ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೬

ಇವತ್ತಿನ ಮಾತಿನ ಸಮರ ಜಗತ್ತಿನ ಅತೀದೊಡ್ಡ ಶೀತಲ ಸಮರ ನಡೆಯುತ್ತಿದ್ದ ಕಾಲದ್ದು. ಅಂದರೆ 1953-62ರ ಕಾಲಘಟ್ಟದ್ದು. ಅಮೇರಿಕಾ ಮತ್ತು ಸೋವಿಯತ್ ರಷ್ಯಾ ದೇಶಗಳು ಒಬ್ಬರನ್ನೊಬ್ಬರು ಎಲ್ಲ ರೀತಿಯಲ್ಲೂ ಮೀರಿಸಲು ರಣತಂತ್ರಗಳನ್ನು ಹೊಸೆಯುತ್ತಿದ್ದ ಕಾಲ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗುತ್ತಿರಲಿಲ್ಲ. ಯಾವುದೇ ದೇಶದಲ್ಲಿ, ಯಾವುದೇ ವಿಷಯದ ಮೀಟಿಂಗು ನಡೆಯಲಿ, ಆ ವೇದಿಕೆಯಲ್ಲಿ ಈ ಎರಡೂ ದೇಶದ ಅಧಿಕಾರಿಗಳು ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯದೆ ಬಿಡುತ್ತಿರಲಿಲ್ಲ. ಎರಡೂ ದೇಶಗಳ ಅವತ್ತಿನ ಮುಖಂಡರು ಪ್ರಚಂಡ ರಾಜಕಾರಣಿಗಳು. ರಾಜತಾಂತ್ರಿಕತೆಯೆ ನಿಪುಣರಷ್ಟೇ ಅಲ್ಲದೆ, ಮಾತಿನ ಚತುರರೂ ಸಹ. ಭಾಷಣಕ್ಕೆ ನಿಂತರೆ, ಮಾತಿನ ಮೋಡಿಯಿಂದ ಸೇರಿರುವ ಜನರನ್ನೇ ಉದ್ವೇಗಕ್ಕೇರಿಸಿ, ಅಲ್ಲೇ ಒಂದು ಯುದ್ಧ ಮಾಡಿಸಿಬಿಡುವಷ್ಟು ಮಾತಿನ ಮಲ್ಲರು.

ಇಂತಿರ್ಪ್ಪ ಸಮಯದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಕರೆದಾಗ, ಅಮೇರಿಕಾದ ಅಧ್ಯಕ್ಷರಾದ ಡ್ವೈಟ್.ಡಿ.ಐಸೆನ್ಹೋವರ್ ಸ್ವತಃ ಬರುತ್ತಿದ್ದಾರೆಂದು ತಿಳಿದ ರಷ್ಯಾದ ಅಧ್ಯಕ್ಷ ನಿಕಿತಾ ಕೃಶ್ಚೇವ್, ರಷ್ಯಾ ಪರವಾಗಿ ನಿಯೋಗವನ್ನು ಕಳುಹಿಸುವುದರ ಬದಲಿಗೆ ತಾನೇ ಹೋಗಲು ನಿರ್ಧರಿಸಿದರು. ಇಡೀ ವಿಶ್ವವೇ ಈ ಸಭೆಯನ್ನು ಹದ್ದಿನಕಣ್ಣಿನಿಂದ ಗಮನಿಸುತ್ತಿತ್ತು. ಯಾರು ಯಾರಿಗೆ ಸೂಕ್ಷ್ಮವಾಗಿ ತಿವಿಯುತ್ತಾರೆ ಎಂಬುದನ್ನು ಮರುದಿನದ ಹೆಡ್-ಲೈನ್ ಮಾಡಲು ಪತ್ರಿಕಾಗಣ ಕಾದುನೋಡುತ್ತಿತ್ತು. ಐಸೆನ್ಹೋವರ್ ತಮ್ಮ ಭಾಷಣದಲ್ಲಿ ಅಮೇರಿಕಾದ ಹೆಮ್ಮೆಯನ್ನು ಸಾರುತ್ತಾ, Why America is the greatest country on earth ಎಂಬುದೊಂದು ಭಾಷಣವನ್ನೂ ಮಾಡಿದರು. ಸಭೆಯತುಂಬೆಲ್ಲಾ ಕರತಾಡನ.

