ಸಿರಾ – ದಿಮ ವಿನೋದ ಪ್ರಸಂಗಗಳು – ೪

ಸಿರಾ – ದಿಮ ವಿನೋದ ಪ್ರಸಂಗಗಳು – ೪:

ಸಿರಾ ಮತ್ತು ದಿಮ ಇಬ್ಬರನ್ನೂ ಕರಾಳನಾಡಿನ ಜನತೆ ‘ತಮ್ಮ ಪಾಲಿಗೆ ಬಂದ ಕರ್ಮ’ಎಂದೇ ಪರಿಗಣಿಸಿ ಬದುಕುತ್ತಿದ್ದರು. ಅವರ ಕಷ್ಟಗಳೇನೂ ದೂರವಾಗಿರಲಿಲ್ಲ. ಮೊದಲಿಗಿಂತಲೂ ಬವಣೆಗಳು ಹೆಚ್ಚಾಗಿಯೇ ಇದ್ದವು. ಇದರ ನಡುವೆ ಸಿರಾ ‘ಯುದ್ಧಕಾಲದಲ್ಲಿ ಕುದುರೆಗಳು ಉಪಯೋಗಕ್ಕೆ ಬರುತ್ತವೆ. ಆದರೆ ಯುದ್ಧವಿಲ್ಲದ ಕಾಲದಲ್ಲೂ ಅವನ್ನು ಸುಮ್ಮನೇ ಸಾಕಬೇಕು. ಆದ್ದರಿಂದ ಯುದ್ಧವಿಲ್ಲದ ಸಮಯದಲ್ಲಿ ಅವನ್ನು ಮನೋರಂಜನೆಗಾಗಿ ಬಳಸಬೇಕು’ ಎಂದು ತಾಕೀತು ಮಾಡಿ, ಹೋಬಳಿಕೇಂದ್ರಗಳಲ್ಲಿ ಕುದುರೆ ಓಟದ ವ್ಯವಸ್ಥೆ ಮಾಡಿ ಅದರಿಂದ ತೆರಿಗೆ ಸಂಗ್ರಹ ಮಾಡುವಂತೆ ಆಜ್ಞೆ ಹೊರಡಿಸಿದ್ದ.

ಇಂತಹ ಸಮಾರಂಭವೊಂದರಲ್ಲಿ, ದಿಮ ತನ್ನ ಭೀಷಣವಾದ ಭಾಷಣಕಲೆಯ ಪ್ರಯೋಗ ಮಾಡುತ್ತಾ, ಈ ನಾಡಿನಲ್ಲಿ ಪುರೋಹಿತಶಾಹಿಯ ನರ್ತನ ಹೆಚ್ಚಾಗಿದೆ. ಜಾತಿ ಪದ್ದತಿಯ ವಿಷ ಎಲ್ಲಾ ಕಡೆಯೂ ಹರಡಿದೆ. ಇವೆರಡನ್ನೂ ನಿರ್ಮೂಲನೆ ಮಾಡಲು ನಾನು ಮಹಾರಾಜರಿಗೆ ಕೆಲ ಸಲಹೆಗಳನ್ನು ನೀಡುತ್ತಿದ್ದೇನೆ. ಅದರ ಪ್ರಕಾರ:
(*) ಬ್ರಾಹ್ಮಣರು ದೇವಸ್ಥಾನಗಳಲ್ಲಿ ಪೂಜೆಮಾಡುವುದನ್ನು ನಿಷೇಧಿಸಲಾಗುವುದು.
(*) ಸ್ವಜಾತಿ ಮದುವೆಗಳನ್ನೂ ಇನ್ನುಮುಂದೆ ರಾಜ್ಯದಲ್ಲಿ ನಿಷೇಧಿಸಲಾಗುವುದು.
ಎಂದುಬಿಟ್ಟ. ಜನ ಕಂಗಾಲಾಗಿಹೋದರು. ಸಿರಾನಿಗೆ ದೂರು ಹೋಯಿತು.

