ಆ ದಿನಗಳೆಲ್ಲಿ!?

 
ದಿನದ 24 ಘಂಟೆಗಳಲ್ಲಿ ನಾವು 6-8 ತಾಸು ನಿದ್ರಿಸುತ್ತೇವೆ. 8-10 ತಾಸುಗಳನ್ನು ಕಚೇರಿಯಲ್ಲಿ ಕೆಲಸ ಮಾಡುತ್ತೇವೆ. 1-2 ತಾಸು ರಸ್ತೆಯ ಮೇಲೆ ಪ್ರಯಾಣದಲ್ಲಿ ಕಳೆಯುತ್ತೇವೆ. ಉಳಿದ ಸಮಯದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಕನಿಷ್ಟ ಒಂದೆರಡು ತಾಸು ಟೀವಿಯ ಮುಂದೆ ಕೂರುತ್ತೇವೆ. ಮನೆ ಸಂಭಾಳಿಸುವ ಮಂದಿಯಂತೂ (ನಾನು ಹೆಂಗಸರು ಅಂಥಾ ಹೇಳ್ತಾ ಇಲ್ಲ…..ಮನೆ ಸಂಭಾಳಿಸುವ ಯಾರು ಬೇಕಾಗಿದ್ರೂ ಆಗಬಹುದು. ಹೌಸ್-ವೈಫೂ ಆಗಬಹುದು, ಹೌಸ್-ಹಸ್ಬೆಂಡೂ ಆಗಬಹುದು) ಸ್ವಲ್ಪ ಹೆಚ್ಚೇ ಟೀವಿಯ ಮುಂದೆ ಕೂರುತ್ತಾರೆ. ಆದರೆ, ಈ ಸ್ವಲ್ಪ ಸಮಯದಲ್ಲೂ ನಾವು ನೋಡುತ್ತಿರುವ ಕಾರ್ಯಕ್ರಮಗಳಾದರೂ ಎಂತದ್ದು!? 
 
ನಾನು ಚಿಕ್ಕವನಾಗಿದ್ದಾಗ ವಾರ್ತೆಯೆಂದರೆ ರಾತ್ರಿ 7:30ಯಿಂದ 8:00 ರವರೆಗೋ, ದೆಹಲಿಯಿಂದಾದರೆ 8:30ರಿಂದ 9:00ರವರೆಗೋ ಬರುತ್ತಿದ್ದ ಕಾರ್ಯಕ್ರಮಗಳು. ಮೊದಲ 2 ನಿಮಿಷದಲ್ಲಿ ಮುಖ್ಯಾಂಶಗಳನ್ನು ಓದಿ, ಆನಂತರದ ಹದಿನೈದು ನಿಮಿಷಗಳಲ್ಲಿ ಅವುಗಳನ್ನು ವಿವರಿಸಿ, ನಂತರ ಕೆಲ ಸಣ್ಣ ಪುಟ್ಟ ಸುದ್ಧಿಗಳನ್ನು ಹೇಳುತ್ತಿದ್ದರು. ವಾರ್ತೆಯೆಂದರೆ ಮುಖ್ಯಾಂಶಗಳು, ಸ್ಥಳೀಯ ಹಾಗೂ ದೇಶೀಯ ಸುದ್ದಿಗಳು, ಆನಂತರ ಅಂತರರಾಷ್ಟ್ರೀಯ ಸುದ್ದಿಗಳು, ಆಮೇಲೆ ಕ್ರೀಡಾ ಸುದ್ದಿಗಳು, ಕೊನೆಗೊಮ್ಮೆ ಮತ್ತೆ ಮುಖ್ಯಾಂಶಗಳೊಂದಿಗೆ ಕೊನೆಯಾಗುತ್ತಿತ್ತು.  ಅದು ಬಿಟ್ಟರೆ ನಮಗೆ ಮುಂದಿನ ಆಗುಹೋಗುಗಳು ಗೊತ್ತಾಗುತ್ತಿದ್ದದ್ದು ಮುಂದಿನ ದಿನವೇ. ಬರಬರುತ್ತಾ ದೂರದರ್ಶನ ದಿನಕ್ಕೆರಡು ಮೂರು ಬಾರಿ ವಾರ್ತಾಪ್ರಸಾರ ಮಾಡಿ ನಮ್ಮನ್ನೆಲ್ಲಾ ಅಪ್ಡೇಟ್ ಮಾಡಲು ಪ್ರಾರಭಿಸಿತು. ಆದರೆ, ಅದ್ಯಾವ ಘಳಿಗೆಯಲ್ಲಿ ಯಾವ ಪಾಪಾತ್ಮನಿಗೆ ಈ 24ಘಂಟೆಗಳ ವಾರ್ತಾಪ್ರಸಾರ ಎಂಬ ಕುಲಗೆಟ್ಟ ಅಲೋಚನೆ ಹೊಳೆಯಿತೋ! ನಮ್ಮೆಲ್ಲಾ ನಿದ್ರೆ, ನೆಮ್ಮದಿ ಹಾರಿ ಹೋಯಿತು. ಇವತ್ತು ದೇಶಾದ್ಯಂತ 27 ಭಾಷೆಗಳಲ್ಲಿ 630ಕ್ಕೂ ಹೆಚ್ಚು ವಾರ್ತಾ ವಾಹಿನಿಗಳಿವೆ. ಇವುಗಳಲ್ಲಿ ಮೂರು ಹೊತ್ತೂ ವಾರ್ತೆ ಬಿಟ್ಟರೆ ಬೇರೇನೂ ಇಲ್ಲ. ಹಾಗೆಂದ ಮಾತ್ರಕ್ಕೆ ಇವೇನೂ ಉಪಯುಕ್ತ ಮಾಹಿತಿಗಳನ್ನೇ ಕೊಡುತ್ತಿವೆಯೆಂದೇನಲ್ಲ. ವಾರ್ತೆಯ ಹೆಸರಿನಲ್ಲಿ ಬೇಕಾದದ್ದು ಬೇಡವಾದದ್ದು ಎಲ್ಲವನ್ನೂ ನಮ್ಮ ತಲೆಗೆ ತುರುಕುತ್ತಿವೆ. ಅಮೇರಿಕಾದ PRISM ಯೋಜನೆಯಿಂದ ಹಿಡಿದು, ಜಪಾನಿನ ಅಣುವಿಕಿರಣ ಸೋರಿಕೆಯವರೆಗೂ, ಮೋದಿಯ ಭಾಷಣದ ಮಧ್ಯೆ ಮೈಕು ನಿಂತುಹೋಗಿದ್ದರಿಂದ ಹಿಡಿದು, ಬೆರ್ಲುಸ್ಕೋನಿಯ ಕಾಮಪುರಾಣದವರೆಗೂ, ಹಾಲೆಂಡಿನಲ್ಲೆಲ್ಲೋ ಒಬ್ಬ ಮಹಿಳೆಯ ತಲೆಯಲ್ಲಿ ಮೊಳೆ ಹೊಕ್ಕಿದ್ದರಿಂದ ಹಿಡಿದು, ದೀಪಿಕಾಳ ಸೊಂಟದಳತೆ ಅರ್ಧ ಇಂಚು ಹೆಚ್ಚಾಗಿದ್ದರವರೆಗೆ ಎಲ್ಲದರ ಬಗ್ಗೆಯೂ ನಮಗೆ ತಿಳಿಸಿ, ‘ಜಗತ್ತನ್ನು ನಮಗೆ ಹತ್ತಿರವಾಗಿಸುವ’ ಪ್ರಯತ್ನವನ್ನು ಮಾಡುತ್ತಿವೆ. ಕೆಲವು ವಾಹಿನಿಗಳಂತೂ ಒಂದು ಹೆಜ್ಜೆ ಮುಂದೆ ಹೋಗಿ, ಸುಪ್ರೀಂಕೋರ್ಟಿನ ಅಪರಾವತರಗಳಾಗಿವೆ. ಅಲ್ಲೇ ಡ್ರಾ, ಅಲ್ಲೇ ಬಹುಮಾನ, ಅಲ್ಲೇ ಪ್ರಶಂಸೆ, ಅಲ್ಲೇ ವಾಕ್ಸಮರ ಹಾಗೂ ತೀರ್ಪುಗಳು ಕೊಡಲ್ಪಡುತ್ತಿವೆ. ಕೆಲವು ರಾಜಕಾರಣಿಗಳು ಈ ವಾರ್ತಾವಾಹಿನಿಗಳ ‘ಶಕ್ತಿ’ಯನ್ನು ಅರಿತು, ತಮ್ಮದೇ ಆದ ವಾಹಿನಿಗಳನ್ನೂ ಪ್ರಾರಂಭಿಸಿದರು. ಅಲ್ಲಿಗೆ ನಮ್ಮ ಜೀವನದ ನೆಮ್ಮದಿಯುಕ್ತ ದಿನಗಳಿಗೆ ತರ್ಪಣ ಬಿಟ್ಟಂತಾಯಿತು.
 
