ಬುದ್ಧಿಗೊಂದು ಗುದ್ದು – ೨೪

ಮೂವತ್ತೊಂಬತ್ತು ವರ್ಷಗಳ ನಂತರ ಅರಳಿದ ಅವಳಿಗಳ ಕಚಗುಳಿ:

ನಿಮ್ಮಲ್ಲಿ ಯಾರಾದರೂ ಜೋಡಿ ಬಾಳೆಹಣ್ಣು ತಿಂದಿದ್ದೀರಾ!? ನಾನು ಸಣ್ಣವನಿದ್ದಾಗ, ನನಗೆ ತಿನ್ನೋಕೇ ಬಿಡ್ತಾ ಇರಲಿಲ್ಲ. ‘ಅದು ತಿಂದ್ರೆ ನಿನಗೆ ಅವಳಿ-ಜವಳಿ ಮಕ್ಳಾಗುತ್ವೆ’ ಅನ್ನೋ ಕಾರಣ ಕೊಡ್ತಾ ಇದ್ರು. ನನಗೆ ಆಶ್ಚರ್ಯವಾಗ್ತಾ ಇತ್ತು. ‘ಅಯ್ಯೋ ಅವಳಿ ಜವಳಿ ಆದ್ರೆ ಇನ್ನೂ ಒಳ್ಳೇದಲ್ವಾ! ನನ್ ಹೆಂಡ್ತಿ ಎರಡೆರಡು ಸಲ ಕಷ್ಟ ಅನುಭವಿಸೋದು ತಪ್ಪುತ್ತೆ’ ಅಂತಾ ಹೇಳಿ, ತಲೆ ಮೇಲೆ ಮೊಟಕಿಸಿಕೊಳ್ತಾ ಇದ್ದೆ. ಅದೂ ಅಲ್ದೆ ‘ಬಾಳೆಹಣ್ಣು ತಿಂದ್ರೆ ಮಕ್ಕಳಾಗುತ್ವಾ? ಜೋಡಿ ತಿಂದ್ರೆ ಎರಡು ಮಕ್ಕಳಾಗೋದಾದ್ರೆ, ಒಂದು ತಿಂದ್ರೆ ಒಂದು ಮಗು ಹುಟ್ಬೇಕಲ್ವಾ? ಮತ್ತೆ ಒಂದೊಂದೇ ತಿನ್ನೋಕೆ ಬಿಡ್ತೀರಾ, ಜೋಡಿ ಯಾಕೆ ತಿನ್ನಬಾರ್ದು!?’ ಅಂತೆಲ್ಲಾ ಕೇಳಿ ಲೆಕ್ಕಿ ಬರಲಿನಲ್ಲಿ ಪೆಟ್ಟು ತಿಂತಾ ಇದ್ದೆ. ಈ ಅವಳಿಗಳು ಅನ್ನೋ ವಿಸ್ಮಯ ನನಗೆ ಮಾತ್ರವಲ್ಲದೇ, ಜೀವವಿಜ್ಞಾನಿಗಳಿಗೂ ಸಹ ಸದಾ ಒಂದು ಕುತೂಹಲದ ವಿಷಯ. ಕೆಲವು ಥಿಯರಿಗಳ ಪ್ರಕಾರ, ಅವಳಿಗಳು ಒಂದೇ ರೀತಿ ಯೋಚಿಸ್ತಾರೆ ಹಾಗೂ ವರ್ತಿಸುತ್ತಾರೆ. ಕೆಲವು ವಾದಗಳ ಪ್ರಕಾರ ಅವಳಿಗಳು ಬೆಳೆಯುವ ಪರಿಸರಕ್ಕೆ ಹೊಂದಿಕೊಂಡಂತೆ ಅವರ ವರ್ತನೆಗಳಲ್ಲಿ, ನಿರ್ಧಾರಶಕ್ತಿಗಳಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಇನ್ನೂ ಕೆಲವು ವಾದಗಳ ಪ್ರಕಾರ, ಅವಳಿಗಳು ಹುಟ್ಟುವಾಗಲಷ್ಟೇ ಅದು ಕೌತುಕದ ವಿಚಾರ. ಆನಂತರದ್ದೆಲ್ಲಾ ಸಾಮಾನ್ಯ ಆಗುಹೋಗುಗಳೇ. ಅವರು ಬರೇ ‘ಇಬ್ಬರು ಮನುಷ್ಯರು’ ಅಷ್ಟೇ. ಅವರಿಬ್ಬರ ಮಧ್ಯೆ ಸಾಮ್ಯಗಳು ಇರಲೇಬೇಕೆಂದೇನೂ ಇಲ್ಲ ಇತ್ಯಾದಿ ಇತ್ಯಾದಿ. ಇದಕ್ಕೆ ಸೂಕ್ತವಾದ ಉತ್ತರ ಇನ್ನೂ ಸಿಕ್ಕಿಲ್ಲ. ಇದನ್ನು ವಸ್ತುನಿಷ್ಟವಾಗಿ ಅಧ್ಯಯನ ಮಾಡಬೇಕೆಂದರೆ, ಇಬ್ಬರು ಅವಳಿಮಕ್ಕಳನ್ನು ಹುಟ್ಟುವಾಗಲೇ ಬೇರ್ಪಡಿಸಿ, ಅವರನ್ನು ಬೇರೆ ಬೇರೆ ವಲಯಗಳಲ್ಲಿ ಬೆಳೆಸಿ ಪಲಿತಾಂಶವನ್ನು ತಾಳೆ ನೋಡಬೇಕು. ಆದರೆ ಇಂತಹ ಒಂದು ಪ್ರಯೊಗವನ್ನು ಮನುಷ್ಯರ ಮೇಲೆ ನಡೆಸುವುದು ಸಾಧ್ಯವಿಲ್ಲ (ಹಾಗೂ ಸರಿಯಲ್ಲ ಕೂಡ).

