ಜಗತ್ತಿನ ತುದಿಯಾಚೆಯ ಪಯಣ ಹಾಗೂ ಸುಂದರ ಪೂಜಾರಿಯವರ ಮನೆ:

ನಾನು ಹುಟ್ಟಿದ ಮೊದಲ ಹತ್ತು ವರ್ಷ ಬೆಳೆದದ್ದು, ಸಿದ್ದರಮಠ ಎಂಬ ಹಳ್ಳಿಯಲ್ಲಿ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಿಂದ ಸುಮಾರು ಹತ್ತು ಕಿಲೋಮೀಟರ್ ದೂರದ ಒಂದು ಗ್ರಾಮ. ನನ್ನ ಜೀವನಕ್ರಮ, ನನ್ನ ಯೋಚನಾಲಹರಿ, ಜಗತ್ತಿನೆಡೆಗೆ ನನ್ನ ನೋಡುವಿಕೆ ಹೆಚ್ಚಿನೆಲ್ಲವೂ ರೂಪುಗೊಂಡದ್ದು ಇಲ್ಲೇ. ದೇವರು, ನಂಬಿಕೆ, ಶಿಕ್ಷಣ, ಜಾತಿ, ಊಟ, ಆಟ, ಸ್ನೇಹ, ಜೀವನ, ಹೆಣ್ಣು, ಸಾವು, ರಾಷ್ಟ್ರ ಇವೆಲ್ಲದರ ಬಗ್ಗೆ (ಇನ್ನೂ ಹಲವು ಸಾವಿರ ವಿಷಯಗಳ ಬಗ್ಗೆ) ನನ್ನ ಮೊದಲ ಅಭಿಪ್ರಾಯಗಳು ಮಾಂಸ-ಮಜ್ಜೆ ತುಂಬಿಕೊಂಡದ್ದರಲ್ಲಿ ಸಿದ್ದರಮಠದ ಪಾತ್ರ ದೊಡ್ಡದು. ಇಡೀ ಗ್ರಾಮದಲ್ಲಿ ಇದ್ದದ್ದು ಸುಮಾರು ಒಂದು ಐವತ್ತು ಮನೆಗಳು. ಸುತ್ತಮುತ್ತಲಿನ ಕಲ್ಲಾರ್ಸುಳಿ, ಮಾತಗಾರು, ಕರಿಗೆರಸಿ, ದರ್ಕಾಸು, ಕೆಲಕುಳಿ ಎಲ್ಲಾ ಸೇರಿಸಿದ್ರೆ ಅಬ್ಬಬ್ಬಾ ಅಂದ್ರೆ ಇನ್ನೊಂದೈವತ್ತು ಮನೆ ಸೇರ್ತಿದ್ವೇನೋ.

ಇಡೀ ಗ್ರಾಮ, ಕೊಪ್ಪ-ಮೃಗವಧೆ ರಸ್ತೆಯ ಆಚೀಚೆ ಬದಿ ಒಂದೆರಡು ಕಿಲೋಮೀಟರಿನಷ್ಟು ಉದ್ದದಲ್ಲಿ ಬೆಳೆದದ್ದು. (ಹೆಸರಿಗೆ ಮಾತ್ರ ಆ ರಸ್ತೆ ಮೃಗವಧೆ ತನಕ ಹೋಗ್ತಾ ಇದ್ದದ್ದು. ಆ ಟಾರು ರಸ್ತೆ ಸಿದ್ದರಮಠ ದಾಟಿ ಒಂದೆರಡು ಕಿಲೋಮೀಟರ್ ಹೋಗುತ್ತಿದ್ದಂತೇ ಮಾಯವಾಗಿ ಚಂದ್ರಲೋಕವಾಗಿ ಬಿಡ್ತಾ ಇತ್ತು. ಆ ರಸ್ತೆಯಲ್ಲೇನಾದ್ರೂ ಮೃಗವಧೆಗೆ ಹೊರಟ್ರೆ ಅಲ್ಲಿಗೆ ತಲುಪೋಹೊತ್ತಿಗೆ ನೀವು ಸರ್ಕಾರದ ಮೇಲಿನ ಸಿಟ್ಟಿನಲ್ಲಿ ಮೃಗವಾಗಿ ಬಿಡ್ತಾ ಇದ್ರಿ ಅಷ್ಟೆ). ಸಿದ್ದರಮಠದ ಒಂದು ತುದಿಯಲ್ಲಿದ್ದದ್ದು ‘ಬಸವನ ಕಟ್ಟೆ’. ಅಲ್ಲೊಂದು ಸಣ್ಣ ನಂದಿ ಕೂರಿಸಿದ್ರು. ಅಲ್ಲಿಂದ ಶುರುವಾದ ಹಳ್ಳಿ, ಒಳ್ಳೆ ಹಳ್ಳಿ ಹುಡುಗಿ ಬೈತಲೆ ಥರಾ ನೇರವಾಗಿ ಕೆಳಗಿಳಿದು ದೇವಸ್ಥಾನದಲ್ಲಿ ಕೊನೆಯಾಗ್ತಾ ಇತ್ತು. ಎಷ್ಟು ನೇರ ಅಂದ್ರೆ. ಬಸವನ ಕಟ್ಟೆಯಲ್ಲಿ ನಿಂತರೆ ಒಂದೊಂದೂವರೆ ಕಿಲೋಮೀಟರ್ ದೂರದಲ್ಲಿ ಕೆಳಗೆ ದೇವಸ್ಥಾನ ನಿಚ್ಚಳವಾಗಿ ಕಾಣ್ತಾ ಇತ್ತು. ಆ ರಸ್ತೆ ದೇವಸ್ಥಾನದ ಹತ್ತಿರ ಬಂದಕೂಡ್ಲೇ ರಸ್ತೆ ಸ್ವಲ್ಪ ಎಡಕ್ಕೆ ತಿರುಗಿ ಮುಂದುವರೆಯುತ್ತಿದ್ದರಿಂದ, ಮೊದಲ ಬಾರಿಗೆ ಹಳ್ಳಿಗೆ ಬಂದವರಿಗೆ ಅಥವಾ ದೂರದಿಂದ ನೋಡಿದವರಿಗೆ ದೇವಸ್ಥಾನದ ಹತ್ತಿರ ರಸ್ತೆ ಮುಗೀತಾ ಇದೆ, ಅಲ್ಲಿಂದ ಮುಂದೆ ಏನೂ ಇಲ್ಲ ಅಂಥಾ ಕಾಣ್ತಿತ್ತು. ನಮ್ಮ ಕ್ವಾರ್ಟರ್ಸ್ ಬಸವನ ಕಟ್ಟೆಗೂ, ದೇವಸ್ಥಾನಕ್ಕೂ ಮಧ್ಯದಲ್ಲಿ ಇದ್ದದ್ದು. ಸಂಜೆಯಾದ್ರೆ ನಾನು ಆ ರಸ್ತೆಮೇಲೆ ನಿಂತುಕೊಂಡು ಬಸನವ ಕಟ್ಟೆಯಲ್ಲಿರೋ ಬಸವನಿಗೂ, ಈ ಕಡೆ ಇದ್ದ ಸಿದ್ದೇಶ್ವರನಿಗೂ ನನ್ನ ಕಥೆ ಹೇಳ್ತಾ ಇದ್ದೆ. ಒಂಥಾ ಮೂರು ಜನ ಸ್ನೇಹಿತರು ಅಕ್ಕ ಪಕ್ಕದಲ್ಲಿ ನಿಂತು ಮಾತಾಡ್ತಾ ಇದ್ದಹಾಗೆ.

