“ಕರ್ನಾಟಕ ವಾತಾಪಿ, ತಂಜಾವೂರಿನ ಮುತ್ತುಸ್ವಾಮಿ ದೀಕ್ಷಿತರ ಕೃತಿಯಲ್ಲಿ ಸೇರಿ ಅಜರಾಮರವಾಗಿದ್ದು ಹೇಗೆ?”

ಕ್ರಿ.ಶ 597 ರಲ್ಲಿ ಚಾಲುಕ್ಯರಾಜ ಕೀರ್ತಿವರ್ಮನು ನಿಧನನಾದಾಗ, ಅವನ ಮಗ ಎರೆಯ ಇನ್ನೂ ಚಿಕ್ಕ ಹುಡುಗ. ಯುವರಾಜ ಹರೆಯಕ್ಕೆ ಬರುವತನಕ ಪಟ್ಟಾಭಿಷೇಕ ಮಾಡುವಂತಿರಲಿಲ್ಲ. ಆದ್ದರಿಂದ ಎರೆಯನ ಚಿಕ್ಕಪ್ಪ (ಕೀರ್ತಿವರ್ಮನ ತಮ್ಮ) ಮಂಗಳೇಶ, ಎರೆಯ ಆಡಳಿತಯೋಗ್ಯ ವಯಸ್ಸಿಗೆ ಬರುವತನಕ ರಾಜಪ್ರತಿನಿಧಿಯಾಗಿ, ಚಾಲುಕ್ಯ ರಾಜ್ಯದ ಆಡಳಿತವನ್ನು ವಹಿಸಿಕೊಂಡ. ಮಂಗಲೇಶ ಒಳ್ಳೆಯ ರಾಜನೇ ಆಗಿದ್ದರೂ, ಅವನಿಗೆ ರಾಜ್ಯಭಾರವನ್ನು ಎರೆಯನಿಗೆ ವಾಪಾಸು ವಹಿಸಿಕೊಡುವ ಮನಸ್ಸಿರಲಿಲ್ಲ. ಕ್ರಿ.ಶ 603ರಲ್ಲಿ ಎರೆಯನ ಬದಲು, ತನ್ನ ಮಗನನ್ನೇ ಯುವರಾಜನೆಂದು ಘೋಷಿಸಿ ತನ್ನ ವಂಶಕ್ಕೇ ರಾಜ್ಯಭಾರ ಸಿಗುವಂತೆ ತಂತ್ರಮಾಡುತ್ತಾನೆ.

ಇದರಿಂದ ಅತೃಪ್ತನಾದ ಎರೆಯ, ಬಾದಾಮಿಯಿಂದ ಹೊರಬಂದು ಇಂದಿನ ಕೋಲಾರದ ಬಳಿಯಿರುವ ಪ್ರದೇಶದಲ್ಲಿ ಬಲಿಷ್ಟರಾಗಿದ್ದ ‘ಬನ’ರೊಂದಿಗೆ ಸ್ನೇಹಬೆಳೆಸಿ, ಸುತ್ತಮುತ್ತಲ ಪಂಗಡಗಳೊಂದಿಗೆ ಮೈತ್ರಿಮಾಡಿಕೊಂಡು, ಸೈನ್ಯವನ್ನು ಸಂಘಟಿಸುತ್ತಾನೆ. ಹೀಗೆ ಕಟ್ಟಿದ ಸೈನ್ಯದೊಂದಿಗೆ ಎರೆಯ, ಮಂಗಳೇಶನ ಮೇಲೆ ಯುದ್ಧ ಘೋಷಿಸುತ್ತಾನೆ. ಮಂಗಳೇಶನ ಸೈನ್ಯಕ್ಕೂ, ಎರೆಯನ ಸೈನ್ಯಕ್ಕೂ ‘ಎಲಪಟ್ಟು ಸಿಂಬಿಗೆ’ (ಇಂದಿನ ಅನಂತಪುರ) ಎಂಬಲ್ಲಿ ಘೋರಯುದ್ಧ ನಡೆಯುತ್ತದೆ. ಹೀಗೆ ನಡೆದು ಮಂಗಳೇಶನ ಸಾವಿನೊಂದಿಗೆ ಅಂತ್ಯವಾದ ಯುದ್ಧದಲ್ಲಿ, ಎರೆಯ ವಿಜಯಿಶಾಲಿಯಾಗುತ್ತಾನೆ ಎಂದು ಪೆದ್ದವಡಗೂರು ಶಾಸನ ಹೇಳುತ್ತದೆ.

ಯುದ್ದದಲ್ಲಿ ಗೆದ್ದ ಎರೆಯ, ತನ್ನ ಸೈನ್ಯದೊಂದಿಗೆ ಪಟ್ಟದಕಲ್ಲು ತಲುಪುತ್ತಾನೆ. ತನ್ನ ಹೆಸರನ್ನು ಎರಡನೇ ಪುಲಿಕೇಶಿ (ಅಥವಾ ಇಮ್ಮಡಿ ಪುಲಕೇಶಿ) ಎಂದು ಬದಲಾಯಿಸಿಕೊಂಡು, ಕ್ರಿಶ 610ರಲ್ಲಿ, ಚಾಲುಕ್ಯ ರಾಜ್ಯದ ಸಿಂಹಾಸನವನ್ನೇರುತ್ತಾನೆ. ಪಟ್ಟಕ್ಕೆ ಬಂದಕೂಡಲೇ ಇಮ್ಮಡಿ ಪುಲಿಕೇಶಿಗೆ ಕಷ್ಟಕೋಟಲೆಗಳ ಸರಮಾಲೆಯೇ ಕಾದಿರುತ್ತದೆ. ಮಂಗಳೇಶನಿಗೆ ನಿಷ್ಠಾವಂತರಾಗಿದ್ದ ಗೋವಿಂದ ಮತ್ತು ಅಪ್ಪಾಯಿಕ ಎಂಬಿಬ್ಬ ರಾಷ್ಟ್ರಕೂಟರ ಸಾಮಂತರಾಜರು, ಮಂಗಳೇಶನ ಸಾವಿನ ಸುದ್ಧಿ ತಿಳಿದಕೂಡಲೇ ಚಾಲುಕ್ಯರಾಜ್ಯದ ಮೇಲೆ ಯುದ್ಧ ಘೋಷಿಸುತ್ತಾರೆ. ಭೀಮಾನದಿಯ ತಟದಲ್ಲಿ ಎದುರಾಳಿಗಳ ಸೈನ್ಯವನ್ನು ತಡೆದ, ಪುಲಿಕೇಶಿಯ ಸೈನ್ಯದ ಆರ್ಭಟಕ್ಕೆ ಎರಡೇ ವಾರದ ನಂತರ ಯುದ್ಧ ಭೂಮಿಯಲ್ಲಿ ನಿಲ್ಲಲಾಗದೆ ಅಪ್ಪಾಯಿಕ ಪಲಾಯನಮಾಡಿದನು. ಗೋವಿಂದನನ್ನು ಸೆರೆಹಿಡಿಯಲಾಯಿತು. ಕ್ರಿ.ಶ. 634ರ ಐಹೊಳೆ ಶಾಸನದ ಹೇಳುವಂತೆ, ಈ ವಿಜಯವನ್ನು ಘೋಷಿಸಿ ಆಚರಿಸಲು ಇಮ್ಮಡಿ ಪುಲಿಕೇಶಿ ಐಹೊಳೆಯಲ್ಲಿ ಒಂದು ವಿಜಯಸ್ಥಂಭವನ್ನು ಕಟ್ಟಿಸಿದನು.