ಅವಳಿಗಳಲ್ಲಿ, ಅನನ್ಯ/ತದ್ರೂಪಿ ಅವಳಿಗಳು (Identical twins – ಒಂದೇ ಅಂಡಾಣು ಹಾಗೂ ಒಂದೇ ವೀರ್ಯಾಣುವಿನಿಂದ ಹುಟ್ಟಿ, ಮುಂದೆ ಅಂಡಾಣು ವಿಭಜನೆಯಾಗಿ ಒಂದೇ ಪ್ರಸವದಲ್ಲಿ ಹುಟ್ಟುವ) ಹಾಗೂ ಸಹೋದರ ಅವಳಿಗಳು (Fraternal twins – ಪ್ರತ್ಯೇಕ ಅಂಡಾಣು ಹಾಗೂ ಪ್ರತ್ಯೇಕ ವೀಯಾಣುವಿನಿಂದ ಹುಟ್ಟಿ, ಒಂದೇ ಪ್ರಸವದಲ್ಲಿ ಹೊರಬಂದ) ಎಂಬ ಸ್ಥೂಲ ವಿಂಗಡೆಣೆಗಳಿವೆ. (ಇವಲ್ಲದೇ ಸಯಾಮೀ ಅವಳಿಗಳು, ಮಿಶ್ರ ಅವಳಿಗಳು, ಪರಾವಲಂಬಿ ಅವಳಿಗಳು, ಅಸಾಮಾನ್ಯ ಅವಳಿಗಳು ಮುಂತಾದ ಹಲವಾರು ವಿಂಗಡಣೆಗಳಿವೆ). ಇವುಗಳಲ್ಲಿ ಅನನ್ಯ/ತದ್ರೂಪಿ ಅವಳಿಗಳು ಬೇರೆಲ್ಲಕ್ಕಿಂತ ಹೆಚ್ಚು ಕುತೂಹಲ ಮೂಡಿಸುವಂತಹ ಸೋಜಿಗಗಳು.

