ಸಿರಾ – ದಿಮ ವಿನೋದ ಪ್ರಸಂಗಗಳು – ೬

ಸಿರಾ – ದಿಮ ವಿನೋದ ಪ್ರಸಂಗಗಳು – ೬

ರಾತ್ರಿಯ ಎರಡನೇ ಘಳಿಗೆಯಲ್ಲಿ, ಸಿರಾ ತನ್ನ ಅಂತಃಪುರದಲ್ಲಿ ಅತ್ತಿದ್ದಿಂತ್ತ ತಿರುಗಾಡುತ್ತಿದ್ದ. ಮುಖದಲ್ಲಿ ಕಳೆದ ನಾಲ್ಕುದಿನದ ಚಿಂತೆ ಡಾಳಾಗಿ ಇಣುಕಿ, ಗಡ್ಡದ ಮೇಲೂ ಸೋರಿ, ಅದೆಲ್ಲಾ ಬಿಳಿಬಿಳಿಯಾಗಿ ಗೋಚರಿಸುತ್ತಿತ್ತು. ಎರಡು ಬಾರಿ ಊರಿನ ಹೊರಗೆ ಬೀಡು ಬಿಟ್ಟಿರುವ ಟೊಂಯ್ಕಾನಂದ ಸ್ವಾಮಿಗಳನ್ನು ಭೇಟಿಯಾಗಿ ಬಂದರೂ ಮನಸ್ಸಿಗೆ ಸಮಾಧಾನವಿಲ್ಲ. ದಿಮನಿಗೆ ಕರೆಕಳುಹಿಸದರೆ ತಿಳಿಯಿತು, ಅವನು ‘ಮನು ಮತ್ತು ಮಂಡಕ್ಕಿ’ ಎಂಬ ವಿಚಾರದ ಬಗ್ಗೆ ಜನರಿಗೆ ಅರಿವು ಮೂಡಿಸಲು ಗಡಿಪ್ರದೇಶವಾದ ಮಂಗಳಾಪುರಕ್ಕೆ ತೆರಳಿದ್ದಾನೆಂದು ತಿಳಿಯಿತು. “ಇವತ್ತು ಬಂದಿದ್ದಾನಂತೆ. ಅವನ ಬಳಿ ಸಮಾಲೋಚಿಸಿದರೆ ಸ್ವಲ್ಪ ಸಮಾಧಾನವಾದೀತು” ಎಂದುಕೊಳ್ಳುತ್ತಿರುವಾಗಲೇ ದಿಮನ ಪ್ರವೇಶವಾಯಿತು. ಅವನನ್ನು ನೋಡಿದ ಸಿರಾನಿಗೆ ಸಮಾಧಾನವೆನ್ನಿಸಿದರೂ, ದಿಮನಲ್ಲಿ ಏನೋ ಬದಲಾವಣೆಯಾಗಿದೆ ಎಂದೆನ್ನಿಸಿತು. ಎರಡು ಕ್ಷಣಗಳ ನಂತರ ಅದೇನೆಂದು ಹೊಳೆಯಿತು. ಆಕಾಶದಲ್ಲಿದ್ದ ಹುಣ್ಣಿಮೆ ಚಂದ್ರನ ಬೆಳಕು ಕಿಟಕಿಯ ಮೂಲಕ ತೂರಿಬಂದು, ಸದಾ ದಿಮನ ಹೊಳೆಯುವ ತಲೆಯಮೆಲೆ ಬಿದ್ದು, ಪ್ರತಿಫಲಿಸಿ, ಅಂತಃಪುರವನ್ನು ಜಗಮಗಗೊಳಿಸುತ್ತಿತ್ತು. ಇವತ್ತು ಅದು ಆಗುತ್ತಿಲ್ಲ! ಯಾಕೆಂದರೆ, ಸಿರಾ ತನ್ನ ಬೋಳು ತಲೆಯಮೇಲೆ ಅದೇನೋ ದಪ್ಪನಾದ ಕಪ್ಪದೊಂದು ಪದರ ಹೊದ್ದುಕೊಂಡಿದ್ದಾನೆ!!!

ಸಿರಾ ದಿಮನ ಬಳಿ ತಲುಪಿ, ಚಿಕ್ಕದೊಂದು ಆಲಿಂಗನ ನೀಡಿ, ತಲ್ಪದ ಮೇಲೆ ಕುಳಿತನು. ಎಂದಿನಂತೆ ದಿಮ ತನ್ನ ಮೂರ್ಖನಗೆಯೊಂದಿಗೆ ಆತ್ಮವಿಶ್ವಾಸದೊಂದಿಗೆ ಅಲ್ಲಿ ಕುಳಿತು “ಯಾಕೆ ರಾಜನ್. ತಕ್ಷಣ ಬರಬೇಕೆಂದು ಕರೆ ಕಳುಹಿಸಿದ್ದು? ನಾನು ನಿನ್ನೆಯ ‘ಮನು ಮತ್ತು ಮಂಡಕ್ಕಿ’ ವಿಚಾರಧಾರೆಯ ನಂತರ, ಇಂದು ಪಕ್ಕದ ‘ತಾಳ ತಂಬೂರಿನಾಡು’ ದೇಶಕ್ಕೆ ಹೋಗಿ ಅಲ್ಲಿ ‘ವಾಲ್ಮೀಕಿ ಮತ್ತು ವಾಂಗೀಬಾತ್’ ಬಗ್ಗೆ ವಿಚಾರಮಂಡಿಸುವವನಿದ್ದೆ. ನಿಮ್ಮ ಕರೆ ಕೇಳಿ ಎದ್ದೆನೋ ಬಿದ್ದೆನೋ ಎಂದು ಓಡಿ ಬಂದೆ. ಏನಾಯಿತು?” ಎಂದು ಕೇಳಿದ.

“ನೋಡು ದಿಮ. ನೀನಲ್ಲಿಗೆ ಹೋಗದಿದ್ದದ್ದು ಒಳ್ಳೆಯದಾಯಿತು. ಗೂಡಚಾರ ಮೂಲಗಳ ಪ್ರಕಾರ ತಾಳ ತಂಬೂರಿನಾಡಿನ ಹೊಸ ರಾಣಿಯಾದ ಅಜೇಯಲಾಲಿತ್ಯಂಬಾ, ಹಳೆಯ ದ್ವೇಷಗಳ ಕಾರಣಕ್ಕಾಗಿ ನಮ್ಮ ಮೇಲೆ ದಾಳಿಗೆ ಸಿದ್ದತೆ ನಡೆಸಿದ್ದಾಳೆ. ಶ್ರಾವಣದ ಕೊನೆಯ ದಿನ ದಾಳಿ ನಡೆಯಲಿದೆ ಎಂಬ ಸುದ್ದಿಯಿದೆ. ನನ್ನ ಸೈನ್ಯದ ಕುದುರೆಗಳನ್ನೆಲ್ಲಾ ನಿನ್ನ ಸಲಹೆಯಂತೆ ಬೇರೆ ಬೇರೆ ಹೋಬಳಿಗಳಲ್ಲಿ ಕುದುರೆ ಓಟದ ಕೆಂದ್ರಗಳನ್ನು ತೆರೆದು, ತೆರಿಗೆ ಸಂಗ್ರಹಕ್ಕೆ ಬಿಟ್ಟಿದ್ದೇನೆ. ಆನೆಗಳು ಯಾರ್ಯಾರದ್ದೋ ತೋಟಕ್ಕೆ ನುಗ್ಗಿ, ಜನರು ಅವಕ್ಕೆ ಹೊಡೆದದ್ದರಿಂದ ಹೆದರಿ ಕಾಡಿಗೆ ಓಡಿ ಹೋಗಿವೆ. ಸೈನಿಕರನ್ನೆಲ್ಲಾ ನಿನ್ನ ಅಣತಿಯ ಮೇರೆಗೆ ದೇಶದ ಸಾಹಿತಿಗಳು, ಸಂಗೀತಕಾರರು, ನೃತ್ಯಗಾರರು, ಹಾಸ್ಯಗಾರರು ಮತ್ತು ಮಾತುಗಾರರ ಮನೆಯ ಕಾವಲಿಗೆ ಹಾಕಿದ್ದೇನೆ. ದಾಳಿಗೆ ಇರುವುದೇ ಮಂದಿನ ಎರಡುವಾರಗಳಲ್ಲಿ. ಎಲ್ಲರನ್ನೂ ಒಟ್ಟುಗೂಡಿಸಿವುದ್ಯಾವಾಗ? ತರಬೇತಿ ಕೊಡುವುದ್ಯಾವಾಗ? ಯುದ್ದ ಗೆಲ್ಲುವುದ್ಯಾವಾಗ!? ಎಂಬ ಚಿಂತೆಯಾಗಿದೆ” ಎಂದಿ ಸಿರಾ ಉದ್ಗರಿಸಿದ.

ಅದಕ್ಕೆ ದಿಮ ತನ್ನ ನಿಲುವಂಗಿಯನ್ನು ಕಾಲ್ಬಲದ ಮೂಲಕ ಅಗಲಿಸಿ ತನ್ನನ್ನು ತಣ್ಣಗಾಗಿಸಿಕೊಳ್ಳುತ್ತಾ “ಅಯ್ಯೋ ರಾಜನ್. ಇದಕ್ಕೆ ಬೇಕಾಗಿರುವುದು ಕುದುರೆ ಆನೆ ಸೈನ್ಯವಲ್ಲ. ತಕ್ಷಣ ಕರೆ ಕಳುಹಿಸಿ ಡಿಲೈಟಾನಂದರ ಆಶ್ರಮದಿಂದ ನೂರೈವತ್ತು ಕಲ್ಲುತೂಕದಷ್ಟು ರಕ್ತಚಂದನಾಮೃತ ಎಂಬ ತೈಲ ತರಿಸಿ. ಉಳಿದದ್ದನ್ನು ನಾನು ನೋಡಿಕೊಳ್ಳುತ್ತೇನೆ” ಎಂದ.

