ಸಿರಾ – ದಿಮ ವಿನೋದ ಪ್ರಸಂಗಗಳು – ೫

ಸಿರಾ – ದಿಮ ವಿನೋದ ಪ್ರಸಂಗಗಳು – ೫

ಝಳ ತಡೆಯಲಾಗದ ವೈಶಾಖದ ಬಿಸಿಲು. ನಗರದ ಜನರೆಲ್ಲರೂ ಕೊಡೆಹಿಡಿದೋ, ಮುಂಡಾಸು ಕಟ್ಟಿಯೋ, ಅಂಗವಸ್ತ್ರವನ್ನು ತಲೆಯಮೇಲೋ ಹಾಕಿಕೊಂಡೋ, ಆದಷ್ಟೂ ತಮ್ಮನ್ನು ಬಿಸಿಲಿನಿಂದ ರಕ್ಷಿಸಿಕೊಂಡು ತಿರುಗುತ್ತಿದ್ದರೆ, ನಮ್ಮ ದಿಮ ಮಾತ್ರ ಪುರಭವನದ ಮುಂದೆ ನಾಲ್ಕು ರಸ್ತೆ ಸೇರುವಲ್ಲಿ ಬದಿಯಲ್ಲಿ ಕಣ್ಮುಚ್ಚಿ ನಿಂತುಕೊಂಡಿದ್ದ. ಅವನ ಬೋಳುತಲೆಯ ಮೇಲೆ ಬೀಳುತ್ತಿದ್ದ ಸೂರ್ಯ ಪ್ರತಿಫಲಿಸಿ, ಜನರಿಗೆ ಹಗಲುಹೊತ್ತಿನಲ್ಲೇ ಆಕಾಶದಲ್ಲೊಂದು ಸೂರ್ಯ, ದಿಮನ ತಲೆಯ ಮೇಲೊಂದು ಸೂರ್ಯ, ಹೀಗೆ ಎರಡೆರಡು ಸೂರ್ಯ ಕಾಣುವಂತೆ ಭಾಸವಾಗುತ್ತಿತ್ತು. ‘ಒಂದರ ಬಿಸಿಲೇ ತಡೆಯಲಾಗುತ್ತಿಲ್ಲ, ಇದರ ಮಧ್ಯೆ ಇವನದ್ದೊಂದು ಕರ್ಮ!?’ ಎಂದು ಜನರು ಗೊಣಗುತ್ತಿದ್ದರೂ ಅದರೆಡೆಗೆ ಕಿವಿಕೊಡದೆ ದಿಮ ತನ್ನ ಪಾಡಿಗೆ ತಾನು ಬಿಸಿಲಿಗೆ ಕೆಂಪಾಗುತ್ತಾ ನಿಂತಿದ್ದ.

ಬಿಸಿಲಿಗೆ ಅವನ ತಲೆ ಬೆವರಿ, ಅದರ ನೀರೆಲ್ಲಾ ನಿಧಾನವಾಗಿ ಅವನ ಕೆನ್ನೆಯ ಮೇಲಿಳಿದು ಅಲ್ಲಿಂದ ತೊಟ್ಟಿಕ್ಕಿ ಅವನ ಕೆಂಪು ನಿಲುವಂಗಿಯ ಮೇಲೆ ಬಿದ್ದು ಅದೆಲ್ಲಾ ಒದ್ದೆಯಾಗಿ, ಯಾರೂ ಹತ್ತಿರ ಹೋಗಲಾಗದಂತೆ ಬೆವರಿನ ದುರ್ಗಂಧ ಬೀರುತ್ತ ನಿಂತಿದ್ದ ದಿಮನ ಮುಖವೇಕೋ ಬಿಸಿಲಿಗೆ ನಿಂತವರ ಮುಖಕ್ಕಿಂತಾ ಹೆಚ್ಚು ಕೆಂಪಾಗಿತ್ತು! ಅಂತರಾಳದಲ್ಲೇನೊ ದುಗುಡವೋ, ಆರದ ಬೆಂಕಿಯೋ ಏನೋ ಪಾಪ. ಕಿವಿ, ಮೂಗಿನಿಂದ ಸಣ್ಣಗೆ ಹೊಗೆ ಕೂಡಾ ಸೂಸುತಿತ್ತು. ಅವನ ಕಣ್ಣು ಕರಾಳನಾಡಿನ ಜನರ ಭವಿಷ್ಯದಂತೆ ಮುಚ್ಚಿತ್ತು. ಅವನ ನಿಲುವು ಸಿರಾನ ತಲೆಯಲ್ಲಿರುವ ಮೆದುಳಿನಂತೆಯೇ ಓಡದೇ ಅಚಲವಾಗಿ ನಿಂತಿತ್ತು.

