ಬುದ್ಧಿಗೊಂದು ಗುದ್ದು‬ – ೨೧

ಮೊದಲನೆಯದಾಗಿ…..ಎಷ್ಟು ಬೇಕಾದ್ರೂ ಉಗೀರಿ. ಯಾಕಂದ್ರೆ ದಿನಾ ಬರೀತೀನಿ ಅಂತಾ ಕೊಚ್ಕೊಂಡು, ಆಮೇಲೆ ಪಕ್ಕಾ ರಾಜಕಾರಣಿ ಥರಾ ಮಾತು ಉಳಿಸಿಕೊಳ್ಳದೇ ಕೈಕೊಟ್ಟು ಎಸ್ಕೇಪ್ ಆಗಿದ್ದೆ. ಕೇಳಿದವರಿಗೆಲ್ಲಾ, ಇದ್ದಿದ್ದು ಇಲ್ಲದ್ದು ಕೆಲ ಸುಳ್ಳುಗಳನ್ನೂ ಹೇಳಿದ್ದೆ, ಬ್ಯುಸಿ ಇದ್ದೀನಿ, ಹುಷಾರಿಲ್ಲ ಅಂತೆಲ್ಲಾ. ನಿಜ ಹೇಳ್ಬೇಕು ಅಂದ್ರೆ ಸೋಂಬೇರಿಯಾಗಿದ್ದೆ. ಮಧ್ಯ ಮಧ್ಯ ಆಗಾಗ (ನಿಜವಾಗ್ಲೂ….ನನ್ನ ನಂಬಿ ಪ್ಲೀಸ್) ಬ್ಯುಸಿನೂ ಇದ್ದೆ ಅನ್ನಿ. ಆದ್ರೂ ಈ ಕೆಲಸದ ಒತ್ತಡ, ಸಂಜೆ ಆರಕ್ಕೆ ಆಫೀಸ್ ಬಿಟ್ಟಮೇಲೆ ಜಿಮ್ಮು, ಕುಕ್ಕಿಂಗೂ, ತಿನ್ನಿಂಗೂ, ಅದರ ಮಧ್ಯ ಟೈಮ್ಸ್-ನೌ ಕಿರಿಚಾಟ ಕೇಳಿಂಗೂ ಅನ್ನುವಷ್ಟರಲ್ಲಿ, ನಿದ್ದೆ ಬರಿಂಗೂ 😦  ಹಾಗಾಗಿ ಬರೆಯೋಕೆ ಸಾಧ್ಯವೇ ನಾಟ್ ಆಗಿಂಗೂ. ಅದೂ ಅಲ್ದೆ, ಯಾವುದರ ಬಗ್ಗೆ ಬರೆದರೂ ಆ ವಿಷಯದ ಬಗ್ಗೆ ಚೆನ್ನಾಗಿ ರೀಸರ್ಚ್ ಮಾಡಿ ಬರೀಬೇಕು, ಜನ ಕೆಮ್ಮಗಿರಬಾರ್ದು ಅನ್ನೋ ನನ್ನ ಪಾಲಿಸಿಯನ್ನ ಪಾಲಿಸಿಕೊಂಡು ಬಂದವನು ನಾನು. ಕೆಲವೊಮ್ಮೆ ಅಂಕಣವನ್ನು ಟೈಪು ಮಾಡೋಕ್ಕಿಂತಾ ಹೆಚ್ಚು ಸಮಯ, ಸಂಶೋಧನೆಯಲ್ಲೇ ಹೊರಟು ಹೋಗುತ್ತೆ.

