*ಯಾಸೀನ್ ಭಟ್ಕಳ್ ಅವರು ಯಾರೆಂದೇ ನನಗೆ ಗೊತ್ತಿಲ್ಲ, ಆದರೆ ವಿ.ಆರ್.ಭಟ್ ಮಾತ್ರ ಸಮಾಜಕ್ಕೆ ಮಹಾ ಕಂಟಕ*

ಭಯೋತ್ಪಾದಕರನ್ನೇ ಬೆಂಬಲಿಸುವ ಜನರಿರುವಾಗ, ಭಟ್ಟರನ್ನು ಬೆಂಬಲಿಸಲು ಜನರೇಕೆ ಹೆದರುತ್ತಿದ್ದಾರೋ ನನಗರ್ಥವಾಗುತ್ತಿಲ್ಲ.

ಭಟ್ಟರಾಡಿದ ಮಾತು ತಪ್ಪು ಹೌದು. ಅದಕ್ಕೆ, ಇಡೀ ರಾಜ್ಯವನ್ನೇ ಒತ್ತೆಯಿಟ್ಟು ಒಂದಿಡೀ ಸಮುದಾಯವನ್ನೇ ಭಯಬೀಳಿಸುವ ಅಗತ್ಯವಿಲ್ಲ. ಗೂಂಡಾ ಕಾಯ್ದೆ ಇನ್ನೊಂದು ಕಾಯ್ದೆ ಮತ್ತೊಂದು ಕಲಂ ಹುಡುಕಿ ಹಾಕುವ ಅಗತ್ಯವೇನಿರಲಿಲ್ಲ. ಜನ ರಸ್ತೆಬದಿಯಲ್ಲಿ ಅತ್ಯಾಚಾರಕ್ಕೊಳಗಾಗುತ್ತಿದ್ದರೂ ತಲೆಕೆಡಿಸದ ಮಂತ್ರಿಗಳು, ಪ್ರಭಾ ಅವರಿಗೆ ಬಂದ ಕಮಂಟೊಂದಕ್ಕೆ ಓಡೋಡಿ ಬಂದು ಸಾಂತ್ವನಿಸುವ ನಾಟಕ ಮಾಡಿದ್ದು, ಸ್ವತಃ ಪ್ರಭಾ ಅವರ ಕೆಲ ಬೆಂಬಲಿಗರಿಗೂ ಇರುಸುಮುರುಸಾಗಿದೆ. ಅಲ್ಯಾವುದೋ ಮುಗ್ದ ಮಗು 160ಅಡಿ ಅಳದ ಕೊಳವೆ ಬಾವಿಯಲ್ಲಿ ಬಿದ್ದದ್ದರೆ ಕಮಕ್-ಕಿಮಕ್ ಎನ್ನದ ಸರ್ಕಾರ ಮತ್ತದರ ಅಂಗಗಳು, ಈ ವಿಷಯದಲ್ಲಿ ಮಾತ್ರ 160 ಅಡಿಗಿಂತಲೂ ಕೆಳಮಟ್ಟಕ್ಕೆ ಇಳಿದದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

