ರಸ ಝೆನು‬ – 14

ಗುರುಗಳು ಉರಿಬಿಸಿಲಿನಡಿ ಕೈತೋಟದಲ್ಲಿ ಕೆಲಸ ಮಾಡುತ್ತಿದ್ದರು.
ಶಿಷ್ಯ ಗುರುವಿಗಾಗಿ ಛತ್ರಿಯೊಂದನ್ನು ಹಿಡಿದುಬಂದ. “ಗುರುಗಳೇ ಇಲ್ಯಾಕೆ ಕೆಲಸ ಮಾಡುತ್ತಿದ್ದೀರ?” ಕೇಳಿದ.
ಗುರು: “ಯಾಕೆಂದರೆ ನಾನು ಇಲ್ಲಿದ್ದೇನೆ. ಅದಕ್ಕೇ!”
ಶಿಷ್ಯ: “ಆದರೆ ಈ ಬಿಸಿಲಲ್ಯಾಕೆ ಈ ಕೆಲಸ?”
ಗುರು: “ಯಾಕೆಂದರೆ ಕೆಲಸ ಈಗ ಇಲ್ಲಿದೆ, ಅದಕ್ಕೇ!!”

ಶಿಷ್ಯ ಸುಮ್ಮನಾದ.

Advertisements

ರಸ ಝೆನು‬ – 13

ಶಿಷ್ಯನೊಬ್ಬ ಗುರುಗಳ ಬಳಿಬಂದು ಹೇಳಿದ “ಗುರುಗಳೇ, ಧ್ಯಾನ ಕಷ್ಟವೆನ್ನಿಸುತ್ತಿದೆ. ಏಕಾಗ್ರತೆ ದೊರಕುತ್ತಿಲ್ಲ. ಕಾಲು ನೋವು. ಹೀಗಾದರೆ ನಾನು ನಿರ್ವಾಣ ತಲುಪುದ್ಯಾವಾಗ?

ಗುರುವೆಂದ “ಆಗಾಗ ಹೀಗೆ ಅನ್ನಿಸುವುದುಂಟು. ಧ್ಯಾನ ಮುಂದುವರೆಸು. ಎಲ್ಲವೂ ಸರಿಹೋಗುತ್ತದೆ.

ಹತ್ತು ವಾರಗಳ ನಂತರ ಶಿಷ್ಯ ಮರಳಿ ಬಂದು ಸಂತೋಷದಲ್ಲಿ ಕೂಗಿ ಹೇಳಿದ “ಗುರುಗಳೇ!! ಎಲ್ಲವೂ ಸರಿಯಾಯಿತು. ನಾನು ನಿರ್ವಾಣ ಜ್ಯೋತಿಯನ್ನು ಕಂಡೆ! ನಾನೀಗ ನಿಜವಾದ ಝೆನ್! ಧನ್ಯವಾದ ಗುರುದೇವ”

ತಣ್ಣಗಿನ ಧ್ವನಿಯಲ್ಲಿ ಗುರುವೆಂದ “ಶಿಷ್ಯಾ! ಆಗಾಗ ಹೀಗೆ ಅನ್ನಿಸುವುದುಂಟು. ಧ್ಯಾನ ಮುಂದುವರೆಸು. ಎಲ್ಲವೂ ಸರಿಹೋಗುತ್ತದೆ.

