ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೭

ಅಸೂಯೆ, ಮತ್ತು ಅಹಂಕಾರ ಇವೆರಡು ಇದ್ದಲ್ಲಿ ಸಮರಗಳಿಗೇನು ಬರ ಅಲ್ವಾ? ಆದರೆ, ಜಗಳ ಆಡುವ ಜನರು ಸಭ್ಯರಾಗಿದ್ದರೆ ಅವರು ದೈಹಿಕಸಮರಕ್ಕಿಳಿಯದೇ, ಮಾತಿನ ಸಮರದಲ್ಲಿ ಒಬ್ಬರನ್ನೊಬ್ಬರು ಮಣ್ಣುಮುಕ್ಕಿಸುವುದುಂಟು. ಇವತ್ತಿನ ಘಟನೆ ಕ್ರೀಡಾಜಗತ್ತಿನಿಂದ. ಗಂಟೆಗಟ್ಟಲೇ ದೇಹದಂಡಿಸಿ, ಕ್ರೀಡಾ ಮೈದಾನದಲ್ಲಿ ಒಬ್ಬರನ್ನೊಬ್ಬರು ಗೆಲ್ಲಲು ಪರಿಶ್ರಮಿಸುವ ಕ್ರೀಡಾಪಟುಗಳಲ್ಲಿ, ಅನೇಕ ಉತ್ತಮ ವಾಗ್ಮಿಗಳೂ, ಚಟಾಕಿಹಾರಿಸಿ ಚಾಟಿಯೇಟು ನೀಡುವವರೂ ಬಹಳಷ್ಟುಮಂದಿ ಬಂದು ಹೋಗಿದ್ದಾರೆ. ನವಜೋತ್ಸಿಂಗ್ ಸಿದ್ಧು ಅವರನ್ನೂ ಈ ಪಟ್ಟಿಗೆ ಸೇರಿಸಿ, ಕೆಲವರು ಕುಚೋದ್ಯ ಮಾಡುವುದುಂಟು 🙂

ಕ್ರೀಡೆ ಎಂದಕೂಡಲೇ ನಮ್ಮ ದೇಶದ ಜನರಿಗೆ ಕನವರಿಕೆ ಬರುವುದೇ ಕ್ರಿಕೆಟ್ಟಿನದು. ಅದಕ್ಕೆ ಸರಿಯಾಗಿ ಕ್ರಿಕೆಟ್ಟು ‘ಸಭ್ಯರ ಆಟ, ಜಂಟಲ್ಮೆನ್ಸ್ ಗೇಮ್’ ಎಂದೆಲ್ಲಾ ಅನ್ನುವುದುಂಟು. ಹಾಗಿದ್ದಮೇಲೆ ‘ಕ್ರಿಕೆಟ್ಟಿನಲ್ಲಿ ನಡೆದ ಕೆಲ ಪ್ರಸಂಗಗಳೂ ಸಭ್ಯಹಾಸ್ಯದ್ದೇ ಆಗಿರಬೇಕಲ್ಲವೇ?’ ಎಂದು ಹುಡುಕಿದ ನನಗೆ ದೊಡ್ಡದೊಂದು ಪಟ್ಟಿಯೇ ಸಿಕ್ಕಿತು. ಅದರಲ್ಲೊಂದು ಆಯ್ದ ಕಥೆ ಇಲ್ಲಿದೆ.

ಆಸ್ಟೇಲಿಯ ಕ್ರಿಕೆಟ್ ತಂಡ. ಈ ಹೆಸರು ಹೇಳಿದಕೂಡಲೇ ನಮಗೆ ನೆನಪಿಗೆ ಬರುವುದು ಅಲ್ಲಿಯ ಮನಮೋಹಕಶೈಲಿಯ ಆಟಗಾರರು, ಅವರ ಜಿಗುಟು ಛಲ ಮತ್ತು ಮೈದಾನದಲ್ಲಿ ಅವರುಗಳು ಪಾತ್ರಗಳಾದ ಹಲವಾರು ವಾಗ್ಯುದ್ದಗಳು (ಕ್ರಿಕೆಟ್ ಭಾಷೆಯಲ್ಲಿ ಇದಕ್ಕೆ ಸ್ಲೆಡ್ಜಿಂಗ್ ಎಂದೂ ಕರೆಯುತ್ತಾರೆ). ಆಸ್ಟ್ರೇಲಿಯನ್ನರಲ್ಲಿ ಸ್ಲೆಡ್ಗಿಂಗಿನದ್ದೊಂದು ಪರಂಪರೆಯೇ ನಡೆದು ಬಂದಿದೆ. ಅದಕ್ಕೋಸ್ಕರವೇ ಅವರ ತಂಡದಲ್ಲೊಬ್ಬ ಕೋಚ್ ಇರುತ್ತಾನೇನೋ ಎನ್ನುವಷ್ಟರ ಮಟ್ಟಿಗೆ ಕಥೆಗಳು ನಡೆದಿವೆ.

