ಬುದ್ಧಿಗೊಂದು ಗುದ್ದು – ೨೩

ಚೆಂಡು, ಹಕ್ಕಿಪುಕ್ಕ, ಸಾಪೇಕ್ಷಸಿದ್ಧಾಂತ ಹಾಗೂ ಸಮಾನತೆ

ಒಂದು ಪ್ರಶ್ನೆ:

ಒಂದಷ್ಟು ಎತ್ತರದಿಂದ 5ಕೆಜಿ ತೂಕದ ಒಂದು ಚಂಡನ್ನು ಮತ್ತು ಏಳುಮಲ್ಲಿಗೆ ತೂಕದ ಒಂದು ಹಕ್ಕಿಪುಕ್ಕವನ್ನೂ ಒಟ್ಟಿಗೆ ಕೆಳಬಿಟ್ಟರೆ, ಯಾವುದು ಮೊದಲು ಭೂಮಿಗೆ ತಲುಪುತ್ತದೆ?

ಬಹಳಷ್ಟು ಜನರು ಹೇಳುವ ಉತ್ತರ “ಚೆಂಡು ಬೇಗ ಭೂಮಿಗೆ ತಲುಪುತ್ತದೆ, ಪುಕ್ಕ ನಿಧಾನವಾಗಿ ಕೆಳಗೆ ಬಂದು ತಲುಪುತ್ತದೆ.” ಇದು ನಿಜವೇ? ಉತ್ತರ ‘ಹೌದು’. ಆದರೆ ಯಾಕೆ!?

ವಿಜ್ಞಾನದ ಬಗ್ಗೆ ತಲೆಕೆಡೆಸಿಕೊಳ್ಳದ ಜನ ಇದಕ್ಕೆ ‘ಚೆಂಡು ಹೆಚ್ಚು ಭಾರವಾಗಿದೆ. ಅದಕ್ಕೇ ಬೇಗ ಭೂಮಿಯನ್ನು ತಲುಪಿತು’ ಎಂಬ ಕಾರಣ ಕೊಡಬಹುದು. ಆದರೆ ತಮಾಷೆಯ ವಿಷಯವೆಂದರೆ, ಈ ‘ಭೂಮಿಯನ್ನು ತಲುಪುವುದು’ ಎಂಬ ಕ್ರಿಯೆಯಿದೆ ನೋಡಿ, ಇದು ನಿಜವಾಗಿ ಭೂಮಿಯನ್ನು ತಲುಪುವುದಲ್ಲ. ಅದು ಭೂಮಿ ಆ ಚೆಂಡನ್ನು ಎಷ್ಟು ವೇಗವಾಗಿ ತನ್ನತ್ತ ಸೆಳೆಯುತ್ತಿದೆ ಎಂಬುದಾಗಿದೆ. ಇನ್ನೂ ವೈಜ್ಞಾನಿಕವಾಗಿ ಹೇಳಬೇಕಂದರೆ ವಸ್ತುಗಳು ಭೂಮಿಯನ್ನು ತಲುಪಲು ಎಷ್ಟು ವೇಗೋತ್ಕರ್ಷವನ್ನು (acceleration) ಪಡೆಯುತ್ತವೆ ಎಂಬುದಾಗಿದೆ. ಇದನ್ನು ಸುಲಭವಾದ ಪದಗಳಲ್ಲಿ ‘ಗುರುತ್ವ ಬಲ’ಎನ್ನುತ್ತಾರೆ. ಭೂಮಿ ತನ್ನ ಮೇಲಿರುವ ಎಲ್ಲಾ ವಸ್ತುಗಳನ್ನು ಒಂದೇಸಮನಾಗಿ (ಪ್ರತಿ ಸೆಕೆಂಡಿಗೆ 9.8ಮೀಟರಿನಷ್ಟು ಬಲದಲ್ಲಿ) ತನ್ನತ್ತ ಸೆಳೆಯುತ್ತದೆ. ಭೂಮಿ ನೀವು ಹೆಚ್ಚು ಭಾರವಾಗಿದ್ದಷ್ಟೂ ನಿಮ್ಮನ್ನು ಹೆಚ್ಚು ವೇಗವಾಗಿ ತನ್ನತ್ತ ಸೆಳೆಯುತ್ತದೆ. F=m.a ಅಂದರೆ ವಸ್ತುವಿನ ಭಾರ ಮತ್ತು ಅದರ ವೇಗೋತ್ಕರ್ಷ ಎರಡೂ ಸೇರಿ, ವಸ್ತುವಿನ ಮೇಲಿರುವ ಒಟ್ಟು ಶಕ್ತಿಯನ್ನು ನಿರ್ಧರಿಸುತ್ತವೆ (ಇದೇ ಕಾರಣಕ್ಕೆ ನಿಧಾನವಾಗಿ ಬಂದು ಗುದ್ದುವ ಲಾರಿ ಹಾಗೂ ವೇಗವಾಗಿ ಬಂದು ಗುದ್ದುವ ಲಾರಿಗಳ ಅಪಘಾತ ಪರಿಣಾಮ ಬೇರೆ ಬೇರೆ)

