ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೧೧

ಇವತ್ತಿನ ಅಂಕಣ ಬರೀ ಏಟು-ಎದಿರೇಟಿನದ್ದು ಮಾತ್ರವಲ್ಲ. ಸಣ್ಣದೊಂದು ಸಾಮಾನ್ಯಜ್ಞಾನದ ವಿಷಯವೂ ಇದರಲ್ಲಿ ಅಡಗಿದೆ. ನಿಮ್ಮ ಆಸಕ್ತಿಗನುಗುಣವಾಗಿ ಹೆಕ್ಕಿಕೊಳ್ಳಿ.

ಇಂಗ್ಲೆಂಡಿನ ಕೆಂಟ್ ಎಂಬ ಕೌಂಟಿಯಲ್ಲಿ ಸ್ಯಾಂಡ್ವಿಚ್ ಎಂಬುದೊಂದು ಬಂದರು ಪಟ್ಟಣವಿದೆ. ಈ ಹೆಸರು ‘ಮರಳಮೇಲಿನ ವ್ಯಾಪಾರಕೇಂದ್ರ’ ಎಂಬರ್ಥದ ಹಳೆಯದೊಂದು ಸ್ಕ್ಯಾಂಡಿನೇವಿಯನ್ ಪದದಿಂದ ಬಂದದ್ದಂತೆ. ನಿಮಗೆ ಗೊತ್ತಿರುವಂತೆ ಇಂಗ್ಲೆಂಡಿನ ಕುಲೀನಮನೆತನಗಳಿಗೆ ತಮ್ಮದೇ ಆದ ಒಂದು ಹೆಸರಿಡುವ ಪದ್ದತಿಯಿರುತ್ತದೆ. ಡ್ಯೂಕ್, ಬ್ಯಾರನ್, ಕೌಂಟ್, ವಿಸ್ಕೌಂಟ್, ಅರ್ಲ್, ಮಾರ್ಕೀಸ್ ಮುಂತಾದ ಹೆಸರುಗಳು ನಿಮಗೆ ಪರಿಚಿತವಾಗಿರಬಹುದು. ಅಲ್ಲಿನ ಶ್ರೀಮಂತವರ್ಗ ಈ ಪದವಿಯನ್ನು ತಮ್ಮ ಹೆಸರಿನ ಮುಂದೆ ಸೇರಿಸಿಕೊಂಡು ಡ್ಯೂಕ್ ಆಫ್ ಕಾರ್ನ್ವಾಲ್, ವಿಸ್ಕಂಟ್ ವೇಯ್’ಮೌತ್, ಬ್ಯಾರನ್ ಡಡ್ಲೀ, ಅರ್ಲ್ ಆಫ್ ಪೋರ್ಟ್ಲ್ಯಾಂಡ್ ಎಂದೆಲ್ಲಾ ಕರೆಸಿಕೊಳ್ಳುತ್ತಾರೆ. ಇದು ನೈಟ್ ಪದವಿಯಂತೆ ಮಾಡಿದ ಯಾವುದೋ ಮಹಾನ್ ಕೆಲಸಕ್ಕೆ ಗೌರವಸೂಚಕವಾಗಿ ಬಂದದ್ದಲ್ಲ. ಇದೊಂದು ಮೇಲ್ವರ್ಗದ ಜನರ ನಾಮಕರಣ ಪದ್ದತಿಯಷ್ಟೇ. ಇದೆಲ್ಲಾ ಪ್ರಾರಂಭವಾದಾಗ ಆ ಮನೆತನದ ಹಿರಿಯರು ಏನೋ ಘನಾಂಧಾರಿ ಕೆಲಸ ಮಾಡಿದ್ದಿರಬಹುದು. ಆದರೆ ಆಮೇಲೆ ಅದು ವಂಶದಲ್ಲಿ ಹರಿದು ಬಂದದ್ದಷ್ಟೇ. ನಮ್ಮಲ್ಲಿ (ಬರೀ ಉದಾಹರಣೆಗೆ) ಸಾಹುಕಾರ್ ಜಾನಕಿ, ರಾವ್ ಬಹದ್ದೂರ್ ರಂಗರಾವ್, ಜಮೀನ್ದಾರ್ ಅಂತೆಲ್ಲಾ ಸೇರಿಸಿಕೊಳ್ಳುವಂತೆ.