ಅವತ್ತು ಸಂಜೆ ಐಸೆನ್ಹೋವರ್ ಮತ್ತು ಕೃಶ್ಚೇವ್ ಭೇಟಿ ನಿಗದಿಯಾಗಿತ್ತು. ಉಭಯಕುಶಲೋಪರಿ, ಫೋಟೋಗಳೆಲ್ಲ ನಡೆದ ನಂತರ ಮಾತುಕತೆಗೆ ಕೂತಾಯಿತು. ಮೊದಲ ಮಾತಿನ ಬಗ್ಗೆ ಇಬ್ಬರೂ ಯೋಚಿಸುತ್ತಿರುವಾಗಲೇ ಕೃಶ್ಚೇವ್ ‘ನಿಮ್ಮದೆಂತಹಾ ಸುಳ್ಳು ಭಾಷಣ ಮಾರಾಯ್ರೆ, ಮಧ್ಯಾಹ್ನದ್ದು?’ ಅಂದರು. ಐಸೆನ್ಹೂವರ್ ವಿಚಲಿತರಾಗದೇ ‘ಸುಳ್ಳೇನೂ ಇಲ್ಲ. ನಿರ್ಭಯದಿಂದ ಸತ್ಯವನ್ನು ಮಾತನಾಡುವವರನ್ನು ಕಂಡರೆ ರಷ್ಯಾದವರೆಲ್ಲರಿಗೂ ಅಸೂಯೆಯಿರಬೇಕು’ ಎಂದರು. ಕೃಶ್ಚೇವ್ ಕೇಳಿಸಿಕೊಳ್ಳುತ್ತಲೇ ಇದ್ದ. ‘ಅಮೇರಿಕದಲ್ಲಿರುವಷ್ಟು ವ್ಯಕ್ತಿ ಸ್ವಾತಂತ್ರ್ಯ ಬೇರೆಲ್ಲೂ ಇಲ್ಲ. ಈ ದೇಶದಲ್ಲಿ ಒಬ್ಬ ನಾಗರೀಕ ಬೇಕಾದರೆ ನ್ಯೂಯಾರ್ಕಿನ ಟೈಮ್ಸ್ ಸ್ಕ್ವೇರಿನಲ್ಲಿ ನಿಂತು ‘ಅಮೇರಿಕಾದ ಅಧ್ಯಕ್ಷ ಒಬ್ಬ ಮುಠ್ಠಾಳ’ ಎಂದು ಕೂಗಬಹುದು. ಅವನ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಅವನಿಗಿದೆ. ಅವನನ್ನೇನೂ ಬಂಧಿಸಲಾಗುವುದಿಲ್ಲ ಅಥವಾ ವಿಚಾರಣೆಗೊಳಪಡಿಸಲಾಗುವುದಿಲ್ಲ. ಅಷ್ಟೇ ಏಕೆ, ಅವನ ನಸೀಬಿಗೆ ತಕ್ಕಂತೆ ಅವನಿಗೊಂದು ಫ್ಯಾನ್ ಕ್ಲಬ್ಬು, ಬೆಂಬಲಿಗರೂ ಹುಟ್ಟಿಕೊಳ್ಳಬಹುದು. ಅಷ್ಟರಮಟ್ಟಿಗಿನ ಸ್ವಾತಂತ್ರ್ಯ ಅಮೇರಿಕದಲ್ಲಿದೆ. ರಷ್ಯಾದಲ್ಲಿರುವ ಮಾನವ ಹಕ್ಕುಗಳ ಸ್ಥಿತಿ ನಮ್ಮಲ್ಲಿಲ್ಲ. ನಮ್ಮದು ಪ್ರಜಾಪ್ರಭುತ್ವ’ ಎಂದು ಹೆಮ್ಮೆಯ ನಗೆ ಬೀರಿದ ಐಸೆನ್ಹೂವರ್.