ರಸ ಝೆನು – 12

ಝೆನ್ ಶಾಲೆಗಳಲ್ಲಿ ಕಲಿಯಲು ಬಂದವರು, ಕನಿಷ್ಟ ಹತ್ತುವರ್ಷ ಗುರುವಿನೊಂದಿಗೆ ಕಲಿತಮೇಲೆಯೇ, ಬೇರೆಯವರಿಗೆ ಕಲಿಸಲು ಯೋಗ್ಯರೆಂದು ಪರಿಗಣಿಸಲ್ಪಡುತ್ತಾರೆ.
ಗೆಝಿನ್ ಎಂಬಾತ ಹತ್ತು ವರ್ಷ ಹೀಗೆಯೇ ಕಲಿತು ತನ್ನದೊಂದು ಆಶ್ರಮ ತೆರೆದಿದ್ದ. ಒಂದು ದಿನ ತನ್ನ ಗುರು ತೆನ್ನೆತೋನ್’ನನ್ನು ಬೇಟಿಯಾಗಲು ಬಂದ. ಅವತ್ಯಾಕೋ ಜೋರು ಮಳೆ. ಆದ್ದರಿಂದ ಗೆಝಿನ್ ತನ್ನ ಮರದಿಂದ ಮಾಡಿದ ಪಾದುಕೆಗಳನ್ನು ಧರಿಸಿ, ಛತ್ರಿಹಿಡಿದು ಬಂದಿದ್ದ.

ಗುರುಗಳ ಆಶ್ರಮ ತಲುಪಿದ ಗೆಝಿನ್ ಟೀ ಹೀರುತ್ತಾ, ಜಗದ ಅಸ್ತಿತ್ವದ ಬಗ್ಗೆ ಒಂದೊಳ್ಳೆ ಚರ್ಚೆ ನಡಿಸಿ, ಆಶೀರ್ವಾದ ಪಡೆದು ಹೊರಟು ನಿಂತಾಗ, ಗುರುಗಳೇ ‘ಇವತ್ತಿನ ಮಟ್ಟಿಗೆ, ನನಗೊಂದು ಹೊಸ ವಿಷಯ ತಿಳಿಸಿ’ ಎಂದ. ತೆನ್ನೆತೋನ್ ಆಕಾಶವನ್ನೊಮ್ಮೆ ನೋಡಿ, ‘ಹ್ಮ್ಮ್….ಮಳೆ ಬರುತ್ತಿದೆಯೆಂದ ಮೇಲೆ, ಪಾದುಕೆ ಧರಿಸಿ ಛತ್ರಿಹಿಡಿದು ಬಂದಿರುತ್ತೀಯ. ಪಾದುಕೆಗಳನ್ನು ಹೊಸ್ತಿಲಲ್ಲೇ ಬಿಟ್ಟಿದ್ದೀಯ ಎಂದಾಯ್ತು. ಈಗ ಹೇಳು ನಿನ್ನ ಛತ್ರಿಯನ್ನು ಪಾದುಕೆಗಳ ಬಲಕ್ಕೆ ಇಟ್ಟೆಯೋ, ಎಡಕ್ಕಿಟ್ಟಿಯೋ?’ ಗೆಝಿನ್ ದಂಗಾದ. ತಕ್ಷಣ ಉತ್ತರ ಹೊಳೆಯಲಿಲ್ಲ. ಎಷ್ಟು ಯೋಚಿಸಿದರೂ, ಮೆದುಳಿನ ಮೇಲೆ ಒತ್ತಡ ಹೇರಿದರೂ ಉತ್ತರ ಹೊಳೆಯಲಿಲ್ಲ.

ತೆನ್ನೆತೋನ್ ‘ಗೆಝಿನ್, ನೀನು ಝೆನ್ ಕಲಿತೆ. ಆದರೆ ಅದನ್ನು ನೀನು ಪ್ರತಿಕ್ಷಣವೂ ನಿನ್ನೊಂದಿಗೆ ಒಯ್ಯುತ್ತಿಲ್ಲ. ಇವತ್ತಿನ ಮಟ್ಟಿಗೆ ನಿನಗೆ ಹೇಳಬಹುದಾದ ಹೊಸ ವಿಷಯ, ಇದೇ’ ಎಂದ.

