ದಿನಕ್ಕೊಂದು ವಿಷಯ – ೨೦

ದಿನಕ್ಕೊಂದು ವಿಷಯ – ೨೦

ಹೆಸರಲ್ಲೇನಿದೆ ಬಿಡಿ ಸ್ವಾಮಿ

ನಿಜವಾಗಿಯೂ…..ಹೆಸರಲ್ಲೇನಿದೆ!? ಬರೀ ಅಕ್ಷರಗಳು ಅಂತಾ ಜೋಕ್ ಮಾಡ್ಬೇಡಿ. ಎಷ್ಟೋ ಸಲ ಮನುಷ್ಯನಿಗಿಂತಾ ಅವನ ಹೆಸರೇ ಮುಖ್ಯವಾಗುತ್ತೆ. ಅದಕ್ಕೇ ಅಲ್ವೇ, ಮನುಷ್ಯ ಸತ್ತಮೇಲೂ ಅವನ ಕೆಲಸಗಳಿಂದಾಗಿ ಹೆಸರು ಮಾತ್ರ ಉಳಿಯುವುದು? ಕೆಲವೊಮ್ಮೆ ಮಾಡಿದ ಕೆಲಸ ಕೂಡ ಅಳಿದು ಹೋದಮೇಲೂ ಹೆಸರು ಮಾತ್ರ ಹಾಗೇ ಉಳಿಯುತ್ತೆ (ಉದಾ: ಅಲೆಕ್ಸಾಂಡರ್). ಎಲ್ಲಾ ನಾಯಿಗಳೂ ಒಂದೇ ಆದ್ರೂ ಸಹ ಕೆಲವರು ಟೈಗರ್ ಅಂತಲೂ ಕೆಲವರು ಪಿಂಕಿ ಅಂತಲೂ ಹೆಸರಿಡ್ತಾರೆ. ಯಾಕೆಂದರೆ ಒಂದು ಜೀವಿಗೆ ಅಸ್ಮಿತೆ ಕೊಡುವುದರಲ್ಲಿ ಹೆಸರಿನ ಪಾತ್ರ ಬಹುಮುಖ್ಯ.

ಹೆಸರು ಎನ್ನುವ ಕಲ್ಪನೆ ಯಾವಾಗಲಿಂದ ಪ್ರಾರಂಭವಾಯ್ತು ಎನ್ನುವುದು ಇಂದಿಗೂ ಒಂದು ಕುತೂಹಲಭರಿತ ವಿಷಯ. ನಮ್ಮೆಲ್ಲಾ ದಾಖಲೀಕೃತ ಚರಿತ್ರೆ ಹಾಗೂ ದಾಖಾಲಾಗದ ಪುರಾಣಗಳು ಬರುವ ಕಾಲಕ್ಕಾಗಲೇ ಹೆಸರಿಡುವ ಸಂಪ್ರದಾಯ ಪ್ರಾರಂಭವಾಗಿತ್ತು. ಮಾನವಶಾಸ್ತ್ರಜ್ಞರ ಪ್ರಕಾರ ಭೂಮಿಯ ಮೇಲೆ ಜನಿಸಿದ ಮೊದಲ ಮನುಷ್ಯರು ಒಬ್ಬರನ್ನೊಬ್ಬರು ಬೇಟಿಯಾದಾಗ, ಒಬ್ಬರನ್ನೊಬ್ಬರು ಗುರುತಿಸಲು ಹೆಸರು, ಹಚ್ಚೆ, ಸಂಖ್ಯೆ ಇವೆಲ್ಲವನ್ನೂ ಕಂಡುಹಿಡಿದರು ಎಂದು ಹೇಳುತ್ತಾರೆ.

ಸಾವಿರಾರು ವರ್ಷದ ನಂತರ ನಾವೀಗ ಎಲ್ಲಿಗೆ ಬಂದು ನಿಂತಿದ್ದೇವೆ ಎಂದರೆ, ಹೆಸರೇ ಎಲ್ಲವೂ ಆಗಿದೆ. ಮಾಡುವ ಕೆಲಸ ಏನು ಬೇಕಾದರೂ ಆಗಲಿ ಇನ್ಫೋಸಿಸ್, ವಿಪ್ರೋ, ಟಾಟಾ, ಕಿಂಗ್ಫಿಷರ್ ಎಂಬ ಹೆಸರಿನ ಕಂಪನಿಗಳಲ್ಲಿ ಕೆಲಸ ಬೇಕಾಗಿದೆ. ಕುಡಿಯುವುದು ವಿಸ್ಕಿಯೇ ಆಗಿದ್ದರೂ ಜಾಕ್ ಡೇನಿಯಲ್ಲೇ ಬೇಕು, ಜಾನಿ ವಾಕರ್ರೇ ಬೇಕು. ಸೇದುವುದು ಅದೇ ಅನಿಷ್ಟ ಹೊಗೆಯಾದರೂ ಗೋಲ್ಡ್ ಫ್ಲೇಕ್, ವಿಲ್ಸ್ ಎನ್ನುವ ಹೆಸರಿನದ್ದೇ ಆಗಬೇಕು. ನಮ್ಮ ಅಜ್ಜಿಯಂತೂ ತಿನ್ನೋದು ಅದೇ ಕಾಂಪೋಸಿಶನ್ ಮಾತ್ರೆಯಾದರೂ ಅವರಿಗೆ ಬಿ.ಪಿ ಇಳಿಸಲು Diamox ಮಾತ್ರೇನೇ ಆಗ್ಬೇಕು. ಅವರಿಗೆ ಎಷ್ಟು ಅರ್ಥ ಮಾಡಿಸಿದ್ರೂ ಬೇರೆ ಮಾತ್ರೆ ತಿನ್ನೊಲ್ಲ. ಹಾಗಾಗಿ ಹೆಸರಲ್ಲೇನಿದೆ ಸ್ವಾಮಿ ಅನ್ಬೇಡಿ. ತುಂಬಾನೇ ಇದೆ

ಆದರೆ ಮನುಷ್ಯರ ವಿಷಯಕ್ಕೆ ಬಂದ್ರೆ ಇಲ್ಲಿ ತಮಾಷೆಯ ದೊಡ್ಡ ಪಟ್ಟಿಯೇ ಇದೆ. ನಮ್ಮಜ್ಜಿ ಹೆಸರು ಶಾರದ ಅಂತಾ, ಆದ್ರೆ ಓದೋಕೆ ಒಂದಕ್ಷರಾನೂ ಬರಲ್ಲ! ನುಡ್ಸೋದು ಹೋಗ್ಲಿ, ವೀಣೇನ ಕೈಯಲ್ಲಿ ಹಿಡಿಯೋಕೂ ಬರಲ್ಲ! ಅಜೇಯ ಅಂತಾ ಹೆಸರಿಟ್ಟುಕೊಂಡು ಓಡೋ ರೇಸಿನಲ್ಲೆಲ್ಲಾ ಸೋಲುವ ನನ್ನ ದೋಸ್ತ್ ಒಬ್ಬ ಇದ್ದಾನೆ. ಹೆಸರು ಸಿದ್ರಾಮ, ಕೆಲಸಕ್ಕೆ ಕರೆದ್ರೆ….ಏಯ್ ಹೋಗಪ್ಪಾ ಅನ್ನೋ ಜನರನ್ನ ನಾವು ನೋಡಿಲ್ವಾ? ಶಕ್ತಿ ಅಂತಾ ಹೆಸರಿಟ್ಟುಕೊಂಡು, ಐದು ಕೇಜಿ ಅಕ್ಕಿ ಮೂಟೆ ಎತ್ತುವಷ್ಟರಲ್ಲಿ ಸುಸ್ತು ಆಗೋರನ್ನ ನಾವು ನೊಡಿಲ್ವಾ!?

