ಐನೂರಾತೊಂಬತ್ತೇಳು ಅಡಿ ಎತ್ತರದ ಕನಸು ಮತ್ತದರ ಅಗತ್ಯತೆ

ಮಾನವರು ಅನಾದಿಕಾಲದಿಂದಲೂ ದೇವರು, ಪ್ರಾಣಿಗಳು ಹಾಗೂ ಇನ್ನಿತರ ನಿರ್ಜೀವಿ ವಸ್ತುಗಳ ವಿಗ್ರಹ ಹಾಗೂ ಪ್ರತಿಮೆಗಳನ್ನು ಕಟ್ಟುತ್ತಲೇ ಬಂದಿದ್ದಾರೆ. 1939ರಲ್ಲಿ ಜರ್ಮನಿಯ ಗುಹೆಯೊಂದರಲ್ಲಿ ಪತ್ತೆಯಾದ ಜಗತ್ತಿನ ಅತ್ಯಂತ ಪುರಾತನವಾದ ‘ಸಿಂಹಮಾನವ (Lion Man)’ನ ವಿಗ್ರಹ ಸರಿಸುಮಾರು ನಲವತ್ತು ಸಾವಿರ ವರ್ಷಗಳಷ್ಟು ಹಳೆಯದು. ವಿಗ್ರಹ ಹಾಗೂ ಪ್ರತಿಮೆಗಳ ಬಗೆಗಿನ ನಮ್ಮ ಒಲವು ಎಷ್ಟು ಹಳೆಯದು ಎಂದು ಇದರಿಂದಲೇ ತಿಳಿದುಬರುತ್ತದೆ. ಅಂದಿನಿಂದಲೂ ನಾವು ಹಲವಾರು ಕಾರಣಗಳಿಗಾಗಿ ಪ್ರತಿಮೆಗಳನ್ನು ಕಟ್ಟುತ್ತಲೇ ಬಂದಿದ್ದೇವೆ.

ನಾಗರೀಕತೆ ಬೆಳೆದಂತೆ, ಮುಂದುವರೆದಂತೆ ಮಾನವರು ದೇವರಿಗೆ ಮಾತ್ರವಲ್ಲದೆ, ಕೆಲವೊಂದು ಐತಿಹಾಸಿಕ ಘಟನೆಗಳು (ಯುದ್ಧದ ಗೆಲುವು, ಸ್ವಾಂತತ್ರ್ಯ), ಗಣ್ಯವ್ಯಕ್ತಿಗಳು (ಚಿಂತಕರು, ಅತೀಂದ್ರೀಯ ಶಕ್ತಿಯುಳ್ಳವರು) ಹಾಗೂ ಸ್ಮರಣೀಯ ಪ್ರಾಣಿ (ಸ್ಫಿಂಕ್ಸ್, ಬ್ಯಾರಿ ದ ಸೈಂಟ್ ಬರ್ನಾರ್ಡ್)ಗಳ ನೆನಪು ದೀರ್ಘಕಾಲ ಉಳಿಯಲು, ಹಾಗೂ ಆ ನೆನಪುಗಳನ್ನು ಮುಂದಿನ ತಲೆಮಾರಿಗೆ ದಾಟಿಸಲು ಸಹ ಶಿಲ್ಪಕಲಾಕೃತಿಗಳು ಒಂದು ಒಳ್ಳೆಯ ಮಾರ್ಗ ಎಂಬುದನ್ನು ಅರಿತುಕೊಂಡರು. ಆ ಕಾರಣಕ್ಕಾಗಿಯೇ ಝೀಯಸ್ ನ ಮೂರ್ತಿ, ಲಿಬರ್ಟಿ ಪ್ರತಿಮೆ, ಸಾಂಚೀ ಸ್ತೂಪ, ಕಮಕೂರದ ಬುದ್ದ, ಕೋಪನ್ ಹೇಗನ್ನಿನ ಮತ್ಯಕನ್ಯೆ, ರೀಯೋದ ವಿಮೋಚಕ ಕ್ರಿಸ್ತ (ಇತ್ತೀಚಿನ ಉದಾಹರಣೆಯಲ್ಲಿ ಮಾಯಾವತಿ ಹಾಗೂ ಆಕೆಯ ಆನೆಗಳು ) ಮುಂತಾದುವು ಸೃಷ್ಟಿಸಲ್ಪಟ್ಟವು. ಮುಂದೆ ಲೋಹಯುಗದಲ್ಲಿ ಈ ಕಾರ್ಯಕ್ಕಾಗಿ ಕಲ್ಲಿನಬದಲು ಲೋಹವೂ ಉಪಯೋಗವಾಯಿತು. ನಾಗರೀಕತೆಯ ಮಟ್ಟ ಹಾಗೂ ಗಣ್ಯತೆಯ ಮಟ್ಟಕ್ಕನುಗುಣವಾಗಿ ಕಬ್ಬಿಣ, ಕಂಚು, ಉಕ್ಕು, ಹಾಗೂ ಚಿನ್ನ ಈ ಕೆಲಸಕ್ಕಾಗಿ ಬಳಕೆಯಾಗಲಾರಂಭಿಸಿದವು. ಪಿರಮಿಡ್ಡುಗಳಲ್ಲಿ ಫೆರ್ಹೋಗಳ ಪ್ರತಿಮೆಗಳು ಚಿನ್ನದಲ್ಲೂ, ಹಾಗೂ ಸೇವಕರು ಹಾಗೂ ಕಾವಲಿಗಾರರ ಪ್ರತಿಮೆಗಳು ಕಬ್ಬಿಣ/ಕಂಚಿನಲ್ಲಿ ಇರುವುದನ್ನು ನೀವು ಗಮನಿಸರಬಹುದು. ಹಲವಾರು ಬಾರಿ ನಾಗರೀಕತೆಯ ಚಿಂತನೆಗಳನ್ನೂ ಕೂಡ ಶಿಲ್ಪಗಳಲ್ಲಿ ಬೆಸೆಯಲು ಪ್ರಯತ್ನಗಳು ನಡೆದವು. ಉದಾಹರಣೆಗೆ, ಈಸ್ಟರ್ ದ್ವೀಪದಲ್ಲಿರುವ ನೂರಾರು ಮಾನವರೂಪಿ ನಿಗೂಡ ಶಿಲ್ಪಗಳು ಏನನ್ನೋ ಹೇಳಲು ಬಯಸುತ್ತಿವೆ ಎಂದು ನೋಡುಗರಿಗೆ ಅನಿಸಿದರೆ ಆಶ್ಚರ್ಯವೇನಿಲ್ಲ. ಒಟ್ಟಿನಲ್ಲಿ ಇತಿಹಾಸದುದ್ದಕ್ಕೂ ಒಂದು ನಗರದ, ದೇಶದ, ಹಾಗೂ ನಾಗರೀಕತೆಯ ಔನ್ನತ್ಯವನ್ನು ಪ್ರತಿಮೆ ಹಾಗೂ ಕಲಾಕೃತಿಗಳು ಸಾರಲು ಪ್ರಯತ್ನಿಸಿವೆ ಎಂದರೆ ತಪ್ಪೇನಿಲ್ಲ. ಹತ್ತಾರುಸಾವಿರ ವರ್ಷಗಳಿಂದ ಮಾನವರು, ನಾಗರೀಕತೆಗಳು, ದೇಶಗಳು ಹಾಗೂ ಪ್ರದೇಶಗಳು ತಮ್ಮ ಅಸ್ಮಿತೆಯನ್ನು ಕೆಲ ಪ್ರತಿಮೆಗಳ ಮೂಲಕ ಪ್ರಚುರಪಡಿಸಲು ಪ್ರಯತ್ನಿಸಿವೆ.

