ಚಿತ್ರ ಶಕ್ತಿ – ೭

“ನನ್ನವರಿಗಾಗಿ ನಾನು”.

ದಿನವಿಡೀ ಹಿಮಕ್ಕೆ ಎದೆಕೊಟ್ಟು ದೇಶ ಕಾದ ಹನುಮಂತಪ್ಪನ ಮೇಲೆ ಮೊನ್ನೆ ಹಿಮಕ್ಕೆ ಪ್ರೀತಿ ಹೆಚ್ಚಾಗಿ, ಓಡಿ ಬಂದು ಬರಸೆಳೆದು ಅಪ್ಪಿಕೊಂಡಾಗ ಅದನ್ನು ನಿರಾಸೆಗೊಳಿಸದೆ, ಆರುದಿನಗಳ ಕಾಲ ಅಪ್ಪಿಹಿಡಿದು, ಹಿಮದಡಿಯಲ್ಲಿ ಬಂದ ಸಾವನ್ನೂ ಮಾತನಾಡಿ, ತಡವಿ, ವಾಪಾಸುಕಳಿಸಿ ಕುಳಿತಿರುವ ಈ ದಿನ, ಹುಲುಮಾನವರಾದ ನಾವುಗಳು ನಮ್ಮ ಮನೆಯ ದೇವರಜೊತೆ ಇಂತಹ ಕೆಚ್ಚೆದೆಯ ಯೋಧರಿಗೂ ನಮಿಸಿ, ಅದೇ ದೇವರಲ್ಲಿ ಈ ಸೈನಿಕರನ್ನು ರಕ್ಷಿಸು ಅಂತಾ ಕೇಳಬೇಕಾದ ದಿನವೂ ಹೌದು.

ಪ್ರೀತಿ ಎಂತೆಂತಾ ಹುಚ್ಚುಕೆಲಸವನ್ನೂ ಮಾಡಿಸುತ್ತೆ. ಮಧ್ಯರಾತ್ರಿಯಲ್ಲಿ ಅವಳ ಮನೆಮುಂದೆ ನಿಲ್ಲಿಸುತ್ತೆ. ಕೈಯಲ್ಲಿ ಕ್ಯಾಮರಾ ಹಿಡಿದು ಹುಚ್ಚನಂತೆ ತಿರುಗಾಡಿಸುತ್ತೆ. ನಾಯಿಮರಿಯನ್ನು ಮುದ್ದುಮಾಡಿಸುತ್ತೆ. ಕೈಯಲ್ಲಿ ಬಂದೂಕು ಹಿಡಿದು ಗಡಿಯನ್ನೂ ರಕ್ಷಿಸುತ್ತೆ. ನೀವು ಯಾರನ್ನ ಪ್ರೀತಿಸುತ್ತೀರಿ ಅನ್ನುವುದರಮೇಲೆ ಅದು ಅವಲಂಬಿತವಷ್ಟೇ 🙂

ಈ ಸೈನಿಕರೆಂದರೇ ನನಗೊಂತರಾ ವಿಸ್ಮಯ. ನೋಡಲು ನನ್ನನಿಮ್ಮಂತೆಯೇ ಇರುವ ಈ ಜೀವಗಳ ಜೀವನೋತ್ಸಾಹವೇ ಅದಮ್ಯ. ಒಮ್ಮೆ ರಜೆಕಳೆದು ಸೇವೆಗೆ ಮರಳಿದರೆ ಇನ್ಯಾವಾಗ ಸಂಸಾರದ ಮುಖ ನೋಡುವುದೋ ತಿಳಿಯದು. ನೋಡುತ್ತೀವೋ ಇಲ್ಲವೋ ಎಂಬುದೂ ತಿಳಿಯದು. ಆದರೂ, ತನ್ನದೆಲ್ಲವನ್ನೂ ತನ್ನದಲ್ಲವೆಂದು ಬದಿಗಿಟ್ಟು, ತನ್ನವರೇ ಅಲ್ಲದ ನನ್ನ ನಿಮ್ಮ ರಕ್ಷಣೆಗೆ, ಒಂದು ಪುಟಗೋಸಿ ಬಂದೂಕು ಹಿಡಿದು ಗಡಿಯಲ್ಲಿ ನಿಂತು ಮಳೆ ಚಳೆ ಗಾಳಿಗೆ ಎದೆಯೊಡ್ಡುತ್ತಾರೆ. ನಮ್ಮ ಸಂತೋಷಕ್ಕೆ ಕಲ್ಲುಹಾಕಲು ಬರುವವರನ್ನು ಮಟ್ಟಹಾಕುತ್ತಾರೆ. ಈ ಪ್ರಯತ್ನದಲ್ಲಿ ತಮ್ಮದೇ ಕೈ, ಕಾಲು, ಕಣ್ಣು ಕೆಲವೊಮ್ಮೆ ಜೀವವನ್ನೂ ಕಳೆದುಕೊಳ್ಳುತ್ತಾರೆ.

ಈ ಚಿತ್ರದಲ್ಲಿರುವ ಸೈನಿಕನ ಹೆಸರು “ಕೈಲ್ ಹಕೆನ್ಬೆರ್ರಿ”. ಹತ್ತೊಂಬತ್ತು ವರ್ಷದ ವಯಸ್ಸಿನಲ್ಲಿ ನಾವೆಲ್ಲಾ ಹುಡುಗಿರ ಹಿಂದೆ ಸುತ್ತುತ್ತಿದ್ದಾಗ, ಈ ಪುಣ್ಯಾತ್ಮ ಅಮೇರಿಕಾದ ಸೈನ್ಯಕ್ಕೆ ಸೇರಿದ. ಮೂರೇ ತಿಂಗಳಲ್ಲಿ ಈತನ ಚಾಕಚಕ್ಯತೆಯನ್ನು ಮೆಚ್ಚಿದ ಅಧಿಕಾರಿಗಳು ಒಂದುವರ್ಷದಮಟ್ಟಿಗೆ ಡ್ಯೂಟಿಗೆಂದು ಅಪ್ಘಾನಿಸ್ತಾನಕ್ಕೆ ಕಳುಹಿಸಿದರು. ಅಲ್ಲಿ ತಲುಪಿದ ನಾಲ್ಕನೇ ತಿಂಗಳಲ್ಲಿ ಒಂದು ತಣ್ಣನೆಯಸಂಜೆ, ಗಸ್ತುತಿರುಗುತ್ತಿದ್ದಾಗ ಸ್ಪೋಟಕವೊಂದರ ಮೇಲೆ ಕಾಲಿಟ್ಟು, ಜೀವನವೇ ಸಿಡಿದು ನಿಂತಿತು. ಸ್ಪೋಟದೊಂದಿಗೇ ಆಕಾಶಕ್ಕೆಸೆಯಲ್ಪಟ್ಟ ಕೈಲ್ ಎರಡೂ ಕಾಲುಗಳು ಮಾತು ಎಡಗೈಯನ್ನು ಕಳೆದುಕೊಂಡ. ಅವನನ್ನು ಸ್ಪೋಟನಡೆದ ಸ್ಥಳದಿಂದ ಆಸ್ಪತ್ರೆಗೆ, ಅಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ ಜರ್ಮನಿ ಮಾರ್ಗವಾಗಿ, ಅಮೇರಿಕಾಕ್ಕೆ ಕರೆತರುವ ನಡುವೆ, ಈ ಪುಣ್ಯಾತ್ಮ ನಾಲ್ಕುಬಾರಿ ‘ಇನ್ನಿಲ್ಲ’ವಾಗಿದ್ದನಂತೆ. ಆದರೂ ಗಟ್ಟಿಜೀವ ಕೊನೆಗೂ ನಿಂತೇಬಿಟ್ಟಿತು!

ಸೈನ್ಯಕ್ಕೆ ಸೇರಿದ ಕೆಲದಿನಗಳನಂತರ, ಅಫ್ಘಾನಿಸ್ತಾನಕ್ಕೆ ಹಾರುವ ಕೆಲವೇ ದಿನಗಳ ಮುಂಚೆ ಈ ಹುಡುಗ ಹಾಕಿಸಿಕೊಂಡ ಈ ಟ್ಯಾಟೂ (ಹಚ್ಚೆ) ನೋಡಿ. For those I love, I will sacrifice (ನಾನು ಪ್ರೀತಿಸುವರಿಗಾಗಿ, ನನ್ನನ್ನು ಅರ್ಪಿಸಿಕೊಳ್ಳುತ್ತೇನೆ) ಅಂತಾ ಬರೆಸಿಕೊಂಡಿದ್ದಾನೆ. ಇದು ಅಕ್ಷರಃ ನಿಜವಾಗುತ್ತದೆಂದು ಸ್ವತಃ ಈತನೂ ಯೋಚಿಸಿರಲಿಕ್ಕಿಲ್ಲ. ಅಫ್ಘಾನಿಸ್ತಾನದಲ್ಲಿ ಅಮೇರಿಕಾದ ಪಾತ್ರವದೇನೇ ಇರಲಿ, ಅದನ್ನು ಬದಿಗಿಡಿ. ನೋಡಿದ ಒಂದು ಕ್ಷಣಕ್ಕೆ ಈ ಚಿತ್ರ, ತನ್ನ ದೇಶದ ಕೆಲಸಕ್ಕಾಗಿ ಜೀವವನ್ನೇ ಪಣವಾಗಿಟ್ಟ ಒಬ್ಬ ಸೈನಿಕನ ಮೇಲೆ ಹೆಮ್ಮೆ ಹುಟ್ಟದಿರದು.