ಹೊಸ ವಿಷಯ ಕಲಿತ ಗೆಝಿನ್ ಹೊರಬಾಗಿಲೆಡೆಗೆ ಹೋಗಲಿಲ್ಲ. ಬದಲಿಗೆ, ಆಶ್ರಮದ ಒಳಹೊಕ್ಕು ಮತ್ತೆ ಶಿಷ್ಯನಾಗಿ ಆರು ವರ್ಷ ಝೆನ್ ಕಲಿತ. ಪ್ರತಿನಿಮಿಷವೂ ಝೆನ್’ಅನ್ನು ತನ್ನೊಂದಿಗೆ ಒಯ್ಯಲು ಶಕ್ತನಾದ ನಂತರ ತನ್ನ ಆಶ್ರಮಕ್ಕೆ ಮರಳಿದ.

ರಸ ಝೆನು – 11

ಹಳೇಚೀನಾದರ ಮಂದಿರವೊಂದರಲ್ಲಿದ್ದ ಹೈಕುನ್ ಎಂಬ ಗುರುವೊಬ್ಬನ ಬಳಿ ಒಂದು ದಿನ ನೋಬು ಎಂಬ ಸಮುರಾಯ್ ಯೋಧನೊಬ್ಬ ಬಂದು, “ಗುರುಗಳೇ, ಸ್ವರ್ಗ ಮತ್ತು ನರಕ ಇರುವುದು ನಿಜವೇ” ಎಂದು ಕೇಳಿದ.

ಹೈಕುನ್ ‘ನೀನು ಯಾರು?’ ಎಂದು ಕೇಳಿದ. ನೋಬು ಅದಕ್ಕೆ ‘ನಾನೊಬ್ಬ ಸಮುರಾಯ್’ ಎಂದುತ್ತರಿಸಿದ.

‘ನೀನು!! ಒಬ್ಬ ಸಮುರಾಯ್ ಯೋಧನೇ!? ಅದ್ಯಾವ ಮತಿಗೆಟ್ಟ ರಾಜ ನಿನ್ನನ್ನು ಯೋಧನನ್ನಾಗಿ ನೇಮಿಸಿಯಾನು? ನಿನ್ನ ಮುಖ ನೋಡಿದರೆ ಯಾರೋ ಬಿಕ್ಷುಕನ ಮುಖದಂತಿದೆ’ ಎಂದ ಹೈಕುನ್. ನೋಬುಗೆ ಬಂದ ಕೋಪಕ್ಕೆ, ಕೈ ಖಡ್ಗದೆಡೆಗೆ ಹೋಯ್ತು. ಅದನ್ನು ಗಮನಿಸಿದ ಹೈಕುನ್ ‘ಓಹ್!! ನಿನ್ನಲ್ಲಿ ಖಡ್ಗ ಬೇರೆ ಇದೆಯೋ! ಅದು ಬೇರೆ ಕೇಡು ನಿನಗೆ. ನಿನ್ನ ಕತ್ತಿಯಿಂದ ನನ್ನ ತಲೆ ಕತ್ತರಿಸುವುದಿರಲಿ, ಇಲ್ಲಿರುವ ಸೌತೇಕಾಯಿಯನ್ನೂ ಕತ್ತರಿಸಲಿಕ್ಕಿಲ್ಲ’ ಎಂದ.

ಯೋಧನ ಸಹನೆ ಮಿತಿ ಮೀರಿತ್ತು. ಹಲ್ಲುಕಚ್ಚುತ್ತಾ, ಖಡ್ಗವನ್ನು ಹೊರಗೆಳೆಯಲಾರಂಭಿಸಿದ. ಇದ್ದಕ್ಕಿದ್ದಂತೆ ಹೈಕುನ್’ನ ಮುಖ ಚಹರೆ ಬದಲಾಯಿತು. ಸಣ್ಣದೊಂದು ನಗುವಿನೊಂದಿಗೆ ‘ನೋಡು ನೋಬು. ನರಕದ ಬಾಗಿಲು ತೆರೆಯುತ್ತಿದೆ’ ಎಂದ.

