ವೈಜ್ಞಾನಿಕತೆಯೆಂದರೆ ಬರೀ ಸಲ್ಫ್ಯೂರಿಕ್ ಆಸಿಡ್ಡಿನ ಫಾರ್ಮುಲಾ ತಿಳಿಯುವುದಲ್ಲ….

ದಿನದಲ್ಲಿ ಕನಿಷ್ಟ ಪಕ್ಷ ಎರಡು ಘಂಟೆ ಫೇಸ್ಬುಕ್ಕಿನಲ್ಲೇ ಕಳೆಯುವ ನನಗೆ, ಎರಡು ದಿನದ ಹಿಂದೆ ಸ್ವಘೋಷಿತ ಬುದ್ಧಿಜಿವಿಯೊಬ್ಬರು ಹಾಕಿದ ಸ್ಟೇಟಸ್ ಗಮನ ಸೆಳೆಯಿತು. ಅವರ ಮನೆಗೆ ಪಾಪ ಕೆಲ ಮಕ್ಕಳು ಗಣೇಶ ಕೂರಿಸಲು ಚಂದಾ ಕೇಳಲು ಬಂದಿದ್ದರಂತೆ. ಆ ಮಕ್ಕಳಿಗೆ ಈ ಮಹಾಶಯರು “ಯಾರು ಈ ಗಣೇಶ? ದೇವರಾ? ಅವನು ಹುಟ್ಟಿದ್ದು ಯಾರಿಗೆ? ಪಾರ್ವತಿಯ ಮೈ ಮೇಲೆ ಅಷ್ಟೊಂದು ಜಿಡ್ಡಿತ್ತಾ? ಗಣೇಶನಿಗೆ ಆನೆಯ ಮುಖ ಬಂದಿದ್ದು ಹೇಗೆ? ಗಣೇಶನ ತಲೆಯನ್ನು ಶಿವ ಕಡಿದಾಗ ಅವನ ವಯಸ್ಸು ಎಷ್ಟಾಗಿತ್ತು? ಅಂತಹ ಚಿಕ್ಕ ಹುಡುಗನ ದೇಹಕ್ಕೆ ದೊಡ್ಡದಾದ ಆನೆಯ ತಲೆ ಅಂಟಿಸಿದ್ದು ಹೇಗೆ? ಗಣೇಶ ಆನೆಯಾದರೆ ಅವನ ವಾಹನ ಇಲಿಯ ಮೇಲೆ ಅವನು ಕೂತಾಗ ಅದು ಅಪ್ಪಚ್ಚಿಯಾಗಲ್ವಾ!? ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿ ಅವರನ್ನು ತಬ್ಬಿಬ್ಬುಗೊಳಿಸಿದೆ” ಅಂತಾ ವಿಜಯಪತಾಕೆಯನ್ನು ಹಾರಿಸಿದ್ದರು. ಸ್ವತಃ ತಮ್ಮನ್ನು ವಿಚಾರವಾದಿಯೆಂದು ಕರೆದುಕೊಳ್ಳುವ ಇವರ ಪ್ರವರವನ್ನು ಕೇಳಿ ನನಗೆ ನಿಜವಾಗಿಯೂ ಇದೆನಾ ವೈಚಾರಿಕತೆ, ವೈಜ್ಞಾನಿಕ ಚಿಂತನೆ ಎಂದರೆ!? ಅಂತಾ ಗಾಬರಿಯಾಯ್ತು. ಇದೇ ವೈಚಾರಿಕತೆಯೆಂದಾದರೆ ನಮ್ಮನ್ನು ನಾವು ವೈಚಾರಿಕರು ಎಂದು ಕರೆದುಕೊಳ್ಳುವ ಮುನ್ನ ಇನ್ನೊಮ್ಮೆ ಯೋಚಿಸಬೇಕಾಗಬಹುದೇನೋ. ಇದೇ ವೈಜ್ಞಾನಿಕ ಚಿಂತನೆಯೆಂದಾದರೆ ನಾನು ಮೂರು ವರ್ಷ ಬಿಎಸ್ಸಿಗೆ ಮಣ್ಣು ಹೊತ್ತದ್ದು ವ್ಯರ್ಥವಾಯಿತಲ್ಲಾ ಎಂದು ಯೋಚಿಸುತ್ತಿದ್ದಾಗ ನನಗನ್ನಿಸಿದ್ದು:

 

ವೈಚಾರಿಕತೆ ಅಂದ್ರೆ ಬರೀ “ಗಣೇಶಂಗೆ ಆನೆ ತಲೆ ಎಲ್ಲಿಂದ ಬಂತು? ಇಲಿ ಮೇಲೆ ಆನೆ ಕೂತ್ರೆ, ಇಲಿ ಅಪ್ಪಚ್ಚಿ ಆಗಲ್ವಾ?” ಅಂಥಾ ಚಂದಾ ಕೇಳಲು ಬಂದ ಚಿಕ್ಕಮಕ್ಕಳಿಗೆ ಪ್ರಶ್ನೆ ಕೇಳೋದು ಮಾತ್ರವಲ್ಲ.
.
.
.
.
.
ವೈಚಾರಿಕತೆ ಅಂದ್ರೆ:

