರು ಟ್ವಿಟ್ಟರಿನಲ್ಲಿ ಭಾಗವಹಿಸುವುದರಿಂದ, ಈ ಮಿತಿಯನ್ನು 140ಕ್ಕೇ ಉಳಿಸಿಕೊಳ್ಳಲಾಗಿದೆ. ಮುಂದೊಂದು ದಿನ ಜಗತ್ತಿನ ಎಲ್ಲಾ ಮೂಲೆಯಲ್ಲೂ ಇಂಟರ್ನೆಟ್ ಲಭ್ಯವಾದ ದಿನ ಇದು ಬದಲಾಗಬಹುದು. ಇದೇ ಟ್ವಿಟ್ಟರಿನ 140 ಮಿಲೀಮೀಟರ್ ಅಳತೆಯ ಸೊಂಟದ ರಹಸ್ಯ.

ಟ್ವಿಟ್ಟರ್ ಬಗ್ಗೆ ಹೇಳಲು ಕೂತರೆ, ಇನ್ನೂ ಬಹಳಷ್ಟು ವಿಷಯಗಳೇ ಇದೆ. ಇವತ್ತಿಗೆ ಇಷ್ಟು ಸಾಕು ಎಂದುಕೊಳ್ಳುತ್ತೇನೆ.

ಕೊಸರು:

ಈ ಹೊಸಾ ತಂತ್ರಜ್ಞಾನಗಳನ್ನು ನಮ್ಮ ಹಳೆಯ ತಲೆಮಾರಿನವರಿಗೆ ಅರ್ಥಮಾಡಿದುವುದು ಬಹಳ ಕಷ್ಟ. (ತಂತ್ರಜ್ಞಾನ ಬಿಡಿ, ನನಗೆ ಅನ್ನ ಕೊಡುತ್ತಿರುವ HR ಕೆಲಸವನ್ನೇ ನನ್ನಜ್ಜನಿಗೆ ಅರ್ಥಮಾಡಿಸುವುದು ಸಾಧ್ಯವಾಗಿಲ್ಲ ನನಗೆ 😛 ಅವರ ಪ್ರಕಾರ ನಾನೊಬ್ಬ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲಾರದ, ಪ್ರೈವೇಟ್ ಕಂಪನಿ ನೌಕರ, ಅಷ್ಟೇ 😛 ಅದನ್ನು ಅವರು ಹೇಳುವಾಗ ಆ ತಾತ್ಸಾರ ನೊಡಬೇಕು ನೀವು 😦 ) ಹೀಗಿರುವಾಗ ಅವರಿಗೆ ಫೇಸ್ಬುಕ್, ಟ್ವಿಟ್ಟರ್ ಬಗ್ಗೆ ಅರ್ಥ ಮಾಡಿಸುವುದು ಹೇಗೆ. ಆ ಕಷ್ಟವನ್ನು ವಿವರಿಸುವ ಒಂದು ಸಣ್ಣ ರಂಜನಾತ್ಮಕ ವೀಡಿಯೋ ಇಲ್ಲಿದೆ ನೋಡಿ 🙂 ವಿಡಿಯೋ ಕೃಪೆ: TVF Group

http://bit.ly/1mdSMGI
#ದಿನಕ್ಕೊಂದು_ವಿಷಯ, #Twitter, #140_ Characters

ದಿನಕ್ಕೊಂದು ವಿಷಯ – ೯

ದಿನಕ್ಕೊಂದು ವಿಷಯ – ೯

ಎಲ್ಲರನ್ನೂ ಮೋಡಿ ಮಾಡುವ ಯೆಲ್ಲೋಸ್ಟೋನ್ ಪಾರ್ಕ್:

ನಮ್ಮಲ್ಲಿ ಕೆಲವರಿಗೆ ಅಮೇರಿಕಾ ಅಂದರೆ ಎಲ್ಲಿಲ್ಲದ ಪ್ರಾಣ. ಕೆಲವರಿಗೆ ಅಲ್ಲಿನ ಹವೆ ಇಷ್ಟ, ಕೆಲವರಿಗೆ ಅಲ್ಲಿ ತೆಗೆದಿರೋ ಚಿತ್ರಗಳು ಇಷ್ಟ, ಕೆಲವರಿಗೆ ಅಲ್ಲಿ ತಯಾರಾದ ಓಡುತಿಟ್ಟಗಳಿಷ್ಟ, ಕೆಲವರಿಗೆ ಅಲ್ಲಿನ ಸ್ವಚ್ಚಂದತೆಯಿಷ್ಟ, ಕೆಲವರಿಗೆ ಲಾಸ್ ವೇಗಸ್ಸಿನ ಜೂಜಿನ ಮನೆಗಳಿಷ್ಟ, ಕೆಲವರಿಗೆ ಏನೇನಕ್ಕೋ ಇಷ್ಟ. ಇರ್ಲಿ ಬಿಡಿ. ಅವರವರ ಇಷ್ಟ ಅವರವರ ಕಷ್ಟ ಅಲ್ವಾ. ನನಗ್ಯಾಕೆ ಇಷ್ಟ ಕೇಳಿ. ನನಗೆ ಅಲ್ಲಿನ ಜನರ ಸಂರಕ್ಷಣಾ ಹುಚ್ಚು ಇಷ್ಟ. ಅಮೇರಿಕಾ ಮಾತ್ರವಲ್ಲ ಯೂರೋಪಿಯನ್ನರೂ ಕೂಡ ನನಗೆ ಇಷ್ಟವಾಗುವುದಾದರೆ ಕಾರಣ ಬಹುಷಃ ಇದೇ ಕಾರಣಕ್ಕೆ. ಅವರಿಗೆ ಸದಾ ಒಂದೇ ಹುಚ್ಚು. ‘ನಮ್ಮ ಮುಂದಿನ ಪೀಳಿಗೆಗೆ ನಾವು ನಮ್ಮ ನಾಡನ್ನು/ಪರಿಸರವನ್ನು ಯಾವ ರೀತಿಯಲ್ಲಿ ಉಳಿಸಿಕೊಟ್ಟು ಹೋಗುತ್ತೇವೆ?’ ಎಂದು ಕೇಳಿಕೊಳ್ಳುತ್ತಿರುವುದು. ತಮ್ಮಲ್ಲಿರುವುದನ್ನೆಲ್ಲಾ ಆದಷ್ಟೂ ಮೂಲಸ್ವರೂಪದಲ್ಲಿ ಉಳಿಸಿ ತಮ್ಮ ಮಕ್ಕಳಿಗೆ ಕೊಡುವುದು ತಮ್ಮ ಜವಾಬ್ದಾರಿ ಎಂದುಕೊಳ್ಳುತ್ತಾರೆ. ತಮ್ಮ ಇತಿಹಾಸ (ಅದೆಷ್ಟೇ ಚಿಕ್ಕದಾಗಿರಲಿ), ತಮ್ಮಲ್ಲಿರುವ ಸಾಂಸ್ಕೃತಿಕ ಮೌಲ್ಯಗಳು (ಅವೆಷ್ಟೇ ಸಿಲ್ಲಿಯಾಗಿರಲಿ), ತಮ್ಮ ಪರಿಸರ ವೈವಿಧ್ಯವನ್ನು (ಅವು ಯಾವ ರೀತಿಯೇ ಇರಲಿ) ಅದನ್ನು ಜತನದಿಂದ ಕಾಪಾಡಿ, ಮುಂದಿನ ಪೀಳಿಗೆಗೆ ವರ್ಗಾಯಿಸುತ್ತಾರೆ. ಅಮೇರಿಕನ್ನರು ಎಲ್ಲದರಲ್ಲೂ ಸ್ವಲ್ಪ ‘ಅತಿ’ಯೇ ಅದ್ದರಿಂದ, ಇಲ್ಲಿಯೂ ಅವರದ್ದು ಮೊದಲ ಹೆಜ್ಜೆ.