ಸಿರಾನಿಗೆ ಕೋಪ ಬಂದರೂ ಸಹ ‘ನಿನ್ನ ಹಣೆಯಲ್ಲಿ ಬರೆದಿರುವುದೇ ಇಂತಹ ಸಲಹೆಗಾರರು. ಬೇಡ, ಸಿಟ್ಟು ಬೇಡ. ಇವನೂ ಬಿಟ್ಟುಹೋದರೆ ನಿನ್ನ ಕಥೆಯೇನು’ ಎಂದುಕೊಳ್ಳುತ್ತಾ, ಕೋಪ ತಡೆದುಕೊಂಡು ‘ತೈಲಕ್ಕೂ, ಯುದ್ಧಕ್ಕೂ ಎಲ್ಲಿನ ಸಂಬಂಧ ದಿಮ ಜೀ? ಆ ತೈಲ ಕೂದಲ ಬೆಳವಳಣಿಗೆ ಹೆಚ್ಚಿಸಲಿಕ್ಕೆ ಅಲ್ಲವೇ? ನಿಮ್ಮ ತಲೆಯಮೇಲೆ ಇದ್ಯಾಕೋ ಕೂದಲ ರಾಶಿ ಬೇರೆ ಬೆಳೆಸಿಕೊಂಡು ಬಂದಿದ್ದೀರಿ!! ನನಗಂತೂ ಅರ್ಥವಾಗುತ್ತಿಲ್ಲ. ಬಿಡಿಸಿ ಹೇಳಿ’ ಎಂದ.

ದಿಮ ಅದಕ್ಕೇ “ರಾಜನ್, ನಾನು ಅಸಂಬದ್ಧ ಮಾತನಾಡುವುದರಲ್ಲಿ ಎತ್ತಿದ ಕೈ ಎಂದು ನಿಮಗೆ ಗೊತ್ತಿದೆ ತಾನೇ? ಆದರೂ ಸಹ ಜನರು ನನ್ನೆಡೆಗೆ ಪ್ರೀತಿಯಿಂದ ದಯಪಾಲಿಸುವ ಕೋಪ, ಕಲ್ಲು, ಮೊಟ್ಟೆಗಳಿಂದ ನನ್ನನ್ನು ನಾನು ಹೇಗೆ ಬಚಾಯಿಸಿಕೊಳ್ಳುತ್ತಿದ್ದೇನೆ, ಗೊತ್ತೇ? ಈ ರಕ್ತಚಂದನಾಮೃತದಿಂದಲೇ. ಮೊನ್ನೆ ಮಂಗಳಾಪುರದಲ್ಲಂತೂ ಈ ಮೊಟ್ಟೆಗಳ ಉಪತಳ ಹೆಚ್ಚಾಯಿತು. ಅದಕ್ಕೇ ಇದನ್ನು ನಾನು ಮೊನ್ನೆಯಷ್ಟೇ ನನ್ನ ತಲೆಯಮೇಲೆ ಮತ್ತು ಮೈಕೈ ಮೇಲೆಲ್ಲಾ ಬಳಿದುಕೊಂಡಿದ್ದೇನೆ. ಹೇಗೆ ಕೂದಲು ಬೆಳೆದಿದೆ ನೋಡಿ. ಈಗ ನನ್ನೆಡೆಗೆ ಜನರು ಎಸೆಯುವ ಎಲ್ಲಾ ವಸ್ತುಗಳೂ ಇದರಲ್ಲಿ ಸಿಕ್ಕಿ ಹಾಕಿಕೊಳ್ಳುತ್ತವೆ. ನನಗೆ ಪೆಟ್ಟೇ ಆಗಲ್ಲ. ಅಷ್ಟೇ ಅಲ್ಲ, ಮನೆಯಲ್ಲೀಗ ಮೂರು ಹೊತ್ತೂ ಮೊಟ್ಟೆಯ ಪದಾರ್ಥವೇ. ಊಟದ ಖರ್ಚೂ ಉಳಿತಾಯ. ಅಷ್ಟೇ ಅಲ್ಲದೆ, ಒಂದೆರಡು ಮೊಟ್ಟೆಗಳು ಕೂದಲಲ್ಲಿ ಸಿಕ್ಕಿಹಾಕಿಕೊಂಡು ಹೊರಬರದೆ ಅಲ್ಲೇ ಮರಿಗಳಾಗಿ, ಅಲ್ಲೇ ಗೂಡುಕಟ್ಟುತ್ತಿವೆ. ಕೂದಲನಡುವಿನ ಹೇನು ಸೀರುಗಳನು ತಿಂದು ಬೆಳೆದು, ಸಧ್ಯದಲ್ಲೇ ಮೊಟ್ಟೆ ಇಡಲಿವೆ. ನಂತರ ಅವನ್ನೆಲ್ಲಾ ಮಾರುವ ಉಪಾಯವೂ ಇದೆ.. ಹೇಗಿದೆ ನನ್ನ ವ್ಯಾಪಾರಜ್ಞಾನ?” ಎಂದು ಕಣ್ಣುಮಿಟುಕಿಸಿ ಮುಂದುವರೆಸಿದ.

“ಹಾಗೆಯೇ, ನಮ್ಮ ಸೈನಿಕರನ್ನೆಲ್ಲಾ ಕರೆಸಿ, ಅವರಿಗೆ ಮುಂದಿನ ವಾರವಿಡೀ ಈ ತೈಲದಿಂದ ಅಭ್ಯಂಗ ಮಾಡಿಸಿದರೆ, ಕೇಶರಾಕ್ಷಸರ ಒಂದು ಪಡೆಯೇ ತಯಾರಾಗುತ್ತದೆ. ಅವರಿಗೆ ಕುದುರೆ, ಆನೆ ಯಾವುದೂ ಬೇಡ. ಯಾಕೆಂದರೆ ಶತ್ರುಗಳ ಬಾಣಗಳು ಅವರ ಕೂದಲಿನ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ. ಅವರ ಖಡ್ಗಗಳಿಗೆ ನಮ್ಮ ಸೈನಿನ್ಕರು ಬರೀ ಕೈ ಅಡ್ಡ ಕೊಟ್ಟರೇ ಸಾಕು. ಖಡ್ಗಗಳು ಮೊನಚು ಕಳೆದುಕೊಳ್ಳುತ್ತವೆ. ಮೈಮೇಲೆ ಕವಚ, ತಲೆಯಮೇಲೆ ಶಿರಸ್ತ್ರಾಣಗಳೂ ಬೇಡ. ನನ್ನ ಸಲಹೆ ಅನುಸರಿಸಿ, ಆ ಕವಚ ಶಿರಸ್ತ್ರಾಣದ ಲೋಹವನ್ನೆಲ್ಲಾ ಕರಗಿಸಿ, ನಿಮ್ಮದೂ ನನ್ನದೂ ಒಂದು ನೂರು ಅಡಿ ಎತ್ತರದ ಪುತ್ತಳಿ ಮಾಡಿಸೋಣ. ಆಮೇಲೆ ಅದನ್ನು ನಗರದ ಮಧ್ಯದಲ್ಲಿ ನಿಲ್ಲಿಸಿ, ಅದರ ಮೇಲಿಂದ ನಾವಿಬ್ಬರೂ ಸೂರ್ಯಾಸ್ತಮಾನವನ್ನು ವೀಕ್ಷಿಸಬಹುದು. ಹಾಗೆಯೇ ಇಂತಹದ್ದೊಂದು ಬೃಹತ್ ನಿರ್ಮಾಣಕ್ಕಾಗಿ, ನಮ್ಮ ಹೆಸರೂ ಚರಿತ್ರೆಯಲ್ಲಿ ಅಚಂದ್ರಾರ್ಕ ಸ್ಥಾಯಿಯಾಗಿ ಉಳಿಯುತ್ತದೆ” ಎಂದ.

ಆತ್ಮವಿಶ್ವಾಸದಿಂದ ತುಂಬಿದ ಅವನ ಪ್ರತಿಯೊಂದು ಮಾತಿಗೂ ಸಿರಾನ ಚಿಂತೆಯ ಕಾರ್ಮೋಡ ಕರಗುತ್ತಾ ಬಂತು. ಎರಡು ಕ್ಷಣದ ಹಿಂದಿದ್ದ ಚಿಂತೆಯ ಬದಲು, ಅವನ ಮನದಲ್ಲಿ ಸಂತೋಷ ತುಂಬಲು ಪ್ರಾರಂಭವಾಯ್ತು. ಅದರಲ್ಲೂ, ತಲೆಯ ಮೇಲಿದ್ದ ಗಂಡಾಂತರವನ್ನು ಕಳೆಯಿಸಿ, ಅದರ ಸ್ಥಾನದಲ್ಲಿ ಪುತ್ತಳಿಯ ಸಲಹೆಯೊಂದಿಗೆ, ಇಡೀ ಪರಿಸ್ಥಿತಿಯನ್ನೇ ಧನಾತ್ಮಕವಾಗಿ ಬದಲಾಯಿಸಿದ್ದು ನೋಡಿ, ಸಿರಾ ದಿಗ್ಭ್ರಾಂತನಾದ. ‘ಇಂತಹ ಸಲಗೆಹಾರನಿರುವುದಕ್ಕೇ ನಾನಿನ್ನೂ ಈ ಸಿಂಹಾಸನದ ಮೇಲೆ ಕುಳಿತಿರುವುದು..ಜೈ ಮಾಂಕಾಳಮ್ಮ’ ಎಂದು ಮನಸ್ಸಿನಲ್ಲೇ ಅಂದುಕೊಂಡು, ಮಾತಿಲ್ಲದೇ ಮೂಕನಾಗಿ, ಆನಂದಬಾಷ್ಪ ಸುರಿಸುತ್ತ್ತಾ ದಿಮನ ಚರಣಗಳಲ್ಲಿ ಕುಸಿದು ಕುಳಿತ.