ಸೋಮರಸ ಕುಡಿಯದೇ ಸಹಾ ತೂಕಡಿಸಲು ಪ್ರಸಿದ್ಧನಾಗಿದ್ದ ಸಿರಾನನ್ನು ಎಬ್ಬಿಸಿ ದೂರು ಕೊಡುವಷ್ಟರಲ್ಲಿ ಸೇವಕರಿಗೆ ಸಾಕು ಸಾಕಾಯಿತು. ಕೊನೆಗೂ ಎದ್ದು ದೂರನ್ನು ಆಲಿಸಿದ ಸಿರಾ ಸಹ ಈ ವಿಷಯವನ್ನು ಕೇಳಿ ಒಮ್ಮೆ ದಂಗಾಗಿ ಹೋದ. ಮೊನೆಯಷ್ಟೇ ತನ್ನ ರಾಣಿಯೊಬ್ಬಳ ಕೆನ್ನೆಯ ನುಣುಪನ್ನು ಪರೀಕ್ಷಿಸಿ, ದಿಮ ಅವನ ರಕ್ತದೊತ್ತಡ ಹೆಚ್ಚಿಸಿದ್ದರೂ ಸಹ ಆತನನ್ನು ಒಮ್ಮೆ ಮಾತನಾಡಿಸಿಯೇ ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವುದೆಂದು ಮನಸ್ಸು ಗಟ್ಟಿ ಮಾಡಿ ದಿಮನನ್ನು ಕರೆಸಿದ.

ದಿಮ ತನ್ನ ಎಂದಿನ ಮೂರ್ಖತನದ ನಗೆ ಬೀರುತ್ತಲೇ ಆಸ್ಥಾನಕ್ಕೆ ಬಂದ. ಹಿಂದಿನ ಸಂಜೆಯಷ್ಟೇ ‘ಹುಟ್ಟಿನಿಂದ ತಲೆಕೂದಲನ್ನೇ ಕತ್ತರಿಸದ ಕೋಮುವಾದಿ’ಯೊಬ್ಬನನ್ನು, ಅಧಿಕಾರದ ದರ್ಪ ತೋರಿಸಿ ಹರಟೆಕಟ್ಟೆಯೊಂದರಲ್ಲಿ ಹೆದರಿಸಿಬಂದ ‘ಮತ್ತು’ ಇನ್ನೂ ಕಣ್ಣಿನಲ್ಲಿ ತೇಲುತ್ತಿತ್ತು. ಆಸ್ಥಾನಕ್ಕೆ ಆತನ ಆಗಮವಾಗುತ್ತಲೇ ತೋಳ, ನರಿಗಳು ದೂರದಲ್ಲಿ ಊಳಿಡಲಾರಂಬಿಸಿದವು. ಆಗಸದಲ್ಲಿ ಕಪ್ಪು ಮೋಡಗಳು ಕಾಣಿಸಿಕೊಂಡವು.

ಸಿರ: ದಿಮಾವದೂತರೇ, ಇದೆಂತ ಹೊಸ ತಲೆಬಿಸಿ, ಬ್ರಾಹ್ಮಣರು ಮತ್ತು ಮದುವೆಗಳ ಬಗ್ಗೆ!?

ದಿಮ: ತಲೆಬಿಸಿಯಲ್ಲ ರಾಜನ್. ರಾಜ್ಯವನ್ನು ಮುಂದೆನಡೆಸುವ ಹೊಸಾ ತಂತ್ರ.

ಸಿರ: ಅದು ಹೇಗೆ?

ದಿಮ: ಈಗ ನೋಡಿ, ದೇವಸ್ಥಾನಗಳಲ್ಲಿ ಈ ಪುರೋಹಿತರು ಮಾಡುವ ಕೆಲಸವೇನು!? ಏನೂ ಇಲ್ಲ. ಬರೇ ಆರತಿ ಎತ್ತುವುದು ಮತ್ತು ಹೂ ಮುಡಿಸುವುದು ಅಷ್ಟೇ ಅಲ್ಲವೇ? ಈಗ ಅವರನ್ನು ಕೆಲಸದಿಂದ ತೆಗೆದು, ಅವರನ್ನೆಲ್ಲಾ ಸೈನ್ಯಕ್ಕೆ ಸೇರಿಸಿದರೆ ಸೈನ್ಯದ ಸಂಖ್ಯೆ ಹೆಚ್ಚಾಗುತ್ತದೆ. ಅದರಲ್ಲೂ ಇವರನ್ನು ಮುಂಚೂಣಿಯಲ್ಲಿ ನಿಲ್ಲಿಸಿದರೆ ಇವರು ತಮ್ಮ ಮಂತ್ರ ತಂತ್ರದಿಂದ ಎದುರಾಳಿಯನ್ನು ಮಂಕು ಮಾಡಿ, ಕಾಲಾಳುಗಳಿಗೆ ದಾರಿ ಮಾಡಿಕೊಟ್ಟರೆ ನಮಗೆ ಯುದ್ಧ ಗೆಲ್ಲುವುದು ಸುಲಭವಾಗುತ್ತದೆ. ಮಂಕುಬೂದಿ ಎರಚಲಾಗದಿದ್ದರೂ, ಮುಂಚೂಣಿಯಲ್ಲಿ ನಿಲ್ಲಿಸುವುದರಿಂದ ನಮ್ಮ ಎರಡನೇ ಹಂತದ ಸೈನಿಕರ ಪ್ರಾಣ ಉಳಿಯುತ್ತದೆ. ಎಷ್ಟಂದರೂ ಅವರು ‘ಅನುತ್ಪಾದಕ ಪುರೋಹಿತಶಾಹಿ’ ಎಂದು ನಮ್ಮ ಬಿಳುಮಂಗಳದ ಪರಭಾರಕ್ಕಮಹಾದೇವಿ ಹೇಳಿದ್ದಾರಲ್ಲವೇ! ಅವರ ಆಸೆಯಂತೆಯೇ, ಆ ಅನುತ್ಪಾದಕತೆ ಕಡಿಮೆಮಾಡಲು ನಾನು ನಿಮಗೆ ಈ ಸಲಹೆ ನೀಡುತ್ತಿದ್ದೇನೆ. ಇದರಿಂದ ನಮ್ಮ ನಾಡು ಹೆಚ್ಚೆಚ್ಚು ಉತ್ಪಾದಕವಾಗುತ್ತದೆ. ಯೋಚಿಸಿನೋಡಿ.