(೧) ಮೊಹಮ್ಮದ್ ಪೈಗಂಬರ್ ನಿಜವಾಗ್ಲೂ ಬುರಾಕ್ ಎನ್ನುವ ‘ಮನುಷ್ಯಮುಖ ಹೊಂದಿದ ರೆಕ್ಕೆಯುಳ್ಳ ಕುದುರೆ’ ಹತ್ತಿ ಜೆರುಸಲೇಂಗೆ ಹೋಗಿದ್ದನಾ? ಹಾಗೂ ಅದೇ ರಾತ್ರಿ ಮತ್ತೊಮ್ಮೆ ಅಲ್ಲಾಹ್ ನ ಬೇಟಿ ಮಾಡಲು ಸ್ವರ್ಗಕ್ಕೆ ಹೋಗಿ ಮರಳಿ ಬಂದನಾ? ಹೌದಾದರೆ, ಕುದುರೆಗೆ ರೆಕ್ಕೆ ಎಲ್ಲಿಂದ ಬಂತು? ಅದಕ್ಕೆ ಮಾನವ ಮುಖಎಲ್ಲಿಂದ ಬಂತು? ಹಾಗೊಂದು ಜೀವಿ ಇರಲು ಸಾಧ್ಯವೇ? ಸ್ವರ್ಗಕ್ಕೆ ಹೇಗೆ ಮನುಷ್ಯ ಹೋಗಲು ಸಾಧ್ಯ? ಜೀವಂತ ಹೇಗೆ ಮರಳಿ ಬರಲು ಸಾಧ್ಯ!? ಎಂದು ಯೋಚಿಸುವುದು ಕೂಡಾ.

(೨) ಸಾಹೀಹ್ ಬುಖಾರಿಯ 4ನೇ ಸಂಪುಟದ, 54ನೇ ಪುಸ್ತಕದ, 490ನೇ ಹಾದಿತ್ ನಿಜವೇ? ಎಂದು ಯೋಚಿಸುವುದು ಹಾಗೂ ಪ್ರಶ್ನಿಸುವುದು ಕೂಡಾ.

(೩) ಕ್ರಿಸ್ತ ನಿಜವಾಗಿಯೂ ಮೂರನೇ ದಿನ ಬದುಕಿ ಬಂದಿದ್ದನೇ? ಆ ರೀತಿ ರಕ್ತಸ್ರಾವವಾದ ವ್ಯಕ್ತಿ ಮೂರುದಿನದವರೆಗೂ ಬದುಕಿರಲು ಸಾಧ್ಯವೇ? ಎಂದು ಯೋಚಿಸುವುದು ಕೂಡಾ.

(೪) ಇಟಲಿಯ ಕಿತ್ತಳೆ ಎಸೆತದ ಆಚರಣೆಗೆ ನಿಜವಾಗಿಯೂ ಅರ್ಥವಿದೆಯೇ? ಅಥವಾ ಅದು ಬರೇ ಕಿತ್ತಳೆಗಳನ್ನು ದುಂದುವೆಚ್ಚ ಮಾಡುವ ಒಂದು ಆಚರಣೆಯೇ? ಎಂದು ಯೋಚಿಸುವುದು ಕೂಡಾ.

(೫) ಸ್ಪೇನಿನ ಬುನ್ಯೋಲ್ ನಲ್ಲಿ, ವಾರ್ಷಿಕವಾಗಿ ನಡೆಯುವ ಟೊಮ್ಯಾಟೀನಾ ಹಬ್ಬಕ್ಕೆ ಮತ್ತು ಪಂಪಲೋನಾದ ಎತ್ತುಗಳ ಓಟದ ಹಬ್ಬಕ್ಕೆ ನಿಜವಾಗಿಯೂ ಅರ್ಥವಿದೆಯೇ? ಅಥವಾ ಅದು ಬರೇ ಟೊಮ್ಯಾಟೋಗಳನ್ನು ದುಂದುವೆಚ್ಚ ಮಾಡುವ ಹಾಗೂ ಎತ್ತುಗಳಂದ ತಿವಿಯಲ್ಪಡುವ ಮನುಷ್ಯರ ಒಂದು ಹಿಂಸಾತ್ಮಕ ಆಚರಣೆಯೇ?ಎಂದು ಯೋಚಿಸುವುದು ಕೂಡಾ.

(೬) ಫಿನ್ಲ್ಯಾಂಡಿನಲ್ಲಿ ಹೆಂಡತಿಯನ್ನು ಎತ್ತಿಕೊಂಡು ಓಡುವ ಸ್ಪರ್ಧೆಗೆ ನಿಜವಾಗಿಯೂ ಅರ್ಥವಿದೆಯೇ? ಅಥವಾ ಅದು ಬರೇ ಅರ್ಥಹೀನ ಆಚರಣೆಯೇ? ಎಂದು ಯೋಚಿಸುವುದು ಕೂಡಾ.