ಇನ್ನು ಭಾರತದ ವಿಷಯಕ್ಕೆ ಬಂದರೆ ನಮಗೆ ಕಾಣಸಿಗುವುದೇನೆಂದರೆ, ಭಾರತೀಯ ನಾಗರೀಕತೆಗಳು (ಹಾಗೂ ರಾಜರ ಸಾಮ್ರಾಜ್ಯಗಳು) ಸಾಂಕೇತಿಕ ಜೀವನಶೈಲಿಯಲ್ಲಿ ಗಾಡವಾದ ನಂಬಿಕೆಯನ್ನು ಹೊಂದಿರುವುದು ಹಾಗೂ ಇದಕ್ಕನುಗುಣವಾಗಿ ಭಾರತಖಂಡದ ಮೂಲಧರ್ಮವಾದ ಹಿಂದೂ ಧರ್ಮದಿಂದ ಹಿಡಿದು, ವಾಸ್ತುಶಿಲ್ಪ, ಕಲಾಪ್ರಕಾರಗಳವರೆಗೆ ಎಲ್ಲವೂ ಸಾಂಕೇತಿಕವಾದ ಜೀವನಮೌಲ್ಯವನ್ನು ಬಿಂಬಿಸುವುದು. ನಮ್ಮ ಪುರಾಣಕಥೆಗಳಲ್ಲಿ ಬರುವ ಕತೆಗಳು, ಅವುಗಳಲ್ಲಿನ ಪಾತ್ರಗಳು, ಪೂಜಿಸಲ್ಪಡುವ ದೇವರುಗಳು ಮತ್ತವುಗಳ ರೂಪಗಳು ಯಾವುದನ್ನೂ ನೀವು ಬರೀ ತೋರಿಕೆಯೆಂದು ಭಾವಿಸುವ ಹಾಗೆಯೇ ಇಲ್ಲ. ಅಲ್ಲಿ ಪ್ರತಿಯೊಂದಕ್ಕೂ ಅರ್ಥವಿದೆ, ನಾಗರೀಕತೆ ಏನನ್ನೋ ಹೇಳಲು ಹೊರಟಿರುವ ತುಡಿತ ಎದ್ದು ಕಾಣುತ್ತದೆ. ನಮ್ಮ ದೇವರುಗಳಾದ ಗಣಪ, ತ್ರಿಮೂರ್ತಿಗಳು, ನಂದಿ, ನಾಗ, ರಾಮಾಯಣದ ಹತ್ತುಮುಖದ ರಾವಣ, ಅವನನ್ನು ಸೋಲಿಸಲು ರಾಮನಿಗೆ ಸಹಾಯಮಾಡಿದ ಹನುಮಂತ, ರಾವಣನೊಂದಿಗೆ ಒಮ್ಮೆ ಹೋರಾಡಿದ ಜಟಾಯು, ಕುಂಭಕರ್ಣ, ಮಹಾಭಾರತದ ಗಾಂಧಾರಿ, ಸಂಜಯ, ವಿಧುರ, ಶಕುನಿ, ಬಕಾಸುರ, ಘಟೋತ್ಕಜ, ಹಿಡಿಂಬೆ, ಜರಾಸಂಧ, ಶಿಶುಪಾಲ….ಈ ಪಾತ್ರಗಳು ನಿಜಜೀವನದಲ್ಲಿ ಘಟಿಸುವುದು ಎಷ್ಟೇ ಅಸಾಧ್ಯವೆನ್ನಿಸಿದರೂ ಸಹ, ಅಲ್ಲಿ ಪ್ರತಿಯೊಂದಕ್ಕೂ ಒಂದು ಸಾಂಕೇತಿಕ ಅರ್ಥವಿದೆ, ಔಚಿತ್ಯವಿದೆ, ಅವುಗಳ ಹಿಂದೆ ಒಂದು ಸಂದೇಶವಿದೆ. ಹೀಗಾಗಿ ಭಾರತೀಯರಿಗೆ ಸಾಂಕೇತಿಕವಾಗಿ ಪ್ರತಿಮೆಗಳನ್ನು ನಿರ್ಮಿಸುವಿದರಲ್ಲಿ ಎಲ್ಲಿಲ್ಲದ ಆಸಕ್ತಿ. ನಮ್ಮ ರಾಷ್ಟ್ರೀಯ ಲಾಂಚನವನ್ನು ನಾವು ಅಶೋಕನ ಕಾಲದ ಒಂದು ಪ್ರತಿಮಾಸ್ತಂಭಯಿಂದಲೇ ಆಯ್ಕೆಮಾಡಿರುವುದೂ ಇದಕ್ಕೊಂದು ಸಣ್ಣ ನಿದರ್ಶನ.

ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ, ಸರಿಸುಮಾರು ಒಂದುವರ್ಷದಿಂದ ಭಾರತದಲ್ಲಿ ಅತ್ಯಂತ ಚರ್ಚಿಸಲ್ಪಟ್ಟಿರುವ ಒಂದು ವಿಷಯವೆಂದರೆ, ಸರ್ದಾರ ವಲ್ಲಬಾಭಾಯಿ ಪಟೇಲರ ‘ಐಕ್ಯತಾ ಪ್ರತಿಮೆ’(Statue of Unity)ಯ ನಿರ್ಮಾಣ. ಪ್ರಧಾನಿ ಪದವಿಗೆ ಅಂದು ಮುಂಚೂಣಿಯಲ್ಲಿದ್ದ ಮೋದಿ ತಮ್ಮ ಕನಸಾದ ‘ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ’ಯೊಂದನ್ನು ನಿರ್ಮಿಸಬೇಕೆಂಬ ಬಯಕೆಯನ್ನು ಜನರಿಗೆ ಪರಿಚಯಿಸಿದರು. ಎತ್ತರವೆಂದರೆ ಬರೀ ಅಂತಿಂಥಾ ಎತ್ತರವಲ್ಲ, ಸಧ್ಯದ ಅತ್ಯಂತ ಎತ್ತರದ ಪ್ರತಿಮೆಯಾದ 153ಮೀ ಎತ್ತರದ ‘ವಸಂತ ದೇವಾಲಯದ ಬುಧ್ಧ (Spring Temple Buddha)’ನಿಗಿಂತ ಬರೀ ಒಂದೆರಡು ಮೀಟರ್ ಎತ್ತರವಲ್ಲ. ಮೋದಿ ಕನಸು ಕಾಣುವಾಗ ಸಣ್ಣದ್ದನ್ನು ಎಂದಿಗೂ ಕಾಣುವುದಿಲ್ಲ ಎಂಬುದು ಗೊತ್ತಿರುವ ವಿಷಯವೇ. ಹಾಗಾಗಿ ಅವರು ಈಗಿರುವ ಪ್ರತಿಮೆಯನ್ನು ಮೀರಿಸಿ, ಅದಕ್ಕಿಂತಾ ಬರೋಬ್ಬರಿ 29ಮೀ ಎತ್ತರದ ಪ್ರತಿಮೆಯನ್ನು ಕಟ್ಟುವ ಕನಸು ಕಂಡರು. ಇಂಥಾ ದೊಡ್ಡ ಯೋಜನೆಯ ರೂಪುರೋಷೆ ಸಿದ್ದಮಾಡುವಾಗ ಸಹಜವಾಗಿಯೇ ಅವರ ಮನಸ್ಸಿಗೆ ಬಂದದ್ದು, ಹರಿದುಹಂಚಿದ್ದ ಭಾರತವನ್ನು ಒಂದು ಒಕ್ಕೂಟವನ್ನಾಗಿ ಮಾಡಿದ ‘ಉಕ್ಕಿನ ಮನುಷ್ಯ’, ತಮ್ಮ ರಾಜ್ಯದವರೇ ಆದ ಸರ್ದಾರ ಪಟೇಲರು. ಅವರ ಪ್ರತಿಮೆಯನ್ನೇ ಜಗತ್ತಿನ ಅತ್ಯಂತ ದೊಡ್ಡ ಪ್ರತಿಯನ್ನಾಗಿಸುವ ಕನಸು ಹಂಚಿದರು. ಅತ್ಯಂತ ದೊಡ್ಡ ಪ್ರತಿಮೆಯೆಂದ ಮೇಲೆ ಅದಕ್ಕೆ ವೆಚ್ಚವಾಗುವ ಹಣವೂ ದೊಡ್ಡದೇ, ಅದರ ಬಗ್ಗೆ ಪ್ರತಿಮಾತೂ ದೊಡ್ಡದೇ. ಈಗ ಸಧ್ಯಕ್ಕೆ ಅದರ ಸುತ್ತಮುತ್ತ ನಿರ್ಮಾಣವಾಗಿರುವ ವಿವಾದವೂ ಸಹ ದೊಡ್ಡದೇ