ಮಿನ್ನಿಸೋಟಾ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುವ ಥಾಮಸ್ ಬೌಚಾರ್ಡ್ ಎಂಬ ಪುಣ್ಯಾತ್ಮ,’ಅವಳಿಗಳು ಒಂದೇ ರೀತಿ ಯೋಚಿಸಲು ಹಾಗು ವರ್ತಿಸಲು ಸಾಧ್ಯವೇ?’ ಎನ್ನುವುದರ ಬಗ್ಗೆ ವರ್ಷಾನುಗಟ್ಟಲೆ ಅವಳಿಮಕ್ಕಳ ಮೇಲೆ, ಮಕ್ಕಳಿಗೆ ತಿಳಿಯದ ರೀತಿಯಲ್ಲೇ ಸಾಧ್ಯವಾದಷ್ಟೂ ನೈಸರ್ಗಿಕ ಪರಿಸರದಲ್ಲೇ ಅಧ್ಯಯನ ನಡೆಸುತ್ತಿದ್ದ. ಹನ್ನೊಂದು ವರ್ಷಗಳ ಸುದೀರ್ಘ ಸಂಶೋಧನೆಯ ನಂತರವೂ ಏನೂ ಹೆಚ್ಚಿನ ಮಾಹಿತಿ ಸಿಗದೇ ಹತಾಶೆಯಿಂದ ಇನ್ನೇನು ಅಧ್ಯಯನ ಕೈಬಿಡಬೇಕೆಂದು ನಿರ್ಧರಿಸಿದ್ದವನಿಗೆ, ಅದೇನು ಅದೃಷ್ಟ ಖುಲಾಯಿಸಿತ್ತೋ ಏನೋ! ಮುಂದಿನ ಐದುವರ್ಷಕ್ಕೆ ಸಾಕಾಗುವಷ್ಟು ಸರಕು ಒಂದೇ ರಾತ್ರಿಯಲ್ಲಿ ಸಿಕ್ಕಿತು. ಅದೇನೆಂದರೆ, 1939ನೇ ಇಸವಿಯಲ್ಲಿ ಅನನ್ಯ ಅವಳಿಗಳಾಗಿ ಹುಟ್ಟಿ, ಹುಟ್ಟಿದ ಮೂರೇ ವಾರಕ್ಕೆ ಬೇರೆ ಬೇರೆ ಪೋಷಕರಿಂದ ದತ್ತುತೆಗೆದುಕೊಳ್ಳಲ್ಪಟ್ಟು, ಸಂಪೂರ್ಣ ಬೇರೆ ಬೇರೆ ಪರಿಸರದಲ್ಲಿ ಬೆಳೆದು, ಮೂವತ್ತೊಂಬತ್ತು ವರ್ಷಗಳ ನಂತರ ಒಂದಾದ ಇಬ್ಬರು ಅಣ್ಣತಮ್ಮಂದಿರ ಜೋಡಿಯೊಂದು ಸಿಕ್ಕಿಬಿಟ್ಟಿತ್ತು. ಅವಳಿಗಳು (ಬೇರೆಲ್ಲಾ ಅನನ್ಯ ಅವಳಿಗಳಂತೆಯೇ) ನೋಡಲು ಒಂದೇ ತೆರನಾಗಿದ್ದರು. ಆಶ್ಚರ್ಯವೆಂದರೆ ಇಬ್ಬರ ಹೆಸರೂ ಜಿಮ್ ಎಂದಾಗಿತ್ತು!! ಆದರೆ ಅವರ ಜೀವನವನ್ನು ಕೆದಕುತ್ತಾ ಹೋದ ಥಾಮಸ್’ಗೆ ಸಿಕ್ಕ ವಿಚಾರಗಳು ಒಂದಕ್ಕಿಂತ ಒಂದು ಬೆಚ್ಚಿಬೀಳಿಸುವಂತಿದ್ದವು. ಒಂದೇ ತಂದೆ ಮತ್ತು ತಾಯಿಗೆ ಹುಟ್ಟಿ, ಒಂದೇ ಪರಿಸರದಲ್ಲಿ ಬೆಳೆದ ಮಕ್ಕಳು ಸಾಮಾನ್ಯವಾಗಿ ಹಲವಾರು ರೀತಿಯಲ್ಲಿ ಒಂದೇ ರೀತಿಯಿದ್ದರೂ ಸಹ, ಈ ಪ್ರಕರಣದಲ್ಲಿ (ಸಂಪೂರ್ಣ ಬೇರೆ ಬೇರೆ ಪರಿಸರದಲ್ಲಿ ಬೆಳೆದಿದ್ದರೂ ಸಹ) ಕೆಲ ಹೋಲಿಕೆಗಳು ನಂಬಲಸಾಧ್ಯವಾದಷ್ಟು ಸಾಮ್ಯತೆಯಿಂದ ಕೂಡಿದ್ದವು.

(*) ಇಬ್ಬರ ದತ್ತು ಪೋಷಕರೂ ಆ ಹುಡುಗರಿಗೆ ಜಿಮ್ ಎಂದೇ ಹೆಸರಿಟ್ಟರು (ಒಬ್ಬ ಜಿಮ್ ಸ್ಪ್ರಿಂಗರ್ (Jim Springer) ಹಾಗೂ ಇನ್ನೊಬ್ಬ ಜಿಮ್ ಲೆವಿಸ್ (Jim Lewis). ಪೋಷಕರಿಗೂ ಸಹ ಇನ್ನೊಂದು ಮಗುವಿನ ಹೆಸರು ಜಿಮ್ ಎಂದು ತಿಳಿದಿರಲಿಲ್ಲ)!
