ದಿನಕ್ಕೊಂದು ವಿಷಯ – ೪

ದಿನಕ್ಕೊಂದು ವಿಷಯ – ೪

ಕೋಟಿಗೊಬ್ಬ ಅಲ್ಲ…ಇವನು ಎರಡುಕೋಟಿಗೊಬ್ಬ!!

ನಿಮ್ಮಲ್ಲಿ ಕನಿಷ್ಟ ಒಂದುಬಾರಿಯಾದರೂ ರಕ್ತದಾನ ಮಾಡಿದವರು ಎಷ್ಟು ಮಂದಿ ಇದ್ದೀರಿ!? ಮಾಡಿದ್ದೀರಾದಲ್ಲಿ ಭೇಷ್. ಮಾಡಿಲ್ಲವಾದಲ್ಲಿ ದಯವಿಟ್ಟು ಮಾಡಿ. ಇನ್ನೊಬ್ಬರ ಸಹಾಯಕ್ಕಾಗುವುದರಲ್ಲಿರುವ ಸಂತೋಷವೇ ಬೇರೆ. ಅದರಲ್ಲೂ, ಒಬ್ಬರ ಜೀವವುಳಿಸುವುದರಲ್ಲಿರುವ ಸಾರ್ಥಕತೆಯೇ ಬೇರೆ. ಅದನ್ನು ಅನುಭವಿಸಿಯೇ ತಿಳಿಯಬೇಕು. ಇಷ್ಟಕ್ಕೂ, ರಕ್ತಕಣಗಳ ಜೀವನ ಬರೀ ಮೂರರಿಂದ ಆರು ತಿಂಗಳಷ್ಟೇ. ನಿಮ್ಮಲ್ಲಿರುವ ರಕ್ತ, ನೀವು ಬೇರೆಯಾರಿಗೂ ಕೊಡದಿದ್ದಲ್ಲಿ ತನ್ನಷ್ಟಕ್ಕೆ ತಾನೇ ದೇಹದಿಂದ ಬೇರೆ ಬೇರೆ ರೂಪದಲ್ಲಿ ವಿಸರ್ಜಿತವಾಗಿ, ಹೊಸ ರಕ್ತ ತಯಾರಾಗುತ್ತದೆ. ಹಾಗಾಗಿ, ನೀವು ದಾನಮಾಡದಿದ್ದರೆ ಒಂದು ಲೆಕ್ಕದಲ್ಲಿ ಆ ರಕ್ತ ವ್ಯರ್ಥವಾದಂತೆಯೇ. ವ್ಯರ್ಥ ಮಾಡುವ ಬದಲು ಅಗತ್ಯವಿದ್ದವರಿಗೆ ಕೊಡಿ. ಹೇಗಿದ್ದರೂ ನಿಮ್ಮ ದೇಹ ನೀವು ಕೊಟ್ಟ ರಕ್ತವನ್ನು ಮೂರೇ ದಿನದಲ್ಲಿ ಮರು ಉತ್ಪತ್ತಿ ಮಾಡಿಕೊಳ್ಳುತ್ತದೆ. ಅದೂ ಅಲ್ಲದೆ, ವರ್ಷಕ್ಕೆ ಕನಿಷ್ಟ ಮೂರುಬಾರಿ ರಕ್ತದಾನ ಮಾಡಿದರೆ, ನಿಮ್ಮ ರಕ್ತನಾಳಗಳೂ ಸ್ವಲ್ಪ ಹಿಗ್ಗಿ ಕುಗ್ಗಿ ಸ್ವಚ್ಚವಾಗುತ್ತವೆ ಹಾಗೂ ನಿಮ್ಮ ರಕ್ತದ ಒಟ್ಟಾರೆ ಗುಣಮಟ್ಟವೂ ಹೆಚ್ಚುತ್ತದೆ

