ಚಿತ್ರ ಶಕ್ತಿ – ೩

“ವರ್ಣಮಾತ್ರಂ ಕಲಿಸಿದಾತಂ ಗುರು” ಅನ್ನುತ್ತಾರೆ.

ಆ ವರ್ಣ ಅಕ್ಷರವೂ ಆಗಬಹುದು, ಗೆರೆಯೊಂದಕ್ಕೆ ಜೀವಕೊಡುವ ಚಿತ್ರವೂ ಆಗಿರಬಹುದು, ಜೀವನದ ಒಂದು ದೊಡ್ಡ ಪಾಠವೇ ಆಗಬಹುದು. ನಿಮ್ಮೆದುರೇ ನಡೆಯುತ್ತಿರುವ ವ್ಯಕ್ತಿಯೊಬ್ಬ, ದಾರಿಯಲ್ಲಿ ಯಾರೋ ಬಿಸುಟ ಬಾಳೆಹಣ್ಣಿನ ಸಿಪ್ಪೆಯನ್ನೆತ್ತಿ ಕಸದಡಬ್ಬಿಗೆ ಹಾಕಿದ್ದೂ ಒಂದು ಪಾಠವೇ. ಅವನೂ ನಿಮಗೆ ಗುರುವೇ. ಅಂತಹುದರಲ್ಲಿ, ವ್ಯಕ್ತಿಯೊಬ್ಬ ನಿಮ್ಮನ್ನು ಬೀದಿಯಿಂದ ಮೇಲೆತ್ತಿ, ನಿಮ್ಮ ಬಡತನವನ್ನು ಬದಿಗೊತ್ತಿ, ಖಾಯಿಲೆಗಳಿಗೆ ಔಷಧಿ ಕೊಡಿಸಿ, ಅರ್ಥಪೂರ್ಣ ಜೀವನವೊಂದಕ್ಕೆ ದಾರಿಮಾಡಿಕೊಟ್ಟು ಬದುಕಲು ಕಲಿಸಿದರೆ, ನಿಮ್ಮ ಪಾಲಿಗೆ ಆತ ದೇವರಿಗಿಂತಲೂ ಹೆಚ್ಚೇ ಅಲ್ಲವೇ!

ಈ ಚಿತ್ರದಲ್ಲಿರುವ ಹುಡುಗನ ಹೆಸರು ಡಿಯಾಗೋ ಫ್ರಝಾ ಟೋರ್ಕ್ವಾಟೋ. ರಿಯೋ-ಡಿ-ಜನೈರೋದ ಸ್ಲಮ್ಮುಗಳಲ್ಲಿ ಬೆಳೆದ ಈ ಮಗು, ನಾಲ್ಕನೇ ವಯಸ್ಸಿನಿಂದಲೇ ಮೆನಂಜೈಟಿಸ್ಸಿನ ರೋಗಿ. ಸರಿಯಾದ ಚಿಕಿತ್ಸೆಯಿಲ್ಲದೇ ಅದು ಮುಂದೆ ನ್ಯುಮೋನಿಯಾಕ್ಕೆ ತಿರುಗಿ ಮೆದುಳಿನ ತೀವ್ರಸ್ರಾವಕ್ಕೆ ಒಳಗಾಗಿ ನೆನಪಿನ ಶಕ್ತಿಯೇ ಕುಸಿದಿತ್ತು. ಇಷ್ಟಾದರೂ ಸಂಗೀತ ಕಲಿಯಬೇಕೆಂಬ ಹುಚ್ಚು ಈ ಹುಡುಗನಿಗೆ. ಸಂಗೀತಶಾಲೆಗಳ ಕಿಟಕಿಯ ಮುಂದೆ ನಿಂತು, ಆಸೆಯ ಕಂಗಳಿಂದ ಅಲ್ಲಿಯ ಹುಡುಗರನ್ನು ನೋಡುವುದನ್ನೇ ದಿನಕ್ಕೆರಡು ಘಂಟೆಗಳ ಕಾಯಕ ಮಾಡಿಕೊಂಡಿದ್ದ.