(*) ತನಗೊಬ್ಬ ಸಹೋದರನಿದ್ದಾನೆ ಎಂದು ತಿಳಿಯದೇ ಬೆಳೆದ ಇಬ್ಬರೂ ಜಿಮ್’ಗಳು ರಕ್ಷಣೆಗೆ ಸಂಬಂದಿಸಿದ ಉದ್ಯೋಗಗಳನ್ನೇ ಆಯ್ದುಕೊಂಡರು. ಜಿಮ್ ಲೆವಿಸ್ ಉಕ್ಕಿನ ಕಾರ್ಖಾನೆಯೊಂದರಲ್ಲಿ ರಕ್ಷಣಾ ಸಿಬ್ಬಂದಿಯಾಗಿದ್ದರೆ, ಜಿಮ್ ಸ್ಪ್ರಿಂಗರ್ ಸಹಾಯಕ ಪೋಲೀಸ್ ಅಧಿಕಾರಿಯ ಹುದ್ದೆ ಸೇರಿದ!
(*) ಇಬ್ಬರಿಗೂ ಸಮಾನ ರೂಪದ ಗಣಿತ ಹಾಗೂ ಮರಗೆಲಸದ ಕೌಶಲ್ಯಗಳಿದ್ದವು!
(*) ಇಬ್ಬರಿಗೂ ಕಾಗುಣಿತ(Spelling)ವೆಂದರೆ ಆಗುತ್ತಿರಲಿಲ್ಲ!
(*) ಇಬ್ಬರೂ ತೆಳುನೀಲಿ ಬಣ್ಣದ ಶೆವಿ (Chevy) ಕಾರುಗಳನ್ನೇ ಕೊಂಡರು!
(*) ಇಬ್ಬರೂ ಫ್ಲೋರಿಡಾದ ಪಾಸ್ ಗ್ರಿಲ್ ಬೀಚಿನಲ್ಲಿ ರಜಾದಿನಗಳನ್ನು ಕಳೆಯಲು ಇಷ್ಟಪಡುತ್ತಿದ್ದರು!
(*) ಇಬ್ಬರೂ Miller Lite ಹಾಗೂ Salem ಸಿಗರೇಟುಗಳನ್ನೇ ಸೇದುತ್ತಿದ್ದರು!
(*) ಇಬ್ಬರಿಗೂ ಉಗುರು ಕಚ್ಚುವ ಅಭ್ಯಾಸವಿತ್ತು!
(*) ಇಬ್ಬರಿಗೂ ತಮ್ಮ ಹೆಂಡತಿಯರಿಗಾಗಿ ಮನೆಯಲ್ಲೆಲ್ಲೆಲ್ಲೋ love notes ಇಡುವುದೆಂದರೆ ಇಷ್ಟವಿತ್ತು!
(*) ಇಬ್ಬರಿಗೂ ಮೈಗ್ರೇನ್ ಕಾಡುತ್ತಿತ್ತು!
(*) ಇಬ್ಬರಿಗೂ ಅಧಿಕ ರಕ್ತದೊತ್ತಡವಿತ್ತು!
(*) ಇಬ್ಬರ ಬ್ರೈನ್ ವೇವ್’ಗಳೂ ಒಂದೇ ರೀತಿಯ ಆಕಾರದಲ್ಲಿದ್ದವು!
(*) ಇಬ್ಬರ ಹೆಂಡತಿಯರ ಹೆಸರೂ ಲಿಂಡಾ ಎಂದಾಗಿತ್ತು!
(*) ಇಬ್ಬರೂ ತಂತಮ್ಮ ಮಕ್ಕಳಿಗೆ ಜೇಮ್ಸ್ ಅಲನ್ ಎಂದು ಹೆಸರಿಟ್ಟಿದ್ದರು. ಒಬ್ಬನ ಹೆಸರು James Alan ಎಂದಿದ್ದರೆ ಮತ್ತೊಬ್ಬನ ಹೆಸರು James Allan ಎಂದಾಗಿತ್ತು!
(*) ಇಬ್ಬರೂ ವಿವಾಹ ವಿಚ್ಚೇದನಕ್ಕೊಳಗಾದರು!
(*) ಇಬ್ಬರ ಎರಡನೆಯ ಹೆಂಡತಿಯರ ಹೆಸರೂ ಬೆಟ್ಟಿ (Betty) ಎಂದಾಗಿತ್ತು!
(*) ಇಬ್ಬರೂ ತಮ್ಮ ನಾಯಿಗಳಿಗೆ ಟಾಯ್ (Toy) ಎಂದು ಹೆಸರಿಟ್ಟಿದ್ದರು!