ಆದರೆ, ಈ ಚೆಂಡು ಮತ್ತು ಹಕ್ಕಿಪುಕ್ಕದ ಉದಾಹರಣೆಯಲ್ಲಿ, ಹಕ್ಕಿಪುಕ್ಕದ ವೇಗೋತ್ಕರ್ಷವನ್ನು ಕಡಿಮೆ ಮಾಡುವ ಇನ್ನೊಂದು ಮಹತ್ವದ ಅಂಶವನ್ನು ಮರೆಯಬಾರದು. ಅದೇ ಗಾಳಿಯ ಪ್ರತಿರೋಧ. ಚೆಂಡಿನ ಮೇಲ್ಮೈ ನುಣುಪಾಗಿಯೂ ಒಂದೇ ರೀತಿ ಇರುವುದರಿಂದಾಗಿಯೂ, ಆ ವಸ್ತುವಿಗೆ ಗಾಳಿ ಒಡ್ಡುವ ಪ್ರತಿರೋಧ ಕಡಿಮೆ. ಅದರ ಮೈ ಮೇಲೆ ಗಾಳಿ ಸುಲಭವಾಗಿ ಸವರಿಕೊಂಡು ಹೋಗುತ್ತದೆ. ಹಕ್ಕಿಪುಕ್ಕದ ಇಡೀ ಮೇಲ್ಮೈ ಒಂದೇ ರೀತಿಯಿಲ್ಲದ ಕಾರಣ ಅದಕ್ಕೆ ಗಾಳಿ ಒಡ್ಡುವ ಪ್ರತಿರೋಧ ಹೆಚ್ಚು. ವೇಗವಾಗಿ ಹೋಗುತ್ತಿರುವ ಕಾರಿನ ಅಥವ ರೈಲಿನಲ್ಲಿ ಕಿಟಕಿಯಿಂದ ಕೈ ಹೊರಹಾಕಿ ನೋಡಿ! (ಮೊದಲು ಕೈಯನ್ನು ಹೊರಹಾಕುವುದು ಸುರಕ್ಷಿತವೇ ಎಂಬುದನ್ನು ಖಚಿತಪಡಿಸಿಕೊಳ್ಳಿ) ಹಸ್ತವನ್ನು ತೆರೆದಾಗ ಗಾಳಿಯ ಪ್ರತಿರೋಧದ ಅನುಭವ ನಿಮಗಾಗುತ್ತದೆ. ಈಗ ಕೈಯನ್ನು ಮುಷ್ಟಿಕಟ್ಟಿ, ಗಾಳಿಯ ಪ್ರತಿರೋಧ ಕಡಿಮೆಯಾಗುವುದು ನಿಮ್ಮ ಅನುಭವಕ್ಕೆ ಬರುತ್ತದೆ. ಈ ಕಾರಣಕ್ಕಾಗಿಯೇ ವಾಹನ ತಯಾರಿಕಾ ಕಂಪನಿಗಳು ಗಾಳಿಯ ಹರಿವಿಗನುಗುಣವಾಗಿ ವಾಹನಗಳ ಮುಖಗಳನ್ನು ವಿನ್ಯಾಸಿಸುವುದು.