ಇಲ್ಲಿಂದ ಮುಂದಿನ ಒಂಬತ್ತುವರ್ಷ ಚಾಲುಕ್ಯ ಸಾಮ್ರಾಜ್ಯದ ಸುವರ್ಣಯುಗ. ಇಮ್ಮಡಿ ಪುಲಿಕೇಶಿ ದಖನ್ ಪ್ರಸ್ಥಭೂಮಿಯಲ್ಲಿದ್ದ ಎಲ್ಲಾ ರಾಜರನ್ನೂ ಸೋಲಿಸಿದ್ದಲ್ಲದೇ, ದಕ್ಷಿಣದಲ್ಲಿದಲ್ಲೂ ತನ್ನ ರಾಜ್ಯವನ್ನು ವಿಸ್ತರಿಸಿದ. ಪಶ್ಚಿಮ ಕರಾವಳಿಯಲ್ಲಿ ಆಳುಪರು, ಬನವಾಸಿಯ ಕದಂಬರು, ಕೊಂಕಣದಲ್ಲಿ ಮೌರ್ಯರು, ಇನ್ನೂ ಉತ್ತರಕ್ಕೆ ಮಾಳ್ವದಲ್ಲಿ ಗುರ್ಜರರು, ಪೂರ್ವಕ್ಕೆ ವಿಷ್ಣುಕುಂಡಿನಿಯರು, ಲಾಟರನ್ನೂ ಸಾಮಂತರನ್ನಾಗಿಸಿಕೊಂಡ. ಇಮ್ಮಡಿ ಪುಲಿಕೇಶಿಯ ಅತೀಮುಖ್ಯ ವಿಜಯಗಳಲ್ಲಿ ದಕ್ಷಿಣದ ಪಲ್ಲವರ ಮೇಲಿನ ವಿಜಯ ನೆನಪಿಡುವಂತದ್ದು. ಅಂದಿನ ಕಾಲಕ್ಕೆ, ಸೋಲಿಸಲೇ ಅಸಾಧ್ಯವಾದ ಸೈನ್ಯ ಎಂದು ಹೆಸರು ಪಡೆದಿದ್ದ ಪಲ್ಲವರ ಸೈನ್ಯವನ್ನು, ಅವರ ರಾಜ ‘ಒಂದನೆಯ ಮಹೇಂದ್ರವರ್ಮ’ನನ್ನು ಪಲ್ಲವರ ರಾಜಧಾನಿಗೆ 25 ಕಿ.ಮೀ ದೂರದಲ್ಲಿದ್ದ ‘ಪುಲ್ಲಲೂರ್’ನಲ್ಲಿ ನಡೆದ ಯುದ್ಧದಲ್ಲಿ ಸೋಲಿಸಿದನು. ಪುಲಿಕೇಶಿ ಗಂಗ ವಂಶದ’ದುರ್ವಿನಿತ’ ಹಾಗೂ ‘ಪಾಂಡ್ಯನ್ ಜಯಂತವರಾಮನ್ ರಾಜ’ನ ಸಹಾಯದೊಂದಿಗೆ ಪಲ್ಲವರ ರಾಜಧಾನಿ ‘ಕಂಚೀಪುರ’ಕ್ಕೆ ಮುತ್ತಿಗೆ ಹಾಕುತ್ತಾನೆ. ಮಹೇಂದ್ರವರ್ಮ ತನ್ನ ರಾಜಧಾನಿಯನ್ನು ಉಳಿಸಿಕೊಂಡರೂ ಉತ್ತರದ ಪ್ರಾಂತ್ಯವನ್ನು ಪುಲಿಕೇಶಿಗೆ ಸಮರ್ಪಿಸುತ್ತಾನೆ. ಹೀಗೆ ದಕ್ಷಿಣದ ಅತೀದೊಡ್ಡ ಏಕರಾಜ ಸಾಮ್ರಾಜ್ಯ ಸ್ಥಾಪಿಸಿದ ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ಚೀನಾದ ಯಾತ್ರಿಕ/ಇತಿಹಾಸಕಾರ ಹ್ಯುಯೆನ್-ತ್ಸಾಂಗ್, ಪರ್ಶಿಯಾದ ಇತಿಹಾಸಕಾರ ತಬರಿ ಮುಂತಾದವರು ಭೇಟಿಕೊಟ್ಟು ರಾಜ್ಯಭಾರದ ಬಗ್ಗೆ ಅಗಾಧ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇವನ ಸಮಕಾಲೀನನಾಗಿ ಇರಾನ್ ದೇಶದ ದೊರೆಯಾಗಿದ್ದ ಎರಡನೆಯ ಖುಸ್ರುವು ತನ್ನ ರಾಯಭಾರಿಯ ಕೈಯಲ್ಲಿ ಅನೇಕ ಬೆಲೆಬಾಳುವ ಬಹುಮಾನಗಳನ್ನು ಪುಲಕೇಶಿಗೆ ಕಳುಹಿಸಿಕೊಟ್ಟನೆಂದೂ, ಇವರಿಬ್ಬರಿಗೂ ಆಗಿಂದಾಗ್ಗೆ ಪತ್ರವ್ಯವಹಾರವು ನಡೆಯುತ್ತಿದ್ದಿತೆಂದೂ ತಿಳಿದುಬಂದಿದೆ.

ಇಮ್ಮಡಿ ಪುಲಿಕೇಶಿಯ ರಾಜ್ಯಭಾರದ ಅತೀಮುಖ್ಯ ಘಟನೆಯೆಂದರೆ ಗುರ್ಜರ, ಮಾಳ್ವರನ್ನು ಸೋಲಿಸಿ ಉತ್ತರಕ್ಕೂ ತನ್ನ ಸಾಮ್ರಾಜ್ಯ ವಿಸ್ತರಣೆಮಾಡುವಾಗ, ಆಗಿನ ಕನ್ನೌಜದ ಮಹಾರಾಜನಾಗಿದ್ದ ಹರ್ಷವರ್ಧನನೊಡನೆ ನಡೆದ ಯುದ್ಧ. ವಿಂಧ್ಯದ ಉತ್ತರದಿಂದ ಹಿಡಿದು ಹಿಮಾಚಲದವರೆಗೂ ರಾಜ್ಯಭಾರ ಮಾಡುತ್ತಿದ್ದ, ಇಡೀ ಜೀವನದಲ್ಲೇ ಒಂದೇ ಒಂದು ಯುದ್ಧ ಸೋಲದ, ‘ಉತ್ತರಪಥೇಶ್ವರ’ ಎಂದೇ ಬಿರುದು ಪಡೆದಿದ್ದ ಹರ್ಷವರ್ಧನ, ಇಮ್ಮಡಿ ಪುಲಿಕೇಶಿಯ ಉತ್ತರದ ಭಾಗದ ಸಾಮ್ರಾಜ್ಯ ವಿಸ್ತರಣೆಗೆ ಕಡಿವಾಣ ಹಾಕಲು ನಿರ್ಧರಿಸುತ್ತಾನೆ. ನರ್ಮದಾ ನದಿಯ ತಟದಲ್ಲಿ ಎರಡೂ ಸೇನೆಗಳು ಮುಖಾಮುಖಿಯಾಗುತ್ತವೆ. ಎಂಟುವಾರಗಳ ಕಾಲ ನಡೆದ ಜಿಗುಟುಯುದ್ಧದ ನಂತರ, ಪುಲಿಕೇಶಿಗಿಂತಾ ಮೂರುಪಟ್ಟು ದೊಡ್ಡ ಸೈನ್ಯವಿದ್ದರೂ, ತನ್ನ ಅತೀಶಕ್ತಿಶಾಲಿ ಗಜಪಡೆಯಲ್ಲೇ ಹೆಚ್ಚು ನಷ್ಟವನ್ನನುಭವಿಸಿದ ಹರ್ಷವರ್ಧನ, ಯುದ್ದದಲ್ಲಿ ಗೆಲ್ಲಲಾಗದೇ ಶಾಂತಿಸಂಧಾನಕ್ಕೆ ಮುಂದಾಗುತ್ತಾನೆ. ಇಮ್ಮಡಿ ಪುಲಿಕೇಶಿಗೆ ‘ಪರಮೇಶ್ವರ’, ‘ಸತ್ಯಾಶ್ರಯ’, ‘ಪೃಥ್ವೀವಲ್ಲಭ’ ಎಂಬ ಬಿರುದುಗಳನ್ನು ಸಮರ್ಪಿಸಿದುದ್ದಲ್ಲದೇ, ಇಮ್ಮಡಿ ಪುಲಿಕೇಶಿಯನ್ನು ತನ್ನ ದಕ್ಷಿಣದ ಸಮಬಲನೆಂದು ಸ್ಚೀಕರಿಸಿ ಆತನಿಗೆ ‘ದಕ್ಷಿಣಪಥೇಶ್ವರ’ ಎಂಬ ಬಿರುದನ್ನು ಕೊಡುತ್ತಾನೆ. ಹಾಗೂ ನರ್ಮದಾ ನದಿಯನ್ನು ಉತ್ತರದ ಹರ್ಷವರ್ಧನನ ಸಾಮ್ರಾಜ್ಯಕ್ಕೂ, ದಕ್ಷಿಣದ ಚಾಲುಕ್ಯ ಸಾಮ್ರಾಜ್ಯಕ್ಕೂ ಗಡಿಯೆಂದು ನಿರ್ಧರಿಸಿ ಹರ್ಷವರ್ಧನ ಕನ್ನೌಜಿಗೆ ಮರಳುತ್ತಾನೆ. ಈ ಯುದ್ಧ, ಇಂಗ್ಳೀಷಿನ “This is what happens when an unstoppable force meets an immovable object” ಎಂಬ ಜಾಣ್ನುಡಿಗೆ ಒಂದೊಳ್ಳೆಯ ಉದಾಹರಣೆ.

