ದಿನಕ್ಕೊಂದು ವಿಷಯ – ೧

ದಿನಕ್ಕೊಂದು ವಿಷಯ – ೧
 
ಸ್ಟಾಕ್ ಹೋಂ ಸಿಂಡ್ರೋಮ್:
 
ಮನಃಶಾಸ್ತ್ರ ನನ್ನ ಮೊದಲ ಐದು ನೆಚ್ಚಿನ ವಿಷಯಗಳಲ್ಲೊಂದು. ಹಾಗಾಗಿ ಈ ಮಾಲಿಕೆಯನ್ನು ಮನಃಶಾಸ್ತ್ರದ ಒಂದು ವಿಷಯದೊಂದಿಗೆ ಪ್ರಾರಂಭಿಸುತ್ತಿದ್ದೇನೆ.
 
ಮನುಷ್ಯನ ಮೆದುಳು ಜಗತ್ತಿನ ಅತ್ಯಂತ ಜಟಿಲ ವಸ್ತುಗಳಲ್ಲೊಂದು. ಅದು ಯಾವಾಗ ಹೇಗೆ ಕೆಲಸ ಮಾಡುತ್ತದೆ, ಯಾವ ನಿರ್ಧಾರಗಳನ್ನು ಕೈಗೊಳ್ಳುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಾದರೆ ನಾವು ಹಲವಾರು ತಲೆಮಾರುಗಳನ್ನೇ ಅಧ್ಯಯಿಸಬೇಕಾಗುತ್ತದೆ. ಅಲ್ಲಿ ನಡೆದ ಘಟನೆಗಳನ್ನು ವಿಶ್ಲೇಷಿಸಿ ನಿರ್ಧಾರಕ್ಕೆ ಬರಬೇಕಾಗುತ್ತದೆ. ಮೆದುಳಿನ/ಮನಸ್ಸಿನ ವಿಚಾರಕ್ಕೆ ಬಂದಾಗ ‘ಇದು ಹೀಗೆಯೇ’ ಎಂದು ಥಟ್ಟನೆ ಉತ್ತರ ಕೊಡಲಾಗುವುದಿಲ್ಲ. ಕತ್ತಲಲ್ಲಿ ಮೂತ್ರಮಾಡಲು ಹೆದರುವ ಐವತ್ತು ವರ್ಷದ ಗಂಡಸರ ಭಯದ ಹಿಂದೆ, ನಲವತ್ನಾಲ್ಕು ವರ್ಷದ ಇತಿಹಾಸವಿರಬಹುದು. ಕೇಸರಿಬಾತನ್ನೇ ತಿನ್ನದ ಹದಿನೆಂಟರ ಹುಡುಗಿಯ ನಿರಾಕರಣದ ಹಿಂದೆ ಆರುವರ್ಷದ ಹಳೆಯ ಕರುಣಾಜನಕ ಕತೆಯಿರಬಹುದು. ಮನಸ್ಸು ಮತ್ತದನ್ನು ನಿಯಂತ್ರಿಸುವ ಮೆದುಳು ಬಹಳ ನಿಗೂಡ. ಅಂತಹ ನಿಗೂಡಗಳಲ್ಲೊಂದು ವಿಷಯವನ್ನು ಇಂದು ತಿಳಿಯೋಣ.
