ಬುದ್ಧಿಗೊಂದು ಗುದ್ದು – ೨೯

ಬುದ್ಧಿಗೊಂದು ಗುದ್ದು – ೨೯

ಬ್ಲೂಟೂಥಿನ ದಂತಕಥೆ!

ಈಗಿನ ಹುಡುಗ್ರು ಬಿಡ್ರೀ ತುಂಬಾ ಫಾಸ್ಟು. ಮಾತೆತ್ತಿದ್ರೆ ಮೊಬೈಲು, ಕೈಯೆತ್ತಿದ್ರೆ ಕಿಂಡ್ಲ್. ಆ ಹುಡುಗನ ಹತ್ರಾ ಒಳ್ಳೆ ಹಾಡಿದ್ಯಾ, ಯಾವ್ದೋ ಇಂಟರೆಸ್ಟಿಂಗ್ ಪಿಕ್ಚರ್ರಿದ್ಯಾ? ಲೋ ಮಗಾ ನನ್ಗೂ ಕಳ್ಸೋ, ಟೆಥರಿಂಗ್ ಮಾಡ್ತೀನಿ ಅಂತಾರೆ.

ಈ ಮೊಬೈಲ್ ಇಂಟರ್ನೆಟ್, ವೈಫೈ, ನಿಯರ್ ಫೀಲ್ಡ್ ಕಮ್ಯೂನಿಕೇಷನ್ ಇವೆಲ್ಲಾ ಬರೋಕೆ ಮುಂಚೆ (ಓ…ಅಂದ್ರೆ ನಿನ್ ಕಾಲ್ದಲ್ಲಿ ಅಂತಾ ಹುಬ್ಬೇರಿಸ್ತಾ ಇದ್ದೀರಾ, ಇರ್ಲಿ ಬಿಡಿ ತೊಂದ್ರೆ ಇಲ್ಲ 🙂 ), ನಮಗೆ ಈ ರೀತಿ ಒಂದು ಮೊಬೈಲಿಂದ ಇನ್ನೊಂದು ಮೊಬೈಲಿಗೆ ಏನಾದ್ರೂ ಕಳಿಸಬೇಕಾದ್ರೆ ಇದ್ದದ್ದು ಒಂದೋ ಸೂಪರ್ ಸ್ಲೋ ಇನ್ಫ್ರಾರೆಡ್ ಕನೆಕ್ಷನ್ ಅಥ್ವಾ ಅಂದಿನ ಕಾಲಕ್ಕೆ ಸೂಪರ್ ಅಲ್ಟ್ರಾ ಹೈ-ಫೈಯಾಗಿದ್ದ ಬ್ಲೂಟೂಥ್. ಈಗ್ಲೂ ಇಷ್ಟೆಲ್ಲಾ ತಂತ್ರಜ್ಞಾನ ಮುಂದುವರೆದ ಮೇಲೂ ಬ್ಲೂಟೂಥ್ ಜನಪ್ರಿಯತೆಯೇನೂ ಕಡಿಯಾಗಿಲ್ಲ. ಇವತ್ತಿಗೂ ನಿಮ್ ಫೋನನ್ನು ಕಾರಿನಲ್ಲಿ ಉಪಯೋಗಿಸಬೇಕು ಅಂದ್ರೆ ಬ್ಲೂಟೂಥ್ ಬೇಕು. ಹೆಚ್ಚಿನ ವೈರ್ಲೆಸ್ ಸ್ಪೀಕರುಗಳು, ಧ್ವನಿಪ್ರಸರಣಕ್ಕೆ ಬ್ಲೂಟೂಥ್ ತಂತ್ರಜ್ಞಾನವನ್ನೇ ಉಪಯೋಗಿಸುತ್ತವೆ. ಬ್ಲೂಟೂಥಿನ ಸುಲಭ ಜೋಡಣೆ ಮತ್ತು ಸಂವಹನ ತಂತ್ರಜ್ಞಾನವೇ ಅದರ ಈ ಜನಪ್ರಿಯತೆಗೆ ಮೂಲ ಕಾರಣ. ಇವತ್ತಿನ ಸಣ್ಣ ಲೇಖನದಲ್ಲಿ ಈ ಬ್ಲೂಟೂಥ್ ಚಾಲ್ತಿಗೆ ಬಂದದ್ದು ಹೇಗೆ? ಅದ್ಯಾಕೆ ಬ್ಕೂಟೂಥಿಗೆ ನೀಲಿಬಣ್ಣದ ಹಲ್ಲು? ಅದಕ್ಕೆ ಬ್ಲೂಟೂಥ್ ಅಂತಾ ಯಾಕೆ ಕರೆಯುತ್ತಾರೆ? ಅದರ ಚಿಹ್ನೆಯ ಹಿಂದಿನ ಅರ್ಥ? ಇದನ್ನು ತಿಳಿಸುವ ಸಣ್ಣ ಪ್ರಯತ್ನ.