ಕೆಲವೊಮ್ಮೆ, ಜಗತ್ತಿಗೆ ದೂರವಾಗಿದ್ದ, ‘ದಿನಕ್ಕೆರಡು ಬಾರಿಯಷ್ಟೇ’ ವಾರ್ತೆ ಬರುತ್ತಿದ್ದ, ಅದರಲ್ಲೂ ವಾರ್ತೆಯ ಹರಿವಿಗೆ ಒಂದು ನಿರ್ಧಿಷ್ಟ ರೂಪುರೇಷೆಯಿದ್ದ ಆ ದಿನಗಳು ಎಷ್ಟು ಹಿತವಾಗಿದ್ದವು ಎಂದೆನಿಸುವುದಿಲ್ಲವೇ!? ಆ ವಾರ್ತಾವಾಚಕರ ಹಾವ ಭಾವ, ಉಚ್ಛಾರಣೆ, ಪ್ರತಿಯೊಬ್ಬರಿಗೂ ವಿಶಿಷ್ಟವಾಗಿದ್ದ ತಮ್ಮದೇ ವಾಚನಾಶೈಲಿ, ಅವರ ಧರಿಸುತ್ತಿದ್ದ ಬಟ್ಟೆಗಳು ಪ್ರತಿಯೊಂದೂ ನನಗೆ ಇಂದಿಗೂ ನೆನಪಿನಲ್ಲಿವೆ. ಕಣ್ಣುಮುಚ್ಚಿಯೇ ನಾನು ಇವತ್ತು ವಾರ್ತೆ ಓದುತ್ತಿರುವುದು ಯಾರೆಂದು ಹೇಳುತ್ತಿದ್ದೆ. ನನಗೆ ಇಂಗ್ಲೀಷಿನಲ್ಲಿ ಮಾತನಾಡಲು ಕಲಿಯಬೇಕೆಂಬ ಆಸೆ ಹುಟ್ಟಿಸಿದವನು, ಡಿಡಿಯ ಸುನಿತ್ ಟಂಡನ್ ಎಂಬ ಮಹಾಶಯ. ಇವತ್ತು ಅವನು ಎಲ್ಲಿದ್ದಾನೋ ಗೊತ್ತಿಲ್ಲ. ಆದರೆ ನನ್ನ ಮೆದುಳಿನಿಂದ ಎಂದಿಗೂ ಮರೆಯಾಗಲಾರ. ಅವನಷ್ಟೇ ಅಲ್ಲ, ಶಮ್ಮಿ ನಾರಂಗ್, ಕಾವೇರಿ ಮುಖರ್ಜಿ, ಗೀತಾಂಜಲೀ ಅಯ್ಯರ್, ಮಂಜರೀ ಜೋಶಿ, ಅವಿನಾಶ್ ಕೌರ್, ಜೆಬಿ ರಮಣ್, ಸಲ್ಮಾ ಸುಲ್ತಾನ್, ನಮ್ಮ ಕನ್ನಡದ ಅಪರ್ಣಾ, ಈಶ್ವರ ದೈತೋಟ, ಸಬೀಹಾ ಬಾನು, ಮಂಜುಳಾ ಗುರುರಾಜ್ ಇವರನ್ನೆಲ್ಲಾ ನಾನು ಮರೆಯಲು ಸಾಧ್ಯವೇ ಇಲ್ಲವೇನೋ. ಇವರೇನೂ ಇಂದಿನ ‘ನಾನೇ ಸರ್ವಜ್ಞ’ನೆಂಬ ಅಹಮಿಕೆಯ ವಾಚಕರಾಗಿರಲಿಲ್ಲ ಅಥವಾ ‘ಪತ್ರಿಕಾರಂಗದಲ್ಲಿ ನನ್ನ ಮಾತೇ ಕೊನೆ’ ಎಂಬ ಅಹಂಭಾವದ ಸ್ತ್ರೀವಾಚಕರೂ ಆಗಿರಲಿಲ್ಲ. ಆದರೂ ಅವರು ಓದಿದ ಸುದ್ಧಿಗಳು, ಅವರ ಚಹರೆಗಳು ನಮ್ಮ ಜೀವನದ ಒಂದು ಭಾಗವೇ ಆಗಿಬಿಟ್ಟಿದ್ದವು. ನಮ್ಮ ಅಜ್ಜನಂತೂ ಈ ವಾಚಕಿಯರ ದಿನಕ್ಕೊಂದು ಸೀರೆಗಳ ಕಲೆಕ್ಷನ್ ನೋಡಿ ತನ್ನ ಹೆಂದತಿ ಮಕ್ಕಳೆಲ್ಲಾ ಹೊಸಾ ಸೀರೆಗೆ ಪೀಡಿಸುವುದರಿಂದ ಸುಸ್ತಾಗಿ, ಒಮ್ಮೆ ಈ ವಾರ್ತಾಸುಂದರಿಯರಿಗೆ ವಾರಕ್ಕೆರಡೇ ಹೊಸಾ ಸೀರೆಗಳನ್ನು ಉಡಿಸುವಂತೆ ಕೋರಿ ದೂರದರ್ಶನದ ದೆಹಲಿ ಆಫೀಸಿಗೆ ಪತ್ರವನ್ನೂ ಬರೆದಿದ್ದರೆಂದು ಪ್ರತೀತಿ. ಅಷ್ಟರಮಟ್ಟಿಗೆ ಅವು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿದ್ದವು. ಸುರಭಿ ಎಂಬ ಕಾರ್ಯಕ್ರಮವನ್ನು ನೋಡಿ ಬೆಳೆದ ನನಗೆ ಹಾಗೂ ನನ್ನ ತಮ್ಮ-ತಂಗಿಯಂದಿರಿಗೆ ಸಿದ್ಧಾರ್ಥ ಕಖ್ ಎಂಬ ಪ್ರೀತಿಯ ಮಾವನನ್ನೂ  ಹಾಗೂ ರೇಣುಕಾ ಶಹಾನೆ ಎಂಬ ನಗುಮೊಗದ ಚೆಲುವೆಯನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ನಮ್ಮ ಕೆಲವು ಅಕ್ಕಂದಿರಂತೂ ಫ್ಯಾನ್ಸಿ ಸ್ಟೋರುಗಳಿಗೆ ಹೋದಾಗ ‘ಹೋದವಾರ ರೇಣುಕಾ ಶಹಾನೆ ಹಾಕಿದ್ಲಲ್ಲಾ, ಆ ಕಿವಿಯೋಲೆ ಇದೆಯಾ’ ಅಂತಾ ಕೇಳಿ ವ್ಯಾಪಾರ ಮಾಡ್ತಾ ಇದ್ರು. 
 
