ಸಿರಾ – ದಿಮ ವಿನೋದ ಪ್ರಸಂಗಗಳು – ೬

ಸಿರಾ – ದಿಮ ವಿನೋದ ಪ್ರಸಂಗಗಳು – ೬

ರಾತ್ರಿಯ ಎರಡನೇ ಘಳಿಗೆಯಲ್ಲಿ, ಸಿರಾ ತನ್ನ ಅಂತಃಪುರದಲ್ಲಿ ಅತ್ತಿದ್ದಿಂತ್ತ ತಿರುಗಾಡುತ್ತಿದ್ದ. ಮುಖದಲ್ಲಿ ಕಳೆದ ನಾಲ್ಕುದಿನದ ಚಿಂತೆ ಡಾಳಾಗಿ ಇಣುಕಿ, ಗಡ್ಡದ ಮೇಲೂ ಸೋರಿ, ಅದೆಲ್ಲಾ ಬಿಳಿಬಿಳಿಯಾಗಿ ಗೋಚರಿಸುತ್ತಿತ್ತು. ಎರಡು ಬಾರಿ ಊರಿನ ಹೊರಗೆ ಬೀಡು ಬಿಟ್ಟಿರುವ ಟೊಂಯ್ಕಾನಂದ ಸ್ವಾಮಿಗಳನ್ನು ಭೇಟಿಯಾಗಿ ಬಂದರೂ ಮನಸ್ಸಿಗೆ ಸಮಾಧಾನವಿಲ್ಲ. ದಿಮನಿಗೆ ಕರೆಕಳುಹಿಸದರೆ ತಿಳಿಯಿತು, ಅವನು ‘ಮನು ಮತ್ತು ಮಂಡಕ್ಕಿ’ ಎಂಬ ವಿಚಾರದ ಬಗ್ಗೆ ಜನರಿಗೆ ಅರಿವು ಮೂಡಿಸಲು ಗಡಿಪ್ರದೇಶವಾದ ಮಂಗಳಾಪುರಕ್ಕೆ ತೆರಳಿದ್ದಾನೆಂದು ತಿಳಿಯಿತು. “ಇವತ್ತು ಬಂದಿದ್ದಾನಂತೆ. ಅವನ ಬಳಿ ಸಮಾಲೋಚಿಸಿದರೆ ಸ್ವಲ್ಪ ಸಮಾಧಾನವಾದೀತು” ಎಂದುಕೊಳ್ಳುತ್ತಿರುವಾಗಲೇ ದಿಮನ ಪ್ರವೇಶವಾಯಿತು. ಅವನನ್ನು ನೋಡಿದ ಸಿರಾನಿಗೆ ಸಮಾಧಾನವೆನ್ನಿಸಿದರೂ, ದಿಮನಲ್ಲಿ ಏನೋ ಬದಲಾವಣೆಯಾಗಿದೆ ಎಂದೆನ್ನಿಸಿತು. ಎರಡು ಕ್ಷಣಗಳ ನಂತರ ಅದೇನೆಂದು ಹೊಳೆಯಿತು. ಆಕಾಶದಲ್ಲಿದ್ದ ಹುಣ್ಣಿಮೆ ಚಂದ್ರನ ಬೆಳಕು ಕಿಟಕಿಯ ಮೂಲಕ ತೂರಿಬಂದು, ಸದಾ ದಿಮನ ಹೊಳೆಯುವ ತಲೆಯಮೆಲೆ ಬಿದ್ದು, ಪ್ರತಿಫಲಿಸಿ, ಅಂತಃಪುರವನ್ನು ಜಗಮಗಗೊಳಿಸುತ್ತಿತ್ತು. ಇವತ್ತು ಅದು ಆಗುತ್ತಿಲ್ಲ! ಯಾಕೆಂದರೆ, ಸಿರಾ ತನ್ನ ಬೋಳು ತಲೆಯಮೇಲೆ ಅದೇನೋ ದಪ್ಪನಾದ ಕಪ್ಪದೊಂದು ಪದರ ಹೊದ್ದುಕೊಂಡಿದ್ದಾನೆ!!!