ಪ್ರಭಾ ಅವರ ಬೆಂಬಲಿಗರಿಗೂ, ಮತ್ತವರನ್ನು ಬೆಂಬಲಿಸದಿರುವವರಿಗೂ (ಪ್ರಭಾ ಅವರನ್ನು ಬೆಂಬಲಿಸದಿರುವವರು, ಭಟ್ಟರ ಬೆಂಬಲಿಗರಾಗಬೇಕೆಂದಿಲ್ಲ. ಪ್ರಜ್ಞಾವಂತ ಓದುಗನಿಗೆ ಈ ಸಾಲು ಸಾಕು ಎಂದು ನನ್ನ ಅಭಿಪ್ರಾಯ) ಇರುವ ವ್ಯತ್ಯಾಸವೆಂದರೆ, ಪ್ರಭಾ ಅವರನ್ನು ಬೆಂಬಲಿಸದಿರುವವರು ಒಂದು ತಾತ್ವಿಕ ತೊಳಲಾಟದಲ್ಲಿದ್ದಾರೆ. ಭಟ್ ಅವರ ‘ಆ ಒಂದೇ’ ಸಾಲು, ಅವರನ್ನು ಕಟ್ಟಿ ಹಾಕಿದೆ. ಇಂದು ಭಟ್ ಅವರನ್ನು ಗೂಂಡಾ ಎಂಬಂತೆ ನಡೆಸಿಕೊಳ್ಳುತ್ತಿರುವ ರೀತಿ ‘ಈ ಪ್ರಕರಣವನ್ನು ಅಗತ್ಯಕ್ಕಿಂತ ದೊಡ್ಡದಾಗಿ ಮಾಡಲಾಗಿದೆ’ ಎಂಬ ಅರಿವಿರುವ ಎಲ್ಲಾ ಪ್ರಜ್ಞಾವಂತರಿಗೂ ನೋವುಂಟು ಮಾಡಿದೆ. ಆದರೆ ಅವರೊಂದು ರೀತಿಯ ನೈತಿಕತೆಯ ತೊಳಲಾಟದಲ್ಲಿದ್ದಾರೆ. ಮಾಧ್ಯಮಗಳು ಹಾಗೂ ಫೇಸ್ಬುಕ್ಕಿನ ಕೆಲ ಮಹಾಜ್ಞಾನಿಗಳು, ಯಾರಾದರೂ ಭಟ್ಟರ ‘ಆ ಕಮೆಂಟನ್ನು’ ವಿರೋಧಿಸಿ ಬೇರೆ ನೆಲೆಗಟ್ಟಿನಲ್ಲಿ ಬೆಂಬಲಿಸಿದರೂ ಸಹ ಅಂತವರನ್ನೆಲ್ಲಾ ಭಯೋತ್ಪಾದಕರು ಎಂದು ಮಟ್ಟಹಾಕಲು ಹಾತೊರೆಯುತ್ತಿದ್ದಾರೆ. ಹಾಗಾಗಿ ಭಟ್ಟರನ್ನು ಮಾನವೀಯ ನೆಲೆಗಟ್ಟಿನಲ್ಲಿ ಸಹ ಬೆಂಬಲಿಸಲು ಯಾರೂ ಮುಂದೆ ಬರುತ್ತಿಲ್ಲ. ಅವರ ಕೇಸು ಕೈಗೆತ್ತಿಕೊಳ್ಳಲೂ ಸಹ ಒಬ್ಬ ವಕೀಲ ಮುಂದೆ ಬರಲಿಲ್ಲ.

ಇಷ್ಟಕ್ಕೂ ಆತನೇನು ಉಮೇಶ್ ರೆಡ್ಡಿಯಲ್ಲ, ಅಥವಾ ಭಯೋತ್ಪಾದಕನೂ ಅಲ್ಲ. ಅತ್ಯಾಚಾರ ಮಾಡಿರುವ ಮುಸ್ತಫಾಸಂತವರೇ ಕಾನೂನಿನಿಂದ ತಪ್ಪಿಸಿಕೊಂಡು ಆರಾಮಾಗಿ ತಿರುಗಾಡಿಕೊಂಡಿರಬೇಕಾದರೆ, ಭಯೋತ್ಪಾದಕರಿಗೇ ನೈತಿಕಬೆಂಬಲ ಘೋಷಿಸಿರುವ ಜನರು ನಮ್ಮ ನಡುವೆ ಇರಬೇಕಾದರೆ, ವಿ.ಆರ್.ಭಟ್ಟರಿಗೆ ಬೆಂಬಲ ನೀಡದಷ್ಟು ಕೆಳಮಟ್ಟಕ್ಕೆ ಕುಸಿಯಿತೇ ನಮ್ಮ ಸಮಾಜ? ನಮ್ಮ ಅಣ್ಣತಮ್ಮಂದಿರಂತವರನ್ನು ಕರುಣೆಯಿಲ್ಲದೆ ಕೊಂದ ಕಸಬ್, ತುಂಡಾ ಮತ್ತು ಯಾಸೀನನಿಗೇ ವಕೀಲರನ್ನು ಕೊಟ್ಟು ವರ್ಷಾನುಗಟ್ಟಲೇ ರಾಜಾತಿಥ್ಯ ಕೊಟ್ಟ ಸೆಕ್ಯುಲರ್ ನೆಲ ನಮ್ಮದು. ನಮ್ಮಲ್ಲೇ ಒಬ್ಬನನ್ನು ಇವತ್ತು ಭಯೋತ್ಪಾದಕನಂತೆ ನೋಡಿಕೊಳ್ಳುತ್ತಿದ್ದೇವೆ. ವೈಯುಕ್ತಿಕ ಅಜೆಂಡಾಗಳನ್ನೊಮ್ಮೆ ಬದಿಗಿಟ್ಟು ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವ ಸಮಯ ಬಂದಿದೆ.