ಆದರೆ ಇವತ್ತಿನ ವಿಷಯ, ಊರಿನ ಹೆಸರುಗಳು. ಆದರೆ ಅಂತಿಂತಾ ಹೆಸರುಗಳಲ್ಲ. ತಮಾಷೆಯ ಹೆಸರುಗಳು. ನಮ್ಮಲ್ಲೇನೋ ‘ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್’ ಎಂದು ನಮ್ಮ ಆದಿಕವಿ ಪಂಪ ಹೆಮ್ಮೆಯಿಂದ ಹೇಳಿಕೊಂಡ. ಆದರೆ ಎಲ್ಲರೂ ಹಾಗಿರೋಲ್ಲ. ಅವರ ದೇಶವೂ ಬಹುಷಃ ಹಾಗಿರೊಲ್ಲ ಅನ್ಸುತ್ತೆ. ಅದಕ್ಕೇ ನೋಡಿ ಯು.ಎಸ್.ಎ.ನಲ್ಲಿ ಓರೆಗಾಂವ್ ಎಂಬ ರಾಜ್ಯದಲ್ಲಿ ಒಂದು ಊರಿನ ಹೆಸರು ‘ಡಲ್ (Dull)’ (ಚಿತ್ರ 1) ಅಂತಾ ಇಟ್ಟುಬಿಟ್ಟಿದ್ದಾರೆ. ಇದಕ್ಕೆ ಸರಿಯಾಗಿ, ಇವರ ಪಕ್ಕದ ಊರಿನವರೂ ಸಹ ನಾವೀನೂ ಕಮ್ಮಿ ಇಲ್ಲ, ಅಂತಾ ತೋರಿಸೋಕೆ ಅವರ ಊರಿಗೆ ‘ಬೋರಿಂಗ್ (Boring)’ (ಚಿತ್ರ 2) ಅಂತಾ ಹೆಸರಿಟ್ಟಿದ್ದಾರೆ. ಜೀವನದಲ್ಲಿ ಅದೇನೋ ಜಿಗುಪ್ಸೆಯೋ ಈ ಜನರಿಗೆ, ಇವರಿಬ್ರೂ ಸೇರ್ಕೋಂಡು ಪ್ರತೀವರ್ಷದ ಆಗಸ್ಟ್ 9ರಂದು ‘ಡಲ್ ಹಾಗೂ ಬೋರಿಂಗ್ ದಿನ (Dull & Boring Day)’ ಅಂತಾ ಆಚರಿಸುತ್ತಾರಂತೆ!! ಅವತ್ತು ನಡೆಯುವ ಕಾರ್ಯಕ್ರಮಗಳು ಅಷ್ಟೇನೂ ಆಸಕ್ತಿದಾಯಕವಾಗಿರಲಿಕ್ಕಿಲ್ಲ UKಯಲ್ಲಿ ಸಹಾ ಡಲ್ ಎನ್ನುವ ಇನ್ನೊಂದು ಸಣ್ಣ ಊರಿದೆ! ಈ ಡಲ್ ಮತ್ತು ಬೋರಿಂಗಿಗೆ ಸ್ಪರ್ಧೆಯೊಡ್ದಲು ನಿರ್ಧರಿಸಿದ ಆಸ್ಟ್ರೇಲಿಯನ್ನರು ತಮ್ಮದೊಂದು ಊರಿಗೆ ‘ಬ್ಲಾಂಡ್(Bland = ಸಪ್ಪೆ)’ (ಚಿತ್ರ 3) ಎಂದು ಹೆಸರಿಟ್ಟಿದ್ದಾರೆ!!

ಅಮೇರಿಕಾದಲ್ಲಿ ಮತ್ತು ಯೂರೋಪಿನ ಬಹಳಷ್ಟು ದೇಶಗಳಲ್ಲಿ ಇಂತಹುದೇ ತಮಾಷೆಯ ಹೆಸರಿಗೇನೋ ಕಮ್ಮಿಯಿಲ್ಲ. ಯಾರೋ ಪುಣ್ಯಾತ್ಮ ‘ಸ್ವರ್ಗ ಮತ್ತು ನರಕ ಮೇಲೆಲ್ಲೋ ಇಲ್ಲ….ಇಲ್ಲೇ ಇವೆ..ಈ ಭೂಮಿಯಲ್ಲಿಯೇ ಇವೆ’ ಅಂತಾ ಹೇಳಿದ್ದನ್ನ ಸೀರಿಯಸ್ಸಾಗಿ ತಗೊಂಡ್ರೋ ಏನೋ, ಒಂದೂರಿಗೆ ‘ಹೆಲ್ (Hell)’ (ಚಿತ್ರ 4a ಮತ್ತು 4b) ಅಂತಾನೇ ಹೆಸರಿಟ್ಟಿದ್ದಾರೆ. ‘ಹೆವನ್ (Heaven)’ ಎನ್ನುವ ನಗರ ಇದೆ ಎಂದು ಕೇಳಲ್ಪಟ್ಟಿದ್ದೇನಾದರೂ, ಇದುವರೆಗೂ ಅದನ್ನು ನಿರೂಪಿಸುವ ಚಿತ್ರಗಳ್ಯಾವುದೂ ಇನ್ನೂ ಕಂಡುಬಂದಿಲ್ಲ. ಅಲ್ಲಿಯವರೆಗೆ ಸ್ವರ್ಗವನ್ನು ಹುಡುಕುತ್ತಲೇ ಇರಬೇಕು.

ಇಲ್ಲೊಂದು ತಮಾಷೆ ನೋಡಿ. ಇಲ್ಲದೇ ಇರುವುದು ಇರಲು ಸಾಧ್ಯವಿದೆಯೇ!? ಹೌದು ಸ್ವಾಮಿ, ಊರಿನ ಹೆಸರಿನಲ್ಲಿ ಸಾಧ್ಯವಿದೆ ಬ್ರಿಟೀಷರು ಈ ವಿಚಿತ್ರದ ಹಿಂದೆ ತಮ್ಮ ಕೈವಾಡ ತೋರಿಸಿದ್ದಾರೆ. ಡರ್ಹಮ್ (Durham) ಇಂಗ್ಲೆಂಡಿನ ಒಂದು ಕಂಟಿ. ಅಲ್ಲೊಂದು ಊರಿನ ಹೆಸರು ‘ನೋ ಪ್ಲ್ಲೇಸ್ (No Place)’!!!! (ಚಿತ್ರ 5). ಒಮ್ಮೆ ಬೀಚಿಯವರ ಒಂದು ಲಲಿತಪ್ರಬಂಧದಲ್ಲಿ, ಅವರು ಮಲ್ಲೇಶ್ವರಂನಲ್ಲಿ ನಡೆಯುತ್ತಿರುವಾಗ ‘ಸೌಂದರ್ಯ ವಿಲ್ಲಾ (Soundarya Villa)’ ಎಂಬ ಮನೆಯ ಹೆಸರಿನಲ್ಲಿ, ಮಧ್ಯದ ಖಾಲಿಜಾಗ ತುಂಬಾ ಸಣ್ಣಗಿದ್ದರಿಂದ ಅದು ‘ಸೌಂದರ್ಯವಿಲ್ಲಾ’ ಎಂದು ಕಂಡಿದಕ್ಕೂ, ಅಷ್ಟೇನೂ ಸುಂದರವಿಲ್ಲದ ಆ ಮನೆಯೊಡತಿ, ಅಲ್ಲೇ ಮನೆಯ ಮುಂದೆ ನಿಂತಿದ್ದಕ್ಕೂ ಸಂಬಂದಕಲ್ಪಿಸಿದ ಬೀಚಿಯವರು ‘ಸೌಂದರ್ಯವಿಲ್ಲದಿದ್ದರೆ ಪರವಾಗಿಲ್ಲ. ಆದರೆ ಅದನ್ನು ಬೋರ್ಡು ಹಾಕಿ ಇಷ್ಟು ರಾಜಾರೋಷವಾಗಿ ಹೇಳಿಕೊಳ್ಳುವುದ್ಯಾಕೆ?’ ಎಂದು ಹೇಳಿದ್ದು ನೆನಪಾಯ್ತು. ಬಹುಷಃ ಈ ಊರಿನಲ್ಲೂ ಹೊಸಬರಿಗೆ ಮನೆ ಕಟ್ಟಲು ಜಾಗವಿಲ್ಲವೆಂದು ತಿಳಿಸಲು ‘No Place=ಜಾಗವಿಲ್ಲಾ’ ಅಂತೇನಾದ್ರೂ ಹೆಸರಿಟ್ಟಬಹುದೇ!?

