ಬುದ್ಧಿಗೊಂದು ಗುದ್ದು – ೨೨

ದಯಾಮರಣಕ್ಕೊಂದು ಉತ್ಕರ್ಷದ ದಾರಿ:

ಒಂದು ಜೋಕು ಹೀಗಿದೆ:
‘ನಾನು ಸಾಯುವುದೇ ಆದರೆ, ನನ್ನಜ್ಜನಂತೆ ಶಾಂತವಾಗಿ ಸಂತೋಷದಿಂದ ನಿದ್ರೆಯಲ್ಲಿಯೇ ಮರಣಹೊಂದಬಯಸುತ್ತೇನೆ. ಅವನು ಚಲಾಯಿಸುತ್ತಿದ್ದ ಬಸ್ಸಿನ ಪ್ರಯಾಣಿಕರಂತೆ ಕಿರಿಚಾಡುತ್ತಾ ಅಲ್ಲ’.

ಕೆಲವು ಚಲನಚಿತ್ರಗಳಲ್ಲಿ ‘ನೀನು ಒಂದ್ಸಲ ಐ ಲವ್ ಯೂ ಅಂದ್ರೆ ನಾನು ಸಂತೋಷದಿಂದ ಹಾಗೇ ಪ್ರಾಣ ಬಿಟ್ಬಿಡ್ತೀನಿ’ ಅನ್ನೋ ಡಬ್ಬಾ ಡೈಲಾಗ್ ಕೂಡಾ ಕೇಳಿಬರುತ್ತೆ.

ಬರೀಮಾತಿಗೇ ಈ ಸಾಲುಗಳಾದರೂ, ‘ಸಂತೋಷದಿಂದ ಸಾಯುವುದು ಸಾಧ್ಯವಿದೆಯಾ?’ ಎಂದು ನಾನು ಯೋಚಿಸಿದ್ದುಂಟು. ಮೊನ್ನೆ ಏನೋ ಓದುವಾಗ ಎಡವಿ ಬಿದ್ದದ್ದು ಈ ವಿಷಯದ ಮೇಲೆ. ಅದೇನೆಂದರೆ, ‘ಯುಥನೇಷಿಯಾ ಕೋಸ್ಟರ್ (Euthanasia Coaster)’. ನೀವು ಗ್ರಹಿಸಿದಂತೆಯೇ, ಇದೊಂದು ರೋಲರ್-ಕೋಸ್ಟರ್. ಇವನ್ನು ನೀವು ವಂಡರ್-ಲಾ, ಅಪ್ಪುಘರ್, ಜಿಆರೆಸ್ ಪ್ಯಾಂಟಸಿ ಪಾರ್ಕುಗಳಲ್ಲಿ ನೋಡಿರುತ್ತೀರಿ. ವೇಗವಾಗಿ ಸುಯ್ಯೆಂದು ಮೇಲೆ ಹೋಗಿ, ರೊಯ್ಯೆಂದು ಕೆಳಗೆ ಬಂದು, ಅತ್ತಿತ್ತ ಓಲಾಡಿ, ನೀರಿನ ಮೇಲೆ ಓಡುತ್ತಾ ಬುಸ್ಸೆಂದು ನೀರು ಹಾರಿಸುತ್ತಾ, ಪ್ರಯಾಣಿಕರನ್ನು ಸಂತಸಗೊಳಿಸುವ ಇವನ್ನು ಯಾರನ್ನಾದರೂ ಕೊಲ್ಲಲೂ ಕೂಡಾ ಬಳಸಬಹುದು ಎಂದರೆ ನಂಬುತ್ತೀರಾ!? ಇಂತದ ಒಂದು ಸವಾರಿಯೇ ಯುಥನೇಷಿಯಾ ಕೋಸ್ಟರ್. ನಾವು ನೋಡಿರುವ ಕೋಸ್ಟರಿಗೂ, ಇದಕ್ಕೂ ಇರುವ ಒಂದೇ ವ್ಯತ್ಯಾಸವೆಂದರೆ, ಇದರ ಮೂಲ ಉದ್ದೇಶ ಮನರಂಜನೆಯಲ್ಲ…..ಸಾವು! ಆದರೆ ಸಂತೋಷದ ಸಾವು!!