ರಕ್ತದಾನ ಮಾಡಿರುವ ಪುಣ್ಯವಂತರ ಪಟ್ಟಿಗೆ ನೀವು ಸೇರಿದವರಾದಲ್ಲಿ, ನೀವು ಎಷ್ಟು ಬಾರಿ ದಾನ ಮಾಡಿದ್ದೀರಾ? ಹತ್ತು? ಇಪ್ಪತ್ತು? ಐವತ್ತು? ಸಂಖ್ಯೆ ದೊಡ್ಡದಿದ್ದಷ್ಟೂ ನಿಮಗೆ ನನ್ನ ನಮಸ್ಕಾರ ದೊಡ್ಡದಾಗುತ್ತದೆ. ನಾನು ಈವರೆಗೆ ಇಪ್ಪತ್ಮೂರು ಬಾರಿ ಕೊಟ್ಟಿದೇನೆ. ನನಗೆ ನಾನೇ ಒಂದು ನಮಸ್ಕಾರ ಹೊಡ್ಕೊಂಡು, ಹರಿಕಥೆ ಪ್ರಾರಂಭಿಸೋಣ. ಇಲ್ಲೊಬ್ಬನ ಪರಿಚಯ ಮಾಡಿಸ್ತೇನೆ ನೋಡಿ.

ಇವನ ಹೆಸರು ಜೇಮ್ಸ್ ಹ್ಯಾರಿಸನ್. ಆಸ್ಟ್ರೇಲಿಯಾದ ಪ್ರಜೆ. ವಯಸ್ಸು 77. ಇವನ ವಿಶೇಷತೆಯೆಂದರೆ, ಈ ಮಹಾತ್ಮ ಇದುವರೆಗೂ ಒಂದು ಸಾವಿರಕ್ಕಿಂತಾ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾನೆ! ಅದಕ್ಕಿಂತಲೂ ಆಶ್ಚರ್ಯದ ವಿಷಯವೆಂದರೆ ಈತ ಇಪ್ಪತ್ತು ದಶಲಕ್ಷಕ್ಕೂ (2 ಕೋಟಿ) ಹೆಚ್ಚು ಹಸುಗೂಸುಗಳ ಜೀವ ಉಳಿಸಿದ್ದಾನೆ!! ಅದೂ ಕೂಡಾ ಬರೇ ರಕ್ತದಾನದ ಮೂಲಕ!!!

ಹಿಂದಿನ ಕಥೆ:
1936ರ ಡಿಸಂಬರ್ 27ರಂದು ಜನಿಸಿದ ಜೇಮ್ಸ್, ಹದಿನಾಲ್ಕರ ವಯಸ್ಸಿನವನಾಗಿದ್ದಾಗ ಆತನ ಎದೆಯ ಶಸ್ತ್ರಚಿಕೆತ್ಸೆ ಮಾಡಬೇಕಾಗಿ ಬಂತು. ಈ ಶಸ್ತ್ರಚಿಕಿತ್ಸೆ ಅಂದಿನ ಕಾಲಕ್ಕೆ ಎಷ್ಟು ಕ್ಲಿಷ್ಟವಾಗಿತ್ತೆಂದರೆ, ಅವನಿಗೆ 13 ಲೀಟರ್ ರಕ್ತ ಕೊಡಬೇಕಾಗಿ ಬಂದಿತ್ತು. ಎಲ್ಲವೂ ಸುಸೂತ್ರವಾಗಿ ನಡೆದು ಮೂರು ತಿಂಗಳ ಚಿಕಿತ್ಸೆಯ ನಂತರ ಜೇಮ್ಸ್ ಬದುಕುಳಿದ. ತನಗೆ ರಕ್ತದಾನ ಮಾಡಿದವರ ಕಥೆ ಕೇಳಿ, ‘ನನಗೆ ಹದಿನೆಂಟು ತುಂಬಿದ ದಿನದಿಂದ (ಅಂದಿನ ಕಾಲದಲ್ಲಿ, ರಕ್ತದಾನ ಮಾಡಲು ಹದಿನೆಂಟು ತುಂಬಬೇಕಿತ್ತು) ಸಾಧ್ಯವಾದಷ್ಟು ರಕ್ತದಾನ ಮಾಡುತ್ತೇನೆ’ ಎಂದು ಜೇಮ್ಸ್ ಪಣತೊಟ್ಟ. ಅದನ್ನು ಇಂದಿನವರೆಗೂ ಪಾಲಿಸಿಕೊಂಡು ಬಂದಿದ್ದಾನೆ. ಅಂದಿನಿಂದ ಇಂದಿನವರೆಗೂ ಪ್ರತೀ ಮೂರು ವಾರಕ್ಕೊಮ್ಮೆ ಜೇಮ್ಸ್ ತೋಳೇರಿಸಿಕೊಂಡು ಸಮೀಪದ ಆಸ್ಪತ್ರೆಗೆ ಹೋಗುತ್ತಾನೆ. 77ರ ಇಳಿವಯಸ್ಸು ಕೂಡಾ ಅವನನ್ನು ನಿಲ್ಲಿಸಿಲ್ಲ. ಈಗ ಮೊದಲಿನಷ್ಟು ಕೊಡಲಾಗದಿದ್ದರೂ, ಆತ ದಾನ ನಿಲ್ಲಿಸಿಲ್ಲ. ಮೇ 2011ರಂದು ಸಾವಿರದನೇ ಬಾರಿ ಸೂಜಿ ಚುಚ್ಚಿಸಿಕೊಂಡ ಜೇಮ್ಸ್ ಹೇಳಿದ್ದು “ಜೀವನದಲ್ಲಿ ನಾನು ಬಯಸುವುದಿಷ್ಟೇ. ಯಾರಾದರೂ ಈ ವಿಶ್ವದಾಖಲೆಯನ್ನು ಮುರಿಯಲಿ. ಯಾಕೆಂದರೆ ಹಾಗೆ ಮಾಡಿದ್ದೇ ಆದರೆ ಅವರು ಕನಿಷ್ಟ ಸಾವಿರ ಜೀವಗಳನ್ನು ಉಳಿಸಿದಂತಾಗುತ್ತದೆ”