Chalukya

ಕಾಂಚೀಪುರವನ್ನು ಗೆಲ್ಲದ, ಚುಕ್ಕಿಯೊಂದು ಇಮ್ಮಡಿ ಪುಲಿಕೇಶಿಯ ಮನಸ್ಸಲ್ಲೇ ಉಳಿದಿತ್ತು. ಹಾಗಾಗಿ ವಯಸ್ಸಾಗಿ ನೇಪಥ್ಯಕ್ಕೆ ಸರಿಯುವ ಮುನ್ನ ಇನ್ನೊಮ್ಮೆ ಪಲ್ಲವರ ಮೇಲೆ ಯುದ್ಧ ಸಾರಲು ನಿರ್ಧರಿಸಿದ ಪುಲಿಕೇಶಿ, ರಥವನ್ನೇರಿಯೇ ಬಿಟ್ಟ. ಆದರೆ ಈ ಬಾರಿ ಪಲ್ಲವರ ರಾಜ ಒಂದನೇ ನರಸಿಂಹವರ್ಮ, ಪುಲಿಕೇಶಿಯ ವಿಜಯಗಳ ಸರಮಾಲೆಗೆ ಕಡಿವಾಣ ಹಾಕುತ್ತಾನೆ. ಇಮ್ಮಡಿ ಪುಲಿಕೇಶಿಯ ಮರಣದೊಂದಿಗೆ ಯುದ್ಧ ಕೊನೆಗೊಳ್ಳುತ್ತದೆ. ಯುದ್ದವನ್ನು ಗೆದ್ದ ಉತ್ಸಾಹದಲ್ಲಿ ನರಸಿಂಹವರ್ಮ ಚಾಲುಕ್ಯ್ರರ ರಾಜಧಾನಿ ಬಾದಾಮಿಯವರೆಗೂ ಸೈನ್ಯವನ್ನು ಕೊಂಡೊಯ್ದು, ಸಂಪತ್ತಲ್ಲವನ್ನೂ ಕಂಚಿಗೆ ಸಾಗಿಸುತ್ತಾನೆ. ಚಾಲುಕ್ಯರ ರಾಜಧಾನಿ “ಬಾದಾಮಿ” ಪಲ್ಲವರ ಮುಂದಿನ 13 ವರ್ಷಗಳ ರಾಜ್ಯಭಾರದಲ್ಲಿ “ವಾತಾಪಿಕೊಂಡ”ವಾಯ್ತು. (ಬಾದಾಮಿಯ ಮೂಲಹೆಸರು ವಾತಾಪಿ). ಹೀಗೆ, ಒಬ್ಬ ಮಹಾರಾಜನನ್ನು ಸೋಲಿಸಲು ಒಂದನೆಯ ನರಸಿಂಹವರ್ಮನಂತಹ ಇನ್ನೊಬ್ಬ ಮಹಾಯೋಧನೇ ಬರಬೇಕಾಯ್ತು. ದಕ್ಷಿಣದ ಮಹಾನ್ ಸಾಮ್ರಾಜ್ಯವೊಂದು ಹೀಗೆ ಕೊನೆಗೊಂಡಿತು.

ಇಮ್ಮಡಿ ಪುಲಿಕೇಶಿಗೆ ಚಂದ್ರಾದಿತ್ಯ, ಆದಿತ್ಯವರ್ಮ, ವಿಕ್ರಮಾದಿತ್ಯ, ಜಯಸಿಂಹ, ಅಂಬರ ಎಂಬ ಐದು ಜನ ಮಕ್ಕಳು. ತಮ್ಮ ತಮ್ಮಲ್ಲೇ ಕಚ್ಚಾಡಿ, ರಾಜ್ಯವನ್ನು ವಿಂಗಡಿಸಿಕೊಂಡು, ಪಲ್ಲವರಿಗೆ ಸಾಮಂತರಾಗಿ, ಸಣ್ಣ ಸಣ್ಣ ಭಾಗಗಳನ್ನು ಆಳುತ್ತಿದ್ದರು. ಇವರಲ್ಲಿ ಮೂರನೆಯವನಾದ ಮೊದಲನೇ ವಿಕ್ರಮಾದಿತ್ಯ, ಇವರ ಜಗಳಗಳಿಂದ ರೋಸಿಹೋಗಿ, ತನ್ನದೇ ಸೋದರರ ಮೇಲೆ ಯುದ್ಧಮಾಡಿ ಸೋಲಿಸಿ ಆಮೇಲೆ ಅವರನ್ನು ಮನ್ನಿಸಿ, ಸೋದರರನ್ನನ್ನೆಲ್ಲಾ ಒಂದುಗೂಡಿಸಿ ಕ್ರಿ.ಶ. 642ರಲ್ಲಿ ತನ್ನನ್ನು ರಾಜನೆಂದು ಘೋಷಿಸಿಕೊಂಡು, ಪಲ್ಲವರನ್ನು ಒದ್ದೋಡಿಸಿ ಚಾಲುಕ್ಯ ಸಾಮ್ರಾಜ್ಯವನ್ನು ಪುನರ್ಸ್ಥಾಪಿಸಿದನು. ಆತನ 13 ವರ್ಷದ ಆಡಳಿತದಲ್ಲಿ ಹಾಗೂ ಇವನ ಮಗನಾದ ಎರಡನೆಯ ವಿಕ್ರಮಾದಿತ್ಯ ಆಳ್ವಿಕೆಯಲ್ಲಿ ಚಾಲುಕ್ಯ ಸಾಮ್ರಾಜ್ಯ ಸಂಪೂರ್ಣವಾಗಿ ಪುನರ್ನಿರ್ಮಾಣವಾಗಿ, ಮತ್ತೆ ಇಮ್ಮಡಿ ಪುಲಿಕೇಶಿಯ ಕಾಲದ ಸಾಮ್ರಾಜ್ಯಕ್ಕೆ ಹೋಲುವ ಮೇರು ಸ್ಥಿತಿಗೆ ತಲುಪಿತು.