ನೋಡೀ….ಈ ಎಂಜಿನಿಯರ್ರುಗಳ ಕಥೇನೇ ಇಷ್ಟು. ಮೊಬೈಲ್ ಕಂಡುಹಿಡಿದು ಅಲ್ಲಿಗೇ ಮುಗಿಸಲಿಲ್ಲ. ಮೊಬೈಲುಗಳೇನೋ ಜನರನ್ನು ಜೋಡಿಸುತ್ತವೆ, ಆದರೆ ಮೊಬೈಲುಗಳನ್ನ ಒಂದಕ್ಕೊಂದು ಹೇಗೆ ಸಂಪರ್ಕಿಸುವುದು ಹೇಗೆ ಅನ್ನೋ ತಲೆಬಿಸಿಯನ್ನ ತಲೆಗೆ ಹಚ್ಕೊಂಡ್ರು. ಬರೇ ಮೊಬಲುಗಳೇ ಯಾಕೆ! ಫೋನು, ಟೀವಿ, ರೇಡಿಯೋ ಮುಂತಾದ ಎಲ್ಲಾ ವಿದ್ಯುನ್ಮಾನ ಯಂತ್ರಗಳೂ ಒಂದಕ್ಕೊಂದು ಮಾತನಾಡುವಂತಾದರೆ!? ಎಂಬ ಕನಸುಗಳನ್ನೂ ಕಟ್ಟಿಕೊಂಡರು. ಆಗ ಶುರುವಾಗಿದ್ದೇ ಪರ್ಸನಲ್ ಏರಿಯಾ ನೆಟ್ವರ್ಕ್ (PAN) ಅನ್ನೋ ಪರಿಕಲ್ಪನೆ. ಇದರನ್ವಯ ಎಂಜಿನಿಯರ್ರುಗಳು ಸುಮಾರು ಐದು ಮೀಟರ್ ಸುತ್ತಳತೆಯಲ್ಲಿ ಮೊಬೈಲುಗಳು ಒಂದದ ಜೊತೆಗೊಂದು ಸಂವಹಿಸಬಲ್ಲುದರ ಬಗ್ಗೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ತೊಡಗಿದರು. 90ರ ದಶಕದಲ್ಲಿ ಈ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಿದ್ದು ಹುಟ್ಟು ಹಾಕಿದ್ದು, ಎರಿಕ್ಸನ್ ಅನ್ನೋ ಸ್ವೀಡಿಶ್ ಕಂಪನಿ. ನಂತರ ಎರಿಕ್ಸನ್, ಐಬಿಎಮ್, ನೋಕಿಯಾ, ತೋಷೀಬಾ ಮತ್ತು ಇಂಟೆಲ್ ಕಂಪನಿಗಳು ಒಟ್ಟು ಸೇರಿ 1996ರಲ್ಲಿ ಮೊಬೈಲ್ ತಂತ್ರಜ್ಞಾನ ವಿಶೇಷಾಸಕ್ತಿ (Special Interest Group) ಗುಂಪೊಂದನ್ನು ಪ್ರಾರಂಭಿಸಿದವು. ಈ ಗುಂಪು ಬ್ಲೂಟೂಥ್ ತಂತ್ರಜ್ಞಾನವನ್ನು ಹುಟ್ಟುಹಾಕುವುದರಲ್ಲಿ, ಅದನ್ನು ಏಕರೂಪವಾಗಿಸುವಲ್ಲಿ ಮತ್ತು ಅದನ್ನು ನಾವಿಂದು ಉಪಯೋಗಿಸುತ್ತಿರುವ ಮಟ್ಟಕ್ಕೆ ತಲುಪುವುದರಲ್ಲಿ ಮಹತ್ತರವಾದ ಕೆಲಸಗಳನ್ನು ಮಾಡಿತು.