ಅದರೊಂದಿಗೇ, ದೇವಸ್ಥಾನಗಳಲ್ಲಿ ಇವರಿಂದ ತೆರವಾದ ಸ್ಥಾನಗಳಲ್ಲಿ ಒಂದು ಕೋಲನ್ನು ನಿಲ್ಲಿಸಲಾಗುವುದು. ಅದನ್ನು ನಡೆಸಲು ಒಬ್ಬ ಅಹಿಂದನನ್ನು ನಿಯಮಿಸಲಾಗುವುದು. ಅವನು ದೇವಸ್ಥಾನದ ಹೊರಗೇ ಕೂತು ಈ ಕೋಲನ್ನು ಹಗ್ಗದ ಮೂಲಕ ನಿಯಂತ್ರಿಸಿ ಆರತಿ ಮಾಡಿ, ಗರ್ಭಗುಡಿಯಿಂದ ಹೊರಗೆಸೆಯುತ್ತಾನೆ. ಮೂರ್ಖ ಭಕ್ತರು ಅದನ್ನು ತೆಗೆದುಕೊಂಡು ಆನಂದಿಸಬಹುದು. ಇದರಿಂದ ಬ್ರಾಹ್ಮಣ್ಯ ನಿರ್ನಾಮವಾಗಿ, ಅಹಿಂದರಿಗೆ ಕೆಲಸ ದೊರೆತು ಅನುತ್ಪಾದಕತೆ ಸಂಪೂರ್ಣ ನಿರ್ನಾಮವಾಗುತ್ತದೆ.

ಸಿರಾ: *ಸಮ್ಮತಿಯೊಂದಿಗೆ ತಲೆದೂಗುತ್ತಾ* ಅಹಿಂದರೇಕೆ ಹೊರಗೆ ಕುಳಿತು ಕೋಲನ್ನು ಹಗ್ಗದ ಮೂಲಕ ನಿಯಂತ್ರಿಸಬೇಕು. ಗರ್ಭಗುಡಿಯ ಒಳಗೇ ಹೋಗಿ ಪೂಜೆ ಮಾಡಬಹುದಲ್ಲ! ನಮ್ಮ ಪಕ್ಕದ ರಾಜ್ಯದಲ್ಲಿ ‘ಜನರ ಸೇವೆಯೇ ಜನಾರ್ಧನ ಸೇವೆ’ ಎಂದು ನಂಬಿರುವ ಪೂಜಾರಿಯೊಬ್ಬರು ಹೀಗೆ ಮಾಡಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ನಾವೇಕ ಹಾಗೇ ಮಾಡಬಾರದು. ಇದರಿಂದ ಸಮಾನತೆ ಇನ್ನೂ ಬೇಗ ಸಿಗುತ್ತದೆಯಲ್ಲವೇ?

