ಪ್ರೀತಿ ಅಕಾರಣವಾಗಿರಬೇಕು…..ದ್ವೇಷ ಸಕಾರಣವಾಗಿರಬೇಕು

“ಪ್ರೀತಿ ಅಕಾರಣವಾಗಿರಬೇಕು,
ದ್ವೇಷ ಸಕಾರಣವಾಗಿರಬೇಕು”

ಆದರೆ ಮೋದಿಯ ವಿಷಯಕ್ಕೆ ಬಂದರೆ ಇದು ಉಲ್ಟಾ. ಮೋದಿಯ ವಿರುದ್ದ ಅರಚುತ್ತಿರುವ ಬು.ಜೀ ಗಳನ್ನು ಕೇಳಿ ನೋಡಿ ‘ನೀವ್ಯಾಕೆ ಮೋದಿಯನ್ನು ದ್ವೇಷಿಸುತ್ತೀರಿ!?’ ಎಂದು. ನೂರರಲ್ಲಿ ಎರಡು ಜನ ಏನಾದರೂ ಒಪ್ಪುವಂತಹ ಕಾರಣ ಕೊಟ್ಟಾರು. ಉಳಿದವರದ್ದೆಲ್ಲಾ ಬರೀ 2002ರ ಒಣವಾದಗಳಷ್ಟೇ.

ಚುನಾವಣಾ ಪಲಿತಾಂಶ ಬಂದು ಇಂದಿಗೆ ಮೂರು ದಿನವಾಯ್ತು. ಕಳೆದ ಇಷ್ಟೂ ವರ್ಷಗಳಿಂದ ಬಿಳಿ ಚರ್ಮದ ಅಮ್ಮ ಮಾಡಿದ್ದೆಲ್ಲವನ್ನೂ ಪ್ರಸಾದವೆನ್ನುವಂತೆ ಸ್ವೀಕರಿಸಿದ ಸೋ ಕಾಲ್ಡ್ ಬುದ್ದಿ ಜೀವಿಗಳು, ಅವಳನ್ನು ಪ್ರಶ್ನಿಸುವ ಒಂದಿಂಚು ಸಾಹಸವನ್ನೂ ತೋರಿಸದ ಬುದ್ದಿಜೀವಿಗಳು, ಮೋದಿ ಗೆದ್ದ ಮರುಕ್ಷಣದಿಂದಲೇ ‘ಅವನೇನು ಮಾಡಬೇಕು? ಅವನ ಸಚಿವಗಣದಲ್ಲಿ ಯಾರ್ಯಾರಿರಬೇಕು? ಪಂಚವಾರ್ಷಿಕ ಯೋಜನೆಯ ಬಜೆಟ್ಟು ಎಷ್ಟಿರಬೇಕು? ಯಾವ ದಿಕ್ಕಿಗೆ ಕುಳಿತು ಆತ ಯಾವ ಗಲ್ಲದ ಮೇಲೆ ಕೈಯಿಟ್ಟು ಯೋಚಿಸಬೇಕು?’ ಎಲ್ಲವನ್ನೂ ಬರೆಯಲಾರಂಬಿಸಿದ್ದಾರೆ!! ಮೂರು ದಿನದಲ್ಲಿ 45ಕ್ಕೂ ಹೆಚ್ಚು ಲೇಖನಗಳನ್ನು ಓದಿ ಮುಗಿಸಿದ್ದೇನೆ. ಒಬ್ಬ ಪುಣ್ಯಾತ್ಮನಂತೂ “ಮೋದಿಯ ಪ್ರಧಾನಿ ಕುರ್ಚಿಯ ಆಶಯ ಈಡೇರಿದೆ, ಹಾಗಾಗಿ ಆತ ಈಗ ಜಶೋದಾಬೆನ್ ಅವರನ್ನು ಮರುಮದುವೆಯಾಗಬೇಕು” ಎನ್ನುವಷ್ಟರಮಟ್ಟಿಗೆ ರಕ್ತ ಕಾರಿಕೊಂಡ.