ಇವಿಷ್ಟೇ ಅಲ್ಲದೆ, ಆಗಾಗ ಇಬ್ಬರಿಗೂ ‘ಏಕೋ ನಾನು ಖಾಲಿ ಖಾಲಿ. ನಾನು ಪೂರ್ತಿಯಲ್ಲ’ ಎಂಬ ಭಾವನೆ ಕಾರಣವೇ ಇಲ್ಲದೆ ಆಗಾಗ ಕಾಡುತ್ತಿತ್ತಂತೆ. ಇಬ್ಬರು ಜಿಮ್’ಗಳ ಪೋಷಕರೂ ಈ ಅವಳಿಗಳ ಹೆತ್ತಮ್ಮನನ್ನು ನೋಡಿರಲಿಲ್ಲ. ಆ ಪುಣ್ಯಾತಿಗಿತ್ತಿ 15ನೇ ವಯಸ್ಸಿನಲ್ಲಿಯೇ, ಮದುವೆಯಾಗದೆ ಗರ್ಭವತಿಯಾಗಿದ್ದರಿಂದ, ಪ್ರಸೂತಿಯ ನಂತರ, ಮಕ್ಕಳನ್ನು, ಚರ್ಚೊಂದು ನಡೆಸುವ ಅನಾಥಾಲಯದಲ್ಲಿ ಬಿಟ್ಟು ಹೋಗಿದ್ದಳು. ಇಬ್ಬರು ಪೋಷಕರೂ ಈ ಮಕ್ಕಳನ್ನು 3 ವಾರಗಳ ವ್ಯತ್ಯಾಸದಲ್ಲಿ ಅಲ್ಲಿಂದ ದತ್ತುತೆಗೆದುಕೊಂಡರು. ದತ್ತುತೆಗೆದುಕೊಳ್ಳುವಾಗ ಎರಡೂ ಪೋಷಕರಿಗೆ ‘ಈ ಮಗುವಿಗೆ ಇನ್ನೊಂದು ಅವಳಿ ತಮ್ಮ ಹುಟ್ಟಿದ್ದ. ಆದರೆ ಹುಟ್ಟಿದ ಕೆಲಗಂಟೆಗಳಲ್ಲೇ ಆ ಮಗು ತೀರಿಕೊಂಡಿತು’ ಎಂದು ಹೇಳಲಾಗಿತ್ತು. ಜಿಮ್ ಲೆವಿಸ್ಸನ ಅಮ್ಮ ಆತ ಹದಿನಾರು ತಿಂಗಳ ಮಗುವಾಗಿದ್ದಾಗ, ಕೋರ್ಟಿನಲ್ಲಿ ದತ್ತಿನ ಕಾಗದ ಪತ್ರಗಳಿಗೆ ಸಂಬಂಧಿಸಿದಂತೆ ಏನೋ ಕೆಲಸಕ್ಕೆ ಹೋಗಿದ್ದಾಗ, ಅಲ್ಲಿದ್ದ ಕ್ಲರ್ಕ್ ಯಾರೊಂದಿಗೋ ಮಾತಾನಾಡುತ್ತ ‘ಹೇಯ್! ನಿನಗ್ಗೊತ್ತಾ. ಆ ಇನ್ನೊಂದು ಮಗುವಿಗೂ ಜಿಮ್ ಎಂದೇ ಹೆಸರಿಟ್ಟಿದ್ದಾರೆ’ ಎಂದು ಪಿಸುಗುಟ್ಟಿದ್ದ. ಜಿಮ್’ನ ಅಮ್ಮ, ಅದನ್ನು ಕೇಳಿಸಿಕೊಂಡರೂ ಅದರ ಬೆಗ್ಗೆ ಹೆಚ್ಚಿನ ಗಮನವನ್ನೇ ಕೊಡಲಿಲ್ಲ. ‘ಆ ಮಾತಿಗೆ ಗಮನ ಕೊಟ್ಟು, ಇನ್ನೂ ಕೆದಕಿ ಆ ಮಗುವನ್ನು ಹುಡುಕಿದ್ದರೂ ಸಹ ನಮ್ಮ ಕೈಲಿ ಎರಡು ಮಕ್ಕಳನ್ನು ಸಾಕಲು ಸಾಧ್ಯವಾಗುತ್ತಿರಲಿಲ್ಲ ಬಿಡಿ. ಆದರೆ ಜಿಮ್ ಖುಷಿಯಾಗಿ ತನ್ನ ತಮ್ಮನೊಂದಿಗೇ ಬೆಳೆಯುವ ಅವಕಾಶ ಮಿಸ್ ಮಾಡ್ಕೊಂಡ್ಬಿಟ್ಟ ಪಾಪ’ ಎಂದು ಸಂದರ್ಶನವೊಂದರಲ್ಲಿ ಆಕೆ ಹೇಳಿದಳು.