ಧಾರವಾಹಿಗಳು ಹಾಗೂ ಮನರಂಜನೆಯ ಕಾರ್ಯಕ್ರಮಗಳ ಹೆಸರಿನಲ್ಲಿ ಪ್ರಸಾರವಾಗುವ ಕಾರ್ಯಕ್ರಮ ನೆನಸಿಕೊಂಡರೆ ನನ್ನ ರಕ್ತದೊತ್ತಡ ಹೆಚ್ಚಾಗಿ ನಾನು ಗೋತಾ ಹೊಡೆಯುವ ಅವಕಾಶಗಳು ಹೆಚ್ಚಿರುವುದೆಂದು ನನ್ನ ಡಾಕ್ಟರು ಹೇಳಿರುವುದರಿಂದ, ಅವರ ಮೇಲಿನ ಗೌರವಕ್ಕಾಗಿ ನಾನು ಟೀವಿ ಧಾರಾವಹಿಗಳ ಬಗ್ಗೆ ಏನೂ ಬರೆಯಲು ಇಚ್ಚಿಸುವುದಿಲ್ಲ. ಆದರೆ ಚಿತ್ರಹಾರ್, ಚಿತ್ರಮಂಜರಿ, ಸಬೀನಾ, ಅಂಕಲ್ ಇಲ್ಲಪ್ಪ, ಉಪನ್ಯಾಸ್, ವ್ಯೋಮಖೇಶ್ ಬಕ್ಷಿ, ಅಜಿತನ ಸಾಹಸಗಳು……ಒಮ್ಮೆ ನೋಡಿದರೆ ಇನ್ನೊಮ್ಮೆ ನೋಡಬೇಕೆನ್ನಿಸುವ, ಇನ್ನೊಮ್ಮೆ ನೋಡಿದರೂ ಬೋರುಹೊಡೆಸದಿರುವ ಕಾರ್ಯಕ್ರಮಗಳೆಲ್ಲಿ!? ಎಂದು ಯೋಚಿಸಿದರೆ ಹಾಗೇ ಒಂದು ರೀತಿ ಭಾವರಾಹಿತ್ಯ ಮನಸ್ಸಿನಲ್ಲಿ ತುಂಬಿಕೊಳ್ಳುತ್ತದೆ 😦
 
