ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೯

ಈ ಸರಣಿಯಲ್ಲಿ ಒದಗಿಬರುವ ಹೆಚ್ಚಿನ ಕಥೆಗಳು ಒಂದೋ ರಾಜಕೀಯ ನಾಯಕರದ್ದು ಅಥವಾ ಲೇಖಕರದ್ದು. ಎರಡೂ ಸಹ ಪ್ರಖರ ವಾಗ್ಮಿಗಳ ಲೋಕ. ಪದಗಳೊಂದಿಗೆ ಆಟವಾಡುವವರ ಜಗತ್ತು. ಆದರೆ ಪದಸಂಪತ್ತಿನ ಜೊತೆ ಚತುರತೆಯೂ ಮುಖ್ಯ. ಸಿಕ್ಕಿಹಾಕಿಕೊಂಡಿರುವ ಪೇಚಿನಿಂದ ಹೊರಬರುವುದರೊಂದಿಗೆ ಎದುರಾಳಿಯನ್ನು ಗಪ್-ಚುಪಾಗಿಸುವುದು ಒಂದು ಕಲೆಯೇ ಸರಿ. ಸ್ವಲ್ಪ ಹೆಚ್ಚುಕಮ್ಮಿಯಾದರೂ, ನಮಗೇ ಡಬಲ್ ಪೇಚು. ಒಂದುರೀತಿಯಲ್ಲಿ ಮುಳ್ಳಿನಮೇಲೆ ಬಿದ್ದಿರುವ ಬಟ್ಟೆಯನ್ನು ಬಿಡಿಸಿದಂತೆ.

ಇವತ್ತಿನ ಪ್ರಸಂಗ ಅಮೇರಿಕನ್ ಲೇಖಕ ಹಾಗೂ ಚಿತ್ರಕಥೆಗಾರ ‘ಟ್ರೂಮನ್ ಕಪೋಟಿ’ಯದ್ದು. ಟ್ರೂಮನ್ ಬಹುಮುಖ ಪ್ರತಿಭೆ. ಅವನ ‘ಬ್ರೇಕ್ಫಾಸ್ಟ್ ಅಟ್ ಟಿಪನೀಸ್’, ‘ಇನ್ ಕೋಲ್ಡ್ ಬ್ಲಡ್’ ಕಥೆಗಳು ಮನಮೋಹಕ ಹಾಗೂ ರೋಮಾಂಚಕ. ಟ್ರೂಮನ್ನನ ಸುಮಾರು 20ಕ್ಕೂ ಹೆಚ್ಚು ಕಥೆ/ನೀಳ್ಗತೆಗಳು ಚಲನಚಿತ್ರ ಅಥವಾ ನಾಟಕಗಳಾಗಿ ನಿರ್ಮಾಣವಾಗಿವೆ. ಇದರ ಜೊತೆಗೊಡಗೂಡಿ ಟ್ರೂಮನ್ ತಾನೊಬ್ಬ ಸಲಿಂಗಿಯೆಂದು ಮುಕ್ತವಾಗಿಯೇ ಹೇಳಿಕೊಳ್ಳುತ್ತಿದ್ದ. ಆದರೂ ಯಾವುದೇ ‘ಸಲಿಂಗಿಗಳ ಹಕ್ಕೊತ್ತಾಯ’ದ ಸಭೆ, ಪರೇಡುಗಳಲ್ಲಿ ಭಾಗವಹಿಸದೇ ಅವುಗಳಿಂದ ದೂರವಿದ್ದ. ಅವುಗಳೆಲ್ಲಾ ಬರೀ ಬೂಟಾಟಿಕೆಯೆಂದು ಜರಿಯುತ್ತಿದ್ದ ಟ್ರೂಮನ್ನನನ್ನು ಸಲಿಂಗಿಗಳೂ ಇಷ್ಟಪಡುತ್ತಿರಲಿಲ್ಲ, ಬೇರೆ ಜನರೂ ಇಷ್ಟಪಡುತ್ತಿರಲಿಲ್ಲ. ಎಲ್ಲರಿಂದಲೂ ಸಮಾನರೀತಿಯಿಂದ ದ್ವೇಷಿಸಲ್ಪಡುತ್ತಿದ್ದ ಟ್ರೂಮನ್ ಒಬ್ಬ ವರ್ಣರಂಜಿತ ವ್ಯಕ್ತಿತ್ವದವ.