‘ಕೌಟಿಲ್ಯನಿಗಿಂತಾ ಕುಟಿಲ ನಾನು ರಾಜನ್. ಮಂಡೆಬೆಚ್ಚ ಬೇಡ’ ಎನ್ನುತ್ತಾ ಸಿರಾನನ್ನು ಆಶೀರ್ವದಿಸುವುದರೊಂದಿಗೆ. ಕರಾಳದೇಶದ ಚರಿತ್ರೆಯಲ್ಲಿ ಅಧ್ಯಾಯವೊಂದು, ಲೋಕಾಭಿರಾಮವಾಗಿ ಅಲ್ಲದೇ, ಕೇಶಾಭಿರಾಮವಾಗಿ ಮುಗಿಯಿತು.

ಸ್ಕೋರು:
ಸಿರಾ – 1
ದಿಮ – 2

Advertisements

ಸಿರಾ – ದಿಮ ವಿನೋದ ಪ್ರಸಂಗಗಳು – ೫

ಸಿರಾ – ದಿಮ ವಿನೋದ ಪ್ರಸಂಗಗಳು – ೫

ಝಳ ತಡೆಯಲಾಗದ ವೈಶಾಖದ ಬಿಸಿಲು. ನಗರದ ಜನರೆಲ್ಲರೂ ಕೊಡೆಹಿಡಿದೋ, ಮುಂಡಾಸು ಕಟ್ಟಿಯೋ, ಅಂಗವಸ್ತ್ರವನ್ನು ತಲೆಯಮೇಲೋ ಹಾಕಿಕೊಂಡೋ, ಆದಷ್ಟೂ ತಮ್ಮನ್ನು ಬಿಸಿಲಿನಿಂದ ರಕ್ಷಿಸಿಕೊಂಡು ತಿರುಗುತ್ತಿದ್ದರೆ, ನಮ್ಮ ದಿಮ ಮಾತ್ರ ಪುರಭವನದ ಮುಂದೆ ನಾಲ್ಕು ರಸ್ತೆ ಸೇರುವಲ್ಲಿ ಬದಿಯಲ್ಲಿ ಕಣ್ಮುಚ್ಚಿ ನಿಂತುಕೊಂಡಿದ್ದ. ಅವನ ಬೋಳುತಲೆಯ ಮೇಲೆ ಬೀಳುತ್ತಿದ್ದ ಸೂರ್ಯ ಪ್ರತಿಫಲಿಸಿ, ಜನರಿಗೆ ಹಗಲುಹೊತ್ತಿನಲ್ಲೇ ಆಕಾಶದಲ್ಲೊಂದು ಸೂರ್ಯ, ದಿಮನ ತಲೆಯ ಮೇಲೊಂದು ಸೂರ್ಯ, ಹೀಗೆ ಎರಡೆರಡು ಸೂರ್ಯ ಕಾಣುವಂತೆ ಭಾಸವಾಗುತ್ತಿತ್ತು. ‘ಒಂದರ ಬಿಸಿಲೇ ತಡೆಯಲಾಗುತ್ತಿಲ್ಲ, ಇದರ ಮಧ್ಯೆ ಇವನದ್ದೊಂದು ಕರ್ಮ!?’ ಎಂದು ಜನರು ಗೊಣಗುತ್ತಿದ್ದರೂ ಅದರೆಡೆಗೆ ಕಿವಿಕೊಡದೆ ದಿಮ ತನ್ನ ಪಾಡಿಗೆ ತಾನು ಬಿಸಿಲಿಗೆ ಕೆಂಪಾಗುತ್ತಾ ನಿಂತಿದ್ದ.

ಬಿಸಿಲಿಗೆ ಅವನ ತಲೆ ಬೆವರಿ, ಅದರ ನೀರೆಲ್ಲಾ ನಿಧಾನವಾಗಿ ಅವನ ಕೆನ್ನೆಯ ಮೇಲಿಳಿದು ಅಲ್ಲಿಂದ ತೊಟ್ಟಿಕ್ಕಿ ಅವನ ಕೆಂಪು ನಿಲುವಂಗಿಯ ಮೇಲೆ ಬಿದ್ದು ಅದೆಲ್ಲಾ ಒದ್ದೆಯಾಗಿ, ಯಾರೂ ಹತ್ತಿರ ಹೋಗಲಾಗದಂತೆ ಬೆವರಿನ ದುರ್ಗಂಧ ಬೀರುತ್ತ ನಿಂತಿದ್ದ ದಿಮನ ಮುಖವೇಕೋ ಬಿಸಿಲಿಗೆ ನಿಂತವರ ಮುಖಕ್ಕಿಂತಾ ಹೆಚ್ಚು ಕೆಂಪಾಗಿತ್ತು! ಅಂತರಾಳದಲ್ಲೇನೊ ದುಗುಡವೋ, ಆರದ ಬೆಂಕಿಯೋ ಏನೋ ಪಾಪ. ಕಿವಿ, ಮೂಗಿನಿಂದ ಸಣ್ಣಗೆ ಹೊಗೆ ಕೂಡಾ ಸೂಸುತಿತ್ತು. ಅವನ ಕಣ್ಣು ಕರಾಳನಾಡಿನ ಜನರ ಭವಿಷ್ಯದಂತೆ ಮುಚ್ಚಿತ್ತು. ಅವನ ನಿಲುವು ಸಿರಾನ ತಲೆಯಲ್ಲಿರುವ ಮೆದುಳಿನಂತೆಯೇ ಓಡದೇ ಅಚಲವಾಗಿ ನಿಂತಿತ್ತು.