ಪ್ರಧಾನಿಯಾದವನು ಇಷ್ಟೆಲ್ಲಾ ಮಾಡಬೇಕೆಂಬ ಅರಿವಿದ್ದವರು ಇಷ್ಟು ದಿನ ಪ್ರಧಾನಿ ಕಚೇರಿಯಲ್ಲಿ ಮೌನರಾಗದ ಆಲಾಪ ನಡೆಯುತ್ತಿದ್ದಾಗ ಕಣ್ಣಮೇಲೇನು ಇಟಾಲಿಯನ್ ಪಿಜ್ಜಾ ಹರಡಿಟ್ಟುಕೊಂಡಿದ್ದರೇ? ಅಥವಾ ಕಿವಿಯಲ್ಲಿ ಗಾರ್ಲಿಕ್ ಬ್ರೆಡ್ಡಿನ ತುಣುಕು ಸೇರಿಕೊಂಡಿತ್ತೇ!? ಮಂತ್ರಿವರ್ಯರೆಲ್ಲಾ ಸೋನಿಯಾ ನೇತೃತ್ವದಲ್ಲಿ ದೇಶವನ್ನು ಬಟ್ಟೆ ಒಗೆದಂತೆ ಎತ್ತೆತ್ತಿ ಕುಕ್ಕಿದಾಗ ಇವರೆಲ್ಲಾ ವೆನಿಸ್ಸಿನ ದೋಣಿವಿಹಾರದಲ್ಲಿ ಕಳೆದು ಹೋಗಿದ್ದರೇ? ‘ಅಲ್ಪಸಂಖ್ಯಾತರ ಮನಸ್ಸಿನಲ್ಲಿ ಧೈರ್ಯ ಮೂಡಿಸಲು ಮೋದಿ ಏನೇನು ಮಾಡಬೇಕು?’ ಎಂದು ಈಗ ಉಪದೇಶ ಮಾಡುತ್ತಿರುವ ಇವರು, ಮುಜಪ್ಪರ್ ನಗರದಲ್ಲಿ ಜನ ಸತ್ತಾಗ, ಅಖಿಲೇಶನ ಮನೆಯಲ್ಲಿ ಕುಳಿತು ಮುಜ್ರಾ ನೋಡುತ್ತಾ ಕುಳಿತ್ತಿದ್ದರೇ? ಕುರಾನಿನ ಪ್ರಕಾರ ಎಲ್ಲರೂ ಒಂದೇ ಎಂದಮೇಲೆ, ಅದು ಹೇಗೆ ಮೋದಿಯ ಅಧಿಕಾರವಧಿಯಲ್ಲಿ ಕಳೆದ ಅಲ್ಪಸಂಖ್ಯಾತನ ಪ್ರಾಣದ ಬೆಲೆ, ಅಖಿಲೇಶನ/ಅಥವಾ ಸಿದ್ದರಾಮಯ್ಯನ ಅಧಿಕಾರವಧಿಯಲ್ಲಿ ಹೋದ ಅಲ್ಪಸಂಖ್ಯಾತನ ಪ್ರಾಣಕ್ಕಿಂತ ಹೆಚ್ಚಾಗುತ್ತದೆ!? ಮೋದಿ ನರಹಂತಕ ಎಂದು ಅರಚುವ ಗುಳ್ಳೆನರಿಗಳಿಗೆ, ಒಂದುವೇಳೆ ಮೋದಿಯ ಮೇಲಿರುವ ಎಲ್ಲಾ ಪ್ರಕರಣಗಳು ಸಾಬೀತಾದರೂ ಸಹ ಆತನ ಕೈಗಳಿಗಿಂತ ಹೆಚ್ಚಿನ ರಕ್ತ, ಸರಿಸುಮಾರು ಆರು ದಶಕಗಳ ಕಾಲ ದೇಶವನ್ನು ಬಡದೇಶವಾಗಿಯೇ ಇರಿಸಿದ ಆ ಪಕ್ಷ ಹಾಗೂ ಆ ಕುಟುಂಬದ ಕೈಗೆ ಅಂಟಿದೆ ಎಂಬ ಕನಿಷ್ಟ ಅರಿವಾದರೂ ಇದೆಯೇ?