ಇಂತದ್ದೊಂದು ಮನೆತನಕ್ಕೆ ಸೇರಿದವರು ‘ಅರ್ಲ್ ಆಫ್ ಸ್ಯಾಂಡ್ವಿಚ್’ಗಳು. ಈ ಮನೆತನದ ಮೂರನೇ ತಲೆಮಾರಿನ ಮಹತ್ವದ ವ್ಯಕ್ತಿ ‘ಜಾನ್ ಮೊಂಟಾಗು’. ಈತನನ್ನು ಬ್ರಿಟೀಷ್ ಪದ್ದತಿಯ ಪ್ರಕಾರ ‘ನಾಲ್ಕನೇ ಅರ್ಲ್ ಆಫ್ ಸ್ಯಾಂಡ್ವಿಚ್’ ಎಂದೂ ಕರೆಯಲಾಗುತ್ತಿತ್ತು. 1729ರಲ್ಲಿ, ತನ್ನ ಹತ್ತನೇ ವಯಸ್ಸಿಗೇ ಸ್ಯಾಂಡ್ವಿಚ್ ಮನೆತನದ ಮುಖ್ಯಸ್ಥನೂ ಆದಂತವನು ಇವನು. ಶ್ರೀಮಂತ ಮನೆತನದವನಾದ್ದರಿಂದ ಕೇಂಬ್ರಿಡ್ಜ್ ಕಾಲೇಜಿನಲ್ಲಿ ವಿದ್ಯಾಭ್ಯಾಸ. ತದನಂತರ ಇಡೀ ಯೂರೋಪ್ ಸುತ್ತಿ, ಈಜಿಪ್ಟಿನವರೆಗೂ ತಿರುಗಾಡುವ ಅವಕಾಶ. ಅದೆಲ್ಲಾ ಮುಗಿದ ಮೇಲೆ ಹೌಸ್ ಆಫ್ ಲಾರ್ಡ್ಸಿಗೆ ಪ್ರವೇಶ. ಬಿಡಿ ಪೀಠಿಕೆ ಸಾಕು. ಕೆಲ ಕಥೆಗಳ ಪ್ರಕಾರ, ನಾವು ಇವತ್ತು ಏನು ಎರಡು ಬ್ರೆಡ್ ಚೂರುಗಳ ನಡುವೆ ಮಾಂಸದ ತುಣುಕು ಸೇರಿಸಿ ತಿನ್ನುತ್ತೇವೆ, ಅದಕ್ಕೆ ‘ಸ್ಯಾಂಡ್ವಿಚ್’ ಎಂಬ ಹೆಸರು ಬರಲು ಈತನೇ ಕಾರಣ. ತನ್ನ ಬಿಡುವಿಲ್ಲದ ತಿರುಗಾಟ ಮತ್ತು ಜೂಜಿನ ಹವ್ಯಾಸದ ಮಡುವೆ ಊಟ ತಿನ್ನಲೂ ಸಮಯ ಸಿಗದೇ, ಈತನೇ ಕಂಡುಹಿಡಿದ ತಿನಿಸಿದಂತೆ. ನಿಜ, ಬೇಕಾದ್ರೆ ಇವನ ವಿಕಿಪೀಡಿಯಾ ಪೇಜ್ ನೋಡಿ.

ಈ ಜಾನ್ ಮೊಂಟಾಗು, ಮಹಾಚಾಣಾಕ್ಷಮತಿ, ಮತ್ತು ಎದುರಾಳಿಯ ತಲೆತಿರುಗಿಸಿ ಬೀಳಿಸುವಷ್ಟು ಮಾತಿನಮಲ್ಲ. ಆದರೆ, ಇಂತವನನ್ನೂ ಒಮ್ಮೆ ಸ್ಯಾಮುಯೆಲ್ ಫುಟ್ ಎಂಬಾತ ಸಕ್ಕತ್ತಾಗಿ ಮಾತಿನ ಚಕಮಕಿಯಲ್ಲಿ ಸಿಕ್ಕಿಹಾಕಿಸಿದ ಘಟನೆ ಇಲ್ಲಿದೆ ನೋಡಿ. ಹೇಳಿ ಕೇಳಿ ಸ್ಯಾಮುಯೆಲ್ ಫುಟ್ ನಾಟಕಕಾರ ಹಾಗೂ ತನ್ನ ಹಾಸ್ಯ ಪ್ರವೃತ್ತಿಗೆ ಹೆಸರಾದವ. ಕೆಲ ಮೂಲಗಳ ಪ್ರಕಾರ, ಈತನಿಗೂ ನಮ್ಮ ಅರ್ಲ್’ಗೂ ಅಷ್ಟಕ್ಕಷ್ಟೇ. ಸ್ಯಾಮುಯೆಲ್ ಸದಾ ಸರ್ಕಾರದ ಬಗ್ಗೆ ತನ್ನ ಟೀಕೆಗೆ ಹೆಸರಾದವ. ಹೆಚ್ಚಿನ ಶ್ರೀಮಂತವರ್ಗದವರೇ ತುಂಬಿದ್ದ ಅಂದಿನ ಪಾರ್ಲಿಮೆಂಟನ್ನು ಸ್ಯಾಮುಯೆಲ್ ‘ಅದೊಂದು ಬಂಗಾರದ ಹಕ್ಕಿಗಳ ವಜ್ರದ ಪಂಜರ. ಅದರೊಳಗಿರುವ ಹಕ್ಕಿಗಳಿಗೆ ಹೊರಜಗತ್ತಿನ ಅರಿವೇ ಇಲ್ಲ’ ಎಂದು ಜರಿದಿದ್ದ.