ನನಗ್ಗೊತ್ತು, ಈಗ ಏನೇ ಸಬೂಬು ಕೊಟ್ರೂ ಅವೆಲ್ಲಾ ಬರೇ ಸಬೂಬು ಮಾತ್ರವೇ ಅಂತಾ. ಅದಕ್ಕೇ ಇನ್ಮೇಲೆ ದಿನಕ್ಕೊಂದು ವಿಷಯ ಅಂತಾ ಹೆಡ್ಡಿಂಗು ಹಾಕ್ಕೊಂಡು, ನನ್ ಕಾಲ್ ಮೇಲೆ ನಾನೇ ಕಲ್ಲು ಎತ್ತಾಕೊಳ್ಳೋದು ಬೇಡ ಅಂತಾ ನಿರ್ಧರಿಸಿ ಇದಕ್ಕೆ “ಬುದ್ಧಿಗೊಂದು ಗುದ್ದು” ಅಂತಾ ಹೆಸರಿಡೋದು ಅಂತಾ, ನನ್ನ ನೇತೃತ್ವದಲ್ಲಿ ನಿಯುಕ್ತಿಗೊಂಡ ಏಕ ವ್ಯಕ್ತಿ ಆಯೋಗ ತೀರ್ಮಾನಿಸಿದೆ. ಆದ್ದರಿಂದ, ದಿನಕ್ಕೊಮ್ಮೆ ಬರೆಯಲಾಗದಿದ್ದರೂ, ಆಗಾಗ ಖಂಡಿತಾ ಬರೆಯುತ್ತಿರುತ್ತೇನೆ. ನಾನು ಬರೆದ ಎಲ್ಲಾ ಬರಹಗಳನ್ನೂ ಓದಿ ಲೈಕಿಸಿದ, ಕಮೆಂಟಿಸಿದ ಎಲ್ಲಾ ಓದುಗರಿಗೆ ಹಾಗೂ ನಿಲುಮೆಯ ನಿರ್ವಾಹಕ ಬಳಗಕ್ಕೆ ಪ್ರೀತಿಯ ನಮನಗಳು.

ಇವತಿನ ಗುದ್ದು ಒಂದು ಸಣ್ಣ ಇಂಗ್ಳೀಷ್ ಪಾಠ. ಈ ವಿಷಯ ಬಹಳಷ್ಟು ಜನರಿಗೆ ತಿಳಿದಿರಬಹುದು. ಆದರೂ, ಇನ್ನೊಮ್ಮೆ ಕೇಳಿಸ್ಕೊಳ್ಳಿ. ಗೊತ್ತಿಲ್ಲದವರಿಗೆ ತಿಳಿಸಿಕೊಡಿ.

ಬಹಳಷ್ಟು ಜನರಿಗೆ ಇಂಗ್ಳೀಷಿನಲ್ಲಿ discovery ಹಾಗೂ invention ಇವೆರಡೂ ಪದದ ಅರ್ಥ ತಿಳಿಯದೆ, ತಪ್ಪಾಗಿ ಬಳಸುವುದುಂಟು. ಕನ್ನಡದಲ್ಲಿ ಕಂಡುಹಿಡಿಯುವುದು ಮತ್ತು ಆವಿಷ್ಕಾರ ಎಂಬೆರಡು ಪದಗಳು ಬಳಕೆಯಲ್ಲಿದ್ದರೂ, ಆ ಪದಗಳು ಡಿಸ್ಕವರಿ ಮತ್ತು ಇನ್ವೆನ್ಶನ್ ಎಂಬ ಪದಗಳಿಗೆ ಎಲ್ಲಾ ಕಾಲದಲ್ಲೂ ಸಮಬಳಕೆಯ ಪದಗಳಾಗಿ ಬಳಕೆಯಾಗುವುದಿಲ್ಲ. ಹಾಗೂ ಇಂಗ್ಳೀಷಿನಲ್ಲಿ ಈ ಎರಡೂ ಪದಗಳಿಗೆ ಸಣ್ಣದೊಂದು ವ್ಯತ್ಯಾಸವಿದೆ. ಅದೇನೆಂದರೆ, Discovery ಎಂದರೆ, ಅದಾಗಲೇ ಅಸ್ತಿತ್ವದಲ್ಲಿದ್ದೂ ಜನರ ಕಣ್ಣಿಗೆ ಕಾಣದಿರದ ವಸ್ತು/ವಿಷಯಗಳನ್ನು ಕಂಡುಹಿಡಿದು ಪ್ರಚುರಪಡಿಸುವುದು. ಉದಾಹರಣೆಗೆ, ಕೊಲಂಬಸ್ ಅಮೇರಿಕಾವನ್ನು ಕಂಡುಹಿಡಿದದ್ದು Discovery. ರುಧರ್ಫೋರ್ಡ್ ನೂಟ್ರಾನ್ ಕಂಡುಹಿಡಿದದ್ದು ಕೂಡಾ ಡಿಸ್ಕವರಿಯೇ. ಎಚ್.ಐ.ವಿ ವೈರಸ್, ನೆಪ್ಚೂನ್ ಮತ್ತು ಪ್ಲೂಟೋ ಗ್ರಹಗಳು ಇವೆಲ್ಲವೂ ಡಿಸ್ಕವರಿಗಳೇ!