ಪಕ್ಕದ ‘ತಾಳ ತಂಬೂರಿನಾಡು’ ದೇಶದಿಂದ ಅವತ್ತಷ್ಟೇ ಕರಾಳನಾಡಿಗೆ ಭೇಟಿನೀಡಿದ್ದ ನೀರ್ಚೆಲ್ವಂ ಎಂಬ ರಾಜದೂತ ಇವನನ್ನು ನೋಡಿ ಆಶ್ಚರ್ಯಗೊಂಡು ಇಲ್ಲೇನು ನಡೆಯುತ್ತಿದೆಯೆಂದು ಅಕ್ಕಪಕ್ಕದವರಲ್ಲಿ ವಿಚಾರಿಸಿದ. ಯಾರಿಗೂ ಗೊತ್ತಿರಲಿಲ್ಲ. ಕೆಲವರಂತೂ ‘ಇವನದ್ದು ಇದ್ದದ್ದೇ. ಇವತ್ತೆಲ್ಲೋ ಮತ್ತೆ ತನ್ನ ಔಷಧಿ ಮರೆತಿರಬೇಕು. ಅದಕ್ಕೇ ಹೊಸ ನಾಟಕ ಪ್ರಾರಂಭಿಸಿರಬೇಕು’ ಎಂದು ಉದಾಸೀನದಲ್ಲಿ ಮುಂದೆ ಹೋದರು. ನೀರ್ಚೆಲ್ವಂ ಈ ಪ್ರಶ್ನೆಯನ್ನು ತಾನೇ ಬಗೆಹರಿಸಲು ಮುಂದಾದ. ದಿಮನ ಹಣೆಯಿಂದ ಇಳಿಯುತ್ತಿರುವ ಬೆವರನ್ನು ನೀರಿನಿಂದ ತತ್ತರಿಸುತ್ತಿರುವ ತನ್ನ ದೇಶಕ್ಕೇನಾದರೂ ಕಾಲುವೆಯ ಮೂಲಕ ಹರಿಸಬಹುದೇನೋ ಎಂಬ ಆಲೋಚನೆಯಿಂದ ದಿಮನನ್ನು ಸ್ವಲ್ಪ ಹತ್ತಿರದಿಂದ ಪರಿಶೀಲಿಸತೊಡಗಿದ. ದಿಮನ ಹತ್ತಿರ ಹೋಗುತ್ತಿದ್ದಂತೆಯೇ ಅದೇನೋ ಸುಟ್ಟ ವಾಸನೆ ಅಮರಿತು. ನೀರ್ಚೆಲ್ವಂಗೆ ತಲೆಸುತ್ತಿ ವಾಕರಿಕೆಬಂದಂತಾದರೂ ಸಹ ಹಾಗೇ ಒಂದು ನಿಮಿಷ ನಿಂತು ‘ತಾಯೈsss…..ಜಯಲಲಿತಾಂಬಾ’ ಎನ್ನುತ್ತಾ ಸುಧಾರಿಸಿಕೊಂಡು ಮತ್ತೆ ನಿಂತು ಕಾಲುವೆಯೆಲ್ಲಿ ತೋಡಲಿ, ಆಣೆಕಟ್ಟು ಎಲ್ಲಿ ಕಟ್ಟಲಿ ಎಂದು ಯೋಚಿಸುತ್ತಿರುವಷ್ಟರಲ್ಲಿ ದಿಮ ಕಣ್ಣು ತೆರೆದು, ತನ್ನ ನಿಲುವನ್ನು ಸಡಿಲಗೊಳಿಸಿ, ದೀರ್ಘವಾದ ಉಸಿರೆಳೆದುಕೊಂಡು ಹೊರಡಲನುವಾದ. ದಿಮ ಪ್ರಜ್ಞಾಸ್ಥಿತಿಗೆ ಮರಳಿಬಂದದ್ದನ್ನು ನೋಡಿ ನೀರ್ಚೆಲ್ವಂ ತಕ್ಷಣ ಅವನ ಕಾಲಿಗೆರಗಿ ‘ಸ್ವಾಮಿಯೈ….ಇಲ್ಲೇನಾಗುತ್ತಿದೆ ಸ್ವಲ್ಪ ತಿಳಿಹೇಳುವಂತವರಾಗಿ’ ಎಂದು ಕೇಳಿದ. ದಿಮ, ‘ಇತ್ತೀಚಿಗೆ ನನ್ನ ಮಾತನ್ನೂ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದ್ಯಾವುದೋ ನೀಚ ಪ್ರಾಣಿಯೊಂದು ಸಿಕ್ಕಿದೆ. ಇದಕ್ಕೇ ಚೆನ್ನಾಗಿ ಗರಗಸ ಹಾಕಬೇಕು’ ಎಂದು ನಿರ್ಧರಿಸಿ ಅಲ್ಲೇ ನಿಂತು ತನ್ನ ಪ್ರವಚನ ಪ್ರಾರಂಭಿಸಿದ. “ಎಲೈ ಹುಲುಮಾನವನೇ…..ಜಗತ್ತಿನಲ್ಲಿ ಇರುವುದೆಲ್ಲಾ ಸುಳ್ಳು ಹಾಗೂ ನಶ್ವರ. ರಾಮಾಯಣ ಮಹಾಭಾರತ ಭಗವದ್ಗೀತಗಳೆಲ್ಲಾ ಬರೀ ಬೂಸಿಯೆಂಬ ಮೀಮಾಂಸೆಯ ಮೇಲೆ ನಾನು ಮೊನ್ನೆ ಈ ದೇಶದ ರಾಜನ ಆಸ್ಥಾನದಲ್ಲಿ ಭಾಷಣ ಬಿಗಿದೆ. ಹಾಗೂ ಭಗವದ್ಗೀತೆಯನ್ನು ಈಗಲೇ ಸುಟ್ಟು ಹಾಕಬೇಕೆಂಬ ಕರೆನೀಡಿದೆ. ನನ್ನ ಮಾತು ಕೇಳಿ ರಾಜ ಸ್ವಲ್ಪ ಗಲಿಬಿಲಿಗೊಂಡ. ರಾಜನೇ ನಿರ್ವೀರ್ಯನಂತೆ ನಿಂತದ್ದು ನೋಡಿ ನಾನು ಕೋಪದಲ್ಲಿ ಮುಂದುವರೆದು, ನೀನು ಅನುಮತಿ ನೀಡದಿದ್ದರೇನಂತೆ! ಅವನ್ನು ನಾನು ನನ್ನೊಳಗೇ ಸುಟ್ಟು ಹಾಕುತ್ತೇನೆ’ ಎಂದು ನುಡಿದು ಸಭೆಯಿಂದ ಹೊರಬಂದೆ. ಇಲ್ಲಿ ಬಂದು ನಾಲ್ಕು ರಸ್ತೆಯಲ್ಲಿ ನಿಂತು, ನನ್ನೊಳಗೇ ಭಗವದ್ಗೀತೆಯನ್ನು ಸುಟ್ಟುಹಾಕುತ್ತಿದ್ದೆ. ಆ ಸುಟ್ಟವಾಸನೆಯೇ ನಿನ್ನ ಮೂಗಿಗೆ ಅಡರಿದ್ದು. ನೀನೂ ಸಹ ಈಗ ನಿನ್ನೊಳಗೇ ಭಗವದ್ಗೀತೆಯನ್ನು ಸುಟ್ಟುಹಾಕು. ಆಗಲೇ ವೈದಿಕಶಾಹಿ ಅಳಿದು, ಅಹಿಂಸೆ ನಾಶವಾಗಿ, ಎಲ್ಲರಲ್ಲೂ ಸಮಾನತೆ ಬರಲು ಸಾಧ್ಯ. ಇಗೋ……ಈ ಬೆಂಕಿಕಡ್ಡಿಯನ್ನು ಕೀರಿ ನಿನ್ನ ಬಾಯೊಳಕ್ಕೆ ಹಾಕಿಕೋ. ನಿನ್ನೊಳಗೇ ಭಗವದ್ಗೀತೆಯನ್ನು ಸುಡು” ಎಂದು ಬಿರಬಿರನೆ ನಡೆದು ಹೋದ.

ನೀರ್ಚೆಲ್ವಂ ತೆರೆದ ಬಾಯನ್ನು ತೆರೆದೇ ಇಟ್ಟುಕೊಂಡು, ‘ಈಗಷ್ಟೇ ಇಲ್ಲಿ ಏನು ನಡೆಯಿತು!!’ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಾ, ತನ್ನ ದೇಶಕ್ಕಾಗಿ ಕರಾಳನಾಡಿನಿಂದ ನೀರು ಕೇಳಲು ಬಂದ ವಿಷಯವನ್ನೇ ಮರೆತು ನಿಂತ.

ಸ್ಕೋರು:
ಸಿರಾ – 0
ದಿಮ – 2
(ನೀರು ಕೇಳಲು ಬಂದ ನೀರ್ಚೆಲ್ವಂಗೆ ತಲೆಕೆಡಿಸಿ ವಾಪಸು ಕಳಿಸಿದ್ದಕ್ಕಷ್ಟೇ ದಿಮನಿಗೆ ಈ +೧ ಸ್ಕೋರು)

ಸಿರಾ – ದಿಮ ವಿನೋದ ಪ್ರಸಂಗಗಳು – ೪

ಸಿರಾ – ದಿಮ ವಿನೋದ ಪ್ರಸಂಗಗಳು – ೪:

ಸಿರಾ ಮತ್ತು ದಿಮ ಇಬ್ಬರನ್ನೂ ಕರಾಳನಾಡಿನ ಜನತೆ ‘ತಮ್ಮ ಪಾಲಿಗೆ ಬಂದ ಕರ್ಮ’ಎಂದೇ ಪರಿಗಣಿಸಿ ಬದುಕುತ್ತಿದ್ದರು. ಅವರ ಕಷ್ಟಗಳೇನೂ ದೂರವಾಗಿರಲಿಲ್ಲ. ಮೊದಲಿಗಿಂತಲೂ ಬವಣೆಗಳು ಹೆಚ್ಚಾಗಿಯೇ ಇದ್ದವು. ಇದರ ನಡುವೆ ಸಿರಾ ‘ಯುದ್ಧಕಾಲದಲ್ಲಿ ಕುದುರೆಗಳು ಉಪಯೋಗಕ್ಕೆ ಬರುತ್ತವೆ. ಆದರೆ ಯುದ್ಧವಿಲ್ಲದ ಕಾಲದಲ್ಲೂ ಅವನ್ನು ಸುಮ್ಮನೇ ಸಾಕಬೇಕು. ಆದ್ದರಿಂದ ಯುದ್ಧವಿಲ್ಲದ ಸಮಯದಲ್ಲಿ ಅವನ್ನು ಮನೋರಂಜನೆಗಾಗಿ ಬಳಸಬೇಕು’ ಎಂದು ತಾಕೀತು ಮಾಡಿ, ಹೋಬಳಿಕೇಂದ್ರಗಳಲ್ಲಿ ಕುದುರೆ ಓಟದ ವ್ಯವಸ್ಥೆ ಮಾಡಿ ಅದರಿಂದ ತೆರಿಗೆ ಸಂಗ್ರಹ ಮಾಡುವಂತೆ ಆಜ್ಞೆ ಹೊರಡಿಸಿದ್ದ.

ಇಂತಹ ಸಮಾರಂಭವೊಂದರಲ್ಲಿ, ದಿಮ ತನ್ನ ಭೀಷಣವಾದ ಭಾಷಣಕಲೆಯ ಪ್ರಯೋಗ ಮಾಡುತ್ತಾ, ಈ ನಾಡಿನಲ್ಲಿ ಪುರೋಹಿತಶಾಹಿಯ ನರ್ತನ ಹೆಚ್ಚಾಗಿದೆ. ಜಾತಿ ಪದ್ದತಿಯ ವಿಷ ಎಲ್ಲಾ ಕಡೆಯೂ ಹರಡಿದೆ. ಇವೆರಡನ್ನೂ ನಿರ್ಮೂಲನೆ ಮಾಡಲು ನಾನು ಮಹಾರಾಜರಿಗೆ ಕೆಲ ಸಲಹೆಗಳನ್ನು ನೀಡುತ್ತಿದ್ದೇನೆ. ಅದರ ಪ್ರಕಾರ:
(*) ಬ್ರಾಹ್ಮಣರು ದೇವಸ್ಥಾನಗಳಲ್ಲಿ ಪೂಜೆಮಾಡುವುದನ್ನು ನಿಷೇಧಿಸಲಾಗುವುದು.
(*) ಸ್ವಜಾತಿ ಮದುವೆಗಳನ್ನೂ ಇನ್ನುಮುಂದೆ ರಾಜ್ಯದಲ್ಲಿ ನಿಷೇಧಿಸಲಾಗುವುದು.
ಎಂದುಬಿಟ್ಟ. ಜನ ಕಂಗಾಲಾಗಿಹೋದರು. ಸಿರಾನಿಗೆ ದೂರು ಹೋಯಿತು.

ಸೋಮರಸ ಕುಡಿಯದೇ ಸಹಾ ತೂಕಡಿಸಲು ಪ್ರಸಿದ್ಧನಾಗಿದ್ದ ಸಿರಾನನ್ನು ಎಬ್ಬಿಸಿ ದೂರು ಕೊಡುವಷ್ಟರಲ್ಲಿ ಸೇವಕರಿಗೆ ಸಾಕು ಸಾಕಾಯಿತು. ಕೊನೆಗೂ ಎದ್ದು ದೂರನ್ನು ಆಲಿಸಿದ ಸಿರಾ ಸಹ ಈ ವಿಷಯವನ್ನು ಕೇಳಿ ಒಮ್ಮೆ ದಂಗಾಗಿ ಹೋದ. ಮೊನೆಯಷ್ಟೇ ತನ್ನ ರಾಣಿಯೊಬ್ಬಳ ಕೆನ್ನೆಯ ನುಣುಪನ್ನು ಪರೀಕ್ಷಿಸಿ, ದಿಮ ಅವನ ರಕ್ತದೊತ್ತಡ ಹೆಚ್ಚಿಸಿದ್ದರೂ ಸಹ ಆತನನ್ನು ಒಮ್ಮೆ ಮಾತನಾಡಿಸಿಯೇ ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವುದೆಂದು ಮನಸ್ಸು ಗಟ್ಟಿ ಮಾಡಿ ದಿಮನನ್ನು ಕರೆಸಿದ.

ದಿಮ ತನ್ನ ಎಂದಿನ ಮೂರ್ಖತನದ ನಗೆ ಬೀರುತ್ತಲೇ ಆಸ್ಥಾನಕ್ಕೆ ಬಂದ. ಹಿಂದಿನ ಸಂಜೆಯಷ್ಟೇ ‘ಹುಟ್ಟಿನಿಂದ ತಲೆಕೂದಲನ್ನೇ ಕತ್ತರಿಸದ ಕೋಮುವಾದಿ’ಯೊಬ್ಬನನ್ನು, ಅಧಿಕಾರದ ದರ್ಪ ತೋರಿಸಿ ಹರಟೆಕಟ್ಟೆಯೊಂದರಲ್ಲಿ ಹೆದರಿಸಿಬಂದ ‘ಮತ್ತು’ ಇನ್ನೂ ಕಣ್ಣಿನಲ್ಲಿ ತೇಲುತ್ತಿತ್ತು. ಆಸ್ಥಾನಕ್ಕೆ ಆತನ ಆಗಮವಾಗುತ್ತಲೇ ತೋಳ, ನರಿಗಳು ದೂರದಲ್ಲಿ ಊಳಿಡಲಾರಂಬಿಸಿದವು. ಆಗಸದಲ್ಲಿ ಕಪ್ಪು ಮೋಡಗಳು ಕಾಣಿಸಿಕೊಂಡವು.

ಸಿರ: ದಿಮಾವದೂತರೇ, ಇದೆಂತ ಹೊಸ ತಲೆಬಿಸಿ, ಬ್ರಾಹ್ಮಣರು ಮತ್ತು ಮದುವೆಗಳ ಬಗ್ಗೆ!?

ದಿಮ: ತಲೆಬಿಸಿಯಲ್ಲ ರಾಜನ್. ರಾಜ್ಯವನ್ನು ಮುಂದೆನಡೆಸುವ ಹೊಸಾ ತಂತ್ರ.

ಸಿರ: ಅದು ಹೇಗೆ?

ದಿಮ: ಈಗ ನೋಡಿ, ದೇವಸ್ಥಾನಗಳಲ್ಲಿ ಈ ಪುರೋಹಿತರು ಮಾಡುವ ಕೆಲಸವೇನು!? ಏನೂ ಇಲ್ಲ. ಬರೇ ಆರತಿ ಎತ್ತುವುದು ಮತ್ತು ಹೂ ಮುಡಿಸುವುದು ಅಷ್ಟೇ ಅಲ್ಲವೇ? ಈಗ ಅವರನ್ನು ಕೆಲಸದಿಂದ ತೆಗೆದು, ಅವರನ್ನೆಲ್ಲಾ ಸೈನ್ಯಕ್ಕೆ ಸೇರಿಸಿದರೆ ಸೈನ್ಯದ ಸಂಖ್ಯೆ ಹೆಚ್ಚಾಗುತ್ತದೆ. ಅದರಲ್ಲೂ ಇವರನ್ನು ಮುಂಚೂಣಿಯಲ್ಲಿ ನಿಲ್ಲಿಸಿದರೆ ಇವರು ತಮ್ಮ ಮಂತ್ರ ತಂತ್ರದಿಂದ ಎದುರಾಳಿಯನ್ನು ಮಂಕು ಮಾಡಿ, ಕಾಲಾಳುಗಳಿಗೆ ದಾರಿ ಮಾಡಿಕೊಟ್ಟರೆ ನಮಗೆ ಯುದ್ಧ ಗೆಲ್ಲುವುದು ಸುಲಭವಾಗುತ್ತದೆ. ಮಂಕುಬೂದಿ ಎರಚಲಾಗದಿದ್ದರೂ, ಮುಂಚೂಣಿಯಲ್ಲಿ ನಿಲ್ಲಿಸುವುದರಿಂದ ನಮ್ಮ ಎರಡನೇ ಹಂತದ ಸೈನಿಕರ ಪ್ರಾಣ ಉಳಿಯುತ್ತದೆ. ಎಷ್ಟಂದರೂ ಅವರು ‘ಅನುತ್ಪಾದಕ ಪುರೋಹಿತಶಾಹಿ’ ಎಂದು ನಮ್ಮ ಬಿಳುಮಂಗಳದ ಪರಭಾರಕ್ಕಮಹಾದೇವಿ ಹೇಳಿದ್ದಾರಲ್ಲವೇ! ಅವರ ಆಸೆಯಂತೆಯೇ, ಆ ಅನುತ್ಪಾದಕತೆ ಕಡಿಮೆಮಾಡಲು ನಾನು ನಿಮಗೆ ಈ ಸಲಹೆ ನೀಡುತ್ತಿದ್ದೇನೆ. ಇದರಿಂದ ನಮ್ಮ ನಾಡು ಹೆಚ್ಚೆಚ್ಚು ಉತ್ಪಾದಕವಾಗುತ್ತದೆ. ಯೋಚಿಸಿನೋಡಿ.

ಅದರೊಂದಿಗೇ, ದೇವಸ್ಥಾನಗಳಲ್ಲಿ ಇವರಿಂದ ತೆರವಾದ ಸ್ಥಾನಗಳಲ್ಲಿ ಒಂದು ಕೋಲನ್ನು ನಿಲ್ಲಿಸಲಾಗುವುದು. ಅದನ್ನು ನಡೆಸಲು ಒಬ್ಬ ಅಹಿಂದನನ್ನು ನಿಯಮಿಸಲಾಗುವುದು. ಅವನು ದೇವಸ್ಥಾನದ ಹೊರಗೇ ಕೂತು ಈ ಕೋಲನ್ನು ಹಗ್ಗದ ಮೂಲಕ ನಿಯಂತ್ರಿಸಿ ಆರತಿ ಮಾಡಿ, ಗರ್ಭಗುಡಿಯಿಂದ ಹೊರಗೆಸೆಯುತ್ತಾನೆ. ಮೂರ್ಖ ಭಕ್ತರು ಅದನ್ನು ತೆಗೆದುಕೊಂಡು ಆನಂದಿಸಬಹುದು. ಇದರಿಂದ ಬ್ರಾಹ್ಮಣ್ಯ ನಿರ್ನಾಮವಾಗಿ, ಅಹಿಂದರಿಗೆ ಕೆಲಸ ದೊರೆತು ಅನುತ್ಪಾದಕತೆ ಸಂಪೂರ್ಣ ನಿರ್ನಾಮವಾಗುತ್ತದೆ.

ಸಿರಾ: *ಸಮ್ಮತಿಯೊಂದಿಗೆ ತಲೆದೂಗುತ್ತಾ* ಅಹಿಂದರೇಕೆ ಹೊರಗೆ ಕುಳಿತು ಕೋಲನ್ನು ಹಗ್ಗದ ಮೂಲಕ ನಿಯಂತ್ರಿಸಬೇಕು. ಗರ್ಭಗುಡಿಯ ಒಳಗೇ ಹೋಗಿ ಪೂಜೆ ಮಾಡಬಹುದಲ್ಲ! ನಮ್ಮ ಪಕ್ಕದ ರಾಜ್ಯದಲ್ಲಿ ‘ಜನರ ಸೇವೆಯೇ ಜನಾರ್ಧನ ಸೇವೆ’ ಎಂದು ನಂಬಿರುವ ಪೂಜಾರಿಯೊಬ್ಬರು ಹೀಗೆ ಮಾಡಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ನಾವೇಕ ಹಾಗೇ ಮಾಡಬಾರದು. ಇದರಿಂದ ಸಮಾನತೆ ಇನ್ನೂ ಬೇಗ ಸಿಗುತ್ತದೆಯಲ್ಲವೇ?