ನಾಲ್ಕೂವರೆ ದಿನದ ನಂತರ ಪ್ರಜ್ಣೆ ಮರಳಿಬಂದಾಗ, ನೀರುತುಂಬಿದ ಕಣ್ಣೊಂದಿಗೆ, ಕೈ ಹಿಡಿದು ಕೈಲ್’ನ ಅಮ್ಮ “ಮುಂದೇನು!” ಅಂತಾ ಕೇಳಿದಕ್ಕೆ, ಕೈಲ್ ಅರೆಕ್ಷಣವೂ ಯೋಚಿಸದೆ ಹೇಳಿದ್ದೇನು ಗೊತ್ತಾ “ಇನ್ನೇನು! ಕೃತಕ ಕಾಲು ಕೈ ಜೋಡಿಸಿಕೊಂಡು ಮರಳಿ ಅಫ್ಘಾನಿಸ್ತಾನಕ್ಕೆ. ಕಡೇ ಪಕ್ಷ ಅಲ್ಲಿ ಮೆಸ್ ಹಾಲ್ ಕ್ಲೀನ್ ಮಾಡಿಕೊಂಡಾದರೂ ಇರ್ತೀನಿ. ಅದೇ ನನ್ನ ದೇಶಕ್ಕೆ, ನನ್ನ ಸೈನ್ಯದ ಅಣ್ಣತಮ್ಮಂದಿರಿಗೆ ನಾನು ಮಾಡಬಹುದಾದ ಸಹಾಯ”.

http://www.army.mil/article/71611/

 

12697208_980166578739954_1064642245642135486_o

Advertisements

ಚಿತ್ರ ಶಕ್ತಿ – ೬

“ವೈದ್ಯೋ ನಾರಾಯಣೋ ಹರಿಃ” ಅಂತಾರೆ.

ಹುಟ್ಟಿಸುವನ್ಯಾರೋ, ಕೊಲ್ಲುವವನ್ಯಾರೋ. ಆದರೆ ಪೊರೆಯುವವ ಮಾತ್ರ ವೈದ್ಯ ಅಂತಾ ನನ್ನ ಬಲವಾದ ನಂಬಿಕೆ. ನಿಮ್ಮ ಲಾಯರ್ರು , ಮಂಗಳೂರಿನಿಂದ ಉಡುಪಿಗೆ ಹೋಗುವಾಗ ನೀವು ಕೂತಿರೋ ಆ ಪ್ರೈವೇಟ್ ಬಸ್ಸಿನ ಡ್ರೈವರ್ರು, ನಿಮ್ಮ ಜಿಮ್ ಟ್ರೈನರ್ರು, ನಿಮ್ಮ ಅತ್ತೆ ಇವರೆಲ್ಲರೂ ನಿಮ್ಮನ್ನು ಅಪಾಯದೆಡೆಗೆ ದೂಡಬಲ್ಲರಾದರೂ, ನಿಮ್ಮನ್ನು ಸಾವಿನ ಸನಿಹಕ್ಕೆ ವೈದ್ಯರಷ್ಟು ಬೇರಾರೂ ಕೊಂಡೊಯ್ಯಲಾರರು. ಅಲ್ಲಿವರೆಗೆ ಕೊಂಡೊಯ್ಯುವುದು ಬಹುಷ: ಯಾರಿಗಾದರೂ ಸಾಧ್ಯ. ಆದರೆ ಅಲ್ಲಿಂದ ವಾಪಾಸ್ ಕರೆತೆರುವುದು ಕೇವಲ ವೈದ್ಯನಿಗಷ್ಟೇ ಸಾಧ್ಯ. ಆತನ ಸ್ಕಾಲ್ಪೆಲ್ಲಿನ ಒಂದೇ ತಪ್ಪು ಗೆರೆ, ಜೀವನ ಮತ್ತು ಮರಣದ ಮದ್ಯದ ಗಡಿಯಾಗಬಹುದು. ಅವನು ಕೊಡುವ ಅರವಳಿಕೆಯ ಮದ್ದು, ಒಂದು ಹನಿ ಅತ್ತಿತ್ತಾದರೂ, ನಿಮ್ಮ ಜೀವನವೂ ಅತ್ತಿತ್ತಾಗಬಲ್ಲುದು.

ವೈದ್ಯರ ಬಗ್ಗೆ ಹಲವರಿಗೆ ಹಲವು ತರಹದ ಭಾವನೆಗಳಿರಬಹುದು. ಆದರೆ ಶಿಕ್ಷಕ ಹಾಗೂ ರಾಜಕಾರಣಿಯಂತೆ, ವೈದ್ಯವೃತ್ತಿ ಜಗತ್ತಿನ ಅತ್ಯಂತ ಮುಖ್ಯ ವೃತ್ತಿಗಳಲ್ಲೊಂದು. ತಮ್ಮದೆಲ್ಲವನ್ನೂ ಬದಿಗಿಟ್ಟು, ರೋಗಿ ಮುಖ್ಯ ಅಂತಾ ಭಾವಿಸುವ ವೈದ್ಯರು ಕಡಿಮೆಯಾಗಿರಬಹುದು, ಆದರೆ ಅಂತಾ ಜೀವಗಳು ಇನ್ನೂ ಇವೆ. ಅಂತಹ ಜೀವಗಳಿಂದಲೇ ನಾವು ನಮ್ಮ ಪ್ರೀತಿಯ ಜೀವಗಳಿನ್ನೂ ಇಲ್ಲಿ ಇರಲು ಸಾಧ್ಯವಾಗಿರುವಿದು. 1987ರಲ್ಲಿ ತೆಗೆದ ಈ ಚಿತ್ರ ನೋಡಿ, ಹೃದಯ ನಿಷ್ಕ್ರಿಯವಾಗಿದ್ದ ರೋಗಿಯೊಬ್ಬನಿಗೆ ಹೃದಯದ ಕಸಿ ನಡೆಸಿ (ನಿಷ್ಕ್ರಿಯವಾಗಿದ ಹೃದಯ ಕಿತ್ತೆಸೆದು, ಬೇರೆಯದೊಂದು ಹೃದಯವನ್ನು ಕೂರಿಸಿ) ಸತತ 23 ಘಂಟೆಗಳ ಶಸ್ತ್ರಚಿಕಿತ್ಸೆಯೊಂದರ ನಂತರ ಸುಸ್ತಾಗಿ ಕುಳಿತಿರುವ ಈ ವೈದ್ಯ ಕ್ಷಣಮಾತ್ರವೊಂದಕ್ಕೆ, ಸಾಕ್ಷಾತ್ ದೇವರಂತೆಯೇ ಕಾಣುವುದಿಲ್ಲವೇ! ಮೂಲೆಯಲ್ಲಿ ಆತನ ಅಸಿಸ್ಟೆಂಟ್ 23 ಘಂಟೆಗಳ ಹೊರಾಟದ ನಂತರ ಅಲ್ಲಿಯೇ, ಆಪರೇಷನ್ ಥಿಯೇಟರಿನ ಮೂಲೆಯಲ್ಲಿಯೇ ನಿದ್ದೆ ಹೋಗಿರುವುದನ್ನು ನೋಡಿ! ಅಸಿಸ್ಟೆಂಟುಗಳು ನಿದ್ರಿಸಿದರೂ ಸಹ, ಡಾಕ್ಟರು ಪೇಷೆಂಟಿನ ಪಕ್ಕದಲ್ಲಿಯೇ ಕುಳಿತು, ಪೇಷೆಂಟ್ ಹೇಗೆ ಸುಧಾರಿಸಿಕೊಳ್ಳುತ್ತಿದ್ದಾನೆ ಅಂತಾ ಉಪಕರಣಗಳ ಮೂಲಕ ನೋಡುತ್ತಿದ್ದಾನೆ. ಇಂತಹಾ ಕರ್ತವ್ಯಪ್ರೇಮಿ ಮಾನವರಿಂದಲೇ ಅಲ್ಲವೇ ನಾವಿನ್ನೂ ನಾಗರೀಕರಾಗಿ ಉಳಿದಿರುವುದು!