ಸಿರಾ ದಿಮನ ಬಳಿ ತಲುಪಿ, ಚಿಕ್ಕದೊಂದು ಆಲಿಂಗನ ನೀಡಿ, ತಲ್ಪದ ಮೇಲೆ ಕುಳಿತನು. ಎಂದಿನಂತೆ ದಿಮ ತನ್ನ ಮೂರ್ಖನಗೆಯೊಂದಿಗೆ ಆತ್ಮವಿಶ್ವಾಸದೊಂದಿಗೆ ಅಲ್ಲಿ ಕುಳಿತು “ಯಾಕೆ ರಾಜನ್. ತಕ್ಷಣ ಬರಬೇಕೆಂದು ಕರೆ ಕಳುಹಿಸಿದ್ದು? ನಾನು ನಿನ್ನೆಯ ‘ಮನು ಮತ್ತು ಮಂಡಕ್ಕಿ’ ವಿಚಾರಧಾರೆಯ ನಂತರ, ಇಂದು ಪಕ್ಕದ ‘ತಾಳ ತಂಬೂರಿನಾಡು’ ದೇಶಕ್ಕೆ ಹೋಗಿ ಅಲ್ಲಿ ‘ವಾಲ್ಮೀಕಿ ಮತ್ತು ವಾಂಗೀಬಾತ್’ ಬಗ್ಗೆ ವಿಚಾರಮಂಡಿಸುವವನಿದ್ದೆ. ನಿಮ್ಮ ಕರೆ ಕೇಳಿ ಎದ್ದೆನೋ ಬಿದ್ದೆನೋ ಎಂದು ಓಡಿ ಬಂದೆ. ಏನಾಯಿತು?” ಎಂದು ಕೇಳಿದ.

“ನೋಡು ದಿಮ. ನೀನಲ್ಲಿಗೆ ಹೋಗದಿದ್ದದ್ದು ಒಳ್ಳೆಯದಾಯಿತು. ಗೂಡಚಾರ ಮೂಲಗಳ ಪ್ರಕಾರ ತಾಳ ತಂಬೂರಿನಾಡಿನ ಹೊಸ ರಾಣಿಯಾದ ಅಜೇಯಲಾಲಿತ್ಯಂಬಾ, ಹಳೆಯ ದ್ವೇಷಗಳ ಕಾರಣಕ್ಕಾಗಿ ನಮ್ಮ ಮೇಲೆ ದಾಳಿಗೆ ಸಿದ್ದತೆ ನಡೆಸಿದ್ದಾಳೆ. ಶ್ರಾವಣದ ಕೊನೆಯ ದಿನ ದಾಳಿ ನಡೆಯಲಿದೆ ಎಂಬ ಸುದ್ದಿಯಿದೆ. ನನ್ನ ಸೈನ್ಯದ ಕುದುರೆಗಳನ್ನೆಲ್ಲಾ ನಿನ್ನ ಸಲಹೆಯಂತೆ ಬೇರೆ ಬೇರೆ ಹೋಬಳಿಗಳಲ್ಲಿ ಕುದುರೆ ಓಟದ ಕೆಂದ್ರಗಳನ್ನು ತೆರೆದು, ತೆರಿಗೆ ಸಂಗ್ರಹಕ್ಕೆ ಬಿಟ್ಟಿದ್ದೇನೆ. ಆನೆಗಳು ಯಾರ್ಯಾರದ್ದೋ ತೋಟಕ್ಕೆ ನುಗ್ಗಿ, ಜನರು ಅವಕ್ಕೆ ಹೊಡೆದದ್ದರಿಂದ ಹೆದರಿ ಕಾಡಿಗೆ ಓಡಿ ಹೋಗಿವೆ. ಸೈನಿಕರನ್ನೆಲ್ಲಾ ನಿನ್ನ ಅಣತಿಯ ಮೇರೆಗೆ ದೇಶದ ಸಾಹಿತಿಗಳು, ಸಂಗೀತಕಾರರು, ನೃತ್ಯಗಾರರು, ಹಾಸ್ಯಗಾರರು ಮತ್ತು ಮಾತುಗಾರರ ಮನೆಯ ಕಾವಲಿಗೆ ಹಾಕಿದ್ದೇನೆ. ದಾಳಿಗೆ ಇರುವುದೇ ಮಂದಿನ ಎರಡುವಾರಗಳಲ್ಲಿ. ಎಲ್ಲರನ್ನೂ ಒಟ್ಟುಗೂಡಿಸಿವುದ್ಯಾವಾಗ? ತರಬೇತಿ ಕೊಡುವುದ್ಯಾವಾಗ? ಯುದ್ದ ಗೆಲ್ಲುವುದ್ಯಾವಾಗ!? ಎಂಬ ಚಿಂತೆಯಾಗಿದೆ” ಎಂದಿ ಸಿರಾ ಉದ್ಗರಿಸಿದ.