ಮೂವತ್ತೇಳು ವರ್ಷಗಳ ನಂತರ ಇದ್ದಕ್ಕಿದ್ದಂತೆ ಜಿಮ್ ಲೆವಿಸ್’ನ ಅಮ್ಮನಿಗೆ ಆ ಕ್ಲರ್ಕಿನ ಮಾತು ಯಾಕೋ ನೆನಪಾಯಿತು. ಅದೇನಾದರೂ ನಿಜವಿರಬಹುದೇ ಎಂದು ತಿಳಿಯುವ ಕುತೂಹಲ ಆಕೆಗೆ ಕೊರೆಯಲು ಪ್ರಾರಂಭವಾಯಿತು (ಯಾಕೆ ಆ ಯೋಚನೆ ಬಂತು, ಅದೇಕೆ ಕಾಡಲು ಪ್ರಾರಂಭಿಸಿತು ಎಂದು ನನಗೇ ಗೊತ್ತಿಲ್ಲ ಎಂದು ಆಕೆ ಹೇಳುತ್ತಾಳೆ!). ಮಗನಿಗೆ ಈ ಕಥೆಯನ್ನು ಹೇಳಿ, ತನ್ನ ಸಹೋದರನನ್ನು ಹುಡುಕುವಂತೆ ಪ್ರೇರೇಪಿಸಿದಳು. ಮೊದಲಿಗೆ ನಿರಾಕರಿಸಿದ, ಬಹಳಷ್ಟು ಬಾರಿ, ಮತ್ತೆ ಮತ್ತೆ ಹೇಳಿದ ನಂತರ, 1978ರ ಥ್ಯಾಂಕ್ಸ್-ಗಿವಿಂಗ್ ಹಬ್ಬದ ದಿನ ಅಮ್ಮನ ಮಾತು ಕೇಳಲು ನಿರ್ಧರಿಸಿದ ಜಿಮ್ ಲೆವಿಸ್ ತನ್ನ ಪ್ರಯತ್ನವನ್ನು ಪ್ರಾರಂಭಿಸಿದ. ಎಲ್ಲಿಂದ ಹುಡುಕುವುದು!? ತನ್ನನ್ನು ದತ್ತುಕೊಟ್ಟ ಅನಾಥಾಲಯಕ್ಕೆ ಹೋಗಿ ಹೇಳಿದರೆ, ಅವರು ‘ಕಾನೂನಿನ ಪ್ರಕಾರ ನಾವು ಆ ವಿವರಗಳನ್ನು ನೀಡುವಂತಿಲ್ಲ. ಕೋರ್ಟ್ ಆದೇಶ ಬೇಕು’ ಎಂದರು. ದೃತಿಗೆಡದ ಜಿಮ್ ತನ್ನ ದತ್ತು ಕಾಗದಗಳನ್ನು ನಿರ್ಧರಿಸಿದ ಪ್ರೊಬೇಟ್ ನ್ಯಾಯಾಲಯದ ಮೊರೆಹೋದ. ಆ ಕೋರ್ಟ್, ಅನಾಥಾಲಯವನ್ನು ಸಂಪರ್ಕಿಸಿ, ಆ ಇನ್ನೊಬ್ಬ ಜಿಮ್’ನ ವಿಳಾಸ ಹುಡುಕಿಕೊಡುವಂತೆ ಹೇಳಿತು. ಜಿಮ್ ಲೆವಿಸ್’ನ ಮಾತಿನಲ್ಲೇ ಹೇಳುವುದಾದರೆ ‘ಒಂದು ದಿನ ನಾನು ಕೆಲಸ ಮುಗಿಸಿ ಮನೆಗೆ ಬಂದೆ. ಊಟದ ಟೇಬಲ್ ಮೇಲೆ ಒಂದು ಕಾಗದದಲ್ಲಿ “ಜಿಮ್ ಸ್ಪ್ರಿಂಗರ್’ನನ್ನು ಸಂಪರ್ಕಿಸಿ” ಎಂಬ ಬರಹದಡಿ ಒಂದು ಫೋನ್ ನಂಬರ್ ಇತ್ತು. ತಕ್ಷಣ ಫೋನಾಯಿಸಿದೆ. ನನಗೆ ಹಲೋ ಹೇಳುವಷ್ಟೂ ಉಸಿರು ಹೊರಡಲಿಲ್ಲ. ಏನು ಹೇಳಬೇಕೆಂದೇ ತಿಳಿಯದೇ ‘ನೀನೇನಾ ನನ್ನ ತಮ್ಮ?’