ಕ್ಷಣದಲ್ಲಿ ನೋಬುಗೆ ಹೈಕುನ್ ಹೇಳಿದ ಮಾತಿನ ಸಾಕ್ಷಾತ್ಕಾರವಾಯಿತು. ಖಡ್ಗವನ್ನು ಒರೆಗೆ ಹಚ್ಚಿ, ಬಗ್ಗಿ ನಮಸ್ಕರಿಸಿದ. ಹೈಕುನ್ ‘ನೋಬು, ಸ್ವರ್ಗದ ಬಾಗಿಲು ಈಗಷ್ಟೇ ತೆರೆಯಿತು. ಸ್ವರ್ಗ ನರಕ ಎರಡನ್ನೂ ಕಂಡೆಯಲ್ಲವೇ?’ ಎನ್ನುತ್ತಾ ಕಣ್ಣುಮುಚ್ಚಿ ಧ್ಯಾನಾಸಕ್ತನಾದ.

 

ವಿ.ಸೂ: ಈ ಕಥೆ ಮೊದಲಬಾರಿಗೆ ಕಂಡುಬಂದಿದ್ದು ಸುಮಾರು 1827ರಲ್ಲಿ. ಆದರೆ, 1160ರಲ್ಲೇ ನಮ್ಮ ಶರಣರು ‘ಎಲವೋ ಎಂದರೆ ನರಕ, ಅಯ್ಯಾ ಎಂದರೆ ಸ್ವರ್ಗವಯ್ಯಾ’ ಎಂದಿದ್ದರು

ರಸ ಝೆನು – 10

ಹೊಸದಾಗಿ ಶಾಲೆಗೆ ಸೇರಿದ ಬಿಕ್ಕುವೊಬ್ಬ ಧ್ಯಾನ ಮಧ್ಯದಲ್ಲೇ ನಿಲ್ಲಿಸಿ ಕಣ್ತೆರೆದ. ಅವನಿಗೆ ಚಿತ್ತವನ್ನು ಧ್ಯಾನದಲ್ಲಿ ಕೇಂದ್ರೀಕರಿಸಲಾಗುತ್ತಿರಲಿಲ್ಲ. ಮನಸ್ಸಿನ ಮೂರನೇ ಪದರದಡಿಯಲ್ಲಿ ಏನೋ ಸದ್ದು. ಅದರಿಂದ ಹೊರಬಂದಷ್ಟೂ ಮತ್ತೂ ಸದ್ದು. ಕಣ್ಣುಬಿಟ್ಟು ನೋಡಿದ. ದೂರದಲ್ಲಿ ಆಶ್ರಮದ ಬಾವುಟ ಪಟಪಟನೆ ಸದ್ದು ಮಾಡುತ್ತಿರುವುದು ಸ್ಪುಟವಾಗಿ ಕೇಳಿಸುತ್ತಿತ್ತು.

ಬಿಕ್ಕು ಸಣ್ಣದಾಗಿ ನಕ್ಕು ‘ಓಹ್…ಬಾವುಟ ಸದ್ದುಮಾಡುತ್ತಿದೆ’ ಎಂದ.

ಪಕ್ಕದಲ್ಲಿದ್ದ ಹಳೆಯ ವಿದ್ಯಾರ್ಥಿ ಉಸಿರುಬಿಟ್ಟು ‘ಬಾವುಟವಲ್ಲ. ಗಾಳಿ ಸದ್ದುಮಾಡುತ್ತಿದೆ’ ಎಂದ

ಅಲ್ಲೇ ನಿಂತಿದ್ದ ಗುರು ದಿಗಂತದಿಡೆಗೆ ನೋಡಿ ‘ಬಾವುಟ, ಗಾಳಿಗಳಲ್ಲ. ಮನಸ್ಸು ಸದ್ದುಮಾಡುತ್ತಿದೆ’ ಎಂದ