ದಿಮ: ಅಯ್ಯೋ ರಾಜನ್! ನೀವು ನಿಮ್ಮ ನೃತ್ಯ ಕಲಾವಿದನಿಂದ ಅಡುಗೆ ಮಾಡಿಸುತ್ತೀರೋ!? ಇಲ್ಲಾ ತಾನೇ. ಹಾಗಿದ್ದ ಮೇಲೆ ಶೂದ್ರರಿಂದ ಪೂಜೆ ಮಾಡಿಸಿದರೆ ಜನರು ಒಮ್ಮೆಗೇ ಒಪ್ಪಲಿಕ್ಕಿಲ್ಲ. ಅದೂ ಅಲ್ಲದೆ, ಒಂದೇ ಬಾರಿಗೆ ಸಮಾನತೆ ತಂದುಕೊಟ್ಟರೆ ಅಹಿಂದರಿಗೂ ನಿಮ್ಮ ಮೇಲೆ ಅನುಮಾನ ಬರುತ್ತದೆ. ಇಷ್ಟಕ್ಕೂ ಸಮಾನತೆ ಎನ್ನುವುದೊಂದು ಮರೀಚಿಕೆಯಿದ್ದಂತೆ. ಇವತ್ತು ಒಂದು ಕೇಜಿ ಬೆಣ್ಣೆಗೆ ಒಂದು ಕೇಜಿ ಜೇನು ಸಮಾನ. ನಾಳೆ ಒಂದು ಕೇಜಿ ಬೆಣ್ಣೆಗೆ ಒಂದು ಕೇಜಿ ಚಿನ್ನ ಸಮಾನ. ಪ್ರಜೆಗಳನ್ನು ಜೇನು, ಚಿನ್ನದ ಮಧ್ಯ ಆಟವಾಡಿಸಿ, ಅವರನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುತ್ತಿದ್ದೀಯ ಎಂಬ ಭ್ರಮೆಮೂಡಿಸುವುದೇ ರಾಜಕಾರಣ. ಆದ್ದರಿಂದ, ಇವತ್ತಿಗೆ ಈ ಪೂಜೆ ಮಾಡುವ ಸಮಾನತೆ ಸಾಕು. ನಾಳೆ ಗರ್ಭಗುಡಿಯ ಸಮಾನತೆ ಬರಲಿ.

ಸಿರಾ: *ತಿರುಗುತ್ತಿರುವ ತಲೆಯನ್ನು ಕೈಯಲ್ಲಿ ಹಿಡಿದು* ಹೂಂ…ಮತ್ತೆ ಸ್ವಜಾತಿ ಮದುವೆಯನ್ನೇಕೆ ನಿಷೇಧಿಸಬೇಕು? ಅದನ್ನೆಲ್ಲಾ ನಿಷೇಧಿಸಿದರೆ ನಮ್ಮ ಪೀಳಿಗೆಗಳು ಮುಂದುವರೆಯುವುದು ಹೇಗೆ?

ದಿಮಾ: ನೋಡಪ್ಪಾ ರಾಜ! ಸ್ವಜಾತಿ ಮದುವೆಗಳನ್ನು ನಿಷೇಧಿಸಿದರೆ, ಜಾತಿಸಂಘರ್ಷ ದೂರವಾಗಿ ನಿಧಾನವಾಗಿ ಜಾತ್ಯಾತೀತ ಸಮಾಜ ನಿರ್ಮಾಣವಾಗುತ್ತದೆ. ಆಗ ಎಲ್ಲರಿಗೂ ತಾವು ಸಮಾನರೆಂಬ ಭಾವನೆ ಬರುತ್ತದೆ. ಆರ್ಥಿಕವಾಗಿ ಜನರೆಷ್ಟೇ ಅಸಮಾನರಾಗಿರಲಿ, ಸಾಮಾಜಿಕ ಸಮಾನತೆ ಬಂದಕೂಡಲೇ ತಮ್ಮ ಬಡತನವನ್ನು ಸ್ವಲ್ಪ ಮಟ್ಟಿಗೆ ಮರೆಯುತ್ತಾರೆ. ‘ನಾನೂ ಸಹ ಅವನಷ್ಟೇ ಸಮಾನ’ ಎಂಬ ಅಹಂ ಪೂರೈಕೆಯಾದಕೂಡಲೇ, ರಾತ್ರಿ ಚೆನ್ನಾಗಿ ನಿದ್ರಿಸುತ್ತಾನೆ. ಆಗ ಅವರ ಸಂಬಳ ಹೆಚ್ಚು ಮಾಡದಿದ್ದರೂ ನಡೆಯುತ್ತದೆ. ಇದರಿಂದ ನೀನು ಅವರ ಆರ್ಥಿಕ ಅಭಿವೃದ್ಧಿಯ ಮೇಲೆ ಉಪಯೋಗಿಸಬೇಕಾದ ಹಣವನ್ನು ಸ್ವಂತ ಐಷಾರಾಮದ ಮೇಲೆ ವಿನಿಯೋಗಿಸಬಹುದು.