ದಿಮ: ಅಯ್ಯೋ ರಾಜನ್! ನೀವು ನಿಮ್ಮ ನೃತ್ಯ ಕಲಾವಿದನಿಂದ ಅಡುಗೆ ಮಾಡಿಸುತ್ತೀರೋ!? ಇಲ್ಲಾ ತಾನೇ. ಹಾಗಿದ್ದ ಮೇಲೆ ಶೂದ್ರರಿಂದ ಪೂಜೆ ಮಾಡಿಸಿದರೆ ಜನರು ಒಮ್ಮೆಗೇ ಒಪ್ಪಲಿಕ್ಕಿಲ್ಲ. ಅದೂ ಅಲ್ಲದೆ, ಒಂದೇ ಬಾರಿಗೆ ಸಮಾನತೆ ತಂದುಕೊಟ್ಟರೆ ಅಹಿಂದರಿಗೂ ನಿಮ್ಮ ಮೇಲೆ ಅನುಮಾನ ಬರುತ್ತದೆ. ಇಷ್ಟಕ್ಕೂ ಸಮಾನತೆ ಎನ್ನುವುದೊಂದು ಮರೀಚಿಕೆಯಿದ್ದಂತೆ. ಇವತ್ತು ಒಂದು ಕೇಜಿ ಬೆಣ್ಣೆಗೆ ಒಂದು ಕೇಜಿ ಜೇನು ಸಮಾನ. ನಾಳೆ ಒಂದು ಕೇಜಿ ಬೆಣ್ಣೆಗೆ ಒಂದು ಕೇಜಿ ಚಿನ್ನ ಸಮಾನ. ಪ್ರಜೆಗಳನ್ನು ಜೇನು, ಚಿನ್ನದ ಮಧ್ಯ ಆಟವಾಡಿಸಿ, ಅವರನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುತ್ತಿದ್ದೀಯ ಎಂಬ ಭ್ರಮೆಮೂಡಿಸುವುದೇ ರಾಜಕಾರಣ. ಆದ್ದರಿಂದ, ಇವತ್ತಿಗೆ ಈ ಪೂಜೆ ಮಾಡುವ ಸಮಾನತೆ ಸಾಕು. ನಾಳೆ ಗರ್ಭಗುಡಿಯ ಸಮಾನತೆ ಬರಲಿ.

ಸಿರಾ: *ತಿರುಗುತ್ತಿರುವ ತಲೆಯನ್ನು ಕೈಯಲ್ಲಿ ಹಿಡಿದು* ಹೂಂ…ಮತ್ತೆ ಸ್ವಜಾತಿ ಮದುವೆಯನ್ನೇಕೆ ನಿಷೇಧಿಸಬೇಕು? ಅದನ್ನೆಲ್ಲಾ ನಿಷೇಧಿಸಿದರೆ ನಮ್ಮ ಪೀಳಿಗೆಗಳು ಮುಂದುವರೆಯುವುದು ಹೇಗೆ?

ದಿಮಾ: ನೋಡಪ್ಪಾ ರಾಜ! ಸ್ವಜಾತಿ ಮದುವೆಗಳನ್ನು ನಿಷೇಧಿಸಿದರೆ, ಜಾತಿಸಂಘರ್ಷ ದೂರವಾಗಿ ನಿಧಾನವಾಗಿ ಜಾತ್ಯಾತೀತ ಸಮಾಜ ನಿರ್ಮಾಣವಾಗುತ್ತದೆ. ಆಗ ಎಲ್ಲರಿಗೂ ತಾವು ಸಮಾನರೆಂಬ ಭಾವನೆ ಬರುತ್ತದೆ. ಆರ್ಥಿಕವಾಗಿ ಜನರೆಷ್ಟೇ ಅಸಮಾನರಾಗಿರಲಿ, ಸಾಮಾಜಿಕ ಸಮಾನತೆ ಬಂದಕೂಡಲೇ ತಮ್ಮ ಬಡತನವನ್ನು ಸ್ವಲ್ಪ ಮಟ್ಟಿಗೆ ಮರೆಯುತ್ತಾರೆ. ‘ನಾನೂ ಸಹ ಅವನಷ್ಟೇ ಸಮಾನ’ ಎಂಬ ಅಹಂ ಪೂರೈಕೆಯಾದಕೂಡಲೇ, ರಾತ್ರಿ ಚೆನ್ನಾಗಿ ನಿದ್ರಿಸುತ್ತಾನೆ. ಆಗ ಅವರ ಸಂಬಳ ಹೆಚ್ಚು ಮಾಡದಿದ್ದರೂ ನಡೆಯುತ್ತದೆ. ಇದರಿಂದ ನೀನು ಅವರ ಆರ್ಥಿಕ ಅಭಿವೃದ್ಧಿಯ ಮೇಲೆ ಉಪಯೋಗಿಸಬೇಕಾದ ಹಣವನ್ನು ಸ್ವಂತ ಐಷಾರಾಮದ ಮೇಲೆ ವಿನಿಯೋಗಿಸಬಹುದು.

ಸಿರಾ: ಅಬ್ಬಾ! ಎಂತಾ ಯೋಚನೆ. ನೀವು ಪುರುಷರೇ ಅಲ್ಲ ಸ್ವಾಮಿ……..ಮಹಾಪುರುಷರು. ಇವತ್ತಿನಿಂದಲೇ ಈ ಆಜ್ಞೆಯ ಬಗ್ಗೆ ಪರಿಶೀಲಿಸಲಾರಂಭಿಸುತ್ತೇನೆ.

ಅಷ್ಟೊತ್ತಿಗೆ ದಿಮಾ ಇದ್ದಕ್ಕಿಂದ್ದಂತೆ ನಿಂತಲ್ಲೇ ನಡುಗಿಲಾರಂಭಿಸಿದ. ಬಾಯಲ್ಲೆಲ್ಲಾ ಕಪ್ಪು ನೊರೆ ತುಂಬಲಾರಂಭಿಸಿತು. ಸ್ವಲ್ಪಹೊತ್ತಿನಲ್ಲೆ ಹಾಗೆಯೇ ಕುಸಿದು ಬಿದ್ದ. ಕೈಕಾಲೆಲ್ಲಾ ಸೊಟ್ಟೆಯಾಯಿತು. ಸಿರಾ ಗಾಭರಿಗೊಂಡು ಆಸ್ಥಾನ ವೈದ್ಯರತ್ತ ನೋಡಿದ. ಆಸ್ಥಾನವೈದ್ಯ ಏನೂ ಗಾಬರಿಗೊಳ್ಲದೇ ‘ಏನಿಲ್ಲ ರಾಜನ್, ಇವರ ಮಾನಸಿಕ ಅಸ್ವಸ್ಥತೆ ನೀಗಿಸಲು ನಾನು ಕೊಟ್ಟಿರುವ ಔಷಧವನ್ನು ದಿನಕ್ಕೆರಡು ಬಾರಿ ತೆಗೆದುಕೊಳ್ಳಲು ಹೇಳಿದ್ದೆ. ಇವರು ಇವತ್ತು ಬೆಳಿಗ್ಗೆ ಔಷಧ ತೆಗೆದುಕೊಳ್ಳುವುದನ್ನು ಮರೆತಿರಬೇಕು. ಅದರ ಪರಿಣಾಮವೇ ಇದು. ಒಂದು ಲೋಟ ಲಿಂಬೆಹುಳಿಗೆ, ಎರಡು ಚಮಚ ಜೇನು, ಸ್ವಲ್ಪ ಪುದೀನ ಬೆರೆಸಿ ಅದರಲ್ಲಿ ಬೆರಳದ್ದಿ ಕುಡಿಸಿದರೆ, ಪಿತ್ತ ಕೆಳಗಿಳಿದು ಸ್ವಲ್ಪ ಹೊತ್ತಿನಲ್ಲೇ ಸರಿಹೋಗುತ್ತಾರೆ’ ಎಂದು ಸಲಹೆ ನೀಡಿದ. ರಾಜ ತರಿಸಿಯೂ ಕೊಟ್ಟ. ಅದನ್ನು ಕುಡಿಸಿದ ದಿಮ ಎದ್ದು ನಿಂತು ‘ನನಗೇನಾಯ್ತು!? ಯಾಕೆ ಎಲ್ಲರೂ ನನ್ನ ಮುಖ ನೋಡುತ್ತಿದ್ದಾರೆ? ನನ್ನ ಬಟ್ಟೆ ಯಾಕೆ ಒದ್ದೆಯಾಗಿದೆ?’ ಎಂದು ಕೇಳಲಾರಂಭಿಸಿದ.

ಎಲ್ಲರ ಮುಂದೆ ಅವನ ಅಪಮಾನ ತಡೆಯಲೆಂದು ಸಿರಾ ‘ಏನೂ ಇಲ್ಲ ಅವಧೂತರೇ. ನೀವು ಮಾತನಾಡುತ್ತಿದ್ದಾಗ ಯಾರೋ ಹಿಂದಿನಿಂದ ‘ಪ್ರಣೀವ ತೊಡಾಗಿಯಾ’ ಎಂದು ಕೂಗಿದರು. ಯಾಕೋ ಗೊತ್ತಿಲ್ಲ ಇದ್ದಕ್ಕಿಂದಂತೆ ನೀವು ರಕ್ತಕಾರಿಕೊಳ್ಳುತ್ತಾ ಕೆಳಗೆ ಬಿದ್ದಿರಿ. ಯಾಕೋ ಗೊತ್ತಿಲ್ಲಪ್ಪ! ಅದೇನೋ ಮದುವೆಯ ಬಗ್ಗೆ ಹೇಳುತ್ತಿದ್ದಿರಿ. ಅದರ ಬಗ್ಗೆ ಮಾತು ಮುಂದುವರೆಸಿ’ ಎಂದ.

