ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೧೦

ನಮ್ಮದು ಶಾಂತಿಪ್ರಿಯ ದೇಶವಾದರೂ, ನಮ್ಮ ನೆರೆಹೊರೆಯ ಸ್ನೇಹಿತರು ಎಲ್ಲಾಬಾರಿಯೂ ಶಾಂತಿಪ್ರಿಯರೇನಾಗಿರಲಿಲ್ಲ. 1947-48ರಿಂದಲೂ ನಮಗೆ ತಲೆನೋವುಗಳ ಸರಮಾಲೆಯೇ ಸಿಕ್ಕಿದ್ದು. 1962ರಲ್ಲಿ ಚೀನಾದೊಂದಿಗೆ ಸಿನೋ-ಇಂಡಿಯನ್ ಯುದ್ಧ ಮುಗಿಸಿದ ಬಳಲಿ ಬೆಂಡಾಗಿದ್ದ ಬೆನ್ನಲ್ಲೇ, ಸಮಯ ಸಾಧಕ ಪಾಕಿಸ್ತಾನ 1965ರ ಆಗಸ್ಟಿನಲ್ಲಿ ಕಾಶ್ಮೀರದಲ್ಲಿ ಸುಮಾರು 30,000 ಸೈನಿಕರನ್ನು ಕಾಶ್ಮೀರಿ ನಾಗರೀಕರ ವೇಶದಲ್ಲಿ LOCಯ ಒಳಗೆ ನುಗ್ಗಿಸಿತು. ತಕ್ಷಣವೇ ಎತ್ತೆಚ್ಚ ಭಾರತದ ಸೈನ್ಯ ಕೊಟ್ಟ ಹೊಡೆತಕ್ಕೆ, ಹದಿನೈದೇ ದಿನದಲ್ಲಿ ಪಾಕಿಸ್ತಾನ ಬಾಲ ಮುದುರಿ ವಾಪಾಸಾಯಿತು. ಸುಮಾರು 2000 ಚದರಕಿಲೋಮೀಟರಿನಷ್ಟು ಪಾಕಿಸ್ತಾನದ ಜಾಗವನ್ನೂ ಭಾರತ ಆಕ್ರಮಿಸಿಕೊಂಡಿತು. ಎರಡನೇ ಮಹಾಯುದ್ಧದ ಬಳಿಕ, ಅತ್ಯಂತ ಹೆಚ್ಚು ಟ್ಯಾಂಕರುಗಳು ಬಳಕೆಯಾದ ಯುದ್ಧ 1965ರದ್ದು. ಎರಡೂ ದೇಶಗಳಿಗೆ ಬಹಳವೇ ಹಾನಿಯುಂಟುಮಾಡಿದ ಯುದ್ಧವದು.

ಯುದ್ಧ ಮುಗಿದ ಸಮಯದಲ್ಲಿ, ಎರಡೂ ದೇಶಗಳ ನಡುವಿನ ಶಾಂತಿ ಮಾತುಕತೆಗೆ, ಮಧ್ಯಸ್ಥಿಕೆ ವಹಿಸಿದ್ದು ಅಂದಿನ ಸೋವಿಯತ್ ರಷ್ಯಾದ ಅಧ್ಯಕ್ಷ ಅಲೆಕ್ಸಿ ಕೊಸಿಗಿನ್. ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಇಬ್ಬರನ್ನು ತಾಷ್ಕೆಂಟಿಗೆ ಬರಹೇಳಿದರು ಅಯೂಬ್ ಖಾನ್ ಆರೂವರೆ ಅಡಿ ಎತ್ತರದ ಭಾರೀ ಮನುಷ್ಯ. ನಮ್ಮ ಶಾಸ್ತ್ರಿಗಳು ಐದೂಕಾಲು ಅಡಿಯ ವಾಮನಮೂರ್ತಿ. ತಾಷ್ಕೆಂಟಿಗೆ ಹೊರಟುನಿಂತಿದ್ದ ಶಾಸ್ತ್ರಿಗಳನ್ನು ಪ್ರಧಾನಿ ನಿವಾಸದೆದುರು ಪತ್ರಕರ್ತರು ಸೌಂಡ್ ಬೈಟಿಗಾಗಿ ತಡಕಾಡಿದಾಗ ಯಾರೋ ಒಬ್ಬ ಕಿಡಿಗೇಡಿ ಪತ್ರಕರ್ತ, ‘ಶಾಸ್ತ್ರಿಗಳೇ, ಯುದ್ಧ ಗೆದ್ದಿದ್ದು ಸಂತೋಷವೇ. ಆದರೆ ನಮ್ಮ ಉಳಿದ ಬೇಡಿಕೆಗಳನ್ನು ಅವರು ಪುರಸ್ಕರಿಸುವಂತೆ ಮಾಡಲು ಯಾವ ಅಸ್ತ್ರ ಪ್ರಯೋಗಿಸಲಿದ್ದೀರಿ!? ಯಾವ ರೀತಿ ಅವರೊಂದಿಗೆ ಮಾತನಾಡಲಿದ್ದೀರಿ?’ ಎಂದು ಕೇಳಿದ.

ಶಾಸ್ತ್ರೀಜಿಯವರ ಕಡೆಯಿಂದ ಒಂದೇಕ್ಷಣದಲ್ಲಿ ಉತ್ತರ ಬುಲ್ಲೆಟ್ಟಿನಂತೆ ತೂರಿ ಬಂತು. “ಕೈಸೆ ಬಾತ್ ಕರೇಂಗೇ ಮತಲಬ್!? ಹಮ್ ಸರ್ ಉಠಾ ಕೆ ಬಾತ್ ಕರೇಂಗೆ. ಔರ್ ವೋಹ್ ಸರ್ ಝುಕಾ ಕೆ” (ಹೇಗೆ ಮಾತನಾಡುತ್ತೇನೆಂದರೆ ಏನರ್ಥ!? ನಾನು ಸಂಪೂರ್ಣವಿಶ್ವಾಸದಿಂದ ತಲೆಯೆತ್ತಿ ಮಾತನಾಡುತ್ತೇನೆ. ಆವನು ತಲೆತಗ್ಗಿಸಿ ನನ್ನ ಮಾತು ಕೇಳುತ್ತಾ ಮಾತನಾಡುತ್ತಾನೆ).

ಆ ಪುಟ್ಟಜೀವದ ಅದಮ್ಯ ಆತ್ಮವಿಶ್ವಾಸದ ಮಾತು ಕೇಳಿ, ದೆಹಲಿಯ ಜನವರಿಯ ಚಳಿಯಲಿ ಗಡಗಡ ನಡುಗುತ್ತಿದ್ದ ಪತ್ರಕರ್ತರ ಗುಂಪಿನ ನಡುವೆ, ಒಂದು ಸಣ್ಣ ಸೂಜಿಬಿದ್ದರೂ ಕೇಳುವಷ್ಟು ನಿಶ್ಯಬ್ದವಿತ್ತು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s