ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೮

ಇವತ್ತು ಶಿಕ್ಷಕರ ದಿನಾಚರಣೆ. ಅಂದಮೇಲೆ ಈ ಅಂಕಣದಲ್ಲೂ ಅವರನ್ನೊಮ್ಮೆ ನೆನಸಿಕೊಳ್ಳಬೇಕಲ್ಲವೇ. ಶಿಕ್ಷಕರು ಎಂದಕೂಡಲೇ ನಮಗೆ ಥಟ್ಟನೇ ನೆನಪಾಗುವುದೇ ಡಾ| ಸರ್ವೇಪಲ್ಲಿ ರಾಧಾಕೃಷ್ಣನ್. ಅತ್ಯುತ್ತಮ ವಾಗ್ಮಿಯಾಗಿದ್ದ ನಮ್ಮ ಮೊದಲ ಉಪರಾಷ್ಟ್ರಪತಿ ಹಾಗು ಎರಡನೇ ರಾಷ್ಟ್ರಪತಿ ರಾಧಾಕೃಷ್ಣನ್ ಅವರು ತಮ್ಮ ರಾಜಕೀಯಕ್ಕೆ ಬಹಳ ತಡವಾಗಿ ಕಾಲಿಟ್ಟವರು. ರಾಜಕೀಯ ಜೀವನದಲ್ಲಿ ಯಾರನ್ನೂ ಮಾತಿನಲ್ಲಾಗಲೀ, ಕೃತಿಯಲ್ಲಾಗಲೀ ನೋಯಿಸಿದವರಲ್ಲ. ಖಡಕ್ ಆದರೂ ಮಿತಭಾಷಿ, ಹಿತನುಡಿ, ಸದಾ ‘ಸರಿ’ಯಾಗಿದ್ದಂತ ವ್ಯಕ್ತಿತ್ವ. ಬಹುಷಃ ತಮ್ಮ ವೃತ್ತಿಜೀವನದಲ್ಲಿ ಯಾವುದೇ ವಿವಾದವಿಲ್ಲದೇ ನಡೆದುಕೊಂಡ ಸ್ವಲ್ಪವೇ ರಾಜಕಾರಣಿ/ರಾಷ್ಟ್ರಪತಿಗಳಲ್ಲಿ, ಡಾ| ರಾಧಾಕೃಷ್ಣನ್ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ.

ಇಂತಹ ಮಿತಭಾಷಿ ರಾಧಾಕೃಷ್ಣನ್ ಒಮ್ಮೆ ಹರಿತನಾಲಿಗೆಯ ಚರ್ಚಿಲ್ ಅವರನ್ನು ಭೇಟಿಯಾಗುವ ಸಂಧರ್ಭ ಒಂದಗಿಬಂತು. ಅದೊಂದು ಬ್ರಿಟೀಷ್ ಸರ್ಕಾರೀ ಔತಣ. ಚರ್ಚಿಲ್’ರಿಗೆ ಭಾರತೀಯರ ಮೇಲಿದ್ದ ಆದರ, ಗೌರವ ಸ್ವಲ್ಪ ಕಡಿಮೆಯೇ. ಅದಕ್ಕೆ ತದ್ವಿರುದ್ದವಾಗಿ ರಾಧಾಕೃಷ್ಣನ್ ಅವರಿಗೆ ಭಾರತೀಯ ವಿಚಾರಧಾರೆ, ತತ್ವಜ್ಞಾನ, ಆಚರಣೆ ಎಲ್ಲವೂ ಗೌರವಪೂರ್ವ. ಜೀವನವಿಡೀ ಅದನ್ನೇ ಭೋಧಿಸಿದವರು ಹಾಗೂ ಅನುಸರಿಸಿದವರು. ಇಂಗ್ಳೀಷರ ಔತಣಕ್ಕೂ ಅವರು ಕಚ್ಚೆಪಂಚೆ ಧರಿಸಿಯೇ ಹೋಗಿದ್ದರು. ಚರ್ಚಿಲರಿಗೆ ಇವರ ಪಕ್ಕದಲ್ಲೇ ಕುಳಿತು ಚರ್ಚಿಸುವ ತವಕ. ಇವರೊಂದಿಗೆ ಮಾತನಾಡುತ್ತಾ ಭಾರತೀಯರ ಬಗ್ಗೆ, ಅವರ ಮೂಡಸಂಪ್ರದಾಯ ಆಚರಣೆಗಳ ಬಗ್ಗೆ ಏನೇನೋ ಹೇಳುತ್ತಲೇ ಇದ್ದ. ನಮ್ಮ ‘ಮೇಷ್ಟ್ರು’ ತಾಳ್ಮೆಯಿಂದ ಕೇಳಿಸಿಕೊಂಡೇ ಕೆಲ ಉತ್ತರಗಳನ್ನೂ ಕೊಡುತ್ತಿದ್ದರು.