ವಿಶೇಷತೆ:
ಈ ಪುಣ್ಯಾತ್ಮನ ವಿಶೇಷತೆ ಇವನ ಸಾವಿರ+ ರಕ್ತದಾನಕ್ಕಷ್ಟೇ ಸೀಮಿತವಲ್ಲ. 1954ರಿಂದ ಪ್ರಾರಂಭಿಸಿ, ಮೊದಲ ಕೆಲ ರಕ್ತದಾನಗಳ ನಂತರ ತಿಳಿದುಬಂದದ್ದೇನೆಂದರೆ ಈತನ ರಕ್ತದಲ್ಲಿ Rho(D) ಇಮ್ಯುನೋ ಗ್ಲೋಬುಲಿನ್ (ದೇಹದ ರೋಗನಿರೋಧಕ ಶಕ್ತಿಯನ್ನು ದೃಡಪಡಿಸುವ, ರಕ್ತದ ಒಂದು ಘಟಕ) ಎಂಬ ಪ್ರತಿಕಾಯ (antibody) ಮೂಲಸ್ವರೂಪದಲ್ಲಿ ಲಭ್ಯವಿತ್ತು. ಈ Rho(D) IG ಎಂಬುದು ಗರ್ಭದಲ್ಲಿರುವ ಹಾಗೂ ನವಜಾತ ಶಿಶುಗಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯಾವಶ್ಯಕವಾದದ್ದು. ಹಾಗೂ ಪ್ರತೀ ಹತ್ತರಲ್ಲಿ ಒಂದು ನವಜಾತ ಶಿಶುಗಳಲ್ಲಿ ಅತೀ ಸಾಮಾನ್ಯವಾಗಿ ಕಂಡುಬರುವಂತಹ ಅತ್ಯಂತ ಅಪಾಯಕಾರಿ ರಕ್ತಸಂಬಂಧಿ ಖಾಯಿಲೆಯಾದ ರ್ಹೀಸಸ್ ಖಾಯಿಲೆ (Rhesus disease ಅಥವಾ Rh disease) ಅನ್ನು ಗುಣಪಡಿಸುವಲ್ಲಿ ನಿರ್ಣಾಯಕ ಪಾತ್ರವಹಿಸುವಂತದ್ದು. ಅಂತಾ ಮಾಂತ್ರಿಕ ಔಷದಿಯೊಂದು ಈತನ ರಕ್ತದಲ್ಲಿ ಪುಗಸಟ್ಟೆಯಾಗಿ ದೊರೆಯುತ್ತಿದೆ!!!! ಜಗತ್ತಿನಲ್ಲಿ ಇದುವರೆಗೂ ಇಂತಹ ಪ್ರತಿಕಾಯ, ರಕ್ತದಲ್ಲಿ ಅದೂ ಸಹ ಮೂಲಸ್ವರೂಪದಲ್ಲಿ, ಲಭ್ಯವಿರುವ ಇನ್ನೊಬ್ಬ ವ್ಯಕ್ತಿದೊರೆತಿಲ್ಲ. ಅದೂ ಅಲ್ಲದೆ, Rh ಖಾಯಿಲೆಯಿರುವ ಒಂದು ಮಗುವಿಗೆ ಬೇಕಾದದ್ದು ಈತನ ಒಂದು ಬಾಟಲಿ ರಕ್ತವಲ್ಲ, ಬರೇ 40 ಮಿ.ಲೀ!! ಅದನ್ನು ತಿಳಿದ ನಂತರ ಜೇಮ್ಸ್ ಇನ್ನೂ ಸಂತೋಷದಿಂದ ತನ್ನ ದಾನ ಮುಂದುವರೆಸಿದ. ನಾನು ಮೇಲೆ ಹೇಳಿದ ‘2 ಕೋಟಿ ಮಕ್ಕಳ ಜೀವ ಉಳಿಸಿದ’ ಲೆಕ್ಕ, ಇದೇ ಅಂದಾಜಿನ ಮೇಲೆ ಆಧಾರಿತವಾದದ್ದು. ಸ್ವತಃ ಈತನ ಮೊಮ್ಮಗನೇ ಗರ್ಭದಲ್ಲಿದ್ದಾಗ Rh ಖಾಯಿಲೆಗೆ ತುತ್ತಾಗಿದ್ದ. ಅಜ್ಜನ ಕೃಪೆಯಿಂದ ಇಂದು ಆತ ಆರೋಗ್ಯವಾಗಿದ್ದಾನೆ.