ರಿಯೋದ ಸಾಮಾಜಿಕ ಸೇವಾ ಸಂಸ್ಥೆ “ಆಫ್ರೋ-ರೆಗ್ಗೇ”ಯ ಕಾರ್ಯಕರ್ತ ಜೋಆ ಡಿ-ಸಿಲ್ವ ಇಂತಹ ಮಕ್ಕಳನ್ನು ಕೇರಿಗಳಿಂದ ಹುಡುಕಿ ತೆಗೆದು, ಅವರಿಗೊಂದು ಜೀವನಕ್ಕೆ ದಾರಿ ಮಾಡಿಕೊಡುತ್ತಿದ್ದ. ಡಿಯಾಗೋನನ್ನೂ ಕೂಡಾ ಅವನ ಕೆಲ ಸ್ನೇಹಿತರೊಂದಿಗೆ ಅಲ್ಲಿಯ ಕೇರಿಗಳ ಕೆಟ್ಟಸಹವಾಸದಿಂದ ಎತ್ತಿ ಊಟ ಬಟ್ಟೆಕೊಟ್ಟು, ಕೈಗೊಂದು ವಯ್ಲಿನ್ ಕೂಡ ಕೊಡಿಸಿ ಜೀವನವನ್ನು ಸಂತೋಷದಿಂದ ಅನುಭವಿಸುವುದನ್ನು ಕಲಿಸಿದ. ಒಂದು ದಿನ ಏನೋ ನಡೆಯಬಾರದ್ದು ನಡೆದು, ಕ್ಲಬ್ ಒಂದರ ಹೊರಗೆ ಕೆಲ ಪಾಪಿ ಪುಡಿಗಳ್ಳರು ಕ್ಷುಲ್ಲಕ ಜಗಳವೊಂದರಲ್ಲಿ ಸಿಲ್ವನನ್ನು ಗುಂಡಿಟ್ಟು ಕೊಂದೇಬಿಟ್ಟರು. ಡಿ-ಸಿಲ್ವನ ಜೀವದೊಂದಿಗೇ, ಡಿಯಾಗೋನ ಸಂತೋಷದ ಕಾರಣಗಳೂ ನಂದಿಹೋಗಿದ್ದವು.

ಸಿಲ್ವನ ಶವಸಂಸ್ಕಾರದ ದಿನ ಹುಡುಗರೆಲ್ಲಾ ಸೇರಿ ಅವನೇ ಕಲಿಸಿಕೊಟ್ಟಿದ್ದ ಕೆಲ ಹಾಡುಗಳನ್ನು, ವಯಲಿನ್ನಿನಲ್ಲಿ ನುಡಿಸಿ ಅವನಿಗೆ ಅಂತಿಮ ನಮನ ಸಲ್ಲಿಸಿದರು. ಸಿಲ್ವನ ಪ್ರತಿ ನೆನಪಿನೊಂದಿಗೂ ಡಿಯಾಗೋ ಉಮ್ಮಳಿಸಿ ಅತ್ತ ಆ ಕ್ಷಣ, ಇದೊಂದು ಚಿತ್ರದಲ್ಲಿ ದಾಖಲಾಗಿಬಿಟ್ಟಿತು. ಜಗತ್ತಿನ ಕೋಟ್ಯಾಂತರ ನಿರ್ಗತಿಕ ಮಕ್ಕಳಿಗೂ ಸಿಗಬಹುದಾದ ಅರ್ಥಪೂರ್ಣ ಜೀವನವೊಂದರ ಭರವಸೆಯ ಸಂಕೇತವಾಗಿ ಡಿಯಾಗೋನ ಈ ಚಿತ್ರ ನಿಂತುಬಿಟ್ಟಿತು.

12647128_977649428991669_8678787375037203471_n

Advertisements

ಚಿತ್ರ ಶಕ್ತಿ – ೨

ನಿಮ್ಮ ಹಣೆಯಲ್ಲಿ ಸಾವು ಬರೆದಿಲ್ಲವೆಂದರೆ, ನೀವು ಸಾಯೊಲ್ಲಾ ಅಂತಾ ನಾವು ಮಾತಿಗೆ ಹೇಳ್ತೀವಿ ಅಲ್ವಾ? ಆದರೆ ಹುಟ್ಟಿದ ನಾಲ್ಕೇ ತಿಂಗಳಿಗೇ ಸಾವನ್ನು ಮೆಟ್ಟಿನಿಲ್ಲುವುದೆಂದರೆ…ಸಲಾಮ್ ಹೇಳಬೇಕಾದ ಮಾತಲ್ಲವೇ! ಇವತ್ತಿಗೂ ಜಗತ್ತಿನೆಲ್ಲೆಡೆ ಎಳೆಗೂಸುಗಳ ಸಾವು ಸರ್ವೇಸಾಮಾನ್ಯ ಎಂಬುವಷ್ಟರಮಟ್ಟಿಗೆ ಬೆಳೆದುನಿಂತಿದೆ. ವೈದ್ಯಕೀಯ ಜಗತಿನಲ್ಲಿ ನಡೆದ ಎಲ್ಲಾ ಬೆಳವಣಿಗೆಗಳ ನಡುವೆಯೂ ಕೂಸುಗಳ ಸಾವು ಇಂದಿಗೂ ಅವ್ಯಾಹತ. ಆ ವಯಸ್ಸಿನ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ತುಂಬಾ ಕಡಿಮೆ ಇರುವುದೂ ಇದಕ್ಕೆ ಕಾರಣ.