ಬಹುಷಃ ನಮ್ಮ ನಿಮ್ಮಂತಹ ಯಾರೇ ಒಬ್ಬ ಸಾಮಾನ್ಯ ವ್ಯಕ್ತಿ ಅಥವಾ ಒಂದು ಸಂಸ್ಥೆ ಈ ಕೆಲಸಕ್ಕೆ ಕೈ ಹಾಕಿದ್ದರೆ, ಜನ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದರೇನೋ. ಆದರೆ ಇತ್ತೀಚೆಗಿನ ಕೇಂದ್ರ ವಿತ್ತೀಯ ಬಜೆಟ್ಟಿನಲ್ಲಿ ಈ ಯೋಜನೆಗೆ ಸರ್ಕಾರ ಇನ್ನೂರು ಕೋಟಿ ಮೀಸಲಿಟ್ಟುರುವುದು ಬಹಳ ಜನರಿಗೆ ಅಪಥ್ಯವಾದಂತಿದೆ. ಅರುಣ್ ಜೇಟ್ಲಿಯವರು ಈ ಅನುದಾನವನ್ನು ಘೋಷಣೆ ಮಾಡಿದ್ದೇ ತಡ, ಸಾಮಾಜಿಕ ತಾಣಗಳಲ್ಲಿ ಯುದ್ಧವೇ ನಡೆದು ಹೋಯಿತು. ಕೆಲವರು ‘ಅದೇ 200 ಕೋಟಿಯಲ್ಲಿ ಬಹಳಷ್ಟು ಬಡವರ ಹೊಟ್ಟಿ ತುಂಬಿಸಬಹುದಿತ್ತು’ ಎಂದರೆ, ಇನ್ನು ಕೆಲವರು ‘ಇದರ ಅಗತ್ಯವೇನಿದೆ!? ನಾವ್ಯಾಕೆ ಜಗತ್ತಿನಲ್ಲಿ ಅತೀ ಎತ್ತರದ ಪ್ರತಿಮೆ ಕಟ್ಟಬೇಕು!? ಜಗತ್ತನ್ನೇ ಗೆಲ್ಲಬೇಕೆಂಬ ಕೆಟ್ಟ ಹಪಹಪಿ ಇದರಿಂದ ವ್ಯಕ್ತವಾಗುತ್ತದೆ. ಜಗತ್ತು ನಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತದೆ’ ಎಂದರು . ಕೆಲವರಂತೂ ‘ಇದು ನರೇಂದ್ರ ಮೋದಿಯವರ ವೈಯುಕ್ತಿಕ ಕನಸು. ಅವರ ಕನಸಿನ ಯೋಜನೆಗೆ, ಯಾರೋ ಒಬ್ಬ ‘ಗುಜರಾತಿ’ಯ ಪ್ರತಿಮೆಗೆ ಎಲ್ಲಾ ಭಾರತೀಯರು ಯಾಕೆ ಹಣ ತೆರಬೇಕು!?’ ಎಂಬ ಅಲ್ಪತನವನ್ನೂ ತೋರಿದರು.

ನಾನೇಕೆ ಇಂತಹ ಒಂದು ಬೃಹತ್ ಯೋಜನೆಯನ್ನು ಭಾರತೀಯರು ಬೆಂಬಲಿಸಬೇಕೆಂಬ ಒಂದೆರಡು ಮಾತನ್ನು ಹಂಚಿಕೊಳ್ಳಬಯಸುತ್ತೇನೆ. ಈ ದುಡ್ಡನ್ನು ಬೇರೆ ಕಡೆ ಖರ್ಚುಮಾಡಬಹುದೆಂಬ ಉದ್ದೇಶವನ್ನು ಒಂದುಕಡೆ ಒಪ್ಪಿಕೊಂಡರೂ ಸಹ, ಈ ಯೋಜನೆಯನ್ನು ಒಪ್ಪಿಕೊಳ್ಳವಂತೆ ಮಾಡುವ ಅಂಶಗಳು, ತಿರಸ್ಕರಿಸುವ ಅಂಶಗಳಿಗಿಂತ ಹೆಚ್ಚು ಬಲಶಾಲಿಯಾಗಿವೆ. ನನ್ನ ಪ್ರಕಾರ ಇಂತಹ ಪ್ರತಿಮೆಯೊಂದನ್ನು ನಿರ್ಮಿಸುವುದು ‘ಕೆಟ್ಟದ್ದೇನೂ’ ಅಲ್ಲ. ಅಂಕಿಅಂಶಗಳು ನನಗೆ ತಿಳಿದಂತೆ ಹೀಗಿವೆ:

(*) ಈ ಯೋಜನೆಯ ಒಟ್ಟುವೆಚ್ಚ 2500 ಕೋಟಿರೂಪಾಯಿಗಳು ಹಾಗೂ ಇದರಲ್ಲಿ ಉಪಯೋಗಿಸಲ್ಪಡುವ ಬಹುಪಾಲು ಉಕ್ಕು ಮತ್ತು ಕಬ್ಬಿಣ ಮರುಉಪಯೋಗಸಲ್ಪಡುವ ಲೋಹಗಳಿಂದ ಬರಲಿದೆ. ಕೇಂದ್ರ ಸರ್ಕಾರದ ಬಜೆಟ್ ವೆಚ್ಚ (ರೂ. 200ಕೋಟಿ), ಇದರಲ್ಲಿ ಶೇಕಡಾ 10ಕ್ಕಿಂತ ಕಡಿಮೆ. ಗುಜರಾತಿನ ಸರ್ಕಾರ ಸಹ ತನ್ನ ಬಜೆಟ್ಟಿನಲ್ಲಿ ಈ ಯೋಜನೆಗಾಗಿ ನೂರು ಕೊಟಿಯಷ್ಟು ಹಣ ಮೀಸಲಿಟ್ಟಿದೆ.