ಚುಟುಕು: ಈ ರೀತಿಯ ಶಸ್ತ್ರಚಿಕಿತ್ಸೆಗಳಲ್ಲಿ, ಇದು ಜಗತ್ತಿನಲ್ಲೇ ಮೊದಲನೆಯದು. ಈ ಆಪರೇಷನ್ ಯಶಸ್ವಿಯಾಗಿ ನಡೆದದ್ದು ಮಾತ್ರವಲ್ಲ, ಪೇಷಂಟ್ ಆರಾಮಾಗಿ, ಆ ಡಾಕ್ಟರಿಗಿಂತಲೂ ಹೆಚ್ಚು ವರ್ಷ ಬದುಕಿದ್ದಾನೆ. ಈ ಡಾಕ್ಟರ್ (Zbigniew Religa) ಮುಂದೆ ಪೋಲೆಂಡಿನ ಆರೋಗ್ಯಮಂತ್ರಿಯಾಗಿ ಸೇವೆಸಲ್ಲಿಸಿ 2009ರಲ್ಲಿ ಶ್ವಾಸಕೋಶದ ಕ್ಯಾನ್ಸರಿನಿಂದ ಸಾವನ್ನಪ್ಪಿದ. ಹೆಚ್ಚಿನ ವಿವರಗಳು ಇಲ್ಲಿವೆ: http://www.zmescience.com/other/great-pics/zbigniew-religa-picture/

12657780_979351882154757_5846179282578925835_o

ಚಿತ್ರ ಶಕ್ತಿ – ೫

“ಕೊಟ್ಟಾರೆ ಕೊಡು ಶಿವನೆ ಕುಡುಕನಲ್ಲದ ಗಂಡನ” ಅಂತಾ ಹೆಂಗಸರು ಒಂದುಕಾಲದಲ್ಲಿ ಪ್ರಾರ್ಥನೆ ಮಾಡ್ತಿದ್ದರಂತೆ. ಈಗ ಕಾಲ ಬದಲಾಗಿದೆ. ಕೆಲವು ಕಡೆ “ಕೊನೇಪಕ್ಷ ಗಂಡನ ಕೊಡು ಶಿವನೆ, ಉಳಿದದ್ದು ನಾನು ನೋಡ್ಕೋತೀನಿ” ಅಂತಾ ಕೇಳುವ ಹಂಗಾಗಿದೆ. ಎರಿಟ್ರಿಯಾ ದೇಶದಲ್ಲಂತೂ ಪ್ರತೀ ಗಂಡು ಸಹ ಎರಡೆರಡು ಮದುವೆ ಆಗಲೇಬೇಕು ಅಂತಾ ಘೋಷಿಸಿದೆಯಂತೆ. ಗಂಡಸರ ಪ್ರಮಾಣ ಅಷ್ಟು ಕುಸಿದಿದೆಯಂತೆ!

ಅದು ಬದಿಗಿರಲಿ ಬಿಡಿ. ಗಂಡೋ ಹೆಣ್ಣೋ, ಮದುವೆಯಾದಮೇಲೆ ಜೀವನವೇ ಬದಲಾಗುತ್ತದೆ. ಇಷ್ಟೂ ದಿನ ಒಬ್ಬಂಟಿಯಾಗಿದ್ದ ಜೀವಕ್ಕೆ ಇನ್ನೊಂದು ಜೀವದ ಸಾಥ್ ಸಿಗುತ್ತದೆ. ಎಲ್ಲಾ ಸರಿಯಾಗಿ ನಡೆದರೆ, ವರ್ಷವೊಂದರಲ್ಲಿ ಜೊತೆಗೊಂದು ಮಗು ಕೂಡಾ. ಒಮ್ಮೆ ಪೋಷಕನ ಪಟ್ಟ ಸಿಕ್ಕಮೇಲೆ ಮಾನವನ ವರ್ತನೆ ಸಹ ಬದಲಾಗಲೇಬೇಕು. ಪೋಷಕರನ್ನೇ ನೋಡಿ ಮಕ್ಕಳು ಕಲಿಯುವುದರಿಂದ, ಮನುಷ್ಯನ ಚಟ, ದುಶ್ಚಟ, ಸ್ನೇಹಿತರು ಎಲ್ಲವೂ ಬದಲಾಗುತ್ತದೆ. ಅದು ಆಗಲಿಲ್ಲವೆಂದರೆ, ಆ ಮನುಷ್ಯನ ಜೀವನವಂತೂ ಹಳ್ಳಹಿಡಿಯುತ್ತದೆ. ಜೊತೆಗೆ ಅವಲಂಬಿತರ ಜೀವನವೂ ಮೂರಾಬಟ್ಟೆಯೇ.

ಮಕ್ಕಳನ್ನು ಸರಿದಾರಿಗೆ ತರಬೇಕಾದ ಅಪ್ಪನೇ, ಕುಡಿದು ತೂರಾಡಿ ದಾರಿಯಲ್ಲಿ ಬಿದ್ದರೆ, ಮಕ್ಕಳ ಗತಿಯೇನಾಗಬೇಕು ಒಮ್ಮೆ ಯೋಚಿಸಿ! “ಕುಡಿದದ್ದು ಸಾಕು, ನಡಿಯಪ್ಪಾ ಮನೆಗೆ” ಅಂತಾ ಹೇಳುತ್ತಾ, ಮಗುವೇ ಅಪ್ಪನಿಗೆ ಅಪ್ಪನಾದ ಈ ಚಿತ್ರನೋಡಿ. ಕುಡಿತದ ದುಷ್ಪರಿಣಾಮಗಳನ್ನು ಈ ಒಂದು ಚಿತ್ರ ಅದೆಷ್ತು ಪ್ರಭಾವಶಾಲಿಯಾಗಿ ವಿವರಿಸುತ್ತದೆ. “My Heart Leaps Up” ಎಂಬ ಕವನದಲ್ಲಿ ವಿಲಿಯಂ ವರ್ಡ್ಸ್ವರ್ಥ್ “`Child is the father of the man” ಎಂದು ಯಾವ ಅರ್ಥದಲ್ಲಿ ಹೇಳಿದನೋ ಗೊತ್ತಿಲ್ಲ. ಆದರೆ, ಈ ಚಿತ್ರದಲ್ಲಿ ಅದು ನಿಜವಾಗಿಯೂ ಬಿಂಬಿತವಾಗಿದೆ.

12645180_978867035536575_893539162314715355_n

ಚಿತ್ರ ಶಕ್ತಿ – ೪

ಈ ಎದೆಗಾರಿಕೆಗಿಲ್ಲ ಎಣೆ.

ಬೆಕ್ಕೊಂದನ್ನು ರೂಮಿನಲ್ಲಿ ಕೂಡಿ ಹಾಕಿ, ತಪ್ಪಿಸಿಕೊಳ್ಳದಂತೆ ಮಾಡಿ, ಅದರ ಬಳಿ ಹೋದರೆ, ಎಂಆ ಸೌಮ್ಯಸ್ವಭಾವದ ಬೆಕ್ಕಾದರೂ ಸಹ ನಿಮ್ಮ ಮೇಲೆ ದಾಳಿಮಾಡುತ್ತದಂತೆ. ಹಾಗೆಯೇ ಸರ್ಕಾರವೊಂದು ತನ್ನದೇ ಜನರ ಕತ್ತುಹಿಸುಕಿ ಸದ್ದಡಗಿಸಿಲು ಪ್ರಯತ್ನಿಸಿದಾಗ, ಎಂತಾ ಸೌಮ್ಯ ಸ್ವಭಾವದ ಮನುಷ್ಯನಾದರೂ ಎದ್ದು ನಿಲ್ಲಲು ತಯಾರಾಗುತ್ತಾನೆಂಬುದಕ್ಕೆ ಈ ಚಿತ್ರ ನಿದರ್ಶನ.