ಮನುಷ್ಯನ ಹಸ್ತಕ್ಷೇಪವಿಲ್ಲದಿದ್ದರೆ ಜಗತ್ತು ಹೇಗಿರುತ್ತಿತ್ತು? ಎಂದು ಪರೀಕ್ಷಿಸಲು ಅಮೇರಿಕನ್ನರು ಕಂಡು ಹಿಡಿದ ಒಂದು ಉಪಾಯವೆಂದರೆ, ಸೂಕ್ಷ್ಮ ಪರಿಸರಗಳನ್ನು ‘ರಾಷ್ಟ್ರೀಯ ಉದ್ಯಾನವನ’ವೆಂದು ಘೋಷಿಸಿ, ಅದರಲ್ಲಿ ಯಾರೂ ವಾಸಿಸದಿರುವಂತೆ/ಅಥವಾ ಆದಷ್ಟು ಕಡಿಮೆ ಜನ ವಾಸಿಸುವಂತೆ ಮಾಡಿ, ಯಾವುದೇ ಕೈಗಾರಿಕೆಗಳು ತಲೆಯೆತ್ತದಂತೆ ನೋಡಿಕೊಂಡು, ಪ್ರಾಣಿಪಕ್ಷಿಗಳಿಗೆ ಸ್ವತಂತ್ರವಾಗಿ ಬದುಕಲು ಅನುವು ಮಾಡಿಕೊಡುವುದು. ಈ ಉಪಾಯದ ಆಧಾರದ ಮೇಲೆ, ರಾಷ್ಟ್ರೀಯ ಬಜೆಟ್ಟಿನಡಿ, ಅಧ್ಯಕ್ಷ ಯೂಲಿಸಿಸ್.ಎಸ್.ಗ್ರಾಂಟ್, ವ್ಯೋಮಿಂಗ್, ಐಡಾಹೋ ಹಾಗೂ ಮೊಂಟಾನ ರಾಜ್ಯಗಳಲ್ಲಿ ಹರಡಿರುವ ಸುಮಾರು 8,983 ಚದರ ಕಿಲೋಮೀಟರಿನ ಭೂಭಾಗವನ್ನು ಗುರುತಿಸಿ, ಮಾರ್ಚ್ 1, 1872ರಂದು ಲೋಕಾರ್ಪಣೆಮಾಡಿದ ಜಗತ್ತಿನ ಪ್ರಥಮ ರಾಷ್ಟ್ರೀಯ ಉದ್ಯಾನವನವೇ ‘ಯೆಲ್ಲೋಸ್ಟೋನ್ ಪಾರ್ಕ್’. ಅಯ್ಯೋ! ಇದೇನಿದು ಪಾರ್ಕು!? ಲಾಲ್ಬಾಗ್ ಅಥವ ಕಬ್ಬನ್ ಪಾರ್ಕ್ ತರಾ ಅನ್ಕೋಬೇಡಿ. ಹೆಸರಿಗೆ ಮಾತ್ರ ಪಾರ್ಕ್ ಇದು. 3,468.4 ಚದರ ಮೈಲಿಯಷ್ಟು ವಿಸ್ತಾರದ (ನಮ್ಮ ಇಡೀ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನು ಸೇರಿಸಿದರೆ ಸಿಗುವುದಕ್ಕಿಂತಲೂ ಸ್ವಲ್ಪ ದೊಡ್ಡದು!!!). ಯೆಲ್ಲೋಸ್ಟೋನ್ ಪಾರ್ಕಿನ ಹೆಚ್ಚಿನ ಭಾಗ (96%) ವ್ಯೋಮಿಂಗ್ ರಾಜ್ಯದಲ್ಲಿದ್ದರೂ, ಕೆಲಭಾಗಗಳು ಮೊಂಟಾನ (3%) ಹಾಗೂ ಐಡಾಹೋ (1%) ರಾಜ್ಯಗಳಿಗೂ ವಿಸ್ತರಿಸಿದೆ. ಈ ಪಾರ್ಕು ಹಲವಾರು ಕೌತುಕ ವಿಷಯಗಳ ಆಗರ.

ಈ ಜಾಗಕ್ಕೆ ಈ ಹೆಸರು ಬರಲು ಅಲ್ಲಿ ಹರಿಯುವ ಯೆಲ್ಲೋಸ್ಟೋನ್ ನದಿಯೇ ಕಾರಣ. ಹದಿನೆಂಟನೇ ಶತಮಾನದಲ್ಲಿ ಬಂದ ಪ್ರೆಂಚ್ ಅನ್ವೇಷಕರು ಈ ಜಾಗದಲ್ಲೊಂದು ನದಿಯನ್ನು ನೋಡಿ ಅದಕ್ಕೆ ‘ರೋಚೆ ಜೌನ್’ ಎಂಬ ಹೆಸರಿಟ್ಟರು. ಅಲ್ಲಿ ವಾಸವಿದ್ದ ಸಿಯೋವನ್ ಮೂಲವಾಸಿಗಳ ಬಾಷೆಯನ್ನು ಅರೆಬರೆ ಅರ್ಥಮಾಡಿಕೊಂಡ ಫ್ರೆಂಚರು, ಸಿಯೋವನ್ ಬಾಷೆಯಲ್ಲಿದ್ದ ‘ಮಿ ತ್ಸಿ ಅದಾಜಿ’ ಎಂದಿದ್ದ ಹೆಸರನ್ನು ‘ಹಳದಿಕಲ್ಲಿನ ನದಿ’ ಎಂಬರ್ಥದ ಪದವನ್ನೇ ಪ್ರೆಂಚಿಗೆ ಅನುವಾದಿಸಿ ನದಿಗೆ ಹೆಸರಿಟ್ಟರು. ನಂತರ ಬಂದ ಇಂಗ್ಳೀಷರು, ಆ ಫ್ರೆಂಚನ್ನು ಯಥಾಪ್ರಕಾರ ಅನುವಾದಿಸಿ ಇಂಗ್ಳೀಷಿನಲ್ಲಿ ಯೆಲ್ಲೋಸ್ಟೋನ್ ನದಿ ಎಂದು ಹೆಸರಿಟ್ಟರು. ಕಾಕತಾಳಿಯವೋ ಏನೋ ಯೆಲ್ಲೋಸ್ಟೋನ್ ಪಾರ್ಕಿನ ಒಂದು ಭಾಗವಾದ ಗ್ರ್ಯಾಂಡ್ ಕ್ಯಾನ್ಯನ್ ನಲ್ಲಿ ಹಳದಿಬಣ್ಣದ ಕಲ್ಲುಗಳು ಹೇರಳವಾಗಿ ಕಾಣಸಿಗುತ್ತವೆ. ಬಹುಷಃ ಇದೇ ಕಾರಣಕ್ಕೆ ಆ ನದಿಯ ಮೇಲಂಚಿನಲ್ಲಿ ವಾಸವಾಗಿದ್ದ ಸಿಯೋವನ್ನರು (ಗ್ರ್ಯಾಂಡ್ ಕ್ಯಾನ್ಯನ್ ಅನ್ನು ನೋಡದಿದ್ದರೂ ಸಹ!!) ಈ ಹೆಸರನ್ನು ಇಟ್ಟಿರಬಹುದು.

ಅಮೇರಿಕಾದ ಸರ್ಕಾರ ಇಲ್ಲಿ, ಅಪಾಯಕ್ಕೀಡಾಗಿರುವ ಅಥವಾ ಅಳಿವಿನಂಚಿಲ್ಲಿರುವ, ನೂರಾರು ಜಾತಿಯ ಸಸ್ತನಿಗಳು, ಪಕ್ಷಿಗಳು, ಮೀನು ಮತ್ತು ಸರೀಸೃಪಗಳನ್ನು ದಾಖಲಿಸಿದೆ. ಯೆಲ್ಲೊಸ್ಟೋನ್ ಪಾರ್ಕ್, ಅಮೇರಿಕಾ ಸಂಯುಕ್ತ ಸಂಸ್ಥಾನದ ಅತ್ಯಂತ ದೊಡ್ಡ ‘ಮೆಗಾಫೌನ’ (Megafouna – ವಿಶಾಲವಾದ ಕಾಡುಗಳ, ಹುಲ್ಲುಗಾವಲುಗಳ, ಸಸ್ಯಗಳ ಅನನ್ಯ ಸಂತತಿಯಿರುವ ಸ್ಥಳ) ವಾಗಿದೆ. ಕಂದು ಕರಡಿಗಳು, ತೋಳಗಳು, ಮತ್ತು ಕಾಡೆಮ್ಮೆಗಳ ಮುಕ್ತ ಹಿಂಡುಗಳನ್ನು ಮತ್ತು ಎಲ್ಕ್ ಗಳನ್ನು ನೀವಿಲ್ಲಿ ಕಾಣಬಹುದು. ಯೆಲ್ಲೊಸ್ಟೋನ್ ಪಾರ್ಕ್ ಜಗತ್ತಿನ ಅತ್ಯಂತ ಹೆಳೆಯ ಕಾಡೆಮ್ಮೆಗಳ ಹಿಂಡಿನ ತಾಣವಾಗಿದೆ.