ಇನ್ನು ರೇಡಿಯೋದ ವಿಷಯಕ್ಕೆ ಬಂದರಂತೂ, ನಾನು ಹಾಗೆಯೇ ಇಪ್ಪತ್ತು-ಇಪ್ಪತ್ತೈದು ವರ್ಷಹಿಂದೆ ಹೋದಂತಾಗಿ ನನ್ನ ಕಣ್ಣಲ್ಲಿ ನಿಜಕ್ಕೂ ನೀರುತುಂಬಿ ಬರುತ್ತದೆ. ಟೀವಿ ನಾನು ನೊಡಿದ್ದೇ ನನ್ನ 14ನೇ ವಯಸ್ಸಿನಲ್ಲಿ. ಅಲ್ಲಿಯವರೆಗೆ ನಾನು ಬೆಳೆದ ಸಿದ್ದರಮಠವೆಂದ ಹಳ್ಳಿಯಲ್ಲಿ ವಿದ್ಯುತ್ಶಕ್ತಿ ಎಂಬುವುದು ಕೇಳದ ಪದವಾದದ್ದರಿಂದ, ನಮ್ಮ ದಿನ ಮತ್ತು ಜಗತ್ತುಗಳು ರೇಡಿಯೋದಿಂದಲೇ ಪ್ರಾರಂಭವಾಗಿ, ಅದರಿಂದಲೇ ಕೊನೆಯಾಗುತ್ತಿತ್ತು. ‘ಸಂಪ್ರತಿ ವಾರ್ತಾಃ ಶ್ರೂಯಂತಾಂ. ಪ್ರವಾಚಕಃ ಬಲದೇವಾನಂದ ಸಾಗರಃ’ ಎಂದಕೂಡಲೇ ಎದ್ದೇಳುತ್ತಿದ್ದ ನಾನು, ರಾತ್ರಿ ಎಂಟರ ಯುವವಾಣಿಯ ವೀರಗಾಸೆಯೋ, ಭಾವಗೀತೆಯೋ ಕೇಳುತ್ತಾ ಹಾಗೇ ನಿದ್ರೆ ಹೋಗುತ್ತಿದ್ದೆ. ಘಟ್ಟದ ಮೇಲಿನ ನಮ್ಮ ಮನೆಗಳಲ್ಲಿ ಭದ್ರಾವತಿ ಖಾಯಂ ಸ್ಟೇಷನ್. ಡಯಲ್ ತಿರುಗಿಸಿ ಮಂಗಳೂರು ಅಥವಾ ಧಾರವಾಡದ ಸ್ಟೇಷನ್ನಿಗೇನಾದರೂ ತಿರುಗಿಸದರೆ ಅವತ್ತು ಕಜ್ಜಾಯ ಗ್ಯಾರಂಟಿ; ಕೆಲವು ಸಲ ಅಪ್ಪನಿಂದ, ಮತ್ತೆ ಕೆಲವು ಸಲ ಅಮ್ಮನಿಂದ ಕೂಡ. ಸಾಂಸ್ಕೃತಿಕ ಕಾರ್ಯಕ್ರಮಗಳು, ಕೃಷಿರಂಗ, ಭಾನುವಾರದ ನಾಟಕಗಳು, ಚಲನಚಿತ್ರ ಧ್ವನಿಮುದ್ರಿಕೆಗಳು, ಕ್ರಿಕೆಟ್ ವಿವರಣೆಗಳು ನಮ್ಮ ಜಗತ್ತನ್ನು ಸುಂದರಗೊಳಿಸಿಯೇ ಇಟ್ಟಿದ್ದವು.
 