ಇಷ್ಟೆಲ್ಲಾ ಕಥೆ ಯಾಕೆ ಹೇಳಿದೆ ಅಂದರೆ, ಒಂದನೆಯ ನರಸಿಂಹವರ್ಮ ವಾತಾಪಿಯಿಂದ ಸಂಪತ್ತನ್ನು ಕಂಚಿಗೆ ಸಾಗಿಸುವಾಗ, ಆ ಯುದ್ದದ ಗೆಲುವಿನಲ್ಲಿ ಮುಖ್ಯಪಾತ್ರವಹಿಸಿದ್ದ ತನ್ನ ಸೈನ್ಯಾಧಿಕಾರಿ ಪರಂಜ್ಯೋತಿಗೆ, ಖಜಾನೆಯ ಕಾಲುಭಾಗದಷ್ಟು ದೊಡ್ಡ ಉಡುಗೊರೆಯನ್ನೇ ಕೊಡುತ್ತಾನೆ. ಇದರಲ್ಲಿ ಚಾಲುಕ್ಯರ ಅರಮನೆಯಲ್ಲಿದ್ದ, ಚಾಲುಕ್ಯರಾಜರ ಅತ್ಯಂತ ಪ್ರೀತಿಯ ದೊಡ್ಡದೊಂದು ಗಣಪತಿಯ ಮೂರ್ತಿಯೂ ಇರುತ್ತದೆ. ತನ್ನ ರಾಜ್ಯಕ್ಕೆ ಮರಳಿದ ಪರಂಜ್ಯೋತಿ, ತನ್ನೂರಾದ, ತಿರುಚೆಂಕಾಟಂಕುಡಿಯಲ್ಲಿ ಈ ಗಣಪತಿಗೊಂದು ದೇವಸ್ಥಾನಕಟ್ಟಿ, ಅದನ್ನು ಆದರದಿಂದ ನೋಡಿಕೊಳ್ಳುತ್ತಾನೆ. ಹೀಗೆ ಬಾದಾಮಿಯಿಂದ ಅಂದರೆ ಅಂದಿನ ವಾತಾಪಿಯಿಂದ, ಕಂಚಿಗೆ ತಲುಪಿದ ಈ ಗಣಪತಿಯೇ, ಮುತ್ತುಸ್ವಾಮಿ ದೀಕ್ಷಿತರ ಕೃತಿ “ವಾತಾಪಿ ಗಣಪತಿಂ ಭಜೇ…”ಯಲ್ಲಿ ಮೂಡಿಬಂದಿರುವುದು! 🙂

ಇದನ್ನೇ ಹೇಳಬೇಕು ಅಂತಾ ಈ ಹರಿಕಥೆ. ಈಗ ಎಲ್ಲರೂ “ವಾತಾಪಿ ಗಣಪತಿಂ ಭಜೇ….” ಎಂದು ಹಾಡುತ್ತಾ ಮುಂದಿನ ಕೆಲಸ ನೋಡಿಕೊಳ್ಳಿ 🙂

ಕೆಲ ವಿಶೇಷ ಮಾಹಿತಿಗಳು:

(1) ಈ ವಾತಾಪಿ ಗಣಪತಿ ದೇವಸ್ಥಾನ ಇವತ್ತು ತಮಿಳ್ನಾಡಿನ ನಾಗಪಟ್ಟಿನಂ ಜಿಲ್ಲೆಯ ಉತ್ರಪತೀಸ್ವರಸ್ವಾಮಿ ದೇವಸ್ಥಾನದ ಆವರಣದಲ್ಲೇ ಇದೆ. ಆ ಉತ್ರಪತೀಸ್ವರಸ್ವಾಮಿ ದೇವಸ್ಥನವನ್ನೂ ಪರಂಜ್ಯೋತಿಯೇ ಕಟ್ಟಿಸಿದ್ದು. ಇದು ಈಶ್ವರನ ದೇವಸ್ಥಾನವೇ ಆದರೂ, ಪರಂಜ್ಯೋತಿಯ ಪ್ರೀತಿಯ ದೇವ, ಗಣೇಶನ ಬಿಂಬಗಳಿಗೆ ಪ್ರಸಿದ್ಧ.

ದೇವಸ್ಥಾನದ ಮುಖ್ಯ ಗರ್ಭಗುಡಿಯಲ್ಲಿರುವ ಗಣೇಶ, ತನ್ನ ಯಥಾಪ್ರಸಿದ್ಧ ಆನೆಯ ಮುಖದಲ್ಲಿರದೆ, ಮಾನವ ಮುಖದಲ್ಲೇ ಇರೋದು ಒಂದು ವಿಶೇಷ.

(2) ಈ ಮಹಾಸೈನ್ಯಾಧಿಪತಿ ಪರಂಜ್ಯೋತಿ, ಮುಂದೆ ತನ್ನ ಕ್ಷತ್ರಿಯಾಭ್ಯಾಸಗಳನ್ನೆಲ್ಲಾ ತ್ಯಜಿಸಿ, ಜೀವನವನ್ನೇ ಬದಲಾಯಿಸಿಕೊಂಡು ‘ಸಿರುತೊಂದಾರ್’ ಎಂಬ ಹೆಸರಿನ ನಾಯನಾರ್ ಸಂತನಾಗಿ, ತನ್ನ ಜೀವನವನ್ನು ಅಲ್ಲೇ ಕಳೆಯುತ್ತಾನೆ. ನಾಯನಾರ್’ಗಳು ಹಾಗೂ ಆಳ್ವಾರ್’ಗಳು, ಎಂಟನೇ ಶತಮಾನದಲ್ಲಿ ದಕ್ಷಿಣಭಾರತದಲ್ಲಿ ‘ಭಕ್ತಿ ಚಳುವಳಿಗೆ’ ನಾಂದಿ ಹಾಡಿದ ಮಹಾಪುರುಷರು. ಆ 63 ನಾಯನಾರ್’ಗಳಲ್ಲಿ ಈ ಪರಂಜ್ಯೋತಿಯೂ ಒಬ್ಬ! ಜೀವನ ಎಷ್ಟು ವಿಚಿತ್ರ ನೋಡಿ!! ಪರಂಜ್ಯೋತಿಯಿಂದ….ಸಿರುತೊಂದಾರ್!!!

(3) ಎರೆಯ ಎಂಬುವವ ಇಮ್ಮಡಿ ಪುಲಿಕೇಶಿಯಾದರೆ, ಮೊದಲನೆಯ ಪುಲಿಕೇಶಿ ಯಾರು ಎಂಬ ಅನುಮಾನ ನಿಮಗಿದ್ದರೆ:

ಮೊದಲನೇ ಪುಲಿಕೇಶಿ ಎರೆಯನ ಅಜ್ಜ. ಅಂದರೆ ಕೀರ್ತಿವರ್ಮನ ಅಪ್ಪ. ಮಂಗಳೇಶನ ಮಹಾಕೂಟ ಶಾಸನ ಹಾಗೂ ರವಿಕೀರ್ತಿಯ ಐಹೊಳೆ ಶಾಸನದ ಪ್ರಕಾರ ಚಾಲುಕ್ಯರ ಮೂಲ ಪುರುಷ ಕ್ರಿ.ಶ 500ರಲ್ಲಿ ರಾಜ್ಯಭಾರ ಆರಂಭಿಸಿದ ಜಯಸಿಂಹನೇ ಆದರೂ, ಕ್ರಿ.ಶ 540ರಲ್ಲಿ ರಾಜನಾದ ಜಯಸಿಂಹನ ಮೊಮ್ಮಗ ಪುಲಿಕೇಶಿಯೇ ಚಾಲುಕ್ಯ ಸಂತತಿಯ ಮೊದಲ ಸ್ವತಂತ್ರ ರಾಜ. ಬಾದಾಮಿಯಿಂದ ರಾಜ್ಯಭಾರ ಮಾಡಿದ ಈತನ ಕೂದಲು ಬಹುಷಃ ಕೆಂಚು ಬಣ್ಣಕ್ಕಿದ್ದಿರಿಂದ (blonde) ಪುಲಿಕೇಶಿ (ಅಂದರೆ ಹುಲಿಯಂತಾ ಕೂದಲಿರುವವನು) ಎಂಬ ಹೆಸರು ಬಂದಿರಬಹುದೇ ಎಂಬುದು ನನ್ನ ಅನುಮಾನ.