(೭) ಸ್ಪೇನಿನ ‘ಸಂತಾ ಮಾರ್ತಾಳ ಸಾವಿನ ಹಬ್ಬ’ದ (Fiesta de Santa Marta de Ribarteme) ಬಗ್ಗೆ ತಲೆಕೆಡಿಸಿಕೊಂಡು ಅದರ ಅರ್ಥವನ್ನು ಹುಡುಕಿವುದು ಕೂಡಾ.

(೮) ಸಾಂಟಾಕ್ಲಾಸ್ ನಿಜವಾಗಿಯೂ ಇದ್ದಾನೆಯೇ? ಉತ್ತರದ್ರುವದಲ್ಲಿ ಅವನ ಆಟಿಕೆಗಳ ಫ್ಯಾಕ್ಟರಿ ನಿಜವಾಗಿಯೂ ಇದೆಯೇ? ಅವನು ಕ್ರಿಸ್ಮಸ್ಸಿನ ಹಿಂದಿನ ದಿನ ಮನೆಗಳಲ್ಲಿ ಹೊಗೆಚಿಮಣಿಯಿಂದ ಇಳಿದು ಎಲ್ಲರಿಗೂ ಉಡುಗೊರೆಗಳನ್ನು ಕೊಡುತ್ತಾನೆಯೇ? ಅವನಹತ್ತಿರ ಆರು ಹಿಮಸಾರಂಗಗಳ ಒಂದು ಜಾರುಬಂಡಿ ಇದೆಯೇ?ಇದು ನಿಜವಾಗಿಯೂ ಹೇಗೆ ಸಾಧ್ಯ!? ಎಂದು ಯೋಚಿಸುವುದು ಕೂಡಾ.

(೯) ಜಪಾನಿನ ‘ಹದಾಕಾ ಮತ್ಸೂರಿ’ ಎಂಬ ‘ನಗ್ನ ಹಬ್ಬ’ದ ಅರ್ಥದ ಬಗ್ಗೆ ಅವರದೇ ನಾಡಿಗೆ ಹೋಗಿ ಅವರನ್ನ್ನು ಪ್ರಶ್ನಿಸುವುದು ಕೂಡಾ.

(೧೦) ಟ್ಯೂರಿನ್ ನ ಶಾಲು, ಮತ್ತದರ ಹಿಂದಿರುವ ಕಥೆ, ಆ ಶಾಲಿಗಿರುವ ದೈವೀಕ ಮಹತ್ವದ ಘಟನೆಗಳು ನಿಜವಾಗಿಯೂ ಘಟಿಸಿದವು ಹೌದೇ? ಎಂದು ಯೋಚಿಸುವುದು ಕೂಡಾ.

ಹಬ್ಬಗಳು ಅಂದ್ರೆ, ಎಲ್ಲಾ ವೈಜ್ಞಾನಿಕತೆಯನ್ನೂ ಬದಿಗಿಟ್ಟು ವರ್ಷಕ್ಕೊಂದೆರಡು ದಿನ ಮನೆಯವರೆಲ್ಲಾ ಹಾಗೂ ಊರವರೆಲ್ಲಾ ಸೇರಿ ಆಚರಿಸಿ, ಸಂತೋಷಪಡುವುದು. ಜೊತೆಗೆ ಸೇರಿ ನಮ್ಮ ನಮ್ಮ ಸಂತರನ್ನು, ಪ್ರವಾದಿಗಳನ್ನು ಹಾಗೂ ದೇವರನ್ನು ನೆನೆಸಿಕೊಂಡು ಹಾಡುವುದು, ನರ್ತಿಸುವುದು ಹಾಗೂ ಒಟ್ಟಿಗೆ ಅಹಾರವನ್ನುಹಂಚಿಕೊಂಡು ತಿನ್ನುವುದು. ಇದು ಎಲ್ಲಾ ದೇಶಕ್ಕೂ, ಧರ್ಮಕ್ಕೂ ಹಾಗೂ ಜನಾಂಗಗಳಿಗೂ ಅನ್ವಯಿಸುವ ವಿಚಾರ.