ಅವತ್ತಿನ ಟೀವಿ ರೇಡಿಯೋಗಳು ಎಷ್ಟಿನ ಮಟ್ಟಿನ ಜಾಗೃತಿಯನ್ನು ಮೂಡಿಸುತ್ತಿದ್ದವೋ ನನಗೆ ಗೊತ್ತಿಲ್ಲ. ಬಹುಷಃ ಜಾಗೃತಿಮೂಡಿಸುವುದರಲ್ಲಿ ಅವಗಳ ಪಾತ್ರ ಸೊನ್ನೆಯೆಂದರೂ ಒಪ್ಪುತ್ತೇನೆ. ಅಂದಿನ ಟೀವಿ, ರೇಡಿಯೋಗಳು ಕ್ರೀಡಾಸುದ್ದಿಗಳನ್ನು ಎಲ್ಲಕ್ಕಿಂತ ಕೊನೆಯಲ್ಲಿ ಓದುತ್ತಿದ್ದಕ್ಕೆ ನನಗೆ ಇದ್ದ ಅಸಮಾಧಾನ ಈಗಲೂ ಇದೆ. (ನಮ್ಮ ಬಹಳಷ್ಟು ವಾರ್ತಾಪತ್ರಿಕೆಗಳು ಕ್ರೀಡೆಗೆ ಸಂಬಂಧಿಸಿದ ಸುದ್ದಿಗೆ ಇಂದಿಗೂ ಕೊನೆಪುಟವನ್ನೇ ಉಪಯೋಗಿಸುತ್ತವೆ. ಭಾರತೀಯರ ಕ್ರೀಡಾಪ್ರೇಮಕ್ಕೆ, ನಾವು ಕ್ರೀಡಾ ಸುದ್ದಿಗೆ  ಕೊಡುತ್ತಿರುವ ಮಹತ್ವವೇ ಸಾಕ್ಷಿ 🙂 ) ವಾರ್ತಾಇಲಾಖೆಯಂದ ಬಂದ ವಿಷಯಗಳನ್ನಷ್ಟೇ ಅವು ಓದುತ್ತಿದ್ದರೂ ಸಹ ನಮಗೆ ಅದೆಂದೂ ಕೃತಿಮವೆನ್ನಿಸಲೇ ಇಲ್ಲ. ಈ ವಾಚಕ ತನ್ನದೇನೋ ಬೇಳೆ ಬೇಯಿಸಿಕೊಳ್ಳುತ್ತಿದ್ದಾನೆ ಎಂದೆನಿಸಲೇ ಇಲ್ಲ. ಎಫ್.ಐ.ಆರ್, ಕ್ರಿಮಿನಲ್ ಡೈರಿಯಂತಹ ಕಾರ್ಯಕ್ರಗಳು ಇಲ್ಲದಿದ್ದರೂ, ಜಗತ್ತು ಎಷ್ಟು ಸುರಕ್ಷಿತ ಮತ್ತು ಎಷ್ಟು ಅಪಾಯಕಾರಿಯೆಂಬುದು ನಮಗೆ ತಿಳಿದಿತ್ತು.
 
ಆದರೆ ನಾವೆಲ್ಲಿ ಎಡವಿದೆವು!?
 
(@) ಸುನಿತ್ ಟಂಡನ್ ಇದ್ದಲ್ಲಿ ಅರ್ನಬ್ ಗೋಸ್ವಾಮಿ, ರಾಜದೀಪ್ ಸರ್ದೇಸಾಯಿಯಂತಹವರು ಬಂದು ಕುಳಿತರು
(@) ಸಲ್ಮಾ ಸುಲ್ತಾನ್ ಇದ್ದಲ್ಲಿ ‘ಜಿನ್ ಡ್ರಿಂಕರ್ಸ್’, ‘ಬ್ಲಡಿ ಮೇರಿ’ಎಂಬ ಹೆಸರಿನ ಬ್ಲಾಗು ಬರೆಯುವ ಬರ್ಖಾ, ಸಾಗರಿಕಾರಂತವರು ಬಂದು ವಕ್ಕರಿಸಿದರು
(@) ರೇಡಿಯೋದಲ್ಲಿ ರಂಗರಾವ್ ಓದುತ್ತಿದ್ದ ವಾರ್ತೆಯಿದ್ದಲ್ಲಿ, ಮಧ್ವರಾಜ್ ಓದುತ್ತಿದ್ದ ಪ್ರದೇಶ ಸಮಾಚಾರವಿದ್ದಲ್ಲಿ, ಅದ್ಯಾವನೋ ದಾನಿಷ್ ಸೇಟ್ ಎಂಬುವ ನಡೆಸುವ ಫೋನಿನಲ್ಲಿ ಯಾರ್ಯಾರಿಗೋ ಕಾಲ್ ಮಾಡಿ ಅವರನ್ನು ಮೂರ್ಖರನ್ನಾಗಿಸುವ ಚೆಲ್ಲಾಟಗಳು ‘ಸರ್ವೇ ಸಾಮಾನ್ಯ’ ಎಂಬಂತೆ ನಡೆಯತೊಡಗಿದವು
(@) ಮಾಲ್ಗುಡಿ ಡೇಸ್, ಏಕ್ ಥಾ ರಸ್ಟಿ, ನಮ್ಮ ಕಂಪನಿ, ತಿರುಗುಬಾಣ ಮಂತಾದ ಧಾರವಾಹಿಗಳಿದ್ದಲ್ಲಿ ಸದಾ ಒಬ್ಬರಮೇಲೊಬ್ಬರು ಕತ್ತಿಮಸೆಯುವ ಅತ್ತೆ ಸೊಸೆ ಧಾರವಾಹಿಗಳೆಂಬ ಅನಿಷ್ಟ ಪೀಡೆಗಳು ವಕ್ಕರಿಸಿದವು.
(@) ಶಾಂತಿ, ಸ್ವಾಭಿಮಾನ್ ಎಂಬ ನೂರಿನ್ನೂರು ಕಂತಿನ ಧಾರಾವಾಹಿಗಳನ್ನೇ ನೋಡಿ ಸುಸ್ತಾಗಿದ್ದ ನಮಗೆ ಸಾವಿರಾರು ಕಂತುಗಳಷ್ಟು ಓಡುವ ಧಾರಾವಾಹಿಗಳನ್ನು ತೋರಿಸಿ ಕೊಲ್ಲಲಾರಂಭಿಸಿದರು
(@) ಪ್ರತಿಭೆಯ ಹೆಸರಿನಲ್ಲಿ ಎಂತೆಂತದೋ ತರಹದ ಅಂಡೆಪಿರ್ಕಿಗಳನ್ನು ನೋಡುವ ಕರ್ಮವೂ ನಮಗೆ ಒದಗಿ ಬಂದಿತು
(@) ರಿಯಾಲಿಟಿ ಶೋ ಎಂಬ ಪೆಡಂಭೂತ ವಕ್ಕರಿಸಿದ ದಿನ, ಮಾನವೀಯತೆಯ ಚರಮಗೀತೆಗೆ ಸಂಗೀತ ಸಂಯೋಜನೆಯೂ ಆಯಿತೆಂದು ನನ್ನ ಭಾವನೆ.
 