2011ರಲ್ಲಿ ಜಪಾನ್ ಅನ್ನು ಮಂಡಿಯೂರಿಸಿದ ಸುನಾಮಿ, ಜೀವಬಲಿಗಳ ಸರಮಾಲೆಯನ್ನೇ ಸೃಷ್ಟಿಸಿತು. ಎಂತೆಂತಾ ಗಟ್ಟಿಗರೇ ನಿಲ್ಲಲಾಗಲಿಲ್ಲ. ಸುನಾಮಿ ಬಂದುಹೋದ ಮರುದಿನ ನಿಂತ ನೀರು, ಕೊಳಚೆಗಳೆಲ್ಲಾ ಒಣಗಲಾರಂಭಿಸಿ, ರೋಗಗಳು ಹರಡಲಾರಂಭಿಸಿದವು. ಆಗ ಇನ್ನೊಂದಿಷ್ಟು ಜನ ಹಾಸಿಗೆಬಿಟ್ಟೇಳಲಿಲ್ಲ. ಒಟ್ಟಿನಲ್ಲಿ ಹತ್ತುಸಾವಿರಜನ ನಾಲ್ಕೇದಿನದಲ್ಲಿ ಯಮಪಾಶಕ್ಕೆ ಬಲಿಯಾಗಿದ್ದರು.

ಆದರೆ ನಾಲ್ಕುತಿಂಗಳ ಈ ಮಗು ಬರೋಬ್ಬರಿ ನಾಲ್ಕುದಿನ ಅಮ್ಮನಿಲ್ಲದೆ, ಅವಳ ಹಾಲಿಲ್ಲದೆ, ಅವಳ ಬಿಸಿಯಪ್ಪುಗೆಯಿಲ್ಲದೆ, ಬರೇ ಒಂದು ಗುಲಾಬಿ ಬಣ್ಣದ ಕಂಬಳಿಯಲ್ಲಿ ಕುಸುಗುಡುತ್ತಾ, ಜೀವನದೊಂದಿಗೆ ಪಿಸುಮಾತನಾಡುತ್ತಾ ಬದುಕೇಬಿಟ್ಟಿತು! ನಾಲ್ಕುದಿನದ ನಂತರ, ಬದುಕುಳಿದಿರಬಹುದಾದವರಿಗಾಗಿ ಉರುಳಿದ ಮನೆಗಳ ಅವಶೇಷಗಳನ್ನು ಸೈನಿಕರು ಎತ್ತಿ ಹುಡುಕುತ್ತಿರುವಾಗ, ಈ ಮುದ್ದುಕಂದ ಜೀವನವನ್ನು ಎದುರುನೋಡುತ್ತಾ, ತಲೆಯಮೇಲೆ ಇಲ್ಲದ ಆಕಾಶದಲ್ಲಿ ನಕ್ಷತ್ರಗಳೆನ್ನೆಣಿಸುತ್ತಾ ಮಲಗಿತ್ತಂತೆ. ಜೀವನದ ದಯೆ ಹಾಗೂ ಮರಣದ ಕ್ರೂರತೆ ಎರಡನ್ನೂ ಕಂಡ ಸೈನಿಕನೊಬ್ಬ, ಆ ಮಗುವನ್ನೆತ್ತಿಕೊಂಡಾಗ ತನಗರಿವಿಲ್ಲದಂತೇ ಭಾವುಕನಾದ ಆ ಕ್ಷಣ.