ಈ ಪ್ರತಿಮೆಯ ನಿರ್ಮಾಣ “ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದೊಂದಿಗೆ” ನಡೆಯಲಿದೆ. ಅಂದರೆ ಯೋಜನೆಯ ಒಟ್ಟು ಹಣ ಸರ್ಕಾರ, ಖಾಸಗಿ ಸಂಸ್ಥೆಗಳ ಹೂಡಿಕೆ ಹಾಗೂ ಜನಸಾಮಾನ್ಯರ ದೇಣಿಗೆಯಿಂದ ಬರಲಿದೆ. ಇದರಲ್ಲಿ ಹೆಚ್ಚಿನ ಹಣ ಸ್ವಯಂಪ್ರೇರಿತ ಕೊಡುಗೆಯಾಗಿರುವುದರಿಂದ, ‘ಸರ್ಕಾರ ಈ ಹಣವನ್ನು ಬೇರೆ ಉತ್ತಮ ಕಾರ್ಯಗಳಿಗೆ ವಿನಿಯೋಗಿಸಬಹುದಿತ್ತು’ ಎಂಬ ವಾದ ಸುಸಂಬದ್ಧವೇ ಅಲ್ಲ. ಈ ಪೂರ್ತಿ ಹಣ ‘ಒಂದು ನಿರ್ದಿಷ್ಟಕಾರ್ಯಕ್ಕಾಗಿ’ ಬಳಸಲ್ಪಡುತ್ತಿರುವುದರಿಂದ, ಯಾವ ‘ಬೇರೆ ಉತ್ತಮ ಕಾರ್ಯ’ಕ್ಕಾಗಿ ಈ ಹಣವನ್ನು ಬಳಸಬಹುದಿತ್ತು? ಎಂಬುದನ್ನು ಸ್ಪಷ್ಟಪಡಿಸದೆ, ಅದಕ್ಕಾಗಿ ಜನರನ್ನು ಹುರಿದುಂಬಿಸದೆ, ಹಣವನ್ನು ಒಟ್ಟುಗೂಡಿಸುವ ಸಾಹಸವನ್ನೂ ತೋರದೆ ಬರೀ ‘ಬೇರೆ’ ಹಾಗೂ ‘ಉತ್ತಮ’ ಕಾರ್ಯಗಳ ವಾದದ ಗೋಡೆಯ ಹಿಂದೆ ಅವಿತು ಒಬ್ಬ ವ್ಯಕ್ತಿಯ ಜನಾನುರಾಗಿ ಶ್ರಮವನ್ನು ವ್ಯರ್ಥವೆಂದು ಕರೆಯುವುದು ಹೇಡಿತನ ಹಾಗೂ ಅಲೋಚನಾರಾಹಿತ್ಯದ ತುತ್ತತುದಿಯಷ್ಟೇ.

(*) ಈ ಪ್ರತಿಮೆ ಅತ್ಯಂತ ಎತ್ತರವಾದದ್ದು. ಹಾಗಾಗಿ ಇದು ಬರೀ ನಿರ್ಮಾಣ ಸಾಹಸವಷ್ಟೇ ಅಲ್ಲ. ಬಹಳ ದೊಡ್ಡ ಅಭಿಯಂತರ (engineering) ಸವಾಲು ಹಾಗೂ ಸಾಹಸವೂ ಹೌದು. ಅತೀಕ್ಲಿಷ್ಟವಾದ ಗಣಕೀಕೃತ ದ್ರವ ಬಲವಿಜ್ಞಾನ ವಿಶ್ಲೇಷಣೆ (computational fluid dynamics analysis), ವಾಯು ಭಾರ ವಿಶ್ಲೇಷಣೆ (wind load analysis), ಹಾಗೂ ರಾಚನಿಕ ವಿಶ್ಲೇಷಣೆ (structural analysis)ಯ ಸವಾಲುಗಳನ್ನು ಮೆಟ್ಟಿನಿಂತು ಇಂತಹ ಪ್ರತಿಮೆಯ ನಿರ್ಮಾಣ ಮಾಡಿ ಪ್ರಪಂಚಕ್ಕೆ ತೋರಿಸುವುದು, ಭಾರತೀಯರಿಗೆ ಎಷ್ಟು ಹೆಮ್ಮೆಯ ವಿಷಯವಾಗಲಿದೆ ಎನ್ನುವುದನ್ನು ಟೀಕಾಕಾರೊಮ್ಮೆ ಅರ್ಥೈಸಿಕೊಳ್ಳುವುದೊಳ್ಳೆಯದು. ಜಗತ್ತಿನ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾವನ್ನು ಕಟ್ಟುವ ಪ್ರಯತ್ನದಲ್ಲಿ ಎಂಜಿನಿಯರುಗಳು ದಿನನಿತ್ಯದ ಜೀವನದಲ್ಲಿ ಉಪಯೋಗವಾಗುವಂತ ಎಷ್ಟೊಂದು ಉತ್ತರಗಳನ್ನು ಕಂಡುಹಿಡಿದರು ಎಂದೊಮ್ಮೆ ತಿಳಿಯುವುದೊಳ್ಳೆಯದು.