ಹೌದು ಒಪ್ಪಿಕೊಳ್ಳುತ್ತೇನೆ, ಇದೇ ವಾಹಿನಿಗಳ ಪಟ್ಟಿಯಲ್ಲಿ ಜ್ಞಾನಾರ್ಜನೆಗೆ ಸಹಾಯ ಮಾಡುವ ಡಿಸ್ಕವರಿ, ನ್ಯಾಶನಲ್ ಜಿಯೋಗ್ರಾಫಿಕ್ ನಂತಹವೂ ಇವೆ. ಥಟ್ ಅಂತ ಹೇಳಿ ಅನ್ನುವ ಕಾರ್ಯಕ್ರಮಗಳೂ ಇವೆ. ಆದರೆ ಅವಕ್ಕೆ ತೆರೆದುಕೊಳ್ಳುತ್ತಿರುವ ಮನಸ್ಸುಗಳೆಷ್ಟು? ಹಾಗೂ ಮನೆಯೊಂದು ಮೂರು ಬಾಗಿಲು, ಬಿಗ್- ಬಾಸ್, ಪ್ಯಾಟೆ ಮಂದಿ ಕಾಡಿಗೆ ಬಂದ್ರು, ರೋಡಿಸ್, ಸ್ಪ್ಲಿಟ್-ವಿಲ್ಲಾ ದಂತಹ ಕಾರ್ಯಕ್ರಮ ನೋಡುವವರೆಷ್ಟು!? ನಾನು ನೋಡಿದ ಕೊನೆಯ ಕನ್ನಡ ಧಾರಾವಾಹಿಯೆಂದರೆ, ಈಟೀವಿಯಲ್ಲಿ ರಾತ್ರಿ ಹತ್ತಕ್ಕೆ ಬರುತ್ತಿದ್ದ ‘ಗರ್ವ’. ಅದರ ಪ್ರಸಾರ ನಿಂತುಹೋಗಿ ಸುಮಾರು ಹತ್ತು ವರ್ಷದ ಮೇಲಾಯಿತು. ಹಿಂದಿಯಲ್ಲಂತೂ ನಾನು ನೋಡಿದ ಕೊನೆಯ ಧಾರವಾಹಿಯ ನೆನಪೂ ಇಲ್ಲ. ಬಹುಷಃ ರಸ್ಕಿನ್ ಬಾಂಡ್ ನ ‘ಏಕ್ ಥಾ ರಸ್ಟಿ’ಯೆರಬೇಕು. ಸೃಜನಶೀಲತೆಯೆಂದರೆ “WTF is that!!!??” ಎಂದು ಹುಬ್ಬೇರಿಸುವ ನಿರ್ಮಾ’ಪೆ’ಕರುಗಳೂ,  ನಿರೂಪಕರು ಇರುವಂತಹ ಕಾಲಘಟ್ಟದಲ್ಲಿ ನಿಂತು ಅಂತಹ ಕಾರ್ಯಕ್ರಮಗಳನ್ನು ನಿರೀಕ್ಷಿಸುವುದು ಬಹುಷಃ ನಮ್ಮದೇ ತಪ್ಪೇನೋ 😦
 
ಇದಕ್ಕೆ ಸರಿಯಾಗಿ ನಮ್ಮ ಪ್ರಾಯೋಜಕರೂ ತಮ್ಮ ಕಳಪೆ ಜಾಹೀರಾತುಗಳನ್ನು ಈ ಅತೀ ಕಳಪೆ ಕಾರ್ಯಕ್ರಮಗಳ ಜೊತೆಗೇ ತೋರಿಸುವ ಕೃಪೆ ಮಾಡಿರುವುದರಿಂದ ನಮ್ಮ ಮಕ್ಕಳನ್ನು ಹಳ್ಳ ಹಿಡಿಸುವ ಇವರ ತಂತ್ರ ಇನ್ನಷ್ಟು ಫಲಿಸುತ್ತಿದೆ. ಹೆಣ್ಣನ್ನು ಆಕರ್ಷಿಸುವ ಪಾಠಗಳನ್ನು ಇಂತವರಿಂದ ಕಲಿತ ಗಂಡು ಮಕ್ಕಳು ಇಂದು ಹೆಣ್ನಿಗೆ ಕೊಡುತ್ತಿರುವ ಬೆಲೆಯನ್ನು ಹಾಗೂ ಅವರ ಪ್ರತಾಪಗಳನ್ನು ದಿನವೂ ಪತ್ರಿಕೆಗಳಲ್ಲೂ, ಇದೇ ವಾಹಿನಿಗಳಲ್ಲಿಯೂ ಮತ್ತೆ ಮತ್ತೆ ನೋಡಿ ಹತಾಶೆಯ ಪರಮಾವಧಿ ತಲುಪುವಂತಾಗಿದೆ.
 