ಇನ್ನೊಂದು ಕಡೆ, ಪ್ರಭಾ ಆವರ ಬೆಂಬಲಿಗರಲ್ಲಿ ಬಹಳಷ್ಟು ಮಂದಿ ತಮ್ಮ ತಮ್ಮ ವೈಯುಕ್ತಿಕ ತೆವಲುಗಳನ್ನು ಈ ಘಟನೆಯ ಮೂಲಕ ತೀರಿಸಿಕೊಳ್ಳುತ್ತಿದ್ದಾರೆಯೇ ವಿನಃ, ಪ್ರಭಾ ಅವರಿಗೆ ನಿಜವಾಗಿಯೂ ಬೆಂಬಲಿಸುವವರು ಎಲ್ಲೋ ನೂರಕ್ಕೆ ಇಬ್ಬರು, ಅಷ್ಟೇ. ಇಲ್ಲವಾದಲ್ಲಿ ತಂದೆಯ ಹೆಸರಿನ ಪತ್ರಿಕೆಯ ನಡೆಸುತ್ತಿರುವ ಎಂಬ ಮಹಾನ್ ವಿಚಾರವಾದಿಗೆ ವಿ.ಆರ್.ಭಟ್ ಎಂದೋ ಕಳುಹಿಸಿದ ಕಮೆಂಟಿಗೆ/ಮೆಸೇಜಿಗೆ ಇವತ್ತು ಕೇಸು ಹಾಕುವ ಅಗತ್ಯವೇನಿತ್ತು? ಅಥವಾ ಫೇಸ್ಬುಕ್ ಮೆಸೇಜ್ ಕೂಡಾ ಇಂತಿಂತಾ ಕಾನೂನಿನ ಪರಿಧಿಯಲ್ಲಿ ಬರುತ್ತದೆಂಬ ನಿರ್ವಾಣಜ್ಞಾನ ಮೊನ್ನೆಯಷ್ಟೇ ಭೋಧಿವೃಕ್ಷದ ಕೆಳಗಿನ ತಪಸ್ಸಿನಲ್ಲಿ ಹೊಳೆಯಿತೇನು? ಭಟ್ ಎಂದೋ ಕುವೆಂಪು ಬಗ್ಗೆ ಆಡಿದ ಮಾತಿಗೆ, ಇವತ್ತು ಪ್ರತಿಕ್ರಿಯೆ ನೀಡುವ ಅಗತ್ಯವೇನಿತ್ತು!!? ಭಟ್ಟರೆದುರು ವೈಚಾರಿಕವಾಗಿ ಎಂದೋ ಸೋತ ಯುದ್ಧಗಳಿಗೆಲ್ಲಾ ಈಗ ಮತ್ತೆ ಜೀವ ಬಂದಿದೆ. ಹಾಗೆಯೇ ಆ ಯುದ್ಧಗಳಲ್ಲಿ ಸೋತ ಸೈನಿಕರಿಗೂ ಸಹ. ಬಿದ್ದ ಆಳಿಗೆ ನನ್ನದೊಂದು ಕಲ್ಲು ಎಂಬಂತೆ ಎಲ್ಲರದ್ದೂ ಹಾರಾಟ. ತೀವ್ರ ರೂಪದ `ಪರ’ ಮತ್ತು `ವಿರೋಧ’ ಎರಡರ ಹಿಂದೆಯೂ `ಲಾಭ’ದ ಉದ್ದೇಶವಿರುತ್ತದೆ ಎಂಬ ಲಂಕೇಶರ ಮಾತು ಸದಾ ನಮ್ಮೆಲ್ಲರ ಕಿವಿಯಲ್ಲಿ ಗುಯ್ಗುಡುತ್ತಿರಬೇಕು. ಎಲ್ಲಾದರೂ ಈ ‘ವೈಚಾರಿಕತೆ ಮತ್ತು ಅದ್ಯಾವುದೋ ಶಾಹಿ’ಯ ವಿರುದ್ಧದ ಯುದ್ಧದಲ್ಲಿ ಒಂದೇ ಒಂದು ಅಂಶ ಪ್ರಭಾ ಅವರ ವಿರುದ್ಧವಾಗಿ ಕಂಡುಬಂದರೆ, ಪ್ರಭಾ ಅವರ ಜನಪ್ರಿಯತೆಯ ಬೆಳಕಿನಲ್ಲಿ ತಂತಮ್ಮ ಫೋಟೋ ಡೆವಲಪ್ ಮಾಡಿಕೊಳ್ತಾ ಇರೋ ಮಿಣುಕುಹುಳಗಳೆಲ್ಲಾ ಹಾರಿ ಹೋಗುತ್ತವೆಂಬ ಅಂಶ ಪ್ರಭಾ ಅವರಿಗೂ ಗೊತ್ತಿದೆಯೆಂಬ ಆಶಯದೊಂದಿಗೆ, ಪ್ರಭಾ ಅವರ ಹೋರಾಟಕ್ಕೆ ಜಯ ಹಾರೈಸುತ್ತೇನೆ.