(*) ಸಮಸ್ಯೆಗಳಿದ್ದಲ್ಲಿ ಪರಿಹರಿಸಲು ತಜ್ಞರು ಬೇಕು. ಅಂದಮೇಲೆ ಈ ಯೋಜನೆ ತನ್ನ ಬಹಳಷ್ಟು ಸಮಸ್ಯೆಗಳೊಂದಿಗೆ, ಬಹಳಷ್ಟು ಉದ್ಯೋಗಗಳನ್ನೂ ಸೃಷ್ಟಿಸಲಿದೆ. ಬರೀ ಉದ್ಯೋಗಗಳನ್ನಲ್ಲ, ಬಹಳಷ್ಟು ಭಾರತೀಯ ಉದ್ಯೋಗಗಳನ್ನು. ಹೌದು, ಸಧ್ಯದ ಸುದ್ದಿಗಳ ಪ್ರಕಾರ ಅಮೇರಿಕಾ ಮೂಲದ ಟರ್ನರ್ ಕಂಪನಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಿದೆ. ಆದರೆ, ಕೆಲವು ಟೀಕಾಕಾರರ ಪ್ರಕಾರ ಭಾರತೀಯ ಯೋಜನೆಯೊಂದನ್ನು ಅಮೇರಿಕಾ ಮೂಲದ ಕಂಪನಿ ಮಾಡಿದರೆ ಉದ್ಯೋಗಗಳು ಭಾರತದಲ್ಲಲ್ಲ, ಅಮೇರಿಕಾದಲ್ಲಿ ಸೃಷ್ಟಿಯಾಗಲಿವೆ ಎಂದು ಕೂಗಾಡುತ್ತಾ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಜೆಕ್ಟುಗಳು ಯಾವರೀತಿಯಲ್ಲಿ ಕಾರ್ಯಗತಗೊಳ್ಳುತ್ತವೆ ಎಂದು ತಿಳಿಯದೆ ತಮ್ಮ ವಿವೇಚನಾಶೂನ್ಯತೆಯನ್ನು ಮೆರೆದಿದ್ದಾರೆ. ತಮಾಷೆಯೆಂದರೆ ಇವರಲ್ಲಿ ಬಹಳಷ್ಟು ಮಂದಿ ಬೆಂಗಳೂರು, ಗುರಗಾಂವ್ ಹಾಗೂ ಹೈದರಾಬಾದಿನಲ್ಲಿರುವ ಗೂಗಲ್, ಹನಿವೆಲ್, ಮೈಕ್ರೋಸಾಫ್ಟಿನ ಆಫೀಸುಗಳಲ್ಲಿ ಕುಳಿತು ಈ ಚರ್ಚೆಗಳನ್ನು ಮಾಡುತ್ತಿದ್ದಾರೆ. ಅಮೇರಿಕಾದ ಕಂಪನಿಗಳು ಭಾರತದಲ್ಲಿ ಇವರನ್ನು ಕೂರಿಸಿಕೊಂಡು ಅಮೇರಿಕಾದ ಕೆಲಸಗಳನ್ನು ಮಾಡಿಸಿಕೊಂಡರೆ ಏನೂ ತೊಂದರೆಯಿಲ್ಲ, ಆದರೆ ಅಮೇರಿಕಾದ ಕಂಪನಿಯೊಂದು ಭಾರತದಲ್ಲಿ ಇವರಂತವರನ್ನೇ ಕೂರಿಸಿಕೊಂಡು ಭಾರತದ ಕೆಲಸಗಳನ್ನು ಮಾಡುವಂತಿಲ್ಲವಂತೆ, ಇವರ ಪ್ರಕಾರ ಇಂತವರಿಗೆ, ಟರ್ನರ್ ಈ ಯೋಜನೆಯನ್ನು ಪ್ರಾಂಭಿಸುವ ಮುನ್ನ, ಭಾರತದಲ್ಲಿ ಟರ್ನರ್ (ಇಂಡಿಯಾ) ಪೈವೇಟ್ ಲಿಮಿಟೆಡ್ ಎಂಬ ಕಂಪನಿಯನ್ನು ತೆರೆಯಬೇಕು, ಅದರ ಒಟ್ಟು ಉದ್ಯೋಗಿಗಳಲ್ಲಿ 90% ಗಿಂತ ಹೆಚ್ಚಿನಷ್ಟು ಭಾರತೀಯರನ್ನೇ ನೇಮಿಸಿಕೊಳ್ಳಬೇಕೆಂಬ ಕನಿಷ್ಟ ನಿಯಮಾವಳಿಗಳೂ ತಿಳಿದಂತಿಲ್ಲ. ಒಟ್ಟಿನಲ್ಲಿ, ‘ದೇಶದ ಅರ್ಥಿಕತೆಗೆ, ಔದ್ಯೋಗಿಕತೆಗೆ ಈ ಯೋಜನೆ ಸಹಾಯಮಾಡುವುದಿಲ್ಲ’ ಎಂಬ ಇವರ ವಾದದಲ್ಲಿ ಯಾವುದೇ ಹುರುಳಿಲ್ಲ.

(*) “ಪ್ರತಿಮೆಗಳ ಮೇಲೆ ಹಕ್ಕಿಗಳು ಪಿಕ್ಕೆ ಹಾಕುತ್ತವೆ, ಅದಕ್ಕೆ ಯಾರೋ ಚಪ್ಪಲಿಯಲ್ಲಿ ಹೊಡೆಯುತ್ತಾರೆ, ಅದರಿಂದ ಗಲಭೆಗಳಾಗುತ್ತವೆ” ಎಂದು ವಿರೋಧಿಸುತ್ತಿರುವ ಕೆಲ ಪ್ರಭೃತಿಗಳು ಈ ಪ್ರಾಜೆಕ್ಟಿನ ಮಹಾಗಾತ್ರವನ್ನೇ ಅರ್ಥಮಾಡಿಕೊಂಡಂತಿಲ್ಲ. ಅವರ ಆಲೋಚನೆಗಳು, ಅವರು ಊಹಿಸಿರುವ ಪ್ರತಿಮೆಗಳಷ್ಟೇ ಕುಬ್ಜವಾದದ್ದರಿಂದ ಅಂತವರಿಗೆ ನಾನು ಏನೂ ಹೇಳಬಯಸುವುದಿಲ್ಲ. ಹಾಗೇಸುಮ್ಮನೇ 93ಮೀಟರ್ ಎತ್ತರದ ಲಿಬರ್ಟಿ ಪ್ರತಿಮೆಯ ಕಡೆಗೆ ಯಾರೋ ಒಬ್ಬ ಚಪ್ಪಲಿ ಎಸೆಯುವ ದೃಶ್ಯವನ್ನೊಮ್ಮೆ ಊಹಿಸಿಕೊಂಡು ನಗುತ್ತೇನಷ್ಟೇ.