ಜಗತ್ತಿಗೆ ಹತ್ತಿರಾಗುವ ತವಕದಲ್ಲಿ ನಮ್ಮನ್ನು ಮತ್ತು ನಮ್ಮ ಮುಂದಿನ ತಲೆಮಾರನ್ನು, ಈ ಟೀವಿಯೆಂಬ ಮಾರಿಗೆ ಬಲಿಕೊಟ್ಟಿದ್ದೇವೆ ಎಂದು ನಿಮಗನ್ನಿಸುವುದಿಲ್ಲವೇ!? ಈ ಚಲನಚಿತ್ರಗಳಿಗೆ ಸೆನ್ಸಾರ್ ಬೋರ್ಡ್ ಇದ್ದೂ ಸಹ, ಇಂತಹ ಕುಲಗೆಟ್ಟ ಚಿತ್ರಗಳು ಬರ್ತಾ ಇವೆ. ಇನ್ನೇನಾದರೂ ಸೆನ್ಸಾರ್ ಇಲ್ಲದೇ ಹೋಗಿದ್ದರೆ ಅವು ಇನ್ನೆಂತಹ ‘ಶ್ರೇಷ್ಠ’ ಮಾಣಿಕ್ಯಗಳನ್ನು ನಿರ್ಮಿಸುತ್ತಿದ್ದವು!? ಒಮ್ಮೆ ಯೋಚಿಸಿ. ಆದರೆ ನನಗೆ ಭಯ ಹುಟ್ಟಿಸುವ ವಿಷಯವೆಂದರೆ, ವಾರಕ್ಕೆ ಎಲ್ಲೋ ಮೂರು ಘಂಟೆ ನೋಡುವ ಈ ಚಲನಚಿತ್ರಗಳಿಗೇ ನಿಯಂತ್ರಣ ಬೋರ್ಡ್ ನಿರ್ಮಿಸಿರುವ ನಾವು, ದಿನಕ್ಕೆ 2-14 ಘಂಟೆಯವರೆಗೆ ನಮ್ಮನ್ನು ನಿಯಂತ್ರಿಸುವ ಟೀವಿಗೇಕೆ ನಿಯಂತ್ರಣ ಬೋರ್ಡ್ ಕಟ್ಟಿಲ್ಲ. ಮನರಂಜನೆಯ, ಮಾಹಿತಿಯ ಹೆಸರಿನಲ್ಲಿ ಮನೆಹಾಳು ಮಾಡುವಂತಹ ಈ ಕಾರ್ಯಕ್ರಮಳಿಗೇಕೆ ನಿಯಮಾವಳಿಗಳಿಲ್ಲ!? ಎಲ್ಲೋ ಕೇಳಿದ ಪ್ರಕಾರ (ಇದರ ಖಚಿತತೆಯ ಬಗ್ಗೆ ನಿಖರ ಮಾಹಿತಿಯಿಲ್ಲ), ಚೀನಾದಲ್ಲಿ 1996ರಲ್ಲಿ ಸರ್ಕಾರ ಸಂಜೆ 4 ರಿಂದ 6 ಗಂಟೆ ಮಧ್ಯೆ ಯಾವುದೇ ಕಾರ್ಟೂನುಗಳನ್ನು ಪ್ರಸಾರ ಮಾಡುವಂತಿಲ್ಲ ಎಂಬ ನಿಯಮ ಹೊರಡಿಸಿತ್ತಂತೆ. ಯಾಕೆಂದರೆ, ಮಕ್ಕಳು ಶಾಲೆಯಂದ ಬಂದಕೂಡಲೇ ಟಿವಿಯ ಮುಂದೆ ಕುಳಿತು, ಆಟವಾಡುವುದನ್ನೇ ಮರೆಯುತ್ತಿದ್ದರಂತೆ. ಅದನ್ನು ನಿಲ್ಲಿಸಿ, ಮಕ್ಕಳನ್ನು ಮತ್ತೆ ಪ್ರಕೃತಿಯೆಡೆಗೆ ಕರೆದೊಯ್ಯಲು ಸರ್ಕಾರ ಟೀವಿ ಕಾರ್ಯಕ್ರಮಗಳಿಗೆಂದೇ ಹೊಸ ನಿಯಮಾವಳಿಗಳನ್ನು ರೂಪಿಸಿತಂತೆ. ಇದನ್ನೇದರೂ ನಮ್ಮ ಸರ್ಕಾರಗಳು ಕಾರ್ಯರೂಪಕ್ಕೆ ತಂದರೆ ‘ಹಿಟ್ಲರ್ ಸರ್ಕಾರ’ ಎಂದು ನಮ್ಮ ಮಾಧ್ಯಮಗಳು ಬೊಬ್ಬಿರಿಯುತ್ತವೆ. 
 
ಆದರೆ ಈ ಟೀವಿ ಕಾರ್ಯಕರ್ಮಗಳಿಗೆ, ಅವುಗಳನ್ನು ಪ್ರಾಯೋಜಿಸುವ ಕೆಲ ಉತ್ಪನ್ನಗಳ ಜಾಹೀರಾತುಗಳಿಗೆ ಕಡಿವಾಣ ಹಾಕದಿದ್ದರೆ ನಾವೆಂತಹ ಕೀಳುಅಭಿರುಚಿಯ ಮುಂದಿನ ಜನಾಂಗವೆಂದನ್ನು ನಿರ್ಮಿಸುತ್ತಿದ್ದೇವೆ ಎಂಬುದರ ಬಗ್ಗೆ ನಾವು ಯೋಚಿಸಿದ್ದೇವೆಯೇ!? ಎಸ್ಸೆಸ್ಸೆಲ್ಸಿ ಪರೀಕ್ಷೆ ನಪಾಸಾದದ್ದಕ್ಕೆ ನೇಣಿಗೆ ಶರಾಣಾಗುವ, ಧಾರವಾಹಿಯಲ್ಲಿ ತನ್ನ ಪ್ರಿಯತಮನನ್ನು ಕಸಿದುಕೊಂಡದ್ದಕ್ಕೆ ಒಂದು ಹುಡುಗಿ ಇನ್ನೊಬ್ಬಳನ್ನು ಕೊಲೆಗೈದಿದ್ದನ್ನು ನೋಡಿ ಪ್ರೇರಣೆಗೊಂಡು ತನ್ನ ಸಹಪಾಠಿಯ ಮೇಲೆ ಪೆನ್ನಿನಿಂದ ಕೈವಾರದಿಂದ ಹಲ್ಲೆ ಮಾಡುವಂತ, ತನ್ನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದಕ್ಕೆ ಹೆಣ್ಣಿನ ಮೇಲೆ ಆಸಿಡ್ ಎರಚುವ, ಯಾವುದೋ ಕಾರ್ಯಕ್ರಮದಲ್ಲಿ ನಾಯಕ ನಾಯಕಿಯರು ಕುಡಿದರೆಂಬ ಕಾರಣಕ್ಕೆ ತಾನೂ ಕುಡಿಯುವ, ಹೊಗೆ ಬಿಡುವ ಚಟಕ್ಕೆ ಬಲಿಯಾಗುವಂತಹ, ಬೆಳ್ಳಗಿದ್ದರಷ್ಟೇ ಸುಂದರ ಹಾಗೂ ಸದೃಡ ವ್ಯಕ್ತಿವಿರಲು ಸಾಧ್ಯ ಎಂದು ತಿಳಿದಿರುವ, ಎಲ್ಲೋ ನೋಡಿದ ತುಂಬಿದೆದೆಯ ಹೆಣ್ಣಿನ ಚಿತ್ರಕ್ಕೆ ತಲೆಕೆಡಿಸಿಕೊಂಡು ದಾರಿಯಲ್ಲಿ ಕಂಡ ಹೆಣ್ಣಿನ ಮೇಲೆರಗುವ ನಾಮರ್ದಗಳನ್ನೂ, ಟೊಳ್ಳು ಆತ್ಮವಿಶ್ವಾಸದ ಹೆಣ್ಣುಮಕ್ಕಳನ್ನೂ ಸೃಷ್ಟಿಸುತ್ತಿದ್ದೇವೆ ಎಂಬ ಅಪಾಯದ ಅರಿವಿದೆಯೇ ನಮಗೆ?
 
‘ಸಮಾಜದಲ್ಲಿ ನಡೆಯುದನ್ನೇ ನಾವು ತೋರಿಸುತ್ತಿದ್ದೇವೆ’ ಎನ್ನುವ ಕಾರ್ಯಕ್ರಮಗಳ ವಾದಕ್ಕೂ, ‘ಇಂತಹ ಕಾರ್ಯಕ್ರಮಗಳನ್ನು ನೋಡಿಯೇ, ಇಂತಹ ಅಪರಾದಗಳು ನಡೆಯುತ್ತಿರುವುದು’ ಎನ್ನುವ ಪೋಷಕರ ವಾದಕ್ಕೂ ಮಧ್ಯದ ಆವರ್ತಕ ತರ್ಕಕ್ಕೆ ಕೊನೆಯಲ್ಲಿ!? ಸಮಾಜವನ್ನು ಜೀವನ್ಮುಖಿಯಾಗಿಸಿ, ಸೃಜನಾತ್ಮಕ ಮನರಂಜನೆ ಒದಗಿಸಿ, ಜಗತ್ತಿನ ಆಳಗಲ ತೆರೆದಿಟ್ಟು, ಅದರ ಆರೋಗ್ಯ ಕಾಪಾಡುವ ಹೊಣೆ ಸಾಮಾಜಿಕ ವಾಹಿನಿಗಳ ಮೇಲೆಯೇ ನಿಲ್ಲುತ್ತದೆಯೇ ಹೊರತು, ವಾಹಿನಿಗಳ ಕಾರ್ಯಕ್ರಮ ನೋಡಿ ತಮಗೆ ಬೇಕಾದ್ದನ್ನು ಮಾತ್ರ ಆಯ್ಕೆಮಾಡುವ ಹೊಣೆ ವೀಕ್ಷಕರ ಮೇಲೆ ನಿಲ್ಲುವುದಿಲ್ಲ. ಯಾಕೆಂದರೆ ನಮಗೆ ಗೊತ್ತಿಲ್ಲದಂತೆಯೇ, ನಮ್ಮ ಆಯ್ಕೆಯ ಸ್ವಾತಂತ್ರ್ಯದ ಪರಿಧಿಯಿಂದ ಹೊರನಿಂತು ನಾವು ಈ ಕಾರ್ಯಕ್ರಮಗಳಿಗೆ ತೆರೆದುಕೊಳ್ಳುತ್ತೇವೆ. ನಮ್ಮಷ್ಟಕ್ಕೆ ನಾವು ಟೀ ಕುಡಿಯುತ್ತಿದ್ದರೂ ಹೋಟೆಲಿನವ ಹಾಕಿದ ಯಾವುದೋ ‘ಪ್ರತಿಭಾನ್ವೇಷಣೆ’ಯ ಕಾರ್ಯಕ್ರಮಕ್ಕೋ, ಬಸ್ಸಿನಲ್ಲಿ ಪ್ರಯಾಣಿಸುವಾಗ ಚಾಲಕ ಹಾಕಿದ ಎಫ್.ಎಂ ಕಾರ್ಯಕ್ರಮಕ್ಕೋ ನಾವು ಬಲಿಪಶುಗಳಾಗಿಬಿಟ್ಟಿರುತ್ತೇವೆ. ಆದ್ದರಿಂದ ನನ್ನ ಪ್ರಕಾರ, ಈ ಹೊಣೆಯ ವಾದ ಕೊನೆಗೂ ಬಂದು ನಿಲ್ಲುವುದು ಟೀವಿ ಕಾರ್ಯಕ್ರಮಗಳ ಮೇಲೆಯೇ.
 
 
ಇಷ್ಟೆಲ್ಲಾ ತಲೆಕೆರೆದುಕೊಂಡ ಮೇಲೆ, ಕೊನೇ ಪ್ರಶ್ನೆ:
 
“ಟೀವಿ ಕಾರ್ಯಕ್ರಮಗಳಿಗೆ ಸೆನ್ಸಾರ್ ಬೇಕೆ!?”
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s