ದಿನಕ್ಕೊಂದು ವಿಷಯ – ೩

ದಿನಕ್ಕೊಂದು ವಿಷಯ – ೩

ಅಂದಕಾಲತ್ತಿಲ್ ನ ಕಂಪ್ಯೂಟರ್ಗಳಿಗೂ ಇಂದಿನ ಕಂಪ್ಯೂಟರ್ಗಳಿಗೂ ವ್ಯತ್ಯಾಸವೇನೆಂದು ಸಾಮಾನ್ಯಜನರಿಗೆ ಕೇಳಿದರೆ ‘ಬಹಳ ಚುರುಕಾಗಿ ಕೆಲಸಮಾಡುತ್ತವೆ’, ‘ಕಲರ್ ಮಾನಿಟರ್’, ‘ವಿಂಡೋಸ್ 98’, ‘ಮೌಸು ಮತ್ತು ಕೀಬೋರ್ಡು’, ‘ಅಂತರ್ಜಾಲ’ ಇತ್ಯಾದಿ ಉತ್ತರಗಳು ಬರಬಹುದು. ಆದರೆ ತುಂಬಾ ಸರಿಯಾದ ಉತ್ತರವೆಂದರೆ ಬಹುಷಃ ‘ಏಕಕಾಲದಲ್ಲಿ ಹೆಚ್ಚು ಕೆಲಸಮಾಡುವ ಸಾಮರ್ಥ್ಯ’ (ಇಂಗ್ಳೀಷಿನಲ್ಲಿ mulit-tasking) ಎನ್ನಬಹುದು. ಗಾತ್ರ ಕಿರಿದಾಗಿದೆ ಎನ್ನಬಹುದಾದರೂ, ಗಾತ್ರವನ್ನು ಕುಗ್ಗಿಸುವುದು ಸಾಧ್ಯವಾಗಿದ್ದು multitasking ನಿಂದಾಗಿಯೇ. ಇಲೆಕ್ಟ್ರಾನಿಕ್ ಟ್ರಾನ್ಸಿಸ್ಟರ್ಸ್ ಗಳ (ರೇಡಿಯೋ ಅಲ್ಲ…… http://en.wikipedia.org/wiki/Transistor ಇದು :P) ಆವಿಷ್ಕಾರದಿಂದಾಗಿ ಕಡಿಮೆ ಜಾಗದಲ್ಲಿ ಹೆಚ್ಚೆಚ್ಚು ವಿದ್ಯುನ್ಮಾನ ಮಂಡಲಗಳನ್ನು ಕೂರಿಸಲು ಸಾಧ್ಯವಾಗಿದ್ದು ಹಾಗೂ ಕಂಪ್ಯೂಟರ್ಗಳ ಗಾತ್ರ ಕಡಿಮೆಯಾದದ್ದು.

ಕಂಪ್ಯೂಟರ್ಗಳು ಅದೆಷ್ಟೇ ಹೆಚ್ಚು ಕೆಲಸಗಳನ್ನು ಮಾಡಿದರೂ ಮನುಷ್ಯನ ಮೆದುಳನ್ನು ಮೀರಿಸಲು ಸಾಧ್ಯವಿಲ್ಲ ಎಂದು ಕೆಲವರು ಹೇಳುವುದನ್ನು ನೀವು ಕೇಳಿರಬಹುದು. ಆ ಮಾತು ಬಹಳಷ್ಟು ಮಟ್ಟಿಗೆ ನಿಜ ಕೂಡ, ನಮ್ಮ ಮೆದುಳು ಏಕಕಾಲದಲ್ಲಿ ನೋಡಬಲ್ಲುದು, ಕೇಳಿಸಕೊಳ್ಳಬಹುದು, ಅರ್ಥೈಸಿಕೊಳ್ಳಬಲ್ಲುದು ಇತ್ಯಾದಿ ಇತ್ಯಾದಿ. ಉದಾಹರಣೆಗೆ ನೀವು ಬೈಕ್ ಓಡಿಸುತ್ತಿದ್ದೀರ. ಆಗ ನಿಮಗೆ ನಿಮ್ಮ ಟೈರ್ ಸುಟ್ಟ ವಾಸನೆ ಬರುತ್ತದೆ. ಬ್ರೇಕ್ ಹಾಕುತ್ತೀರ. ಹಿಂದಿನ ಕಾರಿನವ ‘ಕುಯ್ಯೋsssss’ ಅಂತಾ ಹಾರ್ನ್ ಕೂಗಿಸುತ್ತಾನೆ. ಈ ಒಂದೆರಡು ಕ್ಷಣದಲ್ಲಿ ನಮ್ಮ ಮೆದುಳು ಎಷ್ಟು ಕೆಲಸ ಮಾಡುತ್ತದೆ ನೋಡಿ:
(೧) ಕಣ್ಣಿನಿಂದ ಮುಂದಿನ ಹಾಗೂ ಅಕ್ಕಪಕ್ಕದ ವಾಹನಗಳ ವೇಗ ಮತ್ತು ದಿಕ್ಕಿನ ನಿರಂತರ ಲೆಕ್ಕಾಚಾರ
(೨) ಬೈಕ್ ಓಡಿಸುವ ಪ್ರಕ್ರಿಯೆಯಲ್ಲಿ, ಬ್ರೇಕ್ ಒತ್ತಲು ಸದಾ ತಯಾರಾಗಿರುವ ಕಾಲು, ಆಕ್ಸಲರೇಟರ್ ಕೊಡುವ ಕೈಗಳ ಸಂಯೋಜನೆ,
(೩) ಮೂಗಿನ ಮೂಲಕ ಟೈರ್ ಸುಟ್ಟ ವಾಸನೆಯನ್ನು ಗ್ರಹಿಕೆ
(೪) ತಕ್ಷಣ ಬ್ರೇಕ್ ಹಾಕಬೇಕೆಂಬ ನಿರ್ಧಾರ
(೫) ಕಿವಿಯ ಮೂಲಕ ಕರ್ಕಶ ಹಾರನ್ನಿನ ಗ್ರಹಿಕೆ

ಇದೆಲ್ಲಾ ಎರಡೇ ಸೆಕೆಂಡಿನಲ್ಲಿ ನಡೆಯುತ್ತದೆ. (ಇದಕ್ಕಿಂತಲೂ ಹೆಚ್ಚಿನ ಕೆಲಸಗಳು ನಡೆಯುತ್ತಿರುತ್ತವೆ, ನಾನು ಇಲ್ಲಿ ಎಲ್ಲರಿಗೂ ಅರ್ಥವಾಗುವಂತಹ ಐದು ಕ್ರಿಯೆಗಳನ್ನಷ್ಟೇ ಹೇಳಿದ್ದೇನೆ). ಕೆಲವರು ತಮ್ಮ ಮೆದುಳಿನ ಸಾಮರ್ಥ್ಯದ ಬಗ್ಗೆ ಕೊಚ್ಚಿಕೊಳ್ಳುವುದುಂಟು. ನಾನು ಹಾಡುಹಾಡ್ತಾನೇ ಅಡುಗೆ ಮಾಡ್ತೀನಿ, ಓಡ್ತಾನೇ ಲೆಟರ್ ಬರೀತೀನಿ ಎಂದೆಲ್ಲಾ ಹೇಳಬಹುದು. ಕಾರು ಓಡಿಸ್ತಾನೇ ಮೆಸೇಜ್ ಟೈಪ್ ಮಾಡ್ತೀನಿ, ಫೇಸ್ಬುಕ್ ನೋಡ್ತೀನಿ ಅಂತಾ ಹೇಳೋವ್ರೂ ಇದ್ದಾರೆ……ದಯವಿಟ್ಟು ಇದನ್ನು ಮಾಡಬೇಡಿ. ಯಾಕೆ ಗೊತ್ತಾ, ನಾವಂದುಕೊಂಡಷ್ಟು ಗ್ರೇಟ್ ಅಲ್ಲ ನಮ್ಮ ಮೆದುಳು. ಅದಕ್ಕೆ ಅದರದ್ದೇ ಆದ ಮಿತಿಗಳಿವೆ. ಮೇಲಿನ ಉದಾಹರಣೆಯಲ್ಲಿ ಒಟ್ಟಿಗೆ ಐದು ಕೆಲಸಗಳನ್ನು ಮಾಡಿತಲ್ಲಾ ಮೆದುಳು? ಈಗ ಈ ಕೆಳಗಿನ ಎರಡೇ ಎರಡು ಸಿಂಪಲ್ ಕೆಲಸಗಳನ್ನು ಮಾಡಿ ನೋಡೋಣ!!!?