ಈ ಲೇಖನದಲ್ಲಿರುವ ಹೆಚ್ಚಿನ ಐತಿಹಾಸಿಕ ಸತ್ಯಗಳ ಬಗ್ಗೆ ನನ್ನ ಗಮನ ಸೆಳೆದದ್ದು, ಪಕ್ಕಾ ಬೆಂಗಳೂರು ಹುಡುಗ, ಟ್ವಿಟರ್ ಗೆಳೆಯ ಆದಿತ್ಯ ಕುಲಕರ್ಣಿ. ಅವರ ಟ್ವೀಟುಗಳ ಸರಮಾಲೆಯನ್ನೇ, ಅಲ್ಪಸ್ವಲ್ಪ ಸೇರ್ಪಡೆಗಳೊಂದಿಗೆ ಲೇಖನಸ್ವರೂಪದಲ್ಲಿ ಬರೆದಿದ್ದೇನೆ. ಈ ಇಡೀ ಲೇಖನ Aditya Kulkarni ಅವರಿಗೆ ಸೇರಬೇಕಾದದ್ದು.

#ರಾಘವಾಂಕಣ

‘ಸೀಬರ್ಡ್ ನೌಕಾನೆಲೆಗೂ, ಹವ್ಯಕ ಬ್ರಾಹ್ಮಣರಿಗೂ ಇರುವ ನಂಟೇನು?’

ಸರಿಸುಮಾರು ಮೂರನೇ ಶತಮಾನದ ನಲತ್ತರ ದಶಕದ ಕಾಲ. ತಾಳಗುಂದ(ಇವತ್ತಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ)ದ ಮಯೂರಶರ್ಮ ಎಂಬ ಬ್ರಾಹ್ಮಣ ಯುವಕನೊಬ್ಬ, ಹೆಚ್ಚಿನ ವೇದಾಧ್ಯಯನಕ್ಕೆ ಕಾಂಚೀಪುರಂಗೆ ತೆರಳುತ್ತಾನೆ. ಆಗ ಪಲ್ಲವರ ಆಳ್ವಿಕೆ ಉತ್ತುಂಗದಲ್ಲಿದ್ದ ಕಾಲ. ಸಹಜವಾಗಿಯೇ ರಾಜ್ಯದ ರಾಜಧಾನಿ, ಮುಖ್ಯ ಘಟಿಕಾಸ್ಥಾನವಾಗಿತ್ತು. ಆಸುಪಾಸಿನಲ್ಲಿ ಹೆಚ್ಚಿನ ವೇದಪಾರಂಗತರು ವಾಸವಾಗಿದ್ದದ್ದು ಮಾತ್ರವಲ್ಲದೇ, ಮಯೂರಶರ್ಮನ ಅಜ್ಜ ವೀರಶರ್ಮ ಹಾಗೂ ಅಪ್ಪ ಬಂಧುಸೇನರ ವಿದ್ಯಾಭ್ಯಾಸವಾದದ್ದೂ ಅಲ್ಲಿಯೇ ಎಂಬ ಕಾರಣಕ್ಕೆ ಮೊಮ್ಮಗನೂ ಕಂಚಿಗೆ ಪ್ರಯಾಣ ಬೆಳೆಸುತ್ತಾನೆ. ಕಂಚಿಯಲ್ಲಿ ವೇದ ಕಲಿಯುತ್ತಿದ್ದ ಈ ಬ್ರಾಹ್ಮಣ ಯುವಕನ ಜೀವನದಲ್ಲಿ ನಡೆದ ಒಂದು ಅತೀ ಸಣ್ಣ ಘಟನೆ, ಅವನ ಜೀವನವನ್ನೇ ಬದಲಿಸುತ್ತದೆ. ಮಾರುಕಟ್ಟೆಯಲ್ಲಿ ಯಾವುದೋ ಕ್ಷುಲ್ಲಕ ಕಾರಣಕ್ಕೆ ಪಲ್ಲವ ಸೈನ್ಯದ ಅಶ್ವಾರೋಹಿಯೊಬ್ಬನ ಜೊತೆ ತೆಗೆದ ಜಗಳ, ಕೈ ಕೈ ಮೀಲಾಯಿಸುವವರೆಗೆ ಹೋಗಿ, ಮಯೂರಶರ್ಮ ಅಪಮಾನಿತನಾಗುತ್ತಾನೆ. ಬ್ರಾಹ್ಮಣನಾದರೂ ಕುದಿರಕ್ತದ ತರುಣ ಮಯೂರಶರ್ಮ ಅವಮಾನ ತಾಳಲಾಗದೇ ಸಿಟ್ಟಾದ. ಅದೂ ಎಂತಾ ಸಿಟ್ಟಂತೀರಿ! ಸಾಮಾನ್ಯ ಮನುಷ್ಯನಾದರೆ ಬರೀ ಅಶ್ವಾರೋಹಿಯ ಮೇಲೆ ಸಿಟ್ಟುತೀರಿಸಿಕೊಳ್ಳುತ್ತಿದ್ದ. ಆದರೆ ಈ ಕಥೆಯ ಮುಖ್ಯಪಾತ್ರಧಾರಿ ಮಯೂರಶರ್ಮ ಅಸಾಮಾನ್ಯನಾಗಿದ್ದೇ ಈ ಕಾರಣಕ್ಕೆ, ಯಾಕೆಂದರೆ ಅವನ ಸಿಟ್ಟೂ ಸಹ ಅಸಾಮಾನ್ಯವಾದದ್ದು. ತನ್ನ ಅವಮಾನಕ್ಕೆ ಇಡೀ ಪಲ್ಲವ ರಾಜ್ಯವೇ ಕಾರಣ ಎಂಬ ನಿರ್ಧಾರಕ್ಕೆ ಬಂದ ಮಯೂರಶರ್ಮ, ಪಲ್ಲವರ ರಾಜ್ಯದ ಮೇಲೇ ಸೇಡು ತೀರಿಸಲು ನಿರ್ಧರಿಸುತ್ತಾನೆ.