ಈ ತಂಡದಲ್ಲಿದ್ದ ಬೇರೆ ಬೇರೆ ಕಂಪನಿಗಳ ಮಧ್ಯೆ ಸಂಧಾನಕಾರನ ಪಾತ್ರ ವಹಿಸಿದ್ದ, ಇಂಟೆಲ್ ಉದ್ಯೋಗಿ ಜಿಮ್ ಕರ್ಡಾಷ್, ಈ ಪ್ರಾಜೆಕ್ಟ್ ಪ್ರಾರಂಭವಾದ ಸಮಯದಲ್ಲಿ ‘ವೈಕಿಂಗ್ಸ್’ ಎಂಬ ಸ್ಕ್ಯಾಂಡಿನೇವಿಯನ್ ಯೋಧರ ಬಗ್ಗೆ ಪುಸ್ತಕವೊಂದನ್ನು ಓದುತ್ತಿದ್ದ. ಅದರಲ್ಲಿ ಉಲ್ಲೇಖಿಸಿದ್ದ ಹೆರಾಲ್ಡ್ ಗ್ರಾಮ್ಸನ್ (ಚಿತ್ರ – ೧) ಎಂಬ ರಾಜನ ಬಗ್ಗೆ ಉತ್ಸುಕನಾಗಿ, ಅವನ ಬಗ್ಗೆ ಹೆಚ್ಚಿನ ವಿಷಯ ಓದಿದಾಗ ಜಿಮ್’ಗೆ ತಿಳಿದದ್ದೇನೆಂದರೆ, ಈ ಹೆರಾಲ್ಡ್ ಗ್ರಾಮ್ಸನ್ 958ರಿಂದ 970ರವರೆಗೆ ‘ವೈಕಿಂಗ್’ಗಳ ರಾಜನಾಗಿದ್ದ ಮತ್ತು ಆತ ಸ್ಕ್ಯಾಂಡಿನೇವಿಯನ್ ದೇಶಗಳನ್ನು (ನಾರ್ವೆ, ಸ್ವೀಡನ್ ಮತ್ತು ಡೆನ್ಮಾರ್ಕ್) ಅಹಿಂಸಾತತ್ವದಿಂದ ಒಗ್ಗೂಡಿಸಲು ಬಹಳಷ್ಟು ಪ್ರಯತ್ನಗಳನ್ನು ಮಾಡಿದ. ವೈಕಿಂಗರು ಸದಾ ಯುದ್ಧ ಮತ್ತು ರಕ್ತಪಾತದಲ್ಲೇ ನಿರತರಾಗಿದ್ದರಿಂದ, ಅಹಿಂಸೆಯ ಮಾತನಾಡಿದ ಹೆರಾಲ್ಡ್ ಸಹಜವಾಗಿಯೇ ವಿಶೇಷವಾಗಿ ಪರಿಗಣಿಸಲ್ಪಟ್ಟ ಹಾಗೂ ಚರಿತ್ರಾಕಾರರು ಅವನ ಬಗ್ಗೆ ಹೆಚ್ಚಾಗಿಯೇ ಬರೆದರು.