ಹೆಸರಿಗೆ ತಕ್ಕಂತೆ ‘ಸಿದ್ದರಮಠ’, ಒಂದು ಪುಟ್ಟ ಮಠದ ಸುತ್ತ ಬೆಳೆದ ಗ್ರಾಮ. ಎಲ್ಲಾ ಬಿಟ್ಟು ಆ ದೊಡ್ಡ ಕಾಡಿನ ಮಧ್ಯೆ ಅದನ್ಯಾಕೆ ಕಟ್ಟಿದ್ರೂ ಅಂಥಾ ನನಗಿವತ್ತೂ ಗೊತ್ತಿಲ್ಲ. ಮಠ ಅನ್ನೋದಕ್ಕಿಂತ ದೇವಸ್ಥಾನ ಅನ್ನಬಹುದು. ಯಾಕಂದ್ರೆ ನಾನು ಅವತರಿಸಿದಾಗ ಅಲ್ಲಿ ಯಾವ ಗುರುಗಳೂ ಇರಲಿಲ್ಲ (ಮೊದಲು ಇದ್ರೇನೋ, ಯಾರಿಗೂ ಗೊತ್ತಿಲ್ಲ). ಪೂಜೆ ಮಾಡ್ಲಿಕ್ಕೆ ಒಬ್ರು ಭಟ್ರು ಇದ್ರು ಅಷ್ಟೇ. ಅವರಿಗೆ ದೇವಸ್ಥಾನದ ಆವರಣದಲ್ಲೇ ಮನೆ. ಮಲೆನಾಡು ಹಾಗೂ ಕರಾವಳಿಯ ದೇವಸ್ಥಾನಗಳಲ್ಲಿ ಮಧ್ಯದಲ್ಲಿ ದೇವರಗುಡಿಯಿದ್ದು, ಸುತ್ತಲೂ ಕಟ್ಟಿದ ಆವರಣದಲ್ಲಿ ಪೂಜೆಭಟ್ರು ಮನೆ, ಉಗ್ರಾಣ, ಮತ್ತೊಂದೆರಡು ಸಣ್ಣ ದೇವರ ಗುಡಿಗಳಿರುವುದು ಸಾಮಾನ್ಯ. ಸಿದ್ದರಮಠದ ದೇವಸ್ಥಾನದಲ್ಲಿ ಭಟ್ರ ಮನೆ ಮಾತ್ರವಲ್ಲದೇ, ಒಂದು ಸಣ್ಣ ಪೋಸ್ಟಾಪೀಸು, ಯಾರಾದರೂ ಹೊರಗಿನಿಂದ ಬಂದವರಿಗೆ ಉಳಿದುಕೊಳ್ಳಲು ಒಂದೆರಡು ರೂಮುಗಳೂ ಇದ್ದವು. ದೇವಸ್ಥಾನದ ಹೊರಬದಿಯಲ್ಲಿ ಬಲಬಾಗದ ಕೊನೆಯಲ್ಲಿ ನಾಲ್ಕು ಎತ್ತರದ ಗೋಡೆಯೆಬ್ಬಿಸಿ ಅದರಲ್ಲಿ ದೇವಸ್ಥಾನದ ರಥ ನಿಲ್ಲಿಸುತ್ತಿದ್ದರು. ಆ ರಥದಮನೆಯ ಬಲಗೋಡೆ ಪಕ್ಕದಲ್ಲಿ ಒಂದು ಸಣ್ಣ ಗುಡ್ಡದ ತರಹದ elevation (ಮಲ್ನಾಡು ಭಾಷೆಯಲ್ಲಿ ಧರೆ ಅಂತೀವಿ) ಇತ್ತು. ನಮ್ಮ ಮನೆಯಿಂದ ನೋಡಿದರೆ, ರಸ್ತೆ ಹೋಗಿ ದೇವಸ್ಥಾನದ ಹತ್ತಿರ ಕೊನೆಯಾಗ್ತಾ ಇದ್ದಂತೆಯೂ. ಆ ದೇವಸ್ಥಾನ ರಸ್ತೆಯ ಒಂದು ತುದಿಯಿಂದಾ ಇನ್ನೊಂದು ತುದಿಯವರೆಗೂ ಹರಡಿಕೊಂಡಿದ್ದರಿಂದಲೂ, ಈ ರಥದ ಮನೆಯ ಹಿಂಬಾಗಕ್ಕೆ ಹೋಗುವಂತಿರಲಿಲ್ಲದಿದ್ದರಿಂದಲೂ, ನಾನು ಅವತ್ತಿನ ಮಟ್ಟಿಗೆ ನಾನು ‘ಜಗತ್ತು ಬಹುಷಃ ಇಲ್ಲಿಗೆ ಕೊನೆ. ಈ ರಥದ ಮನೆಯಾಚೆಗೆ ಏನೂ ಇಲ್ಲ’ ಅಂಥಾ ಅಂದುಕೊಂಡಿದ್ದೆ. ನನ್ನ ಪ್ರಾಬ್ಲಮ್ ಶುರುವಾಗಿದ್ದೇ ಇಲ್ಲಿಂದ.