ಇಲ್ಲಿ ಕೆಳಗೊಂದು ಕುತೂಹಲಕಾರಿ ವಿಡಿಯೋ ಇದೆ ನೋಡಿ. ಈ ವಿಡಿಯೋದಲ್ಲಿ ಒಂದು ಪ್ರಯೋಗ, ಮತ್ತದರ ವಿವರಣೆ ಇದೆ. ಒಂದು ರೂಮಿನಲ್ಲಿ ಇರುವ ಗಾಳಿಯನ್ನೆಲ್ಲಾ ತೆಗೆದು, ಒಂದು ಭಾರದ ಚೆಂಡು ಮತ್ತು ಒಂದಷ್ಟು ಹಕ್ಕಿಪುಕ್ಕಗಳನ್ನು ಒಂದೇ ಎತ್ತರದಿಂದ, ಒಂದೇ ಸಮಯಕ್ಕೆ ಕೆಳಬಿಟ್ಟರೆ ಏನಾಗುತ್ತದೆ ಎಂಬುದನ್ನು ತೋರಿಸುವ ಪ್ರಯೋಗವಿದು. ನೋಡಿ ಆನಂದಿಸಿ.

ಇದನ್ನು ನೋಡಿದಾಗ ನನಗನ್ನಿಸಿದ್ದು, ಜಗತ್ತಿನಲ್ಲಿ ಜನರೂ ಇಷ್ಟೇ ಸಮಾನರಾಗಿ ಹುಟ್ಟಿದ್ದರು. ಆದರೆ ನಿಧಾನವಾಗಿ (ಕು)ಯುಕ್ತಿ, ಹಣಬಲ, ಭಾಂಧವ್ಯಪ್ರೇಮ, ಮುಂತಾದವನ್ನೆಲ್ಲಾ ಬೆಳೆಸಿಕೊಂಡು ಅಸಮಾನರಾಗಿಬಿಟ್ಟರು. ಹಾಗಾಗಿಯೇ ಇವತ್ತು ಕೆಲವರ ಅಪರಾದ ಮುಚ್ಚಿಹೋಗುತ್ತೆ, ಕೆಲವರ ಮುಗ್ಧತೆ ಎಂದಿಗೂ ಹೊರಬರೊಲ್ಲ. ಈ ಪ್ರಯೋಗದಲ್ಲಿ ಮಾಡಿದಂತೆ ಈ ‘ವಿಶೇಷ’ ಬಲಗಳನ್ನೆಲ್ಲಾ ಹೊರಗೆಳೆದು ನಿರ್ವಾತದ ವಾತಾವರಣ ನಿರ್ಮಾಣ ಮಾಡಿದಾಗ, ಯಾವುದೇ ಪ್ರಭಾವ/ವರ್ಚಸ್ಸು ಇಲ್ಲವಾದಾಗ, ಎಲ್ಲರೂ ಒಂದೇ ಎಂದಾದಾಗ ಮಾತ್ರ ಎಲ್ಲ ಅಪರಾಧಗಳೂ ಸಮಾನವಾಗಿ ನಿರ್ಧರಿಸಲ್ಪಡುತ್ತವೆ. ಅಲ್ಲಿಯವರೆಗೆ, ಸಮಾಜದ ಅಂಕುಡೊಂಕುಗಳನ್ನು ಒಪ್ಪಿಕೊಂಡು ಬದುಕುವುದಷ್ಟೇ ನಮಗುಳಿದ ದಾರಿ. ಇಲ್ಲವೆಂದಾದಲ್ಲಿ ಆ ಅಂಕುಡೊಂಕುಗಳನ್ನು ಸರಿಪಡಿಸುವ ಪ್ರಯತ್ನ ನಡೆಯಬೇಕು. ಅದಕ್ಕಾಗಿ ಹೋರಾಡಬೇಕು. ನಮ್ಮ ಅಭಿಪ್ರಾಯಗಳು ವ್ಯಕ್ತವಾಗಬೇಕು. ಮಾತನಾಡಬೇಕು. ಎದೆಬಿಚ್ಚಿ ಕೂಗಬೇಕು. ಸಾಕುಬಿಡಿ ತುಂಬಾ ಎಮೋಶನಲ್ ಆದ್ರೆ ಕಷ್ಟ…. 😦

ಕೊಸರು:

ನಿಮ್ಮ ತೂಕ ಭೂಮಿಯ ಮೇಲೆ x ಎಂದಿಟ್ಟುಕೊಳ್ಳೋಣ. ಮೊದಲೇ ಹೇಳಿದಂತೆ ಈ ತೂಕ ಭೂಮಿಯ ಗುರುತ್ವಬಲದಿಂದ ನಿರ್ಧಾರಿತವಾದದ್ದು. ನಿಮ್ಮ ನಿಜವಾದ ತೂಕ ಅದಲ್ಲ. ಹಾಗೂ ಈ ತೂಕ ನೀವೆಲ್ಲಿದ್ದೀರಿ ಎನ್ನುವುದರ ಮೇಲೂ ನಿರ್ಧಾರಿತವಾಗುತ್ತದೆ. ಅಂದರೆ ಯಾವ ಗ್ರಹದ ಮೇಲಿದ್ದೀರಿ ಎನ್ನುವುದರ ಮೇಲೆ ಅವಲಂಬಿತವಾಗಿದೆ. (ಭೂಮಿಯಮೇಲೂ ಕೆಲವೊಮ್ಮೆ ಬೇರೆ ಬೇರೆ ಎತ್ತರದ ಪ್ರದೇಶಗಳಲ್ಲಿದ್ದಾಗ ನಿಮ್ಮ ತೂಕ ಬದಲಾಗುತ್ತದೆ! ನಿಮಗೇ ಗೊತ್ತಿಲ್ಲದಂತೆ!!) ಉದಾಹರಣೆಗೆ ಮಂಗಳಗ್ರಹವನ್ನು ತೆಗೆದುಕೊಳ್ಳೋಣ. ಮಂಗಳಗ್ರಹ ನೋಡಲು ಭೂಮಿಯಷ್ಟೇ ದೊಡ್ಡದಿದ್ದರೂ, ಅದರ ಸಾಂದ್ರತೆ ಭೂಮಿಗಿಂತಾ ಕಡಿಮೆ. ಹಾಗಾಗಿ ಅದರ ವಾತಾವರಣವೂ ಭೂಮಿಯ ವಾತಾವರಣಕ್ಕಿಂತ ತೆಳು. ಈ ಕಾರಣದಿಂದಾಗಿ ಮಂಗಳನ ಗುರುತ್ವ ಭೂಮಿಯ ಗುರುತ್ವಕ್ಕೆ ಹೋಲಿಸಿದರೆ 38% ಅಷ್ಟೇ. ಅಂದರೆ ಮಂಗಳ ತನ್ನ ಮೇಲಿರುವ ವಸ್ತುಗಳನ್ನು ಪ್ರತಿಸೆಕೆಂಡಿಗೆ 3.7ಮೀಟರ್ ಬಲದಲ್ಲಷ್ಟೇ ಕೆಳಗೆಳೆಯುತ್ತಾನೆ (ಭೂಮಿ 9.8ಮೀ, ಪ್ರತಿ ಸೆಕೆಂಡಿಗೆ). ಆದ್ದರಿಂದ ಭೂಮಿಯ ಮೇಲೆ 85 ಕಿಲೋ ಇರುವ ನಾನು ಮಂಗಳನಲ್ಲಿ ಬರೇ 32 ಕಿಲೋ ತೂಗುತ್ತೇನೆ! ಇದೇ ರೀತಿ ಚಂದ್ರನ ಮೇಲೆ ನನ್ನ ಭಾರ 14 ಕಿಲೋ ಅಷ್ಟೇ!! ತೂಕ ಇಳಿಸಬೇಕೆಂಬ ಇಚ್ಚೆಯಿರುವವರು ಸುಮ್ಮನೆ ಜಿಮ್ ಸದಸ್ಯತ್ವದ ಮೇಲೆ ದುಡ್ಡು ಖರ್ಚು ಮಾಡುವುದನ್ನು ಬಿಟ್ಟು ಮಂಗಳಗ್ರಹಕ್ಕೆ ಹೋದರೆ ಸಾಕು. ಹೇಗೂ ನಮ್ಮ ಇಸ್ರೋದವರು ಅತ್ಯಂತ ಕಡಿಮೆ ಖರ್ಚಿನಲ್ಲಿ ಅಲ್ಲಿಗೆ ಹೋಗೋಕೆ ಸ್ಕೈ-ಟ್ಯಾಕ್ಸಿ ಮಾಡ್ತಾ ಇದ್ದಾರಂತೆ 😉 😀