ಅಲ್ಲೇ ಅವರೆಲ್ಲರ ಹಿಂದೆ ನಡೆದು ಹೋಗುತ್ತಿದ್ದ ಆಶ್ರಮದ ಹಿರಿಯಗುರು ‘ಹ್ಮ್…..ಯಾವುದೂ ಅಲ್ಲ. ಬಾಯಿಗಳು ಸದ್ದುಮಾಡುತ್ತಿವೆ’ ಎಂದು ಕೋಪಮಿಶ್ರಿತ ದ್ವನಿಯಲ್ಲಿ ಗೊಣಗುತ್ತಾ ಮುಂದೆ ಸಾಗಿದ.

ಗುರು ಶಿಷ್ಯರೆಲ್ಲಾ ತಲೆ ತಗ್ಗಿಸಿ, ಧ್ಯಾನ ಮುಂದುವರೆಸಿದರು.

ರಸ ಝೆನು – 9

ಗುರು ಶಿಷ್ಯರಿಬ್ಬರು ಕಾಡಿನಲ್ಲಿ ನಡೆಯುತ್ತಾ ಇದ್ದರು. ಒಂದು ನದೀತೀರ ತಲುಪಿದಾಗ ನಿಮಿಷ ನಿಮಿಷಕ್ಕೂ ನದಿಯ ಮಟ್ಟ ನಿಧಾನವಾಗಿ ಏರುತ್ತಿರುವುದು ಗುರುಗಳ ಗಮನಕ್ಕೆ ಬಂತು. ‘ಹತ್ತಿರದೆಲ್ಲಾದರೂ ಸೇತುಯಂತದ್ದೇನಾದರೂ ಇದೆಯೋ ನೋಡಿ ಬಾ’ ಎಂದು ಶಿಷ್ಯನಿಗೆ ಹೇಳಿದರು.

ಹುಡುಕಿ ಹೋದ ಶಿಷ್ಯ ಕೆಲಹೊತ್ತಾದರೂ ಮರಳದಿರುವುದನ್ನು ನೋಡಿದ ಗುರು, ನಿಧಾನವಾಗಿ ಹೆಜ್ಜೆಯಿಡುತ್ತಾ ನದಿಯನ್ನು ದಾಟಿಯೇ ಬಿಟ್ಟರು. ಶಿಷ್ಯ ಒಂದುಘಂಟೆಯ ನಂತರ ಬಂದು ನೋಡುತ್ತಾನೆ, ನದಿ ಅದಾಗಲೇ ದಾಟಲಾಗದಷ್ಟು ವ್ಯಗ್ರವಾಗಿದೆ!! ಗುರುಗಳು ಅದಾಗಲೇ ಇನ್ನೊಂದು ದಡದಲ್ಲಿದ್ದಾರೆ!!

ಶಿಷ್ಯ ಗುರುಗಳೆಡೆಗೆ ಕೂಗು ಹಾಕಿದ ‘ಗುರುಗಳೇ, ನಾನೀಗ ಆಚೆ ದಡ ಹೇಗೆ ತಲುಪಲಿ!?’
.
.
ಇತ್ತಕಡೆಯಿದ್ದ ಗುರುಗಳ ಮುಖದಲ್ಲಿ ಸಣ್ಣದೊಂದು ಗೊಂದಲ ಮೂಡಿಬಂತು. ಅದನ್ನು ಮರೆಮಾಚಿ ಹೇಳಿದರು “ಶಿಷ್ಯ! ಸರಿಯಾಗಿ ನೋಡು!! ನೀನೀಗ ಆಚೆ ದಡಲ್ಲೇ ಇದ್ದೀಯ”