ಮೊದಲೇ ನನಗೆ ಜೀವನದಲ್ಲಿ ಅಗತ್ಯಕ್ಕಿಂತಾ ಸ್ವಲ್ಪ ಹೆಚ್ಚೇ ಕುತೂಹಲ (ಅದಕ್ಕೇ ಜೀವನದಲ್ಲಿ ನನಗೆ ಇಷ್ಟೊಂದು ತೊಂದರೆಗಳು ಬಂದಿರುವುದು ಅಂಥಾ ನನ್ನ ಅಚಲ ಭಾವನೆ  ) ಅದ್ಯಾಕೆ ಈ ರಥದ ಮನೆ ಹಿಂಬಾಗಕ್ಕೆ ಹೋಗೋಕೆ ಆಗ್ತಾ ಇಲ್ಲ, ಎಲ್ಲಿಂದ ದಾರಿ ಇದಕ್ಕೆ ಅಂಥಾ ಹುಡುಕಿ ಹುಡುಕಿ ಬೇಸತ್ತಿದ್ದೆ. ಕೊನೆಗೆ ಪ್ರಯತ್ನ ಕೈಬಿಟ್ಟಿದ್ದೆ. 
ಒಂದು ದಿನ ಭಾನುವಾರ ಮಧ್ಯಾಹ್ನ ಹೀಗೇ ರಸ್ತೆಯಲ್ಲಿ ಆಟ ಆಡ್ತಾ ಇದ್ದೆ (ಊರಿಗೆ ಇದ್ದಿದ್ದೇ ಒಂದು ಬಸ್ಸು, ಬೆಳಿಗ್ಗೆ ಹೋದ್ರೆ ಬರ್ತಾ ಇದ್ದದು ಸಂಜೆಯೇ. ಊರಲ್ಲಿ ಬೈಕು ಕಾರು ಏನೂ ಇರ್ಲಿಲ್ಲ. ಅಕಸ್ಮಾತ್ ಬಂದ್ರೂ, ಆ ನಿಶ್ಯಬ್ದದ ಹಳ್ಳಿಯಲ್ಲಿ ಮೂರು ಕಿಲೋಮೀಟರ್ ಮುಂಚೇನೇ ಶಬ್ದ ಕೇಳ್ತಾ ಇತ್ತು. ಆದ್ದರಿಂದ ರಸ್ತೆ ನಮ್ಮ ಆಟದ ಮೈದಾನದ ಒಂದು ಬಡಾವಣೆಯೇ ಅಗಿತ್ತು. ರಸ್ತೆಯಲ್ಲಿ ಆಡೋದಕ್ಕೂ, ಮನೆ ಮುಂದೆ ಆಡೋದಕ್ಕೂ ಅಷ್ಟೊಂದೇನು ಹೇಳುವಷ್ಟು ವ್ಯತ್ಯಾಸವೇ ಇರಲಿಲ್ಲ. ಹೆಚ್ಚೆಂದರೆ ಜೂಟಾಟ ಆಡಿ ಮನೆ ಮುಂದೆ ಬಿದ್ರೆ ಕಲ್ಲು-ಗಿಲ್ಲು ತಾಗಿ ರಕ್ತ ಬರುವಷ್ಟು ಗಾಯ ಆಗ್ತಿತ್ತು, ರಸ್ತೆಯಲ್ಲಿ ಬಿದ್ರೆ ತರಚಿ ಚರ್ಮ ಸುಲಿದು ರಕ್ತ ಬರುವಷ್ಟು ಗಾಯ ಆಗ್ತಿತ್ತು, ಅಷ್ಟೇ ವ್ಯತ್ಯಾಸ). ದೇವಸ್ಥಾನದ ಹತ್ತಿರ ಮನೆಯಿದ್ದ ಮಹಾಬಲರಾಯರ ಮಗ ಸುಭಾಶು ಕೂಗಿ ಕರೆದ. ನಾನು ಅಮ್ಮನ ಹತ್ರ ಹೋಗಿ ‘ಅಮ್ಮಾ ಸುಭಾಶು ಕರೀತಾ ಇದ್ದಾನೆ. ಹೋಗಿ ಬರ್ತೀನಿ ಅಂದೆ’ ‘ಎಲ್ಲಿಗೆ’ ಅಂದ್ರು? ‘ಎಲ್ಲಿಗೂ ಇಲ್ಲ ರಥದ ಹತ್ರ ಆಟ ಆಡ್ತಾ ಇರ್ತೀವಿ’ ಅಂದೆ. ಅಮ್ಮ ಏನೋ ಸಿಟ್ಟಲ್ಲಿದ್ರು. ‘ರಥದ ಹತ್ರನಾದ್ರೂ ಹೋಗು, ಅದರಿಂದ ಆಚೆನಾದ್ರೂ ಹೋಗು’ ಅಂದ್ರು. ನಾನು ಅವಕ್ಕಾದೆ. ಒಂದ್ಸಲ ಮೈಯೆಲ್ಲಾ ಜುಂ ಅಂತು. ಸುಮ್ನೆ ‘ಹೋಗು’ ಅಂದಿದ್ರೆ ಓಕೆ. ‘ಎಲ್ಲಿಗೂ ಹೋಗ್ಬೇಡ…ಸುಮ್ನೆ ಮನೇಲೇ ಬಿದ್ದಿರು’ ಅಂದಿದ್ರೂ ಪರವಾಗಿರಲಿಲ್ಲ. ಅದು ಬಿಟ್ಟು ರಥ ಹತ್ರ ಅಲ್ದಿದ್ರೆ ‘ಅದರಾಚೆ’ ಬೇಕಾದ್ರೂ ಹೋಗು ಅಂದಿದ್ದು ನನಗೆ ತಲೆಯೆಲ್ಲಾ ‘ಧಿಂssss’ ಅಂದುಬಿಡ್ತು. ಅದರ ಆಚೆ ಬೇಕಾದ್ರೂ ಹೋಗು ಅಂಥಾ ಯಾಕೆ ಹೇಳಿದ್ದು!?? ಯಾವತ್ತು ಹಾಗೆ ಹೇಳೇ ಇರ್ಲಿಲ್ಲ ಅಮ್ಮ. ಹಾಗಾದ್ರೆ ಅದರ ‘ಆಚೆ ಬದಿ’ ಏನಿರಬಹುದು!!?? ಅದೂ ಅಲ್ದೆ ಸಿಟ್ಟಲ್ಲಿ ಬೇರೆ ಮಲ್ಲಿಕಾರ್ಜುನ ಖರ್ಗೆ ಥರ ಮುಖ ಮಾಡ್ಕೊಂಡು ಹೇಳಿದ್ದಾರೆ. ಎಂತಾ ಕಥೆ ಇದು!? ಯಾಕೆ ಹೀಗೆ!??? ಅಂಥೆಲ್ಲಾ ಯೋಚನೆ ಮಾಡ್ತಾ ಸುಭಾಶು ಇದ್ದಲ್ಲಿಗೆ ಹೋದೆ. ಅವನಿಗೂ ಈ ತತ್ವಜ್ಞಾನಿಕ ಇಕ್ಕಟ್ಟನ್ನು ವಿವರಿಸಿದೆ.