ಕಾಳ್ಗಿಚ್ಚು ಈ ಪಾರ್ಕ್ ನಲ್ಲಿ ಪ್ರತಿ ವರ್ಷ ಸರ್ವೇ ಸಾಮಾನ್ಯ. 1988ರ ದೊಡ್ಡ ಕಾಡ್ಗಿಚ್ಚಿಗೆ, ಸುಮಾರು ಮೂರನೇ ಒಂದರಷ್ಟು ಪಾರ್ಕ್ ಸುಟ್ಟು ಕರಕಲಾಯಿತು. ಆದರೆ, ಅಮೇರಿಕಾದ ರಾಷ್ಟ್ರೀಯ ಉದ್ಯಾನಗಳಲ್ಲಿ, ಮನುಷ್ಯರ ಹಸ್ತಕ್ಷೇಪ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಯಾವುದಾದರೂ ನಾಗರೀಕರ ಆಸ್ತಿಪಾಸ್ತಿ ಹಾಗೂ ಜೀವಕ್ಕೆ ಅಪಾಯವಿಲ್ಲದಿದ್ದರೆ, ಅಲ್ಲಿ ಕಾಳ್ಗಿಚ್ಚನ್ನು ಆರಿಸಲು ಹೋಗುವಂತಿಲ್ಲ. ಯಾವುದಾದರೂ ಪ್ರಾಣಿ ಸತ್ತರೆ ಅದನ್ನು ತೆಗೆಯುವಂತಿಲ್ಲ. ಮೊದಲೇ ಹೇಳಿದಂತೆ ‘ಈ ಭೂಮಿಯ ಮೇಲೆ ಅಕಸ್ಮಾತ್ ಮನುಷ್ಯನಿಲ್ಲದಿದ್ದರೆ ಜಗತ್ತು ಹೇಗಿರುತ್ತಿತ್ತು!?’ ಎಂದು ಅರಿಯಲು ಈ ನಿಯಮ. ಹಾಗಾಗಿ ಯೆಲ್ಲೋಸ್ಟೋನ್ ಬರೀ ಪಾರ್ಕ್ ಮಾತ್ರವಲ್ಲ, ಪರಿಸರ ಶಾಸ್ತ್ರದ ಒಂದು ಪ್ರಯೋಗಶಾಲೆ ಕೂಡಾ. ಯೆಲ್ಲೊಸ್ಟೋನ್ ನಲ್ಲಿ ಲೆಕ್ಕವಿಲ್ಲದಷ್ಟು ಹೈಕಿಂಗ್, ಕ್ಯಾಂಪಿಗ್, ಬೋಟಿಂಗ್, ಮೀನುಗಾರಿಕೆ ದೃಶ್ಯಗಳ ಸೇರಿದಂತೆ ಹಲವಾರು ಮನರಂಜನಾ ಅವಕಾಶಗಳಿವೆ. ಸುಸಜ್ಜಿತ, ಆದರೆ ಪರಿಸರ ನಾಶ ಆದಷ್ಟೂ ಕಡಿಮೆ ಮಾಡಲು ನಿರ್ಮಿಸಿದಂತ ಚಿಕ್ಕ ರಸ್ತೆಗಳು ಪಾರ್ಕಿನ ಪ್ರಮುಖ ಆಕರ್ಷಣೆಗಳಾದ, ಜ್ವಾಲಮುಖಿ ಪ್ರದೇಶಗಳು, ಸರೋವರಗಳು, ಬಿಸಿನೀರ ಬುಗ್ಗೆಗಳು ಹಾಗೂ ಜಲಪಾತಗಳಿಗೆ ಸಂಪರ್ಕವನ್ನು ಒದಗಿಸುತ್ತವೆ.

ಭೂಗರ್ಭಶಾಸ್ತ್ರಜ್ಞರ ಪ್ರಕಾರ ಯೆಲ್ಲೋಸ್ಟೋನ್ ಪಾರ್ಕ್ ಇರುವ ಜಾಗದಲ್ಲಿ ಮಾನವರು ಸರಿಸುಮಾರು 11,000 ವರ್ಷಗಳ ಹಿಂದೆಯೇ ವಾಸವಾಗಿದ್ದರು. ಮೊಂಟಾನದ ಗಾರ್ಡಿನೇರ್ ಎನ್ನುವಲ್ಲಿ ಪೋಸ್ಟ್ ಆಫೀಸಿಗಾಗಿ ಅಗೆಯುತ್ತಿದ್ದಾಗ ಸಿಕ್ಕಿದ ಕ್ಲೋವಿಸ್ ಸಂಸ್ಕೃತಿಗೆ ಸೇರಿದ್ದೆನ್ನಾಲಾದ, ಜ್ವಾಲಾಮುಖಿಯ ಲಾವಾದಿಂದ ರೂಪುಗೊಳ್ಳುವ ಗಾಜಿನಂತಹ ವಸ್ತುವಿನಿಂದಹ ಮಾಡಲಾದ ಚೂಪಾದ ಆಯುಧಗಳು ದೊರಕಿವೆ. ಇವು ಸರಿಸುಮಾರು 11,000 ವರ್ಷ ಹಳೆಯದ್ದೆನ್ನಲಾಗಿದೆ.

ಒಂದು ಥಿಯರಿಯ ಪ್ರಕಾರ ಇಡೀ ಯೆಲ್ಲೋಸ್ಟೋನ್ ಪಾರ್ಕ್, ಮುಚ್ಚಿ ಹೋಗಿರುವ ಜ್ವಾಲಮುಖಿಯೊಂದರ ಮೇಲೆ ರೂಪುಗೊಂಡಿದೆ. ಒಂದು ದಿನ ಆ ಜ್ವಾಲಾಮುಖಿ ಸ್ಪೋಟಗೊಂಡು ಇಡೀ ಪಾರ್ಕ್ ಮಾಯವಾಗಲಿದೆ. 2011ರಲ್ಲಿ ಬಂದ ಹಾಲಿವುಡ್ ಚಲನಚಿತ್ರ ‘2012’ರಲ್ಲಿ ಇಡೀ ಜಗತ್ತಿನ ವಿನಾಶ ಆರಂಭವಾಗುವುದು ಇಲ್ಲೇ.

ಯೆಲ್ಲೋಸ್ಟೋನಿನ ಕೆಲ ಪ್ರಮುಖ ಆಕರ್ಷಣೆಗಳೆಂದರೆ ಗ್ರ್ಯಾಂಡ್ ಕ್ನಾನ್ಯನ್ (Grand Canyon, ಮಹಾ ಕಣಿವೆ), ಓಲ್ಡ್ ಫೈತ್ಫುಲ್ ಬಿಸಿನೀರ ಬುಗ್ಗೆ, ಗ್ರ್ಯಾಂಡ್ ಪ್ರಿಸ್ಮ್ಯಾಟಿಕ್ ಸ್ಪ್ರಿಂಗ್, ಯೆಲ್ಲೋಸ್ಟೋನ್ ಜಲಪಾತ, ಹಾಗೂ ಲೆಕ್ಕವಿಲ್ಲದಷ್ಟು ಸಸ್ಯ ಹಾಗೂ ವನ್ಯಜೀವಿ ಸಂಪತ್ತು. ಪ್ರತಿಯೊಂದೂ ಕೂಡ ಅದರದೇ ರೀತಿಯಲ್ಲಿ ವಿಶಿಷ್ಟ ಹಾಗೂ ಅನನ್ಯ. ಅವುಗಳ ವೈಭವವನ್ನು ನೋಡಿಯೇ ಅನುಭವಿಸಬೇಕು.

39 ಕಿಲೋಮೀಟರ್ ಇದ್ದದ ಗ್ರ್ಯಾಂಡ್ ಕ್ಯಾನ್ಯನ್ ಹೆಸರಿಗೆ ತಕ್ಕಂತೆ ಸೂಪರ್ ಗ್ರ್ಯಾಂಡ್. ಯೆಲ್ಲೋಸ್ಟೋನ್ ನದಿಯ ಕೊರೆತದಿಂದ ನಿರ್ಮಾಣವಾಗಿರುವ ಈ ಕಣಿವೆಯನ್ನು ನೋಡಲು ನಿಮಗೆ ದಿನಗಳೇ ಬೇಕಾಗಬಹುದು. ಅಷ್ಟೊಂದು ಬಣ್ಣಗಳು, ವಿವಿದ ರೀತಿಯ ನೈಸರ್ಗಿಕ ಕೌತುಕಗಳು ಅಲ್ಲಿವೆ. ಅದನ್ನು ಸರ್ಕಾರ ಉಳಿಸಿಟ್ಟಿರುವ ರೀತಿಯೂ ಕೂಡ ಅದ್ಭುತ. ಪ್ರಕೃತಿ ವರ್ಷಾನುವರ್ಷ ನೆಲದಲ್ಲಿ ಪದರಗಳನ್ನು ಸೃಷ್ಟಿಸುವುದರಿಂದ ಹಾಗೂ ಯೆಲ್ಲೋಸ್ಟೋನ್ ನದಿ ಇದನ್ನು ಹತ್ತಾರು ಸಾವಿರ ವರ್ಶಗಳಿಂದ ಕೊರೆಯುತ್ತಿರುವುದರಿಂದ, ಅಲ್ಲಿನ ಕಣಿವೆಯ ಗೋಡೆಗಳಲ್ಲಿ ಆಯಾಕಾಲದ ಪ್ರತಿಯೊಂದು ವಿವರವೂ ಲಭ್ಯವಿದೆ. ಉದಾಹರಣೆಗೆ ಮೂರುಸಾವಿರ ವರ್ಷದ ಹಿಂದೆ ಅಲ್ಲಿ ಅತಿವೃಷ್ಟಿಯಾಗಿದ್ದಿದ್ದರೆ, ಆ ವರ್ಷದ ಪದರದಲ್ಲಿ ಬೇರೆಯದೇ ಬಣ್ಣದ ಮಣ್ಣು ಕಂಡುಬರುತ್ತದೆ. ಕೆಲಕಡೆಯಂತೂ ನದಿಯ ಹರಿಯುವಿಕೆಯಿಂದ ನಿರ್ಮಾಣವಾದ ಕಲ್ಲಿನ ಕೆತ್ತನೆಗಳು ಅತ್ಯದ್ಭುತ.