ರಸ ಝೆನು – 8

ಊರೊಂದೂರಿಗೆ ತಿರುಗುತ್ತಿದ್ದ ಬಿಕ್ಕುಗಳ ಬಹಳಷ್ಟು ಗುಂಪುಗಳು, ನಾಲ್ಕು ರಸ್ತೆಗಳು ಸೇರುವ ಊರೊಂದರಲ್ಲಿ ತಂಗಿದ್ದವು. ಬೇರೆ ಬೇರೆ ಗುಂಪಿನ ನಾಲ್ಕುಜನ ಶಿಷ್ಯರು ತಮ್ಮ ತಮ್ಮಲ್ಲೇ ತಮ್ಮ ಅನುಭವಗಳ ಬಗ್ಗೆ ಚರ್ಚಿಸುತ್ತಾ, ಅವರ ಮಾತು ‘ಯಾರ ಗುರು ಅತ್ಯುತ್ತಮನು?’ ಎಂಬುದರೆಡೆಗೆ ಹೊರಳಿತು.

ಒಬ್ಬನೆಂದ ‘ನನ್ನ ಗುರು ಎಷ್ಟು ಶಕ್ತಿಶಾಲಿಯೆಂದರೆ, ನಾಲ್ಕುದಿನಗಳ ಹಿಂದೆ ನಮ್ಮ ಗುಂಪನ್ನು ಡಕಾಯಿತರು ಸುತ್ತುವರೆದಾಗ, ಬರೇ ತನ್ನ ಕಣ್ಸನ್ನೆಯಿಂದಲೇ ಎಲ್ಲರನ್ನೂ ಹಿಮ್ಮೆಟ್ಟಿಸಿದ’

ಇನ್ನೊಬ್ಬನೆಂದ ‘ನನ್ನ ಗುರು ಝೆನ್ ಮಾತ್ರವಲ್ಲ, ರಕ್ಷಣಾ ಕಲೆಯಲ್ಲೂ ಪಾರಂಗತ. ನಲವತ್ತು ಜನರೊಂದಿಗೆ ಕತ್ತಿಹಿಡಿದು ಹೋರಾಡುತ್ತಲೇ, ಇನ್ನೂ ಇಪ್ಪತ್ತು ಜನರನ್ನು ವಾದದಲ್ಲಿ ಮಣಿಸಬಲ್ಲ’

ಮೂರನೆಯವನೆಂದ ‘ನನ್ನ ಗುರುವಿಗೆ ಇರುವಷ್ಟು ನಿಯಂತ್ರಣ ನಿಮ್ಮಲ್ಲಿ ಯಾರ ಗುರುವಿಗೂ ಇದ್ದಂತಿಲ್ಲ. ಆತ ದಿನಗಟ್ಟಲೇ ನಿದ್ದೆಮಾಡದೇ, ಆಹಾರ ಸೇವಿಸದೇ, ಇರಬಲ್ಲ’

ಕೊನೆಯವನೆಂದ ‘ನನ್ನ ಗುರು ಅದೆಷ್ಟು ಬುದ್ಧಿವಂತನೆಂದರೆ, ಹಸಿವಾದಾಗ ತಿನ್ನುತ್ತಾನೆ ಮತ್ತು ಸುಸ್ತಾದಾಗ ಮಲಗುತ್ತಾನೆ ಮತ್ತು ಅಗತ್ಯವಿದ್ದಾಗ ಮಾತನಾಡುತ್ತಾನೆ’

ರಸ ಝೆನು – 7

ಆ ದೇಶದ ರಾಜ, ಒಂದು ದಿನ ಸಕ್ಕರೆಮುಂಜಾನೆ ನಾಲ್ಕುಘಂಟೆಗೆ ರಾಜಗುರುವಿನ ಮನೆಯ ಬಾಗಿಲು ತಟ್ಟಿ ಅವನನ್ನು ಎಬ್ಬಿಸಿ “ಗುರುಗಳೇ ನನಗೆ ನಿಜವಾದ ಸಂತೋಷ ಬೇಕು. ಈಗಿಂದೀಗಲೇ!!” ಎಂದ. ಗುರು ಸ್ವಲ್ಪವೂ ವಿಚಲಿತಗೊಳ್ಳದೆ, ಪೂರ್ವಕ್ಕೆ ಬೊಟ್ಟು ಮಾಡಿ ಐದು ಸಾವಿರ ಯೋಜನದಷ್ಟು ದೂರದ ಒಂದು ಊರಿನ ಹೆಸರು ಹೇಳಿ, ಅಲ್ಲಿನ ಝೆನ್ ಗುರುವನ್ನು ಭೇಟಿ ಮಾಡು. ನಿನಗೆ ತಕ್ಷಣವೇ ನಿಜವಾದ ಸಂತೋಷ ಸಿಗುತ್ತದೆ ಎಂದ.