ಅವನೂ ತಲೆ ಕೆರ್ಕೊಂಡ. ಕೈಗೆ ಒಂದಷ್ಟು ಕೂದಲು ಬಂದವೇ ಹೊರತು ಏನೂ ಹೊಳೆಯಲಿಲ್ಲ. ‘ಏ ಹೋಗ್ಲಿ ಬಾರೋ…ಲಗೋರಿ ಆಡೋಣ’ ಅಂಥ ಅಂದ. ಆಟ ಶುರು ಹಚ್ಕೊಂಡ್ವಿ. ಸ್ವಲ್ಪ ಹೊತ್ತಿನಲ್ಲೇ ಮಾಧವರಾಯರ ಮಗ ಸುಮಂತ ಬಂದ. ನಮಗಿಂತಾ ಮೂರು ವರ್ಷ ದೊಡ್ಡವನು. ಅವನಿಗೆ ಖಂಡಿತಾ ಈ ಉಭಯಸಂಕಟದಿಂದ ಪಾರಾಗುವ ಕಲೆ ಗೊತ್ತಿರ್ಬೇಕು ಅಂಥಾ ಅಂದ್ಕೊಂಡು ಅವನಿಗೂ ಕೇಳ್ದೆ. ಆ ಪುಣ್ಯಾತ್ಮ ‘ನಂಗೂ ಗೊತ್ತಿಲ್ಲ ಕಣೋ, ನಂಗೆ ಅಮ್ಮ ಯಾವಾಗ್ದ್ಲೂ ಬೈತಾ ಇರ್ತಾರೆ ಅಲ್ಲಿ ಹೋಗಬಾರದು ಅಂಥಾ ಹೇಳಿದ್ದಾರೆ’ ಅಂದು ಜಾಪಾಳ ಮಾತ್ರೆ ಕೊಟ್ಟ. ಅಯ್ಯೋ ದೇವ್ರೆ ಅಂಥ್ಹಾ ತಲೆ ಚಚ್ಕೊಂಡೆ. ನನಗಂತೂ ಈ ರಥದ ಮನೆಯ ಹಿಂಬಾಗ ಮತ್ತಷ್ಟು ನಿಗೂಡವಾಗಿ ಕಾಣಲು ಶುರುವಾಯ್ತು. ಅಷ್ಟೊತ್ತಿಗೆ ಲಗೋರಿಯ ಪೆಟ್ಟು ಬಿದ್ದದ್ದರಿಂದ ಮನಸ್ಸು ಆಲೋಚನೆಯಿಂದ ಹೊರಬಂದು, ಚೆಂಡು ಹಿಡಿದು ವಾಪಾಸು ಇಕ್ಕಲು ಓಡಿದೆ. ಲಗೋರಿ ಮುಗಿತು, ಕತ್ತಲಾಯ್ತು ಅಂಥಾ ಎಲ್ರೂ ಮನೆಗೆ ಹೋದ್ರೂ ನಂಗೆ ಈ ಮೆದುಳುತುರಿಕೆ ಹೋಗ್ಲೇ ಇಲ್ಲ. ಏನಾದ್ರೂ ಆಗ್ಲಿ, ಇವತ್ತು ಈ ಕೇಸನ್ನ ಸಾಲ್ವ್ ಮಾಡಲೇಬೇಕು ಅಂಥಾ ಅಂದ್ಕೊಂಡು….. ಆ ಬಲಗಡೆಯ ಗೋಡೆ ಮತ್ತು ಆ elevation ಇದ್ದ ಧರೆಯ ಮಧ್ಯೆ ನುಗ್ಗಿದೆ. ಗೋಡೆ ಸುಮಾರು ಹತ್ತಡಿ ಅಗಲವಿತ್ತು. ಆ ಹತ್ತಡಿಯ ನುಸುಳುವಿಕೆಯಲ್ಲಿ ಮೈ-ಕೈಗೆ ಎಷ್ಟೇ ತರಚುಗಾಯವಾಗಿದ್ರೂ ಲೆಕ್ಕಿಸದೆ ‘ನಡೆ ಮುಂದೆ ನಡೆ ಮುಂದೆ ನುಸುಳಿ ನಡೆ ಮುಂದೆ’ ಅಂಥಾ ಹಾಡ್ಕೊಂಡು ಸೋಲೊಪ್ಪದೇ ಮುಂದೆ ಹೋದೆ. ಸುಮಾರು ಎಂಟು-ಹತ್ತು ನಿಮಿಷದ ನಂತರ……ಆ ಗೋಡೆಯ ಕೊನೆ ಮತ್ತು ಧರೆಯ ಮಧ್ಯದಲ್ಲಿ, ಕ್ಷೀಣವಾದ ಬೆಳಕು ತೂರಿ ಬರುತ್ತಿದ್ದ ನನ್ನ ತಲೆ ತೂರುವಷ್ಟು ಜಾಗವಿದ್ದ ಕಿಂಡಿ ತಲುಪಿ…….ನನ್ನೆಲ್ಲಾ ಉತ್ಸುಕತೆಯನ್ನು ಒಟ್ಟುಮಾಡಿ, ಢವಗುಟ್ಟುತ್ತಿದ್ದ ಹೃದಯವನ್ನು ಸುಮ್ಮನಿರಿಸಿ………..ಜಗತ್ತಿನ ಆಚೆ ಬದಿಗೆ ಇಣುಕಿ ನೋಡಿದೆ.
.
.
.
.
.
.
.
.