ಈತನ ರಕ್ತ ಅದೆಷ್ಟು ವಿಶಿಷ್ಟವಾಗಿತ್ತೆಂದರೆ, ಅರವತ್ತರ ದಶಕದಲ್ಲಿ ಜೇಮ್ಸನ ಜೀವಕ್ಕೆ ಹತ್ತುಲಕ್ಷ ಆಸ್ಟ್ರೇಲಿಯನ್ ಡಾಲರ್ಗಳಿಗೆ ವಿಮೆ ಮಾಡಿಸಲಾಗಿತ್ತು! 1996ರಲ್ಲಿ Anti-D ಎಂಬ ಔಷಧಿಯ ಸಂಶೋಧನೆಗೆ ಈತನ ರಕ್ತವೇ ಮೂಲ ಘಟಕವಾಗಿತ್ತು. ಇವನ ರಕ್ತದಿಂದ ಈಗ Rh0(D) IG ಯನ್ನು ಕೃತಕವಾಗಿ ಸಂಶ್ಲೇಷಿಸಲಾಗಿದೆ. ಹಾಗಾಗಿ ನಮ್ಮ ಮುಂದಿನ ಜನಾಂಗವೀಗ ಸುರಕ್ಷಿತ, ಇವನ ದಯೆಯಿಂದ.

ಜೇಮ್ಸ್ ಈ ರಕ್ತದಾನದ ಪ್ರಯತ್ನದಲ್ಲಿ ಸಾಧ್ಯವಿರುವ ಎಲ್ಲಾ ಮಜಲುಗಳನ್ನೂ ಕ್ರಮಿಸಿದ. ವಿಶ್ವದಾಖಲೆ ಮಟ್ಟದಲ್ಲಿ ದಾನಮಾಡಿದ್ದಲ್ಲದೇ, ರಕ್ತ ಪ್ಲಾಸ್ಮಾಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಹಾಗೂ ಅಮೇರಿಕಾದ ಮಧ್ಯೆಯಿದ್ದ ಮುಕ್ತವ್ಯಾಪಾರ ಒಪ್ಪಂದವೊಂದನ್ನು ಖಾರವಾಗಿಯೇ ವಿಮರ್ಶಿಸಿ, ಎರಡೂ ದೇಶಗಳು ಅದನ್ನು ಪರಾಮಶಿರ್ಸುವಂತೆ ಒತ್ತಾಯಿಸಿ, ಅದರಲ್ಲಿ ಯಶಸ್ವಿಯೂ ಆದ. ವಿದೇಶೀ ವ್ಯಾಪಾರಿಗಳು ರಕ್ತಪ್ಲಾಸ್ಮಾದ ಸಂಸ್ಕರಣೆ ಮಾಡುವಂತಾದರೆ, ಆಸ್ಟ್ರೇಲಿಯನ್ ಸ್ವಯಂದಾನಿಗಳು ಪ್ಲಾಸ್ಮಾ ದಾನಕ್ಕೆ ಹಿಂದೇಟು ಹಾಕುತ್ತಾರೆಂದು ಮನವರಿಕೆ ಮಾಡಿಕೊಟ್ಟ ಜೇಮ್ಸ್, ಸಂಸ್ಕರಣೆ ಮಾಡುವ ಕಂಪನಿ ಆಸ್ಟ್ರೇಲಿಯದ್ದೇ ಆಗಿರಬೇಕೆಂದು ಹಠಹಿಡಿದು, ಅದನ್ನು ಸಾಧಿಸಿದ ಕೂಡ (ಇದಕ್ಕೆ ಸಂಬಂಧಿಸಿದ ಹೆಚ್ಚಿನ ವಿಷಯ ಇಲ್ಲಿದೆ http://bit.ly/1uwiYgp)