ಒಂದು ನಿಮಿಷ, ಈ ಚರ್ಚೆಯ ಇನ್ನೊಂದು ಬದಿಯನ್ನೂ ನೋಡಿ ಹೋಗಿ ಸ್ವಾಮಿ. ನೆಪ್ಚೂನ್ ಗ್ರಹಕ್ಕೆ ಭೇಟಿ ಕೊಟ್ಟರೆ ಅಲ್ಲಿ ನನ್ನ ತೂಕ 95.6 ಕಿಲೋ! ಗುರುಗ್ರಹ ಮೇಲೆ ನನ್ನ ತೂಕ 200 ಕಿಲೋ!! ಸೂರ್ಯನ ಮೇಲೆ ಏನಾದರೂ ನಿಲ್ಲಲು ಸಾಧ್ಯವಾದರೆ, ಅಲ್ಲಿ ನನ್ನ ತೂಕ 2,301 ಕಿಲೋ!! ಸೃಷ್ಟಿಯಲ್ಲಿ ಅತ್ಯಂತ ಹೆಚ್ಚಿನ ಸಾಂದ್ರತೆಯ ಆಕಾಶಕಾಯವಾದ ನ್ಯೂಟ್ರಾನ್ ನಕ್ಷತ್ರದ ಮೇಲೇನೇನಾದರೂ ನಿಲ್ಲಲು ಸಾಧ್ಯವಾದರೆ ಅಲ್ಲಿ ತೂಕ 1,190 ಶತಕೋಟಿ ಕಿಲೋ!!! (ಕೃಷ್ಣರಂಧ್ರಗಳ ಬಗ್ಗೆ ಮಾತೇ ಬೇಡ ಬಿಡಿ) ಯಾರಿಗಾದರೂ ತೂಕ ಹೆಚ್ಚಿಸಿಕೊಳ್ಲಬೇಕೆಂದಿದ್ದರೆ ಆ ನ್ಯೂಟ್ರಿಗೈನ್ ತಿನ್ನೋ ಬದಲು ನೆಪ್ಚೂನಿಗೋ ಗುರುಗ್ರಹಕ್ಕೋ ಟಿಕೇಟು ತಗೊಳ್ಳಿ 🙂

ನಿಮ್ಮ ತೂಕ ಬೇರೆ ಗ್ರಹದ ಮೇಲೆ ಎಷ್ಟು ಅಂತಾ ತಿಳಿಯೋ ಆಸೆ ಇದ್ರೆ, ಒಂದ್ರೂಪಾಯಿ ನನ್ನ ಸ್ವಿಸ್ ಬ್ಯಾಂಕ್ ಅಕೌಟಿಗೆ ಟ್ರಾಸ್ಪರ್ರ್ ಮಾಡಿ, ಇಲ್ಲಿ ಈ ಕೊಂಡಿಯ ಕಿವಿ ಹಿಂಡಿ http://bit.ly/1bngVTQ

ಇನ್ಮೇಲೆ ಯಾರಾದ್ರೂ “ನಿಮ್ ವೈಟು ಎಷ್ಟು?” ಅಂತಾ ಕೇಳಿದ್ರೆ ಯಾವ ಗ್ರಹದ ಮೇಲೆ ಅಂತಾ ಕೇಳಿ ಅವರನ್ನು ಒಂದೆರೆಡು ಕ್ಷಣ ತಬ್ಬಿಬ್ಬು ಮಾಡಿ. ಆಮೇಲೆ ಅವರು ‘ಯಾಕೆ ಹಾಗೆ ಕೇಳಿದ್ದು?’ ಅಂತಾ ಕೇಳಿದ್ರೆ, ನಾನು ಹೇಳಿದ ಈ ಹರಿಕಥೆ ಪುರಾಣವನ್ನೆಲ್ಲಾ ಅವರಿಗೆ ಕೊರೀರಿ 🙂 ಪುಗ್ಸಟ್ಟೆ ಕೇಳುಗರು ಸಿಕ್ಕಾಗ ಬಿಡಬಾರದು 🙂

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s