 

ಮೇಲೆ ಹೇಳಿದ ಉದಾಹರಣೆಗಳು ಯಾವುದೇ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಸಹೋದರರನ್ನು ಅಥವಾ ಅವರ ನಂಬಿಕೆಗಳನ್ನು ಗೇಲಿ ಮಾಡಲು ಹೇಳಿದ್ದಲ್ಲ. ತಲೆಯಿರದ, ಅಥವಾ ತಲೆಯಿದ್ದರೂ ಅದರ ಹೊರಗೆ ಮತ್ತು ಒಳಗೆ ಏನೂ ತುಂಬಿರದ ಕೆಲವು ‘ವೈಚಾರಿಕ ಪತ್ರಕತ್ತೆ’ರಿಗೆ ಪಾಠ ಹೇಳಲು ಉಪಯೋಗಿಸಿದ್ದಷ್ಟೇ. ಎಲ್ಲಾಧರ್ಮಗಳಲ್ಲೂ ಕೆಲವು ನಂಬಲಸಾಧ್ಯವಾದ ಕಥೆಗಳಿವೆ ಎಂಬುದು ಕನಿಷ್ಟ ಜ್ಞಾನವಿರುವ ಎಲ್ಲರಿಗೂ ತಿಳಿದ ವಿಷಯ. ಆದರೆ ನಮಗಿರುವ ನಿಯಮಿತ ಜ್ಞಾನದ ಪರಿಧಿಯಲ್ಲಿ ಅವನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಲಿಲ್ಲ ಹಾಗೂ ನಮ್ಮ ಪರಿಧಿಗೆ ಆ ಕಥೆಗಳು ಸರಿಹೊಂದುತ್ತಿಲ್ಲವೆಂದ ಕಾರಣಕ್ಕೆ ಅವನ್ನೆಲ್ಲಾ ಗೇಲಿ ಮಾಡಿ ಬದಿಗೊತ್ತುವಅವಶ್ಯಕತೆಯಿಲ್ಲ, ಅಲ್ಲವೇ? ಪ್ರವಾದಿಯವರು ಇಸ್ರಾ ಮತ್ತು ಮಿರಾಜಿನ ಪ್ರಯಾಣ ಕೈಗೊಡಿದ್ದರು ಎಂಬುದಕ್ಕೆ ಹಾಗೂ ಸಾಂಟಾಕ್ಲಾಸ್ ಬದುಕಿದ್ದಾನೋ ಇಲ್ಲವೋ ಎಂಬುದಕ್ಕೆ ನಮಗೆ ವೈಜ್ಞಾನಿಕ ಪುರಾವೆ ಬೇಕಿಲ್ಲ. ಅದು ನಿಜವೇ ಆಗಲಿ ಸುಳ್ಳೇ ಆಗಲಿ ಆ ದಿನದಂದು ನಾವು ಮನೆಯವರು ಹಾಗೂ ನಮ್ಮ ಊರಿನವರೆಲ್ಲಾ ಒಟ್ಟಿಗೆಸೇರಿ ಕಾಲ ಕಳೆಯುತ್ತೇವೆ. ಆ ದಿನಕ್ಕಾಗಿ ಸಂಭ್ರಮಿಸುತ್ತೇವೆ. ನಮ್ಮ ಪೂರ್ವಜರನ್ನು ನೆನೆಸಿಕೊಂಡು ಅವರಿಗಾಗಿ ಪ್ರಾರ್ಥಿಸುತ್ತೇವೆ.

 