ಸಿರಾ: ಅಬ್ಬಾ! ಎಂತಾ ಯೋಚನೆ. ನೀವು ಪುರುಷರೇ ಅಲ್ಲ ಸ್ವಾಮಿ……..ಮಹಾಪುರುಷರು. ಇವತ್ತಿನಿಂದಲೇ ಈ ಆಜ್ಞೆಯ ಬಗ್ಗೆ ಪರಿಶೀಲಿಸಲಾರಂಭಿಸುತ್ತೇನೆ.

ಅಷ್ಟೊತ್ತಿಗೆ ದಿಮಾ ಇದ್ದಕ್ಕಿಂದ್ದಂತೆ ನಿಂತಲ್ಲೇ ನಡುಗಿಲಾರಂಭಿಸಿದ. ಬಾಯಲ್ಲೆಲ್ಲಾ ಕಪ್ಪು ನೊರೆ ತುಂಬಲಾರಂಭಿಸಿತು. ಸ್ವಲ್ಪಹೊತ್ತಿನಲ್ಲೆ ಹಾಗೆಯೇ ಕುಸಿದು ಬಿದ್ದ. ಕೈಕಾಲೆಲ್ಲಾ ಸೊಟ್ಟೆಯಾಯಿತು. ಸಿರಾ ಗಾಭರಿಗೊಂಡು ಆಸ್ಥಾನ ವೈದ್ಯರತ್ತ ನೋಡಿದ. ಆಸ್ಥಾನವೈದ್ಯ ಏನೂ ಗಾಬರಿಗೊಳ್ಲದೇ ‘ಏನಿಲ್ಲ ರಾಜನ್, ಇವರ ಮಾನಸಿಕ ಅಸ್ವಸ್ಥತೆ ನೀಗಿಸಲು ನಾನು ಕೊಟ್ಟಿರುವ ಔಷಧವನ್ನು ದಿನಕ್ಕೆರಡು ಬಾರಿ ತೆಗೆದುಕೊಳ್ಳಲು ಹೇಳಿದ್ದೆ. ಇವರು ಇವತ್ತು ಬೆಳಿಗ್ಗೆ ಔಷಧ ತೆಗೆದುಕೊಳ್ಳುವುದನ್ನು ಮರೆತಿರಬೇಕು. ಅದರ ಪರಿಣಾಮವೇ ಇದು. ಒಂದು ಲೋಟ ಲಿಂಬೆಹುಳಿಗೆ, ಎರಡು ಚಮಚ ಜೇನು, ಸ್ವಲ್ಪ ಪುದೀನ ಬೆರೆಸಿ ಅದರಲ್ಲಿ ಬೆರಳದ್ದಿ ಕುಡಿಸಿದರೆ, ಪಿತ್ತ ಕೆಳಗಿಳಿದು ಸ್ವಲ್ಪ ಹೊತ್ತಿನಲ್ಲೇ ಸರಿಹೋಗುತ್ತಾರೆ’ ಎಂದು ಸಲಹೆ ನೀಡಿದ. ರಾಜ ತರಿಸಿಯೂ ಕೊಟ್ಟ. ಅದನ್ನು ಕುಡಿಸಿದ ದಿಮ ಎದ್ದು ನಿಂತು ‘ನನಗೇನಾಯ್ತು!? ಯಾಕೆ ಎಲ್ಲರೂ ನನ್ನ ಮುಖ ನೋಡುತ್ತಿದ್ದಾರೆ? ನನ್ನ ಬಟ್ಟೆ ಯಾಕೆ ಒದ್ದೆಯಾಗಿದೆ?’ ಎಂದು ಕೇಳಲಾರಂಭಿಸಿದ.