ದಿಮ ಇದ್ದಕ್ಕಿದ್ದಂತೆ ಬಿಳಿಚಿಕೊಂಡು ‘ಇಲ್ಲ ರಾಜನ್….ಅದ್ಯಾರೋ ನನಗೆ ಗೊತ್ತೇ ಇಲ್ಲ. ಅವನನ್ನು ಕಂಡರೆ ನನಗೆ ಹೆದರಿಕೆಯಿದೆ ಅಂತಾ ನಾನೊಪ್ಪಲ್ಲ. ಅವನು ಮಾತಾನಾಡುವುದೆಲ್ಲಾ ನನಗೆ ಕೇಳಿದರೆ ನನಗೆ ಮೈ ಉರಿಯುತ್ತದೆ ಅಂತಲೂ ನಾನು ಹೇಳುವುದಿಲ್ಲ’ ಎಂದು ಕೂಗುತ್ತಾ, ನಡುಗುತ್ತಾ ಬಾಗಿಲೆಡೆಗೆ ನಡೆಯತೊಡಗಿದ. ‘ರಾಜನ್…ಮದುವೆಯ ಬಗ್ಗೆ ನನಗೇನೂ ಗೊತ್ತಿಲ್ಲ. ನಾನೇನಾದರೂ ರಾಜನಾಗಿದ್ದರೆ, ಸ್ವಜಾತಿ ಮದುವೆಗಳನ್ನಲ್ಲಾ, ಸಂಪೂರ್ಣವಾಗಿ ಮದುವೆಯನ್ನೇ ನಿಷೇಧಿಸುತ್ತಿದ್ದೆ. ಮದುವೆಯೆಲ್ಲಾ ಬರೀ ಮೂಡನಂಬಿಕೆ. ಯಾರು ಯಾರೊಂದಿಗೆ ಬೇಕಾದರೂ ಇರುವಂತಾಗಬೇಕು. ಆಗಲೇ ಜಾತಿ ಪದ್ದತಿ ನಿರ್ಮೂಲನೆ ಸಾಧ್ಯ. ನೀವೆಲ್ಲಾ ಮೂರ್ಖರು. ಅವನೊಬ್ಬನೇ ನಿಜ. ನಾನೊಬ್ಬ ಭಂಡ….ಜೈ ತಿಕ್ಕಲುನಿರಂಜನ’ ಎಂದು ಕೂಗುತ್ತಾ ನಿರ್ಗಮಿಸಿದ.

ಕೆಲ ನಿಮಿಷಗಳ ಹಿಂದಷ್ಟೇ ದಿಮನ ಚತುರತೆಗೆ ಮೆಚ್ಚಿದ್ದ ರಾಜ, ಈಗ ಅವನ ಹುಚ್ಚು, ಪಿತ್ತದ ವಿಷಯ ಕೇಳಿ, ‘ಮದುವೆಯೇ ಮೂಡನಂಬಿಕೆ’ಯೆಂಬ ಅವನ ಮಾತುಗಳನ್ನು ಕೇಳಿ, ಈಗೇನು ಮಾಡುವುದೆಂದು ಚಿಂತಾಕ್ರಾಂತನಾಗಿ ಕುಳಿತ.

ಸ್ಕೋರು:
ಸಿರಾ – 0
ದಿಮ – 1
ದಿಮನ ಖತರ್ನಾಕ್ ಆಲೋಚನೆಗಳು ಕಾರ್ಯರೂಪಕ್ಕೆ ಬರದೆ, ಕರಾಳಾನಾಡಿನ ಜನತೆ ಬದುಕುಳಿದಿದ್ದರಿಂದ ಅವರಿಗೊಂದು ‘+1’ ಸ್ಕೋರು ಕೊಡಲೇಬೇಕು.

ಸಿರಾ-ದಿಮ ವಿನೋದ ಪ್ರಸಂಗಗಳು – ೩

ಸಿರಾ-ದಿಮ ವಿನೋದ ಪ್ರಸಂಗಗಳು – ೩:

ಸಿರಾ ತನ್ನ ಮಂತ್ರಿಗಳೊಡನೆ ಮುಂದಿನ ಭಾಗ್ಯದ ಬಗ್ಗೆ ಯೋಚಿಸುತ್ತಿದ್ದಾಗ, ದಿಮನ ಆಗಮನವಾಯಿತು. ಮುಖ ಯಾಕೋ ಸ್ವಲ್ಪ ಚಿಂತೆಯಲ್ಲಿದ್ದಂತಿತ್ತು. ಸಿರಾ ಅವನನ್ನು ನಗೆಯೊಂದಿಗೆ ಸ್ವಾಗತಿಸಿ ತನ್ನ ಸಮಾಲೋಚನೆ ಮುಂದುವರೆಸಿದ. ಸ್ವಲ್ಪ ಹೊತ್ತಿನ ನಂತರವೂ ದಿಮನ ಮುಖದ ಮೇಲೆ ಚಿಂತೆ ಕಡಿಮೆಯಾದಂತೆ ಕಾಣಲಿಲ್ಲ. ಸಿರಾ ಕುತೂಹಲ ತಡೆಯಲಾಗದೆ, ‘ಸಲಹೆಗಾರರೇ….ಎಲ್ಲವೂ ಸೌಖ್ಯವೇ!? ಯಾಕೋ ದುಗುಡದಲ್ಲಿದ್ದಂತಿದ್ದೀರಲ್ಲಾ? ನನ್ನಿಂದ ಏನಾದರೂ ಸಹಾಯವಾಗಬಹುದೇ’ ಎಂದ.

ದಿಮ ಅವನೆಡೆಗೆ ನೋಡಿ ‘ಅಷ್ಟೊಂದು ಮುಖ್ಯವಾದದ್ದೇನಲ್ಲ ರಾಜನ್. ಸಣ್ಣ ಚಿಂತೆಯಷ್ಟೇ. ನೀವು ಮುಂದುವರೆಸಿ’ ಎಂದ. ಸಿರಾ ತನ್ನ ಮಾತುಕತೆ ಮುಂದುವರೆಸಿದ. ಒಂದೆರಡು ಘಳಿಗೆಯ ನಂತರವೂ ದಿಮನ ಮುಖ ಬಾಡಿದ್ದನ್ನು ಗಮನಿಸಿದ ಸಿರಾ ತನ್ನ ತಾಳ್ಮೆ ಕಳೆದುಕೊಂಡು ‘ಅವಧೂತರೇ, ನೀವು ಈ ಸಮಾಲೋಚನೆಯಲ್ಲಿ ಮುಕ್ತಮನಸ್ಸಿನಿಂದ ಭಾಗವಹಿಸಬೇಕು. ಆದರೆ ಇವತ್ತೇಕೋ ನಿಮ್ಮಿಂದ ಈ ಸಮಾಲೋಚನೆಗೆ ಏನೂ ಕೊಡುಗೆ ಬರುತ್ತಿಲ್ಲ. ನಿಮ್ಮ ಚಿಂತೆಯದೇನೆಂದು ಹೇಳಿಬಿಡಿ. ಅದನ್ನು ಬಗೆಹರಿಸಿಯೇ ನಾವು ಮುಂದುವರೆಯುತ್ತೇವೆ’ ಎಂದ.

ದಿಮ ‘ಸರಿ ಪ್ರಭು. ನನ್ನ ಮನಸ್ಸಿನಲ್ಲಿ ನಿಮಗಾಗಿ ಒಂದು ಒಳ್ಳೆಯ ಸುದ್ಧಿ ಮತ್ತು ಒಂದು ಕೆಟ್ಟ ಸುದ್ಧಿ ಸುಳಿದಾಡುತ್ತಿದೆ. ಯಾವುದನ್ನು ಹೇಳುವುದೋ ತಿಳಿಯುತ್ತಿಲ್ಲ. ಅದೂ ಅಲ್ಲದೆ ಎಲ್ಲರೂ ಇಲ್ಲಿ ಇದ್ದಾರೆ. ಆದ್ದರಿಂದ….’ ಎಂದು ತಡಬಡಾಯಿಸಿದ.

ಮೊದಲೇ ತಾಳ್ಮೆಯ ತುದಿಯಲ್ಲಿದ್ದ ಸಿರಾ, ಕೋಪವನ್ನು ತಡೆಹಿಡಿದುಕೊಂಡ ‘ನನ್ನ ಬಳೆ ಸಮಯ ಹೆಚ್ಚಿಲ್ಲ. ಕೆಟ್ಟ ಸುದ್ಧಿ ನನಗೆ ತಾನೇ, ತೊಂದರೆಯಿಲ್ಲ ಅದನ್ನು ನಿಧಾನವಾಗಿ ಕೇಳುತ್ತೇನೆ. ಈಗ ನಿಮ್ಮ ದುಗುಡವನ್ನು ಕಡಿಮೆಮಾಡಲು ಒಳ್ಳೆಯ ಸುದ್ಧಿಯನ್ನೇ ಹೇಳಿ’ ಎಂದ..

ದಿಮ ತಡವರಿಸುತ್ತಾ ‘ಅದೇನೆಂದರೆ ರಾಜನ್…..ಅದೂ…..ಹ್ಮ್ಮ್ಮ್’ ಎಂದದ್ದಕ್ಕೆ ಸ್ವಲ್ಪ ಸಿಟ್ಟಿನಿಂದಲೇ, ‘ಅವದೂತರೇ, ದಕ್ಷಿಣ ಕನ್ನಡದ ಮಧ್ಯಮವರ್ಗದವರಂತಾಡಬೇಡಿ. ಸಮಯ ಕಡಿಮೆಯಿದೆ, ಅದೇನೆಂದು ಬೇಗ ಹೇಳಿ. ಇಲ್ಲಿ ರಾಜನ್ ಉಪಾಹಾರಮಂದಿರ ಭಾಗ್ಯದ ಬಗ್ಗೆ ಚರ್ಚೆಯನ್ನು ಮುಗಿಸಬೇಕಿದೆ’ ಎಂದ ಗುಡುಗಿದ.
.
.