 
ವೀರಪ್ಪನ್ ನಮ್ಮ ಅಣ್ಣಾವ್ರನ್ನ ಅಪಹರಿಸಿದ್ದು ನಿಮಗೆಲ್ಲರಿಗೂ ನೆನಪಿದೆಯೆಂದುಕೊಳ್ಳುತೇನೆ. ನೂರಾಎಂಟು ದಿನಗಳ ನಂತರ ಅವನ ಹಿಡಿತದಿಂದ ಹೊರಬಂದ ರಾಜಣ್ಣ, ವೀರಪ್ಪನ್ ಬಗ್ಗೆ ಯಾವುದೇ ಅಸಹನೆ ಅಥವಾ ಸಿಟ್ಟನ್ನ ತೋರಿಸಲೇ ಇಲ್ಲ. ಬದಲಾಗಿ ಒಳ್ಳೆಯ ಮಾತುಗಳನ್ನೇ ಹೇಳಿದರು. “ನನ್ನನ್ನ ಚೆನ್ನಾಗಿಯೇ ನೋಡ್ಕೊಂಡ್ರು, ಅವರು ಒಳ್ಳೆಯ ಜನರೇ, ಏನೋ ಪರಿಸ್ಥಿತಿಯ ಒತ್ತಡದಿಂದಾಗಿ ಅಂತಹ ಕೆಲಸ ಮಾಡ್ತಾ ಇದ್ದಾರೆ” ಮುಂತಾದ ಮಾತುಗಳನ್ನು ಹೇಳಿದರು. ಅದು ರಾಜಣ್ಣನವರ ಒಳ್ಳೆಯತನವೇ ಇರಬಹುದು. ಆದರೆ ಮನಃಶಾಸ್ತ್ರ ಇದನ್ನು ಬೇರೆಯೇ ರೀತಿಯಾಗಿ ಕರೆಯುತ್ತದೆ. ಇದನ್ನು ಆ ವಿಜ್ಞಾನದ ಭಾಷೆಯಲ್ಲಿ ‘ಸ್ಟಾಕ್ ಹೋಂ ಸಿಂಡ್ರೋಮ್’ ಎಂದು ಕರೆಯುತ್ತಾರೆ. ಬಂಧಿತನಾದವನು ತನ್ನ ಅಪಹರಣಕಾರನ (ಅಥವಾ ಸೆರೆಹಿಡಿರುವವನ) ಬಗೆಗೆ ಸಹಾನುಭೂತಿ ತೋರುವುದು, ಆತನ ಬಗ್ಗೆ ಒಲವನ್ನ ವ್ಯಕ್ತಪಡಿಸುವ ವಿಚಿತ್ರ ಪ್ರಕ್ರಿಯೆಯನ್ನು ಸ್ಟಾಕ್ ಹೋಂ ಸಿಂಡ್ರೋಮ್ ಎನ್ನಲಾಗುತ್ತದೆ. ಏನಿದು? ಯಾಕೆ ಹೀಗಾಗುತ್ತದೆ ಎಂಬುದರ ಬಗ್ಗೆ ಸ್ವಲ್ಪ ತಿಳಿಯೋಣ ಬನ್ನಿ.
 
ಇದರ ಹಿಂದೆ ಒಂದು ಸಣ್ಣ ಕಥೆಯಿದೆ. ಆಗಸ್ಟ್ 23, 1973ರಂದು ಸ್ವೀಡನ್ನಿನ ಸ್ಟಾಕ್ ಹೋಂ (Stockholm) ನಗರದ ನೋರ್ಮಾಮ್-ಸ್ಟೋರ್ಗ್ ಎಂಬಲ್ಲಿರುವ ‘ಕ್ರೆಡಿಟ್ ಬ್ಯಾಂಕೆನ್’ (Kreditbanken) ಎಂಬ ಬ್ಯಾಂಕಿಗೆ ನುಗ್ಗಿದ ಸಾಧಾರಣ ಕಳ್ಳನೊಬ್ಬ, ಬ್ಯಾಂಕಿನಲ್ಲಿದ್ದ ನಾಲ್ಕು ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ತನ್ನ ಇನ್ನೊಬ್ಬ ಅಪರಾಧಿ ಸ್ನೇಹಿತನನ್ನು ಅಲ್ಲಿಗೆ ಕರೆಸುವಂತೆ ಹಾಗೂ ಸರಿಸುಮಾರು ಮೂರು ದಶಲಕ್ಷ ಸ್ವೀಡಿಶ್ ಕ್ರೊನೋರ್ ಮೊತ್ತದ ಹಣವನ್ನೂ ಹಾಗೂ ಬುಲೆಟ್ ಪ್ರೂಫ್ ಜಾಕೆಟ್ಟುಗಳು, ಪಿಸ್ತೂಲುಗಳು ಮುಂತಾದುವುಗಳ ಬೇಡಿಕೆಯನ್ನು ಪೋಲೀಸರ ಮುಂದೆ ಇಟ್ಟ. ಈ ಕಥೆ ಸುಮಾರು ಆರು ದಿನಗಳ ಕಾಲ ನಡೆಯಿತು ಹಾಗೂ ಕೊನೆಗೆ ಅಪರಾಧಿಗಳಿಬ್ಬರೂ ಶರಣಾದರು. ಇಡೀ ಕೇಸಿನಲ್ಲಿ ಒಬ್ಬರು ಪೋಲಿಸರು ಗಾಯಗೊಂಡರೇ ಹೊರತು, ಯಾವುದೇ ಒತ್ತೆಯಾಳಿಗೆ ಯಾವುದೇ ರೀತಿಯ ಹಾನಿಯಗಲಿಲ್ಲ. ಸ್ವೀಡನ್ನಿನ ಟೀವಿಗಳಲ್ಲಿ ಈ ಕೇಸನ್ನು ಪೂರ್ತಿ ಆರುದಿನಗಳ ಕಾಲ ನೇರವಾಗಿ ಪ್ರಸಾರ ಮಾಡಲಾಯಿತು. ಇಲ್ಲಿ ಕುತೂಹಲಕಾರಿಯಾದದ್ದು ಈ ಅಪರಾದ ಅಲ್ಲವೇ ಅಲ್ಲ, ಅಥವಾ ಹೇಗೆ ಅಪರಾಧಿಗಳನ್ನು ಸೆರೆಹಿಡಿಯಲಾಯಿತು ಎಂಬುದೂ ಅಲ್ಲ. ಕೇಸಿನ ಬಗ್ಗೆ ಹೆಚ್ಚಿನ ವಿವರ ಬೇಕಿದ್ದರೆ ಇಲ್ಲಿ ಓದಿ (‍http://en.wikipedia.org/wiki/Norrmalmstorg_robbery). ಎಲ್ಲಕ್ಕಿಂತ ಕುತೂಹಲ ಕೆರಳಿಸಿದ್ದು ಒತ್ತೆಯಾಳುಗಳ ವರ್ತನೆ. ಅಪರಾಧಶಾಸ್ತ್ರದಲ್ಲಿ (criminology) ಮೊದಲಬಾರಿಗೆ ದಾಖಲಿಸಲಾದ ಕೆಲ ಲಕ್ಷಣಗಳು ಈ ಒತ್ತೆಯಾಳುಗಳಲ್ಲಿ ಕಂಡುಬಂದವು. ಅದೇನೆಂದರೆ, ಸರಿಸುಮಾರು ಎರಡನೇ ದಿನದ ಸಂಜೆಯ ಹೊತ್ತಿಗೆ ಅಪರಾಧಿಗಳು ತಮ್ಮನ್ನು ಬಿಡಿಸಲು ಬಂದ ಪೋಲೀಸರನ್ನು ವಾಪಸ್ ಹೋಗುವಂತೆ ಕೇಳಿಕೊಂಡರು! ಅಪರಾಧಿಗಳೆಡೆಗೆ ಯಾವುದೇ ಗುಂಡಿನ ಪ್ರಯೋಗ ಮಾಡದಿರುವಂತೆ ಬೇಡಿಕೊಂಡರು!! ಆರುದಿನಗಳ ನಂತರ ಅಪರಾಧಿಗಳನ್ನು ಸೆರೆಹಿಡಿದಾದ ಮೇಲೂ ಅವರ ವಿರುದ್ಧ ಸಾಕ್ಷಿ ಹೇಳಲು ನಿರಾಕರಿಸಿದರು!!! ಅವರಲ್ಲೊಬ್ಬನಂತೂ ಆ ಅಪರಾಧಿಗಳ ನ್ಯಾಯಾಂಗ ತನಿಖೆಯ ಖರ್ಚುವೆಚ್ಚಗಳನ್ನೆಲ್ಲಾ ವಹಿಸಿಕೊಂಡ!!!! ಸರ್ಕಾರವೇನೋ ‘ಸುವೋ ಮೋಟು’ಕ್ರಿಯೆಯ ಮೂಲಕ ಕೇಸನ್ನು ದಾಖಲಿಸಿ ಪೋಲೀಸರ ಸಾಕ್ಷ್ಯಾಧಾರದ ಮೇಲೆ ಅಪರಾಧಿಗಳಿಬ್ಬರನ್ನೂ ಹತ್ತು ವರ್ಷ ಜೈಲಿಗೆ ಅಟ್ಟಿತು.