ಆದರೆ ಬಡಬ್ರಾಹ್ಮಣನೊಬ್ಬ ಇಡೀ ರಾಜ್ಯವೊಂದರೆ ಮೇಲೆ ಸೇಡು ತೀರಿಸಿಕೊಳ್ಳುವುದು ಹೇಗೆ!? ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಕೊಟ್ಟು ಕಂಚಿಗೆ ಬೆನ್ನು ಹಾಕಿದ ವಟು, ಶಸ್ತ್ರಧಾರಣೆ ಮಾಡಿಯೇ ಬಿಟ್ಟ. ತಾಳಗುಂದಕ್ಕೆ ಮರಳಿ ತನ್ನದೇ ಆದ ಸೈನ್ಯಕಟ್ಟುತ್ತಿದ್ದಾಗ, ಅವನ ಅದೃಷ್ಟವೇನೋ ಎಂಬಂತೆ, ಅದೇ ಸಮಯಕ್ಕೆ ಸಮುದ್ರಗುಪ್ತ ದಕ್ಷಿಣಕ್ಕೆ ದಂಡೆತ್ತಿ ಬಂದಿದ್ದ. ಪಲ್ಲವರ ರಾಜ ‘ಪಲ್ಲವ ವಿಷ್ಣುಗೋಪ’ ಸಮುದ್ರಗುಪ್ತನೆಡೆಗೆ ತನ್ನ ಗಮನ ಹರಿಸಿದ್ದಾಗ, ನಮ್ಮ ಮಯೂರಶರ್ಮ ಶ್ರೀಪರ್ವತದಲ್ಲಿ (ಇಂದಿನ ಶ್ರೀಶೈಲಂ) ಪಲ್ಲವರ ಗಡಿಸೈನಿಕರಾದ ಅಂತ್ರಪಾಲರ ಮೇಲೆ ಹಾಗೂ ಕೋಲಾರದಲ್ಲಿದ್ದ ಪಲ್ಲವ ಸಾಮಂತ ರಾಜಮನೆತನವಾದ ಬಾಣರ ಮೇಲೂ ಆಕ್ರಮಣ ಮಾಡಿ ಇಬ್ಬರನ್ನೂ ಸೋಲಿಸಿದ. ಸಮುದ್ರಗುಪ್ತನ ಮೇಲಿನ ಯುದ್ಧದಿಂದ ಇನ್ನೂ ಚೇತರಿಸಿಕೊಂಡಿರದ ಪಲ್ಲವರು, ಅವರ ಅತೀ ನಂಬುಗೆಯ ಪಡೆಯಾದ, ‘ಯುದ್ಧದುರ್ಜಯರು’ ಎಂದೇ ಹೆಸರು ಪಡೆದಿದ್ದ ಅಂತ್ರಪಾಲರಿಗಾದ ಗತಿನೋಡಿ, ಮಯೂರವರ್ಮನ ತಂಟೆಗೆ ಹೋಗಬಯಸದೆ ಆತನನ್ನು ಪೂರ್ವದ ಶ್ರೀಪರ್ವತದಿಂದ, ಪಶ್ಚಿಮದ ಅಮರಸಮುದ್ರದವರೆಗೂ (ಇಂದಿನ ಅರಬ್ಬೀ ಸಮುದ್ರ), ದಕ್ಷಿಣದಲ್ಲಿ ಬಾಣದ ಅಧೀನದಲ್ಲಿದ್ದ ಕೋಲಾರದಿಂದ, ವಾಯುವ್ಯದಲ್ಲಿ ಪ್ರೇಹಾರದವರೆಗೂ (ಇಂದಿನ ಮಲಪ್ರಭಾ ನದಿ) ರಾಜನೆಂದು ಒಪ್ಪಿಕೊಂಡರು. ಸಮುದ್ರಗುಪ್ತನಿಂದ ಆಗಷ್ಟೇ ಸೋತುಕೂತಿದ್ದ ಪಲ್ಲವರ ಸಾಮಂತನಾಗಬಯಸದ ಮಯೂರಶರ್ಮ ತನ್ನನ್ನು ತಾನೇ ಸ್ವತಂತ್ರ್ಯರಾಜನೆಂದು ಘೋಷಿಸಿಕೊಂಡಾಗ, ಅದನ್ನು ಒಪ್ಪಿಕೊಳ್ಳದೇ ಪಲ್ಲವರಿಗೆ ಬೇರೆ ದಾರಿಯೂ ಇರಲಿಲ್ಲವೆನ್ನಿ.

ಕ್ರಿ.ಶ 345ರಲ್ಲಿ (ಗುಂಡಾಪುರ ಶಾಸನದ ಪ್ರಕಾರ) ಮಯೂರಶರ್ಮ ಧಾರ್ಮಿಕ ವಿಧಿವಿಧಾನದಲ್ಲಿ ಬ್ರಾಹ್ಮಣ್ಯ ತ್ಯಜಿಸಿ, ಕ್ಷತ್ರಿಯಧರ್ಮ ಸ್ವೀಕರಿಸಿ, ಕ್ಷಾತ್ರನಿಯಮಕ್ಕನುಗುಣವಾಗಿ ತನ್ನ ಹೆಸರನ್ನು ‘ಮಯೂರವರ್ಮ’ನೆಂದು ಬದಲಿಸಿಕೊಂಡು, ಇಂದಿನ ಉತ್ತರಕನ್ನಡ ಜಿಲ್ಲೆಯಲ್ಲಿರುವ, ಬನವಾಸಿಯನ್ನು ತನ್ನ ರಾಜಧಾನಿಯೆಂದು ಘೋಷಿಸಿ, ತನ್ನದೇ ಆದ ರಾಜ್ಯವೊಂದನ್ನು ಸ್ಥಾಪಿಸಿದ. ಹೀಗೆ ಪ್ರಾರಂಭವಾದ ಈ ರಾಜವಂಶವೇ ಕರ್ನಾಟಕದ ಮೊತ್ತಮೊದಲ ಸ್ವತಂತ್ರ ರಾಜವಂಶವಾದ ‘ಕದಂಬ ವಂಶ’! ಸಹ್ಯಾದ್ರಿಯಲ್ಲಿ ಹೇರಳವಾಗಿ ಬೆಳೆಯುತ್ತಿದ್ದ, ಹಾಗೂ ಮಯೂರಶರ್ಮನ ಮನೆಯ ಪಕ್ಕ ಬೆಳೆದಿದ್ದ, ಕದಂಬವೃಕ್ಷದ ಹಿನ್ನೆಲೆಯಲ್ಲಿ, ಕುಟುಂಬಕ್ಕೆ ‘ಕದಂಬ’ ಎಂದು ಹೆಸರಿಸಲಾಯಿತು.