‘ಬಂಗಾರದ ಕೈಯ ಮನುಷ್ಯ (man with a golden arm)’ ಹಾಗೂ ‘ಎರಡು ಕೋಟಿಗೊಬ್ಬ (man in two million)’ ಎಂದೇ ಪ್ರಸಿದ್ಧವಾದ ಜೇಮ್ಸ್ ನಮಗೆಲ್ಲರಿಗೂ ಆದರ್ಶಪ್ರಾಯನಾಗಲಿ. ಅವನಷ್ಟು ವಿಶಿಷ್ಟರು ನಾವಲ್ಲದಿದ್ದರೂ ರಕ್ತದಾನ ಮಾಡಿ ಶ್ರೇಷ್ಟರಾಗಲು ನಮಗೆ ಸಾಧ್ಯವಿದೆ. ದಯವಿಟ್ಟು ಯೋಚಿಸಿ.

ಕೊಸರು:

ಇವತ್ತು ಕೊಸರಿಲ್ಲ, ಕೋರಿಕೆ.
ಇದನ್ನು ಓದಿದ ಮೇಲೆ, ನಿಮಗೆ ರಕ್ತದಾನ ಮಾಡಬೇಕೆಂದಿನಿಸಿದಲ್ಲಿ, ನಿಲುಮೆಯ ನಿರ್ವಾಹಕರಲ್ಲೊಬ್ಬರಾದ ಸತ್ಯಚರಣ್ ಅವರನ್ನು ಪಿಂಗಿಸಿ. ನಿಲುಮೆಯ ರಕ್ತದಾನಿಗಳ ಲಿಸ್ಟಿಗೆ ನಿಮ್ಮನ್ನು ಸೇರಿಸುತ್ತಾರೆ. ಕನಿಷ್ಟ ಒಂದು ಜೀವ ಉಳಿಸಿ. ನಿಮ್ಮ ಒಂದು ಕುಪ್ಪಿ ರಕ್ತ ಯಾರದೋ ಜೀವನವನ್ನು ಬದಲಾಯಿಸಬಲ್ಲುದು.

(ನಮ್ಮ ಗುಂಪಿನಲ್ಲಿ ಲೆಕ್ಕಾಚಾರದ ಜನ ಜಾಸ್ತಿ. ಹಾಗಾಗಿ ಇದೊಂದು ಸ್ಪಷ್ಟೀಕರಣ. ಈ Rho(D) IG ಇರೋದು ರಕ್ತದ ಪ್ಲಾಸ್ಮಾದಲ್ಲಿ. ಎರಡು ಸಂಪೂರ್ಣರಕ್ತ (whole blood) ದಾನಗಳ ಮಧ್ಯೆ ಸಾಮಾನ್ಯವಾಗಿ 3 ರಿಂದ 4 ತಿಂಗಳ ಅಂತರ ಕಾಪಾಡಲಾಗುತ್ತದೆ. ಆದರೆ ಎರಡು ಬಾರಿ ಪ್ಲಾಸ್ಮಾ ತೆಗೆಯಲು 2-3 ವಾರದ ಅಂತರ ಸಾಕು. ಆ ಲೆಕ್ಕಾಚಾರದ ಮೇಲೆಯೇ ಜೇಮ್ಸ್ ಸಾವಿರಕ್ಕೂ ಹೆಚ್ಚು ಬಾರಿ ದಾನಮಾಡಲು ಸಾಧ್ಯವಾದದ್ದು. ಅಲ್ಲಿಗೆ ಲೆಕ್ಕಾಚಾರಿಗಳ ಲೆಕ್ಕವೂ ಚುಕ್ತಾ 🙂 )

#ದಿನಕ್ಕೊಂದು_ ವಿಷಯ, #James_Harrison, #Blood_Donation, #Rh(o)D_IG

main-qimg-e94781c412fb23d6ac4c98e53c21bf77

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s