 
ಅಪರಾಧಿಗಳೆಡೆಗೆ ಒತ್ತೆಯಾಳುಗಳ ಈ ಮೃದುವರ್ತನೆ ಸಹಜವಾಗಿಯೇ ಶೈಕ್ಷಣಿಕ ವಲಯಗಳಲಲ್ಲಿ ಚರ್ಚೆಯಾಗಲು ಪ್ರಾರಂಭಿಸಿತು. ಇದಕ್ಕಿಂತ ಮುಂಚೆ ಇಂತಹ ಘಟನೆ ನಡೆದಿರಲಿಲ್ಲವೆಂದಲ್ಲ. ಆದರೆ ಮೊದಲಬಾರಿಗೆ ಇಂಥಾ ಘಟನೆಯ ಎಲ್ಲಾ ಮಜಲುಗಳನ್ನು ಟೀವಿ, ರೇಡಿಯೋ ಧ್ವನಿಮುದ್ರಿಕೆ ಹಾಗೂ ಪತ್ರಿಕಾಸಂದರ್ಶನಗಳ ಮೂಲಕ ದಾಖಲು ಮಾಡಲಾಗಿತ್ತು ಹಾಗೂ ಅಧ್ಯಯನಕ್ಕೆ ಅನುಕೂಲವಾಗಿತ್ತು. ಇದನ್ನೆಲ್ಲಾ ಅಧ್ಯಯಯಿಸಿದ ಮನಃಶಾಸ್ತ್ರಜ್ಞರ ಪ್ರಕಾರ ಕೆಳಗಿನ ಮೂರೂ ಸ್ಥಿತಿಗಳು ಒಂದಾದಾಗ, ಮನುಷ್ಯರಲ್ಲಿ ಈ ರೀತಿಯ ಗುಣಲಕ್ಷ್ಣಗಳು ಕಂಡುಬರುತ್ತವೆ:
(1) ಸೆರೆಹಿಡಿದವ ಹಾಗೂ ಖೈದಿಯ ನಡುವೆ ತೀವ್ರತರವಾದ ಶಕ್ತಿಯ ಅಸಮತೋಲನ, ಹಾಗೂ ಖೈದಿ ಏನು ಮಾಡಬೇಕೆಂಬುದನ್ನು ನೂರುಪ್ರತಿಶತ ಸೆರೆಹಿಡಿದವನು ಮಾತ್ರವೇ ನಿರ್ಧರಿಸುವಾಗ
(2) ಸೆರೆಹಿಡಿದವನಿಂದ ಖೈದಿಗೆ ಸಾವು ಅಥವಾ ತೀವ್ರತರವಾದ ದೈಹಿಕ ಗಾಯದ ​​ಬೆದರಿಕೆಯ ಸಾಧ್ಯತೆಯಿದೆ, ಆದರೆ ಸೆರೆಹಿಡಿದ ವ್ಯಕ್ತಿ ಖದಿಗಳ ಮೇಲೆ ಆ ಅಧಿಕಾರವನ್ನು ಉಪಯೋಗಿಸದೇ ಇದ್ದಾಗ
(3) ಖೈದಿಗಳ ಕಡೆಯಿಂದ ಸ್ವರಕ್ಷಣೆ ಪ್ರವೃತ್ತಿ ಕಂಡುಬಂದಾಗ
 
ಅಪರಾಧಿಗಳು ಮೂಲತಃ ಒಳ್ಳೆಯವರಿರಲಿ, ಕೆಟ್ಟವರಿರಲಿ ಹಾಗೂ ಅವರ ಉದ್ಧೇಶಗಳು ಏನೇ ಇದ್ದಿರಲಿ, ತೀವ್ರತರವಾದ ಅಪಾಯವನ್ನುಂಟುಮಾಡಲು ಸಾಧ್ಯವಿದ್ದರೂ ಸಹ, ತನಗೆ ಯಾವುದೇ ಸಾವು-ನೋವನ್ನು ಉಂಟುಮಾಡದಿದ್ದಾಗ, ಖೈದಿಗಳು ಸೆರೆಹಿಡಿದ ಗುಂಪಿನ ಬಗ್ಗೆ ಒಲವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚಿದೆಯೆಂದು ಅಪರಾಧಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ‘ತನ್ನ ಜೀವ ಒಂದು ಹಂತದಲ್ಲಿ ಈತನ ಕೈಯಲ್ಲಿತ್ತು. ಆದರೂ ಆತ ಅದನ್ನು ದುರುಪಯೋಗಪಡಿಸದೆ ನನ್ನನ್ನು ಜೀವಂತವಾಗಿ ಬಿಟ್ಟುಬಿಟ್ಟ’ ಎನ್ನುವ ಕೃತಜ್ಞತಾಭಾವವನ್ನು ಖೈದಿಗಳು ಬೆಳಿಸಿಕೊಳ್ಳುತ್ತಾರೆ. ಒಂದು ಅಂಕಿಅಂಶದ ಪ್ರಕಾರ ಸುಮಾರು 8%ನಷ್ಟು ಒತ್ತೆಯಾಳುಗಳು ಸ್ಟಾಕ್ ಹೋಂ ಸಿಂಡ್ರೋಮಿನ ಪರಿಣಾಮಗಳೀಗಿಡಾಗುತ್ತಾರೆ.