ತನ್ನ ಇಪ್ಪತು ವರ್ಷದ ರಾಜ್ಯಭಾರದಲ್ಲಿ, ಮಯೂರವರ್ಮ ತನ್ನ ರಾಜ್ಯದ ಎಲ್ಲೆಯನ್ನು ಇನ್ನಷ್ಟು ಹಿಗ್ಗಿಸಿದ. ತ್ರಯಕೂಟರು, ಅಭಿಹಾರರು, ಸೇಂದ್ರಕರು, ಪಲ್ಲವರು, ಪರಿಯತ್ರಕರು, ಶಖಸ್ಥಾನರು, ಮೌಖರಿಗಳು ಹಾಗೂ ಪುನ್ನಾಟಕರನ್ನು ಸೋಲಿಸಿ ತನ್ನ ರಾಜ್ಯವನ್ನು ಪಶ್ಚಿಮದಲ್ಲಿ ಇಂದಿನ ಗೋವಾ ರಾಜ್ಯದವರೆಗೂ, ಉತ್ತರದಲ್ಲಿ ಗೋದಾವರಿಯವರೆಗೂ ವಿಸ್ತರಿಸಿದ. ಇವನ ವಂಶದ ಮುಂದಿನರಾಜರುಗಳಾದ ಕಾಕ್ಷುತವರ್ಮ, ರವಿವರ್ಮ, ವಿಷ್ಣುವರ್ಮರೂ ಕದಂಬ ರಾಜ್ಯವನ್ನು ಸಮರ್ಥವಾಗಿ ನಿರ್ವಹಿಸಿದರು. ದಕ್ಷಿಣಭಾರತದಲ್ಲಿ ಮೂರನೇ ಶತಮಾನದವರೆಗೂ ಕನ್ನಡ ಭಾಷಾವ್ಯವಹಾರ ಬಳಕೆಯಲ್ಲಿಟ್ಟಿದ್ದ ಚುಟುವಂಶದವರೂ, ಬಾಣರು ಆಳಿದ್ದರೂ ಸಹ, ಇವರೆಲ್ಲಾ ಬೇರೆ ಬೇರೆ ಚಕ್ರವರ್ತಿಗಳ ಸಾಮಂತರಾಗಿದ್ದವರು. ಅಂದರೆ ಇವರುಗಳು ಕರ್ನಾಟಕದೊಳಗಿರುವ ಪ್ರದೇಶಗಳನ್ನು ಆಳುತ್ತಿದ್ದರೂ, ಸಾಮ್ಯಾಜ್ಯದ ರಾಜಧಾನಿ ಕರ್ನಾಟಕದಿಂದ ಹೊರಗೆಲ್ಲೋ ಇರುತ್ತಿದ್ದದ್ದು. ಮೊತ್ತಮೊದಲ ಸ್ಥಾನೀಯ ಕನ್ನಡ ಸಾಮ್ಯಾಜ್ಯ ಸ್ಥಾಪನೆಯಾಗಿದ್ದು ಕದಂಬರ ಮಯೂರವರ್ಮನಿಂದಲೇ. ಕನ್ನಡ ಭಾಷೆಯ ದೃಷ್ಟಿಯಿಂದ ನೋಡಿದಾಗ ಇದೊಂದು ಮಹತ್ವದ ಬೆಳವಣಿಗೆ. ಕ್ರಿಶ 340-350ರ ನಡುವೆ ಮಧ್ಯಕರ್ನಾಟಕದಲ್ಲಿ ಕದಂಬರು ಹಾಗೂ ದಕ್ಷಿಣ ಹಾಗೂ ನೈರುತ್ಯದಲ್ಲಿ ನಿಧಾನವಾಗಿ ಶಕ್ತರಾದ ಗಂಗರ ಅಧಿಪತ್ಯದಿಂದ, ಭೌಗೋಳಿಕವಾಗಿ ಕರ್ನಾಟಕ ರೂಪುಗೊಳ್ಳಲು ಪ್ರಾರಂಭವಾಗಿದ್ದೂ ಅಲ್ಲದೇ, ಭಾಷೆಯಾಗಿ ಕನ್ನಡ ಹೆಚ್ಚಿನ ಮಹತ್ವ ಪಡೆಯಿತು. ಕನ್ನಡ ಲಿಪಿ ಅಭಿವೃದ್ಧಿ, ವ್ಯಾಕರಣ ಬೆಳವಣಿಗೆಯ ಪ್ರಯೋಗಗಳೂ ನಡೆದವು. ಪ್ರಜೆಗಳಲ್ಲಿ ಹಾಗೂ ರಾಜಾಧಿಪತ್ಯದಲ್ಲಿ ಕನ್ನಡ ಉನ್ನತಸ್ಥಾನ ಪಡೆಯಿತು. ಇದೇ ಕದಂಬರ ಕಾಲದಲ್ಲಿ ಮೊತ್ತಮೊದಲ ಕನ್ನಡ ಶಾಸನಗಳಾದ ‘ತಾಳಗುಂದ ಶಾಸನ’ ಮತ್ತು ‘ಹಲ್ಮಿಡಿ ಶಾಸನ’ಗಳೂ ಕೆತ್ತಲ್ಪಟ್ಟವು. ಇದೇ ಕಾಲದಲ್ಲಿ ರೂಪುಗೊಂಡ ಕದಂಬ ಲಿಪಿ ಕನ್ನಡ, ಮರಾಠಿ, ಕೊಂಕಣಿ ಹಾಗೂ ಸಂಸ್ಕೃತವನ್ನೂ ಬರೆಯಲು ಬಳೆಸಲಾಯಿತು. ಇಷ್ಟೇ ಅಲ್ಲದೇ ಕದಂಬ ಲಿಪಿಯಿಂದ ವಿಕಸಿತವಾದ ‘ಪ್ಯೂ (ಪಿಯೂ) ಲಿಪಿ’ ಮುಂದೆ ಬರ್ಮಾದಲ್ಲಿ ಬಳಕೆಯಲ್ಲಿದ್ದ (ಈಗ ಅಳಿದುಹೋಗಿರುವ) ‘ಪ್ಯೂ’ ಭಾಷೆಗೂ ಬಳಕೆಯಾಯ್ತು ಎಂಬುದು ಗಮನಾರ್ಹ. ಹೀಗೆ ಕದಂಬರ ಕಾಣಿಕೆ ಕನ್ನಡಕ್ಕೆ ಮಾತ್ರವಲ್ಲ, ಹೊರದೇಶಕ್ಕೂ ತಲುಪಿದೆ ಎಂಬ ಹೆಮ್ಮೆ ನಮ್ಮದಾಗಬೇಕು.

kadam

ಹೀಗೆ, ಯಾವ ದಂತಕೆಥೆಗೂ ಕಮ್ಮಿಯಿಲ್ಲದ, ಮೊತ್ತಮೊದಲ ಕನ್ನಡ ರಾಜವಂಶಕ್ಕೆ ಮೂಲಪುರುಷನಾದ ಇದೇ ಮಯೂರವರ್ಮನ ಕಥೆಯೇ ಶ್ರೀಯುತ ದೇವುಡು ನರಸಿಂಹಶಾಸ್ತ್ರಿಗಳ ಕಲ್ಪನೆಯ ಮೂಸೆಯಲ್ಲಿ ‘ಮಯೂರ’ ಎಂಬ ಕಾದಂಬರಿಯಾಯ್ತು. ಮುಂದೆ ಇದೇ ಕಾದಂಬರಿ ಇದೇ ಹೆಸರಿನ ಸಿನೆಮಾಗೂ ಸ್ಪೂರ್ತಿಯಾಯಿತು. ‘ಮಯೂರ’ ಚಿತ್ರ ಹಾಗೂ ‘ಮಯೂರಶರ್ಮ’ನ ಪಾತ್ರ ಮಾಡಿದ ಡಾ| ರಾಜ್’ಕುಮಾರ್ ಕನ್ನಡ ಚಿತ್ರರಂಗದ ಅತ್ಯುತೃಷ್ಟ ಅಂಶಗಳಲ್ಲೊಂದು ಎಂದರೆ ಯಾವ ಅತಿಶಯೋಕ್ತಿಯೂ ಇಲ್ಲ.

ಸುಮಾರು ಕ್ರಿ.ಶ 525ರಲ್ಲಿ ಕದಂಬರಾಜ್ಯ ನಿಧಾನವಾಗಿ ತನ್ನ ಪ್ರಾಮುಖ್ಯತೆ ಕಳೆದುಕೊಂಡಿತು. ಚಾಲುಕ್ಯರ ಮೊದಲನೇ ಪುಲಿಕೇಶಿ ಬಲಾಡ್ಯನಾಗಿ ಬೆಳೆದ ಕಾಲದಲ್ಲಿ ಕದಂಬರು ಚಾಲುಕ್ಯರ, ಹಾಗೇ ಸಮಯ ಕಳೆದಂತೆ ಮುಂದೆ ರಾಷ್ಟ್ರಕೂಟರ ಸಾಮಂತರಾದರು. ಕದಂಬ ರಾಜ್ಯ ಬೇರೆ ಬೇರೆ ರಾಜರ ಆಳ್ವಿಕೆಯಲ್ಲಿ ಬನವಾಸಿ ಮಂಡಲ, ಹಾನಗಲ್ ಮಂಡಲ, ಗೋವಾ ಮಂಡಲವೆಂದು ಹಂಚಿಹೋಯಿತು.