ಜೂನ್ 4, 1989ರಂದು ಚೀನಾದ ಕಮ್ಯೂನಿಸ್ಟ್ ಸರ್ಕಾರದ ವಿರುದ್ಧ, ನಾಗರೀಕರು ಬೀಜಿಂಗಿನ ಪ್ರಸಿದ್ಧ “ತಿಯಾನ್ಮೆನ್ ಚೌಕ”ದಲ್ಲಿ ಪ್ರತಿಭಟನೆ ಮಾಡುತ್ತಿದ್ದಾಗ, ಸರ್ಕಾರಿ ಪಡೆಗಳು ಹಿಂಸಾತ್ಮಕವಾಗಿ ನಡೆದುಕೊಂಡು, ಈ ಚಕಮಕಿ ಸುಮಾರು 3,000 ಜನರ ಸಾವಿಗೆ ಕಾರಣವಾಯ್ತು. ಸರ್ಕಾರವೇ ಜನರನ್ನು ಕೊಂದ ರೀತಿ ನೋಡಿ, ಮರುದಿನ ಪ್ರತಿಭಟನೆ ಮಾಡಲು ಯಾರೂ ಬೀದಿಗಿಳಿಯಲಿಲ್ಲ. ಜೂನ್ 5ರಂದು ಬೀಜಿಂಗಿನ ಬೀದಿಗಳಲ್ಲಿ ಸೈನ್ಯ ಗಸ್ತು ತಿರುಗುತ್ತಿದ್ದಾಗ, ಅನೂಹ್ಯ ಘಟನೆಯೊಂದು ನಡೆಯಿತು. ತರಕಾರಿ ತೆಗೆದುಕೊಂಡು ಮನೆಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬ, ಸುಮ್ಮನೇ, ಯಾವುದೇ ಪ್ರಚೋದನೆಯಿಲ್ಲದೆ, ಬೀದಿಯಲ್ಲಿ ಹೋಗುತ್ತಿದ್ದ ಟ್ಯಾಂಕುಗಳ ತುಕಡಿಯೊಂದರ ಮುಂದೆ ಹೋಗಿ ನಿಂತ. ಮಾತಿಲ್ಲ….ಕಥೆಯಿಲ್ಲ……ಸುಮ್ಮನೆ ನಿಂತ. ಟ್ಯಾಂಕಿನ ಕಮಾಂಡರ್, ಬರೇ ಒಬ್ಬ ವ್ಯಕ್ತಿಯ ಮೇಲೆ ಟ್ಯಾಂಕರಿನಿಂದ ಹಲ್ಲೆನಡೆಸುವುದು ತೀರಾ ಕ್ಷುಲ್ಲಕವೆಂದುಕೊಂಡನೋ ಏನೋ, ಆತನನ್ನು ಬಳಸಿಕೊಂಡು ಮುಂದೆ ಹೋಗಲು ನಿರ್ದೇಶಿಸಿದ. ಈ ವ್ಯಕ್ತಿ ಜಾಗ ಬದಲಿಸಿ ಮತ್ತೆ ಟ್ಯಾಂಕಿನ ಮುಂದೆಯೇ ನಿಂತ. ಇದು ಸುಮಾರು ಮೂರ್ನಾಲ್ಕು ಬಾರಿ ನಡೆಯಿತು. ಕೊನೆಗೆ ಟ್ಯಾಂಕ್ ತನ್ನ ಎಂಜಿನ್ ಬಂದ್ ಮಾಡಿ ನಿಂತಿತು. ಹಿಂದಿನ ಟ್ಯಾಂಕುಗಳೂ ಅದನ್ನೇ ಮಾಡಿದವು. ಈ ವ್ಯಕ್ತಿ ನಂತರ ಟ್ಯಾಂಕಿನ ಮೇಲೆ ಹತ್ತಿ ಕಮಾಂಡರಿನ ಬಳಿ ಸುಮಾರು ಮೂರ್ನಾಲ್ಕು ನಿಮಿಷಗಳ ಮಾತಿನ ಚಕಮಕಿ ನಡೆಸಿದನಂತೆ. ಕೊನೆಗೆ ಟ್ಯಾಂಕುಗಳು ಎಂಜಿನ್ ಸ್ಟ್ರಾರ್ಟ್ ಮಾಡಿದಾಗ ಯಥಾಪ್ರಕಾರ ವ್ಯಕ್ತಿ ಟ್ಯಾಂಕಿನ ಮೂಂದೆ ಹಾಜರ್. ಈ ಬಾರಿ ಕಮಾಂಡರ್ ಈತನ ಮೇಲೇ ಟ್ಯಾಂಕ್ ಹತ್ತಿಸಲು ನೋಡಿದಾಗ, ಅಲ್ಲಿಯವರೆಗೂ ಈ ದಾರಿಬದಿಯ ಪ್ರಹಸನವನ್ನು ಮೂಕವಿಸ್ಮಿತರಾಗಿ ನೋಡುತ್ತಿದ್ದ ಕೆಲವಷ್ಟು ಜನ ಬಂದು ಆ ವ್ಯಕ್ತಿಯನ್ನು ಎಳೆದುಕೊಂಡು ಹೋದರು.

ಈ ವ್ಯಕ್ತಿ ಯಾರು, ಅವನಿಗೆ ಮುಂದೆ ಏನಾಯ್ತು ಎಂಬ ವಿವರಗಳು ಸರಿಯಾಗಿ ಗೊತ್ತಿಲ್ಲ. ಹೇಳಿಕೇಳಿ ಅದು ಚೀನಾ. ತನ್ನ ಮಾತು ಕೇಳದಿದ್ದರೆ ತನ್ನದೇ ನಾಗರೀಕರ ಮೇಲೆ ಬಂದೂಕು ತಿರುಗಿಸುವ ಸರ್ಕಾರವದು. ಅಂದಮೇಲೆ ಇವನಿಗೇನಾಯ್ತು ಎಂಬುದರ ಬಗ್ಗೆ ಹಲವಾರು ದಂತಕಥೆಗಳು ಚಾಲ್ತಿಯಲ್ಲಿವೆ. ಆದರೆ ಬಿಳಿ ಶರ್ಟು, ಕರಿ ಪ್ಯಾಂಟು ಧರಿಸಿ, ಏಕಾಂಗಿಯಾಗಿ ನಾಲ್ಕು ಟ್ಯಾಂಕುಗಳ ಮುಂದೆ ನಿಂತು ತನ್ನದೇ ರೀತಿಯಲ್ಲಿ ಅಹಿಂಸಾತ್ಮಕ ಪ್ರತಿಭಟನೆಯನ್ನು ತೋರಿದ ಈ ವಾಮನ, ತನ್ನ ಎದೆಗಾರಿಕೆಯಿಂದಾಗಿ, ಚರಿತ್ರೆಯ ಪುಟಗಳಲ್ಲಿ ಸೇರಿಹೋದ. ಸ್ವಾತಂತ್ರ್ಯ ಹತ್ತಿಕ್ಕಿದಾಗ, ಸಾಮಾನ್ಯ ಮನುಷ್ಯನೂ ಸಹ ಎಂತಾ ಎದುರಾಳಿಯೆದುರೂ ಕೂಡಾ ಎದ್ದುನಿಲ್ಲಬಲ್ಲ ಎಂಬುದನ್ನು ಆರೇಳು ನಿಮಿಷಗಳಲ್ಲಿ ತೋರಿಸಿದ. 3,000 ಜನರನ್ನು ಕೊಂದರೂ 3,001ನೆಯ ವ್ಯಕ್ತಿಯೊಬ್ಬ ಪ್ರತಿಭಟಿಸಲು ಇದ್ದೇ ಇದ್ದಾನೆಂದು ಸಾಂಕೇತಿಕವಾಗಿ ತೋರಿಸಿದ ಈ ಚಿತ್ರ ನಾಗರೀಕ ಜಗತ್ತಿನ ಚರಿತ್ರೆಯ ಮುಖ್ಯ ಚಿತ್ರಗಳಲ್ಲೊಂದಾಯ್ತು.

ಈ ವಾಮನ ನನಗೆ ಒಂದು ಕ್ಷಣ ‘A Wednesday’ ಚಿತ್ರದ ಮುಖ್ಯ ಪಾತ್ರ ಹಾಗೂ ಮೋಹನ್ ದಾಸ್ ಗಾಂಧಿಯ ಮಿಶ್ರರೂಪವಾಗಿ ಕಂಡುಬಂದ.

12650896_978260058930606_3413042014278390431_n

ಚಿತ್ರ ಶಕ್ತಿ – ೩

“ವರ್ಣಮಾತ್ರಂ ಕಲಿಸಿದಾತಂ ಗುರು” ಅನ್ನುತ್ತಾರೆ.

ಆ ವರ್ಣ ಅಕ್ಷರವೂ ಆಗಬಹುದು, ಗೆರೆಯೊಂದಕ್ಕೆ ಜೀವಕೊಡುವ ಚಿತ್ರವೂ ಆಗಿರಬಹುದು, ಜೀವನದ ಒಂದು ದೊಡ್ಡ ಪಾಠವೇ ಆಗಬಹುದು. ನಿಮ್ಮೆದುರೇ ನಡೆಯುತ್ತಿರುವ ವ್ಯಕ್ತಿಯೊಬ್ಬ, ದಾರಿಯಲ್ಲಿ ಯಾರೋ ಬಿಸುಟ ಬಾಳೆಹಣ್ಣಿನ ಸಿಪ್ಪೆಯನ್ನೆತ್ತಿ ಕಸದಡಬ್ಬಿಗೆ ಹಾಕಿದ್ದೂ ಒಂದು ಪಾಠವೇ. ಅವನೂ ನಿಮಗೆ ಗುರುವೇ. ಅಂತಹುದರಲ್ಲಿ, ವ್ಯಕ್ತಿಯೊಬ್ಬ ನಿಮ್ಮನ್ನು ಬೀದಿಯಿಂದ ಮೇಲೆತ್ತಿ, ನಿಮ್ಮ ಬಡತನವನ್ನು ಬದಿಗೊತ್ತಿ, ಖಾಯಿಲೆಗಳಿಗೆ ಔಷಧಿ ಕೊಡಿಸಿ, ಅರ್ಥಪೂರ್ಣ ಜೀವನವೊಂದಕ್ಕೆ ದಾರಿಮಾಡಿಕೊಟ್ಟು ಬದುಕಲು ಕಲಿಸಿದರೆ, ನಿಮ್ಮ ಪಾಲಿಗೆ ಆತ ದೇವರಿಗಿಂತಲೂ ಹೆಚ್ಚೇ ಅಲ್ಲವೇ!