ಬ್ರಿಟೀಷರು ಇಂತಾ ಕೆಲಸ ಮಾಡಿದ ಮೇಲೆ ಅಮೇರಿಕನ್ನರು ಏನಾದರೂ ಕಿತಾಪತಿ ಮಾಡಲೇಬೇಕಲ್ಲ!! ಮಾಡಿದ್ದಾರೆ ಇಲ್ಲಿ ನೋಡಿ. ಅಮೇರಿಕೆಯಲ್ಲೊಂದು ಜಾಗದ ಹೆಸರು ‘ನೋ ನೇಮ್ (No Name)’!! (ಚಿತ್ರ 6) ಅಂದರೆ ಊರಿನ ಹೆಸರೇ ‘ಹೆಸರಿಲ್ಲ’ ಅನ್ನುವಂತಾಗಿದೆ!!! ಈ ಊರಿನ ಸುತ್ತಮುತ್ತ ಓಡಾಡೋ ಬಸ್ಸಿನ ಕಂಡಕ್ಟರುಗಳಿಗೆ ಭಯಂಕರ ತಲೆಬಿಸಿ ಅಲ್ವಾ!? ಯಾರಾದ್ರೂ ಪ್ಯಾಸೆಂಜರ್ ‘ಹೆಸರಿಲ್ಲದ ಜಾಗಕ್ಕೆ ಒಂದು ಟಿಕೇಟ್ ಕೊಡಪ್ಪಾ’ ಎಂದರೆ, ಎಂತಾ ಕನ್ಫ್ಯೂಷನ್ ನೋಡಿ!

ಪೋಲೆಂಡಿನ ಒಂದು ಸಣ್ಣ ಊರಿಗೆ ‘ಪೋಲೀಸ್ (Police)’ (ಚಿತ್ರ 7) ಅಂತಾ ಹೆಸರಿಟ್ಟುಬಿಟ್ಟಿದ್ದಾರೆ! ಅದೇನು ಪೋಲೀಸರೇ ಇರೋ ಊರೋ, ಅಥವಾ ಕಳ್ಳರು ಬರಬಾರದೆಂಬ ಕಾರಣಕ್ಕೆ ಆ ಊರಿಗೆ ಪೋಲೀಸ್ ಅಂತಾ ಹೆಸರಿಟ್ಟಿದ್ದಾರೋ, ಇನ್ನೂ ಗೊತ್ತಾಗಿಲ್ಲ.

ನಮ್ಮ ಮಹಿಳಾವಾದಿಗಳಿಗೆಲ್ಲಾ ಸಿಟ್ಟುಬರುವಂತಹ ಕೆಲಸವನ್ನು ಅಮೇರಿಕಾದ ವರ್ಜೀನಿಯಾ ರಾಜ್ಯದ ಪುಣ್ಯಾತ್ಮರು ಮಾಡಿದ್ದಾರೆ. ಅಲ್ಲೊಂದು ಊರಿನ ಹೆಸರು ‘ಕ್ರೇಜಿ ವುಮನ್ ಕ್ರೀಕ್ (Crazy Woman Creek)’ (ಚಿತ್ರ 8). ವಿಕ್ರಮಾಧಿತ್ಯನ ಕತೆಗಳಲ್ಲಿ ಬರುವ ‘ಪ್ರಮೀಳಾ ಸಾಮ್ರಾಜ್ಯ’ ಇದೇ ಇರಬಹುದೆಂದು ನನ್ನ ಹಾಗೂ ಎಲ್ಲಾ ಪುರುಷವಾದಿಗಳ ಅನಿಸಿಕೆ.

ಇಷ್ಟೆಲ್ಲಾ Dull ಹಾಗೂ Boring ಹೆಸರುಗಳ ನಡುವೆ, ಅಲ್ಲೆಲ್ಲೋ ಒಂದು ಕಡೆ (ಅಮೇರಿಕೆಯಲ್ಲಿ) ‘ಬ್ರಿಲಿಯಂಟ್ (Brilliant)’ (ಚಿತ್ರ 9) ಎಂಬ ಸಣ್ಣ ಊರೂ ಇದೆ. ಊರಿನಲ್ಲಿರುವವರು ನಿಜವಾಗಿಯೂ ಬ್ರಿಲಿಯಂಟ್ ಹೌದೋ ಅಲ್ಲವೋ, ಆದರೆ ಊರಿಗೆ ಈ ಹೆಸರಿಟ್ಟವನಂತೂ ನಿಜವಾಗಿಯೂ ಬ್ರಿಲಿಯಂಟ್ ಅಲ್ಲವೇ!?