ಓಲ್ಡ್ ಫೈತ್ಫುಲ್ ಎಂಬ ಬಿಸಿನೀರ ಬುಗ್ಗೆ ಇಲ್ಲಿಯ ಇನ್ನೊಂದು ಆಕರ್ಷಣೆ. 1870ರಂದು ವಾಶ್ಬರ್ನ್-ಲ್ಯಾಂಗ್ಫೋರ್ಡ್-ಡೊಆನ್ ಯಾತ್ರ್ಯಲ್ಲಿ ಕಂಡುಹಿಡಿಯಲ್ಪಟ್ಟ ಈ ಬುಗ್ಗೆಯ ವೈಶಿಷ್ಟ್ಯವೆಂದರೆ, ಇದು ಕರಾರುವಕ್ಕಾಗಿ ಪ್ರತೀ 91 ನಿಮಿಷಕ್ಕೊಮ್ಮೆ ಚಿಮ್ಮುವುದು. ಏನೇ ಬರಲಿ, ಬರದಿರಲಿ, ಮಳೆ ಇರಲಿ, ಬಿಸಿಲಿರಲಿ, ಚಳಿಯಿರಲಿ, ಹಗಲಿರಲಿ, ರಾತ್ರಿಯಿರಲಿ, ಹೆಸರಿಗೆ ತಕ್ಕಂತೆ ನಂಬಿಕೆ ಅರ್ಹನಾಗಿ, ಈ ಬುಗ್ಗೆ ಪ್ರತಿ 91 ನಿಮಿಷಕ್ಕೊಮ್ಮೆ ಸುಮಾರು 22,000 ಲೀಟರ್ನಷ್ಟು ಬಿಸಿನೀರನ್ನು 106 ಅಡಿಯಷ್ಟು ಎತ್ತರಕ್ಕೆ (ಕೆಲವೊಮ್ಮೆ 185 ಅಡಿ ಎತ್ತರಕ್ಕೆ) ಚಿಮ್ಮಿಸುತ್ತದೆ.

ಇನ್ನು ಗ್ರ್ಯಾಂಡ್ ಪ್ರಿಸ್ಮ್ಯಾಟಿಕ್ ಸ್ರ್ಪಿಂಗ್ ಎನ್ನುವುದನ್ನು ಮಾತುಗಳಲ್ಲಿ ವರ್ಣಿಸಲು ಅಸಾಧ್ಯ. ಕಾಮನಬಿಲ್ಲಿನ ಎಲ್ಲಬಣ್ಣಗಳನ್ನೂ ಕರಗಿಸಿ ಪ್ರಕೃತಿ ಎರಕ ಹೊಯ್ದಿದೆಯೇನೋ ಎಂಬ ಈ ನೈಸರ್ಗಿಕ ಅದ್ಭುತವನ್ನು ನೋಡಿಯೇ ಸಂತೋಷಪಡಬೇಕು. ಈ ಲೇಖನದ ಕೆಳಗಡೆ ಇರುವ ಚಿತ್ರಗಳನ್ನು ನೋಡಿ ಸಧ್ಯಕ್ಕೆ ಆನಂದಿಸಿ. ಎಂದಾದರೂ ಅಮೇರಿಕಕ್ಕೆ ಭೇಟಿಕೊಟ್ಟರೆ ಯೆಲ್ಲೋಸ್ಟೋನ್ ಪಾರ್ಕಿಗೂ ಎಡತಾಕಿ, ಆನಂದಿಸಿ.

ಕೊಸರು:

ಭಾರತದಲ್ಲೇನೂ ಇಂತಹ ನೈಸರ್ಗಿಕ ಅದ್ಭುತಗಳಿಗೆ ಬರವಿಲ್ಲ. ಆದರೆ, ರಾಜಕೀಯ ಬೆರೆಸದೆ ಅದನ್ನು ಗುರುತಿಸುವ ಹಾಗೂ ಉಳಿಸುವ ಛಲಕ್ಕೆ ಬರವಿದೆ. ಮುಂದಿನ ಪೀಳಿಗೆಗೆ ಏನಾದರೂ ಉಳಿಸಬೇಕು ಎಂಬ ಮನಸ್ಥಿತಿಯ ಬರವಿದೆ. ಪ್ರಕೃತಿಯನ್ನು ದೇವರೆಂದು ಪೂಜಿಸುವ ‘ನಾವು ಅವಳನ್ನು ಸಂರಕ್ಷಿಸಬೇಕಿದೆ’ ಎಂಬ ಹುಚ್ಚಿಗೆ ಬರವಿದೆ.

ನಮ್ಮಲ್ಲಿ ಯಾರಾದರೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಡೆ ಹೋಗಿದ್ದೀರಾ? ಆ ಪ್ರಾಜೆಕ್ಟಿಗೆ ಅಡ್ಡಗಾಲಾದ ರಾಜಕೀಯ ನಡೆಗಳೆಷ್ಟು ಎಂದು ನೋಡಿಬಲ್ಲ ನನಗೆ, ಅದರ ಇಂದಿನ ಸ್ಥಿತಿಗೆ ಬಹಳವೇ ಸಂತೋಷವಿದೆ. ಸುಮಾರು ಆರೇಳು ವರ್ಷದ ಮುಂಚೆ ಹೋಗಿಬಂದವರಿದ್ದರೆ, ಈಗೊಮ್ಮೆ ಹೋಗಿ ಬನ್ನಿ. ಅದೆಷ್ಟು ಹಸಿರಿನಿಂದ ನಳನಳಿಸುತ್ತಿದೆ ಎಂದು ನೋಡಿ. ಸಂತೋಷಪಡಿ

ಜಿಮ್-ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಕಡೆ ಹೋಗಿದ್ದೀರಾ? ಭಾರತದ ಮೊತ್ತಮೊದಲ ರಾಷ್ಟ್ರೀಯ ಉದ್ಯಾನವದು. ನನ್ನ ಪ್ರಕಾರ ಭಾರತದ ಎರಡನೇ ಅತ್ಯುತ್ತಮ ಉದ್ಯಾನವನವದು. ಆದರೆ ನಮಗೆ ಮೊದಲ ರಾಷ್ಟ್ರೀಯ ಉದ್ಯಾನವನ ಸಿಗಬೇಕಾದರೆ 1936 ಆಗಿತ್ತು. 1970ರವರೆಗೆ ನಮ್ಮಲ್ಲಿದ್ದದ್ದು ಕೇವಲ ಐದೇ ಐದು ರಾಷ್ಟ್ರೀಯ ಉದ್ಯಾನವನಗಳು. 2012ರ ಲೆಕ್ಕದ ಪ್ರಕಾರ ನಮ್ಮಲ್ಲಿ ಈಗ 112 ರಾಷ್ಟ್ರೀಯ ಉದ್ಯಾನವನಗಳಿವೆ. ಆದರೆ ಬೇಸರದ ವಿಷಯವೆಂದರೆ ಇದು ನಮ್ಮ ಇಡೀ ದೇಶದ ಭೂಪ್ರದೇಶದ 1.21% ಅಷ್ಟೇ!

‪#‎ದಿನಕ್ಕೊಂದು_ವಿಷಯ‬, ‪#‎yellowstone_park‬, ‪#‎ಯೆಲ್ಲೋಸ್ಟೋನ್_ಪಾರ್ಕ್‬,‪#‎Grand_Canyon‬

Bison Crossing The Road In Yellowstone bufflo-gore-yellow-flyer-193x300 colorado_float GC2 GC3 Grand-Canyon grandcanyon1 grand-prismatic-spring grizzly_bear Old Faithful Yellowstone Falls yellowstone national park animals

ದಿನಕ್ಕೊಂದು ವಿಷಯ – ೮

ದಿನಕ್ಕೊಂದು ವಿಷಯ – ೮

ಗೂಗಲ್ಲಿಗೆ ದುಡ್ಡು ಎಲ್ಲಿಂದ ಬರುತ್ತದೆ!?

ನಾನು ಸುಮಾರು ಒಂದೂವರೆ ವರ್ಷ ಫೇಸ್ಬುಕ್ಕಿನಲ್ಲಿರುವ ಅಡಗಿರುವ ಗ್ರಾಫ್ ಸರ್ಚ್ ಬಗ್ಗೆ ಹೇಳಿದ್ದೆ (ಲಿಂಕ್ ಇಲ್ಲಿದೆ). ಅದರಲ್ಲಿ ಕೊನೆಯಲ್ಲಿ ಗೂಗಲ್ಲಿಗೆ ಹಣ ಎಲ್ಲಿಂದ ಬರುತ್ತದೆಯೆಂದು ಇನ್ನೊಮ್ಮೆ ವಿವರಿಸುತ್ತೇನೆಂದು ಹೇಳಿದ್ದೆ. ಇವತ್ತ್ಯಾಕೋ ಅದರ ಬಗ್ಗೆಯೇ ಬರೆಯುವ ಮನಸ್ಸಾಯ್ತು.