ಇವರಿಗೆ ಗಣೇಶ ಕೂರಿಸೋಕೆ ಇಪ್ಪತ್ತು ರೂಪಾಯಿ ಕೊಡೋಕೆ ಸಾಧ್ಯವಿಲ್ಲ ಅಂದ್ರೆ ಬಾಯ್ಬಿಟ್ಟು ಹೇಳ್ಲಿ. ‘ಅಯ್ಯೋ ಪಾಪ! ಪತ್ರಿಕೆ ಹೆಚ್ಚಾಗಿ ಮಾರಾಟವಾಗ್ತಾ ಇಲ್ಲವಾದ್ದರಿಂದ ಕೈಯಲ್ಲಿ ದುಡ್ಡಿಲ್ಲವೇನೋ’ ಅಂತಾ ಹುಡುಗ್ರು ಮುಂದೆ ಹೋಗ್ತಾ ಇದ್ದರು. ಅದು ಬಿಟ್ಟು ಇವರ ಬೌದ್ಧಿಕ ದಿವಾಳಿತನ ತೋರಿಸೋಕೆ ಹೋಗಿನಗೆಪಾಟಲಿಗೀಡಾಗುವ ಆಸೆಯೇಕೆ!? ಸಧ್ಯ ಹುಡುಗರು ಸ್ವಲ್ಪ ಸಭ್ಯರು ಅನ್ಸುತ್ತೆ. ಅದಕ್ಕೇ ‘ಹೋಗ್ಲಿ ಬಿಡೋ….ಏನೇನೋ ಬಡಬಡಾಯಿಸ್ತಾ ಇದ್ದಾರೆ’ ಅಂತಾ ಸುಮ್ಮನೇ ವಾಪಾಸು ಬಂದಿದ್ದಾರೆ. ಇಲ್ಲಾಂದರೆ, ಈಗಿನ ಮಕ್ಕಳು ಎಷ್ಟು ಚೂಟಿ ಇರ್ತಾರೆ ಅಂತಾ ಗೊತ್ತಲ್ವಾ!? ಆ ಮಕ್ಕಳಲ್ಲಿ ಯಾರಾದರೂ ಒಬ್ಬ ತಿರುಗಿಬಿದ್ದು ನಿಮ್ಮಹೆಸರೂ ದೇವರ ಹೆಸರೇ ಇದ್ಯಲ್ಲಾ ಆಂಟಿ! ಅದು ಹೆಂಗೆ? ನಿಮಗ್ಯಾರೂ ಸಣ್ಣವರಿದ್ದಾಗ ಗಣೇಶನ ಕಥೆ ಹೇಳ್ಲಿಲ್ವಾ? ನೀವು ಹುಟ್ಟಿದ್ದು ಯಾರಿಗೆ? ಗಣೇಶನ ಆನೆ ತಲೆ ಎಲ್ಲಿಂದ ಬಂತು ಎನ್ನುವುದು ಬದಿಗಿರಲಿ, ನಿಮ್ಮ ಪತ್ರಿಕೆ ಎಲ್ಲಿಂದ ಬಂತು? ಅಂತಾ ಕೇಳಿದ್ದರೆ? ತಮ್ಮ ಪ್ರಶ್ನೆ ತಮಗೇ ಉರುಳಾಗುವುದರೆ ಜೊತೆಗೆ, ಸುಖಾಸುಮ್ಮನೆಆಂಟಿ ಅಂತಾ ಬೇರೆ ಕರೆಸ್ಕೊಂಡು ಕೆಂಪಾಗುವ ಸನ್ನಿವೇಶ ಸೃಷ್ಟಿಯಾಗ್ತಾ ಇತ್ತು. ಸಧ್ಯಕ್ಕಂತೂ ಆ ಮಕ್ಕಳು ಆ ಮನೆಯಕಡೆ ತಲೆ ಹಾಕುವಂತ ಪ್ರಮಾದ ಮಾಡುವುದಿಲ್ಲ ಎಂಬ ಸಮಾಧಾನ ನನಗೂ ಹಾಗೂ ಆ ಬುದ್ಧಿಜೀವಿಗೂ ಸಹ. ಮುಂದಿನ ವರ್ಷ ಮಕ್ಕಳು ‘ಲೇಯ್…ಆ ಮನೆಗೆ ಹೋಗೋದು ಬೇಡ. ನೆನಪಿದ್ಯಾ ಹೋದ ಸಲಏನೇನೋ ಮಾತಾಡಿ ನಮ್ಮನ್ನು ಓಡಿಸಿದ್ರು. ಅರಳು ಮರಳು ಆಂಟಿ ಅವ್ರು’ ಅಂತಾ ಅಂದ್ಕೊಂಡು ಮುಂದೆ ಹೋಗ್ತಾರೆ.

 

ಎಲ್ಲೋ ಒಮ್ಮೆ ಓದಿದ ಜೋಕು….ಎಲ್ಲರ ಮನೆಯ ಮುಂದೆ ‘ನಾಯಿ ಇದೆ ಎಚ್ಚರಿಕೆ’ ಎಂಬ ಬೋರ್ಡಿದ್ದರೆ, ಒಬ್ಬರ ಮನೆಯ  ಮುಂದಿನ ಬೋರ್ಡು ಹೀಗಿತ್ತು ‘ನಾಯಿ ಏನೋ ಪರ್ವಾಗಿಲ್ಲ….ಅದರ ಯಜಮಾನನ ಬಗ್ಗೆ ಎಚ್ಚರವಿರಲಿ’. ಈ ಲೇಖನಕ್ಕೆ ಕಾರಣವಾದ ಫೇಸ್ಬುಕ್ಕಿನ ಪೋಸ್ಟು ಹಾಕಿದವರು ತಮ್ಮ ಮನೆಯ ಮುಂದೆಬೋರ್ಡು ಹಾಕಿರಲಿಲ್ಲವೋ ಅಥವಾ ಚಂದಾ ಎತ್ತಲು ಹೋದ ಮುಗ್ಧ ಮಕ್ಕಳು ಬೇರ್ಡು ಓದಲಿಲ್ವೋ ಗೊತ್ತಿಲ್ಲ. ಒಟ್ಟಿನಲ್ಲಿ ಆ ಮನೆಯ ಯಜಮಾನರಿಗೆ ತಮ್ಮ ಬುದ್ಧಿಮತ್ತೆಯ ಬಗ್ಗೆ ಕೊಚ್ಚಿಕೊಳ್ಳಲು ಒಂದಷ್ಟು ಅವಕಾಶ ಸಿಕ್ಕಿತು. ಅದೂ ಕೂಡ ಹತ್ತರಿಂದ ಹದಿನೈದು ವರ್ಷದ ಚಿಕ್ಕ ಮಕ್ಕಳ ಮುಂದೆ.