ಅಷ್ಟರಲ್ಲಿ ಔತಣಕೂಟದ ಮುಖ್ಯ ಊಟ ಪ್ರಾರಂಭವಾಗುವ ಘಂಟೆ ಬಾರಿಸಲಾಯಿತು. ಪರಿಚಾರಕರು ಊಟದ ಟೇಬಲ್ಲಿನ ಮೇಲೆ ಚಮಚ, ಫೋರ್ಕು, ಚಾಕುಗಳನ್ನಿಡಲು ಪ್ರಾರಂಭಿಸಿದರು. ಎಷ್ಟಂದರೂ ಬ್ರಿಟೀಷ್ ಔತಣ, ಅದರಲ್ಲೂ ಸರ್ಕಾರೀ ಔತಣ ಬೇರೆ. ಅಂದಮೇಲೆ ಫಾರ್ಮಾಲಿಟಿಗಳನ್ನು ಪಕ್ಕಾ ಆಗಿ ಅನುಸರಿಸಬೇಕಲ್ಲವೇ. ಹಾಗಾಗಿ ಬಲಕ್ಕೆ ಮೂರು ಚಮಚಗಳು, ಎಡಕ್ಕೆ ಎರಡು ಫೋರ್ಕು, ಎರಡು ಚಾಕುಗಳು ಎಲ್ಲವನ್ನೂ ನೀಟಾಗಿ ಜೋಡಿಸಿಡಲಾಯ್ತು. ಸೂಪ್ ತಂದಿಟ್ಟಾಯ್ತು. ರಾಧಾಕೃಷ್ಣನ್ ಸೂಪ್ ನಿರಾಕರಿಸಿ ಮುಂದಿನ ಐಟಮ್ ತಂದಿಡಲು ಹೇಳಿದರು. ಸಲಾಡ್ ತಂದಿಡಲಾಯ್ತು. ಚರ್ಚಿಲ್ ಸಲಾಡ್ ಫೋರ್ಕ್ ಕೈಗೆತ್ತಿಕೊಂಡರೆ, ರಾಧಾಕೃಷ್ಣನ್ ಕೈಯಿಂದಲೇ ಕ್ಯಾರಟ್ ಚೂರನ್ನು ಕೈಗೆತ್ತಿಕೊಂಡು ತಿನ್ನಲಾರಂಭಿಸಿದರು. ನಕ್ಕ ಚರ್ಚಿಲ್ ‘ನೋಡಿ ಇದಕ್ಕೇ ನಾನು ಭಾರತೀಯರ ಬಗ್ಗೆ ಕಿಚಾಯಿಸುವುದು. ಸ್ವಚ್ಚತೆಯ ಬಗ್ಗೆ ಅಸಡ್ಡೆ ಅವರಿಗೆ. ಫೋರ್ಕ್ ಉಪಯೋಗಿಸುವುದರ ಬದಲು, ಎಲ್ಲೆಲ್ಲೋ ಉಪಯೋಗಿಸಿದ ಕೈಯನ್ನು ತಿನ್ನಲು ಉಪಯೋಗಿಸುತ್ತಾರೆ. ಎಷ್ಟು ಅನ್’ಹೈಜೀನಿಕ್!!’ ಎಂದ.

ಸ್ವಲ್ಪವೂ ವಿಚಲಿತರಾಗದ ರಾಧಾಕೃಷ್ಣನ್, ಚರ್ಚಿಲರೆಡೆಗೆ ಹಾಗೂ ಇತರರೆಡೆಗೆ ನೋಡುತ್ತಾ ‘ಕಡೇ ಪಕ್ಷ ನನ್ನ ಕೈ ಎಲ್ಲೆಲ್ಲಿ ಉಪಯೋಗಿಸಿದ್ದೇನೆ ಎಂಬ ಅರಿವು ನನಗಿದೆ. ಹಾಗೂ ಊಟಕ್ಕೆ ಮುಂಚೆ ತೊಳೆದಿದ್ದೇನೆ ಎಂಬ ಗ್ಯಾರಂಟಿಯೂ ನನಗಿದೆ. ನನ್ನ ಕೈಯ ಮೂಲಕ ಬೇರೆಯವರ್ಯಾರೂ ಎಂದಿಗೂ ಏನನ್ನೂ ತಿಂದಿರಲು ಸಾಧ್ಯವೇ ಇಲ್ಲ ಎಂಬುದೂ ನನಗೆ ನೂರಕ್ಕೆ ನೂರು ಗ್ಯಾರಂಟಿಯಿದೆ. ಅಂದಮೇಲೆ ಫೋರ್ಕಿಗಿಂತ ಕೈಯೇ ಹೆಚ್ಚು ಹೈಜೀನಿಕ್ ಅಲ್ಲವೇ?’ ಎಂದು ಕ್ಯಾರಟ್ ಮುಗಿಸಿದರು.

ಚರ್ಚಿಲ್ ಗಂಟಲಲ್ಲಿ ಸಲಾಡ್ ಸಿಕ್ಕಿಕೊಂಡು, ಮುಂದಿನ ಸ್ವಲ್ಪ ಕಾಲ ಮಾತನಾಡಲಾಗದೇ, ಸೂಜಿಯೇನು..ಇಡೀ ಸ್ಟೀಲ್ ಫ್ಯಾಕ್ಟರಿಯೇ ಕುಸಿದೂ ಬಿದ್ದರೂ ಮಾತಾನಾಡಲಾಗದಂತೆ, ಅಲ್ಲಿ ಮೌನವಿತ್ತು. ಯಾರೋ ‘ಸುರ್ರ್ರ್..’ ಎಂದು ಸೂಪ್ ಎಳೆದು ಮೌನಭಂಗ ಮಾಡಿದರಂತೆ.

ಎಲ್ಲರಿಗೂ ಶಿಕ್ಷರರ ದಿನಾಚರಣೆಯ ಶುಭಾಶಯಗಳು

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s