.
.
.
ಸುಮಾರು ಒಂದು ಅರವತ್ತು ಅಡಿಯಷ್ಟು ಉದ್ದ, ಮೂವತ್ತು ಅಡಿಯಷ್ಟು ಅಗಲದ ಖಾಲಿ ಜಾಗ, ಕೊನೆಯಲ್ಲೊಂದು ಸಣ್ಣ ಧರೆ ಅಲ್ಲಿಂದಾಚೆಗೆ ಸುಂದರ ಪೂಜಾರಿಯವರ ಮನೆಯ ಬೇಲಿ ಇಷ್ಟೇ ಇದ್ದದ್ದು. ಆ ಖಾಲಿಜಾಗದಲ್ಲಿ ನಮ್ಮ ಗದ್ದೆಮನೆಯ ಸುರೇಶನ ಮನೆಯ ನಾಯಿ ‘ಗುಂಡ’ ಮತ್ತು ನನ್ನ ದೋಸ್ತು ಮಂಜುನಾಥನ ಮನೆಯ ನಾಯಿ ‘ಗೊಣ್ಣೆ’ ಎರಡೂ ಆಡ್ತಾ ಇದ್ವು. ಸುಂದರ ಪೂಜಾರಿಯವರ ಮನೆಗೆ ಹೋಗುವಾಗ ಒಂದೆರಡು ಸಲ ಈ ಜಾಗ ನನಗೆ ಕಂಡಿತ್ತಾದರೂ ‘ಅದು ಇದೇ’ ಅಂಥಾ ಗೊತ್ತಾಗುವಷ್ಟು mapping skills ಇನ್ನ್ನೂ ಬೆಳೆದಿರಲಿಲ್ಲ ಅನ್ಸುತ್ತೆ.

ಅವತ್ತು ಗೊತ್ತಾಯ್ತು, ಜಗತ್ತಿನ ತುದಿಯಾಚೆಗೆ ಇರೋದು ‘ಎರಡು ನಾಯಿಗಳು ಮತ್ತು ಸುಂದರ ಪೂಜಾರಿಯವರ ಮನೆ’ ಅಂಥಾ. ಇಷ್ಟು ಸಣ್ಣ ವಿಚಾರ ನಿನಗೆ ಗೊತ್ತಿರ್ಲಿಲ್ವಾ ಅಂಥಾ ಯಾರಾದ್ರೂ ಉಗಿದರೆ ಕಷ್ಟ ಅಂಥಾ ಅಂದ್ಕೊಂಡು, ಯಾರಿಗೂ ಈ ‘ರಥದ ಮನೆಯ ರಹಸ್ಯ’ವನ್ನು ಹೇಳದೆ ಸುಮ್ಮನೇ ನನ್ನಲ್ಲೇ ಇಟ್ಕೊಂಡೆ. ಸುಭಾಶುಗೆ ಮಾತ್ರ ‘ಹಿಂಗಿಂಗೆ ಮಾರಾಯ…’ ಅಂಥಾ ಗುಟ್ಟಲ್ಲಿ ಹೇಳ್ದೆ. ಅವ್ನು ‘ಸುರೇಶನ ಮನೆ ನಾಯಿ ಸತ್ತೋಗಿ ಎರಡು ತಿಂಗಳಾಯ್ತು, ನಿನಗೆಲ್ಲೋ ತಲೆ ಕೆಟ್ಟಿದೆ’ ಅಂಥಾ ಹೇಳಿ ಸೆಟ್ಟಾಟ ಆಡೋಕೆ ಸುಮಾ ಮಮತಾ ಕರೀತಾ ಇದ್ದಾರೆ ಅಂಥಾ ಓಡಿ ಹೋದ.

ಜಗತ್ತಿನ ಆಚೆಯ ದರ್ಶನ ಮಾಡಿ ಎಡ್ಮಂಡ್ ಹಿಲರಿಯಷ್ಟು ಖುಷಿಪಟ್ಟಿದ್ದ ನನಗೆ, ಈ ಸುಭಾಷು “ಈ ಜೀವನದ ಆಚೆ ಏನಿದೆ!?’ ಎನ್ನುವ ಹೊಸಾ ತಲೆಬಿಸಿ ತಂದಿಟ್ಟು ಹೋದ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s