ಅದಕ್ಕೆ ದಿಮ ತನ್ನ ನಿಲುವಂಗಿಯನ್ನು ಕಾಲ್ಬಲದ ಮೂಲಕ ಅಗಲಿಸಿ ತನ್ನನ್ನು ತಣ್ಣಗಾಗಿಸಿಕೊಳ್ಳುತ್ತಾ “ಅಯ್ಯೋ ರಾಜನ್. ಇದಕ್ಕೆ ಬೇಕಾಗಿರುವುದು ಕುದುರೆ ಆನೆ ಸೈನ್ಯವಲ್ಲ. ತಕ್ಷಣ ಕರೆ ಕಳುಹಿಸಿ ಡಿಲೈಟಾನಂದರ ಆಶ್ರಮದಿಂದ ನೂರೈವತ್ತು ಕಲ್ಲುತೂಕದಷ್ಟು ರಕ್ತಚಂದನಾಮೃತ ಎಂಬ ತೈಲ ತರಿಸಿ. ಉಳಿದದ್ದನ್ನು ನಾನು ನೋಡಿಕೊಳ್ಳುತ್ತೇನೆ” ಎಂದ.

ಸಿರಾನಿಗೆ ಕೋಪ ಬಂದರೂ ಸಹ ‘ನಿನ್ನ ಹಣೆಯಲ್ಲಿ ಬರೆದಿರುವುದೇ ಇಂತಹ ಸಲಹೆಗಾರರು. ಬೇಡ, ಸಿಟ್ಟು ಬೇಡ. ಇವನೂ ಬಿಟ್ಟುಹೋದರೆ ನಿನ್ನ ಕಥೆಯೇನು’ ಎಂದುಕೊಳ್ಳುತ್ತಾ, ಕೋಪ ತಡೆದುಕೊಂಡು ‘ತೈಲಕ್ಕೂ, ಯುದ್ಧಕ್ಕೂ ಎಲ್ಲಿನ ಸಂಬಂಧ ದಿಮ ಜೀ? ಆ ತೈಲ ಕೂದಲ ಬೆಳವಳಣಿಗೆ ಹೆಚ್ಚಿಸಲಿಕ್ಕೆ ಅಲ್ಲವೇ? ನಿಮ್ಮ ತಲೆಯಮೇಲೆ ಇದ್ಯಾಕೋ ಕೂದಲ ರಾಶಿ ಬೇರೆ ಬೆಳೆಸಿಕೊಂಡು ಬಂದಿದ್ದೀರಿ!! ನನಗಂತೂ ಅರ್ಥವಾಗುತ್ತಿಲ್ಲ. ಬಿಡಿಸಿ ಹೇಳಿ’ ಎಂದ.