ಈ ಚಿತ್ರದಲ್ಲಿರುವ ಹುಡುಗನ ಹೆಸರು ಡಿಯಾಗೋ ಫ್ರಝಾ ಟೋರ್ಕ್ವಾಟೋ. ರಿಯೋ-ಡಿ-ಜನೈರೋದ ಸ್ಲಮ್ಮುಗಳಲ್ಲಿ ಬೆಳೆದ ಈ ಮಗು, ನಾಲ್ಕನೇ ವಯಸ್ಸಿನಿಂದಲೇ ಮೆನಂಜೈಟಿಸ್ಸಿನ ರೋಗಿ. ಸರಿಯಾದ ಚಿಕಿತ್ಸೆಯಿಲ್ಲದೇ ಅದು ಮುಂದೆ ನ್ಯುಮೋನಿಯಾಕ್ಕೆ ತಿರುಗಿ ಮೆದುಳಿನ ತೀವ್ರಸ್ರಾವಕ್ಕೆ ಒಳಗಾಗಿ ನೆನಪಿನ ಶಕ್ತಿಯೇ ಕುಸಿದಿತ್ತು. ಇಷ್ಟಾದರೂ ಸಂಗೀತ ಕಲಿಯಬೇಕೆಂಬ ಹುಚ್ಚು ಈ ಹುಡುಗನಿಗೆ. ಸಂಗೀತಶಾಲೆಗಳ ಕಿಟಕಿಯ ಮುಂದೆ ನಿಂತು, ಆಸೆಯ ಕಂಗಳಿಂದ ಅಲ್ಲಿಯ ಹುಡುಗರನ್ನು ನೋಡುವುದನ್ನೇ ದಿನಕ್ಕೆರಡು ಘಂಟೆಗಳ ಕಾಯಕ ಮಾಡಿಕೊಂಡಿದ್ದ.

ರಿಯೋದ ಸಾಮಾಜಿಕ ಸೇವಾ ಸಂಸ್ಥೆ “ಆಫ್ರೋ-ರೆಗ್ಗೇ”ಯ ಕಾರ್ಯಕರ್ತ ಜೋಆ ಡಿ-ಸಿಲ್ವ ಇಂತಹ ಮಕ್ಕಳನ್ನು ಕೇರಿಗಳಿಂದ ಹುಡುಕಿ ತೆಗೆದು, ಅವರಿಗೊಂದು ಜೀವನಕ್ಕೆ ದಾರಿ ಮಾಡಿಕೊಡುತ್ತಿದ್ದ. ಡಿಯಾಗೋನನ್ನೂ ಕೂಡಾ ಅವನ ಕೆಲ ಸ್ನೇಹಿತರೊಂದಿಗೆ ಅಲ್ಲಿಯ ಕೇರಿಗಳ ಕೆಟ್ಟಸಹವಾಸದಿಂದ ಎತ್ತಿ ಊಟ ಬಟ್ಟೆಕೊಟ್ಟು, ಕೈಗೊಂದು ವಯ್ಲಿನ್ ಕೂಡ ಕೊಡಿಸಿ ಜೀವನವನ್ನು ಸಂತೋಷದಿಂದ ಅನುಭವಿಸುವುದನ್ನು ಕಲಿಸಿದ. ಒಂದು ದಿನ ಏನೋ ನಡೆಯಬಾರದ್ದು ನಡೆದು, ಕ್ಲಬ್ ಒಂದರ ಹೊರಗೆ ಕೆಲ ಪಾಪಿ ಪುಡಿಗಳ್ಳರು ಕ್ಷುಲ್ಲಕ ಜಗಳವೊಂದರಲ್ಲಿ ಸಿಲ್ವನನ್ನು ಗುಂಡಿಟ್ಟು ಕೊಂದೇಬಿಟ್ಟರು. ಡಿ-ಸಿಲ್ವನ ಜೀವದೊಂದಿಗೇ, ಡಿಯಾಗೋನ ಸಂತೋಷದ ಕಾರಣಗಳೂ ನಂದಿಹೋಗಿದ್ದವು.

ಸಿಲ್ವನ ಶವಸಂಸ್ಕಾರದ ದಿನ ಹುಡುಗರೆಲ್ಲಾ ಸೇರಿ ಅವನೇ ಕಲಿಸಿಕೊಟ್ಟಿದ್ದ ಕೆಲ ಹಾಡುಗಳನ್ನು, ವಯಲಿನ್ನಿನಲ್ಲಿ ನುಡಿಸಿ ಅವನಿಗೆ ಅಂತಿಮ ನಮನ ಸಲ್ಲಿಸಿದರು. ಸಿಲ್ವನ ಪ್ರತಿ ನೆನಪಿನೊಂದಿಗೂ ಡಿಯಾಗೋ ಉಮ್ಮಳಿಸಿ ಅತ್ತ ಆ ಕ್ಷಣ, ಇದೊಂದು ಚಿತ್ರದಲ್ಲಿ ದಾಖಲಾಗಿಬಿಟ್ಟಿತು. ಜಗತ್ತಿನ ಕೋಟ್ಯಾಂತರ ನಿರ್ಗತಿಕ ಮಕ್ಕಳಿಗೂ ಸಿಗಬಹುದಾದ ಅರ್ಥಪೂರ್ಣ ಜೀವನವೊಂದರ ಭರವಸೆಯ ಸಂಕೇತವಾಗಿ ಡಿಯಾಗೋನ ಈ ಚಿತ್ರ ನಿಂತುಬಿಟ್ಟಿತು.

12647128_977649428991669_8678787375037203471_n

ಚಿತ್ರ ಶಕ್ತಿ – ೨

ನಿಮ್ಮ ಹಣೆಯಲ್ಲಿ ಸಾವು ಬರೆದಿಲ್ಲವೆಂದರೆ, ನೀವು ಸಾಯೊಲ್ಲಾ ಅಂತಾ ನಾವು ಮಾತಿಗೆ ಹೇಳ್ತೀವಿ ಅಲ್ವಾ? ಆದರೆ ಹುಟ್ಟಿದ ನಾಲ್ಕೇ ತಿಂಗಳಿಗೇ ಸಾವನ್ನು ಮೆಟ್ಟಿನಿಲ್ಲುವುದೆಂದರೆ…ಸಲಾಮ್ ಹೇಳಬೇಕಾದ ಮಾತಲ್ಲವೇ! ಇವತ್ತಿಗೂ ಜಗತ್ತಿನೆಲ್ಲೆಡೆ ಎಳೆಗೂಸುಗಳ ಸಾವು ಸರ್ವೇಸಾಮಾನ್ಯ ಎಂಬುವಷ್ಟರಮಟ್ಟಿಗೆ ಬೆಳೆದುನಿಂತಿದೆ. ವೈದ್ಯಕೀಯ ಜಗತಿನಲ್ಲಿ ನಡೆದ ಎಲ್ಲಾ ಬೆಳವಣಿಗೆಗಳ ನಡುವೆಯೂ ಕೂಸುಗಳ ಸಾವು ಇಂದಿಗೂ ಅವ್ಯಾಹತ. ಆ ವಯಸ್ಸಿನ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ತುಂಬಾ ಕಡಿಮೆ ಇರುವುದೂ ಇದಕ್ಕೆ ಕಾರಣ.

2011ರಲ್ಲಿ ಜಪಾನ್ ಅನ್ನು ಮಂಡಿಯೂರಿಸಿದ ಸುನಾಮಿ, ಜೀವಬಲಿಗಳ ಸರಮಾಲೆಯನ್ನೇ ಸೃಷ್ಟಿಸಿತು. ಎಂತೆಂತಾ ಗಟ್ಟಿಗರೇ ನಿಲ್ಲಲಾಗಲಿಲ್ಲ. ಸುನಾಮಿ ಬಂದುಹೋದ ಮರುದಿನ ನಿಂತ ನೀರು, ಕೊಳಚೆಗಳೆಲ್ಲಾ ಒಣಗಲಾರಂಭಿಸಿ, ರೋಗಗಳು ಹರಡಲಾರಂಭಿಸಿದವು. ಆಗ ಇನ್ನೊಂದಿಷ್ಟು ಜನ ಹಾಸಿಗೆಬಿಟ್ಟೇಳಲಿಲ್ಲ. ಒಟ್ಟಿನಲ್ಲಿ ಹತ್ತುಸಾವಿರಜನ ನಾಲ್ಕೇದಿನದಲ್ಲಿ ಯಮಪಾಶಕ್ಕೆ ಬಲಿಯಾಗಿದ್ದರು.