ಅದಕ್ಕೆ ದಿಮ ನಿಧಾನವಾಗಿ ಹಿಮ್ಮುಖವಾಗಿ ಬಾಗಿಲೆಡೆಗೆ ಹೆಜ್ಜೆಯಿಕ್ಕುತ್ತಾ ‘ರಾಜನ್….ಒಳ್ಳೆಯ ಸುದ್ಧಿಯೇನೆಂದರೆ….ನಿಮ್ಮ ರಾಣಿಯವರ ಕೆನ್ನೆ ಮುತ್ತಿಡಲು ಬಹಳ ಸೊಗಸಾದ ಜಾಗವೆಂದು ಈಗಷ್ಟೇ ನನಗೆ ತಿಳಿದುಬಂದಿದೆ’ ಎಂದು ಹೇಳಿ, ಎದ್ದೆನೋ ಬಿದ್ದೆನೋ ಎಂದು ಓಡಿ ಹೋದ.

ಸ್ಕೋರು:
ಸಿರಾ – 0 (ಈ ಅವಮಾನದ ಸ್ಕೋರು -1 ಆದ್ದರಿಂದ ಈ ಪರಿಣಾಮ)
ದಿಮ – 1 (ರಿಟೈರ್ಡ್ ಹರ್ಟ್

ಸಿರಾ-ದಿಮ ವಿನೋದ ಪ್ರಸಂಗಗಳು – ೨

“ಸಿರಾ-ದಿಮ ವಿನೋದ ಪ್ರಸಂಗಗಳು – ೨”

ಸಿರಾ ಮತ್ತು ದಿಮ ಕರಾಳದೇಶದ ಮುಖ್ಯ ನದಿಯಾಗಿದ್ದ ‘ಕಾವಿಳಿ’ ನದಿಗೆ ವಿಹಾರಕ್ಕಾಗಿ ಹೋಗಿದ್ದರು. ವರ್ಷಾನುಗಟ್ಟಳೇ ಸ್ನಾನ ಮಾಡದ ದಿಮ, ನೀರು ಕಂಡಕೂಡಲೇ ಸಂತೋಷದಿಂದ ಹುಚ್ಚೆದ್ದು ನೀರಿಗೆ ಹಾರಿದ. ಸಿರಾ ನೀರಿಗಿಳಿಯಲಿಲ್ಲ.

ದಿಮ: ‘ಯಾಕೆ ರಾಜನ್! ನಿಮಗೆ ಈಜಲು ಬರುವುದಿಲ್ಲವೋ!?’
ಸಿರಾ: ‘ಇಲ್ಲ’
ದಿಮ: (ತನ್ನ ಎಂದಿನ ಅಜಾಗರೂಕತೆಯಿಂದಲೇ ಉತ್ತರಿಸುತ್ತಾ) ‘ನಾಯಿಗಳೇ ಈಜುತ್ತವೆ. ನಿಮಗಿಂತಾ ನಾಯಿಯೇ ಮೇಲು’
ಸಿರಾ: ‘ತಮಗೆ ಈಜಲು ಬರುತ್ತದೆಯೋ?’
ದಿಮ: ‘ಖಂಡಿತಾ ಬರುತ್ತದೆ’
ಸಿರಾ: ‘ನಾಯಿಗಳೂ ಈಜುತ್ತವೆ. ಹಾಗಾದರೆ ನಿಮಗೂ ನಾಯಿಗೂ ಏನು ವ್ಯತ್ಯಾಸ ಉಳಿಯಿತು?’
ದಿಮ: (ಮನಸ್ಸಿನಲ್ಲೇ…..) ಬೇಕಿತ್ತಾ ಇದು ನಂಗೆ 😛 :-O

ಸ್ಕೋರು:
ಸಿರಾ – 1
ದಿಮ – 1

ಸಿರಾ-ದಿಮ ವಿನೋದ ಪ್ರಸಂಗಗಳು – ೧

“ಸಿರಾ-ದಿಮ ವಿನೋದ ಪ್ರಸಂಗಗಳು – ೧”

ಸಿರಾ-ದಿಮ ಒಮ್ಮೆ ರಾಜಭವನದ ಉದ್ಯಾನದಲ್ಲಿ ನಡೆದಾಡುತ್ತಿದ್ದರು. ಸಿರಾನಿಗೆ ಒಂದು ಸಂದೇಹ ಬಗೆಹರಿಯಬೇಕಾಗಿತ್ತು. ಅದಕ್ಕಾಗಿ ದಿಮನಿಗೆ ಒಂದು ಪ್ರಶ್ನೆ ಎಸೆದ.

ಸಿರಾ: “ಅವಧೂತರೇ, ಮೊನ್ನೆ ನನ್ನ ದಳವಾಯಿಗಳು ನಡೆಸಿದ ಗಣತಿಯ ಪ್ರಕಾರ, ನನ್ನ ಪ್ರಜೆಗಳಲ್ಲಿ ತಾನೇ ಇಷ್ಟಪಟ್ಟು ತನ್ನ ಸಂಗಾತಿಯನ್ನು ಆರಿಸಿಕೊಂಡು ಮದುವೆಯಾದವರಿಗಿಂತಾ, ಹಿರಿಯರು ನಿಶ್ಚಯಿಸಿದ ಮದುವೆಗಳಲ್ಲಿ ಕಡಿಮೆ ವಿಚ್ಚೇದನ ಪ್ರಕರಣಗಳಿವೆಯಂತೆ. ನಮ್ಮ ಸಂಸ್ಕೃತಿ ಎಷ್ಟು ಒಳ್ಳೆಯದಲ್ಲವೇ? ಧನ್ಯ ಧನ್ಯ ನಮ್ಮ ಭಾರತ ದೇಶ, ನಮ್ಮ ಕರಾಳನಾಡು ಹಾಗೂ ನಮ್ಮ ಸಂಸ್ಕೃತಿ.”

ದಿಮ: “ಅಯ್ಯೋ ಮೂರ್ಖ ರಾಜ! ಇಂತಹ ‘ಮೂಡನಂಬಿಕೆ’ಗಳನ್ನೆಲ್ಲಾ ನಿನ್ನ ತಲೆಗೆ ತುಂಬಿದವರ್ಯಾರು!? ಬರೀ ರೋಗಿಷ್ಟ ತಿಂಡಿಪೋತ ಸನ್ಯಾಸಿಗಳ ಪುಸ್ತಕ ಓದಬೇಡ ಎಂದು ನಾನೆಷ್ಟು ಬಾರಿ ಹೇಳುವುದು ನಿನಗೆ!!??? ಇದಕ್ಕೇ ನೋಡು ನಾನು ಮೂಡನಂಬಿಕೆ ವಿರೋಧಿ ಕಾಯ್ದೆ ಜಾರಿಗೆ ತರಬೇಕು ಎಂದು ಆಗಾಗ ಹೇಳಿದ್ದು. ತಂದರೆ ಬಹುಷಃ ನೀನೇ ಮೊದಲ ಬಲಿಯಾಗುತ್ತೀಯೆ 😛 ಮೊನ್ನೆಯಷ್ಟೇ ನಿನ್ನ ಕುದುರೆಯೊಂದು ಬೆಂಕಿಗೆ ಬಿದ್ದು ಸತ್ತದ್ದಕ್ಕೆ, ಮನೆದೇವರ ಪೂಜೆಗೆ ಹೋಗಿದ್ದೀಯ. ಛೇ ಛೇ ಎರಡು ದಿನ ನಾನು ಊರಲ್ಲಿಲ್ಲದಕ್ಕೆ ಏನೆಲ್ಲಾ ಮಾಡುತ್ತೀಯಪ್ಪಾ!? ನಿನ್ನ ಲೆಕ್ಕಾಚಾರವೆಲ್ಲಾ ತಪ್ಪು. ಅದು ಸಂಸ್ಕೃತಿಯೂ ಅಲ್ಲ ಇನ್ನೊಂದೂ ಅಲ್ಲ. ನಿನ್ನ ದೇಶ ನೀನಂದುಕೊಂಡಷ್ಟು ದೊಡ್ಡದೂ ಅಲ್ಲ. ಇವೆಲ್ಲಾ ನಿನ್ನ ಭ್ರಮೆ.”

ಸಿರಾ: “ಹೌದೇ, ಹಾಗಾದರೆ ಈ ಗಣತಿಯ ಸಂಖ್ಯೆಗಳು ಸುಳ್ಳೇ?”

ದಿಮ: “ಹಾಗಲ್ಲಪ್ಪಾ……ತನ್ನ ಇಷ್ಟದ ಹುಡುಗಿಯನ್ನೇ ಮದುಯಾಗಲು ಧೈರ್ಯವಿಲ್ಲದ ಗಂಡಿಗೆ ಇನ್ನು ವಿಚ್ಚೇಧನ ಕೊಡುವ ಧೈರ್ಯ ಎಲ್ಲಿಂದ ಬಂದೀತು. ಅವಡುಗಚ್ಚಿಕೊಂಡು ತನ್ನ ಅಮ್ಮ-ಅಪ್ಪನ ತಪ್ಪನ್ನು ಅನುಭವಿಸುತ್ತಾನೆ ಅಷ್ಟೇ. ಅದಕ್ಕೇ ವಿಚ್ಚೇಧನಗಳು ಅವರಲ್ಲಿ ಕಡಿಮೆ. ಇಷ್ಟೇ ನಿನ್ನ ಗಣತಿಯ ತಾತ್ಪರ್ಯ.”

ಸ್ಕೋರು:
ಸಿರಾ – 0
ದಿಮ – 1