“ಒಂದು ಕುರ್ಚಿಯ ಮೇಲೆ, ಎರಡೂ ಪಾದಗಳು ನೆಲಕ್ಕೆ ತಾಕುವಂತೆ ಕುಳಿತುಕೊಳ್ಳಿ. ಈಗ ಬಲಗಾಲನ್ನ್ನು ನೆಲದಿಂದ ಸ್ವಲ್ಪ ಮೇಲೆತ್ತಿ, ಪ್ರದಕ್ಷಿಣಾಕಾರವಾಗಿ ತಿರುಗಿಸಿ. (ದೇವಸ್ಥಾನಕ್ಕೆ ಹೋಗಿ ಅಭ್ಯಾಸವಿಲ್ಲದವರಿಗಾಗಿ: ಪ್ರದಕ್ಷಿಣಾಕಾರ = clockwise 🙂 😛 ) ಹಾಗೆ ತಿರುಗಿಸುತ್ತಲೇ ನಿಮ್ಮ ಬಲಗೈಯನ್ನು ಗಾಳಿಯಲ್ಲಿ, ಸುಮಾರು ಮುಖದ ಎತ್ತರಕ್ಕೆ, ಎತ್ತಿಹಿಡಿದು ಸಂಖ್ಯೆ ಆರನ್ನು (6) ತೋರುಬೆರಳಿನಿಂದ ಬರೆಯಿರಿ……………..ವಾವ್ ಏನಿದು ಮ್ಯಾಜಿಕ್!!??? ನಿಮ್ಮ ಬಲಗಾಲಿನ ಚಲನೆ ಪ್ರದಕ್ಷಿಣಾಕಾರದಿಂದ ಅಪ್ರದಕ್ಷಿಣಾಕಾರಕ್ಕೆ (anti clockwise) ಬದಲಾಗುತ್ತದೆ. ಮಾಡಿ ನೋಡಿ ಬೇಕಾದರೆ!!”

ಇದೇಕೆ ಹೀಗೆ!!?

ಚಿಕ್ಕವರಿದ್ದಾಗ, ಅಪ್ಪ ಒಂದು ಕೈಯಲ್ಲಿ ಗಂಟೆ ಬಾರಿಸುತ್ತಾ ಇನ್ನೊಂದರಲ್ಲಿ ಆರತಿ ಎತ್ತುವುದನ್ನು ನೋಡಿ, ನಾವೂ ಅದನ್ನು ಮಾಡಲು ಹೋದರೆ, ಆರತಿ ಹಿಡಿದ ಕೈ ತಿರುಗಿದಂತೆ ಗಂಟೆಹಿಡಿದ ಕೈಕೂಡಾ ಉಲ್ಟಾದಿಕ್ಕಿನಲ್ಲಿ ತಿರುಗಿ, ಎಲ್ಲರಿಗೂ ನಗೆತರಿಸುವ ವಿಷಯವಾದದ್ದು ನೆನಪಿದೆಯಾ? ನಮ್ಮ ಮೆದುಳು ಎರಡು ಭಾಗವಾಗಿರುವುದು, ಮತ್ತು ನಮ್ಮ ದೇಹದ ಎಡಬದಿಯನ್ನು ಮೆದುಳಿನ ಬಲಭಾಗ ನಿಯಂತ್ರಿಸುವುದು ಹಾಗೂ ಬಲಬದಿಯನ್ನು ಎಡಬಾಗದ ಮೆದುಳು ನಿಯಂತ್ರಿಸುವುದು ನಿಮಗೆಲ್ಲರಿಗೂ ಗೊತ್ತಿದೆಯೆಂದುಕೊಳ್ಳುತ್ತೇನೆ. ಚಿಕ್ಕವಯಸ್ಸಿನಲ್ಲಿ ನಮಗಿನ್ನೂ ಮೆದುಳಿನ ಎರಡೂ ಬಾಗಗಳನ್ನು ಪ್ರತ್ಯೇಕವಾಗಿ ನಿಯಂತ್ರಿಸುವುದು ಅಭ್ಯಾಸವಾಗಿಲ್ಲದ ಕಾರಣ, ಈ ಆರತಿ ಮತ್ತು ಗಂಟೆಯ ಅಭಾಸ ನಡೆಯುತ್ತದೆ. ನಾವು ಬೆಳೆದಂತೆ ನಮ್ಮ ದೇಹ ಮತ್ತು ಮೆದುಳಿನ ತಾಳಮೇಳಗಳು ಹಿಡಿತಕ್ಕೆ ಬರುತ್ತವೆ, ಹಾಗೂ ನಿಧಾನವಾಗಿ ನಾವು multi-tasking ಅನ್ನು ಕಲಿಯುತ್ತೇವೆ. ಕೈಯನ್ನು ಮತ್ತು ಕಾಲನ್ನು ನಿಯಂತ್ರಿಸುವ ಘಟಕಗಳು ನಮ್ಮ ಮೆದುಳಿನಲ್ಲಿ ಬೇರೆಬೇರೆಯಾಗಿರುವುದರಿಂದ ನಾವು ಏಕಕಾಲಕ್ಕೆ ಎರಡನ್ನೂ ಚಲಿಸಬಲ್ಲವರಾಗಿರುತ್ತೇವೆ. ಆದರೆ, ನಮ್ಮ ಮೆದುಳಿನಲ್ಲೊಂದು ಸಣ್ಣ ವೈರಿಂಗ್ ಪ್ರಾಬ್ಲಮ್ ಇದೆ. ಅದೇನೆಂದರೆ ‘ಗ್ರಹಣ ಘಟಕಗಳು’ ನಮಗಿರುವುದು ಒಂದೊಂದೇ. ಎರಡು ಕಣ್ಣುಗಳಲ್ಲಿ ಮೂಡುವ ಬಿಂಬಗಳನ್ನು ಸಂಸ್ಕರಿಸುವ ಘಟಕವೊಂದೇ, ಎರಡೂ ಕಿವಿಗಳಲ್ಲಿ ಮೂಡುವ ಶಬ್ದತರಂಗಗಳನ್ನು ಸಂಸ್ಕರಿಸುವ ಘಟಕವೊಂದೇ, ಮೂಗಿನಿಂದ ಬರುವ ವಾಸನೆಗಳನ್ನು ಸಂಸ್ಕರಿಸುವ ಘಟಕವೊಂದೇ. ಅದಕ್ಕೇ ನಾವು ಹೋಟಲ್ಲಿಗೆ ಹೋದಾಗ ನಮಗೆ ಎಲ್ಲಕ್ಕಿಂತ ಪ್ರಬಲವಾಗಿರುವ ವಾಸನೆಯೇ ಹೆಚ್ಚಾಗಿ ಗ್ರಹಿಕೆಯಾಗುತ್ತದೆ. ಕೆಲವೊಮ್ಮೆ ಎಲ್ಲವೂ ಮಿಕ್ಸ್ ಆಗಿ ಏನೇನೋ ವಾಸನೆಗಳು ಬರುತ್ತವೆ. ಅದಕ್ಕೇ ಮೂರು ಜನರು ಒಟ್ಟಾಗೆ ನಿಮಗೇನಾದರೂ ಪ್ರಶ್ನೆಗಳನ್ನು ಕೇಳಿದರೆ ನೀವು ಸಿಟ್ಟಿನಲ್ಲಿ ‘ಒಬ್ಬೊಬ್ಬರಾಗಿ ಕೇಳ್ರಯ್ಯ!’ ಅಂತಾ ಬೈತೀರಾ. ನಮ್ಮ central processing unit ಒಂದೇ ಆಗಿರುವುದರಿಂದಲೇ, ನಮಗೆ ಗೊಬ್ಬರದ ಗುಂಡಿಯ ಪಕ್ಕ ಕುಳಿತು, ಮೈಸೂರು ಪಾಕು ತಿನ್ನಲು ಸಾಧ್ಯವಿಲ್ಲ (ಕೆಲವರು ತಿಂತಾರೆ ಬಿಡಿ 🙂 ಭಾರತದ ಅನ್ನ ತಿಂದೂ ಪಾಕಿಸ್ತಾನಕ್ಕೆ ಜೈ ಅನ್ನುವ ಜನರೆಷ್ಟಿಲ್ಲ ನಮ್ಮ ನಡುವೆ!? 