(*) ಈ ಪ್ರತಿಮೆ ಸಾಂಕೇತಿಕವಾಗಿ ಭಾರತದ ಐಕ್ಯತೆ ಹಾಗೂ ಪಟೇಲರಿಗೆ ಸಲ್ಲುವ ಸನ್ಮಾನವಾದರೂ ಸಹ, ಈ ಸ್ಮಾರಕ ಒಂದು ಪ್ರವಾಸಿತಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದನ್ನು ನೋಡಲು ಜನರು ಬಂದೇ ಬರುತ್ತಾರೆ. ಒಬ್ಬಿಬ್ಬರಲ್ಲ, ಬಹಳಷ್ಟು ಜನರು ಬರುತ್ತಾರೆ. ನಮ್ಮ ದೇಶದಿಂದ ಮಾತ್ರವಲ್ಲದೇ, ವಿದೇಶದಿಂದಲೂ ಬರುತ್ತಾರೆ. ಅಂದ ಮೇಲೆ ಈ ಪ್ರತಿಮೆಯಿರುವ ಸುತ್ತಲಿನ ಪ್ರದೇಶದಲ್ಲಿ ಹೋಟೆಲುಗಳು, ಪಾರ್ಕುಗಳು, ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳನ್ನು ಕಾಪಿಡುವ ಒಂದು ವಸ್ತುಸಂಗ್ರಹಾಲಯ ಎಲ್ಲವೂ ನಿರ್ಮಾಣವಾಗಲಿವೆ. ಅಂದಮೇಲೆ ಮತ್ತಷ್ಟು ಉದ್ಯೋಗಗಳ ಸೃಷ್ಟಿ. ಇದರೊಂದಿಗೆ, ಸ್ಥಳೀಯ ಅರ್ಥಿಕತೆ ಮತ್ತಷ್ಟು ಚುರುಕುಪಡೆಯಲಿದೆ. ನಾವಿನ್ನೂ ಪ್ರವಾಸಿಗಳು ವ್ಯಯಿಸಲಿರುವ ಹಣ, ಟಿಕೇಟಿನ ದುಡ್ಡಿನ ಬಗ್ಗೆ ಮಾತೇ ತೆಗೆದಿಲ್ಲ. ನನ್ನ ಆಲೋಚನೆ ಪ್ರಕಾರ ಈ ಯೋಜನೆ, ಈ ಪ್ರತಿಮೆಯೊಳಗೆ ಅಥವಾ ಪಕ್ಕದಲ್ಲಿ ಎಲವೇಟರ್ ಅಥವಾ ಮೆಟ್ಟಿಲುಗಳನ್ನು ನಿರ್ಮಿಸಿ, ಪ್ರವಾಸಿಗಳಿಗೆ ಮೇಲಿನಿಂದ ವಿಹಂಗಮ ನೋಟವೊಂದಕ್ಕೆ ಅನುವು ಮಾಡಿಕೊಡಲಿದೆ. ಅದರ ಟಿಕೇಟಿನ ಶುಲ್ಕವನ್ನೂ ಸೇರಿಸಿ ನೀವೇ ಲೆಕ್ಕ ಹಾಕಿ. ಇದು ನಿಜವಾಗಿಯೂ ಜಗತ್ತಿನ ಅತಿ ದೊಡ್ಡ ಪ್ರತಿಮೆಯಾದಲ್ಲಿ, ಮುಂದಿನ 25 ವರ್ಷಗಳಲ್ಲಿ ಇದನ್ನು ನೋಡಲು ಬರುವ ಜನರ ಸಂಖ್ಯೆಯನ್ನೊಮ್ಮೆ ಊಹಿಸಿ ಮತ್ತೊಮ್ಮೆ ಲೆಕ್ಕ ಹಾಕಿ. ಈ ಬಹಳಷ್ಟು ಟೀಕಾಕಾರರ ಪ್ರಕಾರ ಅಮೇರಿಕಾದ ಲಿಬರ್ಟಿ ಪ್ರತಿಮೆಯೂ ಸಹ ದುಡ್ಡಿನ ಅಪವ್ಯಯವೇ ಆಗಿರಬಹುದು. ಆದರೆ ಅದನ್ನು ಕಟ್ಟಿದಾಗಿನಿಂದ ಇಂದಿನವರೆಗಿನ ಹೂಡಿಕೆಯ ಪ್ರತಿಪಲ(ROI – Return On Investment)ವನ್ನೊಮ್ಮೆ ಗಮನಿಸಿದರೆ, ಆ ಪ್ರತಿಮೆಯನ್ನು ಫ್ರೆಂಚರು ಕಟ್ಟಿಮುಗಿಸಿದ ನಂತರ ನೂರುಪಟ್ಟು ಆದಾಯವನ್ನು ಒದಗಿಸಿದೆ.

(*) ಇನ್ನೊಂದು ಮಾತು ಮರೆಯದಿರೋಣ. ಇಷ್ಟೆಲ್ಲಾ ‘ಖರ್ಚು’ ಭಾರತದ ಅತ್ಯಂತ ಉನ್ನತಮಟ್ಟದ ನಾಯಕರಾದ ಪಟೇಲರಿಗಾಗಿ ಅಂತಾದಲ್ಲಿ, ಅದರಿಂದ ಸೃಷ್ಟಿಯಾಗಲಿರುವ ಉದ್ಯೋಗಗಳು, ಅದರಿಂದ ಬರಲಿರುವ ಆದಾಯ ಇವೆಲ್ಲಾ ಅವರ ಹೆಸರಿನಿಂದ ಅಂತಾದಲ್ಲಿ, ನನ್ನ ಪ್ರಕಾರ ಇದು ಕಾರ್ಯಗತಮಾಡಲೇ ಬೇಕಾದ ಯೋಜನೆ. ಇಷ್ಟು ವರ್ಷ, ದೇಶದ ಪ್ರತೀ ನಗರದಲ್ಲೂ ಒಂದು ರಸ್ತೆಗೆ ಒಬ್ಬರದೇ ಹೆಸರಿಟ್ಟು, ಎಲ್ಲಾ ವಿಮಾನನಿಲ್ದಾಣಗಳೂ ಒಂದೇ ಕುಟುಂಬದ ಬಳುವಳಿಯೇನೋ ಎಂಬಂತೆ ಹೆಸರಿಟ್ಟು ಸಂಭ್ರಮಿಸುತ್ತಿರುವ ನಾವು, ಅಖಂಡ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಿದ ‘ಉಕ್ಕಿನ ಮನುಷ್ಯ’ನಿಗೆ, ಆತನ ನೆನಪಿಗೆ ಒಂದು ಪ್ರತಿಮೆ ನಿರ್ಮಿಸಲೂ ಹಿಂದೆ ಮುಂದೆ ನೋಡುವಂತಾದೆವೇ!? ಅದಕ್ಕಾಗಿ ವ್ಯಯಿಸಲು ಇಚ್ಚಿಸುವ ಇನ್ನೂರು ಕೋಟಿಗೂ ಲೆಕ್ಕ ಕೇಳುತ್ತಿದ್ದೇವೆಯೇ!? ಹಾಗೇ ಲೆಕ್ಕಕ್ಕೆ ಒಂದು ಮಾತು, ಸರ್ಕಾರ ವ್ಯಯಿಸಲಿರುವ ಈ ಇನ್ನೂರು ಕೋಟಿ ಹಣ, 2G ಹಗರಣದ ಒಟ್ಟು ಮೊತ್ತದ 0.02% ಅಷ್ಟೇ.