ಈ ವಿಷಯವನ್ನು ಮುಖ್ಯಮಂತ್ರಿಯವರೂ ಗಮನಿಸುವಂತೆ ಮಾಡಿದ ಪ್ರಭಾ ಅವರ ಧೈರ್ಯಕ್ಕೆ ಹಾಗೂ ಚುರುಕುತನಕ್ಕೆ ನನ್ನದೊಂದು ಸಲಾಂ. ಆದರೆ ನಿಜವಾಗಿಯೂ ಅವರು ಧಾರ್ಮಿಕ ಅಸಮಾನತೆಯ ವಿರುದ್ಧ ಹೋರಾಡುತ್ತಿದ್ದಾರೆಯೆಂದಾದಲ್ಲಿ, ಭಟ್ಟರು ಮಾಡಿದ ತಪ್ಪಿಗೆ ಗೂಂಡಾ ಕಾಯ್ದೆ ಅನ್ವಯವಾಗುತ್ತದೆಯೆಂದಾದಲ್ಲ್ಲಿ, ಅದೇ ಕಾಯ್ದೆಯ ಅಡಿಯಲ್ಲಿ, ಧಾರ್ಮಿಕ ಅಸಹಿಷ್ಣುತೆಯನ್ನು ‘ಬಸಿ’ಯುತ್ತಿರುವ ಪತ್ರಕರ್ತರನ್ನೂ, ಅನಗತ್ಯವಾಗಿ ಒಂದು ಸಮುದಾಯದ ಮೇಲೆ ಹಾರಿಹಾಯುವ ಪರಿಪಾಠ ಬೆಳೆಸಿಕೊಂಡಿರುವ ‘ಬಿಚ್ಚುಮನಸ್ಸಿನ ಗೌರಮ್ಮ’ನಂತಹವರನ್ನೂ, ಸುಖಾಸುಮ್ಮನೆ ಕೆಲವರ ಬಗ್ಗೆ ವೈಯುಕ್ತಿಕ ವಿಷಕಾರುವ ‘ಹೆಮ್ಮಾರಿ’ಗಳನ್ನೂ ಇದೇ ಪ್ರಭಾ ಅವರು ಮಟ್ಟಹಾಕುತ್ತಾರೆ ಎಂದು ಆಶಿಸುತ್ತೇನೆ. ಆಗ ಮಾತ್ರ ಅವರ ವೈಚಾರಿಕತೆ ಹಾಗೂ ಸಾಮಾಜಿಕ ಐಕ್ಯತೆಯ ಉದ್ದೇಶಕ್ಕೊಂದು ಅತ್ಯುತ್ತಮ ತಳಪಾಯ ದೊರೆತಂತೆ. ಅಂತಹ ಧನಾತ್ಮಕ ಬೆಳವಣಿಗೆಯ ಅಗತ್ಯ ನಮ್ಮ ಸಮಾಜಕ್ಕೆ ಖಂಡಿತಾ ಇದೆ ಹಾಗೂ ಅದಕ್ಕೆ ನನ್ನಂತಹ ಸಾವಿರಾರು ನಾಗರೀಕರ ಬೆಂಬಲವೂ ಇದೆ. ಇಂದಿನ ಸಾಮಾಜಿಕ ಪಿಡುಗುಗಳನ್ನು ಮಟ್ಟಹಾಕಲು, ಯಾವ್ಯಾವುದೇ ಶಾಹಿಗಳನ್ನು ಹದ್ದುಬಸ್ತಿನಲ್ಲಿಡಲು, ಸಮಾಜದೊಳಗೆ ಧರ್ಮ, ಜಾತಿ, ರಾಜಕೀಯ ನಿಲುವುಗಳ ಹೆಸರಿನಲ್ಲಿ ಬಿರುಕನ್ನುಂಟುಮಾಡುತ್ತಿರುವ ಶಕ್ತಿಗಳನ್ನು ಹೆಡೆಮುರಿಕಟ್ಟಲು ಪ್ರಭಾ ಅವರಿಗೆ ನಮ್ಮೆಲ್ಲರ ಸಹಕಾರದ ಅಗತ್ಯವಿದೆ. ಅಂತಹ ಬೆಂಬಲದೊಂದಿಗೆ ಸಾಮಾಜಿಕ ಹಾಗೂ ಧಾರ್ಮಿಕ ಏಕತೆಗೆ ನಮ್ಮೆಲ್ಲರ ಆಶಾಕಿರಣವಾಗಿ ಪ್ರಭಾ ಅವರು ಹೊರಹೊಮ್ಮುತ್ತಾರೆ ಎಂದು ಬಲವಾಗಿ ನಂಬಿದ್ದೇನೆ. ಸಮಾಜದಲ್ಲಿ ಶಾಂತಿ ತರಬಯಸುವ ಅವರ ಹೋರಾಟದಲ್ಲಿ ಅವರೊಂದಿಗೆ ಮೊದಲ ಸಾಲಿನಲ್ಲಿ ನಿಂತು ಶತ್ರುಗಳನ್ನು ಎದುರಿಸುತ್ತೇನೆ. ನನ್ನರೀತಿಯೇ ಯೋಚಿಸುವವರು ನೀವಾದರೆ, ಇಂತಹ ವ್ಯಾಪಕ ಹೋರಾಟಕ್ಕೆ ನಿಮ್ಮ ಬೆಂಬಲವೂ ಇದೆ ಎಂದು ಭಾವಿಸುತ್ತೇನೆ.

Advertisements

One thought on “*ಯಾಸೀನ್ ಭಟ್ಕಳ್ ಅವರು ಯಾರೆಂದೇ ನನಗೆ ಗೊತ್ತಿಲ್ಲ, ಆದರೆ ವಿ.ಆರ್.ಭಟ್ ಮಾತ್ರ ಸಮಾಜಕ್ಕೆ ಮಹಾ ಕಂಟಕ*

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s