Invention ಅಂದರೆ, ಇದುವರೆಗೂ ಅಸ್ತಿತ್ವದಲ್ಲಿಲ್ಲದ ವಸ್ತುವೊಂದನ್ನು ಅಥವಾ ತಂತ್ರಜ್ಞಾನವನ್ನು ಹೊಸದಾಗಿ ಸೃಷ್ಟಿಸುವುದು ಅಥವಾ ಸಂಶ್ಲೇಷಿಸುವುದು. ಉದಾಹರಣೆಗೆ, ಮೊಬೈಲ್ ಫೋನ್ ಅನ್ನು ಡಿಸ್ಕವರ್ ಮಾಡಿದ್ದಲ್ಲ. ಇನ್ವೆನ್ಶನ್ ಮಾಡಿದ್ದು. ಕನ್ನಡದಲ್ಲಿ ಮೊಬೈಲ್ ಫೋನ್ ಅನ್ನು ಆವಿಷ್ಕರಿಸಲಾಯಿತು ಎಂದರೂ ಏನೂ ತಪ್ಪಿಲ್ಲ. ಆದರೆ ಇಂಗ್ಳೀಷಿನಲ್ಲಿ ಮೊಬೈಲ್ ಫೋನ್ ಅನ್ನು ಇನ್ವೆಂಟ್ ಮಾತ್ರ ಮಾಡಲು ಸಾಧ್ಯ 🙂  ನಾವು ಬರೆಯಲು ಉಪಯೋಗಿಸುವ ಪೆನ್, ನೀವು ಇದನ್ನು ಓದ್ತಾ ಇರೋ ಕಂಪ್ಯೂಟರ್, ಇದನ್ನು ನಾನು ಪೋಸ್ಟ್ ಮಾಡಿರೋ ಫೇಸ್ಬುಕ್ ಇವೆಲ್ಲವೂ ಇನ್ವೆನ್ಶನ್ ಗಳು.

ಮುಂದಿನ ಬಾರಿ ನೀವು ಏನನ್ನಾದರೂ ಡಿಸ್ಕವರಿ ಅಥವಾ ಇನ್ವೆನ್ಶನ್ ಮಾಡಿದಾಗ, ಈ ಮಾತು ನೆನಪಿರಲಿ.

ಕೊಸರು:

ಮೊದಲನೆಯದಾಗಿ, ‘ಕ್ರಿಸ್ಟೋಫರ್ ಕೊಲಂಬಸ್ ಅಮೇರಿಕಾವನ್ನು ಕಂಡುಹಿಡಿದನು….’ ಹೀಗಂತ ನಾವು ಆರನೇ ಕ್ಲಾಸಿನ ಸಮಾಜ ಪರಿಚಯದಲ್ಲಿ ಓದಿದ್ವಿ. ಆದರೆ ಕೊಲಂಬಸ್ ಕಂಡುಹಿಡಿದದ್ದು ವೆಸ್ಟ್ ಇಂಡೀಸ್ ಹಾಗೂ ಬಹಾಮಾಸ್ ದ್ವೀಪಗಳನ್ನಷ್ಟೇ. ಅದೂ ಕೂಡ ಪುಣ್ಯಾತ್ಮ ಆ ದ್ವೀಪಗಳು ಭಾರತಕ್ಕೆ ಸೇರಿದ ದ್ವೀಪಗಳು ಅಂತಾ ಸಿಕ್ಕಸಿಕ್ಕವರ ಹತ್ತಿರವೆಲ್ಲಾ ಜಗಳ ಮಾಡಿದ್ದ. ಅಮೇರಿಕಾದ ಮುಖ್ಯ ಭೂಭಾಗವನ್ನು ಕಂಡುಹಿಡಿದದ್ದು ಪ್ಲೋರೆಂಟೈನ್ ಮತ್ತವನ ತಂಡ ಹಾಗೂ ಅವರೆಲ್ಲರಿಗಿಂತಾ ಮುಖ್ಯವಾಗಿ ಅಮೆರಿಗೋ ವೆಸ್ಪುಸ್ಸಿ. ಅದಕ್ಕೆ ಅಮೇರಿಕಾಕ್ಕೆ ಅವನ ಹೆಸರನ್ನೇ ಇಟ್ಟಿದ್ದು! 😛  ಅದಕ್ಕೇ ಹೇಳೋದು ಜಗಳ ಮಾಡಬಾರ್ದು ಅಂತಾ 😉

ಎರಡನೆಯದಾಗಿ, ಆರ್ಯಭಟ ಸೊನ್ನೆಯನ್ನು ಕಂಡುಹಿಡಿದದ್ದು Discoveryಯಾ ಅಥವಾ Inventionನ್ನಾ ಅಂತಾ ಇನ್ನೂ ಗೊತ್ತಿಲ್ವಂತೆ 😉 🙂

Leave a comment