(ಅಂದಹಾಗೆ ‘ಯಮ’ ಜಪಾನೀಯರಲ್ಲೂ ಸಾವಿನ ದೇವತೆ. ಅವರಲ್ಲಿ ಶಿನಿಗಾಮಿ ಎಂಬುದೊಂದು ಪೌರಾಣಿಕ ಕಿನ್ನರಪ್ರಭೇಧವೇ ಇದೆ. ಈ ಶಿನಿಗಾಮಿಗಳೆಲ್ಲರೂ ಸಾವಿನ ಅಧಿದೇವತೆಗಳು. ಅವರಲ್ಲಿ ‘ಯಮ’ನೂ ಒಬ್ಬ. ಹಾಗಾಗಿ “ಹತ್ತುಸಾವಿರ ಯಮಪಾಶಕ್ಕೆ ಬಲಿಯಾದರು” ಅಂತಾ ನಾನು ಹೇಳಿದಾಗ ಅದು ಬರೀ ಸಾಹಿತ್ಯಕವಾಗಿಯೇನೂ ಇರಲಿಲ್ಲ 🙂 )

12650813_977026882387257_9134565429143991260_n

ಚಿತ್ರ ಶಕ್ತಿ – ೧

ಜಗತ್ತಿನ ಬದ್ಧವೈರಿಗಳಾದ ಉತ್ತರ ಮತ್ತು ದಕ್ಷಿಣ ಕೊರಿಯಾದ ಮಧ್ಯೆ ಜನರು ಓಡಾಡುವಂತಿಲ್ಲ. 1950ರಲ್ಲಿ ಪ್ರಾರಂಭವಾದ “ಕೊರಿಯನ್ ಯುದ್ಧ”ದ ನಂತರ ಅಲ್ಲಿನ ಜನರು ಎರಡೂ ದೇಶಗಳ ನಡುವೆ ಹರಿದುಹಂಚಿ ಹೋದರು. ಹಿಂದಿನ ದಿನವಷ್ಟೇ ಭೇಟಿಯಾಗಿದ್ದ ಅಣ್ಣತಮ್ಮಂದಿರು, ಪ್ರೇಮಿಗಳು, ಸ್ನೇಹಿತರು ಜೂನ್ 20, 1950ರಂದು ಬೆಳಿಗ್ಗೆ ಎದ್ದಾಗ, ಶಾಶ್ವತವಾಗಿ ದೂರವಾಗಿದ್ದರು. ಅವರಲ್ಲೇ, ಇವರಿಲ್ಲೇ ಎಂಬಂತಾಯ್ತು.

ಆಗಾಗ ಈ ದ್ವೇಷದ ಕಮಟು ಹೊಗೆಯ ಮಧ್ಯೆ, ಅದೆಲ್ಲಿಂದಲೋ ಕಸ್ತೂರಿಯ ಸುವಾಸನೆ ತೇಲಿಬರುವಂತೆ, ಈ ಎರಡೂ ಕೊರಿಯಾಗಳು ಒಂದಾಗಿ, ತಮ್ಮ ನಾಗರಿಕರು ನೆರೆಯಾಚೆಯ ಸಂಬಂಧಿಗಳೊಂದಿಗೆ ಭೇಟಿಯಾಗಲೋಸುಗ ತಮ್ಮ ಕಬ್ಬಿಣದ ಹೃದಯಗಳ ಬಾಗಿಲು ತೆರೆಯುತ್ತವೆ. 2010ರಲ್ಲಿ ಹೀಗೇ ಒಮ್ಮೆ ಮೂರುದಿನಗಳ ಕಾಲ ಈ ಬಾಗಿಲುಗಳು ತೆರೆದಾಗ ಸಾವಿರಾರು ಕೊರಿಯನ್ನರು ತಮ್ಮ ಸಂಬಂಧಿಗಳೊಂದಿಗೆ, ಗೆಳೆಯರೊಂದಿಗೆ ಸಂತಸದ ಕೆಲಕಾಲ ಕಳೆದರು. ಮೂರುದಿನಗಳ ನಂತರ ಬಾಗಿಲು ಮುಚ್ಚುವ ಸಮಯ ಬಂದಾಗ ದಕ್ಷಿಣಕ್ಕೆ ಹೊರಟುನಿಂತ ವೃದ್ಧನೊಬ್ಬ, ಉತ್ತರದಲ್ಲೇ ಉಳಿದು ಜೀವನದ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲಿರುವ ತನ್ನ ತಮ್ಮನೆಡೆಗೆ ಕೈಬೀಸುತ್ತಾ, ಭಾವುಕನಾದ ಒಂದುಕ್ಷಣ

12646957_976523969104215_8308054112481619739_n