😉 ). ಅದಕ್ಕೇ ಕೆಲವರಿಗೆ ಊಟ ಮಾಡುವಾಗ ಏನಾದರೂ ಹೊಲಸು ಮಾತನಾಡಿದರೆ ತಕ್ಷಣ ಊಟ ನಿಲ್ಲಿಸುವಂತಾಗುತ್ತದೆ. ಬುದ್ಧಿಜೀವಿಗಳು ಮಾತ್ರ ಇದಕ್ಕೆ ಹೊರತು. ಅವರು ಯಾವಾಗ ಬೇಕಾದರೂ ಹೊಲಸು ತಿನ್ನಬಹುದು……ಓಹ್ ಸಾರಿ…..ಮಾತನಾಡಬಹುದು 😉 😛

ಚಲನಾ ಹಾಗೂ ನಿರ್ದೇಶನಾ ಗ್ರಹಣ ಸಾಮರ್ಥ್ಯ(sense of motion and direction) ದ ಕಿರಿಕ್:

ಆದರೆ, ಎಷ್ಟೇ ಬೆಳೆದರೂ 99% ಜನರಿಗೆ ಮೆದುಳಿನ ಒಂದೇ ಭಾಗದಿಂದ, ಒಂದೇ ಕಾಲದಲ್ಲಿ, ಹಲವಾರು ಕೆಲಸಗಳನ್ನು ಮಾಡುವ ಕಲೆ ಸಿದ್ಧಿಸುವುದೇ ಇಲ್ಲ. ಅದರಲ್ಲೂ 99.9% ಜನರಿಗೆ ಮೆದುಳಿನ ಒಂದೇ ಭಾಗದಿಂದ, ಒಂದೇ ಕಾಲದಲ್ಲಿ, ಒಂದೇ ತರಹದ ಎರಡು ಕೆಲಸಗಳನ್ನು ಮಾಡಲು ಸಾಧ್ಯವಾಗುವುದೇ ಇಲ್ಲ. ನಮ್ಮ ದೇಹದ ಬೇರೆ ಬೇರೆ ಅಂಗಗಳನ್ನು ಏಕಕಾಲದಲ್ಲಿ ನಿರ್ವಹಿಸಲು ಅನುಕೂಲವಾಗುವಂತೆ ನಮ್ಮ ಮೆದುಳಿನಲ್ಲಿ ಬೇರೆ ಬೇರೆ ಘಟಕಗಳಿದ್ದರೂ, ಆ ಚಲನೆಯ ದಿಕ್ಕನ್ನು ನಿಯಂತ್ರಿಸುವ ಘಟಕಗಳು ಎರಡೇ ಇರುವುದು (ಎಡಮೆದುಳಿನಲ್ಲೊಂದು, ಹಾಗೂ ಬಲಮೆದುಳಿನಲ್ಲೊಂದು). ಈಗ ಮೇಲಿನ ಉದಾಹರಣೆಯನ್ನು ತೆಗೆದುಕೊಳ್ಳೋಣ. ನೀವು ಮಾಡುತ್ತಿರುವುದೇನು!? ನೀವು ಬಲಗಾಲನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ (ಪ್ರದಕ್ಷಿಣಾಕಾರದಲ್ಲಿ) ಚಲಿಸುತ್ತಿದ್ದೀರಿ. ಅಂದರೆ ನೀವು ನಿಮ್ಮ ಎಡಮೆದುಳಿನ ‘ಬಲಗಾಲು ನಿಯಂತ್ರಣಾ ಘಟಕ’ಕ್ಕೆ ಹಾಗೂ ‘ಚಲನ ನಿಯಂತ್ರಿಣಾ ಘಟಕ’ಕ್ಕೆ ನೀವಾಗಲೇ ಕೆಲಸಕೊಟ್ಟಾಗಿದೆ. ಈಗ ನೀವು ನಿಮ್ಮ ಬಲಗೈಯನ್ನು ಎತ್ತಿದಾಗ, ನಿಮ್ಮ ಎಡಮೆದುಳಿನ ‘ಬಲಗೈ ನಿಯಂತ್ರಣಾ ಘಟಕ’ಕ್ಕೆ ಕೆಲಸ ಕೊಡುತ್ತೀರ ಹಾಗೂ ನಿಮ್ಮ ಮೆದುಳು ಅದನ್ನು ಸ್ವೀಕರಿಸುತ್ತದೆ ಕೂಡಾ. ಆದರೆ ಅದೇ ಸಮಯಕ್ಕೆ ನೀವು ನಿಮ್ಮ ಎಡಮೆದುಳಿನ ‘ಚಲನ ನಿಯಂತ್ರಿಣಾ ಘಟಕ’ಕ್ಕೆ ಇನ್ನೊಂದು ಕೆಲಸ ಕೊಡಲು ಮುಂದಾಗುತ್ತೀರ. ಆದರೆ ಅದಕ್ಕಾಗಲೇ ಪ್ರದಕ್ಷಿಣಾಕಾರವಾಗಿ ತಿರುಗುವ ಆಜ್ಞೆ ಸಿಕ್ಕಾಗಿದೆ. ಅದು ಎರಡನೇ ಆಜ್ಞೆಯನ್ನು ಸ್ವೀಕರಿಸದೇ ‘ಓವರ್ಲೋಡ್’ ಆಗುತ್ತದೆ. ಆದರೆ ನೀವು ಮತ್ತೆ ಮತ್ತೆ ಬಲಗೈಯನ್ನು ಪ್ರದಕ್ಷಿಣಾಕಾರವಾಗಿ ತಿರುಗಿಸುವ ಆಜ್ಞೆ ಕೊಡುತ್ತೀರಾದ್ದರಿಂದ ‘ಪಾಪ!! ನಿಮಗ್ಯಾಕೆ ಬೇಜಾರು ಮಾಡುವುದು!?’ ಎಂದುಕೊಂಡು ಅದಾಗಲೇ ಸಿಕ್ಕಿರುವ ಆಜ್ಞೆಯನ್ನು ಅಳಿಸಿ, ಹೊಸ ಆಜ್ಞೆಯನ್ನು ಸ್ವೀಕರಿಸಿ, ಅದನ್ನೇ ಬಲಗಾಲಿಗೂ ವರ್ಗಾಯಿಸುತ್ತದೆ. ನಿಮ್ಮ ಬಲಗಾಲು ಈಗ ನಿಮ್ಮ ಎರಡನೇ ಆಜ್ಞೆಯ ಪ್ರಕಾರ ಅಪ್ರದಕ್ಷಿಣಾಕಾರವಾಗಿ ತಿರುಗುತ್ತದೆ 🙂 🙂

ಇತಿ ಶ್ರೀ ಕೈಕಾಲು ಪ್ರದಕ್ಷಿಣಾಪ್ರದಕ್ಷಿಣೇ ಪ್ರಸಂಗಮ್ ಸಮಾಪ್ತಿಃ 🙂