kingbluetooth

ಈ ಹೆರಾಲ್ಡನಿಗೆ ಬ್ಲೂಬೆರ್ರಿ ಹಣ್ಣೆಂದರೆ ಬಹಳ ಇಷ್ಟವಿತ್ತಂತೆ. ಎಷ್ಟು ಇಷ್ಟವೆಂದರೆ, ದಿನವಿಡೀ ಬ್ಲೂಬೆರ್ರಿ ಹಣ್ಣನ್ನೇ ತಿಂದು ಅವನ ಹಲ್ಲುಗಳು ನೀಲಿಬಣ್ಣಕ್ಕೆ ತಿರುಗಿದ್ದವಂತೆ! ಇದರಿಂದಾಗಿ, ಒಂದು ದಂತಕಥೆಯ ಪ್ರಕಾರ (pun intended 🙂 ), ಅವನ ಪೂರ್ತಿಹೆಸರಾದ ಹೆರಾಲ್ಡ್ ಗ್ರಾಮ್ಸನ್ ಬ್ಲಾಟಂಡ್ (King Harald Gramson Blatand) ಎನ್ನುವುದು ಹೆರಾಲ್ಡ್ ಗ್ರಾಮ್ಸನ್ ಬ್ಲೂಟೂಥ್ ಎಂದೇ ಅನ್ವರ್ಥವಾಗಿತ್ತಂತೆ.

ಈ ಕಥೆ ಕೇಳಿದ ಜಿಮ್ ಕರ್ಡಾಷ್, ಈ ಮೊಬೈಲುಗಳನ್ನು ತಂತಿರಹಿತವಾಗಿ ‘ಒಗ್ಗೂಡಿಸುವ’ ಪ್ರಾಜೆಕ್ಟಿಗೂ ಬ್ಲೂಟೂಥ್ ಎಂಬ ಹೆಸರೇ ಸೂಕ್ತವಾದದ್ದೆಂದು ನಿರ್ಧರಿಸಿದ. ಈ ಕಾರಣದಿಂದ, ಮೊಬೈಲುಗಳನ್ನು (ಅಹಿಂಸಾರೀತಿಯಲ್ಲಿ) ಜೋಡಿಸುವ ಈ ತಂತ್ರಜ್ಞಾನಕ್ಕೆ ಬ್ಲೂಟೂಥ್ ಎಂಬ ಹೆಸರೇ ಅಂಟಿಕೊಂಡಿತು.

ಇನ್ನು ಬ್ಲೂಟೂಥ್ ತಂತ್ರಜ್ಞಾನದ ಚಿಹ್ನೆಗೆ ಬಂದರೆ, ಚಿತ್ರ-೨ರಲ್ಲಿ ತೋರಿಸಿದಂತೆ, ಹೆರಾಲ್ಡ್ ಬ್ಲಾಟಂಡ್ ಅಥವಾ (ಹೆರಾಲ್ಡ್ ಬ್ಲೂಟೂಥ್) ಎಂಬ ಪದಗಳ ಮೊದಲಕ್ಷರಗಳ ಲ್ಯಾಟಿನ್ ಅವತರಣಿಕೆಗಳಾದ (H(Haglazl) and B(Berkanan) ಮಿಶ್ರಣವಷ್ಟೇ.

unnamed

ನನಗೆ ಈ ಬ್ಲೂಟೂಥ್ ಕಥೆ ಮೊದಲೇ ಗೊತ್ತಿತ್ತು. ಆದರೆ ಇವತ್ತಷ್ಟೇ ಅದರ ಚೆಹ್ನೆಯ ಬಗೆಗೂ ತಿಳಿದು ಬಂದಿದ್ದು. ಅದಕ್ಕೇ ಬರೆಯೋಣವೆನ್ನಿಸಿತು. ಇಷ್ಟವಾದಲ್ಲಿ, ಬೇರೆಯವರಿಗೂ ತಿಳಿಸಿ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s