ಈಗಿನ ದಿನಗಳಲ್ಲಿ ನೀವು ನಿಮಗೇನಾದರೂ ಗೊತ್ತಿಲ್ಲವೆಂದರೆ ಮೊದಲು ಮಾಡುವ ಕೆಲಸವೇನು? ಗೂಗಲ್ಲಿನ ಮೊರೆಹೋಗುವುದು. ಗೂಗಲ್.ಕಾಂ ಗೆ ಹೋಗಿ ನಿಮಗೇನೋ ಬೇಕೋ ಅದನ್ನು ಟೈಪಿಸಿದರೆ, ಗೂಗಲ್, ಜಗತ್ತಿನಲ್ಲಿರುವ ಎಲ್ಲಾ ಅಂತರ್ಜಾಲ ಪುಟಗಳಲ್ಲಿ ಯಾವ್ಯಾವುದರಲ್ಲಿ ನೀವು ಕೀಲಿಸಿದ ವಿಷಯದ ಉಲ್ಲೇಖವಿದೆಯೋ ಅದನ್ನೆಲ್ಲಾ ಪಟ್ಟಿ ಮಾಡಿ ‘ಓದ್ಕೋ ಹೋಗು’ ಅಂತಾ ನಿಮ್ಮೆದೆರು ಎಸೆಯುತ್ತದೆ. ಅದರ ಮೇಲೆ ಮೂಲೆಯಲ್ಲಿ ‘ನಿನ್ನ ಈ ಡಬ್ಬಾ ವಿಷಯವನ್ನು 313 ಮಿಲಿಯನ್ನು ಪುಟಗಳಲ್ಲಿ ಹುಡುಕಲು 0.30 ಸೆಕೆಂಡುಗಳಷ್ಟೇ ಹಿಡಿಯಿತು’ ಅಂತಾ ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಳ್ಳುತ್ತದೆ (ಹೌದು ತಮಾಷೆಯಲ್ಲ, ನೀವು ಏನನ್ನಾದರೂ ಹುಡುಕಿದಾಗ ಬರುವ ಪಲಿತಾಂಶಗಳ ಪಟ್ಟಿಯಲ್ಲಿ, ಮೊದಲ ಉತ್ತರಕ್ಕಿಂತ ಸ್ವಲ್ಪ ಮೇಲೆ ನೋಡಿ, ಗೂಗಲ್ಲಿನ ಕೊಚ್ಕಳಿಂಗ್ ಕೆಲಸ :P). ಈಗಂತೂ ಅಂತರ್ಜಾಲದಲ್ಲಿ ಏನಾದರೂ ಹುಡುಕುವುದು ಎಂದರೆ ‘ಗೂಗಲ್ ಮಾಡುವುದು’ ಎಂದೇ ಆಗಿಹೋಗಿದೆ. Googling ಅನ್ನುವ ಪದವನ್ನು ಜೂನ್ 2006ರಂದು ಆಕ್ಸ್ಫರ್ಡ್ ಶಬ್ದಕೋಶಕ್ಕೆ ಅಧಿಕೃತವಾಗಿ ಸೇರಿಸಲಾಯಿತು.

1998ರಲ್ಲಿ ಗೂಗಲ್ ಪ್ರಾರಂಭವಾದಾಗ ದಿನಕ್ಕೆ ಹತ್ತುಸಾವಿರ ಹುಡುಕಾಟಗಳನ್ನು ನಡೆಸುತ್ತಿತ್ತು (2006ರಲ್ಲಿ ಗೂಗಲ್ ಬರೇ ಒಂದು ಸೆಕೆಂಡಿಗೆ ಇಷ್ಟು ಹುಡುಕಾಟಗಳನ್ನು ನಡೆಸುತ್ತಿತ್ತು! 😛 ). ಪ್ರಾರಂಭವಾದ ಒಂದು ವರ್ಷದಲ್ಲೇ ಗೂಗಲ್ ದಿನಕ್ಕೆ ಮೂರುವರೆ ದಶಲಕ್ಷ ಹುಡುಕಾಟದ ಆಜ್ಞೆಗಳನ್ನು ಸಂಸ್ಕರಿಸುತ್ತಿತ್ತು. ಈಗಿನ ಅಂದಾಜಿನ ಪ್ರಕಾರ ಗೂಗಲ್ ಒಂದು ದಿನಕ್ಕೆ ಸರಿಸುಮಾರು 3.8 ಬಿಲಿಯನ್ (380ಕೋಟಿ) ಹುಡುಕಾಟಗಳನ್ನು ನಡೆಸುತ್ತದೆ. ಬರೀ ಒಂದು ಖಾಲಿ ಬಿಳಿಪೇಜು ಇಟ್ಕೊಂಡು, ಜಗತ್ತಿಗೆಲ್ಲಾ ಪುಗ್ಸಟ್ಟೆ ಜ್ಞಾನ ಹಂಚೋಕೆ ಗೂಗಲ್ಲಿಗೇನು ಹುಚ್ಚಾ, ಹಾಗಾದರೆ? ಖಂಡಿತಾ ಇಲ್ಲಾ ಸ್ವಾಮಿ. ಸಧ್ಯ ಗೂಗಲ್ಲಿನ ಒಟ್ಟು ಉದ್ಯೋಗಿಗಳ ಸಂಖ್ಯೆ 52,069. ಇಷ್ಟು ಜನಕ್ಕೆ ಸಂಬಳ ಏನು ದೇವಲೋಕದಿಂದಾ ಬರುತ್ತಾ. ಇಲ್ಲ ಅಲ್ವಾ!? ಮತ್ತೆ!? ಅವರ ಸಂಬಳವೆಲ್ಲಾ ನಮ್ಮ ನಿಮ್ಮಿಂದಲೇ ಬರೋದು 🙂 ಹೇಗೆ ಅಂತೀರಾ. ಒಂದೇ ಉತ್ತರ: ‘ಜಾಹೀರಾತು’. ಗೂಗಲ್ಲಿನ 97% ಅದಾಯ ಬರುವುದು ಜಾಹೀರಾತಿನ ವ್ಯವಹಾರದಿಂದ.

ಗೂಗಲ್ಲಿನ ಜಾಹೀರಾತಿನ ಮಾಯಾಲೋಕ:

ಗೂಗಲ್ಲಿನ ಹಣದ ಹಿಂದಿನ ರಹಸ್ಯ ಅರಿಯಬೇಕಾದರೆ, ಮೊದಲು ಸಾಂಪ್ರದಯಿಕ ಜಾಹೀರಾತಿನ ವ್ಯವಹಾರ ಅರಿಯಬೇಕು. ನಿಮ್ಮದೊಂದು ಪ್ರಾಡಕ್ಟ್ ಇದ್ದರೆ ನೀವದನ್ನು ಮಾರಲು ಪೇಪರ್, ರೇಡಿಯೋ ಹಾಗು ಟೀವಿಯಲ್ಲಿ ಜಾಹೀರಾತು ನೀಡುತ್ತೀರಿ, ಅಲ್ಲವೇ!? ಯಾರಾದರೂ ನಿಮ್ಮ ಪ್ರಾಡಕ್ಟ್ ನೋಡಿ ತೆಗೆದುಕೊಳ್ಳಲಿ ಎಂದು ಕಾಯುತ್ತೀರ. ಇಲ್ಲಿ ನೀವು, ಕೊಳ್ಳುವವ ಬರುವವರೆಗೆ ಕಾಯಬೇಕು. ಇಷ್ಟಕ್ಕೂ ನೀವು ಕೊಟ್ಟ ಜಾಹೀರಾತು ಜನರಿಗೆ ತಲುಪಿದೆಯೋ ಇಲ್ಲವೋ ಎಂದು ನಿಮಗೆ ಗೊತ್ತಾಗುವುದೂ ಇಲ್ಲ. ಜನ ಪೇಪರ್ ಓದಿ ಬದಿಗಿಟ್ಟೂ ಮರೆತಿರಬಹುದು. ರೇಡಿಯೋ ಟೀವಿಯಲ್ಲಿ ನಿಮ್ಮ ಜಾಹೀರಾತು ಬರುತ್ತಿರುವಾಗ ಜನ ಬೇರೆ ಚಾನೆಲ್ಲಿನಲಿರಬಹುದು. ಆದ್ದರಿಂದ, ಜಾಹೀರಾತಿನ ಮೇಲೆ ನೀವು ವ್ಯಯಿಸಿದ ಹಣದ ಹೂಡಿಕೆಯ ಮೇಲಿನ ಲಾಭ(return on investment)ದ ಅರಿವು ನಿಮಗಾಗುವುದೇ ಇಲ್ಲ.

ಆದರೆ, ಒಮ್ಮೆ ಯೋಚಿಸಿ. ಯಾರ್ಯಾರಿಗೆ ನಿಮ್ಮ ಪ್ರಾಡಕ್ಟಿನ (ಅಥವಾ ನಿಮ್ಮ ಪ್ರಾಡಕ್ಟಿನ ತರಹದೇ ಬೇರೊಂದು ಪ್ರಾಡಕ್ಟಿನ) ಅಗತ್ಯವಿದೆ ಎಂದು ನಿಮಗೆ ಮೊದಲೇ ತಿಳಿದರೆ!? ಎಷ್ಟು ಸಹಾಯವಾಗಬಹುದಲ್ಲವೇ? ಅಲ್ಲಿಯೇ ಹೋಗಿ ನೀವು ನಿಮ್ಮದೊಂದು ಟೆಂಟ್ ಹಾಕಿ ಕೂರಬಹುದಲ್ಲವೇ! ನಮ್ಮ ಹಳ್ಳಿಕಡೆ ಸ್ಕೂಲ್ ಡೇ, ಪ್ರತಿಭಾ ಕಾರಂಜಿ, ವಲಯ ಮಟ್ಟದ ಕ್ರೀಡಾಕೂಟ ಎಲ್ಲೆಲ್ಲಿ ಯಾವಾಗ ನಡೆಯುತ್ತದೆಂದು ಮೊದಲೇ ತಿಳಿದುಕೊಂಡು, ಅಲ್ಲಿ ಬಂದು ಕೂರುವ ಐಸ್ಕ್ರೀಮ್ ವ್ಯಾಪಾರಿಗಳಂತೆ 🙂 ಕೊಳ್ಳುವವ ಇಲ್ಲದೆಡೆ ಸುಮ್ಮನೇ ವೃಥಾ ಸಮಯ ಹಾಗೂ ಹಣ ವೆಚ್ಚ ಮಾಡುವ ಬದಲು, ಇದು ಒಳ್ಳೆಯದಲ್ಲವೇ!?