ಯುಥನೇಷಿಯಾಕ್ಕೆ ಕನ್ನಡದಲ್ಲಿ ಉತ್ತಮ ಪದವೆಂದರೆ ದಯಾಮರಣ. ಗ್ರೀಕ್ ಭಾಷೆಯ ‘ಯು’ (ಒಳ್ಳೆಯ) ಹಾಗೂ ‘ಥನಾಟೋಸ್’ (ಮರಣ) ಎಂಬ ಪದಗಳಿಂದ ಹೊಮ್ಮಿರುವ ಪದ ಯುಥನೇಷಿಯಾ. ದಯಾಮರಣಕ್ಕೆ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ವ್ಯಾಖ್ಯಾನಗಳೂ, ಬೇರೆ ಬೇರೆ ಕಾನೂನುಗಳೂ ಇವೆ. ಉದಾಹರಣೆಗೆ ಬ್ರಿಟನ್ನಿನಲ್ಲಿ ವೈದ್ಯಕೀಯ ನೈತಿಕತಾ ಸಮಿತಿಯ ಪ್ರಕಾರ ದಯಾಮರಣ ಎಂದರೆ ‘ಪರಿಹರಿಸಲಾಗದ ನೋವನ್ನು ನಿವಾರಿಸಲು, ಜೀವನವನ್ನು ಕೊನೆಗಾಣಿಸುವ ಉದ್ದೇಶದಿಂದ ಕೈಗೊಂಡ ಉದ್ದೇಶಪೂರ್ವಕ ಹಸ್ತಕ್ಷೇಪ’. ಅದೇ ನೆದರ್ಲ್ಯಾಂಡಿನಲ್ಲಿ ಇದನ್ನು ‘ರೋಗಿಯ ಕೋರಿಕೆಯ ಮೇರೆಗೆ, ವೈದ್ಯರು ಜೀವನವನ್ನು ಅಂತ್ಯಗೊಳಿಸುವುದು’ ಎಂದು ವಿವರಿಸಲಾಗಿದೆ.

ದಯಾಮರಣದಲ್ಲಿ ಸ್ವಯಂಪ್ರೇರಿತ ದಯಾಮರಣ (Voluntary Euthanasia) ಮತ್ತು ಸ್ವಯಂಪ್ರೇರಿತವಲ್ಲದ ದಯಾಮರಣ (Non-Voluntary Euthanasia) ಎಂಬ ಎರಡು ಸ್ಥೂಲ ವಿಭಾಗಳಿವೆ. ಸ್ವಯಂಪ್ರೇರಿತ ದಯಾಮರಣದಲ್ಲಿ ರೋಗಿ ಸ್ವತಃ ತಾನಾಗಿಯೇ ದಯಾಮರಣವನ್ನು ಬಯಸುತ್ತಾನೆ. ತದನಂತರ ವೈದ್ಯರೊಬ್ಬರು ಅದನ್ನು ಕಾರ್ಯರೂಪಕ್ಕಿಳಿಸುವಲ್ಲಿ ಸಹಾಯಮಾಡುತ್ತಾರೆ. ಬೆಲ್ಜಿಯಂ, ಲಕ್ಸಂಬರ್ಗ್, ನೆದರ್ಲ್ಯಾಂಡ್ಸ್, ಸ್ವಿಟ್ಝೆರ್ಲ್ಯಾಂಡ್ ದೇಶಗಳಲ್ಲಿ ಹಾಗೂ ಅ.ಸಂ.ಸಂ(USA)ನ ಓರೆಗಾಂವ್ ಮತ್ತು ವಾಶಿಂಗ್ಟನ್ ರಾಜ್ಯಗಳಲ್ಲಿ ಈ ರೀತಿಯ ದಯಾಮರಣ ಕಾನೂನುಬದ್ಧ. ಅಸ್ವಯಂಪ್ರೇರಿತ ದಯಾಮರಣದಲ್ಲಿ, ರೋಗಿ ಯಾವುದೇ ಸಮ್ಮತಿ ಅಥವಾ ಅಸಮ್ಮತಿಯನ್ನು ಸೂಚಿಸಲು ಅಸಮರ್ಥನಾಗಿರುತ್ತಾನೆ ಹಾಗೂ ಬೇರೊಬ್ಬರು ರೋಗಿಯ ಪರವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ರೋಗಿ ಮಾತನಾಡಲಾರದ ಅಥವಾ ದೀರ್ಘಾವಧಿ ಕೋಮಾದಲ್ಲಿರುವುದು ಅಸ್ವಯಂಪ್ರೇರಿತ ದಯಾಮರಣದಡಿಯಲ್ಲಿ ಬರುತ್ತದೆ.