ಈಗ ಸ್ವಲ್ಪ ಮೊದಲಿನ ಕಥೆಗೆ ವಾಪಾಸು ಬರೋಣ. ನಮ್ಮ ಕಥೆಯ ನಾಯಕ ಮಯೂರ(ಶ)ವರ್ಮ, ಕ್ಷತ್ರಿಯನಾಗಿ ರಾಜ್ಯಭಾರ ಮುಂದುವರೆಸಿದರೂ, ತನ್ನ ಪೂರ್ವಾಶ್ರಮಕ್ಕೆ ಮಹತ್ವ ಕೊಟ್ಟೇ ಇದ್ದ. ಪ್ರತಿಯೊಂದು ಯುದ್ಧ ಗೆದ್ದಾಗಲೂ, ರಾಜ್ಯ ವಿಸ್ತಾರವಾದಾಗಲೂ ಪೂಜೆ, ಹೋಮ, ಹವನಗಳನ್ನು ನಡೆಸುತಿದ್ದ. ಹಲವುಬಾರಿ ಅಶ್ವಮೇಧಯಾಗವನ್ನೂ ನಡೆಸಿ ಬ್ರಾಹ್ಮಣರಿಗೆ 144 ಗ್ರಾಮಗಳನ್ನು ‘ಬ್ರಹ್ಮದೇಯ’ವಾಗಿ ದಾನಗೈದ ಎಂಬ ದಾಖಲೆಗಳಿವೆ. ಪೂಜೆ, ಹವ್ವಿಸುಗಳ ಅರ್ಪಣೆಯಿಂದಲೇ ತನಗೆ ದೇವತಾನುಗ್ರಹವಿದೆ ಎಂದು ಬಲವಾಗಿ ನಂಬಿದ್ದ ಮಯೂರವರ್ಮ ಈ ಆಚರಣೆಗಳನ್ನು ಕಾಪಿಡಲು, ಪ್ರಾಚೀನ ಬ್ರಾಹ್ಮಣ ನಂಬಿಕೆಗಳನ್ನು ಪುನರ್ಜೀವಿತಗೊಳಿಸುವ ಮತ್ತು ರಾಜ್ಯಾಚರಣೆಗಳನ್ನು ಮತ್ತು ಸರ್ಕಾರೀ ಸಂಬಂಧಿತ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ನಿರ್ವಹಿಸಲು, ಉತ್ತರ ಭಾರತದ ‘ಅಹಿಚ್ಚಾತ್ರ’ದಿಂದ ಕರೆಸಿಕೊಂಡ ಎನ್ನಲಾದ 32 ಬ್ರಾಹ್ಮಣ ಕುಟುಂಬಗಳೇ ಇಂದು ಉತ್ತರಕನ್ನಡ ಜಿಲ್ಲೆಯ ಹವ್ಯಕ ಬ್ರಾಹ್ಮಣ ಸಮುದಾಯವಾಗಿ ಬೆಳೆದಿದೆ ಎಂಬುದೊಂದು ಬಹಳವಾಗಿ ಚಾಲ್ತಿಯಲ್ಲಿರುವ ಹಾಗೂ ನಿರೂಪಿತವಾದ ಒಂದು ಸಿದ್ಧಾಂತ. ಹವ್ಯಕ ಎಂಬ ಪದದ ಮೂಲ ಹವೀಗ ಅಥವ ಹವೀಕ ಎಂಬ ಪದಗಳು. ಹವ್ಯ ಅಂದರೆ ಹೋಮ/ಹವನ. ಹವ್ಯವನ್ನು ಮಾಡುವವ ಹವ್ಯಕ.

ಕದಂಬರ ನೌಕಾಸಾಮರ್ಥ್ಯ ಅಂದಿನ ಕಾಲಕ್ಕೆ ಬಹಳ ಹೆಸರುವಾಸಿ. ಮುಂದೆ ಕದಂಬರು ಬೇರೆ ಬೇರೆ ರಾಜಮನೆತನಗಳ ಸಾಮಂತರಾದರೂ ಸಹ, ತಮಗಿದ್ದ ನೌಕಾಯುದ್ಧದ ವಿಶಿಷ್ಟ ಪರಿಣತಿಯಿಂದಾಗಿ ಆಯಾ ರಾಜರುಗಳಿಗೆ ಅತ್ಯಂತ ಆಪ್ತವಾಗಿದ್ದವರು. ವಿಜಯನಗರ ಸಾಮ್ರಾಜ್ಯದ ರಾಜರುಗಳು ಸಹ ಕದಂಬವಂಶದವರನ್ನು ಸದಾ ತಮ್ಮ ಆಪ್ತವಲಯದಲ್ಲೇ ಇರಿಸಿಕೊಂಡಿದ್ದರು. ಇದೇ ನೌಕಾಪರಿಣತಿಯ ಕಾರಣಕ್ಕೇ, ಇಂದು ಬನವಾಸಿಯಿಂದ ನೂರು ಕಿಲೋಮೀಟರ್ ದೂರದ ಕಾರವರದಲ್ಲಿ ಪ್ರಾರಂಭಿಸಲಾದ ‘ಪ್ರಾಜೆಕ್ಟ್ ಸೀ-ಬರ್ಡ್’ ಎಂಬ ಕೋಡ್’ನೇಮಿನ ಭಾರತೀಯ ನೌಕಾನೆಲೆಗೆ, ನೌಕಾಪಡೆ INS-ಕದಂಬ ಎಂಬ ಹೆಸರನ್ನೇ ಆಯ್ಕೆ ಮಾಡಿದೆ. ಕದಂಬರ ನೌಕಾಯುದ್ಧ ಸಾಮರ್ಥ್ಯವನ್ನು ನೆನೆಸಿಕೊಳ್ಳುವ ಹಾಗೂ ಕದಂಬರಿದ್ದ ನೆಲಕ್ಕೆ ಗೌರವ ಸೂಚಿಸುವ ಎರಡೂ ಉದ್ದೇಶಗಳನ್ನು ನೆರವೇರಿಸುವ ಈ ಹೆಸರಿಗಿಂತಾ ಹೆಚ್ಚು ಸೂಕ್ತವಾದ ಹೆಸರು ಈ ನೌಕಾನೆಲೆಗೆ ಸಿಗಲಿಕ್ಕಿಲ್ಲ.

ಹೀಗೆ, ಕದಂಬವಂಶದ ಇತಿಹಾಸ ಕರ್ನಾಟಕದ ಹಾಗೂ ಕನ್ನಡದ ಚರಿತ್ರೆಯ ಪುಸ್ತಕದಲ್ಲಿ ಅತೀ ಮುಖ್ಯ ಪುಟ. ಹವ್ಯಕರಿಂದ INS ಕದಂಬದವರೆಗೆ ಮುಖ್ಯಕೊಂಡಿ. ಇಂತಹ ನೆಲದಲ್ಲಿ ಹುಟ್ಟಿದ ನಾವು, ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳಬೇಕು. ಮಯೂರಶರ್ಮನಿಂದ ಮಯೂರವರ್ಮನಾಗಿ, ಕದಂಬವಂಶಕ್ಕೆ ಮೂಲನಾದ ಈ ರಾಜನನ್ನು ನೆನೆಸಿಕೊಳ್ಳಲೇಬೇಕು. ಕನ್ನಡದ ಇಂದಿನ ಬೆಳವಣಿಗೆಗೆ, ಆತನ ಜೀವನವೂ, ಪಲ್ಲವರ ಮೇಲೆ ಆತ ಕೋಪಗೊಂಡ ಕಿಡಿಕಾರಿದ ಆ ಕ್ಷಣವೂ ಮೂಲ. ‘ಕದಂಬ’, ‘ಬನವಾಸಿ’, ‘ಮಯೂರಶರ್ಮ’ ಇವು ಮೂರೂ, ಇತಿಹಾಸದ ಆಸಕ್ತಿಯುಳ್ಳ ಪ್ರತಿಯೊಬ್ಬನ, ಹಾಗೂ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಎಂದೂ ಮರೆಯದಂತೆ ಉಳಿಯಬೇಕಾದ ಹೆಸರುಗಳು.

ವಿಷಯಮೂಲ ಹಾಗೂ ಮುಖ್ಯಾಂಶ ಪೂರೈಕೆ: ನಮ್ ಹುಡುಗ ಆದಿತ್ಯ ಕುಲಕರ್ಣಿ. ಇತಿಹಾಸದ ಬಗ್ಗೆ ಆಸಕ್ತಿಯಿರುವವರು ಆದಿತ್ಯರ ಟ್ವಿಟರ್ ಹ್ಯಾಂಡಲ್ (@adikulk) ಅನ್ನು ಫಾಲೋ ಮಾಡಲೇಬೇಕು. ನನ್ನ ಕೀಬೋರ್ಡಿಗೆ ಆದಿತ್ಯ ಇನ್ನೂ ಹೆಚ್ಚಿನ ಕೆಲಸ ಕೊಡುತ್ತಾರೆ ಎಂಬ ನಂಬಿಕೆಯೊಂದಿಗೆ…..ಧನ್ಯವಾದಗಳು.