ಒಮ್ಮೆ ಯಾರೋ ಒಬ್ಬ ಸಂಸದನ ಮನೆಯಲ್ಲಿ ಒಂದು ಔತಣದ ವ್ಯವಸ್ಥೆಯಾಗಿತ್ತು. ಎಲ್ಲಾ ಲಾರ್ಡ್’ಗಳೂ ಸೇರಿದ್ದರು. ಸ್ಯಾಮುಯೆಲ್ ಸ್ವಲ್ಪ ತಡವಾಗಿ ಬಂದ. ‘ಓಹ್! ನೀನಿನ್ನೂ ಜೀವಂತವಾಗಿದ್ದೀಯಾ ಸ್ಯಾಮ್!?’ ಎಂದ ಅರ್ಲ್ ಆಫ್ ಸ್ಯಾಂಡ್ವಿಚ್. ‘ನಿಮ್ಮ ದಯೆ ಮೈಲಾರ್ಡ್’ ಎಂದ ಸ್ಯಾಮುಯೆಲ್ ತನ್ನ ವೈನ್ ಗ್ಲಾಸನ್ನೆತ್ತಿಕೊಂಡ. ‘ಸರ್ಕಾರದ ಬಗ್ಗೆ ಬಹಳ ಮಾತಾಡ್ತೀಯಂತೆ! ನೋಡ್ತಾ ಇರು, ನೀನು ಸಧ್ಯದಲ್ಲೇ ಒಂದೋ ಗಲ್ಲಿಗೇರುತ್ತೀಯ ಅಥ್ವಾ ಸಿಫಿಲಿಸ್ಸಿನಂತಹ ಗುಪ್ತರೋಗ ಬಂದು ಸಾಯುತ್ತೀಯ’ ಎಂದು ಮೂದಲಿಸಿದ.

ಸ್ಯಾಮ್ ಗಲಿಬಿಲಿಗೊಳ್ಳಲೇ ಇಲ್ಲ. ‘ಎಲ್ಲರೂ ಒಂದು ದಿನ ಸಾಯಲೇಬೇಕು. ಅದರ ಬಗ್ಗೆ ನಾನು ಹೆದರುವುದಿಲ್ಲ. ಇನ್ನು ನಾನು ಗಲ್ಲಿಗೇರುತ್ತೀನೋ ಅಥವಾ ಗುಪ್ತರೋಗಕ್ಕೆ ಬಲಿಯಾಗುತ್ತೇನೋ ಎಂಬುದು, ನಾನು ನಿಮ್ಮ ಸಿದ್ಧಾಂತಗಳನ್ನು ಅಪ್ಪಿಕೊಳ್ಳುತ್ತೇನೋ ಅಥವಾ ನಿಮ್ಮ ಪ್ರೇಯಸಿಯನ್ನು ಅಪ್ಪಿಕೊಳ್ಳುತ್ತೇನೋ ಎಂಬುದರ ಮೇಲೆ ನಿರ್ಧಾರವಾಗಲಿದೆ, ಮೈಲಾರ್ಡ್’ ಎಂದು ಒಂದು ತುಂಟನಗುಬೀರುತ್ತಾ ವೈನ್ ಹೀರಿದ.

ಅರ್ಲ್’ಮುಖದಲ್ಲಿ ಬರೀ ಒಣನಗೆಯಿತ್ತು. ಸ್ಯಾಮುಯೆಲ್ ವೈನ್ ಹೀರುತ್ತಿದ್ದ ಶಬ್ದ ಬಿಟ್ಟರೆ, ಆ ಕೋಣೆಯಲ್ಲಿ ಒಂದು ಸಣ್ಣ ಸೂಜಿ ಬಿದ್ದರೂ ಜೋರಾಗಿಯೇ ಕೇಳುವಷ್ಟು ಮೌನವಿತ್ತು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s