ಆದರೆ ನಾಲ್ಕುತಿಂಗಳ ಈ ಮಗು ಬರೋಬ್ಬರಿ ನಾಲ್ಕುದಿನ ಅಮ್ಮನಿಲ್ಲದೆ, ಅವಳ ಹಾಲಿಲ್ಲದೆ, ಅವಳ ಬಿಸಿಯಪ್ಪುಗೆಯಿಲ್ಲದೆ, ಬರೇ ಒಂದು ಗುಲಾಬಿ ಬಣ್ಣದ ಕಂಬಳಿಯಲ್ಲಿ ಕುಸುಗುಡುತ್ತಾ, ಜೀವನದೊಂದಿಗೆ ಪಿಸುಮಾತನಾಡುತ್ತಾ ಬದುಕೇಬಿಟ್ಟಿತು! ನಾಲ್ಕುದಿನದ ನಂತರ, ಬದುಕುಳಿದಿರಬಹುದಾದವರಿಗಾಗಿ ಉರುಳಿದ ಮನೆಗಳ ಅವಶೇಷಗಳನ್ನು ಸೈನಿಕರು ಎತ್ತಿ ಹುಡುಕುತ್ತಿರುವಾಗ, ಈ ಮುದ್ದುಕಂದ ಜೀವನವನ್ನು ಎದುರುನೋಡುತ್ತಾ, ತಲೆಯಮೇಲೆ ಇಲ್ಲದ ಆಕಾಶದಲ್ಲಿ ನಕ್ಷತ್ರಗಳೆನ್ನೆಣಿಸುತ್ತಾ ಮಲಗಿತ್ತಂತೆ. ಜೀವನದ ದಯೆ ಹಾಗೂ ಮರಣದ ಕ್ರೂರತೆ ಎರಡನ್ನೂ ಕಂಡ ಸೈನಿಕನೊಬ್ಬ, ಆ ಮಗುವನ್ನೆತ್ತಿಕೊಂಡಾಗ ತನಗರಿವಿಲ್ಲದಂತೇ ಭಾವುಕನಾದ ಆ ಕ್ಷಣ.

(ಅಂದಹಾಗೆ ‘ಯಮ’ ಜಪಾನೀಯರಲ್ಲೂ ಸಾವಿನ ದೇವತೆ. ಅವರಲ್ಲಿ ಶಿನಿಗಾಮಿ ಎಂಬುದೊಂದು ಪೌರಾಣಿಕ ಕಿನ್ನರಪ್ರಭೇಧವೇ ಇದೆ. ಈ ಶಿನಿಗಾಮಿಗಳೆಲ್ಲರೂ ಸಾವಿನ ಅಧಿದೇವತೆಗಳು. ಅವರಲ್ಲಿ ‘ಯಮ’ನೂ ಒಬ್ಬ. ಹಾಗಾಗಿ “ಹತ್ತುಸಾವಿರ ಯಮಪಾಶಕ್ಕೆ ಬಲಿಯಾದರು” ಅಂತಾ ನಾನು ಹೇಳಿದಾಗ ಅದು ಬರೀ ಸಾಹಿತ್ಯಕವಾಗಿಯೇನೂ ಇರಲಿಲ್ಲ 🙂 )

12650813_977026882387257_9134565429143991260_n

ಚಿತ್ರ ಶಕ್ತಿ – ೧

ಜಗತ್ತಿನ ಬದ್ಧವೈರಿಗಳಾದ ಉತ್ತರ ಮತ್ತು ದಕ್ಷಿಣ ಕೊರಿಯಾದ ಮಧ್ಯೆ ಜನರು ಓಡಾಡುವಂತಿಲ್ಲ. 1950ರಲ್ಲಿ ಪ್ರಾರಂಭವಾದ “ಕೊರಿಯನ್ ಯುದ್ಧ”ದ ನಂತರ ಅಲ್ಲಿನ ಜನರು ಎರಡೂ ದೇಶಗಳ ನಡುವೆ ಹರಿದುಹಂಚಿ ಹೋದರು. ಹಿಂದಿನ ದಿನವಷ್ಟೇ ಭೇಟಿಯಾಗಿದ್ದ ಅಣ್ಣತಮ್ಮಂದಿರು, ಪ್ರೇಮಿಗಳು, ಸ್ನೇಹಿತರು ಜೂನ್ 20, 1950ರಂದು ಬೆಳಿಗ್ಗೆ ಎದ್ದಾಗ, ಶಾಶ್ವತವಾಗಿ ದೂರವಾಗಿದ್ದರು. ಅವರಲ್ಲೇ, ಇವರಿಲ್ಲೇ ಎಂಬಂತಾಯ್ತು.

ಆಗಾಗ ಈ ದ್ವೇಷದ ಕಮಟು ಹೊಗೆಯ ಮಧ್ಯೆ, ಅದೆಲ್ಲಿಂದಲೋ ಕಸ್ತೂರಿಯ ಸುವಾಸನೆ ತೇಲಿಬರುವಂತೆ, ಈ ಎರಡೂ ಕೊರಿಯಾಗಳು ಒಂದಾಗಿ, ತಮ್ಮ ನಾಗರಿಕರು ನೆರೆಯಾಚೆಯ ಸಂಬಂಧಿಗಳೊಂದಿಗೆ ಭೇಟಿಯಾಗಲೋಸುಗ ತಮ್ಮ ಕಬ್ಬಿಣದ ಹೃದಯಗಳ ಬಾಗಿಲು ತೆರೆಯುತ್ತವೆ. 2010ರಲ್ಲಿ ಹೀಗೇ ಒಮ್ಮೆ ಮೂರುದಿನಗಳ ಕಾಲ ಈ ಬಾಗಿಲುಗಳು ತೆರೆದಾಗ ಸಾವಿರಾರು ಕೊರಿಯನ್ನರು ತಮ್ಮ ಸಂಬಂಧಿಗಳೊಂದಿಗೆ, ಗೆಳೆಯರೊಂದಿಗೆ ಸಂತಸದ ಕೆಲಕಾಲ ಕಳೆದರು. ಮೂರುದಿನಗಳ ನಂತರ ಬಾಗಿಲು ಮುಚ್ಚುವ ಸಮಯ ಬಂದಾಗ ದಕ್ಷಿಣಕ್ಕೆ ಹೊರಟುನಿಂತ ವೃದ್ಧನೊಬ್ಬ, ಉತ್ತರದಲ್ಲೇ ಉಳಿದು ಜೀವನದ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲಿರುವ ತನ್ನ ತಮ್ಮನೆಡೆಗೆ ಕೈಬೀಸುತ್ತಾ, ಭಾವುಕನಾದ ಒಂದುಕ್ಷಣ

12646957_976523969104215_8308054112481619739_n

ರಸ ಝೆನು‬ – 17

ಚೈನಾದ ಒಂದೂರಲ್ಲಿ ಜಾತ್ರೆ ನಡೆಯುತ್ತಿತ್ತು. ಆ ದಿನದ ಸಂಜೆಯ ಕಾರ್ಯಕ್ರಮ ಒಬ್ಬ ಝೆನ್ ಗುರುವಿನ ಭಾಷಣ.

ಜೀವನದ ಸಾರ್ಥಕತೆಯ ಬಗ್ಗೆ ಸುಮಾರು ಇಪ್ಪತ್ತು ನಿಮಿಷ ಮಾತನಾಡಿದ ಗುರು, “ನನಗ್ಗೊತ್ತು. ನಿಮ್ಮಲ್ಲಿ ನಾನು ಮಾತನಾಡಿದ್ದರ ಬಗ್ಗೆ ಇನ್ನೂ ಸಂದೇಹ ಅಥವಾ ಗೊಂದಲಗಳಿರಬಹುದು. ಯಾವಾಗ ಬೇಕಾದರೂ ನನ್ನ ಆಶ್ರಮಕ್ಕೆ ಬನ್ನಿ. ಅವನ್ನು ಪರಿಹರಿಸುವ” ಎಂದ.