ಭಾರತದಲ್ಲಿ ಈ ಮೊದಲು ಎಲ್ಲರೀತಿಯ ದಯಾಮರಣಗಳು ಕಾನೂನುಬಾಹಿರವಾಗಿದ್ದವು. ಅರುಣಾ ಶಾನುಭಾಗ್ ಕೇಸಿನಲ್ಲಿ (http://bit.ly/1g67eho) ಆಕೆ 37 ವರ್ಷಗಳ ಕಾಲ ಅಲ್ಲಾಡಲೂ ಸಾಧ್ಯವಾಗದೇ ಆಸ್ಪತ್ರೆಯ ಹಾಸಿಗೆಯಲ್ಲೇ ಇದ್ದಾಗ, ಆಕೆ ಸ್ನೇಹಿತೆ ಅರುಣಾಳ ಪರವಾಗಿ ದಯಾಮರಣ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಳು. ಅವಳ ಕೋರಿಕೆಗೆ ಪ್ರತಿಕ್ರಿಯಿಸಿದ ನ್ಯಾಯಾಲಯ ಒಂದು ವೈದ್ಯಕೀಯ ಸಮಿತಿಯನ್ನು ರಚಿಸಿ, ಅದರ ಸಲಹೆ ಕೇಳಿತ್ತು. 7ನೇ ಮಾರ್ಚ್ 2011ರಂದು ದಯಾಮರಣ ಅರ್ಜಿಯನ್ನು ತಿರಸ್ಕರಿಸಿದ ಸರ್ವೋಚ್ಛ ನ್ಯಾಯಲಯ, ತನ್ನ ಮಹತ್ವದ ತೀರ್ಪಿನಲ್ಲಿ ಭಾರತ ದೇಶದಲ್ಲಿ ಪರೋಕ್ಷ ದಯಾಮರಣಕ್ಕೆ ಅನುವುಮಾಡಿಕೊಟ್ಟಿತು. ಪರೋಕ್ಷ ದಯಾಮರಣ ವೆದರೆ, ರೋಗಿಯ ಕೋರಿಕೆಯ ಮೇರೆಗೆ ಜೀವನದಾಯೀ ಔಷಧಗಳ ಪೂರೈಕೆಯನ್ನು ನಿಲ್ಲಿಸುವುದು. [ಇಲ್ಲಿ ಪರೋಕ್ಷ (passive) ಅನ್ನುವ ಪದಬಳಕೆ ಏಕೆಂದರೆ, ಇದೇ ರೀತಿಯಲ್ಲಿ Active Euthanasia ಕೂಡಾ ಇದೆ. ಈ ಕ್ರಿಯೆಯಲ್ಲಿ, ರೋಗಿಗೆ ವಿಷಕಾರಿ ಇಂಜೆಕ್ಷನ್ ನೋಡುವುದರ ಮೂಲಕ ದಯಾಮರಣಕ್ಕೆ ಅನುವುಮಾಡಿಕೊಡಲಾಗುತ್ತದೆ. ಸ್ವಿಟ್ಝೆರ್ಲ್ಯಾಂಡ್ ಮತ್ತು ಕೆಲ ದೇಶಗಳಲ್ಲಿ, ‘ಸಾವಿನ ಉದ್ದೇಶ ನಿಸ್ವಾರ್ಥತೆಯಿಂದ ಕೂಡಿದ್ದಲ್ಲಿ’ ಈ ರೀತಿಯ ದಯಾಮರಣಕ್ಕೆ ಕಾನೂನುರೀತ್ಯಾ ಅವಕಾಶವಿದೆ]