ಪಕ್ಕದ ‘ತಾಳ ತಂಬೂರಿನಾಡು’ ದೇಶದಿಂದ ಅವತ್ತಷ್ಟೇ ಕರಾಳನಾಡಿಗೆ ಭೇಟಿನೀಡಿದ್ದ ನೀರ್ಚೆಲ್ವಂ ಎಂಬ ರಾಜದೂತ ಇವನನ್ನು ನೋಡಿ ಆಶ್ಚರ್ಯಗೊಂಡು ಇಲ್ಲೇನು ನಡೆಯುತ್ತಿದೆಯೆಂದು ಅಕ್ಕಪಕ್ಕದವರಲ್ಲಿ ವಿಚಾರಿಸಿದ. ಯಾರಿಗೂ ಗೊತ್ತಿರಲಿಲ್ಲ. ಕೆಲವರಂತೂ ‘ಇವನದ್ದು ಇದ್ದದ್ದೇ. ಇವತ್ತೆಲ್ಲೋ ಮತ್ತೆ ತನ್ನ ಔಷಧಿ ಮರೆತಿರಬೇಕು. ಅದಕ್ಕೇ ಹೊಸ ನಾಟಕ ಪ್ರಾರಂಭಿಸಿರಬೇಕು’ ಎಂದು ಉದಾಸೀನದಲ್ಲಿ ಮುಂದೆ ಹೋದರು. ನೀರ್ಚೆಲ್ವಂ ಈ ಪ್ರಶ್ನೆಯನ್ನು ತಾನೇ ಬಗೆಹರಿಸಲು ಮುಂದಾದ. ದಿಮನ ಹಣೆಯಿಂದ ಇಳಿಯುತ್ತಿರುವ ಬೆವರನ್ನು ನೀರಿನಿಂದ ತತ್ತರಿಸುತ್ತಿರುವ ತನ್ನ ದೇಶಕ್ಕೇನಾದರೂ ಕಾಲುವೆಯ ಮೂಲಕ ಹರಿಸಬಹುದೇನೋ ಎಂಬ ಆಲೋಚನೆಯಿಂದ ದಿಮನನ್ನು ಸ್ವಲ್ಪ ಹತ್ತಿರದಿಂದ ಪರಿಶೀಲಿಸತೊಡಗಿದ. ದಿಮನ ಹತ್ತಿರ ಹೋಗುತ್ತಿದ್ದಂತೆಯೇ ಅದೇನೋ ಸುಟ್ಟ ವಾಸನೆ ಅಮರಿತು. ನೀರ್ಚೆಲ್ವಂಗೆ ತಲೆಸುತ್ತಿ ವಾಕರಿಕೆಬಂದಂತಾದರೂ ಸಹ ಹಾಗೇ ಒಂದು ನಿಮಿಷ ನಿಂತು ‘ತಾಯೈsss…..ಜಯಲಲಿತಾಂಬಾ’ ಎನ್ನುತ್ತಾ ಸುಧಾರಿಸಿಕೊಂಡು ಮತ್ತೆ ನಿಂತು ಕಾಲುವೆಯೆಲ್ಲಿ ತೋಡಲಿ, ಆಣೆಕಟ್ಟು ಎಲ್ಲಿ ಕಟ್ಟಲಿ ಎಂದು ಯೋಚಿಸುತ್ತಿರುವಷ್ಟರಲ್ಲಿ ದಿಮ ಕಣ್ಣು ತೆರೆದು, ತನ್ನ ನಿಲುವನ್ನು ಸಡಿಲಗೊಳಿಸಿ, ದೀರ್ಘವಾದ ಉಸಿರೆಳೆದುಕೊಂಡು ಹೊರಡಲನುವಾದ. ದಿಮ ಪ್ರಜ್ಞಾಸ್ಥಿತಿಗೆ ಮರಳಿಬಂದದ್ದನ್ನು ನೋಡಿ ನೀರ್ಚೆಲ್ವಂ ತಕ್ಷಣ ಅವನ ಕಾಲಿಗೆರಗಿ ‘ಸ್ವಾಮಿಯೈ….ಇಲ್ಲೇನಾಗುತ್ತಿದೆ ಸ್ವಲ್ಪ ತಿಳಿಹೇಳುವಂತವರಾಗಿ’ ಎಂದು ಕೇಳಿದ. ದಿಮ, ‘ಇತ್ತೀಚಿಗೆ ನನ್ನ ಮಾತನ್ನೂ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದ್ಯಾವುದೋ ನೀಚ ಪ್ರಾಣಿಯೊಂದು ಸಿಕ್ಕಿದೆ. ಇದಕ್ಕೇ ಚೆನ್ನಾಗಿ ಗರಗಸ ಹಾಕಬೇಕು’ ಎಂದು ನಿರ್ಧರಿಸಿ ಅಲ್ಲೇ ನಿಂತು ತನ್ನ ಪ್ರವಚನ ಪ್ರಾರಂಭಿಸಿದ. “ಎಲೈ ಹುಲುಮಾನವನೇ…..