ರಾಜ ಮೂರುವರೆ ತಿಂಗಳ ಕಾಲ ಕುದುರೆಯ ಮೇಲೆ ಕುಳಿತು ಕಾಡು, ಮೇಡು, ಮಳೆ, ಮೃಗಗಳ ಲೆಕ್ಕಿಸಿದೆ ಆ ಊರನ್ನು ತಲುಪಿದ. ದೂರದೂರಕ್ಕೂ ಏನೂ ಇರದ ಹುಲ್ಲುಗಾವಲಿನ ಮಧ್ಯದಲ್ಲಿದ್ದ ಮಂಟಪವೊಂದರಲ್ಲಿ, ಹಸನ್ಮುಖಿಯಾಗಿದ್ದ ತೊಂಬತ್ತುವರ್ಷದ ಗುರುವೊಬ್ಬ ಹತ್ತಿಯಂತಾ ತನ್ನ ಗಡ್ಡವನ್ನು ನೀವುತ್ತಾ, ಗುಡುಗುಡಿ ಸೇದುತ್ತಾ ಕುಳಿತಿದ್ದ. ಅವನ ಬಳಿ ಮಂಡಿಯೂರಿದ ರಾಜ, “ಗುರುಗಳೇ ನಿಜವಾದ ಸಂತೋಷ ಎಲ್ಲಿ ಸಿಗುತ್ತದೆ. ನನಗೆ ಈಗಿಂದೀಗಲೇ ಬೇಕು” ಎಂದ.

ಆ ಗುರುವಿನ ಮುಖದ ನಗು ಒಂದಿಂಚು ಕಡಿಮೆಯಾಯಿತು. ಮತ್ತೆ ಸಾವರಿಸಿಸಿಕೊಂಡ ಗುರು ಮುಂದೆ ಬಗ್ಗಿ ರಾಜನ ಕಿವಿಯಲ್ಲಿ ಹೇಳಿದ “ಅಯ್ಯೋ ಮುಠ್ಠಾಳ…ಸಂತೋಷಕ್ಕಾಗಿ ಹುಡುಕುವ ಅಗತ್ಯವೇ ಇಲ್ಲದ ಸ್ಥಿತಿಯೇ ನಿಜವಾದ ಸಂತೋಷ. ಇಷ್ಟು ಕಷ್ಟಪಟ್ಟು ಹುಡುಕುತ್ತಿರುವ ನಿನಗೆ ಅದು ಸಿಗುವುದು, ನನಗ್ಯಾಕೋ ಸಂದೇಹ” ಎಂದು ಹೇಳಿ, ತನ್ನ ಗಡ್ಡನೀವುತ್ತಾ ಚಿಲುಮೆ ಸೇದುವುದನ್ನು ಮುಂದುವರೆಸಿದ.