ಎಂದಷ್ಟೇ ಕೇಳಿದೆ. ಆ ಕಡೆಯಿಂದ ‘ಹೌದು’ ಎಂದಷ್ಟೇ ಉತ್ತರಬಂತು. ಇಬ್ಬರೂ ತುಂಬಾ ಹೊತ್ತು ಏನೂ ಮಾತನಾಡದೇ, ಫೋನ್-ಲೈನು ನಿಶಬ್ದವಾಗಿತ್ತು. ನಾನು ಹಲ್ಲು ಕಚ್ಚಿಹಿಡಿದು ಅಳುತ್ತಿದ್ದೆ. ಹೆಚ್ಚೇನೂ ಮಾತನಾಡದೇ ಉಕ್ಕಿಬರುತ್ತಿದ್ದ ಅಳು ತಡೆಹಿಡಿದು ಆತನ ಆಡ್ರೆಸ್ ಕೇಳಿ ಬರೆದುಕೊಂಡೆ. ನಾನಿದ್ದ ಜಾಗಕ್ಕೆ ಪಶ್ಚಿಮದಲ್ಲಿ ನಾಲ್ಕುನೂರಮೂವತ್ತೈದು ಕಿಲೋಮೀಟರ್ ದೂರದಲ್ಲಿದ್ದ ಊರಿಗೆ ಕಾರು ಓಡಿಸಿಕೊಂಡೇ ಹೋದೆ. ಫೆಬ್ರವರಿ 9, 1978ರಂದು ಅಲ್ಲಿ ತಲುಪಿದಾಗ ಸಿಕ್ಕ ಸ್ವಾಗತ ಮರೆಯಲಾರದ್ದು. ಅವತ್ತು ಫೋನ್ ಕೆಳಗಿಟ್ಟಾಗ ಅಳಲು ಶುರುಮಾಡಿದ ಜಿಮ್ ಸ್ಪ್ರಿಂಗರ್, ಅದನ್ನು ಇನ್ನೂ ಜಾರಿಯಲ್ಲಿಟ್ಟಿದ್ದ. ತುಂಬಾ ಭಾವನಾತ್ಮಕವಾದ ಭೇಟಿಯಾಗಿತ್ತು ಅದು. ಅವನೊಂದಿಗೆ ಮಾತನಾಡುತ್ತಾ ಹೊರಟಾಗ, ಇಷ್ಟು ದಿನ ನಾನೊಬ್ಬ ಸಾಮಾನ್ಯ ಮನುಷ್ಯನೆಂದುಕೊಂಡಿದ್ದ ನನಗೆ ಇಂತಾ ಅಸಾಮಾನ್ಯ ಗತಕಾಲವೊಂದಿರಬಹುದೆಂದು ನಂಬಲೂ ಸಾಧ್ಯವಾಗಲಿಲ್ಲ!’

1690468_741852275904720_1695811321250525747_n

ಈ ವಿಷಯ ತಿಳಿದ ಥಾಮಸ್ ಬೌಚಾರ್ಡ್, ಒಂದು ವಾರದ ಕಾಲಕ್ಕೆ ಮಿನಿಯಾಪೊಲೀಸ್’ಗೆ ಬರಲು ಹಾಗೂ ಅಲ್ಲಿ ತಂಗಲು ಬೇಕಾಗುವ ಎಲ್ಲಾ ಖರ್ಚನ್ನು ವಹಿಸಿಕೊಂಡು, ಇಬ್ಬರೂ ಸಹೋದರರನ್ನು ತನ್ನ ಪ್ರಯೋಗಾಲಕ್ಕೆ ಕರೆಸಿಕೊಂಡು, ವ್ಯಾಪಕವಾದ ದೈಹಿಕ ಹಾಗೂ ಮಾನಸಿಕ ಪರೀಕ್ಷೆಗಳನ್ನು ನಡೆಸಿದ. ವಿಷಯ ಮಾಧ್ಯಮಗಳಿಗೆ ತಿಳಿದು, ಇವರಿಬ್ಬರೂ ಮಾಧ್ಯಮಪ್ರಚಾರಗಳಿಂದ ಗಾಬರಿಗೊಂಡು ಅವರ ಹೇಳಿಕೆಗಳೆಲ್ಲಾ ‘ಕಲುಷಿತ’ಗೊಳ್ಳುವ ಮೊದಲೇ ಥಾಮಸ್ ಸಾಧ್ಯವಾದಷ್ಟು ವಸ್ತುನಿಷ್ಟ ಹಾಗೂ ವೈಜ್ಞಾನಿಕ ಅಧ್ಯಯನಗಳನ್ನು ನಡೆಸಬಯಸಿದ್ದ. ಇದೇನೂ ಜಗತ್ತಿನ ಮೊದಲ ಅವಳಿಗಳ ಪುನರ್ಮಿಲನದ ಪ್ರಕರಣವೇನೂ ಆಗಿರಲಿಲ್ಲ. ವಿಶ್ವಾದ್ಯಂತ ಸುಮಾರು 75 ಹಾಗೂ ಅಮೇರಿಕಾದಲ್ಲೇ 19 ಇಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಆದರೆ, ಆ ಎಲ್ಲಾ ಪ್ರಕರಣಗಳಿಗಿಂತ ಹೆಚ್ಚು ಕಾಲ ಈ ಅವಳಿಗಳು ಬೇರ್ಪಟ್ಟಿದ್ದರು ಹಾಗೂ ಇಬ್ಬರಲ್ಲೂ ಅಷ್ಟೂ ವರ್ಷದ ಪ್ರತ್ಯೇಕತೆ ಹಾಗೂ ಬೆಳೆದ ಪರಿಸರದ ವ್ಯತ್ಯಾಸದ ನಡುವೆಯೂ ಅಸಾಮನ್ಯ ಸಾಮ್ಯತೆಗಳಿದ್ದವು.