ಓಕೆ ಓಕೆ….ವಿಷಯಕ್ಕೆ ಬರೋಣ. 2011ರ ಡಬ್ಲಿನ್ನಿನ ವಿಜ್ಞಾನ ಗ್ಯಾಲರಿಯಲ್ಲಿ, ಲಂಡನ್ನಿನ ‘ರಾಯಲ್ ಕಾಲೇಜ್ ಆಫ್ ಆರ್ಟ್ಸ್’ನ ಪಿ.ಎಚ್.ಡಿ ವಿದ್ಯಾರ್ಥಿಯಾದ ಜೂಲಿಯೋನಸ್ ಊರ್ಬೋನಸ್ ಈ ‘ಯುಥನೇಷಿಯಾ ಕೋಸ್ಟರ್’ನ ಕಲಾತ್ಮಕ ಪರಿಕಲ್ಪನೆಯನ್ನು ಮುಂದಿಟ್ಟ (ಚಿತ್ರ 1). ಈ ಕಲ್ಪನೆ, ಈಗಾಗಲೇ ಅಸ್ತಿತ್ವದಲ್ಲಿರುವ ರೋಲರ್ ಕೋಸ್ಟರಿಗಿಂತಾ ಭಿನ್ನವಾಗೇನೂ ಇಲ್ಲ. ಕೆಲವೇ ಕೆಲವು ವ್ಯತ್ಯಾಸಗಳೆಂದರೆ, (೧) ಈ ಕೋಸ್ಟರಿನ ಗರಿಷ್ಟ ಎತ್ತರ ಸುಮಾರು 510ಮೀಟರ್; ಹಾಗೂ (೨) ಇದರ ಒಟ್ಟು ಉದ್ದ ಸುಮಾರು 7.5 ಕಿಲೋಮೀಟರುಗಳು. ಈ ರೋಲರ್-ಕೋಸ್ಟರ್ ತನ್ನ 2 ನಿಮಿಷದ ಒಟ್ಟು ಪ್ರಯಾಣದಲ್ಲಿ ಒಂದುಬಾರಿಗೆ 24 ಪ್ರಯಾಣಿಕರನ್ನು ಸ್ವರ್ಗಕ್ಕೆ (ಅಥವಾ ಇನ್ನೆಲ್ಲಿಗೋ) ತಲುಪಿಸಬಲ್ಲುದು.

ಕಾರ್ಯರೀತಿ:
ಈ ಕೋಸ್ಟರ್ ತನ್ನ 24 ಪ್ರಯಾಣಿಕರೊಂದಿಗೆ ಮೊದಲು ನಿಧಾನವಾಗಿ ಸಮತಲದಲ್ಲಿ ಚಲಿಸಿ ನಂತರ 510 ಮೀ. ಎತ್ತರದ ಕಡಿದಾದ ದಾರಿಯನ್ನು ನಿಧಾನವಾಗಿ ಮೇಲ್ಮುಖವಾಗಿ ಕ್ರಮಿಸುತ್ತದೆ. ತನ್ನ ಗರಿಷ್ಟ ಎತ್ತರದ ಬಿಂದುವನ್ನು ತಲುಪಿದ ನಂತರ, ಇದ್ದಕ್ಕಿಂದಂತೆ ಅತೀವ ಇಳಿಜಾರಿನ 510ಮೀ ದಾರಿಯಲ್ಲಿ ಇಳಿಯತೊಡಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೋಸ್ಟರ್ ಗಂಟೆಗೆ ಸುಮಾರು 360ಕಿಮೀಗಳಷ್ಟು ವೇಗವನ್ನು ಪಡೆಯುತ್ತದೆ. ಈ ಇಳಿಜಾರನ್ನು ಇಳಿದನಂತರ ಏಳು ಒಂದಕ್ಕಿಂತಾ ಒಂದು ಚಿಕ್ಕದಾಗಿರುವ) ತಿರುವುಗಳಲ್ಲಿ ಚಲಿಸುತ್ತದೆ. ಈ ಇಡೀ ಸವಾರಿಯಲ್ಲಿ ಪ್ರಯಾಣಿಕರು ಸುಮಾರು 10Gಗಳಷ್ಟು (ಸಾಮಾನ್ಯ ಗುರುತ್ವಬಲದ ಹತ್ತುಪಟ್ಟು) ಗುರುತ್ವಬಲದ ಪ್ರಭಾವಕ್ಕೆ ಒಳಗಾಗುತ್ತಾರೆ. ಇದರಿಂದಾಗಿ ಅವರ ಮೆದುಳಿಗೆ ರಕ್ತಸಂಚಾರ ನಿಧಾನವಾಗಿ ನಿಂತುಹೋಗುತ್ತದೆ. ಮೆದುಳಿಗೆ ರಕ್ತಸಂಚಾರವಿಲ್ಲದಾದಾಗ ಮಿದುಳಿಗೆ ಆಮ್ಲಜನಕದ ಪೂರೈಕೆಯಿಲ್ಲವಾಗುತ್ತದೆ. ಅದಿಲ್ಲದೆ ಮೆದುಳು ಕೆಲಸಮಾಡುವುದು ಅಸಾಧ್ಯ. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ಸೆರೆಬ್ರಲ್ ಹೈಪಾಕ್ಸಿಯಾ ಎಂದು ಕರೆಯುತ್ತಾರೆ. ಅರವತ್ತು ಸೆಕೆಂಡುಗಳ ಕಾಲ ಸೆರೆಬ್ರಲ್ ಹೈಪಾಕ್ಸಿಯಾ ಉಂಟಾದರೆ ಮೆದುಳು ಪುನಃ ಎಂದಿಗೂ ಸರಿಯಾಗಿ ಕೆಲಸಮಾಡಲಾಗದ ಸ್ಥಿತಿಗೆ ತಲುಪುತ್ತದೆ. ಯುಥನೇಷಿಯಾ ರೋಲರ್ ಕೋಸ್ಟರಿನ ಒಟ್ಟು ಪ್ರಯಾಣ 120 ಸೆಕೆಂಡುಗಳು! ಮೊದಲನೇ ಇಳಿಜಾರಿನಲ್ಲಿ ಪ್ರಯಾಣಿಕರ ದೃಷ್ಟಿ ಮಂಜಾಗುತ್ತದೆ, ಅಲ್ಲಿಂದ ಮುಂದೆ ಮೊದಲನೇ ಹಾಗೂ ಎರಡನೇ ಸುರುಳಿಗಳಲ್ಲಿ ನಿಧಾನವಾಗಿ ಮೆದುಳು ನಿಷ್ಕ್ರಿಯಗೊಂಡು, ಪ್ರಯಾಣಿಕರು g-LOC (ಗುರುತ್ವದಿಂದಾಗಿ ಉಂಟಾಗುವ ಅಪ್ರಜ್ಞಾವಸ್ಥೆ) ಸ್ಥಿತಿಗೆ ಜಾರುತ್ತಾರೆ. ಎಂಥ ಸೈರಣೆ ಇರುವ ಮನುಷ್ಯನಾದರೂ ಮೂರನೇ ಸುರುಳಿ ತಲುಪುವ ಹೊತ್ತಿಗೆ ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿರುತ್ತದೆ. ಮುಂದಿನ ಮೂರು ಸುರುಳಿಗಳನ್ನು, ಯಾವುದೇ ಅಸಹಜ ಪ್ರಕರಣಗಳಲ್ಲಿ ಪ್ರಯಾಣಿಕರು ಬದುಕುಳಿಯುವುದನ್ನು ತಪ್ಪಿಸಲೆಂದೇ ಸೇರಿಸಲಾಗಿದೆ.