ಕೊಸರು: ಭಾರತದ, ಅದರಲ್ಲೂ ಬೆಂಗಳೂರಿನ, ಕಾರ್ ಮತ್ತು ಬಸ್ ಡ್ರೈವರ್ಗಳಿಗೆ ಮಾತ್ರ ಅತ್ಯಂತ ಹೆಚ್ಚಿನ ಮಟ್ಟಿನ multi-tasking ಸಾಧ್ಯವೆಂದು ಇದೀಗ ಸಂಶೋಧನೆಯಿಂದ ದೃಡಪಟ್ಟಿದೆ. ಒಂದು ಕೈಯಲ್ಲಿ ಸ್ಟೇರಿಂಗ್ ಹಿಡಿದು, ಇನ್ನೊಂದರಲ್ಲಿ ಹಾರ್ನ್ ಒತ್ತುತ್ತಾ, ಆಗಾಗ ಸುತ್ತಮುತ್ತಲಿನವರಿಗೆ ಕೈಸನ್ನೆಗಳಿಂದಾ ‘ಆಶೀರ್ವಾದ’ ಮಾಡುತ್ತಾ, ಒಂದು ಕಿವಿಯಲ್ಲಿ ಫೋನು, ಇನ್ನೊಂದು ಕಿವಿಯಲ್ಲಿ ಡಕ್-ಚಿಕ್…ಡಕ್-ಚಿಕ್ ಕನ್ನಡ ಹಾಡನ್ನು ಕೇಳುತ್ತ, ‘ಕೈ ಕೈಯ್ಯ ಕಚ್ಚಾಸುಡಾ’ ಎನ್ನುವ ಆಳದ ತತ್ವಜ್ಞಾನವನ್ನು ಅರ್ಥೈಸಿಕೊಂಡು’ ಅದಕ್ಕೆ ಹಾಗೂ ಫೋನಿನಲ್ಲಿ ಬಾಸ್ ಹೇಳಿದ ಮಾತಿಗೂ ಏಕಕಾಲಕ್ಕೆ ಏಕರೂಪದಲ್ಲಿ ತಲೆದೂಗುತ್ತಾ, ಒಂದು ಕಾಲಲ್ಲಿ ಆಕ್ಸಲರೇಟರ್, ಇನ್ನೊಂದು ಕಾಲಲ್ಲಿ ಬ್ರೇಕ್, ಆಗಾಗ ಮಧ್ಯದಲ್ಲಿ (ಹೆಂಡತಿಯರ ಮಧ್ಯೆ ಗರ್ಲ್ ಫ್ರೆಂಡನ್ನು ಸಮಾಧಿನಿಸಿದಂತೆ) ಕ್ಲಚ್ ಒತ್ತುತ್ತಾ, ಇಷ್ಟರ ಮಧ್ಯ ಸ್ಮಾರ್ಟ್ ಫೋನಿನಲ್ಲಿ ವಾಟ್ಸಾಪ್ ಜೋಕಿಗೆ ನಗುತ್ತಾ, ಟ್ವೇಟ್ ಗಳನ್ನು ಓದಿ, ಮೆಚ್ಚಿ, ತಕ್ಷಣವೇ ಅವನ್ನು ಕದ್ದು ಫೇಸ್ಬುಕ್ ಅಪ್ಡೇಟಿಗೆ ವರ್ಗಾಯಿಸುತ್ತಾ, ತನ್ನ ಪ್ರೊಫೈಲ್ ಫೋಟೋಗೆ ಬಂದ ಲೈಕುಗಳನ್ನು ನೋಡಿ ಹೆಮ್ಮೆಪಡುತ್ತಾ, ಆಂಬ್ಯುಲೆನ್ಸ್ ಕೂಗುತ್ತಿದ್ದರೂ, ಟ್ರಾಫಿಕ್ ಸಿಗ್ನಲ್ ಕೆಂಪಾಗಿದ್ದರೂ ಕ್ಯಾರೇ ಅನ್ನದೇ, ಸುಮ್ಮನೆ ಮುಂದೆ ಹೋಗುತ್ತಾ, ಕೃಷ್ಣ ಪರಮಾತ್ಮ ಬೋಧಿಸಿದ ‘ಸ್ಥಿತಪ್ರಜ್ಞೆ’ಯನ್ನು ಮೆರೆಯುತ್ತಾ ಆಕ್ಸಿಡೆಂಟ್ ಮಾಡದೇ ಆಫೀಸು ತಲುಪುವ ರೀತಿಯನ್ನು ನೋಡಿ ಪಶ್ಚಿಮದ ವಿಜ್ಞಾನಿಗಳೆಲ್ಲಾ ‘ಹೌ ಈಸ್ ದಿಸ್ ಪಾಸಿಬಲ್!?’ ಎಂದು howಹಾರಿದ್ದಾರಂತೆ 🙂