 
ಆನಂತರದ ಸಂಶೋಧನೆಗಳ ಪ್ರಕಾರ ಈ ರೀತಿಯ ನಡವಳಿಕೆಗಳು ಯಜಮಾನ-ಗುಲಾಮ, ಕುಡುಕಗಂಡ-ಅಸಹಾಯಕ ಹೆಂಡತಿಯಂತ ಸಂಬಂಧಗಳಲ್ಲಿಯೂ ಕಂಡುಬರುತ್ತದೆಯೆಂಬುದು ಋಜುವಾತಾಯಿತು. ‍‍ನಡೆಯುತ್ತಿರುವ ಘಟನಾವಳಿಗಳಿಂದ ಮಾನಸಿಕವಾಗಿ ಜರ್ಝರಿತಗೊಂಡ ಯಾವುದೋ ಒಂದು ಕ್ಷಣದಲ್ಲಿ ಖೈದಿಗೆ ‘ನನಗೆ ಈ ಪರಿಸ್ಥಿತಿಯಿಂದ ಸಧ್ಯಕ್ಕಂತೂ ಬಿಡುಗಡೆಯಿಲ್ಲ. ನಾನೇನಾದರೂ ಬುದ್ಧಿವಂತಿಕೆ ತೋರಿಸಿದರೆ ಸಾವೇ ಗತಿ’ ಎಂಬ ಸಣ್ಣ ಅರಿವು ಮೂಡುತ್ತದೆಯೋ, ತನಗಿಂತ (ಸ್ವಲ್ಪವಾದರೂ ಸಹ) ಹೆಚ್ಚಿನ ಬಲವುಳ್ಳ ಸೆರೆಹಿಡಿದವನ ಬಗ್ಗೆ ಒಂದು ಸಣ್ಣ ಭಯ (ಹಾಗೂ ಗೌರವ/ವಿಧೇಯತೆ ಕೂಡ) ಖೈದಿಯ ಮನಸ್ಸಿನಲ್ಲಿ ಹುಟ್ಟುತ್ತದೆ. ನಿಧಾನವಾಗಿ ಈ ವಿಧೇಯತೆಯೆಂಬುದು ‘ಬದುಕುಳಿಯುವ ತಂತ್ರ’ವಾಗಿ ಪರಿವರ್ತನೆಯಾಗುತ್ತದೆ. ಯಾಕೆಂದರೆ ಖೈದಿ ಸದಾ ತನ್ನ ಸೆರೆಹಿಡಿದವನನ್ನು ಅಭ್ಯಸಿಸುತ್ತಿರುತ್ತಾನೆ. ಹಾಗೂ ಅವನಿಗೆ ತನ್ನ ಸೆರೆಹಿಡಿದವನಿಗೆ ಯಾವುದರಿಂದ ನಗು ಬರುತ್ತದೆ, ಯಾವಾಗ ಆತನಿಗೆ ಸಿಟ್ಟು ಬರುತ್ತದೆ, ಸಿಟ್ಟು ಬಂದರೆ ಏನು ಮಾಡುತ್ತಾನೆ ಎಲ್ಲವನ್ನೂ ಸೂಕ್ಷವಾಗಿ ಗಮನಿಸುತ್ತಿರುತ್ತಾನೆ. ಹಾಗಾಗಿ ತಾನು ಏನು ಮಾಡಿದರೆ ಬದುಕುಳಿಯಬಹುದು ಎಂಬುದು ಮುಖ್ಯವಾಗುತ್ತದೆ ಹಾಗೂ ಅದಕ್ಕನುಗುಣವಾಗಿ ಖೈದಿ ತನ್ನ ವರ್ತನೆಯನ್ನು ಹೊಂದಿಸಿಕೊಳ್ಳುತ್ತಾನೆ. ನಿಧಾನವಾಗಿ ಆ ವರ್ತನೆಯೇ ತಾನಾಗಿ ಬದಲಾಗುತ್ತಾನೆ!! ಇಷ್ಟರ ನಡುವೆ ಯಾವುದೋ ಒಂದು ಸಂಧರ್ಭದಲ್ಲಿ ಸೆರೆಹಿಡಿದವ ತನ್ನೆಡೆಗೆ ತೋರಿದ ಕರುಣೆಯಿಂದ (ಉದಾ: ಕೇಳದಿದ್ದರೂ ಕುಡಿಯಲು ನೀರು, ತಿನ್ನಲು ಆಹಾರ ಕೊಡುವುದ, ತಾನು ಕುಡಿಯುತ್ತಿದ್ದ ವಿಸ್ಕಿ ಗ್ಲಾಸನ್ನು ಖೈದಿಯೆಡೆಗೆ ತಳ್ಳುವುದು ಅಥವಾ ಸಣ್ಣದೊಂದು ಜೋಕು ಹೇಳುವುದು) ಖೈದಿ ಕನ್ನಡ ಸಿನಿಮಾಗಳ ನಾಯಕಿಯಂತೆ ಪೂರ್ತಿ ಕರಗಿ ಹೋಗುತ್ತಾನೆ ಹಾಗೂ ಅಪಹರಣಕಾದನೆಡೆಗೆ ಒಲವು ಬೆಳೆಸಿಕೊಳ್ಳಲು ಪ್ರಾರಂಭಿಸುತ್ತಾನೆ. ಇತ್ತೀಚಿನ, ಆಲೀಯಾ ಭಟ್ ಹಾಗೂ ರಣ್ದೀಪ್ ಹೂಡಾ ಅಭಿನಯದ ಹಿಂದಿ ಚಿತ್ರ “ಹೈವೇ” ನೋಡಿದರೆ ನಾನು ಹೇಳುತ್ತಿರುವುದೇನು ಎಂದು ನಿಮಗೆ ನಿಚ್ಚಳವಾಗಿ ತಿಳಿಯುತ್ತದೆ.
 
ಒಂದು ಥಿಯರಿಯ ಪ್ರಕಾರ ದೇವರೆಡೆಗೆ ಮನುಷ್ಯನ ವಿಧೇಯತೆ ಕೂಡಾ ‘ಸ್ಟಾಕ್ ಹೋಂ ಸಿಂಡ್ರೋಮ್’ನ ಒಂದು ಪರಿಣಾಮ. ನಾನೇದರೂ ತಪ್ಪು ಮಾಡಿದರೆ ಸರ್ವಶಕ್ತ ಭಗವಂತ ನನ್ನನ್ನು ಏನು ಮಾಡಬಹುದು? ಉತ್ತರವಿಲ್ಲದ ಕುತೂಹಲವೇ, ತನ್ನ ಸುತ್ತ ನಡೆದ ಕೆಲ ನಿದರ್ಶನ ಹಾಗೂ ದೃಷ್ಟಾಂತಗಳಿಂದ ಭಯವಾಗಿ ಪರಿವರ್ತನೆಯಾಗಿ ವಿಧೇಯತೆ ಹಾಗೂ ಶರಣಾಗತಿಯನ್ನು ತರುತ್ತದೆ. ಸಿಡುಕು ಮೂತಿಯ ಅಪ್ಪನ ಬಗೆಗಿನ ನಮ್ಮ ಭಯ ಹಾಗೂ ವಿಧೇಯತೆ ಕೂಡಾ ಇದೇ ಕೇಸು. ಕೊಟ್ಟ ಪ್ರತಿರೂಪಾಯಿಗೂ ಲೆಕ್ಕ ಕೇಳುವ ಮೂಲಕ, ಆರ್ಥಿಕವಾಗಿ ನಮ್ಮನ್ನು ನಿಯಂತ್ರಿಸುವ ಮೂಲಕ,  ‘ ನನ್ನ ಆಸೆಗೆ ವಿರುದ್ಧವಾಗಿ ನೀನು ಅವಳನ್ನೇ ಮದುವೆಯಾದ್ರೆ ನನ್ನ ಆಸ್ತೀಲಿ ಕಿಲುಬು ಕಾಸು ಕೂಡಾ ಸಿಕ್ಕೊಲ್ಲಾ’ ಎಂದು ಹೆದರಿಸುವ ಮೂಲಕ ಅಪ್ಪ (ಅಥವಾ ನಮ್ಮನ್ನು