ಜಗತ್ತಿನಲ್ಲಿ ಇರುವುದೆಲ್ಲಾ ಸುಳ್ಳು ಹಾಗೂ ನಶ್ವರ. ರಾಮಾಯಣ ಮಹಾಭಾರತ ಭಗವದ್ಗೀತಗಳೆಲ್ಲಾ ಬರೀ ಬೂಸಿಯೆಂಬ ಮೀಮಾಂಸೆಯ ಮೇಲೆ ನಾನು ಮೊನ್ನೆ ಈ ದೇಶದ ರಾಜನ ಆಸ್ಥಾನದಲ್ಲಿ ಭಾಷಣ ಬಿಗಿದೆ. ಹಾಗೂ ಭಗವದ್ಗೀತೆಯನ್ನು ಈಗಲೇ ಸುಟ್ಟು ಹಾಕಬೇಕೆಂಬ ಕರೆನೀಡಿದೆ. ನನ್ನ ಮಾತು ಕೇಳಿ ರಾಜ ಸ್ವಲ್ಪ ಗಲಿಬಿಲಿಗೊಂಡ. ರಾಜನೇ ನಿರ್ವೀರ್ಯನಂತೆ ನಿಂತದ್ದು ನೋಡಿ ನಾನು ಕೋಪದಲ್ಲಿ ಮುಂದುವರೆದು, ನೀನು ಅನುಮತಿ ನೀಡದಿದ್ದರೇನಂತೆ! ಅವನ್ನು ನಾನು ನನ್ನೊಳಗೇ ಸುಟ್ಟು ಹಾಕುತ್ತೇನೆ’ ಎಂದು ನುಡಿದು ಸಭೆಯಿಂದ ಹೊರಬಂದೆ. ಇಲ್ಲಿ ಬಂದು ನಾಲ್ಕು ರಸ್ತೆಯಲ್ಲಿ ನಿಂತು, ನನ್ನೊಳಗೇ ಭಗವದ್ಗೀತೆಯನ್ನು ಸುಟ್ಟುಹಾಕುತ್ತಿದ್ದೆ. ಆ ಸುಟ್ಟವಾಸನೆಯೇ ನಿನ್ನ ಮೂಗಿಗೆ ಅಡರಿದ್ದು. ನೀನೂ ಸಹ ಈಗ ನಿನ್ನೊಳಗೇ ಭಗವದ್ಗೀತೆಯನ್ನು ಸುಟ್ಟುಹಾಕು. ಆಗಲೇ ವೈದಿಕಶಾಹಿ ಅಳಿದು, ಅಹಿಂಸೆ ನಾಶವಾಗಿ, ಎಲ್ಲರಲ್ಲೂ ಸಮಾನತೆ ಬರಲು ಸಾಧ್ಯ. ಇಗೋ……ಈ ಬೆಂಕಿಕಡ್ಡಿಯನ್ನು ಕೀರಿ ನಿನ್ನ ಬಾಯೊಳಕ್ಕೆ ಹಾಕಿಕೋ. ನಿನ್ನೊಳಗೇ ಭಗವದ್ಗೀತೆಯನ್ನು ಸುಡು” ಎಂದು ಬಿರಬಿರನೆ ನಡೆದು ಹೋದ.

ನೀರ್ಚೆಲ್ವಂ ತೆರೆದ ಬಾಯನ್ನು ತೆರೆದೇ ಇಟ್ಟುಕೊಂಡು, ‘ಈಗಷ್ಟೇ ಇಲ್ಲಿ ಏನು ನಡೆಯಿತು!!’ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಾ, ತನ್ನ ದೇಶಕ್ಕಾಗಿ ಕರಾಳನಾಡಿನಿಂದ ನೀರು ಕೇಳಲು ಬಂದ ವಿಷಯವನ್ನೇ ಮರೆತು ನಿಂತ.

ಸ್ಕೋರು:
ಸಿರಾ – 0
ದಿಮ – 2
(ನೀರು ಕೇಳಲು ಬಂದ ನೀರ್ಚೆಲ್ವಂಗೆ ತಲೆಕೆಡಿಸಿ ವಾಪಸು ಕಳಿಸಿದ್ದಕ್ಕಷ್ಟೇ ದಿಮನಿಗೆ ಈ +೧ ಸ್ಕೋರು)

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s