ತಮ್ಮ ಅಭ್ಯರ್ಥಿಗಳು/ಪಕ್ಷಗಳು ಗೆಲ್ಲಲಿಲ್ಲವೆಂಬ ಕಾರಣಕ್ಕೆ ‘ನಮ್ಮ ಚುನಾವಣಾ ವಿಧಾನವೇ ಸರಿಯೆಲ್ಲ’ವೆಂದು ಸಲಹಿಸುತ್ತಿರುವ ಪ್ರಭೃತಿಗಳಿಗೆ, ಕಳೆದ 67ವರ್ಷಗಳಿಂದ ಚುನಾವಣೆಗಳು ಇದೇ ರೀತಿ ನಡೆಯುತ್ತಿಯೆಂಬುದು ಹೊಳೆಯದೇ ಹೋಯಿತೇ!? ಮುವತ್ತು ವರ್ಷಗಳಿಂದ ಬರೀ ಸಮ್ಮಿಶ್ರ ಸರ್ಕಾರಗಳನ್ನು, ಅವುಗಳ ಅವಾಂತರಗಳನ್ನು, ಅವುಗಳ ಎಡಬಿಡಂಗಿತನದಿಂದ ದೇವೇಗೌಡರೂ ಕೂಡ 13 ತಿಂಗಳು ಪ್ರಧಾನಿಯಾಗಿ ಏನೂ ಮಾಡದಿದ್ದರೂ ‘ನಾನು ಮಣ್ಣಿನ ಮಗ….ನಾನೊಬ್ಬ ಪ್ರಧಾನಿ’ ಎಂದು ಕರೆಸಿಕೊಳ್ಳುವಂತಾದದ್ದನ್ನು ಮರೆತೇ ಹೋದರೇ!? ಹೀಗಿದ್ದಾಗ ಇಷ್ಟು ವರ್ಷದ ನಂತರ ಒಂದು ಪಕ್ಷ ಬಹುಮತ ಪಡೆದಾಗ, ಅಷ್ಟರ ಮಟ್ಟಿಗೆ ದೇಶದ ಜನತೆ ಒಂದಾಗಿ ನಿರ್ಧರಿಸಿದ ಪಕ್ವತೆಯನ್ನೂ ಹೊಗಳಬೇಕೆಂಬುದನ್ನೂ ಮರೆತರೆ!?

ಮೋದಿಗೆ ಬರೀ 31% ಮತಗಳು ಮಾತ್ರ ಬಿದ್ದಿವೆಯೆಂದು ರಚ್ಚೆಹಿಡಿಯುವ ಇವರು, ‘ಬೇರೆ ಅಭ್ಯರ್ಥಿಗಳಿಗೆ ಅಷ್ಟೂ ಮತಗಳು ಬಿದ್ದಿಲ್ಲ’, ‘ಭಾರತದಲ್ಲಿ ಮತದಾನ ಕಡ್ಡಾಯವಲ್ಲ’, ‘ಚುನಾವಣಾ ಆಯೋಗ ಈ ವರ್ಷದ ಚುನಾವಣೆಯಲ್ಲಿ NOTA ಎಂಬ ಹೊಸ ಅಸ್ತ್ರವೊಂದನ್ನು ಮತದಾರನಿಗೆ ಕೊಟ್ಟಿತ್ತು’ ಎಂಬೆಲ್ಲಾ ಸಾಮನ್ಯಜ್ನಾನವನ್ನು AAP ಪಕ್ಷದ ಪೊರಕೆಯಡಿಗೆ ಇಟ್ಟುಬಿಟ್ಟರೇ? ದೇಶದ 31% ಜನ ಮೋದಿಯನ್ನು ಆರಿಸಿದ್ದಾರೆ ಎಂದ ಮಾತ್ರಕ್ಕೆ ‘ಆ 31% ಜನರಿಗೆ ಮಾತ್ರ ಪ್ರಧಾನಿ ಬೇಕಾಗಿದೆ, ಉಳಿದ 69% ಜನರಿಗೆ ವಝೀರ್-ಎ-ಆಝಮ್ ಬೇಕಾಗಿದೆ’ ಎಂದು ಎಲುಬಿಲ್ಲದ ನಾಲಿಗೆಯನ್ನು ಹರಿಬಿಡುವ ಈ ಕತ್ತೆಗಳ ತಲೆಯಲ್ಲಿ ಮೆದುಳಿದೆಯೋ ಅಥವಾ ಬೇರೇನಾದರೂ ತುಂಬಿದೆಯೋ ಎಂಬ ಪ್ರಶ್ನೆ ಹುಟ್ಟುವುದಿಲ್ಲವೇ!? ಇಂತವರಲ್ಲಿ ಒಬ್ಬ ಮಹಾತ್ಮಾ ಗಾಂಧಿಯ ಮೊಮ್ಮಗ ಮತ್ತು ಒಂದು ಕಾಲದಲ್ಲಿ ರಾಜ್ಯಪಾಲನಾಗಿ ಕೆಲಸಮಾಡಿದ್ದ ಎಂದು ಊಹಿಸಿಕೊಂಡರೇ, ಇಂಥವರನ್ನೂ ಬೆಳೆಯಲು ಬಿಟ್ಟ ನಮ್ಮ ವ್ಯವಸ್ತೆಯ ಬಗೆಗೇ ಹೇಸಿಗೆ ಹುಟ್ಟುವುದಿಲ್ಲವೇ!?

ಎಲ್ಲದಿಕ್ಕಿಂತಲೂ ತಮಾಶೆಯೆಂದರೆ, ಮೋದಿಯನ್ನು ಇಷ್ಟೊಂದು ದ್ವೇಷಿಸುವ ಇವರು ಮೋದಿಗೆ ಖಂಡಿತಾ ಮತದಾನ ಮಾಡಿರುವುದಿಲ್ಲ. ಹಾಗಿದ್ದ ಮೇಲೆ ಮೋದಿ ಹೇಗೆ ಏನು ಯಾವಾಗ ಮಾಡಬೇಕೆಂದು ಹೇಳುವ ಕನಿಷ್ಟ ನೈತಿಕ ಹಕ್ಕನ್ನೂ ಕಳೆದುಕೊಂಡಿದ್ದಾರೆ ಎಂಬ ಅಂಶವನ್ನೂ ಮನಗಾಣದಿದ್ದದ್ದು. ತನಗೆ ಮತ ಹಾಕಿದವರಿಗೆ ಮಾತ್ರ ಮೋದಿ ಪ್ರಧಾನಿಯಲ್ಲ ಎಂಬುದು ನನಗೂ ಗೊತ್ತು. ಆತ ಎಲ್ಲರ ಪ್ರಧಾನಿ. ತನ್ನನ್ನು ಪ್ರೀತಿಸುವವರಿಗೂ, ತನ್ನನ್ನು ದ್ವೇಷಿಸುವವರಿಗೂ, ತನ್ನದೇ ನೆಲದಲ್ಲಿ ತನ್ನನ್ನು ಕೊಲ್ಲಬಯಸುತ್ತಿರುವ ದೇಶದ್ರೋಹಿಗಳಿಗೂ, ದೇಶ ಕೊಟ್ಟಿರುವ ಸ್ವಾತಂತ್ರ್ಯವನ್ನು ಬಳಸಿಕೊಂಡು ಇದೇ ನೆಲದ ಐಕ್ಯತೆಯನ್ನು ಪ್ರಶ್ನಿಸುತ್ತಿರುವ ವಾರ್ತಾವ್ಯಾಪಾರಿಗಳಿಗೂ, ರಕ್ತಪಿಪಾಸು ನಕ್ಸಲರಿಗೂ ಎಲ್ಲರಿಗೂ ಆತ ಪ್ರಧಾನಿ. ಆದರೆ, ನೀವೇ ಕರೆತಂದು ಕೆಲಸ ಕೊಟ್ಟ ನಿಮ್ಮ ಮನೆಯ ಕೆಲಸಗಾರ ಸರಿಯಿಲ್ಲವೆಂದು ಕೂಗಾಡಿ, ಅತನ ಕೈಯಡುಗೆ ಸರಿಯಿಲ್ಲವೆನ್ನುವುದು ಎಲ್ಲಿಯ ಜಾಣತನ!? ಇಲ್ಲಿ ಅವನಿನ್ನೂ ಅಡುಗೆ ಕೂಡ ಮಾಡಿಲ್ಲ. ಮಾಡುವ ಮೊದಲೇ ಅದು ಸರಿಯಿಲ್ಲ,ಅವನು ಉಪ್ಪು ಕಡಿಮೆ ಹಾಕ್ತಾನೆ, ಲವಂಗ ಹೆಚ್ಚಾಗಿ ಖರ್ಚು ಮಾಡ್ತಾನೆ, ಎಡಗೈಯಿಂದ ಒಗ್ಗರಣ್ಣೆ ಹಾಕಬೇಕು ಅಂದರೆ!!? ಒಂದೋ ಅವನನ್ನು ಕೆಲಸಕ್ಕೆ ತೆಗೆದುಕೊಳ್ಳಬಾರದಿತ್ತು. ಇಲ್ಲಾ…ತೆಗೆದುಕೊಂಡ ತಪ್ಪಿಗೆ ಅವನಿಗೆ ಅಡುಗೆ ಮಾಡಲು ಬಿಡಬೇಕು. ಎರಡೂ ಇಲ್ಲದೆ…. ಇವನೂ ಸರಿಯಿಲ್ಲ, ಇವನ ಅಡುಗೆ ಕೆಟ್ಟದ್ದು, ಇವನನ್ನು ಕೆಲಸ ಕೊಟ್ಟ ಮನೆಯ ಜನರೆಲ್ಲ ಮೂರ್ಖರು ಅಂದರೆ!!??