ಇಲ್ಲೇ ನೋಡಿ ಗೂಗಲ್ ಸಹಾಯಕ್ಕೆ ಬರುವುದು. ಇಂದಿನ ಕಾಲದಲ್ಲಿ ಯಾರಿಗೆ ಏನು ಬೇಕೆಂದು ಗೊತ್ತಿರುವುದು ಯಾರಿಗೆ!? ಯಾರಿಗೆ ಗೋವಾಕ್ಕೆ ಟಿಕೇಟು ಬೇಕು, ಯಾರಿಗೆ ಅಮೇರಿಕಾದಲ್ಲಿ ಸಿಗುವ ಡಿಗ್ರಿಗಳು ಬೇಕು, ಯಾರಿಗೆ ಸೆಡಾನ್ ಕಾರು ಬೇಕು, ಯಾರಿಗೆ ಹೆಂಡತಿ ಬೇಕು, ಯಾರಿಗೆ ಸೆಕ್ಸ್ ಆಟಿಕೆಗಳು ಬೇಕು, ಯಾರಿಗೆ ಹೆರಿಗೆ ಆಸ್ಪತ್ರೆ ಬೇಕು, ಯಾರಿಗೆ ವಿಚ್ಚೇಧನ ಬೇಕು ಎಲ್ಲವೂ ಗೊತ್ತಿರುವುದು ಜಗತ್ತಿನಲ್ಲಿ ಒಬ್ಬನಿಗೇ. ನಿಮ್ಮ ಸರ್ಚ್ ಎಂಜಿನ್ನಿಗೆ. ಈ ಸರ್ಚ್ ಎಂಜಿನ್ನಿನ ವ್ಯವಹಾರದಲ್ಲಿ ಎಲ್ಲಕ್ಕಿಂತಾ ಮುಂಚೂಣಿಯಲ್ಲಿರುವುದು ಗೂಗಲ್. ಹಾಗಾಗಿ, ಕೊಳ್ಳುವವರಿಗೂ, ಮಾರುವವರಿಗೂ ಗೂಗಲ್ ಒಂದು ಅಕ್ಷಯಪಾತ್ರೆಯಿದ್ದಂತೆ. ಚಾಣಾಕ್ಷ ಮಾರಾಟಗಾರರು ತಮ್ಮ ಜಾಹೀರಾತುಗಳನ್ನು ಗೂಗಲ್ಲಿನಲ್ಲಿ ತೇಲಿಬಿಡುತ್ತಾರೆ. ಅದನ್ನು ಸರಿಯಾದ ಗ್ರಾಹಕರಿಗೆ ತಲುಪಿಸುವ ಕೆಲಸ ಗೂಗಲ್ ಮಾಡುತ್ತದೆ. And believe me, Google does it at it’s best.

ನೀವು ಡಿಗ್ರಿ ಮುಗಿಸಿದ್ದೀರ. ಅಮೇರಿಕಾದಲ್ಲಿ ಎಂ.ಬಿ.ಎ ಮಾಡಬೇಕೆಂದಿದ್ದೀರ. ಗೂಗಲ್ಲಿನಲ್ಲಿ ‘ಅಮೇರಿಕಾದ ಉತ್ತಮೋತ್ತಮ ಎಂ.ಬಿ.ಎ ಕಾಲೇಜುಗಳು’ ಎಂದು ಹುಡುಕುತ್ತೀರ. ನಿಮಗೆ ಬೇಕಾಗಿರುವುದು ಡಿಗ್ರಿ ಹಾಗೂ ಅದನ್ನು ಕೊಡಬಲ್ಲ ಉತ್ತಮ ಕಾಲೇಜು. ನಿಮ್ಮ ಸಧ್ಯದ ಗುರಿ ಅದು ಮಾತ್ರ. ಆದರೆ, ಇದನ್ನು ಒಮ್ಮೆ ನಿಮ್ಮನ್ನು ನೀವೇ ಗ್ರಾಹಕನ ಸ್ಥಾನದಲ್ಲಿ ನಿಲ್ಲಿಸಿನೋಡಿ. ಅಮೇರಿಕಾದಲ್ಲಿ ಡಿಗ್ರಿ ಬೇಕು ಎಂದಮೇಲೆ ನಿಮಗೆ ಶಿಕ್ಷಣ ಸಾಲ ಬೇಕಾಗಬಹುದು. ಅಮೇರಿಕಾಕ್ಕೆ ಹೋಗಲು ವಿಮಾನ ಟಿಕೇಟು ಬೇಕಾಗುತ್ತದೆ. ಅಲ್ಲಿ ಇರಲು ಮನೆಯೋ/ಹಾಸ್ಟೆಲ್ಲೋ ಬೇಕಾಗಬಹುದು. ಅಮೇರಿಕಾದಿಂದ ಅಮ್ಮನಿಗೆ ಫೋನುಮಾಡಲು VOIP ಕಾರ್ಡು ಬೇಕಾಗುತ್ತದೆ. ಅಮೇರಿಕಾದಲ್ಲಿ ಡೇಟಿಂಗಿಗಾಗಿ (ನೀವು ಅಲ್ಲಿಗೆ ಓದಲು ಹೋಗುವುದಾಗಿದ್ದರೂ ಸಹ) ಹುಡುಗಿ/ಗ ಬೇಕಾಗಬಹುದು. ಸೋ, ಇದ್ದಕ್ಕಿಂದಂತೆ ನೀವು ಒಂದು ಡಿಗ್ರಿಯ ಜೊತೆಗೆ ಬಹಳಷ್ಟು ಬೇರೆ ಪ್ರಾಡಕ್ಟ್ ಹಾಗೂ ಸೇವೆಗಳಿಗೆ ಒಬ್ಬ ಸಂಭಾವ್ಯ ಗ್ರಾಹಕ(potential customer)ನಾಗಿ ಪರಿವರ್ತಿತಗೊಂಡಿರಿ. ಅಂದರೆ ನಿಮ್ಮ ಹುಡುಕಾಟವನ್ನು ಗೂಗಲ್ ಆ ಮೇಲಿನ ಎಲ್ಲಾ ಮಾರಾಟಗಾರರಿಗೆ ‘ಮಿಕ ಬಂತು ನೋಡ್ರಪ್ಪೋ’ ಅನ್ನೋ ಸಂದೇಶವನ್ನಾಗಿ ಕಳುಹಿಸುತ್ತದೆ. ಹಾಗೂ ನೀವು ನಡೆಸಿದ ಗೂಗಲ್ ಹುಡುಕಾಟದಲ್ಲಿ ಆ ಸೇವೆಗಳ ಜಾಹೀರಾತನ್ನೂ ಸೇರಿಸುತ್ತದೆ. ನೀವು ಆ ಕೊಂಡಿಯ ಮೇಲೆ ಕ್ಲಿಕ್ಕಿಸಿದಾಗ ಮಾರಾಟಗಾರ ಗೂಗಲ್ಲಿಗೆ ಹಣಪಾವತಿಯಾಗುವಂತೆ, ಮೊದಲೇ ಒಪ್ಪಂದವಾಗುತ್ತದೆ. ಒಂದೇ ಜಾಹೀರಾತಿನ ಮೇಲೆ, ಪ್ರತೀಬಾರಿ ಕ್ಲಿಕ್ಕಿಸಿದಾಗಲೂ ಮಾರಾಟಗಾರ ಗೂಗಲ್ಲಿಗೆ ಹಣ ಪಾವತಿಸಬೇಕು. ಇದನ್ನೇ Pay Per Click ಎನ್ನುವುದು. ಮಾರಾಟಗಾರ ತನ್ನ ಪ್ರಾಡಕ್ಟಿಗನುಗುಣವಾಗಿ, ಒಂದು ಕ್ಲಿಕ್ಕಿಗೆ ಇಷ್ಟು ಹಣ ಅಂತ ನಿರ್ಧರಿಸಬಹುದು. ಅಥವಾ, ಇಷ್ಟೊಂದು ಗ್ರಾಹಕರನ್ನು ತಲುಪಲು ಇಷ್ಟು ಹಣ ಎಂದೂ ನಿರ್ಧರಿಸಬಹುದು.