ಮೇಲೆ ಹೇಳಿದ ವಿವರಣೆಗಳಿಗೆ ವಿರುದ್ದವಾಗಿ ಘಟಿಸಿದ ಒಂದೇ ವ್ಯತ್ಯಾಸವೆಂದರೆ, ಫೆಬ್ರವರಿ 28, 1979ರಂದು ಜಿಮ್ ಲೆವಿಸ್, ತನ್ನ ಎರಡನೇ ಪತ್ನಿ, ಬೆಟ್ಟಿಯಿಂದ ವಿಚ್ಛೇದನ ಪಡೆದು, ಸ್ಯಾಂಡಿ ಜೇಕಬ್ಸ್ ಎಂಬ ಮಹಿಳೆಯನ್ನು ಮದುವೆಯಾದ. ಜಿಮ್ ಸ್ಪ್ರಿಂಗರ್ ಮಾತ್ರ ತನ್ನ ಎರಡನೇ ಹೆಂಡತಿ ಬೆಟ್ಟಿಯೊಂದಿಗೇ ಉಳಿದ ಜೀವನವನ್ನು (ಸುಖವಾಗಿ ಕಳೆದ ಎಂದು ಹೇಳಲು ಯಾವ ದಾಖಲೆಯೂ ಇಲ್ಲದಿದ್ದರೂ 😛 ) ಕಳೆದ. ಜಿಮ್ ಸ್ಪ್ರಿಂಗರ್ ಮತ್ತವನ ಬೆಟ್ಟಿ ಇಬ್ಬರೂ ತನ್ನ ಹೊಸದಾಗಿ ಸಿಕ್ಕ ಸಹೋದರನ ಮದುವೆಯಲ್ಲಿ ಉಪಸ್ಥಿತರಿದ್ದರು ಹಾಗೂ ಜಿಮ್ (ಸ್ಪ್ರಿಂಗರ್) ಜಿಮ್ (ಲೆವಿಸ್)ನ ‘ಬೆಸ್ಟ್ ಮ್ಯಾನ್’ ಆಗಿ ಸೇವೆ ಸಲ್ಲಿಸಿದ.

10624979_741852272571387_3297169756770331172_n

ಕೊಸರು:
“ಅವಳಿಗಳಲ್ಲಿ ಎಷ್ಟೇ ಸಾಮ್ಯತೆಯಿರಲಿ, ನಮ್ಮ ಮುಂದೆ ಅವೆಲ್ಲಾ ಗೌಣ. ನಮ್ಮನ್ನು ನೋಡಿ!! ಬೇರೆ ಬೇರೆ ಪೋಷಕರಿಗೆ ಹುಟ್ಟಿದರೂ, ಎಷ್ಟೇ ಬೇರೆ ಬೇರೆ ವಾತಾವರಣದಲ್ಲಿ ಬೆಳೆದರೂ, ಯಾವ ಪಕ್ಷಕ್ಕಾಗಿ ಕೆಲಸ ಮಾಡಿದರೂ, ಹೊಟ್ಟೆಗೇ ಏನೇ ತಿಂದರೂ, ಜಗತ್ತಿನಾದ್ಯಂತ ನಮ್ಮವರ ವರ್ತನೆ ಒಂದೇ ರೀತಿ ಇರುತ್ತದೆ” ಅಂತಾ ರಾಜಕಾರಣಿಗಳು ಶಾಸಕರ ಭವನದಲ್ಲಿ ಪ್ರಕಟಣೆ ಹೊರಡಿಸಿದ್ದಾರಂತೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s