ಈ ಭಾಷಣವನ್ನು ಕೇಳಿಸ್ಕೊಳ್ಳುತ್ತಿದ್ದ ಮನಃಶಾಸ್ತ್ರಜ್ಞನೊಬ್ಬ, ಕಾರ್ಯಕ್ರಮ ಮುಗಿದ ನಂತರ ಗುರುವನ್ನು ಹಿಂಬಾಲಿಸಿ, ಮಾರ್ಗಮಧ್ಯದಲ್ಲಿ ಅವನನ್ನು ಸೇರಿದ. ಒಟ್ಟಿಗೆ ನಡೆಯುತ್ತಾ ಕೆಲ ವಿಷಯಗಳನ್ನು ಚರ್ಚಿಸಿ, ಕೊನೆಗೆ ಮನಃಶಾಸ್ತ್ರಜ್ಞ ಕೇಳಿದ “ನನ್ನದೊಂದು ಕೊನೆಯ ಪ್ರಶ್ನೆಯಿದೆ. ನಾನೊಬ್ಬ ಮನಃಶಾಸ್ತ್ರಜ್ಞ. ನಾನು ಓದಿರುವ ಶಾಸ್ತ್ರ ನನಗೆ ರೋಗಿಗಳ ತೊಂದರೆಗಳ ಬಗ್ಗೆ ತಿಳಿಸುತ್ತದೆ. ಉಳಿದ ಕೆಲ ವಿಷಯಗಳನ್ನು ನಾನು ಅವರನ್ನು ಪ್ರಶ್ನಿಸಿ ತಿಳಿದುಕೊಳ್ಳುತ್ತೇನೆ. ಇದರಿಂದ ನನಗೆ ಅವರ ಖಾಯಿಲೆಗಳನ್ನು ಗುಣಪಡಿಸಲು ಸಹಾಯಕವಾಗುತ್ತದೆ. ಆದರೆ ನಿಮ್ಮ ದಾರಿ ಬೇರೆಯೇ ಎಂದೆನಿಸುತ್ತದೆ ನನಗೆ. ನೀವು ಹೇಗೆ ಅವರ ತೊಂದರೆಗಳನ್ನು ಬಗೆಹರಿಸುತ್ತೀರಾ? ಹೇಗೆ ಉತ್ತರಿಸುತ್ತೀರಾ”

ಝೆನ್ ಗುರು ನಿಧಾನದನಿಯಲ್ಲಿ ಹೇಳಿದ “ತೊಂದರೆಗೆ ಪರಿಹಾರ ನನ್ನ ಉತ್ತರದಲ್ಲಿರುವುದಿಲ್ಲ. ಆದರೆ ನಾನು ನನ್ನ ಬಳಿ ಬಂದವರನ್ನು ಅವರು ಪ್ರಶ್ನೆಗಳನ್ನೇ ಕೇಳಲಾಗದ ಸ್ಥಿತಿಗೆ ಕೊಂಡೊಯ್ಯುತ್ತೇನೆ ಅಷ್ಟೇ. ಸಮಸ್ಯೆಗಳಿಗೆ ಸಮಾಧಾನ ಅವಕ್ಕೆ ಉತ್ತರವಲ್ಲ……ಆ ಪ್ರಶ್ನೆಗಳೇ ಇಲ್ಲದಿರುವುದು, ಅಷ್ಟೇ”
ಮನಃಶಾಸ್ತ್ರಜ್ಞನಿಗೆ ಹೊಸದೊಂದು ಹೊಳಹು ಹೊಳೆಯಿತು. ನಕ್ಕು ನಮಸ್ಕರಿಸಿ ಮುಂದುವರೆದ.

ರಸ_ಝೆನು – 16

ಇವತ್ತಿನ ಕಥೆ, ಬಹುಷಃ ಎಲ್ಲರೂ ಕೇಳಿರಬಹುದಾದ ಝೆನ್ ಕಥೆ. “ಝೆನ್ ಅಂದ್ರೆ ಈ ಕಥೆ” ಅನ್ನೋವಷ್ಟರ ಮಟ್ಟಿಗೆ ಈ ಕಥೆ ಪ್ರಸಿದ್ಧ. ಇವತ್ತು ಅದನ್ನೇ ಹೇಳ್ತೀನಿ.
—————————————–

ನಾನ್-ಇನ್ ಎಂಬ ಪ್ರಸಿದ್ಧ ಜಪಾನೀ ಝೆನ್ ಗುರುವೊಬ್ಬನಿದ್ದ. ಮೈಝೀ ಯುಗದ (1868-1912) ತತ್ವಜ್ಞಾನಿಗಳಲ್ಲಿ ಗುರುಗಳಲ್ಲಿ ಆತ ಬಹಳ ಹೆಸರುಪಡೆದವ. ಅವನಲ್ಲಿಗೆ ಬಂದವರೆಲ್ಲರೂ ಖಂಡಿತವಾಗಿಯೂ ತಮ್ಮದೇ ಆದ ಸಾಕ್ಷಾತ್ಕಾರದೊಂದಿಗೆ ಹಿಂದಿರುಗುತ್ತಿದರು ಎಂಬ ಪ್ರತೀತಿಯಿತ್ತು. ಇವನನ್ನು ಭೇಟಿಮಾಡಲು, ಒಮ್ಮೆ ಒಬ್ಬ ಧರ್ಮಶಾಸ್ತ್ರದ ವಿಶ್ವವಿದ್ಯಾನಿಲಯದ ಉಪನ್ಯಾಸಕನೊಬ್ಬ ಬಂದಿಳಿದ. ತನ್ನನ್ನು ಪರಿಚಯಿಸಿಕೊಂಡು ‘ನಾನೊಬ್ಬ ಉಪನ್ಯಾಸಕ. ಬೇರೆ ಬೇರೆ ಧರ್ಮಶಾಸ್ತ್ರಗಳನ್ನು ಕಲಿತಿದ್ದೇನೆ ಹಾಗೂ ಕಲಿಸುತ್ತಿದ್ದೇನೆ. ಈಗ ನಿಮ್ಮ ಝೆನ್ ಜ್ಞಾನವನ್ನು ಕಲಿಯಲು ಬಂದಿದ್ದೇನೆ’ ಎಂದ.

ನಾನ್-ಇನ್ ತನ್ನ ಅತಿಥಿಯನ್ನು ಸ್ವಾಗತಿಸಿ, ಜಪಾನೀ ವಾಡಿಕೆಯಂತೆ, ಕುಡಿಯಲು ಟೀ ಕೊಡಲೆಂದು ಕಪ್ ತೆಗೆದು ಅವನ ಮುಂದಿಟ್ಟು, ಟೀ ಪಾತ್ರೆಯಿಂದ ಟೀ ಸುರಿಯಲಾರಂಭಿಸಿದ. ಕಪ್ ತುಂಬಿತು. ಆದರೂ ನಾನ್-ಇನ್ ಟೀ ಸುರಿಯುವುದನ್ನು ನಿಲ್ಲಿಸಲಿಲ್ಲ. ಈಗ ಕಪ್ ತುಂಬಿ ಟೀ ಚೆಲ್ಲಲಾರಂಭಿಸಿತು. ಉಪನ್ಯಾಸಕನಿಗೆ ಆಶ್ಚರ್ಯವಾದರೂ ನೋಡಿ ಸುಮ್ಮನಿದ್ದ. ಕಪ್ಪಿನಿಂದ ಹೊರಚೆಲ್ಲಿದ ಟೀ ಸಾಸರಿನಲ್ಲಿ ತುಂಬಲಾರಂಭಿಸಿತು. ಕೆಲವೇ ಹೊತ್ತಿನಲ್ಲಿ ಅಲ್ಲಿಯೂ ತುಂಬಿ ಮೇಜಿನ ಮೇಲೆ ಚೆಲ್ಲಲಾರಂಭಿಸಿತು. ಅಲ್ಲಿಯವರೆಗೂ ಸುಮ್ಮನಿದ್ದ ಉಪನ್ಯಾಸಕ, ತಡೆಯಲಾರದೆ ‘ಗುರುಗಳೇ, ಕಪ್ ತುಂಬಿದೆ. ಅದರೊಳಗೆ ಇನ್ನು ಹಿಡಿಸಲಾರದು’ ಎಂದ.

ಆ ಮಾತನ್ನು ಕೇಳಿದಾಕ್ಷಣ ಟೀ ಸುರಿಯುವುದನ್ನು ನಿಲ್ಲಿಸಿ, ಪಾತ್ರೆ ಬದಿಗಿಟ್ಟು, ನಾನ್-ಇನ್ ತಲೆಯೆತ್ತಿ ಹೇಳಿದ “ಈ ಕಪ್ಪಿನಂತೆಯೇ, ನಿನ್ನ ಮನಸ್ಸು ಸಹಾ ಬೇರೆ ವಿಚಾರಗಳಿಂದ ತುಂಬಿ ತುಳುಕುತ್ತಿದೆ. ನಾನು ನಿನಗೆ ಏನೇ ಕಲಿಸಿದರೂ ಅದು ಹೊರಚೆಲ್ಲುತ್ತದೆಯೇ ಹೊರತು, ನಿನ್ನೊಳಗೆ ಹೋಗಲಾರದು. ಮೊದಲು ನಿನ್ನ ಆ ಟೀ ಕಪ್ಪನ್ನು ಖಾಲಿ ಮಾಡಿಕೊಂಡು ಬಾ. ಆಮೇಲೆ ಝೆನ್ ಕಲಿಯುವುದರ ಬಗ್ಗೆ ಯೋಚಿಸುವೆಯಂತೆ”.

ಆ ಉಪನ್ಯಾಸಕನಿಗೆ ಸತ್ಯದರ್ಶನವಾಯ್ತು. ನಾನ್-ಇನ್’ಗೆ ನಮಸ್ಕರಿಸಿ ಹೊರಟುಹೋದ. ಎರಡೇ ತಿಂಗಳೊಳಗೆ ಮರಳಿಬಂದು ಅಲ್ಲಿನ ಶಿಷ್ಯನಾದ ಎಂಬ ಕಥೆಗಳಿವೆ.