ಇದರಿಂದ ಎಷ್ಟೊಂದು ಲಾಭ ನೋಡಿ! ಟೀವಿಯ ಮುಂದೆ ಕುಳಿತಾಗ ಆಗುವಂತೆ ನಿಮಗೆ ಅನಗತ್ಯವಾಗಿರುವ ಜಾಹೀರಾತುಗಳನ್ನು ನೋಡುವ ಪ್ರಮೇಯವೇ ಇಲ್ಲ. ಮಾರಾಟಗಾರನಿಗೂ ಸಹ ಹೆಚ್ಚು ಫೋಕಸ್ಡ್ ಆಗಿ ಗ್ರಾಹಕರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ಯಾರಿಗೆ ತನ್ನ ಸೇವೆಯ ಅಗತ್ಯವಿದೆಯೋ ಅವರ ಮೇಲೆ ಹೆಚ್ಚು ಸಮಯಹೂಡಿಕೆ ಮಾಡಬಹುದು. ಅದೂ ಅಲ್ಲದೆ, ಕ್ಲಿಕ್ಕಿಸಿದಾಗ ಹಣಪಾವತಿ ಮಾಡುವ ವ್ಯವಸ್ಥೆ ಇರುವುದರಿಂದ, ಆತನಿಗೂ ಸಹ ಯಾರ್ಯಾರು ತನ್ನ ಜಾಹೀರಾತು/ಪ್ರಾಡಕ್ಟ್ ನೊಡುತ್ತಾರೋ ಅದಕ್ಕೆ ಮಾತ್ರ ಹಣಪಾವತಿಸಿದರೆ ಸಾಕು. ನೋಡದ ಅಥವಾ ತನ್ನ ಬಳಿಬರದ ಗ್ರಾಹಕರಿಗಾಗಿ ಗೂಗಲ್ಲಿಗೆ ಹಣಪಾವತಿಸುವ ಅಗತ್ಯವಿಲ್ಲ. ಅದೂ ಅಲ್ಲದೆ, ಜಾಹೀರಾತಿನ ಮೇಲೆ ಕ್ಲಿಕ್ಕಿಸಿದ ನಂತರ, ಮಾರಾಟಗಾರನ ಅಂತರ್ಜಾಲ ಮಾಣಿಗಳು (Internet servers, ಸರ್ವರ್ ಅಂದ್ರೆ ಮಾಣಿ ತಾನೇ 😛 ) ಗ್ರಾಹಕನ ಕಂಪ್ಯೂಟರ್ನಲ್ಲಿ ತಮ್ಮ cookieಗಳನ್ನ ಸ್ಥಾಪಿಸೋದ್ರಿಂದ, ಆ ಗ್ರಾಹಕನನ್ನು ಮತ್ತೆ ಮತ್ತೆ ತಮ್ಮ ಜಾಹೀರಾತು ತೋರಿಸುವ ಮೂಲಕ ಬಲೆಗೆ ಹಾಕ್ಕೊಳ್ಳಬಹುದು. ಈಗ ನಿಮಗೆ ಆ ಪ್ರಾಡಕ್ಟ್/ಸೇವೆಯ ಬಗ್ಗೆ ದಂಡಿಯಾಗಿ ಜಾಹೀರಾತುಗಳು ಕಾಣಸಿಗತೊಡಗುತ್ತವೆ. ಗೂಗಲ್ಲಿನಲ್ಲಿ ಏನಾದರೂ ಹುಡುಕಿದಾಗ ತನ್ನ ಪಲಿತಾಂಶಗಳಲ್ಲಿ, ನಿಮ್ಮ ಹುಡುಕಾಟದ ವಿಷಯಕ್ಕೆ ಮಾರಾಟಗಾರರ ಪಲಿತಾಂಶಗಳೂ ಕಾಣಸಿಗುತ್ತವೆ. ಇದರಿಂದ ಮಾರಾಟಗಾರ ಗೂಗಲ್ಲಿಗೆ ಹಣಪಾವತಿಸುವುದು ಒಂದೇ ಬಾರಿಯಾದರೂ, ಗ್ರಾಹಕನನ್ನು ಆಕರ್ಷಿಸಲು ಮತ್ತೆ ಮತ್ತೆ ಅವಕಾಶದೊರೆಯುತ್ತದೆ.

ನಾನು ಗೂಗಲ್ಲನ್ನು ಮೆಚ್ಚುವ ಒಂದು ವಿಚಾರವೆಂದರೆ, ದುಡ್ಡಿಗಾಗಿ ಇಷ್ಟೆಲ್ಲಾ ಮಾಡುವ ಗೂಗಲ್, ಜ್ಞಾನಾರ್ಜನೆಯ ವಿಷಯಕ್ಕೆ ಬಂದಾಗ, ತನ್ನ ಪಲಿತಾಂಶಗಳಲ್ಲಿ ಯಾವುದೇ ಜಾಹೀರಾತಿನ ಕೊಂಡಿಯನ್ನು ಮೊದಲು ತೋರಿಸದೆ, ಉಚಿತವಾಗಿ ಜಗತ್ತಿಗೆಲ್ಲಾ ಜ್ಞಾನ ಹಂಚುತ್ತಿರುವ ಲಾಭರಹಿತ ಸಂಸ್ಥೆಯಾದ ‘ವಿಕೀಪೀಡಿಯಾ’ದ ಕೊಂಡಿಯನ್ನೇ ಮೊತ್ತಮೊದಲಿಗೆ ತೋರಿಸುತ್ತದೆ.

ಸರಿ ಹಾಗಾದರೆ, ನಿಮಗೆ ಗೂಗಲ್ಲಿಗೆ ಹಣ ಹೇಗೆ ಬರುತ್ತದೆಂಬ ಸ್ಥೂಲ ಕಲ್ಪನೆ ದೊರಕಿದೆ ಎಂದುಕೊಳ್ಳುತ್ತೇನೆ. ಇನ್ನೊಂದು ತಿಳಿಯಬೇಕಾದ ವಿಷಯವೆಂದರೆ, ಗೂಗಲ್ಲಿನ ದರಪಟ್ಟಿಯಲ್ಲಿ ಎಲ್ಲಾ ವಿಷಯಗಳಿಗೂ ಒಂದೇ ಬೆಲೆಯಿರೋದಿಲ್ಲ. ಸ್ಕ್ರೂಡ್ರೈವರ್ ಮಾರುವವ ಹಾಗೂ ಮರ್ಸಿಡಿಸ್ ಕಾರು ಮಾರುವವ ತಮ್ಮ ಜಾಹೀರಾತಿಗೆ ಒಂದೇ ಬೆಲೆತೆರೆಲು ಸಾಧ್ಯವಿಲ್ಲ ಅಲ್ಲವೇ!? ಕೆಳಗಿನ ಚಿತ್ರದಲ್ಲಿ, ಗೂಗಲ್ಲಿನ ಕೆಲ ಅತೀ ದುಬಾರಿ ‘ಹುಡುಕುಪದಗಳ’ ಪಟ್ಟಿ ಇದೆ ನೋಡಿ.

ಇವತ್ತಿಗೆ ಇಷ್ಟು ಸಾಕು ಅಂದುಕೊಳ್ತೀನಿ. ಕಮೆಂಟಿನಲ್ಲಿ ಉಳಿದ ಚರ್ಚೆಗಳು ಮುಂದುವರೆಯಲಿ. Hope you enjoyed reading it.

ಕೊಸರು:
ಗೂಗಲ್ಲಿನ ಸಹಾಯದಿಂದ ಜೀವನಸಂಗಾತಿ ಹುಡುಕಿದ ಕೆಲ ಪಾರ್ಟಿಗಳು ‘ಈ ಹುಡುಕಾಟಕ್ಕೆ, ಅತೀ ಹೆಚ್ಚು ಬೆಲೆ ತೆತ್ತದ್ದು ನಾವೇ’ ಅಂತಾ ಅಳ್ತಾ ಇದ್ದಾರಂತೆ.

#ದಿನಕ್ಕೊಂದು_ವಿಷಯ, #How_Google_makes_money, #Click_per_pay

where-does-google-make-its-money

ದಿನಕ್ಕೊಂದು ವಿಷಯ – 5

ದಿನಕ್ಕೊಂದು ವಿಷಯ – 5

ಇವತ್ತಿನ ವಿಷಯ ಸಣ್ಣದ್ದು. ಹೆಚ್ಚಿನ ಪೀಠಿಕೆ, ಪಿಟೀಲು ಯಾವ್ದೂ ಬೇಡ. ನೇರಾನೇರ ಮಾತು.

ನಿಮಗೆ ವಿಮೆ ಆಗಿದೆಯೇ!?

ಹೆದರಬೇಡಿ…..ನಾನೇನೂ ಎಲ್ಲೈಸಿ ಏಜೆಂಟ್ ಅಲ್ಲ. ನಿಮಗೇನೂ ಪಾಲಿಸಿ ಮಾರಲ್ಲ. ಆದರೆ ನೀವು ವಿಮೆ ಮಾಡಿಸುವಾಗ ಅಥವಾ ವಿಮಾ ಕಂಪನಿಗಳ ಜಾಹೀರಾತು ನೋಡುವಾಗ ‘ವಿಮೆ ಆಗ್ರಹದ ವಿಷಯ ವಸ್ತುವಾಗಿದೆ’ (Insurance is a subject matter of solicitiation) ಅನ್ನೋ ಸಾಲನ್ನು ಓದಿರ್ತೀರಾ ಅಥವಾ ಕೇಳಿರ್ತೀರಾ. ಆದರೆ ಅದರರ್ಥ ಏನೆಂದು ಯೋಚಿಸಿದ್ದೀರಾ!? ಮ್ಯೂಚುವಲ್ ಫಂಡುಗಳಲ್ಲಾದರೆ ‘Mutual funds are subject are market risks. Please read the offer document before investing’ ಅಂತಾ ಎರಡೇ ಸೆಕಂಡಿನಲ್ಲಿ ಬಡಬಡಾಯಿಸುತ್ತಾರಾದರೂ ಅದು ಸ್ವಲ್ಪವಾದರೂ ಅರ್ಥವಾಗುತ್ತದೆ. ಆದರೆ ವಿಮೆಯಲ್ಲಿ ನಿಮ್ಮ ದುಡ್ಡು, ನಿಮ್ಮದೇ ಜೀವ…..ಆದರೂ ಇದೇನಿದು ಸಣ್ಣ ಒಂದು ಸಾಲು!? ಆದರೂ ಅದು ಅರ್ಥವಾಗುವುದಿಲ್ಲವೇಕೆ!?

