“ಯಾವುದಾದರೇನು ನಿನ್ನ ಬಣ್ಣ…. ಎಂದೆಂದಿಗೂ ನೀನೆ ನನ್ನ ಅಣ್ಣ”
ಮೈಬಣ್ಣದ ಆಧಾರದ ಮೇಲೆ ಜನರನ್ನು ವಿಂಗಡಿಸುವ ಕೆಟ್ಟಚಾಳಿಗೆ ಸುಮಾರು ಒಂಬೈನೂರು ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಇದನ್ನು ಪ್ರಾರಂಭಿಸಿದ ಹಾಗೂ ಪ್ರಸಿದ್ಧಿಗೊಳಿಸಿದ ಕೀರ್ತಿ ಬಹುಷಃ ಅರಬ್ ವ್ಯಾಪಾರಿಗಳಿಗೆ ಸೇರಬೇಕು. ಇದಕ್ಕೆ ತಡೆ ಬೀಳಲು ಅದೆಷ್ಟೋ ದೇಶಗಳ ಅದೆಷ್ಟೋ ಜನರ ಜೀವ ಸವೆಯಬೇಕಾಯ್ತು.
ಅಷ್ಟೆಲ್ಲಾ ಹೋರಾಟಗಳು ನಡೆದ ಮೇಲೂ, ಕರಿಯರಿಗೆ ಬಹಳಷ್ಟು ಸಾಮಾಜಿಕ ಸ್ಥರಗಳಲ್ಲಿ ಸಮಾನಅವಕಾಶಗಳೇ ಸಿಗುತ್ತಿರಲಿಲ್ಲ. ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಯಾದ ಫುಟ್ಬಾಲ್ ಕೂಡಾ ಇದಕ್ಕೆ ಹೊರತಾಗಿರಲಿಲ್ಲ. ಕರಿಯರು ರಾಷ್ಟ್ರೀಯ ತಂಡಗಳಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡಬೇಕಾಗಿತ್ತು. ಇದೇ ಅಲ್ಲದೆ, ಕರಿಯರೇ ತುಂಬಿದ್ದ ದೇಶಗಳ ತಂಡಗಳು ಸಹ ಫುಟ್ಬಾಲ್ ವಿಶ್ವಕಪ್’ನಲ್ಲಿ ಕಾಲ ಸ್ಥಾನವೇ ಸಿಗದೇ ಕೆಲವರ್ಷಗಳ ಕಾಲ ನಿರಾಶೆಗೊಳಗಾಗಬೇಕಿತ್ತು. (ಕ್ರಿಕೆಟ್ಟಿನಲ್ಲಿ, ಇದಕ್ಕೆ ತದ್ವಿರುದ್ಧವಾಗಿ, ದಕ್ಷಿಣ ಆಫ್ರಿಕಾ ತಂಡಕ್ಕೆ ಐಸಿಸಿ 1995ರವರೆಗೆ ನಿಷೇಧ ಹೇರಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು).
ಕ್ರೀಡಾಸಂಸ್ಥೆಗಳು ಇಂತಹ ಕೆಟ್ಟಪದ್ದತಿಯನ್ನು ಜೀವಂತವಾಗಿಟ್ಟರೂ ಸಹ, ಕ್ರೀಡಾಳುಗಳು ಸದಾ ಇಂತಹ ಕ್ಷುಲ್ಲಕ ವಿಷಯಗಳನ್ನು ಬದಿಗೆ ತಳ್ಳಿ ಸಹೋದರತೆಯನ್ನು ಪ್ರದರ್ಶಿಸಿದ್ದಾರೆ. 1970ರ ವಿಶ್ವಕಪ್ ಪಂದ್ಯವೊಂದರಲ್ಲಿ ಬ್ರಜೀಲ್ ತಂಡ ಇಂಗ್ಲೆಂಡ್ ವಿರುದ್ಧ 1-0ರ ಜಯ ಸಾಧಿಸಿದಾಗ, ಬ್ರಝೀಲ್’ನ ಫುಟ್ಬಾಲ್ ತಾರೆ ಪಿಲೇ ಹಾಗೂ ಇಂಗ್ಲೆಂಡ್ ತಂಡದ ನಾಯಕ ಬಾಬ್ಬೀ ಮೂರ್ ತಮ್ಮ ಜೆರ್ಸಿಗಳನ್ನು ಬದಲಾಯಿಸಿಕೊಂಡ ಅಪೂರ್ವ ಕ್ಷಣವೊಂದು ದಾಖಲಾಗಿದ್ದು ಹೀಗೆ.
ಬಾಬ್ಬಿ ಹಾಗೂ ಪಿಲೇ, ಆಟದ ಮೈದಾನದ ಹೊರಗೆ ಬಹಳ ಒಳ್ಳೆಯ ಸ್ನೇಹಿತರಾಗಿದ್ದವರು. ಈ ಫೋಟೋ ತೆಗೆಯುವಾಗ ಇಬ್ಬರೂ ಹೆಚ್ಚುಕಮ್ಮಿ ತಮ್ಮ ಕ್ರೀಡಾಜೀವನದ ನಿವೃತ್ತಿಯ ಅಂಚಿನಲ್ಲಿದ್ದರು. ಈ ಚಿತ್ರ ಬಹಳ ವರ್ಷಗಳವರೆಗೆ ಸಾಂಸ್ಕೃತಿಕ, ಜನಾಂಗೀಯ ಹಾಗೂ ಪ್ರಾಂತೀಯ ಒಗ್ಗಟ್ಟಿನ ಪ್ರತೀಕವಾಗಿ ನಿಂತಿತು. ತೊಟ್ಟ ಅಂಗಿಯ ಅಡಿಯಲ್ಲಿ, ಬಣ್ಣದ ಚರ್ಮವೊಂದನ್ನು ಬಿಟ್ಟರೆ ನಾವೆಲ್ಲರೂ ಒಂದೇ ಎಂಬುದನ್ನು ಈ ದಿಗ್ಗಜರ ಈ ಚಿತ್ರ ಬಹಳ ಸೂಕ್ಷ್ಮವಾಗಿ ಹಾಗೂ ಸೂಚ್ಯವಾಗಿ ಸಾರುತ್ತದೆ.