ಎಲ್ಲರ ಮುಂದೆ ಅವನ ಅಪಮಾನ ತಡೆಯಲೆಂದು ಸಿರಾ ‘ಏನೂ ಇಲ್ಲ ಅವಧೂತರೇ. ನೀವು ಮಾತನಾಡುತ್ತಿದ್ದಾಗ ಯಾರೋ ಹಿಂದಿನಿಂದ ‘ಪ್ರಣೀವ ತೊಡಾಗಿಯಾ’ ಎಂದು ಕೂಗಿದರು. ಯಾಕೋ ಗೊತ್ತಿಲ್ಲ ಇದ್ದಕ್ಕಿಂದಂತೆ ನೀವು ರಕ್ತಕಾರಿಕೊಳ್ಳುತ್ತಾ ಕೆಳಗೆ ಬಿದ್ದಿರಿ. ಯಾಕೋ ಗೊತ್ತಿಲ್ಲಪ್ಪ! ಅದೇನೋ ಮದುವೆಯ ಬಗ್ಗೆ ಹೇಳುತ್ತಿದ್ದಿರಿ. ಅದರ ಬಗ್ಗೆ ಮಾತು ಮುಂದುವರೆಸಿ’ ಎಂದ.

ದಿಮ ಇದ್ದಕ್ಕಿದ್ದಂತೆ ಬಿಳಿಚಿಕೊಂಡು ‘ಇಲ್ಲ ರಾಜನ್….ಅದ್ಯಾರೋ ನನಗೆ ಗೊತ್ತೇ ಇಲ್ಲ. ಅವನನ್ನು ಕಂಡರೆ ನನಗೆ ಹೆದರಿಕೆಯಿದೆ ಅಂತಾ ನಾನೊಪ್ಪಲ್ಲ. ಅವನು ಮಾತಾನಾಡುವುದೆಲ್ಲಾ ನನಗೆ ಕೇಳಿದರೆ ನನಗೆ ಮೈ ಉರಿಯುತ್ತದೆ ಅಂತಲೂ ನಾನು ಹೇಳುವುದಿಲ್ಲ’ ಎಂದು ಕೂಗುತ್ತಾ, ನಡುಗುತ್ತಾ ಬಾಗಿಲೆಡೆಗೆ ನಡೆಯತೊಡಗಿದ. ‘ರಾಜನ್…ಮದುವೆಯ ಬಗ್ಗೆ ನನಗೇನೂ ಗೊತ್ತಿಲ್ಲ. ನಾನೇನಾದರೂ ರಾಜನಾಗಿದ್ದರೆ, ಸ್ವಜಾತಿ ಮದುವೆಗಳನ್ನಲ್ಲಾ, ಸಂಪೂರ್ಣವಾಗಿ ಮದುವೆಯನ್ನೇ ನಿಷೇಧಿಸುತ್ತಿದ್ದೆ. ಮದುವೆಯೆಲ್ಲಾ ಬರೀ ಮೂಡನಂಬಿಕೆ. ಯಾರು ಯಾರೊಂದಿಗೆ ಬೇಕಾದರೂ ಇರುವಂತಾಗಬೇಕು. ಆಗಲೇ ಜಾತಿ ಪದ್ದತಿ ನಿರ್ಮೂಲನೆ ಸಾಧ್ಯ. ನೀವೆಲ್ಲಾ ಮೂರ್ಖರು. ಅವನೊಬ್ಬನೇ ನಿಜ. ನಾನೊಬ್ಬ ಭಂಡ….ಜೈ ತಿಕ್ಕಲುನಿರಂಜನ’ ಎಂದು ಕೂಗುತ್ತಾ ನಿರ್ಗಮಿಸಿದ.

ಕೆಲ ನಿಮಿಷಗಳ ಹಿಂದಷ್ಟೇ ದಿಮನ ಚತುರತೆಗೆ ಮೆಚ್ಚಿದ್ದ ರಾಜ, ಈಗ ಅವನ ಹುಚ್ಚು, ಪಿತ್ತದ ವಿಷಯ ಕೇಳಿ, ‘ಮದುವೆಯೇ ಮೂಡನಂಬಿಕೆ’ಯೆಂಬ ಅವನ ಮಾತುಗಳನ್ನು ಕೇಳಿ, ಈಗೇನು ಮಾಡುವುದೆಂದು ಚಿಂತಾಕ್ರಾಂತನಾಗಿ ಕುಳಿತ.

ಸ್ಕೋರು:
ಸಿರಾ – 0
ದಿಮ – 1
ದಿಮನ ಖತರ್ನಾಕ್ ಆಲೋಚನೆಗಳು ಕಾರ್ಯರೂಪಕ್ಕೆ ಬರದೆ, ಕರಾಳಾನಾಡಿನ ಜನತೆ ಬದುಕುಳಿದಿದ್ದರಿಂದ ಅವರಿಗೊಂದು ‘+1’ ಸ್ಕೋರು ಕೊಡಲೇಬೇಕು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s