Let me break it down for you. ಇಲ್ಲಿದೆ ನೋಡಿ ಅದರರ್ಥ 🙂

ಇದೂ ಕೂಡಾ ತುಂಬಾ ಸಿಂಪಲ್ಲೇ ಸಾರ್. ಆಗ್ರಹದ ವಿಷಯವಸ್ತು ಅಂದರೇನು ಹೇಳಿ!? ಅಂದರೆ ನೀವು ಆಗ್ರಹಿಸಿದ್ದೀರಿ ಅಂತಾ. ಅಂದರೆ ನೀವು ಕೇಳಿದ್ದೀರಿ ಅಂತಾ. ಅರ್ಥ ಆಗ್ಲಿಲ್ವಾ? ಓಕೆ ಕೊನೆಗೊಂದು ಬಾರಿ ಹೇಳ್ತೀನಿ ಕೇಳಿ. ‘ಈ ವಿಮಾ ಪಾಲಿಸಿಯನ್ನು ನೀವು ಕೇಳಿದ್ದರಿಂದ ನಾವು ಕೊಡ್ತಾ ಇದ್ದೀವಿ, ನಾವಾಗಿಯೇ ಮಾರುತ್ತಾ ಇಲ್ಲ’ ಅಂತಾ.

IRDA (Insurance Regulatory and Development Authority) ಪ್ರಕಾರ ವಿಮಾಪಾಲಿಸಿಗಳನ್ನು ಮಾರುವಂತಿಲ್ಲ. ನಾವಾಗಿಯೇ ಕೇಳಿ ತೆಗೆದುಕೊಳ್ಳಬೇಕು. ನಿಜಜೀವನದಲ್ಲಿ ಇದು ನಡೆಯುದಿಲ್ಲ ಬಿಡಿ. ಕಾರ್/ಬೈಕ್ ಇನ್ಸೂರೆನ್ಸ್ ಮಾತ್ರ ನಾವು ಕೇಳಿ ಪಡೆಯುವುದು. ಅದೂ ಕೂಡಾ ಆ ವಿಮೆಯಿಲ್ಲದಿದ್ದರೆ ಕಾರ್/ಬೈಕ್ ರಿಜಿಸ್ಟ್ರೇಶನ್ ಆಗೊಲ್ಲ ಅನ್ನೋ ಕಾರಣಕ್ಕಾಗಿ 🙂 ಬೇರೆ ಎಲ್ಲಾ ತರಹದ ವಿಮೆಗಳನ್ನು ನಮಗೆ ಯಾರ್ಯಾರೋ ಮಾರುತ್ತಾರೆ. ನಾವೇನೂ ಕೇಳದಿದ್ದರೂ ಸಹ. ಅಮ್ಮನ ಯಾರೋ ಸ್ನೇಹಿತೆ, ಪಕ್ಕದಮನೆಯವರ ಮಾವ, ಅಪ್ಪನ ಸಹೋದ್ಯೋಗಿ ಎಲ್ಲರೂ ಸಹ, ನೀವು ನಾಲ್ಕಂಕಿಯ ಸಂಬಳ ಪಡೆಯಲು ಪ್ರಾರಂಭಿಸುತ್ತಲೇ ಎಡತಾಕುತ್ತಾರೆ. Hardselling ಪ್ರಾರಂಭಿಸುತ್ತಾರೆ. ನಿಮಗೆ ಕಿರಿಕಿರಿಯಾಗುತ್ತದೆ. ಆದರೆ ಅವರು ಬಿಡುವುದಿಲ್ಲ. ಕೊನೆಗೆ ಅವರ ಮುಖನೋಡುವುದನ್ನು ನಿಲ್ಲಿಸುವುದಕ್ಕಾಗಿ ಒಂದು ಪಾಲಿಸಿ ತಗೊಂಡೇಬಿಡ್ತೀರಾ. ಅಗತ್ಯ ಇರಲಿ, ಇಲ್ಲದಿರಲಿ. ತಿಂಗಳಿಗೆ ಎರಡು ಸಾವಿರ ಪ್ರೀಮಿಯಮ್ ಸಡಿಲಿಸ್ತೀರಾ. ಪಾಲಿಸಿ ಡಾಕ್ಯುಮೆಂಟು ಕೂಡಾ ಓದುವುದಿಲ್ಲ. ಕೊನೆಗೊಂದು ದಿನ ಏನಾದರೂ ಆಗಬಾದದ್ದು ಆದಾಗ ‘ಓಹ್ ನಂದೊಂದು ಪಾಲಿಸಿ ಇದೆ’ ಎಂದು ನೆನಪಾಗಿ, ಅದನ್ನು ತಗೊಂಡು ವಿಮಾಕಛೇರಿಗೆ ಹೊಗ್ತೀರ. ಅವರು ಅದನ್ನು ಪುಲ್ ಓದಿ, ಫುಲ್ ನೈಸಾದ ಇಂಗ್ಳೀಷಿನಲ್ಲಿ ‘ಸಾರಿ ಸಾರ್…..ಥಿಸ್ ಇಸ್ ನಾಟ್ ಕವರ್ಡ್ ಇನ್ ದ ಪಾಲಿಸಿ’ ಅಂತಾರೆ. ಪಾಲಿಸಿ ಮಾರಿದವನನ್ನು ಬೈಕೊಂಡು ಮನೆಗೆ ಹೋಗ್ತೀರ. ನೀವದನ್ನು ಹಿಡ್ಕೊಂಡು ಗ್ರಾಹಕರ ವೇದಿಕೆಗೂ ಹೋಗಲಿಕ್ಕಾಗೊಲ್ಲ. ಅವರೂ ಇದನ್ನೇ ಹೇಳ್ತಾರೆ. ‘ಅಲ್ಲಯ್ಯ, ನಿನ್ನ ವಿಮೆ. ನೀನು ಕೇಳಿದೆ. ಅವರು ಕೊಟ್ಟಿದ್ದಾರೆ. ಇದ್ರಲ್ಲಿ ನಮ್ದೇನಿದೆ’ ಅಂತಾ. ನೀವು ಇಂಗು ತಿಂದ ಮಂಗನಂತಾಗುತ್ತೀರ.

ಇರಲಿ ಬಿಡಿ, ಇದು ಪೂರ್ತಿ ಕಥೆಯಲ್ಲ. ಹೀಗೆ ಆಗುವ ಚಾನ್ಸುಗಳು ಕಡಿಮೆ. ಆದರೆ ಮೇಲೆ ಹೇಳಿದ ವಾಕ್ಯ ಮತ್ತದರ ಅರ್ಥ ಮಾತ್ರ ಅದೇ.

ಕೊಸರು:
ವಿಮೆ ಎಲ್ಲರಿಗೂ ಅಗತ್ಯ. ನಿಮ್ಮ ಮತ್ತು ನಿಮ್ಮ ಮುಂದಿನವರ ಸುಖೀ ಭವಿಷ್ಯಕ್ಕೆ ಅತ್ಯಗತ್ಯ. ‘ನಿನ್ನ ಮೊದಲ ಸಂಬಳದಿಂದಲೇ ಪೆನ್ಶನ್ ಫಂಡಿಗೆ ದುಡ್ಡು ಹಾಕುವುದನ್ನು ಪ್ರಾರಂಭಿಸು’ ಅಂತಾ ನನ್ನ ಮೊದಲ ಬಾಸ್ ಹೇಳಿದ್ದಾಗ ನಾನು ‘ಈಗಿಂದಲೇ ಪೆನ್ಶನ್ನಾ!?’ ಎಂದು ನಕ್ಕಿದ್ದೆ. ಆಕೆ ನನ್ನ ಹಿಂದೆ ಬಿದ್ದು ನಾನು ಒಂದು ಪೆನ್ಶನ್ ನಿಧಿ ಪ್ರಾರಂಭಿಸುವಂತೆ ನೋಡಿಕೊಂಡರು. ಅವರೇನೂ ಅದನ್ನು ನನಗೆ ಮಾರಲಿಲ್ಲ ಬಿಡಿ. ನಾನು ಬೇರೆ ಯಾರ ಬಳಿಯೋ ನಾನಾಗಿಯೇ ಕೇಳಿ ತಗೊಂಡೆ. ನೀವೂ ಕೂಡಾ ‘ಕೇಳಿ ತಗೊಳ್ಳಿ’. ಪಾಲಿಸಿಯನ್ನು ಪೂರ್ತಿ ಓದಿ ತಗೊಳ್ಳಿ. ಆ ಪಾಲಿಸಿ, ನೀವು ಸತ್ತಮೇಲೆ ಬೇರೆಯಾರನ್ನಾದರೂ ಶ್ರೀಮಂತರನ್ನಾಗಿಸುತ್ತದೆಯೋ ಅಥವಾ ನೀವು ಸಾಯುವ ಮುನ್ನ ನಿಮ್ಮನ್ನೇ ಶ್ರೀಮಂತರನ್ನಾಗಿಸುತ್ತದೆಯೋ ಅಂತಾನೂ ಕೇಳಿಕೊಳ್ಳಿ. ಸಾಕು ಇವತ್ತಿಗಿಷ್ಟೇ. ಎಲ್ಲಾ ನಾನೇ ಹೇಳ್ಕೊಡಬೇಕಾ? ನೀವೂ ಸ್ವಲ್ಪ ತಲೆ ಉಪಯೋಗಿಸಿ 😛 🙂

#ದಿನಕ್ಕೊಂದು_ವಿಷಯ, #Insurance, #IRDA, #Solicitation