ಆರ್ಥಿಕವಾಗಿ ಹಿಡಿದಿಟ್ಟ ಯಾರೇ ಆಗಲಿ) ನಮ್ಮ ಮೇಲೆ ನಿಯಂತ್ರಣ ಸಾಧಿಸುತ್ತಾನೆ. ಆರ್ಥಿಕ ಬಲಹೀನತೆಯನ್ನು ನಿಮ್ಮ ಮೇಲೆ ಹೇರುವ (ಅಥವಾ ಹೇರಿದಂತೆ ನಟಿಸುವ) ಮೂಲಕ ನೀವು ಆ ಸಂಬಂಧದಲ್ಲಿ ಖೈದಿಯಾಗಿ ಮಾರ್ಪಡುತ್ತೀರಿ. ಇದನ್ನು ಮೀರಿ ಬೆಳೆದ ವ್ಯಕ್ತಿತ್ವಗಳು (‘ನೀನೂ ಬೇಡ ನಿನ್ನ ಆಸ್ತೀನೂ ಬೇಡ’ ಎಂದು ಮನೆಬಿಟ್ಟು ಹೋಗುವ ಸಿನಿಮಾ ಹೀರೋವಿನ ಪಾತ್ರಗಳಂತೆ) ಬಲಶಾಲಿಯಾಗಿ, ಗಟ್ಟಿಯಾಗಿ ಮುಂದುವರೆಯುತ್ತವೆ.
 
ನಮ್ಮ ಕೇರಳದ ನರ್ಸಮ್ಮಗಳು, ISIS ಉಗ್ರರನ್ನು ಹೊಗಳಲು ಈ ಸಿಂಡ್ರೋಮೇ ಕಾರಣವೇ ಹೊರತು, ಆ ಪಿಶಾಚಿಗಳ ‘ಮಾನವೀಯತೆ’ಯಲ್ಲ. ನಟಿ ಪ್ಯಾಟ್ಟಿ ಹರ್ಸ್ಟ್ ಕೇಸಿನಲ್ಲೂ, ದಿನಾ ಕುಡುಕಗಂಡನಿಂದ ಹೊಡೆಸಿಕೊಂಡರೂ ಬೆಳಗಿದದ್ದು ‘ಅಯ್ಯೋ! ಏನು ಮಾಡೋಣ ನನ್ನ ಹಣೇಬರಹ. ಕುಡಿದಾಗ ಮಾತ್ರ ಅವ ಹೀಗೆ, ಉಳಿದಂತೆ ಒಳ್ಳೆಯ ಮನುಷ್ಯನೇ’ ಎಂದು ಜೀವನ ಮುಂದುವರೆಸುವ ಹೆಣ್ಣಿನ ಕಥೆಯಲ್ಲೂ ಇದರದೇ ಕೈವಾಡ 🙂
 
ಕೊಸರು: ಸ್ಟಾಕ್ ಹೋಮ್ ಪ್ರಕರಣದ ಅಪರಾಧಿಗಳಲ್ಲೊಬ್ಬನಾದ ಓಲ್ಸನ್ನನ್ನಿಗೆ ಜೈಲಿಗೆ ಸ್ವೀಡನ್ನಿನ ಹೆಣ್ಣುಮಕ್ಕಳಿಂದ ಪತ್ರಗಳು ಬರಲು ಪ್ರಾರಂಭವಾಯಿತು. ಇದ್ದಕ್ಕಿದ್ದಂತೆ ಓಲ್ಸನ್ ಅವರ ಕಣ್ಣಲ್ಲಿ ಸ್ಪುರದ್ರೂಪಿಯಾಗಿಬಿಟ್ಟಿದ್ದ. ಕೊನೆಗೆ ಇದೇ ಪತ್ರವಿನಿಮಯದ ಮೂಲಕ ಅವರಲ್ಲೊಬ್ಬರನ್ನು (ಒತ್ತೆಯಾಳುಗಳಲ್ಲೊಬ್ಬಳಲ್ಲ) ಆತ ಮದುವೆಯೂ ಆದ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s