 

ಇನ್ನೊಂದು ಅರ್ಥವಾಗದ ವಿಷಯವೆಂದರೆ, ಈ ಬುದ್ಧಿಜೀವಿಗೆ ಕಂಡಕಂಡಲ್ಲೆಲ್ಲಾ ‘ಹುಟ್ಟಿದ್ದು ಯಾರಿಗೆ?’ ಎಂದು ಸ್ಪಷ್ಟೀಕರಣ ಕೇಳುವ ಅಭ್ಯಾಸ. ಕೆಲ ಸಮಯದ ಹಿಂದೆ ಯೂಟ್ಯೂಬಿನಲ್ಲಿ ಇವರ ಭಾಷಣದ ವೀಡಿಯೋ ತುಣುಕೊಂದನ್ನು ನೋಡಿದೆ ಅದರಲ್ಲಿ ಹಿಂದು ಧರ್ಮದ ಅಪ್ಪ ಅಮ್ಮ ಯಾರು? ಅದು ಯಾರಿಗೆ ಹುಟ್ಟಿದ್ದು? ಅಂತಾತಲೆಕೆಡಿಸಿಕೊಂಡಿದ್ದರು. ಮೊನ್ನೆ ಗಣೇಶ ಯಾರಿಗೆ ಹುಟ್ಟಿದ್ದು? ಅಂತಾ ಹುಡುಗರ ತಲೆತಿನ್ನುತ್ತಿದ್ದರಂತೆ. ಪಾಪ ಚಿಕ್ಕವಯಸ್ಸಿನಲ್ಲಿ ಮನೆಯಲ್ಲಿ ಸಂಬಂಧಿಕರ್ಯಾರಾದರೂ ಪೌರಾಣಿಕ ಕಥೆಗಳನ್ನು ಹೇಳಿದ್ದರೆ ಆಕೆಯ ಹೆಸರೂ ಗಣೇಶನ ಅಮ್ಮನ ಹೆಸರೂ ಒಂದೇ ಎಂದು ತಿಳಿಯುತ್ತಿತ್ತು. ಆದರೆ ಮಾನವ ಸಂಬಂಧಗಳು ಮತ್ತದರಮಹತ್ವ ತಿಳಿಯದ ಜನರಿಂದ ಇಷ್ಟೆಲ್ಲಾ ಬುದ್ಧಿವಂತಿಕೆಯನ್ನು ನಿರೀಕ್ಷಿಸುವುದು ಬಹುಷಃ ನನ್ನ ಬುದ್ಧಿವಂತಿಕೆಯ ಅಧಃಪತನವನ್ನು ತೋರಿಸುತ್ತದೆ.

 

ಈ ಅಕ್ಕಯ್ಯ ಹೇಳ್ತಾರೆ:

“ಅವರೆಲ್ಲರ ಹೆಸರುಗಳನ್ನು ಮತ್ತು ಮನೆ ದೇವರುಗಳ ಬಗ್ಗೆ ಕೇಳಿದೆ. ಅದರಿಂದ ಗೊತ್ತಾಗಿದ್ದೇನೆಂದರೆ ಅವರಲ್ಲಿ ಒಬ್ಬ ಲಿಂಗಾಯತ, ಇನ್ನಿಬ್ಬರು ಒಕ್ಕಲಿಗರು ಮತ್ತೊಬ್ಬ ಹಿಂದುಳಿದ/ದಲಿತ ವರ್ಗದವನು.”

 