ಜೀವನವನ್ನು ಕೊನೆಗಾಣಿಸುವುದು ಎಂದಿಗೂ ಸಂತಸದ ವಿಷಯವಲ್ಲ. ಆದರೆ ಎಲ್ಲರ ಜೀವನವೂ ಒಂದೇ ತರಾ ಇರೋಲ್ಲ. ಎಲ್ಲಾ ಮನುಷ್ಯರೂ ಜೀವನವನ್ನು ಒಂದೇ ತರಹ ಸ್ವೀಕರಿಸೋಲ್ಲ ಕೂಡಾ. ಕೆಲಸಂಧರ್ಭದಲ್ಲಿ ದಯಾಮರಣ ಸರಿಯೆಂದು ಕಂಡುಬರುವ ಸಾಧ್ಯತೆಯಿದೆ. ಅಂತಹ ಪ್ರಕರಣಗಳಲ್ಲಿ, ಆ ಕೊನೆಯ ಕೆಲ ಕ್ಷಣಗಳನ್ನು ಆದಷ್ಟೂ ನೋವಿಲ್ಲದಂತೆ ಮಾಡುವುದಕ್ಕಾಗಿ ಈ ಎಲ್ಲಾ ಸರ್ಕಸ್ಸುಗಳು. ದಯಾಮರಣ ಇಂದಿನ ವೈದ್ಯಕೀಯ ಜಗತ್ತಿನಲ್ಲಿ ಹಾಗೂ ವೈದ್ಯಕೀಯ ನೀತಿಶಾಸ್ತ್ರದ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಮಟ್ಟಿಗೆ ಚರ್ಚಿಸಲಾಗುತ್ತಿರುವ ವಿಷಯವಾಗಿದೆ.

ಇದರಬಗ್ಗೆ ಹೆಚ್ಚಿನ ಆಸಕ್ತಿ ಇದ್ದವರು ಕೆಳಗಿನ ಕೊಂಡಿಗಳನ್ನು ಪರಿಶೀಲಿಸಬಹುದು:
http://bit.ly/Ki6MwR
http://bit.ly/1kMt8X1
http://bit.ly/1zDJSZo
http://bit.ly/1zejYKD
http://bit.ly/1wDfU1Y

10679761_726094827480465_4435169976283812951_o

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s