ಮನೆಯ 31% ಜನರನ್ನು, ಅವರ ನಿರ್ಧಾರವನ್ನು ಅವಮರ್ಯಾದೆ ಮಾಡಬೇಡಿ. ಅವರ ಸಹನೆಗೆ ಮಿತಿ ಇದೆ. ಅದು ಕಳೆದ ದಿನ ನಿಮ್ಮ ವಯಸ್ಸು, ಪ್ರಶಸ್ತಿ ಪಟ್ಟಿ, ಲಿಂಗ, ಜಾತಿ, ಧರ್ಮ, ರಾಷ್ಟ್ರೀಯತೆ ಯಾವುದನ್ನೂ ಲೆಕ್ಕಿಸದೆ ನಿಮ್ಮನ್ನು 31 ದಿಕ್ಕಿಗೆ ಎಸೆಯುತ್ತಾರೆ. ಭಾರತ ನಿರ್ಮಾಣ ಮಾಡುವ ಅವಕಾಶ ಕೊನೆಗೂ ಒದಗಿ ಬಂದಿದೆ. ನಿರ್ಮಾಣ ಮಾಡಲು ಬಿಡಿ ಎಂದು ದಮ್ಮಯ್ಯ ಹಾಕಲೂ ಗೊತ್ತು. ‘ಇಲ್ಲಾ ಈ ದೇಶವನ್ನು ಹರಿದೇ ಸಿದ್ದ’ ಎಂದು ನಿವು ರಚ್ಚೆ ಹಿಡಿದರೆ ನಿಮ್ಮನ್ನೇ ಎಂಟುದಿಕ್ಕಿಗೆ ಹರಿಯಲು ಗೊತ್ತು. ಜೋಪಾನ….

ಕೊನೆಯದಾಗಿ, ನೀವು ಮೋದಿಯನ್ನು ಅಕಾರಣವಾಗಿ ಪ್ರೀತಿಸದಿದ್ದರೂ ಪರವಾಗಿಲ್ಲ, ಕನಿಷ್ಟ ನಿಮ್ಮ ದ್ವೇಷವನ್ನು ಸಕಾರಣಗೊಳಿಸಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಮೇಲಿನ ನಮ್ಮ ದ್ವೇಷ ಅಕಾರಣವಾಗುತ್ತದೆ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s