ನಿಜವಾಗಿಯೂ ಇವರು ವೈಚಾರಿಕರೇ ಆಗಿದ್ದರೆ, ಇವರಾಡಿದ ಮಾತಿನಲ್ಲೇ ಇವರ ‘ನಿಮ್ಮ ಗಣೇಶ ಹಬ್ಬಕ್ಕೆ ನಾನ್ಯಾಕೆ ಚಂದಾ ಕೊಡಬೇಕು!?’ ಎನ್ನುವ ಪ್ರಶ್ನೆಗೆ ಉತ್ತರವಿತ್ತು. ಆ ಮಕ್ಕಳು ತಾವು ಯಾವ ಜಾತಿ, ವರ್ಗ ಎಂದೆನ್ನುವುದನ್ನೂ ಗಮನಿಸದೆ ಹಬ್ಬವೊಂದರಲ್ಲಿ, ಅದರ ಸಂಭ್ರಮದಲ್ಲಿ ತೊಡಗಿಕೊಂಡಿದ್ದರು. ಇದೇ ಅಲ್ಲವೇ ಈ ಹಬ್ಬಗಳ ಮಹತ್ವ ಹಾಗೂ ಸುಂದರತೆ? ಯಾವುದೇ ಮಿತಿಗಳಿಲ್ಲದೆ, ಮುಗ್ದತೆಯಿಂದ ಒಂದಾಗಿ, ಇಡೀ ಸಮಾಜವೇ ಹತ್ತಿರವಾಗುವ ಕಲ್ಪನೆಗಳಲ್ಲವೇ ಈ ನಮ್ಮ ಊರ ಹಬ್ಬಗಳು? ನಮ್ಮೂರ ಹತ್ತಿರದ ನರಸಿಂಹರಾಜಪುರದಲ್ಲಿ ಉರುಸ್ ನಡೆಯುವಾಗ ‘ಅಲ್ಲಾ ಎಲ್ಲಿದ್ದಾನೆ? ಕಾಬಾ ಎಲ್ಲಿದೆ?’ ಅಂತಾ ಕೇಳಿ ನಾವು ಸಕ್ಕರೆ ದಾನ ಮಾಡಿರಲಿಲ್ಲ. ಕೊಪ್ಪದಲ್ಲಿ ವರ್ಷಕ್ಕೊಮ್ಮೆ ಕ್ರಿಸ್ತಭಾಂಧವರು ಮೇಣದಬತ್ತಿ ಹಿಡಿದುಕೊಂಡು ರಾತ್ರಿ ಎಂಟಕ್ಕೆ ಮೆರವಣಿಗೆ ಬಂದಾಗ, ಮಾತಿಲ್ಲದೇ ನಾವೆಲ್ಲ ರಸ್ತೆ ಬದಿ ಸೇರಿ ಅವರ ಆಚರಣೆಯಲ್ಲಿ ಒಂದಾಗುತ್ತಿದ್ದೆವು. ಕಾನ್ವೆಂಟಿನಲ್ಲಿ ಬಾಯಿಪಾಠವಾದ ಅವರ ಪ್ರಾರ್ಥನೆಗಳನ್ನು ಹಾಡುತ್ತಿದ್ದೆವು. ನಮಗೆ ಆ ಮೆರವಣಿಗೆಗೂ, ವೀರಭದ್ರನ ಉತ್ಸವಕ್ಕೂ ಏನೂ ವ್ಯತ್ಯಾಸವಿರಲಿಲ್ಲ. ಎಲ್ಲದಕ್ಕೂ ಖುಶಿಯಿಂದ ರಸ್ತೆಗಿಳಿಯುತ್ತಿದ್ದೆವು. ಈ ಮಕ್ಕಳೂ ಸಹಾ ಹಾಗೆಯೇ ಇವರ ಮನೆಗೆ ಬಂದಿದ್ದಾರೆ. ಅಂತಾ ಮಕ್ಕಳನ್ನು ಮನೆಯೊಳಗೆ ಕರೆದು, ಹತ್ತಿರಕೂರಿಸಿಕೊಂಡು “ಹೀಗೆ, ರಸ್ತೆ ರಸ್ತೆ ಸುತ್ತಾಡುತ್ತಾ ಹಣ ಕಲೆಕ್ಟ್ ಮಾಡಿದರೆ ನಿನಗೆ ವಿದ್ಯೆ ಬರಲ್ಲ ಹುಡುಗ. ನೆಟ್ಟನೆ ಪುಸ್ತಕ ಓದು. ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ನೋಡು. ಆಗ ನಿನಗೆ ವಿದ್ಯೆ ಬರುತ್ತೆ” ಎಂದು ಹೇಳಿ ಅವರ ಮನಸ್ಸಿನಲ್ಲಿ ಹುಸಿ ವೈಚಾರಿಕತೆಯ ಸುಳ್ಳಿನ ವಿಷಬೀಜವನ್ನು ಬಿತ್ತಿ ಕಳಿಸಿದ್ದಾಳಲ್ಲ ಮಹಾರಾಯ್ತಿ!!! ಹೆಸರು ಕೇಳಿ ಜಾತಿ ನಿರ್ಧರಿಸಿಬಿಟ್ಟಿದ್ದಾಳಲ್ಲ ಈ ತಾಯವ್ವ!!!!…..ಇವರೇನಾ ಸಮಾಜದಲ್ಲಿ ಸಮಾನತೆಯ ಭಾಷಣ ಬಿಗಿಯುತ್ತಿರುವ ಮಹಾಜನಗಳು!? ಉದ್ಧಾರ ಇವರ ಹಿಂಬಾಲಕರು ಇವರ ಮಕಕ್ಕಿಷ್ಟು…..

 