(*) ನನಗನ್ನಿಸಿದ ಪ್ರಕಾರ ಈ ಟೀಕಾಕಾರ ಪ್ರಕಾರ ಭಾರತದ ಮಂಗಳಯಾನವೂ ಸಹ ವೃಥಾ ಖರ್ಚೇ! ಇಡೀ ವಿಶ್ವದಲ್ಲಿ ಎಲ್ಲರಿಗಿಂತ ಅತೀ ಕಡಿಮೆ ವೆಚ್ಚದಲ್ಲಿ ಮಂಗಳನಲ್ಲಿ ಕಾಲಿರಿಸುವ ಕನಸು ಕಂಡು, ಅದನ್ನು ಮಾಡಿತೋರಿಸಿ, ಜಗತ್ತನೇ ನಿಬ್ಬೆರಗಾಗಿಸಿದ ನಮ್ಮ ಸಾಧನೆಯೂ ಇವರ ಮಟ್ಟಿಗೆ ಸಣ್ಣದು ಹಾಗೂ ವೃಥಾಖರ್ಚು. ರಾಕೇಶ ಶರ್ಮಾ ಚಂದ್ರಯಾನ ಮಾಡಿದ್ದೂ ವ್ಯರ್ಥ. ‘ಅವನಲ್ಲಿಗೆ ಹೋದರೆ ನಮಗೇನು ಸಿಕ್ಕಿತು!? ಪಾಪ, ಇಲ್ಲೆಷ್ಟು ಹಸಿದ ಹೊಟ್ಟೆಗಳಿವೆ ನೋಡಿ!?’ ಅಂದು ಕೇಳುತ್ತಾರೆ. “ಕ್ರೀಡಾ ವಿಶ್ವವಿದ್ಯಾಲಯವನ್ನೇಕೆ ಸ್ಥಾಪಿಸಬೇಕು!? ಪಿ.ಟಿ ಉಷಾ ಒಲಂಪಿಕ್ಸಿನಲ್ಲಿ ಓಡಿದರೆ ನನಗೇನು!? ಪಾಪ, ಇಲ್ಲೆಷ್ಟು ಜನ ಪುಟ್ಪಾತಿನ ಮೇಲೆ ಮಲಗಿದ್ದಾರೆ ನೋಡಿ!?” ಅನ್ನಬಹುದು. ಅದಕ್ಕೇ ಇರಬೇಕು ದಾರ್ಶನಿಕರು ಹೇಳಿರುವುದು ‘ಕೆಲವರನ್ನು ಎಂದಿಗೂ ಮೆಚ್ಚಿಸಲು ಸಾಧ್ಯವಿಲ್ಲ’ ಎಂದು

ಕೊನೇ ಮಾತು: ಈ ಪ್ರತಿಮೆ ನಿರ್ಮಾಣವಾಗಲಿಲ್ಲವೆಂದರೆ ನಾವೇನೂ ಪಟೇಲರನ್ನು ನೆನಪಿಸಿಕೊಳ್ಳುವುದೆಲ್ಲವೆಂದಲ್ಲ. ನಮ್ಮ ಮನಸ್ಸಿನಲ್ಲಿ ಅವರು ಖಂಡಿತಾ ಬದುಕಿರುತ್ತಾರೆ. ಆದರೆ, ಒಬ್ಬ ನಾಯಕನಿಗೆ ವಿನೂತನವಾದ ರೀತಿಯಲ್ಲಿ ಧನ್ಯವಾದಗಳನ್ನರ್ಪಿಸುವ ಕನಸೊಂದನ್ನು, ಅವಕಾಶವೊಂದನ್ನು ನಮ್ಮ ಸಧ್ಯದ ಪ್ರಧಾನಿ ಕಟ್ಟಿಕೊಟ್ಟಿದ್ದಾರೆ. ಅದನ್ನು ಪೂರ್ತಿಮಾಡುವ ಮೂಲಕ ಇಡೀ ವಿಶ್ವದ ಕಣ್ಸೆಳೆಯುವ ಅದ್ಬುತ ಸುವರ್ಣಾವಕಾಶ ನಮಗೆ ಒದಗಿಬಂದಿದೆ. ಅದನ್ನು ಎರಡೂ ಕೈಗಳಿಂದ ಬಾಚಿಕೊಳ್ಳುತ್ತೇವೆಯೋ ಅಥವಾ ಕೈಚೆಲ್ಲುತ್ತೇವೆಯೋ ಎನ್ನುವುದು ನಮಗೆ ಬಿಟ್ಟದ್ದು. ಅಖಂಡ ಭಾರತದ ಪೂರ್ಣ ಪರಿಕಲ್ಪನೆ ಹಾಗೂ ಅದರ ಬಗ್ಗೆ ಹೆಮ್ಮೆ ಇರುವ ಯಾವ ಭಾರತೀಯನೂ ಈ ಯೋಜನೆಯನ್ನು ವಿರೋಧಿಸಲಾರ ಎಂದು ನನ್ನ ದೃಡವಾದ ನಂಬಿಕೆ.

Advertisements

One thought on “ಐನೂರಾತೊಂಬತ್ತೇಳು ಅಡಿ ಎತ್ತರದ ಕನಸು ಮತ್ತದರ ಅಗತ್ಯತೆ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s