ಕೃಶ್ಚೇವ್ ತನ್ನ ಕಾಫಿ ಹೀರುತ್ತಾ ‘ನೋಡಿ ಮಿ.ಅಧ್ಯಕ್ಷರೇ. ಮಾನವ ಹಕ್ಕುಗಳ ವಿಷಯಕ್ಕೆ ಬಂದರೆ ಇಂತಹುದೇ…..ಬಹುಷಃ ಇದಕ್ಕಿಂತಾ ಒಳ್ಳೆಯ ಪರಿಸ್ಥಿತಿ ನಮ್ಮ ರಷ್ಯಾದಲ್ಲಿದೆ’ ಎಂದ. ಐಸೆನ್ಹೂವರ್ರಿಗೆ ಆಶ್ವರ್ಯ! ಹುಬ್ಬೇರಿಸಿ ವ್ಯಂಗ್ಯ ನಗುಬೀರುತ್ತಾ ‘ಇಷ್ಟರಮಟ್ಟಿಗಿನ ಸ್ವಾತಂತ್ರ್ಯ ನಿಮ್ಮ ದೇಶದಲ್ಲಿ ಬಂದ ದಿನ, ಜಗತ್ತು ಖಂಡಿತಾ ಒಳ್ಳೆಯ ದಿನಗಳನ್ನು ನೋಡುತ್ತದೆ. ಜೋಕ್ ಸಾಕು’ ಎಂದ.

ಕೃಶ್ಚೇವ್ ಅದಕ್ಕೆ ‘ನೋಡಿ ನನಗೆ ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನಿಮ್ಮಷ್ಟು ಗೊತ್ತಿಲ್ಲ. ಆದರೆ, ನಮ್ಮಲ್ಲಿ ಆಗಲೇ ನೀವು ಹೇಳಿದಕ್ಕಿಂತಾ ಒಳ್ಳೆಯ ಪರಿಸ್ಥಿತಿ ಇದೆ. ಬೇಕಾದರೆ ನಾನು ನಿರೂಪಿಸಿ ತೋರಿಸುತ್ತೇನೆ. ನನ್ನೂರು ಮಾಸ್ಕೋದ ರೆಡ್ ಸ್ಕ್ವೇರಿನಲ್ಲಿ ಯಾರಾದರೂ ನಿಂತು ‘ಅಮೇರಿಕಾದ ಅಧ್ಯಕ್ಷ ಒಬ್ಬ ಮುಠ್ಠಾಳ’ ಎಂದು ಕೂಗಿದರೆ, ಬಂಧನ, ವಿಚಾರಣೆ ಆಗುವುದು ಹಾಗಿರಲಿ. ಅವನಿಗೊಂದು ಸೋವಿಯತ್ ರಷ್ಯಾದ ಗೌರವಾನ್ವಿತ ಮೆಡಲ್ ಸಿಕ್ಕಿದರೂ ಸಿಗಬಹುದು. ನಿಮ್ಮ ದೇಶದಲ್ಲಿ ಹೀಗಾಗುವುದು ಸಾಧ್ಯವುಂಟೇ’ ಎನ್ನುತ್ತಾ ಕಾಫಿ ಹೀರುವುದ ಮುಂದುವರೆಸಿದ.

ಕೃಶ್ಚೇವ್ ಕಾಫಿ ಹೀರುವ ಸದ್ದು ಬಿಟ್ಟರೆ ಆ ರೂಮಿನಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದ ಆವರಿಸಿತ್ತು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s