ಇಂತಿರ್ಪ ಆಸ್ಟ್ರೇಲಿಯಾದ ಸುಂದರ ಮೊಗದ ಆಟಗಾರ ಮಾರ್ಕ್ ವಾ, 2001ರಲ್ಲಿ ಇಂಗ್ಲೆಂಡ್ ಪ್ರವಾಸದ ತಂಡದಲ್ಲಿದ್ದ. ಆ ಸರಣಿಯ ಟೆಸ್ಟ್ ಮ್ಯಾಚ್ ಒಂದಕ್ಕೆ, ಇಂಗ್ಲೆಂಡಿನ ತಂಡದಲ್ಲಿ, ಇಂಗ್ಲೆಂಡಿಗೇ ಆಶ್ಚರ್ಯವಾಗುವಂತೆ ಜಿಮ್ಮಿ ಆರ್ಮಂಡ್ ಎಂಬೊಬ್ಬ ಅಷ್ಟೇನೂ ಹೆಸರುವಾಸಿಯಲ್ಲದ, ಕೌಂಟಿಮಟ್ಟದ, ಹೊಸ ಬೌಲರ್ ಒಬ್ಬನನ್ನು ಸೇರಿಸಲಾಗಿತ್ತು. ಸಿಗರೇಟು ಮತ್ತು ಬಿಯರಿನ ಆಸಕ್ತ ಜಿಮ್ಮಿ, ಕ್ರಿಕೆಟ್ ಆಟಗಾರರ ಮೈಕಟ್ಟಿಗೆಲ್ಲಾ ಹೋಲಿಸಿದರೆ ಸ್ವಲ್ಪ ದಡೂತಿಯಾಗೇ ಇದ್ದ. ಜಿಮ್ಮಿಯ ಮೊದಲ ಪಂದ್ಯ. ಹೊಸಾ ಆಟಗಾರನೊಬ್ಬ ಕ್ರೀಸಿಗೆ, ಅದರಲ್ಲೂ ಅಂತರರಾಷ್ಟ್ರೀಯಮಟ್ಟದ ಪಂದ್ಯದಲ್ಲಿ ಮೊದಲಬಾರಿಗೆ ಕ್ರೀಸಿಗೆ ಇಳಿದಾಗ, ಆಸ್ಟ್ರೇಲಿಯಾದ ತಂಡಗಳು ಸ್ಲೆಡ್ಜಿಂಗ್ ತಂತ್ರವನ್ನು ಸದಾ ಅನುಸರಿಸಿವೆ. ಜಿಮ್ಮಿ ಕ್ರೀಸಿಗೆ ಬಂದಿಳಿದಾಗ, ಅಲ್ಲೇ ಸಿಲ್ಲಿ ಪಾಯಿಂಟಿನಲ್ಲಿ ನಿಂತಿದ್ದ ಮಾರ್ಕ್ ವಾ “ಇಲ್ಲೇನು ಮಾಡ್ತಾ ಇದ್ದೀಯಪ್ಪಾ ನೀನು!? ನಿನ್ನ ಟ್ರಾಕ್ ರೆಕಾರ್ಡ್ ನೋಡಿದ್ರೆ ಖಂಡಿತಾ ನೀನು ಇಂಗ್ಲೆಂಡಿನ ರಾಷ್ಟ್ರೀಯ ತಂಡಕ್ಕೆ ಆಡುವಷ್ಟು ಒಳ್ಳೆಯ ಆಟಗಾರನಂತೂ ಅಲ್ಲ” ಅಂತಾ ತಾನಿದ್ದ ಸಿಲ್ಲಿ ಪಾಯಿಂಟಿನಿಂದ ಒಂದು ‘ಸಿಲ್ಲಿ ಪಾಯಿಂಟ್’ ಹಾರಿಸಿ ಕಿಚಾಯಿಸಿದ.

ಅಷ್ಟರಲ್ಲಿ ನುಗ್ಗಿ ಬಂದ ಬಾಲನ್ನು ರಕ್ಷಣಾತ್ಮಕವಾಗಿ ಆಡಿ, ಸಿಲ್ಲಿ ಮಿಡ್-ಆಗ್ ಕಡೆ ಕಳುಹಿಸಿದ ಜಿಮ್ಮಿ, ಕ್ರೀಸಿನಲ್ಲೇ ಎದ್ದುನಿಂತು, ಮಾರ್ಕನೆಡೆಗೆ ನೋಡುತ್ತಾ “ಇರಬಹುದೇನೋ!! ಆದರೆ, ನಿನಗೆ ಹೋಲಿಸಿದರೆ ನಾನೆಷ್ಟೋ ವಾಸಿ. ಕಡೇಪಕ್ಷ ನನ್ನಿಡೀ ಕುಟುಂಬದಲ್ಲಿ ನಾನೇ ಬೆಸ್ಟ್ ಆಟಗಾರ” ಎಂದ 😛

ಮೂರೂವರೆ ಸಾವಿರ ಜನ ಸೇರಿದ್ದ ಸ್ಟೇಡಿಯಮ್ಮಿನ ಆ ಗಲಾಟೆಯ ನಡುವೆಯೂ, ಪಿಚ್ಚಿನ ಮೇಲೆ ಸೂಜಿ ಬಿದ್ದರೂ ಕೇಳುವಷ್ಟು ಮೌನವಿತ್ತು.

*ಮಾರ್ಕ್ ವಾ ಇನ್ನೂ ತನ್ನ ಕ್ರಿಕೆಟ್ ಜೀವನದಲ್ಲಿ ನರಳಿ, ಹೊರಳುತ್ತಿದ್ದಾಗ, ಅವನ ಅವಳಿ ತಮ್ಮ ಸ್ಟೀವ್ ವಾ, ಅಂದಿನ ಆಸ್ಟ್ರೇಲಿಯಾ ತಂಡದ ನಾಯಕನಾಗಿದ್ದ 🙂

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s