ಮನುಷ್ಯ ಜಗತ್ತನ್ನು ಸುತ್ತಬೇಕು. ಮಾನವನ ಹಾಗೂ ನಾಗರೀಕತೆಗಳ ವಿಕಾಸವನ್ನು ತಿಳಿಯುವ ಪ್ರಯತ್ನವನ್ನು ಮಾಡಬೇಕು. ಧರ್ಮಗಳನ್ನು ಅರಿಯಬೇಕು. ಧರ್ಮದ ಹಿಂದಿರುವ ಸಾರವನ್ನು ಹೀರಬೇಕು. ಅದರ ಕಥೆಗಳಿಂದ ರಂಜಿತರಾಗಬೇಕು. ಆಗ ಮಾತ್ರ ಜೀವನವನ್ನು, ನಾವು ಬದುಕುತ್ತಿರುವ ರೀತಿಯನ್ನು, ಅದರ ಹಿಂದಿರುವಕಾರಣಗಳನ್ನು ಮತ್ತಷ್ಟು ಹತ್ತಿರದಿಂದ ಅರ್ಥೈಸಿಕೊಳ್ಳಲು ಸಾಧ್ಯ. ವೈಜ್ಞಾನಿಕತೆಯೆಂದರೆ ಬರೀ ಸಲ್ಫ್ಯೂರಿಕ್ ಆಸಿಡ್ಡಿನ ಫಾರ್ಮುಲಾ ತಿಳಿಯುವುದಲ್ಲ. ವೈಚಾರಿಕತೆಯೆಂದರೆ ಬರೀ ಧರ್ಮಗ್ರಂಥಗಳನ್ನು ಕಾಲಕಸಮಾಡಿ, ಹಳೆಯದೆಲ್ಲಾ ಜೊಳ್ಳು ಎಂದು ಗಾಳಿಗೆ ತೂರುವುದಲ್ಲಾ. ಗಣೇಶನೇ ಇಲ್ಲದ ಮೇಲೆ ಗಣೇಶನ ಹಬ್ಬವೇಕೆ ಎಂದುಮೂಗುಮುರಿಯುವುದಲ್ಲ. ಫಿಸಿಕ್ಸ್, ಕೆಮಿಸ್ಟ್ರಿಗಿಂತಾ ಉತ್ತಮ ವಿಜ್ಞಾನಗಳು ಮಾನವಶಾಸ್ತ್ರ (anthropology), ಸಮಾಜಶಾಸ್ತ್ರ (sociology), ಮನಶ್ಯಾಸ್ತ್ರ (psychology) ಮತ್ತು ಅರ್ಥಶಾಸ್ತ್ರಗಳು (economics). ಅವನ್ನು ಓದಿ, ಮನುಷ್ಯ ಯಾಕೆ ಹೀಗಿದ್ದಾನೆ!? ಎಂದು ತಮ್ಮನ್ನೇ ಪ್ರಶ್ನಿಸಿಕೊಂಡು ತಮ್ಮ ಜ್ಞಾನದಪರಿಧಿಯನ್ನು ಹೆಚ್ಚಿಸಿಕೊಳ್ಳಬೇಕು. “ಮನುಷ್ಯ ಇದ್ದರೆ ತಾನೇ ಜಗತ್ತು ಮತ್ತದರ ಅಸ್ತಿತ್ವದ ಬಗ್ಗೆ ಚರ್ಚೆನಡೆಯಲು ಸಾಧ್ಯ? ಆದ್ದರಿಂದ ಜಗತ್ತಿನ ಅಸ್ತಿತ್ವದ ಬಗ್ಗೆ ತಿಳಿಯುವ ಮುನ್ನ ಮನುಷ್ಯನ ಅಸ್ತಿತ್ವ ತಿಳಿಯುವುದು ಮುಖ್ಯ” ಎಂಬ ಸತ್ಯವನ್ನು ಅರಗಿಸಿಕೊಳ್ಳಬೇಕು. ಜಗತ್ತಿನ ಎಲ್ಲಾ ಮನುಷ್ಯರ ಹಾಗೂ ನಾಗರೀಕತೆಗಳು ನಡೆದುಬಂದ ಹಾದಿ ಹಾಗೂ ಅವುಗಳ ನಡವಳಿಕೆಗಳನ್ನು ಈ ನಾಲ್ಕು ವಿಜ್ಞಾನಗಳು ಹೇಳಿದಷ್ಟು ಸಮರ್ಪಕವಾಗಿ ಇನ್ಯಾವುದೂ ಹೇಳುವುದಿಲ್ಲ. ಸಾಧ್ಯವಾದರೆ ಓದಬೇಕು. ವೈಜ್ಞಾನಿಕತೆಯ ವೈಚಾರಿಕತೆಯ ಡಂಗುರ ಬಾರಿಸುವ ಮುನ್ನ ಅದೇನೆಂದು ಅರ್ಥೈಸಿಕೊಳ್ಳಬೇಕು. ಇಲ್ಲವಾದಲ್ಲಿ ಕೈಯಲ್ಲಿ ಹಿಡಿದಿರುವ ಕೆಂಪು ಬಾವುಟವನ್ನುಉಂಡೆಸುತ್ತಿ ಬಾಯಿಗಿಟ್ಟುಕೊಳ್ಳಬೇಕು.

Advertisements

One thought on “ವೈಜ್ಞಾನಿಕತೆಯೆಂದರೆ ಬರೀ ಸಲ್ಫ್ಯೂರಿಕ್ ಆಸಿಡ್ಡಿನ ಫಾರ್ಮುಲಾ ತಿಳಿಯುವುದಲ್ಲ….

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s