‘ಅಪಘಾತ ವಲಯ, ನಿಧಾನವಾಗಿ ಚಲಿಸಿ’ ಎಂಬ ಫಲಕವನ್ನು ನೀವು ನಮ್ಮ ರಸ್ತೆಗಳಲ್ಲಿ ನೋಡಿರುತ್ತೀರಿ. ಆದರೆ ಇಡೀ ಊರಿನ ಹೆಸರೇ ‘ಅಪಘಾತ’ ಅಂತಿದ್ದರೆ!! ಚಿತ್ರ 10ನ್ನು ನೋಡಿ. ಮೇರಿಲ್ಯಾಂಡಿನ ಈ ಊರಿನ ಅಕ್ಕಪಕ್ಕದಲ್ಲಿ ಕಾರು ಚಲಾಯಿಸುವಾಗ ಸ್ವಲ್ಪ ಜಾಗ್ರತೆ ಮಾರಾಯ್ರೆ

ಹಾರ್ವಡ್ ವಿದ್ಯಾಲಯದಲ್ಲಿ ಒಮ್ಮೆ ತತ್ವಶಾಸ್ತ್ರದ ಪರೀಕ್ಷೆಯಲ್ಲಿ, ನೂರು ಅಂಕಕ್ಕೆ ಒಂದೇ ಒಂದು ಪ್ರಶ್ನೆಯನ್ನು ಒಮ್ಮೆ ಕೇಳಿದ್ದರಂತೆ. ಪ್ರಶ್ನೆ ಇದ್ದದ್ದು ‘Why?’ ಎಂದಷ್ಟೇ! ಅದರಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿ ಒಬ್ಬನೇ ಒಬ್ಬ. ಅವನ ಉತ್ತರ ಇದ್ದದ್ದು ಇಷ್ಟೇ ‘Why not?’ ಆ ಕಥೆ ಎಷ್ಟು ನಿಜವೋ ಗೊತ್ತಿಲ್ಲ. ಆದರೆ ‘Why’ ಮತ್ತು ‘Why Not’ ಎಂಬ ಎರಡು ಊರುಗಳಿರುವುದಂತೂ ಸತ್ಯ (ಚಿತ್ರ 11 ಮತ್ತು 12).

ಇಷ್ಟೇ ಅಲ್ಲದೆ ‘Peculiar’, ‘Wair-a-bit’, ‘Truth of consequences’, ‘Happy’, ‘Climax’ ಮುಂತಾದ ವಿಚಿತ್ರ ಹೆಸರಿನ ಊರುಗಳಿಗೆ ಈ ವಿಚಿತ್ರ ಜಗತ್ತಿನಲ್ಲೇನೂ ಬರವಿಲ್ಲ. ಪಾಶ್ಚಿಮಾತ್ಯ ದೇಶದ ನಗರಗಳಿಗೆ ಪೂರ್ವದ ದೇಶಗಳಷ್ಟು ಚರಿತ್ರೆಯಾಗಲೀ, ಪೌರಣಿಕ ಮಹತ್ವವಾಗಲೀ ಇಲ್ಲವಾದ್ದರಿಂದ, ಬಹುಷಃ ಅವರಿಗೆ ಊರಿನ ಹೆಸರಿಗೂ ಅದರ ಇತಿಹಾಸಕ್ಕೂ ಸಂಬಂಧಕಲ್ಪಿಸುವ ಅಗತ್ಯ ಕಂಡುಬರುವುದಿಲ್ಲವೆಂದೆನಿಸುತ್ತದೆ.