ಟ್ರೂಮನ್ ತನ್ನ ‘ಇನ್ ಕೋಲ್ಡ್ ಬ್ಲಡ್’ ಪುಸ್ತಕ ಬಿಡುಗಡೆ ಸಮಯದಲ್ಲಿ, ಚಿಕಾಗೋದಲ್ಲೊಂದು ಕಾರ್ಯಕ್ರಮ ಮುಗಿಸಿ ಹೊರಬಂದಾಗ, ತನ್ನನ್ನು ಮುತ್ತಿಕೊಂಡ ಅಭಿಮಾನಿಗಳಿಗೆ ಹಸ್ತಾಕ್ಷರ ನೀಡುತ್ತಿದ್ದ. ಅವನನ್ನು (ಮತ್ತವನ ಸಲಿಂಗಾಕರ್ಷಣೆಯನ್ನು) ಗೇಲಿ ಮಾಡಲೋಸುಗ ಕುಡುಕನೊಬ್ಬ, ಸಾರ್ವಜನಿಕವಾಗಿ ತನ್ನ ಪ್ಯಾಂಟ್ ಬಿಚ್ಚಿ ಗುಪ್ತಾಂಗ ತೋರಿಸುತ್ತಾ ‘ಹೇಯ್ ಟ್ರೂಮನ್!! ಹೇಗಿದ್ದರೂ ಹಸ್ತಾಕ್ಷರ ನೀಡುತ್ತಿದ್ದೀಯ. ನನ್ನ ಬಳಿ ನಿನ್ನ ಯಾವುದೇ ಪುಸ್ತಕವಿಲ್ಲ. ಆದರೆ ನೀನಿಷ್ಟಪಡುವ ‘ಇದು’ ಇದೆ. ಇದರ ಮೇಲೊಂದು ಸಹಿ ಹಾಕು’ ಎಂದ.

ಟ್ರೂಮನ್ ಅವನೆಡೆಗೆ ಮತ್ತು ‘ಅದರೆಡೆಗೆ’ ನೋಡಿ, ‘ಅದರಮೇಲೆ ನನ್ನಿಡೀ ಸಹಿಯನ್ನು ಹಾಕುವುದಕ್ಕೆ ಆಗುವುದು ಅಸಾಧ್ಯ. ಹೆಚ್ಚೆಂದರೆ ನನ್ನ ಇನಿಷಿಯಲ್ ಬರೆಯಬಲ್ಲೆ, ಅಷ್ಟೇ’ ಎಂದ.

ಕುಡುಕನಿಗೆ ಅರ್ಥವಾಯ್ತು. ಮೂತಿಯನ್ನು ಕೆಂಪಾಗಿಸಿಕೊಂಡು ಝಿಪ್ ಎಳೆದು ಮುಂದೆ ಹೋದ. ಉಳಿದವರಿಗೆ ಅರ್ಥವಾಗಲು ಸ್ವಲ್ಪ ಹೊತ್ತು ಬೇಕಾಯ್ತು. ಆದರೆ ಅರ್ಥವಾದ ನಂತರ, ಟ್ರೂಮನ್ನನ ಮಾತಿನ ಚಾಟಿಯೇಟಿಗೆ ದಂಗಾಗಿ ಯಾರೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅಲ್ಲಿ ನಿಜಕ್ಕೂ ಸೂಜಿ ಬಿದ್ದರೆ ಕೇಳುವಷ್ಟು ನಿಶ್ಯಬ್ಧವಿತ್ತು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s