ದಿಮ ಅದಕ್ಕೇ “ರಾಜನ್, ನಾನು ಅಸಂಬದ್ಧ ಮಾತನಾಡುವುದರಲ್ಲಿ ಎತ್ತಿದ ಕೈ ಎಂದು ನಿಮಗೆ ಗೊತ್ತಿದೆ ತಾನೇ? ಆದರೂ ಸಹ ಜನರು ನನ್ನೆಡೆಗೆ ಪ್ರೀತಿಯಿಂದ ದಯಪಾಲಿಸುವ ಕೋಪ, ಕಲ್ಲು, ಮೊಟ್ಟೆಗಳಿಂದ ನನ್ನನ್ನು ನಾನು ಹೇಗೆ ಬಚಾಯಿಸಿಕೊಳ್ಳುತ್ತಿದ್ದೇನೆ, ಗೊತ್ತೇ? ಈ ರಕ್ತಚಂದನಾಮೃತದಿಂದಲೇ. ಮೊನ್ನೆ ಮಂಗಳಾಪುರದಲ್ಲಂತೂ ಈ ಮೊಟ್ಟೆಗಳ ಉಪತಳ ಹೆಚ್ಚಾಯಿತು. ಅದಕ್ಕೇ ಇದನ್ನು ನಾನು ಮೊನ್ನೆಯಷ್ಟೇ ನನ್ನ ತಲೆಯಮೇಲೆ ಮತ್ತು ಮೈಕೈ ಮೇಲೆಲ್ಲಾ ಬಳಿದುಕೊಂಡಿದ್ದೇನೆ. ಹೇಗೆ ಕೂದಲು ಬೆಳೆದಿದೆ ನೋಡಿ. ಈಗ ನನ್ನೆಡೆಗೆ ಜನರು ಎಸೆಯುವ ಎಲ್ಲಾ ವಸ್ತುಗಳೂ ಇದರಲ್ಲಿ ಸಿಕ್ಕಿ ಹಾಕಿಕೊಳ್ಳುತ್ತವೆ. ನನಗೆ ಪೆಟ್ಟೇ ಆಗಲ್ಲ. ಅಷ್ಟೇ ಅಲ್ಲ, ಮನೆಯಲ್ಲೀಗ ಮೂರು ಹೊತ್ತೂ ಮೊಟ್ಟೆಯ ಪದಾರ್ಥವೇ. ಊಟದ ಖರ್ಚೂ ಉಳಿತಾಯ. ಅಷ್ಟೇ ಅಲ್ಲದೆ, ಒಂದೆರಡು ಮೊಟ್ಟೆಗಳು ಕೂದಲಲ್ಲಿ ಸಿಕ್ಕಿಹಾಕಿಕೊಂಡು ಹೊರಬರದೆ ಅಲ್ಲೇ ಮರಿಗಳಾಗಿ, ಅಲ್ಲೇ ಗೂಡುಕಟ್ಟುತ್ತಿವೆ. ಕೂದಲನಡುವಿನ ಹೇನು ಸೀರುಗಳನು ತಿಂದು ಬೆಳೆದು, ಸಧ್ಯದಲ್ಲೇ ಮೊಟ್ಟೆ ಇಡಲಿವೆ. ನಂತರ ಅವನ್ನೆಲ್ಲಾ ಮಾರುವ ಉಪಾಯವೂ ಇದೆ.. ಹೇಗಿದೆ ನನ್ನ ವ್ಯಾಪಾರಜ್ಞಾನ?” ಎಂದು ಕಣ್ಣುಮಿಟುಕಿಸಿ ಮುಂದುವರೆಸಿದ.

“ಹಾಗೆಯೇ, ನಮ್ಮ ಸೈನಿಕರನ್ನೆಲ್ಲಾ ಕರೆಸಿ, ಅವರಿಗೆ ಮುಂದಿನ ವಾರವಿಡೀ ಈ ತೈಲದಿಂದ ಅಭ್ಯಂಗ ಮಾಡಿಸಿದರೆ, ಕೇಶರಾಕ್ಷಸರ ಒಂದು ಪಡೆಯೇ ತಯಾರಾಗುತ್ತದೆ. ಅವರಿಗೆ ಕುದುರೆ, ಆನೆ ಯಾವುದೂ ಬೇಡ. ಯಾಕೆಂದರೆ ಶತ್ರುಗಳ ಬಾಣಗಳು ಅವರ ಕೂದಲಿನ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ. ಅವರ ಖಡ್ಗಗಳಿಗೆ ನಮ್ಮ ಸೈನಿನ್ಕರು ಬರೀ ಕೈ ಅಡ್ಡ ಕೊಟ್ಟರೇ ಸಾಕು. ಖಡ್ಗಗಳು ಮೊನಚು ಕಳೆದುಕೊಳ್ಳುತ್ತವೆ. ಮೈಮೇಲೆ ಕವಚ, ತಲೆಯಮೇಲೆ ಶಿರಸ್ತ್ರಾಣಗಳೂ ಬೇಡ. ನನ್ನ ಸಲಹೆ ಅನುಸರಿಸಿ, ಆ ಕವಚ ಶಿರಸ್ತ್ರಾಣದ ಲೋಹವನ್ನೆಲ್ಲಾ ಕರಗಿಸಿ, ನಿಮ್ಮದೂ ನನ್ನದೂ ಒಂದು ನೂರು ಅಡಿ ಎತ್ತರದ ಪುತ್ತಳಿ ಮಾಡಿಸೋಣ. ಆಮೇಲೆ ಅದನ್ನು ನಗರದ ಮಧ್ಯದಲ್ಲಿ ನಿಲ್ಲಿಸಿ, ಅದರ ಮೇಲಿಂದ ನಾವಿಬ್ಬರೂ ಸೂರ್ಯಾಸ್ತಮಾನವನ್ನು ವೀಕ್ಷಿಸಬಹುದು. ಹಾಗೆಯೇ ಇಂತಹದ್ದೊಂದು ಬೃಹತ್ ನಿರ್ಮಾಣಕ್ಕಾಗಿ, ನಮ್ಮ ಹೆಸರೂ ಚರಿತ್ರೆಯಲ್ಲಿ ಅಚಂದ್ರಾರ್ಕ ಸ್ಥಾಯಿಯಾಗಿ ಉಳಿಯುತ್ತದೆ” ಎಂದ.