ರಸ ಝೆನು – 6

ಗುರುವಿನ ಬಳಿ ಶಿಷ್ಯಗಣದಲ್ಲೊಬ್ಬ ಕೇಳಿದ ‘ಗುರುಗಳೇ, ನಾವಿಲ್ಲಿ ಬಹಳ ವರ್ಷಗಳಿಂದ ಇದ್ದೇವೆ. ಯಾಕೆ ಇಲ್ಲಿದ್ದೇವೆ ಮತ್ತು ಏನು ಕಲಿಯುತ್ತಿದ್ದೇವೆ ಎಂಬುದರ ಕಲ್ಪನೆಯೂ ನಮಗಿಲ್ಲ. ಆದರೂ ಇಲ್ಲಿದ್ದೇವೆ. ಇಂತಹ ಈ ಹುಚ್ಚು ಶಿಷ್ಯವೃಂದದ ಬಗ್ಗೆ ನಿಮ್ಮ ಅಭಿಪ್ರಾಯವೇನು!?’
.
ಗುರುವೆಂದ “ನೋಡಿ ಹುಡುಗರೇ….ನೀವೆಲ್ಲರೂ ಪ್ರಬುದ್ಧರು ಹಾಗೂ ಅದಾಗಲೇ ನಿರ್ವಾಣದ ಅರಿವನ್ನು ಪಡೆದಾಗಿದೆ. ನೀವು ಹುಚ್ಚರ….”
.
ಅಷ್ಟರಲ್ಲೇ ಅವರ ಮಾತನ್ನು ತಡೆದು ಶಿಷ್ಯೋತ್ತಮ ಕೇಳಿದ ‘ಹೌದೇ….ನಾವು ಅದಾಗಲೇ ನಿರ್ವಾಣದ ಅರಿವನ್ನು ಪಡೆದಾಗಿದೆಯೇ!? ನಾವು ಪ್ರಬುದ್ಧರೇ? ಮತ್ತೆ ನಾವೇಕೆ ಇಲ್ಲಿದ್ದೇವೆ. ನಾವಿನ್ನು ಹೊರಡಬಹುದಲ್ಲವೇ?’
.
ಗುರು “ಖಂಡಿತವಾಗಿಯೂ ಹೊರಡಬಹುದು….ನೀವೆಲ್ಲರೂ ಪ್ರಬುದ್ಧರು ಹಾಗೂ ಸಂಪೂರ್ಣ ಅರಿವನ್ನು ಪಡೆದವರು ಹೌದು. ಆದರೆ ಅದು ನೀವು ಬಾಯಿಮುಚ್ಚಿರುವಾಗ ಮಾತ್ರ. ಬಾಯಿತೆರೆದಮೇಲೂ ಪ್ರಬುದ್ಧರೆನಿಸಿಕೊಳ್ಳಲು ಮತ್ತು ಅದರ ನಂತರದ ಸಂಪೂರ್ಣ ಅರಿವನ್ನು ಪಡೆಯಲಷ್ಟೇ ನೀವಿಲ್ಲಿರುವುದು. ಅದಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ.”

ರಸ ಝೆನು – 5

ಧ್ಯಾನಾಸಕ್ತನಾಗಿದ್ದ ಗುರುವಿನ ಬಳಿ ಮಹಾನಾಸ್ತಿಕನೊಬ್ಬ ಬಂದು, ಅವನನ್ನು ತನ್ನ ಊರುಗೋಲಿನಿಂದ ತಿವಿದು ‘ನೀನು ಧ್ಯಾನಕ್ಕೆ ಕುಳಿತಿರುವ ಈ ಮರ, ಈ ಭೂಮಿ, ಮೇಲಿರುವ ಸೂರ್ಯ, ರಾತ್ರಿಯ ನಕ್ಷತ್ರ ಇವೆಲ್ಲಾ ಎಲ್ಲಿಂದ ಬಂತು!?’ ಅಂದು ಕೇಳಿದ.

ಗುರು ತನ್ನ ಕಣ್ಣನ್ನೂ ತೆರೆಯದೇ, ಸಣ್ಣದೊಂದು ನಗುವಿನೊಂದಿಗೆ ಕೇಳಿದ “ಈಗ ನೀನು ಕೇಳಿದೆಯಲ್ಲಾ ಈ ಪ್ರಶ್ನೆ, ಅದು ಎಲ್ಲಿಂದ ಬಂತು!?”