ರಸ ಝೆನು‬ – 15

ಕ್ಯೋಗನ್ ಎಂಬ ಬೌದ್ಧಬಿಕ್ಕು ಇಸನ್ ಎಂಬ ಗುರುವಿನಡಿಯಲ್ಲಿ ಶಿಕ್ಷಣ ಪಡೆಯುತ್ತಿದ್ದ. ಕ್ಯೋಗನ್’ನ ಬುದ್ಧಿಮತ್ತೆ, ತಾತ್ವಿಕ ಅಲೋಚನೆಗಳು ಶಾಲೆಯಲ್ಲಿ ಪ್ರಸಿದ್ಧಿಪಡೆದಿದ್ದವು.

ಒಂದುದಿನ ಇಸನ್ ಕೇಳಿದ “ಕ್ಯೋಗನ್, ನೀನು ಹುಟ್ಟುವ ಮೊದಲು ಏನಾಗಿದ್ದೆ!?”

ಕ್ಯೋಗನ್ ಆ ಪ್ರಶ್ನೆ ಕೇಳಿ ಸ್ಥಂಭೀಭೂತನಾದ. ಆತನ ಬಳಿ ಉತ್ತರವಿರಲಿಲ್ಲ. ಇಸನ್ ಸುಮ್ಮನೇ ಇಂತಹ ಪ್ರಶ್ನೆ ಕೇಳುವುದಿಲ್ಲವೆಂದು ತಿಳಿದಿದ್ದ ಆತ, ತನ್ನ ಬುದ್ಧಿಗೆ ಕೆಲಸ ಕೊಟ್ಟ. ಎಷ್ಟೇ ಆಲೋಚಿಸಿದರೂ ಅರ್ಥವುಳ್ಳ ಉತ್ತರ ಹೊಳೆಯಲಿಲ್ಲ. ಹತಾಶೆಗೊಂಡು ಇಸನ್’ನನ್ನೇ ಸಂದೇಶ ನಿವಾರಿಸುವಂತೆ ಕೇಳಿಕೊಂಡ.

ಅದಕ್ಕೇ ಇಸನ್ ಹೇಳಿದ ‘ನೋಡು, ನಾನಿದಕ್ಕೆ ಉತ್ತರ ಹೇಳಿದರೆ, ಜೀವನವಿಡೀ ನನ್ನನ್ನು ದ್ವೇಷಿಸುತ್ತೀಯ. ಹಾಗಾಗಿ ನಾನಿದಕ್ಕೆ ಉತ್ತರಿಸಲಾರೆ’.

ಕ್ಯೋಗನ್ನನಿಗೆ ಇದ್ದಕ್ಕಿಂದಂತೆ ತಾನೊಬ್ಬ ನಿಷ್ಪ್ರಯೋಜಕ ಎಂಬ ಭಾವನೆ ಆವರಿಸಿತು. ಇಷ್ಟು ವರ್ಷ ಸಾಧನೆ ಮಾಡಿದರೂ, ಓದಿದರೂ ಇಷ್ಟು ಸಣ್ಣ ಪ್ರಶ್ನೆಗೆ ಅರ್ಥಪೂರ್ಣ ಉತ್ತರ ಕೊಡಲು ನನಗಾಗಲಿಲ್ಲವಲ್ಲಾ ಎಂಬ ಭಾವನೆ ದಿನೇದಿನೇ ಬೆಳೆಯಲಾಂಭಿಸಿತು. ಒಂದು ದಿನ ತಾನು ಬರೆದಿಟ್ಟಿದ್ದ ಸೂತ್ರಗಳಿಗೆಲ್ಲಾ ಬೆಂಕಿಯಿಟ್ಟು, ಆಶ್ರಮವನ್ನೆ ಬಿಟ್ಟು ಹೊರಟ.

ಕೆಲದಿನಗಳ ಕಾಲ ಎಲ್ಲೆಲ್ಲೋ ಅಲೆದಾಡಿ, ಕೊನೆಗೆ ಜೀರ್ಣಾವಸ್ಥೆಯಲ್ಲಿದ್ದ ದೇವಾಲಯವೊಂದರಲ್ಲಿ ನೆಲೆನಿಂತ. ಹಲವಾರುವರ್ಷಗಳ ಕಾಲ ಅದೇ ಅವನ ನೆಲೆಯಾಯಿತು. ಅಲ್ಲೇ ಇದ್ದು, ಗಂಟೆಗಟ್ಟಲೇ ಧ್ಯಾನಮಾಡುತ್ತಿದ್ದ. ಜೊತೆಗೇ ಅಲ್ಲಲ್ಲಿ ದೇವಸ್ಥಾನದ ದುರಸ್ತಿಯನ್ನೂ ಮಾಡುತ್ತಿದ್ದ.

ಒಂದು ದಿನ ಹೀಗೇ ಬಾಗಿಲಬಳಿ ಗುಡಿಸುತ್ತಿರುವಾಗ, ಹೆಬ್ಬಾಗಿಲ ಕೆಳಬಾಗದಲ್ಲಿದ್ದ ಕಲ್ಲೊಂದು ಕಿತ್ತುಬಂತು. ಅದನ್ನು ಜೋರಾಗಿ ಗುಡಿಸಿ ದೂಡಿದಾಗ ಅದು ಹಾರಿಹೋಗಿ ಪಕ್ಕದಲ್ಲಿದ್ದ ಬಿದಿರಿನ ಕಾಂಡಕ್ಕೆ ಬಡಿಯಿತು……”ಟೋಕ್………” ಅಲ್ಲೆಲ್ಲಾ ಅದರದೇ ಪ್ರತಿಧ್ವನಿ ಅನುರಣಗೊಂಡಿತು.

ಆ ಶಬ್ದದೊಂದಿಗೇ ಕ್ಯೋಗನ್ನನ ಮುಖದಲ್ಲಿ ಮುಗುಳ್ನಗೆ ಮೂಡಿತು. ಆ ನಗುವಿನ ಹಿಂದೆಯೇ, ಮುಖದಲ್ಲಿ ಹಿಂದೆಂದೂ ಇರದ ಕಾಂತಿಯೊಂದು ಆವರಿಸಿತು. ಎರಡು ಕ್ಷಣ ಅವಕ್ಕಾಗಿ ನಿಂತ ಕ್ಯೋಗನ್ ತಕ್ಷಣವೇ ಸಾವರಿಸಿಕೊಂಡು, ಇಸಾನ್ ಇದ್ದಿರಬಹುದಾದ ದಿಕ್ಕಿನೆಡೆಗೆ ತಿರುಗಿ ತಲೆಬಾಗಿ “ಗುರುಗಳೇ ನೀವಂದದ್ದು ಸರಿ. ಇದನ್ನೆಲ್ಲಾ ನೀವೇ ನನಗೆ ಹೇಳಿದ್ದಿದ್ದರೆ, ನಾನೇನೆಂದು ನನ್ನ ಪ್ರಶ್ನೆಗೆ ಅಂದೇ ಉತ್ತರಿಸಿದ್ದಿದ್ದರೆ, ನಾನು ಆ ಉತ್ತರವೇ ಆಗಿ ಉಳಿದಿಬಿಡುತ್ತಿದ್ದೆ. ನನ್ನನ್ನು ನಾನು ಮೀರಿ ಬೆಳೆಯುತ್ತಿರಲಿಲ್ಲ. ಆ ಉತ್ತರದೊಳಗೇ, ಅದರಲ್ಲಿದ್ದಿರಬಹುದಾದ ಕಹಿಯೊಂದಿಗೇ, ಅದನ್ನು ದೂಷಿಸುತ್ತಾ, ಅದೊಂದು ಭ್ರಾಂತಿಯೊಳಗೇ ಬದುಕಿರುತ್ತಿದ್ದೆ. ಧನ್ಯವಾದ ನಾನು ಹುಟ್ಟುವ ಮೊದಲು ಏನಾಗಿದ್ದೆ ಎಂದು ತೋರಿಸ್ಕೊಟ್ಟಿದ್ದಕ್ಕೆ. ಧನ್ಯವಾದ ನನ್ನೊಳಗಿಂದ ನನ್ನನ್ನು ಹೊರಗೆಳೆದದ್ದಕ್ಕೆ” ಎಂದು ಕೈಮುಗಿದ.

ಕ್ಯೋಗನ್ ಅಲ್ಲಿಂದ ಮುಂದೆ ಸೃಜನಶೀಲ ಸಹಾನುಭೂತಿಯ ಹಾಗೂ ತೀವ್ರವಾದ ಒಳನೋಟವುಳ್ಳ ಗುರುವಾಗಿ ಬೌದ್ಧಧರ್ಮದ ಮಹಾನ್ ಸೂತ್ರಗಳನ್ನು ಬರೆದ. ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಧರ್ಮವನ್ನು ಪ್ರಸ್ತುತವಾಗಿಸಿ ಪ್ರಚುರಪಡಿಸಿದ. ಜನರಿಗೆ ತಮ್ಮನ್ನು ತಾವು ಬಿಡುಗಡೆಗೊಳಿಸುವುದರ ಬಗ್ಗೆ ತಿಳಿಸುತ್ತಾ ಹೋದ.