ಆತ್ಮವಿಶ್ವಾಸದಿಂದ ತುಂಬಿದ ಅವನ ಪ್ರತಿಯೊಂದು ಮಾತಿಗೂ ಸಿರಾನ ಚಿಂತೆಯ ಕಾರ್ಮೋಡ ಕರಗುತ್ತಾ ಬಂತು. ಎರಡು ಕ್ಷಣದ ಹಿಂದಿದ್ದ ಚಿಂತೆಯ ಬದಲು, ಅವನ ಮನದಲ್ಲಿ ಸಂತೋಷ ತುಂಬಲು ಪ್ರಾರಂಭವಾಯ್ತು. ಅದರಲ್ಲೂ, ತಲೆಯ ಮೇಲಿದ್ದ ಗಂಡಾಂತರವನ್ನು ಕಳೆಯಿಸಿ, ಅದರ ಸ್ಥಾನದಲ್ಲಿ ಪುತ್ತಳಿಯ ಸಲಹೆಯೊಂದಿಗೆ, ಇಡೀ ಪರಿಸ್ಥಿತಿಯನ್ನೇ ಧನಾತ್ಮಕವಾಗಿ ಬದಲಾಯಿಸಿದ್ದು ನೋಡಿ, ಸಿರಾ ದಿಗ್ಭ್ರಾಂತನಾದ. ‘ಇಂತಹ ಸಲಗೆಹಾರನಿರುವುದಕ್ಕೇ ನಾನಿನ್ನೂ ಈ ಸಿಂಹಾಸನದ ಮೇಲೆ ಕುಳಿತಿರುವುದು..ಜೈ ಮಾಂಕಾಳಮ್ಮ’ ಎಂದು ಮನಸ್ಸಿನಲ್ಲೇ ಅಂದುಕೊಂಡು, ಮಾತಿಲ್ಲದೇ ಮೂಕನಾಗಿ, ಆನಂದಬಾಷ್ಪ ಸುರಿಸುತ್ತ್ತಾ ದಿಮನ ಚರಣಗಳಲ್ಲಿ ಕುಸಿದು ಕುಳಿತ.

‘ಕೌಟಿಲ್ಯನಿಗಿಂತಾ ಕುಟಿಲ ನಾನು ರಾಜನ್. ಮಂಡೆಬೆಚ್ಚ ಬೇಡ’ ಎನ್ನುತ್ತಾ ಸಿರಾನನ್ನು ಆಶೀರ್ವದಿಸುವುದರೊಂದಿಗೆ. ಕರಾಳದೇಶದ ಚರಿತ್ರೆಯಲ್ಲಿ ಅಧ್ಯಾಯವೊಂದು, ಲೋಕಾಭಿರಾಮವಾಗಿ ಅಲ್ಲದೇ, ಕೇಶಾಭಿರಾಮವಾಗಿ ಮುಗಿಯಿತು.

ಸ್ಕೋರು:
ಸಿರಾ – 1
ದಿಮ – 2

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s