ಈ ಲೇಖನ, ಕೆಲ ವಿಚಿತ್ರ ಹೆಸರುಗಳನ್ನು ಪರಿಚಯಿಸುವ ಪ್ರಯತ್ನವಷ್ಟೇ. ಇಲ್ಲಿ ಬರೆಯಲಾಗದಷ್ಟು ಚಿತ್ರವಿಚಿತ್ರವಾದ ಊರಿನ ಹೆಸರುಗಳೂ ಇವೆ. ಎಲ್ಲವನ್ನೂ ಬರೆದು ಹೇಳಲು ಸಾಧ್ಯವಿಲ್ಲವಾದ್ದರಿಂದ, ಅಂತಹ ವಿಚಿತ್ರ ಊರುಗಳ ಹೆಸರುಗಳ ದೊಡ್ಡ ಪಟ್ಟಿಯೇ ಸಿಗುವ ಈ ಕೊಂಡಿಯನ್ನು ಕ್ಲಿಕ್ಕಿಸಿ ನೋಡಿhttp://bit.ly/1rONdj1

ಕೊಸರು:

ವೇಲ್ಸ್ ನಲ್ಲಿ ‘Llanfairpwllgwyngyllgogerychwyrndrobwllllantysiliogogogoch’ ಎಂಬ ‘ಸಣ್ಣ ಹೆಸರಿನ’ ಒಂದು ಸಣ್ಣ ಊರಿದೆ. ನಮ್ಮಲ್ಲಿ ಪಂಚಾಯ್ತಿ ಮೆಂಬರುಗಳು ಜಗಳಮಾಡುವಂತೆ ಅಲ್ಲಿಯೂ 2007ರಲ್ಲಿ ಅಕ್ಕಪಕ್ಕದವರು ಕಚ್ಚಾಡಿಕೊಂಡು, ಈ ಊರಿನ ಪಕ್ಕದ ಊರಿನವರು ತಮ್ಮ ಊರನ್ನು ಪ್ರಚಾರಪಡಿಸಲು ಆದಾಗಲೇ ಇದ್ದ ತಮ್ಮ ಊರಿನ Golf Halt ಎಂಬ ಚೆಂದದ ಹೆಸರು ತೆಗೆದು ಹಾಕಿ, ‘Gorsafawddachaidraigodanheddogleddollônpenrhynareurdraethceredigion’ ಎಂದು ನಾಮಕಾರಣ ಮಾಡಿದ್ದಾರೆ!!! (ಚಿತ್ರ 13) ಎಂತಾ ಕರ್ಮ ಇದು. ಈ ಊರಿಗೆ ಟಿಕೇಟ್ ತೆಗೆದುಕೊಂಡವರಿಗೆ, ಊರಿನ ಹೆಸರನ್ನು ಉಚ್ಚರಿಸುವುದು ಹೇಗೆ ಎನ್ನುವ ಒಂದು ಪುಸ್ತಕವನ್ನೂ ಕೊಡ್ತಾರೇನೋ! ಅಂದಹಾಗೆ ಯಾರಿಗಾದ್ರೂ ಈ ಊರಿನ ಹೆಸರನ್ನು ಉಚ್ಚರಿಸುವುದು ಸಾಧ್ಯವಾದ್ರೆ ತಿಳಿಸಿಕೊಡುವಂತಾರಾಗಿ.

ಆದ್ರೂ ಸಹ, ಹೆಸರಲ್ಲೇನಿದೆ ಬಿಡಿ ಸ್ವಾಮಿ

‪#‎ದಿನಕ್ಕೊಂದು_ವಿಷಯ‬, ‪#‎ಹೆಸರು‬, ‪#‎Unusual_Place_Names‬

10471265_710582709031677_851944101654290417_n10649924_710582699031678_5966505637203616117_n10557321_710582702365011_4944565473791953570_n10444350_710582795698335_6730045903348083834_n483680_710582802365001_1875853452599239236_n10676128_710582885698326_2430854407715537465_n10517323_710582912364990_1449324387781562346_o1465855_710583039031644_5328631512609758623_o   10659326_710583189031629_9053358543616784896_n15777_710583262364955_4524378646959431282_n10672255_710583289031619_1242507730863437059_n1912019_710583345698280_1891832918996092659_o10704038_710583389031609_4483282498238544927_n247758_710583409031607_2644174204723658255_n

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s